Tag: Shubmam Gill

  • 2027ರ ವಿಶ್ವಕಪ್‌ ಆಡೋದು ಡೌಟ್‌ – ಆಸೀಸ್‌ ಸರಣಿ ಬಳಿಕ ʻಹಿಟ್‌ಮ್ಯಾನ್‌, ಕ್ರಿಕೆಟ್‌ ಲೋಕದ ಕಿಂಗ್‌ ಯುಗ ಅಂತ್ಯ?

    2027ರ ವಿಶ್ವಕಪ್‌ ಆಡೋದು ಡೌಟ್‌ – ಆಸೀಸ್‌ ಸರಣಿ ಬಳಿಕ ʻಹಿಟ್‌ಮ್ಯಾನ್‌, ಕ್ರಿಕೆಟ್‌ ಲೋಕದ ಕಿಂಗ್‌ ಯುಗ ಅಂತ್ಯ?

    ಭಾರತೀಯ ಕ್ರಿಕೆಟ್ ಲೋಕ ಎಂದೂ ನೆನಪಿಟ್ಟುಕೊಳ್ಳುವ ಸ್ಟಾರ್‌ ಆಟಗಾರ ಹಿಟ್‌ಮ್ಯಾನ್‌ ರೋಹಿತ್ ಶರ್ಮಾ (Rohit Sharma). ಇನ್ನೂ ಕೆಲ ವರ್ಷಗಳವರೆಗೆ ಟಾಪ್-10 ಕ್ರಿಕೆಟಿಗರ ಪಟ್ಟಿಯಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಹೆಸರೆಂದರೇ ಅದು ರೋಹಿತ್ ಶರ್ಮಾ. ಅವರಿಗೆ ತಮ್ಮ ಕ್ರೆಕೆಟ್‌ ಬದುಕಿಗೆ ತೆರೆ ಎಳೆಯುವ ಸನಿಹಕ್ಕೆ ಬಂದಿದ್ದಾರೆ. ಅಲ್ಲದೇ ಕ್ರಿಕೆಟ್‌ ಲೋಕದ ಕಿಂಗ್‌ ಆಗಿ ಮೆರೆದಾಡಿದ ವಿರಾಟ್‌ ಕೊಹ್ಲಿ (Virat kohli) ಕೂಡ ಆಸ್ಟ್ರೇಲಿಯಾ ಏಕದಿನ ಸರಣಿ ಬಳಿಕ ಕ್ರಿಕೆಟ್‌ ವೃತ್ತಿ ಜೀವನಕ್ಕೆ ಗುಡ್‌ಬೈ ಹೇಳುವ ಸಾಧ್ಯತೆಗಳಿವೆ.

    ರೋಹಿತ್ ಶರ್ಮಾ ಅವರು ಈ ಮಟ್ಟಕ್ಕೆ ಬೆಳೆಯಲು ಕಠಿಣಶ್ರಮವೇ ಕಾರಣ. ಯಶಸ್ಸಿಗೆ ಮತ್ತೇನಾದ್ರೂ ಸೂತ್ರ ಇದೆಯಾ ಅಂತ ರೋಹಿತ್ ಅವರನ್ನೊಮ್ಮೆ ಕೇಳಿ ನೋಡಿದ್ರೆ ಅವರು ಕೊಡುವ ಆನ್ಸರ್, `ಹಾರ್ಡ್ ವರ್ಕ್.. ಹಾರ್ಡ್ ವರ್ಕ್.. ಓನ್ಲಿ ಹಾರ್ಡ್ ವರ್ಕ್’. ಬಾಲ್ಯದಿಂದಲೇ ರೋಹಿತ್‌ಗೆ ಕ್ರಿಕೆಟ್ (Cricket) ಅಂದರೆ ಪ್ರಾಣ. ಮುಂಬೈಗೆ ಬಂದ ಮೇಲೆ ಗಲ್ಲಿಗಲ್ಲಿಗಳಲ್ಲಿ ಕ್ರಿಕೆಟ್ ಆಡಿಕೊಂಡಿದ್ದರು. 2006ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಹಿಟ್‌ಮ್ಯಾನ್‌ 2007ರ ಹೊತ್ತಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಪಡೆದುಕೊಂಡರು. 2007ರ ಜೂನ್‌ 23ರಂದು ಐರ್ಲೆಂಡ್‌ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ (International Cricket) ಪದಾರ್ಪಣೆ ಮಾಡಿದರು. ಇದೀಗ ತಮ್ಮ 18 ವರ್ಷಗಳ ಕ್ರಿಕೆಟ್‌ ವೃತ್ತಿ ಜೀವನಕ್ಕೆ ತೆರೆ ಎಳೆಯುವ ಸನಿಹದಲ್ಲಿದ್ದಾರೆ. ಇದನ್ನೂ ಓದಿ: ಆಸೀಸ್‌ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ – ಏಕದಿನ ಕ್ರಿಕೆಟ್‌ಗೆ ಗಿಲ್‌ ಕ್ಯಾಪ್ಟನ್‌; ರೋಹಿತ್‌, ಕೊಹ್ಲಿ ನಿವೃತ್ತಿ ಬಯಸಿದ್ಯಾ ಬಿಸಿಸಿಐ?

    ರೋಹಿತ್‌ ಸಾಧನೆ
    ಭಾರತದ ಆತಿಥ್ಯದಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ 11 ಪಂದ್ಯಗಳ ಪೈಕಿ 10ರಲ್ಲಿ ಭಾರತ ವಿಜಯ ಸಾಧಿಸಿತ್ತು. ಈ ವೇಳೆ ರೋಹಿತ್‌ ಕ್ಯಾಪ್ಟನ್‌ ಆಗಿದ್ದರು. ಅಲ್ಲದೇ 2024ರಲ್ಲಿ ಭಾರತ ತಂಡಕ್ಕೆ ಟಿ20 ವಿಶ್ವಕಪ್‌, 2025ರಲ್ಲಿ ಚಾಂಪಿಯನ್ಸ್‌ ಟ್ರೋಫಿ ಗೆದ್ದುಕೊಟ್ಟರು. ಸದ್ಯ ಟಿ20, ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿರುವ ರೋಹಿತ್‌, ವಿರಾಟ್‌ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರಿಯುತ್ತಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟವಾಗಿದ್ದು, ಯುವ ಆಟಾರ ಶುಭಮನ್‌ ಗಿಲ್ ಅವರಿಗೆ ನಾಯಕನ ಪಟ್ಟ ಕಟ್ಟಲಾಗಿದೆ. ಆದರೆ ರೋಹಿತ್‌ ಶರ್ಮಾ ಅವರಿಂದ ನಾಯಕತ್ವ ಕಸಿದುಕೊಂಡಿರುವ ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಅವರ ಅಭಿಮಾನಿಗಳು ಕೆರಳಿದ್ದಾರೆ. ಈ ಮಧ್ಯೆ ಮಾಜಿ ಇಂಗ್ಲೆಂಡ್‌ ಆಟಗಾರ ಡೇವಿಡ್‌ ಗೋವರ್‌ ಅವರು, ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಅವರು 2027ರ ಏಕದಿನ ವಿಶ್ವಕಪ್‌ ಹೊತ್ತಿಗೆ ಭಾರತ ತಂಡದ ಭಾಗವಾಗಿರುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.‌  

    ಡೇವಿಡ್‌ ಗೋವರ್‌ ಹೇಳಿದ್ದೇನು?
    ರೋ-ಕೊ (ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ) ಖ್ಯಾತಿಯ ಇಬ್ಬರು ಅನುಭವಿ ಆಟಗಾರರು 2027ರ ವಿಶ್ವಕಪ್‌ ಆಡುವುದಿಲ್ಲ. ಇದೇ ಕಾರಣಕ್ಕೆ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆಗಳಾಗುತ್ತಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ ನನ್ನ ಮಾತೃಭೂಮಿ, ಪಾಕಿಸ್ತಾನ ನನ್ನ ಜನ್ಮಭೂಮಿ – ಪಾಕ್‌ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ

    ಅಜಿತ್‌ ಅಗರ್ಕರ್‌ ಸಮರ್ಥನೆ
    ಇನ್ನೂ ಏಕದಿನ ಕ್ರಿಕೆಟ್‌ ಕ್ಯಾಪ್ಟನ್‌ ಆಗಿ ಶುಭಮನ್‌ ಗಿಲ್‌ ಅಯ್ಕೆಯನ್ನು ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್‌ ಅಗರ್ಕರ್‌ ಸಮರ್ಥಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ 2027ರ ವಿಶ್ವಕಪ್ ಆಡುವ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಆಸೀಸ್‌ ಸರಣಿ ಬಳಿಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಅವರ ಒಂದು ಯುಗ ಅಂತ್ಯವಾಗಲಿದೆ ಎನ್ನೋದು ಕೋಟ್ಯಂತರ ಅಭಿಮಾನಿಗಳ ಬೇಸರ. ಇದನ್ನೂ ಓದಿ: ವಿಂಡೀಸ್‌ ವಿರುದ್ಧ ಇನ್ನಿಂಗ್ಸ್ & 140 ರನ್‌ಗಳ ಭರ್ಜರಿ ಗೆಲುವು – WTC ಅಂಕಪಟ್ಟಿಯಲ್ಲಿ 3ನೇ ಸ್ಥಾನ ಕಾಯ್ದುಕೊಂಡ ಭಾರತ

  • ವಿಂಡೀಸ್‌ ವಿರುದ್ಧ ಇನ್ನಿಂಗ್ಸ್ & 140 ರನ್‌ಗಳ ಭರ್ಜರಿ ಗೆಲುವು – WTC ಅಂಕಪಟ್ಟಿಯಲ್ಲಿ 3ನೇ ಸ್ಥಾನ ಕಾಯ್ದುಕೊಂಡ ಭಾರತ

    ವಿಂಡೀಸ್‌ ವಿರುದ್ಧ ಇನ್ನಿಂಗ್ಸ್ & 140 ರನ್‌ಗಳ ಭರ್ಜರಿ ಗೆಲುವು – WTC ಅಂಕಪಟ್ಟಿಯಲ್ಲಿ 3ನೇ ಸ್ಥಾನ ಕಾಯ್ದುಕೊಂಡ ಭಾರತ

    – ಜಡ್ಡು ಆಲ್‌ರೌಂಡ್‌ ಆಟ; ಶುಭಮನ್‌ ಗಿಲ್‌ ನಾಯಕತ್ವದಲ್ಲಿ ತವರಿನಲ್ಲಿ ಮೊದಲ ಜಯ

    ಅಹಮದಾಬಾದ್: ಭಾರತೀಯ ಸ್ಪಿನ್ನರ್‌ಗಳ ಮೋಡಿ, ರವೀಂದ್ರ ಜಡೇಜಾ ಅವರ ಆಲ್‌ರೌಂಡ್‌ ಪ್ರದರ್ಶನಕ್ಕೆ ಪತರುಗುಟ್ಟಿದ ವೆಸ್ಟ್‌ ಇಂಡೀಸ್‌ (West Indies) ತಂಡ 2ನೇ ಇನ್ನಿಂಗ್ಸ್‌ನಲ್ಲಿ ಕೇವಲ 146 ರನ್‌ಗಳಿಗೆ ಆಲೌಟ್‌ ಆಗಿದೆ. ಪರಿಣಾಮ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Modi Stadium) ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ಇನ್ನೂ ಒಂದು ಇನ್ನಿಂಗ್ಸ್‌ ಬಾಕಿ ಇರುವಂತೆ 140 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

    ಮೊದಲ ಇನ್ನಿಂಗ್ಸ್‌ನಲ್ಲಿ 2ನೇ ದಿನದ ಅಂತ್ಯಕ್ಕೆ 448 ರನ್‌ ಗಳಿಸಿದ್ದ ಭಾರತ 286 ರನ್‌ಗಳ ಮುನ್ನಡೆ ಕಾಯ್ದುಕೊಂಡಿತ್ತು. 3ನೇ ದಿನ ಡಿಕ್ಲೇರ್‌ ಘೋಷಿಸುತ್ತಿದ್ದಂತೆ ಕಣಕ್ಕಿಳಿದ ವಿಂಡೀಸ್‌ 2ನೇ ಇನ್ನಿಂಗ್ಸ್‌ನಲ್ಲೂ ಭಾರತದ ಸ್ಪಿನ್ನರ್‌ಗಳ ದಾಳಿಗೆ ಪತರುಗುಟ್ಟಿತು. ಅಲಿಕ್ ಅಥನಾಜೆ 38 ರನ್‌, ಜಸ್ಟಿನ್ ಗ್ರೀವ್ಸ್ 25 ರನ್‌ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಅಲ್ಪಮೊತ್ತಕ್ಕೆ ನೆಲ ಕಚ್ಚಿದರು. ಹೀಗಾಗಿ ಮೂರನೇ ದಿನವೇ ಭಾರತ ಗೆಲುವು ಸಾಧಿಸಿತು. ಇದನ್ನೂ ಓದಿ: ಆಸೀಸ್‌ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ – ಏಕದಿನ ಕ್ರಿಕೆಟ್‌ಗೆ ಗಿಲ್‌ ಕ್ಯಾಪ್ಟನ್‌; ರೋಹಿತ್‌, ಕೊಹ್ಲಿ ನಿವೃತ್ತಿ ಬಯಸಿದ್ಯಾ ಬಿಸಿಸಿಐ?

    2ನೇ ಇನ್ನಿಂಗ್ಸ್‌ನಲ್ಲಿ ಭಾರತದ ಪರ ರವೀಂದ್ರ ಜಡೇಜಾ 4 ವಿಕೆಟ್‌ ಕಿತ್ತರೆ, ಸಿರಾಜ್‌ 3 ವಿಕೆಟ್‌, ಕುಲ್‌ದೀಪ್‌ ಯಾದವ್‌ 2 ವಿಕೆಟ್‌, ವಾಷಿಂಗ್ಟನ್‌ ಸುಂದರ್‌ 1 ವಿಕೆಟ್‌ ಪಡೆದು ಮಿಂಚಿದರು. ಇದನ್ನೂ ಓದಿ: ಆರ್‌ಸಿಬಿ ಸೇಲ್‌ – ಪುಣೆಯ ಶತಕೋಟ್ಯಧಿಪತಿ ಪೂನಾವಾಲಾ ತೆಕ್ಕೆಗೆ ಹೋಗುತ್ತಾ ಬೆಂಗಳೂರು?

    ಇದಕ್ಕೂ ಮುನ್ನ ಮೊದಲ ದಿನ 2 ವಿಕೆಟ್‌ ನಷ್ಟಕ್ಕೆ 121 ರನ್‌ ಗಳಿಸಿದ್ದ ಭಾರತ 2ನೇ ದಿನ 327 ರನ್‌ ಕಲೆ ಹಾಕಿತ್ತು. 2ನೇ ದಿನದ ಅಂತ್ಯಕ್ಕೆ 128 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 448 ರನ್‌ ಗಳಿಸಿತ್ತು. ಮೊದಲ ದಿನ 18 ರನ್‌ಗಳಿಸಿದ್ದ ನಾಯಕ ಶುಭಮನ್‌ ಗಿಲ್‌ 2ನೇ ದಿನ 50 ರನ್‌ ಹೊಡೆದರೆ ಕೆಎಲ್‌ ರಾಹುಲ್‌ 197 ಎಸೆತಗಳಲ್ಲಿ 12 ಬೌಂಡರಿಗಳ ನೆರವಿನಿಂದ ಶತಕ ಸಿಡಿಸಿ ಔಟಾದರು. ಧ್ರುವ್ ಜುರೆಲ್ 210 ಎಸೆತಗಳಲ್ಲಿ 15 ಬೌಂಡರಿ, 3 ಸಿಕ್ಸರ್‌ ಸಿಡಿಸಿ 125 ರನ್ ಗಳಿಸಿ ವಿಕೆಟ್‌ ಒಪ್ಪಿಸಿದರು. ಧ್ರುವ್ ಜುರೆಲ್ ಮತ್ತು ಜಡೇಜಾ 5ನೇ ವಿಕೆಟಿಗೆ 331 ಎಸೆತಗಳಲ್ಲಿ 206 ರನ್‌ ಜೊತೆಯಾಟವಾಡಿದ್ದರಿಂದ ಭಾರತ ಬೃಹತ್‌ ಮುನ್ನಡೆ ಸಾಧಿಸಿತು.

    ರವೀಂದ್ರ ಜಡೇಜಾ ಔಟಾಗದೇ 104 ರನ್‌ (176 ಎಸೆತ, 6 ಬೌಂಡರಿ, 5 ಸಿಕ್ಸ್‌) ಸಿಡಿಸಿದರೆ ವಾಷಿಂಗ್ಟನ್‌ ಸುಂದರ್‌ 9 ರನ್‌ಗಳಿಸಿ ಅಜೇಯರಾಗಿ ಉಳಿದಿದ್ದರು. ಇದನ್ನೂ ಓದಿ: ಯುದ್ಧವನ್ನ ಕ್ರೀಡೆಗೆ ಎಳೆದು ತರೋದು ಹತಾಶೆಯನ್ನ ತೋರಿಸುತ್ತೆ – ಮೋದಿ ಟ್ವೀಟ್‌ಗೆ ನಖ್ವಿ ರಿಯಾಕ್ಷನ್‌

    ವೆಸ್ಟ್‌ ಇಂಡೀಸ್‌ ವಿರುದ್ಧ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಭಾರತ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಕಾಯ್ದುಕೊಂಡಿದೆ. 40 ಅಂಕಗಳು, 55.56 ಪಿಸಿಟಿಯೊಂದಿಗೆ (Percentage Of Points Earned) 3ನೇ ಸ್ಥಾನದಲ್ಲಿದ್ದರೆ, 36 ಅಂಕ 100 ಪಿಟಿಸಿ ಗಳಿಸಿರುವ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದೆ. 66.67 ಪಿಸಿಟಿಯೊಂದಿಗೆ ಶ್ರೀಲಂಕಾ 2ನೇ ಸ್ಥಾನದಲ್ಲಿದೆ.

  • ಆಸೀಸ್‌ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ – ಏಕದಿನ ಕ್ರಿಕೆಟ್‌ಗೆ ಗಿಲ್‌ ಕ್ಯಾಪ್ಟನ್‌; ರೋಹಿತ್‌, ಕೊಹ್ಲಿ ನಿವೃತ್ತಿ ಬಯಸಿದ್ಯಾ ಬಿಸಿಸಿಐ?

    ಆಸೀಸ್‌ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ – ಏಕದಿನ ಕ್ರಿಕೆಟ್‌ಗೆ ಗಿಲ್‌ ಕ್ಯಾಪ್ಟನ್‌; ರೋಹಿತ್‌, ಕೊಹ್ಲಿ ನಿವೃತ್ತಿ ಬಯಸಿದ್ಯಾ ಬಿಸಿಸಿಐ?

    ಮುಂಬೈ: ಇದೇ ಅಕ್ಟೋಬರ್‌ 19ರಿಂದ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿಗೆ ಬಿಸಿಸಿಐ ಟೀಂ ಇಂಡಿಯಾದ ಬಲಿಷ್ಠ ತಂಡವನ್ನ ಪ್ರಕಟಿಸಿದೆ.

    ಟಿ20 ಸರಣಿಗೆ ನಿರೀಕ್ಷೆಯಂತೆ ಸೂರ್ಯಕುಮಾರ್‌ ಯಾದವ್‌ ನಾಯಕನಾಗಿದ್ದಾರೆ. ಆದ್ರೆ ರೋಹಿತ್‌, ಕೊಹ್ಲಿ ತಂಡದಲ್ಲಿದ್ದರೂ ಏಕದಿನ ಕ್ರಿಕೆಟ್‌ಗೆ ನೂತನ ನಾಯಕನಾಗಿ ಶುಭಮನ್‌ ಗಿಲ್‌ ಅವರನ್ನ ಆಯ್ಕೆ ಮಾಡಿದೆ. ಹೀಗಾಗಿ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರ ನಿವೃತ್ತಿಯ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ.

    ಸರಣಿ ಬಳಿಕ ನಿವೃತ್ತಿ ಹೇಳ್ತಾರಾ ರೊ-ಕೊ?
    ಈಗಾಗಲೇ ಟೆಸ್ಟ್‌‌ ಹಾಗೂ ಟಿ20 ಕ್ರಿಕೆಟ್‌ಗೆ (T20 Cricket) ನಿವೃತ್ತಿ ಘೋಷಿಸಿರುವ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಇದೀಗ ಏಕದಿನ ಕ್ರಿಕೆಟ್‌ ವೃತ್ತಿ ಜೀವನಕ್ಕೂ ತೆರೆ ಎಳೆಯುವ ಸನಿಹದಲ್ಲಿದ್ದಾರೆ. ಮೂಲಗಳ ಹೇಳುವಂತೆ, 2027ರ ಏಕದಿನ ವಿಶ್ವಕಪ್‌ ತಂಡದಲ್ಲಿ ಈ ಜೋಡಿ ಸ್ಥಾನ ಪಡೆಯುವುದು ಖಚಿತವಿಲ್ಲ. ಏಕೆಂದ್ರೆ ಈಗಾಗಲೇ ಇಬ್ಬರೂ ದಿಗ್ಗಜರು ಟೆಸ್ಟ್‌ ಹಾಗೂ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಕಾರಣ ಮುಂಬರುವ ವರ್ಷಗಳಲ್ಲಿ ಪಂದ್ಯದ ಸಮಯವೂ ಸೀಮಿತವಾಗಿರಲಿದೆ. ಹೀಗಾಗಿ ಭಾರತೀಯ ಕ್ರಿಕೆಟ್‌ (Indian Cricket) ನಿಯಂತ್ರಣ ಮಂಡಳಿ ಕೂಡ ಇವರಿಬ್ಬರ ಆಯ್ಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. ಈ ಅಕ್ಟೋಬರ್‌ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಅತ್ಯಂತ ನಿರ್ಣಾಯಕವಾಗಿದೆ.

    ರೋಹಿತ್‌ ಮತ್ತು ಕೊಹ್ಲಿ 2027ರ ಏಕದಿನ ವಿಶ್ವಕಪ್‌ (World Cup 2027) ರೇಸ್‌ನಲ್ಲಿ ಉಳಿಯಬೇಕಾದ್ರೆ ಈ ವರ್ಷ ಡಿಸೆಂಬರ್‌ನಲ್ಲಿ ಶುರುವಾಗಲಿರುವ ದೇಸಿ ಕ್ರಿಕೆಟ್‌ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಬೇಕಾಗುತ್ತೆ. ಇಲ್ಲದಿದ್ದರೆ, ಬಹುತೇಕ ಏಕದಿನ ಕ್ರಿಕೆಟ್‌ನಿಂದಲೂ ಔಟ್‌ ಆಗಲಿದ್ದಾರೆ. ಇದಕ್ಕೆ ವಯಸ್ಸಿನ ಮಿತಿಯೂ ಒಂದು ಕಾರಣವಾಗಿರಲಿದೆ.

    ಅಯ್ಯರ್‌ ಕಂಬ್ಯಾಕ್‌
    ಇನ್ನೂ ಏಷ್ಯಾಕಪ್‌ ಟೂರ್ನಿಯಿಂದ ಕಡೆಗಣಿಸಲ್ಪಟ್ಟಿದ್ದ ಶ್ರೇಯಸ್‌ ಅಯ್ಯರ್‌ಗೆ ಮುಂಬರುವ ಟೂರ್ನಿಗಳನ್ನ ಗಮನದಲ್ಲಿಟ್ಟಿಕೊಂಡು ಉಪನಾಯಕನ ಸ್ಥಾನ ನೀಡಲಾಗಿದೆ. ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ಬಳಿಕ ಏಕದಿನ ಕ್ರಿಕೆಟ್‌ಗೆ ಕನ್ನಡಿಗ ಕೆ.ಎಲ್‌ ರಾಹುಲ್‌ ಕೂಡ ಕಂಬ್ಯಾಕ್‌ ಮಾಡಿದ್ದಾರೆ. ಇದರೊಂದಿಗೆ ಇದೇ ಮೊದಲಬಾರಿಗೆ ಏಕದಿನ ಕ್ರಿಕೆಟ್‌ಗೆ ಯುವ ಆಟಗಾರ ಯಶಸ್ವಿ ಜೈಸ್ವಾಲ್‌ ಪದಾರ್ಪಣೆ ಮಾಡಲಿದ್ದಾರೆ. ಆದ್ರೆ ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್ಪ್ರೀತ್‌ ಬುಮ್ರಾ ಅವರನ್ನು ಏಕದಿನ ತಂಡದಿಂದ ಕೈಬಿಟ್ಟು, ಟಿ20 ತಂಡಕ್ಕೆ ಮಾತ್ರ ಆಯ್ಕೆ ಮಾಡಿರೋದು ಅಚ್ಚರಿ ಮೂಡಿಸಿದೆ. ಅಲ್ಲದೇ ಧ್ರುವ್‌ ಜುರೆಲ್‌, ನಿತೀಶ್‌ ಕುಮಾರ್‌ ರೆಡ್ಡಿ ಹೊಸ ಮುಖಗಳಿಗೆ ಬಿಸಿಸಿಐ ಮಣೆ ಹಾಕಿದೆ.

    ಭಾರತ ಏಕದಿನ ತಂಡ
    ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಅಕ್ಷರ್‌ ಪಟೇಲ್, ಕೆ.ಎಲ್ ರಾಹುಲ್ (ವಿಕೆಟ್‌ ಕೀಪರ್‌), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್‌ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷ್‌ದೀಪ್ ಸಿಂಗ್, ಪ್ರಸಿದ್ಧ್‌ ಕೃಷ್ಣ, ಧ್ರುವ್‌ ಜುರೆಲ್ (ವಿಕೆಟ್‌ ಕೀಪರ್‌), ಯಶಸ್ವಿ ಜೈಸ್ವಾಲ್‌.

    ಭಾರತ ಟಿ20 ತಂಡ
    ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭಮನ್ ಗಿಲ್ (ಉಪನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್‌), ವರುಣ್ ಚಕ್ರವರ್ತಿ, ಜಸ್ಪ್ರೀತ್‌ ಬುಮ್ರಾ, ಅರ್ಷ್‌ದೀಪ್ ಸಿಂಗ್, ಕುಲ್ದೀಪ್‌ ಯಾದವ್, ಹರ್ಷಿತ್ ರಾಣಾ, ಸಂಜು ಸ್ಯಾಮ್‌ಸನ್ (ವಿಕೆಟ್‌ ಕೀಪರ್‌), ವಾಷಿಂಗ್ಟನ್‌ ಸುಂದರ್‌.

    ಅ.19ರಿಂದ ನವೆಂಬರ್‌ 8ರ ವರೆಗೆ ಮೂರು ಏಕದಿನ ಪಂದ್ಯಗಳು ಹಾಗೂ 5 ಟಿ20 ಪಂದ್ಯಗಳ ಸರಣಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಇದಕ್ಕಾಗಿ ಭಾರತ ತಂಡ ಶೀಘ್ರವೇ ಆಸ್ಟ್ರೇಲಿಯಾಕ್ಕೆ ಪ್ರವಾಸ ತೆರಳಲಿದ್ದು, ಅಭ್ಯಾಸ ಆರಂಭಿಸಲಿದೆ.

    ಗಿಲ್‌ ಮೇಲೆ ಹೆಚ್ಚಿದ ಭರವಸೆ
    ಕೆಲ ದಿನಗಳ ಹಿಂದೆ ಇಂಗ್ಲೆಂಡ್‌ನಲ್ಲಿ ನಡೆದ ʻಆಂಡರ್ಸನ್‌-ತೆಂಡೂಲ್ಕರ್‌ʼ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಟೀಂ ಇಂಡಿಯಾದ ಯುವ ನಾಯಕನಾಗಿದ್ದ ಗಿಲ್‌ ಅವರ ಯಶಸ್ಸು ಆಯ್ಕೆ ಸಮಿತಿಗೆ ನಂಬಿಕೆ ತಂದುಕೊಟ್ಟಿದೆ. ಹೀಗಾಗಿ 2027ರ ವಿಶ್ವಕಪ್‌ಗೆ ಹೊಸ ಪ್ರತಿಭೆಗಳೊಂದಿಗೆ ಮುನ್ನಡೆಯಲು ಬಿಸಿಸಿಐ ನಿರ್ಧರಿಸಿದ್ದು, ಶುಭಮನ್‌ ಗಿಲ್‌ ಅವರನ್ನೇ ಟೀಂ ಇಂಡಿಯಾದ ದೀರ್ಘಾವಧಿ ನಾಯಕನ್ನಾಗಿ ಆಯ್ಕೆ ಮಾಡಲು ನಿರ್ಧರಿಸಿದೆ. ಆದ್ದರಿಂದ ರೋಹಿತ್‌, ಕೊಹ್ಲಿ ಅಂತಹ ದಿಗ್ಗಜರು ಇರುವಾಗಲೇ ಗಿಲ್‌ಗೆ ನಾಯಕನ ಹೊಣೆ ನೀಡಲಾಗಿದೆ.