Tag: silk saree

  • ನನ್ನ ಹೆಂಡ್ತಿ ನನಗೆ ಬೈತಾಳೆ, ಸಿಎಂ ಮಾಡಿದ್ದು ಅನ್ಯಾಯ, ಮೈಸೂರು, ರಾಮನಗರಗಳಿಗೆ ಮಾತ್ರ ಸೀರೆ ಯಾಕೆ?

    ನನ್ನ ಹೆಂಡ್ತಿ ನನಗೆ ಬೈತಾಳೆ, ಸಿಎಂ ಮಾಡಿದ್ದು ಅನ್ಯಾಯ, ಮೈಸೂರು, ರಾಮನಗರಗಳಿಗೆ ಮಾತ್ರ ಸೀರೆ ಯಾಕೆ?

    ಚಿಕ್ಕಬಳ್ಳಾಪುರ: “ಸರ್ ಗೌರಿ ಗಣೇಶ ಹಬ್ಬಕ್ಕೆ ಕಡಿಮೆ ರೇಟ್‍ಗೆ ರೇಷ್ಮೆ ಸೀರೆ ಕೊಡ್ತಾರಲ್ಲ. ಚಿಕ್ಕಬಳ್ಳಾಪುರದಲ್ಲಿ ಎಲ್ಲಿ ಕೊಡ್ತಾರೆ ಸರ್? ನನ್ನ ಹೆಂಡತಿ ಬಿಡ್ತಾ ಇಲ್ಲ ಸರ್ ಸೀರೆ ಬೇಕೇ ಬೇಕು ಅಂತ ತಲೆ ತಿಂತಾವಳೆ. ಕಡಿಮೆ ಬೆಲೆಗೆ ರೇಷ್ಮೆ ಸೀರೆ ನಮ್ಮ ಜಿಲ್ಲೆಗೂ ನೀಡಿದ್ದರೇ ಕುಮಾರಸ್ವಾಮಿ ಅವರಿಗೆ ಏನಾಗುತ್ತಿತ್ತು. ಇದು ಅನ್ಯಾಯ ಸರ್. ಮೈಸೂರಿಗೆ ಮಾತ್ರ ನೀಡಿ, ಚಿಕ್ಕಬಳ್ಳಾಪುರಕ್ಕೆ ನೀಡುತ್ತಿಲ್ಲ. ಇದರಿಂದ ಮನೆಯಲ್ಲಿ ರೇಷ್ಮೆ ಸೀರೆಗೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ನನ್ನ ಹೆಂಡತಿ ನನಗೆ ಬೈತಾಳೆ” – ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಪಬ್ಲಿಕ್ ಟಿವಿ ಪ್ರತಿನಿಧಿಗೆ ಬಂದ ಕರೆಯ ಸಂಭಾಷಣೆ.

    ಗೌರಿ ಹಬ್ಬದ ಅಂಗವಾಗಿ ರಾಜ್ಯ ಸರ್ಕಾರ ಕರ್ನಾಟಕ ಸಿಲ್ಕ್ ಇಂಡಸ್ಟ್ರಿಸ್ ಕಾರ್ಪೋರೇಷನ್ ಲಿಮಿಟೆಡ್ (ಕೆಎಸ್‍ಐಸಿ) ಮಹಿಳೆಯರಿಗೆ ಕಡಿಮೆ ರೇಷ್ಮೆ ಸೀರೆ ನೀಡುವ ಆಫರ್ ಪ್ರಕಟಿಸಿದೆ. ಆದರೆ ಚಿಕ್ಕಬಳ್ಳಾಪುರದಲ್ಲಿ ಸೀರೆ ನೀಡದ್ದಕ್ಕೆ ಮಹಿಳೆಯರು ಆಕ್ರೋಶಗೊಂಡಿದ್ದಾರೆ. ಮೈಸೂರು ಸೇರಿದಂತೆ ಕೆಲ ಜಿಲ್ಲೆಗಳ ಬಹುತೇಕ ಮಹಿಳೆಯರು ಬೆಲೆಬಾಳುವ ಸೀರೆಯನ್ನು ಕಡಿಮೆ ಬೆಲೆಗೆ ಲಕ್ಕಿ ಕೂಪನ್ ಮೂಲಕ ಪಡೆಯುತ್ತಿರುವುದು ಬಯಲು ಸೀಮೆ ಜಿಲ್ಲೆಯ ಮಹಿಳೆಯರಿಗೆ ಸಹಿಸಲಾಗುತ್ತಿಲ್ಲ.

    ಏನಿದು ಆಫರ್?
    ಗೌರಿ ಹಬ್ಬದ ಅಂಗವಾಗಿ ರಾಜ್ಯ ಸರ್ಕಾರ ಕರ್ನಾಟಕ ಸಿಲ್ಕ್ ಇಂಡಸ್ಟ್ರಿಸ್ ಕಾರ್ಪೋರೇಷನ್ ಲಿಮಿಟೆಡ್ (ಕೆಎಸ್‍ಐಸಿ) ವತಿಯಿಂದ ರಾಜ್ಯಾದ್ಯಂತ 14 ಸಾವಿರ ರೂ. ಬೆಲೆ ಬಾಳುವ 5 ಸಾವಿರ ಮೈಸೂರು ಸಿಲ್ಕ್ ಸೀರೆಗಳನ್ನು 4,725 ರೂ.ಗಳ ಬಂಪರ್ ರಿಯಾಯಿತಿ ದರದಲ್ಲಿ ನೀಡಿದೆ. ಲಕ್ಕಿ ಡಿಪ್ ಮುಖಾಂತರ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಿದೆ. ಸೀರೆ ಅಗತ್ಯವಿರುವವರಿಂದ ಆಧಾರ್ ಕಾರ್ಡ್ ಪಡೆದು ಅವರ ಹೆಸರಿನ ಚೀಟಿಗಳನ್ನು ಲಕ್ಕಿ ಡಿಪ್ ಮುಖಾಂತರ ಆಯ್ಕೆ ಮಾಡಿದೆ. ಅಂತೆಯೇ ರಾಜ್ಯದ ಐದು ಕೇಂದ್ರಗಳಲ್ಲಿ ಸೀರೆ ಕೊಳ್ಳುವ ಮಹಿಳೆಯರಿಂದ ಆಧಾರ್ ಪಡೆದು ನೋಂದಣಿ ಕಾರ್ಯ ಆರಂಭಿಸಿ, ಸೀರೆ ವಿತರಿಸಲಾಗಿದೆ. ಆದರೆ ಈ ಕೇಂದ್ರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಲ್ಲ.

    ಇಲಾಖಾಧಿಕಾರಿಗಳ ಮಾಹಿತಿ ಪ್ರಕಾರ ಬೆಂಗಳೂರು ಮತ್ತು ಮೈಸೂರು ಕೇಂದ್ರಗಳಲ್ಲಿ 3,000, ಚನ್ನಪಟ್ಟಣದಲ್ಲಿ 1,000, ದಾವಣಗೆರೆಯಲ್ಲಿ 500, ಬೆಳಗಾವಿಯಲ್ಲಿ 500 ಸೀರೆಗಳು ಸೇರಿ ಒಟ್ಟು 5 ಸಾವಿರ ಸೀರೆಗಳನ್ನು 5,000 ಮಂದಿ ಮಹಿಳೆಯರಿಗೆ ವಿತರಿಸಿದೆ. ಸೀರೆ ನಿಗದಿತ ಮೊತ್ತ 14 ಸಾವಿರ ರೂ. ಇದ್ದು, ಸರ್ಕಾರ ಅದನ್ನು 4,725 ರೂ.ಗೆ ರಿಯಾಯಿತಿಯಲ್ಲಿ ವಿತರಿಸಿದೆ. ಈ ಸೌಲಭ್ಯ ಹಲವು ಜಿಲ್ಲೆಗಳಿಗೆ ಸಿಗದಿರುವುದು ಪತಿರಾಯರ ಕಣ್ಣೀರ ಕತೆಗೆ ಕಾರಣವಾಗಿದೆ ಎಂದರೇ ನೀವು ನಂಬಲೇ ಬೇಕು.

    ಇನ್ನೂ 5 ಜಿಲ್ಲೆಗಳಲ್ಲ ಗೌರಿ ಹಬ್ಬದ ಕೊಡುಗೆಯಾಗಿ ಬೆಲೆ ಬಾಳುವ ಸೀರೆಯನ್ನು ಕಡಿಮೆ ಬೆಲೆಗೆ ಪಡೆದುಕೊಂಡಿರುವ ನಾರಿಮಣಿಯರ ಸುದ್ದಿ ಮೀಡಿಯಾಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾದ ಬಳಿಕ ಜಿಲ್ಲೆಯಲ್ಲಿನ ಮಹಿಳೆಯರ ಕಣ್ಣು ಕೆಂಪಾಗಿದೆ. ನನಗೆ 10 ಸಾವಿರದ ರೇಷ್ಮೆ ಸೀರೆಯೇ ಬೇಕು ಎಂದು ತಮ್ಮ ಗಂಡದಿರ ಜೀವ ಹಿಂಡುತ್ತಿದ್ದಾರೆ. ಈ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರುವ ಪತಿರಾಯರು, ಸರ್ಕಾರ ಮೋಸ ಮಾಡುತ್ತಿದೆ. ನಮ್ಮನ್ನು ನಮ್ಮ ಹೆಂಡತಿ ಮೂಲಕ ಗೋಳು ಹೂಯ್ದುಕೊಳ್ಳುತ್ತಿದೆ. ಸರ್ಕಾರ ಸುಮ್ಮನಿರಬೇಕಿತ್ತು. ಎಲ್ಲ ಜಿಲ್ಲೆಗಳಲ್ಲಿಯೂ ಸೀರೆ ನೀಡಬೇಕಿತ್ತು ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಹಬ್ಬ-ಹರಿದಿನಗಳಲ್ಲಿ ಜೇಬು ಖಾಲಿ ಮಾಡಿಕೊಳ್ಳುತ್ತಿದ್ದ ಪುರುಷರು, ಇದೀಗ ತಮ್ಮ ಪತ್ನಿಯರಿಗೆ ಸೀರೆ ಕೊಡಿಸಲು ಸಾಲ ಮಾಡುವಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಿಯಾಯಿತಿ ದರದಲ್ಲಿ ಇಂದು ರೇಷ್ಮೆ ಸೀರೆ ಮಾರಾಟ – ಆಧಾರ್ ಹೊಂದಿರುವ ಮಹಿಳೆಯರು ರಿಜಿಸ್ಟರ್ ಮಾಡಿಸಿ

    ರಿಯಾಯಿತಿ ದರದಲ್ಲಿ ಇಂದು ರೇಷ್ಮೆ ಸೀರೆ ಮಾರಾಟ – ಆಧಾರ್ ಹೊಂದಿರುವ ಮಹಿಳೆಯರು ರಿಜಿಸ್ಟರ್ ಮಾಡಿಸಿ

    -ಆಫರ್ ನಲ್ಲಿ ಪುಟಾಣಿ ಟ್ವಿಸ್ಟ್

    ಮೈಸೂರು: ವರ ಮಹಾಲಕ್ಷ್ಮಿ ಹಬ್ಬಕ್ಕೆ ರಾಜ್ಯ ಸರ್ಕಾರ 4,500 ರೂಪಾಯಿಗೆ ರೇಷ್ಮೆ ಸೀರೆ ಕೊಡುವ ಯೋಜನೆ ಪ್ರಕಟಿಸಿತ್ತು. ಆದರೆ ಹಬ್ಬದ ವೇಳೆ ಕೊಡಲು ಸಾಧ್ಯವಾಗಲಿಲ್ಲ. ಆದರೆ ಈಗ ನೂತನ ಆಫರ್ ಮೂಲಕ ಸೀರೆಗಳನ್ನು ನೀಡಲಾಗುತ್ತಿದೆ.

    ಲಾಟರಿ ಮೂಲಕ ಗ್ರಾಹಕರ ಆಯ್ಕೆ:
    ರಿಯಾಯಿತಿ ದರದಲ್ಲಿ ಇಂದು ರೇಷ್ಮೆ ಸೀರೆ ಮಾರಾಟ ಮಾಡಲಾಗುತ್ತಿದ್ದು, 4,500 ರೂಪಾಯಿಗೆ ರೇಷ್ಮೆ ಸೀರೆ ಮಾರಾಟವಾಗುತ್ತಿದೆ. ಆಧಾರ್ ಹೊಂದಿರುವ ಮಹಿಳೆಯರು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ರಿಜಿಸ್ಟರ್ ಮಾಡಿಸಿಕೊಳ್ಳಬೇಕು. ಮೂರು ಗಂಟೆ ನಂತರ ಲಾಟರಿ ಮೂಲಕ ಗ್ರಾಹಕರನ್ನು ಕರೆದು ಸೀರೆ ವಿತರಣೆಮಾಡಲಾಗುತ್ತದೆ. ರಾಮನಗರ, ಮೈಸೂರು, ಬೆಳಗಾವಿ, ದಾವಣಗೆರೆ, ಬೆಂಗಳೂರಿನಲ್ಲಿ ಸೀರೆ ಮಾರಾಟ ಮಾಡಲಾಗುತ್ತದೆ. ಇದನ್ನೂ ಓದಿ: ಸಚಿವರ ಮಾತುಕೇಳಿ ರೇಷ್ಮೆ ಸೀರೆ ಖರೀದಿಸಲು ಹೋಗಿದ್ದ ಮಹಿಳೆಯರಿಗೆ ಶಾಕ್

    ವರಮಹಾಲಕ್ಷ್ಮೀ ಹಬ್ಬಕ್ಕೆ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ನೀಡಲಾಗುವುದು ಎಂದು ಸಚಿವ ಸಾ.ರಾ.ಮಹೇಶ್ ಹೇಳಿದ್ದರು. ಆದರೆ ಹಬ್ಬಕ್ಕೆ ಸರ್ಕಾರ ಸೀರೆ ಕೊಡಲಿಲ್ಲ. ಸೀರೆ ವಿತರಿಸದಕ್ಕೆ ಹಲವು ಕಾರಣವನ್ನು ಸರ್ಕಾರ ನೀಡಿತ್ತು. ಆದರೆ ಕಡಿಮೆ ಬೆಲೆಯಲ್ಲಿ ಸರ್ಕಾರ ರೇಷ್ಮೆ ಸೀರೆ ಕೊಟ್ಟರೆ ನಿಗಮಕ್ಕೆ ಐದು ಕೋಟಿ ರೂಪಾಯಿ ನಷ್ಟವಾಗುತ್ತದೆ. ಹೀಗಾಗಿ ಸೀರೆ ಕೊಡೋದು ಬೇಡ ಅಂತ ರೇಷ್ಮೆ ನೇಯ್ಗೆ ಕಾರ್ಖಾನೆ ನೌಕರರು ಪಟ್ಟು ಹಿಡಿದಿದ್ದರು.

    ಈಗ ಸರ್ಕಾರ ನಿಗಮಕ್ಕೆ ಆಗುವ ಐದು ಕೋಟಿ ರೂಪಾಯಿಯನ್ನು ಭರಿಸಲು ಮುಂದಾಗಿದ್ದು, ನಿಗಮಕ್ಕೆ ಐದು ಕೋಟಿ ರೂಪಾಯಿ ನೀಡಲು ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದೆ. ಆದ್ದರಿಂದ ಕಡಿಮೆ ದರದಲ್ಲಿ ಸೀರೆ ನೀಡುವುದು ಖಚಿತವಾಗಿದೆ. ಆದರೆ ನೂತನ ಆಫರ್ ಮೂಲಕ ಸೀರೆಗಳನ್ನು ಮಾರಾಟ ಮಾಡಲಾಗುತ್ತದೆ.

    ವಿಶೇಷ ಮಾರಾಟದ ಸ್ಥಳಗಳು
    * ಸ್ಪನ್ ಸಿಲ್ಕ್ ಆವರಣ, ಬಿಎಂ ರಸ್ತೆ, ಮಂಗಳವಾರ ಪೇಟೆ ಚನ್ನಪಟ್ಟಣ, ರಾಮನಗರ.
    * ಜೂ(ಮೃಗಾಲಯ) ಮಾರಾಟ ಮಳಿಗೆ ಮೈಸೂರು ನಗರ.
    * ಕನ್ನಡ ಸಾಹಿತ್ಯ ಭವನ, ಜಿಲ್ಲಾಧಿಕಾರಿಯ ಕಚೇರಿಯ ಎದುರುಗಡೆ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಬೆಳಗಾವಿ.
    * ರೋಟರಿ ಬಾಲ ಭವನ, ಪ್ರವಾಸಿ ಮಂದಿರ ರಸ್ತೆ, ಬಡಾವಣೆ ಪೊಲೀಸ್ ಠಾಣೆ ಪಕ್ಕ, ದಾವಣಗೆರೆ.
    * ಎಫ್‍ಕೆಸಿಸಿಐ ಕಟ್ಟಡದ ಆವರಣ, ಕೆಂಪೇಗೌಡ ರಸ್ತೆ, ಬೆಂಗಳೂರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಿಯಾಯಿತಿ ದರದಲ್ಲಿ `ಸಿಲ್ಕ್’ ಸೀರೆ-ನಾರಿಯರಿಗೆ ನಿರಾಸೆ!

    ರಿಯಾಯಿತಿ ದರದಲ್ಲಿ `ಸಿಲ್ಕ್’ ಸೀರೆ-ನಾರಿಯರಿಗೆ ನಿರಾಸೆ!

    ಬೆಂಗಳೂರು/ಮೈಸೂರು: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಕಡಿಮೆ ದರದಲ್ಲಿ ಮೈಸೂರು ಸಿಲ್ಕ್ ಸೀರೆ ನೀಡುವುದಾಗಿ ಸಚಿವ ಸಾರಾ ಮಹೇಶ್ ಘೋಷಣೆ ಮಾಡಿದ್ದರು. ಆದರೆ ಈ ಬಾರಿ ಪ್ರವಾಹ ಪರಿಸ್ಥಿತಿ ಎದುರಾದ ಕಾರಣ ರಿಯಾಯಿತಿ ದರದಲ್ಲಿ ಸೀರೆ ಮಾರಾಟ ಇಲ್ಲ ಎಂದು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ(ಕೆಎಸ್‍ಐಸಿ) ಬೋರ್ಡ್ ಹಾಕಿದೆ.

    ಹಬ್ಬದ ಪ್ರಯುಕ್ತ ರಿಯಾಯಿತಿ ದರದಲ್ಲಿ ಸೀರೆ ಕೊಳ್ಳಲು ಬಂದ ಮಹಿಳೆಯರು ಬೋರ್ಡ್ ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ. ಇತ್ತ ಮೈಸೂರಿನಲ್ಲಿ ಸಿಲ್ಕ್ ಸೀರೆಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡದಿರಲು ಆಗ್ರಹಿಸಿ ಸಿಲ್ಕ್ ಸೀರೆ ತಯಾರಿಕಾ ಕಂಪೆನಿಯ ನೌಕರರು ಪತ್ರಿಭಟನೆ ನಡೆಸಿದ್ದಾರೆ.

    ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಕಂಪೆನಿಗೆ ಹೆಚ್ಚಿನ ನಷ್ಟ ಉಂಟಾಗುತ್ತದೆ. ಸದ್ಯ ಸರ್ಕಾರ ನೀಡಲು ಉದ್ದೇಶಿಸಿರುವ ಒಂದು ಸೀರೆಯ ದರ 10,500 ರೂ. ಇದ್ದು, ರಿಯಾಯಿತಿ ದರದಲ್ಲಿ 4,500 ರೂ. ಮಾರಾಟ ಮಾಡಲು ಉದ್ದೇಶಿಸಲಾಗಿದೆ. ಈ ಕ್ರಮ ಕಂಪೆನಿಗೆ ಹೆಚ್ಚಿನ ನಷ್ಟ ಉಂಟು ಮಾಡುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

    ಇದೇ ವೇಳೆ ಸರ್ಕಾರ ಒಂದೊಮ್ಮೆ ಸಿಲ್ಕ್ ಸೀರೆ ಮಾರಾಟ ಮಾಡಲು ತೀರ್ಮಾನಿಸಿದ್ದರೆ, ಮೊದಲು ರಿಯಾಯಿತಿ ದರದ ಮೊತ್ತವನ್ನು ಕಂಪೆನಿಗೆ ನೀಡಿ ಬಳಿಕ ಮಾರಾಟ ಮಾಡಿ. 10,500 ರೂ. ಬೆಲೆಯ ಸೀರೆಯನ್ನು ಮಾರಾಟ ಮಾಡಲು ನಾವು ಬಿಡುವುದಿಲ್ಲ. ಪ್ರತಿ ವರ್ಷ ಹಬ್ಬಗಳು ಬರುತ್ತದೆ. ಸರ್ಕಾರದ ಯೋಜನೆಯಿಂದ 5 ಸಾವಿರ ಸೀರೆ ನೀಡಲು ಉದ್ದೇಶಿಸಿದೆ. ಇದರಿಂದ ಸುಮಾರು 4 ಕೋಟಿ ರೂ. ನಷ್ಟವಾಗುತ್ತದೆ. ಇದು ಸರ್ಕಾರಿ ಸಂಸ್ಥೆಯಾಗಿರುವುದಿರಿಂದ ಈಗಾಗಲೇ 10% ರಿಯಾಯಿತಿ ನೀಡುತ್ತಿದೆ. ಅದ್ದರಿಂದ ಈ ಕ್ರಮವನ್ನು ಮರುಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಸಚಿವರ ಮಾತುಕೇಳಿ ರೇಷ್ಮೆ ಸೀರೆ ಖರೀದಿಸಲು ಹೋಗಿದ್ದ ಮಹಿಳೆಯರಿಗೆ ಶಾಕ್

    ಸಚಿವರ ಮಾತುಕೇಳಿ ರೇಷ್ಮೆ ಸೀರೆ ಖರೀದಿಸಲು ಹೋಗಿದ್ದ ಮಹಿಳೆಯರಿಗೆ ಶಾಕ್

    ಬೆಂಗಳೂರು: ಈ ಬಾರಿ ವರಮಹಾಲಕ್ಷ್ಮೀ ಹಬ್ಬಕ್ಕೆ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ನೀಡಲಾಗುವುದು ಎಂದು ಸಚಿವ ಸಾ.ರಾ.ಮಹೇಶ್ ಹೇಳಿದ್ದರು. ಸಚಿವರ ಮಾತು ಕೇಳಿದ ಮಹಿಳೆಯರು ನಾವು ಒಂದೆರೆಡು ಬೆಲೆಬಾಳುವ ರೇಷ್ಮೆ ಖರೀದಿ ಮಾಡೋಣ ಅಂತಾ ಹೋಗಿದ್ದವರು ಶಾಕ್ ಆಗಿದ್ದಾರೆ.

    ಸಚಿವರು ಮಾರಾಟಕ್ಕಿಟ್ಟಿರುವ ಸೀರೆಯ ಗುಣಮಟ್ಟ ಪಬ್ಲಿಕ್ ಟಿವಿಯ ರಿಯಾಲಿಟಿ ಚೆಕ್ ನಲ್ಲಿ ಬಯಲಾಗಿದೆ. ಸಾಮಾನ್ಯವಾಗಿ ಮೈಸೂರು ಸಿಲ್ಕ್ ಸೀರೆಗಳ ಬೆಲೆ 10 ಸಾವಿರ ರೂ.ಗಳಿಂದ ಆರಂಭವಾಗಿ 3 ಲಕ್ಷದವರೆಗೂ ಇರುತ್ತವೆ. ಆದ್ರೆ ಸಚಿವರು ಇದೇ ರೀತಿಯ ಸೀರೆಗಳನ್ನು ಸರ್ಕಾರ ರಿಯಾಯ್ತಿ ದರದಲ್ಲಿ ನೀಡುತ್ತೇವೆ ಎಂದು ಹೇಳಿಕೆ ನೀಡಿದ್ದರು. ಇತ್ತ ಹಬ್ಬಕ್ಕೆ ಹೊಸ ರೇಷ್ಮೆ ಧರಿಸೋಣ ಅಂತಾ ಖರೀದಿಗೆ ಹೋದ ಮಹಿಳೆಯರಿಗೆ ಸಿಕ್ಕಿದ್ದು ಪ್ರಿಂಟೆಡ್ ಸೀರೆಗಳು. ಹಬ್ಬದ ದಿನವಿರಲಿ ಇವುಗಳನ್ನು ಪ್ರತಿನಿತ್ಯ ಉಡಲು ಈ ಸೀರೆಗಳು ಯೋಗ್ಯವಲ್ಲ ಅಂತಾ ಮಹಿಳೆಯರು ಕಿಡಿಕಾರಿದ್ದಾರೆ.

    ಹಾಗಾದ್ರೆ ರೇಷ್ಮೆ ಸೀರೆಗಳು ಹೇಗಿರುತ್ತವೆ?
    * ಸೀರೆಯಲ್ಲಿ ಜರಿ ಅಂಚು ಇರಲಿದೆ.
    * ಅಸಲಿ ರೇಷ್ಮೆ ಸೀರೆ 10 ಸಾವಿರದಿಂದ 3 ಲಕ್ಷವರೆಗೆ ಇರುತ್ತದೆ.
    * ಇದು ಫಂಕ್ಷನ್‍ಗಳಿಗೆ, ಮದುವೆಗಳಿಗೆ ಉಡುವ ಸೀರೆಗಳಾಗಿರುತ್ತದೆ.
    * ಈ ಸೀರೆಗಳಿಗೆ ಶುದ್ಧ ರೇಷ್ಮೆ ಬಳಕೆ ಮಾಡಲಾಗಿರುತ್ತದೆ.
    * ಚಿನ್ನ ಅಥವಾ ಬೆಳ್ಳಿಯನ್ನೂ ಬಳಕೆ ಮಾಡಿರಲಾಗಿರುತ್ತದೆ.
    * ಶುದ್ಧ ರೇಷ್ಮೆಗೆ ಟ್ರೇಡ್ ಮಾರ್ಕ್ ಕೂಡ ಇರುತ್ತದೆ.

    ಸರ್ಕಾರ ನೀಡಿರುವ ರಿಯಾಯಿತಿ ಸೀರೆ ಹೇಗಿದೆ?
    * ವರ ಮಹಾಲಕ್ಷ್ಮಿ ಗಿಫ್ಟ್ ಸೀರೆ ಕಳಪೆಯಿಂದ ಕೂಡಿದೆ.
    * ಇದು ಬರೀ ಪ್ರಿಂಟೆಡ್ ಸೀರೆಯಾಗಿದೆ.
    * ಈ ಸೀರೆಯಲ್ಲಿ ಯಾವುದೇ ಜರಿಗಳಿಲ್ಲ.
    * ಇದು ಶುಭ ಸಮಾರಂಭಗಳಿಗೆ ಉಡುವ ಸೀರೆಯಲ್ಲ.
    * ಮನೆಯಲ್ಲಿ ಮಾತ್ರ ಬಳಕೆಗೆ ಯೋಗ್ಯ ಸೀರೆ.
    * ಈ ಸೀರೆಯ ಅಸಲಿ ಬೆಲೆ 5,700 ರೂಪಾಯಿ.
    * ಈಗ ರಿಯಾಯ್ತಿ ದರದಲ್ಲಿ 4,500 ರೂ.ಗೆ ಮಾರಾಟ.

  • ವರಮಹಾಲಕ್ಷ್ಮಿ ಹಬ್ಬಕ್ಕೆ ಕಡಿಮೆ ಬೆಲೆಯಲ್ಲಿ ರೇಷ್ಮೆ ಸೀರೆ!

    ವರಮಹಾಲಕ್ಷ್ಮಿ ಹಬ್ಬಕ್ಕೆ ಕಡಿಮೆ ಬೆಲೆಯಲ್ಲಿ ರೇಷ್ಮೆ ಸೀರೆ!

    ರಾಮನಗರ: ವರಮಹಾಲಕ್ಷ್ಮಿ ಹಬ್ಬಕ್ಕೆ ರಿಯಾಯಿತಿ ದರದಲ್ಲಿ ಮೈಸೂರು ಸಿಲ್ಕ್ ಸೀರೆಗಳನ್ನು ಮಾರಾಟ ಮಾಡುವುದಕ್ಕೆ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ ಮಹೇಶ್ ರವರು ತಿಳಿಸಿದ್ದಾರೆ.

    ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿನ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೋರೇಶನ್ (ಕೆಎಸ್‍ಐಸಿ)ನ ಮೈಸೂರು ಸಿಲ್ಕ್ ಮಾರಾಟ ಮಳಿಗೆಯಲ್ಲೂ ಕೂಡಾ ಮಾರಾಟ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಈಗಾಗಲೇ ಒಂದು ಸೀರೆಯನ್ನ ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗಿದೆ. ಇನ್ನು ರೇಷ್ಮೆ ಸೀರೆಗಳ ಪ್ರಾರಂಭಿಕ ಬೆಲೆಯೇ 14 ಸಾವಿರ ರೂಪಾಯಿಗಳಿದ್ದು, ಕೇವಲ 4,500 ರೂಪಾಯಿಗೆ ಮಾರಾಟ ಮಾಡುತ್ತಿದೆ.

    ಕಡಿಮೆ ಬೆಲೆಗೆ ನೀಡುತ್ತಿರುವ ರೇಷ್ಮೆ ಸೀರೆ ಮಾತ್ರ ಸಾಕಷ್ಟು ಕಳಪೆಗುಣಮಟ್ಟದ್ದಾಗಿದೆ ಅಂತ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ. ಕೆಎಸ್‍ಐಸಿಯನ್ನ ಉಳಿಸುವ ನಿಟ್ಟಿನಲ್ಲಿ ಇದೀಗ ಕಾಣಿಸುತ್ತಿರುವ ಲೋಪದೋಷಗಳನ್ನ ಸರಿಪಡಿಸಿಕೊಂಡು ಸೀರೆಗಳ ಗುಣಮಟ್ಟ ಕಾಪಾಡಿಕೊಂಡು ಮಾರಾಟ ಮಾಡುವಂತೆ ಗ್ರಾಹಕರು ಮನವಿ ಮಾಡುತ್ತಿದ್ದಾರೆ.

  • ಹುಬ್ಬಳ್ಳಿಯಲ್ಲಿ ಎಸಿಬಿ ದಾಳಿ: ಮನೆಯಲ್ಲಿ ಬರೋಬ್ಬರಿ 6 ಸಾವಿರ ಸೀರೆ ಪತ್ತೆ

    ಹುಬ್ಬಳ್ಳಿಯಲ್ಲಿ ಎಸಿಬಿ ದಾಳಿ: ಮನೆಯಲ್ಲಿ ಬರೋಬ್ಬರಿ 6 ಸಾವಿರ ಸೀರೆ ಪತ್ತೆ

    ಹುಬ್ಬಳ್ಳಿ: ನಗರದಲ್ಲಿ ನಡೆದ ಎಸಿಬಿ ದಾಳಿ ವೇಳೆಯಲ್ಲಿ ಒಂದು ಕೋಟಿಗೂ ಅಧಿಕ ಬೆಲೆಬಾಳುವ 5 ಸಾವಿರಕ್ಕೂ ಅಧಿಕ ಸೀರೆಗಳು ಪತ್ತೆಯಾಗಿವೆ.

    ಇಂದು ಬೆಳಗ್ಗೆ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಕರಿಯಪ್ಪ ಕರ್ನಲ್ ಅವರ ಮನೆ ಮೇಲೆ ಎಸಿಬಿ ದಾಳಿ ನಡೆಸಿತ್ತು. ದಾಳಿಯಲ್ಲಿ ಅಪಾರ ಪ್ರಮಾಣದ ಅಸ್ತಿ ಪಾಸ್ತಿ ಜೊತೆ ಸಾವಿರಾರು ರೇಷ್ಮೇ ಸೀರೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

    ಸುಮಾರು ಎರಡು ಕೊಠಡಿಗಳಲ್ಲಿ ಸಂಗ್ರಹಿಸಿಟ್ಟಿದ್ದ ಸೀರೆಗಳನ್ನು 10 ಜನ ಅಧಿಕಾರಿಗಳು ಎಣಿಸುತ್ತಿದ್ದಾರೆ. ಕರಿಯಪ್ಪ ಅವರ ಮನೆಯಲ್ಲಿ ದೊರೆತಿರುವ ಒಂದೊಂದು ಸೀರೆಯ ಬೆಲೆ ಅಂದಾಜು 10 ರಿಂದ 15 ಸಾವಿರ ರೂಪಾಯಿ ಎಂದು ಹೇಳಲಾಗುತ್ತಿದೆ.

    ಎಸಿಬಿ ದಾಳಿ ವೇಳೆಯಲ್ಲಿ ಕರಿಯಪ್ಪ ಅವರು ಹುಬ್ಬಳ್ಳಿ ನಗರದಲ್ಲಿ ಎರಡು ಬಂಗಲೆ, ಬೆಂಗಳೂರಿನ ನೆಲಮಂಗಲದ ಬಳಿ ಒಂದು ಪ್ಲಾಟ್ ಮತ್ತು ಬೆಂಗಳೂರಿನಲ್ಲಿ ಎರಡು ಮನೆಗಳನ್ನು ಹೊಂದಿದ್ದಾರೆ. ಅಪಾರ ಪ್ರಮಾಣದ ಕೃಷಿ ಭೂಮಿ, ವಿವಿಧೆಡೆ ನಿವೇಶನಗಳನ್ನು ಹೊಂದಿದ್ದು ಪತ್ತೆಯಾಗಿದೆ. ಕರಿಯಪ್ಪ ಎರಡು ಬ್ಯಾಂಕ್ ಲಾಕರ್‍ಗಳಲ್ಲಿ 40 ಗ್ರಾಂ. ಚಿನ್ನಾಭರಣ ದೊರಕಿದೆ. ಇನ್ನು ಕರಿಯಪ್ಪರ ಇಬ್ಬರು ಮಕ್ಕಳು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮನೆಯಲ್ಲಿ 7.50 ಲಕ್ಷ ನಗದು ಹಾಗೂ ಕಚೇರಿಯಲ್ಲಿ 1.30 ಲಕ್ಷ ನಗದು ಹಣ ದೊರೆತಿದೆ.