Tag: Siddaramayya

  • ವಾಲ್ಮೀಕಿ ಹಗರಣದ ವಿರುದ್ಧ ಸರಿಯಾದ ಹೋರಾಟ ನಡೆದರೆ ಸಿಎಂ ಕುರ್ಚಿ ಅಲ್ಲಾಡುತ್ತೆ: ಪ್ರತಾಪ್ ಸಿಂಹ

    ವಾಲ್ಮೀಕಿ ಹಗರಣದ ವಿರುದ್ಧ ಸರಿಯಾದ ಹೋರಾಟ ನಡೆದರೆ ಸಿಎಂ ಕುರ್ಚಿ ಅಲ್ಲಾಡುತ್ತೆ: ಪ್ರತಾಪ್ ಸಿಂಹ

    ಮೈಸೂರು: ವಾಲ್ಮೀಕಿ ಹಗರಣದ ವಿರುದ್ಧ ಸರಿಯಾದ ಹೋರಾಟ ನಡೆದರೆ ಸಿಎಂ ಕುರ್ಚಿ ಅಲ್ಲಾಡುತ್ತೆ ಎಂದು ಮಾಜಿ ಸಂಸದ ಪ್ರತಾಪ್ (Prathap Simha) ಸಿಂಹ ಹೇಳಿದ್ದಾರೆ.

    ವಾಲ್ಮೀಕಿ ಹಗರಣದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸೆ.17ಕ್ಕೆ ವಾಲ್ಮೀಕಿ ಹಗರಣ ವಿಚಾರದಲ್ಲಿ ಪಾದಯಾತ್ರೆ ಮಾಡಲು ನಿರ್ಧಾರವಾಗಿದೆ. ಬೆಳಗಾವಿಯಲ್ಲಿ ನಡೆದದ್ದು ಬಿಜೆಪಿ ಅತೃಪ್ತರ ಬಂಡಾಯಗಾರರ ಸಭೆಯಲ್ಲ. ಬಿಜೆಪಿಯ ಜನಪ್ರಿಯ ನೇತಾರ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ನಡೆದ ಸಭೆ ಎಂದರು.

    ನಾವು ಮೈಸೂರು ಚಲೋ ಪಾದಯಾತ್ರೆ ಅನುಭವದ ಹಂಚಿಕೊಂಡಿದ್ದೇವೆ. ವಾಲ್ಮೀಕಿ ಹಗರಣದ ವಿರುದ್ಧ ಸರಿಯಾದ ಹೋರಾಟ ನಡೆದರೆ ಸಿಎಂ ಕುರ್ಚಿ ಅಲ್ಲಾಡುತ್ತೆ. ಬಸನಗೌಡ ಪಾಟೀಲ್ ಯತ್ನಾಳ್‌ರಂತ (Basangouda Patil Yatnal) ಬಹು ದೊಡ್ಡ ನಾಯಕರು ಕರೆದ ಕಾರಣ ನಾನು ಹೋಗಿದ್ದೆ ಎಂದು ಹೇಳಿದರು. ಇದನ್ನೂ ಓದಿ: ಜಮ್ಮು-ಕಾಶ್ಮೀರ: ಭಯೋತ್ಪಾದಕರ ವಿರುದ್ಧದ ಎನ್‌ಕೌಂಟರ್‌ನಲ್ಲಿ ಭಾರತೀಯ ಸೇನಾ ಕ್ಯಾಪ್ಟನ್‌ ಹುತಾತ್ಮ

    ಈ ಪಾದಯಾತ್ರೆ ಯಾರ ಮೇಲಾಟದ ಕಾರ್ಯಕ್ರಮವಲ್ಲ. ಯಾರ ನಾಯಕತ್ವ ಪ್ರದರ್ಶನವೂ ಅಲ್ಲ. ಪಾದಯಾತ್ರೆಗೆ ಹೈಕಮಾಂಡ್ ಅನುಮತಿ ಕೊಡುತ್ತದೆ. ಅನುಮತಿಯೊಂದಿಗೆ ಪಾದಯಾತ್ರೆ ಮಾಡುತ್ತೇವೆ. ಬಿಜೆಪಿ(BJP) ರಾಜ್ಯಾಧ್ಯಕ್ಷರ ಹಾದಿಯಾಗಿ ಎಲ್ಲರನ್ನು ಪಾದಯಾತ್ರೆಗೆ ಕರೆಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಪರಿಷ್ಕರಣೆಗೆ ರಾಜ್ಯ ಸರ್ಕಾರ ಚಿಂತನೆ; ಬಿಪಿಎಲ್ ಮಾನದಂಡ ಫಿಕ್ಸ್?

    ದಿನೇಶ್‌ಗೆ ತಿರುಗೇಟು:
    ಗೌರಿ ಲಂಕೇಶ್ ಆರೋಪಿಯ ಭೇಟಿಯಾದ ವಿಚಾರದ ಕುರಿತು ದಿನೇಶ್ ಗುಂಡೂರಾವ್ ಟ್ವೀಟ್‌ಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ರಾಜಕಾರಣಿಗಳ ಮಕ್ಕಳಿಗೆ ಅಪ್ಪಂದಿರ ಪ್ರತಿಭೆ ವರ್ಗಾವಣೆ ಆಗುವುದಿಲ್ಲ. ದಿನೇಶ್ ಗುಂಡೂರಾವ್ (Dinesh Gundu Rao) ವಿಚಾರದಲ್ಲೂ ಅದೇ ಆಗಿದೆ. ಪ್ರಕರಣದ ಆರೋಪಿಯನ್ನು ಮಾತಾಡಿಸುವುದೇ ತಪ್ಪಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮಂಡ್ಯದಲ್ಲಿ ಮೆಡಿಕಲ್ ಮಾಫಿಯಾ; ಲೋಕಾಯುಕ್ತ ದಾಳಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಅವಧಿ ಮುಗಿದ ಮೆಡಿಸಿನ್ ಪತ್ತೆ

    ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಗರಣದ ವಿಚಾರದಲ್ಲಿ ಸೋನಿಯಾ ಗಾಂಧಿ(Sonia Gandhi), ರಾಹುಲ್ ಗಾಂಧಿ(Rahul Gandhi) ಇಬ್ಬರು ಆರೋಪಿಗಳು. ಕಾಂಗ್ರೆಸ್ ನಾಯಕರು ಯಾಕೆ ಹೋಗಿ ಅವರ ಕಾಲಿಗೆ ಬೀಳುತ್ತಾರೆ? ಅಧಿನಾಯಕ, ಅಧಿನಾಯಕಿ ಅಂತಾ ಕರೆಯುವ ಸೋನಿಯಾ, ರಾಹುಲ್ ಆರೋಪಿ ಸ್ಥಾನದಲ್ಲಿ ಇಲ್ವಾ? ದಿನೇಶ್ ಗುಂಡೂರಾವ್ ತಿಳಿಗೇಡಿ ತನದಲ್ಲಿ ಹೇಳಿಕೆ ಕೊಡುವುದನ್ನು ನಿಲ್ಲಿಸಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೇಜ್ರಿವಾಲ್‌ಗೆ ಜಾಮೀನು ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್

  • ಸಾರ್ವಜನಿಕ ಸಭೆಯಲ್ಲಿ ಸಿದ್ದರಾಮಯ್ಯ ರೌದ್ರಾವತಾರ – ಮಹಿಳೆಯ ಮೈಕ್ ಕಿತ್ತುಕೊಂಡು ಕೋಪ ಪ್ರದರ್ಶನ

    ಸಾರ್ವಜನಿಕ ಸಭೆಯಲ್ಲಿ ಸಿದ್ದರಾಮಯ್ಯ ರೌದ್ರಾವತಾರ – ಮಹಿಳೆಯ ಮೈಕ್ ಕಿತ್ತುಕೊಂಡು ಕೋಪ ಪ್ರದರ್ಶನ

    ಮೈಸೂರು: ಕ್ಷೇತ್ರದ ಶಾಸಕರು ಕೈಗೆ ಸಿಗುವುದಿಲ್ಲ ಎಂದು ಸಾರ್ವಜನಿಕ ಸಭೆಯಲ್ಲಿ ದೂರು ನೀಡಿದ್ದಕ್ಕೆ ಟೇಬಲ್ ಕುಟ್ಟಿದ ಮಹಿಳೆಯ ಮೈಕ್ ಕಿತ್ತುಕೊಂಡು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ರೌದ್ರಾವತಾರ ಪ್ರದರ್ಶಿಸಿದ್ದಾರೆ.

    ಜಿಲ್ಲೆಯ ವರುಣಾ ವಿಧಾನಸಭಾ ವ್ಯಾಪ್ತಿಯ ಗರ್ಗೇಶ್ವರಿ ಗ್ರಾಮದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ವೇಳೆ ಈ ಘಟನೆ ನಡೆದಿದೆ. ನಿಮ್ಮ ಮಗ ಎಂಎಲ್‍ಎ ಆಗಿದ್ದಾರೆ. ಆದ್ರೆ ಕ್ಷೇತ್ರದ ಜನರ ಕೈಗೆ ಸಿಗುತ್ತಿಲ್ಲ ಎಂದು ಶಾಸಕ ಯತೀಂದ್ರ ಅವರ ವಿರುದ್ಧ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಜಮಲಾರ್ ಟೇಬಲ್ ಕುಟ್ಟಿ ಏರು ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಕೋಪಗೊಂಡ ಸಿದ್ದರಾಮಯ್ಯ ಎಲ್ಲರ ಎದುರೇ ಮಹಿಳೆ ಕೈಯಲ್ಲಿದ್ದ ಮೈಕನ್ನು ಕಿತ್ತುಕೊಂಡು ಸಿಡಿಮಿಡಿಗೊಂಡಿದ್ದಾರೆ.

    ನಿಮ್ಮ ಮಗ ಕೈಗೆ ಸಿಗಲ್ಲ ಎಂದು ದೂರು ಹೇಳಿದಕ್ಕೆ ಕೆಂಡಮಂಡಲರಾದ ಸಿದ್ದರಾಮಯ್ಯ, ಮಹಿಳೆಯನ್ನು ತರಾಟೆಗೆ ತೆಗೆದುಕೊಂಡು ಬಾಯಿ ಮುಚ್ಚಿಸಿದರು. ಅಷ್ಟೇ ಅಲ್ಲದೆ ಏನಮ್ಮ ನಾವು ದೇಶಕ್ಕೆ ಅನ್ಯಾಯ ಮಾಡಿರುವ ಥರ ಮಾತಾಡ್ತಿದ್ದೀಯಾ. ನನ್ನ ಮುಂದೆಯೇ ಟೆಬಲ್ ಕುಟ್ಟಿ ಮಾತನಾಡುತ್ತಿದ್ದಿಯಾ? ಕುತ್ಕೊಳಮ್ಮ ಸುಮ್ಮನೆ ಎಂದು ಕೊನೆಗೆ ಮಹಿಳೆ ಬಳಿ ಇದ್ದ ಮೈಕ್ ಕಿತ್ತುಕೊಂಡು ಕೋಪ ಪ್ರದರ್ಶಿಸಿದರು.

    https://www.youtube.com/watch?v=U55ame3QXpU

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೈ ಶಾಸಕರು ಸಿದ್ದರಾಮಯ್ಯನವರನ್ನು ಹೊಗಳಿದರೆ ತಪ್ಪೇನು: ಪರಮೇಶ್ವರ್ ಪ್ರಶ್ನೆ

    ಕೈ ಶಾಸಕರು ಸಿದ್ದರಾಮಯ್ಯನವರನ್ನು ಹೊಗಳಿದರೆ ತಪ್ಪೇನು: ಪರಮೇಶ್ವರ್ ಪ್ರಶ್ನೆ

    ಬೆಂಗಳೂರು: ಕಾಂಗ್ರೆಸ್ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಹೊಗಳಿದರಲ್ಲಿ ತಪ್ಪೇನಿದೆ ಎಂದು ಡಿಸಿಎಂ ಪರಮೇಶ್ವರ್ ಪ್ರಶ್ನಿಸಿದ್ದಾರೆ.

    ಕುರುಬ ಸಮುದಾಯದ ಕಾರ್ಯಕ್ರಮದಲ್ಲಿ ಶಾಸಕರು ಹೊಗಳಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು. ಹೀಗಾಗಿ ಅವರನ್ನು ಹೊಗಳಿರಬಹುದು. ಸಿದ್ದರಾಮಯ್ಯ ಐದು ವರ್ಷ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಈ ಕಾರಣಕ್ಕೆ ಅವರನ್ನು ತಮ್ಮ ಅಭಿಪ್ರಾಯವನ್ನು ಹೇಳಿರಬಹುದು ಎಂದು ತಿಳಿಸಿದರು.

    ಸಮ್ಮಿಶ್ರ ಸರ್ಕಾರ ರಚನೆಯಾಗಿ 7 ತಿಂಗಳು ಆಗಿದ್ದರೂ ಒಂದೇ ಒಂದು ಕೆಲಸ ಆಗಿಲ್ಲ ಎಂದು ಯಶವಂತಪುರದ ಶಾಸಕ ಸೋಮಶೇಖರ್ ಹೇಳಿಕೆಗೆ ಟಾಂಗ್ ಕೊಟ್ಟ ಅವರು, ಸೋಮಶೇಖರ್ ರವರಿಗೆ ಸರಿಯಾದ ಮಾಹಿತಿ ಇಲ್ಲ ಎಂದು ಕಾಣುತ್ತದೆ. ಅವರಿಗೆ ಸರಿಯಾದ ಮಾಹಿತಿ ನೀಡಿ ಸರಿ ಮಾಡುತ್ತೇವೆ. ನಮ್ಮ ಸಮ್ಮಿಶ್ರ ಸರ್ಕಾರದಲ್ಲಿ ಅನೇಕ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.

    ಬೆಂಗಳೂರು ಬಗ್ಗೆ ಇಲ್ಲಿನ ಇತಿಹಾಸದ ಬಗ್ಗೆ, ಅಭಿವೃದ್ಧಿ ಬಗ್ಗೆ ಸಿಎಂ ಅವರು ಮಾತನಾಡುತ್ತಾರೆ. ಆದರೆ ಯಾವುದನ್ನು ಸಿಎಂ ಕುಮಾರಸ್ವಾಮಿ ಮಾಡಿಲ್ಲ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು 7 ತಿಂಗಳು ಕಳೆದರೂ ಯಾವುದೇ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಅವನ್ನೆಲ್ಲ ನಾವು ಹೇಳಲು ಹೋದರೆ ಬೇರೆ ಬೇರೆ ಅರ್ಥ ಪಡೆದುಕೊಳ್ಳುತ್ತದೆ. ಯಾವ ವ್ಯವಸ್ಥೆಯನ್ನು ಜನರಿಗೆ ನೀಡಲು ಸಿಎಂ ಅವರಿಗೆ ಸಾಧ್ಯವಾಗಿಲ್ಲ ಎಂದು ಕುರುಬ ಸಮುದಾಯದ ಕಾರ್ಯಕ್ರಮದಲ್ಲಿ ಎಸ್.ಟಿ ಸೋಮಶೇಖರ್ ಹೇಳಿಕೆ ನೀಡಿದ್ದರು.

    ಈ ಕಾರ್ಯಕ್ರಮದಲ್ಲಿ ಎಂ.ಟಿ.ಬಿ ನಾಗರಾಜ್ ಮಾತನಾಡಿ, ಆಂಜನೇಯನ ಎದೆ ಬಗಿದರೆ ಹೇಗೆ ರಾಮ ಕಾಣುತ್ತಾನೋ ಹಾಗೆಯೇ ನನ್ನ ಎದೆ ಬಗಿದರೆ ಸಿದ್ದರಾಮಯ್ಯನವರೇ ಕಾಣುತ್ತಾರೆ. ನಾನು ಯಾವತ್ತೂ ಸಿದ್ದರಾಮಯ್ಯನವರ ಜಪ ಮಾಡುತ್ತೇನೆ ಎಂದಿದ್ದರು.

    https://www.youtube.com/watch?v=OflAzK4wALY

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಎಂ ರಾಜೀನಾಮೆ ಹೇಳಿಕೆಗೆ ಕಾರಣವಾದ ಸಿದ್ದು ಶಿಷ್ಯರು ಹೇಳಿದ 5 ಹೇಳಿಕೆಗಳು – ವಿಡಿಯೋ ನೋಡಿ

    ಸಿಎಂ ರಾಜೀನಾಮೆ ಹೇಳಿಕೆಗೆ ಕಾರಣವಾದ ಸಿದ್ದು ಶಿಷ್ಯರು ಹೇಳಿದ 5 ಹೇಳಿಕೆಗಳು – ವಿಡಿಯೋ ನೋಡಿ

    ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆಯ ಸಮಸ್ಯೆ ಇದ್ದು ಅಂತರಿಕವಾಗಿ ಜಗಳ ನಡೆಯುತಿತ್ತು. ಆದರೆ ಈಗ ಬಹಿರಂಗವಾಗಿಯೇ ಕಾಂಗ್ರೆಸ್ ಶಾಸಕರು ಸರ್ಕಾರದ ಬಗ್ಗೆ ಹೇಳಿಕೆ ನೀಡಿದ್ದು ಕುಮಾರಸ್ವಾಮಿ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.

    ಈ ಮಧ್ಯೆ ಪ್ರತಿ ಪಕ್ಷ ಬಿಜೆಪಿ ನಾಯಕರು ಮಾನ, ಮರ್ಯಾದೆ ಇದ್ದರೆ ಕುಮಾರಸ್ವಾಮಿ ರಾಜೀನಾಮೆ ನೀಡಲಿ ಎಂದು ಸವಾಲು ಎಸೆದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಶಿಷ್ಯರಾದ ಎಸ್.ಟಿ ಸೋಮಶೇಖರ್, ಎಂ.ಟಿ.ಬಿ ನಾಗರಾಜ್, ಡಾ.ಸುಧಾಕರ್, ಪುಟ್ಟರಂಗಶೆಟ್ಟಿ, ಎಚ್.ಎಂ ರೇವಣ್ಣ ನೀಡಿದ ಹೇಳಿಕೆಗಳನ್ನು ಇಲ್ಲಿ ನೀಡಲಾಗಿದೆ. ಇದನ್ನೂ ಓದಿ:ಸಿದ್ದರಾಮಯ್ಯನವ್ರ ಬಗ್ಗೆ 4 ಒಳ್ಳೆ ಮಾತಾಡಿದ್ದೆ ಅಷ್ಟೇ, ಜೆಡಿಎಸ್‍ನವ್ರು ಏನ್ ಬೇಕಿದ್ರೂ ಕಾಮೆಂಟ್ಸ್ ಮಾಡ್ಕೊಳ್ಳಲಿ-ಸೋಮಶೇಖರ್

    ಎಸ್.ಟಿ ಸೋಮಶೇಖರ್:
    ಬೆಂಗಳೂರು ಬಗ್ಗೆ ಇಲ್ಲಿನ ಇತಿಹಾಸದ ಬಗ್ಗೆ, ಅಭಿವೃದ್ಧಿ ಬಗ್ಗೆ ಸಿಎಂ ಅವರು ಮಾತನಾಡುತ್ತಾರೆ. ಆದರೆ ಯಾವುದನ್ನು ಸಿಎಂ ಕುಮಾರಸ್ವಾಮಿ ಮಾಡಿಲ್ಲ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು 7 ತಿಂಗಳು ಕಳೆದರೂ ಯಾವುದೇ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಅವನ್ನೆಲ್ಲ ನಾವು ಹೇಳಲು ಹೋದರೆ ಬೇರೆ ಬೇರೆ ಅರ್ಥ ಪಡೆದುಕೊಳ್ಳುತ್ತದೆ. ಯಾವ ವ್ಯವಸ್ಥೆಯನ್ನು ಜನರಿಗೆ ನೀಡಲು ಸಿಎಂ ಅವರಿಗೆ ಸಾಧ್ಯವಾಗಿಲ್ಲ. ಇದನ್ನೂ ಓದಿ: ನಾನು ರಾಜೀನಾಮೆಗೆ ಸಿದ್ಧ: ಸಿಎಂ ಹೆಚ್‍ಡಿಕೆ ಹೊಸ ಬಾಂಬ್

    ಎಂ.ಟಿ.ಬಿ ನಾಗರಾಜ್:
    ಆಂಜನೇಯನ ಎದೆ ಬಗಿದರೆ ಹೇಗೆ ರಾಮ ಕಾಣುತ್ತಾನೋ ಹಾಗೆಯೇ ನನ್ನ ಎದೆ ಬಗಿದರೆ ಸಿದ್ದರಾಮಯ್ಯನವರೇ ಕಾಣುತ್ತಾರೆ. ನಾನು ಯಾವತ್ತೂ ಸಿದ್ದರಾಮಯ್ಯನವರ ಜಪ ಮಾಡುತ್ತೇನೆ.

    ಸುಧಾಕರ್:
    ಸಿದ್ದರಾಮಯ್ಯ ಅವರು ನಮ್ಮ ಪಾಲಿಗೆ ಮಾಜಿ ಸಿಎಂ ಅಲ್ಲ ಇವತ್ತಿಗೂ ಮುಖ್ಯಮಂತ್ರಿ ಆಗಿಯೇ ಇದ್ದಾರೆ. ಒಬ್ಬರ ಮೇಲೆ ಇನ್ನೊಬ್ಬರು ದೂರುವುದು, ಅಪಪ್ರಚಾರ ಮಾಡುವುದು ರಾಜಕೀಯದಲ್ಲಿ ಸಹಜ. ಮಹಾಭಾರತದಲ್ಲಿ ಶಕುನಿ ಧರ್ಮರಾಯನನ್ನು ಮೋಸದಿಂದ ಸೋಲಿಸಿದ ಹಾಗೆ ಸಿದ್ದರಾಮಯ್ಯ ಅವರನ್ನು ದೂರಿ ಚುನಾವಣೆಯಲ್ಲಿ ಸೋಲಿಸಿದ್ದಾರೆ. ಆದರೆ ಮತ್ತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಲು ಯಾರಿಗೂ ತಪ್ಪಿಸಲು ಆಗುವುದಿಲ್ಲ. ಇದು ನನ್ನ ಮಾತಲ್ಲ ಕರ್ನಾಟಕದ ಜನರು ಹೇಳುವ ಮಾತು. ಇದನ್ನೂ ಓದಿ: ನನ್ನ ಎದೆ ಬಗೆದ್ರೆ ಸಿದ್ದರಾಮಯ್ಯ ಇರ್ತಾರೆ- ಎಂಟಿಬಿ ನಾಗರಾಜ್


    ಪುಟ್ಟರಂಗಶೆಟ್ಟಿ:
    ನಮ್ಮೊಂದಿಗೆ ಹಿಂದುಳಿದ ವರ್ಗದ ನಾಯಕರಿದ್ದಾರೆ. ಕಾರಣಾತರಗಳಿಂದ ಅವರು ಸಿಎಂ ಆಗದಿರಬಹುದು. ಆದರೆ ನಮ್ಮಲ್ಲಿ ಆಗುವ ಸಮಸ್ಯೆಯನ್ನು ನಾವು ಸಿದ್ದರಾಮಯ್ಯನವರ ಮುಂದೆ ಹೇಳಿಕೊಳ್ಳುತ್ತೇವೆ ವಿನಾ: ಬೇರೆಯವರ ಬಳಿ ಹೇಳಲು ಸಾಧ್ಯವಿಲ್ಲ.

    ಎಚ್.ಎಂ ರೇವಣ್ಣ :
    ಬಸವಣ್ಣ ಅವರ ತತ್ವವನ್ನು ಪಾಲಿಸುವಂತೆ ಮಾಡಿದವರು ಯಾರೋ ನಿನ್ನೆ ಆದ ಮುಖ್ಯಮಂತ್ರಿಗಳಲ್ಲ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಡಿದ್ದು. ಅವರು ಎಲ್ಲರನ್ನು ಒಂದೇ ರೀತಿಯಲ್ಲಿ ಕಾಣುತ್ತಿದ್ದರು. ಇವತ್ತು ಬೆಂಗಳೂರು ಕಟ್ಟಿದಂತಹ ಕೆಂಪೇಗೌಡರ ಹೆಸರಲ್ಲಿ ಪ್ರಾಧಿಕಾರ ಹಾಗೂ ಜಯಂತಿ ಮಾಡಿದ್ದು ಸಿದ್ದರಾಮಯ್ಯನವರೇ ಹೊರತು ಯಾವ ಮಣ್ಣಿನ ಮಕ್ಕಳು ಮಾಡಿಲ್ಲ. ಇದನ್ನೂ ಓದಿ: ನಮ್ಮ ಶಾಸಕರನ್ನು ನಾವೇ ಕಂಟ್ರೋಲ್ ಮಾಡ್ತೀವಿ, ಎಚ್‍ಡಿಕೆಯನ್ನು ಮಾತಾಡಿಸ್ತೇನೆ- ಮಾಜಿ ಸಿಎಂ

    ಸಿಎಂ ಹೇಳಿದ್ದೇನು?
    ಕಾಂಗ್ರೆಸ್ ಶಾಸಕರು ಬಹಿರಂಗ ಸಮಾವೇಶಗಳಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ಸಿನ ಎಲ್ಲಾ ನಾಯಕರು ಸೇರಿಕೊಂಡು ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದೇವೆ. ನಾನು ಮತ್ತು ಡಿಸಿಎಂ ಸೇರಿದಂತೆ ಸಂಪುಟದ ಸಚಿವರು ಕೆಲಸ ಮಾಡುತ್ತಿದ್ದಾರೆ. ಕೆಲವರಿಗೆ ನನ್ನ ಕಾರ್ಯವೈಖರಿ ಇಷ್ಟ ಆಗುತ್ತಿಲ್ಲ ಅಂದ್ರೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    https://www.youtube.com/watch?v=6ngWqDA84-c

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಂಗ್ರೆಸ್ ಶಾಸಕರ ಪತ್ನಿಯರಿಗೆ ತಾಳಿ ಕಳೆದುಕೊಳ್ಳುವ ಭಯ ಆರಂಭವಾಗಿದೆ: ಕೆಎಸ್ ಈಶ್ವರಪ್ಪ

    ಕಾಂಗ್ರೆಸ್ ಶಾಸಕರ ಪತ್ನಿಯರಿಗೆ ತಾಳಿ ಕಳೆದುಕೊಳ್ಳುವ ಭಯ ಆರಂಭವಾಗಿದೆ: ಕೆಎಸ್ ಈಶ್ವರಪ್ಪ

    ಬಾಗಲಕೋಟೆ: ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರ ಪತ್ನಿಯರಿಗೆ ತಾಳಿ ಕಳೆದುಕೊಳ್ಳುವ ಭಯ ಆರಂಭವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಅವರೆ ರೆಸಾರ್ಟಿಗೆ ಹೋಗಬೇಡಿ ಅಂತ ಹೇಳ್ತಾರೆ. ಆ ಮಟ್ಟಿಗೆ ಕಾಂಗ್ರೆಸ್ ಶಾಸಕರು ಹೊಡೆದಾಡಿಕೊಳ್ಳುತ್ತಿದ್ದಾರೆ ಎಂದು ಕೆಎಸ್ ಈಶ್ವರಪ್ಪ ಅವರು ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, ಸಿದ್ದರಾಮಯ್ಯ ಅವರು ಲಫಂಗ ರಾಜಕಾರಣ ಮಾಡುತ್ತಿದ್ದು, ಅವರ ಶಾಸಕರು ಹೊಡೆದಾಡಿದ್ದಾರೆ. ಈ ಕುರಿತು ರಾಜ್ಯ ಜನರ ಕ್ಷಮೆಯನ್ನು ಸಿದ್ದರಾಮಯ್ಯ ಅವರು ಕೇಳಿ ಸಮನ್ವಯ ಸಮಿತಿಗೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

    ಪದೇ ಪದೇ ಮುಂದಿನ ಸಿಎಂ ನಾನೇ ಎಂದು ಸಿದ್ದರಾಮಯ್ಯ ಅವರು ಹೇಳ್ತಾರೆ. ಅವರೇನಾದರು ಕುಡಿದ್ದೀರಾ?, ಜೆಡಿಎಸ್‍ಗೆ ಟೋಪಿ ಹಾಕಿ ಕಾಂಗ್ರೆಸ್‍ಗೆ ಹೋದ್ರಿ, ಆಗ ಎಷ್ಟು ಹಣ ತೆಗೆದುಕೊಂಡು ಹೋಗಿದ್ದೀರಿ ಎಂದು ಸ್ಪಷ್ಟಪಡಿಸಿ. ಉಡಾಫೆ ಮಾತು ಹೇಳುವುದರಲ್ಲಿ, ಲಫಂಗ ರಾಜಕಾರಣ ಮಾಡುವುದರಲ್ಲಿ ಸಿದ್ದರಾಮಯ್ಯ ಅವರು ಮುಂದಿದ್ದಾರೆ. ಅವರು ಸುಳ್ಳಿನ ಸರದಾರರು ಎಂದು ವಾಗ್ದಾಳಿ ನಡೆಸಿದರು.

    ರಾಜಕೀಯ ಸನ್ಯಾಸತ್ವ:
    ಇದೇ ವೇಳೆ ನಾನು ಕೇವಲ ಕುರುಬ ಸಮಾಜದ ನಾಯಕ ಮಾತ್ರ ಅಲ್ಲ, ನಾನು ಹಿಂದೂ ನಾಯಕ ಅದರಲ್ಲಿ ಕುರುಬರು ಇದ್ದಾರೆ. ಬಿಎಸ್‍ವೈ ಸಿಎಂ ಆಗಿದ್ದ ಕಾಲದಲ್ಲಿ ಎಷ್ಟು ಹಣ ಕುರುಬ ಸಮುದಾಯಕ್ಕೆ ಬಿಡುಗಡೆ ಮಾಡಿದ್ದೇವೆ ಹಾಗೂ ನಿಮ್ಮ ಅಧಿಕಾರಾವಧಿಯಲ್ಲಿ ಎಷ್ಟು ಹಣ ಬಿಡುಗಡೆಯಾಗಿದೆ ಎಂದು ದಾಖಲೆ ಬಿಡುಗಡೆ ಮಾಡಿ. ನಮಗಿಂತ ಹೆಚ್ಚು ಕೊಟ್ಟಿದ್ದರೆ ನಾನು ರಾಜಕೀಯ ಸನ್ಯಾಸತ್ವ ಪಡೆಯುತ್ತೇನೆ ಎಂದು ಸವಾಲು ಎಸೆದರು.

    ಇದೇ ವೇಳೆ ದೇಶಕ್ಕಾಗಿ ಆರ್ ಎಸ್‍ಎಸ್‍ನವರ ಮನೆಯ ಒಂದು ನಾಯಿ ಕೂಡ ಸತ್ತಿಲ್ಲ ಎಂಬ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಟಾಂಗ್ ನೀಡಿದ ಅವರು, ನಾಯಿ, ಲಫಂಗ ಎಂದು ಪದ ಬಳಸುವವರು ಯಾರು? ಈಗ ನಾಯಿ ಜೊತೆಗೆ ಸಂಬಂಧ ಇಟ್ಟುಕೊಂಡರೋ ಎಂದು ತಿರುಗೇಟು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾವಲ್ಲ, ಕಾಂಗ್ರೆಸ್ಸಿನವರಿಂದ ಲಫಂಗ ರಾಜಕಾರಣ : ಈಶ್ವರಪ್ಪ ಕಿಡಿ

    ನಾವಲ್ಲ, ಕಾಂಗ್ರೆಸ್ಸಿನವರಿಂದ ಲಫಂಗ ರಾಜಕಾರಣ : ಈಶ್ವರಪ್ಪ ಕಿಡಿ

    ವಿಜಯಪುರ: ಲಫಂಗ ರಾಜಕಾರಣ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷದವರೇ ಹೊರತು ಬಿಜೆಪಿಯವರಲ್ಲ. ಭೀಕರ ಬರ ಅಧ್ಯಯನಕ್ಕಾಗಿ ಬಿಜೆಪಿ ತಂಡ ಮುಂದಾಗಿರುವುದನ್ನು ನೋಡಿ ಆದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲಫಂಗ ರಾಜಕಾರಣ ಎಂಬ ಪದವನ್ನು ಯಾವ ಸಿಎಂ ಕೂಡ ಈವರೆಗೆ ಹೇಳಿಲ್ಲ. ಆದ್ರೆ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂದು ಹೇಳಿರುವ ಸಿದ್ದರಾಮಯ್ಯ ಹೆಣ್ಣು ಹುಡುಕುತ್ತಿದ್ದಾರಾ ಎಂದು ಪ್ರಶ್ನಿಸಿದರು.

    ಸಿದ್ದಗಂಗಾ ಸ್ವಾಮೀಜಿಗಳ ಕ್ರಿಯಾ ಸಮಾಧಿ ಕಾರ್ಯ ಮುಗಿಯುವವರೆಗೂ ಯಡಿಯೂರಪ್ಪ ಅವರು ಸಿದ್ದಗಂಗಾ ಮಠದಲ್ಲೇ ಇದ್ದರು. ಇಹಲೋಕ ತ್ಯಜಿಸಿದವರ ಹೆಸರು ಇಟ್ಟುಕೊಂಡು ರಾಜಕೀಯ ಮಾಡುತ್ತಿರುವ ಸಿದ್ದರಾಮಯ್ಯ ಉದ್ಧಾರ ಆಗಲ್ಲ. ಪ್ರತಿಪಕ್ಷದಲ್ಲಿ ಕುಳಿತಿರುವ ಅನುಭವ ಸಿದ್ದರಾಮಯ್ಯ ಅವರಿಗಿಲ್ಲ. ಅವರು ಕಾಂಗ್ರೆಸ್ಸಿಗೆ ಹೋದಾಗ ಎಷ್ಟು ಹಣ ಪಡೆದಿದ್ದರು ಎಂಬುದನ್ನು ಬಹಿರಂಗ ಪಡಿಸಲಿ. ಕಾಂಗ್ರೆಸ್ಸಿನಲ್ಲಿ ಸಚಿವರು ಮತ್ತು ಶಾಸಕರಲ್ಲಿ ಅಸಮಾಧಾನ ಇದೆ. ಸುಭಾಷ್ ಗುತ್ತೆದಾರ್ ಅವರಿಗೆ ಆಫರ್ ಕೊಟ್ಟಿಲ್ಲ ಎಂದು ದೇವರನ್ನು ನಂಬಿರುವ ಎಚ್. ಡಿ. ಕುಮಾರಸ್ವಾಮಿ ಹೇಳಲಿ. ವೇಣುಗೋಪಾಲ್, ದಿನೇಶ್ ಗುಂಡೂರಾವ್ ಕಾಗದದ ಹುಲಿ. ರೆಸಾರ್ಟಿನಲ್ಲಿ ಶಾಸಕನ ಮೇಲೆ ಕೊಲೆ ಯತ್ನ ಮಾಡಲಾಗಿದೆ. ಲಫಂಗ ರಾಜಕಾರಣ ಮಾಡುತ್ತಿರುವವರು ಯಾರು? ತಾಕತ್ತಿದ್ದರೆ ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟು ಹೊರ ಬರಲಿ ಎಂದು ಸವಾಲ್ ಹಾಕಿದರು.

    ಎರಡು ತಿಂಗಳ ಹಿಂದೆಯಿಂದಲೇ 6 ತಂಡಗಳಂದು ರಚಿಸಿ ಬರ ಅಧ್ಯಯನ ಪ್ರವಾಸ ಕೈಗೊಳ್ಳಲಾಗಿದೆ. ವಿಧಾನ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿಲ್ಲ. ಯಾವ ಉಸ್ತುವಾರಿ ಸಚಿವರು ಬರ ಪಿಡಿತ ಪ್ರದೇಶಕ್ಕೆ ಭೇಟಿ ನೀಡಿಲ್ಲ, ಪರಿಹಾರ ಘೋಷಿಸಿಲ್ಲ. ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಬರ ಅಧ್ಯಯನ ಪ್ರವಾಸಕ್ಕೆ ಹೋಗಲಾಗುವುದು ಎಂದು ಬೆಳಗಾವಿ ಅಧಿವೇಶನದಲ್ಲಿ ಹೇಳಿದ್ದರು. ಆದರೂ ಪ್ರವಾಸ ಮಾಡಿಲ್ಲ. ಬಿಜೆಪಿ ಎರಡನೇ ಬಾರಿ ಬರ ಪ್ರವಾಸ ಮಾಡಿದ ನಂತರ ಸರ್ಕಾರದಿಂದ ಬರ ಅಧ್ಯಯನ ಪ್ರವಾಸ ಆರಂಭವಾಯ್ತು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಬರದ ಬಗ್ಗೆ ಪರಿಶೀಲಿಸಲು ಸಿಎಂ ಕಳುಹಿಸಬೇಕು, ರೈತರಿಗೆ ಧೈರ್ಯ ಹೇಳಬೇಕು. ಈವರೆಗೂ ಸಾಲಮನ್ನಾ ತಲುಪಿಲ್ಲ. ರಾಜಕೀಯ ತಂತ್ರಗಾರಿಕೆ ಬಿಟ್ಟು ಬಜೆಟ್‍ನಲ್ಲಿ ಸಾಲಮನ್ನಾಕ್ಕಾಗಿ ಹಣ ಮೀಸಲಿಡಲಿ ಎಂದು ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾರಿದರು.

    ಸಚಿವರೆಲ್ಲ ಅಧಿಕಾರಿಗಳ ವರದಿಯನ್ನೇ ನಂಬಿ ಕುಳಿತಿದ್ದಾರೆ. ವರ್ಗಾವಣೆ ದಂಧೆ ಸಮ್ಮಿಶ್ರ ಸರ್ಕಾರದ ಇಬ್ಬರು ನಾಯಕರಿಗೆ ದೊಡ್ಡ ವರವಾಗಿದೆ. ಸಿಎಂ ಕುಮಾರ ಸ್ವಾಮಿ ಹಾಗೂ ಸಚಿವ ರೇವಣ್ಣ ಇದರಲ್ಲಿದ್ದಾರೆ. ಆದ್ರೆ ಈ ಬಗ್ಗೆ ಕಾಂಗ್ರೆಸ್ ನಾಯಕರಿಗೆ ತಿಳಿದಿದ್ದರೂ ಇದಕ್ಕೆ ಬ್ರೇಕ್ ಹಾಕಲು ಇಚ್ಛಿಸುತ್ತಿಲ್ಲ. ರಾಜಕೀಯ ತಂತ್ರಗಾರಿಕೆಯಿಂದ ರಾಜ್ಯದಲ್ಲಿ ಆಡಳಿತ ಕುಲಗೆಟ್ಟು ಹೋಗಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಕಾಂಗ್ರೆಸ್ ನಾಯಕರು ಹೆದರುತ್ತಿದ್ದಾರೆ. ಕಾಂಗ್ರೆಸ್ ಅವರು ಬರುವ ಚುನಾವಣೆಗೆ ಬೇಕಾಗುವ ಹಣವನ್ನು ಕೂಡಿಡುತ್ತಿದ್ದಾರೆ ಅಂತ ಅನುಮಾನವಿದೆ ಎಂದರು.

    ಆನಂದ್ ಸಿಂಗ್ ಮೇಲೆ ಹಲ್ಲೆ ಸಂದರ್ಭದಲ್ಲಿ ಡಿಕೆಶಿ ಸಹೋದರರು ಸುಳ್ಳು ಹೇಳಿದ್ದರು. ಬಿಜೆಪಿ ಯಾವುದೇ ಕಾರಣಕ್ಕೆ ಕಾಂಗ್ರೆಸ್, ಜೆಡಿಎಸ್ ಅವರನ್ನು ನಮ್ಮ ಪಕ್ಷಕ್ಕೆ ಬನ್ನಿ ಎಂದು ಕರೆಯಲ್ಲ. ಕಾಂಗ್ರೆಸ್ ಶಾಸಕರನ್ನು ಕರೆದರೆ ಅವರ ಪತ್ನಿಯರು ಕಳುಹಿಸಿಕೊಡೊಲ್ಲ. ಕಾಂಗ್ರೆಸ್ ಪಕ್ಷದ್ದು ಗೂಂಡಾ ಸಂಸ್ಕೃತಿಯೋ ಇಲ್ಲವೇ ಬುದ್ಧಿ ಭ್ರಮಣೆಯಾಗಿದೆಯೋ ಗೊತ್ತಿಲ್ಲ. ಸಿದ್ದರಾಮಯ್ಯ ಅವರ ಬಗ್ಗೆ ಜನರಿಗೆ ಗೊತ್ತಿದೆ. ವಿಧಾನ ಸಭೆ ಚುನಾವಣೆಯಲ್ಲಿ 104 ಸ್ಥಾನ ಪಡೆದಿದ್ದೇವೆ. ಭೂತ್ ಮಟ್ಟದಲ್ಲಿ ಪಕ್ಷ ಬಲಿಷ್ಠವಾಗಿದೆ. ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಲಿ ಎಂಬುದು ನನ್ನ ಆಸೆ. ಕಾಂಗ್ರೆಸ್-ಜೆಡಿಎಸ್ ಸೀಟು ಹೊಂದಾಣಿಕೆಯಿಂದ ಬಿಜೆಪಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಈಶ್ವರಪ್ಪ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೋಸ್ತಿ ಸರ್ಕಾರದ ನಾಯಕರು ಮಕ್ಕಳ ಕಳ್ಳರು: ಈಶ್ವರಪ್ಪ ವಾಗ್ದಾಳಿ

    ದೋಸ್ತಿ ಸರ್ಕಾರದ ನಾಯಕರು ಮಕ್ಕಳ ಕಳ್ಳರು: ಈಶ್ವರಪ್ಪ ವಾಗ್ದಾಳಿ

    ಬೆಂಗಳೂರು: ದೋಸ್ತಿ ಸರ್ಕಾರದ ನಾಯಕರು ಮಕ್ಕಳ ಕಳ್ಳರು ಇದ್ದಂತೆ. ಅವರಿಂದ ನಮ್ಮ ಬಿಜೆಪಿ ಶಾಸಕರನ್ನ ಕಾಪಾಡಿಕೊಳ್ಳಲು ರೆಸಾರ್ಟ್‍ನಲ್ಲಿ ಉಳಿದುಕೊಳ್ಳಬೇಕಾಯಿತು ಎಂದು ಮೈತ್ರಿ ಸರ್ಕಾರದ ನಾಯಕರ ವಿರುದ್ಧ ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

    ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಜೊತೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧಿವೇಶನಕ್ಕೆ ನಾವೆಲ್ಲ ಹೋಗಿದ್ದು, ಲೋಕಸಭಾ ಚುನಾವಣಾ ತಯಾರಿ ಹಿನ್ನೆಲೆ ಅಲ್ಲೇ ಎರಡು ದಿನ ಉಳಿದಿದ್ದೇವೆ. ಕಾಂಗ್ರೆಸ್ ಭಿನ್ನಮತದಿಂದ ಕೆಲವರು ಪಕ್ಷ ಬಿಟ್ಟು ಹೊರಬರುತ್ತಿದ್ದಾರೆ. ಆದರಿಂದ ಬಿಜಪಿ ಶಾಸಕರನ್ನ ಕಾಂಗ್ರೆಸ್ ತಮ್ಮತ್ತ ಸೆಳೆಯಲು ಪ್ರಯತ್ನ ಮಾಡುತ್ತಿದೆ. ಶಾಸಕ ಸುಭಾಷ್ ಗುತ್ತೆದಾರ್‍ಗೆ ಕುಮಾರಸ್ವಾಮಿ ಆಫರ್ ನೀಡಿ, ಪಕ್ಷಕ್ಕೆ ಬನ್ನಿ ಮಂತ್ರಿ ಮಾಡ್ತೀವಿ ಅಂತ ಆಸೆ ತೋರಿಸಿದ್ದರು. ಬಿಜೆಪಿಯ 3 ಎಂಎಲ್‍ಎ ನಮ್ಮ ಸಂಪರ್ಕದಲ್ಲಿ ಇದ್ದಾರೆ ಅಂತ ಸಿಎಂ ಅವರೇ ಹೇಳಿದ್ದಾರೆ. ಮೈತ್ರಿ ಸರ್ಕಾರದಲ್ಲಿರುವ ಗುಂಪುಗಾರಿಕೆ, ಗೊಂದಲ ಸರಿ ಮಾಡಿಕೊಳ್ಳಲು ಬಿಜೆಪಿಯವರ ಮೇಲೆ ಕಣ್ಣು ಹಾಕಿದ್ದಾರೆ. ಮಕ್ಕಳ ಕಳ್ಳರು ಬಂದಾಗ ಮಕ್ಕಳನ್ನ ಜೋಪಾನ ಮಾಡೋದು ನಮ್ಮ ಕರ್ತವ್ಯ. ಹೀಗಾಗಿ ಲೋಕಸಭಾ ಚುನಾವಣಾ ತಯಾರಿಯೂ ಆಯ್ತು. ಮಕ್ಕಳ ಕಳ್ಳರಿಂದ ಶಾಸಕರ ರಕ್ಷಣೆ ಮಾಡಿದಂತಾಯ್ತು. ಇದಕ್ಕಾಗಿ ನಾವು ದೆಹಲಿಯಲ್ಲೇ ತಂಗಿದ್ದೇವು ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.

    ಯಡಿಯೂರಪ್ಪನವರಿಗೆ ವಯಸ್ಸಾಗಿದೆ ಅಂತ ಮಾತಾಡಿದ್ದು ನಮಗೆ ತುಂಬಾ ನೋವಾಗಿದೆ. ಕಾಂಗ್ರೆಸ್ ಮನೆ ಯಜಮಾನ ಸರಿ ಇಲ್ಲ. ಅವರ ಪಕ್ಷದ ಕೆಲ ಶಾಸಕರು ಸಿಎಲ್‍ಪಿಗೆ ಹೋಗಿಲ್ಲ. ಅವರ ಮನೆ ಸರಿ ಇಟ್ಟುಕೊಳ್ಳದೇ ಬಿಜೆಪಿ ಮೇಲೆ ಅಪಾದನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ವಯಸ್ಸಾಗಿಲ್ವಾ? ಇನ್ನೂ ಯುವಕರೇ? ಹುಚ್ಚು ಹುಚ್ಚಾಗಿ ಮಾತನಾಡುತ್ತಿರುವ ಸಿದ್ದರಾಮಯ್ಯ ರಾಜ್ಯದ ಜನರ ಬಳಿ ಕ್ಷಮೆ ಕೇಳಬೇಕು. ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟು ಜೆಡಿಎಸ್‍ಗೆ ದ್ರೋಹ ಮಾಡಿ ಕಾಂಗ್ರೆಸ್‍ಗೆ ಹೋದರು. ಕಾಂಗ್ರೆಸ್‍ನ ಶಾಸಕರು ಸಿದ್ದರಾಮಯ್ಯ, ವೇಣುಗೋಪಾಲ್ ಸರಿ ಇಲ್ಲ ಅಂತ ಪಕ್ಷ ಬಿಡ್ತಿದ್ದಾರೆ. ಇನ್ನೂ 20-25 ಜನ ಕಾಂಗ್ರೆಸ್ ಶಾಸಕರು ಬಿಟ್ಟು ಹೋಗ್ತಾರೆ ಇದನ್ನು ನೆನಪಿಟ್ಟುಕೊಳ್ಳಿ ಎಂದು ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದರು.

    ಬಿಜೆಪಿ ಬಗ್ಗೆ ಮಾತನಾಡುವ ಅಧಿಕಾರ ನಿಮಗಿಲ್ಲ. ಬಿಜೆಪಿಯ 104 ಶಾಸಕರು ಒಗ್ಗಟ್ಟಾಗಿ ಇರ್ತೇವೆ. ನೀವು ಸರಿಯಲ್ಲ ಅಂತ ನಿಮ್ಮ ಶಾಸಕರು ಹೊರಬಂದ್ರೆ ನಮಗೆ ಸಂಬಂಧ ಇಲ್ಲ. ನಿಮ್ಮ ಕಾಂಗ್ರೆಸ್- ಜೆಡಿಎಸ್ ಸರ್ಕಾರ ಉಳಿಯಲ್ಲ. ನಿಮ್ಮ ಶಾಸಕರೇ ನಿಮ್ಮನ್ನ ಚೀ ಥೂ ಅಂತಾರೆ. ಯಡಿಯೂರಪ್ಪನವರ ಬಗ್ಗೆ ಮಾತಾಡಿರುವುದು ಕಾಂಗ್ರೆಸ್ ಶಾಸಕರಿಗೆ ಬೇಜಾರಾಗಿದೆ. ರಾಜ್ಯದಲ್ಲಿ ಅದೆಷ್ಟು ಬೇಗ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅಂತ ಎಲ್ಲರು ಕಾಯುತ್ತಿದ್ದಾರೆ. ಯಾವ ಕಾಂಗ್ರೆಸ್-ಜೆಡಿಎಸ್ ಶಾಸಕರು ನಮ್ಮ ಸಂಪರ್ಕದಲ್ಲಿಲ್ಲ. ನಿಮ್ಮ ಪಕ್ಷದ ಶಾಸಕರೇ ನಿಮ್ಮನ್ನ ಬಿಟ್ಟು ಹೋಗ್ತಿದ್ದಾರೆ. ನಾಚಿಕೆ ಮಾನ ಮರ್ಯಾದೆ ಇದ್ರೆ ತಕ್ಷಣ ಶಾಸಕಾಂಗ ನಾಯಕ ಸ್ಥಾನ ಹಾಗೂ ಸಮನ್ವಯ ಸಮಿತಿಗೆ ರಾಜೀನಾಮೆ ಬಿಸಾಕಿ ಹೋಗಬೇಕು. ಸಿಎಂ ಸ್ಥಾನ ಹೋದ ಮೇಲೆ ಮತ್ತೆ ಸಿಎಂ ಆಗಲು ಆಸೆ ಪಡುತ್ತಿದ್ದೀರಿ. 104 ಸ್ಥಾನ ಇರುವ ನಾವು ಅಧಿಕಾರಕ್ಕೆ ಬರ್ತೀವಿ ಅಂತ ಹೇಳೋದು ತಪ್ಪೇ ಯಡಿಯೂರಪ್ಪ ನವರ ಬಗ್ಗೆ ಮಾತನಾಡಿರುವುದಕ್ಕೆ ಕ್ಷಮೆ ಕೇಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಹರಿಹಾಯ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಧಾನಿ ಹೇಳಿಕೆಗೆ ಸಿಡಿದೆದ್ದ ರಾಜ್ಯ ನಾಯಕರು..!

    ಪ್ರಧಾನಿ ಹೇಳಿಕೆಗೆ ಸಿಡಿದೆದ್ದ ರಾಜ್ಯ ನಾಯಕರು..!

    ಬೆಂಗಳೂರು: ಬಿಜೆಪಿ ಸಭೆಯಲ್ಲಿ ಕಾಂಗ್ರೆಸ್ ಪಕ್ಷದವರು ಸಿಎಂ ಕುಮಾರಸ್ವಾಮಿ ಅವರನ್ನು ಕ್ಲರ್ಕ್ ರೀತಿ ನೋಡಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಈ ವಿಚಾರಕ್ಕೆ ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರು ಗರಂ ಆಗಿದ್ದಾರೆ.

    ಈ ವಿಚಾರವಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಇದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ಸಂಬಂಧಪಟ್ಟ ವಿಚಾರ. ನಮ್ಮ ಉಸಾಬರಿ ಮೋದಿಯವರಿಗೆ ಯಾಕೆ? ಅವರು ಯಾರು ಹೇಳೋದಕ್ಕೆ. ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಮಾಡಿಕೊಂಡಿರೋದು, ಮೋದಿ ಅವರು ಮೈತ್ರಿಯಲ್ಲಿ ಇದ್ದಾರಾ? ಮೋದಿಯವರು ರಾಜಕೀಯವಾಗಿ ಹೀಗೆ ಹೇಳಿದ್ದಾರೆ. ಅವರಿಗೇನು ಗೊತ್ತಿಲ್ಲಾ. ಸುಮ್ಮನೆ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಅವರನ್ನು ಎತ್ತಿಕಟ್ಟುವ ಕೆಲಸ ಮಾಡ್ತಿದ್ದಾರೆ ಅಂತಾ ಕಿಡಿಕಾರಿದರು.

    ಮೋದಿಯವರ ಹೇಳಿಕೆಗೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿ, ಮೋದಿಯವರ ಪಾರ್ಟಿಯಲ್ಲಿ ಯಾರೂ ಹೇಳೋರಿಲ್ಲ, ಕೇಳೋರಿಲ್ಲ. ಇಂತಹವರ ಸಲಹೆಗಳನ್ನ ನಾವು ತೆಗೆದುಕೊಳ್ತೀವಾ? ಕ್ಯಾಬಿನೆಟ್‍ನಲ್ಲಿ ಅವರ ಪಕ್ಷದವರ ಮಾತನ್ನೇ ಅವರು ಕೇಳಲ್ಲ. ಸುಮ್ಮನೆ ಆರೋಪ ಮಾಡ್ತಾರೆ ಅಂತ ಪ್ರಧಾನಿಗೆ ತಿರುಗೇಟು ನೀಡಿದ್ದಾರೆ.

    ಘಟಬಂಧನ ಕಳ್ಳರ ಸಂತೆ ಎಂಬ ಮೋದಿ ಆರೋಪ ವಿಚಾರ ಮಾತನಾಡಿ, ಪ್ರಧಾನಿ ನಾಲಗೆ ಬಿಗಿ ಹಿಡಿದು ಮಾತನಾಡಬೇಕು. ಅವರ ಸ್ಥಾನಕ್ಕೆ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಅವರ ತೂಕಕ್ಕೆ ಸರಿಯಾಗಿ ಮಾತನಾಡಬೇಕು. ಎನ್‍ಡಿಎ ಯಾವುದು, ಅದೂ ಘಟಬಂಧನ ಅಲ್ಲವೇ? ಯುಪಿಎ ಕೂಡ ಘಟಬಂಧನವೇ ಎಂದು ಹರಿಹಾಯ್ದಿದ್ದಾರೆ. ಅಷ್ಟೇ ಅಲ್ಲದೆ ರಫೇಲ್ ವಿಚಾರದಲ್ಲಿ ಯಾಕೆ ಚರ್ಚೆಗೆ ಬರುತ್ತಿಲ್ಲ. ಜವಾಬ್ದಾರಿಯುತವಾಗಿ ಪ್ರಧಾನಿ ನಡೆದುಕೊಳ್ಳಬೇಕು ಎಂದು ಪ್ರಧಾನಿ ಹೇಳಿಕೆಯನ್ನು ವಿರೋಧಿಸಿದ್ದಾರೆ.

    ಈ ಸಂಬಂಧ ಸಿಎಂ ಕುಮಾರಸ್ವಾಮಿಯವರು ಪ್ರತಿಕ್ರಿಯಿಸಿ, ನನ್ನ ಬಗ್ಗೆ ಕೆಲವು ಸುಳ್ಳು ಸುದ್ದಿಗಳು ಓಡಾಡುತ್ತಿದೆ. ಅದನ್ನೇ ನಂಬಿ ಪ್ರಧಾನಿ ಮೋದಿ ಅವರು ನನ್ನ ಬಗ್ಗೆ ತಪ್ಪಾಗಿ ಹೇಳುತ್ತಿದ್ದಾರೆ. ಸಾಲ ಮನ್ನಾ ವಿಚಾರ ಆದ ಮೇಲೆ ಇದು ಎರಡನೇ ಬಾರಿ ಪ್ರಧಾನಿ ಅವರು ಸುಳ್ಳು ಮಾಹಿತಿಗಳಿಗೆ ಪ್ರತಿಕ್ರಿಯಿಸಿದ್ದು. ಇಂತಹ ಹೇಳಿಕೆಗಳು ಮೈತ್ರಿ ಸರ್ಕಾರ ಅಥವಾ ಸರ್ಕಾರದ ಅಭಿವೃದ್ಧಿಯನ್ನು ಬೀಳಿಸಲು ಸಾಧ್ಯವಿಲ್ಲ ಅಂತ ಬರೆದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದರಾಮಯ್ಯ ಸೂಪರ್ ಸಿಎಂ ಅಲ್ಲ: ಬಸವರಾಜ್ ಹೊರಟ್ಟಿ

    ಸಿದ್ದರಾಮಯ್ಯ ಸೂಪರ್ ಸಿಎಂ ಅಲ್ಲ: ಬಸವರಾಜ್ ಹೊರಟ್ಟಿ

    ಬೆಳಗಾವಿ (ಚಿಕ್ಕೋಡಿ): ಸಿದ್ದರಾಮಯ್ಯ ಸೂಪರ್ ಸಿಎಂ ಅಲ್ಲ, ಅವರನ್ನು ಸಿಎಂ ಎಂದು ಬಿಂಬಿಸುವುದು ಸರಿ ಅಲ್ಲ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಗಡಿ ಜಿಲ್ಲೆ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಮಹಾರಾಷ್ಟ್ರ ಗಡಿಯಲ್ಲಿರುವ ಕಾರದಗಾ ಗ್ರಾಮದಲ್ಲಿ ಅದ್ದೂರಿಯಾಗಿ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. ಗಡಿ ಗ್ರಾಮದಲ್ಲಿ ಎಲ್ಲೆಲ್ಲೂ ಕನ್ನಡದ ಕಂಪು  ಪಸರಿಸಿತ್ತು. ವಿವಿದ ವಾದ್ಯ ತಂಡಗಳ ಮೆರವಣಿಗೆ ಹಾಗೂ ಭುವನೇಶ್ವರಿ ಭಾವ ಚಿತ್ರದ ಮೆರವಣಿಗೆ ನಡೆಸಲಾಯಿತು. ಗಡಿ ಗ್ರಾಮದಲ್ಲಿ ಸರ್ಕಾರದ ಯಾವುದೇ ಅನುದಾನವಿಲ್ಲದೆ ಸಮ್ಮೇಳನವನ್ನ ಆಯೋಜಿಸಲಾಗಿತ್ತು. ಗಡಿ ಸಮ್ಮೇಳನದ ಅಧ್ಯಕ್ಶತೆಯನ್ನ ಸಾಹಿತಿ ಚಂದ್ರಶೇಖರ ಪಾಟೀಲ(ಚಂಪಾ) ವಹಿಸಿದ್ದರು.

    ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ನಡೆಯುತ್ತಿರುವ ಕನ್ನಡ ಸಮಾವೇಶದಲ್ಲಿ ಬಸವರಾಜ್ ಹೊರಟ್ಟಿ ಅವರು ಪಾಲ್ಗೊಂಡಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ರಾಜಕೀಯ ಅನುಭವದ ಆಧಾರದ ಮೇಲೆ 20 ಜನ ಶಾಸಕರು ರಾಜೀನಾಮೆ ಕೊಡುವ ಸಾಧ್ಯತೆ ಇಲ್ಲ. ರಾಜಕೀಯದಿಂದ ನಿವೃತ್ತಿಯಾಗುವುದಿದ್ದರೆ ಮಾತ್ರ ರಾಜೀನಾಮೆ ನೀಡಬೇಕು. ಸರ್ಕಾರವನ್ನು ಅಭದ್ರಗೊಳಿಸುವ ನಿಟ್ಟಿನಲ್ಲಿ ರಾಜೀನಾಮೆ ಆಟ ಆಡುವುದು ಸರಿಯಲ್ಲ. ಸಿದ್ದರಾಮಯ್ಯ ಮಾಸ್ಟರ್ ಮೈಂಡ್ ಅಂತ ಹೇಳುವುದಿಲ್ಲ. ಬಹಳಷ್ಟು ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಅಂತಾರೆ. ಹಾಗಾದ್ರೆ ಕುಮಾರಸ್ವಾಮಿ ಅವರ ಪರಿಸ್ಥಿತಿ ಏನು? ಸಿದ್ದರಾಮಯ್ಯ ಸೂಪರ್ ಸಿಎಂ ಅಲ್ಲ, ಅವರನ್ನು ಸಿಎಂ ಎಂದು ಬಿಂಬಿಸುವುದು ಸರಿ ಅಲ್ಲ ಎಂದು ಕಿಡಿಕಾರಿದ್ದಾರೆ.

    ರಮೇಶ್ ಜಾರಕಿಹೊಳಿ ಮಾಡುತ್ತಿರುವುದು ಸರಿ ಕಾಣುತ್ತಿಲ್ಲ. ಮಂತ್ರಿಯಾಗಿ ಅವರು ಕೆಡಿಪಿ ಸಭೆ ಕರೆದಿಲ್ಲ, ಕ್ಯಾಬಿನೆಟ್‍ಗೆ ಹಾಜರಾಗಿಲ್ಲ. ಹಾಗಾಗಿ ಸಚಿವ ಸ್ಥಾನ ಕೈ ತಪ್ಪಿದೆ. ಅಲ್ಲದೇ ಜೆಡಿಎಸ್ ಪಕ್ಷದ ಬಿಜೆಪಿ ಸತ್ಯ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ಗೊತ್ತು. ಯಾರ ಜೊತೆಗೆ ಯಾರು ಕೈ ಜೋಡಿಸುತ್ತಾರೆ ಅನ್ನೋದರ ಬಗ್ಗೆ ನನಗೆ ಗೊತ್ತಿಲ್ಲ. ಸರ್ಕಾರ ಬೀಳುವ ಉಮೇಶ ಕತ್ತಿ ಹೇಳಿಕೆ ಹುಡುಗಾಟದ ಹೇಳಿಕೆ. ಅಷ್ಟೇ ಅಲ್ಲದೆ ವೇದಿಕೆ ಮೇಲೆ ಭಾಷಣ ಮಾಡುತ್ತ, ಮಹಾರಾಷ್ಟ್ರಕ್ಕೆ ಜೈ ಎನ್ನುವವರು ಬೆಳಗಾವಿಯಲ್ಲಿ ಶಾಸಕರಾಗುತ್ತಾರೆ. ಜನರು ಕನ್ನಡದಲ್ಲೇ ಮಾತನಾಡಿದರೂ ಸಹ ಅವರು ಮಾತ್ರ ಮರಾಠಿಯಲ್ಲಿಯೇ ಉತ್ತರಿಸುತ್ತಾರೆ ಎಂದು ವೇದಿಕೆಯ ಮೇಲೆಯೇ ಶಾಸಕ ಗಣೇಶ ಹುಕ್ಕೇರಿಗೆ ಬಸವರಾಜ್ ಹೊರಟ್ಟಿ ಅವರು ಟಾಂಗ್ ಕೊಟ್ಟಿದ್ದಾರೆ.

    ಶಾಸಕ ಉಮೇಶ ಕತ್ತಿ, ವೀರಕುಮಾರ ಪಾಟೀಲ ಅಂತವರು ಮರಾಠಿಯಲ್ಲೇ ಮಾತನಾಡುತ್ತಾರೆ. ಹೀಗಾಗಿ ಗಡಿ ಭಾಗದಲ್ಲಿ ಕನ್ನಡ ಅಭಿವೃದ್ಧಿ ಆಗುತ್ತಿಲ್ಲ. ಕನ್ನಡ ಭಾಷೆಯನ್ನು ಶಾಲೆಯಲ್ಲಿ ಬಳಸುವಂತೆ ಕ್ರಮ ತೆಗೆದುಕೊಳ್ಳಿ. ಇಲ್ಲದೇ ಹೋದಲ್ಲಿ ಆಂಧ್ರದ ಗಡಿಗೆ ಎತ್ತಂಗಡಿ ಮಾಡಲಾಗುವುದು. ಕೂಡಲೇ ಕ್ರಮ ಕೈಗೊಳದೇ ಇದ್ರೆ ಕನ್ನಡಕ್ಕೆ ಒತ್ತು ಕೊಡದ ಶಾಲೆಗಳ ಅನುದಾನ ಕಡಿತ ಮಾಡಲಾಗುವುದು. ಅನುದಾನ ಕಡಿತಕ್ಕೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗುವುದು ಎಂದು ನಿಪ್ಪಾಣಿ ಬಿಇಒ ಕೆ. ರಾಮನಗೌಡಗೆ ಸಾರ್ವಜನಿಕರ ಎದುರಿನಲ್ಲಿಯೇ ಬಸವರಾಜ್ ಹೊರಟ್ಟಿ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವೇದಿಕೆ ಮೇಲೆ ಕಣ್ಣೀರು ಹಾಕಿದ ಸ್ಪೀಕರ್ ರಮೇಶ್ ಕುಮಾರ್ – ವಿಡಿಯೋ ನೋಡಿ

    ವೇದಿಕೆ ಮೇಲೆ ಕಣ್ಣೀರು ಹಾಕಿದ ಸ್ಪೀಕರ್ ರಮೇಶ್ ಕುಮಾರ್ – ವಿಡಿಯೋ ನೋಡಿ

    ಕೋಲಾರ: ನಗರದಲ್ಲಿ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ವೇಳೆ ವೇದಿಕೆ ಮೇಲೆಯೇ ಸ್ಪೀಕರ್ ರಮೇಶ್ ಕುಮಾರ್ ಕಣ್ಣೀರು ಹಾಕಿದ್ದಾರೆ.

    ಕೋಲಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಕುರುಬರ ಸಂಘದ ವತಿಯಿಂದ ನಗರದ ಜಿಲ್ಲಾಸ್ಪತ್ರೆ ವೃತ್ತದಲ್ಲಿ ಅದ್ಧೂರಿ ಕನಕ ಜಯಂತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ರಮೇಶ್ ಕುಮಾರ್ ಅವರು ಭಾವುಕರಾದರು. ಅಲ್ಲದೇ ಸಿದ್ದರಾಮಯ್ಯನವರ ಸೋಲು ನನ್ನ ಸಾವಿಗಿಂತ ಹೆಚ್ಚು ನೋವುಂಟು ಮಾಡಿದೆ ಎಂದು ಹೇಳಿ ಕಣ್ಣೀರು ಹಾಕಿದರು.

    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರಕ್ಕೆ ಬರುವಂತೆ ಮನವಿ ಮಾಡಿದ್ದೆ. ಆದರೆ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಸೋಲು ಅನುಭವಿಸಿದರು. ಸಿದ್ದರಾಮಯ್ಯ ಅವರು ಸೋತಿದ್ದು ತುಂಬಾ ದು:ಖವಾಯಿತು. ಒಬ್ಬ ಕುರಿಕಾಯೋ ಸಮಾಜದಲ್ಲಿ ಹುಟ್ಟಿ 13 ಬಾರಿ ಬಜೆಟ್ ಮಂಡಿಸಿದ ಧೀಮಂತ ನಾಯಕ ಸಿದ್ದರಾಮಯ್ಯ. ಅವರನ್ನ ಏಕವಚನದಲ್ಲಿ ಮಾತನಾಡಿಸುವವರಿಗೆ ತಕ್ಕ ಪಾಠ ಕಲಿಸಿ ಎಂದು ಹೇಳುವ ಮೂಲಕ ಕೋಲಾರದ ಮಾಜಿ ಶಾಸಕ ವರ್ತೂರು ಪ್ರಕಾಶ್ ಅವರಿಗೆ ರಮೇಶ್ ಕುಮಾರ್ ಟಾಂಗ್ ನೀಡಿದರು.

    ಸಮಾಜದಲ್ಲಿ ಎಲ್ಲಾ ವರ್ಗದವರ ಒಳಿತಿಗಾಗಿ ಸಿದ್ದರಾಮಯ್ಯ ಅವರು ಶ್ರಮಿಸಿದ್ದಾರೆ. ಅವರ ಆಡಳಿತದಲ್ಲಿ ಯಾರಿಗೂ ಅನ್ಯಾಯ ಮಾಡದೇ ಯಶಸ್ವಿಯಾಗಿ ಸರ್ಕಾರ ನಡೆಸಿದ್ದಾರೆ. ಇಂತಹ ಧೀಮಂತ ನಾಯಕನನ್ನು ಕೆಳಗೆ ಬೀಳಲು ಬಿಡಬಾರದು ಎಂದು ಮನವಿ ಮಾಡಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv