Tag: shrinivas prasad

  • ಅಖಾಡಕ್ಕೆ ಧುಮುಕದೆ ಮನೆಯಲ್ಲೇ ಶ್ರೀನಿವಾಸ್ ಪ್ರಸಾದ್ ರಣತಂತ್ರ

    ಅಖಾಡಕ್ಕೆ ಧುಮುಕದೆ ಮನೆಯಲ್ಲೇ ಶ್ರೀನಿವಾಸ್ ಪ್ರಸಾದ್ ರಣತಂತ್ರ

    – ದೋಸ್ತಿಗಳಿಗೆ ತಲೆನೋವು ಕೊಡ್ತು ಹೋಮ್‍ಪ್ಲಾನ್

    ಚಾಮರಾಜನಗರ: ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಅಖಾಡಕ್ಕೆ ಇಳಿದು ಭರದಿಂದ ಪ್ರಚಾರ ಮಾಡುತ್ತಿದ್ದಾರೆ. ಆದರೆ ಚುನಾವಣಾ ಅಖಾಡಕ್ಕೆ ಧುಮುಕದೇ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಮನೆಯಲ್ಲೇ ತಂತ್ರ ಪ್ರತಿತಂತ್ರ ರೂಪಿಸುತ್ತಿದ್ದಾರೆ.

    ವಿ.ಶ್ರೀನಿವಾಸ್ ಪ್ರಸಾದ್ ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಇದೀಗ ಶ್ರೀನಿವಾಸ್ ಪ್ರಸಾದ್ ಅವರ ಹೋಮ್ ಪ್ಲಾನ್ ದೋಸ್ತಿಗಳಿಗೆ ತಲೆ ನೋವು ಉಂಟು ಮಾಡುತ್ತಿದೆ.

    ಶ್ರೀನಿವಾಸ್ ನಾಮಪತ್ರ ಸಲ್ಲಿಸಿದ ಬಳಿಕ ಚುನಾವಣಾ ಪ್ರಚಾರಕ್ಕೆ ಆಗಮಿಸಿಲ್ಲ. ಆದರೆ ಮೈಸೂರಿನ ತಮ್ಮ ನಿವಾಸದಲ್ಲೇ ರಣತಂತ್ರ ಹೆಣೆಯುತ್ತಿದ್ದು, ಪ್ರತಿನಿತ್ಯ ಚಾಮರಾಜನಗರ ಲೋಕಸಭಾ ವ್ಯಾಪ್ತಿಯ ಮುಖಂಡರೊಂದಿಗೆ ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಬೂತ್ ಮಟ್ಟದಲ್ಲಿನ ಬೇರೆ ಪಕ್ಷದ ಮುಖಂಡರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ಚರ್ಚೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಶ್ರೀನಿವಾಸ್ ಹಲವೆಡೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಈ ಮೂಲಕ ಪ್ರಸಾದ್ ಕಾಂಗ್ರೆಸ್ಸಿಗರಿಗೆ ಟಕ್ಕರ್ ಕೊಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಮುಖಂಡರಿಗೆ ಪ್ರಸಾದ್ ಮಾಸ್ಟರ್ ಪ್ಲಾನ್ ತಲೆ ನೋವು ತಂದಿದೆ.

  • ಸಿದ್ದರಾಮಯ್ಯ ಗಿಡುಗ ಇದ್ದ ಹಾಗೆ: ಶ್ರೀನಿವಾಸ್ ಪ್ರಸಾದ್

    ಸಿದ್ದರಾಮಯ್ಯ ಗಿಡುಗ ಇದ್ದ ಹಾಗೆ: ಶ್ರೀನಿವಾಸ್ ಪ್ರಸಾದ್

    ಚಾಮರಾಜನಗರ: ನನ್ನ ರಾಜಕೀಯ ಜೀವನದಲ್ಲಿ ಯಾರ ಬಗ್ಗೆಯೂ ಮಾತಾನಾಡಿಲ್ಲ. ಮಾತನಾಡಿದರೆ ಅದು ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಮಾತ್ರ ಎಂದು ಬಿಜೆಪಿ ನಾಯಕ ವಿ. ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

    ಜಿಲ್ಲೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಗಿಡುಗ ಇದ್ದ ಹಾಗೆ. ಗಿಡುಗ ಹಾರಿಕೊಂಡು ಹೋಗಬಹುದು, ಆದ್ರೆ ಕಾಳು ತಿನ್ನೋಕೆ ಕೆಳಗೆ ಬರಲೇಬೇಕು. ನಿಮ್ಮ ಅಧಿಕಾರದ ದಾಹ ಮುಗಿದ ಮೇಲೆ ಕೆಳಗೆ ಇಳಿಯಬೇಕು. ಏನ್ ಆಯ್ತು ನಿಮಗೆ ಈಗ? ಸಿದ್ದರಾಮಯ್ಯ ಅಂದ್ರೆ ಉಡಾಫೆ ಸಿದ್ದರಾಮಯ್ಯ ಅಂತ ವ್ಯಂಗ್ಯವಾಡಿದರು.

    ಉಪಚುನಾವಣೆಯಲ್ಲಿ ದೇವೇಗೌಡರು ಸಿದ್ದರಾಮಯ್ಯ ಅವರನ್ನು ಸೋಲಿಸಲು ಸಾಕಷ್ಟು ಪ್ರಯತ್ನ ಪಟ್ಟರು. ಆಗ ನನ್ನ ಹತ್ತಿರ ಸಿದ್ದರಾಮಯ್ಯ ಬಂದು, ನನ್ನ ಪರ ಕೆಲಸ ಮಾಡಿ ಎಂದು ಕೇಳಿಕೊಂಡರು. ಆಗ ನಾನು ನಿಮ್ಮ ಪರ ಕೆಲಸ ಮಾಡಲಿಲ್ಲವೇ? ನಾನು ಇಲ್ಲ ಅಂದ್ರೆ ಅವತ್ತೆ ಕಳೆದು ಹೋಗುತ್ತಿದ್ದಿರಿ. ಆಗ ನೀವು ಅಹಿಂದ ಕಟ್ಟಿದಾಗ ನಿಮ್ಮ ಜೊತೆ ಇದ್ದವರೇ 5 ಜನ, ಅದರಲ್ಲಿ ನಾನು ನಿಮ್ಮ ಅಹಿಂದವನ್ನು ಉದ್ಘಾಟನೆ ಮಾಡಿದ್ದೆ. ನಾನು ನೀವು ಮುಖ್ಯಮಂತ್ರಿ ಆಗುವವರೆಗೂ ಜೊತೆಗಿದ್ದೆ. ಆದ್ರೆ ನೀವು ಮುಖ್ಯಮಂತ್ರಿ ಆದ ಮೇಲೆ ಎಲ್ಲಾ ಮರೆತು ಬಿಟ್ಟಿದ್ದೀರಿ ಎಂದು ಕಿಡಿಕಾರಿದರು.

    ಮಂತ್ರಿಮಂಡಲ ಪುನಾರಚನೆ ಮಾಡುವ ನೆಪ ಹೇಳಿ ನನ್ನನ್ನು ಕೈ ಬಿಟ್ಟಿದ್ದೀರಿ. ನನ್ನ ಅನುಭವವನ್ನು ಬಳಸಿಕೊಳ್ಳಲು ಆಗಲಿಲ್ಲ. ನನ್ನನ್ನು ಏನು ಕೇಳದೇ ಮಂತ್ರಿ ಮಂಡಲದಿಂದ ತೆಗೆದು ಹಾಕಿದಿರಿ. ನಾನು ರಾಜಕೀಯಕ್ಕೆ ಬಂದಾಗ ನೀವು ಎಲ್ಲಿ ಇದ್ರಿ? ನಾನು ಬಂದಾಗ ನೀವು ಕಾನೂನು ಪದವಿ ಓದುತ್ತಿದ್ರೆನೋ ಎಂದು ಟಾಂಗ್ ಕೊಟ್ಟರು.

    ಕುಮಾರಸ್ವಾಮಿ ಅಪ್ಪನ ಆಣೆಗೂ ಮುಖ್ಯಮಂತ್ರಿ ಆಗಲ್ಲ ಅಂತ ಸಿದ್ದರಾಮಯ್ಯ ಹೇಳಿದ್ದರು. ಅವರದ್ದು ಅಪ್ಪ ಮಕ್ಕಳ ಪಕ್ಷ ಅವರ ಅಪ್ಪನ ಆಣೆಗೂ ಅವರು ಬದಲಾಗಲ್ಲ ಅಂದಿದ್ದರು. ಆದ್ರೆ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸುವಾಗ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು, ನಾಯಕರು ಬಂದಿದ್ದರು. ಆಗ ನೀವು ಮಾತ್ರ ಎಲ್ಲೋ ಒಂದು ಕಡೆ ತೂಕಡಿಸುತ್ತಾ ಕೂತಿದ್ದಿರಿ. ನೀವು ತೂಕಡಿಸೋದನ್ನ ನಾನು ಟಿವಿಯಲ್ಲಿ ನೋಡಿದ್ದೆ. ನಿಮ್ಮ ಸ್ಥಿತಿ ಎಲ್ಲಿಗೆ ಬಂತು ಸಿದ್ದರಾಮಯ್ಯ ಎಂದು ವ್ಯಂಗ್ಯವಾಡಿದರು.

  • ನಾನು ಇಲ್ಲ ಅಂದಿದ್ರೆ ಧೃವನಾರಾಯಣ್ ಎಂಎಲ್‍ಎ ಕೂಡ ಆಗ್ತಿರಲಿಲ್ಲ: ಶ್ರೀನಿವಾಸ್ ಪ್ರಸಾದ್

    ನಾನು ಇಲ್ಲ ಅಂದಿದ್ರೆ ಧೃವನಾರಾಯಣ್ ಎಂಎಲ್‍ಎ ಕೂಡ ಆಗ್ತಿರಲಿಲ್ಲ: ಶ್ರೀನಿವಾಸ್ ಪ್ರಸಾದ್

    ಚಾಮರಾಜನಗರ: 2008ರಲ್ಲಿ ಕೊಳ್ಳೆಗಾಲದಿಂದ ನಾನೇ ಟಿಕೆಟ್ ಕೊಡಿಸಿದ್ದನ್ನು ಧೃವನಾರಾಯಣ್ ಮರೆತಿದ್ದು, ಮೊದಲ ದಿನಗಳನ್ನು ನೆನಪು ಮಾಡಿಕೊಳ್ಳಬೇಕು ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ್ ಪ್ರಸಾದ್ ತಿರುಗೇಟು ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಿಂದೆ ಚುನಾವಣೆಯಲ್ಲಿ ಎಲ್ಲಾ ನನ್ನ ಕೈಯಲ್ಲಿ ಇತ್ತು. ಧೃವನಾರಾಯಣ್ ದಿನ ಬೆಳಗ್ಗೆ ಗೋಗರೆದು ನನ್ನ ಕಾಲು ಹಿಡಿಯಲು ಬರುತ್ತಿದ್ದರು. ನಾನು ಇಲ್ಲ ಅಂತ ಅಂದಿದ್ದರೆ ಅವರು ಪಾರ್ಲಿಮೆಂಟ್ ಅಲ್ಲ, ಶಾಸಕ ಸಹ ಆಗುತ್ತಿರಲಿಲ್ಲ. 2009ರ ಲೋಕಸಭಾ ಚುನಾವಣೆಯಲ್ಲಿ ನನಗೆ ಚುನಾವಣೆಗೆ ನಿಲ್ಲು ಅಂತ ಹೇಳಿದ್ದರು. ಆಗ ನಾನು ಧೃವನಾರಾಯಣ್‍ಗೆ ಟಿಕೆಟ್ ಕೊಡಿಸಿದೆ. ಅದನ್ನೆಲ್ಲಾ ಅವರು ನೆನೆದುಕೊಳ್ಳಬೇಕು ಎಂದು ಕಿಡಿಕಾರಿದರು. ಇದನ್ನೂ ಓದಿ:ಶ್ರೀನಿವಾಸ್ ಪ್ರಸಾದ್ ನನ್ನ ಗುರುವೇ ಅಲ್ಲ – ಗುರು ವಿರುದ್ಧವೇ ತಿರುಗಿಬಿದ್ದ ಧೃವನಾರಾಯಣ್

    ಸಂತೇಮರಹಳ್ಳಿ ಕ್ಷೇತ್ರ ಕೊಳ್ಳೆಗಾಲಕ್ಕೆ ಸೇರ್ಪಡೆಯಾದಾಗ ಧೃವನಾರಾಯಣ್ ಎಲ್ಲಿಂದ ಸ್ಪರ್ಧೆ ಮಾಡಬೇಕೆಂಬ ಗೊಂದಲದಲ್ಲಿದ್ದರು. ಅಂದು ಕೊಳ್ಳೆಗಾಲದಲ್ಲಿ ಜಿ.ಎನ್.ನಂಜುಡಸ್ವಾಮಿ ಪ್ರಬಲ ಕಾಂಗ್ರೆಸ್ ಮುಖಂಡರಾಗಿದ್ದರೂ, ಧ್ರುವನಾರಾಯಣ್ ಅವರಿಗೆ ಟಿಕೆಟ್ ನೀಡಬೇಕೆಂದು ಹೈಕಮಾಂಡ್ ಬಳಿ ಮನವಿ ಮಾಡಿಕೊಂಡಿದ್ದರ ಪರಿಣಾಮ ಟಿಕೆಟ್ ಸಿಕ್ಕಿತ್ತು. ನಮ್ಮ ಸಹಾಯವನ್ನು ನೆನದು ಧೃವನಾರಾಯಣ್ ಜವಬ್ದಾರಿಯುತವಾಗಿ ಮಾತನಾಡಬೇಕು ಎಂದು ಶ್ರೀನಿವಾಸ್ ಪ್ರಸಾದ್ ಆಕ್ರೋಶ ಹೊರಹಾಕಿದರು.

    ಧೃವನಾರಾಯಣ್ ಹೇಳಿದ್ದೇನು?:
    ನಾನು ಮೊದಲು ಶಾಸಕನಾದಾಗ ಶ್ರೀನಿವಾಸ್ ಪ್ರಸಾದ್ ಅವರು ಕಾಂಗ್ರೆಸ್ಸಿನಲ್ಲಿ ಇರಲಿಲ್ಲ. ನಾನು ಸಂತೇಮರಹಳ್ಳಿ ಕ್ಷೇತ್ರದಲ್ಲಿ ಗೆದ್ದಾಗ ಅವರು ಜೆಡಿಎಸ್‍ನಲ್ಲಿ ಇದ್ದರು. ನನ್ನನ್ನು ರಾಜಕೀಯವಾಗಿ ರಾಜಶೇಖರಮೂರ್ತಿ ಅವರು ಬೆಳೆಸಿದ್ದಾರೆ. ನಾನು ಮೊದಲ ಬಾರಿ ಗೆದ್ದಾಗ ಇಡೀ ಜಿಲ್ಲೆಯಲ್ಲಿ ನಾನು ಒಬ್ಬನೇ ಕಾಂಗ್ರೆಸ್ ಶಾಸಕನಾಗಿದ್ದೆ. ನಾನು ಗೆದ್ದಾಗ ಅವರು ಕಾಂಗ್ರೆಸ್ಸಿನಲ್ಲಿ ಇರಲೇ ಇಲ್ಲ. ಪ್ರಸಾದ್ ಅವರು 2004 ಆದ ಮೇಲೆ ಕಾಂಗ್ರೆಸ್ಸಿಗೆ ಬಂದಿದ್ದಾರೆ ಎಂದು ಧೃವನಾರಯಣ್ ನೇರವಾಗಿ ಶ್ರೀನಿವಾಸ್ ಪ್ರಸಾದ್ ನನ್ನ ಗುರುವಲ್ಲ ಎಂದು ಹೇಳಿದ್ದರು.

    2014ರ ಫಲಿತಾಂಶ:
    2014ರಲ್ಲಿ ಚಾಮರಾಜನಗರ (ಎಸ್‍ಸಿ) ಲೋಕಸಭೆ ಕ್ಷೇತ್ರದಿಂದ ಧೃವನಾರಾಯಣ್ ಅವರು ಕಾಂಗ್ರೆಸ್‍ನಿಂದ ಸ್ಪರ್ಧಿಸಿ 5,67,782 ಮತಗಳನ್ನು ಪಡೆದು ಜಯಮಾಲೆ ಧರಿಸಿದ್ದರು. ಹಾಗೆಯೇ ಇವರ ವಿರುದ್ಧ ಬಿಜೆಪಿಯಿಂದ ಎ.ಆರ್.ಕೃಷ್ಣಮೂರ್ತಿ ಅವರು ಸ್ಪರ್ಧಿಸಿ 4,26,600 ಮತಗಳನ್ನು ಪಡೆದಿದ್ದರು. ಈ ವೇಳೆ ಎ.ಆರ್.ಕೃಷ್ಣಮೂರ್ತಿ ವಿರುದ್ಧ 1,41,182 ಮತಗಳ ಅಂತರದಲ್ಲಿ 12.60% ಮಾರ್ಜಿನ್‍ನಲ್ಲಿ ಧೃವನಾರಾಯಣ್ ಗೆಲುವನ್ನು ಸಾಧಿಸಿದ್ದರು.

    ಈ ಬಾರಿ ಚಾಮರಾಜನಗರ (ಎಸ್‍ಸಿ) ಲೋಕಸಭೆ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಯಾಗಿ ಶ್ರೀನಿವಾಸ್ ಪ್ರಸಾದ್ ಅಭ್ಯರ್ಥಿಯಾಗಿದ್ದಾರೆ. ಅಲ್ಲದೆ ಅವರ ವಿರುದ್ಧವಾಗಿ ಕಾಂಗ್ರೆಸ್ಸಿನಿಂದ ಧೃವನಾರಾಯಣ್ ಕಣಕ್ಕಿಳಿದಿದ್ದಾರೆ.

  • ಬಿಜೆಪಿ ನಾಯಕರಿಗೆ ಬುದ್ಧಿ ಬೆಳೆದಿಲ್ಲ, ಪೇಜಾವರ ಶ್ರೀ ಎಲ್ಲದಕ್ಕೂ ಮಾತನಾಡುತ್ತಾರೆ- ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಕಿಡಿ

    ಬಿಜೆಪಿ ನಾಯಕರಿಗೆ ಬುದ್ಧಿ ಬೆಳೆದಿಲ್ಲ, ಪೇಜಾವರ ಶ್ರೀ ಎಲ್ಲದಕ್ಕೂ ಮಾತನಾಡುತ್ತಾರೆ- ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಕಿಡಿ

    ಮೈಸೂರು: ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡು ಬಿಜೆಪಿ ಸೇರಿದ್ದ ಮಾಜಿ ಸಚಿವ ವಿ. ಶ್ರೀನಿವಾಸ್‍ಪ್ರಸಾದ್ ಈಗ ಬಿಜೆಪಿ ನಾಯಕರ ವಿರುದ್ಧವೇ ಗುಡುಗಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂವಿಧಾನದ ಬಗ್ಗೆ ಅಪಸ್ವರ ಎತ್ತಿರುವ ಬಿಜೆಪಿ ನಾಯಕರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎರಡು ಬಾರಿ ಎಂಎಲ್‍ಸಿ ಆಗಿರುವ ಗೋ.ಮಧುಸೂದನ್ ಗೆ ಇನ್ನೂ ಬುದ್ದಿ ವಿಕಾಸವಾಗಿಲ್ಲ. ಗೋ. ಮಧುಸೂದನ್ ರನ್ನು ಎಲ್ಲರೂ ಗೋ ಅನ್ನುತ್ತಾರೆ, ಕಮ್ ಅನ್ನೋದಿಲ್ಲಾ. ಆತ ಅನಾವಶ್ಯಕವಾಗಿ ಸಂವಿಧಾನದ ಬಗ್ಗೆ ಮಾತನಾಡುತ್ತಾನೆ. ಸಂವಿಧಾನದ ಬಗ್ಗೆ ಹಗುರ ಹೇಳಿಕೆ ಸರಿಯಲ್ಲ. ಈತನಿಗೆ ನಾಚಿಕೆ ಆಗಬೇಕು. ಇಂತಹ ಮಧುಸೂಧನ್ ಬಿಜೆಪಿ ವಕ್ತಾರನಾಗುತ್ತಾನೆ ಎಂದು ತಮ್ಮದೇ ಪಕ್ಷದ ನಾಯಕನ ವಿರುದ್ಧ ಏಕವಚನ ಪ್ರಯೋಗ ಮಾಡಿದ್ರು.

    ಇದೇ ವೇಳೆ ಕೇಂದ್ರ ಸಚಿವ ಅನಂತ ಕುಮಾರ್ ಹೆಗ್ಡೆ ಬಗ್ಗೆ ಕೂಡ ಶ್ರೀನಿವಾಸ ಪ್ರಸಾದ್ ಚಾಟಿ ಬೀಸಿದ್ರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಈತನನ್ನು ಮಂತ್ರಿ ಮಾಡಿರುವುದು ಅವಮಾನ. ವಿಶ್ವದಲ್ಲೇ ಶ್ರೇಷ್ಠ ಸಂವಿಧಾನ ಅಂದರೆ ಅದು ಭಾರತದ ಸಂವಿಧಾನ ಅಂದ್ರು.

    ಸಂವಿಧಾನವನ್ನ ಅಂಬೇಡ್ಕರ್ ಒಬ್ಬರೇ ಬರೆದಿದ್ದಲ್ಲ ಎಂದು ಹೇಳಿಕೆ ನೀಡಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ವಿರುದ್ಧವೂ ಟೀಕಾಪ್ರಹಾರ ನಡೆಸಿದ ಶ್ರೀನಿವಾಸಪ್ರಸಾದ್, ಪೇಜಾವರಶ್ರೀಗಳು ನೀಡಿರುವ ಹೇಳಿಕೆ ಖಂಡನೀಯ. ಧರ್ಮಸಂಸದ್ ನಲ್ಲಿ ಮೋಹನ್ ಭಾಗವತ್ ಒಬ್ಬರು ಮಾತ್ರ ಸರಿಯಾಗಿ ಮಾತನಾಡಿದರು ಎಂದು ಹೇಳಿದ್ರು.

    ಮಠಾಧಿಪತಿಗಳು ತಮ್ಮ ಪಾಡಿಗೆ ಮಠದ ಕಾರ್ಯಗಳನ್ನು ನೋಡಿಕೊಂಡಿರಬೇಕು. ಪೇಜಾವರ ಶ್ರೀಗಳು ಯಾಕೋ ಎಲ್ಲದಕ್ಕೂ ಮಾತನಾಡುತ್ತಾರೆ. ಸಾಕು, ಇನ್ನು ಮೇಲಾದರೂ ಗಂಭೀರವಾಗಿ ಇರಿ. ಶೃಂಗೇರಿ ಮಠ ಇದೆ, ಪರಕಾಲ ಮಠ ಇದೆ, ಇನ್ನೂ ಬೇಕಾದಷ್ಟು ಮಠಗಳಿವೆ. ಅವರು ಅವರಷ್ಟಕ್ಕೆ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ನೀವ್ಯಾಕೆ ಎಲ್ಲದ್ದಕ್ಕೂ ಪ್ರತಿಕ್ರಿಯೆ ಕೊಡ್ತೀರಿ. ನಿಮಗೆ ಈ ದೇಶದ ಹಿನ್ನೆಲೆ, ಇತಿಹಾಸ ಗೊತ್ತಿಲ್ಲ. ನೀವು ಬೆಳೆದು ಬಂದಿರುವ ಹಿನ್ನೆಲೆಯೇ ಬೇರೆ ಅಂತಾ ವಾಗ್ದಾಳಿ ನಡೆಸಿದ್ರು.

    ನನಗೆ ರಾಜಕೀಯ ಮುಖ್ಯವಲ್ಲ, ಅಂಬೇಡ್ಕರ್ ಮುಖ್ಯ. ನಮಗೆ ಅಂಬೇಡ್ಕರ್ ಆಧ್ಯಾತ್ಮಿಕ ನಾಯಕ. ನಾನು ಬಿಜೆಪಿಯಲ್ಲಿ ಇರಬಹುದು. ಅದು ನನ್ನ ರಾಜಕೀಯ ಅನಿವಾರ್ಯತೆ ಅಷ್ಟೆ. ನರೇಂದ್ರ ಮೋದಿ ಪ್ರಧಾನಿ ಇರಬಹುದು, ಅಮಿತ್ ಷಾ ರಾಷ್ಟ್ರೀಯ ಅಧ್ಯಕ್ಷ ಇರಬಹುದು. ಈ ಪಕ್ಷದಲ್ಲಿ ಇದ್ದೇವೆ. ಆ ಕಾರಣಕ್ಕಾಗಿ ಲಾಯಲ್ ಆಗಿ ಇರುತ್ತೇವೆ. ಆದರೆ ಅವರು ರಾಜಕೀಯ ನಾಯಕರು ಮಾತ್ರ. ನಮ್ಮ ಆಧ್ಯಾತ್ಮಿಕ ನಾಯಕ ಅಂಬೇಡ್ಕರ್ ಮಾತ್ರ. ಗುಜರಾತ್ ಚುನಾವಣೆ ಸಂದರ್ಭದಲ್ಲಿ ನೀಚ ಪದ ಬಳಸಿದ ಮಣಿಶಂಕರ್ ಅಯ್ಯರ್ ವಿರುದ್ಧ ಆ ಪಕ್ಷ ಕ್ರಮ ಕೈಗೊಂಡಿತು. ಸಂವಿಧಾನದ ಬಗ್ಗೆ ಮಾತನಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು ಅಂತ ಪಕ್ಷದ ಹೈಕಮಾಂಡ್ ವಿರುದ್ಧವೂ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ರು.

    ಬಾಲಿಶವಾದ ಹೇಳಿಕೆ ನೀಡಿರುವವರ ವಿರುದ್ಧ ಮೊದಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪಕ್ಷ ಎಚ್ಚರಿಕೆ ನೀಡಬೇಕು ಎಂದು ಆಗ್ರಹಿಸಿದ್ರು.

  • 13ನೇ ಚುನಾವಣೆ ನನ್ನ ಕೊನೇ ಚುನಾವಣೆ ಹಾಗಂತ ದುಃಖ ಅನ್ನೋದು ನನ್ನ ಡಿಕ್ಷನರಿಯಿಲ್ಲಿಲ್ಲ: ಶ್ರೀನಿವಾಸ್ ಪ್ರಸಾದ್

    13ನೇ ಚುನಾವಣೆ ನನ್ನ ಕೊನೇ ಚುನಾವಣೆ ಹಾಗಂತ ದುಃಖ ಅನ್ನೋದು ನನ್ನ ಡಿಕ್ಷನರಿಯಿಲ್ಲಿಲ್ಲ: ಶ್ರೀನಿವಾಸ್ ಪ್ರಸಾದ್

    ಮೈಸೂರು: 13ನೇ ಚುನಾವಣೆ ನನ್ನ ಕೊನೆಯ ಚುನಾವಣೆ. ಹಾಗಂತ ದುಃಖ ಅನ್ನೋದು ನನ್ನ ಡಿಕ್ಷನರಿಯಿಲ್ಲಿಲ್ಲ ಎಂದು ನಂಜನಗೂಡು ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಹೇಳಿಕೆ ನೀಡಿದ್ದಾರೆ.

    ಫಲಿತಾಂಶದ ಬಳಿಕ ಮೈಸೂರಿನ ತಮ್ಮ ನಿವಾಸಲ್ಲಿ ಕರೆದ ಸದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸ್ ಪ್ರಸಾದ್, ಇದು ಅನಿರೀಕ್ಷಿತ ಫಲಿತಾಂಶ. ಮೂರು ದಿನದವರೆಗೂ ಎಲ್ಲ ಸಮೀಕ್ಷೆ ನನಗೆ ಗೆಲುವು ಅಂತಿತ್ತು, ಈಗ ಸೋಲಾಗಿದೆ. ಇದು ಜನರ ತೀರ್ಪು, ಒಪ್ಪಲೇಬೇಕು. ಇದನ್ನ ಕಾಂಗ್ರೆಸ್ ಸಾಧನೆ, ವರ್ಚಸ್ಸು ಅಂತಿದ್ದಾರೆ. ಆದ್ರೆ ಉಪಚುನಾವಣೆ ಯಾಕೆ ಬಂತು ಎಂದು ನೋಡಬೇಕು. ಸಂಪುಟ ಪನಾರಚನೆ ಮಾಡುವಾಗ 14 ಮಂತ್ರಿಗಳನ್ನ ಕೈಬಿಟ್ರು. ಪರಿಣಾಮಕಾರಿ ಸರ್ಕಾರ ಬೇಕು ಎಂದು ಕೈಬಿಟ್ರು. ಆಗ ಅವರನ್ನ ನೀವು ಪರಿಣಾಮಕಾರಿ ಮಂತ್ರಿಮಂಡಲ ಮಾಡಿದ್ದೀರಾ? ಎಂದು ಕೇಳಿದೆ. ಆದ್ರೆ ಉತ್ತರ ಕೊಡಲಿಲ್ಲ. ರಾಜೀನಾಮೆ ಕೊಡೋದು ಬಹಳ ಕಡಿಮೆ, ನಾನು ರಾಜೀನಾಮೆ ನೀಡಿದೆ. ನನ್ನ ರಾಜಕೀಯ ಜೀವನದಲ್ಲಿ ಯಾರಿಗೂ ತಲೆಬಾಗದೆ ಪ್ರಾಮಾಣಿಕವಾಗಿ ನಡೆದುಕೊಂಡು ಬಂದಿದ್ದೇನೆ ಅಂದ್ರು.

    ನಾನು ಸ್ವಾಭಿಮಾನದ ಕಿಚ್ಚನ್ನ ರಾಜಕೀಯದಲ್ಲಿ ಹಚ್ಚಿದ್ದೇನೆ. 13 ನೇ ಚುನಾವಣೆ ನನ್ನ ಕೊನೆಯ ಚುನಾವಣೆ. ಚುನಾವಣೆಗಳು ನನಗೆ ಸಾಕಾಗಿದೆ. ದುಃಖವೆಂಬುದು ನನ್ನ ಡಿಕ್ಷನರಿಯಲ್ಲಿ ಇಲ್ಲ. ಸ್ವಾಭಿಮಾನದ ಸಂದೇಶವನ್ನ ಇಡೀ ರಾಜ್ಯದ ರಾಜಕೀಯಕ್ಕೆ ನೀಡಿದ್ದೇನೆ ಅಂತ ಹೇಳಿದ್ರು.

    ನನ್ನ ಮನೆ ಬಾಗಿಲಿಗೆ ಬಂದಿದ್ದನ್ನ ಮರೆತುಬಿಟ್ರ: ಸುದ್ಧಿಗೋಷ್ಠಿಯುದ್ದಕ್ಕೂ ಸಿಎಂ ವಿರುದ್ಧ ಟೀಕಾಪ್ರಹಾರ ನಡೆಸಿದ ಶ್ರೀನಿವಾಸ್ ಪ್ರಸಾದ್, ಸಿದ್ದರಾಮಯ್ಯನವರೇ ನಾನು ನಿಮಗೆ ಸಹಾಯ ಮಾಡಲಿಲ್ಲವೇ? ಸೋನಿಯಾಗಾಂಧಿಯವರೇ ಸ್ವತಃ ಹೇಳಿ ಕಳುಹಿಸಿದ್ರು ಸಿದ್ದರಾಮಯ್ಯ ಅವರಿಗೆ ಸಪೋರ್ಟ್ ಮಾಡಿ ಅಂತಾ. ನನ್ನ ಮನೆ ಬಾಗಿಲಿಗೆ ಬಂದಿದ್ದನ್ನ ಮರೆತುಬಿಟ್ರ ಸಿದ್ದರಾಮಯ್ಯ? ನಾನು ನಿರ್ವಹಿಸಿದ ಇಲಾಖೆಯಲ್ಲಿ ಏನು ಆಪಾದನೆ ಇದೆ ಹೇಳಿ. ನನ್ನ ಇಲಾಖೆಯಲ್ಲಿ ಏನು ಮಾಡಿದ್ದೇನೆ ಎಂದು ನಾನು ಚರ್ಚೆಗೆ ಸಿದ್ಧ. ನೀವು ಸಿದ್ಧರಿದ್ದರೆ ಚರ್ಚೆಗೆ ಬನ್ನಿ ಅಂತ ಸವಾಲು ಹಾಕಿದ್ರು. ಸಿದ್ಧರಾಮಯ್ಯ ನನಗೋ ಸ್ವಾರ್ಥವೂ ನಿನಗೋ? ತನ್ನ ಮಗನನ್ನ ಮಂತ್ರಿ ಮಾಡಿದ ಖರ್ಗೆ ಸ್ವಾರ್ಥಿಯೋ, ನಾನು ಸ್ವಾರ್ಥಿಯೋ? ಎಂದು ವಾಗ್ದಾಳಿ ನಡೆಸಿದರು.

    ಭ್ರಷ್ಟಾಚಾರದಲ್ಲಿ ದಾಖಲೆ ಮಾಡಿದ್ರು: ಈ ಉಪ ಚುನಾವಣೆ ಕರ್ನಾಟಕದಲ್ಲಿ ನಡೆದ ಎಲ್ಲ ಉಪಚುನಾವಣೆಗಿಂತ ವಿಶೇಷವಾದದ್ದು. ನನಗೆ ಬಹಳ ಸಂತೋಷ, ನಾನು ಸ್ವಾಭಿಮಾನ ನಿರ್ಧಾರ ತೆಗೆದುಕೊಂಡೆ. ಹೌದು ಸ್ವಾಭಿಮಾನಕ್ಕೆ ಸೋಲಾಗಿದೆ, ಆದ್ರೆ ಜನ ಸ್ವಾಭಿಮಾನ ಮೆಚ್ಚಿದ್ದಾರೆ. ಸರ್ಕಾರ ಮೂರು ದಿನಗಳಿಂದ ಯಾವ ವಾಮಮಾರ್ಗ ಅನಿಸರಿಸಿತು, ಕೆಂಪಯ್ಯ ಯಾವ ರೀತಿ ದುರ್ಬಳಕೆ ಮಾಡಿಕೊಂಡಿದ್ದಾರೆ, ಯಾವ ರೀತಿ ಹಣ ಹಂಚಿಕೆ ಮಾಡಿದ್ದಾರೆ ಎಲ್ಲರಿಗೂ ಗೊತ್ತು. ಆದ್ರೆ ಮತದಾನದ ಪಾವಿತ್ರ್ಯತೆ ಹಾಳು ಮಾಡಿದ್ರು. ಗೆದ್ದಿದ್ದಾರೆ ನಿಜ, ಆದ್ರೆ ಯಾವ ರೀತಿ ಗೆದ್ದರು. ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ದಾಖಲೆ ಮಾಡಿದ್ರು. ಸ್ವಾಭಿಮಾನದ ಸಂದೇಶವನ್ನ ಇಡೀ ರಾಜ್ಯದ ರಾಜಕೀಯಕ್ಕೆ ನೀಡಿದ್ದೇನೆ. ಆಮಿಷಕ್ಕೆ ಒಳಗಾಗದೇ ಮತ ನೀಡಿದವರಿಗೆ ಧನ್ಯವಾದ ಅಂತ ಶ್ರೀನಿವಾಸ್ ಪ್ರಸಾದ್ ಹೇಳಿದ್ರು.

    ನಂಜನಗೂಡು ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ 21334 ಮತಗಳಿಂದ ಜಯಗಳಿಸಿದ್ದಾರೆ. ಕಳಲೆ ಕೇಶವಮೂರ್ತಿ ಅವರಿಗೆ 86,212 ಮತಗಳು ಸಿಕ್ಕಿದ್ದರೆ ಬಿಜೆಪಿಯ ವಿ.ಶ್ರೀನಿವಾಸ್ ಪ್ರಸಾದ್‍ಗೆ 64,878 ಮತಗಳು ಲಭಿಸಿವೆ. 1,665 ನೋಟ ಮತಗಳು ಬಿದ್ದಿವೆ.

     

     

     

  • ಕೊನೆ ಎರಡು ದಿನಗಳಲ್ಲಿ ಕಾಂಗ್ರೆಸ್ ಹಣದ ಹೊಳೆ ಹರಿಸಿದೆ: ಶ್ರೀನಿವಾಸ ಪ್ರಸಾದ್

    ಕೊನೆ ಎರಡು ದಿನಗಳಲ್ಲಿ ಕಾಂಗ್ರೆಸ್ ಹಣದ ಹೊಳೆ ಹರಿಸಿದೆ: ಶ್ರೀನಿವಾಸ ಪ್ರಸಾದ್

    ನಂಜನಗೂಡು: ಮೊದಲು ಬಹಳ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂಬ ವಿಶ್ವಾಸವಿತ್ತು. ಆದ್ರೆ ಕೊನೆ ಎರಡು ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಹಣದ ಹೊಳೆ ಹರಿಸಿತು. ಆದ್ದರಿಂದ ಮತದ ಅಂತರ ಕಡಿಮೆಯಾಗುತ್ತೆ. ಆದ್ರೆ ಗೆಲುವು ನನ್ನದೇ ಅಂತಾ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.

    ನಂಜನಗೂಡು ಉಪಚುನಾವಣೆಯ ಫಲಿತಾಂಶ ಇಂದು ಹೊರಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸ್ ಪ್ರಸಾದ್, ಸುಮಾರು ಐದು ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ. ಸ್ಥಳೀಯ ಪೊಲೀಸ್ ಇಲಾಖೆಯು ಸರ್ಕಾರ ಜೊತೆ ಸೇರಿತು. ಕೇಂದ್ರ ಚುನಾವಣಾ ಆಯೋಗದಿಂದ ಬಂದವರು ಎಲ್ಲೂ ಸುತ್ತಲಿಲ್ಲ. ಎಷ್ಟೇ ಹಣ ಹಂಚಿದ್ರು ಜನರು ನನ್ನ ಪರವಾಗಿದ್ದಾರೆ ಎಂದು ತಿಳಿಸಿದರು.

    ಮುಖ್ಯಮಂತ್ರಿಗೆ ನನ್ನ ವಿರುದ್ಧ ದ್ವೇಷವಿತ್ತು. ಹಾಗಾಗಿ ರಾಜೀನಾಮೆ ನೀಡಿದೆ. ದುರುದ್ದೇಶದಿಂದ ಮುಖ್ಯಮಂತ್ರಿ ಮಾಡಿದ ರೀತಿ ಯಾರೂ ಅವಮಾನ ಮಾಡಲಿಲ್ಲ. ಆದ್ದರಿಂದ ಇದು ಸ್ವಾಭಿಮಾನ, ಆತ್ಮಗೌರವದ ಪ್ರಶ್ನೆಯಾಗಿದೆ. ಅದನ್ನ ಜನರಿಗೆ ಮನದಟ್ಟು ಮಾಡಿದ್ದೇನೆ. ಈ ಚುನಾವಣೆ ನಂತ್ರ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ಆದ್ರೆ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಅಂದ್ರು.

    ಇದನ್ನೂ ಓದಿ: ಸರ್ಕಾರದ ಯೋಜನೆಗಳೇ ನನಗೆ ಶ್ರೀರಕ್ಷೆ: ಕಳಲೆ ಕೇಶವಮೂರ್ತಿ

  • ಮೋದಿಗೆ ಅಧಿಕಾರ ಕೊಟ್ಟಿರೋದು ಹುಚ್ಚನ ಕೈಗೆ ಶೇವಿಂಗ್ ಕತ್ತಿ ಕೊಟ್ಟಂಗಾಗಿದೆ: ಸಿಎಂ ಇಬ್ರಾಹಿಂ ಲೇವಡಿ

    ಮೋದಿಗೆ ಅಧಿಕಾರ ಕೊಟ್ಟಿರೋದು ಹುಚ್ಚನ ಕೈಗೆ ಶೇವಿಂಗ್ ಕತ್ತಿ ಕೊಟ್ಟಂಗಾಗಿದೆ: ಸಿಎಂ ಇಬ್ರಾಹಿಂ ಲೇವಡಿ

    ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿಯವರಿಗೆ ಅಧಿಕಾರ ಕೊಟ್ಟಿರೋದು ಹುಚ್ಚನ ಕೈಯಲ್ಲಿ ಕತ್ತಿ ಕೊಟ್ಟು ಶೇವಿಂಗ್ ಕೂತಂಗೆ ಆಗಿದೆ. ಮೋದಿ ಕತ್ತಿಯನ್ನು ಕುತ್ತಿಗೆಗೆ ಹಿಡಿತಾನೋ ಅಥವಾ ಗಡ್ಡಕ್ಕೆ ಹಿಡಿಯುತ್ತಾನೋ ಅಂತಾನೇ ಗೊತ್ತಾಗ್ತಾ ಇಲ್ಲ ಅಂತಾ ರಾಜ್ಯ ಯೋಜನಾ ಆಯೋಗದ ಅಧ್ಯಕ್ಷ ಸಿಎಂ ಇಬ್ರಾಹಿಂ ಲೇವಡಿ ಮಾಡಿದ್ದಾರೆ.

    ಇಂದು ಗುಂಡ್ಲುಪೇಟೆಯಲ್ಲಿ ನಡೆದ ಉಪಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಇಬ್ರಾಹಿಂ, 500 ರೂ. ಹಾಗೂ 1000ರೂ. ನೋಟುಗಳನ್ನು ತೆಗೆದೇ ಬಿಟ್ಟ. ಜನಕ್ಕೆ ಒಂದು ಖುಷಿ. ಸವತಿ ಗಂಡ ಸತ್ತ ಅಂತಾ ಇವ್ಳು ಖುಷಿಯಾದ್ಳು. ಒರಿಜನಲ್ ಇವನೇ ಸತ್ತಾಂತ ಆಮೇಲೆ ಗೊತ್ತಾಯ್ತು. ಯಾವ ವ್ಯಾಪಾರ ನಡೀತಾ ಇಲ್ಲ. ಜಮೀನು ಖರೀದಿ ಇಲ್ಲ. ಸಬ್ ರಿಜಿಸ್ಟಾರ್ ಆಫೀಸ್‍ಗೆ ಜನಬರುತ್ತಿಲ್ಲ. ಲೇವಾದೇವಿ ಇಲ್ಲ. ದುಡ್ಡಿಲ್ಲದೇ ಜನ ಕಂಗಾಲಾಗಿದ್ರು. ಒಂದೊಂದು ತಿಂಗಳು ಸಾವಿರಾರು ಜನ ಬ್ಯಾಂಕ್ ಎದುರು ಲೈನಾಗಿ ನಿಲ್ತಿದ್ದರು ಅಂತಾ ಮೋದಿ ನೋಟ್ ಬ್ಯಾನ್ ವಿಚಾರದಲ್ಲಿ ವ್ಯಂಗ್ಯವಾಡಿದ್ರು.

    ಮಂತ್ರಿ ಪಟ್ಟ ಕೊಟ್ಟಿಲ್ಲ ಅಂತಾ ರಾಜೀನಾಮೆ ಕೊಟ್ರು. ಇದು ಯಾವ ಪ್ರತಿಷ್ಠೆಗೆ? ಶೂನ್ಯ ಸಿಂಹಾಸನದವನು ನಾನು ಇಲ್ವ. ಹಂಗೆಲ್ಲಾ ನೋಡಕೋದ್ರೆ ನಿಮ್ಮ ಪೋಸ್ಟರ್‍ಗಳಲ್ಲಿ ನಮ್ಮ ಹೆಸರಿಲ್ಲ. ಇದೀಗ ನಾವು ಯಾಕ್ ಬಂದ್ವಿ ಇಲ್ಲಿಗೆ. ಎನಗಿಂತ ಕಿರಿಯನಿಲ್ಲ. ಹಿರಿಯರಿಗಿಂತ ನಾ ಮೇಲಿಲ್ಲ. ಸದಾ ಶರಣರ ಪಾದದ ಧೂಳಾಗಿ ದುಡಿಯಬೇಕು ಕೂಡಲಸಂಗದೇವ ಎಂದು ವಚನವನ್ನು ಉದಾಹರಿಸಿ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರಿಗೆ ಮಂತ್ರಿಯಾಗೋ ಕನಸು ಕಾಣುವ ಮೊದಲು ಸುತ್ತೂರು ಮಠದಲ್ಲಿ ಒಂದು ವರ್ಷ ಇದ್ದು ತರಬೇತಿ ತಗೋಳ್ತಿದ್ರೆ ಉತ್ತಮವಾಗುತ್ತಿತ್ತು ಅಂತಾ ಹೇಳಿ ಟಾಂಗ್ ನೀಡಿದ್ರು.

    ಉಪಚುನಾವಣೆಗೆ ಪರಿಣಾಮ ಆಗಲ್ಲ: ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಗೆ ಪಂಚರಾಜ್ಯ ಫಲಿತಾಂಶದ ಪ್ರಭಾವ ಬೀರುವುದಿಲ್ಲ. ಯು.ಪಿಯಲ್ಲಿ ಮಳೆ ಬಂದರೆ ಕರ್ನಾಟಕದಲ್ಲಿ ಛತ್ರಿ ಹಿಡಿದುಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಮಳೆ ಬಂದರೆ ಮಾತ್ರ ಛತ್ರಿ ಹಿಡಿದುಕೊಳ್ಳಲು ಸಾಧ್ಯ ಅಂತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಬಿಜೆಪಿ ಅವರು ಬರಿ ಸುಳ್ಳನ್ನೇ ಗುಸು ಗುಸು ಎನ್ನುತ್ತಾರೆ. ಅವರಿಗೆ ಆರ್‍ಎಸ್‍ಎಸ್ ಸುಳ್ಳು ಗುಸುಗುಟ್ಟುವ ಟ್ರೈನಿಂಗ್ ನೀಡಿದೆ. ನಾವು ಏನ್ ಕೆಲಸ ಮಾಡಿದ್ದೀವಿ ಎನ್ನುವುದನ್ನು 15 ರಂದು ಮಂಡಿಸುವ ಬಜೆಟ್ ನಲ್ಲಿ ನೋಡಿ. ಬಿಜೆಪಿ ಅವರು ಬರಿ ಸುಳ್ಳು ಮತ್ತು ಆರೋಪ ಮಾಡುತ್ತಾ ಓಡಾಡ್ತಾ ಇದ್ದಾರೆ. ಯಡಿಯೂರಪ್ಪ ಅಧಿಕಾರದಲ್ಲಿ ಇದ್ದಾಗ ಸಂಧ್ಯಾ ಸುರಕ್ಷಾ, ಸೈಕಲ್ ಕೊಟ್ಟಿದ್ದು ಅದನ್ನು ಬಿಟ್ಟರೆ ಸೀರೆ ವಿತರಣೆ ಮಾಡಿದ್ದು ಬಿಟ್ಟರೆ ಬಿಟ್ಟರೆ ಬೇರೆ ಯಾವ ಅಭಿವೃದ್ಧಿ ಕೆಲಸಗಳನ್ನು ಬಿಜೆಪಿ ಅವರು ಮಾಡಿಲ್ಲ ಅಂತಾ ಸಿಎಂ ಬಿಜೆಪಿ ವಿರುದ್ಧ ಕಿಡಿಕಾರಿದ್ರು.

    ಇದನ್ನೂ ಓದಿ:  ರೋಡ್ ಶೋನಲ್ಲಿ ಭಾಗವಹಿಸಲು ಬಂದಿದ್ದ ಕೈ ಕಾರ್ಯಕರ್ತರಿಗೆ ಪೆಟ್ರೋಲ್ ಭಾಗ್ಯ!


  • ನಾನು ಕಾಂಗ್ರೆಸ್‍ಗೆ ಸೇರುತ್ತಿರುವುದು ಯಾಕೆ: ಕೇಶವಮೂರ್ತಿ ಉತ್ತರಿಸಿದ್ದು ಹೀಗೆ

    ಮೈಸೂರು: ನಾನು ಜನರ ಮತ್ತು ಅಭಿಮಾನಿಗಳ ಆಸೆಯಂತೆ ಕಾಂಗ್ರೆಸ್‍ಗೆ ಸೇರ್ಪಡೆ ಆಗುತ್ತಿದ್ದೇನೆ ಎಂದು ಜೆಡಿಎಸ್ ಪಕ್ಷದ ಮುಖಂಡ ಕಳಲೆ ಕೇಶವಮೂರ್ತಿ ಹೇಳಿದ್ದಾರೆ.

    ಇಂದು ಕೇಶವಮೂರ್ತಿ ಆಪ್ತರು ಮತ್ತು ಬೆಂಬಲಿಗರ ಸಭೆ ಕರೆದಿದ್ದರು. ಈ ಸಭೆಯ ನಂತರ ಜೆಡಿಎಸ್ ನಿಂದ ಹೊರ ಬರುತ್ತಿರುವುದಾಗಿ ತಿಳಿಸಿದರು. ಇನ್ನು ಕಲವೇ ದಿನಗಳಲ್ಲಿ ಕೇಶವಮೂರ್ತಿ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದಾರೆ. ನಂಜನಗೂಡಿನ ಉಪಚುನಾವಣೆಯಲ್ಲಿ ಕೇಶವಮೂರ್ತಿ ಬಹುತೇಕ ಕಾಂಗ್ರೆಸ್ ಅಭ್ಯರ್ಥಿ ಆಗುವ ಸಾಧ್ಯತೆಗಳಿವೆ.

    ನಾನು ಸ್ವಾಭಿಮಾನದ ಹೆಸರು ಹೇಳಿಕೊಂಡು ಪಕ್ಷಾಂತರ ಮಾಡುವಂತಹ ವ್ಯಕ್ತಿಯಲ್ಲ ಎಂದು ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು. ನಾನು ನಂಜನಗೂಡಿನಲ್ಲಿ ಜೆಡಿಎಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟಿದವನು. ಈಗ ಪಕ್ಷ ತೊರೆಯುವ ಪರಿಸ್ಥಿತಿ ಬಂದೊದಗಿದೆ. ನಾನು ಕಾಂಗ್ರೆಸ್ ಸೇರುವ ಅನಿವಾರ್ಯತೆ ಎದುರಾಗಿದೆ ಎಂದು ಕೇಶವಮೂರ್ತಿ ತಿಳಿಸಿದರು.

    ಜೆಡಿಎಸ್ ನಿಂದಲೇ ಸ್ಪರ್ಧಿಸಿದರೆ ರಾಜ್ಯ ಸರ್ಕಾರದ ಹಣ ಬಲ, ತೋಳ್ಬಲದ ಮುಂದೆ ಜಯಿಸುವುದು ಕಷ್ಟವಾಗುತ್ತದೆ. ಇದನ್ನು ದೇವೇಗೌಡರಿಗೆ ಹೇಳಿದ್ದೇನೆ. ಅವರು ನನಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಜೆಡಿಎಸ್ ನಿಂದ ಅಭ್ಯರ್ಥಿ ಹಾಕದೇ ನನ್ನ ಗೆಲುವಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದ್ದರಿಂದಲೇ ನಾನು ಕಾಂಗ್ರೆಸ್ ನತ್ತ ಮುಖ ಮಾಡಿದ್ದೇನೆ ಎಂದು ಹೇಳಿದರು.