Tag: Shrimant Patil

  • ಬಿಎಸ್‍ವೈ ಟಿಕೆಟ್ ಕೊಡಲ್ಲ, ನನ್ನ ದಾರಿ ನನಗೆ: ರಾಜು ಕಾಗೆ

    ಬಿಎಸ್‍ವೈ ಟಿಕೆಟ್ ಕೊಡಲ್ಲ, ನನ್ನ ದಾರಿ ನನಗೆ: ರಾಜು ಕಾಗೆ

    – ಕಾಂಗ್ರೆಸ್ ನಾಯಕರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ

    ಬೆಳಗಾವಿ(ಚಿಕ್ಕೋಡಿ): ಕಾಗವಾಡ ಮತ್ತು ಅಥಣಿ ಎರಡು ಮತಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಬಿಜೆಪಿಯ ಹಿರಿಯ ಮುಖಂಡ ರಾಜು ಕಾಗೆ ಅವರು ನೇರವಾಗಿಯೇ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ನಾಯಕರ ವಿರುದ್ಧ ಬಹಿರಂಗವಾಗಿ ಹರಿಹಾಯ್ದಿದ್ದಾರೆ. ಸಿಎಂ ಯಡಿಯೂರಪ್ಪನವರು ನನಗೆ ಟಿಕೆಟ್ ಕೊಡುವದಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಹೀಗಾಗಿ ನನ್ನ ದಾರಿ ನಾನು ನೋಡಿಕೊಳ್ಳುತ್ತೇನೆ ಎಂದು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದರು.

    ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಬಿಎಸ್‍ವೈ ನನಗೆ ಬಿಜೆಪಿ ಟಿಕೆಟ್ ಕೊಡಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರು ನನ್ನ ಜೊತೆಯಲ್ಲಿ ನಿರಂತರ ಸಂಪರ್ಕದಲ್ಲಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ತೀರ್ಪನ್ನು ಗಮನದಲ್ಲಿಟ್ಟುಕೊಂಡು ನಾನು ಮುಂದುವರಿಯುತ್ತೇನೆ. ಕೋರ್ಟ್ ತೀರ್ಪು ಅನರ್ಹರ ಪರವಾಗಿ ಬಂದರೆ, ನಾನು ಅಥಣಿಗೆ ಹೋಗಿ ಸ್ಪರ್ಧೆ ಮಾಡುತ್ತೇನೆ. ಅವರ ವಿರೋಧವಾಗಿ ಬಂದರೆ ನಾನು ಕಾಗವಾಡದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ರಾಜು ಕಾಗೆ ತಿಳಿಸಿದರು.

    ಡಿಸಿಎಂ ಲಕ್ಷ್ಮಣ ಸವದಿಯವರು ನಿಮಗೆ ಅಥಣಿ ಪ್ರವೇಶಕ್ಕೆ ಅವಕಾಶ ನೀಡ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜು ಕಾಗೆ, ರಾಜಕಾರಣದಲ್ಲಿ ಸ್ನೇಹಿತ, ಅಣ್ಣ, ತಮ್ಮ, ಮಾವ, ಅಳಿಯ ಯಾವುದು ಲೆಕ್ಕಕ್ಕೆ ಬರೋದಿಲ್ಲ. ನನ್ನ ಸ್ವಂತ ಸಹೋದರನೇ ನನ್ನ ವಿರುದ್ಧ ಒಂದು ಬಾರಿ ಚುಣಾವಣೆಯಲ್ಲಿ ಕೆಲಸ ಮಾಡಿದ್ದನು. ಹೀಗಾಗಿ ರಾಜಕಾರಣದಲ್ಲಿ ಯಾವುದೇ ಸಂಬಂಧ ಲೆಕ್ಕಕ್ಕೆ ಬರೋದಿಲ್ಲ. ಹೀಗಾಗಿ ಶ್ರೀಮಂತ ಪಾಟೀಲ್ ಅನರ್ಹರಾದರೆ ಕಾಗವಾಡದಲ್ಲಿ ಚುನಾವಣೆಗೆ ನಿಲ್ಲುತ್ತೇನೆ ಎಂದರು.

  • “ಊರು ಬಿಟ್ಟು ಹೋದವ್ರು ಈಗ್ಯಾಕ ಬಂದ್ರಿ, ಟಿಕೆಟ್ ಕೊಟ್ರು ನೀವ್ ಗೆಲ್ಲಲ್ಲ ಸುಮ್ನೆ ಹೋಗಿ”: ಶ್ರೀಮಂತ್ ಪಾಟೀಲ್‍ಗೆ ಕ್ಲಾಸ್

    “ಊರು ಬಿಟ್ಟು ಹೋದವ್ರು ಈಗ್ಯಾಕ ಬಂದ್ರಿ, ಟಿಕೆಟ್ ಕೊಟ್ರು ನೀವ್ ಗೆಲ್ಲಲ್ಲ ಸುಮ್ನೆ ಹೋಗಿ”: ಶ್ರೀಮಂತ್ ಪಾಟೀಲ್‍ಗೆ ಕ್ಲಾಸ್

    ಚಿಕ್ಕೋಡಿ (ಬೆಳಗಾವಿ): ಸಿಎಂ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅನರ್ಹ ಶಾಸಕ ಶ್ರೀಮಂತ್ ಪಾಟೀಲ್ ಅವರಿಗೆ ರೈತರು ಘೇರಾವ್ ಹಾಕಿದ ಪ್ರಸಂಗ ಅಥಣಿ ತಾಲೂಕಿನ ದರೂರು ಗ್ರಾಮದಲ್ಲಿ ನಡೆದಿದೆ.

    ‘ಆಗ ಊರು ಬಿಟ್ಟು ಹೋಗಿ ಇಗ್ಯಾಕ ನೀವು ಬಂದಿದ್ದಿರಿ? ವಿಶ್ವಾವಿಟ್ಟು ನಿಮ್ಮನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸಿದ್ವಿ ಸ್ವಾಮಿ. ಆದ್ರೆ ನೀವು ಮಾಡಿದ್ದು ಏನು? ನಮಗೆ ಮೋಸ ಮಾಡಿ ಹೋಗಿದ್ರಿ. ಮತ್ಯಾಕೆ ಇಲ್ಲಿಗೆ ಬಂದ್ರಿ, ಮೊದ್ಲು ಇಲ್ಲಿಂದ ಹೋಗ್ರಿ’ ಎಂದು ನೆರೆ ಸಂತ್ರಸ್ತರು ಹಾಗೂ ರೈತರು ಶ್ರೀಮಂತ ಪಾಟೀಲ್ ಅವರನ್ನು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಈಗ ಮುಂಬೈ ಹಾರ್ಟ್ ಅಟ್ಯಾಕ್ ಕೇಸ್ – ಕೋರ್ಟಿನಲ್ಲಿ ಸಿಬಲ್ ವ್ಯಂಗ್ಯ

    ನಿಮ್ಮ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಸರಿಯಾಗಿ ಹಣ ಪಾವತಿಸಿಲ್ಲ. ಸಾಕಷ್ಟು ರೈತರ ಬಿಲ್ ಬಾಕಿ ಇದೆ. ಉಪ ಚುನಾವಣೆಯ ಟಿಕೆಟ್ ಕೊಟ್ಟರೂ ನೀವು ಆರಿಸಿ ಬರಲ್ಲ ಎಂದು ಅಸಮಾಧಾನ ಹೊರ ಹಾಕಿದರು.

    ದರೂರು ಗ್ರಾಮಕ್ಕೆ ಆಗಮಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ, ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಸಿಎಂಗೆ ಸಾಥ್ ನೀಡಿದರು. ಬಳಿಕ ನಡೆದ ಪರಿಹಾರ ವಿತರಣೆ ಹಾಗೂ ಅಹವಾಲು ಸ್ವೀಕಾರ ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆಗೆ ಶ್ರೀಮಂತ್ ಪಾಟೀಲ್ ವೇದಿಕೆ ಹಂಚಿಕೊಂಡರು.

  • ಈಗ ಮುಂಬೈ ಹಾರ್ಟ್ ಅಟ್ಯಾಕ್ ಕೇಸ್ – ಕೋರ್ಟಿನಲ್ಲಿ ಸಿಬಲ್ ವ್ಯಂಗ್ಯ

    ಈಗ ಮುಂಬೈ ಹಾರ್ಟ್ ಅಟ್ಯಾಕ್ ಕೇಸ್ – ಕೋರ್ಟಿನಲ್ಲಿ ಸಿಬಲ್ ವ್ಯಂಗ್ಯ

    ನವದೆಹಲಿ: “ಈಗ ಮುಂಬೈ ಹಾರ್ಟ್ ಅಟ್ಯಾಕ್ ಕೇಸ್” ಎಂದು ಹೇಳುವ ಮೂಲಕ ಸಿಬಲ್ ಕೋರ್ಟ್ ಹಾಲ್‍ನಲ್ಲಿ ವ್ಯಂಗ್ಯವಾಗಿ ವಾದವನ್ನು ಮಂಡಿಸಿದ ಪ್ರಸಂಗ ಇಂದು ಸುಪ್ರೀಂ ಕೋರ್ಟಿನಲ್ಲಿ ನಡೆಯಿತು.

    ಶ್ರೀಮಂತ ಪಾಟೀಲ್ ಬಗ್ಗೆ ವಾದ ಆರಂಭಿಸಿದ ಅವರು, ರಾತ್ರೋರಾತ್ರಿ ಶ್ರೀಮಂತ ಪಾಟೀಲ್ ಮುಂಬೈಗೆ ತೆರಳಿದ್ದರು. ಹಾರ್ಟ್ ಅಟ್ಯಾಕ್ ಆಗಿದೆ ಚಿಕಿತ್ಸೆಗೆ ತೆರಳಿದ್ದರು ಅಂತ ಹೇಳಿದ್ದಾರೆ. ಕೆಲವು ದಾಖಲೆ ಮತ್ತು ಫೋಟೋಗಳನ್ನು ಕಳುಹಿಸಿದ್ದರು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ವಿಧಾನಸಭೆಗೆ ಅನರ್ಹರಾದವರು ಲೋಕಸಭೆಗೆ ಸ್ಪರ್ಧೆ ಮಾಡಬಹುದೇ – ಸಿಬಲ್‍ಗೆ ಸುಪ್ರೀಂ ಪ್ರಶ್ನೆ

    ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶ್ರೀಮಂತ ಪಾಟೀಲ್ ಪರ ವಕೀಲ ವಿ.ಗಿರಿ, ಆಸ್ಪತ್ರೆಯಲ್ಲಿ ಯಾರನ್ನೂ ಭೇಟಿಗೆ ಬಿಟ್ಟಿಲ್ಲ ಎಂದು ವಾದ ಮಂಡಿಸಿದರು. ಆಗ ಸಿಬಲ್ ಅವರು, ಶ್ರೀಮಂತ ಪಾಟೀಲ್ ಹಾರ್ಟ್ ಅಟ್ಯಾಕ್‍ನಿಂದ ಚೇತರಿಸಿಕೊಂಡಿದ್ದು ಸಂಜೀವಿನಿಯಿಂದ ಎಂದು ತಮಾಷೆಯಾಗಿ ವಾದಿಸಿದರು.

    ವಾದ ಮುಂದುವರಿಸಿದ ಕಪಿಲ್ ಸಿಬಲ್ ಅವರು, ಅಲ್ಲಿ ಯಾವ ವೈದ್ಯರೂ ಇರಲಿಲ್ಲ. ವೈದ್ಯರ ಹೆಸರಿಲ್ಲ, ಅವರ ಸಹಿ ಇಲ್ಲ. ಸ್ಪೀಕರ್ ಇವರ ವಿಷಯದಲ್ಲಿ ಏನು ಮಾಡಬೇಕಿತ್ತು ಹೇಳಿ ಎಂದು ನ್ಯಾಯಮೂರ್ತಿಗಳನ್ನು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಕಾಂಗ್ರೆಸ್ ಜೊತೆ ಕೆಪಿಜೆಪಿ ವಿಲೀನವಾಗಿದ್ದಕ್ಕೆ ಶಂಕರ್ ಮೇಲೆ ಕ್ರಮ – ಸಿಬಲ್ ವಾದ ಹೀಗಿತ್ತು

    ಅನರ್ಹ ಶಾಸಕರಾದ ವಿಶ್ವನಾಥ್, ಗೋಪಾಲಯ್ಯ ಮತ್ತು ನಾರಾಯಣ ಗೌಡರ ಅವರು ರಾಜೀನಾಮೆ ನೀಡಲು ಸಕಾರಣಗಳೇ ಇರಲಿಲ್ಲ. ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಲಿಲ್ಲ. ಜುಲೈ 7ರಂದು ಬೇರೆಯವರೊಂದಿಗೆ ರಾಜ್ಯಪಾಲರ ಬಳಿ ಇದ್ದರು. ಇವರು ಕೂಡ ಮುಂಬೈ ಪ್ರವಾಸ ಕೈಗೊಂಡಿದ್ದರು ಎಂದು ಕಪಿಲ್ ಸಿಬಲ್ ಕೋರ್ಟಿಗೆ ಮಾಹಿತಿ ನೀಡಿದರು.

    ಅನರ್ಹರಿಗೆ ಚುನಾವಣೆಯಲ್ಲಿ ನಿಲ್ಲಲು ಅವಕಾಶ ಮಾಡಿಕೊಡಬಾರದು. ಇವರಿಗೆ ಅವಕಾಶ ಕೊಟ್ಟರೆ ಏನು ಬೇಕಾದರೂ ಮಾಡಿ ಜೈಸಿಕೊಳ್ಳಬಹುದು ಎಂಬ ಸಂದೇಶ ಹೋಗಲಿದೆ. ಇದು ಸಂಪೂರ್ಣ ಸಂವಿಧಾನ ಬಾಹಿರವಾದ ಕ್ರಮವಾಗಲಿದೆ ಎಂದು ಸಿಬಲ್ ವಾದವನ್ನು ಅಂತ್ಯಗೊಳಿಸಿದರು.

    ಸ್ಪೀಕರ್ ಪರ ವಕೀಲರ ವಾದ:
    ಸ್ಪೀಕರ್ ಕಾಗೇರಿ ಪರ ವಕೀಲ ತುಷಾರ್ ಮೆಹ್ತಾ ವಾದ ಮಂಡನೆ ಆರಂಭಿಸಿ, ಕಾಂಗ್ರೆಸ್ ಪರ ವಕೀಲರು ರಾಜೀನಾಮೆ ಕೊಟ್ಟ ದಿನಾಂಕಗಳನ್ನು ಮತ್ತೆ ಹೇಳುತ್ತಿದ್ದಾರೆ. ಸುಪ್ರೀಂಕೋರ್ಟ್ ಸೂಚನೆ ಬಳಿಕ ಮತ್ತೊಮ್ಮೆ ರಾಜೀನಾಮೆ ನೀಡಿದ್ದರು. ಯಾವುದೇ ಅಧಿಕೃತ ಆದೇಶ ಸ್ಪೀಕರ್ ಕಚೇರಿಯಲ್ಲಿಲ್ಲ. ಕೆಪಿಜೆಪಿ ವಿಲೀನದ ಆದೇಶದ ಪ್ರತಿ ಇಲ್ಲ ಎಂದರು.

    ಚುನಾವಣಾ ಆಯೋಗ:
    ಚುನಾವಣಾ ಆಯೋಗ ಪರ ವಾದ ಮಂಡಿಸಿದ ರಾಕೇಶ್ ದ್ವಿವೇದಿ, ಖಾಲಿಯಾಗಿರುವ ಕ್ಷೇತ್ರಕ್ಕೆ ಚುನಾವಣಾ ನಡೆಸುವುದು ನಮ್ಮ ಕೆಲಸ. ಅದಕ್ಕಾಗಿ ಚುನಾವಣೆ ಘೋಷಣೆ ಮಾಡಿದ್ದೇವೆ. ಸ್ಪೀಕರ್ ಆದೇಶದ ಮೇಲೆ ನಾವು ನಿರ್ಧಾರ ತೆಗೆದುಕೊಂಡಿದ್ದೇವೆ. ಇಲ್ಲಿ ರಾಜೀನಾಮೆ ತಿರಸ್ಕರಿಸಿ ಅನರ್ಹ ಮಾಡಿದ್ದಾರೆ. ಏನಾದ್ರೂ ಆಗಲಿ ಆ ಕ್ಷೇತ್ರ ಖಾಲಿ ಉಳಿಯಲಿದೆ ಎಂದು ತಿಳಿಸಿದರು.

    ಈಗ ಅನರ್ಹ ಶಾಸಕರ ಪ್ರಕರಣ ಇತ್ಯರ್ಥ ಆಗದಿದ್ದರೆ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಠಿಯಾಗಲಿದೆ. ಚುನಾವಣೆ ನಿಲ್ಲಿಸಿದರೆ ಜನಪ್ರತಿನಿಧಿ ಇಲ್ಲದಂತಾಗುತ್ತದೆ. ಹಾಗೇ ಚುನಾವಣೆ ಆದರೆ ಬೇರೆ ಜನಪ್ರತಿನಿಧಿ ಆಯ್ಕೆ ಆಗುತ್ತಾರೆ. ಪ್ರಕರಣ ಇತ್ಯರ್ಥ ಆದ ಬಳಿಕ ಶಾಸಕರು ಅರ್ಹರಾದರೆ ಸಾಂವಿಧಾನಿಕ ಬಿಕ್ಕಟ್ಟು ಆರಂಭ ಆಗಲಿದೆ ಎಂದು ವಾದಿಸಿದರು.

    ರಾಕೇಶ್ ದ್ವಿವೇದಿ ಅವರ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಸಂಜಯ್ ಖನ್ನಾ ಅವರು, ಹಾಗಾಂತ ಚುನಾವಣೆ ಅಧಿಸೂಚನೆಗೆ ತಡೆ ನೀಡಲು ಸಾಧ್ಯವಿಲ್ಲ. ಪ್ರಕರಣವನ್ನು ಮೂರು ನಾಲ್ಕು ದಿನ ವಿಚಾರಣೆ ನಡೆಸಬೇಕಿದೆ. ತಾರ್ಕಿಕ ಅಂತ್ಯ ಕಾಣಬೇಕು. ಹಲವು ವಿಷಯಗಳ ಬಗ್ಗೆ ಇನ್ನು ವಿಚಾರಣೆ ನಡೆಯಬೇಕಿದೆ. ಚುನಾವಣೆ ಮುಂದೆ ಹಾಕುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು.

    ಕೇಸ್ ಮುಗಿದ ಮೇಲೆ ಚುನಾವಣೆ ನಡೆಯಬಹುದು ಎಂದು ನ್ಯಾಯಪೀಠವು ಅಭಿಪ್ರಾಯ ವ್ಯಕ್ತಪಡಿಸಿತು. ಆಗ ನ್ಯಾ. ರಮಣ ಅವರು, ಬೇರೆ ಯಾವುದಾದರು ವಿಚಾರಣೆ ಮುಂದುವರಿಯಲಿ ಎಂದರು. ಈ ವೇಳೆ ಕಾಂಗ್ರೆಸ್, ಪ್ರಕರಣವು ಸಂವಿಧಾನಿಕ ಪೀಠಕ್ಕೆ ಹೋಗಲಿ ಎಂದು ಕೇಳಿಕೊಂಡಿತು. ಇದಕ್ಕೆ ಉತ್ತರ ನೀಡಿದ ನ್ಯಾ.ರಮಣ ಅವರು, ಅವಶ್ಯಕತೆ ಬಂದರೆ ಬೇರೆ ಪೀಠಕ್ಕೆ ವರ್ಗಾ ಮಾಡುತ್ತೇವೆ. ಮುಂದಿನ ತಿಂಗಳ 22ರ ಬಳಿಕ ವಿಚಾರಣೆ ನಡೆಯಲಿದೆ ಎಂದು ವಿಚಾರಣೆಯನ್ನು ಮುಂದೂಡಿದರು.

  • ರಮೇಶ್ ಜಾರಕಿಹೊಳಿ, ಶ್ರೀಮಂತ್ ಪಾಟೀಲ್ ಬೆಂಗಳೂರಿಗೆ ವಾಪಸ್

    ರಮೇಶ್ ಜಾರಕಿಹೊಳಿ, ಶ್ರೀಮಂತ್ ಪಾಟೀಲ್ ಬೆಂಗಳೂರಿಗೆ ವಾಪಸ್

    ಬೆಂಗಳೂರು: ಅನರ್ಹಗೊಂಡಿರುವ ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಶ್ರೀಮಂತ್ ಪಾಟೀಲ್ ಇಬ್ಬರು ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ.

    ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು, ಸುಪ್ರೀಂಕೋರ್ಟಿನಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದ್ದೇವೆ. ಯಾವಾಗ ವಾದ ಮಾಡಬೇಕು ಎಂಬುದನ್ನ ನಮ್ಮ ವಕೀಲರು ತೀರ್ಮಾನ ಮಾಡಲಿದ್ದಾರೆ. ನ್ಯಾಯಾಲಯದಲ್ಲಿರುವ ಕಾರಣ ಜಾಸ್ತಿ ಏನೂ ಮಾತನಾಡುವುದು ಬೇಡ. ಅವರು ಯಾರು ಮಾಡಿದ್ದಾರೋ ಅವರಿಗೆ ಒಳ್ಳೆಯದಾಗಲಿ ಎಂದರು.

    ಹಿಂದಿನ ಪ್ರಕರಣಗಳು ನಮ್ಮ ಪ್ರಕರಣಗಳಿಗೆ ತಾಳೆ ಮಾಡುವುದು ಬೇಡ. ನಾವು ಮೊದಲೇ ರಾಜೀನಾಮೆ ಕೊಟ್ಟಿದ್ದೇವೆ. ಅದಾದ ನಂತರ ದುರದ್ದೇಶದಿಂದ ಅನರ್ಹತೆ ಮಾಡಿದ್ದಾರೆ. ನಮ್ಮ ನ್ಯಾಯಾಂಗದ ಮೇಲೆ ಬಹಳಷ್ಟು ಭರವಸೆ ಇದೆ. ನಮಗೆ ನ್ಯಾಯ ಸಿಕ್ಕೆ ಸಿಗುತ್ತದೆ. ಸ್ಪೀಕರ್ ಅವರ ಬಗ್ಗೆ ಮಾತನಾಡುವುದು ಬೇಡ, ಆತ ಒಳ್ಳೆಯ ಮನುಷ್ಯ. ಸ್ಪೀಕರ್ ಯಾಕೆ ಹಾಗೆ ಮಾಡಿದ್ದಾರೋ ಗೊತ್ತಿಲ್ಲ. ಸ್ಪೀಕರ್‌ಗೆ ದೇವರು ಒಳ್ಳೆಯದು ಮಾಡಲಿ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

    ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ನಾಪತ್ತೆ ವಿಚಾರವಾಗಿ ಪ್ರತಿಕ್ರಿಯಿಸಿ, ನಮಗೂ ಈಗ ವಿಚಾರ ಗೊತ್ತಾಯಿತು. ನಮ್ಮ ಗುರುಗಳಾದ ಎಸ್.ಎಂ.ಕೃಷ್ಣ ಅವರ ಮನೆಗೆ ಹೋಗಿ ಭೇಟಿ ಮಾಡುತ್ತೇನೆ. ಶೀಘ್ರದಲ್ಲಿ ನಾವು 15 ಮಂದಿ ಕೂಡಿ ಸುದ್ದಿಗೋಷ್ಠಿ ನಡೆಸಿ ಎಲ್ಲ ವಿಚಾರವನ್ನು ತಿಳಿಸುವುದಾಗಿ ರಮೇಶ್ ಹೇಳಿದರು.

    ಇತ್ತ ಶ್ರೀಮಂತ್ ಪಾಟೀಲ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಸಂಜೆ ಬೆಂಗಳೂರಿನಲ್ಲಿ ಮಾತನಾಡುವುದಾಗಿ ತಿಳಿಸಿ ಬೆಂಗಳೂರು ಕಡೆಗೆ ಪಯಣ ಬೆಳೆಸಿದರು.

  • ಶಾಸಕನಾಗಲು ಹೀಗೆ ಮಾಡ್ತಿದ್ದೀಯಾ?- ಪಾಟೀಲ್ ಪುತ್ರನಿಗೆ ಕೈ ಶಾಸಕಿ ಅವಾಜ್

    ಶಾಸಕನಾಗಲು ಹೀಗೆ ಮಾಡ್ತಿದ್ದೀಯಾ?- ಪಾಟೀಲ್ ಪುತ್ರನಿಗೆ ಕೈ ಶಾಸಕಿ ಅವಾಜ್

    ಮುಂಬೈ: ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಚಿಕಿತ್ಸೆ ಪಡೆಯುತ್ತಿರೋ ಮುಂಬೈನ ಸೈಂಟ್ ಜಾರ್ಜ್ ಆಸ್ಪತ್ರೆ ಬಳಿ ಭಾರೀ ಹೈಡ್ರಾಮಾ ನಡೆದಿದೆ.

    ಶ್ರೀಮಂತ್ ಪಾಟೀಲ್ ಭೇಟಿಯಾಗಲು ಮುಂಬೈನ ಬಾಂದ್ರಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಯಶೋಮತಿ ಠಾಕೂರ್ ಆಗಮಿಸಿದರು. ಆದರೆ ಶಾಸಕಿಗೆ ಶ್ರೀಮಂತ್ ಪಾಟೀಲ್ ಅವರನ್ನು ಭೇಟಿಯಾಗಲು ಅವಕಾಶವೇ ಸಿಗಲಿಲ್ಲ.

    ಬಾಗಿಲಲ್ಲೇ ನಿಂತಿದ್ದ ಶ್ರೀಮಂತ್ ಪಾಟೀಲ್ ಪುತ್ರ ಶ್ರೀನಿವಾಸ್, ಶಾಸಕಿಯನ್ನು ತಡೆದರು. ಈ ವೇಳೆ ಶ್ರೀನಿವಾಸ್ ಹಾಗೂ ಶಾಸಕಿ ಯಶೋಮತಿ ನಡುವೆ ಮಾತಿನ ಚಕಮಕಿ ನಡೆಯಿತು. ನೀನು ಎಂಎಲ್‍ಎ ಆಗಲು ಇದನ್ನೆಲ್ಲಾ ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದ ಶಾಸಕಿ, ಬಿಡು ನಿಮ್ಮಪ್ಪನನ್ನು ಒಳ್ಳೆಯ ಆಸ್ಪತ್ರೆಗೆ ಸೇರಿಸುತ್ತೇವೆ ಎಂದು ಯಶೋಮತಿ ಗಲಾಟೆ ಮಾಡಿದ್ದಾರೆ.

    ಮಹಾರಾಷ್ಟ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಪೊಲೀಸರು ಕೂಡ ಶಾಸಕಿ ಯಶೋಮತಿಯನ್ನು ಆಸ್ಪತ್ರೆ ಒಳ ಹೋಗದಂತೆ ತಡೆದರು.

  • ಶ್ರೀಮಂತ್ ಪಾಟೀಲ್ ವಿಚಾರಣೆಗೆ ಮುಂಬೈಗೆ ತೆರಳಿದ ತನಿಖಾ ತಂಡ

    ಶ್ರೀಮಂತ್ ಪಾಟೀಲ್ ವಿಚಾರಣೆಗೆ ಮುಂಬೈಗೆ ತೆರಳಿದ ತನಿಖಾ ತಂಡ

    ಬೆಂಗಳೂರು: ಬುಧವಾರ ರಾತ್ರಿ ರೆಸಾರ್ಟಿನಿಂದ ನಾಪತ್ತೆಯಾಗಿ ಮುಂಬೈ ಆಸ್ಪತ್ರೆ ಸೇರಿದ್ದ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಗ್ರಹಚಾರ ಕೆಟ್ಟ ಹಾಗಿದೆ. ಅವರು ಕಳುಹಿಸಿದ್ದ ಚಿಕಿತ್ಸೆಯ ವಿಡಿಯೋ ಮತ್ತು ಫೋಟೋಗಳೇ ಅವರಿಗೆ ಮುಳುವಾಗುವ ಸಾಧ್ಯತೆ ಇದೆ. ಯಾಕಂದರೆ ಈ ಬಗ್ಗೆ ತನಿಖೆ ನಡೆಸುವಂತೆ ಸದನದಲ್ಲೇ ಗೃಹ ಸಚಿವರಿಗೆ ಸ್ಪೀಕರ್ ಸೂಚಿಸಿದ್ದಾರೆ.

    ಕುಟುಂಬದವರ ಹೇಳಿಕೆ, ಫೋಟೋ, ವಿಡಿಯೋ ಆಧರಿಸಿ ಅನಾರೋಗ್ಯ ಅನ್ನೋದನ್ನು ದೃಢಪಡಿಸಿದರೆ ಶ್ರೀಮಂತ್ ಪಾಟೀಲ್ ಬಚಾವ್ ಆಗಬಹುದು. ಆದರೆ ಆಳಕ್ಕೆ ಇಳಿದು ತನಿಖೆ ನಡೆಸಿ ಬೇರೆ ರೀತಿಯಲ್ಲೇ ವರದಿ ಬಂದರೆ ಶ್ರೀಮಂತ್ ಪಾಟೀಲ್ ವಿರುದ್ಧವೂ ಅನರ್ಹತೆ ಅಸ್ತ್ರ ಪ್ರಯೋಗವಾಗಬಹುದು. ಇದನ್ನೂ ಓದಿ: ಬಿಜೆಪಿಯಿಂದ ಶ್ರೀಮಂತ ಪಾಟೀಲ್ ಅಪಹರಣ: ಕಾಂಗ್ರೆಸ್

    ಈ ನಡುವೆ ವಿಧಾನಸೌಧ ಠಾಣೆಯಲ್ಲಿ ಶ್ರೀಮಂತ್ ಪಾಟೀಲ್ ಕಿಡ್ನಾಪ್ ಆಗಿದ್ದಾರೆ ಎಂದು ದೂರು ದಾಖಲಾದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಹೀಗಾಗಿ ಈಗಾಗಲೇ ಡಿಸಿಪಿ ಶಶಿಕುಮಾರ್ ನೇತೃತ್ವದಲ್ಲಿ ತನಿಖಾ ತಂಡ ಮುಂಬೈಗೆ ತೆರಳಿದ್ದು, ಆಸ್ಪತ್ರೆಗೆ ಭೇಟಿ ನೀಡಿ ಶ್ರೀಮಂತ್ ಪಾಟೀಲ್ ಹೇಳಿಕೆ ಪಡೆಯಲಿದೆ.

    ನಡೆದಿದ್ದೇನು?
    ಗುರುವಾರ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುರಿತು ಖುದ್ದಾಗಿ ಶಾಸಕ ಶ್ರೀಮಂತ್ ಪಾಟೀಲ್ ಅವರು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ವೈಯಕ್ತಿಕ ಕೆಲಸದ ನಿಮಿತ್ತ ಬುಧವಾರ ಚೆನ್ನೈಗೆ ಹೋಗಿದ್ದೆ. ಅಲ್ಲಿ ನನಗೆ ಎದೆ ನೋವು ಕಾಣಿಸಿಕೊಂಡಿತ್ತು. ಚೆನ್ನೈನಲ್ಲಿ ಯಾವ ಆಸ್ಪತ್ರೆಗೆ ದಾಖಲಾಗಬೇಕು ಎನ್ನುವುದು ತಿಳಿಯಲಿಲ್ಲ. ಹೀಗಾಗಿ ತಕ್ಷಣವೇ ಅಲ್ಲಿಂದ ಮುಂಬೈಗೆ ಬಂದೆವು ಎಂದು ಶಾಸಕರು ಹೇಳಿದ್ದರು.

    ಮುಂಬೈನ ಸೇಂಟ್ಸ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡೆ. ಆದರೆ ವೈದ್ಯರು ನೀವು ವಿಶ್ರಾಂತಿ ಪಡೆಯಬೇಕು ಎಂದು ಸಲಹೆ ನೀಡಿ, ದಾಖಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನನಗೆ ಇನ್ನೂ ಸ್ವಲ್ಪ ಎದೆ ನೋವು ಇದೆ ಎಂದು ಶಾಸಕರು ತಿಳಿಸಿದ್ದರು.

    ಶ್ರೀಮಂತ್ ಪಾಟೀಲ್ ಅವರು ಗುರುವಾರ ನಡೆದ ವಿಶ್ವಾಸ ಮತಯಾಚನೆ ಚರ್ಚೆಗೆ ಹಾಜರಾಗಿರಲಿಲ್ಲ. ಹೀಗಾಗಿ ಬಿಜೆಪಿಯವರೇ ಶಾಸಕರನ್ನು ಅಪಹರಿಸಿದ್ದಾರೆ ಎಂದು ಸಚಿವ ಡಿ.ಕೆ ಶಿವಕುಮಾರ್ ಸೇರಿದಂತೆ ಅನೇಕ ಮೈತ್ರಿ ನಾಯಕರು ಆರೋಪಿಸಿದ್ದರು. ಅಷ್ಟೇ ಅಲ್ಲದೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ಫೋಟೋಗಳನ್ನು ಹಿಡಿದು, ಇದು ಸುಳ್ಳು ಎಂದು ಹೇಳಿದ್ದರು.

  • ಶ್ರೀಮಂತ್ ಪಾಟೀಲ್ ಮನೆಯಿಂದ ಮಾಹಿತಿ ಪಡೆಯಿರಿ: ಸ್ಪೀಕರ್ ಸೂಚನೆ

    ಶ್ರೀಮಂತ್ ಪಾಟೀಲ್ ಮನೆಯಿಂದ ಮಾಹಿತಿ ಪಡೆಯಿರಿ: ಸ್ಪೀಕರ್ ಸೂಚನೆ

    ಬೆಂಗಳೂರು: ಶ್ರೀಮಂತ್ ಪಾಟೀಲ್ ನಾಪತ್ತೆ ಪ್ರಕರಣ ಸಂಬಂಧ ಗೃಹ ಇಲಾಖೆಗೆ ಪತ್ನಿಯ ಹಾಗೂ ಮನೆಯವರಿಂದ ಮಾಹಿತಿ ತರಿಸಿಕೊಳ್ಳುವಂತೆ ಸ್ಪೀಕರ್ ರಮೇಶ್ ಕುಮಾರ್ ಸೂಚನೆ ನೀಡಿದ್ದಾರೆ.

    ಶ್ರೀಮಂತ್ ಪಾಟೀಲ್ ಅವರು ಹೃದಯದ ಸಮಸ್ಯೆ ಇರುವ ಕಾರಣ ಸದನಕ್ಕೆ ಆಗಮಿಸುವುದಿಲ್ಲ ಎಂದು ಬೆಳಗ್ಗೆ ಪತ್ರದ ಮೂಲಕ ಸ್ಪೀಕರ್‍ಗೆ ತಿಳಿಸಿದ್ದಾರೆ. ಆದರೆ ನಮ್ಮ ರಾಜ್ಯದಲ್ಲೇ ಹೈಟೆಕ್ ಆಸ್ಪತ್ರೆಗಳಿದ್ದವು, ಚೆನ್ನೈ, ಮುಂಬೈಗೆ ಓಡಾಡುವ ಅಗತ್ಯವೇನಿತ್ತು ಎಂದು ಸ್ಪೀಕರ್ ಸದನದಲ್ಲಿ ಪ್ರಶ್ನಿಸಿದ್ದಾರೆ.

    ವಿಮಾನ ಪ್ರಯಾಣದ ಟಿಕೆಟ್ ಸಹ ಸಿಕ್ಕಿದೆ. ಶ್ರೀಮಂತ್ ಪಾಟೀಲ್ ಅವರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಬಿಜೆಪಿಯವರೇ ಅವರನ್ನು ಅಪಹರಿಸಿದ್ದಾರೆ ಎಂದು ಆಡಳಿತ ಪಕ್ಷದ ನಾಯಕರು ಇದೇ ವೇಳೆ ಹರಿಹಾಯ್ದರು.

    ಈ ಆರೋಪವನ್ನು ಪುರಸ್ಕರಿಸಿದ ಸ್ಪೀಕರ್ ಗಂಭೀರ ಆರೋಗ್ಯ ಸಮಸ್ಯೆಗಳು ಇದ್ದರೆ ಮಾತ್ರ ಪತ್ರ ಬರೆದು ತಿಳಿಸಿ ಹೋಗಬಹುದು. ಆದರೆ ಶ್ರೀಮಂತ ಪಾಟೀಲ್ ಅವರು ನಿನ್ನೆಯಿಂದಲೂ ಆರಾಮವಾಗಿಯೇ ಇದ್ದರು ಎಂದು ಆಡಳಿತ ಪಕ್ಷದ ನಾಯಕರು ತಿಳಿಸುತ್ತಿದ್ದಾರೆ. ಬೆಳಗ್ಗೆ ಇದ್ದಕ್ಕಿದ್ದಂತೆ ಆರೋಗ್ಯ ಸಮಸ್ಯೆ ಉಲ್ಬಣಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

    ಈ ವಿಚಾರದ ಬಗ್ಗೆ ಸ್ಪಷ್ಟನೆ ತಿಳಿಯಬೇಕು, ಶ್ರೀಮಂತ್ ಪಾಟೀಲ್ ನಾಪತ್ತೆ ಕುರಿತು ಪತ್ನಿ ಹಾಗೂ ಮನೆಯವರಿಂದ ಮಾಹಿತಿ ಪಡೆದು, ನಾಳೆಯೇ ವರದಿ ತರಿಸಿಕೊಳ್ಳುವಂತೆ ಗೃಹ ಇಲಾಖೆಗೆ ಸ್ಪೀಕರ್ ಸೂಚಿಸಿದರು.

  • ರಾತ್ರಿ ದಿಢೀರ್ ಹೈಡ್ರಾಮಾ – ರೆಸಾರ್ಟಿನಲ್ಲಿದ್ದ ಕೈ ಶಾಸಕ ಶ್ರೀಮಂತ ಪಾಟೀಲ್ ನಾಪತ್ತೆ

    ರಾತ್ರಿ ದಿಢೀರ್ ಹೈಡ್ರಾಮಾ – ರೆಸಾರ್ಟಿನಲ್ಲಿದ್ದ ಕೈ ಶಾಸಕ ಶ್ರೀಮಂತ ಪಾಟೀಲ್ ನಾಪತ್ತೆ

    ಬೆಂಗಳೂರು: ಇಂದು ವಿಶ್ವಾಸಮತದ ಹಿನ್ನೆಲೆಯಲ್ಲಿ ರಾತ್ರಿಯೂ ಭಾರೀ ಹೈಡ್ರಾಮಾ ನಡೆದಿದೆ. ಇಷ್ಟು ದಿನ ಸೈಲೆಂಟಾಗಿದ್ದ ರಮೇಶ್ ಜಾರಕಿಹೊಳಿ ಆಪ್ತ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಕಳೆದ ರಾತ್ರಿ ದಿಢೀರ್ ಕಾಂಗ್ರೆಸ್ ಶಾಸಕರು ತಂಗಿರುವ ದೇವನಹಳ್ಳಿಯ ಪ್ರಕೃತಿ ರೆಸಾರ್ಟಿನಿಂದ ನಾಪತ್ತೆಯಾಗಿದ್ದಾರೆ.

    ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಕೂಡ ರೆಸಾರ್ಟಿನಿಂದ ಹೊರಗೆ ಹೋಗಲು ಯತ್ನಿಸಿದ್ದರು. ಆದರೆ ಕಾಂಗ್ರೆಸ್‍ನ ಕಾರ್ಯಕರ್ತರು ಅವಕಾಶ ಕೊಡಲಿಲ್ಲ. ಕಾರಿನ ಮುಂದೆ ಹೋಗಿ ಕುಳಿತುಬಿಟ್ಟಿದ್ದಾರೆ. ಕೊನೆಗೆ ಬೇರೆ ಗತಿ ಇಲ್ಲದೇ ನಾರಾಯಣ ಸ್ವಾಮಿ ಮತ್ತೆ ರೆಸಾರ್ಟ್ ಸೇರಿಕೊಂಡಿದ್ದಾರೆ.

    ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಕೂಡ ನಾಪತ್ತೆಯಾಗಿದ್ದಾರೆ ಎನ್ನಲಾಗಿತ್ತು. ಆದರೆ ಅನಾರೋಗ್ಯದ ಕಾರಣ ನಾಯಕರ ಅನುಮತಿ ಪಡೆದು ಮನೆಗೆ ಬಂದಿದ್ದಾರೆ ಎಂದು ಮುನಿಯಪ್ಪ ಪುತ್ರ ತಿಳಿಸಿದ್ದಾರೆ. ರಾತ್ರಿ ಸಿಎಂ ಕಾಂಗ್ರೆಸ್ ಶಾಸಕರಿದ್ದ ರೆಸಾರ್ಟ್‍ಗೆ ಭೇಟಿ ನೀಡಿ ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ನಂತರ ತಮ್ಮ ಪಕ್ಷದ ಶಾಸಕರು ಉಳಿದುಕೊಂಡಿದ್ದ ರೆಸಾರ್ಟಿಗೆ ಹೋಗಿದ್ದಾರೆ.

    ಇತ್ತ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಬೆಳಗ್ಗೆ 9 ಗಂಟೆಗೆ ರೆಸಾರ್ಟಿನಿಂದ ವಿಧಾನಸೌಧಕ್ಕೆ ಹೊರಡುವ ಬಿಜೆಪಿ ಶಾಸಕರಿಗೆ ಯಲಹಂಕ ಕ್ಷೇತ್ರದಲ್ಲಿ ಹೂವಿನ ಮಳೆ ಸ್ವಾಗತ ನೀಡಲು ಸಿದ್ಧತೆ ನಡೆದಿದೆ. ಎಲ್ಲಾ ಪಕ್ಷಗಳು ತಮ್ಮ ಶಾಸಕರಿಗೆ ವಿಪ್ ಜಾರಿ ಮಾಡಿವೆ.

  • ಬೆಳಗಾವಿ ಜಿಲ್ಲೆಯಿಂದ್ಲೇ ಮೂವರು ಶಾಸಕರು ರಾಜೀನಾಮೆ?

    ಬೆಳಗಾವಿ ಜಿಲ್ಲೆಯಿಂದ್ಲೇ ಮೂವರು ಶಾಸಕರು ರಾಜೀನಾಮೆ?

    ಬೆಳಗಾವಿ: ರಾಜ್ಯ ರಾಜಕೀಯ ಕ್ರಿಕೆಟ್ ಆಟದಲ್ಲಿ ಮತ್ತೆ 3 ವಿಕೆಟ್ ಪತನವಾಗುವ ಸಾಧ್ಯತೆ ಇದ್ದು, ಅದರಲ್ಲೂ ಬೆಳಗಾವಿ ಜಿಲ್ಲೆಯಿಂದಲೇ ಮೂವರು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

    ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ, ಕಾಗವಾಡ ಶ್ರೀಮಂತ್ ಪಾಟೀಲ್ ಮತ್ತು ಚಿಕ್ಕೋಡಿ ಶಾಸಕ ಗಣೇಶ್ ಹುಕ್ಕೇರಿ ರಾಜೀನಾಮೆ ಕೊಡುವ ಸಾಧ್ಯತೆ ಇದೆ. ಈ ಮೂವರು ನಿರಂತರವಾಗಿ ರೆಬೆಲ್ ಶಾಸಕರ ಜೊತೆ ಸಂಪರ್ಕದಲ್ಲಿದ್ದವರು ಎಂದು ತಿಳಿದು ಬಂದಿದೆ.


    ಗಣೇಶ್ ಹುಕ್ಕೇರಿ ಅವರ ಮೊದಲಿನಿಂದಲೂ ರಾಜೀನಾಮೆ ಕೊಡುತ್ತಾರೆ ಎಂದು ಹೇಳಲಾಗುತ್ತಿತ್ತು. ಬುಧವಾರ ಎಂಟಿಬಿ ನಾಗರಾಜ್ ಮತ್ತು ಸುಧಾಕರ್, ಸ್ಪೀಕರ್ ಕಚೇರಿಗೆ ಬಂದು ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಗಣೇಶ್ ಹುಕ್ಕೇರಿ ಕೂಡ ಸ್ಪೀಕರ್ ಕಚೇರಿಗೆ ಬಂದಿದ್ದರು. ಆಗ ಗಣೇಶ್ ಹುಕ್ಕೇರಿ ಕೂಡ ರಾಜೀನಾಮೆ ಕೊಟ್ಟೆ ಬಿಟ್ಟರು ಎಂದು ಹೇಳಲಾಗುತ್ತಿತ್ತು. ಆದರೆ ಅಂದು ಗಣೇಶ್ ಹುಕ್ಕೇರಿ ರಾಜೀನಾಮೆ ಸಲ್ಲಿಸಿರಲಿಲ್ಲ. ಇದೀಗ ರಾಜೀನಾಮೆ ಕೊಡುವವರ ಹೆಸರಿನ ಪಟ್ಟಿಯಲ್ಲಿ ಗಣೇಶ್ ಹುಕ್ಕೇರಿ ಅವರ ಹೆಸರಿದೆ.

    ಇಲ್ಲಿವರೆಗೂ 16 ಮಂದಿ ಅತೃಪ್ತ ಶಾಸಕರು ರಾಜೀನಾಮೆ ಕೊಟ್ಟಿದ್ದು, ಸದ್ಯ ಕೆಲವರು ಮುಂಬೈನ ಹೋಟೆಲ್‍ನಲ್ಲಿ ತಂಗಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಗುರುವಾರ ಸಂಜೆ 6 ಗಂಟೆಯ ಒಳಗಾಗಿ ಭೇಟಿಯಾಗಿ ರಾಜೀನಾಮೆ ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಅದರಂತಯೇ ಅತೃಪ್ತ ಶಾಸಕರು ಓಡೋಡಿ ಬಂದು ರಾಜೀನಾಮೆ ಸಲ್ಲಿಸಿ ಮತ್ತೆ ಮುಂಬೈಗೆ ಮರಳಿದ್ದರು. ಇಂದು ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರದ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.