Tag: Siblings

  • National Siblings day | ಮರೆಯಲಾಗದ ಅವಳು..

    National Siblings day | ಮರೆಯಲಾಗದ ಅವಳು..

    ತಾಯಿ, ಆಕೆ ದೇವರ ಸಮಾನವಾದರೆ, ಆ ದೇವರೇ ನನಗೆ ನೀಡಿದ ಎರಡನೇ ತಾಯಿ ಇವಳು. ನೋವು ಎಂದಾಗ ನನಗಾಗಿ ಮರುಗಿದವಳು. ಸುಖದಲ್ಲಿ ನನ್ನೊಂದಿಗೆ ನಡೆದವಳು. ಹಸಿದಾಗ ತುತ್ತು ನೀಡಿದವಳು. ತನ್ನೆಲ್ಲಾ ಕಷ್ಟವನ್ನು ಬದಿಗೊತ್ತಿ ನನಗಾಗಿಯೇ ಜೀವ ಮುಡಿಪಿಟ್ಟವಳು. ಆಕೆಯ ಬಗ್ಗೆ ಬರೆದಷ್ಟು ಮುಗಿಯದು. ನನಗೆ ದೇವರು ನೀಡಿದ ಅತ್ಯಮೂಲ್ಯ ಉಡುಗೊರೆ ಎಂದರೆ ನನ್ನ ಒಡಹುಟ್ಟಿದ ಅಕ್ಕ.

    ಥೇಟ್ ಅಮ್ಮನಂತಹುದೇ ಇನ್ನೊಂದು ಜೀವ. ಜೀವಕ್ಕೆ ಜೀವ ಕೊಡುವ ಗೆಳತಿಯಾಗುತ್ತಾಳೆ, ಬದ್ಧ ವೈರಿಯೂ ಆಗಿರುತ್ತಾಳೆ. ಮುನಿಸಿಕೊಂಡು ಮಾತು ಬಿಡುತ್ತಾಳೆ. ಮತ್ತೊಮ್ಮೆ ಮಗುವಿನಂತೆ ನನ್ನ ಮುದ್ದು ಮಾಡುತ್ತಾಳೆ. ಅಂದದಲ್ಲಿ ಸುದ್ರೂಪಿಯಾಗಿರುವ ಅವಳು, ತಾಳ್ಮೆಯಲ್ಲಿ ಭೂದೇವಿಯನ್ನು ಹೋಲುತ್ತಾಳೆ. ಹೌದು ಅವಳೇ ನನ್ನ ಪ್ರೀತಿಯ ‘ಅಕ್ಕ’.

    ನನ್ನ ಜೀವನದ ಮೊದಲ ಆದರ್ಶ ಮಹಿಳೆ ಎಂದರೆ ನನ್ನ ಅಕ್ಕ. ಅವಳನ್ನು ನೋಡಿ ಬೆಳೆದವಳು ನಾನು. ಆದರೆ ಆಕೆಯದು ಭೂದೇವಿಯ ತಾಳ್ಮೆಯಾದರೆ ನಾನು ಆಕೆ ತದ್ವಿರುದ್ಧ ಮುಗಿನ ತುದಿಯಲ್ಲಿ ಕೋಪವನ್ನು ಇಟ್ಟುಕೊಂಡವಳು. ಹಠಹಿಡಿದಾಗ ನನ್ನ ಕಿವಿ ಹಿಂಡಿ ಬುದ್ಧಿ ಹೇಳಿ ಸರಿದಾರಿಗೆ ತಂದು ನನ್ನ ಪ್ರತಿ ಹೆಜ್ಜೆ ಹೆಜ್ಜೆಗೂ ಕಾವಲಾಗಿ ನಿಂತು ದೂರದಿಂದಲೇ ನನ್ನ ಯಶಸ್ಸನ್ನು ನೋಡುತ್ತಿದ್ದಳು.

    ಅಕ್ಕನಿಗೆ ಏನೇ ತಂದು ಕೊಟ್ಟರೂ ಅದು ತನಗೂ ಬೇಕು. ಅಕ್ಕ ಚೂಡಿ ಹಾಕುವಷ್ಟು ದೊಡ್ಡವಳಾಗಿದ್ದಾಳೆಂದು ಚೂಡಿ ತಂದು ಕೊಟ್ಟರೆ, ತನಗೆ ಚೂಡಿ ಹಾಕಲು ಬರದಿದ್ದರೂ ಚಿಂತೆಯಿಲ್ಲ. ನನಗೂ ಅದು ಬೇಕು. ತಂಗಿಯ ಈ ತರಹದ ಹಠಗಳಿಗೆ ಪಾಪ ಅಕ್ಕ ಕರ್ಣನಂತೆ ತ್ಯಾಗಮಯಿಯಾದವಳು. ನನ್ನ ತಪ್ಪಿಗೆ ಎಷ್ಟೋ ಸಲ ಬೈಸಿಕೊಂಡು ಸದಾ ನನ್ನ ಜೊತೆಗಿದ್ದ ಜೀವ ಅವಳು.

    ಚಿಕ್ಕವಳಿದ್ದಾಗ ಅಕ್ಕನ ಬೆಲೆ ಗೊತ್ತಾಗದ ನನಗೆ ಊರು ಬಿಟ್ಟು ಬಂದ ಮೇಲೆ ಎಲ್ಲವೂ ತಿಳಿಯಿತು. ಪ್ರತಿಯೊಂದು ಕ್ಷಣವು ನಾನು ಆಕೆಯನ್ನು ನೆನಪಿಸಿಕೊಂಡು, ಆಕೆಯೊಂದಿಗಿದ್ದ ಕ್ಷಣಗಳನ್ನೆಲ್ಲಾ ಮೆಲುಕು ಹಾಕುತ್ತಿರುತ್ತೇನೆ. ಕೈ ತುತ್ತು ಕೊಟ್ಟಾಗ ಬೇಡ ಎಂದವಳು. ಈಗ ಆ ಒಂದು ತುತ್ತಿಗಾಗಿ ಹಾತೊರೆಯುತ್ತಿರುತ್ತೇನೆ. ಆಕೆ ನನ್ನೊಂದಿಗೆ ಇರದಿದ್ದಾಗ ಆಕಾಶವೇ ನನ್ನ ತಲೆ ಮೇಲೆ ಬಿದ್ದಂತ ಅನುಭವವಾಗಿದ್ದು ಉಂಟು. ಪ್ರತಿದಿನ ಕರೆ ಮಾಡಿದಾಗ ಕಷ್ಟ ಆಗ್ತಾ ಇದ್ಯಾ? ಎಂದು ಅವಳು ಕೇಳಿದಾಗೆಲ್ಲಾ ಗಂಟಲು ತನಕ ಬಂದ ಮಾತುಗಳೆಲ್ಲಾ ಹಾಗೇ ಇಳಿದು ಹೋಗುತ್ತಿತ್ತು.

    ನನ್ನ ಜೀವನದಲ್ಲಿ ಕಷ್ಟಗಳನ್ನು ಸುಳಿಯಲು ಬಿಡದ ಆಕೆಗೆ ಇನ್ನಾದರೂ ಸಂತೋಷವೊಂದೇ ಇರಲಿ ಎಂಬ ಕಿರು ಆಸೆ ನನ್ನದು. ಮನೆಯಲ್ಲಿದ್ದಾಗ ನನ್ನ ಆರೈಕೆಯಲ್ಲೇ ದಿನ ಕಳೆಯುತ್ತಿದ್ದವಳಿಗೆ ಈಗ ಕೈ ಕಾಲು ಕಟ್ಟಿ ಹಾಕಿದ ಅನುಭವ. ನನ್ನ ಬರುವಿಕೆಗೇ ಶಬರಿಯಂತೆ ಕಾಯುವ ಅವಳು. ಹೆತ್ತಮ್ಮನಿಗಿಂತಲೂ ಮಿಗಿಲು ನನಗೆ. ಆಕೆ ನನ್ನ ಜೀವನದಲ್ಲಿ ಇರದೇ ಇರುತ್ತಿದ್ದರೆ ನಾನು ಶೂನ್ಯವಾಗಿರುತ್ತಿದೆ ಎಂದು ಅದೆಷ್ಟೋ ಬಾರಿ ಅನ್ನಿಸಿದ್ದು ಉಂಟು. ನನಗಾಗಿ ಆಕೆಯ ಸಂತಸವನ್ನು ತ್ಯಾಗ ಮಾಡಿ, ಜವಾಬ್ದಾರಿಯೆಂಬ ಮೂಟೆಯನ್ನು ಹೆಗಲ ಮೇಲೆ ಹೊತ್ತು ನನ್ನೊಂದಿಗೆ ಬಂದವಳು ಅವಳು.

    ಜೀವದ ಗೆಳತಿಯಂತೆ ನನ್ನೊಂದಿಗೆ ಬಂದ ಆಕೆಗೆ ಮದುವೆಯಾಗಿ ಗಂಡನ ಮನೆ ಸೇರಿದರೆ ನನ್ನ ಗತಿ ಮುಂದೇನು ಎಂಬುವುದೇ ಚಿಂತೆಯಾಗಿದೆ. ಗಂಡ ಮನೆ ಸೇರಿದ ಅವಳು ನನ್ನ ಮರೆತು ಬಿಟ್ಟರೆ ಎಂಬ ಭಯ ಹಾಗೂ ಅಲ್ಲಿ ಆಕೆ ಹೊಂದಿಕೊಳ್ಳುವಳೇ ಎಂಬ ಚಿಂತೆ ಸದಾ ನನ್ನ ಕಾಡುತ್ತಿರುತ್ತದೆ. ಕಷ್ಟ ಬಂದರೂ ಅದನ್ನು ಮರೆಮಾಚಿ ಎಲ್ಲರಿಗೂ ಪ್ರೀತಿ ಹಂಚುವ ಮನಸ್ಸಿನವಳಿಗೆ ಕಷ್ಟವೇ ಸೋಕದಿರಲಿ ಎಂಬ ಕೋರಿಕೆ ನನ್ನದು. ನನ್ನ ಜೀವನದ ದೇವತೆಯ ಖುಷಿಯನ್ನೇ ಬಯಸುವ ಪ್ರೀತಿಯ ಮುದ್ದು, ಪೆದ್ದು ತಂಗಿ ನಾನು.

  • ಅಗ್ನಿ ಅವಘಡ: ಮಹಿಳೆ ಸೇರಿ ಒಡಹುಟ್ಟಿದ ಮೂವರು ಸಜೀವ ದಹನ

    ಅಗ್ನಿ ಅವಘಡ: ಮಹಿಳೆ ಸೇರಿ ಒಡಹುಟ್ಟಿದ ಮೂವರು ಸಜೀವ ದಹನ

    ನವದೆಹಲಿ: ಅಮೆರಿಕಾರದ ಮೆಂಫಿಸ್ ಉಪನಗರದ ಟೆನ್ನೆಸ್ಸಿಯಲ್ಲಿ ನಡೆದ ಬೆಂಕಿ ದುರುಂತದಲ್ಲಿ ತೆಲಂಗಾಣ ಮೂಲದ ಮೂವರು ಒಡಹುಟ್ಟಿದವರು ಸೇರಿದಂತೆ ಮತ್ತೋರ್ವ ಮಹಿಳೆ ಸಜೀವ ದಹನವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ತೆಲಂಗಾಣ ಮೂಲದ ಆರನ್ ನಾಯಕ್ (17), ಶರೋನ್ ನಾಯಕ್ (14) ಹಾಗೂ ಜಾಯ್ ನಾಯಕ್ (15) ಒಡಹುಟ್ಟಿದವರಾಗಿದ್ದಾರೆ. 46 ವರ್ಷದ ಕ್ಯಾರಿ ಕಾಡ್ರಿಟ್ ಸಹ ಬೆಂಕಿ ದುರಂತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

    ಭಾನುವಾರ ರಾತ್ರಿ 11 ಸುಮಾರಿಗೆ ಕ್ಯಾರಿ ಕಾಡ್ರಿಟ್ ವಾಸಿಸುತ್ತಿದ್ದ ಮನೆಗೆ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಕೆನ್ನಾಲಿಗೆಗೆ ಕ್ಯಾರಿ ಕಾಡ್ರೀಟ್ ಸೇರಿದಂತೆ ಮೂವರು ಒಡಹುಟ್ಟಿದವರೂ ಸಹ ಮೃತಪಟ್ಟಿದ್ದರು. ತೆಲಂಗಾಣ ಮೂಲದ ಮೂವರು ಮಕ್ಕಳು ಅಮೆರಿಕಾದ ದಂಪತಿಗಳ ಜೊತೆ ವಾಸವಾಗಿದ್ದರು ಎನ್ನುವ ಮಾಹಿತಿಯನ್ನು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

    ಘಟನೆ ಕುರಿತು ಫ್ರೆಂಚ್ ಕ್ಯಾಂಪ್ ಸಮುದಾಯ ತನ್ನ ಫೇಸ್ಬುಕ್ ಖಾತೆಯಲ್ಲಿ, ಪಾಸ್ಟರ್ ನಾಯ್ಕ್ ಮತ್ತು ಆಕೆಯ ಪತ್ನಿಗಾಗಿ ಪ್ರಾರ್ಥಿಸೋಣ. ದಂಪತಿ ತಮ್ಮ ಮೂರು ಅಮೂಲ್ಯ ಮಕ್ಕಳನ್ನು ಅಮೆರಿಕಾಕ್ಕೆ ಕಳುಹಿಸಿದ್ದರು. ಆದರೆ ಅವರು ಅಗ್ನಿಗೆ ಆಹುತಿಯಾಗಿದ್ದಾರೆ. ಈ ಮೂರು ಮಕ್ಕಳನ್ನು ಇಡೀ ಪಟ್ಟಣವೇ ಪ್ರೀತಿಸುತ್ತಿತ್ತು. ಆದರೆ ಅವರ ಅಕಾಲಿಕ ಮರಣದಿಂದಾಗಿ ಇಡೀ ಪಟ್ಟಣವೇ ದು:ಖದಲ್ಲಿ ಮುಳುಗಿದೆ. ನಮಗೆ ಗೊತ್ತು ಹೆತ್ತವರ ನೋವನ್ನು ಅಳೆಯಲು ಸಾಧ್ಯವಿಲ್ಲವೆಂದು ಬರೆದು ಪೋಸ್ಟ್ ಮಾಡಿದೆ.

    ಮಾಹಿತಿಗಳ ಪ್ರಕಾರ ಮಕ್ಕಳು ಸ್ಥಳೀಯ ಚರ್ಚ್ ಮಿಷನರಿಯಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದರು. ಇವರನ್ನು ಡ್ಯಾನಿಯಲ್ ಕಾಡ್ರಿಟ್ ದಂಪತಿ ನೋಡಿಕೊಳ್ಳುತ್ತಿದ್ದರು. ಆದರೆ ಬೆಂಕಿ ದುರಂತದಲ್ಲಿ ಡ್ಯಾನಿಯಲ್ ಹಾಗೂ ಅವರ 13 ವರ್ಷದ ಕೋಲ್ ಮಾತ್ರ ಬದುಕುಳಿದಿದ್ದಾರೆ. ಸದ್ಯ ಚರ್ಚ್ ಮಕ್ಕಳು ತೆಲಂಗಾಣ ಮೂಲದವರೆಂದು ಮಾತ್ರ ಹೇಳಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv