Tag: singer

  • ರಸ್ತೆ ಅಪಘಾತದಲ್ಲಿ ಗಾಯಕಿ ಸಾವು

    ರಸ್ತೆ ಅಪಘಾತದಲ್ಲಿ ಗಾಯಕಿ ಸಾವು

    ಮುಂಬೈ: ರಸ್ತೆ ಅಪಘಾತದಲ್ಲಿ ಮರಾಠಿ ಗಾಯಕಿ ಮೃತಪಟ್ಟ ಘಟನೆ ಗುರುವಾರ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

    ಗೀತಾ ಮಲಿ ಮೃತಪಟ್ಟ ಗಾಯಕಿ. ಗೀತಾ ಹಲವು ಮರಾಠಿ ಚಿತ್ರಗಳಿಗೆ ಹಾಡು ಹಾಡಿದ್ದಾರೆ. ಗುರುವಾರ ಗೀತಾ ಅಮೆರಿಕದಿಂದ ನಾಸಿಕ್‍ನಲ್ಲಿರುವ ತನ್ನ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ಮುಂಬೈ- ಆಗ್ರಾ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.

    ಗೀತಾ ಪ್ರಯಾಣಿಸುತ್ತಿದ್ದ ಕಾರು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಕಂಟೇನರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗೀತಾ ಮೃತಪಟ್ಟಿದ್ದಾಳೆ. ಗೀತಾ ಜೊತೆ ಆಕೆಯ ಪತಿ ವಿಜಯ್ ಕೂಡ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಅಪಘಾತದಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.

    ಅಪಘಾತದ ಸಂಭವಿಸಿದ ನಂತರ ಸ್ಥಳೀಯರು ಇಬ್ಬರನ್ನು ಶಾಹಾಪುರ ಗ್ರಾಮಾಂತರ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಗೀತಾ ಮೃತಪಟ್ಟಿದ್ದು, ಆಕೆಯ ಪತಿ ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಗೀತಾ ಹಲವು ಮರಾಠಿ ಚಿತ್ರಗಳಿಗೆ ಹಾಡು ಹಾಡಿದ್ದಾರೆ. ಅಲ್ಲದೆ ತಮ್ಮ ಸ್ವಂತ ಮ್ಯೂಸಿಕ್ ಆಲ್ಬಂ ಕೂಡ ಶುರು ಮಾಡಿದ್ದರು.

  • ನಾನು ಸೆಕ್ಸ್ ಲೈಫ್ ಎಂಜಾಯ್ ಮಾಡ್ತೇನೆ: ನಟಿ ಇಲಿಯಾನಾ

    ನಾನು ಸೆಕ್ಸ್ ಲೈಫ್ ಎಂಜಾಯ್ ಮಾಡ್ತೇನೆ: ನಟಿ ಇಲಿಯಾನಾ

    ಮುಂಬೈ: ಬಹುಭಾಷಾ ನಟಿ ಇಲಿಯಾನಾ ಡಿಕ್ರೂಸ್ ಕಾರ್ಯಕ್ರಮವೊಂದರಲ್ಲಿ ಸೆಕ್ಸ್ ಲೈಫ್ ಬಗ್ಗೆ ಹೇಳಿಕೆಯೊಂದು ನೀಡಿದ್ದು, ಇದೀಗ ಅದು ಸಾಕಷ್ಟು ಚರ್ಚೆಯಾಗುತ್ತಿದೆ.

    ಇತ್ತೀಚೆಗೆ ಇಲಿಯಾನಾ ಖ್ಯಾತ ಗಾಯಕ ಶಿಬಾನಿ ದಾಂಡೇಕರ್ ನಡೆಸಿಕೊಡುವ ‘ದಿ ಲವ್ ಲಾಫ್ ಲಿವ್ ಶೋ’ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಇಲಿಯಾನಾ ಸಿನಿಮಾಗಳ ಹೊರತಾಗಿ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ಮಾತನಾಡಿದ್ದಾರೆ.

    ಈ ಹಿಂದೆ ಇಲಿಯಾನಾ ನೀಡಿದ ಒಂದು ಹೇಳಿಕೆಯನ್ನು ಗಾಯಕ ಶಿಬಾನಿ ನೆನಪಿಸುತ್ತಾರೆ. ಈ ಮೊದಲು ಇಲಿಯಾನಾ, ಸೆಕ್ಸ್ ಹಾಗೂ ಪ್ರೀತಿಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದರು. ಶಿಬಾನಿ ಈ ಹೇಳಿಕೆಯನ್ನು ನೆನಪಿಸಿ ಇಲಿಯಾನಾ ಅವರಿಗೆ ಸೆಕ್ಸ್ ಲೈಫ್ ಬಗ್ಗೆ ಪ್ರಶ್ನಿಸುತ್ತಾರೆ.

    ಈ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಇಲಿಯಾನಾ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಇಷ್ಟಪಟ್ಟ ಮತ್ತೊಂದು ಹೇಳಿಕೆಯನ್ನು ಉಲ್ಲೇಖಿಸುತ್ತಿದ್ದೇನೆ. ನಾನು ಸೆಕ್ಸ್ ಲೈಫ್ ಎಂಜಾಯ್ ಮಾಡುತ್ತೇನೆ. ಇದನ್ನು ವರ್ಕೌಟ್ ರೀತಿ ತೆಗೆದುಕೊಳ್ಳುತ್ತೇನೆ. ನನಗೆ ಇದು ಸರಿ ಎನಿಸುವುದಿಲ್ಲ ಎಂದರು.

    ಬಳಿಕ ತಮ್ಮ ಮಾತಿನ ಬಗ್ಗೆ ಇಲಿಯಾನಾ ವಿವರಣೆ ನೀಡಿದ್ದಾರೆ. ನನ್ನ ಪ್ರಕಾರ ನೀವು ಸೆಕ್ಸ್ ಲೈಫ್ ಎಂಜಾಯ್ ಮಾಡಬೇಕು. ಆದರೆ ಅದಕ್ಕೆ ಸ್ವಲ್ಪ ಭಾವನೆಗಳು ಇರಬೇಕಾಗುತ್ತದೆ. ನೀವು ಪ್ರೀತಿಯಲ್ಲಿದ್ದಾಗ ದೈಹಿಕ ಸಂಪರ್ಕ ಬೆಳೆಸುವುದನ್ನು ಇಷ್ಟಪಡುತ್ತೀರಿ. ಏಕೆಂದರೆ ಇದರಿಂದ ಎರಡು ಆತ್ಮಗಳು ಒಂದಾಗುತ್ತದೆ ಎಂದು ಇಲಿಯಾನಾ ತಿಳಿಸಿದ್ದಾರೆ.

    ಸದ್ಯ ಇಲಿಯಾನಾ `ಪಾಗಲ್‍ಪಂತಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟ ಜಾನ್ ಅಬ್ರಾಹಂ, ಅನಿಲ್ ಕಪೂರ್, ಅರ್ಷದ್ ವಾರ್ಸಿ ಹಾಗೂ ನಟಿ ಕೃತಿ ಕರಬಂಧ ಅಭಿನಯಿಸುತ್ತಿದ್ದಾರೆ. ನವೆಂಬರ್ 22ರಂದು ಈ ಚಿತ್ರ ಬಿಡುಗಡೆ ಆಗಲಿದೆ.

  • ಮನೆಯಲ್ಲಿ ಪ್ರಸಿದ್ಧ ಅಂತಾರಾಷ್ಟ್ರೀಯ ಪಾಪ್ ಗಾಯಕಿ ಶವವಾಗಿ ಪತ್ತೆ

    ಮನೆಯಲ್ಲಿ ಪ್ರಸಿದ್ಧ ಅಂತಾರಾಷ್ಟ್ರೀಯ ಪಾಪ್ ಗಾಯಕಿ ಶವವಾಗಿ ಪತ್ತೆ

    ಸಿಯೋಲ್: ಪಾಪ್ ಗಾಯಕಿ ಮನೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಸೋಮವಾರ ದಕ್ಷಿಣ ಕೊರಿಯಾದ ಜಿಯೊಂಗ್ಲಿನಲ್ಲಿ ನಡೆದಿದೆ.

    ಸುಲ್ಲಿ(25) ಶವವಾಗಿ ಪತ್ತೆಯಾದ ಗಾಯಕಿ. ಸುಲ್ಲಿ ಮ್ಯಾನೇಜರ್ ಆಕೆಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದನು. ಆದರೆ ಆಕೆ ಕರೆ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಗಾಬರಿಗೊಂಡ ಮ್ಯಾನೇಜರ್ ಆಕೆಯ ಮನೆಗೆ ಬಂದಿದ್ದಾನೆ. ಈ ವೇಳೆ ಸುಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

    ಮಾರ್ಚ್ 29, 1994ರಂದು ಹುಟ್ಟಿದ ಸುಲ್ಲಿ, ಕೆ-ಪಾಪ್ ಬ್ಯಾಂಡ್‍ನ ಸದಸ್ಯೆ ಆಗಿದ್ದಳು. ಮಾಧ್ಯಮಗಳ ಪ್ರಕಾರ ಸಾಮಾಜಿಕ ಜಾಲತಾಣದಲ್ಲಿ ಜನರು ನಿಂದಿಸುತ್ತಿದ್ದಕ್ಕೆ 2014ರಲ್ಲಿ ಸುಲ್ಲಿ ತನ್ನ ಕೆಲಸದಿಂದ ಬ್ರೇಕ್ ತೆಗೆದುಕೊಂಡಿದ್ದಳು. ಬಳಿಕ 2015ರಲ್ಲಿ ಆ ತಂಡದಿಂದ ಹೊರಬಂದು ನಟನೆಯತ್ತ ಆಸಕ್ತಿ ವಹಿಸಿದ್ದಳು.

    ಸುಲ್ಲಿ ಮೂರು ವರ್ಷಗಳ ನಂತರ ಅಂದರೆ 2018ರಲ್ಲಿ ಸಂಗೀತ ಕೆಲಸವನ್ನು ಪುನರಾಂಭಿಸಿದ್ದಳು. ಜೂನ್ 2019ರಲ್ಲಿ ಸುಲ್ಲಿ ಗಾಬ್ಲಿನ್ ಎಂಬ ಆಲ್ಬಂ ಮೂಲಕ ಸೋಲೋ ಗಾಯಕಿಯಾಗಿ ಡೆಬ್ಯು ಮಾಡಿದ್ದಳು. ನಂತರ 2005ರಲ್ಲಿ ಸುಲ್ಲಿ ಕಿರುತೆರೆಯಲ್ಲಿ ನಟಿಸಲು ಶುರು ಮಾಡಿದ್ದಳು.

    2012ರಲ್ಲಿ ‘ಬ್ಯೂಟಿಫುಲ್ ಯೂ’ ಕಾರ್ಯಕ್ರಮಕ್ಕಾಗಿ ಸುಲ್ಲಿ ನ್ಯೂ ಸ್ಟಾರ್ ಅವಾರ್ಡ್ ಪಡೆದುಕೊಂಡಿದ್ದಳು. ಸುಲ್ಲಿ ಪ್ಯಾನಿಕ್ ಡಿಸಾರ್ಡರ್ (ಭಯದಿಂದ ಅಸ್ವಸ್ಥತೆ)ನಿಂದ ಬಳಲುತ್ತಿದ್ದಳು. ಅಲ್ಲದೆ ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ, “ನನಗೆ ಜೊತೆ ಆತ್ಮೀಯರಾಗಿದ್ದವರೇ ನನ್ನನ್ನು ಬಿಟ್ಟು ಹೋಗಿದ್ದಾರೆ. ನನಗೆ ಅವರಿಂದ ತುಂಬಾ ನೋವಾಗಿತ್ತು. ನನ್ನನ್ನು ಅರ್ಥ ಮಾಡಿಕೊಳ್ಳುವವರು ಯಾರು ಇಲ್ಲ ಎಂದು ಅನಿಸುತ್ತಿತ್ತು” ಎಂದು ಹೇಳಿಕೊಂಡಿದ್ದಳು.

  • ಕನ್ನಡದ ಕುವರನಿಗೆ ಅವಮಾನ- ಹಿಂದಿ ಬರಲ್ಲ ಅಂತ ಮೈಕ್ ಕಸಿದುಕೊಂಡ್ರು

    ಕನ್ನಡದ ಕುವರನಿಗೆ ಅವಮಾನ- ಹಿಂದಿ ಬರಲ್ಲ ಅಂತ ಮೈಕ್ ಕಸಿದುಕೊಂಡ್ರು

    ಕಲಬುರಗಿ: ರಾಜ್ಯದಲ್ಲಿ ನಮ್ಮ ಹಾವೇರಿಯ ಕುರಿಗಾಹಿ, ಗಾಯಕ ಹನುಮಂತ ಹವಾ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಇಂತಹ ಹನುಮಂತರನ್ನು ಕಲಬುರಗಿಯ ಓರ್ವ ಆಯೋಜಕರು ಕಾರ್ಯಕ್ರಮಕ್ಕೆ ಕರೆಸಿ ಅವಮಾನ ಮಾಡಿದ್ದಾರೆ. ಇದು ಇದೀಗ ಕಲಬುರಗಿ ಸೇರಿದಂತೆ ರಾಜ್ಯದ ಜನರಲ್ಲಿ ಆಯೋಜಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಹನುಮಂತು ಅಂದ್ರೆ ಸಾಕು ಕಲಬುರಗಿ ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲಿ ಅವರ ಅಭಿಮಾನಿಗಳಿದ್ದಾರೆ. ಹೀಗಾಗಿಯೇ ಕಲಬುರಗಿಯಲ್ಲಿ ಶನಿವಾರ ಖಾಸಗಿ ಕಾರ್ಯಕ್ರಮ ಆಯೋಜಿಸಿ (ದಿ ಸ್ಟಾರ್ ವರ್ಲ್ಡ್  ಹಾನರ್ಸ್ ದಿ ಬ್ರೇವ್ ಹಾರ್ಟ್ಸ್) ಆಯೋಜಕರು ಹನುಮಂತರನ್ನು ಕರೆಸಿದ್ದರು. ಹೀಗಾಗಿ ಅವರ ಅಪಾರ ಅಭಿಮಾನಿಗಳು ಜವಾರಿ ಸಾಂಗ್ ಕೇಳಲು ಕಾಯುತ್ತಿದ್ದರು. ಅಷ್ಟರಲ್ಲಿ ಅಲ್ಲಿ ನಿರೂಪಣೆ ಮಾಡುತ್ತಿದ್ದ ವ್ಯಕ್ತಿ ಹನುಮಂತ ಅವರ ವೇಷ ಭೂಷಣ ಕಂಡು ಜೋಕ್ ಮಾಡಿದ್ದು, ಹಿಂದಿಯಲ್ಲಿ ಮಾತನಾಡಲು ಹೇಳಿ ಹನುಮಂತನಿಗೇ ಕಿಂಡಲ್ ಮಾಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೇ ಆ ನಿರೂಪಕ ನಿನಗೆ ಹಿಂದಿ ಬರಲ್ಲ ನನಗೇ ಕನ್ನಡ ಬರಲ್ಲ ಅಂತಾ ಹನುಮಂತನ ಕೈಯಲ್ಲಿದ್ದ ಮೈಕ್ ಕಸಿದುಕೊಂಡಿದ್ದಾರೆ. ಆ ಮೈಕ್‍ನ್ನು ಕಸಿದು ಹಿಂದಿ ಬಿಗ್‍ಬಾಸ್-9ರ ಸೀಸನ್‍ನ ಖ್ಯಾತಿಯ ನಟಿ ಸೋನಾಲಿ ರಾವತ್‍ಗೆ ನೀಡಿದ್ದಾರೆ. ಇದನ್ನೂ ಓದಿ: ಸರಿಗಮಪ ವೇದಿಕೆಯಲ್ಲಿ ಹನುಮಂತ ತಂಗಿಗೆ ಸಿಕ್ತು ಅಚ್ಚರಿಯ ಉಡುಗೊರೆ

    ಈ ಕಾರ್ಯಕ್ರಮಕ್ಕೆ ಡಬ್ಲೂಡಬ್ಲೂಇ ಖ್ಯಾತಿಯ ದಿ ಗ್ರೇಟ್ ಖಲಿ ಸಹ ಆಗಮಿಸಿದ್ದು, ಖಲೀ ಸೇರಿದಂತೆ ಕಾರ್ಯಕ್ರಮಕ್ಕೆ ಆಗಮಿಸಿದ ಇತರೆ ಕಲಾವಿದರನ್ನು ವೇದಿಕೆಗೆ ಕರೆಯಲಾಗಿತ್ತು. ಆದರೆ ಮುಗ್ಧ ಮನಸ್ಸಿನ ಹನುಮಂತನನ್ನು ಮೈಕ್ ಕಸಿದು ಕೆಳಗೆ ಕಳುಹಿಸಿದ ನಂತರ ಸೌಜನ್ಯಕ್ಕೂ ಸಹ ವೇದಿಕೆಗೆ ಕರೆಯಲಿಲ್ಲ. ಅದೇ ವೇದಿಕೆಯಲ್ಲಿ ಹಿಂದಿಯ ಸರಿಗಮಪ ಸಿಂಗರ್, ಜಯಶ್ ಕುಮಾರ್ ಕನ್ನಡದ ಚುಟು ಚುಟು ಅಂತೈದೇ ಅಂತಾ ಹಾಡು ಹಾಡಲು ಮುಂದಾದ್ರೆ, ಆತನ ಹಾಡಿಗೆ ಮ್ಯೂಸಿಕ್ ಹಾಕದೇ ಅರ್ಧದಲ್ಲಿಯೇ ಆತನ ಹಾಡು ನಿಲ್ಲಿಸಲಾಯ್ತು. ಆತನನ್ನು ಸಹ ವೇದಿಕೆಯಿಂದ ಕರೆಸಿ ಮತ್ತೆ ಕನ್ನಡಕ್ಕೆ ಅವಮಾನ ಮಾಡಲಾಯಿತು. ಇದನ್ನೂ ಓದಿ: ಅಂದುಕೊಂಡಿದ್ದೆ ಆಯ್ತು, ಖುಷಿ ತಡೆಯಲು ಆಗ್ತಿಲ್ಲ: ರನ್ನರ್ ಅಪ್ ಹನುಮಂತ

    ಹನುಮಂತ ಬರ್ತಾರೆ ಅಂತ ಬಹುತೇಕರು ಕಾರ್ಯಕ್ರಮಕ್ಕೆ ಬಂದಿದ್ದರು. ಹಿಂದಿ ನಟರು ಬಂದ ಕೂಡಲೇ ಹನುಮಂತರ ಮೈಕ್ ಕಸಿದುಕೊಂಡರು. ಹಿಂದಿ ಗಾಯಕರಿಂದಲೇ ಹಾಡುಗಳನ್ನು ಹಾಡಿಸಿದರು. ಹನುಮಂತ ಅವರಿಗೆ ಹಿಂದಿ, ಇಂಗ್ಲಿಷ್ ಬರಲ್ಲ ಎಂದು ಕಾರ್ಯಕ್ರಮ ನಿರೂಪಕ ಅವಮಾನ ಮಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳನ್ನು ಹಾಡಿಸಲು ಆಯೋಜಕರು ಹಿಂದೇಟು ಹಾಕಿದ್ದು ಕನ್ನಡಕ್ಕೆ ಅವಮಾನವಾಗಿದೆ. ಇಲ್ಲಿ ಕೇವಲ ಹನುಮಂತ ಅವರಿಗೆ ಮಾತ್ರ ಅವಮಾನವಾಗಿಲ್ಲ, ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲ ಕನ್ನಡಿಗರು ಅವಮಾನವಾದಂತೆ ಎಂದು ಕರವೇ ಸದಸ್ಯ ರವಿ ಖಂಡಿಸಿದ್ದಾರೆ. ಇದನ್ನೂ ಓದಿ: ಮೈ ಮರೆತು ಹಾಡು ಹೇಳ್ತಿದ್ದ ಹನುಮಂತನ ಮೊಬೈಲ್ ಕದ್ದ ಕಳ್ಳರು

    ಹನುಮಂತನನ್ನು ವೇದಿಕೆಯೇ ಅವಮಾನ ಮಾಡಿದ ಕೆಲವೇ ನಿಮಿಷಗಳಲ್ಲಿ ಮಳೆ ಬಂದಿರುವ ಹಿನ್ನೆಲೆ, ಕಾರ್ಯಕ್ರಮವನ್ನು ಆಯೋಜಕರು ಸ್ಥಗಿತ ಮಾಡಿ ಸ್ಥಳದಿಂದ ಕಾಲ್ಕಿತ್ತರು. ಈ ಮೂಲಕ ಹನುಮಂತು ಹಾಡಿಗಾಗಿ ಬಂದಿದ್ದ ಅಭಿಮಾನಿಗಳು ಗಾಯಕನಿಗೆ ಅವಮಾನ ಹಾಗೂ ಹಾಡು ಕೇಳದ ಹಿನ್ನೆಲೆ ಆಕ್ರೋಶ ಹೊರಹಾಕಿದರು. ನೂರಾರು ಕಿಮೀನಿಂದ ದೂರ ಕರೆಸಿ ಈ ರೀತಿ ಅವಮಾನ ಮಾಡಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಒಂದೇ ಒಂದು ಚಾನ್ಸ್ ಕೊಡಿ – ಹನುಮಂತ ಅಭಿಮಾನಿ ಮನವಿ

  • ಹೊಟ್ಟೆಗೆ ಬಡಿದ ರಾಕೆಟ್- ಪಾಪ್ ಗಾಯಕಿ ವೇದಿಕೆಯಲ್ಲೇ ಸಾವು

    ಹೊಟ್ಟೆಗೆ ಬಡಿದ ರಾಕೆಟ್- ಪಾಪ್ ಗಾಯಕಿ ವೇದಿಕೆಯಲ್ಲೇ ಸಾವು

    ಮ್ಯಾಡ್ರಿಡ್: ಹೊಟ್ಟೆಗೆ ರಾಕೆಟ್ ಬಡಿದು ಪಾಪ್ ಗಾಯಕಿ ವೇದಿಕೆಯಲ್ಲೇ ಮೃತಪಟ್ಟ ಘಟನೆ ಸ್ಪೇನ್‍ನ ಲಾಸ್ ಬರ್ಲನ್ಸ್‍ನಲ್ಲಿ ನಡೆದಿದೆ.

    ಜೊವಾನ್ನಾ ಸೆನ್ಜ್(30) ಮೃತಪಟ್ಟ ಗಾಯಕಿ. ಜೊವಾನ್ನಾ ಭಾನುವಾರ ಲಾಸ್ ಬರ್ಲನ್ಸ್ ನಲ್ಲಿ ನಡೆಯುತ್ತಿದ್ದ ಮ್ಯೂಸಿಕಲ್ ಫೆಸ್ಟಿವಲ್‍ನಲ್ಲಿ ತನ್ನ ಸೂಪರ್ ಹಾಲಿವುಡ್ ಆರ್ಕೆಸ್ಟ್ರಾ ತಂಡದ ಜೊತೆ ಪ್ರದರ್ಶನ ನೀಡುತ್ತಿದ್ದರು. ಈ ವೇಳೆ ವೇದಿಕೆ ಮೇಲೆ ಆಕಸ್ಮಿಕವಾಗಿ ಪಟಾಕಿ ಸಿಡಿದ ಕಾರಣ ಜೊವಾನ್ನಾ ಮೃತಪಟ್ಟಿದ್ದಾರೆ.

    ಸ್ಥಳೀಯರ ಪ್ರಕಾರ ಎರಡು ರಾಕೆಟ್ ಅನ್ನು ಇಡಲಾಗಿತ್ತು. ಒಂದು ರಾಕೆಟ್ ಸರಿಯಾದ ಮಾರ್ಗದಲ್ಲಿ ಹೋದರೆ, ಮತ್ತೊಂದು ರಾಕೆಟ್ ಜೊವಾನ್ನಾರ ಹೊಟ್ಟೆಗೆ ಬಡಿದಿದೆ. ಪರಿಣಾಮ ಜೊವಾನ್ನಾ ಪ್ರಜ್ಞೆ ತಪ್ಪಿದ್ದರು. ವೇದಿಕೆ ಮೇಲಿದ್ದ ತಂಡದ ಸದಸ್ಯರು ಜೊವಾನ್ನಾರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಸ್ಪತ್ರೆಗೆ ಹೋದ ಕೆಲವೇ ನಿಮಿಷದಲ್ಲಿ ಜೊವಾನ್ನಾ ನಿಧನರಾಗಿದ್ದಾರೆ.

    ಈ ಕಾರ್ಯಕ್ರಮಕ್ಕೆ ಸುಮಾರು 1000 ಮಂದಿ ಆಗಮಿಸಿದ್ದರು. ಈ ಘಟನೆ ನಡೆದ ಸಂದರ್ಭದಲ್ಲಿ ಗದ್ದಲ ಉಂಟಾಯಿತು. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ವೇದಿಕೆ ತಯಾರಿಸುವ ಕಂಪನಿ ಮತ್ತು ಕಾನ್ಸರ್ಟ್ ನಡೆಸುವ ಗುಂಪು, ಅವರು ಕಳೆದ ಹಲವಾರು ವರ್ಷಗಳಿಂದ ಇಂತಹ ಪ್ರದರ್ಶನಗಳನ್ನು ಮಾಡುತ್ತಿದ್ದಾರೆ. ಆದರೆ ಈ ಘಟನೆ ಹಿಂದೆ ಎಂದು ಸಂಭವಿಸಿಲ್ಲ ಎಂದು ಹೇಳಿದ್ದಾರೆ.

  • ಸೋದರನಿಂದಲೇ ಗಾಯಕಿ ಹತ್ಯೆ

    ಸೋದರನಿಂದಲೇ ಗಾಯಕಿ ಹತ್ಯೆ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮರ್ಯಾದಾ ಹತ್ಯೆಯಾಗಿದ್ದು, ಪಾಸ್ತೋ ಗಾಯಕಿಯೊಬ್ಬರನ್ನು ಆಕೆಯ ಸಹೋದರನೇ ಕೊಲೆ ಮಾಡಿರುವ ಘಟನೆ ಉತ್ತರ ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ನಡೆದಿದೆ.

    ಸ್ವಾತ್ ಜಿಲ್ಲೆಯ ಬಾನ್ರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಗಾಯಕಿ ಸನಾಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಈ ಕುರಿತು ತನಿಖೆ ಕೈಗೊಂಡಿರುವ ಪೊಲೀಸರು, ಸನಾಳನ್ನು ಆಕೆಯ ಸಹೋದರನೇ ಕೊಲೆ ಮಾಡಿದ್ದಾನೆ. ಘಟನೆಯ ನಂತರ ಆತ ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.

    ಇದೊಂದು ಮರ್ಯಾದಾ ಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಖಚಿತವಾಗಿ ತಿಳಿದು ಬಂದಿಲ್ಲ. ಸದ್ಯಕ್ಕೆ ಪೊಲೀಸರು ಗಾಯಕಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಸೈದು ಷರೀಫ್ ಆಸ್ಪತ್ರೆಗೆ ರವಾನಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

    ಉತ್ತರ ಖೈಬರ್ ಪಖ್ತುಂಖ್ವಾ ಪಾಸ್ತೋ ಗಾಯಕರಿಗೆ ಎಂದೂ ಸುರಕ್ಷಿತ ಸ್ಥಳವಾಗಿಲ್ಲ. ಏಕೆಂದರೆ ಅನೇಕ ಮಹಿಳಾ ಗಾಯಕರನ್ನು ಅವರ ಸಂಬಂಧಿಕರೇ ಕೊಲೆ ಮಾಡಿದ್ದಾರೆ.  ಮೇ 7, 2019 ರಂದು ಸ್ಥಳೀಯ ಗಾಯಕಿ ಮೀನಾರನ್ನು ಸ್ವಾತ್‍ನಲ್ಲಿ ಕೊಲೆ ಮಾಡಲಾಗಿತ್ತು. ಮೀನಾರನ್ನು ಪತಿಯೇ ಕೊಲೆ ಮಾಡಲಾಗಿದೆ ಎಂದು ವರದಿಯಾಗಿತ್ತು.

  • ಬಾಲಿವುಡ್‍ಗೆ ಕಾಲಿಟ್ಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಹಿಳೆ

    ಬಾಲಿವುಡ್‍ಗೆ ಕಾಲಿಟ್ಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಹಿಳೆ

    ಮುಂಬೈ: ಕಳೆದ ತಿಂಗಳು ರೈಲ್ವೆ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಹಾಡು ಹಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಹಿಳೆಗೆ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದರು. ಆದರೆ ಈಗ ಅವರು ಬಾಲಿವುಡ್‍ಗೂ ಎಂಟ್ರಿ ಕೊಟ್ಟಿದ್ದಾರೆ.

    ಖ್ಯಾತ ಬಾಲಿವುಡ್ ಗಾಯಕ ಹಿಮೇಶ್ ರೇಶ್ಮಿಯಾ ಅವರು ತಮ್ಮ ಹೊಸ ಚಿತ್ರದಲ್ಲಿ ಹಾಡಲು ರಾನು ಮೊಂಡಲ್ ಅವರಿಗೆ ಅವಕಾಶ ನೀಡಿದ್ದಾರೆ. ಈ ವಿಷಯವನ್ನು ಸ್ವತಃ ಹಿಮೇಶ್ ರೇಶ್ಮಿಯಾ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಹಾಕುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಹಿಳೆ ಈಗ ರಿಯಾಲಿಟಿ ಶೋಗೆ ಎಂಟ್ರಿ

    ಈ ವಿಡಿಯೋದಲ್ಲಿ ರಾನು ಮೊಂಡಲ್ ಅವರು ಹಾಡು ರೆಕಾರ್ಡ್ ಮಾಡುತ್ತಿದ್ದಾಗ ಹಿಮೇಶ್ ಅವರಿಗೆ ಪ್ರೋತ್ಸಾಹ ನೀಡಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಹಿಮೇಶ್ ಅವರನ್ನು ಹೊಗಳುತ್ತಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ಕೂಡ ಶೇರ್ ಮಾಡಿಕೊಳ್ಳುತ್ತಿದ್ದಾರೆ.

    ವರದಿಗಳ ಪ್ರಕಾರ ಹಿಮೇಶ್ ಅವರು ತಮ್ಮ ಮುಂಬರುವ ‘ಹ್ಯಾಪಿ ಹಾರ್ಡಿ ಮತ್ತು ಹೀರ್’ ಚಿತ್ರದಲ್ಲಿ ಹಾಡು ಹಾಡಲು ಅವಕಾಶ ನೀಡಿದ್ದಾರೆ. ರಾನು ಅವರು ಈ ಚಿತ್ರದ ‘ತೇರಿ ಮೇರಿ ಕಹಾನಿ’ ಎಂಬ ಟೈಟಲ್ ಹಾಡನ್ನು ಹಾಡಲಿದ್ದಾರೆ. ಇದರ ಜೊತೆ ರಾನು ಅವರು ರಿಯಾಲಿಟಿ ಶೋನಲ್ಲಿ ಭಾಗಿಯಾಗಲಿದ್ದಾರೆ.

    ಯಾರಿದ್ದು ರಾನು ಮೊಂಡಲ್?
    ಕಳೆದ ತಿಂಗಳು ಪಶ್ಚಿಮ ಬಂಗಾಳದ ರಣಘಾಟ್ ನಿಲ್ದಾಣದಲ್ಲಿ ಮೊಂಡಲ್ ಎಂಬವರು 1972ರಲ್ಲಿ ಬಿಡುಗಡೆಯಾದ `ಶೋರ್’ ಚಿತ್ರದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿದ “ಏಕ್ ಪ್ಯಾರ್ ಕಾ ನಗ್ಮಾ ಹೇ” ಚಿತ್ರದ ಹಾಡನ್ನು ಹಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಮೊಂಡಲ್ ಅವರ ಈ ವಿಡಿಯೋವನ್ನು `ಬಾರ್ಪೆಟಾ ಟೌನ್ ದಿ ಪ್ಲೇಸ್ ಆಫ್ ಪೀಸ್’ ಪೇಜ್ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿತ್ತು. ಈ ವಿಡಿಯೋ ವೈರಲ್ ಆಗಿದ್ದು, ಮೊಂಡಲ್ ಅವರಿಗೆ ಮುಂಬೈನಲ್ಲಿ ನಡೆಯುವ ರಿಯಾಲಿಟಿ ಶೋನಲ್ಲಿ ಅವಕಾಶ ಸಿಕ್ಕಿತ್ತು. ಮಹಿಳೆಯೊಬ್ಬರು ಮೊಂಡಲ್ ಅವರನ್ನು ಗುರುತಿಸಿ ಅವರನ್ನು ಸಂಪೂರ್ಣವಾಗಿ ಬದಲಾಯಿಸಿದ್ದರು.

  • ಮೊಬೈಲ್‍ಗಾಗಿ ಅಪ್ರಾಪ್ತನಿಂದ ಯೂಟ್ಯೂಬ್ ಗಾಯಕನ ಕೊಲೆ

    ಮೊಬೈಲ್‍ಗಾಗಿ ಅಪ್ರಾಪ್ತನಿಂದ ಯೂಟ್ಯೂಬ್ ಗಾಯಕನ ಕೊಲೆ

    ಮುಂಬೈ: ಮೊಬೈಲ್‍ಗಾಗಿ ಅಪ್ರಾಪ್ತ ಬಾಲಕನೊಬ್ಬ ಯೂಟ್ಯೂಬ್ ಗಾಯಕನನ್ನು ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

    ತೇಜ್ ಕುಮಾರ್ ರಾಮ್ (22) ಕೊಲೆಯಾದ ಗಾಯಕ. ತೇಜ್ ಕುಮಾರ್ ಭೋಜ್‍ಪುರಿ ಗಾಯಕನಾಗಿದ್ದು, ಜೊತೆಗೆ ರೆಡ್ ಚಿಲ್ಲಿ ಹೋಟೆಲಿನ ಡೆಲಿವರಿ ಬಾಯ್ ಆಗಿ ಕೂಡ ಕೆಲಸ ಮಾಡುತ್ತಿದ್ದನು. ಮೊಬೈಲ್ ವಿಚಾರಕ್ಕಾಗಿ ಆತನನ್ನು ಕೊಲೆ ಮಾಡಲಾಗಿದ್ದು, ಸದ್ಯ ಆರೋಪಿಗಳಾದ ದರ್ಪನ್ ವಾಲೆಕರ್ ಹಾಗೂ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

    ಶನಿವಾರ ಬೆಳಗ್ಗೆ ತೇಜ್ ಕುಮಾರ್ ಫುಡ್ ಡೆಲಿವರಿ ನೀಡಲು ಠಾಗೂರ್ ನಗರಕ್ಕೆ ಹೋಗುತ್ತಿದ್ದನು. ಈ ವೇಳೆ ಇಬ್ಬರು ತೇಜ್ ಕುಮಾರ್ ನನ್ನು ನಿಲ್ಲಿಸಿ ಆತನ ಮೊಬೈಲ್ ಕೇಳಿದ್ದಾರೆ. ಆದರೆ ತೇಜ್ ಮೊಬೈಲ್ ಕೊಡಲು ನಿರಾಕರಿಸಿದ್ದಾನೆ. ಮೊಬೈಲ್ ಕೊಡಲು ನಿರಾಕರಿಸಿದ್ದಾಗ ಆರೋಪಿಗಳು ಆತನನ್ನು ಹೊಡೆದು ಬಳಿಕ ಚಾಕುವಿನಿಂದ ಇರಿದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಜೋಶಿ ತಿಳಿಸಿದ್ದಾರೆ.

    ಈ ಘಟನೆ ನಂತರ ತೇಜ್ ಕುಮಾರ್ ನನ್ನು ಮಹಾತ್ಮ ಫುಲೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಷ್ಟರಲ್ಲೇ ತೇಜ್ ಮೃತಪಟ್ಟಿದ್ದನು. ಕಳ್ಳರು ಆತನಿಂದ ದರೋಡೆ ಮಾಡಲು ಯತ್ನಿಸಿದ್ದಾರೆ. ಸದ್ಯ ಇಬ್ಬರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಸಂಜಯ್ ಹೇಳಿದ್ದಾರೆ.

    ತೇಜ್‍ಕುಮಾರ್ ರಾಮ್ ತಾನು ಹಾಡಿದ ಭೋಜ್‍ಪುರಿಯಲ್ಲಿ ಹಾಡನ್ನು ಯೂಟ್ಯೂಬ್‍ನಲ್ಲಿ ಅಪ್ಲೋಡ್ ಮಾಡುತ್ತಿದ್ದನು. ಅಲ್ಲದೆ ಯೂಟ್ಯೂಬ್‍ನಲ್ಲಿ ಆತನಿಗೆ ಸಾಕಷ್ಟು ಹಿಂಬಾಲಕರು ಕೂಡ ಇದ್ದಾರೆ.

  • ಮಗಳು ದೊಡ್ಡವಳಾದ ಮೇಲೆ ಸೆಕ್ಸ್ ಬಗ್ಗೆ ಮಾತನಾಡಲು ಕಾಯ್ತಿದ್ದೇನೆ: ಗಾಯಕ

    ಮಗಳು ದೊಡ್ಡವಳಾದ ಮೇಲೆ ಸೆಕ್ಸ್ ಬಗ್ಗೆ ಮಾತನಾಡಲು ಕಾಯ್ತಿದ್ದೇನೆ: ಗಾಯಕ

    ಮುಂಬೈ: ಬಾಲಿವುಡ್ ಗಾಯಕ ಬಾದ್‍ಶಾ ಅವರು ನನ್ನ ಮಗಳು ದೊಡ್ಡವಳಾದ ಮೇಲೆ ಸೆಕ್ಸ್ ಬಗ್ಗೆ ಮಾತನಾಡಲು ಕಾಯುತ್ತಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

    ಗಾಯಕರಾಗಿರುವ ಬಾದ್‍ಶಾ ‘ಖಾನದಾನಿ ಶಫಖಾನಾ’ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರದಲ್ಲಿ ಬಾದ್‍ಶಾಗೆ ನಟಿಯಾಗಿ ಸೋನಾಕ್ಷಿ ಸಿನ್ಹಾ ನಟಿಸುತ್ತಿದ್ದಾರೆ. ಈ ಚಿತ್ರ ಲೈಂಗಿಕ ಶಿಕ್ಷಣಕ್ಕೆ ಆಧಾರಿತವಾಗಿದ್ದು, 2 ವರ್ಷದ ಮಗಳ ತಂದೆಯಾಗಿರುವ ಬಾದ್‍ಶಾ ಈ ಚಿತ್ರದ ಬಗ್ಗೆ ಮಾತನಾಡಿದ್ದಾರೆ.

    ಈ ವೇಳೆ ಮಾತನಾಡಿದ ಬಾದ್‍ಶಾ, ನಾನು ನನ್ನ ಮಗಳು ದೊಡ್ಡವಳಾಗಲಿ ಎಂದು ಕಾಯುತ್ತಿದ್ದೇನೆ. ಅವಳು ಸರಿಯಾದ ವಯಸ್ಸಿಗೆ ಬಂದಾಗ ನಾನು ಅವಳ ಜೊತೆ ಲೈಂಗಿಕ ಶಿಕ್ಷಣದ ಬಗ್ಗೆ ಮಾತನಾಡುತ್ತೇನೆ. ಈ ವಿಷಯದ ಬಗ್ಗೆ ನಮ್ಮ ಸಮಾಜದಲ್ಲಿ ಯಾರು ಮಾತನಾಡುವುದಿಲ್ಲ. ನನ್ನ ಮಗಳಿಗೆ ಎಲ್ಲವು ಗೊತ್ತಿರಬೇಕು. ನಾನು ಈ ಬಗ್ಗೆ ನನ್ನ ಮಗಳ ಬಳಿ ಹೇಗೆ ಹೇಳುತ್ತೇನೋ ಗೊತ್ತಿಲ್ಲ. ಆದರೆ ಈ ವಿಷಯದ ಬಗ್ಗೆ ಆಕೆ ಜೊತೆ ಮಾತನಾಡಲು ಉತ್ಸುಕನಾಗಿದ್ದಾನೆ ಎಂದರು.

    ಇದೇ ವೇಳೆ ಮಾತನಾಡಿದ ಸೋನಾಕ್ಷಿ ಸಿನ್ಹಾ, ನಾನು ನನ್ನ ಪೋಷಕರ ಜೊತೆ ಅಡಲ್ಟ್ ಮಾತುಗಳನ್ನು ಆಡುವುದಿಲ್ಲ. ಸಣ್ಣ ವಯಸ್ಸಿನಲ್ಲಿ ಸ್ನೇಹಿತರ ಜೊತೆ ಈ ರೀತಿ ಮಾತನಾಡುವುದನ್ನು ಶುರು ಮಾಡಿದೆ. ಸಾಮಾನ್ಯವಾಗಿ ಸ್ಕೂಲ್, ಕಾಲೇಜಿನಲ್ಲಿ ಸ್ನೇಹಿತರ ಜೊತೆ ಈ ರೀತಿ ಮಾತನಾಡುತ್ತೇವೆ. ಮಾತನಾಡುವುದರಿಂದ ನಮಗೆ ಹೆಚ್ಚಿನ ಮಾಹಿತಿ ಸಿಗುತ್ತದೆ. ಹಾಗಂತ ನಾನು ನನ್ನ ಪೋಷಕರ ಜೊತೆ ಸೆಕ್ಸ್ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದ್ದರು.

  • ‘ಸೆಂಡ್ ನ್ಯೂಡ್ಸ್’ ಎಂದ ಅಭಿಮಾನಿಗೆ ನ್ಯೂಡ್ ಫೋಟೋ ಕಳುಹಿಸಿದ ಗಾಯಕಿ

    ‘ಸೆಂಡ್ ನ್ಯೂಡ್ಸ್’ ಎಂದ ಅಭಿಮಾನಿಗೆ ನ್ಯೂಡ್ ಫೋಟೋ ಕಳುಹಿಸಿದ ಗಾಯಕಿ

    ಚೆನ್ನೈ: ದಕ್ಷಿಣ ಭಾರತದ ಪ್ರಸಿದ್ಧ ಗಾಯಕಿ ಚಿನ್ಮಯಿ ಶ್ರೀಪಾದಗೆ ಅಭಿಮಾನಿಯೊಬ್ಬ ನ್ಯೂಡ್ ಫೋಟೋ ಕಳುಹಿಸಿ ಎಂದು ಕೇಳಿಕೊಂಡಿದ್ದಾನೆ. ಅಭಿಮಾನಿಯ ಕೋರಿಕೆಗೆ ಚಿನ್ಮಯಿ ಲಿಪ್‍ಸ್ಟಿಕ್ ಫೋಟೋ ಕಳುಹಿಸುವ ಮೂಲಕ ಖಡಕ್ ಉತ್ತರ ನೀಡಿದ್ದಾರೆ.

    ನ್ಯೂಡ್ ಚಿತ್ರ ಕೇಳಿದ ಅಭಿಮಾನಿಯ ಮೆಸೇಜ್‍ನ ಸ್ಕ್ರೀನ್‍ಶಾಟ್ ತೆಗೆದು ಅದನ್ನು ಚಿನ್ಮಯಿ ಅವರು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಸ್ಕ್ರೀನ್‍ಶಾಟ್ ಫೋಟೋ ಹಾಕಿ ಅದಕ್ಕೆ, “ಸ್ವಲ್ಪ ತಮಾಷೆಗಾಗಿ” ಎಂದು ಬರೆದುಕೊಂಡಿದ್ದಾರೆ.

    ಅಭಿಮಾನಿ ನ್ಯೂಡ್ ಫೋಟೋ ಕೇಳಿದಕ್ಕೆ ಚಿನ್ಮಯಿ ನ್ಯೂಡ್ ಲಿಪ್‍ಸ್ಟಿಕ್ (ಮನುಷ್ಯರ ಚರ್ಮಕ್ಕೆ ಹೊಂದಿಕೊಳ್ಳುವ ಲಿಪ್‍ಸ್ಟಿಕ್ ಕಲರ್) ಫೋಟೋವನ್ನು ಕಳುಹಿಸಿದ್ದಾರೆ. ಅಲ್ಲದೆ “ಇದು ನನ್ನ ಫೆವರೇಟ್ ನ್ಯೂಡ್” ಎಂದು ಮೆಸೇಜ್ ಮಾಡುವ ಮೂಲಕ ಜಾಣತನ ಮೆರೆದಿದ್ದಾರೆ.

    ಚಿನ್ಮಯಿ ಅವರ ಖಡಕ್ ಉತ್ತರಕ್ಕೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಚಿನ್ಮಯಿ ತೆಲುಗು ಹಾಗೂ ತಮಿಳು ಚಿತ್ರರಂಗದ ಖ್ಯಾತ ಗಾಯಕಿಯಾಗಿದ್ದು, ರಾಷ್ಟ್ರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.