Tag: Siddaganga Shri

  • ಜ.31ಕ್ಕೆ ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮ

    ಜ.31ಕ್ಕೆ ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮ

    ತುಮಕೂರು: ನಡೆದಾಡುವ ದೇವರು, ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಪುಣ್ಯಸ್ಮರಣಾ ಕಾರ್ಯಕ್ರಮವನ್ನು ಜನವರಿ 31ರಂದು ಬೆಳಗ್ಗೆ ನಡೆಸಲಾಗುತ್ತದೆ ಎಂದು ಸಿದ್ದಲಿಂಗ ಸ್ವಾಮೀಜಿಗಳು ತಿಳಿಸಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದಲಿಂಗ ಸ್ವಾಮೀಜಿಗಳು, ಪೂಜ್ಯರ ಆಧ್ಯಾತ್ಮದ ಶಕ್ತಿಯಿಂದಲೇ ಸಕಲ ಕಾರ್ಯಗಳು ಸುಗಮವಾಗಿ ನಡೆದಿದೆ. ಪುಣ್ಯಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ವಹಿಸಲಿದ್ದಾರೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದ ಸ್ವಾಮೀಜಿ, ಸಿರಿಗೆರೆ ತರಬಾಳು ಸಂಸ್ಥಾನಮಠದ ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ಆರ್ಟ್ ಆಫ್ ಲಿವಿಂಗ್‍ನ ಶ್ರೀ ರವಿಶಂಕರ್ ಗುರೂಜಿ, ಕನಕಪುರದ ಮುಮ್ಮಡಿ ನಿರ್ವಾಣಮಹಾಸ್ವಾಮೀಜಿ ದಿವ್ಯಸಾನಿಧ್ಯ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

    ಈ ಕಾರ್ಯಕ್ರಮವನ್ನು ಸಿಎಂ ಕುಮಾರಸ್ವಾಮಿ ಅವರು ಉದ್ಘಾಟಿಸಲಿದ್ದಾರೆ. ಎಲ್ಲ ಸಚಿವರು, ಶಾಸಕರು, ಸಂಸದರು, ಗಣ್ಯರು, ಮುಖಂಡರಿಗೆ ಆಮಂತ್ರಣ ನೀಡಲಾಗಿದೆ ಎಂದ ಶ್ರೀಗಳು, ಮಠ ಯಾವುದೇ ಜಾತಿ ಧರ್ಮಗಳಿಗೆ ಸೀಮಿತವಲ್ಲ ಎಂದು ಹೇಳಿದರು.

    ಸಿದ್ದಗಂಗಾ ಶ್ರೀಗಳು ರೂಪಿಸಿದ್ದ ಕೆಲ ಯೋಜನೆಗಳು ಹಾಗೇ ಉಳಿದುಕೊಂಡಿವೆ. ಹೀಗಾಗಿ ಅವುಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಹೆಚ್ಚು ಗಮನ ನೀಡಲಾಗುವುದು. ಮಠದ ಆವರಣದಲ್ಲಿ ಶಿವಕುಮಾರ ಶ್ರೀಗಳ ಕಂಚಿನ ಪ್ರತಿಮೆ ನಿರ್ಮಾಣ, ದಾಸೋಹ ಭವನ, ಇನ್ನೀತರೆ ಕೆಲಸಗಳ ಬಗ್ಗೆ ಗಮನ ಹರಿಸಲಾಗುವುದು. ಗುರುಕಾರಣ್ಯ ಕಾರ್ಯ ಪರಂಪರೆ ಮುಂದುವರಿಸಲಾಗುತ್ತದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗ್ರಾಮ ದತ್ತು ಪಡೆದು 199 ಮನೆ ನಿರ್ಮಿಸಿದ್ದ ಸಿದ್ದಗಂಗಾ ಶ್ರೀ!

    ಗ್ರಾಮ ದತ್ತು ಪಡೆದು 199 ಮನೆ ನಿರ್ಮಿಸಿದ್ದ ಸಿದ್ದಗಂಗಾ ಶ್ರೀ!

    ರಾಯಚೂರು: ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ಅಗಲಿಕೆ ಇಡೀ ರಾಜ್ಯವನ್ನೇ ದುಃಖದ ಮಡುವಿಗೆ ತಳ್ಳಿದೆ. ಇತ್ತ ರಾಯಚೂರಿನ ಗ್ರಾಮದ ಜನರಿಗೆ ಶ್ರೀಗಳನ್ನ ಕಳೆದುಕೊಂಡ ಅನಾಥ ಭಾವ ಬಂದಿದ್ದು, ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

    ಡಾ.ಶಿವಕುಮಾರ ಸ್ವಾಮೀಜಿಗಳಿಗೂ ರಾಯಚೂರಿನ ಮಾನ್ವಿ ತಾಲೂಕಿನ ಉಮಳಿಪನ್ನೂರು ಗ್ರಾಮದ ಜನತೆಗೆ ಇದೆ ವಿಶೇಷ ಸಂಬಂಧ. ಈ ಹಿಂದೆ ಕೇವಲ ಗುಡಿಸಲುಗಳಿಂದ ಕೂಡಿದ್ದ ಗ್ರಾಮದಲ್ಲಿ ಮನೆಗಳು ತಲೆ ಎತ್ತಲು ಕಾರಣರಾದ ವ್ಯಕ್ತಿ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು. ಈ ಕಾರಣಕ್ಕೆ ಈ ನಗರವನ್ನು ಸಿದ್ದಗಂಗಾ ನಗರ ಎಂದೇ ನಾಮಕರಣ ಮಾಡಲಾಗಿದೆ.  ಇದನ್ನೂ ಓದಿ: ನಿಮಗೆ ದೇವರ ದರ್ಶನ ಆಗಿದ್ಯಾ – ಶ್ರೀಗಳು ನೀಡಿದ ಉತ್ತರಕ್ಕೆ ಅಚ್ಚರಿಗೊಂಡ ಡಾ. ರೇಲಾ

    2009ರಲ್ಲಿ ಉಂಟಾದ ತುಂಗಭದ್ರಾ ನದಿಯ ನೆರೆಹಾವಳಿಗೆ ಉಮಳಿಪನ್ನೂರು ಗ್ರಾಮದ ಜನ ತಮ್ಮ ಸೂರುಗಳನ್ನೆಲ್ಲಾ ಕಳೆದುಕೊಂಡು ಊಟಕ್ಕೂ ಪರದಾಡುವ ಸ್ಥಿತಿ ತಲುಪಿದ್ದರು. ಆಗ ಇಡೀ ಗ್ರಾಮವನ್ನ ದತ್ತು ತೆಗೆದುಕೊಂಡ ಸಿದ್ದಗಂಗಾ ಮಠ 30 ಎಕರೆ ಜಾಗದಲ್ಲಿ 2 ಕೋಟಿ ರೂ. ಖರ್ಚುಮಾಡಿ ಸುಸಜ್ಜಿತ 199 ಮನೆಗಳನ್ನು ನಿರ್ಮಿಸಿ ಕೊಟ್ಟಿತು. ಅಲ್ಲದೇ ಇಡೀ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ಸಿದ್ದಗಂಗಾ ಶ್ರೀಗಳು ಅಚ್ಚುಕಟ್ಟಾಗಿ ಗ್ರಾಮವನ್ನು ಮರುಸೃಷ್ಟಿಸಿಕೊಟ್ಟಿದ್ದರು.

    ರಾಯಚೂರು ಭಾಗದ ನೂರಾರು ವಿದ್ಯಾರ್ಥಿಗಳಿಗೆ ಮಠ ವಿದ್ಯೆ, ಅನ್ನದಾನ ಮಾಡುತ್ತಿದ್ದು, ಉಮಳಿಪನ್ನೂರು ಗ್ರಾಮಕ್ಕೆ ಶಿವಕುಮಾರ ಸ್ವಾಮಿಗಳು ಗ್ರಾಮದ ದೇವರಾಗಿದ್ದಾರೆ. ಗ್ರಾಮದ ಪ್ರತಿಯೊಬ್ಬರ ಮನೆಯಲ್ಲೂ ಶ್ರೀಗಳ ಭಾವಚಿತ್ರವಿದ್ದು, ನಿತ್ಯ ಪೂಜೆ ನಡೆಯುತ್ತದೆ. ಮನೆ ನಿರ್ಮಿಸಿಕೊಟ್ಟ ಬಳಿಕ ಪ್ರತಿ ವರ್ಷ ಗ್ರಾಮದ ಜನ ತಪ್ಪದೇ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯುವ ಸಂಪ್ರದಾಯವನ್ನು ಆರಂಭಿಸಿದ್ದಾರೆ. ಆದರೆ ಈಗ ಶ್ರೀಗಳು ಇನ್ನಿಲ್ಲ ಎನ್ನುವುದನ್ನು ಗ್ರಾಮಸ್ಥರಿಗೆ ಅರಗಿಸಿಕೊಳ್ಳಲು ಕಷ್ಟಸಾಧ್ಯವಾಗಿದೆ. ಇದನ್ನೂ ಓದಿಕಾಣೆಯಾಗಿದೆ ಸದಾ ಶ್ರೀಗಳ ಜೊತೆ ಓಡಾಡುತ್ತಿದ್ದ ನಾಯಿ!

    ಶಿವಕುಮಾರ ಸ್ವಾಮಿಜಿ ನೆನಪಿಗಾಗಿ ಗ್ರಾಮದಲ್ಲಿ ಅವರ ಮೂರ್ತಿಯನ್ನ ನಿರ್ಮಿಸಲು ಗ್ರಾಮಸ್ಥರು ಈಗ ಮುಂದಾಗಿದ್ದಾರೆ. ಗ್ರಾಮದಿಂದ 50 ಕ್ಕೂ ಹೆಚ್ಚು ಜನ ಸಿದ್ದಗಂಗಾ ಮಠಕ್ಕೆ ತೆರಳಿ ಶ್ರೀಗಳ ಅಂತಿಮ ದರ್ಶನವನ್ನ ಪಡೆದು ಬಂದಿದ್ದಾರೆ. ಉಳಿದವರು ಗ್ರಾಮದಲ್ಲೇ ಶಿವಕುಮಾರ ಶ್ರೀಗಳಿಗೆ ಪೂಜೆ ಮಾಡಿ ನಮನ ಸಲ್ಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶೋಕಾಚಾರಣೆ ಘೋಷಣೆ ನಡುವೆಯೂ ಅದ್ಧೂರಿಯಾಗಿ ಜನ್ಮದಿನ ಆಚರಿಸಿಕೊಂಡ ಬಿಜೆಪಿ ಶಾಸಕ

    ಶೋಕಾಚಾರಣೆ ಘೋಷಣೆ ನಡುವೆಯೂ ಅದ್ಧೂರಿಯಾಗಿ ಜನ್ಮದಿನ ಆಚರಿಸಿಕೊಂಡ ಬಿಜೆಪಿ ಶಾಸಕ

    – ಶಾಸಕ ದುರ್ಯೋಧನ ಐಹೊಳೆ ನಡೆಯಿಂದ ಬಿಜೆಪಿಗೆ ಮುಖಭಂಗ

    ಬೆಳಗಾವಿ (ಚಿಕ್ಕೋಡಿ): ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳು ಶಿವೈಕ್ಯರಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯಾದ್ಯಂತ ಮೂರು ದಿನಗಳ ಕಾಲ ಶೋಕಾಚಾರಣೆ ಘೋಷಿಸಿದೆ. ಆದರೆ ಬೆಳಗಾವಿ ಜಿಲ್ಲೆಯ ರಾಯಬಾಗದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಅವರು 63ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.

    ಜನ್ಮದಿನದ ನಿಮಿತ್ತ ಅನೇಕರಿಗೆ ಆಮಂತ್ರಣ ನೀಡಿದ್ದರಿಂದ ಸಾವಿರಾರು ಜನರು ಶಾಸಕರ ಸಾರೋಟ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಶಾಸಕರು ಹಾಗೂ ಧರ್ಮ ಪತ್ನಿ ಅವರನ್ನು ರಾಯಬಾಗ ಪಟ್ಟಣದಲ್ಲಿ ಮೆರವಣಿಗೆ ಮಾಡಿ, ಬಳಿಕ ವೇದಿಕೆಗೆ ಕರೆತರಲಾಯಿತು. ಆದರೆ ಹೆಸರಿಗೆ ಎಂಬಂತೆ ಸಾರೋಟದಲ್ಲಿ ಶಿವಕುಮಾರ ಶ್ರೀಗಳ ಭಾವ ಚಿತ್ರ ಇಟ್ಟು ಪೂಜೆ ಮಾಡಲಾಗಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಕಾಲು-ಬಾಯಿ ಜ್ವರದಿಂದ ಸಾವನ್ನಪ್ಪುತ್ತಿರುವ ರಾಸುಗಳು-ಇತ್ತ ರೆಸಾರ್ಟ್ ಸೇರಿಕೊಂಡ ಕ್ಷೇತ್ರದ ಶಾಸಕ ದುರ್ಯೋಧನ ಐಹೊಳೆ

    ಸಂಜೆಯೂ ಗಾಯನ ಸ್ಪರ್ಧೆ ಹೆಸರಿನಲ್ಲಿ ಮನರಂಜನೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಶೋಕಾಚರಣೆ ಹಾಗೂ ಭೀಕರ ಬರಗಾಲದ ನಡುವೆಯೂ ಶಾಸಕರು ಜನ್ಮದಿನಕ್ಕೆ ಲಕ್ಷಾಂತರ ಹಣ ಖರ್ಚು ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

    ಶೋಕಾಚರಣೆ ನಡುವೆಯೂ ಕಾಂಗ್ರೆಸ್ ಸಚಿವ ಪ್ರಿಯಾಂಕ ಖರ್ಗೆ ಸರ್ಕಾರಿ ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕೆ ಬಿಜೆಪಿ ಸೇರಿದಂತೆ ಹಲವು ಸಂಘಟನೆಗಳು ವಿರೋಧ ಮಾಡಿದ್ದವು. ಈಗ ಶಾಸಕ ದುರ್ಯೋಧನ ಐಹೊಳೆ ಅವರು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಬಿಜೆಪಿಗೆ ಸಾಕಷ್ಟು ಮುಜುಗುರ ತಂದಿದೆ. ಇದನ್ನೂ ಓದಿ: ಸರ್ಕಾರದಿಂದ ರಜೆ ಘೋಷಣೆ – ಸಮಾಜ ಕಲ್ಯಾಣ ಇಲಾಖೆಯಿಂದ ಫೈವ್‍ಸ್ಟಾರ್ ಹೋಟೆಲ್‍ನಲ್ಲಿ ಕಾರ್ಯಕ್ರಮ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿಮಗೆ ದೇವರ ದರ್ಶನ ಆಗಿದ್ಯಾ – ಶ್ರೀಗಳು ನೀಡಿದ ಉತ್ತರಕ್ಕೆ ಅಚ್ಚರಿಗೊಂಡ ಡಾ. ರೇಲಾ

    ನಿಮಗೆ ದೇವರ ದರ್ಶನ ಆಗಿದ್ಯಾ – ಶ್ರೀಗಳು ನೀಡಿದ ಉತ್ತರಕ್ಕೆ ಅಚ್ಚರಿಗೊಂಡ ಡಾ. ರೇಲಾ

    ಬೆಂಗಳೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ಹಿನ್ನೆಲೆಯಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿದ ಡಾ. ರೇಲಾ ಸ್ವಾಮೀಜಿ ಅವರನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೇ ಅವರ ಜೊತೆ ನಡೆದ ಒಂದು ಸಂದರ್ಭವನ್ನು ಹಂಚಿಕೊಂಡಿದ್ದಾರೆ.

    ಸಿದ್ದಗಂಗಾ ಶ್ರೀಗಳು ಎರಡು ತಿಂಗಳ ಹಿಂದೆ ಚೆನ್ನೈನ ರೇಲಾ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆ ನಡೆದ ಎರಡೇ ದಿನಗಳಲ್ಲಿ ಪವಾಡ ಸದೃಶ ರೀತಿಯಲ್ಲಿ ಶ್ರೀಗಳು ಚೇತರಿಸಿಕೊಂಡು ಐಸಿಯುನಲ್ಲೇ ಇಷ್ಟ ಲಿಂಗ ಪೂಜೆಯಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಡಾಕ್ಟರ್ ಮೊಹ್ಮದ್ ರೇಲಾ ಮತ್ತು ಶ್ರೀಗಳ ನಡುವೆ ಆಸಕ್ತಿಕರ ಸಂಭಾಷಣೆ ನಡೆದಿದೆ. ಶ್ರೀಗಳು ಲಿಂಗೈಕ್ಯರಾದ ಸಂದರ್ಭದಲ್ಲಿ ಡಾಕ್ಟರ್ ರೇಲಾ ಅವರು, ಅಂದು ಶ್ರೀಗಳೊಂದಿಗೆ ನಡೆದ ಸಂಭಾಷಣೆಯನ್ನು ತಮ್ಮ ಆಪ್ತರ ಜೊತೆ ಹಂಚಿಕೊಂಡಿದ್ದಾರೆ.

    ಡಾ.ರೇಲಾ ಹೇಳಿದ್ದು ಹೀಗೆ:
    “ಸ್ವಾಮೀಜಿ, ನೀವು ನಿತ್ಯ ಪೂಜೆ ಮಾಡುತ್ತೀರಿ ಅಲ್ಲವೇ? ನಿಮಗೆ ದೇವರ ದರ್ಶನ ಆಗಿದ್ಯಾ” ಎಂದು ನಾನು ಪ್ರಶ್ನೆ ಮಾಡಿದೆ. ಈ ವೇಳೆ ಸ್ವಾಮೀಜಿ ನಗುತ್ತಾ, “ಹೌದು. ನಾನು ದೇವರನ್ನು ನೋಡಿದ್ದೇನೆ” ಎಂದು ಉತ್ತರಿಸಿದರು. ಬಳಿಕ ನಾನು, “ಹಾಗಿದ್ದರೆ, ದೇವರು ಎಲ್ಲಿದ್ದಾರೆ ಹಾಗೂ ಹೇಗಿದ್ದಾರೆ ಎಂಬುದನ್ನು ನಮಗೂ ತೋರಿಸಿ” ಎಂದು ಕೇಳಿದೆ. ಅದಕ್ಕೆ ಸಿದ್ದಗಂಗಾ ಸ್ವಾಮೀಜಿ ಅವರು, “ಮತ್ತೊಮ್ಮೆ ನಗುತ್ತಾ ನನ್ನ ಮಠಕ್ಕೆ ಒಮ್ಮೆ ಬನ್ನಿ ನಾನು ನಿಮಗೆ 10 ಸಾವಿರ ದೇವರುಗಳನ್ನು ತೋರಿಸುತ್ತೇನೆ” ಎಂದು ಹೇಳಿದರು. ಈ ಉತ್ತರ ಕೇಳಿ ನಾನು ಆಶ್ಚರ್ಯಪಟ್ಟೆ. ಮತ್ತೆ ಮಾತನ್ನು ಮುಂದುವರಿಸಿದ ಶ್ರೀಗಳು, “ಹೌದು ನನಗೆ ಮಕ್ಕಳೇ ದೇವರು. ಅವರಲ್ಲಿ ನಾನು ದೇವರನ್ನು ಕಂಡಿದ್ದೇನೆ. ಮಠದ ಮಕ್ಕಳಿಗಾಗಿಯೇ ನಾನು ನಿತ್ಯ ಇಷ್ಟಲಿಂಗ ಪೂಜೆ ಮಾಡುತ್ತೇನೆ” ಎಂದು ಹೇಳಿದರು.

    ಶ್ರೀಗಳ ಈ ಮಾತುಗಳನ್ನು ಕೇಳಿ ಮೂಕವಿಸ್ಮಿತರಾಗಿ ಕ್ಷಣಕಾಲ ಡಾ. ರೇಲಾ ಅವರು ಮೌನಕ್ಕೆ ಜಾರಿದ್ದರಂತೆ. 111 ವರ್ಷದ ವಿಶ್ವ ಸಂತ, ಐಸಿಯುನಲ್ಲಿ ಇರುವಾಗಲೂ ಮಠದ ಮಕ್ಕಳಿಗಾಗಿ ಪೂಜೆ ಮಾಡುವುದು ಒಂದು ಮಹೋನ್ನತ ಸಂಗತಿಯೇ ಸರಿ ಎಂದು ರೇಲಾ ಅವರು ಹೇಳಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರತಿಷ್ಠಿತ ವ್ಯಕ್ತಿಗಳ ಮದ್ವೆಗೆ ಹೋಗ್ತಾರೆ, ಶ್ರೀಗಳ ನೋಡಲು ಮೋದಿಗೆ ಬರಲು ಸಮಯವಿಲ್ಲ- ಪರಮೇಶ್ವರ್

    ಪ್ರತಿಷ್ಠಿತ ವ್ಯಕ್ತಿಗಳ ಮದ್ವೆಗೆ ಹೋಗ್ತಾರೆ, ಶ್ರೀಗಳ ನೋಡಲು ಮೋದಿಗೆ ಬರಲು ಸಮಯವಿಲ್ಲ- ಪರಮೇಶ್ವರ್

    – ಡಿಸಿಎಂಗೆ ತಿರುಗೇಟು ಕೊಟ್ಟ ಪ್ರತಾಪ್ ಸಿಂಹ
    – ಕೋಟ್ಲರ್ ಪ್ರಶಸ್ತಿಗೆ ಪ್ರಧಾನಿ ಮೋದಿ ಅರ್ಹರೇ?

    ಬೆಂಗಳೂರು: ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಅಂತಿಮ ದರ್ಶನ ಹಾಗೂ ಕ್ರಿಯಾ ವಿಧಿವಿಧಾನಕ್ಕೆ ಬಾರದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ ಮೂಲಕ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ವ್ಯಂಗ್ಯವಾಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?:
    ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸಿದ್ಧ ವ್ಯಕ್ತಿಗಳ ಮದುವೆ ಸಮಾರಂಭ, ಸಿನಿಮಾ ಸಭೆಗಳಲ್ಲಿ ಭಾಗಿ ಆಗುತ್ತಾರೆ. ಆದರೆ ಅವರಿಗೆ ನಡೆದಾಡುವ ದೇವರು, ಬಡವರಿಗೆ ಶ್ರಮಿಸಿದ ಶ್ರೀ ಸಿದ್ದಗಂಗಾ ಸ್ವಾಮೀಜಿಗಳ ಕ್ರಿಯಾ ವಿಧಿವಿಧಾನಕ್ಕೆ ಬರಲು ಆಗಲಿಲ್ಲ. ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಪ್ರಧಾನಿಗಳ ಬಳಿ ಕೇಳಿಕೊಳ್ಳುವುದು ವ್ಯರ್ಥ ಎಂದು ವ್ಯಂಗ್ಯವಾಡಿದ್ದಾರೆ.

    ಕೋಟ್ಲರ್ ಪ್ರಶಸ್ತಿಗೆ ನಿಜವಾದ ಅರ್ಹತೆ ಹೊಂದಿದವರು ಪ್ರಧಾನಿ ನರೇಂದ್ರ ಮೋದಿ ಅವರಾ ಎಂದು ಪರಮೇಶ್ವರ್ ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದಾರೆ.

    ಡಿಸಿಎಂ ಜಿ.ಪರಮೇಶ್ವರ್ ಅವರ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ್ ಸಿಂಹ ಅವರು, ನಿಮ್ಮ ಪಕ್ಷದ ನಾಯಕಿ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎಲ್ಲಿ ಹೋಗಿದ್ದರು? ದಯವಿಟ್ಟು ನನ್ನ ಪಶ್ನೆಗೆ ಉತ್ತರ ಕೊಡಿ ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಖಾಕಿಗಳಿಗೆ ಸರ್ಕಾರದಿಂದ ವೇತನ ಹೆಚ್ಚಳದ ಉಡುಗೊರೆ!

    ಖಾಕಿಗಳಿಗೆ ಸರ್ಕಾರದಿಂದ ವೇತನ ಹೆಚ್ಚಳದ ಉಡುಗೊರೆ!

    ತುಮಕೂರು: ಖಾಕಿಗಳಿಗೆ ಸರ್ಕಾರದಿಂದ ವೇತನ ಹೆಚ್ಚಳದ ಉಡುಗೊರೆ ಸಿಕ್ಕಿದೆ. ಮುಂದಿನ ಬಜೆಟ್ ನಲ್ಲಿ ವೇತನವನ್ನು ಹೆಚ್ಚಿಸಲಾಗುವುದು ಎಂದು ಗೃಹ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

    ಗುರು ಸೇವೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಕ್ಕೆ ಮುಂದಿನ ಬಜೆಟ್ ನಲ್ಲಿ ಔರದ್ಕರ್ ವರದಿ ಜಾರಿ ಮಾಡಿ ಪೊಲೀಸರ ಬದುಕು ಹಸನು ಮಾಡುವ ಯೋಜನೆ ರೂಪಿಸುವುದಾಗಿ ಗೃಹ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

    ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಕೊನೆಯ ದರ್ಶನಕ್ಕೆ ಲಕ್ಷಾಂತರ ಜನರು ಬಿಸಿಲ ಧಗೆ, ಕತ್ತಲೆಯ ಮೌನ, ಮುಂಜಾವು ಯಾವುದನ್ನು ಲೆಕ್ಕಿಸದೇ ಜನರು ಮಠದ ಆವರಣದಲ್ಲಿ ಸೇರಿದ್ದರು. ಲಕ್ಷಾಂತರ ಜನ ಸೇರಿದರೂ ಕಿಂಚಿತ್ತೂ ಮಠದ ಆವರಣದಲ್ಲಿ ಶಿಸ್ತಿಗೆ ಲೋಪ ಬಾರದಂತೆ, ಕಾನೂನಿಗೆ ಧಕ್ಕೆ ಬಾರದಂತೆ ನಡೆದಾಡುವ ದೇವರನ್ನು ಶ್ರದ್ಧೆ ಭಕ್ತಿ ಪ್ರೀತಿಯಿಂದ ಅಂತಿಮ ವಿಧಿವಿಧಾನ ನಡೆಸಲಾಯಿತು. ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಕಾಯಕ ಯೋಗಿಯ ವಿಧಿವಿಧಾನ ನಡೆಯಿತು. ಇದನ್ನೂ ಓದಿ:  ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ ಸಿಎಂ ಕುಮಾರಸ್ವಾಮಿ

    ತುಮಕೂರು ಪೊಲೀಸರ ಜೊತೆ ಚಿಕ್ಕಬಳ್ಳಾಪುರ ಹಾಗೂ ಸುತ್ತಮುತ್ತ ಜಿಲ್ಲೆಯ ಸುಮಾರು ಮೂವತ್ತು ಸಾವಿರದಷ್ಟು ಪೊಲೀಸರ ದಂಡು ಸ್ಥಳದಲ್ಲಿ ನಿಯೋಜನೆಗೊಂಡಿತ್ತು. ಪೊಲೀಸ್ ಮಹಾನಿರ್ದೇಶಕಿ ನೀಲಮಣಿರಾಜು, ಕಮಲ್ ಪಂಥ್, ಐಜಿ ದಯಾನಂದ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಂ ಹೂಡಿ ಪ್ರತಿ ಕ್ಷಣವೂ ಮಾರ್ಗದರ್ಶನ ಕೊಡುತ್ತಿದ್ದರು. ಪೇದೆಗಳು ಒಂದು ಕ್ಷಣವೂ ವಿರಮಿಸದೇ ಪಾಳಿಗಳನ್ನು ಲೆಕ್ಕಿಸದೇ ಕೆಲಸ ಮಾಡಿದ್ದಾರೆ.

    ಪೊಲೀಸರ ಕಾರ್ಯಕ್ಕೆ ಸಿಎಂ ಕುಮಾರಸ್ವಾಮಿ ಸಹ ಮೆಚ್ಚುಗೆ ಸೂಚಿಸಿದ್ದಾರೆ. ಶ್ರೀಗಳಿಗೆ ಸರ್ಕಾರದ ಗೌರವ ವಂದನೆ ಸಲ್ಲಿಸಿದ ಬಳಿಕ ಮಾತನಾಡಿದ ಸಿಎಂ ಕುಮಾರಸ್ವಾಮಿ, ಭಕ್ತರು ಶ್ರೀಗಳ ದರ್ಶನ ಹಾಗೂ ಅಂತಿಮ ಕ್ರಿಯಾ ವಿಧಾನವರೆಗೂ ಪೊಲೀಸ್ ಇಲಾಖೆಗೆ ಸಹಕಾರ ನೀಡಿ ಶಾಂತಿಯಿಂದ ನಡೆದುಕೊಂಡ ಕಾರಣ ಧನ್ಯವಾದ ತಿಳಿಸಿದರು. ಅಲ್ಲದೇ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿದ್ದ ಪೊಲೀಸ್ ಇಲಾಖೆಯ ಕಾರ್ಯವನ್ನು ಶ್ಲಾಘಿಸಿ ಔರಾದ್ಕಾರ್ ವರದಿ ಜಾರಿ ಮಾಡುವುದಕ್ಕೆ ಶ್ರಮಿಸುತ್ತೇನೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಫಿನಾಡಲ್ಲಿ ಸಿದ್ದಗಂಗಾ ಶ್ರೀಗಳ ಹೆಜ್ಜೆ ಗುರುತು

    ಕಾಫಿನಾಡಲ್ಲಿ ಸಿದ್ದಗಂಗಾ ಶ್ರೀಗಳ ಹೆಜ್ಜೆ ಗುರುತು

    ಚಿಕ್ಕಮಗಳೂರು: ಬದುಕೇ ಒಂದು ಸಂದೇಶದಂತೆ 111 ವರ್ಷ ಸಾರ್ಥಕ ಬದುಕು ನಡೆಸಿದ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಹೆಜ್ಜೆ ಗುರುತುಗಳು ಕಾಫಿನಾಡಲ್ಲೂ ಸಾಕಷ್ಟಿವೆ.

    ಶೃಂಗೇರಿ ಮಠದ 35ನೇ ಗುರುಗಳಾದ ಅಭಿನವ ವಿದ್ಯಾತೀರ್ಥರ ವರ್ಧಂತ್ಯುತ್ಸವ ಅಂಗವಾಗಿ 1973ರಲ್ಲಿ ನಡೆದ ಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳನದಲ್ಲಿ ಸಿದ್ದಗಂಗಾ ಶ್ರೀಗಳು ಭಾಗವಹಿಸಿದ್ದರು. ಅದೇ ರೀತಿ 2003ರಲ್ಲಿ ರಂಭಾಪುರಿ ಪೀಠದಲ್ಲಿ ನಡೆದ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ರಥೋತ್ಸವದ ಅಂಗವಾಗಿ ಆಯೋಜಿಸಿದ್ದ ಗುರುವಿರಕ್ತರ ಸಮಾವೇಶದಲ್ಲೂ ಸಿದ್ದಗಂಗಾ ಶ್ರೀಗಳು ಪಾಲ್ಗೊಂಡಿದ್ದರು.

    1995ರಲ್ಲಿ ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿಯಲ್ಲಿ ಉದ್ಯೋಗಿಗಳಾಗಿದ್ದ ವೀರಶೈವ ಸಮುದಾಯದವರು ಮಾಡಿಕೊಂಡಿದ್ದ ಬಸವ ಸಮಿತಿ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಶ್ರೀಗಳು ಉಪಸ್ಥಿತರಿದ್ದರು. ಇದೇ ವೇಳೆ ಕುದುರೆಮುಖದಲ್ಲಿ ಸ್ವಾಮೀಜಿ ಗಿಡವೊಂದನ್ನು ನೆಟ್ಟು, ಇಡೀ ಕುದುರೆಮುಖ ಕಂಪನಿಯನ್ನು ವೀಕ್ಷಣೆ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀಗಳು ಇಲ್ಲದ ರಾತ್ರಿ ಕಳೆದ ಮಠದ ಮಕ್ಕಳು- ಒಬ್ಬರಿಗೆ ಒಬ್ಬರು ಆಸರೆಯಾಗಿ ಮಲಗಿದ್ರು

    ಶ್ರೀಗಳು ಇಲ್ಲದ ರಾತ್ರಿ ಕಳೆದ ಮಠದ ಮಕ್ಕಳು- ಒಬ್ಬರಿಗೆ ಒಬ್ಬರು ಆಸರೆಯಾಗಿ ಮಲಗಿದ್ರು

    ತುಮಕೂರು: ಸಿದ್ದಗಂಗಾ ಶ್ರೀ ಶಿವೈಕ್ಯಗೊಂಡ ಹಿನ್ನಲೆಯಲ್ಲಿ ಮಠದ ಮಕ್ಕಳು ಶ್ರೀಗಳು ಇಲ್ಲದ ರಾತ್ರಿಯನ್ನು ಕಳೆದಿದ್ದಾರೆ. ಒಬ್ಬರಿಗೆ ಒಬ್ಬರು ಆಸರೆಯಾಗಿ ಮಲಗಿರುವ ದೃಶ್ಯ ಮನಕಲುಕುವಂತೆ ಇತ್ತು.

    ಸೋಮವಾರ ಶ್ರೀಗಳು ಶಿವೈಕ್ಯ ವಿಚಾರ ತಿಳಿದು ಮಕ್ಕಳು ಭಾವುಕರಾಗಿದ್ದರು. ಸಿದ್ದಗಂಗಾ ಮಠದಲ್ಲೇ ಮಕ್ಕಳು ರಾತ್ರಿಯನ್ನು ಕಳೆದಿದ್ದಾರೆ. ಅಲ್ಲದೇ ಮಠದಲ್ಲೇ ಸಾವಿರಾರು ಭಕ್ತರು ಮಲಗಿದ್ದರು. ಬೇರೆ ಬೇರೆ ಜಿಲ್ಲೆಗಳಿಂದ ಶ್ರೀಗಳ ದರ್ಶನಕ್ಕೆ ಬಂದ ಭಕ್ತರು ಹೊಸ ಮಠದ ಆವರಣ ಸೇರಿದಂತೆ ಹಲವೆಡೆ ಮಲಗಿದ್ದರು.

    ಸಿದ್ದಗಂಗಾ ಮಠದ ವಿದ್ಯಾರ್ಥಿಗಳು ಹಾಸ್ಟೆಲ್ ಆವರಣದೊಳಗೆ ಸಾಮೂಹಿಕ ಪ್ರಾರ್ಥನೆ ನಡೆಸಿದ್ದಾರೆ. ಪ್ರಾಣಿಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಶ್ರೀಗಳು ಮಠದ ಆವರಣದಲ್ಲಿ ಅನೇಕ ಬೀದಿನಾಯಿಗಳಿಗೆ ಖುದ್ದು ಆಹಾರ ನೀಡುತ್ತಿದ್ದರು. ಇಂದು ವಿದ್ಯಾರ್ಥಿಗಳ ಪ್ರಾರ್ಥನೆಯ ಸಮಯದಲ್ಲಿ ಶಾಲಾ ಅವರಣದಲ್ಲಿ ನಾಯಿಯೊಂದು ಮಲಗಿದ್ದ ದೃಶ್ಯ ಕಂಡುಬಂತು.

    ಪ್ರತಿದಿನ ಬೆಳಗ್ಗೆ ಶಿವಕುಮಾರ ಸ್ವಾಮಿಜಿಗಳೇ ಮಕ್ಕಳಿಗೆ ಪ್ರಾರ್ಥನೆ ಹೇಳಿಕೊಡುತ್ತಿದ್ದರು. ಆದರೆ ಈಗ ಅವರ ಅಗಲಿಕೆಯಿಂದಾಗಿ ಮಕ್ಕಳು ಗೋಸಲ ಸಿದ್ದೇಶ್ವರ ವೇದಿಕೆ ಮುಂದೆ ಪ್ರಾರ್ಥನೆ ಮಾಡುತ್ತಿದ್ದಾರೆ. ಶಾಲಾ ಮಕ್ಕಳು ಶ್ರೀಗಳನ್ನು ನೆನೆದು ಬೆಳಗಿನ ಪ್ರಾರ್ಥನೆ ಸಲ್ಲಿಸಿದ್ದಾರೆ. ಸೋಮವಾರ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ವಿಷಯ ತಿಳಿದು ಮಠದ ಮಕ್ಕಳು ಬಿಕ್ಕಳಿಸಿ ಸುಡುಬಿಸಿಲಿನಲ್ಲಿಯೇ ನಿಂತು ಅಳುತ್ತಿದ್ದರು.

    ಶ್ರೀಗಳು ತಮ್ಮ ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ. ತಾವು ಮೃತಪಟ್ಟರೆ ಮಕ್ಕಳು ಮಧ್ಯಾಹ್ನದ ಭೋಜನವನ್ನು ಸ್ವೀಕರಿಸಿದ ಬಳಿಕವಷ್ಟೇ ಘೋಷಣೆ ಮಾಡಬೇಕು. ಯಾಕಂದ್ರೆ ಅವರು ಹಸಿವಿನಿಂದ ಇರುವುದು ತಮಗೆ ಇಷ್ಟವಿಲ್ಲ ಎಂದು ಮಠದ ಸಿಬ್ಬಂದಿ ಬಳಿ ತಮ್ಮ ಕೊನೆಯ ಆಸೆಯನ್ನು ಹೇಳಿಕೊಂಡಿದ್ದರು. ಹಾಗಾಗಿ ಸೋಮವಾರ ಶ್ರೀಗಳು ಬೆಳಗ್ಗೆ 11.44ಕ್ಕೆ ಶಿವೈಕ್ಯರಾದ್ರೂ ಮಠದ ಸಿಬ್ಬಂದಿ, ಮಕ್ಕಳು ಊಟ ಮಾಡಿದ ಮೇಲೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಅಂದರೆ ಸುಮಾರು ಮಧ್ಯಾಹ್ನ 1.56ಕ್ಕೆ ವೈದ್ಯರು ಶ್ರೀಗಳು ಸಾವಿನ ವಿಚಾರವನ್ನು ಘೋಷಣೆ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತುಮಕೂರು ನಗರ ಪ್ರವೇಶದ ಮಾರ್ಗ ಬದಲಾವಣೆ

    ತುಮಕೂರು ನಗರ ಪ್ರವೇಶದ ಮಾರ್ಗ ಬದಲಾವಣೆ

    ಬೆಂಗಳೂರು: ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳು ಶಿವೈಕ್ಯರಾದ ಸುದ್ದಿ ತಿಳಿಯುತ್ತಿದ್ದಂತೆ ಸಿದ್ದಗಂಗಾ ಮಠಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಜನಸಾಗರವೇ ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ತುಮಕೂರಿಗೆ ಬರುವವರ ಹಾಗೂ ತುಮಕೂರು ಮೂಲಕ ಬೆಂಗಳೂರು, ಉತ್ತರ ಕರ್ನಾಟಕದ ಕಡೆಗೆ ಹೋಗುವ ಮಾರ್ಗವನ್ನು ಬದಲಿಸಲಾಗಿದೆ.

    ರಾಷ್ಟ್ರೀಯ ಹೆದ್ದಾರಿ-04 ಮಾರ್ಗದಲ್ಲಿ ಕ್ಯಾತ್ಸಂದ್ರದಿಂದ ಸರ್ಕಲ್‍ವರೆಗೂ ಎಲ್ಲ ರೀತಿಯ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಜೊತೆಗೆ ಕೆಲವು ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ಸಿದ್ದಗಂಗಾ ಮಠಕ್ಕೆ ಬರುವ ಭಕ್ತರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಗಣ್ಯರು ಹೆಲಿಕಾಪ್ಟರ್ ಮೂಲಕ ಮಠಕ್ಕೆ ಭೇಟಿ ನೀಡುವ ಹಿನ್ನಲೆಯಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಇದನ್ನೂ ಓದಿ: ಅಂತ್ಯಸಂಸ್ಕಾರಕ್ಕೆ ಶಿವಣ್ಣನಾಗಿ ಬಂದವರು ಶಿವಕುಮಾರ ಸ್ವಾಮೀಜಿಯಾದ್ರು!

    ಮಾರ್ಗ ಬದಲಾವಣೆ ಹೇಗಿದೆ?:
    ಶಿರಾ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ವಾಹನಗಳು ಮಧುಗಿರಿ, ಕೊರಟಗೆರೆ, ದಾಬಸಪೇಟೆ ಮಾರ್ಗವಾಗಿ ತೆರಳಲಿವೆ. ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುವ ವಾಹನಗಳು ಗುಬ್ಬಿ ಗೇಟ್ ರಿಂಗ್ ರಸ್ತೆ ಮೂಲಕ ಕುಣಿಗಲ್ ಜಂಕ್ಷನ್ ಬಳಿ ಬಲಕ್ಕೆ ತಿರುಗಿ ಗೂಳೂರು ಮೂಲಕ ಸಾಗುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ. ಬೆಂಗಳೂರಿನಿಂದ ತುಮಕೂರಿಗೆ ಆಗಮಿಸುವ ವಾಹನಗಳು ಗುಬ್ಬಿ ರಿಂಗ್ ರಸ್ತೆ ಮುಖಾಂತರ ನಗರವನ್ನು ಪ್ರವೇಶಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

    ಶಿರಾ ಕಡೆಯಿಂದ ತುಮಕೂರು ನಗರಕ್ಕೆ ಬರುವ ಸಾರ್ವಜನಿಕರು ರಂಗಾಪುರ ಬ್ರಿಡ್ಜ್ ಬಳಿ ಸರ್ವಿಸ್ ರಸ್ತೆ, ಶ್ರೀದೇವಿ ಕಾಲೇಜ್ ಮುಖಾಂತರ ತುಮಕೂರು ತಲುಪಬಹುದು.

    https://youtu.be/jtctwPaRF7o

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಕ್ತರ ಮನೆಗೆ ಪೂಜೆಗೆಂದು ಬಂದು ಪಾದುಕೆ ಬಿಟ್ಟು ಹೋಗಿದ್ರು!

    ಭಕ್ತರ ಮನೆಗೆ ಪೂಜೆಗೆಂದು ಬಂದು ಪಾದುಕೆ ಬಿಟ್ಟು ಹೋಗಿದ್ರು!

    ಚಾಮರಾಜನಗರ: ನಡೆದಾಡುವ ದೇವರು ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳು ಹತ್ತು ವರ್ಷಗಳ ಹಿಂದೆ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು.

    ಇಲ್ಲಿನ ನಿಜಗುಣ ರಾಜು ಮನೆಗೆ ಪೂಜೆಗೆಂದು ಬಂದಿದ್ದ ಶ್ರೀಗಳು ಪೂಜೆಯ ನಂತರ ತಮ್ಮ ಪಾದುಕೆಗಳನ್ನು ಬಿಟ್ಟು ಹೋಗಿದ್ದಾರೆ. ಅಂದಿನಿಂದಲೂ ಈ ಭಕ್ತರ ಮನೆಯಲ್ಲಿ ಶ್ರೀಗಳ ಪಾದುಕೆಗೂ ನಿತ್ಯ ಪೂಜೆ ನಡೆಯುತ್ತಿದೆ. ಅಂದು 101 ವರ್ಷಗಳಾಗಿದ್ದರೂ ದೂರದ ತುಮಕೂರಿನಿಂದ ಚಾಮರಾಜನಗರದವರೆಗೂ ಕಾರಿನಲ್ಲಿ ಬಂದಿದ್ದರು.

    ಬೆಳಗ್ಗೆಯಿಂದ ಸಂಜೆಯವರೆಗೂ ಇಲ್ಲಿಯೇ ಇದ್ದು ಭಕ್ತರಿಗೆ ದರ್ಶನ ಭಾಗ್ಯ ನೀಡಿದ್ದ ಡಾ. ಶಿವಕುಮಾರ ಸ್ವಾಮಿಗಳು ಎಲ್ಲರನ್ನು ಲವಲವಿಕೆಯಿಂದಲೇ ಮಾತನಾಡಿಸಿದ್ದರು. ಈ ಪಾದುಕೆಗಳನ್ನು ತಮ್ಮ ಮನೆಯಲ್ಲಿ ಬಿಟ್ಟು ಹೋದ ನಂತರ ತಮಗೆ ಎಲ್ಲಾ ರೀತಿಯ ಅನುಕೂಲಗಳು ಉಂಟಾಗಿವೆ. ಶ್ರೀಗಳ ಪಾದುಕೆಗಳೇ ತಮಗೆ ಶ್ರೀರಕ್ಷೆಯಾಗಿವೆ ಎನ್ನುವ ಅವರು ಪ್ರತಿನಿತ್ಯ ಈ ಪಾದುಕೆಗಳನ್ನು ಪೂಜಿಸಿದ ನಂತರವಷ್ಟೇ ತಮ್ಮ ಇತರ ಕೆಲಸಗಳನ್ನು ಆರಂಭಿಸುತ್ತೇವೆ ಎನ್ನುತ್ತಾರೆ.

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ(111) ಇಂದು ನಿಧನರಾಗಿದ್ದಾರೆ. ನಡೆದಾಡುವ ದೇವರೇ ಎಂದು ಕರೆಸಿಕೊಳ್ಳುತ್ತಿದ್ದ ಶ್ರೀಗಳು ಅಪಾರ ಭಕ್ತರನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಈಗಾಗಲೇ ನಾಡಿನಾದ್ಯಂತ ಮೌನ ಆವರಿಸಿದ್ದು, ಶ್ರೀಗಳ ಅಂತಿಮ ದರ್ಶನ ಪಡೆಯಲು ಭಕ್ತರು ಕಾಯುತ್ತಿದ್ದಾರೆ. ಸಿದ್ದಗಂಗಾ ಮಠದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಾರ್ವಜನಿಕರು ಶಾಂತಿಯಿಂದ ಇರಬೇಕು ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv