Tag: Sindhanur

  • ಆಸ್ಪತ್ರೆಯಿಂದ ಮರಳುತ್ತಿದ್ದವರು ಮಸಣ ಸೇರಿದ್ರು

    ಆಸ್ಪತ್ರೆಯಿಂದ ಮರಳುತ್ತಿದ್ದವರು ಮಸಣ ಸೇರಿದ್ರು

    ರಾಯಚೂರು: ಸ್ವಿಫ್ಟ್ ಕಾರು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಿಂಧನೂರು ತಾಲೂಕಿನ ಮಣ್ಣಿಕೆರೆ ಬಳಿ ನಡೆದಿದೆ.

    ತೆಲಂಗಾಣದ ಗದ್ವಾಲ್ ಮೂಲದ ಗೋಪಾಲ (28) ಹಾಗೂ ಲಕ್ಷ್ಮಣ (30) ಮೃತ ದುರ್ದೈವಿಗಳು. ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ರಾಯಚೂರಿನ ರಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಬೆಂಗಳೂರಿನಿಂದ ರಾಯಚೂರು ಕಡೆಗೆ ಬರುತ್ತಿದ್ದ ವೇಳೆ ಘಟನೆ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ. ಆರೋಗ್ಯ ಸಮಸ್ಯೆ ಹಿನ್ನೆಲೆ ಅನುಮತಿ ಪಡೆದು ಬೆಂಗಳೂರಿಗೆ ತೆರಳಿದ್ದವರು ವಾಪಸ್ ಬರುವ ವೇಳೆ ಅಪಘಾತ ನಡೆದಿದೆ.

    ರಸ್ತೆಯಲ್ಲಿ ಹೋಗುತ್ತಿದ್ದ ಕೆಲವರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದವನ್ನು ರಕ್ಷಿಸಿ ಅಂಬುಲೆನ್ಸ್ ಹಾಗೂ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಗಾಯಾಳುಗಳನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದ್ದರಿಂದ ಅವರನ್ನು ರಿಮ್ಸ್‌ಗೆ ದಾಖಲಿಸಲಾಗಿದೆ.

    ಮೃತರು ತೆಲಂಗಾಣದ ಗದ್ವಾಲ್ ಮೂಲದವರಾಗಿದ್ದು, ರಾಯಚೂರು ಮೂಲಕ ಗದ್ವಾಲ್‍ಗೆ ತೆರಳುತ್ತಿದ್ದರು. ಬೆಳಗಿನ ಜಾವ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಬಳಗಾನೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

  • ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ- ಕ್ಯಾಬಿನ್ ಪೀಸ್ ಪೀಸ್, ಇಬ್ಬರು ಸಾವು

    ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ- ಕ್ಯಾಬಿನ್ ಪೀಸ್ ಪೀಸ್, ಇಬ್ಬರು ಸಾವು

    ರಾಯಚೂರು: ಕೆಟ್ಟು ನಿಂತಿದ್ದ ಲಾರಿಗೆ ಕಬ್ಬಿಣ ಹೊತ್ತುಯ್ಯುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕ್ಲಿನರ್ ಹಾಗೂ ಚಾಲಕ ಮೃತಪಟ್ಟ ಘಟನೆ ಸಿಂಧನೂರು ತಾಲೂಕಿನ ಮುಳ್ಳೂರು ಕ್ರಾಸ್ ಬಳಿ ನಡೆದಿದೆ.

    ಮಹಾರಾಷ್ಟ್ರ ಮೂಲದ ಸವಳೂರು ಗ್ರಾಮದ ರಾಹುಲ್ ಭಾಸ್ಕರ್ (25), ವೈಜನಾಥ (28) ಮೃತ ದುರ್ದೈವಿಗಳು. ರಾಹುಲ್ ಸ್ಥಳದಲ್ಲೇ ಮೃತಪಟ್ಟಿದ್ದು, ವೈಜನಾಥ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

    ಮಸ್ಕಿ-ಸಿಂಧನೂರು ರಸ್ತೆಯ ಮುಳ್ಳೂರು ಕ್ರಾಸ್ ಬಳಿ ಕೆಟ್ಟು ನಿಂತಿದ್ದ ಲಾರಿಗೆ ನಾಸಿಕ್‍ನಿಂದ ಬಳ್ಳಾರಿ ಕಡೆಗೆ ಕಬ್ಬಿಣದ ಪೈಪ್‍ಗಳನ್ನ ಹೊತ್ತುಯ್ಯುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರಿಯಲ್ಲಿನ ಕಬ್ಬಿಣದ ಸರಳುಗಳು ಡಿಕ್ಕಿ ಹೊಡೆದ ಲಾರಿಗೆ ನುಗ್ಗಿ ರಾಹುಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ವೈಜನಾಥ್ ಅವರನ್ನು ಕಲಬುರ್ಗಿಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೈಜನಾಥ್ ಸಾವನ್ನಪ್ಪಿದ್ದಾರೆ. ಈ ಸಂಬಂಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಿಎಎ ವಿರೋಧಿಸಿ ರಕ್ತದಲ್ಲಿ ಪತ್ರ ಬರೆದು ಸಹಿ ಸಂಗ್ರಹ- ಸಿಂಧನೂರಿನಲ್ಲಿ ಬೃಹತ್ ಸಮಾವೇಶ

    ಸಿಎಎ ವಿರೋಧಿಸಿ ರಕ್ತದಲ್ಲಿ ಪತ್ರ ಬರೆದು ಸಹಿ ಸಂಗ್ರಹ- ಸಿಂಧನೂರಿನಲ್ಲಿ ಬೃಹತ್ ಸಮಾವೇಶ

    ರಾಯಚೂರು: ಸಿಎಎ, ಎನ್.ಆರ್.ಸಿ ಮತ್ತು ಎನ್.ಪಿ.ಆರ್ ವಿರೋಧಿಸಿ ಜಿಲ್ಲೆಯ ಸಿಂಧನೂರು ನಗರದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿತ್ತು. ನಗರದ ಆರ್ ಜಿಎಂ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ನೂರಾರು ಯುವಕರು ರಕ್ತದಲ್ಲಿ ಪತ್ರ ಬರೆದು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ರವಾನೆ ಮಾಡಲಾಯಿತು.

    ಎನ್.ಆರ್.ಸಿ ಹಾಗೂ ಸಿಎಎ ವಿರೋಧಿಸಿ ನಡೆದ ರಕ್ತದ ಪತ್ರ ಚಳುವಳಿಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಬಂದ ಯುವಕರು ತಮ್ಮ ರಕ್ತದಲ್ಲಿ ಪತ್ರ ಬರೆದರು. ಈ ವೇಳೆ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಬಿಜೆಪಿ ಪಕ್ಷ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

    ಸೇವೆ ಮಾಡುತ್ತೇವೆ ಎಂದು ತಲೆ ಸವರಿದರೆ, ನೀವು ನಂಬಿಕೆಗೆ ಯೋಗ್ಯವಾದ ಜನ ಅಲ್ಲ. ಬಿಜೆಪಿ ಅಂದ್ರೆ ಬೇಡ ಅನ್ನಲ್ಲ, ಬಿಜೆಪಿಯನ್ನ ನಡೆಸುವ ಆಂತರಿಕ ಸಂಘಟನೆಗಳನ್ನ ನಾವು ಒಪ್ಪಲ್ಲ. ಬಸವಣ್ಣನನ್ನು ಕೊಂದವರು, ಅವತ್ತು ಗಾಂಧಿಯನ್ನ ಕೊಂದವರು, ಬುದ್ಧನನ್ನು ಕೊಂದವರು ನಮ್ಮನ್ನು ಉಳಿಸ್ತಾರಾ ಅಂತ ಪ್ರಶ್ನಿಸಿದರು. ಯಡಿಯೂರಪ್ಪ ಸ್ವತಂತ್ರವಾಗಿ ಸರ್ಕಾರ ನಡೆಸಲು ಆಗುತ್ತಿಲ್ಲ. ಯಡಿಯೂರಪ್ಪ ಮತ್ತು ಸಚಿವರಿಗೆ ಸ್ವತಂತ್ರ ಕೊಟ್ಟಿದ್ದೀರಾ? ಸರ್ಕಾರ ನಡಸೋದಿಕ್ಕೆ ಯಾವುದೇ ಸ್ವಾತಂತ್ರ್ಯ ಇಲ್ಲ ಅಂತ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

    ಇನ್ನೂ ಸಮಾವೇಶದಲ್ಲಿ ಮಹಿಳಾ ಹೋರಾಟಗಾರ್ತಿ ಕೆ.ನೀಲಾ, ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ, ಸೇರಿದಂತೆ ಹಲವಾರು ಸಂಘಟನೆಗಳ ಮುಖಂಡರು ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಎರಡು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಸಮಾವೇಶಕ್ಕೆ ಬಂದಿದ್ದರು.

  • ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸ್ ದಾಳಿ- ಅಡ್ಡೆಯಲ್ಲಿ ಸಿಕ್ಕಿಬಿದ್ದ ಬಿಜೆಪಿ ಮುಖಂಡ ಅರೆಸ್ಟ್

    ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸ್ ದಾಳಿ- ಅಡ್ಡೆಯಲ್ಲಿ ಸಿಕ್ಕಿಬಿದ್ದ ಬಿಜೆಪಿ ಮುಖಂಡ ಅರೆಸ್ಟ್

    ರಾಯಚೂರು: ಜಿಲ್ಲೆಯ ಸಿಂಧನೂರು ನಗರ ಪೊಲೀಸರು ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಅಲ್ಲಿ ಸಿಕ್ಕಿಬಿದ್ದ ಬಿಜೆಪಿ ಮುಖಂಡನೋರ್ವರನ್ನು ಬಂಧಿಸಿದ್ದಾರೆ.

    ಸಿಂಧನೂರು ತಾಲೂಕು ಬಿಜೆಪಿ ಎಸ್‍ಸಿ ಘಟಕದ ಅಧ್ಯಕ್ಷ ಹುಸೇನಪ್ಪ ಶ್ರೀಪುರಂ ಬಂಧಿತ ಮುಖಂಡ. ನಗರದ ಆದರ್ಶ ಕಾಲೋನಿಯಲ್ಲಿ ಅಕ್ರಮ ದಂಧೆ ನಡೆಸಲಾಗ್ತಿದೆ ಅಂತ ಸಾರ್ವಜನಿಕರು ಪೊಲೀಸರಿಗೆ ದೂರು ಸಲ್ಲಿಸಿದ್ದರು.

    ಹೀಗಾಗಿ ಖಚಿತ ಮಾಹಿತಿ ಮತ್ತು ದೂರಿನ ಅನ್ವಯ ಪೊಲೀಸರು ಅಡ್ಡೆಯ ಮೇಲೆ ರಾತ್ರಿ 8 ಗಂಟೆಯ ಸುಮಾರಿಗೆ ದಾಳಿ ನಡೆಸಿದ್ದರು. ಈ ವೇಳೆ ಮನೆಯಲ್ಲಿದ್ದ ಹುಸೇನಪ್ಪನನ್ನು ಸಿಂಧನೂರು ಪೊಲೀಸರು ಬಂಧಿಸಿದ್ದು, ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. ಹುಸೇನಪ್ಪ ಈ ವೇಶ್ಯಾವಾಟಿಕೆಯನ್ನ ನಡೆಸುತ್ತಿದ್ದ ಅಂತ ಹೇಳಲಾಗುತ್ತಿದ್ದು, ಪೊಲೀಸರು ಈ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆ.

  • ವಿಡಿಯೋ: ಮಹಿಳಾ ಸಿಬ್ಬಂದಿಗೆ ಕಾಲಿನಿಂದ ಒದ್ದ ನಗರಸಭೆ ನೌಕರ

    ವಿಡಿಯೋ: ಮಹಿಳಾ ಸಿಬ್ಬಂದಿಗೆ ಕಾಲಿನಿಂದ ಒದ್ದ ನಗರಸಭೆ ನೌಕರ

    ರಾಯಚೂರು: ಜಿಲ್ಲೆಯ ಸಿಂಧನೂರು ನಗರಸಭೆ ಕಚೇರಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳಾ ಸಿಬ್ಬಂದಿ ಮೇಲೆ ಸಹೋದ್ಯೋಗಿಯೇ ಹಲ್ಲೆ ಮಾಡಿರುವ ಅಮಾನವೀಯ ಘಟನೆ ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.

    ಗುತ್ತಿಗೆ ಆಧಾರದ ಮೇಲೆ ಕೆಲಸಮಾಡುತ್ತಿರುವ ದಿನಗೂಲಿ ನೌಕರ ಶರಣಪ್ಪ, ಎಸ್‍ಡಿಎ ನಸ್ರಿನಾ ಮೇಲೆ ಹಲ್ಲೆ ಮಾಡಿದ್ದಾನೆ. ಸದ್ಯ ನೌಕರನ್ನು ಜಿಲ್ಲಾಧಿಕಾರಿ ಕೆಲಸದಿಂದ ವಜಾ ಮಾಡಿದ್ದಾರೆ.

    ಈ ಘಟನೆ ಜೂನ್. 10ರಂದು ನಡೆದಿದೆ. ಕಚೇರಿಗೆ ತಡವಾಗಿ ಬಂದು ಕೆಲಸವನ್ನೂ ಮಾಡುತ್ತಿಲ್ಲ ಅಂತ ಆರೋಪಿ ಮಹಿಳಾ ಸಹೋದ್ಯೋಗಿ ಮೇಲೆ ಕಾಲಿನಿಂದ ಒದ್ದಿದ್ದಾನೆ. ಹಲ್ಲೆ ಬಳಿಕವೂ ಬೆದರಿಕೆ ಹಾಕಿದ್ದಾನೆ. ಮಹಿಳಾ ಸಿಬ್ಬಂದಿ ಮೇಲೆ ನಡೆದ ಹಲ್ಲೆಯ ಸಿಸಿ ಟಿವಿಯ ಎಕ್ಸಕ್ಲೂಸಿವ್ ದೃಶ್ಯಗಳು ಇದೀಗ ಪಬ್ಲಿಕ್ ಟಿಗೆ ಲಭಿಸಿದೆ.

    ಈಗಾಗಲೇ ಆರೋಪಿ ಶರಣಪ್ಪನನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

    https://www.youtube.com/watch?v=APkIRhw-4YU

  • ಸಿನಿಮೀಯ ರೀತಿಯಲ್ಲಿ ಹಾಡಹಗಲೇ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಕೊಲೆ

    ಸಿನಿಮೀಯ ರೀತಿಯಲ್ಲಿ ಹಾಡಹಗಲೇ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಕೊಲೆ

    ರಾಯಚೂರು: ಸಿಂಧನೂರು ತಾಲೂಕಿನ ಮುಚ್ಚಳಕ್ಯಾಂಪ್ ಬಳಿ ಸಿನಿಮೀಯ ರೀತಿಯಲ್ಲಿ ಸ್ಕಾರ್ಪಿಯೋ ಕಾರಿನಲ್ಲಿ ಬಂದು ಬೈಕ್‍ಗೆ ಅಡ್ಡಗಟ್ಟಿ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

    ಸಿಂಧನೂರು ತಾಲೂಕಿನ ಗೀತಾಕ್ಯಾಂಪ್ ನಿವಾಸಿ 50 ವರ್ಷದ ಕೆ.ಪಾಪರೆಡ್ಡಿ ಕೊಲೆಯಾಗಿರುವ ವ್ಯಕ್ತಿ. ಜಮೀನು ವಿವಾದ ಹಿನ್ನೆಲೆಯಲ್ಲಿ ಹಳೇ ವೈಷಮ್ಯ ಸಾಧಿಸಿ ಕೊಲೆ ಮಾಡಲಾಗಿದೆ ಅಂತ ಮೃತನ ಸಂಬಂಧಿಕರು ಆರೋಪಿಸಿದ್ದಾರೆ.

    ಹೈದರಾಬಾದ್ ನಲ್ಲಿರುವ ಭೋಸ್ ರೆಡ್ಡಿ ಮತ್ತು ಸುಮನ್ ರೆಡ್ಡಿ ಎಂಬುವವರು ಕೊಲೆಗೆ ಕಾರಣ ಎನ್ನಲಾಗಿದೆ. ಕೊಲೆಯಾದ ಸ್ಥಳದಲ್ಲಿ ಮಚ್ಚು ಲಾಂಗುಗಳು ಪತ್ತೆಯಾಗಿದ್ದು, ಇದು ಸುಪಾರಿ ಕೊಲೆ ಅಂತ ಶಂಕಿಸಲಾಗಿದೆ.

    ಸ್ಥಳಕ್ಕೆ ಸಿಂಧನೂರು ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಕೊಲೆಯಾದ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನಸಿಂಗ್ ರಾಥೋರ್ ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿದ್ದಾರೆ.

  • ಶಾರ್ಟ್ ಸರ್ಕ್ಯೂಟ್‍ಗೆ 20 ಲಕ್ಷ ರೂ. ಮೌಲ್ಯದ ಬಟ್ಟೆ ಭಸ್ಮ

    ಶಾರ್ಟ್ ಸರ್ಕ್ಯೂಟ್‍ಗೆ 20 ಲಕ್ಷ ರೂ. ಮೌಲ್ಯದ ಬಟ್ಟೆ ಭಸ್ಮ

    ರಾಯಚೂರು: ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಶಾರ್ಟ್ ಸರ್ಕ್ಯೂಟ್‍ನಿಂದ ಬಟ್ಟೆ ಅಂಗಡಿಗೆ ಬೆಂಕಿ ತಗುಲಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳು ಸುಟ್ಟು ಭಸ್ಮವಾಗಿವೆ.

    ನಗರದ ಗಾಂಧಿವೃತ್ತದ ಬಳಿಯಿರುವ ಅಮಿತ್ ಸೂಪರ್ ಮಾರ್ಕೆಟ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 20 ಲಕ್ಷ ರೂ. ಮೌಲ್ಯದ ಬಟ್ಟೆ ಹಾಗೂ ಇತರೆ ವಸ್ತುಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿದು ಬಂದಿದೆ.

    ಅಮಿತ್ ಶಾ ಎಂಬುವವರಿಗೆ ಸೇರಿದ ಈ ಅಂಗಡಿಯ ಎರಡನೇ ಮಹಡಿಗೂ ಬೆಂಕಿ ವ್ಯಾಪಿಸಿದ್ದು ಬಟ್ಟೆ, ಪೀಠೋಪಕರಣ ಸಂಪೂರ್ಣ ಕರಕಲಾಗಿವೆ. ಬೇಸಿಗೆ ಹಿನ್ನೆಲೆ ರಾತ್ರಿ ವೇಳೆ ಹಾಕಿದ್ದ ಎಸಿಯನ್ನ ಹಾಗೇ ಬಿಡಲಾಗಿತ್ತು. ಇದರಿಂದಲೇ ಶಾಟ್ ಸರ್ಕ್ಯೂಟ್‍ ಆಗಿರಬಹುದು ಎಂದು ಶಂಕಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.