Tag: Siddharth Hegde

  • ರಾಜೀನಾಮೆ ನೀಡಲು ಸಿದ್ಧಾರ್ಥ್ ಅಣ್ಣನೇ ಗೈಡ್ ಮಾಡಿದ್ದು: ಅಣ್ಣಾಮಲೈ

    ರಾಜೀನಾಮೆ ನೀಡಲು ಸಿದ್ಧಾರ್ಥ್ ಅಣ್ಣನೇ ಗೈಡ್ ಮಾಡಿದ್ದು: ಅಣ್ಣಾಮಲೈ

    ಚಿಕ್ಕಮಗಳೂರು: ಹತ್ತು ವರ್ಷ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ಆಮೇಲೆ ಡಿಐಜಿ, ಐಜಿ ಆಗಿ ಎಸಿ ರೂಮಲ್ಲಿ ಕೂತು ಕೆಲಸ ಮಾಡುಲು ಆಸಕ್ತಿ ಇಲ್ಲ ಎಂದಾಗ, ಸಿದ್ಧಾರ್ಥ್ ಅಣ್ಣಾ ಮಾತ್ರ ಧೈರ್ಯವಾಗಿ ಹೇಳಿದ್ದು, ರಾಜೀನಾಮೆ ಕೊಡಿ ನಾನಿದ್ದೇನೆ ಎಂದಿದ್ದರು. ನನ್ನ ರಾಜೀನಾಮೆಯನ್ನ ನಾವಿಬ್ಬರೂ ಸೇರಿ ಡಿಸೈಡ್ ಮಾಡಿದ್ದು ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕಾಫಿ ಡೇ ಮಾಲೀಕ ದಿ.ಸಿದ್ಧಾರ್ಥ್ ಹೆಗ್ಡೆ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಗುಂಡಿ ಬಳಿ ಕಾಫಿ ಡೇ ಮಾಲೀಕ ದಿವಂಗತ ಸಿದ್ಧಾರ್ಥ್ ಹೆಗ್ಡೆ ಅವರ ಪುತ್ಥಳಿ ನಿರ್ಮಾಣದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, ನಾನು ಸಿದ್ಧಾರ್ಥ್ ಹೆಗ್ಡೆ ಅವರ ಕೆಫೆ ಡೇ ಚೇಂಬರ್ ರೂಂನಲ್ಲಿ ಕೂತು ಮೂರೂವರೆ ಗಂಟೆ ಮಾತನಾಡಿದ್ದೆವು ಎಂದು ತಿಳಿಸಿದರು.

    ಎರಡು ಜನ ಕಾರ್ ಡೋರ್ ಓಪನ್ ಮಾಡಿ ಬಿಡುತ್ತಾರೆ. ನಾಲ್ಕು ಜನ ಸೆಲ್ಯೂಟ್ ಮಾಡುತ್ತಾರೆ. ನನಗೆ ಅದರಿಂದ ಸಂತೋಷವಿಲ್ಲ. ಕೃಷಿ ಮಾಡಬೇಕು, ಊರಿಗೆ ಹೋಗಬೇಕು. ಸಾಧಾರಣ ಮನುಷ್ಯನಂತೆ ಬದುಕಬೇಕು ಹಾಗೂ ಸಾಮಾನ್ಯ ಮನುಷ್ಯನ ಜೀವನವನ್ನ ಬದಲಾವಣೆ ಮಾಡಬೇಕೆಂಬ ಆಸೆ ಸರ್ ಎಂದು ಅವರಿಗೆ ಹೇಳಿದ್ದೆ. ಆಗ ಅವರು, ಧೈರ್ಯವಾಗಿ ಹೇಳಿದ್ದರು. ರಾಜೀನಾಮೆ ಕೊಡಿ ನಾನಿದ್ದೇನೆ ಎಂದಿದ್ದರು ಎಂದು ಸಿದ್ಧಾರ್ಥ್ ಹೆಗ್ಡೆಯವರನ್ನ ನೆನಪಿಸಿಕೊಂಡರು.

    ಯಾವ ಡೇಟ್‍ನಲ್ಲಿ ಪೇಪರ್ ಟೈಪ್ ಮಾಡಬೇಕು ಎಂದು ನಾವಿಬ್ಬರು ಡಿಸೈಡ್ ಮಾಡಿದ್ದೆವು. ರಾಜೀನಾಮೆ ಕೊಟ್ಟ ಬಳಿಕ ಬಾಂಬೆಯಿಂದ ಫೋನ್ ಮಾಡಿದ್ದರು. ಬಹಳ ಕಷ್ಟದ ಕೆಲಸ ಯಾರೂ ಮಾಡಲ್ಲ. ಜನ ನಿಮಗೆ ಮೂರ್ಖ ಎನ್ನಬಹುದು, ಫೂಲ್ ಎನ್ನಬಹುದು. ಆದರೆ ನನಗೆ ನಿಮ್ಮ ಉದ್ದೇಶ ಏನೆಂದು ಗೊತ್ತು ಎಂದಿದ್ದರು. ನಾನು ಏನು ಮಾಡಿದರು ಅವರು ಮೇಲಿಂದ ನೋಡುತ್ತಿದ್ದಾರೆ, ಅವರು ಯಾವಾಗಲು ನನ್ನೊಂದಿಗೆ ಇರುತ್ತಾರೆ. ನನಗೆ ಗೈಡ್ ಮಾಡಿದ್ದರು, ಮುಂದೆಯೂ ಅವರು ನನ್ನೊಂದಿಗೆ ನಿಂತು ಗೈಡ್ ಮಾಡುತ್ತಿರುತ್ತಾರೆ ಎಂದರು.

  • ಐಶ್ವರ್ಯ, ಅಮರ್ಥ್ಯ ನಿಶ್ಚಿತಾರ್ಥ ಸಂಭ್ರಮ – ಬಿಎಸ್‍ವೈ, ಅಶೋಕ್ ಭಾಗಿ

    ಐಶ್ವರ್ಯ, ಅಮರ್ಥ್ಯ ನಿಶ್ಚಿತಾರ್ಥ ಸಂಭ್ರಮ – ಬಿಎಸ್‍ವೈ, ಅಶೋಕ್ ಭಾಗಿ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಕಾಫಿ ಡೇ ಸಿದ್ಧಾರ್ಥ್ ಹೆಗ್ಡೆ ಪುತ್ರ ಅಮರ್ಥ್ಯ ಸುಬ್ರಮಣ್ಯ ಹೆಗ್ಡೆ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆಯುತ್ತಿದ್ದು, ಕಡಿಮೆ ಜನರನ್ನು ಆಹ್ವಾನಿಸಿದ್ದರೂ ಸಂಭ್ರಮಕ್ಕೆ ಮಾತ್ರ ಕೊರತೆ ಇಲ್ಲ ಎಂಬಂತೆ ನಡೆಸಲಾಗುತ್ತಿದೆ.

    ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಖಾಸಗಿ ಹೋಟೆಲ್‍ನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುತ್ತಿದೆ. ಆಯ್ದ ಗಣ್ಯರು ಹಾಗೂ ಕುಟುಂಬಸ್ಥರು, ಸ್ನೇಹಿತರಿಗಷ್ಟೇ ಆಹ್ವಾನ ನೀಡಲಾಗಿದ್ದು, ಒಟ್ಟು 250 ಜನರನ್ನು ಆಹ್ವಾನಿಸಲಾಗಿದೆ. ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಆರ್.ಅಶೋಕ್ ಆಗಮಿಸಿ ಹಾರೈಸಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ.

    ಉತ್ತರ ಪ್ರದೇಶದ ಖ್ಯಾತ ಜ್ಯೋತಿಷಿ ಪಂಡಿತ್ ಅವರ ನೇತೃತ್ವದಲ್ಲಿ ಬೆಳಗ್ಗೆ 11 ಗಂಟೆಗೆ ನಿಶ್ಚಿತಾರ್ಥ ನಡೆಯಿತು. ಬಳಿಕ ಸಿಎಂ ಆಗಮಿಸಿ ನವ ಜೋಡಿಗೆ ಹಾರೈಸಿದರು. ಸಭಾಂಗಣವೆಲ್ಲ ಗುಲಾಬಿಮಯವಾಗಿದ್ದು, ಐಶ್ವರ್ಯ ಹಾಗೂ ಅಮರ್ಥ್ಯ ಪಿಂಕ್ ಉಡುಗೆಯಲ್ಲಿ ಮಿಂಚುತ್ತಿದ್ದಾರೆ. ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿವಾಸ ಹಾಗೂ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಎಂಗೇಜ್ಮೆಂಟ್ ಸಡಗರ ಮನೆ ಮಾಡಿದೆ. ಬೆಳಗ್ಗೆ 10 ಗಂಟೆಯಿಂದ ನಿಶ್ಚಿತಾರ್ಥ ಕಾರ್ಯಕ್ರಮ ಆರಂಭವಾಗಿದ್ದು, ಮಧ್ಯಾಹ್ನ 2 ಗಂಟೆ ವರೆಗೆ ನಡೆಯಲಿದೆ.

    ಹೋಟೆಲ್‍ನಲ್ಲಿ ಒಟ್ಟು 50 ರೂಮ್ ಬುಕ್ ಮಾಡಲಾಗಿದ್ದು, ಒಟ್ಟು 250 ಮಂದಿಗೆ ಆಹ್ವಾನ ನೀಡಲಾಗಿದೆ. ಸಿಎಂ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಸಚಿವರುಗಳು, ಆಪ್ತ ಶಾಸಕರು, ಕುಟುಂಬಸ್ಥರು, ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಆಮಂತ್ರಣ ಇದ್ದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಕೊರೊನಾ ಹಿನ್ನೆಲೆ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಆಮಂತ್ರಣ ನೀಡಲಾಗಿಲ್ಲ. ನಿನ್ನೆ ರಾತ್ರಿಯೇ ಕುಟುಂಬದ ಸದಸ್ಯರು ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ.

    ಅಮರ್ಥ್ಯ ಕಾಫಿ ಡೇ ಸಿದ್ಧಾರ್ಥ ಅವರ ಹಿರಿಯ ಪುತ್ರನಾಗಿದ್ದು ತಂದೆ ಮೃತಪಟ್ಟ ನಂತರ ಅವರ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಐಶ್ವರ್ಯಾ ತನ್ನ ತಂದೆ ನಡೆಸುತ್ತಿರುವ ಗ್ಲೋಬಲ್ ಎಂಜಿನಿಯರಿಂಗ್ ಕಾಲೇಜನ್ನು ನೋಡಿಕೊಳ್ಳುತ್ತಿದ್ದಾರೆ.

  • ಸಿದ್ಧಾರ್ಥ್ ಹೆಗ್ಡೆ ಸಮಾಧಿ ಬಳಿ ಬುದ್ಧನ ವಿಗ್ರಹ ಪ್ರತಿಷ್ಠಾಪಿಸಿದ ವಿನಯ್ ಗುರೂಜಿ

    ಸಿದ್ಧಾರ್ಥ್ ಹೆಗ್ಡೆ ಸಮಾಧಿ ಬಳಿ ಬುದ್ಧನ ವಿಗ್ರಹ ಪ್ರತಿಷ್ಠಾಪಿಸಿದ ವಿನಯ್ ಗುರೂಜಿ

    – ಆ ಸಿದ್ಧಾರ್ಥ ಜ್ಞಾನ ಕೊಟ್ಟ, ಈ ಸಿದ್ಧಾರ್ಥ ಕೆಲಸ, ಬದುಕು ಕೊಟ್ಟ

    ಚಿಕ್ಕಮಗಳೂರು: ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಹೆಗ್ಡೆ ಸಮಾಧಿ ಬಳಿ ಅವಧೂತ ವಿನಯ್ ಗುರೂಜಿ ಬುದ್ಧನ ವಿಗ್ರಹವನ್ನ ಪ್ರತಿಷ್ಠಾಪನೆ ಮಾಡಿದ್ದಾರೆ.

    ದಿವಂಗತ ಸಿದ್ಧಾರ್ಥ್ ಹೆಗ್ಡೆಯವರ ಸ್ವಗ್ರಾಮವಾದ ಮೂಡಿಗೆರೆ ತಾಲೂಕಿನ ಚೇತನಹಳ್ಳಿ ಎಸ್ಟೇಟಿಗೆ ಭೇಟಿ ನೀಡಿದ್ದ ವಿನಯ್ ಗುರೂಜಿ, ಅವರ ಸಮಾಧಿ ಬಳಿ ಬುದ್ಧನ ಮೂರ್ತಿಯನ್ನ ಪ್ರತಿಷ್ಠಾಪಿಸಿದ್ದಾರೆ. ಇದೇ ವೇಳೆ ಮಾತನಾಡಿ, ಆ ಸಿದ್ಧಾರ್ಥ ಜಗತ್ತಿಗೆ ಜ್ಞಾನ ಕೊಟ್ಟ, ಈ ಸಿದ್ಧಾರ್ಥ ಲಕ್ಷಾಂತರ ಜನರಿಗೆ ಜೀವನ ಹಾಗೂ ಬದುಕನ್ನ ಕೊಟ್ಟ ಎಂದು ಸಿದ್ಧಾರ್ಥ್ ಹೆಗ್ಡೆಯವರ ಸರಳ ವ್ಯಕ್ತಿತ್ವವನ್ನ ಸ್ಮರಿಸಿದ್ದಾರೆ.

    ಆಶ್ರಮದಲ್ಲಿ ಪೂಜಿಸುತ್ತಿದ್ದ ಬುದ್ಧನ ಮೂರ್ತಿಯನ್ನ ಸಿದ್ಧಾರ್ಥ್ ಹೆಗ್ಡೆಯವರ ಮನೆ ಪಕ್ಕದಲ್ಲಿನ ಅವರ ಸಮಾಧಿ ಬಳಿ ಪ್ರತಿಷ್ಠಾಪನೆ ಮಾಡಿದ್ದಾರೆ. ಈ ವೇಳೆ ಸಿದ್ಧಾರ್ಥ್ ಹೆಗ್ಡೆ ಅವರ ತಾಯಿ ವಾಸಂತಿ ಹೆಗ್ಡೆ ಹಾಗೂ ಕುಟುಂಬದ ಆಪ್ತರು ಭಾಗಿಯಾಗಿದ್ದರು. ಚೇತನಹಳ್ಳಿಗೆ ಭೇಟಿ ನೀಡುವ ಮುನ್ನ ವಿನಯ್ ಗುರೂಜಿ ಹೊರನಾಡು ಅನ್ನಪೂರ್ಣೇಶ್ವರಿಯ ದರ್ಶನ ಪಡೆದಿದ್ದಾರೆ. ಇದೇ ವೇಳೆ, ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದ ಧರ್ಮಕರ್ತರಾದ ಭೀಮೇಶ್ವರ ಜೋಷಿಯವರು ವಿನಯ್ ಗುರೂಜಿಗೆ ಆತ್ಮೀಯ ಸ್ವಾಗತ ಕೋರಿದ್ದಾರೆ.

     

  • ಕಾಫಿ ಡೇ ಸಿದ್ಧಾರ್ಥ್ ಹೆಗ್ಡೆ ಸರ್ಕಲ್ ಚಿಕ್ಕಮಗಳೂರಲ್ಲಿ ಅನಾವರಣ

    ಕಾಫಿ ಡೇ ಸಿದ್ಧಾರ್ಥ್ ಹೆಗ್ಡೆ ಸರ್ಕಲ್ ಚಿಕ್ಕಮಗಳೂರಲ್ಲಿ ಅನಾವರಣ

    ಚಿಕ್ಕಮಗಳೂರು : ಕಾಫಿ ಡೇ ಮಾಲೀಕ ಸಿದ್ದಾರ್ಥ್ ಹೆಗ್ಡೆ ಆತ್ಮಹತ್ಯೆಗೆ ಶರಣಾದಾಗ ಇಡೀ ರಾಜ್ಯ ಕಂಬನಿ ಮಿಡಿದಿತ್ತು. ವಿಷಯ ಕೇಳಿ ಬೆಳೆಗಾರರಿಗೆ ಹಾಗೂ ಉದ್ಯಮಕ್ಕೆ ಸಿಡಿಲು ಬಡಿದಂತಾಗಿತ್ತು. ದೇಶದ ಕಾಫಿಗೆ ಅಂತರಾಷ್ಟ್ರಿಯ ಮಟ್ಟದ ಖ್ಯಾತಿ ತಂದಿದ್ದು ಸಿದ್ಧಾರ್ಥ್ ಹೆಗ್ಡೆ. ಲಕ್ಷಾಂತರ ಜನರಿಗೆ ಅನ್ನದಾತರಾಗಿದ್ದ ಅವರ ಅಗಲಿಕೆಯನ್ನ ಇಂದಿಗೂ ಜನಸಾಮಾನ್ಯರಿಗೆ ಅರಗಿಸಿಕೊಳ್ಳಲಾಗ್ತಿಲ್ಲ. ಕಾಫಿಯ ದರ ಏರಿಳಿತ ಕಂಡಾಗ ಸಿದ್ಧಾರ್ಥ್ ಹೆಗ್ಡೆ ಇರಬೇಕಿತ್ತು ಅನ್ನೋರು ಇಂದಿಗೂ ಸಾವಿರಾರು ಜನ. ವಿಧಿಲಿಖಿತ ಅವರಿಂದು ನಮ್ಮೊಂದಿಗಿಲ್ಲ. ಆದ್ರೆ ಅವರು ದೈಹಿಕವಾಗಿ ನಮ್ಮ ಜೊತೆ ಇಲ್ಲದಿದ್ರು ಮಾನಸಿಕವಾಗಿ ಪ್ರತಿಯೊಬ್ಬ ಕೂಲಿ ಕಾರ್ಮಿಕನ ಹೃದಯದಲ್ಲೂ ಚಿರಸ್ಥಾಯಿ. ಹಾಗಾಗಿಯೇ ಅವರ ನೆನಪಿಗಾಗಿ ವಿಶ್ವದ ಮೊದಲ ಜಿ.ವಿ.ಸಿದ್ಧಾರ್ಥ್ ಹೆಗ್ಡೆ ಸರ್ಕಲ್ ಕಾಫಿನಾಡಲ್ಲಿ ಅನಾವರಣಗೊಂಡಿದೆ.

    ಬದುಕಿದ್ದಾಗಲೇ ಸತ್ತಿರೋ ಕೊಟ್ಯಾಂತರ ಜನರ ಮಧ್ಯೆ, ಸತ್ತ ಮೇಲೂ ಬದುಕಿರೋರಲ್ಲಿ ಸಿದ್ಧಾರ್ಥ್ ಹೆಗ್ಡೆ ಕೂಡ ಒಬ್ರು. ಅವರ ಸರಳತೆ ಬೆರಗಾಗದವರೇ ಇಲ್ಲ. ಕಾಫಿಯ ಬಗ್ಗೆ ಅವರಿಗಿದ್ದ ಜ್ಞಾನ. ಕೊಡುತ್ತಿದ್ದ ಸಲಹೆಗಳನ್ನ ಕಾಫಿನಾಡಿನ ಜನ ಇಂದಿಗೂ ಮರೆತಿಲ್ಲ. ಹಾಗಾಗಿ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಬಳಿಯ ಸಿಗೋಡು ಹಾಗೂ ದೇವಗೋಡು ಗ್ರಾಮಸ್ಥರು ತಮ್ಮೂರಿನ ಸರ್ಕಲ್ ಸಿದ್ಧಾರ್ಥ್ ಹೆಗ್ಡೆ ಸರ್ಕಲ್ ಎಂದು ನಾಮಫಲಕ ನೆಟ್ಟು ನಾಮಕರಣ ಮಾಡಿಕೊಂಡಿದ್ದಾರೆ. ಸಿದ್ಧಾರ್ಥ್ ಹೆಗ್ಡೆ ಎಂದೇ ನಾಮಕರಣಗೊಂಡ ದೇಶದ ಮೊದಲ ವೃತ್ತ ಇದು. ಅವರಿಂದ ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಲಕ್ಷಾಂತರ ಜನರಿಗೆ ಉಪಯೋಗವಾಗಿದೆ. ಅವರ ಮೇಲಿನ ಅಭಿಮಾನ, ಗೌರವಕ್ಕೆ ಕೊನೆ ಇಲ್ಲ. ಹಾಗಾಗಿ ಅವರ ಹೆಸರು ಶಾಶ್ವತವಾಗಿರಲೆಂದು ನಮ್ಮೂರಿನ ಸರ್ಕಲ್‍ಗೆ ಅವರ ಹೆಸರಿಟ್ಟಿದ್ದೇವೆ ಎಂದು ಕಾಫಿ ಬೆಳೆಗಾರರು ಹೇಳುತ್ತಾ ಭಾವುಕರಾಗುತ್ತಾರೆ. ಇದನ್ನೂ ಓದಿ:  ಯೋಧನಾಗುವ ಆಸೆ ಕಂಡಿದ್ದ ಸಿದ್ಧಾರ್ಥ್ ಕಾಫಿ ಕಿಂಗ್ ಆದ ಕಹಾನಿ

    ಪ್ರಿಯದರ್ಶಿನಿ ಎಸ್ಟೇಟ್ ಅಚ್ಚುಮೆಚ್ಚು : ಪ್ರಿಯದರ್ಶಿನಿ ಎಸ್ಟೇಟ್ ಅಂದ್ರೆ ಸಿದ್ಧಾರ್ಥ್ ಹೆಗ್ಡೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಯಾಕಂದ್ರೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಚೇತನಹಳ್ಳಿಯಲ್ಲಿದ್ದ ಅವರ ಸ್ವಂತ ತೋಟ ಬಿಟ್ಟು ಅವರೇ ಖರೀದಿಸಿದ ಮೊದಲ ತೋಟ ಅಂದ್ರೆ ಬಾಳೆಹೊನ್ನೂರು ಬಳಿಯ ಪ್ರಿಯದರ್ಶಿನಿ ಎಸ್ಟೇಟ್. ಅವರಿಗೆ ಈ ತೋಟದ ಮೇಲೆ ಒಲವು ಜಾಸ್ತಿ. ಇಲ್ಲಿ ತೋಟ ಮಾಡಿದಾಗ ಸ್ಥಳೀಯರ ಜೊತೆ ಸಾಮಾನ್ಯನಂತೆ ಬೆರೆಯುತ್ತಿದ್ದರು. ಸ್ಥಳೀಯ ನೂರಾರು ಜನರಿಗೆ ಕೆಲಸ ಕೊಟ್ಟಿದ್ದರು. ಕೂಲಿ ಜೊತೆ ಕೂಲಿಯಾಗೇ ಮಾತನಾಡುತ್ತಿದ್ದರು. ಸರಳತೆಗೆ ಮತ್ತೊಂದು ಹೆಸರೇ ಸಿದ್ಧಾರ್ಥ್ ಹೆಗ್ಡೆ. ಅವರಿಂದ ನಮಗೆ ಸಾಕಷ್ಟು ಸಹಾಯವಾಗಿದೆ. ಹಾಗಾಗಿ, ಅವರ ಋಣ ತೀರಿಸಲು ನಮ್ಮೂರಿನ ಸರ್ಕಲ್‍ಗೆ ಅವರ ಹೆಸರಿಟ್ಟಿದ್ದೇವೆ ಅನ್ನೋದು ಸ್ಥಳೀಯರ ಮಾತು. ಇದನ್ನೂ ಓದಿ: ಸಿದ್ಧಾರ್ಥ್ ‘ಕಾಫಿರಾಜ’ನಾದ ಕಥೆಯನ್ನು ಓದಿ

     

    ಸಹ್ಯಾದ್ರಿ ಬೆಳೆಗಾರರ ಸಂಘದ ಅಧ್ಯಕ್ಷ ರಂಗನಾಥ್ ನಾಮಫಲಕವನ್ನ ಅನಾವರಣಗೊಳಿಸಿದರು. ಉಪಾಧ್ಯಕ್ಷ ಕೆ.ಟಿ.ವೆಂಕಟೇಶ್ ಸ್ವಾಗತಿಸಿದರು. ಸಂಘದ ಕಾರ್ಯಕಾರಿಣಿ ನಿರ್ದೇಶಕ ಸಂತೋಷ್ ಅರೆನೂರು ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಸೀಗೋಡು-ದೇವಗೋಡು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಹಾಗೂ ಕಾಫಿ ಬೆಳೆಗಾರರು ಪಾಲ್ಗೊಂಡಿದ್ದರು. ಇದನ್ನೂ ಓದಿ: ಸಿದ್ಧಾರ್ಥ್ ಸಾವಿಗೆ ಸಂತಾಪ ಸೂಚಿಸಿ, ಕೇಂದ್ರದ ವಿರುದ್ಧ ಹರಿಹಾಯ್ದ ದೀದಿ