Tag: Sindhi

  • ಪಾಕ್ ನಮ್ಮನ್ನು ಪ್ರಾಣಿಗಳ ರೀತಿ ನೋಡಿಕೊಳ್ತಿದೆ- ವಿಶ್ವಸಂಸ್ಥೆಯಲ್ಲಿ ಪಿಒಕೆ ನಾಯಕ ಅಳಲು

    ಪಾಕ್ ನಮ್ಮನ್ನು ಪ್ರಾಣಿಗಳ ರೀತಿ ನೋಡಿಕೊಳ್ತಿದೆ- ವಿಶ್ವಸಂಸ್ಥೆಯಲ್ಲಿ ಪಿಒಕೆ ನಾಯಕ ಅಳಲು

    – ಪಿಒಕೆಯಲ್ಲಿ ಯುವಕರನ್ನು ಯುದ್ಧಕ್ಕೆ ತಯಾರಿ ಮಾಡಲಾಗುತ್ತಿದೆ
    – ಪಾಕ್ ಭಯೋತ್ಪಾದಕ ಚಟುವಟಿಕೆಯನ್ನು ಜೀವಂತವಾಗಿರಿಸಿದೆ

    ಜಿನೀವಾ: ಜಮ್ಮು ಕಾಶ್ಮೀರದಲ್ಲಿನ ಜನರ ಸ್ವಾತಂತ್ರ್ಯವನ್ನು ಭಾರತ ಕಿತ್ತುಕೊಂಡಿದೆ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡಲಾಗಿದೆ ಎಂದು ಬೊಬ್ಬೆ ಹಾಕುವ ಪಾಕಿಸ್ತಾನದ ಬಣ್ಣ ಇದೀಗ ಬಯಲಾಗಿದೆ. ವಿಶ್ವ ಸಂಸ್ಥೆಯ ಸಭೆಯಲ್ಲಿ ಸ್ವತಃ ಪಿಒಕೆ ನಾಯಕ ಈ ಆರೋಪ ಮಾಡಿದ್ದು, ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಪಿಒಕೆ ಜನರನ್ನು ಪ್ರಾಣಿಗಳ ರೀತಿ ನಡೆಸಿಕೊಳ್ಳುತ್ತಿದೆ ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕಾರ್ಯಕರ್ತ ಸಜದ್ ರಾಜಾ ಆರೋಪಿಸಿದ್ದಾರೆ.

    ಸ್ವಿಟ್ಜರ್ಲೆಂಡ್‍ನ ಜಿನೀವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 45ನೇ ಅಧಿವೇಶನದಲ್ಲಿ ಅವರು ಪಾಕಿಸ್ತಾನದ ಬಣ್ಣವನ್ನು ಬಯಲು ಮಾಡಿದ್ದಾರೆ. ಅಲ್ಲದೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ರಾಜಕೀಯ, ನಾಗರಿಕ ಹಾಗೂ ಸಾಂವಿಧಾನಿಕ ಹಕ್ಕಗಳನ್ನು ಮರು ಸ್ಥಾಪಿಸಲು ಸಹಾಯ ಮಾಡುವಂತೆ ವಿಶ್ವಸಂಸ್ಥೆಗೆ ಕೇಳಿಕೊಂಡಿದ್ದಾರೆ. ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಪಿಒಕೆ ಪ್ರದೇಶದ ನಾಗರಿಕರನ್ನು ಪ್ರಾಣಿಗಳಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.

    ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಜನರಾದ ನಾವು ಮಂಡಳಿಯನ್ನು ಕೇಳಿಕೊಳ್ಳುವುದೇನೆಂದರೆ, ಪಾಕಿಸ್ತಾನ ಪ್ರಾಣಿಗಳ ರೀತಿ ನೋಡಿಕೊಳ್ಳುತ್ತಿರುವುದನ್ನು ತಡೆಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ. ಪಿಒಕೆ ಚುನಾವಣಾ ಕಾಯ್ದೆ-2020 ನಮ್ಮ ಎಲ್ಲ ಸಾಂವಿಧಾನಿಕ, ನಾಗರಿಕ ಹಾಗೂ ರಾಜಕೀಯ ಹಕ್ಕನ್ನು ಕಿತ್ತುಕೊಂಡಿದೆ. ಪಾಕಿಸ್ತಾನದ ಪಿಒಕೆ ಮೇಲಿನ ಹಸ್ತಕ್ಷೇಪವನ್ನು ವಿರೋಧಿಸುವ ನಮ್ಮ ನಡೆಯನ್ನು ವಿಶ್ವಸಂಸ್ಥೆಯ ನಿರ್ಣಯಗಳ ಉಲ್ಲಂಘನೆಯಲ್ಲಿ ರಾಜ್ಯ ವಿರೋಧಿ ಎಂದು ಘೋಷಿಸಲಾಗಿದೆ ಎಂದು ರಾಷ್ಟ್ರೀಯ ಸಮಾನತೆ ಪಕ್ಷದ ಅಧ್ಯಕ್ಷ ಸಜದ್ ರಾಜಾ ಅವರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ(ಯುಎನ್‍ಎಚ್‍ಆರ್‍ಸಿ) ಮನವಿ ಸಲ್ಲಿಸುತ್ತಿದ್ದಂತೆ ಪಿಒಕೆ ಕಾರ್ಯಕರ್ತ ಕಣ್ಣೀರು ಹಾಕಿದ್ದಾರೆ. ನಮ್ಮ ಸ್ವಂತ ಮನೆಯನ್ನು ರಕ್ಷಿಸಿಕೊಳ್ಳುತ್ತಿರುವುದಕ್ಕೆ ನಮ್ಮನ್ನು ದೇಶದ್ರೋಹಿಗಳಾಗಿ ಪರಿಗಣಿಸಲಾಗಿದೆ. ನಮ್ಮ ರಾಜಕೀಯ ಚಟುವಟಿಕೆಗಳನ್ನು ಕಾನೂನು ಬಾಹಿರವೆಂದು ಘೋಷಿಸಿದ್ದು, ಈ ಕಾಯ್ದೆಯ ಮೂಲಕ ನಮ್ಮ ಜನರನ್ನು ಹತ್ಯೆ ಮಾಡಲು ಪಾಕಿಸ್ತಾನ ಸೈನ್ಯಕ್ಕೆ ಮುಕ್ತ ಅವಕಾಶ ಕಲ್ಪಿಸಿದೆ ಎಂದು ಆರೋಪಿಸಿದ್ದಾರೆ.

    ಜಮ್ಮು ಕಾಶ್ಮೀರದ ಗಡಿಯ ಎರಡೂ ಬದಿಗಳಲ್ಲಿರುವ ಯುವ ಸಮೂಹವನ್ನು ಅಧಿಕಾರಿಗಳು ಮೈಂಡ್ ವಾಶ್ ಮಾಡುವ ಮೂಲಕ ಭಾರತದೊಂದಿಗೆ ಪ್ರಾಕ್ಸಿ ಯುದ್ಧ ಮಾಡಲು ಫಿರಂಗಿಗೆ ಆಹಾರವನ್ನಾಗಿಸುತ್ತಿದ್ದಾರೆ. ಪಾಕಿಸ್ತಾನ ಪಿಒಕೆಯಿಂದ ಭಯೋತ್ಪಾದಕ ಶಿಬಿರಗಳನ್ನು ನಡೆಸುತ್ತಲೇ ಇದೆ ಎಂಬ ಗಂಭೀರ ಆರೋಪವನ್ನು ಅವರು ಮಾಡಿದ್ದಾರೆ.

    ಪಾಕಿಸ್ತಾನ ಏಜೆನ್ಸಿಗಳಿಂದಾಗಿ ಕಣ್ಮರೆಯಾಗುತ್ತಿರುವ ಸಿಂಧಿ ಜನರನ್ನು ರಕ್ಷಿಸುವ ಜವಾಬ್ದಾರಿಯನ್ನು ವಿಶ್ವಸಂಸ್ಥೆ ಪೂರೈಸಬೇಕು. ಪಾಕಿಸ್ತಾನ ಸರ್ಕಾರವನ್ನು ಹೊಣೆಗಾರರನ್ನಾಗಿಸಿ ಅಪರಾಧಿಗಳನ್ನು ನ್ಯಾಯಾಲಯಕ್ಕೆ ತರಬೇಕು. ಕಳೆದ ಮೂರು ತಿಂಗಳಲ್ಲಿ 60ಕ್ಕೂ ಹೆಚ್ಚು ಸಿಂಧಿಯರನ್ನು ಅಪಹರಿಸಲಾಗಿದೆ. ಭಯೋತ್ಪಾದನೆಯನ್ನು ಪಸರಿಸಲು ಇವರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಸಿಂಧಿ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಆರೋಪಿಸಿದ್ದಾರೆ.