Tag: singer

  • ಗಾಯಕಿ ಮೇಲೆ 6 ಬಾರಿ ಗುಂಡು ಹಾರಿಸಿ ಹತ್ಯೆ

    ಗಾಯಕಿ ಮೇಲೆ 6 ಬಾರಿ ಗುಂಡು ಹಾರಿಸಿ ಹತ್ಯೆ

    ಚಂಡೀಗಢ: ಹರಿಯಾಣದ ಗಾಯಕಿಯೊಬ್ಬರು ಪಾಣಿಪತ್‍ನಿಂದ ದೆಹಲಿಗೆ ಬರುವ ವೇಳೆ ಆಕೆಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

    22 ವರ್ಷದ ಹರ್ಷಿತಾ ದಹಿಯಾ ಗುಂಡಿನ ದಾಳಿಗೆ ಬಲಿಯಾದ ಗಾಯಕಿ. ಹರ್ಷಿತಾ ಮೇಲೆ 6 ಬಾರಿ ಕತ್ತಿಗೆ ಹಾಗೂ ಹಣೆಗೆ ಗುಂಡು ಹಾರಿಸಲಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆಂದು ಪೊಲೀಸರು ಹೇಳಿದ್ದಾರೆ.

    ಹರಿಯಾಣದ ಪಾಣಿಪತ್‍ನಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ದೆಹಲಿಯ ನರೇಲಾದಲ್ಲಿನ ಮನೆಗೆ ಹಿಂದಿರುಗುವಾಗ ಯುವತಿ ಮೇಲೆ ಗುಂಡಿನ ದಾಳಿ ನಡೆದಿದೆ. ಮಂಗಳವಾರ ಸಂಜೆ 4 ಗಂಟೆ ವೇಳೆಯಲ್ಲಿ ಯುವತಿಯ ಕಾರನ್ನು ಇಬ್ಬರು ವ್ಯಕ್ತಿಗಳು ಓವರ್ ಟೇಕ್ ಮಾಡಿ ಚಾಮರಾರಾ ಗ್ರಾಮದ ಬಳಿ ಅಡ್ಡಗಟ್ಟಿದ್ರು ಎಂದು ಹಿರಿಯ ಪೊಲೀಸ್ ಅಧಿಕಾರಿ ದೇಶ್ ರಾಜ್ ಹೇಳಿದ್ದಾರೆ.

    ಕಾರನ್ನು ಓವರ್ ಟೇಕ್ ಮಾಡಿದ ಬಳಿಕ ಇಬ್ಬರು ಅಪರಿಚಿತ ವ್ಯಕ್ತಿಗಳು ಹರ್ಷಿತಾ ಅವರ ಇಬ್ಬರು ಸಹಾಯಕರು ಹಾಗೂ ಕಾರು ಚಾಲಕನನ್ನು ಕಾರಿನಿಂದ ಕೆಳಗಿಳಿಯುವಂತೆ ಹೇಳಿದ್ರು. ನಂತರ ಹರ್ಷಿತಾ ಕಾರಿನೊಳಗೆ ಇದ್ದಾಗಲೇ ಆಕೆಯ ಮೇಲೆ 7 ಸುತ್ತು ಗುಂಡು ಹಾರಿಸಿದ್ದಾರೆ. 6 ಗುಂಡುಗಳು ಆಕೆಯ ತಲೆ ಹಾಗೂ ಕುತ್ತಿಗೆಯ ಭಾಗಕ್ಕೆ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ. ದಾಳಿಯ ಬಳಿಕ ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

    ಹರ್ಷಿತಾ ದಹಿಯಾ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮೊಬೈಲ್ ವಿಡಿಯೋವೊಂದನ್ನ ಹಾಕಿದ್ದರು. ನನಗೆ ಕೊಲೆ ಬೆದರಿಕೆಗಳು ಬರುತ್ತಿವೆ. ಆದ್ರೆ ಅದಕ್ಕೆಲ್ಲಾ ನಾನು ಹೆದರಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದರು. ಆದ್ರೆ ಜೀವಬೆದರಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರಾ ಇಲ್ಲವಾ ಎಂಬ ಬಗ್ಗೆ ಮಾಹಿತಿ ಸಿಕಿಲ್ಲ ಎಂದು ವರದಿಯಾಗಿದೆ.

    ಸದ್ಯಕ್ಕೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹರ್ಷಿತಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಾಣಿಪತ್ ಆಸ್ಪತ್ರೆಗೆ ಕಳಿಸಲಾಗಿದೆ.

  • ಜನಪ್ರಿಯ ಗಾಯಕ ಎಲ್.ಎನ್.ಶಾಸ್ತ್ರಿ ಇನ್ನಿಲ್ಲ

    ಜನಪ್ರಿಯ ಗಾಯಕ ಎಲ್.ಎನ್.ಶಾಸ್ತ್ರಿ ಇನ್ನಿಲ್ಲ

    ಬೆಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ಗಾಯಕ ಎಲ್.ಎನ್.ಶಾಸ್ತ್ರಿ ಅವರು ಅನಾರೋಗ್ಯದ ಕಾರಣ ಇಂದು ವಿಧಿವಶರಾಗಿದ್ದಾರೆ.

    ಬೆಂಗಳೂರಿನ ನಾಗರಬಾವಿಯಲ್ಲಿರುವ ನಿವಾಸದಲ್ಲಿ ಎಲ್.ಎನ್.ಶಾಸ್ತ್ರಿ ಕೊನೆಯುಸಿರೆಳೆದಿದ್ದಾರೆ. ಶಾಸ್ತ್ರಿ ಅವರು ದೀರ್ಘ ಕಾಲದಿಂದ ಕರುಳು ಕ್ಯಾನ್ಸರ್ ರೋಗದಿಂದ ನರುಳುತ್ತಿದ್ದರು.

    ಕನ್ನಡದ ಸ್ಟಾರ್ ನಟರ ಚಿತ್ರಗಳ ಸೂಪರ್ ಹಿಟ್ ಹಾಡುಗಳಿಗೆ ಶಾಸ್ತ್ರಿ ಧ್ವನಿಯಾಗಿದ್ದರು. ‘ಎ’, ‘ಜನುಮದ ಜೋಡಿ’, ‘ಸಿಪಾಯಿ’, ‘ಜೋಡಿ ಹಕ್ಕಿ’ ಚಿತ್ರದ ಹಾಡುಗಳು ಸೇರಿದಂತೆ 3000ಕ್ಕೂ ಅಧಿಕ ಹಾಡನ್ನು ಎಲ್.ಎನ್.ಶಾಸ್ತ್ರಿ ಹಾಡಿದ್ದಾರೆ. ಸಂಗೀತ ನಿರ್ದೇಶಕರೂ ಆಗಿದ್ದ ಅವರು 15ಕ್ಕೂ ಅಧಿಕ ಚಿತ್ರಗಳಿಗೆ ಮ್ಯೂಸಿಕ್ ನೀಡಿದ್ದಾರೆ. ಜೊತೆಗೆ ‘ಜನುಮದ ಜೋಡಿ’ ಚಿತ್ರದ ‘ಕೋಲು ಮಂಡೆ…’ ಹಾಡಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದರು.

    ಶಾಸ್ತ್ರಿ ಅವರ ಸಾವಿಗೆ ಸ್ಯಾಂಡಲ್‍ವುಡ್ ಗಣ್ಯರು ಕಂಬನಿ ಮಿಡಿದಿದ್ದಾರೆ.

     

  • 5 ಗಂಟೆಗಳಲ್ಲಿ 67 ಹಾಡುಗಳನ್ನ ವೀಣೆಯಲ್ಲಿ ನುಡಿಸಿ ವಿಶ್ವ ದಾಖಲೆ ನಿರ್ಮಿಸಿದ ಅಂಧ ಗಾಯಕಿ

    5 ಗಂಟೆಗಳಲ್ಲಿ 67 ಹಾಡುಗಳನ್ನ ವೀಣೆಯಲ್ಲಿ ನುಡಿಸಿ ವಿಶ್ವ ದಾಖಲೆ ನಿರ್ಮಿಸಿದ ಅಂಧ ಗಾಯಕಿ

    ಕೊಚ್ಚಿ: 5 ಗಂಟೆಗಳ ಕಾಲ ಸತತವಾಗಿ ವೀಣೆಯಲ್ಲಿ 67 ಹಾಡುಗಳನ್ನ ನುಡಿಸುವ ಮೂಲಕ ದಕ್ಷಿಣದ ಪ್ರಸಿದ್ಧ ಗಾಯಕಿ ವೈಕೋಮ್ ವಿಜಯಲಕ್ಷ್ಮೀ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

    ಭಾನುವಾರದಂದು ಕೊಚ್ಚಿಯಲ್ಲಿ ನಡೆದ ಸಂಗೀತ ಗೋಷ್ಠಿಯಲ್ಲಿ ದೃಷ್ಟಿಹೀನರಾದ ವಿಜಯಲಕ್ಷ್ಮೀ, ಈ ಹಿಂದೆ ನಿರ್ಮಿಸಲಾಗಿದ್ದ 51 ಹಾಡಿನ ದಾಖಲೆಯನ್ನು ಮುರಿದಿದ್ದಾರೆ. ಮೊದಲಿಗೆ 52 ಹಾಡುಗಳನ್ನ ನುಡಿಸಬೇಕು ಎಂದುಕೊಂಡಿದ್ದ ವಿಜಯಲಕ್ಷ್ಮೀ ಮಲಯಾಳಂ, ತಮಿಳು ಹಾಗೂ ಹಿಂದಿಯ ಹಾಡುಗಳು, 12 ಕೀರ್ತನೆಗಳು ಸೇರಿದಂತೆ ನಿರಂತರವಾಗಿ 67 ಹಾಡುಗಳನ್ನ ನುಡಿಸಿದ್ರು.

    ಒಟ್ಟು 67 ಹಾಡುಗಳನ್ನು ವಿಜಯಲಕ್ಷ್ಮೀ ಒಂದು ತಂತಿಯಿರುವ ಗಾಯತ್ರಿ ವೀಣೆ/ಏಕ ತಂತಿ ವೀಣೆಯಲ್ಲಿ ನುಡಿಸಿದ್ದು ಮತ್ತೊಂದು ವಿಶೇಷ. ಈ ಅಪರೂಪದ ಸಂಗೀತವಾದ್ಯವನ್ನು ನುಡಿಸುವಲ್ಲಿ ಪರಿಣಿತರಾಗಿರೋ ವಿಜಯಲಕ್ಷ್ಮೀ 5 ವರ್ಷಗಳ ಹಿಂದೆ ಗಾಯಕಿಯಾಗಿ ಮೊದಲ ಹಾಡನ್ನ ಹಾಡಿದ್ರು.

    ಗಾಯತ್ರಿ ವೀಣೆ: ವಿಜಯಲಕ್ಷ್ಮೀ ಅವರ ಅಭಿಮಾನಿಯೊಬ್ಬರು ಅವರಿಗೆ ಗಾಯತ್ರಿ ತಂಬೂರಿಯನ್ನ ಉಡುಗೊರೆಯಾಗಿ ನೀಡಿದ್ದರು. ಅದನ್ನ ಅವರ ತಂದೆಯ ಜೊತೆ ಸೇರಿ ಮರುವಿನ್ಯಾಸಗೊಳಿಸಿ ಏಕ ತಂತಿ ವಾದ್ಯವನ್ನಾಗಿ ಮಾಡಿದ್ರು. ವಯೋಲಿನ್ ಪರಿಣತರಾದ ಕುನ್ನಕ್ಕುಡಿ ವೈದ್ಯನಾಥನ್ ಅವರು ಒಮ್ಮೆ ವಿಜಯಲಕ್ಷ್ಮೀ ಅವರ ಈ ಹೊಸ ವಾದ್ಯದಿಂದ ಸಂಗೀತ ಕೇಳಿ ಇದಕ್ಕೆ ಗಾಯತ್ರಿ ವೀಣೆ ಎಂಬ ಹೆಸರು ಕೊಟ್ಟರು.

    ಮದುವೆ ರದ್ದು: ವಿಜಯಲಕ್ಷ್ಮೀ ಅವರ ಭಾವಿ ಪತಿ ಆಕೆಗೆ ಕಚೇರಿಗಳಲ್ಲಿ ಪ್ರದರ್ಶನ ನೀಡುವುದನ್ನು ನಿಲ್ಲಿಸಿ ಯಾವುದಾದ್ರೂ ಕಾಲೇಜಿನಲ್ಲಿ ಸಂಗೀತ ಶಿಕ್ಷಕಿಯಾಗು ಎಂದು ಹೇಳಿದ್ದರಿಂದ ಎರಡು ವಾರಗಳ ಹಿಂದೆ ವಿಜಯಲಕ್ಷ್ಮೀ ಸಂಗೀತಕ್ಕಾಗಿ ತಮ್ಮ ಮದುವೆಯನ್ನೇ ರದ್ದು ಮಾಡಿದ್ದಾರೆ. ಸಂಗೀತ ನನ್ನ ಬದುಕು. ನನ್ನ ವಿಕಲತೆಯನ್ನು ತೊಂದರೆ ಅಂತ ನಾನೆಂದೂ ಭಾವಿಸಿಲ್ಲ ಅಂತಾರೆ ವಿಜಯಲಕ್ಷ್ಮೀ.

    ವಿಜಯಲಕ್ಷ್ಮೀ ಅವರು ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಹಾಡಿದ್ದಾರೆ.