Tag: Siddhartha

  • ಬುದ್ಧನಾಗಲು ಹೊರಟ ನನ್ನ ಗೆಳೆಯ ಸಿದ್ಧಾರ್ಥ- ಬಳ್ಳಾರಿ ಐಜಿಯಿಂದ ಭಾವನಾತ್ಮಕ ಪತ್ರ

    ಬುದ್ಧನಾಗಲು ಹೊರಟ ನನ್ನ ಗೆಳೆಯ ಸಿದ್ಧಾರ್ಥ- ಬಳ್ಳಾರಿ ಐಜಿಯಿಂದ ಭಾವನಾತ್ಮಕ ಪತ್ರ

    ಬಳ್ಳಾರಿ: ಬುದ್ಧನಾಗಲು ಹೊರಟ ನನ್ನ ಗೆಳೆಯ ಸಿದ್ಧಾರ್ಥ್ ಎಂದು ಬಳ್ಳಾರಿ ವಲಯದ ಐಜಿ ನಂಜುಂಡಸ್ವಾಮಿ ಅಗಲಿದ ಗೆಳೆಯನಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದು ಸಂತಾಪ ಸೂಚಿಸಿದ್ದಾರೆ.

    ಈ ಪತ್ರದಲ್ಲಿ ಸಿದ್ಧಾರ್ಥ್ ಅವರನ್ನು ಭೇಟಿಯಾದ ದಿನಗಳು ಮತ್ತು ಅವರ ವ್ಯಕ್ತಿತ್ವದ ಬಗ್ಗೆ ಅಪಾರವಾಗಿ ಹೇಳಿಕೊಂಡಿರುವ ನಂಜುಂಡಸ್ವಾಮಿ ತನ್ನ ಗೆಳೆಯ ಆತ್ಮಹತ್ಯೆ ಮಾಡಿಕೊಳ್ಳವಂತಹ ವ್ಯಕ್ತಿಯಲ್ಲ ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.

    ಪತ್ರದಲ್ಲೇನಿದೆ?
    ಸಿದ್ಧಾರ್ಥ ಅವರನ್ನು ನಾನು ಮೊದಲು ನೋಡಿದ್ದು ಅವರ ಮೊದಲ ಕಾಫಿ ಡೇ ಅಂಗಡಿಯಲ್ಲಿ. ನನ್ನ ಗೆಳೆಯ ಶಶಿಕುಮಾರ್ ಮತ್ತು ನಾನು ಒಂದು ರಾತ್ರಿ ಊಟ ಮಾಡಿದ ನಂತರ ಕಾಫಿ ಡೇಗೆ ಹೋದಾಗ, ಆಗ ಅದೊಂದೆ ಕಾಫಿ ಡೇ ಆಗಿತ್ತು. ಶಶಿ ಮೋಹನ್ ನನಗೆ ಸಿದ್ಧಾರ್ಥ ಅವರನ್ನು ಪರಿಚಯ ಮಾಡಿಸಿದ.

    ನಾನು ಆಗ ತಾನೇ ಪೊಲೀಸ್ ಅಕಾಡೆಮಿಯಿಂದ ತರಬೇತಿ ಮುಗಿಸಿಕೊಂಡು ಬೆಂಗಳೂರಿಗೆ ಬಂದಿದ್ದೆ. ಆಗ ನನಗೆ ಬೆಂಗಳೂರು ಜೀವನ ಹೊಸದಾಗಿತ್ತು. ಸಿದ್ಧಾರ್ಥ್ ಅಂದು ಕೆಫೆ ಡೇಯಲ್ಲಿ ಕೆಲಸ ಮಾಡುವ ಹುಡುಗರಂತೆ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್, ಟೀ-ಶರ್ಟ್ ಧರಿಸಿದ್ದ. ಮೊದಲನೇ ಭೇಟಿಯಲ್ಲೇ ನಾವಿಬ್ಬರು ಬಹಳ ಮಾತನಾಡಿದ್ದೇವು. ಆಗ ಅವರ ಮಾವ ಎಸ್.ಎಂ ಕೃಷ್ಣ ಮುಖ್ಯಮಂತ್ರಿಯಾಗಿರಲಿಲ್ಲ. ಸಿದ್ಧಾರ್ಥ್ ಹಳೆಯ ಗೆಳೆಯನಂತೆ ನನ್ನ ಜೊತೆ ತುಂಬಾ ಹೊತ್ತು ಖುಷಿಯಾಗಿ ಮಾತನಾಡುತ್ತಿದ್ದರು. ಅವರು ತಮ್ಮ ಕಾಫಿ ಡೇಯನ್ನು ಪ್ರಪಂಚದ ಶ್ರೇಷ್ಠ ಕಾಫಿ ಅಂಗಡಿಯ ಸರಪಣಿ (chain of restaurant) ಮಾಡುವುದಾಗಿ ಹೇಳುತ್ತಿದ್ದರು. ಸಿದ್ಧಾರ್ಥ್ ಅಂದು ಕಂಡಿದ್ದ ಕನಸುಗಳ ನನಸು ಮಾಡುತ್ತಲೇ ಸಾಗಿದವರು. ಅವರು ಪರಿಚಯವಾದ ಮೇಲೆ ನಾವು ತುಂಬಾ ಸಲ ಬೇರೆ-ಬೇರೆ ಕಡೆ ಭೇಟಿ ಆಗಿದ್ದೇನೆ.

    ಸಿದ್ಧಾರ್ಥ್ ಒಂದು ಬಾರಿ ಅವರ ಸ್ವಂತ ಊರಾದ ಚೇತನಹಳ್ಳಿಯಲ್ಲಿ ಒಂದು ಭವ್ಯವಾದ ಡಿನ್ನರ್ ವ್ಯವಸ್ಥೆ ಮಾಡಿದ್ದರು. ಆಗ ನಾನು ಹಾಸನದಲ್ಲಿ ಎಸ್‍ಪಿ ಆಗಿದ್ದೆ. ಆಗ ಸನ್ಮಾನ್ಯ ಎಸ್.ಎಂ. ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಸಿದ್ಧಾರ್ಥ ಅವರು ಉತ್ತಮ ರೀತಿಯಲ್ಲಿ ತಮ್ಮ ಎಲ್ಲಾ ಅತಿಥಿಗಳನ್ನು ಸತ್ಕರಿಸುತ್ತಿದ್ದರು. ನನಗೆ ತಮ್ಮ ಹಳೆಯ ಭವ್ಯವಾದ ಬ್ರಿಟಿಷ್ ಕಾಲದ ಮನೆಯನ್ನು ಸುತ್ತಾಡಿಸಿ ತೋರಿಸಿದರು. ಬ್ರಿಟಿಷ್ ಕಾಫಿ ತೋಟ ಸ್ವಾತಂತ್ರ್ಯ ನಂತರ ತಮ್ಮ ಮನೆತನದ ಒಡೆತನಕ್ಕೆ ಹೇಗೆ ಬಂತು ಎಂದು ತಿಳಿಸಿದರು.

    ಸಿದ್ಧಾರ್ಥ್ ಅವರಲ್ಲಿ ಅದಮ್ಯ ಸಾಹಸದ ಮನೋಭಾವನೆ ಇತ್ತು. ಅವರ ಕಂಡಾಗಲೆಲ್ಲ ನಾನು ಇವರರಂತೆ ಆಗಬೇಕು ನಾನು ತುಂಬಾ ಆಕ್ಟೀವ್ ಆಗಿ ಚೇತನ ಶೀಲನಾಗಿರಬೇಕು ಎಂದುಕೊಳ್ಳುತ್ತಿದ್ದೆ. ಅಂತಹ ವ್ಯಕ್ತಿ ನನ್ನ ಭಾಷಣ-ಬರಹಗಳ ಅಭಿಮಾನಿಯಾಗಿದ್ದರು. ಅವರ ತಂದೆ ಮತ್ತು ನಾನು ಒಂದು ಬಾರಿ ಪೂರ್ಣ ಪ್ರಜ್ಞಾ ಶಾಲೆಯ ಸಮಾರಂಭದಲ್ಲಿ ಭಾಗವಹಿಸಿದ್ದೇವು. ನನ್ನ ಭಾಷಣ ಮುಗಿದ ಮೇಲೆ ಅವರ ತಂದೆ ನಿಮ್ಮ ಮಾತು ಕೇಳಿದರೆ ನಾನು ಒಮ್ಮೆ ದ.ರಾ ಬೇಂದ್ರೆ ಅವರ ಭಾಷಣ ಕೇಳಿದ್ದೆ ಅವರಂತೆ ನೀವು ಮಾತನಾಡುತ್ತೀರಿ. ನಮ್ಮ ಸಿದ್ಧಾರ್ಥ ನಿಮ್ಮ ಭಾಷಣಗಳ ಅಭಿಮಾನಿ ಎಂದಿದ್ದರು. ಆಗ ನಾನು ನಿಮ್ಮೊಡನೆ ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ ಅದ್ದರಿಂದ ನನಗೆ ಒಳ್ಳೆಯ ಭಾಷಣ ಒಳ್ಳೆಯ ಮಾತುಗಾರರ ಕೇಳುವ ಭಾಗ್ಯ ಇವತ್ತು ನನಗಿದೆ ಎಂದಿದ್ದರು.

    ಸಿದ್ಧಾರ್ಥ್ ನಿಜವಾಗಿಯೂ ಬುದ್ಧನಾಗುವ ಮೊದಲು ಆ ಸಿದ್ಧಾರ್ಥನಂತೆ ಮಾನವೀಯತೆ ರಾಜಕಳೆಯಿಂದ ಬದುಕಿದ. ಆದರೆ ಇಂದು ಕಳೆಬರವಾಗಿದ್ದಾನೆ. ಈ ಸಿದ್ಧಾರ್ಥ ಬುದ್ಧನಾಗಲು ಹೊರಟ್ಟಿದ್ದ ಆತನಲ್ಲಿ ಈ ಪ್ರಪಂಚದ ಸಾವಿರಾರು ಸತ್ಯಗಳು ಉಳಿದು ಬಿಟ್ಟಿದ್ದವು. ಆತನು ಸಹ ಆ ಸತ್ಯಗಳನ್ನು ಈ ಪ್ರಪಂಚಕ್ಕೆ ತಿಳಿಸಲು ಹಪಹಪಿಸುತ್ತಿದ್ದ. ತನ್ನ ಅರಿವಿಗೆ ಬಂದ ಸತ್ಯಗಳ ತಿಳಿಸುವ ಮೊದಲೇ ಬುದ್ಧನಾಗುವ ದಾರಿಯಲ್ಲಿ ನಡೆದು ಬಿಟ್ಟ.

    ಆತನ ಮನದೊಳಗಿದ್ದ ಆ ಸತ್ಯಗಳೆಲ್ಲ ಹೊರಕ್ಕೆ ಬರಬೇಕು ಆತನ ಈ ಅಕಾಲಿಕ ಸಾವಿಗೆ ಕಾರಣಗಳ ಕಂಡುಹಿಡಿಯಲೇ ಬೇಕು ಯಾವ ವ್ಯಕ್ತಿ, ಸಂಘ, ಸಂಸ್ಥೆ, ಇಲಾಖೆಗಳಿಂದ ನೊಂದಿದ್ದ. ಆತ ಈ ನಿರ್ಧಾರ ತೆಗೆದುಕೊಳ್ಳಲು ಇದ್ದ ಕಾರಣ ಹೊರಬರಬೇಕಾಗಿದೆ. ನಮ್ಮ ಕಾಫಿ ಡೇ ಸಿದ್ಧಾರ್ಥ ಬುದ್ಧನಾಗಲೇ ಹೊರಟವನು. ತನ್ನ ತತ್ವ ಸಿದ್ಧಾಂತಗಳಿಗೆ ಅಂಟಿಕೊಂಡವನು. ಆತನೇ ಹೀಗಾದ ಎಂದರೆ ಆತನನ್ನು ನಂಬಿದ್ದವರಿಗೆ, ಆತನನ್ನು ಆದರ್ಶವಾಗಿ ಕಂಡವರಿಗೆ ನೋವಾಗಿದೆ. ಇದರ ಸಂಪೂರ್ಣ ತನಿಖೆ ಆಗಲಿ ಸತ್ಯ ಹೊರ ಬರಲಿ ಸಿದ್ಧಾರ್ಥ ಬುದ್ಧನಾಗಲು ಹೋದ ಆತ ನನಗೆ ಎಂದಿಗೂ ಬುದ್ಧನೇ.

  • ಆತ್ಮವಿಶ್ವಾಸದ ಪ್ರತೀಕವಾಗಿದ್ದ ಸಿದ್ಧಾರ್ಥಣ್ಣ ಆತ್ಮಹತ್ಯೆ ಮಾಡಿದ್ದನ್ನು ನಂಬಕ್ಕಾಗ್ತಿಲ್ಲ- ಸಿ.ಟಿ ರವಿ

    ಆತ್ಮವಿಶ್ವಾಸದ ಪ್ರತೀಕವಾಗಿದ್ದ ಸಿದ್ಧಾರ್ಥಣ್ಣ ಆತ್ಮಹತ್ಯೆ ಮಾಡಿದ್ದನ್ನು ನಂಬಕ್ಕಾಗ್ತಿಲ್ಲ- ಸಿ.ಟಿ ರವಿ

    – ಕಾಫಿ ಡೇ ನಿರ್ದೇಶಕರಲ್ಲಿ ವಿನಂತಿ

    ಚಿಕ್ಕಮಗಳೂರು: ಸೋಮವಾರ ಸಂಜೆಯಿಂದ ಕಾಣೆಯಾಗಿದ್ದ ಕಾಫಿ ಸಾಮ್ರಾಟ ವಿ.ಜಿ ಸಿದ್ಧಾರ್ಥ್ ಅವರ ಮೃತದೇಹ ಇಂದು ಮಂಗಳೂರಿನ ಹೊಯಿಗೆ ಬಜಾರಿನಲ್ಲಿ ಪತ್ತೆಯಾಗಿದೆ. ಈ ಕುರಿತು ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಅವರು ಸಂತಾಪ ಸೂಚಿಸಿದ್ದಾರೆ.

    ವಿಡಿಯೋ ಮೂಲಕ ಮಾತನಾಡಿದ ಅವರು ಸಿದ್ಧಾರ್ಥಣ್ಣ ಕುಟುಂಬಕ್ಕೆ, ಅವರನ್ನೇ ನಂಬಿದ ಸಾವಿರಾರು ಜನರಿಗೆ ಹಾಗೂ ಅಭಿಮಾನಿಗಳಿಗೆ ಸಿದ್ಧಾರ್ಥಣ್ಣನ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದರು.

    ಸಿಟಿ ರವಿ ಹೇಳಿದ್ದೇನು?:
    ಸಿದ್ಧಾರ್ಥಣ್ಣ ತನ್ನ ಜೀವನದಲ್ಲಿ ಯಾರಿಗೂ ಕೆಟ್ಟದ್ದನ್ನು ಬಯಸಿಲ್ಲ, ಮಾಡಿಲ್ಲ. ಅವರಿಂದ ಇಂದು ಸಾವಿರಾರು ಜನ ಬದುಕು ಕಂಡುಕೊಂಡಿದ್ದಾರೆ. ಎಲ್ಲೋ ಬದುಕಿ ಬರಬಹುದೆಂಬ ವಿಶ್ವಾಸ ಇಂದು ಹುಸಿಯಾಗಿದೆ. ಸಿದ್ಧಾರ್ಥಣ್ಣ ಶವವಾಗಿ ಹೊರಗೆ ಬಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಸಾವಿರಾರು ಜನ ಜನಸಾಮಾನ್ಯರಿಗೆ ಮಾತ್ರವಲ್ಲ, ನನ್ನಂತವರಿಗೂ ಬೆನ್ನೆಲುಬಾಗಿ ನಿಂತು ನನ್ನ ರಾಜಕೀಯ ಬೆಳವಣಿಗೆಗೆ ಸಹಕರಿಸಿ ಬೆನ್ನು ತಟ್ಟಿದ್ದಾರೆ. ಅಲ್ಲದೆ ಆಗಾಗ ಪ್ರೊಫೈಲ್ ಚೆನ್ನಾಗಿ ಇಟ್ಟುಕೊಳ್ಳಬೇಕು ನಿಮಗೆಲ್ಲ ಭವಿಷ್ಯವಿದೆ. ಯಾವ ಕಾರಣಕ್ಕೂ ಹೆಸರು ಕೆಡಿಸಿಕೊಳ್ಳಬಾರದು ಎಂದು ಕರೆದು ಮಾತನಾಡುತ್ತಿದ್ದರು. ಇಂತಹ ಅಣ್ಣ ಇನ್ನಿಲ್ಲ ಎಂದು ನಂಬುವಂತಹ ಸ್ಥಿತಿಯಲ್ಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವವರ ಬಗ್ಗೆ ಜಿಗುಪ್ಸೆ ತೋರಿಸುತ್ತಿದ್ದಂತಹ, ಆತ್ಮವಿಶ್ವಾಸದ ಪ್ರತೀಕವಾಗಿದ್ದಂತಹ ಸಿದ್ಧಾರ್ಥಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋದೇ ನಂಬಕ್ಕಾಗದಿರುವಂತಹ ಸಂಗತಿಯಾಗಿದೆ ಎಂದಿದ್ದಾರೆ.

    ನಾವು ಮಕ್ಕಳಿಗೂ ಸಿದ್ಧಾರ್ಥಣ್ಣನೇ ರೋಲ್ ಮಾಡೆಲ್, ಅವರಂತೆ ನೀವೂ ಆಗಿ ಎಂದು ಹೇಳುತ್ತಿದ್ದೆವು. ಸಾವಿರಾರು ಜನರಿಗೆ ಬದುಕು ಕೊಟ್ಟು ತನ್ನ ಬದುಕಿನ ಕಥೆಯನ್ನು ತಾನೇ ಮುಗಿಸಿಕೊಂಡ ಸಿದ್ಧಾರ್ಥಣ್ಣ ಇನ್ನಿಲ್ಲವಾಗಿದ್ದಾರೆ. ಅವರ ಕುಟುಂಬಕ್ಕೆ, ಅವರನ್ನೇ ನಂಬಿದ ಸಾವಿರಾರು ಜನರಿಗೆ, ಅಭಿಮಾನಿಗಳಿಗೆ ಸಿದ್ಧಾರ್ಥಣ್ಣನ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.

    ಸಿದ್ಧಾರ್ಥಣ್ಣ ಆತ್ಮ ವಿಶ್ವಾಸದ ಪ್ರತೀಕವಾಗಿ ಮತ್ತೆ ಹುಟ್ಟಿ ಬರಬೇಕು. ಅವರು ಬೆಳೆಸಿದ ಕಾಫಿ ಡೇ ಕೊನೆಯಾಗಬಾರದು. ಅದನ್ನು ಮುನ್ನಡೆಸುವ ಕೆಲಸವನ್ನು ನಿರ್ದೇಶಕರು ಮಾಡಬೇಕು ಎಂದು ವಿನಂತಿಸಿಕೊಂಡರು.

    https://www.youtube.com/watch?v=6uimTfq4xXo

  • ಸಿದ್ಧಾರ್ಥ್ ಸಾವಿಗೆ ಕಾರಣ ಯಾರು?- ಚರ್ಚೆಗೆ ಕಾಂಗ್ರೆಸ್ ಪಟ್ಟು

    ಸಿದ್ಧಾರ್ಥ್ ಸಾವಿಗೆ ಕಾರಣ ಯಾರು?- ಚರ್ಚೆಗೆ ಕಾಂಗ್ರೆಸ್ ಪಟ್ಟು

    ಬೆಂಗಳೂರು: ಕಾಫಿ ಸಾಮ್ರಾಟ ಸಿದ್ಧಾರ್ಥ್ ಸಾವಿಗೆ ಯಾರು ಕಾರಣ ಎಂಬುದಾಗಿ ಚರ್ಚೆಯಾಗಬೇಕು ಎಂದು ಕಾಂಗ್ರೆಸ್ ಪಕ್ಷ ಪಟ್ಟು ಹಿಡಿದೆ.

    ಐಟಿ ಅಧಿಕಾರಿಗಳ ಕಿರಿಕುಳದಿಂದ ಸಿದ್ಧಾರ್ಥ್ ಮೃತಪಟ್ಟಿದ್ದಾರೆ. ಈ ಬಗ್ಗೆ ಚರ್ಚೆ ಆಗಲೇಬೇಕು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಮನೀಷ್ ತಿವಾರಿ ನೋಟಿಸ್ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಇತ್ತ ವಿಧಾನಸಭೆಯಲ್ಲಿಯೂ ಕಾಂಗ್ರೆಸ್-ಜೆಡಿಎಸ್ ಪ್ರತಿಭಟನೆಗೆ ನಿರ್ಧಾರ ಮಾಡಿವೆ. ಐಟಿ ಡಿಜಿ ಬಾಲಕೃಷ್ಣ ಅವರ ಕಿರುಕುಳದಿಂದ ಸಿದ್ಧಾರ್ಥ್ ಸಾವಿಗೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಕೃಷ್ಣನ್ ವಿರುದ್ಧ ತನಿಖೆಗೆ ಪಟ್ಟು ಹಿಡಿದು ದೋಸ್ತಿಗಳು ಪ್ರತಿಭಟನೆ ನಡೆಸಲಿದ್ದಾರೆ.

    ಸಿದ್ಧಾರ್ಥ್ ನಾಪತ್ತೆ, ಶವ ಪತ್ತೆ:
    ವ್ಯವಹಾರ ನಿಮಿತ್ತ ಸಿದ್ಧಾರ್ಥ್ ಅವರು ತಮ್ಮ ಕಾರಿನಲ್ಲಿ ಸೋಮವಾರ ಚಿಕ್ಕಮಗಳೂರಿಗೆ ತೆರಳಿದ್ದರು. ಅಲ್ಲಿಂದ ಮಂಗಳೂರಿಗೆ ಹೋಗಿದ್ದರು. ಕೇರಳಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಜಪ್ಪಿನಮೊಗರು ಎಂಬಲ್ಲಿ ನೇತ್ರಾವತಿ ಸೇತುವೆ ಇದ್ದು, ಇಲ್ಲಿಗೆ ತಲುಪುತ್ತಿದ್ದಂತೆ ಕಾರನ್ನು ನಿಲ್ಲಿಸಲು ಚಾಲಕನಿಗೆ ಹೇಳಿದ್ದಾರೆ. ಬಳಿಕ ಕಾರಿನಿಂದ ಇಳಿದು ಅವರು ಫೋನಿನಲ್ಲಿ ಮಾತನಾಡುತ್ತಾ ಹೋಗಿದ್ದಾರೆ. ಆದರೆ ಅರ್ಧ ಗಂಟೆಯಾದರೂ ಸಿದ್ಧಾರ್ಥ್ ಅವರು ವಾಪಸ್ ಬರದೇ ಇದ್ದುದನ್ನು ಕಂಡು ಗಾಬರಿಯಾದ ಚಾಲಕ ಅವರಿಗೆ ಫೋನ್ ಮಾಡಿದ್ದಾನೆ. ಈ ವೇಳೆ ಅವರ ಫೋನ್ ಸ್ವಿಚ್ ಆಫ್ ಆಗಿದ್ದು ಗಮನಕ್ಕೆ ಬಂದಿದೆ.

    ಕಾರು ಚಾಲಕ ತಕ್ಷಣ ಈ ವಿಚಾರವನ್ನು ಸಿದ್ಧಾರ್ಥ್ ಮನೆಯವರಿಗೆ ತಿಳಿಸಿದ್ದಾರೆ. ಸಿದ್ಧಾರ್ಥ್ ಅವರು ಕಾರಿನಿಂದ ಇಳಿದ ಜಪ್ಪಿನ ಮೊಗರು ಪ್ರದೇಶ ನೇತ್ರಾವತಿ ನದಿ ತಟದಲ್ಲೇ ಇರುವುದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿತ್ತು. ಕಾರು ಚಾಲಕನಿಂದ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸಿದ್ಧಾರ್ಥ್ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದರು. ಸೋಮವಾರ ರಾತ್ರಿಯಿಂದ ಮಂಗಳವಾರ ತಡರಾತ್ರಿವರೆಗೂ ಭರದಿಂದ ಕಾರ್ಯಾಚರಣೆ ನಡೆಸಲಾಗಿತ್ತು. ಆ ಬಳಿಕ ನಿನ್ನೆ ರಾತ್ರಿ ಶೋಧ ಕಾರ್ಯವನ್ನು ಸ್ಥಗಿತಗೊಳಿಸಲಾಗಿದ್ದು, ಇಂದು ಮುಂಜಾನೆ 4 ಗಂಟೆ ಸುಮಾರಿಂದ ಮತ್ತೆ ಕಾರ್ಯಾಚರಣೆ ನಡೆಸಲಾಗುತ್ತಿತ್ತು.

    ಈ ಮಧ್ಯೆ ಹೊಯಿಗೆ ಬಜಾರ್ ಎಂಬಲ್ಲಿ ಮೀನುಗಾರರು ಮೀನು ಹಿಡಿಯಲೆಂದು ದೋಣಿಯಲ್ಲಿ ಹೋಗುತ್ತಿದ್ದಾಗ ಶವ ತೇಲುತ್ತಿರುವುದು ಕಂಡು ಬಂದಿತ್ತು. ಹೀಗಾಗಿ ಅವರು ಅನುಮಾನದಿಂದ ಶವವನ್ನು ದೋಣಿಯ ಬದಿಯಲ್ಲಿ ಹಿಡಿದುಕೊಂಡು ದಡ ತಲುಪಿಸಿ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸಿದ್ಧಾರ್ಥ್ ಮೃತದೇಹ ಎಂದು ಪತ್ತೆ ಮಾಡಿದ್ದಾರೆ.

    https://www.youtube.com/watch?v=BQmhqZ2hknQ

  • ಚಿಕ್ಕಮಗಳೂರಿನಲ್ಲಿ ಸಿದ್ಧಾರ್ಥ್ ಅಂತ್ಯಕ್ರಿಯೆ

    ಚಿಕ್ಕಮಗಳೂರಿನಲ್ಲಿ ಸಿದ್ಧಾರ್ಥ್ ಅಂತ್ಯಕ್ರಿಯೆ

    ಮಂಗಳೂರು/ಚಿಕ್ಕಮಗಳೂರು: ವೆನ್ ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕಾಫಿ ಕಿಂಗ್ ಸಿದ್ದಾರ್ಥ್ ಅವರ ಪಾರ್ಥಿವ ಶರೀರವನ್ನು ಚಿಕ್ಕಮಗಳೂರಿಗೆ ರವಾನೆ ಮಾಡಲಾಗುತ್ತಿದೆ.

    11 ಗಂಟೆಗೆ ಸುಮಾರಿಗೆ ಮೃತದೇಹ ಚಿಕ್ಕಮಗಳೂರಿಗೆ ರವಾನೆಯಾಗುತ್ತಿದ್ದು, ಎರಡು ಕಡೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಲ್ಲಿ ಕಾಫಿ ಡೇ ಸಿಬ್ಬಂದಿ ದರ್ಶನದ ಬಳಿಕ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

    ಬೇಲೂರು ಚೇತನಹಳ್ಳಿಯ ಸಿದ್ಧಾರ್ಥ್ ಕಾಫಿ ಎಸ್ಟೇಟ್ ಹಾಗೂ ಎಬಿಸಿ ಕಾಫಿ ಕ್ಯೂರಿಂಗ್ ಆವರಣದಲ್ಲಿಯೂ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ನೌಕರರು ಹಾಗೂ ಕುಟುಂಬಸ್ಥರ ಅಂತಿಮ ದರ್ಶನದ ಬಳಿಕ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರುವ ಸಾಧ್ಯೆತೆಗಳಿವೆ.

    ಸೋಮವಾರ ಸಂಜೆಯಿಂದ ಮಂಗಳೂರಿನ ನೇತ್ರಾವತಿ ನದಿ ಸೇತುವೆಯ ಬಳಿಯಿಂದ ಕಾಣೆಯಾಗಿದ್ದ ಸಿದ್ದಾರ್ಥ್ ಅವರಿಗಾಗಿ ಸತತ 36 ಗಂಟೆಗಳ ಕಾಲ ಹುಡುಕಾಟ ನಡೆಸಲಾಗಿತ್ತು. ಆದರೆ ಇದೀಗ ಅವರ ಮೃತದೇಹ ನೇತ್ರಾವತಿಯ ಹಿನ್ನೀರಿನಲ್ಲಿ ಪತ್ತೆಯಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಕಾಫಿ ಡೇ ನೌಕಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    https://www.youtube.com/watch?v=i3MTQLbm1KE

  • ಸಿದ್ಧಾರ್ಥ್ ಮೃತದೇಹ ಪತ್ತೆ ಮಾಡಿದ ಮೀನುಗಾರ ಹೇಳಿದ್ದೇನು?

    ಸಿದ್ಧಾರ್ಥ್ ಮೃತದೇಹ ಪತ್ತೆ ಮಾಡಿದ ಮೀನುಗಾರ ಹೇಳಿದ್ದೇನು?

    ಮಂಗಳೂರು: ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದ್ದು, ಸ್ಥಳೀಯ ಮೀನುಗಾರ ರಿತೇಶ್ ಎಂಬವರು ಅನುಮಾನದ ಮೇರೆಗೆ ಡೆಡ್ ಬಾಡಿಯನ್ನು ದಡಕ್ಕೆ ತಂದಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಮೀನು ಹಿಡಿಯುವ ಕಾರ್ಯದಲ್ಲಿದ್ದೆವು. ಹೀಗೆ ಹೋಗುವಾಗ ನದಿ ಮಧ್ಯದಲ್ಲಿ ಮೃತದೇಹ ತೇಲುತ್ತಿರುವುದು ಕಂಡುಬಂತು ಎಂದರು.

    ಮೀನು ಹಿಡಿಯಲು ಮೂವರು ದೋಣಿಯಲ್ಲಿ ಹೋಗುತ್ತಿದ್ದೆವು. ಮೃತದೇಹ ತೇಲುತ್ತಿರುವುದನ್ನು ಕಂಡು ಇದು ಸಿದ್ಧಾರ್ಥ್ ಅವರದ್ದೇ ಆಗಿರಬಹುದೆಂದು ಅನುಮಾನದಲ್ಲಿ ದೋಣಿಯ ಬದಿಯಲ್ಲಿ ಶವವನ್ನು ಹಿಡಿದುಕೊಂಡು ದಡಕ್ಕೆ ತಂದಿದ್ದೇವೆ. ಆ ನಂತರ ಪೊಲೀಸರಿಗೆ ತಿಳಿಸಿದ್ದೇವೆ. ತಕ್ಷಣವೇ ರೌಂಡ್ಸ್ ನಲ್ಲಿರುವ ಪೊಲೀಸರಿಬ್ಬರು ಬಂದರು. ಅವರು ತಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ ನಂತರ ಅವರೆಲ್ಲ ಬಂದಿದ್ದಾರೆ ಎಂದು ರಿತೇಶ್ ತಿಳಿಸಿದ್ದಾರೆ.

    ನದಿಗೆ ಹಾರಿದ್ದಾರೆ ಎಂಬ ಸ್ಥಳದಿಂದ ಮೃತದೇಹ ಸಿಕ್ಕಿದ ಜಾಗಕ್ಕೆ ಸುಮಾರು 4-5 ಕಿ.ಮೀ ದೂರವಿದೆ. ಅಲ್ಲಿ ಮೃತದೇಹ ಸಿಕ್ಕಿದೆ. ನಿನ್ನೆ ಮೀನುಗಾರಿಕಾ ಸಂಸ್ಥೆಯಿಂದ ಕರೆ ಬಂದಿತ್ತು. ಸ್ಥಳೀಯರಾಗಿರುವ ನಮಗೆ ಶೋಧ ಕಾರ್ಯ ಮಾಡಬೇಕೆಂಬ ಸೂಚನೆ ನೀಡಲಾಗಿತ್ತು. ಹೀಗಾಗಿ 4 ದೋಣಿಗಳ ಮೂಲಕ ತೆರಳಿ ನಿನ್ನೆ ಹುಡುಕಾಡಿದ್ದೇವೆ ಅಂದರು.

    ಅವರು ಹಾರಿದ ಭಾಗದಲ್ಲಿ 20-25 ಅಡಿ ಆಳವಿದ್ದು, ಮೃತದೇಹ ಸಿಕ್ಕಿದ ಭಾಗದಲ್ಲಿ 5-6 ಅಡಿ ಆಳವಿರಬಹುದು. ನೀರಿನೊಳಗೆ ಬಿದ್ದ ದೇಹ 18-24 ಗಂಟೆ ಮೇಲೆ ಬರಲು ಬೇಕಾಗುತ್ತದೆ ಎಂಬುದು ನಮ್ಮ ಅಂದಾಜು. ಇಷ್ಟು ಗಂಟೆಯ ಬಳಿಕ ಮೃತದೇಹ ಊದಿಕೊಳ್ಳುತ್ತದೆ. ಹೀಗಾಗಿ ಅದು ನೀರಿನಿಂದ ಮೇಲೆ ಬರುತ್ತವೆ. ಸಿದ್ದಾರ್ಥ್ ಅವರನ್ನು ಪತ್ತೆ ಹಚ್ಚಿದ್ದಕ್ಕಾಗಿ ಪೊಲೀಸ್ ಇಲಾಖೆ ಹಾಗೂ ಶಾಸಕ ಯು.ಟಿ ಖಾದರ್ ಅವರು ನಮಗೆ ಧನ್ಯವಾದ ತಿಳಿಸಿದ್ದಾರೆ ಎಂದರು.

    ಸೋಮವಾರ ತಡರಾತ್ರಿಯಿಂದ ಮಂಗಳವಾರ ತಡಾತ್ರಿವರೆಗೆ ಶೋಧ ಕಾರ್ಯ ನಡೆಸಲಾಗಿದ್ದು, ಆ ಬಳಿಕ ಸ್ಥಗಿತಗೊಳಿಸಲಾಗಿತ್ತು. ಇಂದು ಮುಂಜಾನೆ 4 ಗಂಟೆ ಸುಮಾರಿನಿಂದ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಮಧ್ಯೆ ಹೊಯಿಗೆ ಬಜಾರ್ ಎಂಬ ಪ್ರದೇಶದ ನದಿಭಾಗದಲ್ಲಿ ಮೃತದೇಹ ಪತ್ತೆಯಾಗಿದೆ. ಒಟ್ಟಿನಲ್ಲಿ 36 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಇದೀಗ ಸಿದ್ಧಾರ್ಥ್ ಪತ್ತೆಯಾಗಿದ್ದಾರೆ. ಮೃತದೇಹವನ್ನು ನಗರದ ವೆನ್ ಲಾಕ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

     

  • ಸಿದ್ಧಾರ್ಥ್ ಮೃತ ದೇಹ ಪತ್ತೆ

    ಸಿದ್ಧಾರ್ಥ್ ಮೃತ ದೇಹ ಪತ್ತೆ

    ಮಂಗಳೂರು: ಕೆಫೆ ಕಾಫಿ ಡೇ ಓನರ್ ಸಿದ್ಧಾರ್ಥ್ ಅವರ ಮೃತದೇಹ ಪತ್ತೆಯಾಗಿದೆ.

    ಸೋಮವಾರ ತಡರಾತ್ರಿಯಿಂದ ಮಂಗಳವಾರ ತಡರಾತ್ರಿವರೆಗೆ ನೇತ್ರಾವತಿ ನದಿ ತಟದಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಆ ಬಳಿಕ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಮಧ್ಯೆ ಹೊಯಿಗೆ ಬಜಾರ್ ಎಂಬ ಪ್ರದೇಶದ ನದಿಭಾಗದಲ್ಲಿ ಮೃತದೇಹ ಪತ್ತೆಯಾಗಿದೆ.

    ಸ್ಥಳೀಯ ಮೀನುಗಾರರು ಗಮನಿಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ 36 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಇದೀಗ ಸಿದ್ಧಾರ್ಥ್ ಪತ್ತೆಯಾಗಿದ್ದಾರೆ.

    ಮಂಗಳಾದೇವಿ ದೇವಸ್ಥಾನದ ಹಿಂಭಾಗದಲ್ಲಿ ರಸ್ತೆಯಿದೆ. ಆ ರಸ್ತೆಯಲ್ಲಿ ಹೊಯಿಗೆ ಬಜಾರ್ ಎಂಬ ಪ್ರದೇಶವಿದೆ. ಇಲ್ಲಿ ನದಿ ಒಂದು ಕಡೆಯಿಂದ ಮಂಗಳೂರು ಬಂದರನ್ನು ತಲುಪುತ್ತದೆ. ಇನ್ನೊಂದು ಕಡೆಯಿಂದ ಸಮುದ್ರವನ್ನು ತಲುಪುತ್ತದೆ. ಈ ಪ್ರದೇಶದಲ್ಲಿ ಸಿದ್ಧಾರ್ಥ್ ಮೃತದೇಹ ಸಿಕ್ಕಿದೆ.

  • ಉದ್ಯಮಿ ಸಿದ್ಧಾರ್ಥ್ ನಾಪತ್ತೆ – ಶೋಧಕಾರ್ಯ ಸ್ಥಗಿತಗೊಳಿಸಿದ ಜಿಲ್ಲಾಡಳಿತ

    ಉದ್ಯಮಿ ಸಿದ್ಧಾರ್ಥ್ ನಾಪತ್ತೆ – ಶೋಧಕಾರ್ಯ ಸ್ಥಗಿತಗೊಳಿಸಿದ ಜಿಲ್ಲಾಡಳಿತ

    ಮಂಗಳೂರು: ಉದ್ಯಮಿ ಸಿದ್ಧಾರ್ಥ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ಕಾರ್ಯಾಚರಣೆ ನಡೆಸಿದ್ದ ಜಿಲ್ಲಾಡಳಿತ  ಶೋಧಕಾರ್ಯವನ್ನು ಸ್ಥಗಿತಗೊಳಿಸಿದೆ. ರಾತ್ರಿ ನೀರಿನ ರಭಸ ಹೆಚ್ಚಾಗಿರುವುದರಿಂದ ಶೋಧಕಾರ್ಯ ಸ್ಥಗಿತಗೊಳಿಸಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸತತ 29 ಗಂಟೆಗಳ ಕಾರ್ಯಾಚರಣೆ ನಡೆಸಲಾಗುತ್ತಿದೆ. ರಾತ್ರಿ 9.30ರ ವೇಳೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಮೂರು ಪೊಲೀಸ್ ಅಧಿಕಾರಿಗಳ ತಂಡ ಪ್ರಕರಣದ ತನಿಖೆ ನಡೆಸಿದೆ. ಇಂದು ಸಂಜೆ ಮಾಹಿತಿ ನೀಡಿದ್ದ ಅಧಿಕಾರಿಗಳು ರಾತ್ರಿ ಪೂರ್ತಿ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದಿದ್ದರು. ಆದರೆ ನೀರಿನ ರಭಸ ಹೆಚ್ಚಾದ ಹಿನ್ನೆಲೆಯಲ್ಲಿ ಬೇರೆ ಯಾವುದೇ ಅವಘಡ ನಡೆಯದಿರುವ ಮುನ್ನೆಚ್ಚರಿಕಾ ಕ್ರಮವಾಗಿ ತೀರ್ಮಾನ ಕೈಗೊಳ್ಳಲಾಗಿದೆ. ಬುಧವಾರ ಬೆಳಿಗ್ಗೆ 6 ಗಂಟೆಯಿಂದ ಮತ್ತೆ ಶೋಧಕಾರ್ಯ ಮುಂದುವರಿಸುವುದಾಗಿ ಜಿಲ್ಲಾಡಳಿತ ವಿವರಣೆ ನೀಡಿದೆ. ಇದನ್ನು ಓದಿ: ಸಿದ್ದಾರ್ಥ್ ಕೊನೆಯ ಮೊಬೈಲ್ ಲೊಕೇಷನ್ ಪತ್ತೆ

    ಪೊಲೀಸ್ ಕಾರ್ಯಾಚರಣೆ ನಡೆಸಿರುವ ಮೂರು ತಂಡಗಳಲ್ಲಿ ಒಂದು ತಂಡ ಸೇತುವೆ ಬಳಿ ಇದ್ದರೆ, ಮತ್ತೆರಡು ತಂಡಗಳು ಬೇರೆ ಬೇರೆ ಆಯಾಮಗಳಲ್ಲಿ ತನಿಖೆಯನ್ನು ಮುಂದುವರಿಸಿದೆ. ಸಿದ್ಧಾರ್ಥ್ ಅವರು ಸೇತುವೆ ಇಂದ ಹಾರಿದ್ದಾರೆ ಎಂಬ ಬಗ್ಗೆ ಇದುವರೆಗೂ ಯಾವುದೇ ಖಚಿತ ಮಾಹಿತಿಯೂ ಲಭಿಸಿಲ್ಲ. ಆದರೆ ಕೆಲ ಅನುಮಾನಗಳ ಮೇಲೆ ಮಾತ್ರ ಹುಡುಕಾಟ ನಡೆಸಲಾಗುತ್ತಿದೆ. ಇದನ್ನು ಓದಿ: ಮೈಂಡ್ ಟ್ರೀ ಷೇರು ವಶಕ್ಕೆ ಪಡೆದಿದ್ದು ಯಾಕೆ? – ಸಹಿ ಸಿದ್ದಾರ್ಥ್ ಅವರದ್ದಲ್ಲ ಎಂದ ಐಟಿ

    ಈಗಾಗಲೇ ಪೊಲೀಸ್ ತಂಡ ಪ್ರಕರಣ ಸಂಬಂಧ ಪ್ರಾಥಮಿಕ ತನಿಖೆಯನ್ನು ಅಂತ್ಯಗೊಳಿಸಿದ್ದಾರೆ. ಮುಂಜಾನೆಯಿಂದ ಸಿದ್ದಾರ್ಥ್ ಅವರ ಕಾರು ಚಾಲಕ ಬಸವರಾಜ್ ಅವರನ್ನು ವಿಚಾರಣೆಯನ್ನು ಪೊಲೀಸರು ನಡೆಸಿದ್ದಾರೆ. ಸಿದ್ಧಾರ್ಥ್ ಮೊಬೈಲ್ ಲೋಕೇಷನ್ ಪರಿಶೀಲಿಸಿದಾಗ ಸೇತುವೆಯ ಮಧ್ಯಭಾಗದಲ್ಲಿ ಅವರ ಕೊನೆಯ ಮೊಬೈಲ್ ಲೋಕೇಷನ್ ಪತ್ತೆಯಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

    https://www.youtube.com/watch?v=wf6MlYA_aSQ

  • ಮೈಂಡ್ ಟ್ರೀ ಷೇರು ವಶಕ್ಕೆ ಪಡೆದಿದ್ದು ಯಾಕೆ? – ಸಹಿ ಸಿದ್ದಾರ್ಥ್ ಅವರದ್ದಲ್ಲ ಎಂದ ಐಟಿ

    ಮೈಂಡ್ ಟ್ರೀ ಷೇರು ವಶಕ್ಕೆ ಪಡೆದಿದ್ದು ಯಾಕೆ? – ಸಹಿ ಸಿದ್ದಾರ್ಥ್ ಅವರದ್ದಲ್ಲ ಎಂದ ಐಟಿ

    ಬೆಂಗಳೂರು: ಉದ್ಯಮಿ ಸಿದ್ಧಾರ್ಥ್ ಅವರ ನಿಗೂಢ ನಾಪತ್ತೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಿದ್ಧಾರ್ಥ್ ಅವರು ಬರೆದಿದ್ದಾರೆ ಎನ್ನಲಾದ ವಿದಾಯ ಪತ್ರದಲ್ಲಿ ಸಹಿಗೂ, ವಾರ್ಷಿಕ ದಾಖಲೆ ಸಲ್ಲಿಕೆ ವೇಳೆ ಸಲ್ಲಿಸಿದ್ದ ಸಹಿಗೂ ಹೊಂದಾಣಿಕೆ ಆಗುತ್ತಿಲ್ಲ ಎಂದು ಆದಾಯ ಇಲಾಖೆ ಇಲಾಖೆ ಸ್ಪಷ್ಟನೆ ನೀಡಿದೆ.

    ಐಟಿ ಕಿರುಕುಳದಿಂದಲೇ ಸಿದ್ಧಾರ್ಥ್ ಅವರು ಮನನೊಂದಿದ್ದರು ಎನ್ನುವ ವಿಚಾರಕ್ಕೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಐಟಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ಇದರಲ್ಲಿ ಐಟಿಯಿಂದ ಕಿರುಕುಳ ಎಂದು ಹೇಳಿಕೊಂಡಿದ್ದ ಸಿದ್ಧಾರ್ಥ್ ಅವರದ್ದೇ ಎನ್ನಲಾದ ಪತ್ರದ ಬಗ್ಗೆ ಹಾಗೂ ದಾಳಿ ನಡೆಸಿದಾಗ ಬೆಳಕಿಗೆ ಬಂದ ವಿಚಾರದ ಬಗ್ಗೆ ಮಾಹಿತಿ ನೀಡಿದೆ.

    ಹೇಳಿಕೆಯಲ್ಲಿ ಏನಿದೆ?
    ಐಟಿ ದಾಳಿಯ ವೇಳೆ ಕರ್ನಾಟಕದಲ್ಲಿ ಸಕ್ರಿಯವಾಗಿ ರಾಜಕಾರಣದಲ್ಲಿ ಇರುವ ವ್ಯಕ್ತಿಯ ಜೊತೆ ಕೆಫೆ ಕಾಫಿ ಡೇ(ಸಿಸಿಡಿ) ಆರ್ಥಿಕ ವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಇದರ ಜೊತೆ ಸಿಂಗಾಪುರ ಪೌರತ್ವವನ್ನು ಹೊಂದಿರುವ ವ್ಯಕ್ತಿ ಬಳಿ 1.2 ಕೋಟಿ ರೂ. ಪತ್ತೆಯಾಗಿತ್ತು. ಆ ವ್ಯಕ್ತಿ ಈ ಹಣ ಸಿದ್ಧಾರ್ಥ್ ಅವರಿಗೆ ಸೇರಿದ್ದಾಗಿ ಒಪ್ಪಿಕೊಂಡಿದ್ದರು. ದಾಳಿ ವೇಳೆ ದಾಖಲೆ ಇಲ್ಲದ 362.11 ಕೋಟಿ ರೂ. ಮತ್ತು 118.02 ಕೋಟಿ ರೂ. ಹಣ ಸಿಕ್ಕಿತ್ತು. ವಿಚಾರಣೆ ವೇಳೆ ಈ ಹಣ ಕ್ರಮವಾಗಿ ತನಗೆ ಮತ್ತು ಸಿಸಿಡಿಗೆ ಸೇರಿದ ಹಣ ಎಂದು ಒಪ್ಪಿಕೊಂಡಿದ್ದರು. ಇದನ್ನು ಓದಿ: ಮೈಂಡ್ ಟ್ರೀಯಲ್ಲಿ ಸಿದ್ಧಾರ್ಥ್ ಷೇರು ಎಷ್ಟಿತ್ತು? ಕೋಕಾ ಕೋಲಾ ಡೀಲ್ ಎಲ್ಲಿಯವರೆಗೆ ಬಂದಿತ್ತು? ಸಾಲ ಎಷ್ಟಿತ್ತು?

    ಸಿದ್ಧಾರ್ಥ್ ಅವರು ವಾರ್ಷಿಕ ತೆರಿಗೆಯನ್ನು ಪಾವತಿ ಮಾಡಿದ್ದರೂ ದಾಖಲೆ ಇಲ್ಲದ ಹಣಕ್ಕೆ ತೆರಿಗೆಯನ್ನು ಪಾವತಿ ಮಾಡಿರಲಿಲ್ಲ. ಈ ಎರಡು ಪ್ರಕರಣ ಹೊರತು ಪಡಿಸಿ 35 ಕೋಟಿ ರೂ. ತೆರಿಗೆ ಹಣವನ್ನು ಪಾವತಿಸಿದ್ದರು. ಉಳಿದಂತೆ ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಕಂಪನಿ ಸ್ವಯಂ ಮೌಲ್ಯ ಮಾಪನ ತೆರಿಗೆಯಾದ 14.5 ಕೋಟಿ ರೂ. ಪಾವತಿಸಿರಲಿಲ್ಲ.

    2019ರ ಜನವರಿ 21 ರಂದು ಮಾಧ್ಯಮಗಳಲ್ಲಿ ಸಿದ್ಧಾರ್ಥ್ ಅವರು ಮೈಂಡ್ ಟ್ರೀ ಕಂಪನಿಯಲ್ಲಿದ್ದ ಷೇರನ್ನು ಮಾರಾಟ ಮಾಡಲು ಮುಂದಾಗುತ್ತಿದ್ದಾರೆ ಎನ್ನುವ ಸುದ್ದಿ ಪ್ರಕಟವಾಗಿತ್ತು. ಕಾಫಿ ಡೇ ಎಂಟರ್‌ಪ್ರೈಸಸ್, ಕಾಫಿ ಡೇ ಟ್ರೇಡಿಂಗ್ ಲಿಮಿಟೆಡ್ ಮತ್ತು ಸಿದ್ಧಾರ್ಥ್ ಹೆಸರಿನಲ್ಲಿದ್ದ ಹತ್ತಿರ ಹತ್ತಿರ ಶೇ.21 ಷೇರನ್ನು ಜನವರಿಯಲ್ಲೇ ಮಾರಾಟಕ್ಕೆ ಸಿದ್ಧತೆ ನಡೆದಿತ್ತು. ಇದನ್ನು ಓದಿ: ಸಿದ್ದಾರ್ಥ್ ಕೊನೆಯ ಮೊಬೈಲ್ ಲೊಕೇಷನ್ ಪತ್ತೆ

    ದಾಳಿ ಸಂದರ್ಭದಲ್ಲಿ ದಾಖಲೆ ಇಲ್ಲದ ಹಣ, ತೆರಿಗೆ ವಂಚನೆ, ತೆರಿಗೆ ವಂಚಿಸಿದ್ದಕ್ಕೆ ದಂಡ ಎಲ್ಲವೂ ಸೇರಿದಾಗ ಈ ಮೊತ್ತ 100 ಕೋಟಿ ಆಗಿತ್ತು. ಇದರ ಜೊತೆಯಲ್ಲೇ ಆದಾಯ ತೆರಿಗೆ ಪ್ರಕ್ರಿಯೆ ನಡೆಯುತ್ತಿದ್ದಾಗ ತನ್ನ ಬಳಿಯಿದ್ದ ಆಸ್ತಿಯನ್ನು ಬೇರೆ ಕಂಪನಿಗೆ ಮಾರಾಟ ಮಾಡಬೇಕಾದರೆ ಕೆಲ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಆದರೆ ಸಿದ್ಧಾರ್ಥ್ ಅವರು ಯಾವುದೇ ಅನುಮತಿಯನ್ನು ಪಡೆಯದೇ ಮಾರಾಟ ಮಾಡಲು ಮುಂದಾಗಿದ್ದರು. ಈ ಕಾರಣಕ್ಕೆ ಮೈಂಡ್ ಟ್ರೀಯಲ್ಲಿದ್ದ 74,90,000 ಶೇರುಗಳನ್ನು ಆದಾಯ ತೆರಿಗೆ ಇಲಾಖೆ ವಶಕ್ಕೆ ಪಡೆದಿತ್ತು. ಷೇರು ವಶಕ್ಕೆ ಪಡೆದ ಬಳಿಕ ಸಿದ್ಧಾರ್ಥ್ ಅವರು ಷೇರು ಮಾರಾಟಕ್ಕೆ ಅನುಮತಿ ಕೇಳಿದ್ದರು. ಈ ಪ್ರಕ್ರಿಯೆಯಾದ ಬಳಿಕ ಅನುಮತಿ ನೀಡಲಾಯಿತು. 2019ರ ಏಪ್ರಿಲ್ 24 ರಂದು 3200 ಕೋಟಿ ರೂ.ಗೆ ಸಿದ್ಧಾರ್ಥ್ ಅವರಲ್ಲಿದ್ದ ಷೇರು ಲಾರ್ಸನ್ ಆಂಡ್ ಟ್ಯಾಬ್ರೋ ಕಂಪನಿಗೆ ಮೈಂಡ್ ಟ್ರೀ ಕಂಪನಿಯ ವರ್ಗಾವಣೆ ಆಯಿತು.

    https://www.youtube.com/watch?v=f5o2MLo1zXM

  • ತಂದೆಗೆ ಏನೋ ಸಮಸ್ಯೆಯಿದೆ, ಗಮನಹರಿಸು – ಸಿದ್ಧಾರ್ಥ್ ಪುತ್ರನಿಗೆ ವಿನಯ್ ಗುರೂಜಿ ಸೂಚನೆ

    ತಂದೆಗೆ ಏನೋ ಸಮಸ್ಯೆಯಿದೆ, ಗಮನಹರಿಸು – ಸಿದ್ಧಾರ್ಥ್ ಪುತ್ರನಿಗೆ ವಿನಯ್ ಗುರೂಜಿ ಸೂಚನೆ

    ಬೆಂಗಳೂರು: ಹಲವಾರು ಮಂದಿಗೆ ಉದ್ಯೋಗ ನೀಡಿರುವ ಕೆಫೆ ಕಾಫಿ ಡೇ ಮಾಲೀಕ ವಿ.ಜಿ ಸಿದ್ಧಾರ್ಥ್ ಅವರ ನಾಪತ್ತೆ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದು, ತಂದೆ ಏನೋ ಸಮಸ್ಯೆ ಇದೆ. ಹೀಗಾಗಿ ಗಮನಹರಿಸು ಎಂದು ವಿನಯ್ ಗುರೂಜಿ ಹಿರಿಯ ಪುತ್ರ ಅಮರ್ತ್ಯಗೆ ಸೂಚನೆ ಕೊಟ್ಟಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ಭಾನುವಾರ ಸಿದ್ಧಾರ್ಥ್ ಅವರ ಹಿರಿಯ ಪುತ್ರ ಅಮರ್ತ್ಯ ಗುರೂಜಿಯನ್ನು ಭೇಟಿ ಮಾಡಿದ್ದರು. ಡಾಲರ್ಸ್ ಕಾಲೋನಿಯ ಭಕ್ತರೊಬ್ಬರ ನಿವಾಸದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ತಮ್ಮ ತಂದೆ ಒತ್ತಡ ಹಾಗೂ ವ್ಯವಹಾರಿಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಆಗ ಯಾವುದೇ ಕಾರಣಕ್ಕೂ ತಂದೆಯನ್ನು ಬಿಟ್ಟಿರಬೇಡ, ಅವರ ಜೊತೆಯಲ್ಲೇ ಇರು. ಈ ಸಮಯದಲ್ಲಿ ನೀನು ಅವರಿಗೆ ಸಾಥ್ ಕೊಡಬೇಕಾಗುತ್ತದೆ. ಅವರ ಬಗ್ಗೆ ಎಚ್ಚರಿಕೆ ಇರಲಿ ಎಂದು ಸೂಕ್ಷ್ಮವಾಗಿ ಹೇಳಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಬರೀ ನೀರು ಕಾಣಿಸ್ತಿದೆ:
    ಸಿದ್ಧಾರ್ಥ್ ನಾಪತ್ತೆಯಾಗುತ್ತಿದ್ದಂತೆಯೇ ಸೋಮವಾರ ತಡರಾತ್ರಿ ಎಸ್ ಎಂ ಕೃಷ್ಣ ಪತ್ನಿ ಪ್ರೇಮ ಕೃಷ್ಣ ಅವರು ವಿನಯ್ ಗುರೂಜಿಗೆ ದೂರವಾಣಿ ಕರೆ ಮಾಡಿದ್ದಾರೆ. ಈ ವೇಳೆ ಗುರೂಜಿಯವರು, ನನಗೆ ಬರೀ ನೀರು ಮಾತ್ರ ಕಾಣಿಸುತ್ತಿದೆ. ಬೇರೇನೂ ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.

    ಒಟ್ಟಿನಲ್ಲಿ ದಿಢೀರ್ ಆಗಿ ಮಂಗಳೂರಿನ ನೇತ್ರಾವತಿ ಸೇತುವೆ ಬಳಿಯಿಂದ ಸೋಮವಾರ ಸಂಜೆ 7 ಗಂಟೆ ಸುಮಾರಿಂದ ನಾಪತ್ತೆಯಾಗಿರುವ ಸಿದ್ಧಾರ್ಥ್ ಪ್ರಕರಣ ಇದೀಗ ಭಾರೀ ಅನುಮಾನಕ್ಕೀಡಾಗಿದೆ. ಸಿದ್ಧಾರ್ಥ್ ಕುಟುಂಬಸ್ಥರು ಆತಂಕ್ಕೀಡಾದರೆ ಇತ್ತ ನದಿ ತಟದಲ್ಲಿ ಸಿದ್ಧಾರ್ಥ್ ಗಾಗಿ ಹುಡುಕಾಟ ಭರದಿಂದ ಸಾಗುತ್ತಿದೆ.

  • ಅಜ್ಞಾತ ಸ್ಥಳದಲ್ಲಿ ಸಿದ್ಧಾರ್ಥ್ ಕಾರು ಚಾಲಕನ ತೀವ್ರ ವಿಚಾರಣೆ

    ಅಜ್ಞಾತ ಸ್ಥಳದಲ್ಲಿ ಸಿದ್ಧಾರ್ಥ್ ಕಾರು ಚಾಲಕನ ತೀವ್ರ ವಿಚಾರಣೆ

    ಮಂಗಳೂರು: ಉದ್ಯಮಿ ಸಿದ್ಧಾರ್ಥ್ ಹೆಗಡೆ ನಿಗೂಢ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕನನ್ನು ಕಂಕನಾಡಿ ಪೊಲೀಸರು ವಶಕ್ಕೆ ಪಡೆದಿದ್ದು, ಇದೀಗ ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆ ನಡೆಯುತ್ತಿದೆ.

    ಸಿದ್ಧಾರ್ಥ್ ಅವರು ನಿನ್ನೆ ಕಾರಿನಲ್ಲಿ ಚಾಲಕ ಬಸವರಾಜ್ ಪಾಟೀಲ್ ಜೊತೆಗೆ ಸಕಲೇಶಪುರಕ್ಕೆ ಹೊರಡಿದ್ದರು. ಆದರೆ ಮಾರ್ಗಮಧ್ಯೆದಲ್ಲಿ ಕಾರನ್ನು ಮಂಗಳೂರು ಕಡೆಗೆ ತಿರುಗಿಸಲು ಸೂಚಿಸಿದ್ದು, ನೇತ್ರಾವತಿ ನದಿಗೆ ನಿರ್ಮಿಸಲಾಗಿದ್ದ ಸೇತವೆಯ ಬಳಿ ಬರುತ್ತಿದ್ದಂತೆಯೇ ಕಾರು ನಿಲ್ಲಿಸಲು  ಚಾಲಕನ ಬಳಿ ಹೇಳಿದ್ದಾರೆ. ಆ ನಂತರ ಸಿದ್ಧಾರ್ಥ್ ಅವರು ನಾಪತ್ತೆಯಾಗಿದ್ದಾರೆ.

    ಈ ಹಿನ್ನೆಲೆಯಲ್ಲಿ ಕಂಕನಾಡಿ ಪೊಲೀಸರು ಕಾರು ಹಾಗೂ ಚಾಲಕ ಬಸವರಾಜ್ ನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು. ಹಿರಿಯ ಅಧಿಕಾರಿಗಳು ಕಂಕನಾಡಿ ಠಾಣೆಗೆ ಆಗಮಿಸಿದ್ದಾರೆ. ನಂತರ ಅಲ್ಲಿಂದ ಬೆಳಗ್ಗೆ 8 ಗಂಟೆ ಸುಮಾರಿಗೆ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸಿದ್ಧಾರ್ಥ್ ಅವರು ಯಾರ ಜೊತೆಗೆ ಮಾತನಾಡುತ್ತಿದ್ದರು? ಏನು ಮಾತನಾಡುತ್ತಿದ್ದರು? ಗಾಬರಿ, ಭಯ ಅಥವಾ ಆತಂಕದಿಂದ ಸಂಭಾಷಣೆ ನಡೆಸಿದ್ದರಾ ಎಂದು ಪೊಲೀಸರು ಬಸವರಾಜ್‍ಗೆ ಕೇಳಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಸದ್ಯ ಸಿದ್ಧಾರ್ಥ್ ಅವರು ಪ್ರಯಾಣಿಸಿದ್ದ ಕೆಎ 03 ಎಸ್‍ಸಿ 2593 ನಂಬರ್ ನ ಇನ್ನೋವಾ ಕಾರನ್ನು ಪೊಲೀಸರ ವಶದಲ್ಲಿದೆ. ಪೊಲೀಸರು ಈಗಾಗಲೇ ಚಾಲಕ ಬಸವರಾಜ್‍ನಿಂದ ಪ್ರಾಥಮಿಕ ಹೇಳಿಕೆ ಪಡೆದುಕೊಂಡಿದ್ದಾರೆ.

    https://www.youtube.com/watch?v=2P3yazqTvMs