Tag: Sirsi

  • ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ತಲೆ ತಲಾಂತರದಿಂದ ಬಂದ ಸಂಪ್ರದಾಯಕ್ಕೆ ಬ್ರೇಕ್

    ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ತಲೆ ತಲಾಂತರದಿಂದ ಬಂದ ಸಂಪ್ರದಾಯಕ್ಕೆ ಬ್ರೇಕ್

    – ನಿಯಮ ಉಲ್ಲಂಘಿಸಿದರೆ ಜೈಲು ಶಿಕ್ಷೆ

    ಕಾರವಾರ: ಶಿರಸಿ ಎಂದಾಕ್ಷಣ ಮಾರಿಕಾಂಬ ದೇವಸ್ಥಾನವೇ ನೆನಪಿಗೆ ಬರುತ್ತದೆ. ಅದರಲ್ಲೂ ರಾಜ್ಯದಲ್ಲೇ ಅತೀ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಯೂ ಈ ದೇವಿಗೆ ಸಲ್ಲಿಕೆಯಾಗುತ್ತದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ರಥ ಕಟ್ಟಲು ಕಾಡಿನ ಮರ ಕಡಿಯುವ ಸಂಪ್ರದಾಯವಿದ್ದು, ಸದ್ಯ ಈ ಪದ್ಧತಿಗೆ ಸರ್ಕಾರ ಅಧಿಕೃತವಾಗಿ ಬ್ರೇಕ್ ಹಾಕಿದೆ.

    ಹೌದು, 2018 ರಲ್ಲಿ ನಡೆದ ಜಾತ್ರೆಯ ಸಂದರ್ಭದಲ್ಲಿ ಶಿರಸಿಯ ಬಿನಕಳ್ಳಿಯ ರಕ್ಷಿತ ಅರಣ್ಯ ಪ್ರದೇಶದಲ್ಲಿ ಅನಧಿಕೃತ ಪ್ರವೇಶ ಮಾಡಿ ತಾರೆ, ನಂದಿ, ಮತ್ತಿ, ಕಿಂದಳ ಮರಗಳನ್ನು ಕಡಿದು ನಾಟ ಹಾಗೂ ಜಲಾವು ಮಾಡಿದ ಸಂಬಂಧ ಶಿರಸಿ ವಲಯ ಅರಣ್ಯಾಧಿಕಾರಿ ದೇವಾಲಯದ ಧರ್ಮದರ್ಶಿ ಮಂಡಳಿ ಮೇಲೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಆಡಳಿತ ಮಂಡಳಿ ಕೋರ್ಟಿನಲ್ಲಿ 80 ಸಾವಿರ ರೂ.ದಂಡ ಸಹ ತುಂಬಿತ್ತು.

    ಅರಣ್ಯ ಇಲಾಖೆ ನೀಡಿದ ನೋಟಿಸ್ ನಲ್ಲಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮ ಪ್ರವೇಶಿಸಿ ಅಮೂಲ್ಯ ಮರ, ಗಿಡಗಳನ್ನು ನಾಶ ಪಡಿಸಿರುವುದು, ಇವುಗಳನ್ನು ಆಶ್ರಯಿಸಿದ ವನ್ಯಜೀವಿಗಳಿಗೆ ತೊಂದರೆಯಾಗುತ್ತವೆ ಹೀಗಾಗಿ ಗಂಭೀರ ಅಪರಾಧ ಪ್ರಕರಣವಾಗಿದೆ. ಅಲ್ಲದೇ ಜಾಮೀನು ರಹಿತ ಪ್ರಕರಣವೂ ಆಗಿದ್ದು, ಮತ್ತೆ ಇಂತಹ ಪ್ರಕರಣ ನಡೆದಲ್ಲಿ ಕರ್ನಾಟಕ ಅರಣ್ಯ ಕಾಯ್ದೆ 1963 ಕಲಂ24(ಇ), ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆಗೆ ಒಳಪಡಿಸಬೇಕಾಗುತ್ತದೆ. ಇನ್ನು ಮುಂದೆ ಸಂಪ್ರದಾಯದ ಹೆಸರಿನಲ್ಲಿ ಕಾಯ್ದಿಟ್ಟ ಅರಣ್ಯದಲ್ಲಿ ಅನಧಿಕೃತ ಪ್ರವೇಶ ಮಾಡಬಾರದು ಎಂದು ಅರಣ್ಯ ಇಲಾಖೆ ಎಚ್ಚರಿಸಿದೆ.

    ಮುಂಬರುವ ಮಾರ್ಚ್ ನಲ್ಲಿ ಜಾತ್ರೆ ನಡೆಯಲಿದ್ದು, ಹೀಗಾಗಿ ಈ ಕುರಿತು ಕಮಿಟಿಯಲ್ಲಿ ಚರ್ಚೆ ನಡೆದಿದೆ. ಧಾರ್ಮಿಕ ಹಿನ್ನೆಲೆಯಲ್ಲಿ ಆಚರಣೆ ಮಾಡಿದಲ್ಲಿ ಕೋರ್ಟ್ ಕೇಸ್ ಎದುರಿಸಬೇಕೆಂಬ ಭಯದ ಜೊತೆ ಬಂಧನವಾಗುವ ಭೀತಿ ಕೂಡ ಕಮಿಟಿ ಸದಸ್ಯರಲ್ಲಿ ಎದುರಾಗಿದ್ದು, ಧಾರ್ಮಿಕ ಆಚರಣೆಯನ್ನು ಕೈ ಬಿಡುವ ಕುರಿತು ಕಮಿಟಿ ಚರ್ಚೆ ನಡೆಸಿದೆ.

    ಈ ಕುರಿತು ಪಬ್ಲಿಕ್ ಟಿ.ವಿ ಜೊತೆ ಮಾತನಾಡಿದ ಮಾರಿಕಾಂಬ ಕಮಿಟಿ ಅಧ್ಯಕ್ಷ ವೆಂಕಟೇಶ್ ನಾಯ್ಕ, ನಾವು ಈ ಹಿಂದೆ ಮರ ಕಡಿದ ಕುರಿತು ಕೋರ್ಟಿನಲ್ಲಿ ದಂಡ ಕಟ್ಟಿದ್ದೇವೆ. ಧಾರ್ಮಿಕ ಭಾವನೆಗೆ ಧಕ್ಕೆ ಬರದಂತೆ ಹಾಗೂ ಇಂದಿನ ಕಾಲಮಾನಕ್ಕೆ ತಕ್ಕಂತೆ ನಡೆದುಕೊಳ್ಳಬೇಕಿದ್ದು. ಈ ಬಾರಿ ಮರ ಕಡಿಯುವ ಕಾರ್ಯಕ್ರಮವನ್ನು ನಿಲ್ಲಿಸುವ ತೀರ್ಮಾನ ಕೈಗೊಳ್ಳುತಿದ್ದೇವೆ ಎಂದು ತಿಳಿಸಿದ್ದಾರೆ. ಇದರೊಂದಿಗೆ ತಲಾ ತಲಾಂತರದಿಂದ ಬಂದ ಸಂಪ್ರಾದಾಯಕ್ಕೆ ಈ ಬಾರಿ ಬ್ರೇಕ್ ಬೀಳಲಿದ್ದು, ಜಾತ್ರೆಯಲ್ಲಿ ಒಂಬತ್ತು ದಿನದ ಸಂಪ್ರದಾಯ ಬದಲಾಗಲಿದೆ.

  • ನಾವು ಅನರ್ಹರೂ ಅಲ್ಲ, ಅನಾಥರೂ ಅಲ್ಲ: ಶಿವರಾಮ್ ಹೆಬ್ಬಾರ್

    ನಾವು ಅನರ್ಹರೂ ಅಲ್ಲ, ಅನಾಥರೂ ಅಲ್ಲ: ಶಿವರಾಮ್ ಹೆಬ್ಬಾರ್

    ಕಾರವಾರ: ಅನರ್ಹ ಶಾಸಕರು ಹತಾಶರಾಗಿದ್ದಾರೆ ಎನ್ನುವುದು ಕೇವಲ ಊಹಾಪೋಹ. ನಾವು ಅನರ್ಹರೂ ಅಲ್ಲ, ಅನಾಥರೂ ಅಲ್ಲ ಎಂದು ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದರು.

    ಶಿರಸಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸ್ವಯಂ ಘೋಷಿತ ಬುದ್ಧಿವಂತ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ರಾಜಕೀಯ ದ್ವೇಷ ಪ್ರೇರಿತರಾಗಿ ನಮ್ಮನ್ನು ಅನರ್ಹಗೊಳಿಸಿದ್ದಾರೆ. ಅವರು ಮನಸ್ಸಿಗೆ ಬಂದಂತೆ ನಿರ್ಣಯ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ನಾಯಕರ ಹಾಗೂ ಮುಖಂಡರ ಒತ್ತಡಕ್ಕೆ ಒಳಗಾಗಿ ಅಥವಾ ಅವರ ಓಲೈಕೆಗಾಗಿ ಹೀಗೆ ಮಾಡಿದ್ದಾರೆ ಎಂದು ಕಿಡಿಕಾರಿದರು.

    ಅತೃಪ್ತ 15 ಜನ ಶಾಸಕರು ಸದನಕ್ಕೆ ಹಾಜರಾಗಬಹುದು, ಇಲ್ಲವೇ ಹಾಜರಾಗದೇ ಇರಬಹುದು. ಇದು ಶಾಸಕರ ವಿವೇಚನೆಗೆ ಬಿಟ್ಟ ವಿಚಾರ ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಆದರೂ ರಮೇಶ್ ಕುಮಾರ್ ಅವರು ನಾವು ಸದನಕ್ಕೆ ಹಾಜರಾಗಿಲ್ಲವೆಂದು ಅನರ್ಹಗೊಳಿಸಿದ್ದಾರೆ. ಇದು ರಾಜಕೀಯ ದ್ವೇಷ ಪ್ರೇರಿತ ನಿರ್ಣಯವಾಗಿದೆ ಎಂದು ಆರೋಪಿಸಿದರು.

    ಉತ್ತರ ಕನ್ನಡ ಜಿಲ್ಲೆಯಿಂದ ನಾನೊಬ್ಬನೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗುತ್ತದೆ ಎಂಬ ನಿರೀಕ್ಷೆಯಿದೆ. ನಾವು ಎಲ್ಲಿಯೂ ಬಿಜೆಪಿ ಸೇರುತ್ತೇವೆ ಅಂತ ಹೇಳಿಕೆ ನೀಡಿಲ್ಲ. ಮೈತ್ರಿಯಿಂದ ಮೋಸಕ್ಕೆ ಒಳಗಾಗಿರುವ ಕಾರಣ ರಾಜೀನಾಮೆ ನೀಡಿದ್ದೇವೆ. ನ್ಯಾಯಾಲಯದ ಅಂತಿಮ ನಿರ್ಣಯ ಬಂದ ಮೇಲೆ ನಾವೆಲ್ಲರೂ ಸೇರಿ ನಿರ್ಣಯ ತೆಗೆದುಕೊಳ್ಳುತ್ತೇವೆ. ಜೊತೆಗೆ ಕಾಂಗ್ರೆಸ್ ನಾಯಕರ ಒತ್ತಡವನ್ನು ಬಹಿರಂಗಪಡಿಸುತ್ತೇವೆ ಎಂದು ಹೇಳಿದರು.

  • ದೇವಸ್ಥಾನ ಸೇರಿದಂತೆ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರು ಜನ ಅಂದರ್

    ದೇವಸ್ಥಾನ ಸೇರಿದಂತೆ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರು ಜನ ಅಂದರ್

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ವಿವಿಧ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರು ಆರೋಪಿಗಳನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಆರೋಪಿಗಳಿಂದ 25 ಕೆ.ಜಿ. ಪಂಚಲೋಹ ವಿಗ್ರಹ ಸೇರಿದಂತೆ 10 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಶಿರಸಿ ತಾಲೂಕಿನ ಕಲಗಾರಿನ ಮುನ್ನಾ ದಾವುದ್ ಸಾಬ್ (32), ಬದನಗೋಡಿನ ಸಂತೋಷ ಬೋವಿವಡ್ಡರ್ (22), ಗಡಳ್ಳಿ ಕ್ರಾಸಿನ ಮಹಮ್ಮದ್ ಶರೀಫ್ ಅಬ್ದುಲ್ ಖುದ್ದುಸ್ (47), ಬನವಾಸಿಯ ಲಕ್ಷ್ಮೀಕಾಂತ ನಿರಂಜನ ಒಡೆಯರ್ (30), ಹಾಡಲಗಿಯ ಮಂಜುನಾಥ ಕೊರವರ ಹಾಗೂ ಚಿಕ್ಕಬಳ್ಳಾಪುರದ ಗಾಂಧಿನಗರ ಚಿಂತಾಮಣಿಯ ಇಮ್ರಾನ್ ಪಾಶಾ ರಶೂಲ್ ಸಾಬ್ ಬಂಧಿತ ಆರೋಪಿಗಳು.

    ಆರೋಪಿಗಳಿಂದ 5 ಲಕ್ಷ ರೂ. ಮೌಲ್ಯದ ನಿಧಿ ಶೋಧನೆಗಾಗಿ ಬಳಸುವ ಮೆಟಲ್ ಡಿಟೆಕ್ಟರ್, 25 ಕೆಜಿ ಪಂಚ ಲೋಹದ ವಿಗ್ರಹ, 6.5 ಲಕ್ಷ ರೂ. ಬೆಲೆ ಬಾಳುವ ಚಿನ್ನದ ಆಭರಣ ಹಾಗೂ 90 ಸಾವಿರ ರೂ. ಮೌಲ್ಯದ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಕೃತ್ಯಕ್ಕೆ ಬಳಸಿದ ಮೂರು ಬೈಕ್ ಹಾಗೂ ಒಂದು ಕಾರನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಂಧಿತ ಆರೋಪಿಗಳು ಕಳೆದ ಅಕ್ಟೋಬರ್ ನಲ್ಲಿ ಶಿರಸಿ ಸಮೀಪದ ಶಿಗೇಹಳ್ಳಿಯ ಒಂಟಿ ಮನೆಯ ಸಾವಿತ್ರಿ ಎಂಬವರ ಮೇಲೆ ಹಲ್ಲೆ ಮಾಡಿ ಕಳ್ಳತನ ಮಾಡಿದ್ದರು. ಬನವಾಸಿ ಬಳಿಯ ಹಾಡಲಗಿಯಲ್ಲಿ ಕಳ್ಳತನ, ಅಜ್ಜರಣಿ ದೇವಸ್ಥಾನ ಕಳ್ಳತನ ಮಾಡಿದ್ದರು. ಈ ಮೂರು ಪ್ರಕರಣದಲ್ಲಿ ಕಳುವಾಗಿದ್ದ ವಸ್ತುಗಳನ್ನು ಆರೋಪಿಗಳಿಂದ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

    ಆರೋಪಿಗಳು ಶಿರಸಿ ಹಾಗೂ ಬನವಾಸಿ ಸುತ್ತಮುತ್ತ ನಿಧಿಗಾಗಿ ಅನೇಕ ದೇವಸ್ಥಾನದಲ್ಲಿ ಶೋಧನೆ ನಡೆಸಿದ್ದರು. ಈ ಸಂಬಂಧ ಬನವಾಸಿಯ ಬ್ಯಾಗದ್ದೆಯ ಶ್ರೀ ಶಂಕರನಾರಾಯಣ ದೇವಸ್ಥಾನ, ಕಪ್ಪಗುಡ್ಡೆಯ ಈಶ್ವರ ದೇವಸ್ಥಾನ, ಶಿರಸಿ ಗ್ರಾಮಾಂತರ ಪ್ರದೇಶದ ವಾಣಿ ವಿಘ್ನೇಶ್ವರ ದೇವಸ್ಥಾನ ಹಾಗೂ ಕೆ.ಎಚ್.ಬಿ.ಕಾಲೋನಿಯ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದರು. ಅಷ್ಟೇ ಅಲ್ಲದೆ ಬನವಾಸಿ ಮಧುಕೇಶ್ವರ ದೇವಸ್ಥಾನದ ಒಳಗಡೆಯಿಂದ ಭಾರೀ ಗಾತ್ರದ ಗಂಧದ ಮರವನ್ನು ಕಡಿದು ಸಾಗಿಸಿದ್ದರು ಎಂಬ ಮಾಹಿತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಆಂಗ್ಲ ಮಾಧ್ಯಮದಲ್ಲಿ ಕಲಿಯಲು ಬಂದ ಮಕ್ಕಳನ್ನು ಹೊರಹಾಕಿದ ಸರ್ಕಾರಿ ಶಾಲೆ!

    ಆಂಗ್ಲ ಮಾಧ್ಯಮದಲ್ಲಿ ಕಲಿಯಲು ಬಂದ ಮಕ್ಕಳನ್ನು ಹೊರಹಾಕಿದ ಸರ್ಕಾರಿ ಶಾಲೆ!

    ಕಾರವಾರ: ತಮ್ಮ ಮಕ್ಕಳು ಉತ್ತಮ ಶಾಲೆಯಲ್ಲಿ ಕಲಿಬೇಕು. ಅದರಲ್ಲೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಬೇಕು ಎನ್ನುವ ಆಸೆ ಬಹುತೇಕ ಪೋಷಕರಲ್ಲಿಯೂ ಇರುತ್ತದೆ. ಹೀಗಾಗಿ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಲಕ್ಷ ಲಕ್ಷ ಶುಲ್ಕ ಪಾವತಿಸಿ ಖಾಸಗಿ ಶಾಲೆಗೆ ಸೇರಿಸುತ್ತಾರೆ. ಇದನ್ನು ಅರಿತ ಸರ್ಕಾರವು ಬಡವರು ಮಕ್ಕಳಿಗೂ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಅವಕಾಶ ಮಾಡಿಕೊಟ್ಟಿದೆ.

    ಉತ್ತರ ಕನ್ನಡ ಜಿಲ್ಲೆಯ 26 ಕಡೆಗಳಲ್ಲಿ ಈ ವರ್ಷ ಮೊದಲ ಬಾರಿಗೆ ಒಂದನೇ ತರಗತಿಯಿಂದ ಸರ್ಕಾರಿ ಶಾಲೆಯಲ್ಲಿಯೂ ಇಂಗ್ಲಿಷ್ ಮಾಧ್ಯಮ ಪ್ರಾರಂಭವಾಗಿದೆ. ಜಿಲ್ಲೆಯ ಶಿರಸಿಯ ಶಾಸಕರ ಮಾದರಿ ಶಾಲೆಯಲ್ಲಿ ಎರಡು ವಾರದ ಹಿಂದೆ ಬಡ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮಕ್ಕೆ ಪ್ರವೇಶ ನೀಡಲಾಗಿತ್ತು. ಸರ್ಕಾರದ ಮಾರ್ಗದರ್ಶನದಂತೆ 30 ಜನರನ್ನು ಮಾತ್ರ ಅಗತ್ಯ ದಾಖಲೆಯೊಂದಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರಂತೆಯೇ ಹಲವು ಪೊಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ದಾಖಲು ಮಾಡಿದ್ದಾರೆ. ಶಾಲೆ ಉತ್ತಮವಾಗಿದ್ದರಿಂದ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಕಲಿತ ಮಕ್ಕಳು ಸಹ ಇಲ್ಲಿ ಪ್ರವೇಶ ಪಡೆದಿದ್ದಾರೆ. ಇದರಿಂದಾಗಿ 30 ಮಕ್ಕಳ ಸಂಖ್ಯೆ ಏಕಾಏಕಿ 69ಕ್ಕೆ ಏರಿಕೆಯಾಗಿದೆ.

    ಸರ್ಕಾರದ ಮಾರ್ಗದರ್ಶಿಯಂತೆ 30 ಜನರಿಗೆ ಮಾತ್ರ ಅವಕಾಶವಿದ್ದು 39 ಮಕ್ಕಳು ಹೆಚ್ಚುವರಿಯಾಗಿ ಸೇರಿಕೊಂಡಿದ್ದಾರೆ. ಹೀಗಾಗಿ ಅಲ್ಲಿನ ಆಡಳಿತ ಮಂಡಳಿ (ಎಸ್‍ಡಿಎಂಸಿ) ಹಾಗೂ ಮುಖ್ಯ ಶಿಕ್ಷಕರು ತಮಗೆ ಬೇಕಾದವರಿಗೆ ಮಾತ್ರ ಅವಕಾಶ ಕಲ್ಪಿಸಿದ್ದಾರೆ. ಉಳಿದ ಮಕ್ಕಳನ್ನು ಎರಡು ವಾರಗಳ ಕಾಲ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿದ್ದರೂ ಶಾಲೆಯಿಂದ ಹೊರಹಾಕಿದ್ದಾರೆ. ಇದನ್ನು ಪ್ರಶ್ನಿಸಿ ಪೂಷಕರು ಮುಖ್ಯ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಬಳಿ ಹೋದರೂ ಯಾವುದೇ ಪರಿಹಾರ ನೀಡದೇ ಕನ್ನಡ ಮಾಧ್ಯಮಕ್ಕೆ ಸೇರಿಸಿ ಎಂದು ನುಣಿಚಿಕೊಂಡಿದ್ದಾರೆ.

    ಶಾಸಕರು, ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಕೆ:
    ನಿಯಮದಂತೆ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡು ಈಗ ಮಕ್ಕಳನ್ನು ಹೊರಹಾಕಲಾಗಿದೆ. ತಮಗೆ ಬೇಕಾದ ಮಕ್ಕಳಿಗೆ ಅವಕಾಶ ಕೊಡಲಾಗಿದೆ. ಸಂಖ್ಯೆ ಹೆಚ್ಚು ಆಗಿದ್ದಾಗ ಕೊನೆ ಪಕ್ಷ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಬಹುದಿತ್ತು. ಆದರೆ ಅದನ್ನೂ ಕೂಡ ಮಾಡಲಿಲ್ಲ ಎಂದು ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಮನವಿ ಮಾಡಿದ್ದಾರೆ.

    ಈವರೆಗೂ ಶಾಸಕರು ಹಾಗೂ ಶಿಕ್ಷಣಾಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಮ್ಮ ಮಕ್ಕಳು ಸರ್ಕಾರಿ ಶಾಲೆಯ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಾರೆಂಬ ಆಸೆ ಇತ್ತು. ಹೀಗಾಗಿ ಈ ಶಾಲೆಗೆ ಸೇರಿಸಿದ್ದೇವು ಎಂದು ಮಕ್ಕಳ ಪೋಷಕರು ಅಳಲು ತೋಡಿಕೊಂಡಿದ್ದಾರೆ.

  • ಲೋಕಸಭಾ ಫಲಿತಾಂಶದ ಬಳಿಕ ಮೈತ್ರಿ ಸರ್ಕಾರ ಬೀಳುತ್ತೆ: ಅನಂತ್‍ಕುಮಾರ್ ಹೆಗ್ಡೆ

    ಲೋಕಸಭಾ ಫಲಿತಾಂಶದ ಬಳಿಕ ಮೈತ್ರಿ ಸರ್ಕಾರ ಬೀಳುತ್ತೆ: ಅನಂತ್‍ಕುಮಾರ್ ಹೆಗ್ಡೆ

    ಕಾರವಾರ: ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರ ಬೀಳುವ ಸಾಧ್ಯತೆಗಳಿವೆ. ಹೀಗಾಗಿ ಎಲ್ಲ ರೀತಿಯಿಂದಲೂ ನಾವು ಸಿದ್ಧವಾಗಿರಬೇಕು ಎಂದು ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆ ಕಾರ್ಯಕರ್ತರಿಗೆ ಕರೆಕೊಟ್ಟಿದ್ದಾರೆ.

    ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ಇಂದು ನಡೆದ ಬಿಜೆಪಿ ಕಾರ್ಯಕರ್ತರ ಅವಲೋಕನ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವರು, ಮತ್ತೊಂದು ಚುನಾವಣೆಗೆ ಈಗಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ. ಕಾರ್ಯರ್ತರು ರೆಸ್ಟ್ ಮೂಡ್‍ಗೆ ಹೋಗುವುದು ಬೇಡ. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗುತ್ತದೆ ಎಂದರು.

    ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಚಿಹ್ನೆ ಇರುತ್ತದೆ. ರಾಜ್ಯದಲ್ಲಿ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚನೆ ಮಾಡಿದರು. ಆದರೆ ಈಗ ಅದು ಅಲುಗಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

    ಸಾಧನೆ ಮಾಡಬೇಕು ಎನ್ನುವ ವ್ಯಕ್ತಿ ವಿಶ್ರಾಂತಿ ಬಗ್ಗೆ ಹೆಚ್ಚು ಗಮನ ಹರಿಸಬಾರದು. ಮಲಗಿದ್ದಾಗಲೂ ಒಂದು ವಿಷಯದ ಕುರಿತು ವಿಚಾರ ಮಾಡುತ್ತಿರಬೇಕು. ನಾನು ಒಂದು ದಿನವೂ ವಿಶ್ರಾಂತಿ ತೆಗೆದುಕೊಂಡಿಲ್ಲ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ಏಪ್ರಿಲ್ 23ರಂದು ಮುಗಿಯುತ್ತಿದ್ದಂತೆ ಮತ್ತೆ ನನ್ನ ಕಾರ್ಯಕ್ಕೆ ಹಾಜರಾದೆ ಎಂದು ಹೇಳಿದರು.

  • ಸ್ನಾನಕ್ಕಾಗಿ ಹೊಳೆಯಲ್ಲಿ ಇಳಿದಿದ್ದ ಇಬ್ಬರು ಸಾವು

    ಸ್ನಾನಕ್ಕಾಗಿ ಹೊಳೆಯಲ್ಲಿ ಇಳಿದಿದ್ದ ಇಬ್ಬರು ಸಾವು

    ಕಾರವಾರ: ಸ್ನಾನಕ್ಕಾಗಿ ಹೊಳೆಗೆ ಇಳಿದಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಓಣಿಕೇರಿ ಗ್ರಾಮದ ಸಮೀಪದಲ್ಲಿರುವ ಬಿಳಚಿಕಟ್ಟು ಬಳಿ ಕೆಂಗ್ರೆಹೊಳೆಯಲ್ಲಿ ಗುರುವಾರ ನಡೆದಿದೆ.

    ಬೈಂದೂರು ಮೂಲದ ದಿನೇಶ್ (35) ಹಾಗೂ ಶಿರಸಿ ಮೂಲಕ ವಿನಾಯಕ್ (20) ಮೃತ ದುರ್ದೈವಿಗಳು. ಶಾಲ್ಮಲಾ ನದಿ ಪಾತ್ರದ ಕೆಂಗ್ರೆಹೊಳೆಯಲ್ಲಿ ದುರ್ಘಟನೆ ನಡೆದಿದೆ.

    ಶಿರಸಿಯ ಕರಾವಳಿ ಹೋಟೆಲ್‍ನಲ್ಲಿ ದಿನೇಶ್ ಹಾಗೂ ವಿನಾಯಕ್ ಕೆಲಸ ಮಾಡುತ್ತಿದ್ದರು. ಶಿರಸಿಯಲ್ಲಿ ಮಂಗಳವಾರ ಗಾಳಿ ಸಹಿತ ಭಾರೀ ಮಳೆಯಾಗಿದ್ದರಿಂದ ಹೋಟೆಲ್ ಜಖಂಗೊಂಡಿತ್ತು. ಹೀಗಾಗಿ ಕಳೆದ ಎರಡು ದಿನಗಳಿಂದ ಮಾಲೀಕರ ಮನೆಗೆ ಹೋಗಿ ಊಟ ಮಾಡಿಕೊಂಡು ತಾವು ತಂಗಿದ್ದ ರೂಮ್‍ಗೆ ಬರುತ್ತಿದ್ದರು. ಮಾಲೀಕರ ಮನೆಯಲ್ಲಿ ಇಂದು ಮಧ್ಯಾಹ್ನ ಊಟ ಮಾಡಿಕೊಂಡು, ಸ್ನಾನ ಮಾಡಲು ಕೆಂಗ್ರೆಹೊಳೆಗೆ ಬಂದಿದ್ದರು. ಹೊಳೆಗೆ ಇಳಿದಾಗ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

    ಹೊಳೆಯ ಬಳಿಗೆ ಬಂದಿದ್ದ ಕೆಲ ಸ್ಥಳೀಯರಿಗೆ ದಡದ ಮೇಲೆ ಬಟ್ಟೆ ಹಾಗೂ ನೀರಿನಲ್ಲಿ ಎರಡು ಮೃತ ದೇಹಗಳು ತೇಲುತ್ತಿರವುದು ಕಂಡಿತ್ತು. ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಿರಸಿ ಗ್ರಾಮೀಣ ಠಾಣೆ ಪೊಲೀಸರು, ಮೃತ ದೇಹವನ್ನು ಹೊಳೆಯಿಂದ ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗೆ ಶಿರಸಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಸ್ನೋಟಿಕರ್ ರ‍್ಯಾಲಿಯಲ್ಲಿ ಮೋದಿ ಪರ ಘೋಷಣೆ

    ಅಸ್ನೋಟಿಕರ್ ರ‍್ಯಾಲಿಯಲ್ಲಿ ಮೋದಿ ಪರ ಘೋಷಣೆ

    – ಮೈತ್ರಿ ಪಕ್ಷ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಗಲಾಟೆ

    ಕಾರವಾರ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ರ‍್ಯಾಲಿ ವೇಳೆ ಮೋದಿ ಪರ ಘೋಷಣೆ ಕೂಗಿ, ಗಲಾಟೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಮುಖ್ಯರಸ್ತೆಯಲ್ಲಿ ನಡೆದಿದೆ.

    ಶಿರಸಿಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆನಂದ್ ಆಸ್ನೋಟಿಕರ್ ನೇತೃತ್ವದಲ್ಲಿ ಪ್ರಚಾರ ಮಾಡಲಾಗುತಿತ್ತು. ಈ ವೇಳೆ ಬಿಜೆಪಿ ಕಾರ್ಯಕರ್ತರು ಮೋದಿ, ಮೋದಿ ಎಂದು ಘೋಷಣೆ ಕೂಗಿದರು. ಇದರಿಂದಾಗಿ ಕೋಪಗೊಂಡ ಮೈತ್ರಿ ಪಕ್ಷದ ಕಾರ್ಯಕರ್ತರು ರಾಹುಲ್ ಎಂದು ಕೂಗಿದರು.

    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕಾರ್ಯಕರ್ತರು ಮತ್ತು ಬಿಜೆಪಿ ಮಧ್ಯೆ ಮಾತಿನ ಚಕಮಕಿ ಆರಂಭವಾಯಿತು. ಬಳಿಕ ಕೈ ಮಿಲಾಯಿಸುವ ಹಂತ ತಲುಪಿತ್ತು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

  • ತೋಟಕ್ಕೆ ಬಂದ ಕೋತಿಗಳನ್ನು  ಕೊಲ್ಲಲು ಹೋದ ಯುವಕ ತಾನೇ ಹೆಣವಾದ!

    ತೋಟಕ್ಕೆ ಬಂದ ಕೋತಿಗಳನ್ನು ಕೊಲ್ಲಲು ಹೋದ ಯುವಕ ತಾನೇ ಹೆಣವಾದ!

    ಕಾರವಾರ: ತೋಟಕ್ಕೆ ಉಪಟಳ ಕೊಡುತ್ತಿದ್ದ ಮಂಗಗಳನ್ನು ಕೊಲ್ಲಲು ನಾಡ ಬಂದೂಕಿಗೆ ಮದ್ದು ಹಾಕುತ್ತಿದ್ದಾಗ ಗುಂಡು ತಲೆಗೆ ಸಿಡಿದು ಯುವಕನೊಬ್ಬ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ವಾನಳ್ಳಿಯ ಕೆರೆಗದ್ದೆಯಲ್ಲಿ ನಡೆದಿದೆ.

    ಶಿರಸಿಯ ಹುಲೇಕಲ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ಓದುತ್ತಿದ್ದ ಕಾರ್ತಿಕ್ ಹೆಗಡೆ ಮೃತ ದುರ್ದೈವಿ. ಅಡಿಕೆ ತೋಟಕ್ಕೆ ಮಂಗಗಳು ದಾಳಿ ಇಟ್ಟಿದ್ದರಿಂದ ಕಾರ್ತಿಕ್ ತನ್ನ ತಂದೆ, ತಾಯಿ ಹಾಗೂ ಚಿಕ್ಕಮ್ಮನ ಜೊತೆಗೆ ತೋಟಕ್ಕೆ ತೆರಳಿ ಮಂಗಗಳನ್ನು ಓಡಿಸಲು ಹೋಗಿದ್ದ. ದುರಾದೃಷ್ಟವೆಂದರೆ ಮಂಗಗಳು ತೋಟಬಿಟ್ಟು ಹೋಗದ ಕಾರಣ ಕಾರ್ತಿಕ್ ಬಂದೂಕು ತೆಗೆದುಕೊಂಡು ಹೋಗಲು ಮನೆಗೆ ವಾಪಸ್ ಬಂದಿದ್ದ.

    ಮನೆಯಲ್ಲಿದ್ದ ನಾಡ ಬಂದೂಕನ್ನು ತೆಗೆದುಕೊಂಡ ಕಾರ್ತಿಕ್, ಕಾಡತೂಸು (ಸೀಸ, ಮದ್ದು ಹಾಗೂ ಗುಂಡುಗಳ ಮಿಶ್ರಣ) ಅನ್ನು ಬಂದೂಕಿನ ನಳಿಕೆಗೆ ಹಾಕಿ ಸರಿಪಡಿಸುತ್ತಿದ್ದ. ಈ ವೇಳೆ ಆಕಸ್ಮಿಕವಾಗಿ ಮದ್ದು ಸಿಡಿದ ಪರಿಣಾಮ ತಲೆಯ ಭಾಗಕ್ಕೆ ಹೊಡೆತ ಬಿದ್ದಿದೆ. ಪರಿಣಾಮ ಮೆದುಳು ಸಿಡಿದು ಮಾರು ದೂರ ಬಿದ್ದಿದೆ. ಸ್ಥಳದಲ್ಲಿಯೇ ಬಿದ್ದಿದ್ದ ಕಾರ್ತಿಕ್ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ. ಗುಂಡಿನ ಸದ್ದು ಕೇಳಿದ ಪೋಷಕರು ಮನೆಗೆ ಬಂದು ಓಡಿಬಂದು ನೋಡಿದಾಗ ಏಕೈಕ ಪುತ್ರ ಕಾರ್ತಿಕ್  ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದ್ದಾರೆ.

    ಪೊಲೀಸರು ಬರಲಿಲ್ಲ:
    ಈ ಘಟನೆ ಸೋಮವಾರ ಸಂಜೆ ಸುಮಾರು 6.30 ಗಂಟೆಗೆ ನಡೆದಿದೆ. ಹಳ್ಳಿಯಾದ್ದರಿಂದ ದೂರವಾಣಿ ಸಂಪರ್ಕವೂ ಇರದ ಕಾರಣ ಘಟನೆ ತಿಳಿದ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿದ್ದಾಪುರದಲ್ಲಿ ಅರಣ್ಯ ಒತ್ತುವರಿದಾರರು ಮಂಗಳವಾರ ಬಂದ್‍ಗೆ ಕರೆ ಕೊಟ್ಟಿದ್ದರಿಂದ ಅಲ್ಲಿಗೆ ಶಿರಸಿ ಗ್ರಾಮೀಣ ಠಾಣಾ ಪೊಲೀಸರು ಕೂಡ ತೆರಳಿದ್ದರು. ಇದರಿಂದಾಗಿ ಸುಮಾರು 8 ಗಂಟೆಯ ನಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಸಿಡಿಯುತ್ತಾ ಬಂದೂಕು!
    ತೋಟದಲ್ಲಿ ಮಂಗಗಳನ್ನು ಹೊಡೆಯಲು ಅಥವಾ ಕಾಡು ಪ್ರಾಣಿಗಳನ್ನು ಹೆದರಿಸಲು ಲೈಸೆನ್ಸ್ ಪಡೆದು ಬಂದೂಕನ್ನು ಇಟ್ಟುಕೊಳ್ಳುತ್ತಾರೆ. ಲೋಡ್ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ನಳಿಕೆಯಿಂದ ಮದ್ದು ಸಿಡಿಯುತ್ತದೆ. ಸ್ಥಳೀಯರು ತಿಳಿಸುವಂತೆ ಕಾರ್ತಿಕ್‍ಗೆ ಕಾಡತೂಸು ತುಂಬುವ ಮಾಹಿತಿ ಇರಲಿಲ್ಲ. ಹೀಗಾಗಿ ಭಾರೀ ಅನಾಹುತ ಸಂಭವಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಮಾಜಸೇವೆ ಮಾಡಲು ಕುರ್ಚಿ ಮೇಲೆ ಬಂದು ಕುಳಿತಿಲ್ಲ ಅಂದ್ರು ಸಚಿವ ಅನಂತ್ ಕುಮಾರ್ ಹೆಗ್ಡೆ!

    ಸಮಾಜಸೇವೆ ಮಾಡಲು ಕುರ್ಚಿ ಮೇಲೆ ಬಂದು ಕುಳಿತಿಲ್ಲ ಅಂದ್ರು ಸಚಿವ ಅನಂತ್ ಕುಮಾರ್ ಹೆಗ್ಡೆ!

    ಕಾರವಾರ: ತನ್ನ ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರೋ ಸಚಿವ ಅನಂತ್ ಕುಮಾರ್ ಹೆಗ್ಡೆಯವರು ಇದೀಗ ಮತ್ತೊಂದು ಹೇಳಿಕೆ ನೀಡುವ ಮೂಲಕ ವಿವಾದಕ್ಕೀಡಾಗಿದ್ದಾರೆ.

    ಶಿರಸಿಯಲ್ಲಿ ಆಯೋಜಿಸಿರುವ ಬಿಜೆಪಿ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ನೀವು ವೋಟು ಕೊಟ್ಟಂತಹ ಹಾಗೂ ನೀವು ವೋಟು ಕೊಡಿಸಿರತಕ್ಕಂತಹ ಯಾರೋ ಕೇಳಬಹುದು ನೀವ್ ರಾಜಕಾರಣ ಮಾಡ್ತೀರಾ ಅಂತ. ನಾವು ಈ ಜಾಗದಲ್ಲಿ ಬಂದು ಕುಳಿತಿದ್ದೇ ರಾಜಕಾರಣ ಮಾಡಲಿಕ್ಕೆ. ಮತ್ಯಾಕೆ ನಾವು ರಾಜಕಾರಣಕ್ಕೆ ಬಂದಿದ್ದೇವೆ. ನಾವು ಇರುವುದೇ ರಾಜಕಾರಣ ಮಾಡೋದಿಕ್ಕೆ. ಅದಕ್ಕೋಸ್ಕರವೇ ತಾಲೂಕು ಅಧ್ಯಕ್ಷರಾಗಿದ್ದೇವೆ. ಅದಕ್ಕೋಸ್ಕರವೇ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿದ್ದೇವೆ, ಜಿಲ್ಲಾ ಸಮಿತಿ ಸದಸ್ಯರಾಗಿದ್ದೇವೆ, ಶಾಸಕರು ಸಂಸದರಾಗಿದ್ದೇವೆ. ರಾಜಕಾರಣ ಬಿಟ್ಟು ಮತ್ತೇನೂ ಮಾಡೋದಿಕ್ಕೆ ಆಗೋದಿಲ್ಲ. ರಾಜಕೀಯಕ್ಕೆ ಬಂದು ರಾಜಕಾರಣವೇ ಮಾಡಬೇಕು ಅಂದ್ರು.

    ಸಮಾಜಸೇವೆ ಮಾಡಲು ಈ ಕುರ್ಚಿ ಮೇಲೆ ಕುಳಿತುಕೊಂಡೇ ಇಲ್ಲ. ನಾವು ರಾಜಕಾರಣ ಮಾಡುವುದಕ್ಕೆ ಬಂದು ಕುಳಿತುಕೊಂಡಿದ್ದು. ಮಾಧ್ಯಮದವರು ಹೇಗೆ ಬೇಕಾದ್ರೂ ಬರೆದುಕೊಳ್ಳಿ. ಅವರವರ ಭಾವಕ್ಕೆ ಅವರವರ ಭಕುತಿ ಅಂತ ಹೇಳಿ ದಯವಿಟ್ಟು ಹಿಂದೇಟು ಹಾಕಬಾರದು ಅಂತ ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=GL6-u6xfoSM&feature=youtu.be

  • ಅಂಗಡಿಯ ಬಳಿ ನಿಲ್ಲಿಸಿದ್ದ ಸ್ಕೂಟಿಯಲ್ಲಿ ಹಾವು ಕಂಡು ಬೆಚ್ಚಿಬಿದ್ದರು!

    ಅಂಗಡಿಯ ಬಳಿ ನಿಲ್ಲಿಸಿದ್ದ ಸ್ಕೂಟಿಯಲ್ಲಿ ಹಾವು ಕಂಡು ಬೆಚ್ಚಿಬಿದ್ದರು!

    ಕಾರವಾರ: ಅಂಗಡಿಯ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನದೊಳಗೆ ಹಾವೊಂದು ಗಂಟೆಗಟ್ಟಲೆ ಅವಿತು ಕುಳಿತು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

    ಶಿರಸಿಯ ಸಿ.ಪಿ. ಬಜಾರ್ ರಸ್ತೆಯ ಅಂಗಡಿಯೊಂದರ ಬಳಿ ನಿಲ್ಲಿಸಿದ್ದ ಸ್ಕೂಟಿಯಲ್ಲಿ ಆಭರಣ ಹಾವು ಅವಿತು ಕುಳಿತ್ತಿತ್ತು. ಇದನ್ನು ನೋಡಿದ ಅಂಗಡಿ ಮಾಲೀಕ ಹಾಗೂ ಅಲ್ಲಿದ್ದ ಜನರು ಅದನ್ನು ಹೆದರಿಸಿ ಓಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಯಾರೊಬ್ಬರ ಹೆದರಿಕೆಗೂ ಬಗ್ಗದ ಹಾವು ಸ್ಕೂಟಿಯೊಳಗೆ ಸೇರಿ ಬೆಚ್ಚಗೆ ಕುಳಿತಿತ್ತು.

    ತಕ್ಷಣವೇ ವ್ಯಕ್ತಿಯೊಬ್ಬರು ಉರಗತಜ್ಞ ಪ್ರಶಾಂತ್ ಹುಲೇಕಲ್ ಅವರಿಗೆ ಮಾಹಿತಿ ನೀಡಿದರು. ಪ್ರಶಾಂತ್ ಸ್ಥಳಕ್ಕೆ ಆಗಮಿಸಿ, ಆಭರಣ ಹಾವನ್ನು ದ್ವಿಚಕ್ರ ವಾಹನದಿಂದ ಹೊರಗೆ ತೆಗೆದು, ರಕ್ಷಿಸಿ ಪುನಃ ಕಾಡಿಗೆ ಬಿಟ್ಟಿದ್ದಾರೆ.