ನವದೆಹಲಿ: ಟ್ರಾಫಿಕ್ ಸಮಸ್ಯೆಯಿಂದ ಪಾರಾಗಲು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಸಿಗ್ನೆಚರ್ ಬ್ರಿಡ್ಜ್ ತೂಗು ಸೇತುವೆ ಮೇಲೆ ಜನರು ನಿಂತು ಸೆಲ್ಫಿ ಕ್ಲಿಕ್ಕಿಸುತ್ತಿರುವುದರಿಂದ ಜೀವಕ್ಕೆ ಅಪಾಯವಾಗುವ ಸಂಭವ ಜಾಸ್ತಿ ಇದೆ.
ಹೊಸದಾಗಿ ನಿರ್ಮಾಣಗೊಂಡಿರುವ ಸೇತುವೆಯ ತುತ್ತ ತುದಿಯಲ್ಲಿ ಯುವಕರು ಸಾಹಸ ಮಾಡಿ, ತಮ್ಮ ಜೀವವನ್ನು ಒತ್ತೆಯಿಟ್ಟು ಸೆಲ್ಫಿ ತೆಗೆದುಕೊಳ್ಳುತ್ತಿರುವುರಿಂದ ಎಲ್ಲರಲ್ಲಿ ಆತಂಕ ಸೃಷ್ಠಿಯಾಗಿದೆ.

ಸುಮಾರು 14 ವರ್ಷಗಳ ಸತತ ಪರಿಶ್ರಮದಿಂದ ಉತ್ತರ ಮತ್ತು ಈಶಾನ್ಯ ದೆಹಲಿಯನ್ನು ಸೇರಿಸಲು ಈ ತೂಗು ಸೇತುವೆಯನ್ನ ನಿರ್ಮಿಸಿದ್ದು, ಕೆಲವು ದಿನಗಳ ಹಿಂದೆಯಷ್ಟೆ ಇದನ್ನ ಲೋಕಾರ್ಪಣೆ ಮಾಡಲಾಗಿದೆ. ಟ್ರಾಫಿಕ್ ಸಮಸ್ಯೆಯನ್ನ ಬಗೆಹರಿಸಲು ಈ ಸೇತುವೆ ನಿರ್ಮಿಸಲಾಗಿದ್ದರೂ, ಈಗ ಪ್ರವಾಸಿಗರ ತಾಣವಾಗಿ ಬದಲಾಗಿದೆ.
ಈ ಹೊಸ ಸೇತುವೆಯ ಮೇಲೆ ಜನರು ಮುಗಿಬಿದ್ದು ಫೋಟೋಗಳನ್ನ ತೆಗೆದುಕೊಳ್ಳುತ್ತಿದ್ದು, ಸೇತುವೆಗೆ ಹಾಕಲಾಗಿರುವ ಕಂಬಿಗಳ ಮೇಲೆ ನಿಂತು ಪೋಸ್ ನೀಡುವ ಮೂಲಕ ಅವರ ಪ್ರಾಣಕ್ಕೆ ಅಪಾಯವನ್ನ ತಂದುಕೊಳ್ಳುತ್ತಿದ್ದಾರೆ. ಕೆಲವರು ವಾಹನ ಚಲಾಯಿಸುವಾಗಲೇ ಫೋಟೋ ತಗೆಯುವ ಸಾಹಸಕ್ಕೆ ಕೈಹಾಕಿದ್ದು ಇದರಿಂದ ಭಾರೀ ಪ್ರಮಾಣದ ಅಪಘಾತಗಳು ಸಂಭವಿಸಬಹುದಾಗಿದೆ.

ಈ ವಿಚಾರವಾಗಿ ಮಾತನಾಡಿದ ಅಧಿಕಾರಿಗಳು, ಮುಂದಿನ ದಿನದಲ್ಲಿ ಈ ಸೇತುವೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಿ, ದೆಹಲಿ ನಗರದ ಸೌಂದರ್ಯ ಕಣ್ತುಂಬಿಕೊಳ್ಳಲು ಗಾಜಿನ ಕೋಣೆಗಳನ್ನು ನಿರ್ಮಿಸಲಾಗುವುದು. ಇದರೊಂದಿಗೆ ಸೆಲ್ಫಿ ಪ್ರಿಯರಿಗೆಂದೇ ಫೋಟೋ ತೆಗೆದುಕೊಳ್ಳುವುದಕ್ಕೆ ಪ್ರತ್ಯೇಕ ಸ್ಥಳಗಳನ್ನ ನಿರ್ಮಿಸಲಾಗುವುದು ಇದರಿಂದ ಅನಾಹುತಗಳನ್ನ ತಪ್ಪಿಸಬಹುದು ಎಂದು ಹೇಳಿದ್ದಾರೆ.
ಈ ಕಾಮಗಾರಿ ಫೆಬ್ರವರಿ ಅಂತ್ಯಕ್ಕೆ ಜಾರಿಯಾಗಲಿದ್ದು, ಜನರು ಸೇತುವೆ ಮೇಲೆ ನಿಂತು ಫೋಟೋ ತೆಗೆಯುವುದರ ಬಗ್ಗೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1997ರಲ್ಲಿ ವಜೀರಾಬಾದ್ ಸೇತುವೆಯಿಂದ ಶಾಲಾ ಬಸ್ ಉರುಳಿ, 22 ಮಕ್ಕಳು ಯಮುನಾ ನದಿಯಲ್ಲಿ ಕೊನೆಯುಸಿರೆಳೆದಿದ್ದರು. ಈ ದುರಂತ ನಡೆದ ಬಳಿಕ ಸರ್ಕಾರ ಬೃಹತ್ ತೂಗು ಸೇತುವೆ ಕಾಮಗಾರಿಯನ್ನ ಪ್ರಾರಂಭಿಸಿತ್ತು. 2010ರಲ್ಲಿ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಹಣಕಾಸು ತೊಂದರೆಯಿಂದ ನಿಂತುಹೋಗಿತ್ತು. ಸುಮಾರು 1594 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆಯನ್ನ ಇದೇ ತಿಂಗಳ ನವೆಂಬರ್ 5 ಕ್ಕೆ ಲೋಕಾರ್ಪಣೆ ಮಾಡಲಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews