Tag: Siddaramanahundi

  • ಸಿದ್ದರಾಮಯ್ಯರ ಅಣ್ಣನ ಮನೆ ಮುಂದೆಯೇ ಗಲಾಟೆ ನಡೆದಿದೆ – ವಿ.ಸೋಮಣ್ಣ ಕಿಡಿ

    ಸಿದ್ದರಾಮಯ್ಯರ ಅಣ್ಣನ ಮನೆ ಮುಂದೆಯೇ ಗಲಾಟೆ ನಡೆದಿದೆ – ವಿ.ಸೋಮಣ್ಣ ಕಿಡಿ

    – ಸಿದ್ದು ಘನತೆಗೆ ಇದು ಒಳ್ಳೆಯದಲ್ಲ

    ಮೈಸೂರು: ಸಿದ್ದರಾಮಯ್ಯನಹುಂಡಿಯಲ್ಲಿ ಕಾಂಗ್ರೆಸ್‌ (Congress) ಹಾಗೂ ಬಿಜೆಪಿ (BJP) ಕಾರ್ಯಕರ್ತರ ನಡುವೆ ನಡೆದ ಗಲಾಟೆ ಪ್ರಕರಣ ಬಗ್ಗೆ ವರುಣಾ (Varuna) ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ (V.Somanna) ಪ್ರತಿಕ್ರಿಯಿಸಿ ಬೇಸರ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ (Siddaramaiah) ಅವರ ಅಣ್ಣನ ಮನೆ ಮುಂದೆಯೇ ಈ ಗಲಾಟೆ ನಡೆದಿದೆ ಎಂದು ಆರೋಪಿಸಿದ್ದಾರೆ.

    ‘ಕೈ’ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಮಾರಾಮಾರಿಯಲ್ಲಿ ಬಿಜೆಪಿ ಕಾರ್ಯಕರ್ತ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ವಿ.ಸೋಮಣ್ಣ ಅವರು ಆಸ್ಪತ್ರೆಗೆ ತೆರಳಿ ಕಾರ್ಯಕರ್ತನ ಆರೋಗ್ಯ ವಿಚಾರಿಸಿದ್ದಾರೆ. ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್‌ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ರಣಾಂಗಣವಾದ ವರುಣಾ ಕಣ; ಸಿದ್ದರಾಮಯ್ಯನಹುಂಡಿಯಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ

    ಸಿದ್ದರಾಮಯ್ಯ ಅವರ ಅಣ್ಣನ‌ ಮನೆ ಮುಂದೆಯೇ ಈ ಗಲಾಟೆ ನಡೆಯಿತು. ಹತಾಶೆ ಮನೋಭಾವ ಹಾಗೂ ಸೋಲಿನ ಭಯದಿಂದ ಈ ಕೆಲಸ ಮಾಡಿದ್ದಾರೆ. ನಾನು ಎಲ್ಲಿ ಹೋಗ್ತಿನೋ ಅಲ್ಲಿಗೆ ಕೆಲವರು ಬರುತ್ತಾರೆ. ಎಲ್ಲಾ ಕೋಮಿನ ಜನ ಪ್ರೀತಿ ಮಾಡುತ್ತಾರೆ. ಒಂದು ಕೋಮಿನ‌‌ ಜನ ಮಾತ್ರ ದ್ವೇಷ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.

    ನಮ್ಮ ಕಾರ್ಯಕರ್ತನಿಗೆ ಆದ ನೋವು ಸಿದ್ದರಾಮಯ್ಯರ ಅಣ್ಣನ ಮಗನಿಗೆ ಆಗಿದ್ದರೆ ನನ್ನನ್ನು ಯಾವ ದೃಷ್ಟಿಯಲ್ಲಿ ಸಿದ್ದರಾಮಯ್ಯ ನೋಡ್ತಿದ್ದರು? ಸಿದ್ದರಾಮಯ್ಯ ಘನತೆಗೆ ಇದು ಒಳ್ಳೆಯದಲ್ಲ. ನನ್ನನ್ನು ಹೆದರಿಸಲು ಸಾಧ್ಯವಿಲ್ಲ. ನಾನು ಯಾವತ್ತಿಗೂ ವಿಚಲಿತ ಆಗಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ಮನೆ ಮುಂದಿನ ರಸ್ತೆಯಲ್ಲೇ 10 ಲಕ್ಷ ನಗದು ಹಣ ಪತ್ತೆ..!

    ವರುಣಾ ಕ್ಷೇತ್ರದ ಸ್ಥಿತಿ ಬಗ್ಗೆ ಚುನಾವಣಾ ಆಯುಕ್ತರಿಗೆ ಪತ್ರ ಬರೆಯುತ್ತೇನೆ. ನಿನ್ನೆಯ ಘಟನೆ ವಿಚಾರದಲ್ಲಿ ಪೊಲೀಸರು ಕೂಡ ಕುತಂತ್ರ ಮಾಡಿದರು ಎಂದು ಆರೋಪಿಸಿದ್ದಾರೆ.

  • ರಣಾಂಗಣವಾದ ವರುಣಾ ಕಣ; ಸಿದ್ದರಾಮಯ್ಯನಹುಂಡಿಯಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ

    ರಣಾಂಗಣವಾದ ವರುಣಾ ಕಣ; ಸಿದ್ದರಾಮಯ್ಯನಹುಂಡಿಯಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ

    – ಓರ್ವ ಆಸ್ಪತ್ರೆಗೆ ದಾಖಲು

    ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಹೊತ್ತಿನಲ್ಲಿ ವರುಣಾ (Varuna) ಕ್ಷೇತ್ರ ಪ್ರಬಲ ನಾಯಕರ ಪೈಪೋಟಿಯಿಂದ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿದೆ. ಸಿದ್ದರಾಮಯ್ಯನಹುಂಡಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಮಾರಾಮಾರಿ ನಡೆದಿದೆ.

    ಘಟನೆಗೆ ಕಾರಣ ತಿಳಿದುಬಂದಿಲ್ಲ. ಗಲಾಟೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತ ನಾಗೇಶ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೆಎಸ್ಎಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ. ಗಲಾಟೆಯಲ್ಲಿ ನಾಗೇಶ್‌ ಭುಜ ಮತ್ತು ಕಾಲುಗಳಿಗೆ ಗಾಯವಾಗಿತ್ತು. ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಮೀನು ಮುಟ್ಟಿದ್ದೇನೆ ದೇಗುಲದ ಒಳಗೆ ಬರಬಹುದೇ?: ಹೊಸ್ತಿಲ ಹೊರಗೆ ನಿಂತು ರಾಹುಲ್ ಪ್ರಶ್ನೆ

    ಪಕ್ಷದ ಅಭ್ಯರ್ಥಿ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ವರುಣಾ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರಿಗೆ ತಿಳಿಸಲಾಗಿದೆ. ಗಾಯಾಳು ನೋಡಲು ಜೆಎಸ್‌ಎಸ್‌ ಆಸ್ಪತ್ರೆಗೆ ಸೋಮಣ್ಣ ಆಗಮಿಸಲಿದ್ದಾರೆ ಎನ್ನಲಾಗಿದೆ.

    ಸದ್ಯ ಸಿದ್ದರಾಮಯ್ಯನಹುಂಡಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಘಟನೆ ಸಂಬಂಧ ಮೂವರ ವಿರುದ್ಧ ಹಲ್ಲೆ ಆರೋಪ ಮಾಡಲಾಗಿದೆ. ಎನ್‌ಸಿಆರ್ ಮಾಡಿ ಪೊಲೀಸರು ಆರೋಪಿಗಳನ್ನು ಬಿಟ್ಟು ಕಳುಹಿಸಿದ್ದಾರೆ. ಇದನ್ನೂ ಓದಿ: ಏ.30ಕ್ಕೆ ಚನ್ನಪಟ್ಟಣಕ್ಕೆ ಮೋದಿ – ದಶಪಥ ಹೆದ್ದಾರಿ ಮಾರ್ಗ ಬದಲಾವಣೆ

  • ಗ್ರಾಮದ ಜಾತ್ರೆಯಲ್ಲಿ ನೃತ್ಯ ಮಾಡಿ ರಂಜಿಸಿದ ಸಿದ್ದರಾಮಯ್ಯ

    ಗ್ರಾಮದ ಜಾತ್ರೆಯಲ್ಲಿ ನೃತ್ಯ ಮಾಡಿ ರಂಜಿಸಿದ ಸಿದ್ದರಾಮಯ್ಯ

    ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಸ್ವಗ್ರಾಮ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವದಲ್ಲಿ ನೃತ್ಯ ಮಾಡಿದ್ದಾರೆ.

    ಸ್ನೇಹಿತರು ಮತ್ತು ಬೆಂಬಲಿಗರ ಜೊತೆ 40 ನಿಮಿಷಗಳ ಕಾಲ ಜಾನಪದ ವಾದ್ಯಗಳ ಹಿಮ್ಮೆಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ್ದಾರೆ. ಉಪಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ನೃತ್ಯ ಮಾಡಿದ್ದ ಸಿದ್ದರಾಮಯ್ಯ ಈಗ 15 ವರ್ಷದ ಬಳಿಕ ಗ್ರಾಮದ ಜಾತ್ರೆಯಲ್ಲಿ ಸ್ಟೆಪ್‌ ಹಾಕಿದ್ದಾರೆ. ಇದನ್ನೂ ಓದಿ: ಪತ್ರಕರ್ತರಿಗೆ ಮಧ್ಯರಾತ್ರಿಯ ಸರ್ಪ್ರೈಸ್ ಕೊಟ್ಟ RRR ಟೀಮ್..!

    70ರ ಹರೆಯದ ಸಿದ್ದರಾಮಯ್ಯ ಅವರ ನೃತ್ಯ ನೋಡಲು ಗ್ರಾಮಸ್ಥರು ಮುಗಿ ಬಿದ್ದಿದ್ದರು. ನೂಕು ನುಗ್ಗಲು ಮಧ್ಯೆ ಸಿದ್ದರಾಮಯ್ಯ ನೃತ್ಯ ಮಾಡಿ ಜನರನ್ನು ರಂಜಿಸಿದ್ದಾರೆ.

    ತಂದೆಯ ನೃತ್ಯದ ಬಗ್ಗೆ ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ಅಪ್ಪ ಪ್ರತಿ ವರ್ಷ ಜಾತ್ರೆಯ ವೇಳೆ ವೀರನ ಕುಣಿತ ಮಾಡುತ್ತಿದ್ದರು. ಆದರೆ ಈ ವಯಸ್ಸಿನಲ್ಲಿ ಅಪ್ಪ ವೀರನ ಕುಣಿತ ಮಾಡುತ್ತಾರೆ ಅಂತ ಅಂದುಕೊಂಡಿರಲಿಲ್ಲ. ನಾನು ನೃತ್ಯ ಮಾಡುವುದಿಲ್ಲ ಎಂದು ತಂದೆ ಮೊದಲೇ ಹೇಳಿದ್ದರು. ಆದರೆ ಜನರ ಉತ್ಸಾಹ ನೋಡಿ ಅವರು ನೃತ್ಯ ಮಾಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮೇಕೆದಾಟು: ತಮಿಳುನಾಡು ವಿರುದ್ಧದ ಖಂಡನಾ ನಿರ್ಣಯಕ್ಕೆ ಜೆಡಿಎಸ್ ಬೆಂಬಲ

    ತಂದೆ ಶಾಲೆಯಲ್ಲಿ ವೀರನ ಕುಣಿತ ಕಲಿತಿದ್ದರು. ಹೀಗಾಗಿ ಅವರಿಗೆ ಪ್ರತಿಯೊಂದು ಸ್ಟೆಪ್ ನೆನಪಿದೆ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

  • ಮಾಜಿ ಸಿಎಂ ಹುಟ್ಟೂರಿನ ಸರ್ಕಾರಿ ಇಂಗ್ಲೀಷ್ ಮಾಧ್ಯಮ ಶಾಲೆಗೆ ಫುಲ್ ಡಿಮ್ಯಾಂಡ್

    ಮಾಜಿ ಸಿಎಂ ಹುಟ್ಟೂರಿನ ಸರ್ಕಾರಿ ಇಂಗ್ಲೀಷ್ ಮಾಧ್ಯಮ ಶಾಲೆಗೆ ಫುಲ್ ಡಿಮ್ಯಾಂಡ್

    ಮೈಸೂರು: ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರ ಹುಟ್ಟೂರಿನಲ್ಲೇ ಇಂಗ್ಲೀಷ್ ಮಾಧ್ಯಮಕ್ಕೆ ಮಕ್ಕಳನ್ನು ಸೇರಿಸಲು ಪೋಷಕರು ಮುಗಿಬಿದ್ದಿದ್ದಾರೆ.

    ಸಿದ್ದರಾಮಯ್ಯರ ತವರೂರಾದ ಸಿದ್ದರಾಮನಹುಂಡಿಯಲ್ಲಿ ಕನ್ನಡ ಮಾಧ್ಯಮ ಶಾಲೆಗೆ ಮಕ್ಕಳನ್ನು ಸೇರಿಸಲು ಪೋಷಕರಿಗೆ ಕಿಂಚಿತ್ತು ಆಸಕ್ತಿ ಇಲ್ಲ. ಈ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಪ್ರಾರಂಭವಾಗಿದೆ. ಮೊದಲನೇ ವರ್ಷವೇ ಇಂಗ್ಲೀಷ್ ಕಲಿಕೆಗೆ ಹೆಚ್ಚಿನ ಆಸಕ್ತಿ ಪೋಷಕರಿಂದ ವ್ಯಕ್ತವಾಗಿದೆ.

    ಸಿದ್ದರಾಮನಹುಂಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾರಂಭವಾದ ಎಲ್‍ಕೆಜಿಯ ಇಂಗ್ಲೀಷ್ ಮಾಧ್ಯಮ ತರಗತಿಗೆ 30 ಮಕ್ಕಳು ದಾಖಲಾತಿ ಪಡೆದಿದ್ದಾರೆ. ಎಲ್‍ಕೆಜಿ ಕನ್ನಡ ಮಾಧ್ಯಮಕ್ಕೆ ಒಂದೇ ಒಂದು ದಾಖಲಾತಿಯೂ ಆಗಿಲ್ಲ. ಹೀಗಾಗಿ ಒಂದನೇ ತರಗತಿಯ ಕನ್ನಡ ತರಗತಿಗಳು ಖಾಲಿ ಖಾಲಿಯಾಗಿವೆ.

    ಮೈಸೂರು ಜಿಲ್ಲೆಯ 29 ಶಾಲೆಗಳಲ್ಲೂ ಇದೆ ಸ್ಥಿತಿ ಇದೆ. ಜಿಲ್ಲೆಯ 46 ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭವಾಗಿದೆ. ಇದರಲ್ಲಿ 29 ಕನ್ನಡ ಮಾಧ್ಯಮ ಶಾಲೆಗಳಿಗೆ ಪೋµಕರು ಮಕ್ಕಳನ್ನು ಕಳಿಸಿಲ್ಲ.

    30 ಸಾವಿರ ರೂ. ನೀಡಿ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮವಿರುವ ಖಾಸಗಿ ಶಾಲೆಗಳಿಗೆ ಕಳುಹಿಸಲು ನಮ್ಮಿಂದ ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಸರ್ಕಾರವೇ ಇಂಗ್ಲೀಷ್ ಮಾಧ್ಯಮ ಆರಂಭಿಸಿದ್ದು ನಮಗೆ ಹೆಚ್ಚು ಅನುಕೂಲವಾಗಿದೆ ಎಂದು ಪೋಷಕರೊಬ್ಬರು ತಿಳಿಸಿದ್ದಾರೆ.

    ಇಂಗ್ಲೀಷ್ ಭಾಷೆಯ ಜ್ಞಾನ, ಸಂವಹನ ಇಲ್ಲದೇ ಬದುಕಲು ಸಾಧ್ಯವಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಮಕ್ಕಳನ್ನು ಖಾಸಗಿ ಸೇರಿಸಲು ಹೋದರೆ ನಮಗೆ ಆರ್ಥಿಕ ಪರಿಸ್ಥಿತಿ ಅಡ್ಡಿಯಾಗುತ್ತದೆ. ಏಕೆಂದರೆ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ವ್ಯವಹಾರವಾಗಿ ಪರಿಣಮಿಸಿದೆ ಎಂದು ಪೋಷಕರು ಹೇಳಿದ್ದಾರೆ.

    ಮಾಜಿ ಸಿಎಂ ಹೇಳಿದ್ದೇನು?:
    ಸಿದ್ದರಾಮಯ್ಯನವರ ವಿರೋಧದ ನಡುವೆಯೂ ಸಿಎಂ ಕುಮಾರಸ್ವಾಮಿ ಅವರು ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಶಾಲೆ ಆರಂಭಿಸಿ ಸವಾಲು ಹಾಕಿದರಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವರು, ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭಿಸುವುದಕ್ಕೆ ವೈಯಕ್ತಿಕವಾಗಿ ವಿರೋಧ ವ್ಯಕ್ತಪಡಿಸುತ್ತೇನೆ. ಕನ್ನಡ ಮಾಧ್ಯಮದಲ್ಲಿಯೇ ಪ್ರಾಥಮಿಕ ಶಿಕ್ಷಣ ನೀಡಬೇಕು. ಈ ವಿಚಾರಕ್ಕೆ ನಾನು ಬದ್ಧನಾಗಿದ್ದೇನೆ. ಒಂದು ವೇಳೆ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಜಾರಿಗೆ ತಂದರೆ ನಾನು ವಿರೋಧ ವ್ಯಕ್ತಪಡಿಸುತ್ತೇನೆ ಹಾಗೂ ತಡೆಹಿಡಿಯುತ್ತೇನೆ ಎಂದು ಹೇಳಿದ್ದರು.

    ಎಂ.ಮಹೇಶ್ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದಾಗ ಅವರಿಗೆ ಕರೆ ಮಾಡಿ ಇಂಗ್ಲೀಷ್ ಮಾಧ್ಯಮ ಶಿಕ್ಷಣ ವಿಚಾರವನ್ನು ಕ್ಯಾಬಿನೆಟ್ ಸಭೆಯಲ್ಲಿ ಪ್ರಸ್ತಾಪಿಸದಂತೆ ಹೇಳಿದ್ದೆ. ಸಿಎಂ ಕುಮಾರಸ್ವಾಮಿ ಸೇರಿದಂತೆ ಯಾರೇ ಹೇಳಿದರೂ ತಲೆಕೆಡಿಸಿಕೊಳ್ಳಬೇಡ ಅಂತ ಸೂಚಿಸಿದ್ದೆ ಎಂದು ತಿಳಿಸಿದ್ದರು.