Tag: Significance

  • Navratri 2025 Day 7: ದುಷ್ಟಶಕ್ತಿಗಳಿಂದ ಭಕ್ತರನ್ನು ಕಾಪಾಡುವ ಕಾಳರಾತ್ರಿ

    Navratri 2025 Day 7: ದುಷ್ಟಶಕ್ತಿಗಳಿಂದ ಭಕ್ತರನ್ನು ಕಾಪಾಡುವ ಕಾಳರಾತ್ರಿ

    ನವರಾತ್ರಿಯ 7ನೇ ದಿನ  ಚಾಮುಂಡೇಶ್ವರಿಯು ಕಾಳರಾತ್ರಿ ದೇವಿಯ ಅವತಾರ ತಾಳುತ್ತಾಳೆಂಬ ನಂಬಿಕೆಯಿದೆ. ಹೀಗಾಗಿ ಏಳನೇ ದಿನ ದುರ್ಗಾದೇವಿಯ ಕಾಳರಾತ್ರಿ ಅವತಾರವನ್ನು ಪೂಜಿಸುತ್ತಾರೆ. ದುರ್ಗಾ ದೇವಿಯ ಈ ಕಾಳರಾತ್ರಿ ರೂಪವು ಮನುಷ್ಯನ ಜೀವನದಿಂದ ಕತ್ತಲೆ ಮತ್ತು ಭಯವನ್ನು ದೂರ ಮಾಡುತ್ತಾಳೆ. ಅಜ್ಞಾನವನ್ನು ನಾಶ ಮಾಡುವ, ಕೆಟ್ಟದರ ವಿರುದ್ಧ ವಿಜಯವನ್ನು ಸಂಕೇತಿಸುತ್ತಾಳೆ. ಅವಳು ತನ್ನ ಭಕ್ತರನ್ನು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸುತ್ತಾಳೆ ಮತ್ತು ಜೀವನದ ಸವಾಲುಗಳನ್ನು ಎದುರಿಸಲು ಅವರಿಗೆ ಧೈರ್ಯ ಮತ್ತು ಶಕ್ತಿಯನ್ನು ನೀಡುತ್ತಾಳೆ.

    ಭಯಾನಕ ರೂಪ:
    ತಾಯಿ ಕಾಳರಾತ್ರಿಯು ಕಾಳಿ ದೇವಿಯ ರೂಪವಾಗಿದ್ದಾಳೆ. ಈಕೆ 3 ಕಣ್ಣುಗಳನ್ನು ಹೊಂದಿದ್ದು, ಕತ್ತೆಯ ಮೇಲೆ ಕುಳಿತು ಸವಾರಿಯನ್ನು ಮಾಡುತ್ತಾಳೆ. ಕಾಳರಾತ್ರಿಯು ನಾಲ್ಕು ಕೈಗಳನ್ನು ಹೊಂದಿದ್ದು, ಬಲಗೈಯಲ್ಲಿ ವರ್ಮುದ್ರ ಮತ್ತು ಅಭಯಮುದ್ರ ಭಂಗಿಗಳಲ್ಲಿ, ಆಕೆ ಭಕ್ತರಿಗೆ ಆಶೀರ್ವಾದ ಮತ್ತು ರಕ್ಷಣೆಯನ್ನು ನೀಡುತ್ತಾಳೆ. ಎಡಗೈಯಲ್ಲಿ ಕಬ್ಬಿಣದ ಖಡ್ಗ ಮತ್ತು ಕತ್ತಿ ಹಿಡಿದಿದ್ದಾಳೆ. ಆದರೆ ಈ ಕಾಳರಾತ್ರಿ ಅವತಾರವನ್ನು ಆರಾಧಿಸಿದರೆ ಸಮೃದ್ಧಿ, ಅಭಿವೃದ್ಧಿ ದೊರೆಯುತ್ತದೆ.

    ಕಪ್ಪು ಬಣ್ಣ ಮತ್ತು ನಿರ್ಭೀತ ನಡವಳಿಕೆಯೊಂದಿಗೆ ಕಾಳರಾತ್ರಿ ದೇವಿಯು ಭಯ ಮತ್ತು ನಕಾರಾತ್ಮಕತೆಯನ್ನು ತೊಡೆದುಹಾಕುವ ಶಕ್ತಿಯನ್ನು ಪ್ರತಿನಿಧಿಸುತ್ತಾಳೆ. ಅವಳನ್ನು ಪೂಜಿಸುವುದರಿಂದ ಭಕ್ತರನ್ನು ಹಾನಿಯಿಂದ ರಕ್ಷಿಸಿ, ಅಡೆತಡೆಗಳನ್ನು ತೆಗೆದುಹಾಕಿ  ಅವರಿಗೆ ಶಕ್ತಿ ಮತ್ತು ಧೈರ್ಯವನ್ನು ನೀಡುತ್ತಾಳೆ ಎನ್ನುವ ನಂಬಿಕೆಯಿದೆ.

    ಪುರಾಣದ ಕಥೆ:
    ದಂತಕಥೆಯ ಪ್ರಕಾರ, ರಾಕ್ಷಸರಾದ ಶುಂಭ-ನಿಶುಂಭ ಮತ್ತು ರಕ್ತಬೀಜಾಸುರ ಮೂರು ಲೋಕಗಳಲ್ಲಿ ತಮ್ಮ ಭಯವನ್ನು ಸೃಷ್ಟಿಸಲು ಮುಂದಾದರು. ಇದರಿಂದ ಆತಂಕಗೊಂಡ ದೇವತೆಗಳೆಲ್ಲ ಶಿವನ ಮೊರೆ ಹೋದರು. ರಾಕ್ಷಸರನ್ನು ಸಂಹರಿಸಿ ತನ್ನ ಭಕ್ತರನ್ನು ರಕ್ಷಿಸುವಂತೆ ಶಿವನು ಪಾರ್ವತಿಯನ್ನು ಕೇಳಿದನು. ಶಿವನ ಸಲಹೆಯಂತೆ ಪಾರ್ವತಿಯು ದುರ್ಗೆಯ ರೂಪವನ್ನು ತೆಗೆದುಕೊಂಡು ಶುಂಭ-ನಿಶುಂಭರನ್ನು ಕೊಂದಳು. ಆದರೆ ದುರ್ಗಾ ದೇವಿಯು ರಕ್ತಬೀಜಾಸುರನನ್ನು ಕೊಂದ ತಕ್ಷಣ ಆತನ ದೇಹದಿಂದ ಹೊರಬಂದ ರಕ್ತದಿಂದ ಲಕ್ಷಗಟ್ಟಲೆ ರಕ್ತಬೀಜಾಸುರರು ಉತ್ಪತ್ತಿಯಾದರು. ಇದನ್ನು ನೋಡಿದ ದುರ್ಗಾ ಮಾತೆಯು ತನ್ನ ತೇಜಸ್ಸಿನಿಂದ ಕಾಳರಾತ್ರಿಯನ್ನು ರಚಿಸಿದಳು. ಇದಾದ ನಂತರ ದುರ್ಗಾ ದೇವಿಯು ರಕ್ತಬೀಜಾಸುರರನ್ನು ಕೊಂದಾಗ ಕಾಳರಾತ್ರಿಯು ಆತನ ದೇಹದಿಂದ ಹೊರಬರುತ್ತಿದ್ದ ರಕ್ತವನ್ನು ತನ್ನ ಬಾಯಿಯಲ್ಲಿ ತುಂಬಿಕೊಂಡು ರಕ್ತಬೀಜಾಸುರನನ್ನು ಸೀಳಿ ಕೊಂದಳು.

    ತುಂಬೆ ಹೂವುಗಳಿಂದ ಪೂಜೆ:
    ಕಾಳರಾತ್ರಿ ದೇವಿಯು ಭಕ್ತರನ್ನು ದುಷ್ಟಶಕ್ತಿಗಳಿಂದ ಕಾಪಾಡುತ್ತಾಳೆ ಎಂಬ ನಂಬಿಕೆ ಇದೆ. ನವರಾತ್ರಿಯ ಏಳನೇ ದಿನದಂದು ದೇವಿಯನ್ನು ತುಂಬೆ ಹೂವುಗಳಿಂದ ಪೂಜಿಸಲಾಗುತ್ತದೆ.

  • Navratri 2025 Day 4: ಬ್ರಹ್ಮಾಂಡದ ಮೂಲ ಶಕ್ತಿ ಕೂಷ್ಮಾಂಡ ದೇವಿ – ಪುರಾಣ ಕಥೆ ಏನು?

    Navratri 2025 Day 4: ಬ್ರಹ್ಮಾಂಡದ ಮೂಲ ಶಕ್ತಿ ಕೂಷ್ಮಾಂಡ ದೇವಿ – ಪುರಾಣ ಕಥೆ ಏನು?

    ವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡ ದೇವಿ ಆರಾಧನೆ ಮಾಡಲಾಗುತ್ತದೆ. ನವದುರ್ಗೆಯರಲ್ಲಿ ಕೂಷ್ಮಾಂಡ ದೇವಿ ನಾಲ್ಕನೆಯವಳು. ಈಕೆ ತನ್ನ ಮಧುರ ನಗುವಿನಿಂದ ಬ್ರಹ್ಮಾಂಡವನ್ನು ರಚಿಸಿದ ಕಾರಣ ಇವಳನ್ನು ಕೂಷ್ಮಾಂಡ ದೇವಿ ಎನ್ನಲಾಗುತ್ತದೆ. ಈ ದೇವಿಯನ್ನು ಪೂಜಿಸುವುದು ಹೇಗೆ? ಯಾವ ಬಗೆಯ ಪೂಜೆಯಿಂದ ಪ್ರಸನ್ನಳಾಗುತ್ತಾಳೆ ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.

    ಕೂಷ್ಮಾಂಡ ದೇವಿಯ ಸ್ವರೂಪ ಹೇಗೆ?
    ಆದಿಶಕ್ತಿಯ ಪ್ರತಿರೂಪವಾದ ಕೂಷ್ಮಾಂಡ ದೇವಿಯ ರೂಪ ವಿಶೇಷವಾಗಿ ಗಮನ ಸೆಳೆಯುತ್ತದೆ. ಇವಳು ಸಿಂಹವಾಹನೆಯಾಗಿದ್ದು, ತೇಜೋಮಯಿಯಾಗಿದ್ದಾಳೆ. ಇವಳಿಗೆ ಎಂಟು ಕೈಗಳು. ತನ್ನ ಕೈಗಳಲ್ಲಿ ಕಮಂಡಲ, ಧನಸ್ಸು, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ ಮತ್ತು ಗದೆಯನ್ನು ಹಿಡಿದಿರುತ್ತಾಳೆ. ವಿಶೇಷ ಎಂದರೆ ಕೂಷ್ಮಾಂಡ ದೇವಿಯ ಪ್ರಭೆಯ ಕಾಂತಿ ಸೂರ್ಯನಿಗೆ ಸಮಾನವಾಗಿರುತ್ತದೆ.

    ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡ ದೇವಿಯನ್ನು ಪೂಜಿಸಲಾಗುತ್ತದೆ. ಸಂಸ್ಕೃತದಲ್ಲಿ ಕುಂಬಳಕಾಯಿಯನ್ನು ಕೂಷ್ಮಾಂಡ ಎನ್ನುತ್ತಾರೆ. ಈ ದೇವಿಗೆ ಕುಂಬಳಕಾಯಿ ಅತ್ಯಂತ ಪ್ರಿಯ. ಈಕೆಯನ್ನು ಶ್ರದ್ಧೆಯಿಂದ ಪೂಜಿಸಿದರೆ ಕಷ್ಟ ಪರಿಹರಿಸುತ್ತಾಳೆ. ಭಕ್ತರ ಅಜ್ಞಾನವನ್ನೂ ದೂರ ಮಾಡುತ್ತಾಳೆ. ಕೂಷ್ಮಾಂಡ ದೇವಿಯ ಆರಾಧನೆಯ ಪೂಜಾ ಫಲಗಳು ಅತ್ಯಂತ ವಿಶೇಷ. ಕೂಷ್ಮಾಂಡ ದೇವಿ ಆರಾಧನೆಯಿಂದ ರೋಗಗಳಿಂದ ಮುಕ್ತಿ ಪಡೆಯಬಹುದು. ಭಕ್ತರ ದುಃಖ ದೂರ ಮಾಡುತ್ತಾಳೆ. ಆಯಸ್ಸು, ಆರೋಗ್ಯ ವೃದ್ಧಿಯಾಗುತ್ತದೆ. ಜೀವನದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ. ನವರಾತ್ರಿಯ ನಾಲ್ಕನೇ ದಿನ ಸಾಧಕರು ಕೂಷ್ಮಾಂಡ ದೇವಿಯ ಆರಾಧನೆ ಮಾಡುತ್ತಾರೆ. ಈ ದಿನ ಸಾಧಕನ ಮನಸ್ಸು ಅನಾಹತ ಚಕ್ರದಲ್ಲಿ ನೆಲೆನಿಲ್ಲುತ್ತದೆ. ಈ ದೇವಿಯ ಆರಾಧನೆಯಿಂದ ಮನಸ್ಸು ಏಕಾಗ್ರತೆಗೆ ಸಾಧಿಸುತ್ತದೆ.

    ಕೂಷ್ಮಾಂಡ ದೇವಿಯ ಹಿನ್ನೆಲೆ:
    ಸೃಷ್ಟಿಯ ಅಸ್ತಿತ್ವವೇ ಇಲ್ಲದಿರುವಾಗ ಎಲ್ಲೆಡೆ ಅಂಧಕಾರವೇ ಪಸರಿಸಿತ್ತು. ಆಗ ಇದೇ ದೇವಿಯು ತನ್ನ ‘ಈಶತ್’ ಹಾಸ್ಯದಿಂದ ಬ್ರಹ್ಮಾಂಡವನ್ನು ಸೃಷ್ಟಿಸುತ್ತಾಳೆ. ಆದ್ದರಿಂದ ಇವಳೇ ಸೃಷ್ಟಿಯ ಆದಿಸ್ವರೂಪ ಶಕ್ತಿಯಾಗಿದ್ದಾಳೆ. ಈಕೆಯು ಸೂರ್ಯನ ಸ್ಥಾನದಲ್ಲಿ ನಿಲ್ಲುವ ಕಾರಣದಿಂದಾಗಿ ಭೂಮಿಯ ಮೇಲಿರುವ ಅಂಧಕಾರವನ್ನೆಲ್ಲಾ ನಿವಾರಣೆ ಮಾಡುತ್ತಾಳೆ. ಕೂಷ್ಮಾಂಡ ದೇವಿಯು ಸೂರ್ಯನಿಗೆ ಅಧಿಪತಿಯಾಗಿರುವ ಕಾರಣ ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ ಜಾತಕದಲ್ಲಿ ಸೂರ್ಯನಿಂದಾಗುವ ಕೆಡುಕನ್ನು ನಿವಾರಿಸಬಹುದು. ಜೊತೆಗೆ ಎಲ್ಲಾ ರೀತಿಯ ಸಂಕಷ್ಟಗಳೂ ನಿವಾರಣೆಯಾಗುತ್ತದೆ.

    ಪೂಜಾ ವಿಧಿ:
    ಕೂಷ್ಮಾಂಡ ದೇವಿಯನ್ನು ಅರ್ಚಿಸಲು ಅತೀ ಪವಿತ್ರವಾದ ಹೂವೆಂದರೆ ಕೆಂಪು ಬಣ್ಣದ ಹೂಗಳು. ಈ ಹೂಗಳಿಂದ ದೇವಿಯನ್ನು ಅರ್ಚಿಸಿ ನಂತರ ಷೋಡಶೋಪಚಾರ ಪೂಜೆ ಅಂದರೆ 16 ವಿಧದ ಪೂಜೆಯನ್ನು ಮಾಡಿ ನಿಮ್ಮ ಕುಟುಂಬದ ಶ್ರೇಯಸ್ಸಿಗಾಗಿ ಬೇಡಿಕೊಳ್ಳಿ.

  • Navratri 2025 Day 3: ಚಂದ್ರಘಂಟಾ ದೇವಿ ಯಾರು? ಪುರಾಣ ಕಥೆ ಏನು ಹೇಳುತ್ತೆ?

    Navratri 2025 Day 3: ಚಂದ್ರಘಂಟಾ ದೇವಿ ಯಾರು? ಪುರಾಣ ಕಥೆ ಏನು ಹೇಳುತ್ತೆ?

    ವರಾತ್ರಿಯ ಮೂರನೇ ದಿನದಂದು ಚಂದ್ರಘಂಟಾ ದೇವಿಯನ್ನು ಆರಾಧಿಸಲಾಗುತ್ತದೆ. ದುರ್ಗಾದೇವಿಯ ಒಂಭತ್ತು ಅವತಾರಗಳಲ್ಲಿ ಚಂದ್ರಘಂಟಾ ಅವತಾರವೂ ಒಂದಾಗಿದೆ. ತನ್ನ ಭಕ್ತರ ಕಷ್ಟಗಳನ್ನು ಕ್ಷಣಮಾತ್ರದಲ್ಲೇ ನಿವಾರಿಸಿ, ಸಂತೋಷ, ಸಮೃದ್ಧಿಯನ್ನು ನೀಡುವ ತಾಯಿಯೇ ಚಂದ್ರಘಂಟಾ ದೇವಿ. ದುರ್ಗಾಮಾತೆಯ ವೈವಾಹಿಕ ಅವತಾರವಾಗಿರುವ ಚಂದ್ರಘಂಟಾ ದೇವಿಯನ್ನು ನವರಾತ್ರಿಯ ಮೂರನೇ ದಿನ ಆರಾಧಿಸಲಾಗುತ್ತದೆ. ದುರ್ಗಾ ಮಾತೆಯ ರೌದ್ರಸ್ವರೂಪವಾಗಿಯೂ ಚಂದ್ರಘಂಟಾ ಕಂಡುಬರುತ್ತಾಳೆ. ದುಷ್ಟಶಕ್ತಿಗಳಿಗೆ ಸಿಂಹಸ್ವಪ್ನವಾಗಿ ತನ್ನ ಭಕ್ತರನ್ನು ಪ್ರೀತಿಯಿಂದ ಸಲಹುವ ತಾಯಿ ಈಕೆ.

    ಚಂದ್ರಘಂಟಾ ಅಂದರೆ ಘಂಟೆಯಾಕಾರದ ಚಂದ್ರನನ್ನು ಮಸ್ತಕದಲ್ಲಿ ಧರಿಸಿದವಳು ಎಂದರ್ಥ. ಚಂದ್ರಘಂಟಾ ದೇವಿಯ ಮೂರನೇ ಕಣ್ಣು ತೆರೆದೇ ಇರುತ್ತದೆ. ಯಾವ ಸಮಯದಲ್ಲಿ ಆದರೂ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಸಿದ್ಧಳಾಗಿರುವಂತೆ ಕಾಣುತ್ತಾಳೆ. ಚಂದ್ರಘಂಟಾ ದೇವಿಯನ್ನು ಚಂದ್ರಿಕಾ, ರಣಚಂಡಿ ಎಂದೂ ಕರೆಯುತ್ತಾರೆ. ಇವಳಿಗೆ ಹತ್ತು ಕೈಗಳಿದ್ದು, ಹತ್ತೂ ಕೈಗಳಲ್ಲಿ ಶಸ್ತ್ರಾಸ್ತ್ರ ಹಿಡಿದುಕೊಂಡು ಸಿಂಹವಾಹಿನಿಯಾಗಿ ರಾರಾಜಿಸುತ್ತಾಳೆ.

    ಚಂದ್ರಘಂಟಾ ದೇವಿ ಯಾರು?
    ಚಂದ್ರಘಂಟ ದೇವಿಯು ಶುಕ್ರ ಗ್ರಹದ ಅಧಿದೇವತೆಯಾಗಿದ್ದಾಳೆ. ಈಕೆ ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಸಂತೋಷವನ್ನು ನೀಡುವ ತಾಯಿ. ಇವಳ ಆರಾಧನೆಯಿಂದ ಸಂಪತ್ತು ಹಾಗೂ ಸಮೃದ್ಧಿಯನ್ನು ಪಡೆಯಬಹುದು. ಈಕೆಯ ಆಶೀರ್ವಾದದಿಂದ ನಿಮ್ಮ ಮನೆಯಲ್ಲಿ ಎಂದಿಗೂ ಆಹಾರ ಕೊರತೆ ಕಂಡುಬರದು.

    ಹಿನ್ನೆಲೆ ಏನು?
    ಹೊಸದಾಗಿ ವಿವಾಹವಾದ ಸ್ವರೂಪವನ್ನು ದುರ್ಗಾಮಾತೆಯು ಚಂದ್ರಘಂಟಾ ರೂಪದಲ್ಲಿ ನೋಡಬಹುದು. ಪಾರ್ವತಿ ದೇವಿಯು ಕಠಿಣವಾದ ತಪಸ್ಸನ್ನು ಮಾಡಿ, ಶಿವನನ್ನು ಮದುವೆಯಾಗುವಲ್ಲಿ ಸಫಲರಾಗುತ್ತಾರೆ. ವಿವಾಹ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯ ಅರಮನೆಯನ್ನು ಪ್ರವೇಶಿಸುತ್ತಾನೆ. ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯ ತಾಯಿ ಮೂರ್ಛೆಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟಾ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ.

    ಪೂಜೆಯ ಮಹತ್ವ:
    ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿಯ ಪೂಜೆ ಮಾಡುವುದರಿಂದ ಮನಸ್ಸಿನಲ್ಲಿರುವ ಭಯವೆಲ್ಲಾ ನಿವಾರಣೆಯಾಗಿ ಜೀವನದಲ್ಲಿ ಯಶಸ್ಸನ್ನು ಸಾಧಿಸಬಲ್ಲೆ ಎಂಬ ವಿಶ್ವಾಸ ಬೆಳೆಯುತ್ತದೆ. ದೇವಿಯ ಮಸ್ತಕದಲ್ಲಿರುವ ಚಂದ್ರಘಂಟಾ ನಾದವು ಋಣಾತ್ಮಕ ಶಕ್ತಿಯನ್ನು ಹೊಂದಿದ್ದು, ದುಷ್ಟಶಕ್ತಿಗಳನ್ನೆಲ್ಲಾ ದೂರ ಮಾಡುವುದು. ಹಾಗಾಗಿ ಚಂದ್ರಘಂಟಾ ದೇವಿಯ ಪೂಜೆಯನ್ನು ಮಾಡಿದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳೆಲ್ಲಾ ದೂರವಾಗಿ ಮನೆಶುದ್ಧಿಯಾಗುವುದು.

    ಯಾರು ಜೀವನದಲ್ಲಿ ಭರವಸೆಯನ್ನು ಕಳೆದುಕೊಂಡು ವ್ಯವಹಾರದಲ್ಲಿ ಹೊಸ ಹಾದಿಯನ್ನು ತುಳಿಯಲು ಇಚ್ಛಿಸುತ್ತಾರೋ ಅವರು ಚಂದ್ರಘಂಟಾ ದೇವಿಯ ಪೂಜೆ ಮಾಡಿದರೆ ಅವರು ಸಾಗುವ ದಾರಿಯಲ್ಲಿ ಬೆಳಕನ್ನು ಚೆಲ್ಲಿ, ಯಶಸ್ಸಿನ ಮೆಟ್ಟಿಲೇರಲು ಸಹಕರಿಸುತ್ತಾಳೆ ತಾಯಿ ಚಂದ್ರಘಂಟಾ ದೇವಿ.

  • Navratri 2025 Day 1: ಶೈಲಪುತ್ರಿಯ ಮಹತ್ವವೇನು?

    Navratri 2025 Day 1: ಶೈಲಪುತ್ರಿಯ ಮಹತ್ವವೇನು?

    ಬಾರಿಯ ನವರಾತ್ರಿ ಹಬ್ಬವು ಸೆ.22ರಿಂದ ಪ್ರಾರಂಭವಾಗಿ ಅ.3ಕ್ಕೆ ಕೊನೆಗೊಳ್ಳುತ್ತದೆ. ನವರಾತ್ರಿಯು ದೇವಿ ದುರ್ಗೆಯ ಮತ್ತು ಅವಳ 9 ರೂಪಗಳ ಆಚರಣೆಯಾಗಿದ್ದು, ಹಿಂದೂಗಳು ಈ ಹಬ್ಬವನ್ನು ಅತ್ಯಂತ ವೈಭವದಿಂದ ಆಚರಿಸುತ್ತಾರೆ. ದೇವಿ ದುರ್ಗೆಯ ಒಂಬತ್ತು ರೂಪಗಳನ್ನು ನೋಡುವುದಾದರೆ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ. ಆದಿ ಶಕ್ತಿಯ ಈ 9 ರೂಪಗಳನ್ನು ನವದುರ್ಗೆ ಎಂದು ಕರೆಯಲಾಗುತ್ತದೆ. ಈ ಹಬ್ಬವು ವಿಜಯದಶಮಿ ಆಚರಣೆಗಳೊಂದಿಗೆ ಕೊನೆಗೊಳ್ಳುತ್ತದೆ. ಮೊದಲನೇ ದಿನ ಪೂಜಿಸಲ್ಪಡುವ ಶೈಲಪುತ್ರಿಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ.

    ಶೈಲ ಪುತ್ರಿಯ ಮಹತ್ವ:
    ಪರ್ವತರಾಜ ಹಿಮವಂತನ ಪುತ್ರಿಯೇ ಶೈಲ ಪುತ್ರಿ. ಈ ದೇವಿಯ ಅವತಾರದ ಹಿಂದೆ ಒಂದು ಕಥೆ ಇದೆ. ಪ್ರಜಾಪತಿ ಬ್ರಹ್ಮನ ಮಗನಾದ ದಕ್ಷ ತನ್ನ 27 ಪುತ್ರಿಯರನ್ನು ಚಂದ್ರನಿಗೆ ಮದುವೆ ಮಾಡಿ ಕೊಟ್ಟಿದ್ದ. ಉಳಿದವರಲ್ಲಿ ಒಬ್ಬಳಾದ ದಾಕ್ಷಾಯಿಣಿ ಶಿವನನ್ನು ವರಿಸಿದಳು. ದಕ್ಷ ಮಹಾರಾಜನಿಗೆ ಅಳಿಯ ಶಿವನನ್ನು ಕಂಡರೆ ಆಗುತ್ತಿರಲಿಲ್ಲ. ಸ್ಮಶಾನದಲ್ಲಿ ವಾಸ ಮಾಡುವ, ಕುತ್ತಿಗೆಯಲ್ಲಿ ನಾಗರ ಹಾವನ್ನು ಸುತ್ತಿಕೊಂಡಿರುವ ಶಿವನಿಗಿಂತ, ಚೆಲುವೆಯಾಗಿರುವ ತನ್ನ ಮಗಳಿಗೆ ಉತ್ತಮ ವರ ಸಿಗುತ್ತಿದ್ದ ಎಂದು ಹೇಳಿಕೊಳ್ಳುತ್ತಿದ್ದ.

    ಶಿವನ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ದಕ್ಷ ಒಮ್ಮೆ ಒಂದು ದೊಡ್ಡ ಯಜ್ಞವನ್ನು ಆಯೋಜಿಸಿದ್ದ. ಈ ಯಜ್ಞಕ್ಕೆ ಆಗಮಿಸುವಂತೆ ಎಲ್ಲಾ ಮಕ್ಕಳಿಗೆ, ಬಂಧುಮಿತ್ರರಿಗೆ ಆಹ್ವಾನ ನೀಡಿದ್ದ. ಈ ಸಮಾರಂಭಕ್ಕೆ ದಕ್ಷ ಪ್ರವೇಶಿಸುತ್ತಿದ್ದಂತೆ ಬ್ರಹ್ಮ ಮತ್ತು ಶಿವ ಬಿಟ್ಟು ಉಳಿದವರೆಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. ಈಗ ದಕ್ಷ, ಶಿವ ದೇವರು ಆಗಿರಬಹುದು. ಆದರೆ ಅವನಿಗೆ ನಾನು ಮಾವ. ಸಂಬಂಧದಲ್ಲಿ ನಾನು ಆತನಿಗಿಂತ ದೊಡ್ಡವ. ಶಿವ ಎದ್ದು ನಿಂತು ನನಗೆ ಗೌರವ ನೀಡಬಹುದಿತ್ತು. ಈ ರೀತಿ ಅಗೌರವ ಸಲ್ಲಿಸಿದ್ದು ಸರಿಯಲ್ಲ ಎಂದು ಮನಸ್ಸಿನಲ್ಲೇ ಉರಿದು ಬಿದ್ದ. ಇದಕ್ಕೆ ಪ್ರತೀಕಾರವೆಂಬಂತೆ ದಕ್ಷ ಶಿವನಿಗೆ ಅವಮಾನ ಮಾಡಬೇಕೆಂದು ಇನ್ನೊಂದು ಯಜ್ಞವನ್ನು ಆಯೋಜಿಸಿದ. ಆದರೆ ಮಗಳು ದಾಕ್ಷಾಯಿಣಿ ಹಾಗೂ ಅಳಿಯ ಶಿವನಿಗೆ ಆಹ್ವಾನ ನೀಡದೇ ಉಳಿದ ಎಲ್ಲಾ ಮಕ್ಕಳಿಗೂ ಆಹ್ವಾನ ನೀಡಿದ್ದ.

    ತಂದೆಯು ಯಾಗವನ್ನು ಆಯೋಜಿಸಿರುವುದನ್ನು ತಿಳಿದ ದಾಕ್ಷಾಯಿಣಿ ಶಿವನೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗೋಣವೇ ಎಂದು ಕೇಳುತ್ತಾಳೆ. ಅದಕ್ಕೆ ಶಿವ ಯಾವುದೇ ಶುಭ ಸಮಾರಂಭಕ್ಕೆ ಆಹ್ವಾನ ಇಲ್ಲದೇ ಹೋಗಬಾರದು. ತವರು ಮನೆಯಾದರೂ ಹೋಗಬಾರದು ಎಂದು ಹೇಳುತ್ತಾನೆ. ಇದಕ್ಕೆ ದಾಕ್ಷಾಯಿಣಿ ಕೆಲಸದ ಒತ್ತಡದಲ್ಲಿ ಯಾವುದೋ ಅನಿವಾರ್ಯ ಕಾರಣದಿಂದಾಗಿ ತಂದೆಗೆ ಮರೆತು ಹೋಗಿರಬಹುದು. ತವರು ಮನೆಗೆ ಹೋಗಲು ಮಗಳಿಗೆ ಏಕೆ ಆಹ್ವಾನ ಬೇಕು ಎಂದು ಪ್ರಶ್ನಿಸುತ್ತಾಳೆ. ತೆರಳುವುದು ಬೇಡ ಎಂದು ಹೇಳಿದರೂ ಪತ್ನಿ ದಾಕ್ಷಾಯಿಣಿಯ ಹಠಕ್ಕೆ ಕರಗಿ ಶಿವ ಅನುಮತಿ ನೀಡುತ್ತಾನೆ.

    ಶಿವನಿಂದ ಅನುಮತಿಯನ್ನು ಪಡೆದು ದಾಕ್ಷಾಯಿಣಿ ತಂದೆಯ ಯಾಗಕ್ಕೆ ಹೋಗುತ್ತಾಳೆ. ಆದರೆ ದಕ್ಷನು ಯಾಗಕ್ಕೆ ಬಂದ ಮಗಳನ್ನು ನೋಡಿ ನಾನು ಆಹ್ವಾನ ನೀಡದಿದ್ದರೂ ಬಂದಿದ್ದು ಯಾಕೆ? ನಿನ್ನ ಪತಿಯನ್ನೂ ಕರೆದುಕೊಂಡು ಬಂದಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾನೆ. ತಂದೆ ಮನ ನೋಯಿಸಿದರೂ ನೋವನ್ನು ತಡೆದುಕೊಳ್ಳುತ್ತಾಳೆ. ಯಜ್ಞ ಆರಂಭವಾದ ಬಳಿಕವೂ ದಕ್ಷ ಮತ್ತೆ ಶಿವನನ್ನು ಅವಮಾನಿಸುತ್ತಾನೆ. ಎಲ್ಲರ ಮುಂದೆ ಪತಿಗೆ ಆದ ಅವಮಾನವನ್ನು ಸಹಿಸದ ದಾಕ್ಷಾಯಿಣಿ ತನ್ನ ಮುಂದಿದ್ದ ಯಜ್ಞಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ. ಹೀಗೆ ತನ್ನ ಶರೀರವನ್ನು ಭಸ್ಮವಾಗಿಸಿ ಮುಂದಿನ ಜನ್ಮದಲ್ಲಿ ಹಿಮವಂತನ ಪುತ್ರಿಯಾಗಿ ಜನಿಸಿ ಶೈಲ ಪುತ್ರಿ ಎಂಬ ಹೆಸರಿನಿಂದ ಗುರುತಿಸಿಕೊಳ್ಳುತ್ತಾಳೆ. ಮತ್ತೆ ಶಿವನ ಮಡದಿ ಸತಿಯಾಗಿ ಹೆಸರು ಪಡೆಯುತ್ತಾಳೆ. ಮದುವೆಯಾದ ಬಳಿಕ ಶಿವ ಪತ್ನಿಗೆ ವರ್ಷದಲ್ಲಿ 10 ದಿನ ಮಾತ್ರ ತವರು ಮನೆಗೆ ತೆರಳಲು ಅನುಮತಿ ನೀಡುತ್ತಾನೆ. ಅದರಂತೆ ಈಗಲೂ ದಸರಾ ಸಮಯದಲ್ಲಿ ಮದುವೆಯಾದ ಹೆಣ್ಣು ಮಕ್ಕಳನ್ನು ತವರಿಗೆ ಆಮಂತ್ರಿಸಿ ಗೌರವಿಸುವ ಸಂಪ್ರದಾಯವಿದೆ.

    ಶೈಲಪುತ್ರಿಯ ಸ್ವರೂಪ ಹೇಗೆ?
    ಶೈಲ ಪುತ್ರಿಯನ್ನು ಆದಿಶಕ್ತಿಯೆಂದು ಗುರುತಿಸಲಾಗುತ್ತದೆ. ಆಕೆಯು ಗೂಳಿಯ ಮೇಲೆ ಸವಾರಿ ಮಾಡುತ್ತಿದ್ದ ಕಾರಣ ವೃಷರುಧ ಎಂದೂ ಕರೆಯಲಾಗುತ್ತದೆ. ಶೈಲಪುತ್ರಿಯು ಮನೋಕಾರಕನಾದ ಚಂದ್ರನನ್ನು ತನ್ನ ಮಸ್ತಿಷ್ಕದ ಮೇಲೆ ಧರಿಸಿದ್ದಾಳೆ. ತಮೋಗುಣದ ಸಂಕೇತವಾದ ತ್ರಿಶೂಲವನ್ನು ತನ್ನ ಬಲಗೈಯಲ್ಲಿ ಧಾರಣೆ ಮಾಡಿದ್ದಾಳೆ. ಶ್ವೇತ ವಸ್ತ್ರಧಾರಿಯಾಗಿರುವ ಶೈಲಪುತ್ರಿ ಮಲ್ಲಿಗೆ ಪ್ರಿಯಳು.

    ಶೈಲಪುತ್ರಿಯ ರೂಪವೂ ನಾವು ಪಾಲಿಸಬೇಕಾದ ಬದುಕಿನ ತತ್ವವನ್ನು ಸೂಚಿಸುತ್ತದೆ. ಶ್ವೇತ ವಸ್ತ್ರದಲ್ಲಿರುವ ಆಕೆ ಶಾಂತಿಯುತವಾದ ನಡವಳಿಕೆಯನ್ನು ಬೆಳೆಸಿಕೊಳ್ಳಲು ಪ್ರೇರಣೆಯಾಗಿದ್ದಾಳೆ. ಪರ್ವತರಾಜನ ಮಗಳಾಗಿ ಪರ್ವತ ಎಂದರೆ ಪ್ರಕೃತಿಯನ್ನು ಪ್ರೀತಿಸಿ, ಶುದ್ಧವಾಗಿರಿಸಿಕೊಳ್ಳಿರೆಂದು ಸೂಚಿಸುವಳು. ಗೂಳಿಯ ಮೇಲೆ ಕುಳಿತಿರುವ ಮೂಲಕ ಮೂಕಪ್ರಾಣಿಗಳು ದೇವ- ದೇವತೆಯರ ವಾಹನವಾಗಿದ್ದು ಅವುಗಳನ್ನು ಹಿಂಸಿಸಬಾರದೆಂಬುದರ ಸಂಕೇತ ನೀಡುತ್ತಾಳೆ. ಒಂದು ಕೈಯಲ್ಲಿರುವ ತ್ರಿಶೂಲ ತಾಪತ್ರಯಗಳ ನಿವಾರಣೆಯ ಸೂಚಕ ಮತ್ತು ನಮ್ಮ ಮನಸ್ಸು ದುಷ್ಟತನದತ್ತ ದೃಷ್ಟಿ ಹಾಯಿಸಬಾರದು, ಅದರಿಂದ ಶೂಲದಂತಹ ಅಸ್ತ್ರದಿಂದ ನಮ್ಮನ್ನು ನಾವೇ ಇರಿದುಕೊಂಡಂತೆ ಎಂಬುದನ್ನು ಸಾರುತ್ತದೆ. ಇನ್ನೊಂದು ಕೈಯಲ್ಲಿರುವ ಕಮಲವು ಕೋಮಲವಾದ ಎಸಳುಗಳುಳ್ಳ, ನೀರಿನಲ್ಲಿ ಅರಳುವ ಸುಂದರ ಹೂವು ವಿನಯ ಮತ್ತು ತಾಳ್ಮೆಯ ಸಂಕೇತ. ಇದು ತಿಳಿಯಾದ ಮನಸ್ಸಿನಲ್ಲಿ ತಳಮಳವಿರುವುದಿಲ್ಲ ಎಂಬುದನ್ನು ಸೂಚಿಸುತ್ತದೆ.