Tag: Siddaganga Sri
-

ನಡೆದಾಡುವ ದೇವರ ಕ್ಷೇಮಕ್ಕಾಗಿ ಪ್ರಾರ್ಥಿಸಿ ರಾಜ್ಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ!
ಬೆಂಗಳೂರು: ನಡೆದಾಡುವ ದೇವರು, ಶತಾಯುಷಿ ಅವರ ಆರೋಗ್ಯ ಸುಧಾರಣೆಗಾಗಿ ವಿವಿಧ ಜಿಲ್ಲೆಯ ದೇವಾಲಯಗಳಲ್ಲಿ ಭಕ್ತರು ಪೂಜೆ ಸಲ್ಲಿಸುತ್ತಿದ್ದು, ಅವರಿಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿ ಸಿದ್ದಗಂಗಾ ಶ್ರೀಗಳ ಆರೋಗ್ಯ ಚೇತರಿಕೆಗೆ ಭಕ್ತರು, ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಪಟ್ಟಣದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಡೆದಾಡುವ ದೇವರ ಆರೋಗ್ಯದಲ್ಲಿ ಚೇತರಿಕೆಗಾಗಿ ಅಯ್ಯಪ್ಪಸ್ವಾಮಿಗೆ ಮಹಿಳೆಯರು, ಯುವಕರು ಸೇರಿದಂತೆ ಸಿದ್ದಗಂಗಾ ಮಠದ ಭಕ್ತರು ವಿಶೇಷ ಪೂಜೆಯೊಂದಿಗೆ ಅಭಿಷೇಕ ಸಲ್ಲಿಸಿ ಗುಣಮುಖವಾಗುವಂತೆ ಪ್ರಾರ್ಥನೆ ಮಾಡಿ, ಪ್ರಸಾದ ವಿತರಿಸಿದ್ದಾರೆ.

ಇತ್ತ ದಾವಣಗೆರೆಯಲ್ಲಿ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರ ಆರೋಗ್ಯ ಬೇಗನೇ ಚೇತರಿಕೆಯಾಗಲಿ ಎಂದು ಭಕ್ತರು ಉರುಳು ಸೇವೆ ಮಾಡಿದ್ದಾರೆ. ನಗರದ ದುರ್ಗಾಂಬಿಕಾ ದೇವಸ್ಥಾನದ ಬಳಿ ಕರ್ನಾಟಕ ಏಕತಾ ವೇದಿಕೆಯಿಂದ ಇಪ್ಪತ್ತಕ್ಕೂ ಹೆಚ್ಚು ಸಂಘಟನೆಯ ಕಾರ್ಯಕರ್ತರು ಉರುಳು ಸೇವೆ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಸಿದ್ದಗಂಗಾ ಶ್ರೀಗಳು ಬೇಗ ಗುಣಮುಖರಾಗುವಂತೆ ನಗರದ ದುರ್ಗಾಂಬಿಕ ದೇವಿಗೆ ಪೂಜೆ ಸಲ್ಲಿಸಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳನ್ನ ಮಾಡಲಾಗುತ್ತಿದೆ. ನಗರದ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಸಂಗೊಳ್ಳಿ ರಾಯಣ್ಣ ಯುವಸೇನೆ ಯುವಕರು ದೇವರ ಆರೋಗ್ಯ ವೃದ್ಧಿಯಾಗಲಿ ಅಂತ ವಿಶೇಷ ಪೂಜೆ ಸಲ್ಲಿಸಿದರು. ದೇವರಿಗೆ ತೆಂಗಿನಕಾಯಿ ಹೊಡೆದು ಹರಕೆ ಕಟ್ಟಿಕೊಂಡರು. ಮಹಾರುದ್ರಾಭಿಷೇಕ, ಜಲಾಭೀಷೇಕ, ಬಿಲ್ವಾರ್ಚನೆ, ಪುಷ್ಪಾಭಿಷೇಕ ಮೂಲಕ ಪ್ರಾರ್ಥನೆ ಸಲ್ಲಿಸಿದ್ದು, ಸಿಂಧನೂರಿನಲ್ಲಿ ಎಬಿವಿಪಿ ಕಾರ್ಯಕರ್ತರು ಅಂಬಾ ಭವಾನಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸ್ವಾಮೀಜಿ ಆರೋಗ್ಯದಲ್ಲಿ ಚೇತರಿಕೆ ಕಾಣಲಿ ಅಂತ ಪ್ರಾರ್ಥಿಸಿದರು.

ಹುಬ್ಬಳ್ಳಿಯ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಿದ್ದಗಂಗಾ ಶ್ರೀಗಳು ಶೀಘ್ರವೇ ಗುಣಮುಖರಾಗಲಿ ಎಂದು ವಿಶೇಷ ಪೂಜೆ ಸಲ್ಲಿಸುವದರ ಜೊತೆಗೆ ಭಾರತ ಸರ್ಕಾರ ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕು. ಕೇಂದ್ರ ಸರ್ಕಾರ ಈ ಬಗ್ಗೆ ಕೂಡಲೇ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮೂಲಕ ಪ್ರಶಸ್ತಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು. ಇತ್ತ ಕೋಲಾರ ನಗರದ ಕೋಲಾರಮ್ಮ ದೇವಾಲಯದಲ್ಲಿ ಶ್ರೀಗಳು ಆರೋಗ್ಯ ಚೇತರಿಸಿಕೊಳ್ಳುವಂತೆ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರಿಂದ ಶಿವಕುಮಾರ ಸ್ವಾಮಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ 101 ತೆಂಗಿನಕಾಯಿ ಒಡೆದು ಪ್ರಾರ್ಥನೆ ಮಾಡಿಕೊಂಡಿದ್ದಾರೆ.

ತುಮಕೂರಿನಲ್ಲಿ ಅಗ್ನಿಹೋತ್ರ ಹೋಮ ಮಾಡುವ ಮೂಲಕ ಸಿದ್ದಗಂಗಾ ಶ್ರೀಗಳ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥನೆ ಮಾಡಿದ್ದಾರೆ. ತುಮಕೂರು ನಗರದ ಹನುಮಂತಪುರಲ್ಲಿನ ಯೋಗ ಶಿಕ್ಷಣ ಕೇಂದ್ರದಲ್ಲಿ ಕಳೆದ 10 ದಿನದಿಂದ ಪತಂಜಲಿ ಯೋಗ ಶಿಕ್ಷಣ ಹಾಗೂ ಭಕ್ತಾದಿಗಳಿಂದ ಹೋಮ ನಡೆಯುತ್ತಿದೆ. ಈ ಅಗ್ನಿಹೋತ್ರ ಹೋಮ ಒಟ್ಟು 48 ದಿನಗಳ ಕಾಲ ಮಾಡಬೇಕಾಗುತ್ತದೆ. ಇನ್ನೂ ಮಠದ ಮುಂದೆ ಮಕ್ಕಳಿಂದ ಸಂಗೀತದ ಮೂಲಕ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.
https://www.youtube.com/watch?v=G4yFhNq99yQ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
-

ಸಿದ್ದಗಂಗಾ ಶ್ರೀಗಳು ಬೇಗ ಗುಣಮುಖರಾಗಲಿ ಎಂದು ಮೋದಿ ಪ್ರಾರ್ಥನೆ
ನವದೆಹಲಿ: ನಡೆದಾಡುವ ದೇವರು, ಶತಾಯುಷಿ ಶ್ರೀ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆಯಾಗಿದೆ. ಕೃತಕ ಉಸಿರಾಟದ ಬದಲು ಶ್ರೀಗಳು ಸ್ವಯಂ ಉಸಿರಾಟ ಮಾಡುತ್ತಿದ್ದಾರೆ. ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಗಳು ಬೇಗ ಗುಣಮುಖರಾಗಲಿ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟ್ಟರಿನಲ್ಲಿ, “ಪರಮ ಪೂಜ್ಯ ಡಾಕ್ಟರ್ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರದ್ದು ಅಮೋಘ ವ್ಯಕ್ತಿತ್ವ. ಅವರ ಮಹೋನ್ನತ ಸೇವೆ ಕೋಟ್ಯಂತರ ಜನರ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ. ಶ್ರೀಗಳು ಬೇಗ ಗುಣಮುಖರಾಗಲಿ ಎಂದು ಹಾಗೂ ದೇವರು ಅವರಿಗೆ ಉತ್ತಮ ಆರೋಗ್ಯ ಕರುಣಿಸಲೆಂದು ಇಡೀ ರಾಷ್ಟ್ರ ಪ್ರಾರ್ಥಿಸುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಪರಮಪೂಜ್ಯ ಡಾಕ್ಟರ್ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರದು ಅಮೋಘ ವ್ಯಕ್ತಿತ್ವ . ಅವರ ಮಹೋನ್ನತ ಸೇವೆ ಕೋಟ್ಯಾಂತರ ಜನರ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ. ಶ್ರೀಗಳು ಬೇಗ ಗುಣ ಮುಖರಾಗಲಿ ಎಂದು ಹಾಗೂ ದೇವರು ಅವರಿಗೆ ಉತ್ತಮ ಆರೋಗ್ಯ ಕರುಣಿಸಲೆಂದು ಇಡೀ ರಾಷ್ಟ್ರ ಪ್ರಾರ್ಥಿಸುತ್ತಿದೆ.
— Narendra Modi (@narendramodi) January 17, 2019
ಶ್ರೀಗಳಿಗೆ ಮಠದಲ್ಲೇ ಸಿದ್ಧವಾಗಿರುವ ಐಸಿಯು ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಮೆರಿಕದಿಂದ ಬಂದಿರುವ ಸ್ವಾಮೀಜಿ ಶಿಷ್ಯರಾಗಿರುವ ಡಾ. ನಾಗಣ್ಣ ವಿಶೇಷ ವೈದ್ಯರ ತಂಡದೊಂದಿಗೆ ಸೇರಿಕೊಂಡು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಶ್ರೀಗಳ ಆರೋಗ್ಯ ಇನ್ನಷ್ಟು ಸುಧಾರಿಸಲಿ ಎಂದು ಸಿದ್ದಲಿಂಗ ಬೆಟ್ಟದ ಮೇಲಿರುವ ಸಿದ್ದಲಿಂಗೇಶ್ವರನಿಗೆ ಗುರುವಾರ ರಾತ್ರಿ ವಿಶೇಷ ಪೂಜೆ ಸಲ್ಲಿಸಲಾಯ್ತು. ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ 8 ಮಂದಿ ಸ್ವಾಮೀಜಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
His Holiness Dr. Sree Sree Sree Sivakumara Swamigalu is a remarkable personality and has positively impacted crores of lives through his outstanding service.
The entire nation is praying for his speedy recovery and good health.
— Narendra Modi (@narendramodi) January 17, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
-

ಶ್ರೀಗಳ ಆರೋಗ್ಯ ವಿಚಾರಿಸಿದ್ರು ಯದುವೀರ್ ಒಡೆಯರ್
ತುಮಕೂರು: ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದರಿಂದ ಕಾಯಕಯೋಗಿ ಸಿದ್ದಗಂಗಾ ಶ್ರೀಗಳನ್ನು ಇಂದು ಬೆಳಗಿನ ಜಾವ ಮಠಕ್ಕೆ ಶಿಫ್ಟ್ ಮಾಡಲಾಗಿದೆ. ಮೈಸೂರಿನ ಮಹರಾಜ ಯದುವೀರ್ ಒಡೆಯರ್ ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯವನ್ನು ವಿಚಾರಿಸಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಯದುವೀರ್ ಒಡೆಯರ್, ನಾನು ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದೆ. ಹಾಗೇ ಶ್ರೀಗಳನ್ನು ನೋಡಲು ಬಂದಿದ್ದೇನೆ. ಶ್ರೀಗಳು ಆರೋಗ್ಯವಾಗಿದ್ದಾರೆ. ಅವರು ಬೇಗ ಚೇತರಿಸಿಕೊಳ್ಳಲಿ ಅಂತ ಚಾಮುಂಡೇಶ್ವರಿ ತಾಯಿಯಲ್ಲಿ ಪ್ರಾರ್ಥನೆ ಮಾಡ್ತೇನೆ. ಶ್ರೀಗಳು ವಿಶ್ರಾಂತಿಯಲ್ಲಿದ್ದರಿಂದ ಅವರನ್ನು ಎಚ್ಚರಿಸಲು ಹೋಗಲಿಲ್ಲ. ಅವರ ಜೊತೆ ಮಾತನಾಡುವ ಅವಕಾಶ ಸಿಗಲಿಲ್ಲ. ಹಾಗಾಗಿ ನಾನು ಅವರ ಆಶೀರ್ವಾದ ಪಡೆದುಕೊಂಡು, ಅವರನ್ನು ನೋಡಿಕೊಂಡು ಬಂದೆ” ಎಂದು ಹೇಳಿದರು.

ಸ್ವಾಮೀಜಿಗಳ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಏರುಪೇರು ಬಂದಿಲ್ಲ. ರಾತ್ರಿಯಿಂದ ಮಠಕ್ಕೆ ಹೋಗುವಂತೆ ಸ್ವಾಮೀಜಿಗಳು ಸೂಚನೆ ನೀಡುತ್ತಿದ್ದರು. ಇಂದು ಅಥವಾ ನಾಳೆ ಶಿಫ್ಟ್ ಮಾಡಬೇಕಂತ ಮಠದ ಹಿರಿಯರು ಹಾಗೂ ಎಸ್‍ಪಿ ಸೇರಿ ಸಭೆ ನಡೆಸಿ ನಿರ್ಧಾರ ಮಾಡಿದ್ದೇವು. ಆದರೆ ರಾತ್ರಿಯಿಂದ ಸ್ವಾಮೀಜಿಗಳು ಮಠಕ್ಕೆ ಹೋಗಬೇಕೆಂದು ಚಡಪಡಿಸುತ್ತಿದ್ದರು. ಆದ್ದರಿಂದ ಬೆಳಗಿನ ಜಾವ ಈ ರೀತಿ ನಿರ್ಧಾರ ತೆಗೆದುಕೊಂಡು ಶಿಫ್ಟ್ ಮಾಡಲಾಗಿದೆ ಎಂದು ಕಿರಿಯ ಶ್ರೀಗಳು ತಿಳಿಸಿದ್ದಾರೆ.

ಶ್ರೀಗಳು ಆಸ್ಪತ್ರೆಯಿಂದ ಮಠಕ್ಕೆ ಹೋಗುವ ಹಂಬಲ ವ್ಯಕ್ತಪಡಿಸಿದ್ದರು. ಹಾಗಾಗಿ ಶ್ರೀಗಳನ್ನು ಮಠಕ್ಕೆ ಶಿಫ್ಟ್ ಮಾಡಿದ್ದೇವೆ. ಆಸ್ಪತ್ರೆಯಲ್ಲಿ ನೀಡುತ್ತಿದ್ದ ಚಿಕಿತ್ಸೆ ಮಠದಲ್ಲೇ ಮುಂದುವರೆಸಿದ್ದೇವೆ. ನಿಶ್ಯಕ್ತಿ ಮತ್ತು ಉಸಿರಾಟದ ತೊಂದರೆ ಹೊರತುಪಡಿಸಿದರೆ ಬೇರೆ ಎಲ್ಲಾ ಪ್ಯಾರಾಮೀಟರ್ಸ್ ಸರಿಯಾಗಿದೆ. ಶ್ವಾಸಕೋಶದ ಸೋಂಕು ಕಡಿಮೆಯಾಗಿದೆ. ಆಪರೇಷನ್ ಮಾಡಿದ ಗಾಯ ವಾಸಿಯಾಗಿದೆ. ಭಕ್ತಾದಿಗಳು ಆತಂಕಪಡುವ ಅವಶ್ಯ ಇಲ್ಲ ಎಂದು ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
-

ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರಕ್ಕೆ ಪತ್ರ- ಮಲ್ಲಿಕಾರ್ಜುನ ಖರ್ಗೆ
ತುಮಕೂರು: ನಡೆದಾಡುವ ದೇವರು, ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಅವರು, ಶ್ರೀಗಳಿಗೆ ಉಸಿರಾಟದ ತೊಂದರೆಯಿದ್ದು ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಸಂಪೂರ್ಣವಾಗಿ ಗುಣಮುಖರಾಗುವ ವಿಶ್ವಾಸ ಇದೆ ಎಂದರು.

ಪೂಜ್ಯರು ದೇಶಕ್ಕೆ ವಿಶೇಷ ನೀಡಿದ್ದಾರೆ. ಅವರಿಗೆ ಭಾರತ ರತ್ನ ಕೊಡುವಂತೆ ಪಕ್ಷಾತೀತವಾಗಿ ಒತ್ತಾಯ ಮಾಡಬೇಕು. ಈ ಸಂಬಂಧ ನಾನು ಕೂಡ ಕೇಂದ್ರಕ್ಕೆ ಪತ್ರ ಬರೆದು ಶ್ರೀಗಳಿಗೆ ಭಾರತ ರತ್ನ ನೀಡಿ ಗೌರವಿಸುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದರು.
ವೈದ್ಯ ಡಾ.ಪರಮೇಶ್ ಅವರು ನಿನ್ನೆಯಷ್ಟೇ ಸಿದ್ದಗಂಗಾ ಶ್ರೀಗಳ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆ ಕಂಡುಬರುತ್ತಿಲ್ಲ. ಮತ್ತೆ ಅವರ ಶ್ವಾಸಕೋಶದ ಎರಡೂ ಭಾಗದಲ್ಲಿ ನೀರು ತುಂಬಿಕೊಂಡಿದೆ. ಈಗಾಗಲೇ ದೇಹದಿಂದ ನೀರನ್ನು ಹೊರಕ್ಕೆ ತೆಗೆಯಲಾಗಿದೆ. ಸದ್ಯ ಶ್ರೀಗಳು ಸನ್ನೆ ಮೂಲಕವೇ ಮಾತನಾಡುತ್ತಿದ್ದು, ಕಣ್ಣು ಬಿಟ್ಟು ನೋಡುತ್ತಿದ್ದಾರೆ. ಮಲಗಿದಲ್ಲಿಯೇ ಶ್ರೀಗಳು ಅವರ ಕೈಕಾಲುಗಳ ಚಲನವಲನ ಮಾಡುತ್ತಿದ್ದಾರೆ ಎಂದು ತಿಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
-

ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ – ಜಯದೇವ ಹೃದ್ರೋಗ ತಜ್ಞರಿಂದ ತಪಾಸಣೆ
ತುಮಕೂರು: ಜಯದೇವ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಮಂಜುನಾಥ್ ನೇತೃತ್ವದ ನುರಿತ ವೈದ್ಯರ ತಂಡ ಸಿದ್ದಗಂಗಾ ಶ್ರೀಗಳ ಆರೋಗ್ಯ ತಪಾಸಣೆ ನಡೆಸಿದೆ. ಒಟ್ಟು ಐದು ಜನ ತಜ್ಞರ ತಂಡ ಸುಮಾರು 1 ಗಂಟೆಗಳ ಕಾಲ ಶ್ರೀಗಳ ತಪಾಸಣೆ ನಡೆಸಿ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ತಿಳಿಸಿದೆ.
ಶ್ರೀಗಳ ಆರೋಗ್ಯ ತಪಾಸಣೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಾ. ಮಂಜುನಾಥ್ ಅವರು, ಶ್ರೀಗಳ ರಕ್ತದೊತ್ತಡ, ಹೃದಯ ಬಡಿತ ಎಲ್ಲವೂ ಸಹಜ ಸ್ಥಿತಿಗೆ ಬಂದಿದ್ದು, ಶ್ವಾಸಕೋಶದ ಸೋಂಕು ಕೂಡಾ ಕಡಿಮೆಯಾಗಿದೆ. ಆದರೆ ಶ್ರೀಗಳಿಗೆ ನಿಶ್ಯಕ್ತಿ ಇದ್ದು, ಬೆನ್ನು ಬಾಗಿರುವುದರಿಂದ ಶ್ವಾಸ ಕೋಶದ ಮೇಲೆ ಪರಿಣಾಮ ಬೀರುತ್ತಿದೆ. ಪರಿಣಾಮ ಉಸಿರಾಟಕ್ಕೆ ತೊಂದರೆಯಾಗುತ್ತಿರುವ ಕಾರಣ ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿದೆ. ಆದ್ರೂ ಶ್ರೀಗಳು ಚೇತರಿಸಿಕೊಳ್ಳುವ ವಿಶ್ವಾಸವಿದೆ ಎಂದರು.

ಶ್ರೀಗಳು ಕಣ್ಣು ಬಿಟ್ಟು ನೋಡುತ್ತಿದ್ದು, ಸಿದ್ದಗಂಗಾ ಆಸ್ಪತ್ರೆಯಲ್ಲಿ ವಿಶ್ವ ದರ್ಜೆಯ ಐಸಿಯು ವ್ಯವಸ್ಥೆ ಇದೆ. ಇದರಿಂದ ಬೇರೆ ಕಡೆ ಶಿಪ್ಟ್ ಮಾಡುವ ಅವಶ್ಯಕತೆ ಇಲ್ಲ. ರಾಜ್ಯ ಸರ್ಕಾರದ ನಿರ್ದೇಶನದಂತೆ ನಾವು ಐದು ಜನ ವೈದ್ಯರು ಬಂದಿದ್ದೇವೆ. ಶ್ರೀಗಳ ದೇಹದಲ್ಲಿ ಪ್ರೊಟೀನ್ ಅಂಶ ಏರಿಕೆಯಾಗಿರುವುದರಿಂದ ಅವರ ಆರೋಗ್ಯ ಗುಣವಾಗುತ್ತೆ ಎಂಬ ಆಶಾಭಾವನೆ ಇದೆ ಎಂದರು.
ಸಿದ್ದಗಂಗಾ ಶ್ರೀ ಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ತುಮಕೂರಿನ ಆಸ್ಪತ್ರೆಗೆ ಸುತ್ತೂರು ಶ್ರೀ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
-

ಜ.9ರಂದು ರಾಜ್ಯಕ್ಕೆ ಮೋದಿ, ಅಮಿತ್ ಶಾ ಆಗಮನ
ಬೆಂಗಳೂರು: ಹೊಸ ವರ್ಷದ ಎರಡನೇ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಆಗಮಿಸಲಿದ್ದಾರೆ. ಜನವರಿ 9 ರಂದು ಮೋದಿ ಮತ್ತು ಶಾ ತುಮಕೂರಿಗೆ ಆಗಮಿಸಲಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಒಂದೇ ದಿನದಲ್ಲಿ ಕೋಲಾರ, ತುಮಕೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹೀಗೆ 5 ಲೋಕಸಭೆ ಕ್ಷೇತ್ರಗಳ ಪ್ರಮುಖರ ಜೊತೆ ವಿಶೇಷ ಸಭೆ ನಡೆಸಲಿದ್ದಾರೆ. ಈ 5 ಲೋಕಸಭೆ ಕ್ಷೇತ್ರಗಳ ಬೂತ್ ಪ್ರಮುಖರು, ಶಕ್ತಿ ಕೇಂದ್ರ ಪ್ರಮುಖರು ವಿಶೇಷ ಸಭೆಯಲ್ಲಿ ಭಾಗಿಯಾಗಲಿದ್ದಾರೆ. 20 ರಿಂದ 30 ಸಾವಿರ ಪ್ರಮುಖ ಕಾರ್ಯಕರ್ತರ ಜೊತೆ ವಿಶೇಷ ಸಭೆ ನಡೆಯಲಿದೆ ಎನ್ನಲಾಗಿದೆ.

ವಿಶೇಷ ಸಭೆ ಮೂಲಕ ರಾಜ್ಯದ ಲೋಕಸಭೆ ಚುನಾವಣೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ತುಮಕೂರಿನ ಮಹತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ವಿಶೇಷ ಸಭೆ ನಡೆಯಲಿದ್ದು, ಸಭೆಗೂ ಮುನ್ನ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
-

ಸಿದ್ದಗಂಗಾ ಶ್ರೀಗಳಿಗೆ ಚಿಕಿತ್ಸೆ- ವೈದ್ಯರಿಗೆ ಧನ್ಯವಾದ ಹೇಳಿ ಭಕ್ತರಲ್ಲಿ ಸಿಎಂ ಮನವಿ
ತುಮಕೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಧನ್ಯವಾದ ಹೇಳಿದ್ದಾರೆ. ಅಲ್ಲದೇ ಇದೇ ವೇಳೆ ಮಠದ ಭಕ್ತರಲ್ಲಿ ಸಿಎಂ ಮನವಿಯನ್ನೂ ಮಾಡಿಕೊಂಡಿದ್ದಾರೆ.
ಇಂದು ಮಠಕ್ಕೆ ಭೇಟಿ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸಿದ್ದಗಂಗಾ ಶ್ರೀಗಳ ಆರೋಗ್ಯ ಅತ್ಯುತ್ತಮವಾಗಿದೆ. ಅವರ ಆರೋಗ್ಯವನ್ನ ವೈದ್ಯರು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ವೈದ್ಯರು ಉತ್ತಮ ರೀತಿಯಲ್ಲಿ ತಮ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವೈದ್ಯರಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಅಂತ ಹೇಳಿದ್ರು.

ಶ್ರೀಗಳಿಗೆ ಚಿಕಿತ್ಸೆ ಕೊಡೋದು ವೈದ್ಯರಿಗೆ ಸವಾಲಿನ ವಿಷಯವಾಗಿದೆ. ಅಂತದ್ದರಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಭಕ್ತರಿಗೆ ಆತಂಕ ಬೇಡ. ಸ್ವಾಮೀಜಿಗಳ ವಿಶ್ರಾಂತಿಗೆ ಅಡಚಣೆಯಾಗಬಾರದು ಅಂತ ಇದೇ ವೇಳೆ ಭಕ್ತರಲ್ಲಿ ಮನವಿ ಮಾಡಿಕೊಂಡರು.
ಶ್ರೀಗಳು ಇಳಿ ವಯಸ್ಸಿನಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಪರಮಪೂಜ್ಯರು ಚೆನ್ನಾಗಿದ್ದಾರೆ. ಅವರ ವಿಶ್ರಾಂತಿಗೆ ತೊಂದರೆ ಕೊಡಬಾರದು ಅಂತಿದ್ದೆ. ಧಾರವಾಡದ 84 ನೇ ಸಾಹಿತ್ಯ ಸಮ್ಮೇಳನಕ್ಕೆ ಹೋಗುತ್ತಿದ್ದೇನೆ. ಮಾರ್ಗ ಮಧ್ಯೆ ಪರಮಪೂಜ್ಯರ ದರ್ಶನಕ್ಕೆ ಬಂದಿದ್ದೇನೆ. ಕಿರಿಯ ಶ್ರೀಗಳ ಬಳಿ ಬರಬಹುದಾ ಅಂತಾ ಕೇಳಿ ಬಂದಿದ್ದೇನೆ ಅಂದ್ರು.

ಆಸ್ಪತ್ರೆಗೆ ದಾಖಲು:
ಶ್ರೀಗಳು ಬೇಗ ಗುಣಮುಖರಾಗಲು ಉತ್ತಮ ಆರೈಕೆ ಅಗತ್ಯವಿದ್ದು, ಸೋಂಕು ಬೇಗ ವಾಸಿಯಾಗಬೇಕು ಎಂಬ ಉದ್ದೇಶದಿಂದ ಅವರನ್ನು ಗುರುವಾರ ರಾತ್ರಿ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.“ಮಠದಲ್ಲಿ ನಾವು ಎಷ್ಟೇ ಜಾಗೃತಿ ವಹಿಸಿದರೂ ಕೂಡ ಸೋಂಕು ತಗಲುವ ಸಾಧ್ಯತೆ ಇತ್ತು. ಅಲ್ಲದೇ ಚಿಕಿತ್ಸೆಗೆ ಬೇಕಾದ ಸೌಲಭ್ಯಗಳು ಕೂಡ ಆಸ್ಪತ್ರೆಯಲ್ಲಿ ಲಭ್ಯವಾಗುವ ಕಾರಣ ಈ ನಿರ್ಧಾರ ಕೈಗೊಳ್ಳಲಾಯಿತು. ಶ್ರೀ ಗಳಿಗೆ ಎಂದಿನಂತೆ ತಪಾಸಣೆ ಹಾಗೂ ಚಿಕಿತ್ಸೆ ಆಸ್ಪತ್ರೆಯಲ್ಲೇ ಮುಂದುವರಿಯುತ್ತದೆ. ಇಂದು ರೇಲಾ ಆಸ್ಪತ್ರೆಯಿಂದ ತಜ್ಞ ವೈದ್ಯರು ಕೂಡ ಆರೋಗ್ಯವನ್ನು ಚೆಕ್ ಮಾಡಿದ್ದಾರೆ. ಆದ್ದರಿಂದ ಯಾರು ಆತಂಕಕ್ಕೆ ಒಳಪಡುವ ಅಗತ್ಯವಿಲ್ಲ” ಅಂತ ನಿನ್ನೆ ಕಿರಿಯ ಶ್ರೀಗಳು ಹೇಳಿದ್ದರು.
https://www.youtube.com/watch?v=pdPt-TVIzFE
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
-

ವಿಶ್ರಾಂತಿಗೆ ತೊಂದರೆ ಹಿನ್ನೆಲೆ ಸಿದ್ದಗಂಗಾ ಶ್ರೀಗಳು ಆಸ್ಪತ್ರೆಗೆ ಶಿಫ್ಟ್: ಕಿರಿಯ ಸ್ವಾಮೀಜಿ
ತುಮಕೂರು: ಸಿದ್ದಗಂಗಾ ಮಠದ ಸಿದ್ದಗಂಗಾ ಶ್ರೀಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀಗಳು ಬೇಗ ಗುಣಮುಖರಾಗಲು ಉತ್ತಮ ಆರೈಕೆ ಅಗತ್ಯವಿದ್ದು, ಸೋಂಕು ಬೇಗ ವಾಸಿಯಾಗಬೇಕು ಎಂಬ ಉದ್ದೇಶದಿಂದ ಅವರನ್ನು ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿದ್ದಗಂಗಾ ಕಿರಿಯ ಶ್ರೀಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕಿರಿಯ ಶ್ರೀಗಳು, ಮಠದ ವಾತಾವರಣದಲ್ಲಿ ಶ್ರೀಗಳಿಗೆ ಸೋಂಕು ತಗಲುವ ಸಾಧ್ಯತೆ ಇದ್ದು, ಮಠಕ್ಕೆ ವಿಐಪಿಗಳು ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ. ಆದ್ದರಿಂದ ಆಸ್ಪತ್ರೆಗೆ ಶಿಫ್ಟ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ನಾಡಿನ ಭಕ್ತರೂ ಇದನ್ನು ಅನ್ಯತ ತಿಳಿದುಕೊಳ್ಳಬಾರದು. ಶ್ರೀಗಳ ಆರೋಗ್ಯ ಉತ್ತಮವಾಗಿ ಚೇತರಿಕೆ ಆಗುತ್ತಿದೆ. ವಿಐಪಿಗಳ ಭೇಟಿಗೂ ಅವಕಾಶ ನಿರಾಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮಠದಲ್ಲಿ ನಾವು ಎಷ್ಟೇ ಜಾಗೃತಿ ವಹಿಸಿದರು ಕೂಡ ಸೋಂಕು ತಗಲುವ ಸಾಧ್ಯತೆ ಇತ್ತು. ಅಲ್ಲದೇ ಚಿಕಿತ್ಸೆಗೆ ಬೇಕಾದ ಸೌಲಭ್ಯಗಳು ಕೂಡ ಆಸ್ಪತ್ರೆಯಲ್ಲಿ ಲಭ್ಯವಾಗುವ ಕಾರಣ ಈ ನಿರ್ಧಾರ ಕೈಗೊಳ್ಳಲಾಯಿತು. ಶ್ರೀ ಗಳಿಗೆ ಎಂದಿನಂತೆ ತಪಾಸಣೆ ಹಾಗೂ ಚಿಕಿತ್ಸೆ ಆಸ್ಪತ್ರೆಯಲ್ಲೇ ಮುಂದುವರಿಯುತ್ತದೆ. ಇಂದು ರೇಲಾ ಆಸ್ಪತ್ರೆಯಿಂದ ತಜ್ಞ ವೈದ್ಯರು ಕೂಡ ಪರಿಶೀಲನೆ ನಡೆಸಿದ್ದಾರೆ. ಆದ್ದರಿಂದ ಯಾರು ಆತಂಕಕ್ಕೆ ಒಳಪಡುವ ಅಗತ್ಯವಿಲ್ಲ ಎಂದರು.
ತುಮಕೂರು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಹಾಗೂ ಎಸ್‍ಪಿ ಡಾ ದಿವ್ಯಾ ಗೋಪಿನಾಥ್ ನೇತೃತ್ವದಲ್ಲಿ ಆಸ್ಪತ್ರೆ ಗೆ ಶಿಫ್ಟ್ ಮಾಡಲಾಯಿತು. ಮಠದಿಂದ ಝೀರೋ ಟ್ರಾಫಿಕ್ ಮೂಲಕ ಸಿದ್ದಗಂಗಾ ಆಸ್ಪತ್ರೆಗೆ ಶ್ರೀಗಳನ್ನು ಕರೆತರಲಾಯಿತು. ಶ್ರೀಗಳ ವಿಶ್ರಾಂತಿಗೆ ತೊಂದರೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
-

ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ – ವಿಐಪಿಗಳ ಭೇಟಿ ನಿಲ್ಲಿಸಬೇಕು: ವೈದ್ಯರ ಮನವಿ
ತುಮಕೂರು: ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಆಗುತ್ತಿದ್ದು, ಆದರೆ ಪದೇ ಪದೇ ವಿಐಪಿಗಳು ಭೇಟಿ ನೀಡುವುದನ್ನು ನಿಲ್ಲಿಸಬೇಕು ಎಂದು ಬಿಜಿಎಸ್ ಆಸ್ಪತ್ರೆಯ ಡಾ.ರವೀಂದ್ರ ಮನವಿ ಮಾಡಿಕೊಂಡಿದ್ದಾರೆ.
ಮಾಧ್ಯಮಗಳಿಗೆ ಶ್ರೀ ಗಳ ಆರೊಗ್ಯದ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಅವರು, ಶ್ರೀಗಳ ಆರೋಗ್ಯ ದಿನದಿಂದ ದಿನಕ್ಕೆ ಹೆಚ್ಚು ಉತ್ತಮವಾಗುತ್ತಿದ್ದು, ನಿನ್ನೆಗಿಂತ ಇಂದು ಸುಧಾರಣೆ ಆಗಿದೆ. ಆದರೆ ಶ್ರೀಗಳ ದರ್ಶನ ಪಡೆಯಲು ವಿಐಪಿಗಳು ಪದೇ ಪದೇ ಮಠಕ್ಕೆ ಭೇಟಿ ನೀಡುವುದನ್ನು ನಿಲ್ಲಿಸಬೇಕು. ಆ ಮೂಲಕ ಶ್ರೀಗಳ ಚಿಕಿತ್ಸೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಚೆನ್ನೈ ಮೂಲದ ಸೋಂಕು ತಜ್ಞ ಡಾ.ಸುಬ್ರಾ ಅವರು ಮಾತನಾಡಿ, ಶ್ರೀಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿದು, ಅವರಿಗೆ ವಯಸ್ಸಾಗಿರುವುದರಿಂದ ಚೇತರಿಕೆ ನಿಧಾನವಾಗುತ್ತಿದೆ. ಶ್ವಾಸಕೋಶ ಸೋಂಕು ಕೂಡ ಕಡಿಮೆಯಾಗುತ್ತಿದ್ದು, ಆಹಾರ ಸ್ವೀಕರಿಸಿಸುವುದು ನಿಧಾನವಾಗಿ ಹೆಚ್ಚುತ್ತಿದೆ. ಮಠದಲ್ಲೇ ಚಿಕಿತ್ಸೆಗೆ ಬೇಕಾದ ಎಲ್ಲಾ ಸೌಲಭ್ಯ ಇರುವುದರಿಂದ ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಲಾಗುತ್ತಿದೆ. ಜನರ ಪ್ರಾರ್ಥನೆ ಹಾಗೂ ಶ್ರೀಗಳ ವಿಲ್ ಪವರ್ ನಿಂದ ಬಹುಬೇಗ ಚೇತರಿಸಿಕೊಳ್ಳಲಿದ್ದಾರೆ. ಮಠದಲ್ಲೇ ಎಲ್ಲಾ ವೈದ್ಯಕೀಯ ವ್ಯವಸ್ಥೆ ಇರುವುದರಿಂದ, ಅವರನ್ನು ಬೇರೆ ಎಲ್ಲೂ ಶಿಫ್ಟ್ ಮಾಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ಶ್ರೀಗಳನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡುತ್ತಿಲ್ಲ, ಇದರಲ್ಲೇ ಅವರ ಆರೋಗ್ಯ ಪ್ರಗತಿಯ ಬಗ್ಗೆ ತಿಳಿಯುತ್ತದೆ. ಜನರ ಪ್ರಾರ್ಥನೆಯೇ ಅವರ ಚೇತರಿಕೆ ಪ್ರಮುಖ ಕಾರಣವೂ ಆಗಲಿದೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
