Tag: Silk Farming

  • ಬಂಪರ್ ಬೆಲೆ ಟೈಮ್‌ನಲ್ಲೇ ರೇಷ್ಮೆ ಸೊಪ್ಪಿಗೆ ವಕ್ಕರಿಸಿದ ನುಸಿರೋಗ- ಬೆಳೆಗಾರರಿಗೆ ಸಂಕಷ್ಟ

    ಬಂಪರ್ ಬೆಲೆ ಟೈಮ್‌ನಲ್ಲೇ ರೇಷ್ಮೆ ಸೊಪ್ಪಿಗೆ ವಕ್ಕರಿಸಿದ ನುಸಿರೋಗ- ಬೆಳೆಗಾರರಿಗೆ ಸಂಕಷ್ಟ

    ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕು ರೇಷ್ಮೆ ನಗರಿ ಎಂಬ ಪ್ರಖ್ಯಾತಿ ಪಡೆದಿದ್ದು, ಜಿಲ್ಲೆಯ ಜನರ ಮುಖ್ಯ ಕಸುಬು ರೇಷ್ಮೆ ಸಾಕಾಣಿಕೆಯಾಗಿದೆ. ಆದರೆ ಇತ್ತೀಚೆಗೆ ರೇಷ್ಮೆ ಸೊಪ್ಪಿಗೆ ವಕ್ಕರಿಸಿರುವ ನುಸಿರೋಗ ರೇಷ್ಮೆ ಸಾಕಾಣಿಕೆದಾರರನ್ನು ಸಂಕಷ್ಟಕ್ಕೀಡು ಮಾಡಿದೆ.

    ಹೌದು, ಈ ಬಾರಿ ಸುರಿದ ಬಾರಿ ಮಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತರು ತತ್ತರಿಸಿ ಹೋಗಿದ್ದಾರೆ. ಈ ನಡುವೆ ರೇಷ್ಮೆ ಸಾಕಾಣಿಕೆಯಿಂದ ಬರುತಿದ್ದ ಅಲ್ಪ ಸ್ವಲ್ಪ ಆದಾಯದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕೊಯ್ಲಿಗೆ ಬಂದಿದ್ದ ರೇಷ್ಮೆ ಸೊಪ್ಪಿನಲ್ಲಿ ನುಸಿರೋಗ ಕಾಣಿಸಿಕೊಂಡಿದೆ. ಈ ಸೊಪ್ಪನ್ನು ತಿಂದ ರೇಷ್ಮೆ ಹುಳುಗಳು ಸಹ ವಾಂತಿ ಮಾಡಿಕೊಂಡು ಸಾಯುತ್ತಿವೆ. ರೇಷ್ಮೆ ಸೊಪ್ಪಿಗೆ ನುಸಿರೋಗ ಭಾದೆಯಿಂದ ರೇಷ್ಮೆ ಬೆಳೆಯಲು ಆಗದೆ ಕೈಚೆಲ್ಲಿ ಕೂತಿದ್ದೇವೆ ಎಂದು ಯಲವಳ್ಳಿ ಗ್ರಾಮದ ರೈತ ಮಂಜುನಾಥ್ ತಿಳಿಸಿದ್ದಾರೆ. ಇದನ್ನೂ ಓದಿ: ಎಲ್ಲರಿಗೂ ಮಾನಸಿಕ ಆರೋಗ್ಯದ ತಪಾಸಣೆ ಅಗತ್ಯ: ಸುಧಾಕರ್

    ರೇಷ್ಮೆ ಸೊಪ್ಪಿಗೆ ಈ ರೀತಿಯ ರೋಗ ಹರಡಿರುವುದರಿಂದ ಜಿಲ್ಲೆಯಲ್ಲಿ ಎಲ್ಲಿಯೂ ಸೊಪ್ಪು ಸಿಗುತ್ತಿಲ್ಲ. ಅಲ್ಪ ಸ್ವಲ್ಪ ಇರುವ ಸೊಪ್ಪನ್ನು ಕೊಂಡುಕೊಳ್ಳೋಣ ಅಂತ ಹೋದರೆ ಬೆಲೆ ಜಾಸ್ತಿ. ರೇಷ್ಮೆ ಇಲಾಖೆ ಅಧಿಕಾರಿಗಳ ಬಳಿ ಪರಿಹಾರ ಕೇಳಿದರೆ, ಯಾವುದಾದರು ಒಂದು ಔಷಧ ಸಿಂಪಡಿಸಿ ಎನ್ನುತ್ತಾರೆ. ಔಷಧ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಇತ್ತ ಸೊಪ್ಪು ಸಿಗದೆ ರೇಷ್ಮೆ ಹುಳು ಸಾಕಾಣಿಕೆ ಮಾಡಲು ಆಗದೆ ರೈತರು ಇಕ್ಕಟ್ಟಿಗೆ ಸಿಲುಕಿದ್ದಾರೆ.

    ಈಗ ರೇಷ್ಮೆ ಗೂಡಿಗೆ ಬಂಪರ್ ಬೆಲೆ ಇದೆ. ಈಗಲಾದರೂ ಚೆನ್ನಾಗಿ ರೇಷ್ಮೆ ಗೂಡು ಬೆಳೆಯೋಣ ಎಂದರೆ ನುಸಿರೋಗ ಕಾಟ. ರೇಷ್ಮೆ ಸಾಕಾಣಿಕೆ ಮಾಡೋದೆ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದೇವೆ ಎನ್ನುತ್ತಾರೆ ರೈತ ಈರಣ್ಣ ಹಾಗೂ ನಾಗರಾಜ್. ಇದನ್ನೂ ಓದಿ: ಪಾಕಿಸ್ತಾನ‌, ಬಾಂಗ್ಲಾದೇಶದ ಉಸ್ತುವಾರಿ ನೀಡಲು ಆಗುವುದಿಲ್ಲ: ಸಚಿವ ಉಮೇಶ್‌ ಕತ್ತಿ

  • ರೇಷ್ಮೆ ಬೆಳೆಗಾರರಿಗೆ ವಿಶಿಷ್ಟ ಗುರುತಿನ ಚೀಟಿ: ನಾರಾಯಣಗೌಡ

    ರೇಷ್ಮೆ ಬೆಳೆಗಾರರಿಗೆ ವಿಶಿಷ್ಟ ಗುರುತಿನ ಚೀಟಿ: ನಾರಾಯಣಗೌಡ

    – ವಿಮಾನ ನಿಲ್ದಾಣಗಳಲ್ಲೂ ರೇಷ್ಮೆ ಉತ್ಪನ್ನ ಮಾರಾಟ ಮಳಿಗೆ
    – ರೈತರನ್ನು ಅಧಿಕಾರಿಗಳು ಪ್ರೀತಿಯಿಂದ ನಡೆಸಿಕೊಳ್ಳಬೇಕು

    ಶಿವಮೊಗ್ಗ: ರೇಷ್ಮೆಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗುವಾಗ ಯಾವುದೇ ರೀತಿಯ ಸಮಸ್ಯೆ ಆಗಬಾರದು. ಮಾರುಕಟ್ಟೆಗೆ ತೆರಳುವ ರೈತರು ಪೊಲೀಸರು ಮತ್ತು ದಲ್ಲಾಳಿಗಳಿಂದ ಬೇಸತ್ತಿದ್ದು, ಅವರಿಗೆ ತೊಂದರೆ ಆಗದಂತೆ ವಿಶೇಷ ಗುರುತಿನ ಚೀಟಿ ನೀಡುವುದಾಗಿ ರೇಷ್ಮೆ ಸಚಿವ ಡಾ.ನಾರಾಯಣಗೌಡ ಹೇಳಿದರು.

    ಶಿವಮೊಗ್ಗದ ಕಾಚಿನಕಟ್ಟೆಯಲ್ಲಿ ರೇಷ್ಮೆ ಬೆಳೆಗಾರರ ಜೊತೆ ಸಚಿವರು ಸಂವಾದ ನಡೆಸಿದರು. ರೇಷ್ಮೆ ಗಿಡಗಳಿಗೆ ತ್ರಿಪ್ಸ್ ಆ್ಯಂಡ್ ಮೈಟ್ಸ್ ಎನ್ನುವ ಎಲೆ ತಿನ್ನುವ ಕೀಟದ ಸಮಸ್ಯೆ ಕಾಣಿಸಿಕೊಂಡಿದೆ. ಇದನ್ನು ಹೇಗೆ ತಡೆಗಟ್ಟುವುದು ಮತ್ತು ಹೆಚ್ಚಿನ ಇಳುವರಿ ಕುರಿತು ಮಾಹಿತಿ ನೀಡಲು ವಿಜ್ಞಾನಿಗಳನ್ನು ಕರೆಸಿ ರೈತರಿಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಸಚಿವರು ರೇಷ್ಮೆ ಹೊಲಕ್ಕೆ ರೈತರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ ಉಚಿತವಾಗಿ ನುವಾನ್ ಮತ್ತು ರೋಗಾರ್ ಎನ್ನುವ ಔಷಧವನ್ನು ಸಿಂಪಡಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಈ ವೇಳೆ ಅತ್ಯುತ್ತಮ ರೇಷ್ಮೆ ಬೆಳೆಗಾರರಿಗೆ ಪ್ರಶಸ್ತಿ ನೀಡುವುದಾಗಿ ತಿಳಿಸಿದರು. ಇದನ್ನೂ ಓದಿ:  ಭಾರತ್ ಬಂದ್ ಮಾಡಿದ್ದು ರೈತರಲ್ಲ, ಮಧ್ಯವರ್ತಿಗಳು: ನಾರಾಯಣಗೌಡ

    ರೈತರೊಂದಿಗೆ ಹೊಲದಲ್ಲಿ ನಿಂತುಕೊಂಡೇ ಸಂವಾದ ನಡೆಸಿದ ಸಚಿವರು: ರೈತರು ಶ್ರಮ ಜೀವಿಗಳು. ಅವರೊಂದಿಗೆ ಅಧಿಕಾರಿಗಳು ಗೌರವದಿಂದ ನಡೆದುಕೊಳ್ಳಬೇಕು. ರೈತರನ್ನು ಅಧಿಕಾರಿಗಳು ಪ್ರೀತಿಯಿಂದ ನಡೆಸಿಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ರೇಷ್ಮೆಗೆ ಉತ್ತಮ ದರ ಸಿಗುತ್ತಿದೆ. ವಿಮಾನ ನಿಲ್ದಾಣಗಳಲ್ಲೂ ರೇಷ್ಮೆ ಉತ್ಪನ್ನ ಮಾರಾಟ ಮಳಿಗೆ ಮಾಡುತ್ತೇವೆ. ರೈತರಿಗೆ ನಷ್ಟವಾಗದಂತೆ ತಡೆಯಲು ಹೈಟೆಕ್ ಮಾರುಕಟ್ಟೆ ಕೂಡ ಮಾಡುತ್ತಿದ್ದೇವೆ. ರೈತರಿಗೆ ಅಗತ್ಯವಿರುವ ಎಲ್ಲ ಸೌಲಭ್ಯ ನೀಡುತ್ತೇವೆ ಎಂದರು. ಇದನ್ನೂ ಓದಿ:   ಭಾರತ್ ಬಂದ್ ನಡುವೆ ಕಾರ್ಖಾನೆಗೆ ಬೀಗ ಹಾಕಲು ರೈತರ ಯತ್ನ

    ಸುಮಾರು ಮುಕ್ಕಾಲುಗಂಟೆಗಳ ಕಾಲ ರೈತರೊಂದಿಗೆ ನಿಂತುಕೊಂಡೇ ಸಚಿವರು ಸಂವಾದ ನಡೆಸಿದರು. ರೇಷ್ಮೆ ಬೆಳೆಗಾರರ ಸಮಸ್ಯೆ ಬಗ್ಗೆ ಅರಿವಿದೆ. ಈಗ ದರ ಏರಿಕೆ ಆಗಿದೆ. ರೇಷ್ಮೆ ಬೆಳೆಗಾರರೊಂದಿಗೆ ನಾನು ಸದಾ ಇರುತ್ತೇನೆ. ಯಾವುದೇ ಸಂದರ್ಭಲ್ಲೂ ರೈತರ ಜೊತೆ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.

    ರೈತರೊಂದಿಗೆ ಊಟ ಮಾಡಿದ ಸಚಿವರು: ರೇಷ್ಮೆ ಬೆಳೆಗಾರರೊಂದಿಗೆ ಸಂವಾದ ನಡೆಸಿದ ಸಚಿವರು, ಬಳಿಕ ರೈತರ ಮನೆಗೆ ತೆರಳಿ ಅವರೊಂದಿಗೆ ಊಟ ಸವಿದರು. ಸಚಿವರು ತಮ್ಮ ಊರಿಗೆ ಬಂದು ತಮ್ಮೊಂದಿಗೇ ಕುಳಿತು ಊಟ ಮಾಡಿದ್ದಕ್ಕಾಗಿ ರೈತರು ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ:  ಬಸ್- ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸಾವು

    ಶಿವಮೊಗ್ಗದ ಕಾಚಿನಕಟ್ಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮಪಂಚಾಯತ್ ಅಧ್ಯಕ್ಷೆ ಶ್ವೇತ, ಹಿರಿಯ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.