Tag: Sirsi

  • ಉತ್ತರ ಕನ್ನಡ ಜಿಲ್ಲೆಯಲ್ಲಿ SSLC ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಗಳು ನಾಪತ್ತೆ!

    ಉತ್ತರ ಕನ್ನಡ ಜಿಲ್ಲೆಯಲ್ಲಿ SSLC ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಗಳು ನಾಪತ್ತೆ!

    – ಮೊಬೈಲ್ ಲಭ್ಯತೆ ಕುರಿತು ಸಮೀಕ್ಷೆಗೆ ಮುಂದಾದ ಶಿಕ್ಷಣ ಇಲಾಖೆ

    ಕಾರವಾರ: ಕಾಣೆಯಾದವರನ್ನು ಪೊಲೀಸರು ಪತ್ತೆಹಚ್ಚುವುದು ಸಾಮಾನ್ಯ. ಆದ್ರೆ ಇದೀಗ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಬೇಕಾದ ತಮ್ಮ ಶಾಲೆಯ ಮಕ್ಕಳನ್ನು ಪತ್ತೆಹಚ್ಚಲು ಶಿಕ್ಷಕರು ಪೊಲೀಸರಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

    ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮುಂದಾಗಿದೆ. ಕೊರೊನಾದಿಂದ ಕೆಲವು ತಿಂಗಳು ಶಾಲೆಗಳು ಮುಚ್ದಿದ್ದರಿಂದ ವಿದ್ಯಾರ್ಥಿಗಳು ಶಾಲೆಯಿಂದ ದೂರವಿದ್ದಾರೆ. ಇಂಥ ಸಂಕಷ್ಟದಲ್ಲಿ ವಿದ್ಯಾರ್ಥಿಗಳಿಂದ ಪರೀಕ್ಷೆ ಬರೆಸುವುದು ಕೂಡ ಸವಾಲಿನ ಕೆಲಸವಾಗಿದೆ. ಆದ್ರೆ ಬಹುತೇಕ ಗುಡ್ಡಗಾಡು ಹಾಗೂ ಸಂಪರ್ಕವೇ ಸಿಗದ ಹಳ್ಳಿಗಳಿರುವ ಹಿಂದುಳಿದ ಜಿಲ್ಲೆಯಾದ ಉತ್ತರಕನ್ನಡ ಜಿಲ್ಲೆಯ ಕಾರವಾರ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಕೆಲವು ಮಕ್ಕಳು-ಶಿಕ್ಷಕರ ನಡುವಿನ ಸಂಪರ್ಕ ವಿವಿಧ ಕಾರಣಗಳಿಂದ ಕಡಿತಗೊಂಡಿದೆ.

    ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನ ಎರಡೇ ದಿನಕ್ಕೆ ಸೀಮಿತ ಮಾಡಿರುವುದರಿಂದ ಪರೀಕ್ಷೆ ಬರೆದ ಪ್ರತಿಯೊಬ್ಬರೂ ಉತ್ತೀರ್ಣರಾಗಲಿದ್ದಾರೆಂದು ಇಲಾಖೆ ತಿಳಿಸಿದೆ. ಆದ್ರೆ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಮಕ್ಕಳಿಗೆ ಕೊಟ್ಟು ಅಭ್ಯಾಸ ಮಾಡಿಸುವಂತೆ ಆಯಾ ಶಾಲೆಗಳಿಗೆ ಸೂಚಿಸಲಾಗಿದೆ.

    ಹೀಗಾಗಿ ಶಿಕ್ಷಕರು ಮಕ್ಕಳ ಸಂಪರ್ಕಕ್ಕಾಗಿ ಹರಸಾಹಸಪಡಬೇಕಾಗಿದೆ. ಯಾಕಂದ್ರೆ ಗುಡ್ಡಗಾಡು ಪ್ರದೇಶಗಳನ್ನ ಹೊಂದಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಹಲವು ಹಳ್ಳಿಗಳಿಗೆ ಬಸ್ ಸಂಪರ್ಕವೇ ಇಲ್ಲ. ಇನ್ನು ನೆಟ್ ವರ್ಕ್ ಕೂಡ ಇಲ್ಲದ ಕುಗ್ರಾಮಗಳಿಂದ ಮಕ್ಕಳನ್ನ ಹುಡುಕುವುದೇ ಶಿಕ್ಷಕರಿಗೆ ಕಷ್ಟಸಾಧ್ಯವಾಗಿದೆ. ಹೀಗಾಗಿ ಶಿಕ್ಷಕರ ಸಭೆಯಲ್ಲಿ ಅಧಿಕಾರಿಗಳು ಮಕ್ಕಳ ಪತ್ತೆಗಾಗಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನ ಪತ್ತೆ ಮಾಡುವ ಕಾರ್ಯವನ್ನ ಶಿಕ್ಷಕರು ನಡೆಸುತಿದ್ದಾರೆ.

    ಮಕ್ಕಳ ಪತ್ತೆಯೇ ಸವಾಲು!
    ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರಸಿ ಹಾಗೂ ಕಾರವಾರ ಎಂಬ ಎರಡು ಶೈಕ್ಷಣಿಕ ಜಿಲ್ಲೆಯಿದೆ. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 10,033 ವಿದ್ಯಾರ್ಥಿಗಳು, ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 10,252 ವಿದ್ಯಾರ್ಥಿಗಳಿದ್ದಾರೆ.

    ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಕಾರವಾರ ತಾಲೂಕು ಹೊರತುಪಡಿಸಿದರೆ ಮಕ್ಕಳನ್ನು ಸಂಪರ್ಕಿಸಲು ಕಷ್ಟವಾಗದು. ಆದರೇ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಅತೀ ಹೆಚ್ಚು ಅರಣ್ಯ ಪ್ರದೇಶಗಳಿವೆ. ಇನ್ನು ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಹಳ್ಳಿಗಳನ್ನು ಸಂಪರ್ಕಿಸುವುದೇ ದೊಡ್ಡ ಸವಾಲಾಗಿದ್ದು ಹಲವು ಹಳ್ಳಿಗಳು ಆರು ತಿಂಗಳುಕಾಲ ಬಾಹ್ಯ ಸಂಪರ್ಕ ಸಹ ಕಡಿತವಾಗುತ್ತದೆ.

    ಈ ಹಿಂದೆ ಶಿಕ್ಷಣಾಧಿಕಾರಿಗಳು ಹೈಸ್ಕೂಲ್ ಮುಖ್ಯ ಶಿಕ್ಷಕರ ಸಭೆ ನಡೆಸಿದ್ದರು. ಆಗ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ನೂರಾರು ವಿದ್ಯಾರ್ಥಿಗಳ ಸುಳಿವು ಸಿಕ್ಕಿರಲಿಲ್ಲ. ಇದೀಗ ಕಾರವಾರ ಶೈಕ್ಷಣಿಕ ಜಿಲ್ಲೆಯ 83 ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯ ಸುಮಾರು 2 ಸಾವಿರದಷ್ಟು ವಿದ್ಯಾರ್ಥಿಗಳು ಇದುವರೆಗೂ ಶಾಲೆಗಳ ಅಥವಾ ಶಿಕ್ಷಕರ ಸಂಪರ್ಕಕ್ಕೆ ಸಿಕ್ಕಿಲ್ಲ. ಇದರಿಂದ ಅಧಿಕಾರಿಗಳು ಕೂಡ ತಲೆಕೆಡಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಹುಡುಕಿ ತರುವ ಜವಾಬ್ದಾರಿಯನ್ನು ಹೈಸ್ಕೂಲ್ ಶಿಕ್ಷಕರಿಗೆ ನೀಡಲಾಗಿದೆ. ತಮ್ಮ ಶಾಲೆಯ ಎಲ್ಲ ಮಕ್ಕಳನ್ನು ಹೇಗಾದರೂ ಸಂಪರ್ಕಿಸಿ ಅವರಿಗೆ ಪಾಠ ಮಾಡುವ ಜವಾಬ್ದಾರಿಯನ್ನ ಶಿಕ್ಷಕರು ಹೊತ್ತುಕೊಂಡಿದ್ದಾರೆ.

    ಹೀಗಾಗಿ ಬೈಕ್ ಗಳ ಮೂಲಕ ವಿಳಾಸ ಹಿಡಿದು ವಿದ್ಯಾರ್ಥಿಗಳ ಮನೆಯನ್ನ ಹುಡುಕುತ್ತಿದ್ದಾರೆ. ನಗರ ಪ್ರದೇಶದ ಮಕ್ಕಳು ಈಗಾಗಲೇ ಶಿಕ್ಷಕರ ಸಂಪರ್ಕದಲ್ಲಿದ್ದು, ವಾಟ್ಸಪ್ ಗ್ರೂಪ್ ಮಾಡಿಕೊಂಡು ಆನ್‍ಲೈನ್ ತರಗತಿ ಪಡೆಯುತ್ತಿದ್ದಾರೆ. ಗ್ರಾಮೀಣ ಭಾಗದ ಮೊಬೈಲ್ ನೆಟ್ ವರ್ಕ್ ಇಲ್ಲದ ಪ್ರದೇಶದಲ್ಲಿರುವ ಹಾಗೂ ಮೊಬೈಲ್ ಇಲ್ಲದ ಮಕ್ಕಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರ ವಿಳಾಸ ಹುಡುಕಿ ಮನೆಗಳಿಗೆ ತೆರಳಿ ಅವರನ್ನು ಪತ್ತೆ ಮಾಡೋದೇ ದೊಡ್ಡ ಸವಾಲಾಗಿದ್ದು ಪರೀಕ್ಷೆಗೆ ಹಾಜುರಾಗದ ಭೀತಿ ಕಾಣುತ್ತಿದೆ.

    ಮೊಬೈಲ್ ಲಭ್ಯತೆ ಕುರಿತು ಸಮೀಕ್ಷೆ
    ಜಿಲ್ಲೆಯಲ್ಲಿ ಎಷ್ಟು ವಿದ್ಯಾರ್ಥಿಗಳು ಹಾಗೂ ಪಾಲಕರ ಬಳಿ ಸ್ಮಾರ್ಟ್ ಫೋನ್‍ಗಳಿವೆ ಎಂಬ ಸಮೀಕ್ಷೆ ಮಾಡಲಾಗುತ್ತಿದ್ದು, ಒಂದು ವಾರದಲ್ಲಿ ಪೂರ್ಣಗೊಳ್ಳಬಹುದು. ಈ ಮಾಹಿತಿಯನ್ನು ಆಧರಿಸಿ ಆನ್‍ಲೈನ್ ತರಗತಿಗಳಿಗೆ ಎಷ್ಟು ಮಂದಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂಬುದನ್ನು ಲೆಕ್ಕಾಚಾರ ಹಾಕಲು ಸಾಧ್ಯವಾಗುತ್ತದೆ ಜೊತೆಗೆ ಹಳ್ಳಿಗಳ ಮಕ್ಕಳ ಸಂಪರ್ಕಕ್ಕೂ ಸಫಲವಾಗಲಿದೆ ಎಂದು ಕಾರವಾರ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಹರೀಶ ಗಾಂವ್ಕರ್ ತಿಳಿಸಿದ್ದಾರೆ.

    ಹೆಚ್ಚುವರಿ ಪರೀಕ್ಷಾ ಕೇಂದ್ರ ತೆರೆಯಲಿರುವ ಶಿಕ್ಷಣ ಇಲಾಖೆ
    ಉತ್ತರ ಕನ್ನಡದ ಎರಡೂ ಶೈಕ್ಷಣಿಕ ಜಿಲ್ಲೆಗಳಲ್ಲಿ ಒಟ್ಟು 49 ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಪರೀಕ್ಷಾ ಕೇಂದ್ರಗಳ ಸಂಖ್ಯೆ 73ರಿಂದ 122ಕ್ಕೆ ಏರಿಸಲಾಗಿದೆ. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿದ್ದ 38 ಕೇಂದ್ರಗಳ ಬದಲು 60 ಹಾಗೂ ಶಿರಸಿ ಜಿಲ್ಲೆಯಲ್ಲಿ 35 ಕೇಂದ್ರಗಳ ಜೊತೆಗೆ 27 ಕೇಂದ್ರಗಳನ್ನು ಗುರುತಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಒಂದೇ ಕಡೆ 100 ವಿದ್ಯಾರ್ಥಿಗಳಿದ್ದರೆ ಅಲ್ಲಿ ಹೊಸ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಅಂಕೋಲಾ ತಾಲೂಕಿನ ಹಿಲ್ಲೂರು, ಸುಂಕಸಾಳ, ಶಿರಸಿ ತಾಲ್ಲೂಕಿನ ಬಂಡಲ, ದೇವನಹಳ್ಳಿಯಲ್ಲಿ ಪರೀಕ್ಷೆ ಕೇಂದ್ರಗಳು ಆರಂಭವಾಗಲಿವೆ. ಇದರಿಂದ ವಿದ್ಯಾರ್ಥಿಗಳು ಪರೀಕ್ಷೆ ಸಲುವಾಗಿ ತಾಲೂಕು ಕೇಂದ್ರಗಳಿಗೆ ಬರುವುದು ತಪ್ಪಲಿದೆ.

    ಕೋವಿಡ್ ಕಾರಣದಿಂದ ಅನಿಶ್ಚಿತವಾಗಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಿದ್ಧತೆ ನಡೆಯವುದರ ಜೊತೆಗೆ ಜೂನ್ 15ರಿಂದ ಈ ಬಾರಿಯ ಶೈಕ್ಷಣಿಕ ವರ್ಷವೂ ಶುರುವಾಗಿದೆ. ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಬದಲಾದ ಸ್ವರೂಪದ ಬಗ್ಗೆ ತರಬೇತಿ ನೀಡುತ್ತಿದ್ದಾರೆ.

    ಶಿರಸಿ ಜಿಲ್ಲೆಯಲ್ಲಿ ‘ಪ್ರೇರಣಾ ಶಿಬಿರ’ಗಳನ್ನು ಆರಂಭಿಸಲಾಗಿದೆ. ಈ ಹಿಂದಿನ ಪರೀಕ್ಷೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಶೇ.100 ಅಂಕ ಗಳಿಸುವ ಗುರಿಯೊಂದಿಗೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

    ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳ ಆರೋಗ್ಯ ಕಾಳಜಿಗೂ ಇಲಾಖೆ ಮುಂದಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಹಾಜರಾಗುವ ಮಕ್ಕಳಿಗೆ ಎನ್-95 ಮುಖಗವಸು ನೀಡಲಾಗುತ್ತದೆ. ಪರೀಕ್ಷಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಪರೀಕ್ಷೆಗೆ ಹಾಜರಾಗಲು ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

    ಇವುಗಳ ನಡುವೆ ಪತ್ತೆಯಾಗದ ಮಕ್ಕಳ ಸಮಸ್ಯೆ ಸಹ ಶಿಕ್ಷಣ ಇಲಾಖೆಗೆ ದೊಡ್ಡ ಸವಾಲಾಗಿದ್ದು, ಕೇವಲ ನೆಟ್‍ವರ್ಕ್ ಸಮಸ್ಯೆದಿಂದ ಮಾತ್ರ ಮಕ್ಕಳು ಸಂಪರ್ಕಕ್ಕೆ ಸಿಗದಿರಲು ಕಾರಣವಾಗಿಲ್ಲ. ಉತ್ತರ ಕರ್ನಾಟಕ ಭಾಗದಿಂದ ಇಲ್ಲಿ ನೆಲೆಸಿದ್ದ ಸಾಕಷ್ಟು ಕುಟುಂಬಗಳು ಕೋವಿಡ್ ಲಾಕ್‍ಡೌನ್ ಹಾಗೂ ಆರ್ಥಿಕ ಸಂಕಷ್ಟದಿಂದ ತಮ್ಮ ಸ್ವಂತ ಊರು ತಲುಪಿದ್ದಾರೆ. ಇಂತಹ ಹಲವು ಪಾಲಕರ ಬಳಿ ಮೊಬೈಲ್ ಸಹ ಇಲ್ಲ. ಹಲವು ಮಕ್ಕಳು ದಟ್ಟ ಅಡವಿ ಭಾಗದಲ್ಲಿ ವಾಸವಿರಿವುದರಿಂದ ಮಳೆಗಾಲದಲ್ಲಿ ಸಂಪರ್ಕ ಕಡಿತವಾಗುವ ಸಾಕಷ್ಟು ಹಳ್ಳಿಗಳಿವೆ; ಹೀಗಾಗಿ ಈ ಮಕ್ಕಳು ನಿಗದಿ ದಿನದಲ್ಲಿ ಸಿಗದಿದ್ದರೆ ಶಿಕ್ಷಣದಿಂದ ವಂಚಿತರಾಗಿವ ಆತಂಕ ಎದುರಾಗಿದೆ.

  • ರಾಜ್ಯದಲ್ಲೇ ಅತಿ ಹೆಚ್ಚು, ಶಿರಸಿಯಲ್ಲಿ ನೂರರ ಗಡಿ ದಾಟಿದ ಪೆಟ್ರೋಲ್ ಬೆಲೆ

    ರಾಜ್ಯದಲ್ಲೇ ಅತಿ ಹೆಚ್ಚು, ಶಿರಸಿಯಲ್ಲಿ ನೂರರ ಗಡಿ ದಾಟಿದ ಪೆಟ್ರೋಲ್ ಬೆಲೆ

    ಕಾರವಾರ: ಪೆಟ್ರೋಲ್ ದರ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ. ರಾಜ್ಯದಲ್ಲಿ ಬಳ್ಳಾರಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 100ರ ಗಡಿ ದಾಟಿದೆ.

    ಶಿರಸಿ ನಗರದ ಬಂಕ್‍ಗಳಲ್ಲಿ ಪೆಟ್ರೋಲ್ ಬೆಲೆ ಶತಕ ದಾಟಿದ್ದು, ಭಾನುವಾರ ಪ್ರತಿ ಲೀಟರ್‍ಗೆ 100.28 ರೂ. ತಲುಪುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. ಶನಿವಾರ ಶತಕ ಮುಟ್ಟಿದ್ದ ದರ ಮತ್ತಷ್ಟು ಏರಿಕೆ ಕಂಡಿದ್ದು, ಉತ್ತರ ಕನ್ನಡದ ವಾಣಿಜ್ಯ ನಗರಿ ಎಂದೇ ಖ್ಯಾತಿ ಪಡೆದ ಶಿರಸಿ ನಗರದಲ್ಲಿ 8 ಬಂಕ್‍ಗಳಿವೆ. ಬಹುತೇಕ ಎಲ್ಲ ಕಡೆಯಲ್ಲೂ ದರ ಸಾಮ್ಯತೆ ಇದೆ. ರಾಜ್ಯದ ಉಳಿದ ಕಡೆಗಳಿಗಿಂತಲೂ ಹೆಚ್ಚು ದರ ದಾಖಲಾಗುವ ಮೂಲಕ ಇದೇ ಮೊದಲ ಬಾರಿಗೆ ಪೆಟ್ರೋಲ್ ಬೆಲೆ ದಾಖಲೆ ಬರೆದಿದೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಸುಂಕ ವಿನಾಯಿತಿ ಪ್ರಸ್ತಾಪ ಇಲ್ಲ: ಸಿಎಂ

    ತೈಲೋತ್ಪನ್ನಗಳು ಮಂಗಳೂರಿನಿಂದ ನಗರಕ್ಕೆ ಪೂರೈಕೆಯಾಗುತ್ತವೆ. ಕೆಲವೊಮ್ಮೆ ಹುಬ್ಬಳ್ಳಿಗೆ ತಲುಪಿ ಅಲ್ಲಿಂದ ಶಿರಸಿಗೆ ಬರಬೇಕಾಗುತ್ತದೆ. ಹೀಗಾಗಿ ಉಳಿದ ನಗರಕ್ಕೆ ಹೋಲಿಸಿದರೆ ದರದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಬಹುದು ಎನ್ನುತ್ತಾರೆ ಶಿರಸಿಯ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಅಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ.

    ಈವರೆಗೆ ಪೆಟ್ರೋಲ್ ಬೆಲೆ ಈ ಪ್ರಮಾಣದಲ್ಲಿ ಏರಕೆಯಾಗಿರಲಿಲ್ಲ. ತೈಲ ಕಂಪನಿಗಳು ಪ್ರತಿದಿನ ದರ ಪರಿಷ್ಕರಣೆ ಮಡುತ್ತಿದ್ದು, ಮತ್ತಷ್ಟು ಏರಿಕೆ ಆಗುವ ಸಾಧ್ಯತೆಗಳಿದೆ. ಆದರೆ ರಾಜ್ಯದಲ್ಲೇ ಶಿರಸಿ ಭಾಗದಲ್ಲಿ ಅತೀ ಹೆಚ್ಚು ದರ ದಾಖಲಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳತೊಡಗಿದೆ.

  • ಶಿರಸಿ – ಶ್ರೀಗಂಧ ಕಳ್ಳನ ಬಂಧನ

    ಶಿರಸಿ – ಶ್ರೀಗಂಧ ಕಳ್ಳನ ಬಂಧನ

    ಕಾರವಾರ: ಶ್ರೀಗಂಧ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಮಾಲು ಸಮೇತ ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಮರಾಠಿ ಕೊಪ್ಪದಲ್ಲಿ ನಡೆದಿದೆ. ಬಂಧಿತನಿಂದ ಆರೂವರೆ ಕೆಜಿ ತೂಕದ 65 ಸಾವಿರ ಮೌಲ್ಯದ ಶ್ರೀಗಂಧ, ಕೃತ್ಯಕ್ಕೆ ಬಳಸಿದ ವಸ್ತುಗಳು ಹಾಗೂ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

    ಶಿರಸಿಯ ಪುಣ್ನಮನೆಯ ಸಂತೋಷ್ ಮಹೇಶ್ ಮೊಗೇರ್ ಬಂಧಿತ ಆರೋಪಿ, ಪುಟ್ಟನಮನೆ ಅರಣ್ಯದಲ್ಲಿ ಶ್ರೀಗಂಧದ ಗಿಡ ಕಡಿದು ಮಾರಾಟಕ್ಕೆ ತೆರಳುತ್ತಿರುವಾಗ ಪೊಲೀಸರು ಬಂಧಿಸಿದ್ದಾರೆ.

    ಕಾರ್ಯಾಚರಣೆಯಲ್ಲಿ ಡಿವೈಎಸ್‍ಪಿ ರವಿ ನಾಯ್ಕ್ ಹಾಗೂ ವೃತ್ತ ನಿರೀಕ್ಷಕ ಪ್ರದೀಪ್ ಬಿ.ಯು ರವರ ಮಾರ್ಗದರ್ಶನದಲ್ಲಿ ಹೊಸಮಾರುಕಟ್ಟೆ ಠಾಣೆಯ ಪಿಎಸ್‍ಐ ನಾಗಪ್ಪ ನೇತೃತ್ವದಲ್ಲಿ ಸಿಬ್ಬಂದಿಗಳಾದ ಇಸ್ಮಾಯಿಲ್ ಕೊಣನಕೇರಿ, ರಾಮಯ್ಯ ಪೂಜಾರಿ, ಹನುಮಂತ್ ಮಾಕಾಪುರ, ಮೋಹನ ನಾಯ್ಕ್ ಕಾರ್ಯಾಚರಣೆ ತಂಡದಲ್ಲಿದ್ದರು. ಘಟನೆ ಸಂಬಂಧ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಳೆಯ ಅನುಪಯುಕ್ತ ವಸ್ತುಗಳನ್ನು ಇಡಲು ಬಂತು ಬ್ಯಾಂಕ್!

    ಹಳೆಯ ಅನುಪಯುಕ್ತ ವಸ್ತುಗಳನ್ನು ಇಡಲು ಬಂತು ಬ್ಯಾಂಕ್!

    – ಬಡವರಿಗೆ ಸಹಾಯವಾಗುತ್ತಿದೆ ಈ ಬ್ಯಾಂಕ್
    – ವಸ್ತುಗಳನ್ನು ಇಡಲು ಯಾವುದೇ ಶುಲ್ಕವಿಲ್ಲ
    – ಬೇಕಾದ ವಸ್ತಗಳನ್ನು ತೆಗೆದುಕೊಂಡು ಬಳಸಿ ಕೊಳ್ಳಬಹುದು

    ಕಾರವಾರ: ಮನೆಯಲ್ಲಿ ಉಪಯೋಗವಿಲ್ಲದ ಬಟ್ಟೆ, ಪುಸ್ತಕ ಹೀಗೆ ಹಲವು ವಸ್ತುಗಳನ್ನ ಎಸೆಯುತ್ತಾರೆ. ಇಲ್ಲವೇ ಮನೆಯ ಮಾಳಿಗೆಯಲ್ಲಿ ತೆಗೆದಿರಿಸುತ್ತಾರೆ. ಆದರೆ ಇಂತಹ ವಸ್ತುಗಳನ್ನ ಮರು ಬಳಕೆ ಮಾಡುವ ಹಾಗೂ ತಮಗೆ ಮತ್ತೆ ಬೇಕಾದಾಗ ಬಳಸಿಕೊಳ್ಳಲು ಶಿರಸಿ ನಗರದ ಬನವಾಸಿ ರಸ್ತೆ ಬಳಿ ಬ್ಯಾಂಕ್ ಒಂದನ್ನು ತೆರೆಯಲಾಗಿದೆ.

    ಇಂತದೊಂದು ಉತ್ತಮ ಕೆಲಸಕ್ಕೆ ಶಿರಸಿಯ ಸಿದ್ದಾರ್ಥ ಚಾರಿಟೇಬಲ್ ಟ್ರಸ್ಟ್ ಮುಂದಾಗಿದ್ದು ಮೊದಲ ಹಂತದಲ್ಲಿ ಬ್ಯಾಂಕ್ ಅನ್ನು ತೆರೆಯಲಾಗಿದೆ. ಶಿರಸಿಯ ಮಲ್ಲಿಕಾರ್ಜುನ್ ನಜ್ಜೂರು ಹಾಗೂ ಧನಂಜಯ್ ಗೌಡ ಈ ಬ್ಯಾಂಕ್‍ನ ನಿರ್ಮಾಣಕರ್ತರಾಗಿದ್ದಾರೆ. ಈಗಾಗಲೇ ಈ ಬ್ಯಾಂಕ್‍ನ ಸದುಪಯೋಗವನ್ನು ಜನರು ಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ.

    ಈ ಬ್ಯಾಂಕ್ ನಲ್ಲಿ ಮನೆಯಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಉಪಯೋಗಿಸದೇ ಇಟ್ಟಿರುವ ಬಟ್ಟೆಗಳು, ಪುಸ್ತಕಗಳು, ಯಾಂತ್ರಿಕ ವಸ್ತುಗಳು ಹೀಗೆ ಯಾವ ವಸ್ತುಗಳನ್ನಾದರು ಇಲ್ಲಿ ತಂದು ಇಡಬಹುದು. ಇದಕ್ಕೆ ಯಾವುದೇ ಶುಲ್ಕವಿಲ್ಲ. ನಿಮ್ಮ ಹೆಸರನ್ನು ನೊಂದಾಯಿಸಿ ನಿಮಗೆ ನಿಗದಿ ಮಾಡಿದ ಜಾಗದಲ್ಲಿ ಈ ವಸ್ತುಗಳನ್ನು ಇಡಬಹುದು. ಹಾಗೆಯೇ ನಿಮಗೆ ಬೇಕು ಎನಿಸಿದಾಗ ಇಲ್ಲಿಗೆ ಬಂದು ತೆಗೆದುಕೊಂಡು ಹೋಗಬಹುದು. ಬೇಡವೆಂದಾದರೇ ಯಾರಿಗೆ ಈ ವಸ್ತುಗಳು ಅವಷ್ಯವಿದೆಯೋ ಅವರು ಬಂದು ತೆಗೆದುಕೊಂಡು ಬಳಸಬಹುದಾಗಿದೆ. ಇದಕ್ಕೆ ಯಾವ ಶುಲ್ಕವನ್ನು ಸಹ ಬರಿಸಬೇಕಿಲ್ಲ.

    ಈ ಬ್ಯಾಂಕ್ ನಲ್ಲಿ ಹಳೆಯ ವಸ್ತುಗಳು, ಬಟ್ಟೆಗಳು, ಪುಸ್ತಕಗಳು ಈಗಾಗಲೇ ಠೇವಣಿ ರೂಪದಲ್ಲಿ ಇಡಲಾಗಿದೆ. ಹಲವರು ಬೇರೆಯವರಿಗೆ ಉಪಯೋಗಕ್ಕೆ ಬಳಸಲು ಅನುಮತಿ ಸಹ ನೀಡಿದ್ದಾರೆ. ಹೀಗಾಗಿ ಹಲವು ಉಪಯೋಗಿಸಿ ಇಟ್ಟ ಬಟ್ಟೆಯನ್ನು ಇಲ್ಲಿಂದ ನಿರ್ಗತಿಕರು ಒಯ್ಯುತಿದ್ದಾರೆ. ಪುಸ್ತಕಗಳು ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತರಿಗೆ ಓದಲು ಸಹಾಯವಾಗುತಿದೆ. ಈ ಹೊಸ ಪ್ರಯೋಗ ಈಗ ಜಿಲ್ಲೆಯಲ್ಲಿ ಜನರನ್ನು ಆಕರ್ಷಿಸುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

  • ಅಂಧ ವ್ಯಕ್ತಿಯಿಂದ ನಾಮಪತ್ರ – ಉತ್ಸಾಹಕ್ಕೆ ಪಕ್ಷಗಳ ಬೆಂಬಲ

    ಅಂಧ ವ್ಯಕ್ತಿಯಿಂದ ನಾಮಪತ್ರ – ಉತ್ಸಾಹಕ್ಕೆ ಪಕ್ಷಗಳ ಬೆಂಬಲ

    ಕಾರವಾರ: ಶಿರಸಿ ತಾಲೂಕಿನ ಕಾನಗೋಡು ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಅಂಧ ವ್ಯಕ್ತಿಯೊಬ್ಬರು ನಾಮಪತ್ರ ಸಲ್ಲಿಕೆ ಮಾಡಿ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದಿದ್ದು ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.

    ಕಾನಗೋಡು ಗ್ರಾಮಪಂಚಾಯ್ತಿಯ ಬಿಸಲಕೊಪ್ಪದ ರಾಘವೇಂದ್ರ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇವರ ಈ ಉತ್ಸಾಹಕ್ಕೆ ಸ್ಥಳೀಯವಾಗಿ ಬಿಜೆಪಿ ಪಕ್ಷ ಸಹ ಬೆಂಬಲ ನೀಡಿದೆ.

    ಇವರು ಸ್ಪರ್ಧೆ ಮಾಡಿರುವ ಕ್ಷೇತ್ರದಲ್ಲಿ 500 ಕ್ಕೂ ಹೆಚ್ಚು ಮತದಾರರಿದ್ದಾರೆ. ಕಳೆದ ಚುನಾವಣೆಯಲ್ಲಿ ಸಹ ಸ್ಪರ್ಧಿಸಿದ್ದ ಇವರು ಕೇವಲ ಒಂದು ಮತದಲ್ಲಿ ಸೋಲು ಕಂಡಿದ್ದರು. ಆದರೆ ಈ ಬಾರಿ ಗೆಲ್ಲುವ ವಿಶ್ವಾಸ ಹೊಂದಿರುವ ಇವರು ಮನೆ ಮನೆಗೆ ತೆರಳಿ ಮತಪ್ರಚಾರದಲ್ಲಿ ತೊಡಗಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಇವರು ನಾನು ಅಂಧನಾಗಿದ್ದರೂ ಸ್ವಂತ ಕಾಲಮೇಲೆ ನಿಂತು ಬೀದಿ ನಾಟಕಗಳನ್ನು ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಾ ಜೀವನ ಕಟ್ಟಿಕೊಂಡಿದ್ದೇನೆ. ಅಂಧನೆಂಬ ನೋವು ನನಗಿಲ್ಲ. ಸಮಾಜಸೇವೆ ಮಾಡುವ ಹಂಬಲ ನನಗಿದೆ. ಅಂಧರೂ ಸಭಲರು ಎಂಬುದನ್ನು ಸಮಾಜಕ್ಕೆ ತೋರಿಸಬೇಕು ನಮ್ಮಿಂದನೂ ಎಲ್ಲವೂ ಸಾಧ್ಯ ಎಂಬುದನ್ನು ತೋರಿಸುವುದೇ ನನ್ನ ಉದ್ದೇಶ. ಸಮಾಜದಲ್ಲಿ ಅಂಗ ನೂನ್ಯತೆಯಿಂದ ತಿರಸ್ಕಾರಕ್ಕೊಳಗಾದವರಿಗೆ ಸಹಾಯ ಮಾಡುವ ಹಂಬಲ ನನಗಿದೆ ಎಂದರು.

    ಈಗಾಗಲೇ ಇಡೀ ಗ್ರಾಮದಲ್ಲಿ ಇವರಿಗೆ ಜನರು ಬೆಂಬಲ ನೀಡುತ್ತಿದ್ದು ಗೆಲ್ಲಿಸುವ ಭರವಸೆ ಮೂಡಿದೆ. ಜೊತೆಗೆ ಹಲವಾರು ಆಕಾಂಕ್ಷಿಗಳಿರುವ ಈ ಕ್ಷೇತ್ರದಲ್ಲಿ ಇವರು ನಿಂತಿರುವುದಕ್ಕೆ ಬೆಂಬಲ ನೀಡಿ ಹಲವರು ನಾಮಪತ್ರ ಸಲ್ಲಿಸದೆ ಬೆಂಬಲ ನೀಡಿದ್ದು ಇವರಿಗೆ ಆನೆ ಬಲ ಬಂದಂತಾಗಿದೆ.

  • ಮಾಜಿ ಸಚಿವ ಪ್ರೇಮಾನಂದ್ ಎಸ್. ಜೈವಂತ್ ನಿಧನ

    ಮಾಜಿ ಸಚಿವ ಪ್ರೇಮಾನಂದ್ ಎಸ್. ಜೈವಂತ್ ನಿಧನ

    ಕಾರವಾರ: ಶಿರಸಿ ಭಾಗದಿಂದ ಆಯ್ಕೆಯಾಗಿ ಅಬಕಾರಿ ಸಚಿವರಾಗಿದ್ದ ಮಾಜಿ ಸಚಿವ ಪ್ರೇಮಾನಂದ್ ಎಸ್. ಜೈವಂತ್ (77) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ

    ಅನಾರೋಗ್ಯದಿಂದ ಬಳಲುತ್ತಿದ್ದ ಪ್ರೇಮಾನಂದ್ ಅವರನ್ನ ಕೆಲ ದಿನಗಳ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಿವಂಗತರು ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿಯನ್ನು ಅಗಲಿದ್ದಾರೆ. 1998ರಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿದ್ದರು.

    ಜಿಲ್ಲೆಯಲ್ಲಿ ಜನತಾ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಅವರು 1994ರಲ್ಲಿ ಮೊದಲ ಬಾರಿಗೆ ಶಿರಸಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರದ ದಿನದಲ್ಲಿ 1999ರಲ್ಲಿ ಪಕ್ಷೇತರರಾಗಿ, 2004ರಲ್ಲಿ ಕಾಂಗ್ರೆಸ್ ನಿಂದ ಹಾಗೂ 2008ರಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದರು. ಸತತ ಸೋಲಿನಿಂದ ರಾಜಕೀಯದಿಂದ ದೂರ ಉಳಿದಿದ್ದ ಅವರು ವಯೋಸಹಜ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು.

     

  • ಕಂದಾಯ ಇಲಾಖೆ ಅಧಿಕೃತ ವೆಬ್‍ಸೈಟ್ ನಲ್ಲಿ ಮಾಯವಾದ ಗ್ರಾಮ

    ಕಂದಾಯ ಇಲಾಖೆ ಅಧಿಕೃತ ವೆಬ್‍ಸೈಟ್ ನಲ್ಲಿ ಮಾಯವಾದ ಗ್ರಾಮ

    – ಸೌಲಭ್ಯಗಳು ಸಿಗದೇ ಗ್ರಾಮಸ್ಥರು ಕಂಗಾಲು
    – ನನಗೇನು ಗೊತ್ತಿಲ್ಲ ಎಂದ ತಹಶೀಲ್ದಾರ್

    ಕಾರವಾರ: ಪ್ರತಿ ಬಾರಿ ಸರ್ಕಾರಿ ಕಚೇರಿಗೆ ಅಲೆಯುವ ಜನರಿಗಾಗಿ ಸಕಾಲ ಸೇರಿದಂತೆ ಈ ಡಿಜಿಟಲ್ ಸೇವೆಗಳನ್ನು ಆರಂಭಿಸಿ ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಆದ್ರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದೇವನಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಯ ಅಧಿಕೃತ ದಾಖಲಾತಿ ವೆಬ್‍ಸೈಟ್ ನಲ್ಲಿ ಮಜಿರೆಯೊಂದರ ಹೆಸರೇ ಮಾಯವಾಗಿದೆ. ಈ ಕಾರಣದಿಂದ ಇಲ್ಲಿನ ನಿವಾಸಿಗಳು ಅಗತ್ಯ ದಾಖಲೆಗಳ ಜತೆ ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

    ಶಿರಸಿ ತಾಲೂಕಿನ ದೇವನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಸೇರಿದಂತೆ ಶಾಲೆ, ಅಂಗನವಾಡಿ, ಹತ್ತಾರು ಅಂಗಡಿಗಳನ್ನು ಹೊಂದಿರುವ ಡಿಪೂಬೈಲ್ ಮಜಿರೆ ಈಗ ಸರ್ಕಾರಿ ಅಧಿಕೃತ ವೆಬ್‍ಸೈಟ್ ನಲ್ಲಿ ಮಾಯವಾಗಿದೆ. ಕಳೆದ ಒಂದು ವರ್ಷದಿಂದ ಈ ಸಮಸ್ಯೆಯಿದ್ದು, ನೂರಾರು ಜನರು ತಮ್ಮ ನೆಲೆಯನ್ನು ದಾಖಲಿಸಲಾಗದೆ ಹೈರಾಣಾಗಿದ್ದಾರೆ.

    ಮಜಿರೆಯೇ ಮಾಯ: ಈ ಗ್ರಾಮದಲ್ಲಿ 35 ಕುಟುಂಬ ಹಾಗೂ 175 ಮತಗಳನ್ನು ಹೊಂದಿರುವ ಈ ಮಜಿರೆ ವರ್ಷದ ಹಿಂದೆ ಸರ್ಕಾರಿ ದಾಖಲೆಯಲ್ಲಿತ್ತು. ಆದರೆ ಏಕಾಏಕಿ ಕಂದಾಯ ಇಲಾಖೆ ವೆಬ್‍ಸೈಟ್ ನಲ್ಲಿ ಮಜಿರೆಯ ಹೆಸರು ನಮೂದಿಸಿದ ಯಾವುದೇ ಫಲಿತಾಂಶ ತೋರಿಸುತ್ತಿಲ್ಲ. ಸಮೀಪದ ಅಮ್ಮಿನಳ್ಳಿ ನೆಮ್ಮದಿ ಕೇಂದ್ರಕ್ಕೆ ತೆರಳಿ ವಾಸ್ತವ್ಯ ಪ್ರಮಾಣಪತ್ರಕ್ಕೆ ಅರ್ಜಿ ನೀಡಿದಾಗ ಡಿಪೂಬೈಲ್ ಮಜರೆ ಇಲ್ಲದಿರುವುದು ಸ್ಥಳೀಯರಿಗೆ ಶಾಕ್ ನೀಡಿದೆ. ಇದರಿಂದ ಮಜಿರೆಯ ನಿವಾಸಿಗಳು ಕಂಗಾಲಾಗಿದ್ದಾರೆ.

    ಜಾತಿ, ಆದಾಯ ಪ್ರಮಾಣಪತ್ರ, ಆದಾಯ, ವಂಶಾವಳಿ, ಆಧಾರ್ ಸೇರಿದಂತೆ ಆನ್‍ಲೈನ್ ಮುಖಾಂತರ ಅಟಲ್ ಜಿ ಜನಸ್ನೇಹಿ ಕೇಂದ್ರದಲ್ಲಿ ಪಡೆಯುವ ಸುಮಾರು 7 ಪ್ರಮಾಣಪತ್ರಗಳಿಗೆ ಮಜಿರೆ ಹೆಸರೇ ನಮೂದಾಗದ ಕಾರಣ ಇಲ್ಲಿನ ಗ್ರಾಮದವರು ತೊಂದರೆ ಎದುರಿಸುತ್ತಿದ್ದಾರೆ. ಇನ್ನು ಪ್ರಮಾಣಪತ್ರ ದೊರೆತರೂ ವಿಳಾಸ ಸರಿಯಾಗಿ ನಮೂದಾಗದೇ ಕೇವಲ ಗ್ರಾಮ ಮಾತ್ರ ಸಿಗಲಿದ್ದು, ಸರ್ಕಾರದ ಯೋಜನೆಗಳನ್ನು ಪಡೆಯಲು ಸಮಸ್ಯೆಯಾಗುತ್ತಿದೆ.

    ಸರ್ಕಾರದ ಯೋಜನೆಗಳು ಮರೀಚಿಕೆ: ದೇವನಹಳ್ಳಿ ಗ್ರಾಮದಲ್ಲಿ ಒಟ್ಟು 35 ಮಜರೆಗಳಿದ್ದು, ಅದರಲ್ಲಿ ಡಿಪೂಬೈಲ್ ಸಹ ಒಂದಾಗಿದೆ. ಆದರೆ ಈಗ 24 ಮಜರೆಗಳು ಮಾತ್ರ ಉಲ್ಲೇಖವಾಗಿದ್ದು, ಸರ್ಕಾರಿ ವೆಬ್‍ಸೈಟ್ ನಿಂದ ಡಿಪೂಬೈಲ್ ಮಾಯವಾಗಿದೆ. ಇದರಿಂದ ಈ ಮಜಿರೆಯ ನಿವಾಸಿಗಳು ಸರ್ಕಾರದ ಯಾವ ಯೋಜನೆಗಳಿಗೂ ಅರ್ಹರಲ್ಲ ಎನ್ನುವಂತಾಗಿದ್ದು, ಹೊಸದಾಗಿ ಯಾವ ದಾಖಲೆಗಳು ಬೇಕಿದ್ದರೂ ತೊಂದರೆಪಡುವಂತಾಗಿದೆ.

    ಚುನಾವಣೆಗೆ ಸ್ಪರ್ಧಿಸಲು ವಾಸ್ತವ್ಯ ಪ್ರಮಾಣಪತ್ರದ ಅಗತ್ಯವಿದ್ದು, ಪ್ರತಿ ಹಂತದಲ್ಲಿಯೂ ಗ್ರಾಮಸ್ಥರಿಗೆ ಸಮಸ್ಯೆ ಎನ್ನುವಂತಾಗಿದೆ. ಅಧಿಕಾರಿಗಳು ಪಕ್ಕದ ಗ್ರಾಮದಲ್ಲಿನ ವಾಸ್ತವ್ಯ ಪ್ರಮಾಣಪತ್ರ ನೀಡುವುದಾಗಿ ಹೇಳುತ್ತಾರೆ. ಆದರೆ ಆಯಾ ಗ್ರಾಮಸ್ಥರು ತಕರಾರು ಮಾಡಿದಲ್ಲಿ ಇಲ್ಲಿನ ನಿವಾಸಿಗಳಿಗೆ ಸಮಸ್ಯೆ ಆಗುತ್ತದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

    ನನಗೇನು ಗೊತ್ತಿಲ್ಲ: ಕಳೆದ ಒಂದು ವರ್ಷದಿಂದ ಈ ಗ್ರಾಮ ಕಂದಾಯ ಇಲಾಖೆ ವೆಬ್‍ಸೈಟ್ ನಿಂದ ಮಾಯಾವಾಗಿದೆ. ಈ ಕುರಿತು ಗ್ರಾಮದವರು ಪ್ರತಿಭಟನೆ ನಡೆಸಿ ಶಿರಸಿ ತಹಶೀಲ್ದಾರ್ ಡಾ.ಕುಲಕರ್ಣಿರವರಿಗೆ ಮನವಿ ನೀಡಿ ಸರಿಪಡಿಸುವಂತೆ ಕೇಳಿಕೊಂಡಿದ್ದಾರೆ. ಜೊತೆಗೆ ತಹಶೀಲ್ದಾರ್ ರವರು ಸ್ವೀಕೃತಿ ಪತ್ರದ ಜೊತೆ ಸಹಿ ಹಾಕಿ ನೀಡಿದ್ದಾರೆ. ಆದ್ರೆ ನಮಗೆ ಈ ಬಗ್ಗೆ ಯಾರು ಮಾಹಿತಿ ನೀಡಿಲ್ಲ ಎಂದು ಪಬ್ಲಿಕ್ ಟಿವಿ ಸಂಪರ್ಕಿಸಿದಾಗ ತಿಳಿಸಿದ್ದು ಮೊದಲು ಅರ್ಜಿ ಕೊಡಲಿ ನಂತರ ಸರಿಪಡಿಸುತ್ತೇವೆ ಎಂದು ಅಸಡ್ಡೆ ಮಾಡಿದ್ದಾರೆ.

    ಇನ್ನು ಈ ಗ್ರಾಮದವರಿಗೆ ಸದ್ಯ ಸರ್ಕಾರಿ ಸವಲತ್ತುಗಳು ದೂರದ ಬೆಟ್ಟದಂತಾಗಿದ್ದು ಯಾವ ಸೌಲಭ್ಯವೂ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶೀಘ್ರವೇ ಆದ ತಪ್ಪನ್ನು ಕಂದಾಯ ಇಲಾಖೆ ಸರಿಪಡಿಸದಿದ್ದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.

  • ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕದಡುವ ಪೋಸ್ಟ್- ಶಿರಸಿಯಲ್ಲಿ 20 ಜನರ ಬಂಧನ

    ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕದಡುವ ಪೋಸ್ಟ್- ಶಿರಸಿಯಲ್ಲಿ 20 ಜನರ ಬಂಧನ

    ಕಾರವಾರ: ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ಪುಂಡರು ದಾಳಿ ಮಾಡಿದ ಪ್ರಕರಣವನ್ನು ಸಮರ್ಥಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕದಡುವ ಯತ್ನದ ಮಾಡಿದ್ದ 20 ಜನರನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

    ಶಿರಸಿ ನಗರದ ಕೆಲವು ಸಂಘಟನೆಯ ಪುಂಡರು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಮತ್ತು ವಾಟ್ಸಪ್ ಗ್ರೂಪ್ ಗಳಲ್ಲಿ ಧಾರ್ಮಿಕ ಮತ್ತು ಕೊಮು ಭಾವನೆಗಳಿಗೆ ಧಕ್ಕೆ ತರುವ ಮತ್ತು ಸಮಾಜದ ಶಾಂತಿ ಕದಡುವಂತಹ ಸಂದೇಶಗಳನ್ನು ಹರಿ ಬಿಟ್ಟಿದ್ದರು. ಮಾಹಿತಿ ಆಧಾರದ ಮೇಲೆ ಮುಂಜಾಗ್ರತಾ ಕ್ರಮವಾಗಿ 20 ಜನರನ್ನು ವಶಕ್ಕೆ ಪಡೆದು ಸಿ.ಪಿ.ಐ ಪ್ರದೀಪ್ ಬಿ.ಯು ಹಾಗೂ ಹೊಸ ಮಾರುಕಟ್ಟೆ ಠಾಣೆ ಪಿಎಸ್‍ಐ ನಾಗಪ್ಪ ಮತ್ತು ನಗರ ಠಾಣೆ ಪಿಎಸ್‍ಐ ಶಿವಾನಂದ ನಾವದಗಿ ಅವರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

    ಸಂಶಯಾಸ್ಪದ ವ್ಯಕ್ತಿಗಳ ಮೇಲೆ ಕರ್ನಾಟಕ ಪೊಲೀಸ್ ಕಾಯ್ದೆ ಅಡಿ ಕ್ರಮ ಕೈಗೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಕೋಮು ಸೌಹಾರ್ದತೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವುದು, ಪ್ರಚೋದನಾಕಾರಿ ಹೇಳಿಕೆ, ಸಂದೇಶ, ವಿಡಿಯೋ ಹರಿಬಿಟ್ಟಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಿರಸಿ ಉಪವಿಭಾಗದ ಡಿವೈಎಸ್‍ಪಿ ಗೋಪಾಲ ಕೃಷ್ಣ ನಾಯಕ ಎಚ್ಚರಿಸಿದ್ದಾರೆ.

  • ಒಬ್ಬ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಲು ಬಸ್ ವ್ಯವಸ್ಥೆ ಕಲ್ಪಿಸಿದ KSRTC

    ಒಬ್ಬ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಲು ಬಸ್ ವ್ಯವಸ್ಥೆ ಕಲ್ಪಿಸಿದ KSRTC

    ಕಾರವಾರ: ಕೊರೊನಾ ಆತಂಕದ ನಡುವೆಯೇ ಮೊದಲ ದಿನವಾದ ಇಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಇದೇ ವೇಳೆ ಒಬ್ಬ ವಿದ್ಯಾರ್ಥಿ ಪರೀಕ್ಷೆ ಹಾಜರಾಗಲು ಒಂದು ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಿದ್ದ ಘಟನೆ ಶಿರಸಿಯಲ್ಲಿ ನಡೆದಿದೆ.

    ಇಂದು ಜೂ.25 ರಂದು ನಿಗದಿಯಾಗಿದ್ದ ದ್ವಿತೀಯ ಭಾಷೆ ಪರೀಕ್ಷೆಗೆ ದೂರದ ಊರುಗಳಿಂದ ಹಾಜರಾಗಲು ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ಶಿರಸಿ ತಾಲೂಕಿನ ದೇವನಹಳ್ಳಿ ಸರ್ಕಾರಿ ಪ್ರೌಢಶಾಲೆಯ 42 ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇಂದು ಕೆಲವೊಂದು ವಿದ್ಯಾರ್ಥಿಗಳು ಪಾಲಕರೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ಬಂದಿರುವುದರಿಂದ ಉಳಿದ 30 ವಿದ್ಯಾರ್ಥಿಗಳಿಗೆ ಒಂದು ಬಸ್ ವ್ಯವಸ್ಥೆ ಮಾಡಲಾಗಿತ್ತು.

    ವಿದ್ಯಾರ್ಥಿ ಕುಮಾರ ಶ್ರೀಧರ ಗೌಡ ಶಿರಸಿಯ ಲಯನ್ಸ್ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕಿತ್ತು. ಆದ್ದರಿಂದ ಒಬ್ಬ ವಿದ್ಯಾರ್ಥಿಗಾಗಿ ಒಂದು ಬಸ್ ವ್ಯವಸ್ಥೆ ಮಾಡಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ.

    ಇತ್ತ ಇದೇ ಶಾಲೆಯ ಇನ್ನೋರ್ವ ವಿದ್ಯಾರ್ಥಿನಿ ಕುಮಾರಿ ರೇಣುಕಾ ಗೌಡ ಪ್ರತಿ ದಿನ ಪರೀಕ್ಷೆ ಬರೆಯಲು ಶಿರಸಿಗೆ ಹೋಗಿ ಬರಬೇಕಾಗಿತ್ತು. ಆದರೆ ಪ್ರತಿದಿನ ವಿದ್ಯಾರ್ಥಿನಿ ಶಿರಸಿಗೆ ಹೋಗಿ ಬರುವುದರಿಂದ ತಮ್ಮ ಊರಿಗೆ ಕೊರೊನಾ ಬರುತ್ತದೆ ಎನ್ನುವ ಭಯಕ್ಕೆ ಗ್ರಾಮಸ್ಥರು ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ನಿರ್ಬಂಧ ಹೇರಿದ್ದರು. ಆದರೆ ಸರ್ಕಾರಿ ಪ್ರೌಢಶಾಲೆ ದೇವನಹಳ್ಳಿ ಶಾಲೆಯ ಶಿಕ್ಷಕಿ ಶ್ರೀಮತಿ ರೂಪಾ ನಾಯ್ಕ ಅವರು ತಮ್ಮ ಮನೆಯಲ್ಲಿಯೇ ವಿದ್ಯಾರ್ಥಿನಿಗೆ ವಸತಿ ವ್ಯವಸ್ಥೆ ಮಾಡಿ ಸರ್ಕಾರಿ ಪ್ರೌಢಶಾಲೆ ನಿಲೇಕಣಿ ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದ್ದಾರೆ.

    ಉಳಿದಂತೆ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಾ ರೀತಿಯ ಮುಂಜಾಗ್ರತೆ ಕೈಗೊಳ್ಳಲಾಗಿತ್ತು. ಇಂದು ನಡೆದ ದ್ವಿತೀಯ ಭಾಷೆ ಪರೀಕ್ಷೆಗೆ 7.85 ಲಕ್ಷ ವಿದ್ಯಾರ್ಥಿಗಳ ಪೈಕಿ 7.71 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಕಂಟೈನ್ಮೆಂಟ್ ಝೋನ್‍ನಿಂದ ಬಂದಿದ್ದ 998 ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ನಿರ್ವಹಿಸಲಾಯ್ತು. ದೇಹದ ಉಷ್ಣಾಂಶದಲ್ಲಿ ಏರಿಳಿತ ಕಂಡು ಬಂದ 201 ವಿದ್ಯಾರ್ಥಿಗಳನ್ನು ವಿಶೇಷ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗಿದೆ. 12 ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರ ಮಕ್ಕಳು ಅವರಿದ್ದ ಜಾಗದಲ್ಲೇ ಪರೀಕ್ಷೆ ಬರೆದಿದ್ದಾರೆ. 14 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದು, ಕಾರಣ ತಿಳಿದುಕೊಂಡು ಪೂರಕ ಪರೀಕ್ಷೆಯಲ್ಲಿ ಅವಕಾಶ ಕೊಡಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.

  • ಕೊರೊನಾ ಬಾರದಂತೆ ವಿಷಪೂರಿತ ಔಷಧ ಸೇವಿಸಿದ ತಂದೆ-ಮಗ

    ಕೊರೊನಾ ಬಾರದಂತೆ ವಿಷಪೂರಿತ ಔಷಧ ಸೇವಿಸಿದ ತಂದೆ-ಮಗ

    -ಮಗ ಸಾವು, ತಂದೆ ಗಂಭೀರ

    ಕಾರವಾರ: ಕೊರೊನಾ ಸೋಂಕು ಬರಬಾರದೆಂದು ವಿಷಪೂರಿತ ಔಷಧ ಸೇವಿಸಿ ಒರ್ವ ಸಾವನ್ನಪ್ಪಿದ್ದರೆ, ಮತ್ತೊಬ್ಬ ಗಂಭೀರವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ರಾಮನ ಬೈಲಿನಲ್ಲಿ ನಡೆದಿದೆ.

    ಫ್ರಾನ್ಸಿಸ್ ರೇಘೋ (42) ಮತ್ತು ನೆಕ್ಲಾಂ ಅಂಥೋನಿ (70) ತಂದೆ-ಮಗ ವಿಷಪೂರಿತ ಕಾಸರ್ಕನ ಚಕ್ಕೆ ಔಷಧಿ ಸೇವಿಸಿದ್ದರು. ಸದ್ಯ ಮಗ ಸಾವನ್ನಪ್ಪಿದ್ದು, ತಂದೆಯ ಸ್ಥಿತಿ ಗಂಭೀರವಾಗಿದ್ದು, ಶಿರಸಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    ತಂದೆ-ಮಗ ಕೆಲ ದಿನಗಳಿಂದ ಉಸಿರಾಟದ ತೊಂದರೆ ಮತ್ತು ಅಲ್ಪ ಕೆಮ್ಮು ಹೊಂದಿದ್ದರು. ಇದು ಕೊರೊನಾ ಲಕ್ಷಣ ಇರಬಹುದು ಎಂದು ತಿಳಿದ ತಂದೆ-ಮಗ ಯಾರದ್ದೋ ಮಾತು ಕೇಳಿ ವಿಷ ಪೂರಿತ ಕಾಸರ್ಕನ ಚಕ್ಕೆಯ ಲೇಹ ಮಾಡಿ ಸೇವಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಸಂಬಂಧ ಶಿರಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.