Tag: Siddaganga Shri

  • ಏ.1ರಂದು ಶಿವೈಕ್ಯ ಸಿದ್ದಗಂಗಾ ಶ್ರೀಗಳ 112ನೇ ಜಯಂತಿ- 112 ಕಂದಮ್ಮಗಳಿಗೆ ನಾಮಕರಣ

    ಏ.1ರಂದು ಶಿವೈಕ್ಯ ಸಿದ್ದಗಂಗಾ ಶ್ರೀಗಳ 112ನೇ ಜಯಂತಿ- 112 ಕಂದಮ್ಮಗಳಿಗೆ ನಾಮಕರಣ

    ತುಮಕೂರು: ಏಪ್ರಿಲ್ 1ರಂದು ಶ್ರೀ ಸಿದ್ದಗಂಗಾ ಸ್ವಾಮೀಜಿಗಳ 112ನೇ ಜಯಂತಿ. ಈ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಸ್ವಾಮೀಜಿಗಳ ಜಯಂತಿ ಹಾಗೂ ಗುರುವಂದನೆ ಕಾರ್ಯಕ್ರಮಕ್ಕೆ ವಿವಿಧ ಸಿದ್ಧತೆಗಳು ನಡೆಯುತ್ತಿವೆ. ಸ್ವಾಮೀಜಿಗಳು ಇಲ್ಲ ಎನ್ನುವ ನೋವಿನಲ್ಲೂ ಅವರ ನೆನಪನ್ನು ಮರುಕಳಿಸುವ ಹಲವು ಕಾರ್ಯಕ್ರಮಗಳು ನಡೆಯಲಿವೆ. ವಿಶೇಷ ಅಂದರೆ “ದೇವರ” ಹುಟ್ಟುಹಬ್ಬದಂದು 112 ಮಕ್ಕಳಿಗೆ ಶಿವಕುಮಾರ ಶ್ರೀಗಳ ಹೆಸರನಿಟ್ಟು ನಾಮಕರಣ ಮಾಡಲಾಗುತ್ತಿದೆ.

    ನಡೆದಾಡುವ ದೇವರು ಶಿವೈಕ್ಯ ಶಿವಕುಮಾರ ಶ್ರೀಗಳು ಈಗ ನಮ್ಮೊಂದಿಗೆ ಇಲ್ಲ. ಅವರಿಲ್ಲದ ಮೊದಲ ಜನ್ಮದಿನ ಅಂದರೆ ಶಿವಕುಮಾರ ಶ್ರೀಗಳ ಜಯಂತಿಗೆ ಶ್ರೀಮಠ ಸಕಲ ಸಿದ್ಧತೆ ಮಾಡಿಕೊಂಡಿದೆ. ಏಪ್ರಿಲ್ 1 ರಂದು ಶ್ರೀಗಳ 112ನೇ ಜಯಂತಿ ನಡೆಯಲಿದೆ. ವಿವಿಧ ಮಠಾಧೀಶರು, ಮೈಸೂರು ರಾಜವಂಶಸ್ಥ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ. ಶ್ರೀಗಳ ಸ್ಮರಣೆ, ಗದ್ದುಗೆ ಪೂಜೆ, ಪ್ರವಚನ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ಅಂದು ನಡೆಯಲಿದೆ.

    ಇಂದಿನಿಂದಲೇ ಹಲವು ಸಿದ್ಧತೆಗಳು ನಡೆಯುತ್ತಿವೆ. ಚುನಾವಣೆಯ ಹಿನ್ನೆಲೆ ಯಾವುದೇ ರಾಜಕೀಯ ನಾಯಕರು ಬರೋದಿಲ್ಲ. ವಿಶೇಷ ಅಂದರೆ ಶ್ರೀಗಳ 112ನೇ ಜಯಂತಿಯಂದು 112 ಮಕ್ಕಳಿಗೆ ನಾಮಕರಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. 112 ಮಕ್ಕಳಿಗೂ ಶಿವಕುಮಾರ ಸ್ವಾಮೀಜಿಗಳ ಹೆಸರನ್ನು ನಾಮಕರಣ ಮಾಡಲಾಗುವುದು. ಈಗಾಗಲೇ ನೂರಕ್ಕೂ ಹೆಚ್ಚು ಮಕ್ಕಳ ಹೆಸರು ನೋಂದಣಿಯಾಗಿದೆ. ನಾಮಕರಣದಲ್ಲಿ ಭಾಗಿಯಾದ ಮಕ್ಕಳಿಗೆ ಮಠದ ವತಿಯಿಂದ ತೊಟ್ಟಿಲು, ಹಾಸಿಗೆ ಹಾಗೂ ನಾಮಕರಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತಿದೆ.

    ಪ್ರತಿ ವರ್ಷ ಹುಟ್ಟುಹಬ್ಬಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಬಂದು ಸ್ವಾಮೀಜಿಗಳ ದರ್ಶನ ಪಡೆಯುತ್ತಿದ್ದರು. ಆದರೆ ಈ ಬಾರಿ ಸ್ವಾಮೀಜಿಗಳು ಇಲ್ಲ ಎನ್ನುವ ನೋವಿನಲ್ಲಿಯೇ ಭಕ್ತಗಣ ಏಪ್ರಿಲ್ 1ಕ್ಕೆ ಬರಲು ಸಜ್ಜಾಗಿ ನಿಂತಿದೆ. ಈ ನಡುವೆ ಮಠದ ಆಡಳಿತ ಮಂಡಳಿ 112 ಮಕ್ಕಳಿಗೆ ಶ್ರೀಗಳ ಹೆಸರನ್ನೇ ನಾಮಕರಣ ಮಾಡುವುದರ ಮೂಲಕ ಶ್ರೀಗಳಿಲ್ಲದ ಮೊದಲ ಜಯಂತಿಯನ್ನು ಸದಾ ಸ್ಮರಿಸುವಂತೆ ಮಾಡುತ್ತಿರುವುದು ಶ್ಲಾಘನೀಯ.

  • ಕೃಷಿಮೇಳ-ಫಲಪುಷ್ಪ ಪ್ರದರ್ಶನದಲ್ಲಿ ಕಣ್ಮನ ಸೆಳೆದ ಶಿವಕುಮಾರ ಶ್ರೀಗಳ ಕಲಾಕೃತಿ

    ಕೃಷಿಮೇಳ-ಫಲಪುಷ್ಪ ಪ್ರದರ್ಶನದಲ್ಲಿ ಕಣ್ಮನ ಸೆಳೆದ ಶಿವಕುಮಾರ ಶ್ರೀಗಳ ಕಲಾಕೃತಿ

    ಚಿಕ್ಕಬಳ್ಳಾಪುರ: ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕೃಷಿಮೇಳದಲ್ಲಿ ಶಿವೈಕ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಮರಳಿನ ಪ್ರತಿಮೆ ಎಲ್ಲರ ಮನ ಸೆಳೆಯುತ್ತಿದೆ.

    ಸಾವಯುವ ಮತ್ತು ಸಿರಿಧಾನ್ಯ ಹಾಗೂ ಫಲಪುಷ್ಪ ಪ್ರದರ್ಶನದಲ್ಲಿ ಶ್ರೀಗಳ ಮರಳಿನಲ್ಲಿ ಪ್ರತಿಮೆ ನಿರ್ಮಿಸಲಾಗಿದ್ದು, ಕೃಷಿ ಮೇಳಕ್ಕೆ ಭೇಟಿ ನೀಡಿದ ಅನೇಕರು ಕಲಾಕೃತಿಗೆ ನಮನ ಸಲ್ಲಿಸಿದ್ದಾರೆ. ಮರಳಿನ ಪ್ರತಿಮೆ ಅಷ್ಟೇ ಅಲ್ಲದೆ ತರಕಾರಿಯಲ್ಲಿಯೂ ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳ ಕಲಾಕೃತಿ ಅರಳಿದೆ.

    ಪುಷ್ಪಗಳಲ್ಲಿ ಅರಳಿ ನಿಂತಿರುವ ಕೆಂಪುಕೋಟೆ ಜನಾಕರ್ಷಣೀಯವಾಗಿದೆ. ಮಹಾತ್ಮಾ ಗಾಂಧೀಜಿ ಅವರ ಸಬರಮತಿ ಆಶ್ರಮ, ಭಾರತ ರತ್ನ ಸರ್ ಎ.ವಿಶ್ವೇಶ್ವರಯ್ಯ ಅವರ ಪ್ರತಿಮೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಎರಡು ದಿನಗಳ ಕಾಲ ನಡೆಯುವ ಕೃಷಿ ಮೇಳದಲ್ಲಿ ನೂರಾರು ಕೃಷಿ ಪರಿಕರ ಮಳಿಗೆಗಳು ತೆರೆಯಲಾಗಿದೆ.

    ಕೃಷಿ ಮೇಳದ ನಿಮಿತ್ತ ಎರಡೂ ದಿನ ಬೆಳಿಗ್ಗೆ 7 ಗಂಟೆಯಿಂದಲೂ ಸಂಜೆ 7 ಗಂಟೆಯವರೆಗೆ ವಿವಿಧ ಕಾರ್ಯಕ್ರಮಗಳನ್ನ ಆಯೋಜಿಸಲಾಗಿದೆ. ಈ ಕೃಷಿ ಮೇಳವನ್ನು ಕೃಷಿ ಸಚಿವ ಶಿವಶಂಕರರೆಡ್ಡಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಡಾ. ಸುಧಾಕರ್ ವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಶ್ರೀಗಳ ಪುಣ್ಯಾರಾಧನೆಯಲ್ಲಿ ನಿರ್ಲಕ್ಷ್ಯ- ಭಕ್ತಾದಿಗಳು ಕುಸಿದು ಬಿದ್ದರೂ ಸಹಾಯಕ್ಕೆ ಬಾರದ ಪಿಎಸ್‍ಐ

    ಶ್ರೀಗಳ ಪುಣ್ಯಾರಾಧನೆಯಲ್ಲಿ ನಿರ್ಲಕ್ಷ್ಯ- ಭಕ್ತಾದಿಗಳು ಕುಸಿದು ಬಿದ್ದರೂ ಸಹಾಯಕ್ಕೆ ಬಾರದ ಪಿಎಸ್‍ಐ

    ತುಮಕೂರು: ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ದಿನ ಹಾಗೂ ಪುಣ್ಯಾರಾಧನೆ ದಿನವನ್ನು ಬಿಗಿ ಬಂದೋಬಸ್ತ್ ನೀಡಿ ಯಾವುದೇ ಸಮಸ್ಯೆ ಆಗದಂತೆ ಕಾರ್ಯನಿರ್ವಹಿಸಿದ ಪೊಲೀಸರಿಗೆ ಧನ್ಯವಾದ ಹೇಳಲೇಬೇಕು. ಆದರೆ ಇದಕ್ಕೆ ಅಪವಾದ ಎಂಬಂತೆ ಪುಣ್ಯಾರಾಧನೆಯ ದಿನ ಪಿಎಸ್‍ಐ ಬಂದೋಬಸ್ತ್ ಮಾಡೋದನ್ನು ಬಿಟ್ಟು ಪ್ರೋಬೆಷನರಿ ಮಹಿಳಾ ಡಿವೈಎಸ್‍ಪಿ ಜೊತೆ ಸುಧೀರ್ಘ ಸಂಭಾಷಣೆ ನಡೆಸಿ ನಿರ್ಲಕ್ಷ್ಯ ತೋರಿದ್ದ ವಿಡಿಯೋ ಈಗ ವೈರಲ್ ಆಗಿದೆ.

    ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಠಾಣಾ ಪಿಎಸ್ ನವೀನ್ ಕುಮಾರ್, ಪ್ರೋಬೇಷನರಿ ಮಹಿಳಾ ಡಿವೈಎಸ್‍ಪಿ ಜೊತೆ ನಿರಂತರ ಮಾತುಕತೆ ನಡೆಸುತ್ತಾ, ಮೊಬೈಲಿನಲ್ಲಿ ಕಾಲಹರಣ ಮಾಡಿ ಸಾರ್ವಜನಿಕರ ವಿರೋಧಕ್ಕೆ ತುತ್ತಾಗಿದ್ದಾರೆ. ಪಿಎಸ್‍ಐ ನವೀನ್‍ನನ್ನು ಶ್ರೀಗಳ ಗದ್ದುಗೆ ಮುಂದೆ ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿತ್ತು.

    ಮಧ್ಯಾಹ್ನದ ವೇಳೆ ಬಿರುಬಿಸಿಲಿನಲ್ಲಿ ಭಕ್ತಾದಿಗಳ ಸಂಖ್ಯೆಯೂ ಹೆಚ್ಚಾಗಿತ್ತು. ಹಲವರು ತಲೆ ಸುತ್ತಿನಿಂದಾಗಿ ಕುಸಿದು ಬಿದ್ದಿದ್ದರು. ನೂಕಾಟ ತಳ್ಳಾಟ ಜೋರಾಗಿತ್ತು. ಇವೆಲ್ಲವೂ ಪಿಎಸ್‍ಐ ನವೀನ್ ಮುಂದೆ ನಡೆಯುತಿತ್ತು. ಇದ್ಯಾವುದರ ಪರಿವೇ ಇಲ್ಲದ ನವೀನ್ ಪ್ರೋಬೇಷನರಿ ಮಹಿಳಾ ಡಿವೈಎಸ್‍ಪಿ ಜೊತೆ ಸುಧೀರ್ಘ ಸಂಭಾಷಣೆಯಲ್ಲಿ ತೊಡಗಿಕೊಂಡಿದ್ದರು.

    ನವೀನ್ ಕುಮಾರ್ ಎದುರಲ್ಲೇ ಹಲವು ಭಕ್ತಾದಿಗಳು ಕುಸಿದು ಬಿದಿದ್ದಾರೆ. ಅವರ ಸಹಾಯಕ್ಕೂ ನವೀನ್ ಹೋಗಲಿಲ್ಲ. ಅಷ್ಟೇ ಅಲ್ಲದೇ ಈ ಇಬ್ಬರೂ ಪೊಲೀಸ್ ಅಧಿಕಾರಿಗಳು ಒರಗಿಕೊಂಡಿದ್ದ ಬ್ಯಾರಿಕೇಡ್ ನ ಕ್ಯೂನಲ್ಲಿ ಜನರ ನೂಕಾಟ ತಳ್ಳಾಟ ಜೋರಾಗಿತ್ತು. ಸ್ವಲ್ಪ ಯಾಮಾರಿದರೂ ಕಾಲ್ತುಳಿತ ನಡೆಯುತಿತ್ತು.

    ಈ ಸನ್ನಿವೇಶವನ್ನು ಕಂಡು ಕಾಣದಂತಿದ್ದ ನವೀನ್ ಸುದೀರ್ಘ ಮಾತುಕತೆಯಲ್ಲಿ ತೊಡಗಿದ್ದನು. ಮೊಬೈಲ್ ಫೋನಿನಲ್ಲಿ ಬ್ಯುಸಿಯಾಗಿದ್ದ. ಕರ್ತವ್ಯ ಮರೆತು ಬೇರೆಯದ್ದೇ ಲೋಕದಲ್ಲಿದ್ದ ಈ ಅಧಿಕಾರಿಗಳ ವಿಡಿಯೋ ಈಗ ವೈರಲ್ ಆಗಿದ್ದು, ಇವರಿಬ್ಬರ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ವಿದ್ಯಾರ್ಥಿಯ ನೀತಿ ಪಾಠದ ಎಫೆಕ್ಟ್ – ದಾಸೋಹದಲ್ಲಿ ಅನ್ನ ಬಿಡದೇ ತಟ್ಟೆ ಖಾಲಿ ಮಾಡಿದ ಭಕ್ತರು

    ವಿದ್ಯಾರ್ಥಿಯ ನೀತಿ ಪಾಠದ ಎಫೆಕ್ಟ್ – ದಾಸೋಹದಲ್ಲಿ ಅನ್ನ ಬಿಡದೇ ತಟ್ಟೆ ಖಾಲಿ ಮಾಡಿದ ಭಕ್ತರು

    ತುಮಕೂರು: ಸಿದ್ದಗಂಗಾ ಶ್ರೀಗಳ 11ನೇ ದಿನದ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಭಕ್ತರು ಹಾಕಿಕೊಂಡ ಅನ್ನವನ್ನು ವ್ಯರ್ಥ ಮಾಡದೇ ತಟ್ಟೆಯನ್ನು ಖಾಲಿ ಮಾಡಿ ಸಂತಸಪಟ್ಟಿದ್ದಾರೆ.

    ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದ ವೇಳೆ ಅನ್ನ ಎಸೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಭಕ್ತರೊಬ್ಬರಿಗೆ ಮಠದ ವಿದ್ಯಾರ್ಥಿ ಅನ್ನದ ಮಹತ್ವವನ್ನು ತಿಳಿಸಿದ್ದ ವಿಡಿಯೋ ಒಂದು ವೈರಲ್ ಆಗಿತ್ತು. ಈ ವಿಡಿಯೋದ ಪ್ರಭಾವ ಏನೋ ಎಂಬಂತೆ ಭಕ್ತರು ಇಂದು ಎಷ್ಟು ಅನ್ನಬೇಕೋ ಅಷ್ಟೇ ಪ್ರಮಾಣದ ಅನ್ನವನ್ನು ಹಾಕಿಕೊಂಡು ತಿಂದಿದ್ದಾರೆ. ಇದನ್ನು ಓದಿ: ಅನ್ನ ಚೆಲ್ಲಲು ಬಂದ ಭಕ್ತನಿಗೆ ಮಠದ ವಿದ್ಯಾರ್ಥಿಯಿಂದ ಅನ್ನದ ಪಾಠ! – ವಿಡಿಯೋ ನೋಡಿ

    ಪುಣ್ಯಾರಾಧನೆಗೆ ಆಗಮಿಸಿದ 5 ಲಕ್ಷ ಭಕ್ತರಿಗಾಗಿ ನಿರಂತರವಾಗಿ ವಿವಿಧ ರೀತಿಯ ಪ್ರಸಾದವನ್ನು ತಯಾರಿಸಲಾಗುತ್ತಿದೆ. ಮಠದ ಆವರಣದಲ್ಲಿ ವಿವಿಧ ರೀತಿಯ ಪ್ರಸಾದವನ್ನು ಸಿದ್ಧ ಮಾಡುತ್ತಿದ್ದಾರೆ. ನೂರಾರು ಭಕ್ತರು ಸ್ವಯಂ ಪ್ರೇರಿತವಾಗಿ ದಾಸೋಹದ ಸಿದ್ಧತಾ ಕಾರ್ಯದಲ್ಲಿ ರಾತ್ರಿಯಿಡಿ ತೊಡಗಿಕೊಂಡಿದ್ದರು. ಈಗಾಗಲೇ 69 ಕ್ವಿಂಟಾಲ್ ಸಿಹಿ ಬೂಂದಿ ತಯಾರಿಸಲಾಗಿದೆ. ಇದನ್ನು ಓದಿ: ಜನ ಈಗ ಸಾಹುಕಾರರಾಗಿದ್ದಾರೆ, ಹೀಗಾಗಿ ಅನ್ನದ ಬೆಲೆ ಗೊತ್ತಿಲ್ಲ: ಸಿದ್ದಗಂಗಾ ಮಠದ ವಿದ್ಯಾರ್ಥಿ

    ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ವೇಳೆ ಭಕ್ತಾದಿಗಳಿಗೆ ಅನ್ನದಾಸೋಹ ಮಾಡಲಾಗಿತ್ತು. ಈ ವೇಳೆ ಭಕ್ತರೊಬ್ಬರು ಅನ್ನ ಚೆಲ್ಲಲು ಮುಂದಾದಾಗ ಮಠದ ಬಾಲಕ ಶಿವು ಅವರಿಗೆ ಅನ್ನದ ಮಹತ್ವವನ್ನು ತಿಳಿಸಿದ್ದನು. ಶ್ರೀಗಳ ದರ್ಶನಕ್ಕೆ ಬಂದಿದ್ದ ಭಕ್ತರಿಗೆ ಉಚಿತ ಅನ್ನದಾಸೋಹ ಸಂದರ್ಭದಲ್ಲಿ ಮೇಲುಸ್ತುವಾರಿ ಮಾಡುತ್ತಿದ್ದ ಮಠದ ವಿದ್ಯಾರ್ಥಿ, ಅನ್ನದ ಮಹತ್ವ ತಿಳಿಸಿಕೊಟ್ಟಿದ್ದನು. ಅಲ್ಲದೇ ಪ್ರಸಾದ ಚೆಲ್ಲಬೇಡಿ, ಮುಂದೆ ಅನ್ನ ಸಿಗದ ಕಾಲ ಬರುತ್ತೆ ಎಂದು ವಿದ್ಯಾರ್ಥಿ ಹೇಳಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    https://www.youtube.com/watch?v=Ku2W_RqZM9M

    https://www.youtube.com/watch?v=5uh3fpEysn8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳ 11ನೇ ಪುಣ್ಯಾರಾಧನೆ – ಮಠದ ಸುತ್ತಮುತ್ತ ಬಿಗಿ ಬಂದೋಬಸ್ತ್

    ಸಿದ್ದಗಂಗಾ ಶ್ರೀಗಳ 11ನೇ ಪುಣ್ಯಾರಾಧನೆ – ಮಠದ ಸುತ್ತಮುತ್ತ ಬಿಗಿ ಬಂದೋಬಸ್ತ್

    ತುಮಕೂರು: ಇಂದು ಸಿದ್ದಗಂಗಾಶ್ರೀಗಳ 11ನೇ ಪುಣ್ಯಾರಾಧನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮಠದ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ.

    ಬುಧವಾರ ಮಠಕ್ಕೆ ಬಂದಿರುವ ದಕ್ಷಿಣ ವಲಯ ಐಜಿಪಿ ದಯಾನಂದ್, ಭದ್ರತೆಯ ಉಸ್ತುವಾರಿ ವಹಿಸಿದ್ದು, ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಲಕ್ಷ ಲಕ್ಷ ಭಕ್ತರು ಮಠಕ್ಕೆ ಧಾವಿಸಲಿರುವ ಹಿನ್ನೆಲೆಯಲ್ಲಿ ಕೆಲ ಮಾರ್ಗ ಬದಲಾವಣೆಯನ್ನು ಪೊಲೀಸ್ ಮಾಡಿದೆ.

    ಎನ್‍ಹೆಚ್ 4ನಲ್ಲಿ ಗೂಡ್ಸ್ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ದಾವಣಗೆರೆ ಚಿತ್ರದುರ್ಗದ ಕಡೆಯಿಂದ ಬರುವ ಗೂಡ್ಸ್ ವಾಹನಗಳಿಗೆ ಶಿರಾ, ಮಧುಗಿರಿ, ಕೊರಟಗೆರೆ, ದಾಬಸ್ ಪೇಟೆ ಮೂಲಕ ಬೆಂಗಳೂರಿಗೆ ತೆರಳಲು ಸಂಪರ್ಕ ಕಲ್ಪಿಸಲಾಗಿದೆ. ಬೆಂಗಳೂರಿನಿಂದ ದಾವಣಗೆರೆಯತ್ತ ಹೋಗುವ ಗೂಡ್ಸ್ ವಾಹನಗಳಿಗೆ ದಾಬಸ್‍ಪೇಟೆ, ಕೊರಟಗೆರೆ, ಮಧುಗಿರಿ ಮೂಲಕ ಶಿರಾಗೆ ಸಂಪರ್ಕ ಕಲ್ಪಿಸಲಾಗಿದೆ. ಉಳಿದಂತೆ ಬಸ್, ಕಾರುಗಳಿಗೆ ಸಂಚಾರಕ್ಕೆ ಪೊಲೀಸ್ ಇಲಾಖೆ ಅವಕಾಶ ಕಲ್ಪಿಸಿದೆ.

    ಇಂದು ಶಿವೈಕ್ಯ ಸಿದ್ದಗಂಗಾ ಶ್ರೀಗಳ ಪುಣ್ಯಾರಾಧನೆ ಕಾರ್ಯಕ್ರಮವಿದ್ದು, ನಾಡಿನ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿದ್ದಾರೆ. ಭಕ್ತರು ರಾತ್ರಿಯೇ ಬಂದು ಶ್ರೀಮಠದಲ್ಲಿ ತಂಗಿದ್ದಾರೆ. ರಾತ್ರಿಯಿಡಿ ಶಿವನಾಮ ಸ್ಮರಣೆ ಮಾಡಿ ಜಾಗರಣೆ ಮಾಡಿದ್ದಾರೆ. ಇಂದು ಬೆಳಗ್ಗೆ 5 ಗಂಟೆಯಿಂದ ಪೂಜಾ ಕೈಂಕರ್ಯ ಆರಂಭವಾಗಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಳೆ ಶ್ರೀಗಳ 11ನೇ ದಿನದ ಪುಣ್ಯಾರಾಧನೆ- ಲಕ್ಷಾಂತರ ಭಕ್ತರಿಗೆ ಮಠದಲ್ಲಿ ಸಕಲ ಸಿದ್ಧತೆ

    ನಾಳೆ ಶ್ರೀಗಳ 11ನೇ ದಿನದ ಪುಣ್ಯಾರಾಧನೆ- ಲಕ್ಷಾಂತರ ಭಕ್ತರಿಗೆ ಮಠದಲ್ಲಿ ಸಕಲ ಸಿದ್ಧತೆ

    ತುಮಕೂರು: ಸಿದ್ದಗಂಗಾ ಶ್ರೀಗಳು ದೇಹತ್ಯಾಗ ಮಾಡಿ ಇಂದಿಗೆ 9 ದಿನಗಳು ಆಗಿದೆ. 11ನೇ ದಿನವಾದ ಗುರುವಾರ ಶ್ರೀಗಳ ಪುಣ್ಯಾರಾಧನೆ ನಡೆಯಲಿದೆ. ಈ ಹಿನ್ನೆಲೆ ಮಠದಲ್ಲಿ ಸಕಲ ತಯಾರಿ ನಡೆಯುತ್ತಿದೆ. ಶ್ರೀಗಳ ಪುಣ್ಯಸ್ಮರಣೆಗೆ ರಾಜ್ಯದೆಲ್ಲೆಡೆಯಿಂದ ಭಕ್ತರು ಅನ್ನದಾಸೋಹಕ್ಕೆ ಬೇಕಾದ ದಿನಸಿ ಸಾಮಾಗ್ರಿಗಳನ್ನು ಮಠಕ್ಕೆ ಅರ್ಪಿಸಿ ತಮ್ಮ ಭಕ್ತಿ ಮೆರೆಯುತ್ತಿದ್ದಾರೆ.

    ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳ 11ನೇ ದಿನದ ಪುಣ್ಯಸ್ಮರಣೆಗೆ ಶ್ರೀಮಠ ಸಜ್ಜಾಗುತ್ತಿದೆ. ಗುರುವಾರ ನಡೆಯಲಿರುವ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ಭಕ್ತರಿಗೆ ಭಕ್ಷ್ಯ ಭೋಜನಕ್ಕೆ ಸಿದ್ಧತೆ ನಡೆಯುತ್ತಿದೆ. ಮಠದ 4 ಅಡುಗೆ ಕೊಪ್ಪಲಿನಲ್ಲಿ 100ಕ್ಕೂ ಹೆಚ್ಚು ಅಡುಗೆ ಭಟ್ಟರು ವಿವಿಧ ಸಿಹಿ ತಿನಿಸುಗಳ ತಯಾರಿ ನಡೆಯುತ್ತಿದೆ. ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ 5 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ಸಾಧ್ಯತೆ ಇದೆ. ಮಠದ ಆವರಣದಲ್ಲಿ ಸುಮಾರು ಹತ್ತು ಕಡೆ ಅನ್ನ ದಾಸೋಹಕ್ಕೂ ಸಿದ್ಧತೆ ನಡೆದಿದೆ. ಇದನ್ನೂ ಓದಿ: ಶ್ರೀಗಳ ಪುಣ್ಯಾರಾಧನೆಗೆ ಭಕ್ತರಿಂದ 11 ಟನ್ ಅಕ್ಕಿ ಕಾಣಿಕೆ!

    ಶ್ರೀಗಳ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ದಿನಸಿ ಸಾಮಾಗ್ರಿಗಳು ಹರಿದು ಬರುತ್ತಿದೆ. ಚಿತ್ರದುರ್ಗ, ದಾವಣಗೆರೆ, ಬೆಳಗಾವಿ ಸೇರಿದಂತೆ ನಾನಾ ಭಾಗಗಳಿಂದ ಭಕ್ತರು ಸ್ವಯಂ ಪ್ರೇರಿತರಾಗಿ ಸಾವಿರಾರು ಕ್ವಿಂಟಾಲ್ ಅಕ್ಕಿ, ಬೇಳೆ, ಬೆಲ್ಲ, ತರಕಾರಿ ತಂದು ಕೊಡುತ್ತಿದ್ದಾರೆ. ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮಠದ ವಿದ್ಯಾರ್ಥಿಗಳು, ಸಂಸ್ಥೆಯ ಶಿಕ್ಷಕರು, ಭಕ್ತಾಧಿಗಳು ಸ್ವಯಂ ಪ್ರೇರಿತರಾಗಿ ಸಿದ್ಧತೆಯಲ್ಲಿ ತಲ್ಲೀನರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀಗಳಿಗೆ ಭಾರತರತ್ನ ಕೊಡದಿರುವುದು ಎಲ್ಲರಿಗಿಂತ ನನಗೆ ಹೆಚ್ಚು ನೋವು ತಂದಿದೆ – ಬಿಎಸ್‍ವೈ

    ಶ್ರೀಗಳಿಗೆ ಭಾರತರತ್ನ ಕೊಡದಿರುವುದು ಎಲ್ಲರಿಗಿಂತ ನನಗೆ ಹೆಚ್ಚು ನೋವು ತಂದಿದೆ – ಬಿಎಸ್‍ವೈ

    ಚಿತ್ರದುರ್ಗ: ಲಿಂಗೈಕ್ಯರಾದ ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡದಿರುವುದು ಎಲ್ಲರಿಗಿಂತ ಹೆಚ್ಚಾಗಿ ನನಗೆ ನೋವು ತಂದಿದೆ. ಆದ್ರೆ ಏನ್ ಮಾಡೋದು ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಪ್ರಶ್ನಿಸಿ ಬೇಸರ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯ ಹಿರಿಯೂರು, ಚಳ್ಳಕೆರೆ ತಾಲೂಕಿನ ವಿವಿಧೆಡೆ ಬರ ವೀಕ್ಷಣೆ ಮಾಡಿದ ಬಳಿಕ ಖಂಡೇನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡದಿರುವುದು ನೋವು ತಂದಿದೆ. ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನಕ್ಕಾಗಿ ಶಕ್ತಿಮೀರಿ ಪ್ರಯತ್ನಿಸಿದ್ದೇವೆ. ಈ ವಿಷಯದಲ್ಲಿ ಎಲ್ಲರಿಗಿಂತ ಹೆಚ್ಚು ನನಗೆ ನೋವಾಗಿದೆ, ಏನುಮಾಡುವುದು ಎಂದು ವಿಷಾದ ವ್ಯಕ್ತಪಡಿಸಿದರು. ಇದನ್ನೂ ಓದಿ:  ಭಾರತ ರತ್ನ – ಲತಾಗಿಲ್ಲದ ನಿಯಮಾವಳಿ ಸಿದ್ದಗಂಗಾ ಶ್ರೀಗಳಿಗೆ ಮಾತ್ರ ಯಾಕೆ?

    ಚಿತ್ರದುರ್ಗ ಜಿಲ್ಲೆಯಲ್ಲಿ ನಾಲ್ಕು ವರ್ಷದಿಂದ ಬರ ತಾಂಡವವಾಡುತ್ತಿದೆ. ಬೆಳೆ ವಿಫಲವಾಗಿ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರ ವೀಕ್ಷಣೆ ವರದಿಯನ್ನು ಸರ್ಕಾರಕ್ಕೆ ನೀಡುತ್ತೇವೆ. ಅಧಿವೇಶನದಲ್ಲಿ ಬರ, ರೈತರ ಸ್ಥಿತಿಗತಿ ಬಗ್ಗೆ ಮಾತನಾಡುತ್ತೇವೆ. ಸಾಲ ಮನ್ನಾ ಮಾಡುತ್ತೇವೆ ಎಂದು ಸರ್ಕಾರ ಕಾಲಹರಣ ಮಾಡಿದೆ. ರಾಜ್ಯದಿಂದ ಕೊಟ್ಟಿರುವ ವರದಿಗೆ ಸ್ಪಂದಿಸಿ ಕೇಂದ್ರದಿಂದ ಪರಿಹಾರ ಕೊಡಿಸುತ್ತೇವೆ. ರಾಜ್ಯದ ಬಗ್ಗೆ ಮೋದಿ ಸರ್ಕಾರ ತಾರತಮ್ಯ ಮಾಡುವುದಿಲ್ಲ ಎಂದು ಅವರು ಭರವಸೆ ನೀಡಿದರು.

    ಇದೇ ವೇಳೆ ಕಾಂಗ್ರೆಸ್ ಶಾಸಕ ಆನಂದಸಿಂಗ್ ಹಾಗೂ ಕಂಪ್ಲಿ ಶಾಸಕ ಗಣೇಶ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಸಮ್ಮಿಶ್ರ ಸರ್ಕಾರದ ಸಿಎಂ, ಮಂತ್ರಿಗಳು ಬರ ವೀಕ್ಷಿಸಿಲ್ಲ. ಬರ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಂಡಿಲ್ಲ. ಬೆಂಗಳೂರಿನಲ್ಲಿ ಕುಳಿತು ಪ್ರಧಾನಿ ಮೋದಿ ಕಡೆ ಬೆರಳು ತೋರುತ್ತಾರೆ ಎಂದು ಸರ್ಕಾರದ ವಿರುದ್ಧ ಗುಡುಗಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತ ರತ್ನ ನೀಡಿ ಪ್ರಣಬ್ ಮುಖರ್ಜಿಯನ್ನು ಹೈಜಾಕ್ ಮಾಡಕ್ಕಾಗಲ್ಲ: ಜಯಮಾಲಾ

    ಭಾರತ ರತ್ನ ನೀಡಿ ಪ್ರಣಬ್ ಮುಖರ್ಜಿಯನ್ನು ಹೈಜಾಕ್ ಮಾಡಕ್ಕಾಗಲ್ಲ: ಜಯಮಾಲಾ

    ಉಡುಪಿ: ನಡೆದಾಡುವ ದೇವರಿಗೆ ನೆಪ ಮಾತ್ರಕ್ಕೆ ಭಾರತ ರತ್ನ ಸಿಗಬೇಕು ಅಷ್ಟೆ ಯಾಕೆಂದರೆ ಶ್ರೀಗಳು ಭಾರತ ರತ್ನ ಪ್ರಶಸ್ತಿಗಿಂತಲೂ ಮೀರಿ ಬೆಳೆದವರು. ಹಾಗೆಯೇ ಪ್ರಣಬ್ ಮುಖರ್ಜಿಗೆ ಭಾರತ ರತ್ನ ನೀಡಿ ಅವರನ್ನು ಬಿಜೆಪಿ ಹೈಜಾಕ್ ಮಾಡಕ್ಕಾಗಲ್ಲ ಅಂತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಬಿಜೆಪಿ ಟಾಂಗ್ ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂದಿನ ವರ್ಷವಾದರೂ ಶ್ರೀಗಳಿಗೆ ಪ್ರಶಸ್ತಿ ಬರಲಿ ಅಂತ ಆಶಿಸುತ್ತೇನೆ. ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಬರಬೇಕು ಅನ್ನೋದು ನಮ್ಮ ಆಶಯವಾಗಿತ್ತು, ಬಂದಿದ್ದರೆ ತುಂಬಾ ಸಂತೋಷ ಆಗ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದರು. ಬಳಿಕ ಪ್ರಣಬ್ ಮುಖರ್ಜಿ ಅವರಿಗೆ ಭಾರತ ರತ್ನ ನೀಡಿದ್ದರಲ್ಲಿ ಯಾವುದೇ ರಾಜಕೀಯ ಇಲ್ಲ. ಪ್ರಶಸ್ತಿ ಕೊಟ್ಟು ಪ್ರಣಬ್ ಮುಖರ್ಜಿಯನ್ನು ಹೈಜಾಕ್ ಮಾಡಕಾಗಲ್ಲ. ಕಾಂಗ್ರೆಸ್ ನಾಯಕರನ್ನು ಯಾವ ಬಿಜೆಪಿಯವರಿಗೂ ಏನೂ ಮಾಡಕಾಗಲ್ಲ. ಪ್ರಣಬ್ ಮುಖರ್ಜಿ ಭಾರತ ರತ್ನಕ್ಕೆ ಅರ್ಹರು, ಅವರಿಗೆ ಪ್ರಶಸ್ತಿ ನೀಡಿರುವುದರಿಂದ ಖುಷಿಯಾಗಿದೆ ಎಂದು ಹೇಳಿದರು.

    ಕರ್ನಾಟಕದ ಸಾಲುಮರದ ತಿಮ್ಮಕ್ಕ, ನೃತ್ಯ ನಿರ್ದೇಶಕ ಪ್ರಭುದೇವಗೆ ಪದ್ಮ ಪ್ರಶಸ್ತಿ ಬಂದಿದೆ. ಕಲಾವಿದರಿಗೆ ಭಾಷೆಯ ಗಡಿಯಿಲ್ಲ, ಚಿತ್ರರಂಗ ಬೆಳೆಸಿದವರು ಪ್ರಭುದೇವ ಕುಟುಂಬದವರು ಹೀಗಾಗಿ ಅವರಿಗೆ ಪ್ರಶಸ್ತಿ ಬಂದದ್ದು ಖುಷಿಯಾಗಿದೆ ಎಂದು ಪ್ರತಿಕ್ರಿಯಿಸಿದರು.

    ಕಾಂಗ್ರೆಸ್ ಶಾಸಕರ ಹೊಡೆದಾಟದ ವಿಚಾರವಾಗಿ ಪ್ರತಿಕ್ರಿಯಿಸಿ, ಶಾಸಕ ಗಣೇಶ್ ಸಿಕ್ಕೇ ಸಿಗ್ತಾರೆ. ಅಧಿಕಾರಿಗಳು ಅವರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಈ ಗಲಾಟೆ ನಡೆದ ವೇಳೆ ನಾನು ರೆಸಾರ್ಟಿನಲ್ಲಿ ಇರ್ಲಿಲ್ಲ. ಈ ಬಗ್ಗೆ ನನ್ನನ್ನು ಏನೂ ಹೆಚ್ಚು ಕೇಳ್ಬೇಡಿ. ಮಾಧ್ಯಮದವರಿಗೆ ಯಾಕೆ ಆತುರ? ಸಿಕ್ತಾರೆ ಬಿಡಿ ಎಂದು ಹೇಳಿ ಜಯಮಾಲಾ ನುಣುಚಿಕೊಂಡರು.

    ರಾಜಕಾರಣಿಗಳ ಕಾಟಾಚಾರದ ಬರಪ್ರವಾಸ ವಿಚಾರದ ಪ್ರಶ್ನೆಗೆ ಉತ್ತರಿಸಿದ ಅವರು, ಯಡಿಯೂರಪ್ಪ ಬರ ಪ್ರವಾಸ ವಿಚಾರ ನನಗಿಂತ ಚೆನ್ನಾಗಿ ನಿಮಗೇ ಗೊತ್ತಿದೆ. ಕೃಷ್ಣೆಬೈರೇಗೌಡರ ಬರ ಪ್ರವಾಸ ಸರಿಯಾಗಿಯೆ ಮಾಡಿದ್ದಾರೆ. ಬರ ಪ್ರವಾಸಕ್ಕೆ ಹೋದಾಗ ಅರಣ್ಯ ನೋಡ್ಕೋಂಡು ಬಂದಿರ್ತಾರೆ. ಬರ ಪರಿಹಾರ ಕೆಲಸ ಮಾಡೋಕೆ ವಿಪಕ್ಷ ಏನೂ ಹೇಳ್ಬೇಕಾಗಿಲ್ಲ. ಎಲ್ಲಾ ನಮ್ಮ ಸರ್ಕಾರವೇ ಮಾಡುತ್ತೆ, ನಮಗೆ ಜವಾಬ್ದಾರಿ ಇದೆ ಎಂದು ಕಿಡಿಕಾರಿದರು.

    ಅಷ್ಟೇ ಅಲ್ಲದೆ ಬರ ಪ್ರವಾಸ ಮಾಡದೆ ಮಗನ ಸಿನಿಮಾವನ್ನು ನಾಲ್ಕಾರು ಬಾರಿ ನೋಡಿದ ಸಿಎಂ ನಡೆಯನ್ನೂ ಜಯಮಾಲಾ ಸಮರ್ಥಿಸಿದರು. ನಿಖಿಲ್ ಕುಮಾರಸ್ವಾಮಿ ಕಷ್ಟಪಟ್ಟು ಸಿನೆಮಾ ಮಾಡಿದ್ದಾರೆ. ಸಿನಿಮಾ ನೋಡೋಕೂ ಲೆಕ್ಕಾಚಾರ ಹಾಕ್ಬೇಡಿ. ಅಪ್ಪನಿಗೆ ಮಕ್ಕಳ ಬೆಳವಣಿಗೆ ಬೇಡ್ವ? ಬರ ಅಂತ ಹೇಳಿ ಊಟ ಮಾಡದೆ ಇರೋದಕ್ಕಾಗುತ್ತಾ ಅಂತ ಪ್ರಶ್ನೆ ಮಾಡಿ ಸಿಎಂ ಕುಮಾರಸ್ವಾಮಿಯವರ ಪರವಹಿಸಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳಿಗಿಲ್ಲ ಭಾರತರತ್ನ- ಬೇಸರವಿಲ್ಲ ಅಂದ್ರು ಕಿರಿಯ ಶ್ರೀ

    ಸಿದ್ದಗಂಗಾ ಶ್ರೀಗಳಿಗಿಲ್ಲ ಭಾರತರತ್ನ- ಬೇಸರವಿಲ್ಲ ಅಂದ್ರು ಕಿರಿಯ ಶ್ರೀ

    ಬೆಂಗಳೂರು: ತ್ರಿವಿಧ ದಾಸೋಹಿ, ನಡೆದಾಡುವ ದೇವರಿಗೆ ಈ ಬಾರಿ “ಭಾರತ ರತ್ನ” ಸಲ್ಲುತ್ತೆ ಎಂದು ಎಲ್ಲರೂ ನಿರೀಕ್ಷೆಯಲ್ಲಿದ್ದರು. ಆದರೆ ಕನ್ನಡಿಗರ ದನಿ ಮೋದಿ ಅವರಿಗೆ ಕೇಳಿಸಲಿಲ್ಲ. ಇದೀಗ ಶ್ರೀಗಳಿಗೆ ಭಾರತ ರತ್ನ ಸಿಗದ್ದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಿರಿಯ ಶ್ರೀಗಳು, “ಸ್ವಾಮೀಜಿ ಅವರು ಇದುವರೆಗೂ ಯಾವುದೇ ಪ್ರಶಸ್ತಿಯನ್ನು ಅಪೇಕ್ಷಿಸಿರಲಿಲ್ಲ. ಇದು ಜನರ ಒತ್ತಾಸೆ ಆಗಿತ್ತು. ಆದರೆ ಅವರ ಒತ್ತಾಸೆ ಈಡೇರಲಿಲ್ಲ ಎಂದು ನಿರಾಶೆ ಪಡುವ ಅವಶ್ಯಕತೆ ಇಲ್ಲ. ಪ್ರಶಸ್ತಿಯನ್ನು ಯಾರಿಗೆ ಪ್ರಕಟ ಮಾಡಿದ್ದಾರೋ ಅವರಿಗೆ ಸ್ವಾಗತ ಮಾಡಿ ಸಂತೋಷಪಡೋಣ. ಪ್ರಶಸ್ತಿ ಸಿಕ್ಕಿಲ್ಲ ಎಂದು ಅಸಮಾಧಾನ ಹಾಗೂ ಪ್ರತಿಭಟನೆ ಮಾಡುವುದು ನಾಗರಿಕರ ಲಕ್ಷಣ ಅಲ್ಲ. ಪ್ರಶಸ್ತಿಯನ್ನು ಪ್ರೀತಿಯಿಂದ ಕೇಳುವುದು ತಪ್ಪಲ್ಲ. ಹಾಗಂತ ಪ್ರತಿಭಟನೆ ಮಾಡಿದರೆ ಅದು ತಪ್ಪು. ನಾವು ಪ್ರಶಸ್ತಿ ಕಡೆ ಗಮನಹರಿಸುವುದಿಲ್ಲ. ಪ್ರಶಸ್ತಿಯ ಇಚ್ಛೆ ಕೂಡ ನಮಗೆ ಇಲ್ಲ. ಅಂತದ್ದರಲ್ಲಿ ಅವರು ನಮಗೆ ಕೊಡುತ್ತಾರೆ ಎಂಬ ನಿರೀಕ್ಷೆ ಕೂಡ ಇಲ್ಲ ಎಂದು ಹೇಳಿದ್ದಾರೆ. ಇದನ್ನು ಓದಿ: ಸಾಲುಮರದ ತಿಮ್ಮಕ್ಕ ಸೇರಿ ರಾಜ್ಯದ ಐವರಿಗೆ ಪದ್ಮಶ್ರೀ ಗೌರವ

    ಸಿಎಂ ಟ್ವೀಟ್:
    ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ಹಾಗೂ ಪದ್ಮ ಪ್ರಶಸ್ತಿಗೆ ಆಯ್ಕೆಯಾದ ಗಣ್ಯರಿಗೆ ಸಿಎಂ ಕುಮಾರಸ್ವಾಮಿ ಶುಭ ಕೋರಿದ್ದಾರೆ. ರಾಜ್ಯದ ಐವರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದಿರೋದು ಸಂತಸ ತಂದಿದೆ. ಆದರೆ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಹಾಗೂ ಇನ್ನೂ ಹಲವು ಅರ್ಹ ಸಾಧಕರಿಗೆ ಪದ್ಮ ಪ್ರಶಸ್ತಿ ನಿರೀಕ್ಷಿಸಿದ್ದೆವು. ಇದು ಕೈಗೂಡದಿರುವುದು ನಿರಾಸೆ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ: ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಇಲ್ಲ – ಪ್ರಣಬ್ ಮುಖರ್ಜಿ ಸೇರಿ ಮೂವರಿಗೆ ಗೌರವ

    ಶಾಸಕ ಸುರೇಶ್ ಕುಮಾರ್ ಅಸಮಾಧಾನ:
    ಬಿಜೆಪಿ ಶಾಸಕ ಸುರೇಶ್ ಕುಮಾರ್ ತಮ್ಮ ಟ್ವಿಟ್ಟರಿನಲ್ಲಿ, “ಪ್ರಣಬ್ ಮುಖರ್ಜಿ, ಭೂಪೇನ್ ಹಜಾರಿಕಾ ಮತ್ತು ನಾನಾಜಿ ದೇಶ್‍ಮುಖ್‍ರಿಗೆ `ಭಾರತರತ್ನ’ ನೀಡಿರುವುದು ಅತ್ಯಂತ ಸೂಕ್ತ. ಇವರೊಂದಿಗೆ ಪರಮಪೂಜ್ಯ ಸಿದ್ದಗಂಗಾ ಶ್ರೀಗಳ ಹೆಸರು ಇದ್ದಿದ್ದರೆ `ಭಾರತರತ್ನ’ದ ಮೆರಗು ಬಹಳಷ್ಟು ಹೆಚ್ಚುತ್ತಿತ್ತು ಎಂಬುದು ಎಲ್ಲರ ಭಾವನೆ” ಎಂದು ಟ್ವೀಟ್ ಮಾಡಿದ್ದಾರೆ.

    ಇತ್ತ ಶ್ರೀಗಳಿಗೆ ಭಾರತ ರತ್ನ ನೀಡದ್ದಕ್ಕೆ ಭಕ್ತಗಣ ಆಕ್ರೋಶ ಹೊರಹಾಕುತ್ತಿದೆ. ಇನ್ನೊಮ್ಮೆ ಪರಿಶೀಲಿಸಿ ಶ್ರೀಗಳಿಗೆ ಭಾರತ ರತ್ನ ನೀಡಿ ಎಂದು ಭಕ್ತಾಧಿಗಳು ಮಠದ ಆವರಣದಲ್ಲಿ ಘೋಷಣೆ ಮಾಡಿ ಒತ್ತಾಯಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀ ಚಿಕಿತ್ಸೆ ಪಡೆಯುತ್ತಿದ್ದ ಕೊಠಡಿ ಈಗ ಪ್ರಾರ್ಥನಾ ಮಂದಿರ

    ಸಿದ್ದಗಂಗಾ ಶ್ರೀ ಚಿಕಿತ್ಸೆ ಪಡೆಯುತ್ತಿದ್ದ ಕೊಠಡಿ ಈಗ ಪ್ರಾರ್ಥನಾ ಮಂದಿರ

    ತುಮಕೂರು: ಶಿವಕುಮಾರ ಸ್ವಾಮೀಜಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಸಿದ್ದಗಂಗಾ ಆಸ್ಪತ್ರೆಯ ವಿಶೇಷ ಕೊಠಡಿ ಇದೀಗ ಪ್ರಾರ್ಥನಾ ಮಂದಿರವಾಗಿ ಪರಿವರ್ತನೆಯಾಗಿದೆ.

    ಪ್ರಾರ್ಥನಾ ಮಂದಿರದ ಕೊಠಡಿಯಲ್ಲಿ ಶ್ರೀಗಳ ಭಾವಚಿತ್ರ ಇಟ್ಟು ದಿನ ನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ. ಅಲ್ಲದೇ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡುವ ಮುನ್ನ ವೈದ್ಯರು, ರೋಗಿಗಳು ಸಂಬಂಧಿಕರು ಯಶಸ್ವಿ ಶಸ್ತ್ರಚಿಕಿತ್ಸೆಗಾಗಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಶ್ರೀಗಳು ಇದ್ದ ಕೊಠಡಿ ಪುಣ್ಯಸ್ಥಳವಾಗಿ ಮಾರ್ಪಟ್ಟಿದೆ.

    ಶ್ರೀಗಳಿಗೆ ಮ್ಯೂಸಿಕ್ ಪ್ಲೇಯರ್ ಮೂಲಕ ಕೇಳಿಸುತ್ತಿದ್ದ ಶಿವಸ್ತುತಿಯೂ ಸಹ ಹಾಗೆಯೇ ಮುಂದುವರಿದಿದೆ. ಕೋಟ್ಯಂತರ ರೂ. ವೆಚ್ಚ ಮಾಡಿ ನಿರ್ಮಾಣ ಮಾಡಿದ್ದ ಕೊಠಡಿ ಇದೀಗ ಬೇರೆ ಯಾವುದೇ ರೋಗಿಗಳಿಗೆ ನೀಡದೇ ಪ್ರಾರ್ಥನ ಮಂದಿರವಾಗಿ ಪರಿವರ್ತನೆ ಮಾಡಲಾಗಿದೆ.

    ಈ ಬಗ್ಗೆ ಸಿದ್ದಗಂಗಾ ಆಸ್ಪತ್ರೆ ಎಂಡಿ ಡಾ. ಪರಮೇಶ್ ಅವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, “ಸ್ವಾಮೀಜಿ ಅವರ ಆರೋಗ್ಯದಲ್ಲಿ ಏರುಪೇರು ಕಂಡಾಗ ಅವರನ್ನು ಚೆನ್ನೈನ ರೇಲಾ ಅವರ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದ್ದೇವು. ಬಳಿಕ ಅವರನ್ನು ವಾಪಸ್ ಕರೆದುಕೊಂಡು ಬರುವಾಗ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕು ಎಂದು ಎಲ್ಲಾ ತಯಾರಿ ಮಾಡಿಕೊಂಡಿದ್ದೇವು. ಆದರೆ ಸ್ವಾಮೀಜಿ ಅವರು ಮಠದಲ್ಲಿಯೇ ಚಿಕಿತ್ಸೆ ನೀಡಿ ಎಂದರು. ಆಗ ನಾವು ಅವರ ಇಚ್ಛೆಯಂತೆ ಮಠದಲ್ಲೇ 15 ದಿನ ಚಿಕಿತ್ಸೆ ನೀಡಿದ್ದೇವೆ” ಎಂದರು.

    ಮತ್ತೆ ಸ್ವಾಮೀಜಿ ಅವರ ಆರೋಗ್ಯದಲ್ಲಿ ಏರುಪೇರಾದಾಗ ಅವರ ಅನುಮತಿ ಪಡೆದುಕೊಂಡು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವು. ಸ್ವಾಮೀಜಿಗಾಗಿ ಆಸ್ಪತ್ರೆಯ ಕೊಠಡಿಯಲ್ಲೇ ದೇವರ ಮನೆ ಮಾಡಿದ್ದೇವು. ಬಳಿಕ ಅವರನ್ನು ಇಲ್ಲಿಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಿದ್ದೇವು. ಅವರ ನೆನಪಿಗಾಗಿ ನಾವು ಈ ಕೋಣೆಯನ್ನು ಪ್ರಾರ್ಥನಾ ಮಂದಿರವಾಗಿ ಪರಿವರ್ತನೆ ಮಾಡಲಾಗಿದೆ. ಈ ಕೊಠಡಿಯಲ್ಲಿ ಯಾವ ರೋಗಿಗೂ ಚಿಕಿತ್ಸೆ ನೀಡುವುದಿಲ್ಲ. ಈಗ ಈ ಕೊಠಡಿ ಹೇಗೆ ಇದೆಯೋ ಹಾಗೇ ಇರಲಿದೆ. ದಿನನಿತ್ಯ ಸ್ವಾಮೀಜಿ ಅವರಿಗೆ ಇಲ್ಲಿ ಪೂಜೆ ನಡೆಯಲಿದೆ. ರೋಗಿಗಳ ಸಂಬಂಧಿಕರು ಬಂದು ಇಲ್ಲಿ ಪ್ರಾರ್ಥನೆ ಮಾಡಿಕೊಳ್ಳಬಹುದು ಎಂದು ಪರಮೇಶ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv