Tag: Sira By Election

  • ಕರ್ನಾಟಕದಲ್ಲಿ ಸ್ಟಾರ್ ಕ್ಯಾಂಪೇನ್‍ನಿಂದ ಚುನಾವಣೆ ಗೆಲ್ಲಲು ಆಗಲ್ಲ: ಎಚ್‍ಡಿಕೆ

    ಕರ್ನಾಟಕದಲ್ಲಿ ಸ್ಟಾರ್ ಕ್ಯಾಂಪೇನ್‍ನಿಂದ ಚುನಾವಣೆ ಗೆಲ್ಲಲು ಆಗಲ್ಲ: ಎಚ್‍ಡಿಕೆ

    – ಮಂಡ್ಯ ಚುನಾವಣೆಯೇ ಬೇರೆ, ಉಪಚುನಾವಣೆಯೇ ಬೇರೆ

    ತುಮಕೂರು: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಚುನಾವಣೆಗಳಲ್ಲಿ ಸ್ಟಾರ್ ಕ್ಯಾಂಪೇನ್ ಮಾಡುವುದು ಹೆಚ್ಚಾಗುತ್ತಿದೆ. ಆದರೆ ಸ್ಟಾರ್ ಕ್ಯಾಂಪೇನ್‍ನಿಂದ ಚುನಾವಣೆಯಲ್ಲಿ ಗೆಲುವು ಪಡೆಯಲು ಆಗೋದಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಆರ್.ಆರ್ ನಗರ ಮತ್ತು ಶಿರಾ ಉಪಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಎಚ್‍ಡಿಕೆ, ಕರ್ನಾಟಕದಲ್ಲಿ ಸ್ಟಾರ್ ಕ್ಯಾಂಪೇನ್‍ಗಳ ಪ್ರಚಾರದಿಂದ ಚುನಾವಣೆ ಗೆಲ್ಲಲು ಆಗಲ್ಲ. ಮಂಡ್ಯ ಚುನಾವಣೆ ಬೇರೆ, ಈ ಉಪ ಚುನಾವಣೆಯೇ ಬೇರೆ. ಕೆಲವರು ಮಂಡ್ಯ ಲೋಕಸಭಾ ಚುನಾವಣೆಯನ್ನು ಆರ್.ಆರ್ ನಗರಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಲೋಕಸಭೆ ಅಭ್ಯರ್ಥಿ ಪರ ಕಾಂಗ್ರೆಸ್ ಬಿಜೆಪಿ, ರೈತ ಸಂಘ ಒಟ್ಟಾಗಿ ಕೆಲಸ ಮಾಡಿದ್ದರು. ಅಲ್ಲದೇ ಮಂಡ್ಯ ಪಕ್ಷೇತರ ಅಭ್ಯರ್ಥಿ ಪರ ಮಾಧ್ಯಮಗಳು ಕೂಡ ಅನುಕಂಪ ತೋರಿದ ಹಿನ್ನೆಲೆಯಲ್ಲಿ ಗೆಲುವು ಪಡೆದರು. ಸ್ಟಾರ್ ಕ್ಯಾಂಪೇನ್ ನಿಂದ ಯಾರು ಗೆದ್ದಿಲ್ಲ. ಸ್ಟಾರ್ ಗಳು ಜನರ ಬಳಿ ಮತ ಕೇಳುತ್ತಾರೆ, ಆ ಬಳಿಕ ಹೋಗುತ್ತಾರೆ. ಆ ಬಳಿಕ ಜನರ ಕಷ್ಟ ಸುಖ ಕೇಳಲು ಬರಲ್ಲ ಎಂದರು.

    ಶಿರಾಗೆ ನೀರು ಕೊಡುವ ವಿಚಾರವಾಗಿ ಸಿಎಂ ಭರವಸೆ ನೀಡಿದ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಆಗ ನೀರು ಕೊಡದವರು ಈಗ ಕೊಡುತ್ತಾರಾ? ಬೇರೆ ಬೇರೆ ಜಿಲ್ಲೆಗಳಿಂದ ಕೇಸರಿ ಟವೆಲ್ ಹಾಕಿಕೊಡವರನ್ನು ಶಿರಾಗೆ ಕರೆತಂದಿದ್ದಾರೆ. ನೀರು ಕೊಟ್ಟು ಜನರ ವಿಶ್ವಾಸಗಳಿಸೋದಾದರೆ ಸಂಜೆ 7 ಗಂಟೆ ಬಳಿಕ ಕೆಸರಿ ಯುವಕರಿಂದ ಗಲ್ಲಿ ಗಲ್ಲಿ ಸುತ್ತಿಸುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.

    ಸಮ್ಮಿಶ್ರ ಸರ್ಕಾರ ಬಂದು ಹೊಸ ಸರ್ಕಾರ ಬಂದಿದೆ. ಮುಗಿದ ಅಧ್ಯಾಯ ಮಾತನಾಡೋದು ಬೇಡ. ಜನತೆಯ ಪರಿಸ್ಥಿತಿ ಎಲ್ಲಿಗೆ ತಂದಿದ್ದಾರೆ ಎಂದು ಜನರೆ ಹೇಳುತ್ತಾರೆ. ಮೈತ್ರಿ ಸರ್ಕಾರ ಬೀಳಲು ಯಾರು ಕಾರಣ ಅಂತ ಚರ್ಚಿಸುವ ಸಮಯವಲ್ಲ. ಅಶೋಕ್ ಅವರಿಗೂ ಶಿರಾ ಕ್ಷೇತ್ರಕ್ಕೂ ಸಂಬಂಧವೇನು? ಶಿರಾದಲ್ಲಿ ಎಷ್ಟು ಹಳ್ಳಿ ಇದೆ, ಅವರ ಕಷ್ಟ ಏನು, ಪರಿಸ್ಥಿತಿ ಹೇಗಿದೆ ಅಂತಾ ಅವರಿಗೆ ತಿಳಿದಿದೆಯಾ? ಎಲ್ಲೋ ಬೆಂಗಳೂರಲ್ಲಿ ಕುಳಿತು ಶಿರಾದಲ್ಲಿ ಜನರು ಜೆಡಿಎಸ್ ಗೆಲ್ಲಲ್ಲ ಅಂತಾರೆ. ಆದರೆ ಆಸೆ ಆಮಿಷಗಳಿಗೆ ಶಿರಾ ಜನರು ಬಲಿಯಾಗಿಲ್ಲ. ಸಮ್ಮಿಶ್ರ ಸರ್ಕಾರ ತೆಗೆದು ಸರ್ಕಾರ ರಚನೆ ಮಾಡಿರುವವರಿಗೆ ಈಗಲಾದರೂ ಕೆಲಸ ಮಾಡಿ ಎಂದು ಜನರು ಬುದ್ಧಿ ಕಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಶಿರಾ ಉಪಕದನದಲ್ಲಿ ವೋಟಿಗಾಗಿ ನೋಟಿನ ಮಳೆ- ವೈರಲ್ ವೀಡಿಯೋ

    ಶಿರಾ ಉಪಕದನದಲ್ಲಿ ವೋಟಿಗಾಗಿ ನೋಟಿನ ಮಳೆ- ವೈರಲ್ ವೀಡಿಯೋ

    – ಹಣ ಹಂಚಿಸ್ತಿದ್ದಾರಾ ಬಿಜೆಪಿ ಶಾಸಕ ಪ್ರೀತಂಗೌಡ?

    ತುಮಕೂರು: ಜಿಲ್ಲೆಯ ಶಿರಾ ಉಪಚುನಾವಣೆ ಕಣ ರಣರಣ ಅಂತಿದೆ. ನಾಯಕರ ಟಾಕ್‍ಫೈಟ್ ಭರ್ಜರಿಯಾಗಿ ನಡೆಯುತ್ತಿದ್ದು, ಈ ನಡುವೆಯೇ ವೋಟಿಗಾಗಿ ನೋಟು ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

    ಮತದಾರರನನ್ನು ಸೆಳೆಯಲು ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ತಮ್ಮ ಬೆಂಬಲಿಗರ ಮೂಲಕ ಹಣ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್, ಬಿಜೆಪಿ ಮಾಡಿದೆ. ಮಹಿಳೆಯರಿಗೆ ಹರಿಶಿಣ-ಕುಂಕುಮದ ಜೊತೆ ಹಣದ ಆಮಿಷ ನೀಡಲಾಗುತ್ತಿದೆ ಎಂಬ ಬಗ್ಗೆ ವಿಡಿಯೋ ಸಮೇತ ಆರೋಪ ಮಾಡಲಾಗಿದೆ. ಸದ್ಯ ಕ್ಷೇತ್ರದಲ್ಲಿ ಹಣ ಹಂಚಿಕೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವೀಡಿಯೋದಲ್ಲಿ ಮಹಿಳೆಯರಿಗೆ ಹಣ ಹಂಚಿಕೆ ಮಾಡುತ್ತಿರುವ ಪ್ರೀತಂ ಗೌಡ ಅವರ ಬೆಂಬಲಿಗರು ಎನ್ನಲಾದ ವ್ಯಕ್ತಿಗಳು, ನಮ್ಮ ಎಂಎಲ್‍ಎ ಪ್ರೀತಂ ಗೌಡ ಹೇಳಿದ್ದಾರೆ ಹಣ ಕೊಡೋಕೆ. ಪ್ರತಿ ಚುನಾವಣೆಯಲ್ಲಿ ಬರೀ ಗಂಡಸರಿಗೆ ಕೈಗೆ ಹಣ ಕೊಟ್ಟು ಹೋಗುತ್ತಾರೆ. ತಾಯಂದಿರಿಗೆ ಏನೂ ಕೊಡಲ್ಲ ಮರೆತು ಹೋಗುತ್ತಾರೆ. ಇವತ್ತು 200 ರೂಪಾಯಿ ಕೊಡ್ತಿವಿ, ನಾಳೆ, ಆಚೆ ನಾಳಿದ್ದು ಕೊಡ್ತಿವಿ. ಚುನಾವಣೆ ಹಿಂದಿನ ದಿನನೂ ಕೊಡೋದನ್ನು ಕೊಡ್ತಿವಿ. ದುಡ್ಡು ತಗೊಂಡು ಬಿಜೆಪಿಗೆ ಮತ ಹಾಕಿ ಎಂದು ಹೇಳುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

    ಇತ್ತ ಉಪ ಚುನಾವಣೆ ಹೊತ್ತಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಮಠಗಳ ಮೊರೆ ಹೋಗಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠಕ್ಕೆ ನಿನ್ನೆ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಭೇಟಿ ನೀಡಿದ್ದರು. ನಂತರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಕಾರಜೋಳ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಂಬೇಡ್ಕರ್‍ಗೆ ಕಾಂಗ್ರೆಸ್ ಮಹಾ ಮೋಸ ಮಾಡಿದೆ. ಕಾಂಗ್ರೆಸ್‍ನವರಿಗೆ ದಲಿತರ ಬಳಿ ಮತ ಕೇಳುವ ನೈತಿಕತೆ ಇಲ್ಲ ಎಂದು ಕಿಡಿಕಾರಿದ್ದರು. ಇನ್ನು ಆದಿ ಚುಂಚನಗಿರಿ ಮಠಕ್ಕೂ ಭೇಟಿ ಕೊಟ್ಟ ಅಭ್ಯರ್ಥಿ ರಾಜೇಶ್‍ಗೌಡ, ನಿರ್ಮಲಾನಂದ ಶ್ರೀಗಳ ನೇತೃತ್ವದಲ್ಲಿ 2 ಗಂಟೆಗಳಿಗೂ ಹೆಚ್ಚುಕಾಲ ಕಾಲಭೈರವೇಶ್ವರ ಆರಾಧನೆ ಮಾಡಿದ್ದಾರೆ. ರಾಜೇಶ್‍ಗೌಡಗೆ ಶುಭವಾಗಲಿ ಅಂತ ಶ್ರೀಗಳು ಆರ್ಶೀವಾದ ನೀಡಿದ್ದಾರೆ. ಪೂಜೆ ಬಳಿಕ ಮಾತನಾಡಿದ ರಾಜೇಶ್‍ಗೌಡ, ದಸರಾ ಹಿನ್ನೆಲೆ ಶ್ರೀಗಳ ಭೇಟಿಯಾಗಿದ್ದೇನೆ. ಶಿರಾ ಕ್ಷೇತ್ರದ ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಕೆಆರ್ ಪೇಟೆ ಉಪಚುನಾವಣೆಯಲ್ಲಿ ಗೆಲುವು ಪಡೆದ ರೀತಿಯಲ್ಲೇ ಶಿರಾದಲ್ಲೂ ಬಿಜೆಪಿ ಕಮಾಲ್ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

  • ನಾವು ಮುಂದೆ ರಾಜ್ಯಕ್ಕೆ ಅಭಿವೃದ್ದಿ ಸರ್ಕಾರ ಕೊಡುತ್ತೇವೆ: ಡಿಕೆಶಿ

    ನಾವು ಮುಂದೆ ರಾಜ್ಯಕ್ಕೆ ಅಭಿವೃದ್ದಿ ಸರ್ಕಾರ ಕೊಡುತ್ತೇವೆ: ಡಿಕೆಶಿ

    – ರಾಜ್ಯದಲ್ಲಿ ನಿಷ್ಕ್ರೀಯ ಸರ್ಕಾರವಿದೆ ಅಂದ್ರು ಸಿದ್ದು

    ತುಮಕೂರು: ಶಿರಾ ಉಪಚುನಾವಣೆ ಗರಿಗೆದರಿದ್ದು, ಅಭ್ಯರ್ಥಿಗಳ ಪರ ಮುಖಂಡರು ಮತಪ್ರಚಾರಕ್ಕೆ ಇಳಿದಿದ್ದಾರೆ. ಶಿರಾದಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ನಾಮಪತ್ರ ಸಲ್ಲಿಸಿದರು.

    ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಶಿರಾ ಜನರ ಉತ್ಸಾಹ ಫಲಿತಾಂಶ ಏನಾಗುತ್ತದೆ ಎಂಬುದನ್ನು ತೋರಿಸುತ್ತದೆ. ಅನುಭವಿ ಟಿ.ಬಿ ಜಯಚಂದ್ರ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದೇವೆ. ಅವರು ಅಧಿಕಾರದಲ್ಲಿದ್ದಾಗ 2500 ಕೋಟಿ ಅನುದಾನ ತಂದು ಅಭಿವೃದ್ದಿ ಗುಡ್ಡೆಗಳನ್ನೇ ನಿರ್ಮಿಸಿದ್ದಾರೆ ಎಂದರು.

    ಈ ಚುನಾವಣೆಯನ್ನು ನಾವ್ಯಾರು ಬಯಸಿರಲಿಲ್ಲ. ಸತ್ಯನಾರಾಯಣ್ ಅವರ ಕೊನೆ ಚುನಾವಣೆ ಎಂದು ಅವರನ್ನು ಗೆಲ್ಲಿಸಿದ್ರು. ಇಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಸರ್ಕಾರದ ಆಡಳಿತ ಸರಿಯಿಲ್ಲ ಎನ್ನುವ ಸಂದೇಶ ನೀಡಬೇಕು. ನಮ್ಮ ಅಭ್ಯರ್ಥಿ ಟಿ.ಬಿ ಜಯಚಂದ್ರ ವಿದ್ಯಾವಂತ, ಬುದ್ಧಿವಂತರಿದ್ದಾರೆ. ನಾವು ಮುಂದೆ ರಾಜ್ಯಕ್ಕೆ ಅಭಿವೃದ್ದಿ ಸರ್ಕಾರ ಕೊಡುತ್ತೇವೆ. ನುಡಿದಂತೆ ನಡೆದಿದ್ದೇವೆ ಎಂದು ತಿಳಿಸಿದರು.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಶಿರಾ ಉಪಚುನಾವಣೆಯಲ್ಲಿ ಜನರು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ನಿಷ್ಕ್ರೀಯ ಸರ್ಕಾರವಿದೆ. ಈ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಬಾರಿಸಬೇಕಿದೆ. ಬಿಜೆಪಿ ಸರ್ಕಾರ ರಾಜ್ಯವನ್ನು ಆರ್ಥಿಕ ದಿವಾಳಿ ಮಾಡಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಯಚಂದ್ರ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ- ಸಮಿಶ್ರ ಸರ್ಕಾರ- ಬಿಜೆಪಿ ಸರ್ಕಾರವನ್ನು ಹೋಲಿಕೆ ಮಾಡುತ್ತಾರೆ ಎಂದರು.

    ಮತದಾರರು ಬುದ್ಧಿವಂತರಿದ್ದಾರೆ. ಜಯಚಂದ್ರರಿಗೆ ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸವಿದೆ. ಈ ಬಾರಿ ಅವರನ್ನು ಶಿರಾ ಜನ ಕೈ ಹಿಡಿಯುತ್ತಾರೆ. ಜಯಚಂದ್ರ 100ಕ್ಕೆ ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ. ಶಿರಾದಲ್ಲಿ ತ್ರಿಕೋನ ಸ್ಪರ್ಥೆಯಿದೆ ಜಯಚಂದ್ರ ಗೆಲ್ಲುತ್ತಾರೆ. ಎರಡು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲುವು ಸಾಧಿಸಲಿದೆ. ಎರಡೂ ಉಪಚುನಾವಣೆ ಮುಂದಿನ ಚುನಾವಣೆಯ ದಿಕ್ಸೂಚಿ. ಮುಂದೆ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಶಿರಾ ಉಪ ಚುನಾವಣೆ-ಟೆಂಪಲ್ ರನ್ ಆರಂಭಿಸಿದ ಟಿ.ಬಿ.ಜಯಚಂದ್ರ

    ಶಿರಾ ಉಪ ಚುನಾವಣೆ-ಟೆಂಪಲ್ ರನ್ ಆರಂಭಿಸಿದ ಟಿ.ಬಿ.ಜಯಚಂದ್ರ

    ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ತಮ್ಮ ಹೆಸರು ಅಂತಿಮವಾಗುತ್ತಿದ್ದಂತೆ ಮಾಜಿ ಸಚಿವ ಜಯಚಂದ್ರ ಟೆಂಪಲ್ ರನ್ ಆರಂಭಿಸಿದ್ದಾರೆ. ಬೋರನಕಣಿವೆಯಲ್ಲಿರೋ ಶಿರಡಿ ಸಾಯಿಬಾಬ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನಲ್ಲಿರುವ ಕೆಂಚಮ್ಮ ದೇವಾಲಯಕ್ಕೆ ಪತ್ನಿ ಸಮೇತ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದ್ದಾರೆ.

    ಶಾಸಕ ಸತ್ಯನಾರಾಯಣ ಅವರ ಅಕಾಲಿಕ ಮರಣದಿಂದ ತೆರವಾಗಿರೋ ಸ್ಥಾನಕ್ಕೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ರಾಜಕೀಯ ನಾಯಕರು ಈಗಾಗಲೇ ಕ್ಷೇತ್ರದ ಮೂಲೆಮೂಲೆಯಲ್ಲೂ ಮತ ಬೇಟಿಗಾಗಿ ಗಿರಕಿ ಹೊಡೆಯುತ್ತಿದ್ದಾರೆ. ಅದರಲ್ಲೂ ಕಾಂಗ್ರೆಸ್ ನಿಂದ ಪರಾಭವಗೊಂಡಿದ್ದ ಮಾಜಿ ಸಚಿವ ಟಿ.ಬಿ.ಜಯಚಂದ್ರಗೆ ಟಿಕೆಟ್ ನೀಡೋ ವಿಚಾರದಲ್ಲಿ ಮಾಜಿ ಶಾಸಕ ಕೆ.ಎನ್ ರಾಜಣ್ಣರೇ ಅಡ್ಡಗಾಲಾಕಿದ್ದರು.

    ಕೆಪಿಸಿಸಿ ಕಚೇರಿಯಲ್ಲಿ ನಿನ್ನೆ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಉಪಚುನಾವಣೆ ಕುರಿತು ಸಭೆಯಲ್ಲಿ ಜಯಚಂದ್ರರಿಗೆ ಟಿಕೆಟ್ ಫೈನಲ್ ಮಾಡಲಾಗಿದೆ. ಟಿ.ಬಿ.ಜಯಚಂದ್ರ ಅವರ ಗೆಲುವಿಗಾಗಿ ನಾವೆಲ್ಲಾ ಕೆಲಸ ಮಾಡುತ್ತೇವೆ ಅಂತ ಮಾತು ಕೊಟ್ಟ ಬಳಿಕವಂತೂ ಜಯಚಂದ್ರ ಫುಲ್ ಆಕ್ಟೀವಾಗಿದ್ದಾರೆ. ಇಂದು ಬೆಳಗ್ಗೆಯಿಂದಲೇ ಟೆಂಪಲ್ ರನ್ ಆರಂಭಿಸಿದ್ದಾರೆ.

    ತುಮಕೂರು ಜಿಲ್ಲೆಯ ನಾಯಕರ ಜೊತೆ ಸಭೆ ಮಾಡಿದ್ದೇವೆ. ಶಿರಾ ಉಪ ಚುನಾವಣೆಯನ್ನು ಪರಮೇಶ್ವರ್ ಅವರ ನೇತೃತ್ವತ್ವದಲ್ಲಿ ನಡೆಸುತ್ತೇವೆ. ರಾಜಣ್ಣ ಕೋ ಚೇರ್ಮನ್ ಆಗಿ ಸಾಥ್ ಕೊಡುತ್ತಾರೆ. ಪಕ್ಷದ ಅಭ್ಯರ್ಥಿಯಾಗಿ ಜಯಚಂದ್ರ ಇರುತ್ತಾರೆ. ರಾಜಣ್ಣನವರೇ ಜಯಚಂದ್ರ ಹೆಸರು ಸೂಚಿಸಿದ್ದಾರೆ. ಅವರ ಅಭಿಪ್ರಾಯವನ್ನು ನಾವು ಪಡೆದಿದ್ದೇವೆ. ನಮ್ಮ ವರಿಷ್ಠರಿಗೆ ಇದನ್ನೇ ಕಳಿಸಿಕೊಡುತ್ತೇವೆ. ಇಂದಿನಿಂದಲೇ ಚುನಾವಣೆ ಕಾರ್ಯ ಪ್ರಾರಂಭ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದರು.

    ಬುಧವಾರ ಬೆಳಗ್ಗೆ ತಾನೇ ಈ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ್ದ ರಾಜಣ್ಣ, ನಾನು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಕೆಪಿಸಿಸಿ ಅಧ್ಯಕ್ಷರ ಜೊತೆ ಮಾತನಾಡಿ ಬಂದಿದ್ದೇನೆ. ಶಿರಾ ಕ್ಷೇತ್ರದಲ್ಲಿ ಹಿಂದುಳಿದ ಸಮುದಾಯಕ್ಕೆ ಟಿಕೆಟ್ ಕೊಡಬೇಕು ಅನ್ನೋದು ನನ್ನ ಅಭಿಪ್ರಾಯ. ಪಕ್ಷ ಅಭ್ಯರ್ಥಿಗಳಿಗೆ ಟಿಕೆಟ್ ಕೊಡುವ ಜೊತೆಗೆ ಚುನಾವಣೆಗಾಗಿ ದುಡ್ಡು ಕೂಡ ಕೊಡಬೇಕು ಎಂದು ಹೇಳಿದ್ದರು. ಆದರೆ ಸಭೆ ನಂತರ ಅಧ್ಯಕ್ಷರ ಅಭಿಪ್ರಾಯಕ್ಕೆ ನಾವೆಲ್ಲರೂ ಸಾಥ್ ನೀಡುತ್ತೇವೆ ಎಂದು ಉಲ್ಟಾ ಹೊಡೆದಿದ್ದರು.

  • ಖಾಲಿ ಸ್ಥಾನಕ್ಕೆ ಜೋತುಬೀಳುವ ಜಾಯಮಾನ ನನ್ನದಲ್ಲ: ನಿಖಿಲ್ ಕುಮಾರಸ್ವಾಮಿ

    ಖಾಲಿ ಸ್ಥಾನಕ್ಕೆ ಜೋತುಬೀಳುವ ಜಾಯಮಾನ ನನ್ನದಲ್ಲ: ನಿಖಿಲ್ ಕುಮಾರಸ್ವಾಮಿ

    ಬೆಂಗಳೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್ ನಿಂದ ಮಾಜಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡ್ತಾರಾ ಅನ್ನೋ ಚರ್ಚೆ ಕೆಲ ದಿನಗಳಿಂದ ಆರಂಭಗೊಂಡಿತ್ತು. ಈ ಎಲ್ಲ ಊಹಾಪೋಹಗಳಿಗೆ ಸ್ವತಃ ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

    ಪತ್ರಿಕಾ ಪ್ರಕಟನೆ: ಇಂತಹ ಕಪೋಲಕಲ್ಪಿತ ಸುದ್ದಿ- ವದಂತಿಗಳನ್ನು ಯಾರು ಹಬ್ಬಿಸುತ್ತಾರೋ? ಯಾಕೆ ಹಬ್ಬಿಸುತ್ತಾರೋ? ಇದರಿಂದ ಕುತ್ಸಿತ ಮನಸುಗಳಿಗೆ ಆಗುವ ಲಾಭ ಏನೆಂಬುದು ನನಗೆ ತಿಳಿಯದಾಗಿದೆ. ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಚುನಾವಣೆ ಮೇಲೆ ಕಣ್ಣಿಟ್ಟಿದ್ದೇನೆ ಎಂಬಂತೆ ವದಂತಿಗಳನ್ನು ಪುಂಖಾನುಪುಂಖವಾಗಿ ಹರಿಯ ಬಿಡಲಾಗುತ್ತಿದೆ.

    ಮಾಜಿ ಸಚಿವರು ಹಾಗೂ ಶಾಸಕರಾಗಿದ್ದ ಬಿ. ಸತ್ಯನಾರಾಯಣ ಅವರು ಅಕಾಲಿಕ ನಿಧನರಾಗಿದ್ದರಿಂದ ಶಿರಾ ಕ್ಷೇತ್ರಕ್ಕೆ ಉಪಚುನಾವಣೆ ಅನಿವಾರ್ಯವಾಗಿದೆ. ಹಾಗಂತ ಅಕಾಲಿಕವಾಗಿ ಖಾಲಿಬಿದ್ದ ಕ್ಷೇತ್ರಕ್ಕೆ ಜೋತುಬೀಳುವ ಜಾಯಮಾನ ನನ್ನದಲ್ಲವೇ ಅಲ್ಲ. 2018 ರ ವಿಧಾನಸಭಾ ಚುನಾವಣೆ ವೇಳೆ ಮೂರು ದಿನಗಳ ಕಾಲ ಶಿರಾ ಸೇರಿದಂತೆ ತುಮಕೂರು ಜಿಲ್ಲೆಯಲ್ಲಿ ಪಕ್ಷದ ಪರವಾಗಿ ನಿಷ್ಠಾವಂತ ಕಾರ್ಯಕರ್ತನಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ನಿಜ.

    ಇನ್ನು ಸತ್ಯ ನಾರಾಯಣ ಅವರ ಪಕ್ಷ ನಿಷ್ಠೆ ಮತ್ತು ಬದ್ಧತೆ ಪ್ರಶ್ನಾತೀತ. ಯಾವುದೇ ಆಮಿಷಗಳಿಗೆ ಬಲಿಯಾಗದೆ ಕೊನೆ ಉಸಿರಿರುವವರೆಗೂ ನಂಬಿದ ಪಕ್ಷವನ್ನು ಹೆಸರಿಗೆ ತಕ್ಕಂತೆ ‘ಸತ್ಯ”ವಾಗಿಸಿ ಕೊಂಡಿದ್ದರು. ಉಪಚುನಾವಣೆಗೆ ಯೋಗ್ಯ, ಸಮರ್ಥ ಅಭ್ಯರ್ಥಿಯನ್ನು ಪಕ್ಷದ ವರಿಷ್ಠರು ಆಯ್ಕೆ ಮಾಡಲಿದ್ದಾರೆ. ಅವರ ಪರವಾಗಿಯೂ ಪಕ್ಷದ ಅಭ್ಯರ್ಥಿ ಪರ ಟೊಂಕಕಟ್ಟಿ ನಿಂತು ಪ್ರಚಾರ ಮಾಡಲಿದ್ದೇನೆ. ಇದರಲ್ಲಿ ಯಾರಿಗೂ ಎಳ್ಳಷ್ಟು ಸಂಶಯ ಬೇಡ. ನಾನು ಶಿರಾ ಉಪಚುನಾವಣೆಯ ಅಭ್ಯರ್ಥಿಯಾಗುವ ಕನಸು ಕಂಡವನಲ್ಲ. ಯಾವುದೇ ಕಾರಣಕ್ಕೂ ನಾನು ಶಿರಾದಲ್ಲಿ ಅಭ್ಯರ್ಥಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಸತ್ಯನಾರಾಯಣ ಅವರ ‘ಚಿತೆ” ಆರುವ ಮುನ್ನವೇ ಉಪಚುನಾವಣೆ ಅಖಾಡಕ್ಕೆ ನನ್ನ ಹೆಸರನ್ನು ತೇಲಿ ಬಿಟ್ಟವರ ಬಗ್ಗೆ ಮರುಕವಿದೆ. ಇಂತಹ ಹೀನ ಸಂಸ್ಕೃತಿಯ ರಾಜಕೀಯ ಪರಂಪರೆ ನಮ್ಮದಲ್ಲ. ಶಿರಾ ಉಪಚುನಾವಣೆಗೆ ನನ್ನನ್ನು ಕಣಕ್ಕಿಳಿಸಲು ಒತ್ತಡಗಳಿವೆ ಎಂಬಂತೆ ಹಾಗೂ ರಾಜಕೀಯ ನೆಲೆ ಕಂಡುಕೊಳ್ಳಲು ಈ ಕ್ಷೇತ್ರವನ್ನೇ ‘ಚಿಮ್ಮು ಹಲಗೆ” ಮಾಡಿ ಕೊಳ್ಳುವ ಹವಣಿಕೆಯಲ್ಲಿದ್ದಾರೆ ಎಂಬ ವದಂತಿಗಳನ್ನು ಸಾರಾಸಗಟಾಗಿ ತಳ್ಳಿ ಹಾಕುತ್ತೇನೆ.

    ರಾಜ್ಯ ಜಾತ್ಯಾತೀತ ಯುವ ಜನತಾದಳದ ಅಧ್ಯಕ್ಷನಾಗಿರುವ ನಾನು ಪಕ್ಷಕ್ಕಾಗಿ ದುಡಿಯುವಾಗ ‘ಹುದ್ದೆ”ಯ ಕಿರೀಟವನ್ನು ಬದಿಗಿರಿಸಿ ಪಕ್ಷದ ಸಾಮಾನ್ಯ ಕಾರ್ಯಕರ್ತನಂತೆ ದಣಿವರಿಯದೆ ದುಡಿಯುತ್ತೇನೆ. ಪಕ್ಷದ ನಿಷ್ಠಾವಂತ ಹಿರಿಯ-ಕಿರಿಯರ ನಿಸ್ವಾರ್ಥ ರಾಜಕೀಯ ನಿಷ್ಠೆಯೇ ಇದಕ್ಕೆ ಮೂಲ ಪ್ರೇರಣೆ ಎಂದು ಮಾದಾರಾ ದೂಳಯ್ಯನವರ ಕೆಲ ಸಾಲುಗಳನ್ನು ನಿಖಿಲ್ ಕುಮಾರಸ್ವಾಮಿ ಬರೆದುಕೊಂಡಿದ್ದಾರೆ.

    ಅರಿವುಂಟೆ? ತೊಳಗಿ ಬೆಳಗಿ ಪ್ರಜ್ವಲಿಸಿ ಉರಿವ ಬೆಳಗು
    ಕೆಡುವಲ್ಲಿ ಉಡುಗುತ್ತಿದ್ದೇನೆ ಎಂದು ನುಡಿಯಿತ್ತೆ?
    ಇಂತಿವ ಹಿಡಿವಲ್ಲಿ ಬಿಡುವಲ್ಲಿ ಮಿಕ್ಕಾದವ
    ಒಡಗೂಡುವಲ್ಲಿ ಅಡಿಯೇರಿ ಮತ್ತೆ ಪುನರಪಿ ಅಡಿ ಉಂಟೆ?
    ತೊಟ್ಟು ಬಿಟ್ಟ ಹಣ್ಣಿಂಗೆ ಮತ್ತಾ ಬುಡದಾಸೆಯೇಕೆ? ನಿಶ್ಚಯವೆಂಬುದು ನಷ್ಟವಾದಲ್ಲಿ ಕಾಮಧೂಮ ಧೂಳೇಶ್ವರನೆಂಬ ಲಕ್ಷವೇತಕ್ಕೆ?
    – ಮಾದಾರ ಧೂಳಯ್ಯ