Tag: Siddaganga Sri

  • ಸಿದ್ದಗಂಗಾ ಶ್ರೀಗಳಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ಕೊಡುವಂತೆ ಯಾರೂ ಆಗ್ರಹಿಸಬೇಡಿ: ಸಿದ್ದಲಿಂಗ ಸ್ವಾಮೀಜಿ

    ಸಿದ್ದಗಂಗಾ ಶ್ರೀಗಳಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ಕೊಡುವಂತೆ ಯಾರೂ ಆಗ್ರಹಿಸಬೇಡಿ: ಸಿದ್ದಲಿಂಗ ಸ್ವಾಮೀಜಿ

    ತುಮಕೂರು: ಶ್ರೀ ಶಿವಕುಮಾರ ಶ್ರೀಗಳಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ಕೊಡುವಂತೆ ಯಾರೂ ಆಗ್ರಹಿಸಬೇಡಿ ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗಸ್ವಾಮಿಜಿಗಳು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಶಸ್ತಿ ಕೊಡಿ ಎನ್ನುವ ಮಾತನ್ನು ಯಾರು ಕೂಡಾ ಆಡಬಾರದು. ಅದನ್ನ ಕೇಳಿ ಪಡೆಯುವ ಪ್ರಶ್ನೆ ಇಲ್ಲ. ಅದಾಗಿಯೇ ಬಂದದ್ದು ಅಮೃತಕ್ಕೆ ಸಮಾನ, ಕೇಳಿ ಬಂದಿದ್ದು ವಿಷಕ್ಕೆ ಸಮಾನ ಆದ್ದರಿಂದ ಬಾಯ್ಬಿಟ್ಟು ಕೇಳುವಂತಹ ಪ್ರಶ್ನೆಯೇ ಇಲ್ಲ ಎಂದರು. ಇದನ್ನೂ ಓದಿ: ಶೀಘ್ರವೇ ಕೋವಿಡ್-19 ಕಾಲರ್ ಟ್ಯೂನ್ ಬಂದ್?

    ಯಾರು ಕೇಳಲೇ ಬಾರದು ಅದರ ಬಗ್ಗೆ ಚರ್ಚೆ ಮಾಡಲೇಬಾರದು. ಶ್ರೀಗಳು ಭಾರತ ರತ್ನ ವನ್ನು ಮೀರಿರುವಂತವರು. ಅದು ಬಂದ ಕ್ಷಣಕ್ಕೆ ಅವರ ಗೌರವ ಹೆಚ್ಚುವಂತಹದ್ದಲ್ಲ. ಅದನ್ನ ನಾವು ಯಾರು ನಿರೀಕ್ಷೆ ಮಾಡಬಾರದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಒಟ್ಟು 48 ಕೇಸ್ – ಬೆಂಗಳೂರು ಸಹಿತ 4 ಜಿಲ್ಲೆಗಳಲ್ಲಿ ಮಾತ್ರ ಕೊರೊನಾ ಪ್ರಕರಣ

  • ವೀರಶೈವ ಲಿಂಗಾಯತ ಪ್ರಾಧಿಕಾರ ರಚನೆ ಅಚ್ಚರಿ ತಂದಿದೆ: ಸಿದ್ದಗಂಗಾ ಶ್ರೀ

    ವೀರಶೈವ ಲಿಂಗಾಯತ ಪ್ರಾಧಿಕಾರ ರಚನೆ ಅಚ್ಚರಿ ತಂದಿದೆ: ಸಿದ್ದಗಂಗಾ ಶ್ರೀ

    ತುಮಕೂರು: ವೀರಶೈವ ಲಿಂಗಾಯತ ಪ್ರಾಧಿಕಾರ ರಚನೆ ಮಾಡಿರುವುದು ನನಗೆ ಅಚ್ಚರಿ ತಂದಿದೆ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.

    ಸಿದ್ದಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಧಿಕಾರ ರಚನೆ ನನಗೆ ಆಶ್ಚರ್ಯ ಎನಿಸುತ್ತದೆ. ಜಾತಿಗೊಂದು ಪ್ರಾಧಿಕಾರ ರಚನೆ ಮಾಡುತ್ತಾ ಹೋದರೆ ಅದಕ್ಕೆ ಮಿತಿನೇ ಇರಲ್ಲ. ಇದರ ಬದಲು ಎಲ್ಲಾ ಸಮಾಜ ಜಾತಿಯಲ್ಲಿ ಇದ್ದಂತಹ ಹಿಂದುಳಿದವರು ಹಾಗೂ ಆರ್ಥಿಕವಾಗಿ ಹಿಂದುಳಿದವರು ಇದ್ದಾರೆ. ಅಂಥವರಿಗೆ ಹೆಚ್ಚು ಒತ್ತುಕೊಡುವ ಕೆಲಸ ಸರ್ಕಾರ ಮಾಡಿದರೆ ಒಳ್ಳೆಯದು ಎಂದು ಸಲಹೆ ನೀಡಿದರು.

    ಎಲ್ಲಾ ಸಮಾಜದಲ್ಲೂ ತುಂಬಾ ಬಡವರಿದ್ದಾರೆ. ಬಡತನದ ಶ್ರೇಣಿ ಹೆಚ್ಚಿದೆ. ಆರ್ಥಿಕವಾಗಿ ಕಷ್ಟದಲ್ಲಿದ್ದವರಿಗೆ ಸರ್ಕಾರ ಹೆಚ್ಚು ಒತ್ತು ಕೊಡಬೇಕು. ಸರ್ಕಾರ ಒತ್ತು ಕೊಡುತ್ತಿದೆ. ಈ ನಡುವೆ ಕೆಲ ಬೆಳವಣಿಗೆಗಳು ನಡೀತಿದೆ. ಇಡೀ ರಾಜ್ಯದ ಅಭಿವೃದ್ಧಿಗೆ ಇಡೀ ಸರ್ಕಾರ ಇರೋದು ಎಂದು ಅಸಮಾಧಾನ ಹೊರಹಾಕಿದರು.

    ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗದಲ್ಲಿ ಅವಕಾಶ ಕೊಡುವ ವ್ಯವಸ್ಥೆ ಕಲ್ಪಿಸಿಕೊಟ್ಟರೆ ತುಂಬಾ ಸಂತೋಷ. ಒಂದು ಜಾತಿ ಪ್ರಾಧಿಕಾರ ಮಾಡಿದರೆ ಮುಂದು ಪ್ರತಿಯೊಬ್ಬರೂ ಕೇಳುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆಗೆ ಸಿಎಂ ಆದೇಶ

    ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಬೆನ್ನಲ್ಲೇ ವೀರಶೈವ ಲಿಂಗಾಯತ ಸಮುದಾಯದ ನಾಯಕರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಮಾಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಒತ್ತಡ ಹೇರಿದ್ದರು. ಈ ಒತ್ತಡಕ್ಕೆ ಮಣಿದ ಯಡಿಯೂರಪ್ಪನವರು ಇಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ.

  • ಪ್ರಧಾನಿ ಮೋದಿ ಭಾಷಣ ಮಕ್ಕಳಿಗೆ ಉಪಯುಕ್ತವಾಗಿದೆ: ಸಿದ್ದಗಂಗಾ ಶ್ರೀ

    ಪ್ರಧಾನಿ ಮೋದಿ ಭಾಷಣ ಮಕ್ಕಳಿಗೆ ಉಪಯುಕ್ತವಾಗಿದೆ: ಸಿದ್ದಗಂಗಾ ಶ್ರೀ

    ತುಮಕೂರು: ಪ್ರಧಾನಿ ನರೇಂದ್ರ ಮೋದಿ ಮಕ್ಕಳ ಕುರಿತಾಗಿ ಪ್ಲಾಸ್ಟಿಕ್ ನಿಷೇಧ, ಬಯಲು ಶೌಚ ಮುಕ್ತ, ಜಲ ಸಂರಕ್ಷಣೆ ಕುರಿತು ಮಾತನಾಡಿದ್ದು ತುಂಬಾ ಉಪಯುಕ್ತವಾಗಿದೆ ಎಂದು ಸಿದ್ದಗಂಗಾ ಶ್ರೀ ಸಿದ್ದಲಿಂಗ ಸ್ವಾಮಿಜಿ ಪ್ರತಿಕ್ರಿಯಿಸಿದ್ದಾರೆ.

    ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುರುವಾರ ಮಠದಲ್ಲಿ ನಡೆದ ಮೋದಿ ಅವರ ಕಾರ್ಯಕ್ರಮ ಯಶಸ್ವಿಯಾಗಿದೆ. ಪ್ರಧಾನಿಯವರೇ ಸ್ವಪ್ರೇರಣೆಯಿಂದ ಬಂದು ಪೂಜ್ಯರ ಗದ್ದುಗೆ ದರ್ಶನ ಪಡೆದಿದ್ದಾರೆ. ಮಕ್ಕಳಿಗೆ ಉಪಯುಕ್ತವಾಗುವ ರೀತಿಯಲ್ಲಿ ಪಾಸ್ಟಿಕ್ ನಿಷೇಧ, ಬಯಲು ಶೌಚಾಲಯ ಮುಕ್ತ ಕನಸು, ಜಲಸಂರಕ್ಷಣೆ ಕುರಿತು ಮಾತನಾಡಿದ್ದಾರೆ. ಜೊತೆಗೆ ನಾಡಿನ ಸಂತರು ಮೂರು ಸಂಕಲ್ಪ ತೊಟ್ಟು ದೇಶದ ಬದಲಾವಣೆಗೆ ಶ್ರಮಿಶಬೇಕು ಎಂದು ಕರೆ ಕೊಟ್ಟಿದ್ದಾರೆ ಎಂದರು.

    ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ಇತ್ತು ಎಂದು ಮಾಧ್ಯಮದಲ್ಲಿ ತಪ್ಪಾಗಿ ಪ್ರಸಾರವಾಗಿತ್ತು. ಪ್ರಧಾನಿ ಕಾರ್ಯಕ್ರಮದ ಪಟ್ಟಿಯಲ್ಲಾಗಲಿ, ಮಠದ ವತಿಯಿಂದಾಗಲಿ ಸಂವಾದ ಕಾರ್ಯಕ್ರಮ ಆಯೋಜನೆ ಮಾಡಿರಲಿಲ್ಲ. ಹಾಗಾಗಿ ಮಕ್ಕಳೊಂದಿಗೆ ಮಾತಾಡಿಲ್ಲ ಎಂಬ ವಿಚಾರ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಪ್ರಧಾನಿ ಮೋದಿ ಅವರಿಗೆ ಸಮಯದ ಅಭಾವ ಇತ್ತು. ಹಾಗಾಗಿ ಚುಟುಕಾಗಿ ಮಾತನಾಡಿದ್ದಾರೆ. ಸಿಎಂ ಯಡಿಯೂರಪ್ಪ ಕೂಡ ಮಾತನಾಡುವವರಿದ್ದರು. ಸಮಯದ ಅಭಾವದಿಂದ ಸಾಧ್ಯವಾಗಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಬೇಬಿ ಶ್ರೀ ಎಂಬ ಬಾಲನಟಿ ಪ್ರಧಾನಿಯವರಿಗೆ ಪ್ರಶ್ನೆ ಕೇಳುವ ಇಂಗಿತ ವ್ಯಕ್ತಡಿಸಿದ್ದು ನಿಜ. ಆದರೆ ನಾವು ಅವರಿಗೆ ಅವಕಾಶ ನೀಡುತ್ತೆವೆ ಎನ್ನುವುದನ್ನು ಖಾತ್ರಿ ಮಾಡಿರಲಿಲ್ಲ. ಪ್ರಶ್ನೆ ಕೇಳುವ ಸಂದರ್ಭ ಬಂದರೇ ಚೀಟಿ ಕೊಟ್ಟರೆ ಅನುಕೂಲ ಮಾಡಿಕೊಡುತ್ತೆ ಎಂದಿದ್ದೆ ಅಷ್ಟೇ ಹೊರತು ಪ್ರತ್ಯೇಕವಾಗಿ ಸಂವಾದ ಕಾರ್ಯಕ್ರಮ ಏರ್ಪಡಿಸಿರಲಿಲ್ಲ ಎಂದು ಒತ್ತಿ ಹೇಳಿದರು.

  • ನಿಮ್ಮ ಪಬ್ಲಿಕ್ ಟಿವಿಗೆ 7ನೇ ವರ್ಷದ ಹುಟ್ಟುಹಬ್ಬ- ನಮ್ಮನ್ನಗಲಿದ ತ್ರಿವಿಧ ದಾಸೋಹಿಗೆ ವಾರ್ಷಿಕೋತ್ಸವ ಅರ್ಪಣೆ

    ನಿಮ್ಮ ಪಬ್ಲಿಕ್ ಟಿವಿಗೆ 7ನೇ ವರ್ಷದ ಹುಟ್ಟುಹಬ್ಬ- ನಮ್ಮನ್ನಗಲಿದ ತ್ರಿವಿಧ ದಾಸೋಹಿಗೆ ವಾರ್ಷಿಕೋತ್ಸವ ಅರ್ಪಣೆ

    -ನಾಡಿನ ಜನತೆಗೆ ನಮ್ಮ ಧನ್ಯವಾದ

    ಬೆಂಗಳೂರು: ಪಬ್ಲಿಕ್ ಟಿವಿ.. ಇದು ಯಾರ ಆಸ್ತಿಯೂ ಅಲ್ಲ.. ಇದು ನಿಮ್ಮೆಲ್ಲರ ಆಸ್ತಿ.. ಈ ಟ್ಯಾಗ್‍ಲೈನ್‍ಗೆ ನಿಜಕ್ಕೂ ಸಾರ್ಥಕತೆ ಸಿಕ್ಕಿದೆ. ಏಕಂದ್ರೆ ನಿಮ್ಮ ಪ್ರೀತಿಯ ಪಬ್ಲಿಕ್ ಟಿವಿಗೆ ಇದೀಗ ಏಳನೇ ವಾರ್ಷಿಕೋತ್ಸವ. ಈ ಸಪ್ತ ಸಂವತ್ಸರಗಳಲ್ಲಿ ನೀವು ತೋರಿದ ಪ್ರೀತಿ., ನಮ್ಮ ಮೇಲಿಟ್ಟ ವಿಶ್ವಾಸ ಅದಮ್ಯ.. ಪರಿಣಾಮ ನಿಮ್ಮ ಪಬ್ಲಿಕ್ ಟಿವಿ ಸಮೂಹ ವಿಸ್ತರಿಸಿದೆ.

    ಪಬ್ಲಿಕ್ ಟಿವಿ ಜೊತೆಗೆ ಪಬ್ಲಿಕ್ ಮ್ಯೂಸಿಕ್, ಪಬ್ಲಿಕ್ ಮೂವೀಸ್ ಬಂದಿದೆ. ಪಬ್ಲಿಕ್ ಮೂವೀಸ್‍ಗೂ ಕೂಡ ಇದೀಗ ವರುಷದ ಹರೆಯ. ಈ ಎಲ್ಲವನ್ನು ಪ್ರೀತಿಯಿಂದ ನೀವು ಅಪ್ಪಿಕೊಂಡಿದ್ದೀರಿ, ಒಪ್ಪಿಕೊಂಡಿದ್ದೀರಿ. ಪ್ರೀತಿಯ ಧಾರೆ ಎರೆಯುತ್ತೀದ್ದೀರಿ. ನಮ್ಮನ್ನು ಹರಸಿ ಬೆಳೆಸಿದ ಪಬ್ಲಿಕ್‍ಗೆ ಅಂದ್ರೆ ನಿಮಗಿದೋ ಸಾಷ್ಟಾಂಗ ನಮಸ್ಕಾರ.

    ಸುದ್ದಿ ಪ್ರಪಂಚ ವಿಶಾಲವಾಗಿ ಬೆಳೆಯುತ್ತಿದೆ. ನಿಪ್ಷಕ್ಷಪಾತ ಸುದ್ದಿ ಬಿತ್ತರ, ವಸ್ತು ನಿಷ್ಠ ವಿಶ್ಲೇಷಣೆ ಮತ್ತು ಸ್ಪಷ್ಟ ಮಾಹಿತಿ ಕೊಡುವುದಂತೂ ಸವಾಲಿನ ಕೆಲಸ. ಮನರಂಜನಾ ಚಾನೆಲ್ ಗಳಿಗೂ ಮಿಗಿಲಾದ ಸಂಖ್ಯೆಯಲ್ಲಿ ಕನ್ನಡದ ಸುದ್ದಿವಾಹಿನಿಗಳಿವೆ. ಆದ್ರೆ ಯಾವುದೇ ಪೂರ್ವಾಗ್ರಹವಿಲ್ಲದೆ, ಆಮಿಷ, ಒತ್ತಡಗಳಿಗೆ ಜಗ್ಗದೆ, ನೊಂದವರಿಗೆ ನೇರವಾಗಿ, ಅನ್ಯಾಯವನ್ನು ಖಂಡಿಸಿ ಸುದ್ದಿ ಬಿತ್ತರಿಸೋ ಚಾನೆಲ್ ನ ಅನಿವಾರ್ಯತೆ ಕನ್ನಡಿಗರಿಗಿದ್ದರೆ, ಅವರ ಆ ಅನಿವಾರ್ಯತೆಯನ್ನು ಪರಿಪೂರ್ಣವಾಗಿ ಈಡೇರಿಸೋ ಹೊಣೆ ಹೊರಲು ಸಜ್ಜಾಗಿದ್ದು ನಿಮ್ಮ ಪಬ್ಲಿಕ್ ಟಿವಿ,

    ನಿಖರ ಮತ್ತು ಪ್ರಖರ ಸುದ್ದಿಯನ್ನು ನೋಡಲು, ಪುಟ್ಟ ಟಿವಿ ಪರದೆ ಮುಂದೆ ಕೂರುವ ಈಗಿನ ವೀಕ್ಷಕರು ದಡ್ಡರಲ್ಲ. ಚಾನೆಲ್ ಹಾಕಿ ಕುಳಿತ ಜನ ಸುದ್ದಿಯ ಗುಣಮಟ್ಟವನ್ನು ಅಳೆಯುವಲ್ಲಿ ಚಾಣಾಕ್ಷರು. ಅಂತಹ ಕೋಟ್ಯಂತರ ಪ್ರಜ್ಞಾವಂತರ ಅಚ್ಚಮೆಚ್ಚಿನ ಚಾನೆಲ್ಲಾಗಿ ಹೊರಹೊಮ್ಮಿದ ಹಾದಿ, ಪಬ್ಲಿಕ್ ಟಿವಿ, ಪಾಲಿಗೆ ಸುಲಭದ್ದಾಗಿರಲಿಲ್ಲ. ಆ ಕಠಿಣ ಲಕ್ಷ್ಯವನ್ನು ತಲುಪಿಯೇ ಸಿದ್ಧ ಅಂತ ನಿರ್ಧರಿಸಿದ್ದು ಪಬ್ಲಿಕ್ ಟಿವಿಯ ಕ್ಯಾಪ್ಟನ್ ಹೆಚ್.ಆರ್.ರಂಗನಾಥ್.

    ಓರ್ವ ನುರಿತ, ಪಾರಂಗತ ನಾಯಕನಿಲ್ಲದ ಲಕ್ಷ್ಯ ತಲುಪೋ ಪಯಣ, ಚುಕ್ಕಾಣಿಯಿಲ್ಲದ ಹಡಗಿನ ಪ್ರಯಾಣಕ್ಕೆ ಸಮ. ಪಬ್ಲಿಕ್ ಟಿವಿಯ ಸುದ್ದಿಜಗತ್ತಿನ ತಾಣ 7 ಸಂವತ್ಸರಗಳ ಪೂರೈಸಿ ಅಬಾಧಿತವಾಗಿ ಸಾಗಿದೆ ಅಂದ್ರೆ ಅದಕ್ಕೆ ಕಾರಣ ರಂಗನಾಥ್ ಅವರಂಥ ಸಮರ್ಥ ಮತ್ತು ಅರ್ಹ ನಾಯಕನ ಸಾರಥ್ಯದಲ್ಲಿ ಹೊರಟಿದ್ದೇ ಹೊರತು ಬೇರೇನೂ ಅಲ್ಲ. ಸುದ್ದಿವಲಯದಲ್ಲಿ ಗೆದ್ದು ಬೀಗಿ ಲೋಕಪ್ರಸಿದ್ಧವಾಗಲು ಸಹಕರಿಸಿದ ಕನ್ನಡಿಗರಿಗೆ ಪಬ್ಲಿಕ್ ಟಿವಿ ಕೊಟ್ಟ ಮತ್ತೊಂದು ಉಡುಗೊರೆ ಪಬ್ಲಿಕ್ ಮ್ಯೂಸಿಕ್. ಇನ್ನು ಪಬ್ಲಿಕ್ ಟಿವಿಯ ಮತ್ತೊಂದು ಅನನ್ಯ ಕೊಡುಗೆ ಪಬ್ಲಿಕ್ ಮೂವೀಸ್. ಅಲ್ಪಕಾಲದಲ್ಲೇ ಕನ್ನಡಿಗರ ಮನಗೆದ್ದ ಮೂವೀಸ್ ಎಂಬ ಕೂಸಿಗೆ ಇಂದೇ ಮೊದಲ ವರ್ಷ.

    ಕಳೆದ ತಿಂಗಳು ಶಿವೈಕ್ಯರಾದ ನಡೆದಾಡುವ ದೇವರು, ಸಿದ್ದಗಂಗೆಯ ಸಿದ್ದಪುರಷ ಶ್ರೀಗಳ ಗೌರವಾರ್ಥ ಪಬ್ಲಿಕ್ ಟಿವಿ ಈ ಸಲದ ಸಪ್ತ ಸಂವತ್ಸರದ ಸಂಭ್ರಮಾಚರಣೆ ಮಾಡುತ್ತಿಲ್ಲ. ಶ್ರೀಗಳ ಸ್ಮರಣಾರ್ಥ ಸರಳವಾಗಿ ವರ್ಷಾಚರಣೆ ಮಾಡಲು ಪಬ್ಲಿಕ್ ಟಿವಿ ನಿರ್ಧರಿಸಿದೆ. ಶ್ರೀಗಳ ಅಗಲಿಕೆಯಿಂದ ಇಡೀ ನಾಡೇ ಶೋಕದಲ್ಲಿರುವ ಈ ಸಂದರ್ಭದಲ್ಲಿ ಯಾವುದೇ ಸಂಭ್ರಮಾಚರಣೆ ಪಬ್ಲಿಕ್ ಟಿವಿ ಮಾಡದಿರಲು ತೀರ್ಮಾನಿಸಿದೆ.

    ಸಂಭ್ರಮಾಚರಣೆಗೆ ಬದಲು ಶ್ರೀಗಳ ಗೌರವಾರ್ಥ ಮಠದ ದಾಸೋಹ ನಿಧಿಗೆ ವಾಹಿನಿ ವತಿಯಿಂದ ಅಳಿಲು ಸೇವೆ ಮಾಡಲು ನಿರ್ಣಯಿಸಲಾಯ್ತು. ಅದರಂತೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರು ಸಿದ್ದಲಿಂಗ ಶ್ರೀಗಳಿಗೆ 5 ಲಕ್ಷ ರೂಪಾಯಿ ಚೆಕ್ ಹಸ್ತಾಂತರಿಸಿದ್ರು. ಈ ವೇಳೆ ಚಾನೆಲ್ ಸಿಇಓ ಅರುಣ್, ಸಿಓಓ ಹರೀಶ್ ಹಾಗೂ ಪ್ರಧಾನ ಸಂಪಾದಕ ಅಜ್ಮತ್ ಹಾಜರಿದ್ದು ಶ್ರೀಗಳ ಆಶೀರ್ವಾದ ಪಡೆದರು.

    ಪಬ್ಲಿಕ್ ಟಿವಿಯ ಪ್ರತಿ ಮೈಲಿಗಲ್ಲಿನಲ್ಲೂ ಹೆಗಲಿಗೆ ಹೆಗಲು ಕೊಟ್ಟು, ಪ್ರತಿ ಹಂತದಲ್ಲೂ ನಮ್ಮನ್ನು ಹರಸಿ ಬೆಳೆಸಿದ ಪಬ್ಲಿಕ್ ಗೆ ಅಂದ್ರೆ ವೀಕ್ಷಕ ಮಹಾಪ್ರಭುಗಳಿಗೆ ನಮೋ  ನಮಃ..ನಿಮ್ಮ ಸಹಕಾರ ಹೀಗೇ ಇರಲಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ – ಸಂಸತ್‍ನಲ್ಲಿ ಪ್ರಸ್ತಾಪಿಸಿದ ಸಂಸದ ಮುದ್ದ ಹನುಮೇಗೌಡ

    ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ – ಸಂಸತ್‍ನಲ್ಲಿ ಪ್ರಸ್ತಾಪಿಸಿದ ಸಂಸದ ಮುದ್ದ ಹನುಮೇಗೌಡ

    ನವದೆಹಲಿ: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ತುಮಕೂರು ಸಂಸದ ಮುದ್ದ ಹನುಮೇಗೌಡ ಅವರು ಲೋಕಸಭಾ ಕಲಾಪದ ಶೂನ್ಯವೇಳೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ.

    ಕನ್ನಡದಲ್ಲೇ ಸಭಾಧ್ಯಕ್ಷರಲ್ಲಿ ಮನವಿ ಮಾಡಿದ ಅವರು, ವಿಶ್ವದಲ್ಲಿ ಕೋಟ್ಯಂತರ ಭಕ್ತರನ್ನು ಹೊಂದಿರುವ ಶತಾಯುಷಿ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು. ಅಕ್ಷರ ದಾಸೋಹ, ಜ್ಞಾನ ದಾಸೋಹ, ಅನ್ನ ದಾಸೋಹ ಮೂಲಕ ಕೋಟ್ಯಂತರ ಭಕ್ತರನ್ನು ಹೊಂದಿದ್ದಾರೆ. ಅಲ್ಲದೇ ತಮ್ಮ 111 ವರ್ಷಗಳ ಜೀವನವನ್ನು ಸೇವೆಗಾಗಿಯೇ ಮುಡಿಪಾಗಿಟ್ಟಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಭಾರತ ರತ್ನ ಗೌರವವನ್ನು ನೀಡಬೇಕು ಎಂದು ಕೋರಿದರು.

    ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಶಿಫಾರಸು ಮಾಡಿದೆ. ಆದರೆ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಕೋಟ್ಯಂತರ ಭಕ್ತರ ಕೋರಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಆದ್ದರಿಂದ ಶ್ರೀಗಳಿಗೆ ಮರಣೋತ್ತರವಾಗಿಯಾದರೂ ಭಾರತ ರತ್ನ ಪ್ರಶಸ್ತಿಯನ್ನ ನೀಡಬೇಕು. ಶ್ರೀಗಳಿಗೆ ಪ್ರಶಸ್ತಿ ನೀಡದಿರುವುದು ಭಕ್ತರ ಮನಸ್ಸಿಗೆ ನೋವುಂಟು ಮಾಡಿದೆ. ಆದ್ದರಿಂದ ಶೀಘ್ರದಲ್ಲೇ ಪ್ರಶಸ್ತಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಶ್ರೀಗಳ ಸ್ಮರಣೆ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ಸಿದ್ದರಾಮಯ್ಯ ನನ್ನ ಮಾರ್ಗದರ್ಶಿ, ಹಿರಿಯರು – ಸಿಎಂ ಕುಮಾರಸ್ವಾಮಿ

    ಸಿದ್ದರಾಮಯ್ಯ ನನ್ನ ಮಾರ್ಗದರ್ಶಿ, ಹಿರಿಯರು – ಸಿಎಂ ಕುಮಾರಸ್ವಾಮಿ

    ತುಮಕೂರು: ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ರಾಷ್ಟ್ರೀಯ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದ ಸಿಎಂ ಕುಮಾರಸ್ವಾಮಿ ಅವರು, ಇಂದು ಸಿದ್ದಗಂಗಾ ಶ್ರೀಗಳ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಹಾಡಿಹೊಗಳಿದ್ದಾರೆ.

    ಸಿದ್ದಗಂಗಾ ಶ್ರೀಗಳ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಸಿದ್ದರಾಮಯ್ಯ ಅವರು ನನ್ನ ಮಾರ್ಗದರ್ಶಿ ಮತ್ತು ಹಿರಿಯರು ಎಂದರು. ಅಲ್ಲದೇ ದಿನನಿತ್ಯದ ರಾಜಕೀಯ ದ್ವೇಷ ಮರೆತು ಎಲ್ಲರೂ ಒಂದೇ ವೇದಿಕೆಯಲ್ಲಿ ಸೇರಿದ್ದೇವೆ ಎಂದು ತಿಳಿಸಿದರು. ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರೊಂದಿಗೆ ಕೆಲ ಹೊತ್ತು ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಕೂಡಾ ಭಾಗವಹಿಸಿದ್ದರು.

    ನಾಯಕರು ಹೇಳೋದು ಏನು?
    ಸಿಎಂ ಎಚ್‍ಡಿಕೆ ಅವರು ಸಿದ್ದರಾಮಯ್ಯ ಅವರನ್ನು ಹೊಗಳಿ ಮಾತನಾಡಿದರೆ, ಇತ್ತ ಕಾಂಗ್ರೆಸ್, ಜೆಡಿಎಸ್ ಶಾಸಕರು ಮತ್ತೆ ತಮ್ಮ ಇಷ್ಟದ ನಾಯಕರ ಹೇಳಿಕೆಯನ್ನು ಮುಂದುವರಿಸಿದರು. ಸಿದ್ದರಾಮಯ್ಯ ನಮ್ಮ ನಾಯಕರು ಎಂದು ಹೇಳುವುದರಲ್ಲಿ ತಪ್ಪೇನಿಲ್ಲ. ನನಗೆ ವ್ಯಕ್ತಿ ನಿಷ್ಠೆ ಅಂದರೆ ಸಿದ್ದರಾಮಯ್ಯ ಅವರು. ಪಕ್ಷ ನಿಷ್ಠೆ ಅಂದರೆ ಕಾಂಗ್ರೆಸ್ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು.

    ಕಾಂಗ್ರೆಸ್ ನಾಯಕರ ಹೇಳಿಕೆಗೆ ಅಸಮಾಧಾನ ಹೊರ ಹಾಕಿದ ಜೆಡಿಎಸ್ ನಾಯಕರು ಸರ್ಕಾರ ಐದು ವರ್ಷ ಸುಲಲಿತವಾಗಿ ನಡೆಯಬೇಕು ಅಂದರೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸ್ಪಷ್ಟವಾಗಿ ರಾಜ್ಯದ ನಾಯಕರಿಗೆ ಸೂಚನೆ ನೀಡಬೇಕು ಎಂದು ಮೇಲುಕೋಟೆಯಲ್ಲಿ ಸಚಿವ ಪುಟ್ಟರಾಜು ಎಚ್ಚರಿಕೆ ನೀಡಿದರು. ಉಳಿದಂತೆ ಯಾರೋ ಯಾರನ್ನೋ ಖುಷಿ ಪಡಿಸೋಕೆ ಯಾವುದೇ ಹೇಳಿಕೆ ಕೊಡಬಾರದು ಎಂದು ಬಂಡೆಪ್ಪ ಕಾಶೆಂಪೂರ್ ಕೊಪ್ಪಳದಲ್ಲಿ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ನಾವೇ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡ್ತೇವೆ: ಸಿಎಂ ಎಚ್‍ಡಿಕೆ

    ನಾವೇ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡ್ತೇವೆ: ಸಿಎಂ ಎಚ್‍ಡಿಕೆ

    ತುಮಕೂರು: ಕೇಂದ್ರದಲ್ಲಿ ಕಾಂಗ್ರೆಸ್ – ಜೆಡಿಎಸ್ ಸೇರಿದಂತೆ ಮಹಾಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೆ ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಕೊಡುವುದಾಗಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ನಡೆದಾಡುವ ದೇವರ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದಗಂಗಾ ಶ್ರೀಗಳು ಸಲ್ಲಿಸಿರುವ ಸೇವೆಯ ಬಗ್ಗೆ ಹೇಳಲು ಪದಗಳು ಇಲ್ಲ. ನಾನು ರಾಜ್ಯದ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ವೇಳೆ ಅವರು ನನ್ನನ್ನು ಕೇಳಿದ್ದು ಒಂದೇ, “ರೈತರು ಹೇಗಿದ್ದಾರೆ. ರಾಜ್ಯದಲ್ಲಿ ಮಳೆ-ಬೆಳೆ ಚೆನ್ನಾಗಿ ಅಗುತ್ತೀದ್ದೇಯಾ” ಎಂದು ಮಾತ್ರ. ಅದನ್ನು ಬಿಟ್ಟರೆ ಅವರು ಬೇರೆ ಏನು ಕೇಳಲಿಲ್ಲ. ಪ್ರತಿದಿನ ಅವರಿಗೆ ನಮನ ಸಲ್ಲಿಸಿ ಮುಂದಿನ ಕಾರ್ಯಕ್ರಮ ಕ್ಕೆ ಹೋಗುತ್ತೇನೆ ಎಂದರು.

    ಇದೇ ವೇಳೆ ಅವರಿಗೆ ಭಾರತ ರತ್ನ ಲಭಿಸಿದ್ದರೆ, ಒಂದು ತೂಕ ಬರುತ್ತಿತ್ತು. ಮುಂದಿನ ದಿನಗಳಲ್ಲಿ ನಮಗೆ ಆ ಶಕ್ತಿ ಬಂದರೆ ನಾನು ಆ ಕೆಲಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಈ ರಾಜ್ಯಕ್ಕೆ ಬೇಕಾದ್ದು ಮಾಡುವ ಶಕ್ತಿ ನಮಗೆ ಬರುತ್ತದೆ. ಇದರಲ್ಲಿ ಯಾವುದೇ ಸಂಶಯಬೇಡ. ಪರಮಪೂಜ್ಯ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಕೊಡುವ ಅವಕಾಶ ನಮಗೆ ಬರುತ್ತೆ. ಜನ ಇದನ್ನು ಅರ್ಥ ಮಾಡಿಕೊಳ್ಳಕೊಂಡು ನಮಗೆ ಶಕ್ತಿ ತುಂಬಬೇಕು. ನನ್ನ ಪುಣ್ಯ 2006ರಲ್ಲೇ ಶ್ರೀಗಳಿಗೆ ಕರ್ನಾಟಕ ರತ್ನ ನೀಡಿದ್ದೇವು ಎಂದು ಹೇಳಿದರು.

    ಮಾದರಿ ಗ್ರಾಮ: ಸಿದ್ದಗಂಗಾ ಶ್ರೀಗಳ ಹುಟ್ಟೂರನ್ನು ಸರ್ಕಾರ ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿ ಮಾಡುತ್ತದೆ. ಅಲ್ಲದೇ ಅವರ ಹೆಸರಿನಲ್ಲಿ ಶಾಶ್ವತವಾಗಿ ಉಳಿಯುವಂತಹ ಕೆಲಸ ಮಾಡುತ್ತೇವೆ ಎಂದು ಸಿಎಂ ಘೋಷಣೆ ಮಾಡಿದರು. ಡಿಸಿಎಂ ಪರಮೇಶ್ವರ್ ಅವರು ಮಾತನಾಡಿ, ಶ್ರೀಗಳು ಇಡೀ ಜೀವನವನ್ನು ಧರ್ಮಕ್ಕಾಗಿ ಜೀವನ ಮುಡಿಪಾಗಿಟ್ಟಿದ್ದಾರೆ. ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ಶ್ರೀಗಳ ಹೆಸರಿನಲ್ಲಿ ಕಾರ್ಯಕ್ರಮ ಜಾರಿಗೆ ತರಲು ಸಿಎಂ ಅವರ ಬಳಿ ಮನವಿ ಮಾಡುತ್ತೇನೆ ಎಂದು ಎಂದರು.

    ವಿರೋಧಿ ಪಕ್ಷದ ನಾಯಕರಾದ ಯಡಿಯೂರಪ್ಪ ಅವರು ಮಾತನಾಡಿ, ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳು ಈ ಜಗತ್ತಿನ ಅಚ್ಚರಿ ಅಂದರೆ ತಪ್ಪಾಗಲಾರದು. ಜಾತಿ, ಮತಗಳ ಭೇದವಿಲ್ಲದೆ ಜೀವನ ನಡೆಸಿದ ಸ್ವಾಮೀಜಿಗಳು ಎಲ್ಲಾ ಧರ್ಮದವರಿಗೂ ಶಿಕ್ಷಣ ನೀಡಿದ್ದಾರೆ. ರಾಷ್ಟ್ರೀಯ ಭಾವೈಕ್ಯತೆಯನ್ನ ನಾವು ಎಲ್ಲಿಯೂ ಹುಡುಕಿಕೊಂಡು ಹೋಗುವ ಅಗತ್ಯವೇ ಇಲ್ಲದಂತೆ, ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರೆ ಸಾಕು ಆದರ ಅರಿವು ನಮಗಾಗುತ್ತದೆ ಎಂದು ತಿಳಿಸಿದರು.

    ಗೃಹ ಸಚಿವ ಎಂ.ಬಿ. ಪಾಟೀಲರು ಮಾತನಾಡಿ, ನೊಬೆಲ್ ಪುರಸ್ಕಾರಕ್ಕೆ ಶಿಫಾರಸು ಮಾಡುವ ಅವಕಾಶ ಇದೆಯಾ, ಅದರ ಮಾನದಂಡಗಳೇನಿದೆ ಎಂಬುವುದನ್ನು ಸಂಗ್ರಹಿಸುತ್ತಿರುವುದಾಗಿ ಹೇಳಿದರು. ಇದೇ ವೇಳೆ ಸಿದ್ದಗಂಗಾ ಶ್ರೀಗಳಿಗೆ ಚಿಕೆತ್ಸೆ ನೀಡಿದ ವೈದ್ಯರಾದ ಡಾ.ವೆಂಕಟರಮಣ ಮತ್ತು ಡಾ.ರವೀಂದ್ರ ಅವರಿಗೆ ಸಿದ್ದಗಂಗಾ ಮಠದಿಂದ ಸನ್ಮಾನ ಮಾಡಲಾಯಿತು.

    ಉಳಿದಂತೆ ಸಿದ್ದಗಂಗಾ ಶ್ರೀಗಳ ಗದ್ದುಗೆಗೆ ಬೆಳಗ್ಗೆಯಿಂದಲೇ ಅರ್ಚಕರು, ಸಿದ್ದಲಿಂಗ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದರು. ಗಣ್ಯಾತಿಗಣ್ಯರು ಸೇರಿದಂತೆ ಲಕ್ಷಾಂತರ ಭಕ್ತರು 2 ಕಿ.ಮೀ. ಸರತಿ ಸಾಲಿನಲ್ಲಿ ನಿಂತು ಶ್ರೀಗಳಿಗೆ ನಮನ ಸಲ್ಲಿಸಿದರು. ಶ್ರೀಗಳ ಭಾವಚಿತ್ರ ಇರುವ ಟೀ ಶರ್ಟ್ ಧರಿಸಿದ 13 ಸಾವಿರಕ್ಕೂ ಹೆಚ್ಚು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ವ್ಯವಸ್ಥೆಗಳನ್ನ ನೋಡಿಕೊಂಡರು.

    ದಾಸೋಹ ಕಾರ್ಯಕ್ರಮ: ಸಿದ್ದಗಂಗಾ ಶ್ರೀಗಳ ಪುಣ್ಯಾರಾಧನೆ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರ ಆಗಮಿಸಿ ಶ್ರೀಗಳ ಗದ್ದುಗೆ ದರ್ಶನ ಪಡೆದರು. ಪುಣ್ಯಾರಾಧನೆ ಕಾರ್ಯಕ್ರಮದ ಭಾಗವಾಗಿ ಆಗಮಿಸಿದ್ದ ಭಕ್ತರಿಗೆ ವಿಶೇಷ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಅನ್ನ, ಸಾಂಬಾರ್, ಪಾಯಸ, ಬೂಂದಿ, ಜಿಲೇಬಿ ಸೇರಿದಂತೆ ಇನ್ನಿತರ ತಿನಿಸುಗಳನ್ನು ಮಠದ 11 ಕಡೆ ದಾಸೋಹ ವ್ಯವಸ್ಥೆಯನ್ನ ಮಾಡಲಾಗಿತ್ತು. ಸಂಜೆ ವೇಳೆಗೆ ಭಕ್ತರ ಸಂಖ್ಯೆ ಹೆಚ್ಚಳವಾದ ಕಾರಣ ಶ್ರೀಗಳ ಗದ್ದುಗೆ ಒಳ ಪ್ರವೇಶಕ್ಕೆ ಅವಕಾಶ ನೀಡದೇ ಮುಖ್ಯದ್ವಾರದಿಂದಲೇ ದರ್ಶನ ಮಾಡಲು ಅವಕಾಶ ನೀಡಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಸರ್ಕಾರಿ ಆದೇಶ ಉಲ್ಲಂಘಿಸಿದ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹ

    ಸರ್ಕಾರಿ ಆದೇಶ ಉಲ್ಲಂಘಿಸಿದ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹ

    ಬೆಂಗಳೂರು: ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ಹಿನ್ನೆಲೆಯಲ್ಲಿ ಶೋಕಾಚರಣೆ ಘೋಷಣೆಯಾಗಿದ್ದರೂ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರು ಸರ್ಕಾರಿ ಆದೇಶ ಉಲ್ಲಂಘಿಸಿ ಸಂವಿಧಾನ ಸಂಭಾಷಣೆ ಎಂಬ ಕಾರ್ಯಕ್ರಮ ಆಯೋಜಿಸಿ ಶ್ರೀಗಳಿಗೆ ಅಗೌರವ ತೋರಿದ್ದರು. ಅಲ್ಲದೇ ಮಾಧ್ಯಮಗಳನ್ನು ಟೆರರಿಸ್ಟ್ ಗಳಿಗಿಂತ ಡೇಂಜರ್ ಎಂದು ವಿವಾದತ್ಮಾಕ ಹೇಳಿಕೆ ನೀಡಿದ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆದಿದೆ.

    ಖರ್ಗೆ ಅವರ ತವರು ಜಿಲ್ಲೆ ಕಲಬುರಗಿಯ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬಿಜೆಪಿ ಮುಖಂಡರಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಸಿಎಂ ಕುಮಾರಸ್ವಾಮಿ ಅವರು ಕೂಡಲೇ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಬೇಕೆಂದು ಆಗ್ರಹಿಸಿದರು. ಇದನ್ನು ಓದಿ: ಸರ್ಕಾರಿ ಆದೇಶ ಉಲ್ಲಂಘಿಸಿದ ಸತ್ಯ ಹೇಳಿದ್ದಕ್ಕೆ ಪ್ರಿಯಾಂಕ್ ಖರ್ಗೆ ಮಾಧ್ಯಮಗಳ ಮೇಲೆ ಗರಂ!

    ಇತ್ತ ಯಾದಗಿರಿಯಲ್ಲಿ ಬಿಜೆಪಿ ಮುಖಂಡ ಖಂಡಪ್ಪ ದಾಸನ್, ಪ್ರಿಯಾಂಕ್ ಖರ್ಗೆ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ಆಕ್ರೋಶ ವ್ಯಕ್ತಪಡಿಸಿದರು. ಸಚಿವ ಪ್ರಿಯಾಂಕ್ ಖರ್ಗೆ ಅವರು ಪಿಯುಸಿ ಫೇಲ್ ಆಗಿದ್ದು, ಆತನಿಗೆ ಸಂವಿಧಾನ ಗೊತ್ತಿಲ್ಲ ಎಂದು ಆರೋಪಿಸಿದರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲೂ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು. ಬೀದರ್, ಚಿತ್ರದುರ್ಗದಲ್ಲೂ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು. ಧಾರವಾಡದಲ್ಲಿ ಕೂಡಾ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸಚಿವರ ರಾಜೀನಾಮೆಗೆ ಒತ್ತಾಯಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ಸಿದ್ದಗಂಗಾ ಶ್ರೀಗಳ ಕ್ರಿಯಾಸಮಾಧಿಗೆ ಬಾಗಲಕೋಟೆಯ ವಿಭೂತಿ ಬಳಕೆ – 6 ತಿಂಗಳ ಮೊದಲೇ ವಿಭೂತಿ ಕೇಳಿದ್ದ ಶ್ರೀಗಳು

    ಸಿದ್ದಗಂಗಾ ಶ್ರೀಗಳ ಕ್ರಿಯಾಸಮಾಧಿಗೆ ಬಾಗಲಕೋಟೆಯ ವಿಭೂತಿ ಬಳಕೆ – 6 ತಿಂಗಳ ಮೊದಲೇ ವಿಭೂತಿ ಕೇಳಿದ್ದ ಶ್ರೀಗಳು

    ಬಾಗಲಕೋಟೆ: ಭೂಮಿ ಮೇಲಿನ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು ಶಿವೈಕ್ಯರಾಗುವ ಸುಳಿವು ಐದಾರು ತಿಂಗಳ ಹಿಂದೆಯೇ ಸಿಕ್ಕಿತ್ತಾ ಎಂಬ ಪ್ರಶ್ನೆ ಮೂಡಿದ್ದು, ಕ್ರಿಯಾಸಮಾಧಿಗೆ ಬಳಸಲಾಗಿರುವ ವಿಭೂತಿಗಟ್ಟಿ ತಯಾರಿಸಲು ಶ್ರೀಗಳು ಸೂಚನೆ ನೀಡಿದ್ದರು ಎಂಬ ಮಾಹಿತಿ ಲಭಿಸಿದೆ.

    ಸಿದ್ದಗಂಗಾ ಶ್ರೀಗಳನ್ನು 6 ತಿಂಗಳ ಹಿಂದೆ ಭೇಟಿಯಾದ ವಿಭೂತಿ ತಯಾರಿಸುವ ಕುಟುಂಬ, ಅಂದು ಶ್ರೀಗಳು ಆಡಿರುವ ಮಾತನ್ನು ಸ್ಮರಿಸಿದೆ. ಸಿದ್ದಗಂಗಾ ಶ್ರೀಗಳು ಆರು ತಿಂಗಳ ಮುಂಚೆಯೇ ಎರಡು ಸಾವಿರ ಕ್ರಿಯಾಗಟ್ಟಿ ಮತ್ತು ಎಂಟು ಸಾವಿರ ವಿಭೂತಿಯನ್ನು ನೀಡಲು ಸೂಚಿಸಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ.

    ಬಾಗಲಕೋಟೆ ತಾಲ್ಲೂಕಿನ ಮುಚಖಂಡಿ ಗ್ರಾಮದ ವೀರಯ್ಯ ಹಿರೇಮಠ ಕುಟುಂಬ ತಯಾರು ಮಾಡಿದ ವಿಭೂತಿಗಳನ್ನು ಶ್ರೀಗಳ ಕ್ರಿಯಾಸಮಾಧಿಗೆ ಬಳಸಲಾಗಿದೆ. ಶುದ್ಧ ದೇಶಿ ತಳಿಯ ಆಕಳ ಸಗಣಿಯಿಂದ ಓಂ ನಮಃ ಶಿವಾಯ ಮಂತ್ರ ಪಠಣದೊಂದಿಗೆ ಇವರು ವಿಭೂತಿ ತಯಾರು ಮಾಡುತ್ತಾರೆ. ಈ ಕುಟುಂಬ ಆರು ತಿಂಗಳ ಹಿಂದೆ ತುಮಕೂರಿನಲ್ಲಿ ಶ್ರೀಗಳನ್ನು ಭೇಟಿಯಾಗಿತ್ತು. ಆಗ ಶ್ರೀಗಳು ವಿಭೂತಿ ನೀಡಲು ತಿಳಿಸಿದ್ದರು.

    ವೀರಯ್ಯ ಹಿರೇಮಠ ಕುಟುಂಬ ಕಳೆದ 60 ವರ್ಷಗಳಿಂದ ಸಾಂಪ್ರದಾಯಿಕ ವೃತ್ತಿಯನ್ನಾಗಿ ವಿಭೂತಿ ತಯಾರಿಕೆ ಕಾರ್ಯ ಮಾಡುತ್ತಿದೆ. ಇವರು ತಯಾರಿಸುವ ವಿಭೂತಿ ಪವಿತ್ರವಾದದ್ದು ಹಾಗು ಅಷ್ಟೇ ಮಹತ್ವದ್ದು ಎಂದು ಕರೆಯಲಾಗುತ್ತದೆ. ಯಾವುದೇ ಕಲಬೆರಕೆ ಮಾಡದೇ ಪರಿಶುದ್ಧವಾದ ವಿಭೂತಿ ತಯಾರಿಸುವುದು ಇಲ್ಲಿನ ವಿಶೇಷತೆ.

    ದೇಶಿ ತಳಿಯ ಆಕಳುಗಳ ಸಗಣಿ ಬಳಸಿಕೊಂಡು ಅದನ್ನು ಬೂದಿ ಮಾಡಿ ನಂತರ ಅದನ್ನು ಸಾಣಿಗೆಯಲ್ಲಿ ಸೋಸಿ ಬಳಿಕ ಕ್ರಿಯಾಗಟ್ಟಿ ಮತ್ತು ವಿಭೂತಿಯನ್ನಾಗಿ ಮಾಡುತ್ತಾರೆ. ಈ ಕುಟುಂಬ ತಯಾರಿಸಿದ ವಿಭೂತಿಗಳನ್ನು ಯಾವುದೇ ಜಾತ್ರೆ, ಸಂತೆಯಲ್ಲಿ ಮಾರಾಟ ಮಾಡುವುದಿಲ್ಲ. ಬದಲಾಗಿ ವಿಭೂತಿಗಳನ್ನು ಕೇವಲ ಮಠಗಳಿಗೆ ಮಾತ್ರ ನೀಡುವುದು ಮತ್ತೊಂದು ವಿಶೇಷವಾಗಿದೆ. ದೇಶದ ವಿವಿಧ ಪ್ರಮುಖ ಮಠಗಳಿಗೆ ಇವರ ವಿಭೂತಿಗಳು ರವಾನೆಯಾಗುತ್ತವೆ. ಕಂಚಿ, ಕಾಶಿ, ಸಿದ್ದರಾಮೇಶ್ವರ, ಮಠ ಹುಬ್ಬಳ್ಳಿ ಮೂರು ಸಾವಿರ ಮಠ ಸೇರಿದಂತೆ ಪ್ರಮುಖ ಮಠಗಳಿಗೆ ಇವರೇ ವಿಭೂತಿಗಳನ್ನು ಪೂರೈಸುತ್ತಾರೆ.

    ಈ ಕುಟುಂಬದ ಸದಸ್ಯರೇ ನೇರವಾಗಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ವಿಭೂತಿಗಳನ್ನು ನೀಡಿದ್ದಾರೆ. ಸಿದ್ದಗಂಗಾ ಶ್ರೀಗಳು ಶಿವೈಕ್ಯರಾಗಿದ್ದು ನೋವು ತಂದಿದೆ. ಅವರ ಕ್ರಿಯಾಸಮಾಧಿಗೆ ನಮ್ಮ ವಿಭೂತಿ ಬಳಸಿಕೊಂಡಿದ್ದು ನಮ್ಮ ಜೀವನ ಪಾವನವಾಯಿತು. ಇದು ನಮಗೆ ಶ್ರೀಗಳ ಆಶೀರ್ವಾದ ಎಂದು ವಿಭೂತಿ ತಯಾರಿಸಿದ ಕುಟುಂಬ ತಿಳಿಸಿದೆ. ಸಿದ್ದಗಂಗಾ ಶ್ರೀಗಳ ಕ್ರಿಯಾಸಮಾಧಿಗೆ ಬಸವಣ್ಣನ ನೆಲದ ವಿಭೂತಿ ಬಳಸಿದ್ದು ವಿಶೇಷವಾಗಿದ್ದು, ಇದಕ್ಕಾಗಿ ಆರು ತಿಂಗಳ ಮುಂಚೆಯೇ ವಿಭೂತಿ ನೀಡಲು ಹೇಳಿದ್ದ ಶ್ರೀಗಳು ಹೇಳಿರುವುದು ಅಚ್ಚರಿ ತಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹಿಳಾ ಅಧಿಕಾರಿಗೆ ಅವಾಜ್ ಹಾಕಿದ ಸಚಿವ ಸಾ.ರಾ.ಮಹೇಶ್ – ತುಮಕೂರು ಎಸ್‍ಪಿ ಕಣ್ಣೀರು

    ಮಹಿಳಾ ಅಧಿಕಾರಿಗೆ ಅವಾಜ್ ಹಾಕಿದ ಸಚಿವ ಸಾ.ರಾ.ಮಹೇಶ್ – ತುಮಕೂರು ಎಸ್‍ಪಿ ಕಣ್ಣೀರು

    ತುಮಕೂರು: ಮಂಗಳವಾರ ಸಿದ್ದಗಂಗಾ ಶ್ರೀಗಳ ಲಿಂಗೈಕ್ಯ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡು ಮುಖ್ಯಮಂತ್ರಿಗಳಿಂದ ಮೆಚ್ಚುಗೆ ಪಡೆದುಕೊಂಡಿದೆ. ಈ ನಡುವೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಕರ್ತವ್ಯ ನಿರತ ಎಸ್‍ಪಿ ದಿವ್ಯಾ ಗೋಪಿನಾಥ್ ಅವರಿಗೆ ಅವಾಜ್ ಹಾಕಿರುವ ವಿಡಿಯೋ ವೈರಲ್ ಆಗಿದೆ.

    ಶ್ರೀಗಳ ಕ್ರಿಯಾ ಸಮಾಧಿ ವಿಧಿವಿಧಾನ ವೀಕ್ಷಿಸಲು ವೀಕ್ಷಿಸಲು ಸಾ.ರಾ. ಮಹೇಶ್ ಗದ್ದುಗೆ ಪ್ರವೇಶಿಸಲು ಮುಂದಾಗಿದ್ದಾರೆ. ಈ ವೇಳೆ ಪ್ರವೇಶ ನಿರಾಕರಿಸಿದ್ದಕ್ಕೆ ಎಸ್‍ಪಿ ದಿವ್ಯಾ ಗೋಪಿನಾಥ್ ಮತ್ತು ಸಾ.ರಾ.ಮಹೇಶ್ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕೋಪಗೊಂಡ ಸಚಿವರು ಗದರಿದ್ದರಿಂದ ಎಸ್‍ಪಿ ಕಣ್ಣೀರು ಹಾಕಿದ್ದಾರೆ.

    ಈ ವಿಡಿಯೋ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ಸಚಿವರು, ನಾನು ಮಂತ್ರಿ ಎಂದು ಹೇಳಿದ್ರೂ ನನ್ನನ್ನು ತಡೆದರು. ಕೆಲವು ಅಧಿಕಾರಿಗಳಿಗೆ ಮಂತ್ರಿಗಳು ಯಾರು ಎನ್ನುವುದೇ ಗೊತ್ತಿರಲಿಲ್ಲ. ಹಾಗಾಗಿ ನಾವೇ ನಮ್ಮನ್ನು ಅವರಿಗೆ ಪರಿಚಯಿಸಿಕೊಳ್ಳುತ್ತೇವೆ. ನನ್ನ ಹಿಂದೆ ಬಂದ ಸಚಿವ ವೆಂಕಟರಾವ್ ನಾಡಗೌಡರು ಬಂದಾಗ ಇದೇ ಎಸ್‍ಪಿ ತಡೆದಿದ್ದರು. ನಾಡಗೌಡ್ರು ನಾನು ಮಂತ್ರಿ ಇದ್ದೇನಮ್ಮಾ, ಒಳಗೆ ಹೋಗಲು ಬಿಡಿ. ಶ್ರೀಗಳ ದರ್ಶನ ಪಡೆದು ಹಿಂದಿರುಗುತ್ತೇನೆಂದು ಮನವಿ ಮಾಡಿಕೊಂಡಿದ್ದರು ಎಂದು ತಿಳಿಸಿದರು.

    ಅದೊಂದು ಧಾರ್ಮಿಕ ಕೆಲಸವಾಗಿದ್ದರಿಂದ ನಾನು ಹೆಚ್ಚು ಮಾತನಾಡಲಿಲ್ಲ. ಈ ವೇಳೆ ನಾನು ಅವರಿಗೆ ಯಾವುದೇ ಕೆಟ್ಟ ಪದಗಳಿಂದಲೂ ನಿಂದಿಸಿಲ್ಲ. ದಾರಿ ಬಿಡಿ ಎಂಬುವುದನ್ನು ಎತ್ತರದ ಧ್ವನಿಯಲ್ಲಿ ಹೇಳಿದ್ದೇನೆ. ಯೂಸ್‍ಲೆಸ್ ತರಹ ಮಾತನಾಡಿ, ನ್ಯೂಸ್‍ಸೆನ್ಸ್ ಕ್ರಿಯೇಟ್ ಮಾಡಬೇಡಿ ಅಂತಾ ಹೇಳಿದ್ದೇನೆ. ಅಧಿಕಾರಿಗಳು ತಪ್ಪು ಮಾಡಿದಾಗ ಅವರಿಗೆ ಸಚಿವರು ಏನು ಹೇಳಬಾರದಾ? ಆ ಕ್ಷಣದಲ್ಲಿ ನಡೆದ ತಪ್ಪನ್ನು ಸರಿಪಡಿಸಿಕೊಳ್ಳುವಂತೆ ಹೇಳಿದ್ದೇನೆ. ನನ್ನ ಹೇಳಿಕೆಗೆ ಯಾವುದೇ ಕ್ಷಮೆ ಕೇಳಲ್ಲ ಮತ್ತು ವಿಷಾದ ನನಗಿಲ್ಲ ಎಂದು ಸಾ.ರಾ.ಮಹೇಶ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv