Tag: Side Effects

  • ಬೆಂಗಳೂರಿನಲ್ಲಿ 7 ಮಂದಿಗೆ ಅಡ್ಡ ಪರಿಣಾಮ – ಐವರು ಗುಣಮುಖ, ಇಬ್ಬರು ಆಸ್ಪತ್ರೆಗೆ ದಾಖಲು

    ಬೆಂಗಳೂರಿನಲ್ಲಿ 7 ಮಂದಿಗೆ ಅಡ್ಡ ಪರಿಣಾಮ – ಐವರು ಗುಣಮುಖ, ಇಬ್ಬರು ಆಸ್ಪತ್ರೆಗೆ ದಾಖಲು

    ಬೆಂಗಳೂರು: ನಗರದಲ್ಲಿ 6 ದಿನಗಳ ಲಸಿಕೆ ಅಭಿಯಾನದಲ್ಲಿ 7 ಜನರ ಮೇಲೆ ಅಡ್ಡ ಪರಿಣಾಮ ಬೀರಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜೇಂದ್ರ ಹೇಳಿದ್ದಾರೆ.

    ಕಾರ್ಪೋರೇಷನ್ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ಕೋವಿಶೀಲ್ಡ್ ಲಸಿಕೆ ಈಗಾಗಲೇ ನೀಡಲಾಗಿದೆ. ಸದ್ಯ ಲಸಿಕೆ 7 ಜನರ ಮೇಲೆ ಅಡ್ಡಪರಿಣಾಮ ಬೀರಿದೆ. ಆದರೆ ಇಲ್ಲಿಯವರೆಗೂ ಯಾವುದೇ ಗಂಭೀರ ಪ್ರಕರಣ ಕಂಡು ಬಂದಿಲ್ಲ. ಮುನ್ನಚ್ಚರಿಕೆ ಕ್ರಮವಾಗಿ ಅಡ್ಡಪರಿಣಾಮ ಬೀರಿದ ಇಬ್ಬರು ಆರೋಗ್ಯ ಕಾರ್ಯಕರ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಐವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಿ ಗುಣಮುಖ ಮಾಡಲಾಗಿದೆ ಎಂದರು.

    ಎಲ್ಲೆಲ್ಲಿ ಅಡ್ಡ ಪರಿಣಾಮ?
    ಕೊರೋನಾ ಲಸಿಕೆ ಪಡೆದ ನಂತರ ಯಲಹಂಕ ವಲಯದಲ್ಲಿ 2, ಪಶ್ಚಿಮದಲ್ಲಿ 2, ಆರ್ ಆರ್ ನಗರದಲ್ಲಿ 2, ಪೂರ್ವದಲ್ಲಿ 1 ಒಟ್ಟಾರೆಯಾಗಿ 7 ಮಂದಿ ಆರೋಗ್ಯ ಕಾರ್ಯಕರ್ತರು ಅಡ್ಡಪರಿಣಾಮ ಎದುರಿಸಿದ್ದಾರೆ. ಈ ವೇಳೆ ಜ್ವರ, ಮೈ ಕೈ ನೋವು, ತಲೆ ಸುತ್ತು, ನೆಲಕ್ಕೆ ಕುಸಿಯುವ ಲಕ್ಷಣಗಳು ಕಂಡು ಬಂದಿದೆ.

    ಯಲಹಂಕ ಭಾಗದ ಆರೋಗ್ಯ ಕಾರ್ಯಕರ್ತ ಮಹಿಳೆ ಲಸಿಕೆ ಪಡೆದಾಗ ಕೆಳಗೆ ಬಿದ್ದಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂಬ ಮಾಹಿತಿ ನೀಡಿದರು. ಇದೀಗ ಎಲ್ಲರಿಗೂ ಆರೋಗ್ಯ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಿ ಎಲ್ಲರೂ ಕ್ಷೇಮವಾಗಿದ್ದಾರೆ ಎಂದು ತಿಳಿಸಿದರು.

    ಯಾವುದೇ ಲಸಿಕೆ ತೆಗೆದುಕೊಂಡಾಗ ಕೆಲವರಿಗೆ ಅಡ್ಡ ಪರಿಣಾಮವಾಗುವುದು ಸಾಮಾನ್ಯ. ಇದಕ್ಕೆ ಯಾರೂ ಹೆದರುವ ಅಗತ್ಯವಿಲ್ಲ ಎಂದು ಲಸಿಕೆ ವಿತರಣೆ ನಡೆಯುವ ಮುನ್ನವೇ ತಜ್ಞರು ವೈದ್ಯರು ತಿಳಿಸಿದ್ದರು.

  • ದೆಹಲಿಯ 52 ಜನರ ಮೇಲೆ ಕೊರೊನಾ ಲಸಿಕೆ ಅಡ್ಡ ಪರಿಣಾಮ

    ದೆಹಲಿಯ 52 ಜನರ ಮೇಲೆ ಕೊರೊನಾ ಲಸಿಕೆ ಅಡ್ಡ ಪರಿಣಾಮ

    ನವದೆಹಲಿ: ಶನಿವಾರ ಕೋವಿಡ್-19 ಲಸಿಕೆಯನ್ನು ದೇಶದಾದ್ಯಂತ ವಿತರಿಸಲಾಯಿತು. ಕೋವಿಡ್-19 ಲಸಿಕೆ ಸ್ವೀಕರಿಸಿದ ನಂತರ ದೆಹಲಿಯಲ್ಲಿ 52 ಜನರ ಮೇಲೆ ಅಡ್ಡ ಪರಿಣಾಮ ಬೀರಿದೆ ಎಂದು ದೆಹಲಿ ಸರ್ಕಾರ ಘೋಷಿಸಿದೆ.

    ದೆಹಲಿ ಪೂರ್ವ, ದೆಹಲಿ ದಕ್ಷಿಣ ಮತ್ತು ದೆಹಲಿ ಉತ್ತರ-ಪಶ್ಚಿಮ 4ರಿಂದ 5 ಪ್ರಕರಣಗಳು ಗಂಭೀರವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಒಟ್ಟಾರೆ ಪಶ್ಚಿಮ ದೆಹಲಿಯಲ್ಲಿ 5 , ದೆಹಲಿ ಕೇಂದ್ರದಲ್ಲಿ 2, ದೆಹಲಿ ದಕ್ಷಿಣದಲ್ಲಿ 11, ನವದೆಹಲಿಯಲ್ಲಿ 2,ಆಗ್ನೇಯ ದೆಹಲಿಯಲ್ಲಿ 11 ಮತ್ತು ದೆಹಲಿ ಪಶ್ಚಿಮದಲ್ಲಿ 6 ಪ್ರಕರಣಗಳು ದಾಖಲಾಗಿವೆ.

    8,117 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಿದ್ದ ವೈದ್ಯಕೀಯ ಇಲಾಖೆ ಒಟ್ಟಾರೆ 4,319 ಆರೋಗ್ಯ ರಕ್ಷಣಾ ಸಿಬ್ಬಂದಿಗೆ ಕೋವಿಡ್-19 ಲಸಿಕೆಯನ್ನು ನೀಡಲಾಯಿತು.

    ರಾಜಧಾನಿ ದೆಹಲಿಯ ಒಟ್ಟು 81 ಸ್ಥಳಗಳಲ್ಲಿ ಕೋವಿಡ್-19 ವ್ಯಾಕ್ಸಿನ್ ನೀಡಲು ದೆಹಲಿ ಸರ್ಕಾರ ಘೋಷಿಸಿತ್ತು. ಇದರಲ್ಲಿ ಎನ್‍ಡಿಎಂಸಿ ಚಾರಕ್ ಪಾಲಿಕ್ ಆಸ್ಪತ್ರೆಯ ಇಬ್ಬರು ಮಹಿಳಾ ಸಿಬ್ಬಂದಿಗಳ ಮೇಲೆ ಕೋವಿಡ್-19 ಲಸಿಕೆ ಅಡ್ಡಪರಿಣಾಮ ಬೀರಿದ್ದು, ಉಸಿರಾಟ ತೊಂದರೆಯಿಂದ ಒದ್ದಾಡಿದ್ದರು. ಹಾಗಾಗಿ ಅವರನ್ನು ತೀವ್ರ ನಿಗಾ ಕೊಠಡಿಯಲ್ಲಿ ಇರಿಸಲಾಯಿತು. 30 ನಿಮಿಷಗಳ ಬಳಿಕ ಸಹಜ ಸ್ಥಿತಿಗೆ ಬಂದ ಮೇಲೆ ಅವರನ್ನು ಡಿಸ್ಚಾರ್ಜ್ ಮಾಡಲಾಯಿತು ಎಂದು ದೆಹಲಿ ಪುರಸಭಾ ಅಧಿಕಾರಿ ತಿಳಿಸಿದ್ದಾರೆ.

    ವರದಿಯಲ್ಲಿ ಮೋಟಿ ಬೇಗ್ ಬಳಿ ಇರುವ ಚರಕ್ ಪಾಲಿಖ್ ಆಸ್ಪತ್ರೆಯು ದೆಹಲಿಯ 7 ಜಿಲ್ಲಾ ಆಸ್ಪತ್ರೆಗಳು ಮತ್ತು ದೆಹಲಿ ಸಿಟಿಯ 81 ಆಸ್ಪತ್ರೆಗಳಲ್ಲಿ ಒಂದಾಗಿದ್ದು, ಒಟ್ಟು ಚರಕ್ ಪಾಲಿಖ್ ಆಸ್ಪತ್ರೆಯಲ್ಲಿ 43 ಸಿಬ್ಬಂದಿಗೆ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಯಿತು ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ.

    ಶನಿವಾರ ಬೆಳಗ್ಗೆ 10.30ಕ್ಕೆ ಐತಿಹಾಸಿಕ ಕೋವಿಡ್-19 ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಶನಿವಾರ ದೇಶಾದ್ಯಂತ ಒಟ್ಟು 1,91,181 ಆರೋಗ್ಯರಕ್ಷಣಾ ಸಿಬ್ಬಂದಿ ಕೋವಿಡ್-19 ಲಸಿಕೆ ಪಡೆದುಕೊಂಡಿದ್ದಾರೆ. ವ್ಯಾಕ್ಸಿನೇಷನ್ ನೀಡಿದ ನಂತರ ಇಲ್ಲಿಯವರೆಗೂ ಆಸ್ಪತ್ರೆಗಳಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.