ಚಾಮರಾಜನಗರ: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸರಳ ವಿವಾಹವಾದ ನವದಂಪತಿ ಮದುವೆಯ ಖರ್ಚನ್ನು ಕೊರೊನಾ ಪರಿಹಾರ ನಿಧಿಗೆ ನೀಡಿರುವ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದಲ್ಲಿ ನಡೆದಿದೆ.
ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಸರಳವಾಗಿ ಮದುವೆ ಮಾಡಿಕೊಂಡು ಮದುವೆ ಖರ್ಚಿಗೆ ಎಂದು ಇಟ್ಟುಕೊಂಡಿದ್ದ 50 ಸಾವಿರ ರೂಪಾಯಿಗಳನ್ನು ಕೊರೊನಾ ಪರಿಹಾರ ನಿಧಿಗೆ ನೀಡಿದ ನವಜೋಡಿ ಕಾರ್ಯಕ್ಕೆ ಪೋಷಕರು ಶಹಬ್ಬಾಸ್ ಎಂದಿದ್ದು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದ ಚಂದ್ರಶೇಖರಮೂರ್ತಿ, ಚಾಮರಾಜನಗರ ತಾಲೂಕಿನ ಹರವೆ ಗ್ರಾಮದ ಮೇಘನಾ ಸರಳವಾಗಿ ವಿವಾಹವಾಗಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಸಾವಿರ ಹಾಗೂ ಪ್ರಧಾನಿ ಕೊರೊನಾ ಪರಿಹಾರ ನಿಧಿಗೆ 25 ಸಾವಿರ ರೂ. ಅನ್ನು ಆನ್‍ಲೈನ್ ಮೂಲಕ ಪಾವತಿಸಿದ್ದಾರೆ. ನವ ವಧುವರರ ಈ ಕೆಲಸಕ್ಕೆ ಜಿಲ್ಲೆಯಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.
– ಮದ್ವೆಗೆ ಖರ್ಚು ಮಾಡಬೇಕೆಂದಿದ್ದ ಹಣವನ್ನ ದೇಣಿಗೆ ನೀಡಿದ್ರು
ತಿರುವನಂತಪುರಂ: ಕೊರೊನಾ ಲಾಕ್‍ಡೌನ್ ಪರಿಣಾಮದಿಂದಾಗಿ ಮಲಯಾಳಂ ಚಿತ್ರರಂಗದ ಪ್ರಶಸ್ತಿ ವಿಜೇತ ನಟರೊಬ್ಬರು ದೇವಾಲಯದಲ್ಲಿ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಟ ಮಣಿಕಂದನ್ ಆಚಾರಿ ತಮ್ಮ ಗೆಳತಿ ಅಂಜಲಿಯನ್ನು ಭಾನುವಾರ ಮದುವೆಯಾಗಿದ್ದಾರೆ. ಯಾವುದೇ ಆಡಂಬರ, ಅದ್ಧೂರಿ, ಹೆಚ್ಚು ಜನರಿಲ್ಲದೆ ಅತ್ಯಂತ ಸರಳ ರೀತಿಯಲ್ಲಿ ಕೇರಳದ ದೇವಸ್ಥಾನವೊಂದರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಷ್ಟೇ ಅಲ್ಲದೇ ಮಣಿಕಂದನ್ ಮತ್ತು ಅಂಜಲಿ ಇಬ್ಬರೂ ತಮ್ಮ ಮದುವೆಗೆ ಖರ್ಚು ಮಾಡಬೇಕೆಂದುಕೊಂಡಿದ್ದ ಹಣವನ್ನು ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.
ಮಣಿಕಂದನ್ ಮತ್ತು ಅಂಜಲಿ ಮದುವೆ ಸಂದರ್ಭದಲ್ಲಿ ಕುಟುಂಬದವರು ಲಾಕ್‍ಡೌನ್ ನಿಯಮಗಳು ಪಾಲಿಸಿದ್ದಾರೆ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದು, ಮಾಸ್ಕ್ ಧರಿಸಿದ್ದರು.
ಮಣಿಕಂದನ್ ಮತ್ತು ಅಂಜಲಿ ಮದುವೆ ಆರು ತಿಂಗಳ ಹಿಂದೆಯೇ ನಿಶ್ಚಯವಾಗಿತ್ತು. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ತಮ್ಮ ಮದುವೆಯನ್ನು ಮುಂದೂಡಲು ಈ ಜೋಡಿ ಇಷ್ಟಪಡಲಿಲ್ಲ. ಹೀಗಾಗಿ ಎರಡೂ ಕುಟುಂಬದವರು ದೇವಸ್ಥಾನದಲ್ಲಿ ಸರಳವಾಗಿ ವಿವಾಹ ಮಾಡಲು ನಿರ್ಧರಿಸಿದ್ದರು. ಅದರಂತೆಯೇ ಕೇರಳದ ದೇವಾಲಯದಲ್ಲಿ ಕುಟುಂಬದ ಕೆಲವು ಮಂದಿಯ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.
ಮಣಿಕಂದನ್ ಮತ್ತು ಅಂಜಲಿ ಇಬ್ಬರೂ ಒಂದೂವರೆ ವರ್ಷದ ಹಿಂದೆ ದೇವಸ್ಥಾನವೊಂದರ ಉತ್ಸವದಲ್ಲಿ ಭೇಟಿಯಾಗಿದ್ದರು. ಪರಿಚಯ ಸ್ನೇಹವಾಗಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಇವರಿಬ್ಬರು ತಮ್ಮ ಪ್ರೀತಿಯ ಬಗ್ಗೆ ಮನೆಯವರಿಗೆ ತಿಳಿಸಿದ್ದಾರೆ. ಎರಡು ಕುಟುಂಬದವರು ಇವರ ಪ್ರೀತಿಗೆ ಒಪ್ಪಿಗೆ ಸೂಚಿಸಿ ಮದುವೆ ಮಾಡಿಸಿದ್ದಾರೆ.
ಈ ವೇಳೆ ಮಾತನಾಡಿದ ವರ ಮಣಿಕಂದನ್, “ಕೊರೊನಾ ಲಾಕ್‍ಡೌನ್‍ನಿಂದ ನಾವು ಸರಳವಾಗಿ ವಿವಾಹವಾಗಿದ್ದೇವೆ. ಅಲ್ಲದೇ ನಮ್ಮ ಮದುವೆಗೆ ಖರ್ಚು ಮಾಡಬೇಕೆಂದಿದ್ದ ಹಣವನ್ನು ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿರುವುದಕ್ಕೆ ನಮಗೆ ಸಂತಸವಾಗಿದೆ. ನಮ್ಮ ಮದುವೆ ಅದ್ಧೂರಿಯಾಗಿ ನಡೆಯಲಿಲ್ಲ ಎಂದು ನಮಗೆ ಬೇಸರವಾಗಿಲ್ಲ. ಇದು ಸಂಭ್ರಮ ಪಡುವ ಸಮಯವಲ್ಲ. ಯಾಕೆಂದರೆ ಇಡೀ ಜಗತ್ತು ಕೊರೊನಾದಿಂದ ಸಂಕಷ್ಟದಲ್ಲಿದೆ. ನಾವು ಯಾವಾಗ ಬೇಕಾದರೂ ಸಂಭ್ರಮಾಚರಣೆ ಮಾಡಬಹುದು” ಎಂದರು.
ನಮ್ಮ ಮದುವೆಯನ್ನು ಮುಂದೂಡದೆ ಎರಡು ಕುಟುಂಬದವರು ಸೇರಿ ದೇವಸ್ಥಾನದಲ್ಲಿ ಮಾಡಲು ನಿರ್ಧಾರ ತೆಗೆದುಕೊಂಡಿದ್ದರು. ಇದರ ಬಗ್ಗೆ ನನಗೆ ತುಂಬಾ ಸಂತೋಷವಿದೆ ಎಂದು ವಧು ಅಂಜಲಿ ಹೇಳಿದ್ದಾರೆ.
ಮಣಿಕಂದನ್ 2016ರಲ್ಲಿ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ತಾವು ನಟಿಸಿದ ಮೊದಲ ‘ಕಮ್ಮಟಿಪಾದ’ ಸಿನಿಮಾದ ಅಭಿನಯಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದರು. ಈ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಮಣಿಕಂದನ್ ಗುರುತಿಸಿಕೊಂಡಿದ್ದಾರೆ.
ಚಿಕ್ಕಮಗಳೂರು: ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆಗಿದೆ. ಈ ಮಧ್ಯೆ ಅತೀ ಸರಳ ವಿವಾಹವೊಂದು ಕಾಫಿನಾಡು ಚಿಕ್ಕಮಗಳೂರಿನಲ್ಲಿ ಜರುಗಿದೆ.
ಗಂಡು-ಹೆಣ್ಣು ಬಿಟ್ಟು 18 ಜನ, ಒಟ್ಟು 20 ಜನರ ಮಧ್ಯೆ ಮದುವೆಯೊಂದು ಮುಗಿದಿದೆ. ಜಿಲ್ಲೆಯ ಕೊಪ್ಪ ತಾಲೂಕಿನ ಕೂಳೂರು ನಿವಾಸಿಯಾದ ಶ್ರೀನಿಧಿಯವರೊಂದಿಗೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಮಿಲನ ಅವರ ಮದುವೆ ನಿಶ್ಚಯವಾಗಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಂದು ತೀರ್ಥಹಳ್ಳಿಯ ಮಾಧವ ಮಾಂಗಲ್ಯ ಸಭಾಭವನದಲ್ಲಿ ಮದುವೆ ನಡಯಬೇಕಿತ್ತು.
ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ವರನ ಊರು ಕೂಳೂರಿನಲ್ಲಿ ಕೇವಲ 20 ಸೇರಿ ಹುಡುಗನ ಮನೆಯಲ್ಲೇ ಮದುವೆ ಮಾಡಿ ಮುಗಿಸಿದ್ದಾರೆ. ಮದುವೆಯಲ್ಲಿ ವಧು-ವರ, ಇಬ್ಬರ ಹೆತ್ತವರು ಹಾಗೂ ಸಹೋದರರಷ್ಟೆ ಭಾಗಿಯಾಗಿದ್ದರು. ಸ್ನೇಹಿತರು ಹಾಗೂ ದೂರದ ಸಂಬಂಧಿಗಳನ್ನೂ ಕೂಡ ಮದುವೆಗೆ ಆಹ್ವಾನಿಸಿದೆ ಅತೀ ಸರಳ ವಿವಾಹ ಮಾಡಿ ಕೊರೊನಾ ಲಾಕ್‍ಡೌನ್‍ಗೆ ಬೆಂಬಲ ಸೂಚಿಸಿದ್ದಾರೆ.
ಮಡಿಕೇರಿ: ಕೊರೊನಾ ವೈರಸ್ ಕೇವಲ ಜನರ ಆರೋಗ್ಯ ಮತ್ತು ಜನಜೀವನದ ಮೇಲೆ ಮಾತ್ರವಲ್ಲದೆ ಮದುವೆ ಸಮಾರಂಭಗಳ ಮೇಲೂ ಪರಿಣಾಮ ಬೀರಿದೆ. ಜಿಲ್ಲೆಯಲ್ಲಿ ವಧು-ವರ ಸೇರಿದಂತೆ ಕೇವಲ ಏಳು ಜನರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು.
ಮಡಿಕೇರಿಯ ರಜಿತ್ ಮತ್ತು ಕಾಸರಗೋಡು ತಾಲೂಕಿನ ಗ್ರಾಮವೊಂದರ ಹುಡುಗಿ ಅನುಷಾಗೆ ಇಂದು ಮದುವೆ ನಿಶ್ಚಿತವಾಗಿತ್ತು. ಸುಳ್ಯದ ಪುರಭವನದಲ್ಲಿ ಮದುವೆ ನಿಗದಿಯಾಗಿತ್ತು. ಮದುವೆಗಾಗಿ ಐದುನೂರು ಜನರಿಗೆ ಆಮಂತ್ರಣ ಪತ್ರಿಕೆ ನೀಡಲಾಗಿತ್ತು. ಪುರಭವನಕ್ಕೆ ಮುಂಗಡ ಹಣವಾಗಿ ಸಾವಿರಾರು ರೂಪಾಯಿಯನ್ನು ಕೊಡಲಾಗಿತ್ತು. ಅದ್ಧೂರಿ ಮದುವೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.
ಆದರೆ ಕೊರೊನಾ ವೈರಸ್‍ನಿಂದಾಗಿ ದೇಶವನ್ನು ಲಾಕ್‍ಡೌನ್ ಮಾಡಿರುವುದರಿಂದ ಮದುವೆಯ ಸ್ಥಳವನ್ನು ಬದಲಾಯಿಸಲಾಗಿದೆ. ಮಡಿಕೇರಿ ನಗರದ ಹೊರವಲಯದಲ್ಲಿರುವ ರಾಜರಾಜೇಶ್ವರಿ ದೇವಾಲಯದಲ್ಲಿ ಕೇವಲ ಏಳು ಜನರು ಮಾತ್ರವೇ ಮದುವೆಯಲ್ಲಿ ಭಾಗಿಯಾಗಿ ಮದುವೆ ನೆರವೇರಿಸಿದರು. ವಧು-ವರರ ತಂದೆ,ತಾಯಿ ಮತ್ತು ಅರ್ಚಕರು ಮಾತ್ರವೇ ಮದುವೆಯಲ್ಲಿ ಭಾಗಿಯಾಗಿದ್ದರು.
ವರ ರಜಿತ್ ಮಾತನಾಡಿ, ನಾವು 500 ಮದುವೆ ಆಮಂತ್ರಣ ಪತ್ರಿಕೆಯನ್ನು ನೀಡಲಾಗಿತ್ತು. ಕುಟುಂಬದ ಎಲ್ಲ ಸದಸ್ಯರ ಜೊತೆ ಸೇರಿ ಅದ್ಧೂರಿಯಾಗಿ ಮದುವೆ ಆಗಬೇಕೆಂಬ ಆಸೆ ಇತ್ತು. ಆದರೆ ಈ ಕೊರೊನಾ ವೈರಸ್‍ನಿಂದ ಇಡಿ ಜಗತ್ತಿನಲ್ಲಿ ಆಂತಕ ಉಂಟಾಗಿದೆ. ಹೀಗಾಗಿ ಈ ರೀತಿ ಸರಳವಾಗಿ ಮದುವೆ ಆಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.