Tag: Sinnga

  • ನವರಸಗಳಿಂದ ಶೃಂಗಾರಗೊಂಡ ಸಿಂಗ!

    ನವರಸಗಳಿಂದ ಶೃಂಗಾರಗೊಂಡ ಸಿಂಗ!

    ಸಾಮಾನ್ಯವಾಗಿ ಒಂದೊಂದು ವರ್ಗದ ಪ್ರೇಕ್ಷಕರ ನಿರೀಕ್ಷೆಗಳೂ ಒಂದೊಂದು ತೆರನಾಗಿರುತ್ತವೆ. ಕೆಲವರಿಗೆ ಡ್ಯಾನ್ಸು, ಫೈಟು ಇಷ್ಟವಾದರೆ ಮತ್ತೆ ಕೆಲ ಮಂದಿ ಸೆಂಟಿಮೆಂಟ್, ಪ್ರೀತಿ, ಹಾಸ್ಯಗಳಿಗೆ ಹಾತೊರೆಯುತ್ತಾರೆ. ಆದರೆ ಅದೆಲ್ಲದರ ಜೊತೆಗೇ ಭರ್ಜರಿ ಮನೋರಂಜನೆಯನ್ನಂತೂ ಪ್ರತಿ ಪ್ರೇಕ್ಷಕರೂ ಬಯಸುತ್ತಾರೆ. ಇಂಥಾ ಎಲ್ಲಾ ಅಂಶಗಳನ್ನೂ ಚಿತ್ರವೊಂದು ತುಂಬಿಕೊಂಡು ತೆರೆ ಕಂಡರೆ ಖಂಡಿತಾ ಎಲ್ಲ ವರ್ಗದ ಪ್ರೇಕ್ಷಕರೂ ಸಂತುಷ್ಟರಾಗುತ್ತಾರೆ. ಅಂಥಾ ಎಲ್ಲ ಗುಣಗಳಿಂದ ಸಂಪನ್ನವಾಗಿರೋ ಸಿಂಗ ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.

    ಒಂದರ್ಥದಲ್ಲಿ ಸಿಂಗ ನವರಸಗಳನ್ನೂ ಮೈತುಂಬಿಕೊಂಡಿರೋ ಚಿತ್ರ. ಈಗ ಬಿಡುಗಡೆಯಾಗಿರೋ ಟ್ರೈಲರ್ ಮೂಲಕ ಇದೊಂದು ಮಾಸ್ ಚಿತ್ರ ಎಂಬ ವಿಚಾರ ಪ್ರೇಕ್ಷಕರಿಗೆ ಮನದಟ್ಟಾಗಿದೆ. ಆದರೆ ಈ ಸಿನಿಮಾದೊಳಗೆ ಸಾಹಸ, ಹಾಸ್ಯ, ಪ್ರೀತಿ, ಸೆಂಟಿಮೆಂಟ್ ಸೇರಿದಂತೆ ಸಕಲ ಅಂಶಗಳೂ ಇವೆ. ನಿರ್ದೇಶಕ ವಿಜಯ್ ಕಿರಣ್ ವರ್ಷಗಳ ಕಾಲ ಶ್ರಮ ವಹಿಸಿ ಅಷ್ಟೊಂದು ರುಚಿಕಟ್ಟಾಗಿರುವಂತೆ ಈ ಚಿತ್ರವನ್ನು ರೂಪಿಸಿದ್ದಾರಂತೆ.

    ಅದರಲ್ಲಿಯೂ ವಿಶೇಷವಾಗಿ ಸಂಸಾರ ಸಮೇತರಾಗಿ ಕೂತು ನೋಡುವಂಥಾ ಚಿತ್ರವಾಗಿಯೂ ಸಿಂಗ ಮೂಡಿ ಬಂದಿದೆಯಂತೆ. ಹಳ್ಳಿ ಹಿನ್ನೆಲೆಯಲ್ಲಿ ಅರಳಿಕೊಳ್ಳೋ ಕಥೆ ಹೊಂದಿರೋ ಸಿಂಗ ಮೂಲಕ ಚಿರಂಜೀವಿ ಸರ್ಜಾ ಕೂಡಾ ಸಂಪೂರ್ಣ ಬೇರೆಯದ್ದೇ ಲುಕ್ಕಿನಲ್ಲಿ ಲಕಲಕಿಸಿದ್ದಾರೆ. ಅವರಿಗೆ ಹಳ್ಳಿ ಹುಡುಗಿಯಾಗಿ ಅದಿತಿ ಪ್ರಭುದೇವ ಸಾಥ್ ಕೊಟ್ಟಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ಕೂಡಾ ಚಿತ್ರದುದ್ದಕ್ಕೂ ಇರುವ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.

    ಮಾಸ್ ಅಂಶ ಸಿಂಗ ಚಿತ್ರದ ಪ್ರಧಾನ ಲಕ್ಷಣ. ಆದರೆ ಅದರ ಹಿನ್ನೆಲೆಯಲ್ಲಿ ಎಲ್ಲರನ್ನೂ ಕಾಡುವಂಥಾ ಹಳ್ಳಿ ಸೀಮೆಯ ಕಥೆಯಿದೆ. ಅದೆಲ್ಲವನ್ನೂ ವಿಜಯ್ ಕಿರಣ್ ವಿರಳ ಲೊಕೇಷನ್ನುಗಳಲ್ಲಿ ಸೆರೆ ಹಿಡಿದಿದ್ದಾರೆ. ಈಗ ಜಾಹೀರಾಗಿರೋ ಟ್ರೈಲರ್ ಮತ್ತು ಪೋಸ್ಟರ್‍ಗಳ ಆಧಾರದಲ್ಲಿ ಸಿಂಗ ಹೀಗೆಯೇ ಇರಬಹುದೆಂಬ ಕಲ್ಪನೆ ಬಹುತೇಕರಲ್ಲಿ ಇರಬಹುದು. ಆದರೆ ಅದನ್ನು ಮೀರಿಸುವಂಥಾ ಮರ್ಮಗಳನ್ನು ಸಿಂಗ ತನ್ನೊಳಗಿಟ್ಟುಕೊಂಡಿದೆ. ಅದೇನೆಂಬುದು ಇದೇ ತಿಂಗಳ ಹತ್ತೊಂಬತ್ತನೇ ತಾರೀಕಿನಂದು ಅನಾವರಣಗೊಳ್ಳಲಿದೆ.

  • ಲಂಗ ದಾವಣಿಯಲ್ಲಿ ‘ಸಿಂಗ’ನ ಸಖಿಯಾದ ನಾಗಿಣಿ!

    ಲಂಗ ದಾವಣಿಯಲ್ಲಿ ‘ಸಿಂಗ’ನ ಸಖಿಯಾದ ನಾಗಿಣಿ!

    ಬೆಂಗಳೂರು: ಚಿರಂಜೀವಿ ಸರ್ಜಾ ಸಿನಿ ಯಾನದಲ್ಲಿ ಮಹತ್ವದ ಮೈಲಿಗಲ್ಲಾಗಿ ದಾಖಲಾಗುವ ಭರವಸೆ ಬಿತ್ತಿರೋ ಚಿತ್ರ ಸಿಂಗ. ವಿಜಯ್ ಕಿರಣ್ ನಿರ್ದೇಶನದ, ಉದಯ್ ಮೆಹ್ತಾ ನಿರ್ಮಾಣ ಮಾಡಿರುವ ಸಿಂಗ ಇದೇ ಹತ್ತೊಂಬತ್ತರಂದು ತೆರೆ ಕಾಣುತ್ತಿದೆ. ಅದಾಗಲೇ ಪ್ರೇಕ್ಷಕ ವಲಯದಲ್ಲಿ ನೋಡಲೇ ಬೇಕೆಂಬಂಥಾ ತಹ ತಹವನ್ನು ಹುಟ್ಟು ಹಾಕಿರೋ ಈ ಚಿತ್ರದ ಮೂಲಕ ಚಿರಂಜೀವಿ ಸರ್ಜಾ ಹೊಸತನದ ಪಾತ್ರವೊಂದರ ಮೂಲಕ ಪ್ರೇಕ್ಷಕರನ್ನು ತಾಕಲು ಅಣಿಯಾಗಿದ್ದಾರೆ. ಅವರಿಗಿಲ್ಲಿ ನಾಗಕನ್ನಿಕೆ ಖ್ಯಾತಿಯ ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿದ್ದಾರೆ.

    ಅದಿತಿ ಪ್ರಭುದೇವ ಕಿರುತೆರೆ ಧಾರಾವಾಹಿಯ ಮೂಲಕವೇ ನಟಿಯಾಗಿ ಪರಿಚಯವಾಗಿ ಇದೀಗ ಹಿರಿತೆರೆಯಲ್ಲಿ ನಾಯಕಿಯಾಗಿ ಮಿಂಚುತ್ತಿರುವವರು. ಅದಾಗಲೇ ಅವರು ನಾಯಕಿಯಾಗಿರೋ ಮೂರ್ನಾಲಕ್ಕು ಚಿತ್ರಗಳು ಒಂದರ ಹಿಂದೊಂದರಂತೆ ಬಿಡುಗಡೆಯಾಗಲು ಸರದಿಯಲ್ಲಿ ನಿಂತಿವೆ. ಏಕತಾನತೆಯನ್ನು ಮೀರಿಕೊಂಡು ಥರ ಥರದ ಪಾತ್ರಗಳಲ್ಲಿ ನಟಿಸೋ ಆಸೆ ಹೊಂದಿರೋ ಅದಿತಿಗೆ ಈವರೆಗೂ ಅಂಥಾದ್ದೇ ಪಾತ್ರಗಳು ಸಿಕ್ಕಿವೆ. ಸಿಂಗ ಚಿತ್ರದಲ್ಲಿ ಅವರಿಗೆ ಸಿಕ್ಕಿರೋ ಪಾತ್ರವೂ ಅಷ್ಟೇ ಭಿನ್ನವಾದದ್ದು.

    ನಟಿಯಾಗಿ ಮಿಂಚುತ್ತಿದ್ದರೂ ತನ್ನದೇ ಪುಟ್ಟ ಖಾಸಗಿ ಪ್ರಪಂಚವನ್ನು ಧೇನಿಸುವ ಮನಸ್ಥಿತಿ ಹೊಂದಿರುವವರು ಅದಿತಿ ಪ್ರಭುದೇವ. ಅವರು ಈವರೆಗೂ ಬಯಸಿದ್ದಂಥಾ ಪಾತ್ರವೇ ಸಿಂಗ ಚಿತ್ರದಲ್ಲಿ ಸಿಕ್ಕಿದೆಯಂತೆ. ಇಲ್ಲಿ ಅವರು ಲಂಗ ದಾವಣಿಯಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಸವಾಲಿನ ಗುಣಲಕ್ಷಣಗಳನ್ನು ಹೊಂದಿರೋ ಈ ಪಾತ್ರವನ್ನು ಅದಿತಿ ಸಲೀಸಾಗಿಯೇ ನಿರ್ವಹಿಸಿದ್ದಾರಂತೆ. ಈಗಾಗಲೇ ಶ್ಯಾನೇ ಟಾಪಾಗವ್ಳೇ ಹಾಡಿನ ಮೂಲಕ ಅದಿತಿಯ ಗೆಟಪ್ಪಿನ ಝಲಕ್ ಜಾಹೀರಾಗಿದೆ. ಅಂತೂ ಈ ಸಿನಿಮಾ ಮೂಲಕ ಅದಿತಿಯ ಸಿನಿ ಯಾನ ಮತ್ತಷ್ಟು ವೇಗ ಪಡೆದುಕೊಳ್ಳೋ ಸಾಧ್ಯತೆಗಳೇ ದಟ್ಟವಾಗಿವೆ.

  • ಶ್ಯಾನೆ ಟಾಪಾಗಿದೆಯಂತೆ ಸಿಂಗನ ಕಥೆ!

    ಶ್ಯಾನೆ ಟಾಪಾಗಿದೆಯಂತೆ ಸಿಂಗನ ಕಥೆ!

    ಬೆಂಗಳೂರು: ಚಿರಂಜೀವಿ ಸರ್ಜಾ `ಸಿಂಗ’ ಚಿತ್ರ ಇದೇ ತಿಂಗಳ ಹತ್ತೊಂಬತ್ತರಂದು ಬಿಡುಗಡೆಗೆ ರೆಡಿಯಾಗಿದೆ. ಹಾಡು, ಟ್ರೈಲರ್, ಪೋಸ್ಟರ್ ಸೇರಿದಂತೆ ಎಲ್ಲದರಲ್ಲಿಯೂ ಹೊಸ ಕಳೆ ತುಂಬಿಕೊಂಡಿರೋ ಈ ಚಿತ್ರಕ್ಕೆ ಪಾಸಿಟಿವ್ ಟಾಕ್‍ನ ಒಡ್ಡೋಲಗ ಭರ್ಜರಿ ಸಾಥ್ ನೀಡುತ್ತಿದೆ. ಟ್ರೈಲರ್ ಮುಂತಾದ ಬಿಡುಗಡೆ ಪೂರ್ವ ಚಟುವಟಿಕೆಗಳ ಮೂಲಕ ಚರ್ಚೆಗೆ ಕಾರಣವಾಗೋ ಚಿತ್ರಗಳು ಗೆಲುವು ಕಂಡ ಅದೆಷ್ಟೋ ಉದಾಹರಣೆಗಳಿವೆ. ಈ ಫಾರ್ಮುಲಾ ಆಧರಿಸಿ ಹೇಳೋದಾದರೆ ಸಿಂಗ ಚಿತ್ರದ ಗೆಲುವು ನಿಚ್ಚಳವಾದಂತಿದೆ!

    ಅದೇನೇ ಹೈಪು ಸೃಷ್ಟಿಯಾದರೂ ಚಿತ್ರವೊಂದು ಗೆಲ್ಲೋದರಲ್ಲಿ ಗಟ್ಟಿ ಕಥೆಯದ್ದು ಸಿಂಹಪಾಲು. ಸಿಂಗ ಚಿತ್ರದ ಕಥೆಯೂ ಅಷ್ಟೇ ಅದ್ಭುತವಾಗಿದೆಯಂತೆ. ಸಿನಿಮಾಗಳ ಆಯ್ಕೆ ವಿಚಾರದಲ್ಲಿ ವಿಶಿಷ್ಟವಾದ ಟೇಸ್ಟ್ ಹೊಂದಿರುವವರು ಚಿರಂಜೀವಿ ಸರ್ಜಾ. ಅವರೇ ಈ ಕಥೆ ಕೇಳಿ ಆರಂಭದಲ್ಲಿಯೇ ಥ್ರಿಲ್ ಆಗಿದ್ದರಂತೆ. ಮಾಸ್ ಸೇರಿದಂತೆ ಎಲ್ಲ ಅಂಶಗಳಿಂದ ಮೈ ಕೈ ತುಂಬಿಕೊಂಡಿರೋ ಈ ಕಥೆಯ ಸೊಗಸು ಕಂಡೇ ವಿಶೇಷ ಆಸಕ್ತಿ ವಹಿಸಿ ಚಿರು ಈ ಚಿತ್ರವನ್ನು ಪೂರ್ಣಗೊಳಿಸಿಕೊಂಡಿದ್ದಾರೆ. ಸಿಂಗ ತಮ್ಮ ವೃತ್ತಿ ಬದುಕಿಗೆ ಹೊಸ ದಿಕ್ಕಾಗಲಿದೆ ಎಂಬ ಗಾಢ ವಿಶ್ವಾಸವೂ ಅವರಲ್ಲಿದೆ.

    ಇತ್ತೀಚೆಗೆ ಬಿಡುಗಡೆಯಾಗಿದ್ದ ಈ ಸಿನಿಮಾದ ಶ್ಯಾನೆ ಟಾಪಗೌಳೆ ಎಂಬ ಹಾಡೊಂದು ಭಾರೀ ಫೇಮಸ್ ಆಗಿ ಟ್ರೆಂಡ್ ಸೆಟ್ ಮಾಡಿದೆ. ಈ ಹಾಡಿನ ಅದ್ಧೂರಿತನ ಇಡೀ ಚಿತ್ರದಲ್ಲಿಯೂ ತುಂಬಿಕೊಂಡಿದೆಯಂತೆ. ನಿರ್ದೇಶಕರಾದ ವಿಜಯ್ ಕಿರಣ್ ಅಷ್ಟೊಂದು ಕಾಳಜಿಯಿಂದ, ಎಲ್ಲ ಪ್ರೇಕ್ಷಕ ವರ್ಗವನ್ನೂ ಸಂತುಷ್ಟಗೊಳಿಸುವ ಇರಾದೆಯಿಂದಲೇ ಸಿಂಗನನ್ನು ಶೃಂಗರಿಸಿದ್ದಾರೆ. ಯಶಸ್ವಿ ನಿರ್ಮಾಪಕ ಉದಯ್ ಕೆ ಮೆಹ್ತಾ ಅಂಥಾದ್ದೇ ಕಾಳಜಿಯಿಂದ ಪ್ರತಿ ಹೆಜ್ಜೆಯಲ್ಲಿಯೂ ಸಿಂಗನನ್ನು ಪೊರೆದಿದ್ದಾರೆ. ಇಂಥಾ ಪ್ರೀತಿಯಿಂದಲೇ ಪೊಗದಸ್ತಾಗಿ ಮೂಡಿ ಬಂದಿರೋ ಈ ಚಿತ್ರ ಇದೇ ಹತ್ತೊಂಬತ್ತರಂದು ನಿಮ್ಮ ಮುಂದೆ ಬರಲಿದೆ.

  • ಸಿಂಗ: ನಿರ್ಮಾಪಕ ಉದಯ್ ಮೆಹ್ತಾರ ಡೈಮಂಡ್‍ನಂಥಾ ಕನಸು!

    ಸಿಂಗ: ನಿರ್ಮಾಪಕ ಉದಯ್ ಮೆಹ್ತಾರ ಡೈಮಂಡ್‍ನಂಥಾ ಕನಸು!

    ಬೆಂಗಳೂರು: ಸಿನಿಮಾ ನಿರ್ಮಾಣವೆಂಬುದು ವ್ಯವಹಾರ. ಆದರೆ ನಿರ್ಮಾಪಕ ಅದನ್ನು ಬರೀ ಬ್ಯುಸಿನೆಸ್ ಅಂತಷ್ಟೇ ಪರಿಗಣಿಸಿದರೆ ಬಹುಶಃ ಅದ್ಭುತ ದೃಶ್ಯ ಕಾವ್ಯಗಳು ಹುಟ್ಟಲು ಸಾಧ್ಯವಿರುತ್ತಿರಲಿಲ್ಲ. ಯಾಕೆಂದರೆ, ಯಶಸ್ವಿ ಸಿನಿಮಾಗಳ ಹಿಂದೆ ಇಂಥಾ ವ್ಯಾವಹಾರಿಕ ಉದ್ದೇಶದಾಚೆಯ ಉತ್ಕಟ ಕಲಾ ಪ್ರೇಮವಿರುತ್ತದೆ. ನಿರ್ದೇಶಕರ ಕನಸಿಗೆ ಪ್ರತೀ ಹೆಜ್ಜೆಯಲ್ಲೂ ಸಾಥ್ ಕೊಡುತ್ತಾ, ಎಂಥಾ ಸವಾಲುಗಳು ಬಂದರೂ ಎದೆಕೊಡುತ್ತಾ ನಿರ್ಮಾಪಕ ಸಾಗಿ ಬಂದರೇನೇ ಸಿನಿಮಾವೊಂದು ಅಚ್ಚುಕಟ್ಟಾಗಿ ರೂಪುಗೊಳ್ಳುತ್ತೆ. ಹೀಗೆ ಸ್ವತಃ ದೊಡ್ಡ ಮಟ್ಟದ ವ್ಯಾಪಾರ ಉದ್ಯಮದ ವಾರಸುದಾರರಾಗಿದ್ದರೂ ಸಿನಿಮಾವನ್ನು ಆರಾಧಿಸುವ ಸ್ವಭಾವದ ಉದಯ್ ಮೆಹ್ತಾರ ಏಳನೇ ಕನಸು ‘ಸಿಂಗ’!

    ಚಿರಂಜೀವಿ ಸರ್ಜಾ ಅಭಿನಯದ ಸಿಂಗ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ಟ್ರೈಲರ್ ಮೂಲಕ ದೊಡ್ಡ ಮಟ್ಟದಲ್ಲಿಯೇ ಸಂಚಲನ ಸೃಷ್ಟಿಸಿರೋ ಈ ಚಿತ್ರವನ್ನು ಈ ಹಿಂದೆ ರಾಮ್ ಲೀಲಾ ಎಂಬ ಸಿನಿಮಾ ನಿರ್ದೇಶನ ಮಾಡಿದ್ದ ವಿಜಯ್ ಕಿರಣ್ ರೂಪಿಸಿದ್ದಾರೆ. ಯಾವುದೇ ಚಿತ್ರ ಬಿಡುಗಡೆ ಪೂರ್ವದಲ್ಲಿ ಈ ಥರದ ಟಾಕ್ ಕ್ರಿಯೇಟ್ ಮಾಡಿದರೆ ಗೆಲುವು ಗ್ಯಾರಂಟಿ. ಅಂಥಾದ್ದೊಂದು ಸಕಾರಾತ್ಮಕ ವಾತಾವರಣದೊಂದಿಗೆ ಥೇಟರಿನ ಹಾದಿಯಲ್ಲಿರೋ ಸಿಂಗನನ್ನು ಉದಯ್ ಮೆಹ್ತಾ ಅವರು ನಿರ್ಮಾಣ ಮಾಡಲು ಒಪ್ಪಿಕೊಂಡಿರೋದೇ ಕಥೆಯ ಕಾರಣದಿಂದ.

    ಅಷ್ಟಕ್ಕೂ ಎಲ್ಲ ದಿಕ್ಕಿನಿಂದಲೂ ಕಥೆ ಒಪ್ಪಿಗೆಯಾಗದೇ ಇದ್ದರೆ ಉದಯ್ ಮೆಹ್ತಾ ನಿರ್ಮಾಣಕ್ಕಿಳಿಯುವವರೇ ಅಲ್ಲ. ಅವರು ಎಂಥಾ ಟೇಸ್ಟು ಹೊಂದಿದ್ದಾರೆ, ಗುಣಮಟ್ಟವನ್ನು ಹೇಗೆಲ್ಲ ಬಯಸುತ್ತಾರೆಂಬುದಕ್ಕೆ ಅವರೇ ನಿರ್ಮಾಣ ಮಾಡಿರೋ ಆರು ಚಿತ್ರಗಳೇ ಸಾಕ್ಷಿಗಿವೆ. ವಿಜಯ್ ಕಿರಣ್ ಆರಂಭದಲ್ಲಿ ಈ ಕಥೆ ಹೇಳಿದಾಗ ಒಂದೇ ಗುಕ್ಕಿಗದು ಮೆಹ್ತಾರಿಗೆ ಹಿಡಿಸಿತ್ತಂತೆ.

     

    ಪಕ್ಕಾ ಕಮರ್ಶಿಯಲ್ ಶೈಲಿಯ ಈ ಕಥೆ ಎಲ್ಲ ಅಂಶಗಳನ್ನೂ ಒಳಗೊಂಡು, ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತಿರೋದರಿಂದಲೇ ಮೆಹ್ತಾ ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದರಂತೆ. ಇದೀಗ ಒಟ್ಟಾರೆಯಾಗಿ ಸಿಂಗ ಮೂಡಿ ಬಂದಿರೋ ರೀತಿಯ ಬಗ್ಗೆಯೂ ಅವರಲ್ಲೊಂದು ತೃಪ್ತಿಯಿದೆ.

    ಉದಯ್ ಮೆಹ್ತಾ ಮೂಲತಃ ಬೆಂಗಳೂರಿನವರೇ. ಆರಂಭ ಕಾಲದಿಂದಲೂ ಅವರಿಗೆ ಸಿನಿಮಾಗಳ ಮೇಲೆ ವಿಪರೀತ ಸೆಳೆತ. ಇಂಥಾ ಸಿನಿಮಾ ಒಲವನ್ನು ಕಾಪಾಡಿಕೊಂಡೇ ಮುಂದುವರೆದರೂ ಬದುಕಿನ ಅನಿವಾರ್ಯತೆ ಅವರನ್ನು ಡೈಮಂಡ್ ಮರ್ಚೆಂಟ್ ಆಗಿ ರೂಪಿಸಿತ್ತು. ಈ ಉದ್ಯಮದಲ್ಲಿ ಬಲು ಆಸ್ಥೆಯಿಂದ ತೊಡಗಿಸಿಕೊಂಡು ಯಶಸ್ವಿಯಾದ ಮೆಹ್ತಾ ಈಗ್ಗೆ ದಶಕಗಳ ಹಿಂದೆಯೇ ನಿರ್ಮಾಪಕರಾಗುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದರು. ಹೀಗೆ ಒಂದೊಳ್ಳೆ ಪ್ರಾಜೆಕ್ಟಿಗೆ ಹುಡುಕುತ್ತಿದ್ದಾಗ 2009ರಲ್ಲಿ ಲೂಸ್ ಮಾದ ಯೋಗಿ ಅಭಿನಯದ ರಾವಣ ಎಂಬ ಚಿತ್ರದ ಮೂಲಕ ಅದಕ್ಕೆ ಅವಕಾಶ ಒದಗಿ ಬಂದಿತ್ತು.

    ಆ ಚಿತ್ರ ಯಶ ಕಾಣುತ್ತಲೇ ನಿರ್ಮಾಪಕರಾಗಿ ಕಾಲೂರಿ ನಿಂತ ಉದಯ್ ಮೆಹ್ತಾ, ಕೃಷ್ಣನ್ ಲವ್ ಸ್ಟೋರಿ, ಕಿಚ್ಚ ಸುದೀಪ್ ಅಭಿನಯದ ಬಚ್ಚನ್, ನೀನಾಸಂ ಸತೀಶ್ ಅಭಿನಯದ ಲವ್ ಇನ್ ಮಂಡ್ಯ, ಶರಣ್ ಅಭಿನಯದ ರಾಜ ರಾಜೇಂದ್ರ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಸಿಂಗ ಅವರ ಏಳನೇ ಚಿತ್ರ. ಈ ಚಿತ್ರ ಬಿಡುಗಡೆಯ ಹಾದಿಯಲ್ಲಿರುವಾಗಲೇ ನೀನಾಸಂ ಸತೀಶ್ ಅಭಿನಯದ ಬ್ರಹ್ಮಚಾರಿ ಚಿತ್ರವನ್ನೂ ಮೆಹ್ತಾ ಆರಂಭಿಸಿದ್ದಾರೆ. ಅದಾಗಲೇ ಧೃವ ಸರ್ಜಾರ ಚಿತ್ರವೊಂದನ್ನು ನಿರ್ಮಾಣ ಮಾಡಲು ತಯಾರಿಯನ್ನೂ ಆರಂಭಿಸಿದ್ದಾರೆ.

    ಹೀಗೆ ಸಾಗಿ ಬಂದಿರುವ ಉದಯ್ ಮೆಹ್ತಾ ಈಗ ಕನ್ನಡದ ಸ್ಟಾರ್ ನಿರ್ಮಾಪಕರಾಗಿ ಹೊರ ಹೊಮ್ಮಿದ್ದಾರೆ. ಅವರೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆಂದರೆ ಗಾಂಧಿನಗರ ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಅದಕ್ಕೆ ಕಾರಣ ಕಥೆಯನ್ನು ಆರಿಸಿಕೊಳ್ಳೋದರಲ್ಲಿ ಅವರಿಗಿರುವ ಜಾಣ್ಮೆ. ಸಿಂಗ ಕಥೆಯನ್ನೂ ಕೂಡಾ ಅವರು ಅದೇ ಮಾನದಂಡಗಳನ್ನು ಪ್ರಯೋಗಿಸಿ ಆರಿಸಿಕೊಂಡಿದ್ದಾರೆ. ಈ ಸಿನಿಮಾ ದೊಡ್ಡ ಗೆಲುವು ಕಾಣೋದರೊಂದಿಗೆ ತಮ್ಮ ಸಿನಿಮಾ ಬದುಕಿನ ಮಹತ್ವದ ಚಿತ್ರವಾಗಿ ದಾಖಲಾಗುತ್ತದೆ ಎಂಬ ಭರವಸೆ ಉದಯ್ ಮೆಹ್ತಾ ಅವರಲ್ಲಿದೆ. ಈಗ ಪ್ರೇಕ್ಷಕರ ವಲಯದಲ್ಲಿ ಸಿಂಗ ಪಸರಿಸಿರೋ ಕ್ರೇಜ್ ಮೆಹ್ತಾರ ನಂಬಿಕೆಗೆ ಮತ್ತಷ್ಟು ಇಂಬು ಕೊಡುವಂತಿದೆ.