Tag: singer

  • ಖ್ಯಾತ ಗಾಯಕ ಮಿಕಾ ಸಿಂಗ್ ಮ್ಯಾನೇಜರ್ ಆತ್ಮಹತ್ಯೆ

    ಖ್ಯಾತ ಗಾಯಕ ಮಿಕಾ ಸಿಂಗ್ ಮ್ಯಾನೇಜರ್ ಆತ್ಮಹತ್ಯೆ

    ಮುಂಬೈ: ಬಾಲಿವುಡ್ ಖ್ಯಾತ ಗಾಯಕ ಮಿಕಾ ಸಿಂಗ್ ಅವರ ಮ್ಯಾನೇಜರ್ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಮುಂಬೈನ ಅಂಧೇರಿಯಲ್ಲಿ ಸೌಮ್ಯ ಖಾನ್ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಮಿಕಾ ಸಿಂಗ್ ತಮ್ಮ ಇನ್‍ಸ್ಟಾದಲ್ಲಿ ಸೌಮ್ಯ ಅವರ ಫೋಟೋ ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ.

    ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ಸೌಮ್ಯ ಆತ್ಮಹತ್ಯೆ ಮಾಡಿಕೊಂಡ ಕಾರಣ ತಿಳಿದು ಬಂದಿಲ್ಲ. ಅಲ್ಲದೆ ಆಕೆ ಯಾವುದೇ ಡೆತ್‍ನೋಟ್ ಕೂಡ ಬರೆದಿಲ್ಲ. ಹಾಗಾಗಿ ನಾವು ತನಿಖೆ ನಡೆಸುತ್ತಿದ್ದೇವೆ. ಸೌಮ್ಯ ಸಾವಿನ ಹಿಂದೆ ಯಾರೊದೊ ಕೈವಾಡ ಇರುವಂತೆ ಕಾಣುತ್ತಿಲ್ಲ. ಸದ್ಯ ಈ ಘಟನೆಯನ್ನು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

     

    View this post on Instagram

     

    A post shared by Zoheb Khan (@official_zohebkhan) on

    ವರ್ಸೋವಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ರಾಘವೇಂದ್ರ ಠಾಕೂರ್ ಮಾತನಾಡಿ, ಮಿಕಾ ಸಿಂಗ್ ಅವರ ನಾಲ್ಕು ಅಂತಸ್ತಿನ ಮನೆಯಲ್ಲಿ ಮೊದಲ ಮಹಡಿಯಲ್ಲಿ ಸ್ಟುಡಿಯೋದಲ್ಲಿ ಸೌಮ್ಯ ವಾಸಿಸುತ್ತಿದ್ದಳು. ಅಂತ್ಯ ಸಂಸ್ಕಾರಕ್ಕಾಗಿ ಸೌಮ್ಯಳ ಮೃತದೇಹವನ್ನು ಪಂಜಾಬ್‍ನಲ್ಲಿರುವ ಆಕೆಯ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಅಲ್ಲಿ ಸೌಮ್ಯಳ ಅಂತ್ಯ ಸಂಸ್ಕಾರ ನಡೆದಿದೆ. ಸೌಮ್ಯಳಿಗೆ ತಂದೆ-ತಾಯಿ ಇಲ್ಲ ಹಾಗೂ ಪಂಜಾಬ್‍ನಲ್ಲಿ ಆಕೆಯ ಅಜ್ಜಿ-ತಾತ ಇದ್ದಾರೆ ಎಂದು ಹೇಳಿದ್ದಾರೆ.

    ಸೌಮ್ಯ ಸಾವಿನಿಂದ ಮನನೊಂದ ಗಾಯಕ ಮಿಕಾ ಸಿಂಗ್ ತಮ್ಮ ಇನ್‍ಸ್ಟಾದಲ್ಲಿ ಆಕೆಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ನಮ್ಮ ಪ್ರೀತಿಯ ಸೌಮ್ಯ ನಮ್ಮನ್ನು ಬಿಟ್ಟು ಹೋಗಿದ್ದಾಳೆ ಎಂದು ಹೇಳಲು ತುಂಬಾ ದುಃಖವಾಗುತ್ತಿದೆ. ಆಕೆ ತುಂಬಾ ಚಿಕ್ಕ ವಯಸ್ಸಿನಲ್ಲೇ ಪ್ರೀತಿಯ ನೆನಪುಗಳನ್ನು ಬಿಟ್ಟು ಹೋಗಿದ್ದಾಳೆ. ದೇವರು ಆಕೆಯ ಆತ್ಮಕ್ಕೆ ಶಾಂತಿಯನ್ನು ನೀಡಲಿ ಎಂದು ಬರೆಯುವ ಮೂಲಕ ಸಂತಾಪ ಸೂಚಿಸಿದ್ದಾರೆ.

  • ಬೆಳಗ್ಗೆ 4 ಗಂಟೆಗೆ ಎಬ್ಬಿಸು ಎಂದು ಹೇಳಿದ್ದೆ, ಎದ್ದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿದ್ಲು: ಸುಶ್ಮಿತಾ ತಮ್ಮ

    ಬೆಳಗ್ಗೆ 4 ಗಂಟೆಗೆ ಎಬ್ಬಿಸು ಎಂದು ಹೇಳಿದ್ದೆ, ಎದ್ದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿದ್ಲು: ಸುಶ್ಮಿತಾ ತಮ್ಮ

    – ಸುಶ್ಮಿತಾ ಕಣ್ಣು ದಾನ ಮಾಡಲು ಮುಂದಾದ ಪೋಷಕರು

    ಬೆಂಗಳೂರು: ಬೆಳಗ್ಗೆ 4 ಗಂಟೆಗೆ ಎಬ್ಬಿಸು ಎಂದು ಹೇಳಿದ್ದೆ. ಆದರೆ ಬೆಳಗ್ಗೆ ಎದ್ದು ನೋಡಿದಾಗ ನನ್ನ ಅಕ್ಕ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ಗಾಯಕಿ ಸುಶ್ಮಿತಾ ಸಹೋದರ ಯಶವಂತ್ ಹೇಳಿದರು.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯಶವಂತ್, ನನ್ನ ಅಕ್ಕ ಏನೂ ಹೇಳಲಿಲ್ಲ. ನಾನು ದಿನ ಕೆಲಸಕ್ಕೆ ಹೋಗುತ್ತೇನೆ. ಬೆಳಗ್ಗೆ 4 ಗಂಟೆಗೆ ಎಬ್ಬಿಸು ಎಂದು ನಾನು ಸುಶ್ಮಿತಾಗೆ ಹೇಳಿ ಲೈಟ್ ಆಫ್ ಮಾಡಿ ಮಲಗಿದ್ದೆ. ನಾನು ಹಾಲ್‍ನಲ್ಲಿ ಮಲಗಿದ್ದೆ. ನನ್ನ ಅಕ್ಕ ರೂಮಿನಲ್ಲಿ ಮಲಗಿದ್ದಳು. ಬೆಳಗ್ಗೆ ನನ್ನ ಮೊಬೈಲಿನಲ್ಲೇ ಅಲಾರಾಂ ಆನ್ ಆಗಿತ್ತು. ಆಗ ನಾನು ಎದ್ದು ರೂಮಿಗೆ ಹೋಗಿ ನೋಡಿದಾಗ ಆಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದರು. ಇದನ್ನೂ ಓದಿ: ‘ಅಮ್ಮಾ, ನನ್ನ ಪತಿಯನ್ನು ಸುಮ್ಮನೆ ಬಿಡಬೇಡ’ – ಖ್ಯಾತ ಗಾಯಕಿ ಸುಶ್ಮಿತಾ ಆತ್ಮಹತ್ಯೆ

    ಮಧ್ಯರಾತ್ರಿ ಸುಮಾರು 1.30ಕ್ಕೆ ನನ್ನ ಅಕ್ಕ ಮೆಸೇಜ್ ಮಾಡಿದ್ದಾಳೆ. ಬೆಳಗ್ಗೆ ಎದ್ದು ನಾನು ರೂಮಿಗೆ ಹೋಗಿ ನೋಡಿದ್ದೆ ಆಗ ನನ್ನ ಅಕ್ಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ವಿಷಯ ನನ್ನ ಭಾವನಿಗೆ ತಿಳಿಸಿದ್ದೇವೆ. ನನ್ನ ತಮ್ಮ ಕೂಡ ಹೋಗಿ ಹೇಳಿದ್ದಾನೆ. ಆದರೆ ಅವರು ಎಲ್ಲಿ ಇದ್ದಾರೆ ಎಂಬುದು ಗೊತ್ತಿಲ್ಲ. ಈ ವಿಷಯ ತಿಳಿದ ತಕ್ಷಣ ನನ್ನ ಭಾವ ಓಡಿ ಹೋಗಿರಬಹುದು ಎಂದು ಯಶವಂತ್ ತಿಳಿಸಿದರು. ಇದನ್ನೂ ಓದಿ: ಹಣದ ಹಿಂದೆ ಬಿದ್ದಿದ್ದ, ಚಿನ್ನ ಮಾರಿ ಮನೆ ಖರೀದಿಸಿ ಹೊರ ಹಾಕ್ದ: ಗಾಯಕಿ ಸುಶ್ಮಿತಾ ತಾಯಿ

    ಇತ್ತ ಶರತ್ ಕುಟುಂಬಸ್ಥರು ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸಿದ್ದು, ಅವರನ್ನು ನೋಡುತ್ತಿದ್ದಂತೆ ಸುಶ್ಮಿತಾ ಕುಟುಂಬಸ್ಥರು ಮುಗಿ ಬಿದ್ದರು. ಶರತ್ ತಪ್ಪೇ ಇಲ್ಲ ಎಂದು ಆತನ ದೊಡ್ಡಮ್ಮ ಸಮರ್ಥನೆ ಮಾಡಿಕೊಳ್ಳಲು ಮುಂದಾದರು. ಇದನ್ನು ಕೇಳಿ ಕೋಪಗೊಂಡ ಸುಶ್ಮಿತಾ ಶರತ್ ದೊಡ್ಡಮ್ಮನ ಮೇಲೆ ಗಲಾಟೆಗೆ ಮುಂದಾದರು. ಈ ವೇಳೆ ಪ್ರಕರಣ ತಿಳಿಗೊಳಿಸಲು ಪೊಲೀಸರು ಹರಸಾಹಸಪಟ್ಟರು.

    ಇನ್ನೂ ಸುಶ್ಮಿತಾ ಸಾವಿನಲ್ಲೂ ಪೋಷಕರು ಕಣ್ಣು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.

  • ಹಣದ ಹಿಂದೆ ಬಿದ್ದಿದ್ದ, ಚಿನ್ನ ಮಾರಿ ಮನೆ ಖರೀದಿಸಿ ಹೊರ ಹಾಕ್ದ: ಗಾಯಕಿ ಸುಶ್ಮಿತಾ ತಾಯಿ

    ಹಣದ ಹಿಂದೆ ಬಿದ್ದಿದ್ದ, ಚಿನ್ನ ಮಾರಿ ಮನೆ ಖರೀದಿಸಿ ಹೊರ ಹಾಕ್ದ: ಗಾಯಕಿ ಸುಶ್ಮಿತಾ ತಾಯಿ

    ಬೆಂಗಳೂರು: ಖ್ಯಾತ ಗಾಯಕಿ ಸುಶ್ಮಿತಾ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತಾಯಿ ಪ್ರತಿಕ್ರಿಯಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುಶ್ಮಿತಾ ಅವರ ತಾಯಿ, ಎಲ್ಲರೂ ಸೇರಿ ನನ್ನ ಮಗಳನ್ನು ಪ್ಲಾನ್ ಮಾಡಿ ಕೊಲೆ ಮಾಡಿದ್ದಾರೆ. 150 ಗ್ರಾಂ ಚಿನ್ನ ಕೊಟ್ಟು ನಾನು ನನ್ನ ಮಗಳ ಮದುವೆ ಮಾಡಿಸಿದ್ದೆ. ಆದರೆ ಶರತ್ ಆ ಚಿನ್ನವನ್ನು ಮಾರಿ ತನ್ನ ಹೆಸರಿನಲ್ಲಿ ಮನೆಯನ್ನು ಖರೀದಿಸಿದ್ದಾನೆ. ಬಳಿಕ ನನ್ನ ಮಗಳಿಗೆ ಮನೆಯಿಂದ ಹೊರ ಹೋಗು ಎಂದು ಬಲವಂತ ಮಾಡುತ್ತಿದ್ದನು. ಶರತ್ ಹಣದ ಹಿಂದೆ ಬಿದ್ದಿದ್ದನು. ನನ್ನ ಮಗಳಿಗೆ ಪ್ರೀತಿ ನೀಡಿಲ್ಲ. ಆಕೆಗೆ ಏನೂ ಕೊಡಿಸಲಿಲ್ಲ. ನನ್ನ ಮಗಳು ಬೇರೆ ಬೇರೆ ಶಾಲೆಯಲ್ಲಿ ಮ್ಯೂಸಿಕ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದಳು. ಆಕೆಗೆ 45 ಸಾವಿರ ರೂ. ಸಂಬಳ ಬರುತ್ತಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ‘ಅಮ್ಮಾ, ನನ್ನ ಪತಿಯನ್ನು ಸುಮ್ಮನೆ ಬಿಡಬೇಡ’ – ಖ್ಯಾತ ಗಾಯಕಿ ಸುಶ್ಮಿತಾ ಆತ್ಮಹತ್ಯೆ

    ಶರತ್ ನನ್ನ ಮಗಳಿಗೆ ಯಾವುದೋ ಮಾತ್ರೆಗಳನ್ನು ನೀಡುತ್ತಿದ್ದನು. ಅಲ್ಲದೆ ಆಕೆಗೆ ನೀನು ಮಗುವಿನ ಆಸೆ ಇಟ್ಟುಕೊಳ್ಳಬೇಡ ಎಂದು ಹೇಳಿದ್ದನಂತೆ. ನನ್ನ ಮಗಳು ಸಾವನ್ನಪ್ಪಿದ್ದಾಳೆ ಎಂಬ ವಿಷಯ ಶರತ್ ಕುಟುಂಬಸ್ಥರಿಗೆ ತಿಳಿಸಿದರೆ, ಅವಳು ಬದುಕಿದ್ದಾಳಾ, ಸತ್ತಿದ್ದಾಳಾ ಎಂದು ಶರತ್ ದೊಡ್ಡಮ್ಮ ಕೇಳಿದ್ದಾರೆ. ನಾನು ಕೂಲಿ ಮಾಡಿ ನನ್ನ ಮಗಳನ್ನು ಸಾಕಿದ್ದೇನೆ. ನಾನು ನನ್ನ ಮಗಳನ್ನು ಪುರುಷನಂತೆ ಸಾಕಿದ್ದೇನೆ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಎಂದು ನಾನು ಎಂದುಕೊಂಡಿರಲಿಲ್ಲ. ನನ್ನ ಮಗಳಿಲ್ಲದ ಜೀವನ ನನಗೆ ಬೇಡ. ನಾನು ಸತ್ತು ಹೋಗುತ್ತೇನೆ ಎಂದು ಸುಶ್ಮಿತಾ ತಾಯಿ ಕಣ್ಣೀರು ಹಾಕಿದ್ದಾರೆ.

    ಶರತ್, ಆತನ ದೊಡ್ಡಮ್ಮ ಹಾಗೂ ಕುಟುಂಬಸ್ಥರು ಆಕೆಯನ್ನು ಮನೆಯಿಂದ ಹೊರ ಹಾಕಲು ಪ್ಲಾನ್ ಮಾಡಿದ್ದಾರೆ. ಆದರೆ ನನ್ನ ಮಗಳು ಮರ್ಯಾದೆಗೆ ಅಂಜಿ ಮನೆಯಿಂದ ಹೊರ ಹೋಗಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಶರತ್ ಹಾಗೂ ಆತನ ಕುಟುಂಬಸ್ಥರು ನನ್ನ ಮಗಳಿಗೆ ಕಿರುಕುಳ ನೀಡಿದ್ದಾರೆ. ಆದರೆ ಈಗ ನನ್ನ ತಾಯಿಯ ಮರ್ಯಾದೆ ಹೋಗುತ್ತೆ ಎಂದು ಸುಶ್ಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶರತ್ ನನ್ನ ಮಗಳ ಮೇಲೆ ಹಲ್ಲೆ ಮಾಡಿದ್ದಾನೆ. ನನ್ನ ಮಗಳು ಶರತ್ ಕಾಲು ಹಿಡಿದುಕೊಂಡು ನನ್ನನ್ನು ಬಿಡಬೇಡ ಎಂದು ಅಂಗಲಾಚಿದರೂ, ಆತನ ಮನಸ್ಸು ಕರಗಲಿಲ್ಲ ಎಂದು ಸುಶ್ಮಿತಾ ತಾಯಿ, ಶರತ್ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

  • ‘ಅಮ್ಮಾ, ನನ್ನ ಪತಿಯನ್ನು ಸುಮ್ಮನೆ ಬಿಡಬೇಡ’ – ಖ್ಯಾತ ಗಾಯಕಿ ಸುಶ್ಮಿತಾ ಆತ್ಮಹತ್ಯೆ

    ‘ಅಮ್ಮಾ, ನನ್ನ ಪತಿಯನ್ನು ಸುಮ್ಮನೆ ಬಿಡಬೇಡ’ – ಖ್ಯಾತ ಗಾಯಕಿ ಸುಶ್ಮಿತಾ ಆತ್ಮಹತ್ಯೆ

    – ನನ್ನನ್ನು ನಮ್ಮ ಊರಿನಲ್ಲಿ ಮಣ್ಣು ಮಾಡು ಅಥವಾ ಸುಡು
    – ಎಷ್ಟೇ ಬೇಡಿಕೊಂಡರೂ ಪತಿ ಮನಸ್ಸು ಕರಗಲಿಲ್ಲ

    ಬೆಂಗಳೂರು: ನನ್ನ ಪತಿಯನ್ನು ಸುಮ್ಮನೆ ಬಿಡಬೇಡ ಎಂದು ತಾಯಿಗೆ ವಾಟ್ಸಪ್ ಮೆಸೇಜ್ ಕಳುಹಿಸಿ ಎಂದು ಬೆಂಗಳೂರಿನಲ್ಲಿ ಖ್ಯಾತ ಗಾಯಕಿ ಸುಶ್ಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಸುಶ್ಮಿತಾ(26) ಆತ್ಮಹತ್ಯೆಗೆ ಶರಣಾದ ಗಾಯಕಿ. ಸುಶ್ಮಿತಾ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುವ ಶರತ್ ಕುಮಾರ್ ಅವರನ್ನು ಮದುವೆ ಆಗಿದ್ದರು. ಸುಶ್ಮಿತಾ ತನ್ನ ತಾಯಿ ಹಾಗೂ ತಮ್ಮನಿಗೆ ವಾಟ್ಸಪ್ ಮೂಲಕ ಸಂದೇಶ ರವಾನಿಸಿ ನಾಗರಬಾವಿಯಲ್ಲಿರುವ ತನ್ನ ತಾಯಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ವಾಟ್ಸಪ್‍ನಲ್ಲಿ ಕಳುಹಿಸಿದ್ದೇನು?
    ಅಮ್ಮ ನನ್ನನ್ನು ಕ್ಷಮಿಸು. ನಾನು ಮಾಡಿಕೊಂಡ ತಪ್ಪಿಗೆ ನಾನೇ ಶಿಕ್ಷೆ ಅನುಭವಿಸಿದ್ದೇನೆ. ನನ್ನನ್ನು ದಯವಿಟ್ಟು ಕ್ಷಮಿಸು. ನನ್ನ ಪತಿ ತನ್ನ ದೊಡ್ಡಮ್ಮನ ಮಾತು ಕೇಳಿ ನನಗೆ ಚಿತ್ರಹಿಂಸೆ ಕೊಡುತ್ತಿದ್ದರು. ನಾನು ಏನೇ ಮಾತನಾಡಿದ್ರೂ ನನಗೆ ಮನೆ ಬಿಟ್ಟು ಹೋಗು ಎಂದು ಹೇಳುತ್ತಿದ್ದರು. ನನಗೆ ಮಾನಸಿಕವಾಗಿ ತುಂಬಾ ಕಿರುಕುಳ ನೀಡುತ್ತಿದ್ದರು. ಅವರನ್ನು ಮಾತ್ರ ಸುಮ್ಮನೆ ಬಿಡಬೇಡ. ನನ್ನ ಸಾವಿಗೆ ಶರತ್, ವೈದೇಹಿ, ಗೀತಾ ನೇರವಾಗಿ ಕಾರಣ. ನಾನು ಎಷ್ಟು ಬೇಡಿಕೊಂಡರೂ ಕಾಲು ಹಿಡಿದರೂ ಅವನ ಮನಸ್ಸು ಕರಗಲಿಲ್ಲ.

    ಅಲ್ಲದೆ ಶರತ್ ಮನೆಯಲ್ಲಿ ನನಗೆ ಸಾಯಲು ಇಷ್ಟವಿರಲಿಲ್ಲ. ಮದುವೆ ಆದಾಗಿನಿಂದ ಇದೇ ರೀತಿ ಹಿಂಸೆ. ಅಮ್ಮ ಯಾರ ಹತ್ತಿರ ಈ ನೋವನ್ನು ಹೇಳಿಕೊಂಡಿರಲಿಲ್ಲ. ನನ್ನನ್ನು ನಮ್ಮ ಊರಿನಲ್ಲಿ ಮಣ್ಣು ಮಾಡು ಅಥವಾ ಸುಡು. ನನ್ನ ಕಾರ್ಯವನ್ನು ತಮ್ಮನೇ ಮಾಡಲಿ. ಅವರನ್ನ ಮಾತ್ರ ಸುಮ್ಮನೆ ಬಿಡಬೇಡ, ಇಲ್ಲದಿದ್ದರೆ ನನ್ನ ಆತ್ಮಕ್ಕೆ ಶಾಂತಿ ಸಿಗಲ್ಲ. ಅಮ್ಮ ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ನಿನಗೋಸ್ಕರ ನನ್ನ ತಮ್ಮ ಸಚಿನ್ ಇದ್ದಾನೆ. ಅವನನ್ನು ಚೆನ್ನಾಗಿ ನೋಡಿಕೊ. ಕೊನೆಯಾದಾಗಿ ತಮ್ಮ ಬಳಿ ಮತ್ತೊಮ್ಮೆ ಕ್ಷಮೆಯಾಚಿಸುತ್ತೇನೆ. ಅಮ್ಮನಿಗೆ ತೊರಿಸು ಮರಿಬೇಡ ಎಂದು ಸುಶ್ಮಿತಾ ವಾಟ್ಸಪ್‍ನಲ್ಲಿ ಕಳುಹಿಸಿದ್ದರು.

    ಎಂಬಿಎ ಪದವೀಧರೆ ಆಗಿರುವ ಸುಶ್ಮಿತಾ ‘ಹಾಲು-ತುಪ್ಪ’, ‘ಶ್ರೀಸಾಮಾನ್ಯ’ ಸೇರಿ ಹಲವು ಸಿನಿಮಾಗಳಲ್ಲಿ ಹಾಡಿದ್ದಾರೆ. ಸದ್ಯ ಈ ಬಗ್ಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗಾಯಕಿ ಮೇಲೆ ಹಣದ ಸುರಿಮಳೆ – ವಿಡಿಯೋ ನೋಡಿ

    ಗಾಯಕಿ ಮೇಲೆ ಹಣದ ಸುರಿಮಳೆ – ವಿಡಿಯೋ ನೋಡಿ

    – ಬಟ್ಟೆಯಲ್ಲಿ ತುಂಬ್ಕೊಂಡು ಬಂದು ಸುರಿದ್ರು

    ಗಾಂಧಿನಗರ: ಯಾವುದಾದರೂ ಕಾರ್ಯಕ್ರಮದಲ್ಲಿ ಗಾಯಕರು ತುಂಬಾ ಚೆನ್ನಾಗಿ ಹಾಡು ಹೇಳಿದರೆ, ಪ್ರೇಕ್ಷಕರು ತಮ್ಮ ಕೈಲಾದಷ್ಟು ಹಣವನ್ನು ನೀಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆದರೆ ಗುಜರಾತಿನಲ್ಲಿ ಗಾಯಕಿಯ ಮೇಲೆ ಹಣದ ಸುರಿಮಳೆಯನ್ನೇ ಸುರಿಸಿದ್ದಾರೆ.

    ಹೌದು..ಗುಜರಾತ್‍ನ ನವಸರಿಯಲ್ಲಿ ಜಾನಪದ ಗಾಯಕಿಯ ಮೇಲೆ ಜನರು ಹಣದ ಸುರಿಮಳೆಯನ್ನೇ ಸುರಿಸಿದ್ದಾರೆ. ಖ್ಯಾತ ಗುಜರಾತಿ ಜಾನಪದ ಗಾಯಕಿ ಗೀತಾ ರಬಾರಿ ಅವರ ಮೇಲೆ ಜನರು ಅಪಾರ ಪ್ರಮಾಣದ ಹಣವನ್ನು ಸುರಿದಿದ್ದಾರೆ.

    ಗೀತಾ ರಬಾರಿ ಕಾರ್ಯಕ್ರಮಕ್ಕೆ ಹೋಗಿದ್ದರು. ಅಲ್ಲಿ ಜಾನಪದ ಹಾಡನ್ನು ಹಾಡುವ ಮೂಲಕ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಆದರೆ ಪ್ರೇಕ್ಷಕರು ಅವರು ಹಾಡು ಹೇಳುವಾಗಲೇ ವೇದಿಕೆಯ ಮೇಲೆ ಹೋಗಿ ನೋಟುಗಳನ್ನು ಅವರ ಮೇಲೆ ಸುರಿದಿದ್ದಾರೆ.

    ಒಬ್ಬರು ನೋಟಿನ ಕಂತೆಯನ್ನೇ ಅವರಿಗೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಕೆಲವರು ಒಂದು ಬಟ್ಟೆಯಲ್ಲಿ ಹಣವನ್ನು ತುಂಬಿಕೊಂಡು ಬಂದು ಅದನ್ನು ಗೀತಾ ಅವರ ಮೇಲೆ ಸುರಿದಿದ್ದಾರೆ. ಇದನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

  • 81ನೇ ವಸಂತಕ್ಕೆ ಕಾಲಿಟ್ಟ ಗಾನಗಂಧರ್ವ- ಮೂಕಾಂಬಿಕಾ ಸನ್ನಿಧಿಯಲ್ಲಿ ಜೇಸುದಾಸ್ ಹುಟ್ಟುಹಬ್ಬ

    81ನೇ ವಸಂತಕ್ಕೆ ಕಾಲಿಟ್ಟ ಗಾನಗಂಧರ್ವ- ಮೂಕಾಂಬಿಕಾ ಸನ್ನಿಧಿಯಲ್ಲಿ ಜೇಸುದಾಸ್ ಹುಟ್ಟುಹಬ್ಬ

    ಉಡುಪಿ: ಗಾನ ಗಂಧರ್ವ, ಪದ್ಮಭೂಷಣ ಡಾ.ಜೇಸುದಾಸ್ ಅವರು ತಮ್ಮ ಹುಟ್ಟುಹಬ್ಬವನ್ನು ಉಡುಪಿಯಲ್ಲಿ ಆಚರಿಸಿಕೊಂಡರು. ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ದೇವಿಗೆ ವರ್ಷದ ಹರಕೆ ಸಲ್ಲಿಸಿ 81ನೇ ವರ್ಷಕ್ಕೆ ಪದಾರ್ಪಣೆ ಮಾಡಿದರು. ಈ ಬಾರಿ ಕುಟುಂಬದ ಎಲ್ಲಾ ಸದಸ್ಯರನ್ನು ಕರೆತಂದು ದೇವರ ಪೂಜೆ ಹೋಮದಲ್ಲಿ ಸಂಗೀತ ಮಾಂತ್ರಿಕ ಭಾಗಿಯಾದರು.

    ಜೇಸುದಾಸ್ ಉಡುಪಿಯ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ 80ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ದೇವಸ್ಥಾನಕ್ಕೆ ಆಗಮಿಸಿದ ಅವರು, ಮೊದಲು ಮೂಕಾಂಬಿಕೆಗೆ ಪೂಜೆ ಸಲ್ಲಿಸಿದರು. ನಂತರ ಯಜ್ಞಶಾಲೆಯಲ್ಲಿ ಚಂಡಿಕಾಹೋಮ ನೆರವೇರಿಸಿದರು.

    ಜೇಸುದಾಸ್ ಕೊಲ್ಲೂರಿನಲ್ಲಿ ಕಳೆದ 30 ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ. ತಮಗೆ ಮಕ್ಕಳಾಗದ ಸಂಕಟವನ್ನು ಮೂಕಾಂಬಿಕೆಯ ಸನ್ನಿಧಿಯಲ್ಲಿ ಹೇಳಿಕೊಂಡಿದ್ದರು. ನಂತರ ಜೇಸುದಾಸ್ ಅವರಿಗೆ ಮಕ್ಕಳಾದವು. ಹೀಗಾಗಿ ಅವರು ಪ್ರತಿ ವರ್ಷ ಕೊಲ್ಲೂರಿಗೆ ಬಂದು ದೇವರ ಸೇವೆಯೊಂದಿಗೆ ಸಂಗೀತ ಸೇವೆ ನೀಡುತ್ತಾ ಬಂದಿದ್ದಾರೆ. ಸಂಗೀತ ಮಾಂತ್ರಿಕ ಬರುವ ಹಿನ್ನೆಲೆಯಲ್ಲಿ ಭಕ್ತರ, ಸಂಗೀತ ಪ್ರೇಮಿಗಳ ಸಂಖ್ಯೆಯೂ ಕೊಲ್ಲೂರಿನಲ್ಲಿ ಜಾಸ್ತಿಯಾಗಿತ್ತು.

    ದೇವಸ್ಥಾನದ ಪ್ರಾಂಗಣ ಸಂಗೀತ ರಸಿಕರಿಂದ ತುಂಬಿಕೊಂಡಿತ್ತು. ಪ್ರತಿ ವರ್ಷ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಜೇಸುದಾಸ್ ಅಭಿಮಾನಿಗಳು ಸಂಗೀತ ಕಾರ್ಯಕ್ರಮ ಏರ್ಪಡಿಸುತ್ತಾರೆ. ದೇಶಾದ್ಯಂತ ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಜೇಸುದಾಸ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು. ಪ್ರತಿ ವರ್ಷ ಸಂಗೀತ ಸೇವೆ ಸಲ್ಲಿಸುತ್ತಿದ್ದ ಜೇಸುದಾಸ್ ಅವರು ಅನಾರೋಗ್ಯದ ಕಾರಣ ದೇವಿಯ ಸನ್ನಿಧಾನದಲ್ಲಿ ಹಾಡಲಿಲ್ಲ. ಎಂದಿನಂತೆ ದೇವಿಗೆ ಪ್ರಾರ್ಥನೆ ಮತ್ತು ಚಂಡಿಕಾಹೋಮ ಸಲ್ಲಿಸಿದರು.

    ಗೋವಿಂದ ಅಡಿಗ ಮತ್ತು ಜಯರಾಮ ಮಾತನಾಡಿ, ಜೇಸುದಾಸ್ ಮೂಕಾಂಬಿಕಾ ದೇವಿಯ ಪರಮ ಭಕ್ತ. ಎಷ್ಟೇ ಒತ್ತಡ ಇದ್ದರೂ ಅವರ ಹುಟ್ಟುಹಬ್ಬದ ದಿನ ಕೊಲ್ಲೂರಿಗೆ ಬಂದೇ ಬರುತ್ತಾರೆ. ಅವರ ಲವಲವಿಕೆ, ಈ ವಯಸ್ಸಿಗೂ ಅವರ ಸ್ವರ ಮಾಧುರ್ಯ ದೇವರ ಸಿದ್ಧಿಯಿಂದ ಸಾಧ್ಯವಾಗಿದೆ ಎಂದು ಹೇಳಿದರು.

  • ವಿಜಯ್ ಪ್ರಕಾಶ್ ಸನ್ಮಾನ ಮಾಡೋ ವಿಚಾರಕ್ಕೆ ಸಣ್ಣಪುಟ್ಟ ತಪ್ಪಾಗಿದೆ: ಶಾಸಕ ಮುನವಳ್ಳಿ

    ವಿಜಯ್ ಪ್ರಕಾಶ್ ಸನ್ಮಾನ ಮಾಡೋ ವಿಚಾರಕ್ಕೆ ಸಣ್ಣಪುಟ್ಟ ತಪ್ಪಾಗಿದೆ: ಶಾಸಕ ಮುನವಳ್ಳಿ

    ಕೊಪ್ಪಳ: ವಿಜಯ್ ಪ್ರಕಾಶ್ ಅವರಿಗೆ ಸನ್ಮಾನ ಮಾಡುವ ವಿಚಾರಕ್ಕೆ ಡಿಸಿ ಜೊತೆಗಿನ ಮುನಿಸಿಗೆ ಶಾಸಕ ಪರಣ್ಣ ಮುನವಳ್ಳಿ ತೆರೆ ಎಳೆದಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿಗಳು ಆಕಸ್ಮಿಕವಾಗಿ ಅವಸರದಲ್ಲಿ ಗಾಯಕ ವಿಜಯ ಪ್ರಕಾಶ್ ಅವರಿಗೆ ಸನ್ಮಾನ ಮಾಡಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಅವಸರದಲ್ಲಿ ವಿಜಯ್ ಅವರಿಗೆ ಸನ್ಮಾನ ಮಾಡಿದ್ದಾಗಿ ಡಿಸಿ ಹೇಳಿಕೊಂಡಿದ್ದಾರೆ. ನಮ್ಮನ್ನು ಕಡೆಗಣಿಸಿ ಡಿಸಿ ಸನ್ಮಾನ ಮಾಡಿದ್ದಕ್ಕೆ ನಮ್ಮ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದು ನಿಜ. ಯಾವುದೇ ಕಾರ್ಯಕ್ರಮದಲ್ಲಾಗಲಿ ಮೊದಲು ಜನಪ್ರತಿನಿಧಿಗಳು, ನಂತರ ಅಧಿಕಾರಿಗಳು ಇರುತ್ತಾರೆ. ಮೊದಲು ಜನಪ್ರತಿನಿಧಿಗಳಿಗೆ ಪ್ರಾತಿನಿಧ್ಯ ನೀಡಬೇಕು ಎಂದರು. ಇದನ್ನೂ ಓದಿ: ಆನೆಗೊಂದಿ ಉತ್ಸವದಲ್ಲಿ ಗಾಯಕ ವಿಜಯ್ ಪ್ರಕಾಶ್‍ಗೆ ಅವಮಾನ 

    ಇದು ಡಿಸಿ ವರ್ಸಸ್ ಪರಣ್ಣ ಮುನವಳ್ಳಿ ಉತ್ಸವ ಅಲ್ಲ, ಇದು ಪ್ರತಿಯೊಬ್ಬರ ಉತ್ಸವ. ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಬರುವುದು ಸಹಜ. ಹೀಗಾಗಿ ಇದನ್ನು ನಾವು ಸರಿಪಡಿಸಿಕೊಂಡು ಹೋಗಬೇಕು ಎಂದು ಹೇಳಿದರು.

    ಗುರುವಾರ ರಾತ್ರಿ ಆನೆಗೊಂದಿ ಉತ್ಸವದಲ್ಲಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರಿಗೆ ಸನ್ಮಾನ ಮಾಡುವ ವಿಚಾರದಲ್ಲಿ ಶಾಸಕ ಪರಣ್ಣ ಮುನವಳ್ಳಿ ಜಿಲ್ಲಾಧಿಕಾರಿ ಸುನೀಲ್ ಕುಮಾರ್ ನಡುವೆ ಮನಸ್ತಾಪ ಉಂಟಾಗಿತ್ತು. ಗಾಯಕ ವಿಜಯ್ ಪ್ರಕಾಶ್ ಅವರಿಗೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಒಬ್ಬರೇ ಸನ್ಮಾನ ಮಾಡಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಪರಣ್ಣ ಮುನವಳ್ಳಿ ಅವರನ್ನು ಸ್ವತಃ ವಿಜಯ್ ಪ್ರಕಾಶ್ ವೇದಿಕೆಯಿಂದ ಕೆಳಗೆ ಬಂದು ಸಮಾಧಾನ ಮಾಡಿ ವೇದಿಕೆಗೆ ಕರೆದುಕೊಂಡು ಹೋಗಿದ್ದರು. ಬಳಿಕ ಪರಣ್ಣ ಮುನವಳ್ಳಿ ವಿಜಯ್ ಅವರನ್ನು ಸನ್ಮಾನ ಮಾಡಿದ್ದರು. ಇದರಿಂದಾಗಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ಜಿಲ್ಲಾಧಿಕಾರಿ ಪಿ ಸುನೀಲ ಕುಮಾರ್ ನಡುವೆ ಮನಸ್ತಾಪ ಉಂಟಾಗಿತ್ತು.

  • ಆನೆಗೊಂದಿ ಉತ್ಸವದಲ್ಲಿ ಗಾಯಕ ವಿಜಯ್ ಪ್ರಕಾಶ್‍ಗೆ ಅವಮಾನ

    ಆನೆಗೊಂದಿ ಉತ್ಸವದಲ್ಲಿ ಗಾಯಕ ವಿಜಯ್ ಪ್ರಕಾಶ್‍ಗೆ ಅವಮಾನ

    ಕೊಪ್ಪಳ: ಗಾಯಕ ವಿಜಯ್ ಪ್ರಕಾಶ್ ಅವರಿಗೆ ಸನ್ಮಾನ ಮಾಡುವ ವಿಷಯದಲ್ಲಿ ಶಾಸಕ ಮತ್ತು ಜಿಲ್ಲಾಧಿಕಾರಿ ನಡುವೆ ಕಿರಿಕ್ ನಡೆದಿದೆ.

    ಗಂಗಾವತಿ ತಾಲೂಕಿನ ಆನೆಗೊಂದಿ ಉತ್ಸವದಲ್ಲಿ ಶಾಸಕ ಮತ್ತು ಡಿಸಿ ನಡುವೆ ರಂಪಾಟ ನಡೆದಿದ್ದು, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮತ್ತು ಡಿಸಿ ಸುನೀಲ್ ಕುಮಾರ್ ನಡುವೆ ಸನ್ಮಾನ ಮಾಡುವ ವಿಚಾರದಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ.

    ಶ್ರೀ ಕೃಷ್ಣದೇವರಾಯ ಮುಖ್ಯ ವೇದಿಕೆಯಲ್ಲಿ ಶಾಸಕ ಪರಣ್ಣ ಮುನವಳ್ಳಿ ಬಿಟ್ಟು ಗಾಯಕ ವಿಜಯ್ ಪ್ರಕಾಶ್ ಅವರಿಗೆ ಡಿಸಿ ಸುನೀಲ್‍ಕುಮಾರ್ ಸನ್ಮಾನ ಮಾಡಿದರು. ಸನ್ಮಾನ ಮಾಡಿದ ನಂತರ ಡಿಸಿ ವೇದಿಕೆಯಿಂದ ಹೊರಟು ಹೋದರು. ಡಿಸಿ ವರ್ತನೆಗೆ ಆಕ್ರೋಶಗೊಂಡ ಶಾಸಕ ಪರಣ್ಣ ಅಧಿಕಾರಿಗಳ ಎದುರು ಆಕ್ರೋಶ ವ್ಯಕ್ತಪಡಿಸಿದರು.

    ಗಾಯಕ ವಿಜಯ ಪ್ರಕಾಶ್ ವೇದಿಕೆ ಮೇಲೆ ಹಾಡುಗಳನ್ನು ಹಾಡುತ್ತಾ ಜನರನ್ನು ರಂಜಿಸುತ್ತಿದ್ದರು. ಆದರೆ ಶಾಸಕ ವೇದಿಕೆ ಮುಂದೆಯೇ ಅಸಮಾಧಾನ ವ್ಯಕ್ತಪಡಿಸಲು ಮುಂದಾದರು. ಸ್ಥಳದಲ್ಲಿ ಇದ್ದ ಎಸ್‍ಪಿ ಜಿ. ಸಂಗೀತಾ, ಎಸಿ ಸಿಡಿ ಗೀತಾ ಅವರು ಶಾಸಕರನ್ನು ಸಮಾಧಾನ ಪಡಿಸಲು ಯತ್ನ ಮಾಡಿದರು. ವೇದಿಕೆ ಮೇಲೆ ಬಂದು ಇನ್ನೊಮ್ಮೆ ಸನ್ಮಾನ ಮಾಡುವಂತೆ ಶಾಸಕರಿಗೆ ಅಧಿಕಾರಿಗಳು ಮನವಿ ಮಾಡಿದರು.

    ಅಧಿಕಾರಿಗಳ ಮಾತಿಗೆ ಸೊಪ್ಪು ಹಾಕದೆ ವೇದಿಕೆ ಕೆಳಗಡೆ ಕುಳಿತ ಪರಣ್ಣ ಮುನವಳ್ಳಿ ರಂಪಾಟ ಮಾಡುತ್ತಿದ್ದರು. ಶಾಸಕರ ರಂಪಾಟಕ್ಕೆ ಬೇಸತ್ತು ವಿಜಯ್ ಪ್ರಕಾಶ್ ಕಾರ್ಯಕ್ರಮ ನಿಲ್ಲಿಸಿದರು. ಕೊನೆಗೆ ವೇದಿಕೆಯಿಂದ ಕೆಳಗಡೆ ಇಳಿದು ಬಂದರು. ವೇದಿಕೆ ಮೇಲೆ ಬರುವಂತೆ ಪರಣ್ಣ ಅವರಿಗೆ ಕೈ ಮುಗಿದು ಮನವಿ ಮಾಡಿದರು. ಕೊನೆಗೆ ವೇದಿಕೆ ಮೇಲೆ ಬಂದು ಬೆಂಬಲಿಗರೊಂದಿಗೆ ವಿಜಯ್ ಪ್ರಕಾಶ ಅವರಿಗೆ ಮತ್ತೊಮ್ಮೆ ಶಾಸಕ ಪರಣ್ಣ ಮುನವಳ್ಳಿ ಸನ್ಮಾನ ಮಾಡಿದರು.

  • ಅಯ್ಯಪ್ಪನ ದರ್ಶನಕ್ಕೆ ಮಹಿಳೆಯರು ಹೋಗ್ಬಾರ್ದು: ಯೇಸುದಾಸ್

    ಅಯ್ಯಪ್ಪನ ದರ್ಶನಕ್ಕೆ ಮಹಿಳೆಯರು ಹೋಗ್ಬಾರ್ದು: ಯೇಸುದಾಸ್

    – ಅಯ್ಯಪ್ಪ ಅಲ್ಲ, ಭಕ್ತರ ಮನಸ್ಸು ವಿಚಲಿತವಾಗುತ್ತೆ

    ಕೊಚ್ಚಿ: ಶಬರಿಮಲೆ ಅಯ್ಯಪ್ಪನ ಸನ್ನಿಧಾನಕ್ಕೆ ಮಹಿಳೆಯರು ಹೋಗ ಬೇಕಾ? ಬೇಡ್ವಾ? ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಹೀಗಿರುವಾಗ, ಮಣಿಕಂಠನ ದರ್ಶನಕ್ಕೆ ಮಹಿಳಾ ಭಕ್ತರು ಹೋಗಬಾರದು ಎಂದು ಖ್ಯಾತ ಗಾಯಕ ಕೆಜೆ ಯೇಸುದಾಸ್ ಹೇಳಿದ್ದಾರೆ.

    ಸ್ವತಃ ಅಯ್ಯಪ್ಪನ ಭಕ್ತರಾಗಿರುವ ಯೇಸುದಾಸ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಮಹಿಳೆಯರು ಅಯ್ಯಪ್ಪನ ದರ್ಶನಕ್ಕೆ ಹೋಗಬಾರದು ಎಂದಿದ್ದಾರೆ. ಅಲ್ಲದೆ ಇದಕ್ಕೆ ಕಾರಣವನ್ನೂ ನೀಡಿದ್ದಾರೆ. ಮಹಿಳೆಯರು ದೇವಾಲಯಕ್ಕೆ ಆಗಮಿಸುವುದರಿಂದ ಭಕ್ತರ ಮನಸ್ಸು ವಿಚಲಿತವಾಗಲಿದೆ. ಅಯ್ಯಪ್ಪನ ಸನ್ನಿಧಾನಕ್ಕೆ ಸುಂದರ ಯುವತಿಯೊಬ್ಬಳು ಆಧುನಿಕ ಯುಗದ ಉಡುಗೆ ಧರಿಸಿ ಹೋದರೆ ಅಯ್ಯಪ್ಪ ಕಣ್ತೆರೆದು ನೋಡಲ್ಲ. ಆದರೆ, ಅಯ್ಯಪ್ಪನ ಭಕ್ತರು ಆಕೆಯನ್ನು ನೋಡುತ್ತಾರೆ. ಇದು ಸರಿಯಲ್ಲ ಎಂದಿದ್ದಾರೆ.

    ದೇಗುಲಕ್ಕೆ ಆಗಮಿಸುವ ಭಕ್ತರ ಉದ್ದೇಶವೇ ಬದಲಾಗಲಿದೆ. ಹೀಗಾಗಿ, ಮಹಿಳೆಯರು ಅಯ್ಯಪ್ಪನ ದೇಗುಲಕ್ಕೆ ಹೋಗಬಾರದು. ಅಯ್ಯಪ್ಪ ಭಕ್ತರನ್ನು ಪ್ರಚೋದಿಸಬೇಡಿ ಎಂಬುದಷ್ಟೇ ನನ್ನ ಮನವಿ ಎಂದು ಹೇಳಿದರು. ಅಂದಹಾಗೇ ಶಬರಿಮಲೆಯಲ್ಲಿ ನಿತ್ಯ ದೇಗುಲದ ಬಾಗಿಲು ಮುಚ್ಚುವ ಸಂದರ್ಭದಲ್ಲಿ ಯೇಸುದಾಸ್ ಹಾಡಿರುವ ‘ಹರಿವರಾಸನಂ’ ಹಾಡು ಧ್ವನಿವರ್ಧಕದಲ್ಲಿ ಕೇಳಿಸುತ್ತದೆ.

  • ಸಹೋದರಿ ಬರ್ತ್ ಡೇ- ಸಂಪಾದಿಸಿದ ಹಣದಿಂದ್ಲೇ ಮಕ್ಕಳಿಗೆ ಅರ್ಜುನ್ ಇಟಗಿ ಸಹಾಯ ಹಸ್ತ

    ಸಹೋದರಿ ಬರ್ತ್ ಡೇ- ಸಂಪಾದಿಸಿದ ಹಣದಿಂದ್ಲೇ ಮಕ್ಕಳಿಗೆ ಅರ್ಜುನ್ ಇಟಗಿ ಸಹಾಯ ಹಸ್ತ

    ಕೊಪ್ಪಳ: ಖಾಸಗಿ ವಾಹಿನಿಯ ಕನ್ನಡ ಕೋಗಿಲೆ ರಿಯಾಲಿಟಿ ಶೋ ಮೂಲಕ ಸಣ್ಣ ವಯಸ್ಸಿನಲ್ಲೇ ದೊಡ್ಡ ಯಶಸ್ಸು ಗಳಿಸಿಕೊಂಡ ಅರ್ಜುನ್ ಇಟಗಿ, ಸಂತ್ರಸ್ತರಿಗೆ ಸಹಾಯ ಮಾಡುವ ಮೂಲಕ ಈಗ ಮತ್ತೆ ಸುದ್ದಿಯಾಗಿದ್ದಾನೆ. ಸುಮಾರು ಒಂದೂವರೆ ಸಾವಿರ ವಿದ್ಯಾರ್ಥಿಗಳಿಗೆ ಅರ್ಜುನ್ ಸಹಾಯಹಸ್ತ ಚಾಚಿದ್ದಾನೆ.

    ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅರ್ಜುನ್ ಇಟಗಿ ತನ್ನದೇ ಸ್ಟೈಲ್‍ನಲ್ಲಿ ಹಾಡುತ್ತಾ, ಹಾಸ್ಯನಟರ ಧ್ವನಿಗಳನ್ನು ಮಿಮಿಕ್ರಿ ಮಾಡುತ್ತಾ ರಂಜಿಸಿದ್ದಾನೆ. ಈತನ ತುಂಟಾಟಗಳಿಗೆ ನಗುತ್ತಾ, ಹಾಡಿಗೆ ವಿದ್ಯಾರ್ಥಿಗಳು ಕೂಡ ತಲೆದೂಗಿದ್ದಾರೆ.

    9 ವರ್ಷದ ಅರ್ಜುನ್ ಅಲ್ಲಿ ನೆರೆದಿದ್ದವರ ರಂಜಿಸಿಲ್ಲ. ಬದಲಿಗೆ ಎಲ್ಲರಿಗೂ ಮಾದರಿಯಾಗೋ ಕೆಲಸ ಮಾಡಿದ್ದಾನೆ. ಈ ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಮಕ್ಕಳಿಗೆ ಪೆನ್ನು, ನೋಟ್‍ಬುಕ್ ಸಹಾಯ ಮಾಡಿದ್ದಾನೆ. ಬಡತನದಲ್ಲಿ ಬೆಳೆದಿದ್ದರೂ ತನ್ನ ಸಹೋದರಿ ಅಪೂರ್ವಳ ಹುಟ್ಟುಹಬ್ಬದ ಅಂಗವಾಗಿ ತಾನು ಸಂಪಾದಿಸಿದ ಹಣದಲ್ಲೇ ಮತ್ತೊಬ್ಬರಿಗೆ ಸಹಾಯ ಹಸ್ತ ಚಾಚಿದ್ದಾನೆ.

    ಈ ಎಳೆವಯಸ್ಸಿನಲ್ಲೇ ಅರ್ಜುನ್ ಇಟಗಿಯ ಸಾಮಾಜಿಕ ಕಾರ್ಯಕ್ರಮದ ಬಗ್ಗೆ ಕಿತ್ತೂರ್ ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರು ಧನ್ಯವಾದ ತಿಳಿಸಿದ್ದಾರೆ. ಅರ್ಜುನ್ ಎಂದಿನಂತೆ ಎಲ್ಲ ಹಾಡು ಹಾಡುತ್ತಲೇ ವಿದ್ಯಾರ್ಥಿನಿಯರ ನಡುವೆ ಬಂದು ನಟಿಸಿದ್ರು. ವಿದ್ಯಾರ್ಥಿನಿಯರು ಕೂಡ ಅರ್ಜುನ್ ಕೈ ಹಿಡಿದು ನಟಿಸಿದ್ರು. ಅದರಲ್ಲೂ ಗಾನಯೋಗಿ ಗುರುವೇ ಹಾಡಿಗಂತು ಥೇಟ್ ಪಂಚಾಕ್ಷರಿ ಗವಾಯಿಗಳ ರೀತಿಯಲ್ಲೇ ಮನಮುಟ್ಟುವಂತೆ ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾದನು.

    ಒಟ್ಟಿನಲ್ಲಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಈ ವಯಸ್ಸಿನಲ್ಲೇ ಮತ್ತೊಬ್ಬರ ಸಹಾಯಕ್ಕೆ ಮುಂದಾಗಿರೋ ಅರ್ಜುನ್ ನಿಜವಾಗಿಯೂ ಮಾದರಿ ಎನಿಸಿಕೊಂಡಿದ್ದಾನೆ.