Tag: Silk

  • ರಸ್ತೆ ತಡೆ ನಡೆಸಿ ರಾಮನಗರ ರೇಷ್ಮೆ ಬೆಳೆಗಾರರಿಂದ ಸರ್ಕಾರದ ವಿರುದ್ಧ ಪ್ರತಿಭಟನೆ

    ರಸ್ತೆ ತಡೆ ನಡೆಸಿ ರಾಮನಗರ ರೇಷ್ಮೆ ಬೆಳೆಗಾರರಿಂದ ಸರ್ಕಾರದ ವಿರುದ್ಧ ಪ್ರತಿಭಟನೆ

    ರಾಮನಗರ: ಯಾವುದೇ ಸರ್ಕಾರ ಬಂದರೂ ರೈತರಿಗೆ ನೆರವಾಗುತ್ತಿಲ್ಲ ಎಂದು ರಾಮನಗರ ರೇಷ್ಮೆ ಬೆಳೆಗಾರರು ಹೆದ್ದಾರಿ ತಡೆ ಹಿಡಿದು ಪ್ರತಿಭಟನೆ ಮಾಡಿದ್ದಾರೆ.

    ರೇಷ್ಮೆ ಗೂಡಿನ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಹರಾಜು ಪ್ರಕ್ರಿಯೆನ್ನು ಸ್ಥಗಿತಗೊಳಿಸಿ ರೇಷ್ಮೆ ಬೆಳೆಗಾರರು ಬೆಂಗಳೂರು-ಮೈಸೂರು ಹೆದ್ದಾರಿ ತಡೆಹಿಡಿದು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು.

    ಇಂದು ಹರಾಜು ಪ್ರಕ್ರಿಯೆಯ ವೇಳೆ ರೇಷ್ಮೆಗೂಡಿನ ಬೆಲೆ ಪ್ರತಿ ಕೆಜಿಗೆ ಸರಾಸರಿ 220 ರೂ ರಿಂದ 240 ರೂ ಕ್ಕೆ ನಿಂತಿದೆ. ಯಾವುದೇ ಸರ್ಕಾರ ಬಂದರೂ ರೈತರ ನೆರವಿಗೆ ನಿಲ್ಲುವಂತಹ ಕೆಲಸವಾಗುತ್ತಿಲ್ಲ. ರೈತರ ರೇಷ್ಮೆಯನ್ನು ಸರ್ಕಾರ ತೆಗೆದುಕೊಳ್ಳದಿರುವುದರಿಂದ ಮಧ್ಯವರ್ತಿಗಳು ತಮಗಿಷ್ಟ ಬಂದಂತೆ ಹರಾಜು ಕೂಗುತ್ತಿದ್ದಾರೆ ಎಂದು ರಸ್ತೆ ತಡೆದು ಆಕ್ರೋಶ ಹೊರ ಹಾಕಿದರು.

    ನಂತರ ಸ್ಥಳಕ್ಕೆ ಬಂದ ಪೊಲೀಸರು ರೈತರನ್ನು ಮನವೊಲಿಸಿ ಪ್ರತಿಭಟನೆಯನ್ನು ನಿಲ್ಲಿಸಿದರು. ಈ ನಡುವೆ ಅಧಿಕಾರಿಗಳು ಹಾಗೂ ರೈತರ ನಡುವೆ ಮಾತುಕತೆ ನಡೆದು ಅಧಿಕಾರಿಗಳು ಮತ್ತೆ ಉತ್ತಮ ಬೆಲೆಗೆ ಹರಾಜು ನಡೆಸುವ ಭರವಸೆ ನೀಡಿದರು.

  • ರೇಷ್ಮೆ ಬೆಳೆ ಮೊತ್ತವನ್ನು ಕೊಡಗು ಸಂತ್ರಸ್ತರಿಗೆ ನೀಡಿದ ಮಂಡ್ಯದ ರೈತ

    ರೇಷ್ಮೆ ಬೆಳೆ ಮೊತ್ತವನ್ನು ಕೊಡಗು ಸಂತ್ರಸ್ತರಿಗೆ ನೀಡಿದ ಮಂಡ್ಯದ ರೈತ

    ಮಂಡ್ಯ: ತಾವು ಬೆಳೆದ ರೇಷ್ಮೆಯನ್ನು ತಮ್ಮ ತೋಟದ ಮನೆಯಲ್ಲಿಯೇ ಹರಾಜು ಹಾಕಿ, ಅದರಿಂದ ಬಂದ ಸಂಪೂರ್ಣ ಹಣವನ್ನು ಕೊಡಗಿನ ಸಂತ್ರಸ್ತರ ನಿಧಿಗೆ ನೀಡುವ ಮೂಲಕ ಜಿಲ್ಲೆಯ ಮಳವಳ್ಳಿಯ ರೈತರೊಬ್ಬರು ಮಾನವೀಯತೆ ಮೆರೆದಿದ್ದಾರೆ.

    ಮಳವಳ್ಳಿ ಪಟ್ಟಣದ ರೈತ ಬಸವರಾಜು ಎಂಬವರು ಒಂದೂವರೆ ಎಕರೆ ಭೂಮಿಯಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದು, ಈ ಬಾರಿ ಸುಮಾರು 150 ಚಂದ್ರಿಕೆಯಲ್ಲಿ 140 ಕೆಜಿ ರೇಷ್ಮೆ ಗೂಡು ಬೆಳೆ ಬಂದಿತ್ತು. ಇದರಿಂದ ಬರುವ ಹಣ ಕೊಡಗು ಸಂತ್ರಸ್ತರಿಗೆ ಆಸರೆಯಾಗಲಿ ಅಂತಾ ಬಸವರಾಜು ಬಯಸಿದ್ದರು. ಹೀಗಾಗಿ ಇಂದು ರೇಷ್ಮೆ ಗೂಡು ಖರೀದಿದಾರರನ್ನು ತಮ್ಮ ತೋಟಕ್ಕೆ ಕರೆಸಿದ್ದರು.

    ರೇಷ್ಮೆ ಖರೀದಿಗೆ ಬಂದಿದ್ದ ವ್ಯಾಪಾರಿಗಳು ಬಸವರಾಜು ಉದಾರತೆ ಮಚ್ಚಿ, ಕೊಡಗು ಸಂತ್ರಸ್ತರಿಗೆ ತಮ್ಮ ಪಾಲು ಕೂಡ ಅಂತಾ ಮಾರುಕಟ್ಟೆ ಬೆಲೆಗಿಂತ 40 ರೂ. ಹೆಚ್ಚುವರಿ ಹಣ ನೀಡಿ ರೇಷ್ಮೆ ಗೂಡು ಖರೀದಿಸಿದ್ದಾರೆ. ಇದರಿಂದಾಗಿ 30 ಸಾವಿರ ರೂ.ಗಿಂತಲೂ ಹೆಚ್ಚು ಹಣ ಸೇರಿದ್ದು, ಅದನ್ನು ಕೊಡಗು ಸಂತ್ರಸ್ತರ ನಿಧಿಗೆ ದಾನ ಮಾಡಿದ್ದಾರೆ.

    ಬಸವರಾಜು ನಿರ್ಧಾರಕ್ಕೆ ಕುಟುಂಬದವರೂ ಸಂತಸ ವ್ಯಕ್ತಪಡಿಸಿದ್ದಾರೆ. ಹೀಗೆ ಎಲ್ಲರೂ ನೆರೆ ಸಂತ್ರಸ್ತರಿಗೆ ತಮ್ಮ ಕೈಲಾದ ಸಹಾಯ ಮಾಡಬೇಕೆಂದು ಬಸವರಾಜು ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂಡ್ಯದಲ್ಲಿ ರೇಷ್ಮೆ ಬೆಳೆಗಾರ ಬೆನ್ನಿಗೆ ನಿಂತ ಸಿಎಂ ಕುಮಾರಸ್ವಾಮಿ!

    ಮಂಡ್ಯದಲ್ಲಿ ರೇಷ್ಮೆ ಬೆಳೆಗಾರ ಬೆನ್ನಿಗೆ ನಿಂತ ಸಿಎಂ ಕುಮಾರಸ್ವಾಮಿ!

    ಮಂಡ್ಯ: ರೈತರ ಸಾಲಮನ್ನಾ ಮಾಡಿ ಮಾವು ಬೆಳೆಗೆ ಬೆಂಬಲ ಬೆಲೆ ನೀಡಿದ್ದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಇದೀಗ ರೇಷ್ಮೆ ಬೆಳೆಗಾರ ಬೆನ್ನಿಗೆ ನಿಲ್ಲುವ ಮೂಲಕ ರೇಷ್ಮೆ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ.

    ಮಂಡ್ಯದ ಸರ್.ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕರ್ತರ ಅಭಿನಂದನಾ ಸಮಾವೇಶದಲ್ಲಿ ರೇಷ್ಮೆ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ. ಮಿಶ್ರತಳಿ ಗೂಡು ಪ್ರತಿ ಕೆಜಿಗೆ 40 ರೂಪಾಯಿ ಹಾಗೂ ಬಿಳಿಗೂಡು (ಬೈವೋಲ್ಟಿನ್) ಪ್ರತಿ ಕೆಜಿಗೆ 50 ರೂಪಾಯಿ ಬೆಂಬಲ ಬೆಲೆಯನ್ನ ಘೋಷಣೆ ಮಾಡಿದ್ದಾರೆ.

    ಇದೇ ವೇಳೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳನ್ನು ಗೆಲ್ಲಿಸಿದ್ದೀರಿ. ನನ್ನ ಭಾವನೆಗಳನ್ನು ವ್ಯಕ್ತಪಡಿಸುವ ಮುನ್ನ ಜಿಲ್ಲೆಯ ತಂದೆ-ತಾಯಂದಿರಿಗೆ ನಮಸ್ಕಾರ. ರಾಜ್ಯ ರಾಜಕಾರಣದಲ್ಲಿ ನನ್ನ ಎತ್ತರಕ್ಕೆ ಪ್ರಮುಖ ಪಾತ್ರ ವಹಿಸಿದ್ದು ಮಂಡ್ಯ. ಈ ವರ್ಷ ನೀರಿನ ಭವಣೆ ನಿಮಗೆ ಬರಲ್ಲ. ಉತ್ತಮ ಬೆಳೆ ಬೆಳೆಯಲು ಚಾಮುಂಡೇಶ್ವರಿ ಆಶೀರ್ವಾದ ನಿಮಗೆ ದೊರಕಿದೆ ಎಂದು ಸಂತಸದಿಂದ ಸಿಎಂ ಹೇಳಿದ್ದಾರೆ.

    ಆರ್ಥಿಕವಾಗಿ ಸರ್ಕಾರದ ಖಜಾನೆ ತುಂಬಿಸುವ ಅನಿವಾರ್ಯತೆ ಇದೆ. ಆದರೂ ರೈತರಿಗಾಗಿ ಬೆಂಬಲ ಬೆಲೆ ಘೋಷಣೆ ಮಾಡಿದ್ದೇನೆ. ರೈತರು ಆತ್ಮಹತ್ಯೆಗೆ ಮುಂದಾಗಬೇಡಿ ಎಂದು ಕೈಮುಗಿದು ಮನವಿ ಮಾಡಿಕೊಂಡರು.

    ಕಣ್ಣೀರು ಹಾಕಿದ್ದ ವಿಚಾರವಾಗಿ ಮಾತನಾಡಿದ ಅವರು, ನಾನು ಭಾವನಾತ್ಮಕ ಜೀವಿ, ಮನುಷ್ಯತ್ವದ ಜೀವಿ. ತಾಯಿ ಹೃದಯ ಹೊಂದಿದ ನಿಮ್ಮ ಮನೆಯ ಮಗನಾಗಿದ್ದು, ನಾನು ಅಸಹಾಯಕತೆಯಿಂದ ಕಣ್ಣೀರು ಹಾಕಿದ್ದಲ್ಲ. ನನ್ನ ಭಾವನೆಗಳನ್ನು ಕೆಲವರು ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಮಂಡ್ಯ ಜನತೆ ಕೊಟ್ಟಿರುವ ಶಕ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಕೊನೆಯ ಉಸಿರು ಇರುವವರೆಗೂ ಮಂಡ್ಯವನ್ನ ನಾನು ಮರೆಯಲಾಗಲ್ಲ ಎಂದಿದ್ದಾರೆ.

    ಕೇಂದ್ರದಿಂದ ಹಲವು ಅನುದಾನಗಳನ್ನು ತರುತ್ತಿದ್ದು, ರಾಜ್ಯದಲ್ಲಿ 5 ಮೆಗಾಡೈರಿ ತರಲಿದ್ದು, ಅದರಲ್ಲಿ ಒಂದು ಮಂಡ್ಯದಲ್ಲಿ ನಿರ್ಮಾಣ ಮಾಡುತ್ತೇನೆ. ಮಂಡ್ಯ ಅಂದರೆ ಇಂಡಿಯಾ ಅಂತಾರೆ ಇಲ್ಲಿಂದಲೇ ನನ್ನ ಅಭಿವೃದ್ಧಿ ಕಾರ್ಯಕ್ರಮಗಳ ಪಯಣ ಸಾಗಲಿದೆ. ಯಾವುದೇ ಆತಂಕ ಬೇಡ ನಿಮ್ಮನ್ನು ಉಳಿಸುವುದು ನನ್ನ ಕರ್ತವ್ಯ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.

  • ರೇಷ್ಮೆ ಬೆಲೆ ಕುಸಿತ, ಮನನೊಂದು ರೈತ ಆತ್ಮಹತ್ಯೆ!

    ರೇಷ್ಮೆ ಬೆಲೆ ಕುಸಿತ, ಮನನೊಂದು ರೈತ ಆತ್ಮಹತ್ಯೆ!

    ಕೋಲಾರ: ರೇಷ್ಮೆ ಬೆಲೆ ಕುಸಿತ ಹಾಗೂ ಸಾಲಬಾಧೆಯಿಂದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ತಾಲೂಕಿನ ಮಟ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮಟ್ನಹಳ್ಳಿ ಗ್ರಾಮದ ವೆಂಕಟಪ್ಪ(55) ಆತ್ಮಹತ್ಯೆಗೆ ಶರಣಾದ ರೈತ. ವೆಂಕಟಪ್ಪ ಮಟ್ನಹಳ್ಳಿ ಗ್ರಾಮದಲ್ಲಿ 4 ಎಕರೆ ಜಮೀನಿನಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದರು. ಅಲ್ಲದೇ ಇತ್ತೀಚೆಗೆ ಬೆಳೆದ ರೇಷ್ಮೆಯನ್ನ ಮಾರುಕಟ್ಟೆಗೆ ಹಾಕಿದ್ದರು. ಮಾರುಕಟ್ಟೆಯಲ್ಲಿ ರೇಷ್ಮೆಗೆ ಪ್ರತಿ ಕೆಜಿಗೆ 200 ರಿಂದ 300 ರೂಪಾಯಿಗೆ ಮಾರಾಟವಾಗಿದ್ದರಿಂದ  ಬೇಸತ್ತ ರೈತ ವೆಂಕಟಪ್ಪ ಇಂದು ಮುಂಜಾನೆ ರೇಷ್ಮೆ ಬೆಳೆಯುವ ಮನೆ ಬಳಿ ಇದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮೃತ ವೆಂಕಟಪ್ಪ ಕೆನರಾ ಬ್ಯಾಂಕ್, ಪ್ರಗತಿ ಗ್ರಾಮೀಣ ಬ್ಯಾಂಕ್ ಹಾಗೂ ಕೈ ಸಾಲ ಸೇರಿದಂತೆ ಸುಮಾರು 20 ಲಕ್ಷದಷ್ಟು ಸಾಲ ಮಾಡಿಕೊಂಡಿದ್ದರು. ಬೆಳೆದ ರೇಷ್ಮೆ ಬೆಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಸಾಲ ತೀರಿಸಲು ಭಯಪಟ್ಟು ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

    ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=Ak9d50WwJAY

  • ಕೊಳೆಯುವ ಹಣ್ಣುಗಳಿಗೆ ದಾಸ್ತಾನು ಕೇಂದ್ರ: ಬಜೆಟ್‍ನಲ್ಲಿ ತೋಟಗಾರಿಕೆ, ರೇಷ್ಮೆಗೆ ಸಿಕ್ಕಿದ್ದು ಏನು?

    ಕೊಳೆಯುವ ಹಣ್ಣುಗಳಿಗೆ ದಾಸ್ತಾನು ಕೇಂದ್ರ: ಬಜೆಟ್‍ನಲ್ಲಿ ತೋಟಗಾರಿಕೆ, ರೇಷ್ಮೆಗೆ ಸಿಕ್ಕಿದ್ದು ಏನು?

    ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ದೋಸ್ತಿ ಬಜೆಟ್ ನಲ್ಲಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಯವರು ಕೃಷಿ ಮತ್ತು ತೋಟಗಾರಿಕೆಗೆ ಒಟ್ಟು 7,642 ಕೋಟಿ ರೂ. ಹಣವನ್ನು ಮೀಸಲಿಟ್ಟಿದ್ದಾರೆ.

    ತೋಟಗಾರಿಕಾ ವಲಯದಲ್ಲಿ ಇಸ್ರೇಲ್ ಮಾದರಿ ನೀರಾವರಿ ಕ್ರಮಗಳನ್ನು ಅಳವಡಿಸಲು ಸಾಧ್ಯವಿರುತ್ತದೆ. ಈ ಹಿನ್ನೇಲೆಯಲ್ಲಿ ಕಾರವಾರ, ತುಮಕೂರು, ಯಾದಗಿರಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಪ್ರತಿ ಜಿಲ್ಲೆಯಲ್ಲಿ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಇಸ್ರರೇಲ್ ಮಾದರಿ ನೀರಾವರಿ ಒದಗಿಸಲು 150 ಕೋಟಿ ರೂ.ಗಳನ್ನು ನಿಗದಿಪಡಿಸಲಾಗುವುದು.

    ರಾಜ್ಯದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಹೆದ್ದಾರಿ, ರಸ್ತೆಗಳಲ್ಲಿ ಗುರುತಿಸಲಾಗುವ 10 ಸ್ಥಳಗಳಲ್ಲಿ ಎಪಿಎಂಸಿ ವತಿಯಿಂದ ಅಥವಾ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಮಾರುಕಟ್ಟೆ ಶುಲ್ಕ ಆದಾಯ ಹಂಚಿಕೆ ಮಾದರಿಯಲ್ಲಿ ಅಗತ್ಯ ಮೂಲ ಸೌಲಭ್ಯಗಳೊಂದಿಗೆ ಸುಸಜ್ಜಿತವಾದ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದೆ. ರೈತರು ತಾವು ಬೆಳೆದ ಸಿರಿಧಾನ್ಯಗಳು, ಸಾವಯವ ಉತ್ಪನ್ನಗಳು ಅಧಿಸೂಚಿತ ಮಾರಾಟ ಉತ್ಪನ್ನಗಳು (ಪ್ರಮುಖವಾಗಿ ಹಣ್ಣು ಮತ್ತು ತರಕಾರಿಗಳು) ನೇರವಾಗಿ ಗ್ರಾಹಕರಿಗೆ, ಮಾರಾಟಗಾರರಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುವುದು.

    ಟೊಮಾಟೋ ಮತ್ತು ಮಾವಿನ ಹಣ್ಣಿನಂತಹ ಬೇಗನೆ ಕೊಳೆಯುವ ತೋಟಗಾರಿಕೆ ಬೆಳೆಗಳ ಮತ್ತು ಅವುಗಳ ಉಪ ಉತ್ಪನ್ನಗಳ ಸಂಸ್ಕರಣೆ ಮತ್ತು ದಾಸ್ತಾನು ಮಾಡುವ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

    ರಾಜ್ಯದಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅಡಿಯಲ್ಲಿ ಇಂಡೋ-ಇಸ್ರೇಲ್ ಸಹಭಾಗಿತ್ವದಲ್ಲಿ ಆರು ಉತ್ಕøಷ್ಟ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳನ್ನು ಕೇಂದ್ರೀಕರಿಸಿ ಹೆಚ್ಚಿನ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳಲಾಗುವುದು.

    ರಾಜ್ಯದಲ್ಲಿ ಕಳೆದ ಐದು ವರ್ಷಗಳಿಂದ ಮಳೆ ಪ್ರಮಾಣ ತೀವ್ರತರವಾಗಿ ಕುಂಠಿತವಾಗಿದ್ದು, ತೆಂಗಿನ ಮರಗಳು ಒಣಗಿ ಹೋಗುತ್ತಿದ್ದು, ಅನುತ್ಪಾದಕವಾಗಿವೆ. ಅದರಲ್ಲೂ 2017 ನೇ ಸಾಲಿನ ಬೇಸಿಗೆಯಲ್ಲಿ ಬರಗಾಲದಿಂದ 44 ಲಕ್ಷಕ್ಕೂ ಹೆಚ್ಚು ತೆಂಗಿನ ಮರಗಳು ಸಂಪೂರ್ಣ ಒಣಗಿ ಅನುತ್ಪಾದಕವಾಗಿವೆ. ಈ ಕಾರಣದಿಂದಾಗಿ ತೆಂಗು ಬೆಳೆಗಾರರ ಹಿತರಕ್ಷಣೆಗಾಗಿ ಒಂದು ಯೋಜನೆಯನ್ನು ರೂಪಿಸಲಾಗುತ್ತಿದೆ. ಈ ಉದ್ದೇಶಕ್ಕೆ 190 ಕೋಟಿ ರೂ.ಗಳನ್ನು ಒದಗಿಸಲಾಗುವುದು.

    ಸಂಪೂರ್ಣವಾಗಿ ಒಣಗಿರುವ ತೆಂಗಿನ ತೋಟಗಳಲ್ಲಿ ಪರ್ಯಾಯ ಬೆಳೆಗಳಾದ ಮಾವು, ಗೋಡಂಬಿ, ಹುಣಸೆ, ತೀತಾಫಲ, ನೇರಳೆ ಇತ್ಯಾದಿ ಬೆಳೆಗಳನ್ನು ಇಲಾಖೆಯ ವಿವಿಧ ಯೋಜನೆಯಡಿ ಬೆಳೆಯಲು ಪ್ರೋತ್ಸಾಹಿಸಲಾಗುವುದು.

    ರೇಷ್ಮೆಗೆ ಸಿಕ್ಕಿದ್ದು ಏನು?
    ಮೈಸೂರು ಜಿಲ್ಲೆಯ ರೇಷ್ಮೆ ಬೆಳೆಗಾರರು ಮತ್ತು ರೀಲರುಗಳಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಉತ್ಪಾದಿಸುವ ರೇಷ್ಮೆ ಗೂಡಿಗೆ ಸ್ಥಳೀಯವಾಗಿ ಮಾರಾಟ ವ್ಯವಸ್ಥೆ ಕಲ್ಪಿಸಲು ಒಟ್ಟು 3 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಜಿಲ್ಲೆಯಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ಸ್ಥಾಪಿಸಲಾಗುವುದು. ಇದಕ್ಕಾಗಿ 2018-19ನೇ ಸಾಲಿಗೆ ಒಂದು ಕೋಟಿ ರೂ. ಮೀಸಲು.

    ಕರ್ನಾಟಕ ರೇಷ್ಮೆ ನಾಡು. ವಿಶ್ವಬ್ಯಾಂಕ್ ನೆರವಿನೊಂದಿಗೆ 70ರ ದಶಕದಲ್ಲಿ ರೇಷ್ಮೆ ಕೃಷಿಗೆ ಪೂರಕವಾಗಲೆಂದು ಬೆಂಗಳೂರು ಸಮೀಪದ ತಲಘಟ್ಟಪುರದಲ್ಲಿ ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತ ಅಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು. ಈ ಸಂಸ್ಥೆಯ ಪೂರ್ಣ ಪ್ರಮಾಣದ ಅನುಕೂಲ ಪಡೆಯಲು ತಜ್ಞರಿಂದ ಸಂಪೂರ್ಣ ಅಧ್ಯಯನ ನಡೆಸಿ ವರದಿ ಪಡೆದು ಈ ಸಂಸ್ಥೆಯ ಪುನಶ್ಚೇತನ ಮಾಡುವ ಉದ್ದೇಶಕ್ಕಾಗಿ 5 ಕೋಟಿ ರೂ.ಗಳನ್ನು ನೀಡಲಾಗುವುದು.

    ಸಾಂಪ್ರದಾಯಿಕ ರೇಷ್ಮೆ ವಸ್ತ್ರ ಉತ್ಪಾದನೆಯ ಜೊತೆಗೆ ರೇಷ್ಮೆ ಉಪ ಉತ್ನನ್ನಗಳಾದ ಉಗುರು ಪಾಲಿಷ್, ಲಿಪ್ ಸ್ಟಿಕ್ ಹಾಗೂ ರೇಷ್ಮೆ ಬಣ್ಣಗಳಿಗೆ ವಿಶ್ವವ್ಯಾಪಿ ಬೇಡಿಕೆಯಿದೆ. ಈ ಮಾರುಕಟ್ಟೆಯ ಅವಕಾಶವನ್ನು ಬಳಸಿಕೊಳ್ಳಲು ಅನುಕೂಲವಂತೆ ಕಾರ್ಯತಂತ್ರ ರೂಪಿಸಲು ಎರಡು ಕೋಟಿ ರೂ. ಗಳನ್ನು ನೀಡಲಾಗುವುದು.

    ಚನ್ನಪಟ್ಟಣದಲ್ಲಿರುವ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮದ (ಕೆ.ಎಸ್.ಐ.ಸಿ) ಘಟಕದ ಪುನಶ್ಚೇತನಕ್ಕಾಗಿ 5 ಕೋಟಿ ರೂ.ಗಳನ್ನು ಒದಗಿಸಲಾಗುವುದು.