Tag: silk sarees

  • ಚಿಕ್ಕಬಳ್ಳಾಪುರದ ರೇಷ್ಮೆ ಸೀರೆ- ಕುಗ್ರಾಮದ ನೇಕಾರನಿಗೆ ಒಲಿಯಿತು ರಾಜ್ಯ ಮಟ್ಟದ ಪ್ರಶಸ್ತಿ

    ಚಿಕ್ಕಬಳ್ಳಾಪುರದ ರೇಷ್ಮೆ ಸೀರೆ- ಕುಗ್ರಾಮದ ನೇಕಾರನಿಗೆ ಒಲಿಯಿತು ರಾಜ್ಯ ಮಟ್ಟದ ಪ್ರಶಸ್ತಿ

    ಚಿಕ್ಕಬಳ್ಳಾಪುರ: ಅಧುನಿಕತೆ ಹಾಗೂ ಯಂತ್ರೋಪಕರಣಗಳ ಭರಾಟೆಯಿಂದ ಕೈಮಗ್ಗ ನೇಕಾರಿಕೆ ನೇಪಥ್ಯಕ್ಕೆ ಸರಿದಂತಾಗಿದೆ. ಆದರೂ ಕೈಮಗ್ಗವನ್ನು ಬಿಡದೆ ನೆಚ್ಚಿಕೊಂಡ ಬಡ ನೇಕಾರಗೆ ಈಗ ರಾಜ್ಯಮಟ್ಟದಲ್ಲೇ ಪ್ರಥಮ ಪ್ರಶಸ್ತಿ ಲಭಿಸಿದೆ.

    ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಬೋಯಿಪಲ್ಲಿ ಕುಗ್ರಾಮದ ಬಡ ನೇಕಾರ ವೆಂಕಟರವಣ ಅವರು ಕೈ ಮಗ್ಗದ ಮೂಲಕ ನೇಯ್ದ ಅಪ್ಪಟ ರೇಷ್ಮೆ ಸೀರೆ ರಾಜ್ಯದಲ್ಲೇ ಅತ್ಯುತ್ತಮ ರೇಷ್ಮೆ ಸೀರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೀಗಾಗಿ ರಾಜ್ಯ ಕೈ ಮಗ್ಗ ಜವಳಿ ಇಲಾಖೆ ವತಿಯಿಂದ ನೀಡುವ ರಾಜ್ಯಮಟ್ಟದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಪ್ರತಿ ವರ್ಷದಂತೆ ಈ ವರ್ಷವೂ ಪ್ರಶಸ್ತಿಗಾಗಿ ಚಿಕ್ಕಬಳ್ಳಾಪುರ, ಚಾಮರಾಜನಗರ, ತುಮಕೂರು, ಚಿತ್ರದುರ್ಗ, ಬೆಂಗಳೂರು ನಗರ ಸೇರಿದಂತೆ ಹಲವು ಜಿಲ್ಲೆಗಳಿಂದ ತರಹೇವಾರಿ ರೇಷ್ಮೆ ಸೀರೆಗಳು ಪೈಪೋಟಿ ನಡೆಸಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ವೆಂಕಟರವಣ ಅವರು ನೇಯ್ದಿರುವ ಸೀರೆಗೆ ಪ್ರಥಮ ಸ್ಥಾನ ಲಭಿಸಿದೆ. ಇದು ಚಿಕ್ಕಬಳ್ಳಾಪುರ ಜಿಲ್ಲೆಗೆ ಹಿರಿಮೆ ಹಾಗೂ ನೇಕಾರರಿಗೆ ಕೀರ್ತಿ ತಂದಿದೆ ಎಂದು ಕೈ ಮಗ್ಗ ಹಾಗೂ ಜವಳಿ ಇಲಾಖೆಯ ಶಿವಕುಮಾರ್ ಸಂತಸ ಹಂಚಿಕೊಂಡರು.

    ಆಗಸ್ಟ್ 7ರಂದು ವಿಕಾಸಸೌಧದಲ್ಲಿ ನಡೆದ ರಾಷ್ಟ್ರೀಯ ಕೈ ಮಗ್ಗ ಹಾಗೂ ಜವಳಿ ದಿನಾಚರಣೆಯಂದು ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, 2,5000 ನಗದು ಹಾಗೂ ಸ್ಮರಣಿಕೆ ಪ್ರಮಾಣ ಪತ್ರ ನೀಡಿ ವೆಂಕಟರವಣರನ್ನು ಗೌರವಿಸಲಾಗಿದೆ. ಪ್ರಶಸ್ತಿ ಲಭಿಸಿರುವುದು ಸಂತೋಷವಾಗಿದೆ ಎಂದು ಪ್ರಶಸ್ತಿ ಪುರಸ್ಕೃತ ವೆಂಕಟರವಣ ಹೇಳಿದ್ದಾರೆ.

    ಎಂಬೋಜ್, ಬ್ರೋಕೆಟ್ ಕುಟ್ಟು ಮೂಲಕ ನೇಯಲಾಗಿರುವ ಈ ಅಪ್ಪಟ ರೇಷ್ಮೆ ಸೀರೆ, ಬಂಗಾರದ ಬಣ್ಣ ಹಾಗೂ ನೆರಳೆ ಬಣ್ಣದಿಂದ ಕೂಡಿದೆ. ಅತ್ತುತ್ತಮ ವಿನ್ಯಾಸ, ವಿಭಿನ್ನ, ಉತ್ತಮ ಗುಣಮಟ್ಟ ಹೊಂದಿರುವ ಬಣ್ಣ ಬಣ್ಣದ ಈ ರೇಷ್ಮೆ ಸೀರೆಗಳು ಪ್ರಥಮ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿವೆ.

    ವೆಂಕಟರವಣ ಕೌಶಲ್ಯದಿಂದ ಪ್ರಥಮ ಸ್ಥಾನ
    ಈ ಸೀರೆಗೆ ಪ್ರಥಮ ಪ್ರಶಸ್ತಿ ಬರಲು ಪ್ರಮುಖ ಕಾರಣ ವೆಂಕಟರವಣ, ವೆಂಕಟರವಣರ ಕರಕುಶಲತೆ, ಕೌಶಲ್ಯ, ಸೀರೆ ನೇಯುವ ವಿಧಾನ, ವಿನ್ಯಾಸ, ವಿಭಿನ್ನತೆ ಸೇರಿದಂತೆ ಉತ್ತಮ ಗುಣಮಟ್ಟದಿಂದ ಕೂಡಿರುವ ಕಾರಣ ಈ ಸೀರೆ ಪ್ರಥಮ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದೆ. ಕಳೆದ 20 ವರ್ಷಗಳಿಂದ ನೇಕಾರಿಕೆ ವೃತ್ತಿಯನ್ನ ಬದುಕಾಗಿಸಿಕೊಂಡಿರುವ ವೆಂಕಟರಮಣರು. ತಮ್ಮ ಅನುಭವ, ಕೌಶಲ್ಯತೆ, ನೈಪುಣ್ಯತೆಯಿಂದ ರಾಜ್ಯದಲ್ಲೇ ವಿಭಿನ್ನವಾದ ಅತ್ಯುತ್ತಮ ಸೀರೆಯನ್ನ ನೇಯ್ದು ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎಂಬೋಜ್ ಬ್ರೋಕಟ್ ಕುಟ್ಟು ಮಾದರಿಯ ರೇಷ್ಮೆ ಸೀರೆ ಇದಾಗಿದ್ದು, ಸುಮಾರು 900 ಗ್ರಾಂ. ತೂಕವಿದೆ.

  • ಸುರಂಗ ಕೊರೆದು 5 ಲಕ್ಷ ರೇಷ್ಮೆ ಸೀರೆ ಎಗರಿಸಿದ ಕಳ್ಳರು!

    ಸುರಂಗ ಕೊರೆದು 5 ಲಕ್ಷ ರೇಷ್ಮೆ ಸೀರೆ ಎಗರಿಸಿದ ಕಳ್ಳರು!

    ಚಿಕ್ಕಬಳ್ಳಾಪುರ: ರೇಷ್ಮೆ ಸೀರೆ ಅಂಗಡಿಗೆ ಸುರಂಗ ಕೊರೆದ ಖದೀಮರು, 5 ಲಕ್ಷ ರೂ. ಮೌಲ್ಯದ ರೇಷ್ಮೆ ಸೀರೆಗಳನ್ನು ಕಳವು ಮಾಡಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

    ನಗರದ ಬಿಬಿ ರಸ್ತೆಯ ಸೌಮ್ಯ ಸಿಲ್ಕ್ ಸ್ಯಾರಿ ಹೌಸ್‍ನಲ್ಲಿ ಈ ಘಟನೆ ನಡೆದಿದೆ. ಈ ಅಂಗಡಿಯ ಹಿಂಭಾಗದಲ್ಲಿ ಖಾಲಿ ಜಾಗವಿದ್ದು, ಅಲ್ಲಿ ಗಿಡಗಂಟೆಗಳು ಬೆಳೆದಿವೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು, ಹಿಂಬದಿಯ ಗೋಡೆಗೆ ಕಿಂಡಿ ಕೊರೆಯಲು ಪ್ರಯತ್ನಿಸಿ ವಿಫಲರಾಗಿದ್ದರು.

    ಈ ಪ್ರಯತ್ನ ನಿಲ್ಲಿಸದೇ ಕಟ್ಟಡದ ಪಾಯಕಲ್ಲುಗಳನ್ನು ಅಗೆದು, ಸುರಂಗ ತೆಗೆದಿದ್ದಾರೆ. ಸುರಂಗದ ಮೂಲಕ ಅಂಗಡಿಯೊಳಗೆ ನುಸುಳಿದ್ದಾರೆ. ಬಳಿಕ ಅಂಗಡಿಯಲ್ಲಿದ್ದ ಎಲ್ಲಾ ಬೀರುಗಳನ್ನು ಜಾಲಾಡಿ, ಸರಿ ಸುಮಾರು 5 ಲಕ್ಷ ಮೌಲ್ಯದ ರೇಷ್ಮೆ ಸೀರೆಗಳನ್ನು ದೋಚಿ ಪರಾರಿಯಾಗಿದ್ದಾರೆ.

    ಎಂದಿನಂತೆ ಮಾಲೀಕ ವೆಂಕಟೇಶ್ ಇಂದು ಅಂಗಡಿಯನ್ನು ತೆರೆದಿದ್ದಾರೆ. ಈ ವೇಳೆ ಹಾಸಿಗೆ ಮೇಲೆ ಮಣ್ಣು ಬಿದ್ದಿರುವುದು ಕಂಡ ವೆಂಕಟೇಶ್ ಅವರು, ಏನಾಗಿದೆ ಅಂತ ನೋಡುವಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕಬಳ್ಳಾಪುರ ನಗರ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಪರಿಶೀಲನೆ ನಡೆಸಿದರು. ಬಳಿಕ ಪ್ರಕರಣ ದಾಖಲಿಸಿಕೊಂಡ ಅವರು, ತನಿಖೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಹೇಳಿದ್ದು 520, ವಿತರಣೆಯಾಗಿದ್ದು 257 – ಉಳಿದ ಸೀರೆ ಎಲ್ಲಿ ಹೋಯ್ತು: ಅಧಿಕಾರಿಗಳಿಗೆ ಮಹಿಳೆಯರಿಂದ ತರಾಟೆ

    ಹೇಳಿದ್ದು 520, ವಿತರಣೆಯಾಗಿದ್ದು 257 – ಉಳಿದ ಸೀರೆ ಎಲ್ಲಿ ಹೋಯ್ತು: ಅಧಿಕಾರಿಗಳಿಗೆ ಮಹಿಳೆಯರಿಂದ ತರಾಟೆ

    ದಾವಣಗೆರೆ: ರೇಷ್ಮೆ ಸೀರೆ ಅಂದರೆ ಯಾವ ಮಹಿಳೆಯರಿಗೆ ಇಷ್ಟವಾಗಲ್ಲ ಹೇಳಿ. ಅದರಲ್ಲೂ 15 ಸಾವಿರ ರೂ. ಮೌಲ್ಯದ ಸೀರೆ ಡಿಸ್ಕೌಂಟ್ ಬೆಲೆಯಲ್ಲಿ ಸಿಗುತ್ತೆ ಅಂದರೆ ನಾರಿಮಣಿಯರು ಸುಮ್ಮನಿರುತ್ತರಾ? ನಾ ಮುಂದು ತಾ ಮುಂದೆ ಅಂತ ಸೀರೆಗಾಗಿ ಮುಗಿ ಬೀಳುತ್ತಾರೆ. ಆದರೆ ಇಂದು ದಾವಣಗೆರೆಯಲ್ಲಿ ಡಿಸ್ಕೌಂಟ್ ಸೀರೆಗೆ ಮುಗಿಬಿದ್ದಿದ್ದ ಮಹಿಳೆಯರಿಗೆ ಸಿಕ್ಕಿದ್ದು ಮಾತ್ರ ನಿರಾಸೆ.

    ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ (ಕೆಎಸ್‍ಐಸಿ) ವತಿಯಿಂದ ವರಮಹಾಲಕ್ಷ್ಮಿ ಹಬ್ಬಕ್ಕೆ ಕಡಿಮೆ ಬೆಲೆಗೆ ಸೀರೆ ವಿತರಣೆ ಮಾಡಲಾಗುತಿತ್ತು. ದಾವಣಗೆರೆ ನಗರದ ರೋಟರಿ ಬಾಲ ಭವನದಲ್ಲಿ ರೇಷ್ಮೆ ಸೀರೆ ವಿತರಣೆ ಸಿದ್ಧತೆ ನಡೆಸಲಾಗಿತ್ತು. ಹೀಗಾಗಿ ನೂರಾರು ಮಂದಿ ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದರು. ಆದರೆ ಸರತಿ ಸಾಲಿನಲ್ಲಿ ನಿಂತರೂ ಸೀರೆ ಸಿಗದ ವೇಳೆ ಮಹಿಳೆಯರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ. ಈ ವೇಳೆ ಪೊಲೀಸರು ಮಹಿಳೆಯರನ್ನು ನಿಯಂತ್ರಿಸಲು ಹರ ಸಾಹಸ ಪಟ್ಟಿದ್ದಾರೆ.

    ನಗರದಲ್ಲಿ 520 ಸೀರೆ ವಿತರಣೆ ಮಾಡುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ ಇದರಲ್ಲಿ ಕೇವಲ 257 ಸೀರೆ ಮಾತ್ರ ನೀಡಲಾಗಿದೆ. ಉಳಿದ ಸೀರೆಗಳು ಏನಾದವು ಎಂದು ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸಅಧಿಕಾರಿಗಳು ಅವುಗಳನ್ನು ಮಾರಾಟ ಮಾಡಿದ್ದಾರೆ ಎಂದು ಮಹಿಳೆಯರು ಆರೋಪ ಮಾಡಿದ್ದಾರೆ.

    ಸೀರೆ ಪಡೆಯಲು ಆಧಾರ್ ಕಾರ್ಡ್ ನೀಡಿ ನೋಂದಣಿ ಮಾಡಿಸಿಕೊಂಡವರಿಗೆ ಸೀರೆ ವಿತರಣೆಗೆ ಸಿದ್ಧತೆ ಮಾಡಲಾಗಿತ್ತು. ಜೊತೆಗೆ ನೋಂದಣಿ ಮಾಡಿದ ಮಹಿಳೆಯರಿಗೆ ಟೋಕನ್ ನೀಡಿ ಸೀರೆ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಸೀರೆ ವಿತರಣೆಯಲ್ಲಿ ಲೋಪ ಮಾಡಲಾಗಿದೆ ಎಂಬ ಮಹಿಳೆಯರ ಆರೋಪ ಸುಳ್ಳು. ಅಧಿಕಾರಿಗಳು ನಮಗೆ ಕೇವಲ 257 ಸೀರೆಗಳನ್ನು ಮಾತ್ರ ವಿತರಣೆ ಮಾಡಲು ಸೂಚನೆ ನೀಡಿದ್ದಾರೆ. ಅದರಂತೆ ನಾವು ನೀಡಿದ್ದೇವೆ ಎಂದು ಕೆಎಸ್‍ಐಸಿ ವ್ಯವಸ್ಥಾಪಕ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲಕ್ಕಿ ಡ್ರಾ ಮೂಲಕ ಸೀರೆ ಆಯ್ಕೆಯೆಂದು ಗೊತ್ತಿರ್ತಿದ್ರೆ ಬರ್ತಾನೆ ಇರಲಿಲ್ಲ- ಸಚಿವರ ವಿರುದ್ಧ ಮಹಿಳೆಯರು ಗರಂ

    ಲಕ್ಕಿ ಡ್ರಾ ಮೂಲಕ ಸೀರೆ ಆಯ್ಕೆಯೆಂದು ಗೊತ್ತಿರ್ತಿದ್ರೆ ಬರ್ತಾನೆ ಇರಲಿಲ್ಲ- ಸಚಿವರ ವಿರುದ್ಧ ಮಹಿಳೆಯರು ಗರಂ

    ಬೆಂಗಳೂರು: ಕಡಿಮೆ ದರದಲ್ಲಿ ಮೈಸೂರು ಸಿಲ್ಕ್ ಸೀರೆ ಸಿಗುತ್ತೆ ಅಂತ ಬಂದಿದ್ದ ಮಹಿಳೆಯೊಬ್ಬರು ಸಚಿವ ಸಾ.ರಾ ಮಹೇಶ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮೊದಲೇ ಲಕ್ಕಿ ಡ್ರಾ ಮೂಲಕ ಸೀರೆ ಆಯ್ಕೆ ಮಾಡುವುದು ಅಂತಾ ಗೊತ್ತಿರುತ್ತಿದ್ದರೆ ಬರುತ್ತಾನೆ ಇರಲಿಲ್ಲ ಅಂತ ಸಚಿವರ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.

    ನಾಲ್ಕೂವರೆ ಸಾವಿರಕ್ಕೆ ಹೆಸರುವಾಸಿಯಾಗಿದ್ದ ಮೈಸೂರು ಸಿಲ್ಕ್ ಸೀರೆ ಕೊಡುತ್ತಾರೆ ಅಂತಾ ಗೌರಿ ಹಬ್ಬದ ತಯಾರಿಯನ್ನೂ ಬಿಟ್ಟು ಬಹುತೇಕ ಮಹಿಳೆಯರು ಎಫ್‍ಕೆಸಿಸಿಐ ಮಳಿಗೆ ಇಂದು ಬಂದಿದ್ದರು. ಹೀಗಾಗಿ ಕೆ.ಜಿ ರೋಡ್‍ನಲ್ಲಿರೋ ಎಫ್‍ಕೆಸಿಸಿಐ ಮುಂದೆ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಸೇರಿದ್ದರು. ಸೀರೆಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಮಹಿಳೆಯರನ್ನು ಸಂಭಾಳಿಸಲು ಎಫ್‍ಕೆಸಿಸಿಐ ಅಧಿಕಾರಿಗಳು ಪೊಲೀಸ್ ಭದ್ರತೆಯನ್ನು ಪಡೆದುಕೊಂಡಿದ್ದಾರೆ.

    ಮಹಿಳೆಯರನ್ನು ಕ್ಯೂನಲ್ಲಿ ನಿಲ್ಲಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ನೂಕುನುಗ್ಗಲಿನ ಕ್ಯೂನಲ್ಲಿ ನಿಂತು ಲಕ್ಕಿ ಡ್ರಾನಲ್ಲಿ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಹಾಕಿದ್ದಾರೆ. ಕೇವಲ ಒಂದೂವರೆ ಸಾವಿರ ಜನ ಮಹಿಳೆಯರಿಗೆ ಮಾತ್ರ ಸಿಗುತ್ತದೆ ಎನ್ನುವ ಮಾಹಿತಿ ಗೊತ್ತಾಗುತ್ತಿದ್ದಂತೆ ಮಹಿಳೆಯರು ಸಚಿವರ ವಿರುದ್ಧ ಗರಂ ಆಗಿದ್ದಾರೆ.

    `ರಿಯಾಯಿತಿ ದರದಲ್ಲಿ ಸೀರೆ ನೀಡುವುದಾಗಿ ಸಚಿವರು ಹೇಳಿದ್ದರು. ಆದರೆ ಈಗ ಲಕ್ಕಿ ಡ್ರಾ ಅಂತಾ ಹೇಳುತ್ತಿದ್ದಾರೆ. ಇಷ್ಟು ಜನರಿದ್ದಾರೆ. ನಮಗೆ ಸೀರೆ ಸಿಗುವುದೇ ಡೌಟ್ ಅಂತಾ ಮಹಿಳೆಯರು ಸಚಿವರ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv