Tag: Single

  • 5ನೇ ಎಸೆತದಲ್ಲಿ ಸ್ಯಾಮ್ಸನ್ 1 ರನ್ ಓಡಿದ್ದರೆ ರಾಜಸ್ಥಾನಕ್ಕೆ ಗೆಲುವು – ಬಿಸಿ ಬಿಸಿ ಚರ್ಚೆ

    5ನೇ ಎಸೆತದಲ್ಲಿ ಸ್ಯಾಮ್ಸನ್ 1 ರನ್ ಓಡಿದ್ದರೆ ರಾಜಸ್ಥಾನಕ್ಕೆ ಗೆಲುವು – ಬಿಸಿ ಬಿಸಿ ಚರ್ಚೆ

    – ಸ್ಯಾಮ್ಸನ್ ನಿರ್ಧಾರ ಸರಿಯೇ?
    – 16.25 ಕೋಟಿ ನೀಡಿ ಮೋರಿಸ್ ಅವರನ್ನು ಖರೀದಿಸಿದ್ದು ಯಾಕೆ?

    ಮುಂಬೈ: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ 20ನೇ ಓವರಿನ 5ನೇ ಎಸೆತಕ್ಕೆ ನಾಯಕ ಸಂಜು ಸ್ಯಾಮ್ಸನ್ ರನ್ ಓಡಿದ್ದರೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಗೆಲುವು ಸಿಗುತ್ತಿತ್ತಾ ಈ ಪ್ರಶ್ನೆ ಈಗ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಟಾಪಿಕ್ ಆಗಿ ಚರ್ಚೆ ಆಗುತ್ತಿದೆ.

    ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 6 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತ್ತು. ಕೊನೆಯ ಓವರಿನಲ್ಲಿ ರಾಜಸ್ಥಾನ ತಂಡದ ಗೆಲುವಿಗೆ 13 ರನ್‍ಗಳ ಅಗತ್ಯವಿತ್ತು. ಅರ್ಷ್‍ದೀಪ್ ಎಸೆದ ಮೊದಲ ಎಸೆತದಲ್ಲಿ ಯಾವುದೇ ರನ್ ಬಂದಿರಲಿಲ್ಲ. ಎರಡನೇ ಎಸೆತದಲ್ಲಿ ಸ್ಯಾಮ್ಸನ್ ಒಂದು ರನ್ ಓಡಿದರೆ ಮೂರನೇ ಎಸೆತದಲ್ಲಿ ಕ್ರೀಸ್ ಮೊರಿಸ್ ಒಂದು ರನ್ ಓಡಿದರು. 4ನೇ ಎಸೆತದಲ್ಲಿ ಸ್ಯಾಮ್ಸನ್ ಸಿಕ್ಸರ್ ಸಿಡಿಸಿದರು. ಕೊನೆಯ ಎರಡು ಎಸೆತದಲ್ಲಿ 5 ರನ್ ಬೇಕಿತ್ತು. 5ನೇ ಎಸೆತದಲ್ಲಿ ಯಾವುದೇ ರನ್ ಬಾರದ ಕಾರಣ 6ನೇ ಎಸೆತದಲ್ಲಿ 6 ರನ್ ಅಗತ್ಯವಾಗಿತ್ತು. ಸ್ಯಾಮ್ಸನ್ ಬಲವಾಗಿ ಹೊಡೆದರೂ ಬಾಲ್ ದೀಪಕ್ ಹೂಡಾ ಕೈ ಸೇರಿತು. ಪಂಜಾಬ್ ಕಿಂಗ್ಸ್ 4 ರನ್‍ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

    5ನೇ ಎಸೆತದಲ್ಲಿ ಏನಾಯ್ತು?
    ಸ್ಯಾಮ್ಸನ್ ಬಲವಾಗಿ ಹೊಡೆದ ಬಾಲ್ ವೈಡ್ ಲಾಂಗ್ ಆಫ್ ಕಡೆ ಹೋಗಿತ್ತು. ಬಾಲ್ ಹೋಗುತ್ತಿರುವುದನ್ನು ನೋಡಿದ ಕ್ರೀಸ್ ಮೊರಿಸ್ ಸ್ಟ್ರೈಕ್‍ನತ್ತ ಓಡಿದರು. ಆದರೆ ಸ್ಯಾಮ್ಸನ್ ರನ್ ಗಳಿಸುವ ಯಾವುದೇ ಉತ್ಸಾಹ ತೋರಿಸಲಿಲ್ಲ. ಹೀಗಾಗಿ ಅರ್ಧ ದೂರ ಸಾಗಿದ್ದ ಕ್ರೀಸ್ ಮೋರಿಸ್ ಮತ್ತೆ ನಾನ್ ಸ್ಟ್ರೈಕ್‍ನತ್ತ ಬಂದರು.

    ಚರ್ಚೆ ಏನು?
    ಒಂದು ವೇಳೆ ಸಿಂಗಲ್ ರನ್ ಓಡಿದ್ದರೂ ಒತ್ತಡ ಕಡಿಮೆ ಆಗುತ್ತಿತ್ತು. ಸಿಕ್ಸ್ ಹೊಡೆಯುವ ಅಗತ್ಯ ಇರಲಿಲ್ಲ. ಒಂದು ಬೌಂಡರಿ ಹೊಡೆದರೂ ರಾಜಸ್ಥಾನ ವಿನ್ ಆಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

    ಕ್ರೀಸ್ ಮೋರಿಸ್ ಅವರು 2021ರಲ್ಲಿ ನಡೆದ ಹರಾಜಿನಲ್ಲಿ ದುಬಾರಿ ಆಟಗಾರ. ಬರೋಬ್ಬರಿ 16.25 ಕೋಟಿ ರೂ. ನೀಡಿ ರಾಜಸ್ಥಾನ ರಾಯಲ್ಸ್ ಅವರನ್ನು ಖರೀಸಿದಿದೆ. ಮೋರಿಸ್ ಬೌಲರ್ ಮಾತ್ರ ಅಲ್ಲ. ಆಲ್‍ರೌಂಡರ್ ಆಟಗಾರ. ಹೀಗಿರುವಾಗ ಒಂದು ರನ್ ಓಡಿದ್ದರೂ ಗೆಲ್ಲುವ ಅವಕಾಶ ಹೆಚ್ಚಿತ್ತು. ಸ್ಯಾಮ್ಸನ್ ಅವರಿಗಿದ್ದ ಅತಿಯಾದ ವಿಶ್ವಾಸ ಅವರಿಗೆ ಮುಳುವಾಯಿತು ಎಂದು ಟೀಕಿಸುತ್ತಿದ್ದಾರೆ.

    ಕೊನೆಯ ಎಸೆತವನ್ನು ಎದುರಿಸಲು ಕ್ರೀಸ್ ಮೋರಿಸ್ ಅವರಿಗೆ ಸ್ಯಾಮ್ಸನ್ ಅವಕಾಶ ನೀಡಬೇಕಿತ್ತು ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಸ್ಯಾಮ್ಸನ್ ಅವರ ನಿರ್ಧಾರ ಸರಿಯಿತ್ತು ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.

    ಶತಕ ಸಿಡಿಸಿದ್ದ ಸ್ಯಾಮ್ಸನ್ ಅವರು 4ನೇ ಎಸೆತದಲ್ಲಿ ಸಿಕ್ಸ್ ಹೊಡೆದಿದ್ದರು. ಹೀಗಾಗಿ ಈ ಪಂದ್ಯವನ್ನು ಗೆಲ್ಲಿಸಲೇಬೇಕೆಂದು ಹಠ ಹಿಡಿದಿದ್ದರು. ಆದರೆ ಕೊನೆ ಎಸೆತವನ್ನು ಸರಿಯಾಗಿ ಜಡ್ಜ್ ಮಾಡದ ಕಾರಣ ಔಟಾಗಿದ್ದಾರೆ ಎಂದು ಹೇಳುತ್ತಿದ್ದಾರೆ.

    ಒಟ್ಟಿನಲ್ಲಿ ಕ್ರೀಸ್ ಮೋರಿಸ್ ಅವರಿಗೆ ಅವಕಾಶ ನೀಡಿದ ವಿಚಾರ ಟ್ರೆಂಡಿಂಗ್ ಟಾಪಿಕ್ ಆಗಿದೆ. ಸ್ಯಾಮ್ಸನ್ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಮೆಂಟ್ ಮಾಡಿ.