Tag: Siddaganga Sri

  • ಸಿದ್ದಗಂಗಾ ಶ್ರೀಗಳಿಗೆ ಕುಂಚ ನಮನ

    ಸಿದ್ದಗಂಗಾ ಶ್ರೀಗಳಿಗೆ ಕುಂಚ ನಮನ

    ಮೈಸೂರು/ಬೆಳಗಾವಿ: ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳಿಗೆ ನಾಡಿನ ಹಲವು ಕಲಾವಿದರು ಶ್ರೀಗಳ ಭಾವಚಿತ್ರ ಬಿಡಿಸುವ ಮೂಲಕ ನಮನ ಸಲ್ಲಿಸಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕಲಾವಿದ ಶ್ರೀಶೈಲ್ ಗಸ್ತಿ ಸಾರ್ವಜನಿಕವಾಗಿ ಬಾಯಲ್ಲಿ ಕುಂಚ ಹಿಡಿದು ಸಿದ್ದಗಂಗಾ ಶ್ರೀಗಳ ಭಾವಚಿತ್ರ ರಚನೆ ಮಾಡಿ ಶಿವೈಕ್ಯರಾದ, ಶಿವಕುಮಾರ ಶ್ರೀಗಳಿಗೆ ನಮನ ಸಲ್ಲಿಸಿದರು. ಇದೇ ವೇಳೆ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿ ಸಹಿ ಸಂಗ್ರಹ ಅಭಿಯಾನ ನಡೆಸಿದರು. ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಿ ಪ್ರಶಸ್ತಿಯ ಗೌರವ ಹೆಚ್ಚಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂತು.

    ಇತ್ತ ಮೈಸೂರಿನಲ್ಲೂ ಹಲವು ಕಲಾವಿದರು ನಗರದ ಕೆ.ಆರ್ ವೃತ್ತದಲ್ಲಿ ಶ್ರೀಗಳ ಚಿತ್ರ ಬರೆದು ಗೌರವ ನಮನ ಸಲ್ಲಿಸಿದರು. ಮೈಸೂರು ಕುಂಚ ಕಲಾವಿದರ ಸಂಘದಿಂದ ಶ್ರೀಗಳಿಗೆ ನಮನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಶ್ರೀಗಳ ಚಿತ್ರಗಳ ಮೇಲೆ ದಾಸೋಹ ರತ್ನ ತಿಲಕ, ವಿದ್ಯಾ ರತ್ನ ತಿಲಕ ಎಂದು ಬರೆದು ಕಲಾವಿದರು ಗೌರವ ಸಲ್ಲಿಸಿದರು.

    ಉಜಿರೆ ಕಲಾವಿದ ವಿಲಾಸ್ ನಾಯ್ಕ್ ಶ್ರೀಗಳ ಭಾವಚಿತ್ರ ಬಿಡಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ. ವಿಲಾಸ್ ನಾಯ್ಕ್ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೂಜ್ಯ ಗದ್ದುಗೆಯಲ್ಲಿ ಐಕ್ಯರಾದ ಶ್ರೀಗಳು

    ಪೂಜ್ಯ ಗದ್ದುಗೆಯಲ್ಲಿ ಐಕ್ಯರಾದ ಶ್ರೀಗಳು

    ತುಮಕೂರು: ವಿಶ್ವಚೇತನ, ವಿಶ್ವರತ್ನ, ಕಾಯಕಯೋಗಿ, ನಡೆದಾಡುವ ದೇವರು ಡಾ. ಶಿವಕುಮಾರಸ್ವಾಮೀಜಿಗಳ ಯುಗಾಂತ್ಯವಾಗಿದೆ. ಸೋಮವಾರ 11 ಗಂಟೆ 44 ನಿಮಿಷಕ್ಕೆ ಲಿಂಗೈಕ್ಯರಾದ ಮಹಾನ್ ಮಾನವತಾವಾದಿಗೆ ಕೋಟಿ ಮನಸುಗಳು ಭಾರ ಹೃದಯದಿಂದ ಬೀಳ್ಕೊಡುಗೆ ನೀಡಿದ್ದಾರೆ. ಸಿದ್ದಗಂಗಾ ಮಠದ ಆವರಣದಲ್ಲಿ ಗುರು ಉದ್ಧಾನ ಶಿವಯೋಗಿಗಳ ಪಕ್ಕದಲ್ಲಿ ಶಿವಕುಮಾರ ಸ್ವಾಮೀಜಿಯವರನ್ನು ಗದ್ದುಗೆಯಲ್ಲಿ ಐಕ್ಯ ಮಾಡಲಾಗಿದೆ.

    ಮಧ್ಯಾಹ್ನ 4.30ರ ವೇಳೆಗೆ ಆರಂಭವಾದ ಕ್ರಿಯಾ ವಿಧಾನ, ವಿಧಿ ವಿಧಾನಗಳು ಅಂತಿಮವಾಗಿ 8.30 ಗಂಟೆಗೆ ಪೂರ್ಣಗೊಂಡಿತು. ಶ್ರೀಗಳು ಚೈತನ್ಯ ಅವರ ದೇಹವನ್ನು ಬಿಟ್ಟು ಹೋದ ಬಳಿಕ ಅವರ ದೇಹಕ್ಕೆ ಮತ್ತೆ ಚೈತನ್ಯ ತುಂಬಲು ಕ್ರಿಯಾ ಸಮಾಧಿ ವಿಧಿ ವಿಧಾನ ಮಾಡಲಾಯಿತು. ಲಿಂಗಧಾರಣೆ ಮಾಡಿ, ಇಷ್ಟಲಿಂಗ ಪೂಜೆ ಮಾಡುವ ಅಧ್ಯಾತ್ಮ ಸಾಧಕರಿಗೆ ಮಾತ್ರ ಲಿಂಗಾಯತ ಕ್ರಿಯಾಸಮಾಧಿ ಮಾಡಲಾಗುತ್ತದೆ.

    ಸಂಜೆ 4.30ಕ್ಕೆ ಆರಂಭವಾದ ಈ ಪ್ರಕ್ರಿಯೆಯಲ್ಲಿ ಕಿರಿಯ ಶ್ರೀಗಳು ಮುಂದಿದ್ದು ಎಲ್ಲಾ ವಿಧಿ ವಿಧಾನಗಳನ್ನು ನೆರವೇರಿಸಿದರು. 5 ಗಂಟೆಗೆ ಶ್ರೀಗಳು ಮಹಾ ಮಂಗಳಾರತಿ ಮಾಡಿದ ಬಳಿಕ ಮೆರವಣಿಗೆಗೆ ಆರಂಭ ಮಾಡಲಾಯಿತು. 5.15 ಗಂಟೆಗೆ ಸುಮಾರಿಗೆ ಲಿಂಗೈಕ್ಯ ದೇಹವನ್ನು 1 ಲಕ್ಷದ 1 ರುದ್ರಾಕ್ಷಿ ಹಾಗೂ ಹೂಗಳಿಂದ ಅಲಂಕಾರ ಮಾಡಿದ್ದ ವಿಮಾನಗೋಪುರದ ಮೂಲಕ ಅಂತಿಮ ಯಾತ್ರೆ ಮೆರವಣಿಗೆ ಆರಂಭ ಮಾಡಲಾಯಿತು.

    ಸಂಜೆ 6 ಗಂಟೆ ವೇಳೆಗೆ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ, ದಿನೇಶ್ ಗುಂಡೂರಾವ್, ವೀರಪ್ಪ ಮೊಯ್ಲಿ, ದೇಶಪಾಂಡೆ, ಶೋಭಾ ಕರಂದ್ಲಾಜೆ, ಶ್ರೀರಾಮುಲು, ಜನಾರ್ದನ ರೆಡ್ಡಿ, ಡಿಸಿಎಂ ಪರಮೇಶ್ವರ್, ಗೃಹ ಸಚಿವ ಎಂ.ಬಿ.ಪಾಟೀಲ್, ಮಾಜಿ ಸಚಿವ ವಿ.ಸೋಮಣ್ಣ, ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು, ಸಂಸದರು, ಶಾಸಕರು, ಸಚಿವರು ಸೇರಿದಂತೆ ಜನಪ್ರತಿನಿಧಿಗಳು ಹಾಜರಿದ್ದು, ಗೌರವ ಸಲ್ಲಿಸಿದರು. ಬಳಿಕ 3 ಸುತ್ತು ಕುಶಾಲುತೋಪು ಹಾರಿಸಿ, ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಬಳಿಕ ಶ್ರೀಗಳ ಲಿಂಗ ದೇಹದ ಮೇಲೆ ಹೊದಿಸಿದ್ದ ತ್ರಿವರ್ಣ ಧ್ವಜವನ್ನು ಸಿಎಂ ಕುಮಾರಸ್ವಾಮಿ ಅವರು ಕಿರಿಯ ಶ್ರೀಗಳಿಗೆ ಹಸ್ತಾಂತರಿಸಿದರು. ಈ ಮೂಲಕ ಅಧಿಕೃತವಾಗಿ ಶ್ರೀಗಳ ಲಿಂಗಕಾಯವನ್ನು ಮಠಕ್ಕೆ ಹಸ್ತಾಂತರ ಮಾಡಿದರು. ರಾಷ್ಟ್ರಧ್ವಜ ಹೊದಿಸುವಾಗ “ಶ್ರೀಗಳಿಗೆ ಭಾರತರತ್ನ ನೀಡಿ” ಎನ್ನುವ ಘೋಷ ಕೇಳಿಬಂತು.

    ಪಂಚ ವಾದ್ಯಗಳ ಮೂಲಕ ಶಿವಯೋಗಿಗಳ ಗದ್ದುಗೆವರೆಗೂ ಮೆರವಣಿಗೆ ಮಾಡಲಾಯಿತು. “ಶಿವಕುಮಾರ ಸ್ವಾಮೀಜಿಗಳಿಗೆ, ನಡೆದಾಡುವ ದೇವರಿಗೆ ಜಯವಾಗಲಿ, ಅನ್ನ ದಾಸೋಹಿಗೆ ಜಯವಾಗಲಿ, ಜ್ಞಾನ ದಾಸೋಹಿಗೆ ಜಯವಾಗಲಿ” ಎಂಬ ಘೋಷ ಕೂಗುತ್ತಾ 3 ಪ್ರದಕ್ಷಿಣೆ ಮಾಡಿದ ಬಳಿಕ ಗದ್ದುಗೆಯ ಸಮಾಧಿ ಸ್ಥಳದಲ್ಲಿ ಐವರು ಸ್ವಾಮೀಜಿಗಳು ಈ ವೇಳೆ ಕ್ರಿಯಾ ವಿಧಿ ವಿಧಾನಗಳನ್ನು ಆರಂಭಿಸಿದರು. ಗದ್ದುಗೆ ಪೂಜೆ ಸ್ಥಳದಲ್ಲಿ ಕ್ರಿಯಾ ಸಮಾಧಿ ಶಾಸ್ತ್ರಗಳು, ಮಂತ್ರ ಪಠಣ ಮೂಲಕ ಕಾರ್ಯ ನಡೆಯಿತು. ಅಟವೀ ಶಿವಯೋಗಿಗಳ ಗದ್ದುಗೆಯ ಅರ್ಚಕರೂ ಕೂಡ ಈ ಪೂಜೆಯಲ್ಲಿ ತೊಡಗಿದ್ದರು. ಬೆಳಗ್ಗೆಯಿಂದಲೇ ನಡೆದ ಪೂಜೆ ಶಾಸ್ತ್ರಗಳನ್ನು ಕಿರಿಯ ಸ್ವಾಮೀಜಿಗಳು ಪೂರ್ಣಗೊಳಿಸಿದರು. ಕ್ರಿಯಾ ಸಮಾಧಿ ವೇಳೆ 10 ರಿಂದ 11 ಸಾವಿರ ವಿಭೂತಿ ಗಟ್ಟಿ, 20 ಚೀಲ ಅಂದರೆ 500 ಕೆಜಿ ಉಪ್ಪು, 10 ಚೀಲ ಮರಳು, 1001 ವಿವಿಧ ರೀತಿಯ ಪತ್ರೆಗಳನ್ನು ಬಳಕೆ ಮಾಡಲಾಗಿತ್ತು.

    ಕ್ರಿಯಾ ಸಮಾಧಿ: ವೀರಶೈವ ಲಿಂಗಾಯಿತ ಆಗಮೋಕ್ತ ಕ್ರಿಯಾ ಸಮಾಧಿ ವಿಧಿ ವಿಧಾನಗಳ ಮೂಲಕ ಶ್ರೀಗಳ ಕ್ರಿಯಾ ಸಮಾಧಿಯನ್ನು ಮಾಡಲಾಯಿತು. 9 ಪಾದ ಆಳ, 9 ಪಾದ ಉದ್ದ, 5 ಪಾದ ಅಗಲದಲ್ಲಿ ನಿರ್ಮಾಣವಾಗಿರುವ ಕ್ರಿಯಾ ಸಮಾಧಿಯಲ್ಲಿ 3 ಹಂತಗಳಲ್ಲಿ ಮೆಟ್ಟಿಲು (ಸೋಪನ) ನಿರ್ಮಾಣ ಮಾಡಲಾಗಿರುತ್ತದೆ. ಶ್ರೀಗಳ ಪಾರ್ಥಿವ ಶರೀರವನ್ನು ಕೂರಿಸಲು ಆದರೊಳಗೆ ತ್ರಿಕೋನಾಕೃತಿಯಲ್ಲಿ ಗೂಡು ನಿರ್ಮಿಸಲಾಗಿತ್ತು. ಇದರಲ್ಲಿ ಶ್ರೀಗಳ ಐಕ್ಯವನ್ನಿಟ್ಟು, ವಿಭೂತಿ, ಪತ್ರೆ, ಉಪ್ಪು ಸೇರಿದಂತೆ ವಿವಿಧ ಬಿಲ್ವಪತ್ರೆಗಳನ್ನ ಕ್ರಿಯಾ ಸಮಾಧಿಯನ್ನು ಮುಚ್ಚಲಾಯಿತು.

    ಮೊದಲಿಗೆ ಪಾರ್ಥೀವ ಶರೀರಕ್ಕೆ ನಾಡಿನ ಪುಣ್ಯ ನದಿಗಳಿಂದ ತರಿದ್ದ ಪವಿತ್ರ ತೀರ್ಥದಿಂದ ಅಭಿಷೇಕ ನೆರವೇರಿಸಿ ಹೊಸ ಕಶಾಯ ವಸ್ತ್ರಗಳನ್ನು ಧಾರಣೆ ಮಾಡಲಾಯಿತು. ಈ ವೇಳೆ ಪಂಚಾಮೃತ ಹಾಗೂ ಪತ್ರೆ ಇಟ್ಟು ಪ್ರತಿ ಸೋಪಾನದಲ್ಲೂ ಅಭಿಷೇಕ ನಡೆಸಲಾಯಿತು.

    ಪಾರ್ಥಿವ ಶರೀರವನ್ನು ಗದ್ದುಗೆಯ ಒಳಭಾಗದ ಗೂಡಿನಲ್ಲಿ ಪದ್ಮಾಸನ ಸ್ಥಿತಿಯಲ್ಲಿ ಕೂರಿಸಿ, ಕೈಗೆ ಇಷ್ಟ ಲಿಂಗವನ್ನು ನೀಡಲಾಯಿತು. ನಂತರ ರುದ್ರ ಚಮಕ ಪಠಣ ಮಾಡುತ್ತಾ ಪಾರ್ಥೀವ ಶರೀರಕ್ಕೆ ಪಂಚಾಮೃತಾಭಿಷೇಕ ನೆರವೇರಿಸಲಾಯಿತು. ಈ ವೇಳೆ ಶ್ರೀಗಳಿಗೆ ಮಹಾ ಮಂಗಳಾರತಿ ಹಾಗೂ ತಂಬಿಟ್ಟು, ಚಿಗಲಿ ಹಾಗೂ ಹಸಿ ಕಡಲೆಕಾಳು ನೈವೇದ್ಯ ನೆರವೇರಿಸಲಾಯಿತು. ಕೆಳ ಭಾಗದಲ್ಲಿ ಉಪ್ಪು, ಮೆಣಸು ನಂತರ ವಿಭೂತಿ ಗಟ್ಟಿಗಳಿಂದ ಲಿಂಗ ಶರೀರವನ್ನು ಮುಚ್ಚಲಾಯಿತು.

    https://www.youtube.com/watch?v=S5rWpX2kQ2g

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ ಸಿಎಂ ಕುಮಾರಸ್ವಾಮಿ

    ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ ಸಿಎಂ ಕುಮಾರಸ್ವಾಮಿ

    ತುಮಕೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ಲಿಂಗೈಕ್ಯದಿಂದ ಹಿಡಿದು ಕ್ರಿಯಾ ವಿಧಾನವರೆಗೂ ಅಚ್ಚುಕಟ್ಟಾಗಿ ಬಂದೋಬಸ್ತ್ ಒದಗಿಸಿದ ಪೊಲೀಸ್ ಇಲಾಖೆಗೆ ಸಿಎಂ ಕುಮಾರಸ್ವಾಮಿ ಧನ್ಯವಾದ ತಿಳಿಸಿದ್ದಾರೆ.

    ಶ್ರೀಗಳಿಗೆ ಸರ್ಕಾರದ ಗೌರವ ವಂದನೆ ಸಲ್ಲಿಸಿದ ಬಳಿಕ ಮಾತನಾಡಿದ ಸಿಎಂ ಕುಮಾರಸ್ವಾಮಿ, ಭಕ್ತರು ಶ್ರೀಗಳ ದರ್ಶನ ಹಾಗೂ ಅಂತಿಮ ಕ್ರಿಯಾ ವಿಧಾನವರೆಗೂ ಪೊಲೀಸ್ ಇಲಾಖೆಗೆ ಸಹಕಾರ ನೀಡಿ ಶಾಂತಿಯಿಂದ ನಡೆದುಕೊಂಡ ಕಾರಣ ಧನ್ಯವಾದ ತಿಳಿಸಿದರು. ಅಲ್ಲದೇ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿದ್ದ ಪೊಲೀಸ್ ಇಲಾಖೆಯ ಕಾರ್ಯವನ್ನು ಶ್ಲಾಘಿಸಿ ಔರಾದ್ಕಾರ್ ವರದಿ ಜಾರಿ ಮಾಡುವುದಕ್ಕೆ ಶ್ರಮಿಸುತ್ತೇನೆ ಎಂದು ಹೇಳಿದರು.

    ರಾತ್ರಿಯೆಲ್ಲಾ ಮಠದ ಎನ್‍ಸಿಸಿ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರು ರಾತ್ರಿ ಇಡೀ ನಿಂತು ಶ್ರಮವಹಿಸಿದ್ದೀರಾ. ರಾಜ್ಯ ಸರ್ಕಾರ ಪೊಲೀಸರ ಅಭಿವೃದ್ಧಿಗಾಗಿ ಶ್ರಮಿಸುತ್ತದೆ. ಮಠದ ಆವರಣದಲ್ಲಿ ಈ ಕುರಿತು ಭರವಸೆ ನೀಡುತ್ತಿದ್ದು, ಔರಾದ್ಕಾರ್ ವರದಿ ಜಾರಿ ಮಾಡುವ ಕಾರ್ಯ ಮಾಡಲಾಗುತ್ತದೆ. ಅಲ್ಲದೇ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಕುರಿತು ರಾಷ್ಟ್ರಪತಿ ಹಾಗೂ ಪ್ರಧಾನಿಯನ್ನು ಖುದ್ದು ಭೇಟಿ ಮಾಡಿ ಶಿಪಾರಸ್ಸು ಮಾಡುತ್ತೇನೆ. ಈ ಬಗ್ಗೆ ಭಕ್ತರಿಗೆ ಭರವಸೆ ನೀಡುತ್ತೇನೆ ಎಂದು ಸಿಎಂ ತಿಳಿಸಿದರು.

    ಮುಂದಿನ ಸಮಯದಲ್ಲೂ ಮಠಕ್ಕೆ ಆಗಮಿಸುವ ಭಕ್ತರಿಗೆ ಸೌಲಭ್ಯ ಕಲ್ಪಿಸಿಕೊಡಲಾವುದು. ನಾಡಿಗೆ ಪೊಲೀಸ್ ಇಲಾಖೆ ಸಲ್ಲಿಸಿರುವ ಸೇವೆಗೆ ರಾಜ್ಯದ ಜನರು ಕೂಡ ಅಭಿನಂದನೆ ಸಲ್ಲಿಸುತ್ತಾರೆ. ನಿಮ್ಮ ಉತ್ತಮ ಸೇವೆ ಹೀಗೇ ಮುಂದುವರಿಯಲಿ ಎಂದು ಮನವಿ ಮಾಡುತ್ತೇನೆ ಎಂದರು.

    https://www.youtube.com/watch?v=nE4fxo3zMMQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಗಳವಾರ ನಡೆಯಬೇಕಿದ್ದ ಪರೀಕ್ಷೆಗಳು ಮುಂದೂಡಿಕೆ- ಶ್ರೀಗಳ ಅಂತಿಮ ದರ್ಶನಕ್ಕೆ ವಿಶೇಷ ರೈಲು ವ್ಯವಸ್ಥೆ

    ಮಂಗಳವಾರ ನಡೆಯಬೇಕಿದ್ದ ಪರೀಕ್ಷೆಗಳು ಮುಂದೂಡಿಕೆ- ಶ್ರೀಗಳ ಅಂತಿಮ ದರ್ಶನಕ್ಕೆ ವಿಶೇಷ ರೈಲು ವ್ಯವಸ್ಥೆ

    ಬೆಂಗಳೂರು: ಸಿದ್ದಗಂಗಾ ಶ್ರೀಗಳ ಲಿಂಗೈಕ್ಯ ಹಿನ್ನೆಲೆಯಲ್ಲಿ ಮಂಗಳವಾರ ಸರ್ಕಾರ ರಜೆಯನ್ನು ಘೋಷಣೆ ಮಾಡಿದೆ. ಹೀಗಾಗಿ ನಾಳೆ ನಡೆಯಬೇಕಿದ್ದ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.

    ಬೆಂಗಳೂರು ವಿಶ್ವವಿದ್ಯಾಲಯ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ನಾಳೆ ನಡೆಯಬೇಕಿದ್ದ ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳು ಮುಂದೂಡಿಕೆ ಮಾಡಲಾಗಿದೆ ಎಂದು ಕುಲಸಚಿವರು ಆದೇಶ ಹೊರಡಿಸಿದ್ದಾರೆ. ಇತ್ತ ಪಿಯು ಪೂರಕ ಪರೀಕ್ಷೆಗಳು ಮುಂದೂಡಲಾಗಿದೆ ಎಂದು ಪಿಯು ಬೋರ್ಡ್ ಪ್ರಕಟಣೆ ಹೊರಡಿಸಿದೆ. ಬದಲಾದ ಪರೀಕ್ಷೆ ದಿನಾಂಕ ಆಯಾ ವಿಶ್ವವಿದ್ಯಾಲಯದ ವೆಬ್‍ಸೈಟ್ ನಲ್ಲಿ ಪ್ರಕಟಿಸಲಾಗಿದೆ.

    ಇತ್ತ ಶ್ರೀಗಳ ಅಂತಿಮ ದರ್ಶನ ಪಡೆಯಲು ಭಕ್ತಾದಿಗಳಿಗೆ ವಿಶೇಷ ರೈಲು ಸೌಲಭ್ಯವನ್ನು ಕಲ್ಪಿಸಲಾಗಿದೆ. ಬೆಂಗಳೂರು-ತುಮಕೂರು ನಗರಗಳ ನಡುವೆ ವಿಶೇಷ ರೈಲು ವ್ಯವಸ್ಥೆ ಇರಲಿದೆ. ಯಶವಂತಪುರದಿಂದ ಬೆಳಗ್ಗೆ 7.30ಕ್ಕೆ ಹೊರಟು 9 ಗಂಟೆಗೆ ತುಮಕೂರಿಗೆ ತಲುಪಲಿದೆ. ಯಶವಂತಪುರದಿಂದ ಮಧ್ಯಾಹ್ನ 12 ಗಂಟೆಗೆ ಹೊರಟು ಮಧ್ಯಾಹ್ನ 1.30ಕ್ಕೆ ತುಮಕೂರು ತಲುಪಲಿದೆ. ತುಮಕೂರಿನಿಂದ ಯಶವಂತಪುರಕ್ಕೆ ಬೆಳಗ್ಗೆ 11.10ಕ್ಕೆ, ಸಂಜೆ 4.15ಕ್ಕೆ ವಿಶೇಷ ರೈಲು ವ್ಯವಸ್ಥೆ ಇರಲಿದೆ.

    ಕೆಎಸ್‍ಆರ್ ಟಿಸಿ ಸಹ ಬೆಂಗಳೂರು-ತುಮಕೂರು ನಗರಗಳ ನಡುವೆ 100ಕ್ಕೂ ಹೆಚ್ಚು ಬಸ್ ಗಳ ವ್ಯವಸ್ಥೆ ಇರಲಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

    https://www.youtube.com/watch?v=jtctwPaRF7o

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಡೆದಾಡುವ ದೇವ್ರು ಕಾಣದ ದೇವರೊಂದಿಗೆ ಐಕ್ಯ: ಸ್ಯಾಂಡಲ್‍ವುಡ್ ಕಲಾವಿದರ ಸಂತಾಪ

    ನಡೆದಾಡುವ ದೇವ್ರು ಕಾಣದ ದೇವರೊಂದಿಗೆ ಐಕ್ಯ: ಸ್ಯಾಂಡಲ್‍ವುಡ್ ಕಲಾವಿದರ ಸಂತಾಪ

    ಬೆಂಗಳೂರು: ಇಂದು ಬೆಳಗ್ಗೆ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು ಶಿವೈಕ್ಯರಾಗಿದ್ದು, ಇಡೀ ಕರುನಾಡು ಮೌನವಾಗಿದೆ. ಶ್ರೀಗಳ ಅಂತಿಮ ದರ್ಶನ ಪಡೆಯಲು ಭಕ್ತಾದಿಗಳು ತುಮಕೂರು ನಗರದತ್ತ ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ. ಕನ್ನಡದ ನಟರಾದ ಜಗ್ಗೇಶ್, ಯಶ್, ಪುನೀತ್ ರಾಜ್‍ಕುಮಾರ್, ಸುದೀಪ್, ದರ್ಶನ್ ಸೇರಿದಂತೆ ಚಂದನವನದ ಕಲಾವಿದರು ಶ್ರೀಗಳ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

    ಜಗ್ಗೇಶ್: ನಿಮ್ಮ ಆತ್ಮ ಶಿವನಲ್ಲಿ ಲೀನವಾಗಲಿ. ನಿಮ್ಮ ಆಶೀರ್ವಾದ ಪಡೆದ ನಾವು ಧನ್ಯ. ಶ್ರೀ ಶ್ರೀ ಶಿವಕುಮಾರಸ್ವಾಮೀಜಿ ಪಾದುಕೆ ಪಡೆದ ನಾವೇ ಧನ್ಯರು. ಓಂ ನಮಃ ಶಿವಾಯಃ..

    ಯಶ್: ಬೇಡುವ ಕೈಗಳಿಗಿಂತ, ದುಡಿಯುವ ಕೈಗಳು ಮೇಲು ಎಂಬುದನ್ನು ತೋರಿಸಿಕೊಟ್ಟು ಒಬ್ಬ ಮನುಷ್ಯ ಹೇಗೆ ಸಾರ್ಥಕವಾಗಿ ಬದುಕಬೇಕೆಂಬುದಕ್ಕೆ ಜೀವಂತ ನಿದರ್ಶನವಾದವರು ತ್ರಿವಿಧ ದಾಸೋಹಿ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮೀಜಿಗಳು. ನಡೆದಾಡುವ ದೇವರು ಕಾಣದ ದೇವರೊಂದಿಗೆ ಐಕ್ಯರಾಗಿದ್ದಾರೆ. ಹೋಗಿ ಬನ್ನಿ ಬುದ್ಧಿ..ಮತ್ತೆ ಬನ್ನಿ.

    ಪುನೀತ್ ರಾಜ್‍ಕುಮಾರ್: ಜಾತಿ ಧರ್ಮ ಭೇದವಿಲ್ಲದೆ ಲಕ್ಷಾಂತರ ಜನಕ್ಕೆ ವಿದ್ಯಾಭ್ಯಾಸ ಕೊಟ್ಟಿರುವಂತಹ ನಡೆದಾಡುವ ದೇವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಆಶೀರ್ವಾದ ಎಲ್ಲರ ಮೇಲೂ ಇರಲಿ.

    ಸುದೀಪ್: ತ್ರಿವಿಧ ದಾಸೋಹಿ ಶತಮಾನದ ಯುಗಪುರುಷ ಶ್ರೀ ಶಿವಕುಮಾರ ಸ್ವಾಮೀಜಿಗಳು ಇಂದು ಇಹಲೋಕ ತ್ಯಜಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತ ನಲ್ಲಿ ಪ್ರಾರ್ಥಿಸೋಣ.

    ದರ್ಶನ್: ನಡೆದಾಡುವ ದೇವರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಇಹಲೋಕ ತ್ಯಜಿಸಿರುವುದು ಬಹಳ ನೋವಿನ ಸಂಗತಿ. ಇಷ್ಟು ದಿನ ಭಕ್ತರ ದರ್ಶನಕ್ಕೆ ಅವರಿದ್ದರು, ಈಗ ದೈಹಿಕವಾಗಿ ನಮ್ಮನ್ನು ಅಗಲಿದರೂ ಎಲ್ಲರ ಮನೆ ಮನಗಳಲ್ಲಿ ಅವರು ಭದ್ರವಾಗಿ ನೆಲೆಸಿದ್ದಾರೆ.

    ನೀನಾಸಂ ಸತೀಶ್: ಬದುಕಿದರೇ ಹೀಗೆ ಸಾರ್ಥಕವೆನ್ನುವಂತೆ ಬದುಕಬೇಕು, ಬದುಕಿಗೊಂದು ಅರ್ಥ ಬರುವಂತೆ. ಲಕ್ಷಾಂತರ ಮಕ್ಕಳಿಗೆ ವಿದ್ಯೆ ಅನ್ನ ನೀಡಿದ ಮಹಾನ್ ವ್ಯಕ್ತಿ ನೀವು. ಹೋಗಿ ಬನ್ನಿ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಮಠಕ್ಕೆ ಬಂದಿದ್ದು ನನ್ನ ಪುಣ್ಯ ಅಂದಿದ್ರು ಸೋನಿಯಾ ಗಾಂಧಿ

    ಸಿದ್ದಗಂಗಾ ಮಠಕ್ಕೆ ಬಂದಿದ್ದು ನನ್ನ ಪುಣ್ಯ ಅಂದಿದ್ರು ಸೋನಿಯಾ ಗಾಂಧಿ

    ತುಮಕೂರು: ಸಿದ್ದಗಂಗಾ ಮಠ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ಪ್ರಿಯವಾಗಿತ್ತು. 2012ರ ಏಪ್ರಿಲ್ 28ರಂದು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ 104ನೇ ಜನ್ಮದಿನಾಚರಣೆ ನಿಮಿತ್ತ ನಡೆದ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಗಮಿಸಿದ್ದರು. ಇದನ್ನೂ ಓದಿ: ಶ್ರೀಗಳು ಲಿಂಗೈಕ್ಯ-ಸಂತಾಪ ಸೂಚಿಸಿದ ಮೋದಿ, ರಾಹುಲ್ ಗಾಂಧಿ

    ಈ ವೇಳೆ ಮಾತನಾಡಿದ ಅವರು, ಸಿದ್ದಗಂಗಾ ಮಠವು ಶಿಕ್ಷಣ ಕ್ಷೇತ್ರಕ್ಕೆ ನಿಸ್ವಾರ್ಥ ಸೇವೆ ಹಾಗೂ ಕೊಡುಗೆ ನೀಡುತ್ತಿದೆ. ಶ್ರೀ ಶಿವಕುಮಾರ ಸ್ವಾಮೀಜಿ ಅವರು ಎಲ್ಲರನ್ನೂ ಸಮಾನರಾಗಿ ಕಂಡು ಅನೇಕರಿಗೆ ಮಾದರಿಯಾಗಿದ್ದಾರೆ. ನಾನು ಧಾರ್ಮಿಕ ಹಾಗೂ ಪವಿತ್ರ ಸ್ಥಳವಾದ ಸಿದ್ದಗಂಗಾ ಮಠಕ್ಕೆ ಬಂದಿರುವುದು ನನ್ನ ಪುಣ್ಯ ಎಂದು ಹೇಳಿದ್ದರು.

    https://www.youtube.com/watch?v=ZE7ZGlEjjjM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀಗಳು ಲಿಂಗೈಕ್ಯ-ಸಂತಾಪ ಸೂಚಿಸಿದ ಮೋದಿ, ರಾಹುಲ್ ಗಾಂಧಿ

    ಶ್ರೀಗಳು ಲಿಂಗೈಕ್ಯ-ಸಂತಾಪ ಸೂಚಿಸಿದ ಮೋದಿ, ರಾಹುಲ್ ಗಾಂಧಿ

    ಬೆಂಗಳೂರು: ನಡೆದಾಡುವ ದೇವರು, ಅಕ್ಷರ ದಾಸೋಹಿ, ಆಧುನಿಕ ಬಸವಣ್ಣ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳು ಇಂದು ಬೆಳಗ್ಗೆ 11.44ಕ್ಕೆ ಲಿಂಗೈಕ್ಯರಾಗಿದ್ದಾರೆ. ಇಡೀ ಕರುನಾಡು ಸ್ತಬ್ಧವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಎಲ್ಲ ನಾಯಕರು ಸಂತಾಪ ಸೂಚಿಸಿದ್ದಾರೆ.

    ಸಾಲು ಸಾಲು ಟ್ವೀಟ್ ಮಾಡಿರುವ ಪ್ರಧಾನಿಗಳು, ಶ್ರೀಗಳ ಜೊತೆಗಿನ ಕೆಲ ಫೋಟೋಗಳನ್ನು ಹಾಕಿಕೊಂಡು ಸಂತಾಪ ಸೂಚಿಸಿದ್ದಾರೆ. ಜನರಿಗಾಗಿ ಅದರಲ್ಲಿಯೂ ಬಡವರಿಗಾಗಿ ಬದುಕಿದವರು ಶ್ರೀಗಳು. ಬಡತನ ನಿರ್ಮೂಲನೆ, ಅನ್ನ ದಾಸೋಹ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಜೀವನ್ನವನ್ನು ಮೀಸಲಿಟ್ಟ ಚೇತನ. ಅಕ್ಷರ ದಾನಕ್ಕಾಗಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿದವರು. ದೇಶದ ಸಂಸ್ಕೃತಿ ಪ್ರತೀಕರಾಗಿದ್ದರು. ಆಧ್ಯಾತ್ಮದ ಜೊತೆಗೆ ಮಾನವೀಯ ಮೌಲ್ಯಗಳನ್ನು ಪ್ರತಿರೂಪ ಸಿದ್ದಗಂಗಾ ಶ್ರೀಗಳು. ಸಮಾಜಕ್ಕೆ ಶ್ರೀಗಳು ನೀಡಿದ ಕೊಡುಗೆ ಅಪಾರ. ಈ ಹಿಂದೆ ನಾನು ಸಹ ಶ್ರೀಗಳನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದ ನಾನು ಧನ್ಯ ಎಂದು ಮೋದಿ ಅವರು ಬರೆದುಕೊಂಡಿದ್ದಾರೆ.

    ಇತ್ತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸಿದ್ದಗಂಗಾ ಮಠದ ಸ್ಥಾಪಕರಾದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾದ ವಿಷಯ ಕೇಳಿ ದುಃಖವಾಯ್ತು. ಎಲ್ಲ ಸಮುದಾಯ ಮತ್ತು ಲಕ್ಷಾಂತರ ಭಾರತೀಯರ ಆರಾಧ್ಯದೈವ. ಶ್ರೀಗಳನ್ನು ನಮ್ಮನ್ನು ಅಗಲಿದ್ರೂ ಅವರ ತತ್ವ ಸಿದ್ಧಾಂತಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಶ್ರೀಗಳ ಎಲ್ಲ ಭಕ್ತರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.

    ನಾಳೆ ಬೆಳಗ್ಗೆ ಪ್ರಧಾನಿಗಳು ಸಿದ್ದಗಂಗಾ ಶ್ರೀಗಳ ದರ್ಶನ ಪಡೆಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳು, ಕ್ಷೇತ್ರದ ಬಗ್ಗೆ ಗಣ್ಯರು ಈ ಹಿಂದೆ ಹೇಳಿದ್ದೇನು?

    ಸಿದ್ದಗಂಗಾ ಶ್ರೀಗಳು, ಕ್ಷೇತ್ರದ ಬಗ್ಗೆ ಗಣ್ಯರು ಈ ಹಿಂದೆ ಹೇಳಿದ್ದೇನು?

    ಬೆಂಗಳೂರು: ತುಮಕೂರಿನ ಸಿದ್ದಗಂಗಾ ಕ್ಷೇತ್ರ ಹಾಗೂ ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿಗಳ ಬಗ್ಗೆ ಅನೇಕರು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಆಯ್ದ ಗಣ್ಯರ ಅನಿಸಿಕೆಗಳನ್ನು ಇಲ್ಲಿ ನೀಡುತ್ತಿದ್ದೇವೆ.

    ಎಸ್ ನಿಜಲಿಂಗಪ್ಪ: ನಿಷ್ಠೆ, ಸೇವಾಕಾಂಕ್ಷೆ, ದೃಢ ನಿಶ್ಚಯ, ಅಡಚಣೆಗಳನ್ನು ಎದುರಿಸುವ ಧೈರ್ಯ, ಪವಿತ್ರತೆ, ವಿಶಾಲ ದೃಷ್ಟಿ, ಸತ್ಯ ಪ್ರೇಮ, ಮೇಲ್ಮಟ್ಟದ ಧ್ಯೇಯ ಇವೆಲ್ಲ ಸಿದ್ದಗಂಗಾ ಕ್ಷೇತ್ರದ ಶ್ರೀ ಶಿವಕುಮಾರ ಸ್ವಾಮಿಗಳಲ್ಲಿ ಕೇಂದ್ರೀಕೃತವಾಗಿವೆ. ಇದು ಸಮಾಜದ ರಾಷ್ಟ್ರದ ಸುದೈವ ಎಂದು ಮುಖ್ಯಮಂತ್ರಿಯಾಗಿದ್ದ ಎಸ್ ನಿಜಲಿಂಗಪ್ಪ ಅವರು 1966ರ ಫೆಬ್ರವರಿ 27ರಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು.

    ಡಿ. ದೇವರಾಜ ಅರಸು: ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ದೀನದಲಿತರ ಉದ್ಧಾರಕ್ಕಾಗಿ ನಾಡಿನ ಬಡತನ ನಿವಾರಣೆಗಾಗಿ ಲಕ್ಷಾಂತರ ಬಡ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ಮಹಿಮಾಶಾಲಿಗಳು ಎಂದು ಮಾಜಿ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸು ಬಣ್ಣಿಸಿದ್ದರು.

    ಡಾ.ಕೆ.ಶಿವರಾಮ ಕಾರಂತ: ನಾಡಿನ ಮೂಲೆ ಮೂಲೆಗಳಿಂದ ಅನಾಥರನ್ನು ಬರಮಾಡಿಕೊಂಡು, ಅವರಿಗೆಲ್ಲ ಅನ್ನದಾನದ ಜತೆಯಲ್ಲಿ ಜ್ಞಾನವನ್ನೂ ದಾನ ಮಾಡುತ್ತಿರುವ ದೃಶ್ಯವಂತೂ ನನ್ನ ಪಾಲಿಗೆ ಅಸಾಮಾನ್ಯ ನೋಟವೆನಿಸಿದೆ. ಅಸಂಖ್ಯಾತ ಬಡಬಗ್ಗರ ಇಹದ ಅವಶ್ಯಕತೆಗಳನ್ನು ಪೂರೈಸುತ್ತಿರುವುದು ಮಾತ್ರವಲ್ಲದೇ ಅವರ ‘ಪರ’ವನ್ನು ಸಹ ಈ ತಾಯಿಗೆ ಋಣಿಯನ್ನಾಗಿ ಮಾಡುತ್ತಿರುವ ಕರ್ಮ ಭೂಮಿ ಇದಾಗಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಕೆ ಶಿವರಾಮ ಕಾರಂತರು ಬಣ್ಣಿಸಿದ್ದರು.

    ಜೆ.ಎಚ್ ಪಟೇಲ್: ಅನ್ನದಾನ ವಿದ್ಯಾದಾನಗಳನ್ನು ಮಠ ಮಾನ್ಯಗಳು ನಿರತಂತರವಾಗಿ ನಡೆಸಿಕೊಂಡು ಬಂದಿರುವುದರಿಂದಲೇ ಸಮಾಜವಿನ್ನೂ ಅಧೋಗತಿಯತ್ತ ತಲುಪಿಲ್ಲ. ಇದಕ್ಕೆ ಉದಾಹರಣೆ ಶ್ರೀ ಸಿದ್ದಗಂಗಾ ಮಠದ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಸಾಮಾಜಿಕ ಸೇವೆಗೆ ತಮ್ಮನ್ನೇ ತಾವು ಅರ್ಪಣೆ ಮಾಡಿಕೊಂಡಿರುವ ಮಹಾ ದಾಸೋಹಿಗಳು. ಇಂತಹ ಕಾಯಕ ಯೋಗಿಗಳೂ ನಮ್ಮ ಕಣ್ಣ ಮುಂದೆ ಇರುವುದರಿಂದಲೇ ಸಮಾಜದಲ್ಲಿ ಮೌಲ್ಯಗಳು ಇನ್ನೂ ಜೀವಂತವಾಗಿಯೇ ಉಳಿದುಕೊಂಡಿವೆ. ಇದನ್ನು ಸರ್ವರೂ ಸ್ವಾಗತಿಸಿ ಬೆಂಬಲಿಸಿದಾಗ ಮಾತ್ರ ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ಮಾಜಿ ಮುಖ್ಯಮಂತ್ರಿಗಳಾಗಿದ್ದ ಜೆ.ಎಚ್.ಪಟೇಲ್ 1997ರ ಮೇ ತಿಂಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ವೀರೇಂದ್ರ ಹೆಗ್ಗಡೆ: ಪೂಜ್ಯರಾದ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರು ಅಪರೂಪದ, ತ್ಯಾಗದ ಪ್ರತೀಕವಾದ ಒಂದು ಶಕ್ತಿಯಾಗಿದ್ದಾರೆ. ನಮ್ಮ ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳವರು ನಮ್ಮ ಸಮಾಜಕ್ಕೆ ಆದರ್ಶವಾಗಿದ್ದಾರೆ. ಏಕೆಂದರೆ ಅವರು ತಮ್ಮ ದೇಹವನ್ನು ಶ್ರೀಗಂಧದ ಹಾಗೆ ಸವೆಸುತ್ತಾ ಬಂದಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅನಿಸಿಕೆ ವ್ಯಕ್ತಪಡಿಸಿದ್ದರು.

    ಮಾಸ್ತಿ ವೆಂಕಟೇಶ್ ಅಯ್ಯಂಗಾರ್: ಶ್ರೀ ಶಿವಕುಮಾರ ಸ್ವಾಮಿಗಳು ಉನ್ನತ ತರದ ಸನ್ಯಾಸಿಗಳು. ತಮ್ಮ ಸೇವೆಯಿಂದ ಇವರು ಸನ್ಯಾಸಿಗಳ ಸಮುದಾಯಕ್ಕೆ ಒಂದು ಆದರ್ಶವಾಗಿದ್ದಾರೆ. ಒಂದು ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ ಎಂದು ಕವಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅಭಿಪ್ರಾಯಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಮಠಕ್ಕೆ ಪ್ರವೇಶಿಸುವ 2 ಗೇಟ್‍ ಬಂದ್

    ಸಿದ್ದಗಂಗಾ ಮಠಕ್ಕೆ ಪ್ರವೇಶಿಸುವ 2 ಗೇಟ್‍ ಬಂದ್

    ತುಮಕೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಸದ್ಯ ಸ್ವಲ್ಪ ಚೇತರಿಕೆ ಕಂಡು ಬಂದಿದ್ದು, ಆದರೂ ಮುಂಜಾಗ್ರತಾ ಕ್ರಮವಾಗಿ ಮಠಕ್ಕೆ ಪ್ರವೇಶಿಸುವ ಎರಡೂ ಗೇಟ್ ಗಳನ್ನೂ ಬಂದ್ ಮಾಡಲಾಗಿದೆ.

    ಎರಡು ಗೇಟ್ ಗಳ ಬಳಿಯೂ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಗಣ್ಯರು, ಮಠದ ಸಿಬ್ಬಂದಿ, ಮಠದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಮಾಡಿಕೊಡಲಾಗಿದೆ. ಸಾರ್ವಜನಿಕರು, ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ.

    ಶ್ರೀಗಳ ಆರೋಗ್ಯದ ಸ್ಥಿತಿ ಗಂಭೀರವಾಗುತ್ತಿದ್ದಂತೆಯೇ ಮಠದಲ್ಲಿ ವಿದ್ಯಾರ್ಥಿಗಳು ಶ್ರೀಗಳ ಕ್ಷೇಮಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಮಠಕ್ಕೆ ಸಾವಿರಾರು ಮಂದಿ ಭಕ್ತರು ಹಾಗೂ ಗಣ್ಯರು ಇಂದು ಬೆಳಗ್ಗಿನಿಂದಲೇ ಆಗಮಿಸುತ್ತಿದ್ದಾರೆ.

    ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಗೃಹ ಮಂತ್ರಿ ಎಂಬಿ ಪಾಟೀಲ್ ಸೇರಿದಂತೆ ಹಲವಾರು ಗಣ್ಯರು ಇಂದಿನ ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮಠದತ್ತ ತೆರಳಿ ಶ್ರೀಗಳ ಆರೋಗ್ಯವನ್ನು ವಿಚಾರಿಸಿದ್ದಾರೆ.


    ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರು ಇಂದು, ಹೊಸಮಠದ ಕಿರಿಯ ಶ್ರೀಗಳ ಕಚೇರಿಯಲ್ಲಿ ಎಸ್ಪಿ, ಡಿಸಿ, ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ. ಸಭೆಯಲ್ಲಿ ಮಠದ ಎಲ್ಲಾ ಗೇಟ್ ಗಳಲ್ಲೂ ಹೈ ಸೆಕ್ಯೂರಿಟಿ ನೀಡುವಂತೆ ಸೂಚನೆ ನೀಡಿದ್ದಾರೆ. ಎಲ್ಲಾ ವಿಐಪಿ ವಾಹನಗಳಿಗೂ ಗೇಟ್‍ನ ಹೊರಗಡೆಯೇ ಪಾರ್ಕಿಂಗ್ ಗೆ ಅವಕಾಶ ಕಲ್ಪಿಸಬೇಕು. ಈಗಿನಿಂದಲೇ ಸಾರ್ವಜನಿಕರ ಪ್ರವೇಶ ಬಂದ್ ಮಾಡಿ ಮಠದ ಎಲ್ಲಾ ಗೇಟ್ ಗಳಲ್ಲೂ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಎಂದು ಪೊಲೀಸರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

    ಭಕ್ತರು ಶ್ರೀಗಳು ಚಿಕಿತ್ಸೆ ಪಡೆಯುತ್ತಿದ್ದ ಕೋಣೆಯ ಕಿಟಕಿಯ ಮೂಲಕ ದರ್ಶನ ಪಡೆದು ಹೋಗುತ್ತಿದ್ದರು. ಬೆಳಗ್ಗಿನ ಜಾವ ಸುಮಾರು 4 ಗಂಟೆಗೆ ಶ್ರೀಗಳಿಗೆ ರಕ್ತದ ಒತ್ತಡ ಮತ್ತು ಉಸಿರಾಟದಲ್ಲಿ ಕೊಂಚ ಏರುಪೇರು ಕಂಡು ಬಂದಿದ್ದು, ತಕ್ಷಣ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಶ್ರೀಗಳಿಗೆ ನಿಶ್ಯಕ್ತಿ ತುಂಬಾ ಕಡಿಮೆ ಇದ್ದು, ಕಳೆದ ದಿನ ಆಯುರ್ವೇದಿಕ್ ಚಿಕಿತ್ಸೆ ನೀಡಲಾಗಿದೆ. ಈಗ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಮಠಕ್ಕೆ ನಿಯೋಜನೆ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳ ದರ್ಶನ ಪಡೆದ ಮಹಾತ್ಮ ಗಾಂಧೀಜಿ ಮೊಮ್ಮಗಳು

    ಸಿದ್ದಗಂಗಾ ಶ್ರೀಗಳ ದರ್ಶನ ಪಡೆದ ಮಹಾತ್ಮ ಗಾಂಧೀಜಿ ಮೊಮ್ಮಗಳು

    ತುಮಕೂರು: ಮಹಾತ್ಮ ಗಾಂಧೀಜಿ ಅವರ ಮೊಮ್ಮಗಳಾದ ಸುಮಿತ್ರಾ ರಾಮ್ ದಾಸ್ ಗಾಂಧಿ ಅವರು ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದಿದ್ದಾರೆ. ಮಹಾತ್ಮ ಗಾಂಧಿ ಮೂರನೇ ಮಗ ರಾಮ್ ದಾಸ್ ಗಾಂಧಿ ಪುತ್ರಿ ಸಮಿತ್ರಾ ರಾಮ್ ದಾಸ್ ಗಾಂಧಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.

    ಸಿದ್ದಗಂಗಾ ಶ್ರೀಗಳಿಗೆ ಆಸ್ಪತ್ರೆಯಲ್ಲೇ ವೈದ್ಯರು ಚಿಕಿತ್ಸೆಯನ್ನು ಮುಂದುವರಿಸಿದ್ದು, ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಬೆಳಗ್ಗೆ ಕಿರಿಯ ಶ್ರೀಗಳ ಸಹಾಯದೊಂದಿಗೆ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದರು.

    ಸಿದ್ದಗಂಗಾ ಮಠಕ್ಕೆ ಬಿಜಿಎಸ್ ವೈದ್ಯ ಡಾ .ರವೀಂದ್ರ ಆಗಮಿಸಿ ಶ್ರೀಗಳ ಆರೋಗ್ಯ ತಪಾಸಣೆ ನಡೆಸಿದರು. ವೈದ್ಯರು ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಮಾಹಿತಿಯಂತೆ ಶ್ರೀಗಳ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಆಗಿದೆ. ಸ್ವಂತ ಶಕ್ತಿಯಿಂದ ಶ್ರೀಗಳ ಸತತ 3 ರಿಂದ 4 ಗಂಟೆ ಉಸಿರಾಟ ನಡೆಸಿದ್ದಾರೆ. ಶ್ವಾಸಕೋಶದಲ್ಲಿ ನೀರು ಶೇಖರಣೆ ಆಗುತ್ತಿರುವುದರಿಂದ ಅದನ್ನು ಹೊರತೆಗೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಶ್ರೀಗಳ ಚಿಕಿತ್ಸೆಗೆ ಶಿಷ್ಯರು ಮಂತ್ರ, ಭಜನೆಗಳನ್ನ ಕೇಳಿಸುವ ಮೂಲಕ ಸಹಾಯ ಮಾಡುತ್ತಿದ್ದು, ಇಂದು ಭಾನುವಾರ ಆದ ಕಾರಣ ಮಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಹೀಗಾಗಿ ಮಠದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv