Tag: sirimane nagaraj

  • ವಿಕ್ರಮ್ ಗೌಡ ಮುಗ್ಧ, ಗೌರಿಯನ್ನು ಕೊಲೆ ಮಾಡಲು ಸಾಧ್ಯವಿಲ್ಲ: ನೂರ್ ಶ್ರೀಧರ್

    ವಿಕ್ರಮ್ ಗೌಡ ಮುಗ್ಧ, ಗೌರಿಯನ್ನು ಕೊಲೆ ಮಾಡಲು ಸಾಧ್ಯವಿಲ್ಲ: ನೂರ್ ಶ್ರೀಧರ್

    ಬೆಂಗಳೂರು: ವಿಕ್ರಮ್ ಗೌಡ ಓರ್ವ ಆದಿವಾಸಿ ಯುವಕನಾಗಿದ್ದು ಯಾವುದೇ ಕಾರಣಕ್ಕೂ ಆತ ಗೌರಿ ಲಂಕೇಶ್ ಅವರನ್ನು ಕೊಲೆ ಮಾಡಲು ಸಾಧ್ಯವಿಲ್ಲ ಎಂದು ನೂರ್ ಶ್ರೀಧರ್ ಹೇಳಿದ್ದಾರೆ.

    ಗೌರಿ ಹತ್ಯೆಯನ್ನು ನಕ್ಸಲರು ಮಾಡಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಸೋಮವಾರ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

    ಇಂದೂ ಕೂಡ ಎಲ್ಲಾ ನಕ್ಸಲಿಯರಿಗೂ ಗೌರಿ ಮೇಲೆ ಅಭಿಮಾನವಿದೆ. ಆದರೆ ಈಗ ಸದ್ಯ ವಿಕ್ರಮ್‍ಗೌಡ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಈತ ಮುಗ್ಧನಾಗಿದ್ದು, ಯಾವುದೇ ಕಾರಣಕ್ಕೂ ಕೊಲೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

    ಗೌರಿ ಹತ್ಯೆಯಲ್ಲಿ ಸಂಘ ಪರಿವಾರದ ಪಾತ್ರ ನೇರವಾಗಿದೆ. ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಪರಿಷತ್ ನಲ್ಲಿ ಸಂಘ ಪರಿವಾರದವರು ಮಾತನಾಡಲು ಅವಕಾಶ ನೀಡಿರಲಿಲ್ಲ. ಈಗ ಕೂಡ ಗೌರಿ ಹತ್ಯೆಯನ್ನು ಸಂಭ್ರಮಿಸುತ್ತಿದ್ದಾರೆ. ಸದ್ಯ ತನಿಖೆ ಗೌರಿ ಹತ್ಯೆಯನ್ನು ಸಂಭ್ರಮಿಸುತ್ತಿರುವವರನ್ನು ತನಿಖೆ ಮಾಡಬೇಕು. ಆರ್‍ಎಸ್‍ಎಸ್ ಕಚೇರಿಯಿಂದಲೇ ತನಿಖೆ ಆರಂಭವಾಗಬೇಕು ಎಂದು ನೂರ್ ಶ್ರೀಧರ್ ಆಗ್ರಹಿಸಿದರು.

    ಭಾರೀ ಒತ್ತಡದ ನಡುವೆ ಈ ಪತ್ರಿಕಾಗೋಷ್ಠಿ ನಡೆಸುತ್ತಿದ್ದು ನಮ್ಮ ಮೇಲೆ ಕೂಡ ಕೊಲೆ ಬೆದರಿಕೆ ಇದೆ. ಆದರೆ ಸತ್ಯವನ್ನು ತಿಳಿಸಲು ನಿಮ್ಮ ಮುಂದೆ ಬಂದಿದ್ದೇವೆ. ನಕ್ಸಲ್ ಕೂಟ ಮಾಫಿಯಾ ಕೂಟವಲ್ಲ. ಇದು ಕೂಡ ರಾಜಕೀಯ ಪಕ್ಷವಾಗಿದ್ದು ಆದ್ರೆ ಭೂಗತವಾಗಿ ಕೆಲಸ ಮಾಡುತ್ತದೆ. ಸದ್ಯ ದೇಶಾದ್ಯಂತ ಐವತ್ತಕ್ಕೂ ಹೆಚ್ಚು ನಕ್ಸಲ್ ಗುಂಪುಗಳಿದ್ದು ಗೌರಿ ಹತ್ಯೆಯಲ್ಲಿ ಭಾಗಿಯಾಗಿರಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದರು.

    ನಕ್ಸಲರು ಹತ್ಯೆ ಮಾಡಿದ್ದೆ ಆಗಿದ್ದರೆ ಅಲ್ಲಿ ಕರ ಪತ್ರ ಸಿಗುತ್ತದೆ ಅಥವಾ ಹೇಳಿಕೆ ಬಿಡುಗಡೆ ಮಾಡುತ್ತಾರೆ. ಇಲ್ಲಿ ಆ ರೀತಿಯ ಯಾವುದೇ ಸುಳಿವು ಸಿಕ್ಕಿಲ್ಲ. ನಕ್ಸಲರ ಇತಿಹಾಸದಲ್ಲಿ ಇದೂವರೆಗೆ ಯಾವುದೇ ಪತ್ರಕರ್ತರ ಮೇಲೆ ದಾಳಿ ಮಾಡಿದ ಉದಾಹರಣೆ ಇಲ್ಲ. ಗೌರಿಯನ್ನು ಕೊಲ್ಲಲು ಯಾವುದೇ ವಿವಾದವಾಗಲಿ ಅಥವ ನಕ್ಸಲರ ಜೊತೆ ಯಾವುದೇ ವೈಷಮ್ಯವಾಗಲಿ ಇರಲಿಲ್ಲ. ಬೇರೆಯವರ ತಪ್ಪನ್ನು ಮರೆಮಾಚಲು ನಕ್ಸಲರತ್ತ ಬೊಟ್ಟು ಮಾಡುತ್ತಿದ್ದಾರೆ ಎಂದು ನೂರ್ ಶ್ರೀಧರ್ ಆರೋಪಿಸಿದರು.

    ಗೌರಿ ಹತ್ಯೆ ಮಾಡಿದ್ದು ಸಂಘ ಪರಿವಾರದ ವ್ಯಕ್ತಿಗಳು ಎಂಬ ಬಲವಾದ ಅನುಮಾನ ನಮಗೆ ಇದೆ. ಹಾಗಾಗಿ ಪೊಲೀಸರು ತನಿಖೆಯ ಕೇಂದ್ರಬಿಂದು ವಾಗಿ ಸಂಘ ಪರಿವಾರವನ್ನು ಪರಿಗಣಿಸಬೇಕು. ತನಿಖೆ ಮುಗಿಯುವವರೆಗೂ ಗೌರಿಹತ್ಯೆಯನ್ನು ನಕ್ಸಲರು ಮಾಡಿದ್ದಾರೆ ಎನ್ನುವ ತೀರ್ಪು ನೀಡುವುದು ಬೇಡ ಎಂದು ಸಿರಿಮನೆ ನಾಗರಾಜ್ ಮತ್ತು ನೂರ್ ಶ್ರೀಧರ್ ಪೊಲೀಸರಲ್ಲಿ ಮನವಿ ಮಾಡಿದರು.

    ನಾವೆಲ್ಲರೂ ಗೌರಿ ಅವರ ಕಾರಣಕ್ಕಾಗಿ ಹೊರ ಬಂದಿಲ್ಲ. 2006 ರಲ್ಲಿ ನಕ್ಸಲಿಸಮ್ ಬಿಟ್ಟು ಹೊರ ಬಂದಿದ್ವಿ. ಆದರೆ ಭೂಗತ ರಾಗಿ ಕೆಲಸ ಮಾಡುತಿದ್ದೆವು. ಭೂಗತದಿಂದ ಹೊರ ಬರಲು ಗೌರಿಲಂಕೇಶ್, ದೊರೆಸ್ವಾಮಿ ಮತ್ತು ಎಕೆ ಸುಬ್ಬಯ್ಯ ಕಾರಣಕರ್ತರು. ನಮ್ಮ ಮೇಲೂ ಕೂಡ ತನಿಖೆ ಮಾಡಲಿ. ನಾಳೆ ಒಂದು ವೇಳೆ ನಮ್ಮ ಮೇಲೆ ದಾಳಿ ಮಾಡಿ ನಾವೇನಾದರೂ ಮೃತಪಟ್ಟರೆ ಅದಕ್ಕೆ ಕಾರಣ ಬಲಪಂಥೀಯರು ಕಾರಣರಾಗುತ್ತಾರೆಯೇ ಹೊರತು ನಕ್ಸಲರು ಕಾರಣರಾಗುವುದಿಲ್ಲ ಎಂದು ನೂರ್ ಶ್ರೀಧರ್ ಹೇಳಿದರು.

    ಇದನ್ನೂ ಓದಿ: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡನಿಂದ ಗೌರಿ ಲಂಕೇಶ್ ಹತ್ಯೆ?

    ಇದನ್ನೂ ಓದಿ:ಮಾಜಿ ನಕ್ಸಲ್, ನಕ್ಸಲ್ ಪರ ವಾದಿಗಳ ಮೇಲೆ ಕಣ್ಣಿಟ್ಟ ಎಸ್‍ಐಟಿ

    https://youtu.be/qJlk323WcjE


  • ಸಮಾಜದ ಮುಖ್ಯವಾಹಿನಿಗೆ ನಕ್ಸಲರನ್ನು ನಾನ್ಯಾಕೆ ಕರೆತರುತ್ತಿದ್ದೇನೆ: ಗೌರಿ ಲಂಕೇಶ್ ಮಾತುಗಳನ್ನು ಕೇಳಿ

    ಸಮಾಜದ ಮುಖ್ಯವಾಹಿನಿಗೆ ನಕ್ಸಲರನ್ನು ನಾನ್ಯಾಕೆ ಕರೆತರುತ್ತಿದ್ದೇನೆ: ಗೌರಿ ಲಂಕೇಶ್ ಮಾತುಗಳನ್ನು ಕೇಳಿ

    ಬೆಂಗಳೂರು: ಸಿರಿಮನೆ ನಾಗರಾಜ್ ಮತ್ತು ನೂರ್ ಜುಲ್ಫಿಕರ್ ಅವರನ್ನು ನಕ್ಸಲ್ ಚಟುವಟಿಕೆಯಿಂದ ಸಮಾಜದ ಮುಖ್ಯವಾಹಿನಿಗೆ ತರುವ ಸಂದರ್ಭದಲ್ಲಿ ಗೌರಿ ಲಂಕೇಶ್ ಅಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದರು.

    ನಕ್ಸಲರಿಗೆ ಮುಖ್ಯವಾಹಿನಿಗೆ ಬರಲು ಇಚ್ಚಿಸುವ ಪುನರ್ವಸತಿ ಅಥವಾ ಶರಣಾಗತಿ ಎಂಬ ಪ್ಯಾಕೇಜ್ ಇದೆ. ಅದರಲ್ಲಿ ಯಾವುದನ್ನೂ ಬೇಕಾದ್ರೂ ತಗೋಬೋದು. ಆದ್ರೆ ನಕ್ಸಲರು ಈ ಪ್ಯಾಕೇಜ್ನ ಶರಣಾಗತಿ ಅಡಿಯಲ್ಲಿ ನಾವು ಮುಖ್ಯವಾಹಿನಿ ವಾಪಾಸ್ ಬರ್ತಾ ಇದ್ದೀವಿ ಅಂತ ಹೇಳುತ್ತಿದ್ದಾರೆ.

    ಹೀಗಾಗಿ ಡಿಸೆಂಬರ್ 2ಕ್ಕೆ ದೊರೆಸ್ವಾಮಿ ಹಾಗೂ ನನ್ನ ಸಮ್ಮುಖದಲ್ಲಿ ಭೂಗತ ಬದುಕನ್ನು ತೊರೆದು ಪ್ರಜಾತಾಂತ್ರಿಕವಾಗಿ ಹೋರಾಡೋದಕ್ಕೆ ಮುಖ್ಯವಾಹಿನಿ ಬರ್ತಾ ಇದ್ದಾರೆ. ಹೀಗೆ ಬಂದವರು ಸಾಮಾಜದಲ್ಲಿ ಆರಾಮವಾಗಿ ಓಡಾಡುತ್ತಾರೆ ಅಂತ ತಿಳ್ಕೋಬೇಡಿ. ನ್ಯಾಯಾಲಯದಲ್ಲಿ ಅದಕ್ಕಾಗಿಯೇ ಕೆಲವೊಂದು ಪ್ರಕ್ರಿಯೆಗಳಿವೆ. ಹೀಗಾಗಿ ಹೊರಬಂದ ಬಳಿಕ ಅವರನ್ನು ಮೊದಲು ಚಿಕ್ಕಮಗಳೂರು ಪೊಲೀಸರಿಗೆ ಹಸ್ತಾಂತರ ಮಾಡುತ್ತೇವೆ. ಇಬ್ಬರ ವಿರುದ್ಧವೂ ವಾರೆಂಟ್ ಇದೆ. ಹೀಗಾಗಿ ಆ ಬಳಿಕ ಪೊಲೀಸರು ಈ ಇಬ್ಬರನ್ನು ಕೋರ್ಟ್ ಗೆ ಹಾಜರುಪಡಿಸುತ್ತಾರೆ. ನಂತ್ರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಾರೆ. ಆ ಮೇಲೆ ಬೇರೆ ಪ್ರಕ್ರಿಯೆಗಳು ನಡೆಯುತ್ತದೆ ಅಂತ ಹೇಳಿದ್ದರು.

    ಸಿರಿಮನೆ ನಾಗರಾಜ್ ಅವರ ಕೇಸ್ ಗಳೆಲ್ಲವೂ ಜಾಮೀನು ಸಿಗುವಂತಹ ಕೇಸ್ ಗಳೇ ಆಗಿವೆ. ನೂರ್ ಜುಲ್ಫಿಕರ್ ಅವರ ಮೇಲಿನ ಕೇಸ್ ಗಳು ಕೇಂದ್ರೀಯ ಕಾಯ್ದೆಯಡಿಯಲ್ಲಿ ಬರುತ್ತವೆ. ಹೀಗಾಗಿ ಇವರ ಮೇಲಿರುವ ಎರಡೂ ಕೇಸ್ ಗಳಲ್ಲಿ ಜಾಮೀನು ಸಿಗಬಹುದು ಅಂತ ಅಂದುಕೊಂಡಿದ್ದೇವೆ ಎಂದು ತಿಳಿಸಿದ್ದರು.

    ಇಬ್ಬರ ಮೇಲೆ ಎಷ್ಟು ಕೇಸ್ ಗಳಿವೆ?: ಸಾಮಾನ್ಯವಾಗಿ ನಕ್ಸಲರ ಚಟುವಟುಟಿಕೆಯಲ್ಲಿ ಪೊಲೀಸರು ಶಂಕಿತರ ಮೇಲೆಯೂ ಕೇಸ್ ಹಾಕ್ತಾರೆ. ಇವರು 2006ರಲ್ಲೇ ನಕ್ಸಲ್ ಪಕ್ಷ ಬಿಟ್ಟು ಹೊರಗೆ ಬಂದಿದ್ದಾರೆ. ಆದ್ರೂ 2008ರಲ್ಲಿ ಇವರ ಮೇಲೆ ಕೇಸ್ ಹಾಕಿದ್ದಾರೆ. ಹೀಗಾಗಿ ಪಕ್ಷ ತೊರೆದ ಬಳಿಕವೂ ಕೇಸ್ ಹಾಕಿದ್ದಾರೆ ಅಂದ್ರೆ ಆ ಕೇಸ್ ನಲ್ಲಿ ಅವರು ಭಾಗಿಯಾಗಿಲ್ಲ ಎಂಬುವುದಾಗಿ ತಿಳಿದುಬರುತ್ತದೆ. ಇನ್ನು ಇವರ ಮೇಲಿದ್ದ ಎರಡು ಕೇಸ್ ಗಳಲ್ಲೂ ಸಾಕ್ಷಿಯಿಲ್ಲ. ಹೀಗಾಗಿ ಹೇಗೂ ಕೋರ್ಟ್ ಗೆ ಹಾಜರು ಪಡಿಸುವುದರಿಂದ ಕಾನೂನು ಬದ್ಧವಾಗಿಯೇ ಪ್ರಕ್ರಿಯೆಗಳು ನಡೆಯಲೇಬೇಕಾಗಿದೆ. ಆದುದರಿಂದ ಅವರ ಮೇಲಿದ್ದ ಕೇಸ್ ಗಳ ಬಗ್ಗೆ ನ್ಯಾಯಾಲಯವೇ ತೀರ್ಮಾನಿಸುತ್ತೆ ಅಂತ ಹೇಳಿದ್ದರು.

    ಸಾಕೇತ್ ರಾಜ್ ಎನ್ ಕೌಂಟರ್ ಆದ ಬಳಿಕ ನೂರ್ ಜುಲ್ಫಿಕರ್ ಗೆ ರಾಜ್ಯದ ನಾಯಕತ್ವ ವಹಿಸಿಕೊಳ್ಳಲು ಹೇಳಿದ್ರು. ಆದ್ರೆ ಅದಾಗಲೇ ನಕ್ಸಲ್ ಪಕ್ಷದಲ್ಲಿ ಶಸ್ತ್ರಾಸ್ತ್ರ ಮಾರ್ಗ ಬೇಕೋ ಬೇಡ್ವೋ ಎನ್ನುವುದರ ಬಗ್ಗೆ ದೊಡ್ಡ ಭಿನ್ನಾಭಿಪ್ರಾಯ ಮೂಡಿತ್ತು. ಶಸ್ತ್ರಾಸ್ತ್ರ ಹೋರಾಟಕ್ಕೆ ಈ ಕಾಲ ಪಕ್ವ ಆಗಿಲ್ಲ. ಅದರ ಬದಲೂ ಜನರನ್ನು ಒಗ್ಗೂಡಿಸಿ ಮಾಡಬೇಕಾಗಿರೋ ಹೋರಾಟದ ಸಮಯ ಈಗಿರೋದು ಅಂತ ಜುಲ್ಫೀಕರ್ ತಂಡ ವಾದ ಮಾಡಿಕೊಂಡು ಬಂದಿತ್ತು. ಹೀಗಾಗಿ ಅವರು ನಾಯಕತ್ವ ವಹಿಸಿಕೊಳ್ಳಲು ಹಿಂಜರಿದಿದ್ದರು. ಆ ಬಳಿಕ ರಾಜಮೌಳಿ ಎಂಬವರನ್ನು ನೇಮಿಸಿದ್ದರು. ಅವರು ಆಂಧ್ರಪ್ರದೇಶದಲ್ಲಿ ಎನ್ ಕೌಂಟರ್ ಗೆ ಬಲಿಯಾದ್ರು ಅಂತ ತಿಳಿಸಿದ್ದರು.

    ಆರೋಗ್ಯ ಸರಿಯಿಲ್ಲದಿದ್ದರುದರಿಂದ ಅವರು ನಕ್ಸಲ್ ಚಟುವಟಿಕೆಯಿಂದ ಹೊರಬರುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಗೌರಿ, ನಾನು ಅವರಿಬ್ಬರನ್ನೂ ಭೇಟಿಯಾಗಿದ್ದೀನಿ. ನೂರ್ ಜುಲ್ಫಿಕರ್ ಅವರಿಗೆ 45 ವಯಸ್ಸು ಆಗಿರಬೇಕು. ಅವರು ಆರೋಗ್ಯವಾಗಿಯೇ ಇದ್ದಾರೆ. ಇನ್ನು ಸಿರಿಮನೆ ನಾಗರಾಜ್ ಅವರಿಗೆ 62 ವರ್ಷ. ಅವರ ಆರೋಗ್ಯದಲ್ಲಿಯೂ ಯಾವುದೇ ಸಮಸ್ಯೆಯಿಲ್ಲ, ಅವರೂ ಆರೋಗ್ಯವಾಗಿದ್ದಾರೆ ಅಂದಿದ್ದರು.

    ನಕ್ಸಲ್ ಪಕ್ಷ ಹಿಡಿದಿರೋ ಹಾದಿ ಶಸ್ತ್ರಾಸ್ತ್ರ ಹೋರಾಟ ಅನಗತ್ಯ. ಅದರಿಂದ ರಕ್ತಪಾತವಾಗುತ್ತೆ ಹೊರತು ಯಾವುದೇ ಕ್ರಾಂತಿಯಾಗಲ್ಲ ಅನ್ನೋ ಭಿನ್ನಾಭಿಪ್ರಾಯದಿಂದಲೇ ಅವರು ಹೊರಬರುತ್ತಿದ್ದಾರೆ. ಸಿ ಟಿ ರವಿ ಹೇಳಿದ್ರು, ವಯೋವೃದ್ಧರು, ಅನಾರೋಗ್ಯ ಪೀಡಿತರಾಗಿರುವುದರಿಂದ ಕಾಡಿನಲ್ಲಿ ಓಡಾಡಲು ಅಸಾಧ್ಯವಾಗುತ್ತಿದೆ. ಹೀಗಾಗಿ ಅವರು ಈ ಯೋಜನೆ ಅಡಿ ಅವರಿಗೆ ಪರ್ಯಾಯ ಕಲ್ಪಿಸುತ್ತಿದ್ದಾರೆ ಅಂತ ಹೇಳಿದ್ರು. ಅದು ಸಾಧ್ಯನೇ ಇಲ್ಲ. ಬೇಕಿದ್ರೆ 2 ನೇ ತಾರೀಕಿನ ಬಳಿಕ ಸಿಟಿ ರವಿ ಬಂದು ನೋಡಬಹುದು. ಇವರಿಬ್ಬರ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲದೇ ಗಟ್ಟಿಮುಟ್ಟಾಗಿಯೇ ಇದ್ದಾರೆ. ಒಟ್ಟಿನಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಹೊರಬರುತ್ತಿದ್ದಾರೆ ಅಂತ ಪಬ್ಲಿಕ್ ಟಿವಿಗೆ ಸಂಪೂರ್ಣ ಮಾಹಿತಿ ನೀಡಿದ್ದರು.

    https://www.youtube.com/watch?v=Uu5JI4_VBDg&feature=youtu.be

    https://www.youtube.com/watch?v=HGuoHd1K_0o&feature=youtu.be