Tag: sickness

  • ಅಪೌಷ್ಠಿಕತೆ, ಮಧುಮೇಹ ಖಾಯಿಲೆಯಿಂದ ಬಳಲುವವರಿಗೆ ಕ್ಷಯರೋಗದ ಸಾಧ್ಯತೆ ಹೆಚ್ಚು: ಡಾ. ಮಹೇಶ್ ಎಂ.ಜಿ

    ಅಪೌಷ್ಠಿಕತೆ, ಮಧುಮೇಹ ಖಾಯಿಲೆಯಿಂದ ಬಳಲುವವರಿಗೆ ಕ್ಷಯರೋಗದ ಸಾಧ್ಯತೆ ಹೆಚ್ಚು: ಡಾ. ಮಹೇಶ್ ಎಂ.ಜಿ

    ಕೊಪ್ಪಳ: ಕ್ಷಯರೋಗವು ಒಂದು ಸಾಂಕ್ರಾಮಿಕ ರೋಗವಾಗಿದ್ದು, ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಅದರಲ್ಲಿ ವಿಶೇಷವಾಗಿ ಅಪೌಷ್ಠಿಕತೆಯಿಂದ ಬಳಲುವವರಿಗೆ, ಮಧುಮೇಹ ಇತರೆ ಖಾಯಿಲೆಯಿಂದ ಬಳಲುವವರಿಗೆ ಹರಡುವ ಸಾಧ್ಯತೆ ಹೆಚ್ಚು ಇರುತ್ತದೆ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಮಹೇಶ್ ಎಂ.ಜಿ ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ, ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಆಯೋಜಿಸಿದ್ದ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ನಗರ ಪ್ರದೇಶದ ಕೊಳಚೆ ಪ್ರದೇಶ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿನ ಆಯ್ದ ಗ್ರಾಮಗಳಲ್ಲಿ ಕ್ಷಯರೋಗ ನಿರ್ಮೂಲನೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದ ಅಂಗವಾಗಿ ನಗರದ ಬಸವೇಶ್ವರ ವೃತ್ತದಲ್ಲಿ ಎಲ್‍ಇಡಿ ವಾಹನಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಇದನ್ನೂ ಓದಿ: ಹೆಬ್ಬಾಳದಲ್ಲಿ ಸರಣಿ ಅಪಘಾತ – ಬಿಬಿಎಂಪಿ ಕಸದ ಲಾರಿಗೆ ಬಾಲಕಿ ಬಲಿ

    ಕ್ಷಯ ರೋಗದ ಬಗ್ಗೆ ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಒಂದು ವೇಳೆ ಚಿಕಿತ್ಸೆ ಪಡೆಯದಿದ್ದಲ್ಲಿ ಒಬ್ಬ ಕ್ಷಯರೋಗಿಯು 1 ವರ್ಷಕ್ಕೆ 10-15 ಜನರಿಗೆ ಕೆಮ್ಮುವುದರ ಮೂಲಕ ಸೀನುವುದರ ಮೂಲಕ ಪ್ರಸಾರ ಮಾಡುತ್ತಾನೆ. ಆದ್ದರಿಂದ ಕ್ಷಯರೋಗದ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

    2 ವಾರಗಳಿಂದ ಸತತ ಕೆಮ್ಮು ಬರುವುದು, ಕಫದಲ್ಲಿ ರಕ್ತ ಬರುವುದು, ಸಾಯಂಕಾಲದ ವೇಳೆ ಜ್ವರ ಬರುವುದು, ತೂಕ ಕಡಿಮೆಯಾಗುವುದು, ಹಸಿವು ಆಗದೇ ಇರುವುದು ಇವು ಕ್ಷಯರೋಗದ ಲಕ್ಷಣಗಳಾಗಿದ್ದು, ಇವು ಯಾರಿಗಾದರು ಕಂಡು ಬಂದರೆ ತಕ್ಷಣ ತಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಂಡು, ಚಿಕಿತ್ಸೆ ಪಡೆದುಕೊಂಡು ಆರೋಗ್ಯ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.  ಇದನ್ನೂ ಓದಿ: ಚಾಮರಾಜನಗರ ಜಿಲ್ಲೆಯಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ

    ಪ್ರಧಾನ ಮಂತ್ರಿಗಳು 2025ಕ್ಕೆ ಕ್ಷಯಮುಕ್ತ ಭಾರತ ಮಾಡಲು ಪಣ ತೊಟ್ಟಿದ್ದಾರೆ. ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರದ ಸಲುವಾಗಿ ನಿಕ್ಷೆಯ ಪೋಷಣೆ ಅಭಿಯಾನ ದಡಿಯಲ್ಲಿ ಪ್ರತಿ ರೋಗಿಗೆ ಮಾಸಿಕ 500 ರೂ. ನೀಡಲಾಗುತ್ತಿದೆ. ರೋಗಿಯ ಮನೆಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ಶಿಕ್ಷಣ ನೀಡಲಾಗುತ್ತಿದೆ. ಸಾರ್ವಜನಿಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಲಾಖೆಯೊಂದಿಗೆ ಸಂಪರ್ಕದಲ್ಲಿರುವಂತೆ ಅವರು ತಿಳಿಸಿದರು.

  • ಪತ್ನಿ ಸಾವಿನಿಂದ ಮನನೊಂದು ಪತಿ ಆತ್ಮಹತ್ಯೆಗೆ ಶರಣು

    ಪತ್ನಿ ಸಾವಿನಿಂದ ಮನನೊಂದು ಪತಿ ಆತ್ಮಹತ್ಯೆಗೆ ಶರಣು

    ಚಿಕ್ಕಬಳ್ಳಾಪುರ: ಅನಾರೋಗ್ಯದಿಂದ ಪತ್ನಿ ಮೃತಳಾದ ಹಿನ್ನೆಲೆ ಮನನೊಂದ ಪತಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಮನಕಲುಕುವ ಘಟನೆ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದಲ್ಲಿ ನಡೆದಿದೆ.

    ಬೂದಿಗೆರೆ ಗ್ರಾಮದ ವಿಜಯೇಂದ್ರ(38) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಇವರ ಪತ್ನಿ ಲಾವಣ್ಯ(34) ಅನಾರೋಗ್ಯದಿಂದ ಮೃತಪಟ್ಟಿದ್ದರು. ವಿಜಯೇಂದ್ರ 9 ವರ್ಷಗಳ ಹಿಂದೆ ಲಾವಣ್ಯ ಅವರನ್ನು ಮದುವೆಯಾಗಿದ್ರು. ಈ ದಂಪತಿಗೆ ಮಕ್ಕಳಿರಲಿಲ್ಲ. ಆದರೆ ಕಳೆದ ಒಂದು ವರ್ಷದಿಂದ ಲಾವಣ್ಯ ಅನಾರೋಗ್ಯಕ್ಕೆ ತುತ್ತಾಗಿದ್ರು. ಇದನ್ನೂ ಓದಿ:  ಗುಡಿಸಲಿನ ಮೇಲೆ ಬಿದ್ದ ಟ್ರಕ್ – ಮೂವರು ಅಪ್ರಾಪ್ತ ಸಹೋದರಿಯರು ಬಲಿ

    ಲಿವರ್ ಸಮಸ್ಯೆ, ಕಿಡ್ನಿ ಸಮಸ್ಯೆ ಎಂದು ಲಾವಣ್ಯಗೆ ವಿಜಯೇಂದ್ರ ಸಾಕಷ್ಟು ಕಡೆ ಚಿಕಿತ್ಸೆ ಕೊಡಿಸಿದ್ರೂ ಚೇತರಿಸಿಕೊಂಡಿರಲಿಲ್ಲ. ಕಳೆದ ರಾತ್ರಿ ಮನೆಯಲ್ಲೇ ಲಾವಣ್ಯ ಮೃತಪಟ್ಟಿದ್ದು, ಅದನ್ನು ವಿಜಯೇಂದ್ರ ಕಣ್ಣಾರೆ ಕಂಡಿದ್ದಾರೆ. ನಂತರ ಪತ್ನಿ ಸಾವಿನ ಬಗ್ಗೆ ಯಾರಿಗೂ ತಿಳಿಸದೆ ತಾನು ಮನೆಯಲ್ಲಿದ್ದ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮನೆಯ ಮುಂದೆಯೇ ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದ ವಿಜಯೇಂದ್ರ, ಬೆಳಗ್ಗೆ ಏಕೆ ಅಂಗಡಿ ತೆಗೆದಿಲ್ಲ ಎಂದು ಅಕ್ಕಪಕ್ಕದವರು ಮನೆಯ ಬಾಗಿಲು ಬಡಿದ್ರೂ ತೆಗೆದಿಲ್ಲ. ಆಗ ಸ್ನೇಹಿತರು, ಸಂಬಂಧಿಕರು ಬಂದು ಬಾಗಿಲು ಒಡೆದು ಒಳಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತದಿಂದ ವಾಲಿದ ವಿದ್ಯುತ್ ಕಂಬ – ಆತಂಕದಲ್ಲಿ ಸವಾರರು

    ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • 7 ತಿಂಗಳ ಮಗುವನ್ನ ಕೊಂದು ಮಧ್ಯಾಹ್ನದಿಂದ ಸಂಜೆವರೆಗೂ ತೊಡೆ ಮೇಲೆ ಮಲಗಿಸಿಕೊಂಡ ತಾಯಿ

    7 ತಿಂಗಳ ಮಗುವನ್ನ ಕೊಂದು ಮಧ್ಯಾಹ್ನದಿಂದ ಸಂಜೆವರೆಗೂ ತೊಡೆ ಮೇಲೆ ಮಲಗಿಸಿಕೊಂಡ ತಾಯಿ

    ಭೋಪಾಲ್: ತಾಯಿಯೊಬ್ಬಳು ಏಳು ತಿಂಗಳ ಹಸುಕೂಸನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಖಾಂಡ್ವಾದಲ್ಲಿ ನಡೆದಿದೆ.

    ಮಗವನ್ನು ಕೊಲೆ ಮಾಡಿದ ತಾಯಿ ಕಾರಣವನ್ನು ಹೇಳಿದ ಬಳಿಕ ಕಣ್ಣಲ್ಲಿ ನೀರು ತರಿಸುತ್ತದೆ. ಮೃತ ಮಗು ಕಳೆದ ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಆದರೆ ಮಗುವಿಗೆ ಚಿಕಿತ್ಸೆ ಕೊಡಿಸಲು ತಾಯಿ ಬಳಿ ಹಣವಿರಲಿಲ್ಲ. ಇದರಿಂದ ನೊಂದ ತಾಯಿ ಮಗುವನ್ನು ಹತ್ಯೆಗೈದಿದ್ದಾಳೆ.

    ಆರೋಪಿಯನ್ನು ಮಾಯಾ ಡಾಂಗೊರೆ ಎಂದು ಗುರುತಿಸಲಾಗಿದೆ. ಈಕೆ ಅಹ್ಮದ್ಪರ್ ಖೈಗಾನ್ ನಿವಾಸಿಯಾಗಿದ್ದು, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಳು. ಆಕೆ ಸಂಪಾದನೆ ಮಾಡಿದ ಹಣ ಪ್ರತಿದಿನ ಮನೆಯ ಖರ್ಚಿಗೆ ಮಾತ್ರ ಸಾಕಾಗುತ್ತಿತ್ತು. ಈಕೆ 6 ವರ್ಷದ ಹಿಂದೆ ಒಂದು ಹೆಣ್ಣು ಮಗುವಾಗಿತ್ತು. ಈಗ 7 ತಿಂಗಳ ಹಿಂದೆಯೂ ಮತ್ತೊಂದು ಹೆಣ್ಣು ಮಗುವಾಗಿದೆ.

    ಆರೋಪಿ ಮಾಯಾ ತನ್ನ ಮಗುವನ್ನು ಮಧ್ಯಾಹ್ನದಿಂದ ಸಂಜೆಯವರೆಗೂ ತನ್ನ ತೊಡೆಯ ಮೇಲೆ ಮಲಗಿಸಿಕೊಂಡಿದ್ದಳು. ಆದರೆ ಅವರ ಮನೆಯಲ್ಲಿ ಏನೋ ವಾಸನೆ ಬರುತ್ತಿದೆ ಎಂದು ಸ್ಥಳೀಯರು ಸಂಬಂಧಿಕರಿಗೆ ಮತ್ತು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪರೀಕ್ಷೆ ಮಾಡಿದ ವೈದ್ಯರು ಮಗು ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ.

    ಆರೋಪಿ ಮಾಯಾಗೆ ಎರಡನೇ ಮಗುವೂ ಹೆಣ್ಣಾಯಿತು ಎಂಬ ಕಾರಣಕ್ಕೆ ಪತಿ ಆಕೆಯ ಜೊತೆ ದಿನಾವೂ ಜಗಳವಾಡುತ್ತಿದ್ದನು. ಅಷ್ಟೇ ಅಲ್ಲದೇ 5 ದಿನಗಳ ಹಿಂದೆ ಮಾಯಾ ಮತ್ತು ಹಿರಿಯ ಮಗಳಿಗೆ ಹೊಡೆದು ಮನೆಬಿಟ್ಟು ಹೋಗಿದ್ದನು. ಕೊನೆಗೆ ತನ್ನ ಎರಡು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಮಾಯಾ ಮೇಲಿತ್ತು. ಆದರೆ ಇಂತಹ ಪರಿಸ್ಥಿತಿಯಲ್ಲಿ 7 ತಿಂಗಳ ಮಗುವಿಗೆ ಕಾಯಿಲೆ ಬಂದಿದೆ.

    ತನ್ನ ಮಗವನ್ನು ಉಳಿಸಿಕೊಳ್ಳಬೇಕು ಎಂದು ಮಾಯಾ ಆಸ್ಪತ್ರೆಗೆ ತೋರಿಸಲು ಹಣದ ವ್ಯವಸ್ಥೆ ಮಾಡಲು ಕಷ್ಟಪಟ್ಟಿದ್ದಾಳೆ. ಆದರೆ ಯಾರೊಬ್ಬರು ಆಕೆಗೆ ಸಹಾಯ ಮಾಡಲಿಲ್ಲ. ಕೊನೆಗೆ ಮಗುವನ್ನು ಹತ್ಯೆ ಮಾಡಿದ್ದಾಳೆ.

  • ಚಳಿಗಾಲದಲ್ಲಿ ಮಗು ಆರೋಗ್ಯವಾಗಿರಲು ಹೀಗೆ ಮಾಡಿ

    ಚಳಿಗಾಲದಲ್ಲಿ ಮಗು ಆರೋಗ್ಯವಾಗಿರಲು ಹೀಗೆ ಮಾಡಿ

    ಕಿಲಕಿಲ ನಗುವ ಮಗು ಮನೆಯಲ್ಲಿದ್ದರೆ ಯಾರಿಗೆ ತಾನೇ ಇಷ್ಟ ಆಗಲ್ಲ. ಆ ಮಗು ಆರೋಗ್ಯವಾಗಿರಬೇಕೆಂದು ಮನೆಯಲ್ಲಿ ಎಲ್ಲರೂ ಬಯಸುತ್ತಾರೆ. ಆದರೆ ಚಳಿಗಾಲ ಬಂದರೆ ಸಾಕು ಮಕ್ಕಳನ್ನು ಆರೈಕೆ ಮಾಡುವುದು ಕಷ್ಟವಾಗುತ್ತದೆ. ಇಂತಹ ಕಾಲದಲ್ಲಿ ಮಕ್ಕಳನ್ನು ಹೆಚ್ಚಾಗಿ ಕೇರ್ ಮಾಡಬೇಕಾಗುತ್ತದೆ. ಈ ವಿಂಟರ್ ನಲ್ಲಿ ಆರೋಗ್ಯವಂತ ಮಗುವಿಗಾಗಿ ಹೀಗೆ ಮಾಡಿ.

    * ಶೀತ ಮತ್ತು ನೆಗಡಿ:
    – ನೆಗಡಿ ಮತ್ತು ಶೀತ ಚಳಿಗಾಲದಲ್ಲಿ ಹೆಚ್ಚಾಗಿ ಮಕ್ಕಳನ್ನು ಕಾಡುವ ಸಮಸ್ಯೆಯಾಗಿದೆ. ಹೀಗಾಗಿ ಮಕ್ಕಳನ್ನು ತುಂಬಾ ಬೆಚ್ಚಗೆ ಇಡಬೇಕಾಗುತ್ತದೆ. ನೀರಿನಲ್ಲಿ ಹೆಚ್ಚು ಸಮಯ ಆಡಲು ಬಿಡಬಾರದು. ಮಕ್ಕಳಿಗೆ ಬಿಸಿ ನೀರು ಕುಡಿಸಬೇಕು. ಆಟವಾಡಿದ ಮೇಲೆ ಮಕ್ಕಳ ಕೈ, ಕಾಲುಗಳನ್ನು ನೀರಿನಿಂದ ತೊಳೆಯಬೇಕು. ಇದರಿಂದ ರೋಗಕಾರಕ ಕೀಟಾಣುಗಳು (viral infection) ಹರಡುವುದನ್ನು ತಡೆಯಬಹುದು.

    * ಉಸಿರಾಟ ಸಮಸ್ಯೆ:
    – ಚಳಿಗಾಲದ ವೇಳೆ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದರಿಂದ ಹೆಚ್ಚು ಚಳಿ ಇದ್ದಾಗ ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗುವುದನ್ನು ಕಡಿಮೆ ಮಾಡಬೇಕು. ಔಟಿಂಗ್ ಹೋಗಲೇಬೇಕಿದ್ದರೆ ಬೆಚ್ಚನೆಯ ಸ್ವೆಟರ್, ಸ್ಕಾರ್ಫ್, ಟೋಪಿ ಧರಿಸಿ ಕರೆದುಕೊಂಡು ಹೋಗಿ.

    * ಡ್ರೈ ಸ್ಕಿನ್:
    – ಮಕ್ಕಳು ಬೆಣ್ಣೆಯಂತಹ ಚರ್ಮ ಹೊಂದಿದ್ದರೆ ಎತ್ತಿಕೊಂಡು ಮುದ್ದಾಡಲು ಚೆಂದ. ಆದರೆ ರ‌್ಯಾಶಸ್, ಒರಟು ಚರ್ಮದಿಂದ ಇರಿಸುಮುರಿಸಾಗುತ್ತದೆ. ಹೀಗಾಗಿ ಚಳಿಗಾಲದಲ್ಲಿ ಚರ್ಮ ಒಡೆಯುವುದನ್ನು ತಪ್ಪಿಸಬೇಕು. ಮಕ್ಕಳಿಗೆ ಸ್ನಾನ ಮಾಡಿಸಿದ ನಂತರ ಲೋಷನ್, ಕ್ರೀಮ್ ಹಚ್ಚುವುದು. ಸ್ನಾನದ ಬಳಿಕ ಚರ್ಮದ ರಂಧ್ರಗಳು ಓಪನ್ ಆಗಿರುತ್ತವೆ. ಈ ವೇಳೆ ಲೋಷನ್ ಹಚ್ಚಿದರೆ ಚರ್ಮದ ಆಳಕ್ಕೆ ಇಳಿದು ದೀರ್ಘ ಕಾಲ ತೇವಾಂಶವನ್ನು ಕಾಪಾಡುತ್ತದೆ.

    * ಜ್ವರ, ನೆಗಡಿ, ಕೆಮ್ಮು ಬಾಧಿತರಿಂದ ದೂರ ಇರಿಸಿ:
    – ಇದು ದೊಡ್ಡ ಕಾಯಿಲೆ ಏನಲ್ಲ. ಆದರೆ ಒಬ್ಬರಿಂದ ಒಬ್ಬರಿಗೆ ಬೇಗ ಹರಡುತ್ತದೆ. ಮಕ್ಕಳು ಹೆಚ್ಚಾಗಿ ಸೆನ್ಸಿಟೀವ್ ಆಗಿರುತ್ತಾರೆ. ಇದರಿಂದ ಬಹುಬೇಗನೇ ರೋಗಾಣುಗಳು ದೇಹ ಸೇರಬಹುದು. ಬಳಿಕ ಜ್ವರ, ನೆಗಡಿ, ಕೆಮ್ಮು, ಇತರೆ ಅಲರ್ಜಿಗಳಾಗಿ ಯಾತನೆ ಅನುಭವಿಸಬೇಕಾಗುತ್ತದೆ. ಇದಕ್ಕಾಗಿ ಜ್ವರ, ಕೆಮ್ಮು ಬಂದವರಿಂದ ಆದಷ್ಟು ಮಕ್ಕಳನ್ನು ದೂರ ಇರಿಸಿ. ದೂರ ಇರುವಂತೆ ಸೂಚಿಸಿ. ಮನೆಯವರಾಗಲಿ, ಅಕ್ಕಪಕ್ಕದವರಾಗಲಿ ಯಾರೇ ಆಗಲಿ ನಮ್ಮ ಮಕ್ಕಳ ಆರೋಗ್ಯ ಮುಖ್ಯ.

    * ಹಣ್ಣು ತರಕಾರಿಗಳ ಸೇವನೆ:
    – ನಿಮ್ಮ ಮಕ್ಕಳಿಗೆ ವಿಟಮಿನ್‍ಯುಕ್ತ, ಪ್ರೊಟೀನ್‍ಯುಕ್ತ ಆಹಾರವನ್ನು ತಿನ್ನಿಸಿ. ಮನೆಯಲ್ಲೇ ತಯಾರಿಸಿದ ಆಹಾರವನ್ನು ಬಿಸಿ ಇರುವಾಗಲೇ ಸೇವಿಸುವಂತೆ ಬಲವಂತ ಮಾಡಿ. ಇದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯಕವಾಗುತ್ತದೆ.

    * ಪ್ರತ್ಯೇಕ ಬಾಟಲ್, ಹ್ಯಾಂಡ್ ಟವಲ್:
    – ನಿಮ್ಮ ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದರೆ ಅವರಿಗೆ ಪ್ರತ್ಯೇಕವಾದ ನೀರಿನ ಬಾಟಲ್, ಹ್ಯಾಂಡ್ ಟವಲ್ ಅನ್ನು ಕೊಟ್ಟು ಕಳಿಸಿ. ಇದರಿಂದ ಶಾಲೆಯಲ್ಲಿ ಮಕ್ಕಳೊಂದಿಗೆ ಆಡುವ ಮೂಲಕ ಹರಡಬಹುದಾದ ವೈರಲ್ ಸೋಂಕುಗಳನ್ನು ತಡೆಯಬಹುದು. ಮನೆಗೆ ಬಂದ ಬಳಿಕ ಬಾಟಲಿ ಮತ್ತು ಹ್ಯಾಂಡ್ ಟವಲ್ ಅನ್ನು ಡೆಟಲ್ ಹಾಕಿ ಬಿಸಿ ನೀರಿನಿಂದ ತೊಳೆದಿಡಿ.

    ಕೆಲವೊಂದು ಸಿಂಪಲ್ ಟಿಪ್ಸ್
    * ಕೈ ತೊಳೆಯಲು ಹ್ಯಾಂಡ್ ವಾಷಿಂಗ್ ಲಿಕ್ವಿಡ್ ಬಳಸಿ.
    * ಹೊರಗಿಂದ ಬಂದ ತಕ್ಷಣ ಕೈ, ಕಾಲು, ಮುಖ ತೊಳೆಯುವುದು.
    * ಕೈ ಬೆರಳುಗಳ ಮಧ್ಯೆ, ಉಗುರುಗಳ ಮಧ್ಯೆ ಚೆನ್ನಾಗಿ ತೊಳೆಯುವುದು.
    * ಮನೆಯಿಂದ ಹೊರ ಹೋಗುವಾಗ ಬೆಚ್ಚನೆಯ ಉಡುಪು ಧರಿಸುವುದು.
    * ಕಸ ಹಾಕಿ ಬಂದ ಬಳಿಕ, ಪ್ರಾಣಿಗಳನ್ನು ಮುಟ್ಟಿದ ನಂತ್ರ, ಟಾಯ್ಲೆಟ್‍ಗೆ ಹೋಗಿಬಂದ ಮೇಲೆ, ಮಕ್ಕಳಿಗೆ ಡೈಪರ್ ಚೇಂಜ್ ಮಾಡಿದ ನಂತ್ರ ಚೆನ್ನಾಗಿ ಕೈಗಳನ್ನು ತೊಳೆದುಕೊಳ್ಳುವುದು.


    * ಸೀನುವಾಗ, ಕೆಮ್ಮುವಾಗ ಬಾಯಿಗೆ ಅಡ್ಡಲಾಗಿ ಬಟ್ಟೆ ಬಳಸುವುದು.
    * ಮನೆಯಲ್ಲಿ, ಮತ್ತೆ ಹೊರ ಹೋಗುವಾಗ ಪ್ರತ್ಯೇಕ ನೀರಿನ ಬಾಟಲ್, ಹ್ಯಾಂಡ್ ಟವಲ್ ಬಳಸುವುದು.
    * ರಾತ್ರಿ ವೇಳೆ ಮಕ್ಕಳನ್ನು ಬೆಚ್ಚಗಿಡುವುದು.
    * ಮಲಗುವಾಗ ಮಕ್ಕಳ ಕೈ, ಕಾಲುಗಳಿಗೆ ಕ್ರೀಮ್ ಹಚ್ಚುವುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಾದಪ್ಪನ ಭಕ್ತರೇ ಸನ್ನಿಧಿಯಲ್ಲಿ ಸ್ನಾನ ಮಾಡುವ ಮೊದಲು ಎಚ್ಚರ..!

    ಮಾದಪ್ಪನ ಭಕ್ತರೇ ಸನ್ನಿಧಿಯಲ್ಲಿ ಸ್ನಾನ ಮಾಡುವ ಮೊದಲು ಎಚ್ಚರ..!

    ಚಾಮರಾಜನಗರ: ಪಾವಿತ್ರತೆಗೆ ಹೆಸರಾಗಿರುವ ಮಲೆಮಹದೇಶ್ವರ ಬೆಟ್ಟದಲ್ಲಿ ಸ್ನಾನ ಮಾಡಿದರೆ ಪಾಪಗಳು ಕಳೆದು ಹೋಗುತ್ತವೆ ಎಂದುಕೊಂಡಿರುವ ಭಕ್ತರಿಗೆ ಕಾಯಿಲೆಗಳು ಬರುವ ಎಲ್ಲಾ ಲಕ್ಷಣಗಳು ಮಾದಪ್ಪನ ಸನ್ನಿಧಿಯಲ್ಲಿ ಗೋಚರವಾಗುತ್ತಿವೆ.

    ರಾಜ್ಯದಲ್ಲಿ ಅತೀ ಹೆಚ್ಚು ಆದಾಯ ತಂದುಕೊಡುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿರುವ ಮಲೆಮಹದೇಶ್ವರ ಬೆಟ್ಟ ಇದೀಗ ಅಕ್ಷರಶಃ ಕಾಯಿಲೆಗಳನ್ನು ತಂದೊಡ್ಡುವ ಸ್ಥಿತಿಯಲ್ಲಿ ಇದೆ.

    ಮಾದಪ್ಪನ ದರ್ಶನ ಪಡೆಯುವ ಮುನ್ನ ಸನ್ನಿಧಿಯಲ್ಲಿರುವ ಅಂತರಗಂಗೆಯಲ್ಲಿ ಭಕ್ತರು ಮುಳುಗಿದರೆ ಪಾವಿತ್ರತೆ ಬರುತ್ತೆ ಎಂದು ನಂಬಿದ್ದಾರೆ. ಆದರೆ ಇದೀಗ ಈ ಅಂತರ ಗಂಗೆಯಲ್ಲಿ ಮುಳುಗಿದರೆ ಪಾವಿತ್ರತೆ ಬರಲ್ಲ, ಬದಲಾಗಿ ಕಾಯಿಲೆಗಳು ಬಂದೊದಗುತ್ತವೆ. ಪಾವಿತ್ರತೆಗೆ ಹೆಸರಾಗಿರುವ ಅಂತರಗಂಗೆ ಇದೀಗ ಅಕ್ಷರಶಃ ಮಲೀನಗೊಂಡು ಕೊಳಕು ನಾರುತ್ತಿದೆ ಎಂದು ಭಕ್ತರು ಹೇಳುತ್ತಿದ್ದಾರೆ.

    ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರದ ಬೇಜವಾಬ್ದಾರಿಯಿಂದ ಅಂತರಗಂಗೆಯಲ್ಲಿ ಕೊಳಕು ನೀರು ಸೇರಿಕೊಂಡು ಈ ನೀರು ತನ್ನ ಪವಿತ್ರತೆ ಕಳೆದುಕೊಂಡು ಕಾಯಿಲೆಯನ್ನು ತಂದೊಡ್ಡುವ  ಸ್ಥಾನವಾಗಿ ಬದಲಾಗಿದೆ. ಈ ನೀರಲ್ಲಿ ಪ್ರತಿನಿತ್ಯ ಸಾವಿರಾರು ಭಕ್ತರು ಮುಳುಗಿ ಮಾದಪ್ಪನ ದರ್ಶನ ಪಡೆಯುತ್ತಾರೆ.

    ಇದಲ್ಲದೇ ನವಂಬರ್ 6, 7 ರಂದು ಮಾದಪ್ಪನ ಬೆಟ್ಟದಲ್ಲಿ ನಡೆಯುವ ದೀಪಾವಳಿ ದೊಡ್ಡ ರಥೋತ್ಸವಕ್ಕೆ ಲಕ್ಷಕ್ಕೂ ಅಧಿಕ ಭಕ್ತರು ಬರುತ್ತಾರೆ. ಅವರೆಲ್ಲರೂ ಇದೇ ಅಂತರಗಂಗೆಗೆ ಬಂದು ಮುಳುಗುತ್ತಾರೆ. ಭಕ್ತರು ಇಲ್ಲಿ ಮುಳುಗಿದರೆ ಜೀವನ ಪವಿತ್ರವಾಗುತ್ತೆ ಎಂಬ ಭಾವನೆಯಿಂದ ಮುಳುಗುತ್ತಾರೆ. ಆದರೆ ಪ್ರಾಧಿಕಾರದ ಕುರುಡು ನಡೆಯಿಂದ ಭಕ್ತರು ಮಾರಕ ಕಾಯಿಲೆಗಳಿಗೆ ತುತ್ತಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಭಕ್ತ ಶಿವಕುಮಾರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೈಲಟ್‍ಗೆ ಅನಾರೋಗ್ಯ- ಮಂಗ್ಳೂರು ರನ್‍ವೇಯಲ್ಲಿ ನಿಂತ ವಿಮಾನ

    ಪೈಲಟ್‍ಗೆ ಅನಾರೋಗ್ಯ- ಮಂಗ್ಳೂರು ರನ್‍ವೇಯಲ್ಲಿ ನಿಂತ ವಿಮಾನ

    ಮಂಗಳೂರು: ಪೈಲಟ್‍ಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನಿಂದ ದುಬೈಗೆ ಹೊರಡಬೇಕಿದ್ದ ವಿಮಾನವೊಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇನಲ್ಲೇ ನಿಂತುಕೊಂಡಿದೆ.

    ಮಂಗಳವಾರ ತಡರಾತ್ರಿ 12.45ಕ್ಕೆ ಮಂಗಳೂರಿನಿಂದ ದುಬೈಗೆ ಹಾರಬೇಕಿದ್ದ ಸ್ಪೈಸ್ ಜೆಟ್-ಎಸ್ ಜಿ59 ವಿಮಾನವು ರನ್ ವೇನಲ್ಲೇ ನಿಂತುಕೊಂಡಿದೆ. ಸುಮಾರು 188 ಪ್ರಯಾಣಿಕರಿದ್ದ ವಿಮಾನದ ಪೈಲಟ್ ಏಕಾಏಕಿ ಅನಾರೋಗ್ಯಕ್ಕೀಡಾದ ಹಿನ್ನೆಲೆಯಲ್ಲಿ ಸಂಸ್ಥೆ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿದೆ.

    ಅಲ್ಲದೇ ಬದಲಿ ಪೈಲಟ್ ಗಾಗಿ ನಿಲ್ದಾಣಾಧಿಕಾರಿಗಳು ಕಾಯುತ್ತಿದ್ದು, ಬದಲಿ ಪೈಲಟ್ ಟರ್ಕಿಯಿಂದ ಬರಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ. ಪರ್ಯಾಯ ಪೈಲಟ್ ಮಧ್ಯಾಹ್ನ ತಲುಪುವ ನಿರೀಕ್ಷೆ ಇದ್ದು, ವಿಮಾನ ತೆರಳಲು ಸಂಜೆ 4 ಗಂಟೆ ಸಮಯ ನಿಗದಿ ಪಡಿಸಿದೆ. ಸ್ಪೈಸ್ ಜೆಟ್ ಸಂಸ್ಥೆ ಕಾಂಟ್ರಾಕ್ಟ್ ಆಧಾರದ ಮೇಲೆ ಬದಲಿ ಪೈಲಟ್ ನಿಯೋಜನೆ ಮಾಡಿದೆ.

    ವಿಮಾನ ನಿಲ್ದಾಣದಲ್ಲಿ ಉಳಿದಿದ್ದ ಪ್ರಯಾಣಿಕರನ್ನು, ಅಧಿಕಾರಿಗಳು ಮಂಗಳೂರಿನ ಹೊಟೇಲ್ ನಲ್ಲಿ ವಿಶ್ರಾಂತಿ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ಕೂಡಲೇ ಬದಲಿ ಪೈಲಟ್ ಅನ್ನು ನಿಯೋಜಿಸದ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಪ್ರಯಾಣಿಕರು ಹಿಡಿಶಾಪ ಹಾಕಿದ್ದಾರೆ.

  • ಕುಂತ್ರು ನಿಂತ್ರು ಬಿಡಂಗಿಲ್ಲ, ಊಟನೂ ತಿನ್ನಂಗಿಲ್ಲ- ಮುಳಬಾಗಿಲು ಜನತೆಗೆ ಮುಕ್ತಿ ಎಂದು?

    ಕುಂತ್ರು ನಿಂತ್ರು ಬಿಡಂಗಿಲ್ಲ, ಊಟನೂ ತಿನ್ನಂಗಿಲ್ಲ- ಮುಳಬಾಗಿಲು ಜನತೆಗೆ ಮುಕ್ತಿ ಎಂದು?

    ಕೋಲಾರ: `ಈಗ’ ಸಿನಿಮಾದಲ್ಲಿ ನೊಣದ ಕಾಟವನ್ನು ಸುದೀಪ್ ಎದುರಿಸಿದಂತೆ ಸದ್ಯ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಯಳಗೊಂಡಹಳ್ಳಿ ಜನರು ಎದುರಿಸುತ್ತಿದ್ದಾರೆ.

    ಕಳೆದ ಹದಿನೈದು ದಿನಗಳಿಂದ ಜನರು ರಾತ್ರಿ ನಿದ್ದೆ ಮಾಡುತ್ತಿಲ್ಲ, ಕೂತಲ್ಲಿ ಕೂರುತ್ತಿಲ್ಲ, ನಿಂತಲ್ಲಿ ನಿಲ್ಲುತ್ತಿಲ್ಲ. ಮನೆ ಬಾಗಿಲನ್ನು ತಗೆದು ಒಳಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ನೊಣಗಳ ದಾಳಿಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಒಂದು ಕಡೆ ಕುಳಿತು ಊಟ ಮಾಡುವಂತಿಲ್ಲಾ, ನೀರು ಕುಡಿಯುವಂತಿಲ್ಲ. ಮನೆಯಿಂದ ಹೊರಗೆ ಬಂದರೆ ಸಾಕು, ಲಕ್ಷಾಂತರ ನೊಣಗಳು ಜನರ ಮೇಲೆ ದಾಳಿ ಮಾಡುತ್ತವೆ. ಅಡುಗೆ ಮನೆಯಲ್ಲೂ ಸಹ ನೊಣಗಳ ಕಾಟ ಹೆಚ್ಚಾಗಿದೆ.

    ಸಮಯಕ್ಕೆ ಸರಿಯಾಗಿ ಊಟ ನಿದ್ದೆಯಿಲ್ಲದೆ ಗ್ರಾಮಸ್ಥರು ಅಸ್ವಸ್ಥಗೊಂಡಿದ್ದಾರೆ. ನೊಣಗಳ ದಾಳಿಯಿಂದ ಏನೆಲ್ಲಾ ರೋಗ ಬರುತ್ತದೋ ಎನ್ನುವ ಭೀತಿಯನ್ನು ಗ್ರಾಮಸ್ಥರು ಎದುರಿಸುತ್ತಿದ್ದಾರೆ. ಸದ್ಯ ಗ್ರಾಮದ ಕೆಲವರು ವಿವಿಧ ಕಾಯಿಗಳಿಗೆ ತುತ್ತಾಗಿದ್ದು, ಮತ್ತಷ್ಟು ಆತಂಕದ ವಾತಾವರಣ ನಿರ್ಮಾಣವಾಗಿದೆ.

    ನೋಣ ಹೆಚ್ಚಾಗಿದ್ದು ಏಕೆ:
    ನೊಣಗಳ ಕಾಟ ಹೆಚ್ಚಾಗಲು ಕಾರಣ ಗ್ರಾಮದ ಬಳಿಯ ಆರ್.ವಿ.ಬ್ರೀಡಿಂಗ್ ಕೋಳಿ ಫಾರ್ಮ್. ಈ ಕುರಿತು ಕೋಳಿ ಫಾರ್ಮ್ ಮಾಲೀಕರಿಗೆ ತಿಳಿಸಿದ್ದರೂ ಅವರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಷ್ಟೇ ಅಲ್ಲದೇ ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯ್ತಿಗೆ ದೂರು ಕೊಟ್ಟಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಒಂದು ವೇಳೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕೋಳಿ ಫಾರ್ಮ್ ಮಾಲೀಕರು ಕ್ರಮ ಕೈಗೊಳ್ಳದಿದ್ದರೆ, ಬಲವಂತವಾಗಿ ಕೋಳಿ ಫಾರ್ಮ್ ಅನ್ನು ಖಾಲಿ ಮಾಡಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

  • ಲಾಲು ಪ್ರಸಾದ್ ಯಾದವ್‍ಗೆ 6 ವಾರ ತಾತ್ಕಾಲಿಕ ಜಾಮೀನು ಮಂಜೂರು

    ಲಾಲು ಪ್ರಸಾದ್ ಯಾದವ್‍ಗೆ 6 ವಾರ ತಾತ್ಕಾಲಿಕ ಜಾಮೀನು ಮಂಜೂರು

    ಪಟ್ನಾ: ರಾಂಚಿಯ ಹೈಕೋರ್ಟ್ ಮೇವು ಹಗರಣದ ಅಪರಾಧಿ, ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಆರೋಗ್ಯ ಚಿಕಿತ್ಸೆಗಾಗಿ ಆರು ವಾರಗಳ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ.

    ಲಾಲು ಪ್ರಸಾದ್ ಪುತ್ರನ ತೇಜ್ ಪ್ರತಾಪ್ ಯಾದವ್ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಶುಕ್ರವಾರ ಪಟ್ನಾಗೆ ಆಗಮಿಸಿದ್ದರು. ಈ ವೇಳೆಯೇ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಶನಿವಾರ ತೇಜ್ ಪ್ರತಾಪ್ ವಿವಾಹ ಸಮಾರಂಭ ನಡೆಯಲಿದೆ.

    ಇದಕ್ಕೂ ಮುನ್ನವೇ ಲಾಲು ಪ್ರಸಾದ್ ಯಾದವ್ ಪುತ್ರನ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಮೂರು ದಿನಗಳ ಪೆರೋಲ್ ಪಡೆದಿದ್ದರು. ತೇಜ್ ಪ್ರತಾಪ್ ಯಾದವ್ ಹಾಗೂ ಐಶ್ವರ್ಯಾ ವಿವಾದ ನಿಶ್ಚಿತಾರ್ಥ ಸಮಾರಂಭವೂ ಏಪ್ರಿಲ್ 18 ರಂದು ಪಟ್ನಾದ ಮಯೂರ ಹೋಟೆಲ್ ನಲ್ಲಿ ನೆರವೇರಿತ್ತು. ಮೇ 12 ರಂದು ವಿವಾಹ ಸಮಾರಂಭ ನಡೆಯಲಿದೆ.

    ಪ್ರತಾಪ್ ನಿಶ್ಚಿತಾರ್ಥ ಸಮಾರಂಭದ ವೇಳೆ ಲಾಲು ಪ್ರಸಾದ್ ಯಾದವ್ ಜೈಲಿನಲ್ಲಿ ಇದ್ದ ಕಾರಣ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಈ ವೇಳೆ ಪ್ರತಾಪ್ ತಮ್ಮ ನೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡು `ಮೀಸ್ ಯೂ ಪಾ’ ಎಂದು ಬರೆದುಕೊಂಡಿದ್ದರು.

    ಸದ್ಯ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಾಲು ಪ್ರಸಾದ್ ಯಾದವ್ ಅನಾರೋಗ್ಯ ಸಮಸ್ಯೆಯಿಂದ ಜಾರ್ಖಂಡ್ ನ ಆರ್ ಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ಇದನ್ನು ಓದಿ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ಮೋದಿ ಕಾರಣ: ಲಾಲೂ ಕಿಡಿ

  • ಕಲುಷಿತ ನೀರು ಸೇವಿಸಿ-60ಕ್ಕೂ ಹೆಚ್ಚು ಜನರು ಆಸ್ಪತ್ರೆ ಪಾಲು

    ಕಲುಷಿತ ನೀರು ಸೇವಿಸಿ-60ಕ್ಕೂ ಹೆಚ್ಚು ಜನರು ಆಸ್ಪತ್ರೆ ಪಾಲು

    ಬೆಂಗಳೂರು: ಒಳಚರಂಡಿ ಪೈಪ್‍ಲೈನ್ ಒಡೆದು ಕುಡಿಯುವ ನೀರಿಗೆ ಕಲುಷಿತ ನೀರು ಮಿಶ್ರಣವಾಗಿದ್ದು. ಈ ನೀರನ್ನು ಸೇವಿಸಿರುವ 60ಕ್ಕೂ ಹೆಚ್ಚು ಜನರು ಆನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆ ಸೇರಿರುವ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್‍ನ 10 ಕ್ರಾಸ್‍ನಲ್ಲಿ ನಡೆದಿದೆ.

    ಕಳೆದ ಮೂರು ದಿನಗಳಿಂದ ಲೇಔಟ್‍ನ 5ನೇ ಕ್ರಾಸ್‍ನಲ್ಲಿ ಒಳಚರಂಡಿ ಪೈಪ್‍ಲೈನ್ ಒಡೆದು ಹೋಗಿದ್ದು, ಮನೆಗಳಿಗೆ ಬರುವ ಕುಡಿಯುವ ನೀರಿಗೆ ಕಲುಷಿತ ನೀರು ಮಿಶ್ರಣವಾಗಿ ಬರುತ್ತಿದೆ. ಪೈಪ್ ಸರಿಪಡಿಸಲು ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಿದರು ಯಾವುದೇ ಪ್ರಯೋಜನವಿಲ್ಲ ಎಂದು ಸ್ಥಳೀಯರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

    ಕಲುಷಿತ ನೀರನ್ನು ಕುಡಿದ ಜನರು ತೀವ್ರ ಅನಾರೋಗ್ಯಕ್ಕೆ ಒಳಗಾಗುತ್ತಿದ್ದು, ವಾಂತಿ, ಭೇದಿ, ಜ್ವರದಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಯಾವುದೇ ಅಧಿಕಾರಿಗಳು ಇದರ ಬಗ್ಗೆ ಗಮನ ನೀಡುತ್ತಿಲ್ಲ. ಇನ್ನೂ ಇದೇ ನೀರನ್ನು ಸ್ನಾನಕ್ಕೆ ಬಳಸಲು ಸಾಧ್ಯವಿಲ್ಲದಷ್ಟು ಕೆಟ್ಟ ವಾಸನೆ ಬರುತ್ತಿದೆ. ಏರಿಯಾದ ಎಲ್ಲಾ ಮಕ್ಕಳ ಆರೋಗ್ಯ ಮೇಲು ಕೆಟ್ಟ ಪರಿಣಾಮ ಬೀರಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಇದು ರಾಜ್ಯದ ಗೃಹ ಸಚಿವರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ್ರದೇಶವಾಗಿದೆ. ಪ್ರಸ್ತುತ ಇದುವರೆಗೂ ಕಲುಷಿತ ನೀರು ಸೇವಿಸಿ 60 ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಿದ್ದರು ಒಮ್ಮೆಯೂ ಬಿಡಬ್ಲ್ಯೂಎಸ್‍ಎಸ್‍ಪಿ ಭೇಟಿ ಕೊಟ್ಟಿಲ್ಲ. ಜಲಮಂಡಳಿಯವರು ಈ ಪೈಪ್ ಲೈನ್ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಒಟ್ಟಾರೆ ರಾಜ್ಯದ ಗೃಹ ಸಚಿವರ ಕ್ಷೇತ್ರದ ಜನರು ಕಲುಷಿತ ನೀರು ಕುಡಿದು ಅನುಭವಿಸುತ್ತಿರುವ ಕಷ್ಟಗಳಿಗೆ ಅಧಿಕಾರಿಗಳು ಅದಷ್ಟು ಬೇಗ ಪರಿಹಾರ ನೀಡಬೇಕಿದೆ.