Tag: SIMS

  • ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ವ್ಯವಸ್ಥೆ ಸರಿಪಡಿಸಲು ಕ್ರಮ: ಈಶ್ವರಪ್ಪ

    ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ವ್ಯವಸ್ಥೆ ಸರಿಪಡಿಸಲು ಕ್ರಮ: ಈಶ್ವರಪ್ಪ

    ಶಿವಮೊಗ್ಗ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಪ್ರಸ್ತುತ ಎಲ್ಲ ಅಗತ್ಯ ಮೂಲಸೌಲಭ್ಯಗಳು ಲಭ್ಯವಿದ್ದು, ವೈದ್ಯಕೀಯ ಸೇವೆಯನ್ನು ಇನ್ನಷ್ಟು ಉತ್ತಮಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ಸರ್ಕಾರಿ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿ, ಕೋವಿಡ್ ನಿರ್ವಹಣೆ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಹಾಗೂ ಕೋವಿಡೇತರ ರೋಗಿಗಳ ಚಿಕಿತ್ಸೆಗೆ ವೈದ್ಯರ ಕೊರತೆ ಉಂಟಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.

    ಲಭ್ಯವಿರುವ ನರ್ಸ್‍ಗಳಿಂದ ಸಮರ್ಪಕವಾದ ಸೇವೆ ಪಡೆದುಕೊಳ್ಳಲು ಕ್ರಮ ಕೈಗೊಳ್ಳಬೇಕು. ಸಿಮ್ಸ್ ನ ವಿವಿಧ ವಿಭಾಗಗಳ ಮುಖ್ಯಸ್ಥರು ಕಡ್ಡಾಯವಾಗಿ ಪ್ರತಿದಿನ ಕರ್ತವ್ಯಕ್ಕೆ ಹಾಜರಾಗಬೇಕು. ವಿವಿಧ ವಾರ್ಡ್‍ಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ವೈದ್ಯರ ಹೆಸರನ್ನು ಆಯಾ ವಾರ್ಡ್ ಹೊರಗೆ ಪ್ರತಿದಿನ ಪ್ರಕಟಿಸಬೇಕು. ಕರ್ತವ್ಯ ಲೋಪ ಎಸಗುವ ವೈದ್ಯರ ವಿರುದ್ಧ ಬಿಗಿ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು. ಇದೇ ವೇಳೆ ಕೋವಿಡ್ ಕಪ್ರ್ಯೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸುವಂತೆ ಪೊಲೀಸರಿಗೆ ಸೂಚನೆ ನೀಡಿದರು.

    ಸಭೆಯಲ್ಲಿ ಎಂಎಲ್‍ಸಿ ಆಯನೂರು ಮಂಜುನಾಥ್, ಆರ್.ಪ್ರಸನ್ನ ಕುಮಾರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿ.ಪಂ.ಸಿಇಒ ಎಂ.ಎಲ್.ವೈಶಾಲಿ, ಡಿಎಚ್ ಒ ಡಾ.ರಾಜೇಶ್ ಸುರಗಿಹಳ್ಳಿ ಸಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ ಉಪಸ್ಥಿತರಿದ್ದರು.

  • ಕೋಟಿಗಟ್ಟಲೇ ವೆಚ್ಚದಲ್ಲಿ ಕಟ್ಟಿ 5 ವರ್ಷವಾದ್ರೂ ಉದ್ಘಾಟನೆಯಾಗದ ಆಸ್ಪತ್ರೆ ಕಟ್ಟಡ

    ಕೋಟಿಗಟ್ಟಲೇ ವೆಚ್ಚದಲ್ಲಿ ಕಟ್ಟಿ 5 ವರ್ಷವಾದ್ರೂ ಉದ್ಘಾಟನೆಯಾಗದ ಆಸ್ಪತ್ರೆ ಕಟ್ಟಡ

    -ಸಮಸ್ಯೆಗಳ ಆಗರವಾಗಿದೆ ಶಿವಮೊಗ್ಗದ ಮೆಗ್ಗಾನ್

    ಶಿವಮೊಗ್ಗ: ಹೈಟೆಕ್ ಬೋಧನಾ ಆಸ್ಪತ್ರೆ ವೈದ್ಯಕೀಯ ಕಾಲೇಜಿನ ಅಧೀನದಲ್ಲಿದ್ದು, ಆಧುನೀಕರಣಗೊಂಡಿದ್ದರೂ ಕೂಡ ಸಮಸ್ಯೆಗಳ ಸರಮಾಲೆ ಮಾತ್ರ ಸರಿಯಾಗಿಲ್ಲ. ಈ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿದಿನ ಸಾವಿರಾರು ರೋಗಿಗಳು ಆಗಮಿಸುತ್ತಿದ್ದರೂ ಕೂಡ ತಜ್ಞರು, ವೈದ್ಯರ ಕೊರತೆಯಿಂದಾಗಿ ಸಾರ್ವಜನಿಕರು ಪರಿತಪಿಸುವಂತಾಗಿದೆ. ಆಧುನಿಕ ಯಂತ್ರಗಳು ಆಸ್ಪತ್ರೆಯಲ್ಲಿದ್ದರೂ ಕೂಡ ಇದನ್ನು ನಿರ್ವಹಿಸುವವರಿಲ್ಲವಾಗಿದೆ. ಕೋಟಿಗಟ್ಟಲೇ ವೆಚ್ಚದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣಗೊಂಡು 5 ವರ್ಷ ಕಳೆದಿದ್ದರೂ ಇನ್ನೂ ಅದಕ್ಕೆ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ತವರು ಜಿಲ್ಲೆ ಶಿವಮೊಗ್ಗದ ಐತಿಹಾಸಿಕ ಸರ್ಕಾರಿ ಆಸ್ಪತ್ರೆಯ ಗೋಳು ಕೇಳೋರಿಲ್ಲ. ಮೆಕ್ ಗ್ಯಾನ್ ಎಂಬ ಬ್ರಿಟಿಷ್ ಅಧಿಕಾರಿ ಬಡರೋಗಿಗಳ ಚಿಕಿತ್ಸೆಗಾಗಿ ಆಸ್ಪತ್ರೆ ನಿರ್ಮಾಣಕ್ಕೆ ನೀಡಿದ್ದ ಬರೋಬ್ಬರಿ 50 ಎಕರೆಗೂ ಅಧಿಕ ಪ್ರದೇಶ ನೀಡಿದ್ದರು. ಈ ಪ್ರದೇಶದಲ್ಲಿ ಇತ್ತೀಚಿನ ಹೈಟೆಕ್ ಆಸ್ಪತ್ರೆಯಾಗಿ ರೂಪಗೊಂಡಿರುವ ಈ ಆಸ್ಪತ್ರೆ ಎಲ್ಲವೂ ಇದ್ದು ಇಲ್ಲಗಳ ನಡುವೆ ಸಾಗುತ್ತಿದೆ ಎಂದರೆ ತಪ್ಪಾಗಲಾರದು. ಹೌದು ಶಿವಮೊಗ್ಗದ ಮೆಗ್ಗಾನ್ ಬೋಧನಾ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಆಗಿರುವ ಸಿಮ್ಸ್ ವೈದ್ಯಕೀಯ ಕಾಲೇಜಿನ ಅಧೀನದಲ್ಲಿದ್ದು, ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದ್ದರೂ ಕೂಡ ರೋಗಿಗಳು ಯಮಯಾತನೆ ನೀಡುವಂತಹ ಆಸ್ಪತ್ರೆಯಾಗಿರುವುದು ಅಕ್ಷರಶಃ ಸತ್ಯವಾಗಿದೆ. ಇದನ್ನೂ ಓದಿ: ಲಿಫ್ಟ್ ಬೇಕು ಲಿಫ್ಟ್- ಶಿವಮೊಗ್ಗ ಸಿಮ್ಸ್ ಡಾಕ್ಟರ್‍ಗಳ ಗೋಳು

    ಕೋಟಿಗಟ್ಟಲೆ ಸುರಿದು ಹೈಟೆಕ್ ಆಗಿ ಈ ಸರ್ಕಾರಿ ಆಸ್ಪತ್ರೆ ರೂಪಗೊಂಡಿದ್ದರೂ ಕೂಡ ಸಮಸ್ಯೆಗಳ ಸರಮಾಲೆ ಬೆಳೆಯುತ್ತಲೇ ಇದೆ. ಮೆಗ್ಗಾನ್ ಆಸ್ಪತ್ರೆಗೆ ಶಿವಮೊಗ್ಗ ಸುತ್ತಮುತ್ತಲಿನ ಇತರೆ ಜಿಲ್ಲೆಗಳಿಂದಲೂ ರೋಗಿಗಳು ಭಾರೀ ಸಂಖ್ಯೆಯಲ್ಲಿ ಬರುತ್ತಾರೆ. ಈ ಆಸ್ಪತ್ರೆಗೆ ಸುಸಜ್ಜಿತವಾದ ಕಟ್ಟಡ, ಯಂತ್ರಗಳು ಇದ್ದರೂ ಕೂಡ ರೋಗಿಗಳು ಸೂಕ್ತ ಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೇ ಪರಿತಪಿಸುವಂತಾಗಿದೆ. ಈ ಆಸ್ಪತ್ರೆಯಲ್ಲಿ ತಜ್ಞ, ವೈದ್ಯರ ಕೊರತೆ ಇದ್ದು ಇದುವರೆಗೂ ವೈದ್ಯರ ನೇಮಕವಾಗದಿರುವುದು ರೋಗಿಗಳಿಗೆ ತೊಂದರೆಯಾಗಿದೆ. ಇದನ್ನೂ ಓದಿ: ವ್ಹೀಲ್‍ಚೇರ್ ಕೊಡದ ಆಸ್ಪತ್ರೆ ಸಿಬ್ಬಂದಿ- ಪತಿಯನ್ನು ನೆಲದ ಮೇಲೆಯೇ ಎಳೆದುಕೊಂಡು ಹೋದ ಪತ್ನಿ

    ಅಷ್ಟೇ ಅಲ್ಲದೇ ಈ ಆಸ್ಪತ್ರೆಗೆ ಇತ್ತೀಚೆಗಷ್ಟೆ ಎಂ.ಆರ್.ಐ. ಸ್ಕ್ಯಾನಿಂಗ್ ಯಂತ್ರ ಬಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಇದನ್ನು ಉದ್ಘಾಟಿಸಿದ್ದರು. ಜೊತೆಗೆ ಇಲ್ಲಿ ಡಯಾಲಿಸಿಸ್ ಯಂತ್ರಗಳಿವೆ, ಸಿ.ಟಿ. ಸ್ಕ್ಯಾನಿಂಗ್ ಯಂತ್ರಗಳಿವೆ. ಆದರೆ ಎಲ್ಲವೂ ಇದ್ದು ಇಲ್ಲಿ ಈ ಯಂತ್ರಗಳನ್ನು ಕಾರ್ಯ ನಿರ್ವಹಿಸುವ ಸೂಕ್ತ ತಜ್ಞರಿಲ್ಲದೆ ರೋಗಿಗಳು ಇದರ ಉಪಯೋಗ ಪಡೆದುಕೊಳ್ಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೋಗಿಗಳು ಸ್ಕ್ಯಾನಿಂಗ್ ಗಾಗಿ ಮತ್ತೆ ಹೊರಗಿನ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಬೇಕಿದೆ. ಅಲ್ಲದೇ ಇದರ ವೆಚ್ಚ ಕೂಡ ರೋಗಿಗಳೇ ಭರಿಸಬೇಕಿದ್ದು, ಇದು ರೋಗಿಗಳ ಕಡೆಯವರಿಗೆ ನುಂಗಲಾರದ ತುತ್ತಾಗಿದೆ.

    ಅಷ್ಟಕ್ಕೂ ಈ ಆಸ್ಪತ್ರೆಯಲ್ಲಿ ಕೋಟಿಗಟ್ಟಲೆ ವೆಚ್ಚದ ಸ್ಕ್ಯಾನಿಂಗ್ ಯಂತ್ರಗಳು, ಅದಕ್ಕಾಗಿ ಹೈಟೆಕ್ ಕೊಠಡಿಗಳು ಇದ್ದರೂ ಕೂಡ ಸೂಕ್ತ ತಜ್ಞರಿಲ್ಲದೇ ಈ ಯಂತ್ರಗಳು ಎ.ಸಿ ರೂಂನಲ್ಲಿ ಕೊಳೆಯುವಂತಾಗಿದೆ. ರೋಗಿಗಳಿಗೆ ಅಗತ್ಯವಿದ್ದರೂ ಕೂಡ ಈ ಯಂತ್ರಗಳು ಬಳಕೆಯಾಗದೆ ಹಾಗೆಯೇ ಉಳಿದುಕೊಂಡಿದ್ದು ಸಿಮ್ಸ್ ನಿರ್ದೇಶಕರು ಕೂಡಲೇ ಇದಕ್ಕಾಗಿ ತಜ್ಞರನ್ನು ನೇಮಿಸಿಕೊಳ್ಳಬೇಕಿದೆ. ಇಷ್ಟೇ ಅಲ್ಲ ವಿಭಾಗ ನಿರ್ವಹಣೆಯಲ್ಲಿಯೂ ಕೂಡ ಸಾಕಷ್ಟು ಸಮಸ್ಯೆಗಳಿವೆ. ಮೆಗ್ಗಾನ್ ಆಸ್ಪತ್ರೆ ಅವರಣದಲ್ಲಿಯೇ ಸುಮಾರು 36 ಕೋಟಿ ರೂಪಾಯಿ ವೆಚ್ಚದಲ್ಲಿ ಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ನಿರ್ಮಾಣಗೊಂಡು 5 ವರ್ಷಗಳು ಕಳೆದಿದೆ. ಆದರೆ ಈ ಕಟ್ಟಡ ಪಾಳು ಬಿದ್ದಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಇದನ್ನೂ ಓದಿ: ಅಮಾನವೀಯ ಘಟನೆ: ರೋಗಿಯ ಪತ್ನಿಯನ್ನೇ ಆರೋಪಿಯನ್ನಾಗಿಸಿದ ಮೆಗ್ಗಾನ್ ಆಸ್ಪತ್ರೆ

    2009-10ರಲ್ಲಿ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಈ ಆಸ್ಪತ್ರೆ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ್ದರು. 2013-14ರಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ಕಾಮಗಾರಿ ಮುಗಿದಿದೆ. ಆದರೆ ಓವರೆಗೂ ಈ ಕಟ್ಟಡಕ್ಕೆ ಉದ್ಘಾಟನಾ ಭಾಗ್ಯ ದೊರಕಿಲ್ಲ. ಕಟ್ಟಡದ ಅಲ್ಲಲ್ಲಿ ಮದ್ಯದ ಪ್ಯಾಕೇಟ್‌ಗಳು, ಬಾಟಲಿಗಳು ಕಾಣಸಿಗುತ್ತಿರುವುದು ಇಲ್ಲಿನ ಅವ್ಯವಸ್ಥೆ ಎತ್ತಿ ತೋರಿಸುತ್ತಿದೆ. ಇದನ್ನ ಗಮನಹರಿಸಬೇಕಾದ ಸಿಮ್ಸ್ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕೂಡ ಅಧಿಕಾರಿಗಳು ಎನೂ ತೊಂದರೆ ಎಲ್ಲವೆನ್ನುವ ಹಾಗೆ ಪ್ರತಿಕ್ರಿಯಿಸಿದ್ದಾರೆ.

    ಸಮಸ್ಯೆಗಳ ಆಗರವಾಗಿರುವ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಈ ಕೂಡಲೇ ಪರಿಹಾರ ದೊರೆಯಬೇಕಿದೆ. ಅದರಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿನಿಧಿಸುವ ಜಿಲ್ಲಾ ಕೇಂದ್ರದಲ್ಲೇ ಈ ರೀತಿ ಸಮಸ್ಯೆಯಾದರೆ ಇನ್ನು ಇತರೆ ಆಸ್ಪತ್ರೆಗಳ ಸ್ಥಿತಿ ಹೇಗಪ್ಪಾ ಅಂತಾ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

  • ಲಿಫ್ಟ್ ಬೇಕು ಲಿಫ್ಟ್- ಶಿವಮೊಗ್ಗ ಸಿಮ್ಸ್ ಡಾಕ್ಟರ್‍ಗಳ ಗೋಳು

    ಲಿಫ್ಟ್ ಬೇಕು ಲಿಫ್ಟ್- ಶಿವಮೊಗ್ಗ ಸಿಮ್ಸ್ ಡಾಕ್ಟರ್‍ಗಳ ಗೋಳು

    ಶಿವಮೊಗ್ಗ: ನಮಗೆ ಲಿಫ್ಟ್ ಬೇಕು ಎಂದು ನಗರದ ಸಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್)ಗೆ ಸುಸಜ್ಜಿತ ಕಾಲೇಜು ಕಟ್ಟಡವಿದೆ. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗಾಗಿ ಆರು ಮಹಡಿಯ ಹಾಸ್ಟೆಲ್ ಇದ್ದು ಸುಮಾರು 600 ಮಂದಿ ಇದ್ದಾರೆ. ಒಂಬತ್ತು ಮಹಡಿಯ ಭವ್ಯ ಕ್ವಾರ್ಟಸ್ ಇದ್ದು, ಇದರ ಏಳು ಮಹಡಿವರೆಗೂ ವೈದ್ಯ ಕುಟುಂಬಗಳು ವಾಸವಾಗಿವೆ. ಈ ಯಾವುದೇ ಕಟ್ಟಡಗಳಿಗೆ ಲಿಫ್ಟ್ ಇಲ್ಲದ ಕಾರಣ ಇಲ್ಲಿನ ವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.

    ಐದು, ಆರು, ಏಳನೇ ಮಹಡಿಯಲ್ಲಿರುವ ಮನೆಗೆ ಹೋಗಿ ಬರುವಷ್ಟರಲ್ಲಿ ವೈದ್ಯರೇ ರೋಗಿಗಳಾಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕುಟುಂಬದಲ್ಲಿ ಇರುವ ಮಹಿಳೆಯರು, ಮಕ್ಕಳು, ವೃದ್ಧರ ಗೋಳು ಹೇಳತೀರದಾಗಿದೆ. ಆರು- ಏಳನೇ ಮಹಡಿಯಲ್ಲಿ ಯಾರಿಗಾದರೂ ಆರೋಗ್ಯ ಏರುಪೇರಾದಲ್ಲಿ ಅವರನ್ನು ಹೊತ್ತುಕೊಂಡು ಕೆಳಗಿಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ಕಗ್ಗಂಟಾಗಿರುವ ಲಿಫ್ಟ್: ಈ ಕಟ್ಟಡಗಳು ಸುಮರು 60 ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡು ಎರಡು ವರ್ಷವಾಗಿದೆ. ಕಟ್ಟಡಕ್ಕಾಗಿ ಮೀಸಲಿಟ್ಟಿದ್ದ ಹಣ ಪೂರ್ಣ ಬಳಕೆಯೂ ಆಗಿದೆ. ಇದರಲ್ಲಿ ಲಿಫ್ಟ್ ಗಾಗಿ ಮೀಸಲಿಟ್ಟಿದ್ದ ಹಣವನ್ನು ಗುತ್ತಿಗೆದಾರನಿಗೆ ಪಾವತಿ ಮಾಡಲಾಗಿದೆ. ಆದರೂ, ಈ ಕಟ್ಟಡಗಳಿಗೆ ಲಿಫ್ಟ್ ಭಾಗ್ಯ ದೊರಕಿಲ್ಲ. ಇಡೀ ಕಟ್ಟಡಕ್ಕೆ ಲಿಫ್ಟ್ ಅಳವಡಿಸಲಾಗಿದೆ. ಆದರೆ ವಿದ್ಯುತ್ ಸಂಪರ್ಕ ಇನ್ನೂ ಕೊಟ್ಟಿಲ್ಲ.

    ತಮ್ಮ ಸಿಬ್ಬಂದಿಗೆ ಕ್ವಾರ್ಟಸ್ ಕೊಟ್ಟು ಕೈ ತೊಳೆದುಕೊಂಡಿರುವ ಸಿಮ್ಸ್ ಆಡಳಿತ ಮಂಡಳಿ ಅವರಿಗೆ ಲಿಫ್ಟ್ ಸೌಲಭ್ಯ ಕೊಡುವಲ್ಲಿ ಬೇಜವಾಬ್ದಾರಿತನ ತೋರುತ್ತಿದೆ. ಪಿಡಬ್ಲ್ಯುಡಿ, ಮೆಸ್ಕಾಂ, ಕೆಪಿಟಿಸಿಎಲ್ ಕಂಟ್ರಾಕ್ಟರ್ ಮೇಲೆ ಜವಾಬ್ದಾರಿ ಹೊರಿಸಲಾಗುತ್ತಿದೆ. ಇನ್ನೊಂದು ತಿಂಗಳಲ್ಲಿ ಲಿಫ್ಟ್ ಸೇವೆ ಸಿದ್ಧ ಎಂಬ ಸಿದ್ದ ಉತ್ತರವನ್ನೇ ಸಿಮ್ಸ್ ನಿರ್ದೇಶಕರು ನೀಡುತ್ತಿದ್ದಾರೆ.

    ಈ ಕ್ವಾರ್ಟಸ್ ಗಳ ಮಹಡಿಗಳಲ್ಲಿ ಮನೆ ಮಾಡಿದವರು ಲಿಫ್ಟ್ ಇಲ್ಲದೆ ಬವಣೆ ಪಡುತ್ತಿದ್ದಾರೆ. ಲಿಫ್ಟ್ ಬೇಕು ಲಿಫ್ಟ್ ಎನ್ನುತ್ತಿದ್ದಾರೆ. ಆದರೆ ಸಿಮ್ಸ್ ಆಡಳಿತ ಅಸೀಮ ನಿರ್ಲಕ್ಷ್ಯ ಮುಂದುವರೆಸಿದೆ. ಭವ್ಯ ಕಟ್ಟಡ ನಿರ್ಮಿಸಿದರೆ ಸಾಲದು ಅದಕ್ಕೆ ತಕ್ಕ ಸೌಲಭ್ಯಗಳನ್ನೂ ಒದಗಿಸುವುದು ತಮ್ಮ ಜವಾಬ್ದಾರಿ ಎಂಬುದನ್ನು ಮರೆತಿದೆ. ಈ ನಿರ್ಲಕ್ಷ್ಯದ ವಿರುದ್ಧ ಲಿಫ್ಟ್ ಅಗತ್ಯ ಇರುವ ವೈದ್ಯರು ಪ್ರತಿಭಟನೆ ಹಾದಿ ಹಿಡಿಯಲು ಸಿದ್ಧತೆ ನಡೆಸಿದ್ದಾರೆ.