Tag: siddaganga matha

  • ನನ್ನ ಬಳಿ ಸಮೀಕ್ಷೆಗೆ ಯಾರೂ ಬಂದಿಲ್ಲ: ಜಾತಿ ಸಮೀಕ್ಷೆಗೆ ಸಿದ್ದಗಂಗಾ ಶ್ರೀ ಹೇಳಿಕೆ

    ನನ್ನ ಬಳಿ ಸಮೀಕ್ಷೆಗೆ ಯಾರೂ ಬಂದಿಲ್ಲ: ಜಾತಿ ಸಮೀಕ್ಷೆಗೆ ಸಿದ್ದಗಂಗಾ ಶ್ರೀ ಹೇಳಿಕೆ

    ತುಮಕೂರು: ಎಲ್ಲರ ಬಳಿಯೂ ಹೋಗಿ ಸಮೀಕ್ಷೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ನನ್ನ ಬಳಿ ಸಮೀಕ್ಷೆಗೆ ಯಾರೂ ಬಂದಿಲ್ಲ ಎಂದು ಸಿದ್ದಂಗಾ ಮಠದ ಸಿದ್ದಲಿಂಗ ಶ್ರೀಗಳು (Siddalinga Swamiji) ಹೇಳಿದ್ದಾರೆ.

    ರಾಜ್ಯ ಸರ್ಕಾರ ಗುರುವಾರ ಜಾತಿ ಸಮೀಕ್ಷಾ ವರದಿ ಸ್ವೀಕಾರ ಮಾಡಿದ ವಿಚಾರಕ್ಕೆ ಸಿದ್ಧಗಂಗಾ ಮಠದಲ್ಲಿ (Siddaganga Matha) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಜಾತಿ ಗಣತಿ (Caste Survey) ವಿಚಾರದಲ್ಲಿ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಗೊತ್ತಿಲ್ಲ. ಇದಕ್ಕೆ ಯಾರೂ ವಿರೋಧ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಜಾತಿ ಆಧಾರದ ಮೇಲೆ ಸವಲತ್ತುಗಳನ್ನು ಕೊಡಬೇಕಾಗುತ್ತದೆ. ವೈಜ್ಞಾನಿಕವಾಗಿ ಆಗಿಲ್ಲ, ವ್ಯಾಪಕವಾಗಿ ಎಲ್ಲರನ್ನೂ ಸಂದರ್ಶನ ಮಾಡಿಲ್ಲ ಎಂಬ ಕೂಗು ಕೇಳಿಬರುತ್ತಿದೆ ಎಂದು ಹೇಳಿದರು.  ಇದನ್ನೂ ಓದಿ: ಎಲೆಕ್ಷನ್ ಹೊತ್ತಲ್ಲಿ ಜಾತಿಗಣತಿ ಜ್ವಾಲೆಯಲ್ಲಿ ಸರ್ಕಾರ – ವರದಿಯಲ್ಲಿ ಏನಿದೆ? ಮುಂದೇನು?

    ಗಣತಿ ವಿಚಾರದಲ್ಲಿ ಎಲ್ಲರಿಗೂ ಸಂದರ್ಶನ ಆಗಿದೆಯೋ ಗೊತ್ತಿಲ್ಲ. ನನ್ನನ್ನಂತೂ ಯಾರೂ ಬಂದು ಸಂದರ್ಶನ ಮಾಡಿಲ್ಲ. ಎಲ್ಲರನ್ನೂ ಕೇಳಿ, ಪ್ರತಿಯೊಬ್ಬರನ್ನು ವಿಚಾರಿಸಿ ವರದಿ ಮಾಡಿದರೆ ಸೂಕ್ತ. ಎಲ್ಲರಿಗೂ ಸೌಲಭ್ಯ ಲಭ್ಯವಾಗುವ ರೀತಿಯಲ್ಲಿ ಮಾಡಿದರೆ ಉಪಕಾರವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  ಇದನ್ನೂ ಓದಿ: ಟಿಬೆಟ್ ವ್ಯಕ್ತಿಯಿಂದ ಹತ್ತಕ್ಕೂ ಹೆಚ್ಚು ಎತ್ತುಗಳಿಗೆ ಮಚ್ಚೇಟು – ಆರೋಪಿ ವಿರುದ್ಧ ರೈತರ ಆಕ್ರೋಶ

    ಪ್ರತಿಯೊಬ್ಬರನ್ನು ಕೇಳುತ್ತಾರಾ? ಅಥವಾ ಸಮಾಜದ ಮುಖಂಡರನ್ನ ಮಾತ್ರ ಕೇಳ್ತಾರಾ? ಏನು ಅಂತಾ ಗೊತ್ತಿಲ್ಲ. ಹಾಗಾಗಿ ನಾನು ಅದರ ಬಗ್ಗೆ ಮಾತನಾಡುವುದಕ್ಕೆ ಹೋಗುವುದಿಲ್ಲ. ಎಲ್ಲರನ್ನೂ ಒಳಗೊಂಡಂತಹ ವರದಿ ಸ್ವೀಕಾರ ಆಗಲಿ. ಆಯಾ ಜಾತಿಯ ಜನಸಂಖ್ಯೆ ಆಧಾರದ ಮೇಲೆ ಸೌಲಭ್ಯಗಳು ವಿತರಣೆ ಆಗಲಿ ಎಂದು ಹೇಳಿದರು.

  • ಸಿದ್ದಗಂಗಾ ಮಠಕ್ಕೆ ರಾಹುಲ್‌ ಗಾಂಧಿ ಭೇಟಿ

    ಸಿದ್ದಗಂಗಾ ಮಠಕ್ಕೆ ರಾಹುಲ್‌ ಗಾಂಧಿ ಭೇಟಿ

    ತುಮಕೂರು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಎರಡು ದಿನ ಕರ್ನಾಟಕ ಪ್ರವಾಸ ಕೈಗೊಂಡಿದ್ದು, ಗುರುವಾರ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರು.

    ತುಮಕೂರಿಗೆ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ಕ್ಯಾತಸಂದ್ರ ಟೋಲ್ ಗೇಟ್ ಬಳಿ ಅದ್ಧೂರಿಯಾಗಿ ಸ್ವಾಗತಿಸಿದರು. ನಂತರ ಸಿದ್ದಗಂಗಾ ಮಠಕ್ಕೆ ಆಗಮಿಸಿದ ರಾಹುಲ್ ಗಾಂಧಿ ಶಿವಕುಮಾರ ಶ್ರೀಗಳ ಗದ್ದಿಗೆಗೆ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ಏ.1 ರಂದು ನಡೆದಾಡೋ ದೇವರ ಜನ್ಮ ದಿನಾಚರಣೆ- ಅಮಿತ್ ಶಾ ಕಾರ್ಯಕ್ರಮ ಉದ್ಘಾಟನೆ

    ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ, ಮಾಜಿ ಸಚಿವ ಎಂ.ಬಿ.ಪಾಟೀಲ್, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಸೇರಿದಂತೆ ಹಲವರು ಸಾಥ್ ನೀಡಿದರು. ಇದೇ ವೇಳೆ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಉಪಸ್ಥಿತರಿದ್ದರು.

    ಹಣೆಗೆ ವಿಭೂತಿ ಇಟ್ಟಿಕೊಂಡು ರಾಹುಲ್ ಗಾಂಧಿ, ಧ್ಯಾನ ಕೇಂದ್ರಕ್ಕೆ ಭೇಟಿ ನೀಡಿದರು. ಸಿದ್ದಗಂಗಾ ಶ್ರೀಗಳ ಭೇಟಿ ಬಳಿಕ ಉಪಾಹಾರ ಸೇವಿಸಿದರು. ಇಡ್ಲಿ, ದೋಸೆ, ಉಪ್ಪಿಟ್ಟು, ಬೋಂದಿ-ಪಾಯಸ ಸೇವಿಸಿದರು. ಇದನ್ನೂ ಓದಿ: ಇಂಧನ ಬೆಲೆ ಏರಿಕೆ ಖಂಡಿಸಿ ರಾಹುಲ್ ಗಾಂಧಿ ಪ್ರತಿಭಟನೆ

  • ದಾಸೋಹ ಕೇಂದ್ರದ ದಾಸೋಹಕ್ಕೆ ಸರ್ಕಾರದ ಕೊಕ್ಕೆ

    ದಾಸೋಹ ಕೇಂದ್ರದ ದಾಸೋಹಕ್ಕೆ ಸರ್ಕಾರದ ಕೊಕ್ಕೆ

    – ಒಂದೂವರೆ ತಿಂಗಳಿನಲ್ಲಿ 3 ಬಾರಿ ಆದೇಶ ಬದಲಾವಣೆ

    ಬೆಂಗಳೂರು: ದಾಸೋಹ ಯೋಜನೆಯ ವೆಲ್ ಫೇರ್ ಸ್ಕೀಮ್ ಅಡಿ ಸರ್ಕಾರವೇ ಗುರುತಿಸಿದ ಕಲ್ಯಾಣ ಸಂಸ್ಥೆಗಳಿಗೆ, ಸರ್ಕಾರವೇ ಕೊಡುತ್ತಿದ್ದ ಆಹಾರ ಧಾನ್ಯ ಸ್ಥಗಿತಗೊಳಿಸಿದೆ. 2019ರ ನವೆಂಬರ್ 12ರಿಂದ ಡಿಸೆಂಬರ್ 27ವರೆಗೆ ಸರ್ಕಾರ ಮೂರು ಬಾರಿ ಆದೇಶವನ್ನು ಬದಲಿಸಿದೆ. ವೆಲ್ ಫೇರ್ ಸ್ಕಿಮ್ ಅನ್ವಯ ಉಚಿತ ವಸತಿ, ಊಟ ನೀಡುವ ಸಂಸ್ಥೆಗಳಿಗೆ ಪ್ರತಿ ತಿಂಗಳಿಗೆ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ಮತ್ತು 5 ಕೆಜಿ ಗೋಧಿಯಂತೆ ಒಟ್ಟು 15 ಕೆಜಿ ಆಹಾರ ಧಾನ್ಯ ನೀಡಲಾಗುತ್ತಿತ್ತು.

    ಸರ್ಕಾರದ 2019 ನವೆಂಬರ್ 12ರಂದು ಅನುಮೋದಿತ 460 ಕಲ್ಯಾಣ ಸಂಸ್ಥೆಗಳ 41,384 ವಿದ್ಯಾರ್ಥಿಗಳಿಗೆ ತಲಾ 10 ಕೆಜಿ ಅಕ್ಕಿ 5 ಕೆಜಿ ಗೋಧಿ ಕೊಡುವ ಆದೇಶ ಮಾಡಲಾಗಿತ್ತು. 13 ಡಿಸೆಂಬರ್ 2019ರ ಆದೇಶದಲ್ಲಿ ಅನುಮೋದಿತ ಒಟ್ಟು 176 ಕಲ್ಯಾಣ ಸಂಸ್ಥೆಗಳು, 11,762 ವಿದ್ಯಾರ್ಥಿಗಳಿಗೆ 10 ಕೆಜಿ ಅಕ್ಕಿ 5 ಕೆಜಿ ಗೋಧಿ ಎಂದು ಆದೇಶಿಸಲಾಗಿತ್ತು. 27 ಡಿಸೆಂಬರ್ 2019ರ ಆದೇಶದಲ್ಲಿ ಅನುಮೋದಿತ 189 ಕಲ್ಯಾಣ ಸಂಸ್ಥೆಗಳಿಗೆ, 13,785 ವಿದ್ಯಾರ್ಥಿಗಳಿಗೆ ಒಟ್ಟು 10 ಕೆಜಿ ಅಕ್ಕಿ 5 ಕೆಜಿ ಗೋಧಿ ಎಂದು ಪ್ರತ್ಯೇಕವಾಗಿ ಒಟ್ಟು ಮೂರು ಆದೇಶ ಹೊರಡಿಸಲಾಗಿದೆ.

    ಹೀಗೆ ಒಂದೂವರೆ ತಿಂಗಳಿನಲ್ಲಿ ಮೂರು ಬಾರಿ ಆದೇಶ ಬದಲಾವಣೆ ಆಗಿದೆ. ಇದರ ಅನ್ವಯ ಪರಿಷ್ಕರಣೆ ಮಾಡಿ ಬಿಡುಗಡೆ ಮಾಡಿರುವ ಪಟ್ಟಿಯಿಂದ ಕೆಲವು ಕಲ್ಯಾಣ ಸಂಸ್ಥೆಗಳನ್ನು ಕೈ ಬಿಡಲಾಗಿದೆ. ಅದರಲ್ಲಿ ಪ್ರಮುಖವಾಗಿ ಸಿದ್ದಗಂಗಾ ಮಠ, ಆದಿಚುಂಚನಗಿರಿ ಮಠ ಹಾಗೂ ಸುತ್ತೂರು ಮಠಕ್ಕೆ ನೀಡಲಾಗುತ್ತಿದ್ದ ಆಹಾರ ಧಾನ್ಯದ ಹಂಚಿಕೆ ನಿಲ್ಲಿಸಲಾಗಿದೆ.

    ಆದಿ ಚುಂಚನಗಿರಿ ಮಠದಲ್ಲಿ ಪ್ರತಿ ತಿಂಗಳು ಒಟ್ಟು 26,22 ಮಕ್ಕಳಿಗೆ 26,220 ಕೆಜಿ ಅಕ್ಕಿ ಹಾಗೂ 13,110 ಕೆಜಿ ಗೋಧಿ ಸ್ಥಗಿತಗೊಳಿಸಲಾಗಿದೆ. ಜೆಎಸ್‍ಎಸ್ ವಿದ್ಯಾರ್ಥಿ ನಿಲಯ ಮೈಸೂರು ಮತ್ತು ಜೆಎಸ್‍ಎಸ್ ಫಿಸಿಕಲ್ ಹ್ಯಾಂಡಿಕ್ಯಾಪ್ಟ್ ವರ್ಕಿಂಗ್ ವುಮನ್ ಅಂಡ್ ಸ್ಟೂಡೆಂಟ್ ಹಾಸ್ಟೆಲ್ ಸೇರಿ ಪ್ರತಿ ತಿಂಗಳು ಒಟ್ಟು 2086 ವಿದ್ಯಾರ್ಥಿಗಳಿಗೆ 20,860 ಕೆಜಿ ಅಕ್ಕಿ 10,427 ಕೆಜಿ ಗೋಧಿ, ತುಮಕೂರು ಸಿದ್ದಗಂಗಾ ಮಠಕ್ಕೆ ಪ್ರತಿ ತಿಂಗಳು ಒಟ್ಟು 7,359 ವಿದ್ಯಾರ್ಥಿಗಳಿಗೆ 73,590 ಕೆಜಿ ಅಕ್ಕಿ ಹಾಗೂ 36,795 ಕೆಜಿ ಗೋಧಿ ನೀಡಲಾಗುತ್ತಿತ್ತು. ಆ ಎಲ್ಲಾ ಸಂಸ್ಥೆಗಳಿಗೆ ನೀಡುತ್ತಿದ್ದ ಆಹಾರ ಧಾನ್ಯ ಸ್ಥಗಿತ ಮಾಡಲಾಗಿದೆ. ಹೀಗೆ ಬೇರೆ ಬೇರೆ ಆದೇಶಗಳಲ್ಲಿ ಹಂತ ಹಂತವಾಗಿ 271 ಕಲ್ಯಾಣ ಸಂಸ್ಥೆಗಳನ್ನು ಕೈ ಬಿಡಲಾಗಿದೆ.

    ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು, ಮಠಕ್ಕೆ ಪೂರೈಕೆ ಆಗುತ್ತಿದ್ದ ಅಕ್ಕಿ ಹಾಗೂ ಗೋಧಿ ಎರಡು ತಿಂಗಳಿಂದ ಬಂದಿಲ್ಲ. ಮಠಕ್ಕೆ ಪೂರೈಕೆಯಾಗುತ್ತಿದ್ದ ರೇಷನ್ ಎಷ್ಟು ಬಳಕೆಯಾಗುತ್ತಿದೆ ಎಂಬ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಕೇಳಿತ್ತು. ಅದರಂತೆ ನಾವು ಸೂಕ್ತ ದಾಖಲೆ, ಮಾಹಿತಿ ಸಲ್ಲಿಸಿದ್ದೇವೆ. ಆದರೆ ಕೆಲ ಸಂಸ್ಥೆಗಳು ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸರ್ಕಾರ ಅಕ್ಕಿ ಹಾಗೂ ಗೋಧಿ ವಿತರಣೆಯನ್ನು ನಿಲ್ಲಿಸಿರಬಹುದು. ಮುಂದಿನ ದಿನಗಳಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ರೇಷನ್ ಪೂರೈಕೆ ಮಾಡುತ್ತದೆ ಎಂಬ ಭರವಸೆ ಇದೆ ಎಂದು ತಿಳಿಸಿದ್ದರು.

  • ರೇಷನ್ ನಿಲ್ಲಿಸಿದ್ದು ನಾವಲ್ಲ, ಕಾಂಗ್ರೆಸ್ ಸರ್ಕಾರ: ಶಶಿಕಲಾ ಜೊಲ್ಲೆ

    ರೇಷನ್ ನಿಲ್ಲಿಸಿದ್ದು ನಾವಲ್ಲ, ಕಾಂಗ್ರೆಸ್ ಸರ್ಕಾರ: ಶಶಿಕಲಾ ಜೊಲ್ಲೆ

    ಬೆಂಗಳೂರು: ಸಿದ್ದಗಂಗಾ ಮಠಕ್ಕೆ ಅಕ್ಕಿ, ಗೋಧಿ ಪೂರೈಕೆಯನ್ನು ನಿಲ್ಲಿಸಿದ್ದು ನಮ್ಮ ಸರ್ಕಾರವಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ನಿಂತು ಹೋಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

    ಮಾಜಿ ಸಚಿವ ಯು.ಟಿ.ಖಾದರ್ ಆರೋಪಕ್ಕೆ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಶಿಕಲಾ ಜೊಲ್ಲೆ ಅವರು, ನಮ್ಮ ಸರ್ಕಾರ ಬಂದ ಮೇಲೆ ಸಿದ್ದಗಂಗಾ ಮಠಕ್ಕೆ ಅಕ್ಕಿ-ಗೋಧಿ ಪೂರೈಕೆ ನಿಲ್ಲಿಸಿಲ್ಲ. ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಈ ಪೂರೈಕೆ ನಿಂತಿತ್ತು ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಎರಡು ತಿಂಗಳಿಂದ ರೇಷನ್ ಬಂದಿಲ್ಲ- ಸಿದ್ದಗಂಗಾ ಶ್ರೀ ಸ್ಪಷ್ಟನೆ

    464 ಸಂಸ್ಥೆಗಳಿಗೆ ದಾಸೋಹ ಯೋಜನೆ ಇತ್ತು. ಇದರಲ್ಲಿ 183 ಸರ್ಕಾರಿ ಸಂಸ್ಥೆಗಳಿವೆ. ಉಳಿದ 281 ಖಾಸಗಿ ಸಂಸ್ಥೆಗಳಿಗೆ ಮಾತ್ರ ಅನುದಾನ ನಿಲ್ಲಿಸಲಾಗಿದೆ. ಇದರಲ್ಲಿ ಸಿದ್ದಗಂಗಾ ಮಠವೂ ಇದೆ. ಶ್ರೀಗಳು ಹಿಂದೆಯೇ ಪತ್ರ ಬರೆದಿದ್ದರು. ಪತ್ರ ಬಂದ ಬಳಿಕ ಸಿಎಂ ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿ ರಾಜ್ಯ ಸರ್ಕಾರದಿಂದಲೇ ರೇಷನ್ ಕೊಡಲು ನಿರ್ಧರಿಸಿದ್ದೇವೆ ಎಂದರು.

    ಖಾಸಗಿ ಸಂಸ್ಥೆಗಳ ದಾಸೋಹ ಯೋಜನೆಗೆ ನೀಡುತ್ತಿದ್ದ ಅನುದಾನವನ್ನು ಕೇಂದ್ರ ಸರ್ಕಾರ ನಿಲ್ಲಿಸಿದೆ. ಇದು ಮೂರು ತಿಂಗಳಿನಿಂದ ನಿಲ್ಲಿಸಿರುವುದಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಅನುದಾನ ನಿಲ್ಲಿಸಲಾಗಿತ್ತು. ಈಗ ಫೈಲ್ ತರಿಸಿಕೊಂಡು ಮತ್ತೆ ರಾಜ್ಯ ಸರ್ಕಾರದಿಂದಲೇ ಅಕ್ಕಿ, ಗೋಧಿ ಪೂರೈಕೆ ಮಾಡುತ್ತೇವೆ. ಖಾಸಗಿ ಸಂಸ್ಥೆಗಳಿಗೆ ಅಕ್ಕಿ, ಗೋದಿ ಪೂರೈಕೆಗೆ 12.50 ಕೋಟಿ ರೂ. ಮಾತ್ರ ಅಗತ್ಯ ಇದೆ. ಈಗಾಗಲೇ ಸಿಎಂ ಜತೆ ಮಾತುಕತೆ ನಡೆಸಿ ಶೀಘ್ರದಲ್ಲೇ ಅಕ್ಕಿ, ಗೋಧಿ ಪೂರೈಕೆ ಮಾಡುತ್ತೇವೆ ಎಂದು ಹೇಳಿದರು.

    ರಾಜ್ಯದಲ್ಲಿ 183 ಸಂಸ್ಥೆಗಳಿಗೆ ಸರ್ಕಾರದಿಂದ ಅಕ್ಕಿ, ಗೋಧಿ ಪೂರೈಕೆ ಮಾಡುತ್ತಿದ್ದೇವೆ. ಆದರೆ 281 ಖಾಸಗಿ ಸಂಸ್ಥೆಗಳಿಗೆ ಪೂರೈಕೆ ಮಾಡಲಾಗುತ್ತಿದ್ದ ಅಕ್ಕಿ, ಗೋಧಿ ಪೂರೈಕೆ ನಿಲ್ಲಿಸುವಂತೆ ಕೇಂದ್ರ ಸರ್ಕಾರದಿಂದ ಸೂಚನೆ ಬಂದಿತ್ತು. ಹೀಗಾಗಿ ನಿಲ್ಲಿಸಲಾಗಿತ್ತು. ಆದರೆ ಇನ್ನುಮುಂದೆ ಉಳಿದ ಎಲ್ಲ 281 ಖಾಸಗಿ ಸಂಸ್ಥೆಗಳಿಗೂ ರೇಷನ್ ಪೂರೈಕೆ ಮಾಡುತ್ತೇವೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಇದಕ್ಕೆ ವಾರ್ಷಿಕ 12.50 ಕೋಟಿ ರೂ. ಖರ್ಚು ಆಗುತ್ತದೆ. ಈ ಹಣವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದರು.

  • ಎರಡು ತಿಂಗಳಿಂದ ರೇಷನ್ ಬಂದಿಲ್ಲ- ಸಿದ್ದಗಂಗಾ ಶ್ರೀ ಸ್ಪಷ್ಟನೆ

    ಎರಡು ತಿಂಗಳಿಂದ ರೇಷನ್ ಬಂದಿಲ್ಲ- ಸಿದ್ದಗಂಗಾ ಶ್ರೀ ಸ್ಪಷ್ಟನೆ

    ತುಮಕೂರು: ಮಠಕ್ಕೆ ಪೂರೈಕೆ ಆಗುತ್ತಿದ್ದ ಅಕ್ಕಿ ಹಾಗೂ ಗೋಧಿ ಎರಡು ತಿಂಗಳಿಂದ ಬಂದಿಲ್ಲ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ ಸ್ವಾಮೀಜಿಗಳು, ಮಠಕ್ಕೆ ಪೂರೈಕೆಯಾಗುತ್ತಿದ್ದ ರೇಷನ್ ಎಷ್ಟು ಬಳಕೆಯಾಗುತ್ತಿದೆ ಎಂಬ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಕೇಳಿತ್ತು. ಅದರಂತೆ ನಾವು ಸೂಕ್ತ ದಾಖಲೆ, ಮಾಹಿತಿ ಸಲ್ಲಿಸಿದ್ದೇವೆ. ಆದರೆ ಕೆಲ ಸಂಸ್ಥೆಗಳು ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸರ್ಕಾರ ಅಕ್ಕಿ ಹಾಗೂ ಗೋಧಿ ವಿತರಣೆಯನ್ನು ನಿಲ್ಲಿಸಿರಬಹುದು. ಮುಂದಿನ ದಿನಗಳಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ರೇಷನ್ ಪೂರೈಕೆ ಮಾಡುತ್ತದೆ ಎಂಬ ಭರವಸೆ ಇದೆ ಎಂದು ಹೇಳಿದರು.

    ಖಾದರ್ ಆರೋಪ ಏನು?:
    ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಮಾಜಿ ಸಚಿವ ಯು.ಟಿ.ಖಾದರ್ ಅವರು, ಸಿದ್ದಗಂಗಾ ಮಠದ ಒಟ್ಟು 7,359 ವಿದ್ಯಾರ್ಥಿಗಳಿಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ 73,590 ಕೆಜಿ ಅಕ್ಕಿ ಹಾಗೂ 36,795 ಕೆಜಿ ಗೋಧಿ ವಿತರಣೆ ಮಾಡುತ್ತಿತ್ತು. ದಾಸೋಹ ಯೋಜನೆ ಅಡಿ ಸಿದ್ದಗಂಗಾ ಮಠದ ವಿದ್ಯಾರ್ಥಿಗಳಿಗೂ ಅಕ್ಕಿ, ಗೋಧಿ ನೀಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರವು ಕಳೆದ ಮೂರು ತಿಂಗಳಿಂದ ಮಠಕ್ಕೆ ನೀಡುತ್ತಿದ್ದ ಅಕ್ಕಿಯನ್ನು ತಡೆ ಹಿಡಿದಿದೆ ಎಂದು ಆರೋಪಿಸಿದ್ದರು. ಜೊತೆಗೆ ಪ್ರಮುಖ ದಾಖಲೆ ಬಿಡುಗಡೆ ಮಾಡಿದ್ದರು.

    ತುಮಕೂರು ಸಿದ್ದಗಂಗಾ ಮಠದಲ್ಲಿ ಸಾಕಷ್ಟು ಜನರು ವಸತಿ ಪಡೆದು ಶಿಕ್ಷಣ ಪಡೆಯುತ್ತಿದ್ದಾರೆ. ಹೀಗಾಗಿ ಅಂತಹ ಶಿಕ್ಷಣ ಸಂಸ್ಥೆಗಳಿಗೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವಿವಿಧ ಸಂಘಗಳ ಸಹಭಾಗಿತ್ವದಲ್ಲಿ ಅಕ್ಕಿ, ಗೋಧಿ ವಿತರಿಸುತ್ತಿತ್ತು. ಇದರಿಂದ ಸಂಸ್ಥೆಗಳಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಏಕಾಏಕಿ ಸಿದ್ದಗಂಗಾ ಮಠ ಹಾಗೂ ವಿವಿಧ ಸಂಸ್ಥೆಗಳಿಗೆ ವಿತರಿಸುತ್ತಿದ್ದ ಅಕ್ಕಿ ಹಾಗೂ ಗೋಧಿಯನ್ನು ನಿಲ್ಲಿಸಿದೆ ಎಂದು ದೂರಿದ್ದರು.

  • ಬಿಜೆಪಿಯಿಂದ ಸಿದ್ದಗಂಗಾ ಮಠದ ಊಟಕ್ಕೂ ಕತ್ತರಿ: ಯು.ಟಿ.ಖಾದರ್ ಆರೋಪ

    ಬಿಜೆಪಿಯಿಂದ ಸಿದ್ದಗಂಗಾ ಮಠದ ಊಟಕ್ಕೂ ಕತ್ತರಿ: ಯು.ಟಿ.ಖಾದರ್ ಆರೋಪ

    – 3 ತಿಂಗಳಿಂದ ಮಠಗಳಿಗೆ ನೀಡುತ್ತಿದ್ದ ಅಕ್ಕಿ, ಗೋಧಿ ಸ್ಟಾಪ್

    ಬೆಂಗಳೂರು: ತುಮಕೂರಿನ ಸಿದ್ದಗಂಗಾ ಮಠದ ಊಟಕ್ಕೂ ರಾಜ್ಯ ಸರ್ಕಾರ ಕತ್ತರಿ ಹಾಕಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆರೋಪಿಸಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದಗಂಗಾ ಮಠದ ಒಟ್ಟು 7,359 ವಿದ್ಯಾರ್ಥಿಗಳಿಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ 73,590 ಕೆಜಿ ಅಕ್ಕಿ ಹಾಗೂ 36,795 ಕೆಜಿ ಗೋಧಿ ವಿತರಣೆ ಮಾಡುತ್ತಿತ್ತು. ದಾಸೋಹ ಯೋಜನೆ ಅಡಿ ಸಿದ್ದಗಂಗಾ ಮಠದ ವಿದ್ಯಾರ್ಥಿಗಳಿಗೂ ಅಕ್ಕಿ, ಗೋಧಿ ನೀಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರವು ಕಳೆದ ಮೂರು ತಿಂಗಳಿಂದ ಮಠಕ್ಕೆ ನೀಡುತ್ತಿದ್ದ ಅಕ್ಕಿಯನ್ನು ತಡೆ ಹಿಡಿದಿದೆ ಎಂದು ಆರೋಪಿಸಿದರು. ಜೊತೆಗೆ ಪ್ರಮುಖ ದಾಖಲೆ ಬಿಡುಗಡೆ ಮಾಡಿದರು.

    ತುಮಕೂರು ಸಿದ್ದಗಂಗಾ ಮಠದಲ್ಲಿ ಸಾಕಷ್ಟು ಜನರು ವಸತಿ ಪಡೆದು ಶಿಕ್ಷಣ ಪಡೆಯುತ್ತಿದ್ದಾರೆ. ಹೀಗಾಗಿ ಅಂತಹ ಶಿಕ್ಷಣ ಸಂಸ್ಥೆಗಳಿಗೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವಿವಿಧ ಸಂಘಗಳ ಸಹಭಾಗಿತ್ವದಲ್ಲಿ ಅಕ್ಕಿ, ಗೋಧಿ ವಿತರಿಸುತ್ತಿತ್ತು. ಇದರಿಂದ ಸಂಸ್ಥೆಗಳಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಏಕಾಏಕಿ ಸಿದ್ದಗಂಗಾ ಮಠ ಹಾಗೂ ವಿವಿಧ ಸಂಸ್ಥೆಗಳಿಗೆ ವಿತರಿಸುತ್ತಿದ್ದ ಅಕ್ಕಿ ಹಾಗೂ ಗೋಧಿಯನ್ನು ನಿಲ್ಲಿಸಿದೆ ಎಂದು ದೂರಿದರು.

    ಇದೇ ವೇಳೆ ಬೀದರ್ ಶಾಹೀನ್ ಕಾಲೇಜ್ ಮೇಲೆ ದೇಶದ್ರೋಹ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿ ಕಾರ್ಯದರ್ಶಿ ಹೇಳಿದರು ಅಂತ ಇಂತ ಕೆಲಸ ಮಾಡಿರುವುದು ಸರಿಯಲ್ಲ. ಪೊಲೀಸರು ದೇಶದ್ರೋಹ ಕೇಸ್ ಹಾಕಿದ್ದು ಹಾಗೂ ಮಕ್ಕಳು, ಶಿಕ್ಷಕರನ್ನು ವಿಚಾರಣೆಗೆ ಗುರಿಪಡಿಸಿದ್ದು ಸರಿಯಲ್ಲ. ತಪ್ಪು ಮಾಡಿದ್ದರೆ ಕ್ರಮ ತೆಗೆದುಕೊಳ್ಳಲಿ ಎಂದರು.

    ಅಧಿಕಾರಿಗಳು ರಾಜಕೀಯ ಒತ್ತಡ, ವರ್ಗಾವಣೆಗೆ ಮಣಿಯಬಾರದು. ರಾಜಕೀಯ ಒತ್ತಡಕ್ಕೆ ಮಣೆದು ಸಮಾಜಕ್ಕೆ ಮಾರಕಾಗುವ ನಿರ್ಧಾರ ತಗೆದುಕೊಳ್ಳಬಾರದು. ಮಂಗಳೂರು ಬಾಂಬ್ ಇಟ್ಟ ಪ್ರಕರಣದ ರೂವಾರಿ ಆದಿತ್ಯ ರಾವ್ ಕೇಸ್ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಬಿಜೆಪಿಯವರ ಮೇಲೆ ಜನರಿಗೆ ನಂಬಿಕೆಯೇ ಇಲ್ಲ. ಬಾಂಬ್ ಇಟ್ಟವರಿಗೆ ಸ್ಥಾನಮಾನ ಕೊಡುವ ಕೆಲಸ ನಡೆಯುತ್ತಿದೆ. ಶಾಸಕರ ಭವನಕ್ಕೆ ಬಾಂಬ್ ಇಟ್ಟವರಿಗೆ ಬಿಜೆಪಿ ವಿಧಾನಸಭಾ ಚುನಾವಣೆ ಟಿಕೆಟ್ ಕೊಡುತ್ತೆ. ಸಂಸದೆ ಪ್ರಜ್ಞಾಸಿಂಗ್ ಬಗ್ಗೆಯೂ ಮೃದು ಧೋರಣೆ ತಾಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.

    ಸಂಸದ ಅನಂತಕುಮಾರ್ ಹೆಗ್ಡೆ ಮಹಾತ್ಮ ಗಾಂಧೀಜಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಅವರಿಂದ ಇಂತಹ ಹೇಳಿಕೆ ಬರುತ್ತಲೇ ಇವೆ. ಸಂವಿಧಾನದ ಬಗ್ಗೆಯೂ ವಿವಾದಾತ್ಮಕ ಹೇಳಿಕೆ ನೀಡುತ್ತಾರೆ. ಇಂತವರ ಮೇಲೆ ಯಾಕೆ ಕೇಸ್ ಆಗುತ್ತಿಲ್ಲ? ಇದನ್ನು ನೋಡಿದರೆ ಬಿಜೆಪಿಯವರ ಹಸ್ತಕ್ಷೇಪವಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಗಾಂಧೀಜಿ ಅವರ ಬಗ್ಗೆ ಬಿಜೆಪಿ ಕ್ಲಿಯರ್ ಸ್ಟಾಂಡ್ ಏನು? ಬಗ್ಗೆ ನಿಮ್ಮ ಸ್ಟ್ಯಾಂಡ್ ಏನು ಎಂದು ಪ್ರಶ್ನಿಸಿದರು.

  • ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಮೋದಿಗೆ ಸಿಎಂ ಪತ್ರ

    ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಮೋದಿಗೆ ಸಿಎಂ ಪತ್ರ

    ಬೆಂಗಳೂರು: ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಭಾರತ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರದ ಮೂಲಕ ಮನವಿ ಮಾಡಿದ್ದಾರೆ.

    ಶತಮಾನಗಳಷ್ಟು ಹಳೆಯದಾದ ತುಮಕೂರಿನ ಸಿದ್ದಗಂಗಾ ಮಠ ಕಳೆದ 600 ವರ್ಷಗಳಿಂದ ಶಿಕ್ಷಣ, ಅನ್ನ ದಾಸೋಹ ಮಾಡುತ್ತಾ ಬಂದಿದೆ. ಎಲ್ಲಾ ವರ್ಗದ ಜನರ ಪ್ರೀತಿಗೆ ಪಾತ್ರರಾಗಿರುವ ಶತಾಯುಶಿ, ಶಿಕ್ಷಣ, ಅನ್ನದಾಸೋಹದ ಪ್ರಮುಖ ರೂವಾರಿ ಸಿದ್ದಗಂಗಾ ಶ್ರೀಗಳ ಕೊಡುಗೆ ಅನನ್ಯವಾಗಿದೆ. ಅವರು ಈಗ 110 ವರ್ಷಗಳನ್ನು ಪೂರೈಸಿದ್ದಾರೆ. ಆದ್ದರಿಂದ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರಕ್ಕೆ ಆಯ್ಕೆ ಮಾಡಬೇಕೆಂದು ಪತ್ರದಲ್ಲಿ ಸಿದ್ದರಾಮಯ್ಯ ತಿಳಿಸಿದ್ದಾರೆ.

    ಎಲ್ಲ ಸಮುದಾಯದ ಕಡುಬಡವ ಮಕ್ಕಳಿಗೆ ಅನ್ನ ದಾಸೋಹ ಮಾಡುವ ಮೂಲಕ ಶಿಕ್ಷಣ ನೀಡಿ ಉತ್ತಮ ನಾಗರಿಕರನ್ನಾಗಿ ಮಾಡಿದ ಕೀರ್ತಿ ಸ್ವಾಮೀಜಿಗೆ ಸಲ್ಲುತ್ತದೆ. ಸಿದ್ದಗಂಗಾ ಮಠ ಎಲ್ಲ ಹಂತದ ಶಿಕ್ಷಣವನ್ನು ಬಡವ ಬಲ್ಲಿದರೆಂಬ ಭೇದವಿಲ್ಲದೆ ಶಿಕ್ಷಣವನ್ನು ಉಚಿತವಾಗಿ ನೀಡುತ್ತಾ ಬಂದಿದೆ. ಅಷ್ಟೇ ಅಲ್ಲದೇ ಉನ್ನತ ಅಧ್ಯಯನಕ್ಕೆ ಪ್ರೋತ್ಸಾಹವನ್ನು ಸಹ ನೀಡುತ್ತದೆ. ಇದರಿಂದ ದೇಶದ ಉದ್ದಗಲಕ್ಕೂ ಈ ಸಂಸ್ಥೆಯಲ್ಲಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ಆದರ್ಶ ವ್ಯಕ್ತಿಗಳಾಗಿದ್ದಾರೆ. ಇದು ಅವರ ನಿಸ್ವಾರ್ಥ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ತಿಳಿಸಿದ್ದಾರೆ.

    ಇಂದಿಗೂ ಸಿದ್ದಗಂಗಾ ಮಠ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಸತಿ, ಶಿಕ್ಷಣ ಜೊತೆಗೆ ಉಚಿತ ಪ್ರಸಾದವನ್ನು ನೀಡುತ್ತಾ ಬಂದಿದೆ. ದೇಶದಲ್ಲೇ ಅತ್ಯುನ್ನತ ಶಿಕ್ಷಣ ಸಂಸ್ಥೆ ಎಂದು ಖ್ಯಾತಿಯಾಗಿದೆ. ಇದರ ರೂವಾರಿಯಾಗಿರುವ ಡಾ. ಶಿವಕುಮಾರ ಸ್ವಾಮೀಜಿ ಅವರ ಅನನ್ಯ ಸೇವೆಯನ್ನು ಪರಿಗಣಿಸಿ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ಭಾರತ ರತ್ನಕ್ಕೆ ಶಿಫಾರಸು ಮಾಡಬೇಕೆಂದು ರಾಜ್ಯದ ಪರವಾಗಿ ನಾನು ವಿನಂತಿಸಿಕೊಳ್ಳುತ್ತಿದ್ದೆನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.