Tag: singer

  • ಸಂಗೀತ ಕ್ಷೇತ್ರದ ಪ್ರಮುಖ ಕೊಂಡಿ ಕಳಚಿದಂತಾಗಿದೆ – ಎಸ್‍ಪಿಬಿ ನಿಧನಕ್ಕೆ ಸಿಎಂ ಸಂತಾಪ

    ಸಂಗೀತ ಕ್ಷೇತ್ರದ ಪ್ರಮುಖ ಕೊಂಡಿ ಕಳಚಿದಂತಾಗಿದೆ – ಎಸ್‍ಪಿಬಿ ನಿಧನಕ್ಕೆ ಸಿಎಂ ಸಂತಾಪ

    ಬೆಂಗಳೂರು: ಖ್ಯಾತ ಸಂಗೀತ ದಿಗ್ಗಜ, ಗಾಯಕರಾದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗಾಯನ ನಿಲ್ಲಿಸಿದ ಎಸ್‌ಪಿ ಬಾಲಸುಬ್ರಹ್ಮಣ್ಯಂ

    ಚಲನಚಿತ್ರರಂಗದ ಶ್ರೇಷ್ಠ ಗಾಯಕರಾಗಿದ್ದ ಅವರು, ಹಿಂದಿ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಭಾಷೆಗಳ ಚಲನಚಿತ್ರ ಗೀತೆಗಳಿಗೆ ಹಿನ್ನೆಲೆಗಾಯನ ಮಾಡಿ ಅಪಾರ ಜನಪ್ರಿಯತೆಯನ್ನು ಗಳಿಸಿದ್ದರು. ನಟನೆ, ಸಂಗೀತ ಸಂಯೋಜನೆ, ಸಂಗೀತ ಕಾರ್ಯಕ್ರಮಗಳ ನಿರ್ವಹಣೆಯನ್ನೂ ಮಾಡಿ ಸಂಗೀತ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿದ್ದರು. ಹತ್ತಕ್ಕಿಂತ ಹೆಚ್ಚು ಭಾಷೆಗಳಲ್ಲಿ 40 ಸಾವಿರಕ್ಕೂ ಮೀರಿ ಹಾಡುಗಳನ್ನು ಹಾಡಿದ ಕೀರ್ತಿ ಅವರದ್ದು ಎಂದು ಎಸ್‍ಪಿಬಿ ಸಾಧನೆಯ ಬಗ್ಗೆ ಹೇಳಿದ್ದಾರೆ.

    ಕನ್ನಡ ಮತ್ತು ಕನ್ನಡಿಗರ ಬಗ್ಗೆ ವಿಶೇಷ ಅಭಿಮಾನವನ್ನು ಹೊಂದಿದ್ದರು. ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿ ಹಾಗೂ ಇನ್ನಿತರ ಪ್ರಶಸ್ತಿ ಗೌರವಗಳನ್ನು ಪಡೆದ ಸುಪ್ರಸಿದ್ಧ ಗಾಯಕರು. ಅವರ ಹಾಡುಗಳು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದೆ. ಆದರೆ ಇದೀಗ ಅವರ ನಿಧನದಿಂದ ಸಂಗೀತ ಕ್ಷೇತ್ರದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ ಎಂದಿದ್ದಾರೆ.

    ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರ ಕುಟುಂಬ ಮತ್ತು ಕೋಟ್ಯಾಂತರ ಅಭಿಮಾನಿಗಳಿಗೆ ಭಗವಂತ ದು:ಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

    ಹಲವು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್‍ಪಿಬಿ ಇಂದು ಬಾರದ ಲೋಕಕ್ಕೆ ತೆರಳಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ ಸುಮಾರು 1.4 ನಿಮಿಷಕ್ಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಅವರ ಮಗ ಚರಣ್ ಅಧಿಕೃತವಾಗಿ ತಿಳಿಸಿದ್ದರು.

  • ಗಾಯನ ನಿಲ್ಲಿಸಿದ ಎಸ್‌ಪಿ ಬಾಲಸುಬ್ರಹ್ಮಣ್ಯಂ

    ಗಾಯನ ನಿಲ್ಲಿಸಿದ ಎಸ್‌ಪಿ ಬಾಲಸುಬ್ರಹ್ಮಣ್ಯಂ

    ಚೆನ್ನೈ: ಹಿರಿಯ ಗಾಯಕ, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಹಿರಿಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ(74) ಗಾಯನವನ್ನು ನಿಲ್ಲಿಸಿದ್ದಾರೆ. ಹಲವು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್‌ಪಿಬಿ ಇಂದು ಬಾರದ ಲೋಕಕ್ಕೆ ತೆರಳಿದ್ದಾರೆ.

    ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ ಸುಮಾರು 1.4 ನಿಮಿಷಕ್ಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಅವರ ಮಗ ಚರಣ್ ಅಧಿಕೃತವಾಗಿ ಹೇಳಿದರು.

    ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಆಗಸ್ಟ್ 5ರಂದು ಎಂಜಿಎಂ ಹೆಲ್ತ್ ಕೇರ್‌ ಆಸ್ಪತ್ರೆಗೆ ದಾಖಲಾಗಿದ್ದರು. ಆಗಸ್ಟ್ 13ರ ತಡರಾತ್ರಿಯಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ತಜ್ಞ ವೈದ್ಯರ ತಂಡದಿಂದ ಆರೈಕೆ ಮಾಡಲಾಗುತ್ತಿತ್ತು. ಆಗಸ್ಟ್ 24ರಂದು ಕೊರೊನಾ ವರದಿ ನೆಗೆಟಿವ್ ಬಂದಿತ್ತು.

    ಆಗಸ್ಟ್‌ 5ರಂದು ಶೀತ ಮತ್ತು ಜ್ವರ ಕಾಣಿಸಿಕೊಂಡು ಉಸಿರಾಟಕ್ಕೆ ತೊಂದರೆಯಾಗಿದ್ದರಿಂದ ಎಸ್‌ಪಿಬಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯಕೀಯ ಪರೀಕ್ಷೆಯಿಂದ ಅವರಿಗೆ ಕೋವಿಡ್‌–19 ಸೋಂಕಿನ ಲಕ್ಷಣಗಳಿರುವುದು ದೃಢಪಟ್ಟಿತ್ತು. ಮನೆಯಲ್ಲಿಯೇ ಕ್ವಾರಂಟೈನ್‌ ಆಗುವಂತೆ ವೈದ್ಯರು ಸೂಚಿಸಿದ್ದರು. ಆದರೆ, ಕುಟುಂಬದ ಸದಸ್ಯರ ಸಲಹೆ ಮೇರೆಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕದಿಂದ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಮೂಲಕವೇ ಅವರಿಗೆ ಚಿಕಿತ್ಸೆ ನಿಡಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಮೃತ ಅಂತ್ಯಕ್ರಿಯೆ ಚೆನ್ನೈನ ಫಾರ್ಮ್ ಹೌಸ್ ನಲ್ಲಿ ನಡೆಯುವ ಬಗ್ಗೆ ಮಾಹಿತಿ ಸಿಕ್ಕಿದೆ.

    ವಿಡಿಯೋ ಬಿಡುಗಡೆ ಮಾಡಿದ್ದ ಎಸ್‌ಪಿಬಿ ನನ್ನ ಆರೋಗ್ಯ ಸರಿ ಇರಲಿಲ್ಲ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಶೀತ ಮತ್ತು ಜ್ವರ ಕೂಡ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರ ಬಳಿಗೆ ಚಿಕಿತ್ಸೆ ಪಡೆಯಲು ಮುಂದಾದೆ. ಪರೀಕ್ಷೆಯ ಬಳಿಕ ಕೊರೊನಾ ಸೋಂಕು ಸಣ್ಣ ಪ್ರಮಾಣದಲ್ಲಿರುವುದು ಗೊತ್ತಾಯಿತು. ಮನೆಯಲ್ಲಿಯೇ ಚಿಕಿತ್ಸೆ ಪಡೆಯುವಂತೆ ವೈದ್ಯರು ಸೂಚಿಸಿದರು. ಆದರೆ ಕುಟುಂಬದ ಸದಸ್ಯರು ಒಪ್ಪದ ಕಾರಣ ಆಸ್ಪತ್ರೆಗೆ ದಾಖಲಾದೆ. ನನ್ನ ಆರೋಗ್ಯದ ಬಗ್ಗೆ ಯಾರೊಬ್ಬರು ಚಿಂತಿಸಬೇಕಿಲ್ಲ. ನನ್ನ ಆರೋಗ್ಯ ವಿಚಾರಿಸಲು ಮೊಬೈಲ್ ಕಾಲ್‌ ಮಾಡಬೇಡಿ. ಕಾಲ್‌ ಸ್ವೀಕರಿಸುವ ಸ್ಥಿತಿಯಲ್ಲಿ ನಾನಿಲ್ಲ. ಶೀತದ ಹೊರತಾಗಿ ನಾನು ಚೆನ್ನಾಗಿದ್ದೇನೆ. ಜ್ವರವೂ ಕಡಿಮೆಯಾಗಿದೆ. ಇನ್ನೆರಡು ದಿನಗಳಲ್ಲಿ ಸಂಪೂರ್ಣ ಗುಣಮುಖನಾಗುತ್ತೇನೆ ಎಂದು ಹೇಳಿದ್ದರು.

    ಜುಲೈನಲ್ಲಿ ಬಾಲಸುಬ್ರಹ್ಮಣ್ಯಂ ಅವರು ಕೊರೊನಾ ವಿರುದ್ಧ ಜಾಗೃತಿ ಮೂಡಿಸಲು ಸಾಹಿತಿ ವೈರಮುತ್ತು ರಚಿಸಿದ್ದ ಹಾಡಿಗೆ ಧ್ವನಿ ನೀಡಿದ್ದರು. ಇವರ ಕಲಾ ಸೇವೆಗೆ ಭಾರತ ಸರ್ಕಾರ 2011ರಲ್ಲಿ ಪದ್ಮಶ್ರೀ, 2011ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿತ್ತು.

    1946ರ ಜೂನ್‌ 4 ರಂದು ಜನಿಸಿದ್ದ ಎಸ್‌ಪಿಬಿ ಕನ್ನಡ, ತಮಿಳು, ತೆಲುಗು, ಹಿಂದಿ, ಮಲೆಯಾಳಂ ಸೇರಿದಂತೆ ಒಟ್ಟು 16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡನ್ನು ಹಾಡಿದ್ದಾರೆ.

    ಕೆಲವು ದಿನಗಳ ಹಿಂದೆ ವಿಡಿಯೋ ಪೋಸ್ಸ್ ಮಾಡಿದ್ದ ಎಸ್‍ಪಿಬಿ ಪುತ್ರ ಚರಣ್, ಅಪ್ಪನ ಆರೋಗ್ಯ ಸ್ಥಿರವಾಗಿದ್ದು, ವೆಂಟಿಲೇಟರ್ ನಲ್ಲೇ ಇದ್ದಾರೆ. ಉಳಿದೆಲ್ಲ ವರದಿಗಳು ನಾರ್ಮಲ್ ಆಗಿದ್ದು, ಯಾವುದೇ ಇನ್ಫೆಕ್ಷನ್ ಕಂಡು ಬಂದಿಲ್ಲ. ಆದರೆ ಶ್ವಾಸಕೋಶ ಹಾಗೂ ಉಸಿರಾಟದಲ್ಲಿ ಇನ್ನೂ ಹೆಚ್ಚಿನ ವೃದ್ಧಿಯಾಗಬೇಕಿದೆ. ಇದೀಗ ಅವರು ಕುಳಿತುಕೊಳ್ಳುತ್ತಿದ್ದು, ವೈದ್ಯರ ಸಹಾಯದ ಮೇರೆಗೆ ಪ್ರತಿ ದಿನ 20 ನಿಮಿಷಗಳ ಕಾಲ ಕುಳಿತುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು.

    https://www.instagram.com/p/B4omhXhBovv/

  • ಪ್ರಿಯಕರನ ಸಾವಿನ ಸುದ್ದಿ ತಿಳಿದು ಪ್ರಜ್ಞೆ ತಪ್ಪಿದ ಗಾಯಕಿ – ಸ್ಥಿತಿ ಗಂಭೀರ

    ಪ್ರಿಯಕರನ ಸಾವಿನ ಸುದ್ದಿ ತಿಳಿದು ಪ್ರಜ್ಞೆ ತಪ್ಪಿದ ಗಾಯಕಿ – ಸ್ಥಿತಿ ಗಂಭೀರ

    – ಎರಡು ಮಕ್ಕಳ ತಂದೆಯ ಜೊತೆ ಗಾಯಕಿ ಲವ್
    – ವಿಷ ಸೇವಿಸಿ ಗೆಳೆಯ ಆತ್ಮಹತ್ಯೆ

    ಜೈಪುರ: ಕಿರುತೆರೆಯ ‘ಇಂಡಿಯನ್ ಐಡಲ್ ಸೀಸನ್ 10’ನ ಸ್ಪರ್ಧಿ ರೇಣು ನಗರ್ ಅವರನ್ನು ರಾಜಸ್ಥಾನದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಿಯಕರನ ಸಾವಿನ ಸುದ್ದಿ ತಿಳಿದ ತಕ್ಷಣ ಗಾಯಕಿ ಆಘಾತಕ್ಕೊಳಗಾಗಿದ್ದಾರೆ ಎಂದು ತಿಳಿದುಬಂದಿದೆ.

    ಪ್ರಿಯಕರನ ರವಿ ಶಂಕರ್ ಬುಧವಾರ ಮಧ್ನಾಹ್ನ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಸುಮಾರು 11 ಗಂಟೆಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ಗೆಳೆಯನ ಸಾವಿನ ಸುದ್ದಿ ತಿಳಿದು ತಕ್ಷಣ ಗಾಯಕಿ ರೇಣು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಮಿತ್ತಲ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ನಡೆಯುತ್ತಿದೆ. ಗಾಯಕಿ ರೇಣು ನಗರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

    ಮೃತ ರವಿ ತಮಲಾ ಕ್ಲಾಸ್ ಮಾಡಲು ಗಾಯಕಿ ರೇಣು ನಗರ್ ಮನೆಗೆ ಬರುತ್ತಿದ್ದರು. ರವಿ ತಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೂ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ನಂತರ ರೇಣು ಮತ್ತು ರವಿ ಇಬ್ಬರು ಜೂನ್ ತಿಂಗಳಿನಲ್ಲಿ ಮನೆಬಿಟ್ಟು ಓಡಿ ಹೋಗಿದ್ದರು. ಈ ಸಂಬಂಧ ರೇಣು ತಂದೆ ರವಿ ಶಂಕರ್ ವಿರುದ್ಧ ಪೊಲೀಸ್ ಸ್ಟೇಷನ್‍ನಲ್ಲಿ ದೂರು ದಾಖಲಿಸಿದ್ದರು. ನಂತರ ಮಗಳನ್ನು ಮನವೊಲಿಸಿ ಮನೆಗೆ ಕರೆದುಕೊಂಡು ಹೋಗಿದ್ದರು.

    ಐದು ದಿನಗಳ ಹಿಂದೆಯಷ್ಟೆ ಇಬ್ಬರು ತಮ್ಮ ತಮ್ಮ ಮನೆಗೆ ಹೋಗಿದ್ದರು. ಆದರೆ ಬುಧವಾರ ಮಧ್ಯಾಹ್ನ ರವಿ ವಿಷ ಸೇವಿಸಿದ್ದಾರೆ. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ರವಿ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ನಂತರ ರವಿ ಸಾವಿನ ಸುದ್ದಿ ತಿಳಿದು ರೇಣು ಆಘಾತಕ್ಕೊಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಟ್ರಕ್ ಡ್ರೈವರ್ ಪ್ರಸಿದ್ಧ ಸಿಂಗರ್ ಆಗಿದ್ದರ ಹಿಂದಿರೋದು ಫೇಲ್ಯೂರ್ ಪವಾಡ!

    ಟ್ರಕ್ ಡ್ರೈವರ್ ಪ್ರಸಿದ್ಧ ಸಿಂಗರ್ ಆಗಿದ್ದರ ಹಿಂದಿರೋದು ಫೇಲ್ಯೂರ್ ಪವಾಡ!

    ಕೀಳರಿಮೆ, ಪ್ರಯತ್ನ ಪಡಲು ಬೇಕಾದ ಪರಿಶ್ರಮದ ಅಭಾವ ಅದೆಷ್ಟೋ ಜನರನ್ನ ಎಲ್ಲೆಲ್ಲೋ ಅಮುಕಿಬಿಟ್ಟಿದೆ. ಯಾವುದೇ ರೀತಿಯ ಗೆಲುವು ಬಡಪೆಟ್ಟಿಗೆ ದಕ್ಕೋದಿಲ್ಲ. ಯಾರೋ ಮಾಡಿಟ್ಟ ರಸ್ತೆಯಲ್ಲಿ ಹೆಜ್ಜೆಯಿರಿಸಿ ಗೆದ್ದೇ ಅಂತ ಬೀಗಿದರೆ ಅದಕ್ಕೆ ಕಿಲುಬುಗಾಸಿನ ಕಿಮ್ಮತ್ತೂ ಇಲ್ಲ. ಸಾಧನೆ ಹಾದಿಯಲ್ಲಿ ಮುಗ್ಗರಿಸಬೇಕಾಗುತ್ತೆ. ಮೈ-ಕೈ ತುಂಬಾ ತರಚು ಗಾಯಗಳಾಗುತ್ತವೆ. ಆ ನೋವು ಮನಸಿಗೂ ವ್ಯಾಪಿಸಿ ಕಂಗಾಲಾಗುವಂತಾಗುತ್ತೆ. ಇನ್ನೇನು ಯಾವ ಶಕ್ತಿಯೂ ತನ್ನನ್ನು ಈ ಹುದುಲಿಂದ ಮೇಲೆತ್ತಲಾಗೋದಿಲ್ಲ ಅನ್ನಿಸುವಂತಹ ಸೋಲುಗಳೆದುರಾಗುತ್ತವೆ.

    ಇಷ್ಟೆಲ್ಲವನ್ನೂ ಅನುಭವಿಸದ ಗೆಲುವೊಂದು ಗೆಲುವೇ ಅಲ್ಲ. ಯಾರೋ ಕೂಡಿಟ್ಟ ಕಾಸಲ್ಲಿ ತಮ್ಮ ಕನಸಿನಸೌಧ ಕಟ್ಟುವವರು, ಬೇರೆಯವರ ಸಮಾಧಿಯ ಮೇಲೆ ಈಸಿ ಚೇರು ಹಾಕಿ ಕುಕ್ಕರಿಸುವವರು ಸಹಸ್ರ ಸಂಖ್ಯೆಯಲ್ಲಿ ಸಿಕ್ಕಾರು. ಆದರೆ ಜಗತ್ತಿನ ಗೆಲುವ ಯಾದಿಯಲ್ಲಿ ದಾಖಲಾಗೋದು, ಬಾಳಿಕೆ ಬರೋದು ಪರಿಶ್ರಮಕ್ಕೆ ದಕ್ಕಿದ ಗೆಲುವು ಮಾತ್ರ. ನೀವು ಯಾವುದೇ ಕ್ಷೇತ್ರದಲ್ಲಿ ಗೆದ್ದ ಯಾರನ್ನೇ ಆದರೂ ಕೇಳಿ ನೋಡಿ; ಅವರ ಮೈ ಮನಸುಗಳಲ್ಲಿ ಸಾವಿರ ನೋವಿನ ಕಥೆ ಇದ್ದೇ ಇರುತ್ತೆ.

    ಸದ್ಯ ನಾವೀಗ ಹೇಳ ಹೊರಟಿರೋದು ಸಂಗೀತ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿರುವ ಅಮೆರಿಕ ಮೂಲದ ಗಾಯಕನ ಬಗ್ಗೆ. ಆತ ಎಲ್ವಿಸ್ ಆರನ್ ಪ್ರೀಸ್ಲಿ. ಅಮೆರಿಕದ ಸಂಗೀತಾಸಕ್ತರು ಮತ್ತು ಸಿನಿಮಾ ಪ್ರೇಮಿಗಳ ಪಾಲಿಗೆ ಆರಾಧ್ಯದೈವ. ಎಪ್ಪತ್ತರ ದಶಕದಲ್ಲಿಯೇ ಇಲ್ಲವಾದರೂ ಈವತ್ತಿಗೂ ಆತನ ಪ್ರಭಾವ ಮಂಕಾಗಿಲ್ಲ. ಸಂಗೀತ ಕ್ಷೇತ್ರದಲ್ಲಿ ದಿ ಕಿಂಗ್ ಅಂತ ಕರೆಸಿಕೊಳ್ಳೋ ಆತ ನಡೆದು ಬಂದ ಹೆಜ್ಜೆಗಳನ್ನ ಗಮನಿಸಿದರೆ ಯಾರಿಗೇ ಆದರೂ ಅಚ್ಚರಿಯಾಗದಿರೋದಿಲ್ಲ.

    ಎಲ್ವಿಸ್ ಸಾಮಾನ್ಯ ಕುಟುಂಬದಿಂದ ಬಂದಿದ್ದ ಹುಡುಗ. ಆತನಿಗೆ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಬೇಕನ್ನೋ ಬಯಕೆ. ಹೇಗೇಗೋ ಮಾಡಿ ಸಂಗೀತ ಸಾಧಕರನ್ನ ಭೇಟಿಯಾಗಿ ಹಾಡೋ ಪ್ರಯತ್ನ ಮಾಡಿದ್ರೂ ಆತನಿಗೆ ಪದೇ ಪದೆ ಸೋಲೆದುರಾಗ್ತಿತ್ತು. ಆದ್ರೆ ಮತ್ತೆ ಮತ್ತೆ ಪ್ರಯತ್ನಿಸ್ತಾ ಟ್ರಕ್ ಡ್ರೈವರ್ ಆಗಿ ತುತ್ತಿನ ಚೀಲ ತುಂಬಿಸಿಕೊಳ್ತಿದ್ದ. ಆದರೆ ನೂರಾರು ಸಲ ಪ್ರಯತ್ನ ಪಟ್ಟರೂ ಯಾರೆಂದರೆ ಯಾರೂ ಅವನಿಗೆ ಅವಕಾಶ ಕೊಟ್ಟಿರಲಿಲ್ಲ. ಒಂದು ಸಲವಂತೂ `ನೀನು ಟ್ರಕ್ ಓಡಿಸೋಕೇ ಲಾಯಕ್ಕು, ಹಾಡೋ ಪ್ರಯತ್ನ ಮಾಡ್ಬೇಡ’ ಅಂತ ನೇರವಾಗಿಯೇ ಮೂದಲಿಸಿದ್ದರಂತೆ.

    ಯಾರೇ ಆದ್ರೂ ಇದರಿಂದ ಕುಸಿದು ಬಿಡ್ತಿದ್ರು. ಮತ್ತೆಂದೂ ಹಾಡೋ ಅವಕಾಶಕ್ಕಾಗಿ ಪ್ರಯತ್ನವನ್ನೇ ಮಾಡ್ತಿರಲಿಲ್ಲವೇನೋ. ಆದರೆ ಎಲ್ವಿಸ್ ಟ್ರಕ್ ಓಡಿಸುತ್ತಲೇ ಮತ್ತೆ ಮತ್ತೆ ಪ್ರಯತ್ನಿಸಿದ. ಕಡೆಗೂ ಒಂದಿನ ಹಾಡೋ ಅವಕಾಶ ಗಿಟ್ಟಿಸಿಕೊಂಡಿದ್ದ. ಆ ನಂತರ ಯಾವ ಥರ ಬೆಳೆದನೆಂದರೆ, ವಿಶ್ವಾದ್ಯಂತ ಸಂಗೀತ ಪ್ರೇಮಿಗಳನ್ನ ಹುಚ್ಚೆಬ್ಬಿಸಿದ. ಆತ ಮರೆಯಾಗಿ ದಶಕಗಳೇ ಕಳೆದರೂ ಜನ ಇನ್ನೂ ಅವನನ್ನು ನೆನಪಿಟ್ಟುಕೊಂಡಿದ್ದಾರೆ. ಆತ ಅಮೆರಿಕಾದಲ್ಲಿ ಈವತ್ತಿಗೂ ದಿ ಕಿಂಗ್ ಅನ್ನೋ ಪಟ್ಟವನ್ನು ತನ್ನದಾಗಿಸಿಕೊಂಡಿದ್ದಾನೆ.

  • ಸುಶಾಂತ್‍ನಂತೆ ಮ್ಯೂಸಿಕ್ ಇಂಡಸ್ಟ್ರಿಯಲ್ಲೂ ಆತ್ಮಹತ್ಯೆಯ ಸುದ್ದಿ ಬರಬಹುದು: ಸೋನು ನಿಗಮ್

    ಸುಶಾಂತ್‍ನಂತೆ ಮ್ಯೂಸಿಕ್ ಇಂಡಸ್ಟ್ರಿಯಲ್ಲೂ ಆತ್ಮಹತ್ಯೆಯ ಸುದ್ದಿ ಬರಬಹುದು: ಸೋನು ನಿಗಮ್

    ಮುಂಬೈ: ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಧನದ ನಂತರ ಅನೇಕ ನಟರು, ಗಾಯಕರು ಮತ್ತು ನಿರ್ದೇಶಕರು ಸಿನಿಮಾ ರಂಗದಲ್ಲಿ ನಡೆಯುತ್ತಿರುವ ಕೆಲ ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಸದ್ಯ ಗಾಯಕ ಸೋನು ನಿಗಮ್ ಸಂಗೀತ ಉದ್ಯಮದ ಬಗ್ಗೆ ಮುಕ್ತವಾಗಿ ಮಾತನಾಡಿ ಆಘಾತಕಾರಿ ವಿಚಾರವನ್ನು ತಿಳಿಸಿದ್ದಾರೆ.

    ಸೋನು ನಿಗಮ್ ವಿಡಿಯೋವನ್ನು ಹಂಚಿಕೊಂಡಿದ್ದು, ಯಾರ ಹೆಸರನ್ನು ಪ್ರಸ್ತಾಪಿಸದೆ ಮಾತನಾಡಿದ್ದಾರೆ. ಜೊತೆಗೆ ಮ್ಯೂಸಿಕ್ ಇಂಡಸ್ಟ್ರಿಯಲ್ಲಿರುವ ಮಾಫಿಯಾ ಹೊಸ ಮತ್ತು ಪ್ರತಿಭಾವಂತ ಗಾಯಕರ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿದ್ದಾರೆ.

    ಸೋನು ನಿಗಮ್ ಹೇಳಿದ್ದೇನು?:
    ನನ್ನ ಮನಸ್ಥಿತಿ ಚೆನ್ನಾಗಿಲ್ಲದ ಕಾರಣ ಕೆಲವು ದಿನಗಳವರೆಗೆ ನಿಮ್ಮೊಂದಿಗೆ ವಿಡಿಯೋ ಹಂಚಿಕೊಳ್ಳಲಿಲ್ಲ. ಇದೀಗ ಇಡೀ ಭಾರತವು ಅನೇಕ ಒತ್ತಡಗಳನ್ನು ಎದುರಿಸುತ್ತಿದೆ. ಒಂದು ಸುಶಾಂತ್ ಸಿಂಗ್ ರಜಪೂತ್ ಅವರ ಮಾನಸಿಕ ಮತ್ತು ಭಾವನಾತ್ಮಕ ಒತ್ತಡ. ನಮಗಿಂದ ಮೊದಲೇ ಅಗಲುತ್ತಿರುವ ಯುವಕರನ್ನು ನಾವು ನೋಡಿದರೆ ದುಃಖವಾಗುವುದು ಸಹ ಸಹಜ. ಇದಲ್ಲದೆ ಭಾರತ ಮತ್ತು ಚೀನಾ ನಡುವೆ ಸಂಘರ್ಷ ನಡೆಯುತ್ತಿದೆ. ಇದರಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ನಾನು ಭಾರತೀಯನಿಗಿಂತ ಹೆಚ್ಚು ಮನುಷ್ಯ. ಈ ಎರಡೂ ವಿಷಯಗಳಿಂದ ನನಗೆ ತುಂಬಾ ಬೇಸರವಾಗಿದೆ.

    ಬಾಲಿವುಡ್‍ನಲ್ಲಿ ಬೆಳೆಯಬೇಕಾದ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೇ ಸುದ್ದಿಯನ್ನು ಗಾಯಕ, ಮೂಸಿಕ್ ಕಾಂಪೋಸರ್, ಸಂಗೀತಗಾರನ ಬಗ್ಗೆಯೂ ಕೇಳಬಹುದಾದ ದಿನ ಬಹುಬೇಗ ಬರಬಹುದು. ಮೂಸಿಕ್ ಇಂಡಸ್ಟ್ರಿ ಮಾಫಿಯಾ ಸಿನಿಮಾಗಿಂತಲೂ ದೊಡ್ಡದಾಗಿದೆ. ಮೂಸಿಕ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಹೊಸ ಪ್ರತಿಭೆಗಳು ಉದ್ಯಮದಲ್ಲಿ ಏನು ನಡೆಯುತ್ತಿದೆ ಎಂದು ಅಸಮಾಧಾನಗೊಂಡಿದ್ದಾರೆ. ಮೂಸಿಕ್ ಇಂಡಸ್ಟ್ರಿ ಸಂಪೂರ್ಣವಾಗಿ ಇಬ್ಬರ ಕೈಯಲ್ಲಿ ಸಿಲುಕಿದೆ. ಅವರು ಹೇಳಿದ ಗಾಯಕರಿಗೆ ಮಾತ್ರ ಅವಕಾಶ ಸಿಗುತ್ತಿದೆ. ದಯವಿಟ್ಟು ನೀವು ಹೀಗೆ ಮಾಡಬೇಡಿ.

    ಸಂಗೀತ ಉದ್ಯಮವು ಇಂದು ಎರಡು ಕಂಪನಿಗಳ ಕೈಯಲ್ಲಿದೆ. ನನ್ನ ಹಾಡುಗಳು ಇನ್ನೊಬ್ಬ ನಟನನ್ನು ನಿರ್ಧರಿಸುತ್ತವೆ. ಸೋನು ನನ್ನ ಹೆಸರನ್ನು ತೆಗೆದುಕೊಂಡನೆಂದು ಕೆಲವರು ಹೇಳುತ್ತಾರೆ. ಆದರೆ ಸೃಜನಶೀಲತೆ ಎನ್ನುವುದು ಕೇಲವ ಇಬ್ಬರ ಕೈಯಲ್ಲಿ ಇರಬಾರದು ಎಂದು ನಂಬುತ್ತೇನೆ. ನೀವೇ ಎಲ್ಲವನ್ನೂ ನಿರ್ಧರಿಸಿದರೆ, ಸಂಗೀತ ಹೇಗೆ ಉತ್ತಮವಾಗಿರುತ್ತದೆ? ಹಿಂದಿನ ಮೂಸಿಕ್ ಇಂಡಸ್ಟ್ರಿ ತುಂಬಾ ಚೆನ್ನಾಗಿತ್ತು. ರಾಜ್ ಕಪೂರ್, ಒಪಿ ನಾಯರ್ ಮತ್ತು ಶಂಕರ್ ಜೈ ಕಿಶನ್ ಅವರು ಒಬ್ಬರಿಗಿಂದ ಒಬ್ಬರು ವಿಭಿನ್ನರಾಗಿದ್ದರು. ಆದ್ದರಿಂದ ಯುವ ಗಾಯಕರಿಗೆ ಅವಕಾಶ ಕೊಡಿ ಇದು ನನ್ನ ಮನವಿ.

  • ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತತ್ವಪದ ಗಾಯಕ ದಾದಾಪೀರ್ ಮಂಜರ್ಲಾಗೆ ಅನಾರೋಗ್ಯ

    ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತತ್ವಪದ ಗಾಯಕ ದಾದಾಪೀರ್ ಮಂಜರ್ಲಾಗೆ ಅನಾರೋಗ್ಯ

    – ಚಿಕಿತ್ಸೆ ವೆಚ್ಚಕ್ಕಾಗಿ ಹಿರಿಯ ಕಲಾವಿದನಿಂದ ಸಹಾಯಕ್ಕೆ ಮನವಿ

    ರಾಯಚೂರು: ಜಿಲ್ಲೆಯ ಹಿರಿಯ ಕಲಾವಿದ, ರಾಜ್ಯೊತ್ಸವ ಪ್ರಶಸ್ತಿ ಪುರಸ್ಕ್ರತ, ತತ್ವಪದ ಸಂಗೀತ ಗಾಯಕ ದಾದಾಪೀರ್ ಮಂಜರ್ಲಾ ತೀರ್ವ ಅನಾರೋಗ್ಯದಿಂದ ಬಳಲುತ್ತಿದ್ದು ಸಹಾಯಕ್ಕಾಗಿ ಕೈಚಾಚಿದ್ದಾರೆ.

    ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ದಾದಾಪೀರ್ ಚಿಕಿತ್ಸೆಗೆ ಅಗತ್ಯವಾದ ಹಣದ ತೊಂದರೆಯಲ್ಲಿದ್ದಾರೆ. ಆರ್ಥಿಕವಾಗಿ ಸದೃಢರಲ್ಲದ ದಾದಾಪೀರ್ ಸಂಗೀತ ಸೇವೆಗೆ ತಮ್ಮ ಜೀವನ ಮುಡುಪಿಟ್ಟವರು. ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಕೆಲದಿನಗಳಿಂದ ಆಸ್ಪತ್ರೆಯಲ್ಲೆ ಚಿಕಿತ್ಸೆಪಡೆಯುತ್ತಿರುವ ಹಿರಿಯ ಕಲಾವಿದನಿಗೆ ಸಹಾಯ ಬೇಕಿದೆ.

    ಜಿಲ್ಲೆಯ ಕಲಾವಿದರು, ಅಭಿಮಾನಿಗಳು ಸಹಾಯ ಮಾಡಿದರೆ ಚಿಕಿತ್ಸೆಗೆ ಅನುಕೂಲವಾಗಲಿದೆ ಎಂದು ಕಲಾವಿದ ಹಾಗೂ ಕಲಾವಿದನ ಕುಟುಂಬ ಕೇಳಿಕೊಂಡಿದೆ. ತಮ್ಮ ಕಲೆಯ ಮೂಲಕ ಕಲಾರಸಿಕರನ್ನ ರಂಜಿಸಿದ್ದ ಹಿರಿಯ ಕಲಾವಿದ ತತ್ವಪದಗಳ ಗಾಯನ ಮೂಲಕ ಮನೆ ಮಾತಾಗಿದ್ದಾರೆ. ಜಿಲ್ಲೆ ಮಾತ್ರವಲ್ಲದೆ ರಾಜ್ಯಾದ್ಯಂತ ದಾದಾಪೀರ್ ಮಂಜರ್ಲಾಗೆ ಅಭಿಮಾನಿ ಬಳಗವಿದೆ. ಕಷ್ಟಕಾಲದಲ್ಲಿರುವ ಗಾಯಕನಿಗೆ ಇತರ ಕಲಾವಿದರು, ಅಭಿಮಾನಿಗಳು ಹಾಗೂ ಮುಖ್ಯವಾಗಿ ಸರ್ಕಾರ ಸಹಾಯ ಮಾಡಬೇಕಿದೆ.

  • 16 ದಿನಗಳ ಬಳಿಕ ಕನಿಕಾ ಕಪೂರ್ ಡಿಸ್ಚಾರ್ಜ್

    16 ದಿನಗಳ ಬಳಿಕ ಕನಿಕಾ ಕಪೂರ್ ಡಿಸ್ಚಾರ್ಜ್

    ಲಕ್ನೋ: ಕೊರೊನಾ ಸೋಂಕಿಗೆ ತುತ್ತಾಗಿದ್ದ ಬಾಲಿವುಡ್ ಗಾಯಕಿ, ಕನಿಕಾ ಕಪೂರ್ 16 ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾ ಸೋಂಕಿಗೆ ಒಳಗಾಗಿದ್ದ ಗಾಯಕಿಗೆ ಲಕ್ನೋನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

    ಆರನೇ ವರದಿ ನಗೆಟಿವ್ ಬಂದ ಹಿನ್ನೆಲೆಯಲ್ಲಿ ಇಂದು ಸಂಜಯ್ ಗಾಂಧಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಆದ್ರೆ ಮುಂದಿನ 14 ದಿನ ಮನೆಯಲ್ಲಿ ಎಲ್ಲರೊಂದಿಗೆ ಅಂತರ ಕಾಯ್ದುಕೊಂಡು ಕ್ವಾರಂಟೈನ್ ನಲ್ಲಿರುವಂತೆ ವೈದ್ಯರು ಸೂಚಿಸಿದ್ದಾರೆ. ಕನಿಕಾ ಕಪೂರ್ ಗೆ ಕೊರೊನಾ ಸೋಂಕು ತಗುಲಿರೋದು ಮಾರ್ಚ್ 20ರಂದು ದೃಢಪಟ್ಟಿತ್ತು. ಅಂದಿನಿಂದಲೇ ಐಸೋಲೇಷನ್ ವಾರ್ಡಿನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಾರ್ಚ್ 30ರ ನಂತರ ಕನಿಕಾ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿತ್ತು.

    ಕನಿಕಾ ವಿರುದ್ಧ ಎಫ್‍ಐಆರ್: ಕೊರೊನಾ ವಿರುದ್ಧದ ಹೋರಾಟದಲ್ಲಿ ಜಯಗಳಿಸಿರುವ ಕನಿಕಾಗೆ ಬಂಧನದ ಭೀತಿ ಎದುರಾಗಿದೆ. ಲಕ್ನೋ ಸಿಟಿಯ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಕನಿಕಾ ಕಪೂರ್ ವಿರುದ್ಧ ಐಪಿಸಿ ಸೆಕ್ಷನ್ 188, 269 ಮತ್ತು 270ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೊರೊನಾಗೆ ಸಂಬಂಧಿಸಿದ ಮುಂಜಾಗ್ರತ ಕ್ರಮಗಳನ್ನು ಪಾಲಿಸದಿರುವುದು ಮತ್ತು ನಿರ್ಲಕ್ಷ್ಯ ಆರೋಪದಡಿಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ.

    ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದರೂ ಕನಿಕಾ ಕಪೂರ್ ಕೆಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಮಾರ್ಚ್ 9ರಂದು ಲಂಡನ್ ನಿಂದ ಬಂದಿದ್ದ ಕನಿಕಾ, ಲಕ್ನೊ ನಗರದ ಅಪಾರ್ಟ್ ಮೆಂಟ್ ನಲ್ಲಿ ಉಳಿದುಕೊಂಡಿದ್ದರು. ಈ ಅಪಾರ್ಟ್ ಮೆಂಟ್‍ನಲ್ಲಿ 700 ಕುಟುಂಬಗಳು ವಾಸವಾಗಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇಷ್ಟು ಮಾತ್ರ ಅಲ್ಲದೇ ಲಕ್ನೋದಲ್ಲಿರುವ ತಾಜ್ ಹೋಟೆಲ್ ನಲ್ಲಿ ಕಾಂಗ್ರೆಸ್ ಮಾಜಿ ಸಂಸದ ಜಿತಿನ್ ಪ್ರಸಾದ್ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

    ಈ ಪಾರ್ಟಿಯಲ್ಲಿ ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೆ, ಪುತ್ರ ದುಷ್ಯಂತ ಸಿಂಗ್, ಉತ್ತರ ಪ್ರದೇಶದ ಆರೋಗ್ಯ ಮಂತ್ರಿ ಜಯಪ್ರತಾಪ್ ಸೇರಿದಂತೆ ಹಲವು ರಾಜಕೀಯ ಪ್ರಮುಖರು ಭಾಗಿಯಾಗಿದ್ದರು. ಹಾಗಾಗಿ ಕನಿಕಾ ಕೊರೊನಾ ಪ್ರಕರಣ ದೊಡ್ಡ ಆತಂಕವನ್ನೇ ಸೃಷ್ಟಿಸಿತ್ತು. ಕನಿಕಾ ಜೊತೆ ಸಂಪರ್ಕದಲ್ಲಿದ್ದ 45 ಜನರ ವರದಿ ನೆಗೆಟಿವ್ ಬಂದಿದ್ದು, ಮೂರು ನಾಯಕರನ್ನು ಐಸೋಲೇಷನ್ ಮಾಡಲಾಗಿದೆ. ಇನ್ನು ಆರೋಗ್ಯ ಮಂತ್ರಿಯವರ ಸಂಪರ್ಕದಲ್ಲಿದ್ದ 50ಕ್ಕೂ ಅಧಿಕ ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.

  • ಭಾರತಕ್ಕೆ ಬಂದ್ರೆ ಜನ್ರಿಗೆ ತೊಂದರೆ ಆಗುತ್ತೆಂದು ದುಬೈನಲ್ಲೇ ಉಳಿದ ಸೋನು ನಿಗಂ

    ಭಾರತಕ್ಕೆ ಬಂದ್ರೆ ಜನ್ರಿಗೆ ತೊಂದರೆ ಆಗುತ್ತೆಂದು ದುಬೈನಲ್ಲೇ ಉಳಿದ ಸೋನು ನಿಗಂ

    ಮುಂಬೈ: ಬಾಲಿವುಡ್ ಗಾಯಕ ಸೋನು ನಿಗಂ ಅವರು ಭಾರತಕ್ಕೆ ಬಂದರೆ ಜನರಿಗೆ ಎಲ್ಲಿ ತೊಂದರೆ ಆಗುತ್ತದೆ ಎಂದು ದುಬೈನಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ. ಅವರ ಈ ನಿರ್ಧಾರಕ್ಕೆ ಅಭಿಮಾನಿಗಳು ಹಾಗೂ ಭಾರತದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸೋನು ನಿಗಂ ತಮ್ಮ ಕುಟುಂಬದ ಜೊತೆ ದುಬೈನಲ್ಲಿ ವಾಸಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸೋನು ಹಿಮಾಲಯಕ್ಕೆ ಹೋಗಿದ್ದರು. ಬಳಿಕ ಮಾರ್ಚ್ 6ರಂದು ಮುಂಬೈನಲ್ಲಿ ಅವರ ಕಾನ್ಸರ್ಟ್ ಆಯೋಜಿಸಲಾಗಿತ್ತು. ಹಾಗಾಗಿ ಅವರು ಮುಂಬೈನಿಂದ ವಾಪಸ್ ಬಂದಿದ್ದರು. ಆದರೆ ಕೊರೊನಾ ಇದ್ದ ಕಾರಣ ಅವರ ಕಾನ್ಸರ್ಟ್ ರದ್ದಾಗಿತ್ತು. ಇದಾದ ಬಳಿಕ ಸೋನಂ ತಮ್ಮ ಪತ್ನಿ ಹಾಗೂ ಮಗನ ಜೊತೆ ದುಬೈಗೆ ಹೋಗಿದ್ದು, ಕೆಲವು ವಾರಗಳಿಂದ ಅವರು ಅಲ್ಲಿಯೇ ವಾಸಿಸುತ್ತಿದ್ದಾರೆ.

    ಮಾಧ್ಯಮವೊಂದಕ್ಕೆ ಮಾತನಾಡಿದ ಸೋನು, ನನ್ನ ಪತ್ನಿ ಹಾಗೂ ಮಗ ನನ್ನ ಜೊತೆಯಲ್ಲಿ ಇರುವುದು ನನಗೆ ತುಂಬಾ ಖುಷಿ ಇದೆ. ನನ್ನ ಮಗ ಇಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದು, ನಾನು ಹಲವು ಬಾರಿ ದುಬೈಗೆ ಬಂದಿದ್ದೇನೆ. ದುಬೈ ಕೂಡ ನನ್ನ ಮನೆಯಿದ್ದ ಹಾಗೆ. ಆದರೆ ಭಾರತದಲ್ಲಿ ನನ್ನ ತಂದೆ ಹಾಗೂ ನನ್ನ ಸಹೋದರಿ ಇದ್ದಾರೆ. ನಾನು ಭಾರತಕ್ಕೆ ಬಂದು ಅವರ ಜೊತೆಯಲ್ಲಿ ವಾಸಿಸಲು ಇಷ್ಟಪಡುತ್ತೇನೆ. ಬಳಿಕ ನಾನು ಭಾರತಕ್ಕೆ ಹೋದರೆ ನನ್ನ ತಂದೆಗೆ ವೈರಸ್ ತಗುಲಬಹುದು ಎಂದು ತಿಳಿಯಿತು. ಈ ವೈರಸ್ ಎಷ್ಟು ಅಪಾಯ ಎಂಬುದು ನನಗೆ ಗೊತ್ತು ಎಂದರು.

    ನಾನು ಹಾಗೂ ನನ್ನ ಕುಟುಂಬಸ್ಥರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ. ನನ್ನ ಅಕ್ಕಪಕ್ಕದಲ್ಲಿರುವ ಎಲ್ಲ ಜನರು ಸುರಕ್ಷಿತವಾಗಿರಲಿ ಎಂದು ನಾನು ಬಯಸುತ್ತೇನೆ. ಕೊರೊನಾ ಬಗ್ಗೆ ರಿಸ್ಕ್ ತೆಗೆದುಕೊಳ್ಳುವುದು ಒಳ್ಳೆಯದಲ್ಲ ಎಂದು ನನಗೆ ಅನಿಸುತ್ತೆ. ಎಲ್ಲವೂ ಸರಿ ಹೋಗುವವರೆಗೂ ನಾನು ಇಲ್ಲಿಯೇ ಇರುವುದು ಸೂಕ್ತ. ಭಾರತಕ್ಕೆ ಹೋಗಿ ಗೃಹಬಂಧನದಲ್ಲಿ ಇರುವುದರಲ್ಲೂ ತುಂಬಾ ರಿಸ್ಕ್ ಇದೆ ಎಂದು ಸೋನು ತಿಳಿಸಿದ್ದಾರೆ.

    ದುಬೈಗೆ ಬಂದಾಗ ಭಾರತಕ್ಕೆ ಮತ್ತೆ ಹಿಂದಿರುಗಬೇಕು ಎಂದು ನಾನು ಅಂದುಕೊಂಡಿದ್ದೆ. ಆದರೆ ಕೊನೆಯಲ್ಲಿ ಈ ರೀತಿ ಆಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ ಆದರೆ ನಾನು ಹಾಗೂ ನನ್ನ ಕುಟುಂಬಸ್ಥರು ಇಲ್ಲಿ ಕ್ಷೇಮವಾಗಿದ್ದೇವೆ ಎಂದು ಸೋನು ನಿಗಂ ಹೇಳಿದ್ದಾರೆ.

  • ಕದ್ದುಮುಚ್ಚಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೆಬ್ಬುಲಿ ಬೆಡಗಿ

    ಕದ್ದುಮುಚ್ಚಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೆಬ್ಬುಲಿ ಬೆಡಗಿ

    ಮುಂಬೈ: ಹೆಬ್ಬುಲಿ ಬೆಡಗಿ ಅಮಲಾ ಪೌಲ್ ಗೌಪ್ಯವಾಗಿ ತಮ್ಮ ಪ್ರಿಯಕರನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಅಮಲಾ ಪತಿ, ಮುಂಬೈ ಮೂಲಕದ ಗಾಯಕ ಭವಿಂದರ್ ಸಿಂಗ್ ತಮ್ಮ ಇನ್‍ಸ್ಟಾದಲ್ಲಿ ಮದುವೆ ಫೋಟೋಗಳನ್ನು ಹಂಚಿಕೊಂಡು ಅದಕ್ಕೆ, “ಮದುವೆಯ ಫೋಟೋಗಳು” ಎಂದು ಬರೆದು ಪೋಸ್ಟ್ ಮಾಡಿದ್ದರು. ಫೋಟೋಗಳು ವೈರಲ್ ಆಗುತ್ತಿದ್ದಂತೆ ಭವಿಂದರ್ ತಮ್ಮ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.

    ಭವಿಂದರ್ ತಮ್ಮ ಪೋಸ್ಟ್ ಡಿಲೀಟ್ ಮಾಡುವಷ್ಟರಲ್ಲಿ ಫೋಟೋಗಳು ಸಾಕಷ್ಟು ವೈರಲ್ ಆಗಿತ್ತು. ವರದಿಗಳ ಪ್ರಕಾರ ಭವಿಂದರ್ ಹಾಗೂ ಅಮಲಾ ಯಾರಿಗೂ ಮಾಹಿತಿ ನೀಡದೇ ಗೌಪ್ಯವಾಗಿ ಮದುವೆಯಾಗಿದ್ದಾರೆ. ಅಲ್ಲದೆ ಇಬ್ಬರು ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಮಾಹಿತಿ ನೀಡಿಲ್ಲ.

    ನಟಿ ಅಮಲಾ ಪೌಲ್ ಅವರಿಗೆ ಈಗಾಗಲೇ ಮದುವೆಯಾಗಿದ್ದು, ಈಗ ಎರಡನೇ ಮದುವೆಯಾಗಲು ಸಿದ್ಧರಾಗಿದ್ದಾರೆ ಎಂದು ತಿಳಿದು ಬಂದಿದೆ. 2014ರಲ್ಲಿ ನಿರ್ದೇಶಕ ಎ.ಎಲ್. ವಿಜಯ್ ಜೊತೆ ಅಮಲಾ ಹಸೆಮಣೆ ಏರಿದ್ದರು. ಆದರೆ ಮೂರು ವರ್ಷ ಸಾಂಸಾರಿಕ ಜೀವನ ನಡೆಸಿದ್ದು, ಬಳಿಕ ಇಬ್ಬರ ದೂರವಾಗಿದ್ದರು.

  • ಅಂದು ಬಾಡಿಗೆ ಮನೆಯಲ್ಲಿ, ಇಂದು ಭವ್ಯವಾದ ಬಂಗಲೆ ಒಡತಿಯಾದ ಗಾಯಕಿ ನೇಹಾ

    ಅಂದು ಬಾಡಿಗೆ ಮನೆಯಲ್ಲಿ, ಇಂದು ಭವ್ಯವಾದ ಬಂಗಲೆ ಒಡತಿಯಾದ ಗಾಯಕಿ ನೇಹಾ

    ಹೈದರಾಬಾದ್: ಜನಪ್ರಿಯ ಗಾಯಕಿ ನೇಹಾ ಕಕ್ಕರ್ ಉತ್ತರಾಖಂಡದ ರಿಷಿಕೇಶದಲ್ಲಿ ಒಂದು ವಿಸ್ತಾರವಾದ ಬಂಗಲೆಯನ್ನು ಖರೀದಿಸಿದ್ದಾರೆ. ಜೊತೆಗೆ ಕಠಿಣ ಶ್ರಮದಿಂದ ಏನನ್ನೂ ಬೇಕಾದರೂ ಸಾಧಿಸಬಹುದು ಎಂಬುದನ್ನು ನಿರೂಪಿಸಿದ್ದಾರೆ.

    ನೇಹಾ ಕಕ್ಕರ್ ಅವರು ತಾವು ಹುಟ್ಟಿ, ಬೆಳೆದ ಹಳೆಯ ಮನೆಯ ಫೋಟೋದೊಂದಿಗೆ ತಮ್ಮ ಹೊಸ ಬಂಗಲೆ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಮೂಲಕ ನೇಹಾ ಅವರು ತಮ್ಮ ಇಡೀ ಕುಟುಂಬವು ಬಾಡಿಗೆ ಮನೆಯಲ್ಲಿ ಹೇಗೆ ವಾಸಿಸುತ್ತಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೇ ಕಠಿಣ ಪರಿಶ್ರಮದಿಂದ ಅಂದಿನ ಬಾಡಿಗೆ ಮನೆಯಲ್ಲಿ ಬೆಳೆದು ಇಂದು ಅದೇ ನಗರದಲ್ಲಿ ಬಂಗಲೆಯ ಮಾಲೀಕರಾಗಿರುವುದರ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

    ಇನ್ಸ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಏನಿದೆ?
    “ಈ ಬಂಗಲೆಯನ್ನು ನಾವು ಈಗ ರಿಷಿಕೇಶದಲ್ಲಿ ಖರೀದಿಸಿದ್ದೇವೆ. ಜೊತೆಗೆ ನಮ್ಮ ಹಳೆಯ ಮನೆಯ ಫೋಟೋ ನೋಡಲು ಬಲಕ್ಕೆ ಸ್ವೈಪ್ ಮಾಡಿ. ಅದೇ ಮನೆಯಲ್ಲಿ ನಾನು ಹುಟ್ಟಿದ್ದು, ಒಂದು ರೂಮಿನಲ್ಲಿ ನಾವು ವಾಸಿಸುತ್ತಿದ್ದೆವು. ಆ ಸಣ್ಣ ಕೋಣೆಯಲ್ಲಿ ನಮ್ಮ ತಾಯಿ ಒಂದು ಟೇಬಲ್ ಇಟ್ಟಿದ್ದರು. ಅದೇ ನಮ್ಮ ಅಡುಗೆ ಮನೆಯಾಗಿತ್ತು. ಆ ರೂಮ್ ಕೂಡ ನಮ್ಮದಲ್ಲ, ಅದಕ್ಕೆ ನಾವು ಬಾಡಿಗೆ ಕೊಡುತ್ತಿದ್ದೆವು. ಈಗ ನಾನು ಅದೇ ನಗರದಲ್ಲಿ ನಮ್ಮ ಸ್ವಂತ ಬಂಗಲೆಯನ್ನು ಹೊಂದಿದ್ದೇನೆ” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಜೊತೆಗೆ ಅವರ ಕುಟುಂಬಕ್ಕೆ ಮತ್ತು ತಮ್ಮ ಹಿತೈಷಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

    ನೇಹಾ ಭಾವನಾತ್ಮಕ ಪೋಸ್ಟ್ ಮಾಡಿದ ನಂತರ ಅದಕ್ಕೆ ಅವರ ಸಹೋದ್ಯೋಗಿಗಳಾದ ಗೀತಾ ಕಪೂರ್, ಆದಿತ್ಯ ನಾರಾಯಣ್, ವಿಶಾಲ್ ದಾದ್ಲಾನಿ ಮತ್ತು ಮನೀಶ್ ಪಾಲ್ ಇತರರು ಕಮೆಂಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಜೀವನದಲ್ಲಿ ಕಠಿಣ ಪರಿಶ್ರಮದಿಂದ ಏನೂ ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ನೇಹಾ ಒಂದು ಉದಾಹರಣೆ ಎಂದು ವಿಶಾಲ್ ಹೇಳಿದ್ದಾರೆ. ನೇಹಾ ಅವರು ಬೆಳೆದು ಬಂದ ಹಾದಿ ಕನಸು ಕಾಣುವುದನ್ನು ಎಂದಿಗೂ ನಿಲ್ಲಿಸದಂತೆ ಇತರರಿಗೆ ಪ್ರೇರಣೆ ನೀಡುತ್ತದೆ ಎಂದು ಆದಿತ್ಯ ಕಮೆಂಟ್ ಮಾಡಿದ್ದಾರೆ.

    ನೇಹಾ ಜನಪ್ರಿಯ ಹಿನ್ನೆಲೆ ಗಾಯಕರಲ್ಲಿ ಒಬ್ಬರು. ನೇಹಾ ಅವರ ಸಹೋದರಿ ಸೋನು ಕಕ್ಕರ್ ಮತ್ತು ಸಹೋದರ ಟೋನಿ ಕಕ್ಕರ್ ಕೂಡ ಗಾಯಕರಾಗಿದ್ದು, ಕೆಲವು ಹಿಟ್ ಹಾಡುಗಳನ್ನು ಒಟ್ಟಿಗೆ ಹಾಡಿದ್ದಾರೆ.

    https://www.instagram.com/p/B9Y80pXHICf/?utm_source=ig_embed