Tag: Singular

  • ಏಕವಚನದ ಮಾತು ಕಡಿಮೆ ಮಾಡಿಯೆಂದ ವಿಶ್ವನಾಥ್‍ಗೆ ಸಿದ್ದು ಕ್ಲಾಸ್

    ಏಕವಚನದ ಮಾತು ಕಡಿಮೆ ಮಾಡಿಯೆಂದ ವಿಶ್ವನಾಥ್‍ಗೆ ಸಿದ್ದು ಕ್ಲಾಸ್

    ಮೈಸೂರು: ಏಕವಚನದ ಮಾತು ಕಡಿಮೆ ಮಾಡಿ ಎಂದು ಹೇಳಿಕೆ ನೀಡಿದ್ದ ಎಂಎಲ್‍ಸಿ ಹೆಚ್ ವಿಶ್ವನಾಥ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

    ಇಂದು ಮೈಸೂರಿನಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ವಿಶ್ವನಾಥ್ ಎಷ್ಟು ಏಕವಚನದಲ್ಲಿ ಮಾತನಾಡಿದ್ದಾನೆ ಎಂದು ನಾನು ತೋರಿಸ್ಲಾ? ಕೆ.ಆರ್.ನಗರ ಶಾಸಕನ ಬಗ್ಗೆ ಎಷ್ಟು ಮಾತನಾಡಿದ್ದಾನೆ ತೋರಿಸಬೇಕಾ ಎಂದು ಮತ್ತೆ ಏಕವಚನದಲ್ಲಿ ವಿಶ್ವನಾಥ್‍ಗೆ ತಿರುಗೇಟು ನೀಡಿದರು.

    ನನ್ನದು ಹಳ್ಳಿ ಭಾಷೆ, ಹಾಗಾಗಿ ಅದು ಏಕವಚನ ಅನ್ನಿಸುತ್ತದೆ. ನಾನು ಉದ್ದೇಶವಾಗಿ ಏಕವಚನ ಬಳಸೋಲ್ಲ ಅದು ತಾನಾಗಿಯೇ ಬರೋದು. ನಾವು ದೇವರನ್ನೇ ಏಕವಚನದಲ್ಲಿ ಕರೆಯುತ್ತೇವೆ. ಮಹದೇಶ್ವರರು ಅಂತ ಕರೆಯುತ್ತಾರಾ? ಯಾವ ದೇವರನ್ನಾದರೂ ಬಹುವಚನದಲ್ಲಿ ಕರೆದಿರೋದು ನೋಡಿದ್ದೀರಾ? ವಿಶ್ವನಾಥ್‍ರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ವಾಗ್ದಾಳಿ ಮಾಡಿದರು.

    ಇದೇ ವೇಳೆ ನನ್ನ ನಾಯಕತ್ವ ಹೋದರೂ ಪರವಾಗಿಲ್ಲ ಸಿದ್ದರಾಮಯ್ಯ ಬೆಳೆಯಬೇಕೆಂದು ಕಾಂಗ್ರೆಸ್‍ಗೆ ಸೇರಿಸಿಕೊಂಡೆವು ಎಂಬ ವಿಶ್ವನಾಥ್ ಹೇಳಿಕೆ ವಿಚಾರವಾಗಿ ಮಾತನಾಡಿ, ನನಗೆ ಯಾರು ನಾಯಕತ್ವವನ್ನು ಬಿಟ್ಟು ಕೊಟ್ಟಿಲ್ಲ. ನಾನು ಕಾಂಗ್ರೆಸ್ ಸೇರಲು ರಾಜ್ಯದ ಯಾವ ಕಾಂಗ್ರೆಸ್ ನಾಯಕರು ಕಾರಣರಲ್ಲ. ಬೆಂಗಳೂರಿನ ನನ್ನ ಸ್ನೇಹಿತ ಪೀರನ್, ಅಹ್ಮದ್ ಪಟೇಲ್ ಜೊತೆ ಮಾತುಕತೆ ನಡೆಸಿ ನಂತರ ಸೋನಿಯಾ ಗಾಂಧಿ ಕಾಂಗ್ರೆಸ್ ಸೇರಿಸಿಕೊಂಡರು. ನಾನು ಸ್ಪಷ್ಟವಾಗಿ ಹೇಳುತ್ತೇನೆ ನಾನು ಕಾಂಗ್ರೆಸ್ ಸೇರಲು ರಾಜ್ಯದ ಯಾವ ನಾಯಕರು ಕಾರಣರಲ್ಲ ಎಂದರು.

  • ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಗೆ ರೇವಣ್ಣ ಏಕವಚನ ಪ್ರಯೋಗ

    ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಗೆ ರೇವಣ್ಣ ಏಕವಚನ ಪ್ರಯೋಗ

    – ಪತಿಯ ಬೆಂಬಲಕ್ಕೆ ಬಂದ ಪತ್ನಿ ಭವಾನಿ ರೇವಣ್ಣ

    ಹಾಸನ: ಸಾಮಾನ್ಯ ಸಭೆಯಲ್ಲಿ ತಮ್ಮ ವಿರುದ್ಧ ಮಾಜಿ ಸಚಿವ ರೇವಣ್ಣ ಏಕ ವಚನ ಪ್ರಯೋಗಿಸಿದ್ದನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ವಿರೋಧ ವ್ಯಕ್ತಪಡಿಸಿ ಆಕ್ರೋಶ ಹೊರಹಾಕಿದ ಘಟನೆ ಹಾಸನ ಜಿಪಂ ಸಭಾಂಗಣದಲ್ಲಿ ನಡೆದಿದೆ.

    ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾಜಿ ಸಚಿವ ರೇವಣ್ಣ 15ನೇ ಹಣಕಾಸಿಗೆ ಸಂಬಂಧಪಟ್ಟಂತೆ ಮಾತನಾಡುತ್ತಿದ್ದರು. ಈ ವೇಳೆ ಅಧ್ಯಕ್ಷೆ ಶ್ವೇತಾ ದೇವರಾಜ್ ತಮ್ಮ ಮೇಲೆ ಕೇಳಿಬರುತ್ತಿರುವ ಆರೋಪಗಳಿಗೆ ಸಮಜಾಯಿಷಿ ನೀಡಲು ಮುಂದಾದರು. ಇದರಿಂದ ಕೆರಳಿದ ರೇವಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕುರಿತು, “ಏಯ್ ನೋಡಮ್ಮ ನಾನು ನಿನ್ನನ್ನು ಮಾತನಾಡಿಸುತ್ತಿಲ್ಲ” ಎಂದು ಏಕವಚನ ಪ್ರಯೋಗಿಸಿದರು. ತಕ್ಷಣ ಅಧ್ಯಕ್ಷೆ ಶ್ವೇತಾ ದೇವರಾಜ್, ಮರ್ಯಾದೆ ಕೊಟ್ಟು ಮಾತನಾಡಿಸಿ ಎಂದು ರೇವಣ್ಣ ವಿರುದ್ಧ ತಿರುಗಿ ಬಿದ್ದರು.

    ಈ ವೇಳೆ ಮಧ್ಯೆ ಪ್ರವೇಶಿಸಿದ ಭವಾನಿ ರೇವಣ್ಣ ತಮ್ಮ ಪತಿ ರೇವಣ್ಣ ಪರವಾಗಿ ಮಾತನಾಡುತ್ತ, ನೀನು ಮರ್ಯಾದೆ ಕೊಟ್ಟಿದ್ದರಲ್ಲವೆ ಅವರು ಕೊಡೋದು ಎಂದು ಅಧ್ಯಕ್ಷೆ ವಿರುದ್ಧ ಮಾತನಾಡಿದರು. ಇದೆಲ್ಲವನ್ನು ನೋಡುತ್ತಾ ಕುಳಿತಿದ್ದ ಎಂಎಲ್‍ಸಿ ಗೋಪಾಲಸ್ವಾಮಿ ತಮ್ಮ ಪಕ್ಷದ ಶ್ವೇತಾ ದೇವರಾಜ್ ಪರವಾಗಿ ಮಾತನಾಡಲು ಮುಂದಾದರು. ತಕ್ಷಣ ರೇವಣ್ಣ ನೀವು ಸುಮ್ಮನಿರಿ ನಾನು ಹೇಳುತ್ತೇನೆ ಎಂದು ಎಂಎಲ್‍ಸಿ ಗೋಪಾಲಸ್ವಾಮಿಗೆ ಸೂಚಿಸಿದರು.

    ಇದಕ್ಕೆ ಒಪ್ಪದ ಗೋಪಾಲಸ್ವಾಮಿ, ಭವಾನಿ ರೇವಣ್ಣ ಕಡೆ ಕೈ ತೋರಿಸಿ ಅವರು ಮಾತನಾಡಬಹುದಾ ಎಂದು ಜೋರು ಧ್ವನಿಯಲ್ಲಿ ಪ್ರಶ್ನೆ ಮಾಡಿದರು. ಈ ವೇಳೆ ರೇವಣ್ಣ ತಮ್ಮ ಪತ್ನಿಯನ್ನು ಸಮಾಧಾನ ಮಾಡಿದ ಪ್ರಸಂಗವೂ ನಡೆಯಿತು.