Tag: Shri Sivakumar Swamiji

  • ಸರ್ಕಾರದಿಂದ ರಜೆ ಘೋಷಣೆ – ಸಮಾಜ ಕಲ್ಯಾಣ ಇಲಾಖೆಯಿಂದ ಫೈವ್‍ಸ್ಟಾರ್ ಹೋಟೆಲ್‍ನಲ್ಲಿ ಕಾರ್ಯಕ್ರಮ!

    ಸರ್ಕಾರದಿಂದ ರಜೆ ಘೋಷಣೆ – ಸಮಾಜ ಕಲ್ಯಾಣ ಇಲಾಖೆಯಿಂದ ಫೈವ್‍ಸ್ಟಾರ್ ಹೋಟೆಲ್‍ನಲ್ಲಿ ಕಾರ್ಯಕ್ರಮ!

    – ಸಮಾನತೆ, ಅನ್ವೇಷಣೆ, ಸಂವಿಧಾನ, ಸಂಭಾಷಣೆ ಕಾರ್ಯಕ್ರಮ
    – ಅತಿಥಿಗಳಾಗಲಿದ್ದಾರೆ ಕನ್ಹಯ್ಯ ಕುಮಾರ್, ಓವೈಸಿ
    – ಪ್ರಿಯಾಂಕ್ ಖರ್ಗೆ ವಿರುದ್ಧ ಭಾರೀ ಟೀಕೆ

    ಬೆಂಗಳೂರು: ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ಹಿನ್ನೆಲೆಯಲ್ಲಿ ಇಂದು ಸರ್ಕಾರಿ ರಜೆಯನ್ನು ಘೋಷಣೆ ಮಾಡಲಾಗಿದೆ. ಆದರೆ ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮವನ್ನು ಆಯೋಜಿಸಿರುವುದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿದೆ.

    ಸಮಾಜ ಕಲ್ಯಾಣ ಇಲಾಖೆ ಎರಡು ದಿನಗಳ ಕಾಲ ಸಮಾನತೆ ಅನ್ವೇಷಣೆ ಸಂವಿಧಾನ ಸಂಭಾಷಣೆ ಕಾರ್ಯಕ್ರಮಕ್ಕೆ ಬೆಂಗಳೂರಿನ ಅಶೋಕ ಹೋಟೆಲ್ ನಲ್ಲಿ ಇಂದು ಚಾಲನೆ ಸಿಕ್ಕಿದೆ. ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿರಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಲಿಂಗೈಕ್ಯರಾದ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಒಂದು ನಿಮಿಷ ಶ್ರೀಗಳಿಗೆ ಮೌನಾಚರಣೆ ಸಲ್ಲಿಸಿದ್ದಾರೆ.

    ಸಂವಿಧಾನದ ಸಂವಾದದ ಸಭೆಗೆ ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿ ಹಾಜರಿರಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ ಕೊಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಕೇಂದ್ರ ಸಚಿವೆ ಅಂಬಿಕಾ ಸೋನಿ ಸೇರಿ ಹಲವರು ಭಾಗಿಯಾಗಿದ್ದಾರೆ.

    ಇತ್ತ ಅಶೋಕ ಹೊಟೇಲ್ ಮುಂದೆ ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮಕ್ಕೆ ಕರುನಾಡ ಸೇವಕರು ಸಂಘಟನೆಯಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಕಾರ್ಯಕ್ರಮವನ್ನು ರದ್ದು ಮಾಡುವಂತೆ ಆಗ್ರಹಿಸಿದ್ದು, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ.

    ಕನ್ನಯ್ಯ ಕುಮಾರ್, ಓವೈಸಿ ಕಾರ್ಯಕ್ರಮಕ್ಕೆ ಆಗಮನ ಹಿನ್ನೆಲೆಯಲ್ಲಿ ಕಾರ್ಯಕ್ರಮದಿಂದ ಬಿಜೆಪಿ ಗೋ ಮಧುಸೂದನ್ ವಾಪಸ್ ಆಗಿದ್ದಾರೆ. ಆದರೆ ಓವೈಸಿ ಆಗಮನಕ್ಕೆ ಕರುನಾಡ ಸೇನೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶ್ರೀ ಶಿವಕುಮಾರ್ ಸ್ವಾಮೀಜಿ ಲಿಂಗೈಕ್ಯ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಮಾಡಬಾರದಿತ್ತು ಆಗ್ರಹಿಸಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಕರುನಾಡ ಸೇವಕರು ಮತ್ತು ಸಂಘಟನೆ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಸದ್ಯಕ್ಕೆ ಅಶೋಕ ಹೊಟೇಲ್ ಗೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. ಇನ್ನೂ ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮಕ್ಕೆ ಬಿಜೆಪಿ ಬಹಿಷ್ಕಾರ ಸೂಚಿಸಿದೆ.

    ಗೋ ಮಧುಸೂದನ್, ಲೆಹರ್ ಸಿಂಗ್ ಕಾರ್ಯಕ್ರಮದಿಂದ ವಾಪಸ್ಸಾಗಿದ್ದು, ಸರ್ಕಾರದ ವಿರುದ್ಧ ಇಬ್ಬರು ವಾಗ್ದಾಳಿ ಮಾಡಿದ್ದಾರೆ. ದೇಶದ ವಿರುದ್ಧ ಘೋಷಣೆ ಕೂಗಿದವರನ್ನ ಕಾರ್ಯಕ್ರಮಕ್ಕೆ ಕರೆದಿದ್ದಾರೆ. ಓವೈಸಿಯಂತಹ ದೇಶ ವಿರೋಧಿಗಳು ಭಾಗವಹಿಸುವ ಕಾರ್ಯಕ್ರಮದಲ್ಲಿ ನಾವು ಭಾಗವಹಿಸುವುದಿಲ್ಲ. ಸಿದ್ದಗಂಗಾ ಶ್ರೀಗಳ ಅಂತಿಮ ಯಾತ್ರೆ ನಡೆಯುತ್ತಿದ್ದರೂ ಸರ್ಕಾರ ಈ ಕಾರ್ಯಕ್ರಮವನ್ನು ಮಾಡುತ್ತಿದೆ. ಇದು ಸರಿಯಾದ ಪದ್ಧತಿ ಅಲ್ಲ ಎಂದು ಗೋ ಮಧುಸೂದನ್ ಹೇಳಿದರು.

    ಲೆಹರ್ ಸಿಂಗ್ ಕಿಡಿ: ಸಂವಿಧಾನದ ಬಗ್ಗೆ ಗೊತ್ತಿಲ್ಲದ ಜುಜುಬಿಗಳನ್ನ ಕರೆದುಕೊಂಡು ಕಾರ್ಯಕ್ರಮ ಮಾಡುತ್ತಿದ್ದಾರೆ. ಹಣ ಮಾಡಲು ಈ ಕಾರ್ಯಕ್ರಮವನ್ನು ಫೈವ್ ಸ್ಟಾರ್ ಹೋಟೆಲ್‍ನಲ್ಲಿ ಮಾಡುತ್ತಿದ್ದಾರೆ. ಈ ಕಾರ್ಯಕ್ರಮ ಒಂದು ಸ್ಕ್ಯಾಮ್ ಆಗಿದ್ದು, ನಾವು ಆರ್ ಟಿಐನಲ್ಲಿ ಮಾಹಿತಿ ಪಡೆದು ಈ ಹಗರಣ ಹೊರಗೆ ಹಾಕುತ್ತೇವೆ. ಸಂವಿಧಾನ ಗೊತ್ತಿಲ್ಲದವರು ಕಾರ್ಯಕ್ರಮ ಮಾಡುತ್ತಿದ್ದಾರೆ. ಕೂಡಲೇ ಈ ಬಗ್ಗೆ ಸರ್ಕಾರ ತನಿಖೆ ನಡೆಯಬೇಕು. ನಾಡಿನ ಜನ ಶೋಕದಲ್ಲಿ ಇದ್ರೆ, ಸಚಿವರು ಕಾರ್ಯಕ್ರಮ ಮಾಡಿ ಮಜಾ ಮಾಡುತ್ತಿದ್ದಾರೆ. ಸರ್ಕಾರದ ಈ ವರ್ತನೆಗೆ ಯಾವ ಪದ ಬಳಕೆ ಮಾಡಬೇಕು ಗೊತ್ತಾಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಪರಿಷತ್ ಸದಸ್ಯ ಲೆಹರ್ ಸಿಂಗ್ ವಾಗ್ದಾಳಿ ಮಾಡಿದ್ದಾರೆ.

    ಕಾರ್ಯಕ್ರಮ ಮಾಡಲು ಇಂತಹ ಫೈವ್ ಸ್ಟಾರ್ ಹೋಟೆಲ್ ಬೇಕಾ? ಅಂಬೇಡ್ಕರ್ ಭವನ, ಇನ್ನಿತರ ಸರ್ಕಾರದ ಸ್ಥಳ ಇದ್ದರೂ ಇಂತಹ ಕಡೆ ಕಾರ್ಯಕ್ರಮ ಮಾಡಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಳುತ್ತಿದ್ದಾರೆ. ಅವರಿಗೆ ಕೊಡುವುದಕ್ಕೆ ಹಣ ಇಲ್ಲ. ಇಂತಹ ಕಾರ್ಯಕ್ರಮ ಮಾಡಿ ದುಡ್ಡು ಹೊಡೆಯೋದು ಸಚಿವರ ಪ್ಲಾನ್. ರೆಸಾರ್ಟ್ ನಲ್ಲಿ ಹೊಡೆದಾಡಿಕೊಂಡ ಕಾಂಗ್ರೆಸ್ ನವರು ಸಂವಿಧಾನದ ಬಗ್ಗೆ ಕಾರ್ಯಕ್ರಮ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಲೆಹರ್ ಸಿಂಗ್ ಕಿಡಿಕಾರಿದರು.

    ಕನ್ನಯ್ಯ, ಓವೈಸಿ ಕಾರ್ಯಕ್ರಮ ರದ್ದಿಲ್ಲ ಏಕೆ? ಸಮಾಜ ಕಲ್ಯಾಣ ಎಂಬ ಈ ಇಲಾಖೆಯ ಅಜೆಂಡಾ ಏನು? ಎಂದು ಬಿಜಪಿ ಶಾಸಕ ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.

    https://www.youtube.com/watch?v=8iVnMTXiYcI

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಟ ದರ್ಶನ್‍ರಿಂದ ಶ್ರೀಗಳ ಅಂತಿಮ ದರ್ಶನ

    ನಟ ದರ್ಶನ್‍ರಿಂದ ಶ್ರೀಗಳ ಅಂತಿಮ ದರ್ಶನ

    ತುಮಕೂರು: ನಟ ದರ್ಶನ್ ಅವರು ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದು, ಶ್ರೀ ಶಿವಕುಮಾರ ಸ್ವಾಮೀಜಿ ಅವರ ಅಂತಿಮ ದರ್ಶನ ಪಡೆದಿದ್ದಾರೆ.

    ಶ್ರೀಗಳು ಶಿವೈಕೈವಾದ ಸೋಮವಾರವೇ ಗಣ್ಯರು ಬಂದು ಮಠಕ್ಕೆ ಅಂತಿಮ ದರ್ಶನ ಪಡೆದಿದ್ದರು. ಇಂದು ಕೂಡ ಭಕ್ತರು ಲಕ್ಷಾನುಗಟ್ಟಲೆ ಬಂದು ಶ್ರೀಗಳ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಶ್ರೀಗಳ ಅಗಲಿಕೆಯಿಂದ ಸ್ಯಾಂಡಲ್‍ವುಡ್ ಸ್ಟಾರ್ ಗಳು ಕೂಡ ಕಂಬನಿ ಮಿಡಿದಿದ್ದರು. ಕಳೆದ ದಿನವೇ ನಟ ಪುನೀತ್ ರಾಜ್‍ಕುಮಾರ್ ಶ್ರೀಗಳ ಅಂತಿಮ ದರ್ಶನ ಪಡೆದಿದ್ದರು.

    https://twitter.com/DarshanFanz/status/1087569874832875520

    ಇಂದು ಬೆಳಗ್ಗೆ ನಟ ದರ್ಶನ್ ಅವರು ಮಠಕ್ಕೆ ಬಂದು ಶ್ರೀಗಳು ಅಂತಿಮ ದರ್ಶನ ಪಡೆದಿದ್ದಾರೆ. ಬಳಿಕ ಅಲ್ಲಿದ್ದ ಹಿರಿಯ ಸ್ವಾಮೀಜಿಗಳ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದು, ಕಿರಿಯ ಸ್ವಾಮೀಜಿ ಅವರನ್ನು ಮಾತನಾಡಿಸಿದ್ದಾರೆ. ನಟ ದರ್ಶನ್ ಮಾತ್ರವಲ್ಲದೇ ನಟ ಇಂದ್ರಜೀತ್ ಲಂಕೇಶ್ ಕೂಡ ಬಂದು ಶ್ರೀಗಳ ಅಂತಿಮ ದರ್ಶನ ಪಡೆದಿದ್ದಾರೆ.

    ಸೋಮವಾರ ಶ್ರೀಗಳು ಶಿವೈಕ್ಯ ಮಾಹಿತಿ ತಿಳಿದ ದರ್ಶನ್, “ನಡೆದಾಡುವ ದೇವರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಜಿ ಇಹಲೋಕ ತ್ಯಜಿಸಿರುವುದು ಬಹಳ ನೋವಿನ ಸಂಗತಿ. ಇಷ್ಟು ದಿನ ಭಕ್ತರ ದರ್ಶನಕ್ಕೆ ಅವರಿದ್ದರು, ಈಗ ದೈಹಿಕವಾಗಿ ನಮ್ಮನ್ನು ಅಗಲಿದರೂ ಎಲ್ಲರ ಮನೆ ಮನಗಳಲ್ಲಿ ಅವರು ಭದ್ರವಾಗಿ ನೆಲೆಸಿದ್ದಾರೆ” ಎಂದು ಟ್ವೀಟ್ ಮಾಡಿ ಶ್ರೀಗಳು ಫೋಟೋ ಹಾಕಿ ಸಂತಾಪ ಸೂಚಿಸಿದ್ದರು.

    https://www.youtube.com/watch?v=0KTgJYBYBdo

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಮನಿಸಿ, ತುಮಕೂರು ನಗರದ  ಒಳಗಡೆ ವಾಹನ ಸಂಚಾರ ಬಂದ್!

    ಗಮನಿಸಿ, ತುಮಕೂರು ನಗರದ ಒಳಗಡೆ ವಾಹನ ಸಂಚಾರ ಬಂದ್!

    ತುಮಕೂರು: ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಅಂತಿಮ ದರ್ಶನಕ್ಕಾಗಿ ಇಂದು ಸಹ ಲಕ್ಷಾಂತರ ಜನ ಭಕ್ತರು ಭಾಗವಹಿಸುವ ಹಿನ್ನೆಲೆಯಲ್ಲಿ ತುಮಕೂರು ನಗರದೊಳಗೆ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ.

    ತುಮಕೂರು ಹೊರ ವಲಯದಲ್ಲೇ ವಾಹನ ಸಂಚಾರಕ್ಕೆ ಬ್ರೇಕ್ ಹಾಕಿದ್ದು, ಬ್ಯಾರಿಕೇಡ್ ಹಾಕಿ ಬಾರಿ ಬಿಗಿ ಭದ್ರತೆ ನೀಡಲಾಗಿದೆ. ತುಮಕೂರು ನಗರದ ಒಳಗೆ ಹಾಗೂ ಹೊರಗೆ ಹೋಗಲು ಜನರ ಪರದಾಟ ಪಡುತ್ತಿದ್ದಾರೆ. ಆದರೂ ಅನೇಕ ಜನರು ರಾಷ್ಟ್ರೀಯ ಹೆದ್ದಾರಿಯಲ್ಲೇ ಕಾದು ಕಾದು ಸುಸ್ತಾಗಿದ್ದಾರೆ. ಹೀಗಾಗಿ ತುಮಕೂರು ಹೊರ ವಲಯದಲ್ಲೇ ವಾಹನಗಳನ್ನು ಬೇರೆ ಮಾರ್ಗದಿಂದ ಮುಂದಕ್ಕೆ ಬಿಡಲಾಗುತ್ತಿದೆ. ಇದನ್ನೂ ಓದಿ: ತುಮಕೂರು ನಗರ ಪ್ರವೇಶದ ಮಾರ್ಗ ಬದಲಾವಣೆ

    ನಿತ್ಯವೂ ವಾಹನಗಳ ಸಂಚಾರದಿಂದ ಗಿಜಗುಡುತಿದ್ದ ರಾಷ್ಟ್ರೀಯ ಹೆದ್ದಾರಿ 4 ಇಂದು ಸಂಪೂರ್ಣ ಬಂದ್ ಆಗಿದೆ. ತುಮಕೂರು ಪ್ರವೇಶಿಸುವ ರಸ್ತೆಗಳು ಬಿಕೋ ಎನ್ನುತ್ತಿವೆ. ಅಷ್ಟೇ ಅಲ್ಲದೇ ಇತ್ತ ಸಿದ್ದಗಂಗಾ ಶ್ರೀಗಳ ಅಂತಿಮ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಉಪಹಾರ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

    ಹೋಟೆಲ್ ಮುಗ್ಗಟ್ಟುಗಳು ಬಂದ್ ಹಿನ್ನೆಲೆಯಲ್ಲಿ ಭಕ್ತಾದಿಗಳಿಗೆ ಊಟ, ಉಪಹಾರಕ್ಕೆ ಸಮಸ್ಯೆಯಾಗದಂತೆ ನಾಗರೀಕರು, ಸಂಘ ಮತ್ತು ಸಂಸ್ಥೆಗಳು ಕಾಳಜಿ ವಹಿಸಿದ್ದಾರೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಬಸ್ ನಿಲ್ದಾಣದ ಬಳಿ ಊಟ ಮತ್ತು ಉಪಹಾರ ವ್ಯವಸ್ಥೆ ಮಾಡಲಾಗಿದೆ.

    https://www.youtube.com/watch?v=mxA9HE4qgJQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಣಿವರಿಯದ ಮಹಾನ್ ಚೇತನದ ಹಿಂದಿದೆ ಮಹಾ ರಹಸ್ಯ!

    ದಣಿವರಿಯದ ಮಹಾನ್ ಚೇತನದ ಹಿಂದಿದೆ ಮಹಾ ರಹಸ್ಯ!

    ಹೋಟೆಲ್ ಊಟವನ್ನು ಎಂದೂ ಸೇವಿಸದ ಸಿದ್ದಗಂಗೆಯ ಬೆಳಕು ಶ್ರೀಗಳದ್ದು ಸದಾ ಸಾತ್ವಿಕ ಆಹಾರ. ರಾಗಿ ಜೋಳದಿಂದ ತಯಾರಿಸಲ್ಪಟ್ಟ ಆಹಾರ ಹಾಗೂ ಹಣ್ಣು ಹಂಪಲುಗಳನ್ನು ಅಷ್ಟೇ ಶ್ರೀಗಳು ಸೇವಿಸುತ್ತಿದ್ದರು.

    ಅದು ಮಿತ ಆಹಾರ ಸೇವನೆ. ಇನ್ನು ಹೆಚ್ಚಾಗಿ ಬೇವಿನ ಚಕ್ಕೆ ರಸವನ್ನು ಹಾಲಿನೊಂದಿಗೆ ಬೆರೆಸಿ ನಿತ್ಯ ಸೇವನೆ ಮಾಡುತ್ತಿದ್ದ ಶ್ರೀಗಳು ಯೋಗಭ್ಯಾಸವನ್ನು ಎಂದೂ ತಪ್ಪಿಸಿದವರಲ್ಲ. ಇದು ಬೇವಿನ ಚಕ್ಕೆ ಕಷಾಯವೇ ಅವರ ದಿವ್ಯ ಆರೋಗ್ಯದ ಮಹಾ ರಹಸ್ಯ.  ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ 111 ಸಾಧನೆಗಳು ಹಾಗೂ ವೈಶಿಷ್ಟಗಳು

    ಹುಳಿ, ಖಾರ ಎಣ್ಣೆ ಮಸಾಲೆ ಪದಾರ್ಥಗಳನ್ನು ಮುಟ್ಟುವುದೇ ಇಲ್ಲ, ಒಗ್ಗರಣೆಯ ಪದಾರ್ಥ ಸೇವಿಸುವುದು ಕೂಡ ತೀರಾ ಅಪರೂಪ. ಬೆಳಗ್ಗೆ ಹೆಸರು ಬೇಳೆಯನ್ನು ಸ್ವಲ್ಪ ಸೈಂಧಲವಣ ಜೀರಿಗೆ ಪುಡಿ ಹಾಕಿ ಕುದಿಸಿದರೆ ಆಯ್ತು. ಅದೇ ಅವರ ಸಾರು ಪಲ್ಯ, ಅದರ ಜೊತೆ ಉಪ್ಪು ಖಾರ ಹಾಕದೇ ಇರುವ ತೆಂಗಿನಕಾಯಿ ಚಟ್ನಿ ಇದ್ದರಾಯಿತು. ಇದನ್ನೂ ಓದಿ: ಶಿವೈಕ್ಯದಲ್ಲಿಯೂ ಮಾನವೀಯತೆ ಮೆರೆದ ನಡೆದಾಡುವ ದೇವರು!

    ಕೇವಲ ಅರ್ಧಕಪ್ ಹಾಲು ಮಾತ್ರ ಕುಡಿಯುತ್ತಿದ್ದರು. ಕೊಬ್ಬು ಉಂಟುಮಾಡುವ ಯಾವ ಪದಾರ್ಥಗಳನ್ನು ಸ್ವೀಕರಿಸುತ್ತಿಲ್ಲ. ಮಧ್ಯಾಹ್ನ ಈ ಹಿಂದೆ ಕೆಲವೊಮ್ಮೆ ಮುದ್ದೆ ಹಾಗೂ ತೊಗರಿ ಬೇಳೆ ಸಾರು ಸೇವಿಸುತ್ತಿದ್ದರು. ಈ ದೇಹ ಈಶ್ವರನ ಪ್ರಸಾದ ಕಾಯ, ಅದನ್ನು ಕೆಡಿಸಬಾರದು, ಅನಾರೋಗ್ಯಗೊಳಿಸಬಾರದು, ದೇಹವನ್ನು ರೋಗಾದಿಗಳಿಂದ ತುತ್ತಾಗದಂತೆ ನೋಡಿಕೊಳ್ಳುವುದು ಒಂದು ಪೂಜೆಯೇ ಅನ್ನೋದು ಶ್ರೀಗಳ ಮಾತು.

    https://www.youtube.com/watch?v=2lK_EgaS96U

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳ 111 ಸಾಧನೆಗಳು ಹಾಗೂ ವೈಶಿಷ್ಟಗಳು

    ಸಿದ್ದಗಂಗಾ ಶ್ರೀಗಳ 111 ಸಾಧನೆಗಳು ಹಾಗೂ ವೈಶಿಷ್ಟಗಳು

    ನಡೆದಾಡುವ ದೇವರು, ಕಾಯಕ ಯೋಗಿ ಸಿದ್ದಗಂಗಾ ಡಾ. ಶ್ರೀ ಶ್ರೀಗಳು ಇಂದು ನಿಧನರಾಗಿದ್ದಾರೆ. ಆದರೆ ಅವರ ಕೆಲಸ, ಅವರ ಪ್ರವಚನಗಳು ಈಗಲೂ ನಮ್ಮ ಕಣ್ಣ ಮುಂದಿದೆ. ಹೀಗಾಗಿ ಶ್ರೀಗಳ 111 ಸಾಧನೆ, ವೈಶಿಷ್ಟ್ಯಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

    1) ಶತಾಯುಷಿ ಸಿದ್ದಗಂಗಾ ಶ್ರೀಗಳು ಹುಟ್ಟಿದ್ದು 1908 ರ ಏಪ್ರಿಲ್ 1 ರಂದು. ಬೆಂಗಳೂರು ಗ್ರಾಮಾಂತರ ಜಿಲ್ಲೆ ಈಗಿನ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ. ಹೊನ್ನಪ್ಪ, ಗಂಗಮ್ಮ ದಂಪತಿ ಪುತ್ರರತ್ನರಾಗಿ ಹುಟ್ಟಿ ಈಗ ಇಡೀ ಜಗವೇ ಮೆಚ್ಚುವ ಶಾಂತಿದೂತರಾಗಿದ್ದಾರೆ.

    2) 1913-27: ವೀರಾಪುರ, ಪಾಲಹಳ್ಳಿಯಲ್ಲಿ ಪ್ರಾಥಮಿಕ, ನಾಗವಲ್ಲಿಯಲ್ಲಿ ಮಾಧ್ಯಮಿಕ, ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಹಾಗೂ ಮೆಟ್ರಿಕ್ಯೂಲೇಷನ್ ತೇರ್ಗಡೆ.

    3) 1927-30: ಬೆಂಗಳೂರಿನ ತೋಟದಪ್ಪ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ, ಸೆಂಟ್ರಲ್ ಕಾಲೇಜಿನಲ್ಲಿ ಬಿಎ ವಿದ್ಯಾಭ್ಯಾಸ.

    4) 1930 : ನವೆಂಬರ್ 11 ರಂದು ಸಿದ್ದಗಂಗಾ ಮಠದ ಶ್ರೀ ಮರುಳಾರಾಧ್ಯ ಸ್ವಾಮಿಗಳವರ ಸಮಾಧಿ ಕ್ರಿಯೆಗೆ ಬಂದಾಗ ಶ್ರೀ ಉದ್ದಾನ ಶಿವಯೋಗಿಗಳವರ ಕೃಪಾದೃಷ್ಟಿಗೆ ಒಳಗಾದ ಶಿವಣ್ಣ.

    5) 1930: ಮಾ.3ರಂದು ಸಿದ್ದಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗಿ ಆಯ್ಕೆ. ಗುರುಗಳ ಪೂರ್ವಾನುಗ್ರಹ ಹಾಗೂ ಶಿವಕುಮಾರ ಸ್ವಾಮಿಗಳೆಂದು ನೂತನ ನಾಮಧೇಯ.

    6) 1937 : 1917ರಲ್ಲಿ ಪ್ರಾರಂಭವಾದ ಸಂಸ್ಕೃತ ಪಾಠ ಶಾಲೆಯನ್ನು ಕಾಲೇಜಾಗಿ ಪರಿವರ್ತಿಸಿದರು.

    7) 1941: ಜ.11ರಂದು ಶ್ರೀ ಉದ್ಧಾನಶಿವಯೋಗಿ ಸ್ವಾಮೀಜಿ ಲಿಂಗೈಕ್ಯರಾದ ನಂತರ ಮಠಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ.

    8) 1944 : ತುಮಕೂರು ನಗರದಲ್ಲಿ ಸಿದ್ದಗಂಗಾ ಪ್ರೌಢ ಶಾಲೆ ಆರಂಭ.

    9) 1949: ಜೂ.18ರಂದು ಶ್ರೀಸಿದ್ದಲಿಂಗೇಶ್ವರರ ಸಂಸ್ಕೃತ ಮತ್ತು ವೇದಪಾಠ ಶಾಲೆ ರಜತಮಹೋತ್ಸವ.

    10) 1950: ಧರ್ಮಸ್ಥಳದ ಶ್ರೀಮಂಜಯ್ಯ ಹೆಗ್ಗಡೆಯವರಿಂದ ಮಹಾ ನಡಾವಳಿ ಉತ್ಸವದಲ್ಲಿ ಗೌರವ ಸ್ವೀಕಾರ.

    11) 1951: ಶ್ರೀಗಳಿಂದ ಪ್ರಭುಲಿಂಗ ಲೀಲೆ ಪ್ರವಚನ – ಪ್ರಭುಲಿಂಗ ಲೀಲೆಯ ತತ್ವಸಾರಾಂಶಗಳನ್ನು ಪ್ರಚಾರ ಪಡಿಸಿದ ಮೊದಲ ಹೆಜ್ಜೆ.

    12) 1954 : ಶ್ರೀಕ್ಷೇತ್ರದ ಹಳೆಯ ವಿದ್ಯಾರ್ಥಿಗಳ ಸಂಘ ಸ್ಥಾಪನೆ.

    13) 1955 : ಶ್ರೀ ಕ್ಷೇತ್ರದಲ್ಲಿ ಶ್ರೀ ಸಿದ್ದಲಿಂಗೇಶ್ವರ ಸನಿವಾಸ ಪ್ರೌಢಶಾಲೆ ಸ್ಥಾಪನೆ.

    14) 1956 : ಸಿದ್ದಗಂಗಾ ಉಪಧ್ಯಾಯ ಶಿಕ್ಷಣ ತರಬೇತಿ ಸಂಸ್ಥೆ ಸ್ಥಾಪನೆ.

    15) 1956 : ಶ್ರೀಕ್ಷೇತ್ರದಲ್ಲಿ ಸಂಸ್ಕೃತ ಕಾಲೇಜು ಕಟ್ಟಡ ನಿರ್ಮಾಣ.

    16) 1960 : ಶ್ರೀಮಠದಲ್ಲಿ ಸಾರ್ವಜನಿಕ ವಿದ್ಯಾರ್ಥಿನಿಲಯ ನಿರ್ಮಾಣ ಆರಂಭ.

    17) 1962 : ಧರ್ಮಸ್ಥಳದಲ್ಲಿ ನಡೆದ ವಿಶ್ವ ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಇಡೀ ವಿಶ್ವವೇ ಮೆಚ್ಚುವಂತೆ ಪ್ರವಚನ ನೀಡಿದ್ದ ಶ್ರೀಗಳು.

    18) 1962 : ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಸ್ಥಾಪನೆ.

    19) 1963 : ಜಾತ್ರೆಯಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ಆರಂಭ ಹಾಗೂ ಸಿದ್ದಗಂಗಾ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ.

    20) 1963 : ತುಮಕೂರಿನಲ್ಲಿ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯ ಪ್ರಾರಂಭ.

    21) 1963 : 44ನೇ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನ ಶ್ರೀಮಠದಲ್ಲಿ ನಡೆದಿದ್ದು, ಶ್ರೀಗಳು ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದರು. ರಂ.ಶ್ರೀ ಮುಗಳಿ ಅವರು ಸಮ್ಮೇಳನಾಧ್ಯಕ್ಷರಾಗಿದ್ದರು.

    22) 1965 : ಶ್ರೀಮಠದಲ್ಲಿ ಕನ್ನಡ ಪಂಡಿತ ತರಗತಿ ಸ್ಥಾಪನೆ.

    23) 1965: ಸಿದ್ದಗಂಗಾ ತ್ರೈಮಾಸಿಕ ಪತ್ರಿಕೆ ಆರಂಭ.

    24) 1965: ಕರ್ನಾಟಕ ವಿವಿಯಿಂದ ಗೌರವ ಡಿ.ಲಿಟ್ ಸ್ವೀಕಾರ.

    25) 1966 : ತುಮಕೂರಿನಲ್ಲಿ ಸಿದ್ದಗಂಗಾ ಕಲಾ ವಾಣಿಜ್ಯ ವಿಜ್ಞಾನ ಕಾಲೇಜು ಸ್ಥಾಪನೆ.

    26) 1967 : ಸಂಜೆ ಕಾಲೇಜು ಸ್ಥಾಪನೆ – ಬೆಳಗ್ಗೆ ಕೆಲಸ ಮಾಡಿ, ಸಂಜೆ ಓದು. ಆಸ್ತಕ ವಿದ್ಯಾರ್ಥಿ ಅನುಕೂಲವಾಗುವ ರೀತಿಯಲ್ಲಿ ಸ್ಥಾಪನೆ.

    27) 1968 : ಬಸವ ಕಲ್ಯಾಣದಲ್ಲಿ ನಡೆದ ಬಸವೇಶ್ವರರ ಅಷ್ಟ ಶತಮಾನೋತ್ಸವದ ಅಧ್ಯಕ್ಷತೆ, ಬಸವಣ್ಣರ ಮಹಾತತ್ವ ಸಾರಿದ ಶ್ರೀಗಳು – ದೇಶದ ಮೂಲೆ ಮೂಲೆಯಿಂದ ಆಗಮಿಸಿದ್ದ ಭಕ್ತರು.

    28) 1969 : ಮುಂಬೈನಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾ ಅಧಿವೇಶನದ ಅಧ್ಯಕ್ಷತೆ.

    29) 1969 : ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಸಮಾವೇಶದಲ್ಲಿ ನೇತೃತ್ವ, ಹಿಂದೂಧರ್ಮದ ಜಾಗೃತಿಯಲ್ಲಿ ಭಾಗಿ.

    30) 1970 : ಡಿ.27 ಬೆಂಗಳೂರಿನಲ್ಲಿ ನಡೆದ 47ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ.

    31) 1972 : ಮೇ.26 ಶ್ರೀಮಠದ ಪೀಠಾಧಿಕಾರ ಸ್ವೀಕಾರದ ರಜತ ಮಹೋತ್ಸವ. ಮುದ್ರಣಾಲಯ ಪ್ರಾರಂಭ

    32) 1972 : ಮೇ.28 ಉಚಿತ ವಿದ್ಯಾರ್ಥಿ ನಿಲಯ ಮತ್ತು ಸಂಸ್ಕೃತ ಕಾಲೇಜಿನ ಸುವರ್ಣ ಮಹೋತ್ಸವ.

    33) 1974 : ಅಖಿಲ ಭಾರತ ವೀರಶೈವ ಮಠಾಧೀಪತಿಗಳ ಸಂಘದ ಅಧ್ಯಕ್ಷತೆ.

    34) 1977 : ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರಗಳ ಗಂಗಾಧರರಾಜ ಯೋಗೀಂದ್ರ ಸ್ವಾಮೀಜಿಗಳ ರಜತ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ.

    25) 1978 : ಗ್ರಾಮಾಂತರ ಬಸವಜಯಂತಿ ಯೋಜನೆ ಆರಂಭ.

    36) 1982: ಏ.24ರಂದು ರಾಷ್ಟ್ರಪತಿ ನೀಲಂ ಸಜೀವರೆಡ್ಡಿ ಸಮ್ಮುಖದಲ್ಲಿ ಮುಖ್ಯಮಂತ್ರಿ ಎಸ್.ಗುಂಡೂರಾವ್ ಅವರಿಂದ ಸುವರ್ಣಮಹೋತ್ಸವ ನೆನಪಿಗಾಗಿ ಗೌರವ ಗ್ರಂಥ `ಸಿದ್ಧಗಂಗಾಶ್ರೀ’ ಬಿಡುಗಡೆ.

    37) 1982 : ಶ್ರೀಸಿದ್ಧಗಂಗಾ ಮಹಿಳಾ ಕಾಲೇಜು ಸ್ಥಾಪನೆ.

    38) 1982 : ಪೀಠಾರೋಹಣ ಸುವರ್ಣ ಮಹೋತ್ಸವ ಸಮಾರಂಭ

    39) 1984 : ನೆಲಮಂಗಲದಲ್ಲಿ ಶ್ರೀ ಸಿದ್ದಗಂಗಾ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ.

    40) 1984 : ತುಮಕೂರಿನಲ್ಲಿ ಶ್ರೀ ಸಿದ್ದಗಂಗಾ ಫಾರ್ಮಸಿ ಕಾಲೇಜು ಸ್ಥಾಪನೆ.

    41) 1987: ಏ.20 ಹುಬ್ಬಳ್ಳಿ 3 ಸಾವಿರ ಮಠದ ಜಗದ್ಗುರು ಗಂಗಾಧರರಾಜ ಯೋಗೀಂದ್ರ ಸ್ವಾಮೀಜಿ ರಜತ ಮಹೋತ್ಸವದ ಅಧ್ಯಕ್ಷತೆ.

    42) 1988 : ಮಾ.30 ಉತ್ತರಾಧಿಕಾರಿಯಾಗಿ ಕಿರಿಯ ಶ್ರೀ ಸಿದ್ಧಲಿಂಗಸ್ವಾಮೀಜಿ ನೇಮಕ.

    43) 1992 : ಫೆ.16 ಶ್ರೀಗಳ ವಜ್ರ ಮಹೋತ್ಸವ ಸಮಾರಂಭದಲ್ಲಿ ಉಪರಾಷ್ಟ್ರಪತಿ ಡಾ.ಶಂಕರ್ದಯಾಳ್ ಶರ್ಮ ಅವರಿಂದ ಸಿದ್ದಗಂಗಾ ನರ್ಸಿಂಗ್ ಕಾಲೇಜು ಸ್ಥಾಪನೆಗೆ ಶಂಕುಸ್ಥಾಪನೆ.

    44) 1995 : ಫೆ.2 ಸಿದ್ದಗಂಗಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸ್ಥಾಪನೆ.

    45) 1995 : ತಮಿಳುನಾಡು ಧರ್ಮಪುರಿ ಜಿಲ್ಲೆ ಡೆಂಕಟಣ ಕೋಟೆ ತಾಲೂಕು ಮೊಳ್ಳಳ್ಳಿ ಗ್ರಾಮದಲ್ಲಿ ವಿಶ್ವ ಬಸವ ಜಯಂತಿ ಕಾರ್ಯಕ್ರಮದ ನೇತೃತ್ವ.

    46) 1996 : ಕರ್ನಾಟಕ ಫ್ರೌಢಶಿಕ್ಷಣ ಮಂಡಳಿಯ 1995ನೇ ವರ್ಷದ ಘಟಿಕೋತ್ಸವದಲ್ಲಿ ಅನುಗ್ರಹ ಭಾಷಣ.

    47) 1997 : ಮಾ.22 ಶ್ರೀಗಳ ವಜ್ರಮಹೋತ್ಸವ ಬೃಹತ್ ವಿದ್ಯಾರ್ಥಿ ನಿಲಯ, ಪ್ರಸಾದ ನಿಲಯ ಹಾಗೂ ದಾಸೋಹ ಸಿರಿ ಗ್ರಂಥ ಸಮರ್ಪಣೆ.

    48) 1997 : ತಮಿಳುನಾಡಿನ ಸೇಲಂನಲ್ಲಿ ನಡೆದ ವೀರಶೈವ ಸಮಾಜದ ಸಮ್ಮೇಳನದ ಅಧ್ಯಕ್ಷತೆ.

    49) 2000 : ಜ.30ರಂದು ಪ್ರಧಾನಿ ವಾಜಪೇಯಿ ಅವರಿಂದ ಸಂಸ್ಕೃತ ಕಾಲೇಜು, ಅಮೃತ ಮಹೋತ್ಸವ ಉದ್ಘಾಟನೆ. ಅಂಧ ಮಕ್ಕಳಿಗೆ ನೂತನ ಶಾಲಾ ಕಟ್ಟಡ ಹಾಗೂ ವಸತಿ ನಿಲಯ ನಿರ್ಮಾಣ.

    50) 2005 : ಶ್ರೀಗಳ 98ನೇ ಜನ್ಮದಿನೋತ್ಸವ ಸಮಾರಂಭದಲ್ಲಿ ಮಾಜಿ ಉಪಪ್ರಧಾನಿ ಎಲ್.ಕೆ.ಆಡ್ವಾಣಿ ಭಾಗಿ.

    51) 2005 : ಪೀಠಾರೋಹಣ(ಅಮೃತ ಮಹೋತ್ಸವ) ಸಮಾರಂಭ ಗೃಹಸಚಿವ ಶಿವರಾಜ್ ಪಾಟೀಲ್, ಸಿಎಂ ಧರಂಸಿಂಗ್ ಭಾಗಿ.

    52) 2006 : ಏ.7 ಶ್ರೀಗಳ ಗುರುವಂದನಾ ಕಾರ್ಯಕ್ರಮ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ, ರಾಜ್ಯಪಾಲ ಚತುರ್ವೇದಿ, ಸಿಎಂ ಕುಮಾರಸ್ವಾಮಿ, ಡಿಸಿಎಂ ಯಡಿಯೂರಪ್ಪ, ಸುತ್ತೂರು ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧ್ಯಕ್ಷರು ಭಾಗವಹಿಸಿದ್ದರು.

    53) 2007 : ರಾಜ್ಯ ಸರ್ಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿ. ಸಿದ್ದಗಂಗಾ ಶ್ರೀಗಳ ಜನ್ಮಶತಮಾನೋತ್ಸವ ಸಮಾರಂಭ

    54) 2009 : ಕೃಷಿ ಸಮಾವೇಶ ಹಾಗೂ ಮಹಿಳಾ ಸಮಾವೇಶ

    55) 2009 : ಶ್ರೀಗಳ ಶತಮಾನೋತ್ಸವ ಗುರುವಂದನಾ ಕಾರ್ಯಕ್ರವಕ್ಕೆ ರಾಷ್ಟ್ರಪತಿ ಪ್ರತಿಭಾ ಸಿಂಗ್ ಪಾಟೀಲ್ ಆಗಮಿಸಿದ್ದರು.

    56) 2010 : ಶ್ರೀಗಳಿಗೆ ಬಸವಶ್ರೀ ಪುರಸ್ಕಾರದ ಗೌರವ.

    57) 2011 : ಶ್ರೀ ಸಿದ್ದಲಿಂಗ ಸ್ವಾಮೀಜಿಗೆ ಶ್ರೀಮಠದ ಅಧ್ಯಕ್ಷ ಪದವಿಯ ವರ್ಗಾವಣೆ

    58) 2012 : ಗುರುವಂದನಾ ಕಾರ್ಯಕ್ರಮ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಭಾಗಿ.

    59) 2013 : ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ.

    60) 2013 : ಗುರು ಪಟ್ಟ ಏರಿದ 80 ವರ್ಷದ ಅಮೃತ ಮಹೋತ್ಸವ ಆಚರಣೆ.

    61) 2014 : ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಸುವರ್ಣ ಮಹೋತ್ಸವದ ಅಂಗವಾಗಿ ಹಳೆಯ ವಿದ್ಯಾರ್ಥಿಗಳ ಜಾಗತಿಕ ಸಮಾವೇಶ.

    62) 2015 : ಜುಲೈನಲ್ಲಿ ಪದ್ಮಭೂಷಣ ಪ್ರಶಸ್ತಿ ಪ್ರದಾನ

    63) 2017 : ಕರ್ನಾಟಕ ಸರ್ಕಾರದ ಮಹಾವೀರ ಶಾಂತಿ ಪ್ರಶಸ್ತಿ ಪ್ರಧಾನ

    64) 2017: ಸಿದ್ದಗಂಗಾ ಆಸ್ಪತ್ರೆ ಆರಂಭ

    65) ಜಾತ್ಯಾತೀತ ಸಂಪ್ರದಾಯವನ್ನು ಕಾರ್ಯರೂಪಕ್ಕೆ ತಂದಿರುವ ಖ್ಯಾತಿ ಮಠಕ್ಕಿದೆ.

    66) ಶರಣ ಶ್ರೀ ಬಸವೇಶ್ವರರ ಹಾಗೂ ಇತರ ಶರಣರ ತತ್ವಾದರ್ಶಗಳನ್ನು ಕಾರ್ಯರೂಪಕ್ಕೆ ತಂದಿರುತ್ತದೆ.

    67) ದಿನಂಪ್ರತಿ 10 ಸಾವಿರ ವಿದ್ಯಾರ್ಥಿಗಳಿಗೆ ಮತ್ತು 3, 5 ಸಾವಿರ ಭಕ್ತಾಧಿಗಳಿಗೆ ಅನ್ನದಾಸೋಹ.

    68) ಇದುವರೆಗೆ 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತ್ರಿವಿಧ ದಾಸೋಹದ ಅನುಕೂಲ ಪಡೆದು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.

    69) ರಾಜ್ಯಾದ್ಯಂತ 125 ವಿವಿಧ ಶಿಕ್ಷಣ ಸಂಸ್ಥೆಗಳು, ಸಂಸ್ಕೃತ ಕಾಲೇಜು ಹಾಗೂ ಸಂಸ್ಕೃತ ಪಾಠ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ.

    70) ಅನಾರೋಗ್ಯಕ್ಕೆ ತುತ್ತಾಗುವ ಮೊದಲು ಶ್ರೀಗಳು ದಿನಂಪ್ರತಿ 18 ಗಂಟೆ ಪೂಜೆ, ಜಪ, ಭಕ್ತರಿಗೆ ದರ್ಶನ ನೀಡುತ್ತಿದ್ದರು.

    71) 82 ವರ್ಷಗಳಿಂದ ಶ್ರೀ ಕ್ಷೇತ್ರದ ಜವಾಬ್ದಾರಿಯನ್ನು ವಹಿಸಿಕೊಂಡು ಬಂದಿದ್ದ ಶ್ರೀಗಳ ರಜತ, ಸುವರ್ಣ, ವಜ್ರ, ಪ್ಲಾಟಿನಂ, ಮತ್ತು ಶತಮಾನೋತ್ಸವ ಸಮಾರಂಭಗಳು ಶ್ರೀ ಕ್ಷೇತ್ರದಲ್ಲಿ ಅಚ್ಚಳಿಯದಂತೆ ವಿಜ್ರಂಭಣೆಯಿಂದ ನಡೆದಿತ್ತು.

    72) 1905 ರಿಂದ ಸಿದ್ದಲಿಂಗೇಶ್ವರ ಜಾತ್ರೆ ಮತ್ತು ದಿನಗಳ ಪರಿಷೆ ವ್ಯವಸ್ಥಿತವಾಗಿ ನಡೆದುಕೊಂಡು ಬಂದಿದೆ.

    73) ಸಾಮಾಜಿಕ ಕ್ರಾಂತಿಕಾರರಾದ ಜಗಜ್ಯೋತಿ ಬಸವೇಶ್ವರ ನಾಟಕ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಪ್ರದರ್ಶನ ಕಂಡಿದೆ.

    74) 50 ವರ್ಷಗಳಿಂದ ಶ್ರೀ ಸಿದ್ದಲಿಂಗೇಶ್ವರ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ಪ್ರತಿವರ್ಷವೂ ನಡೆಸಿಕೊಂಡು ಬರಲಾಗುತ್ತಿದೆ.

    75) ಶ್ರೀ ಕ್ಷೇತ್ರದ ವಿದ್ಯಾರ್ಥಿಗಳು ದಿನನಿತ್ಯ ಸಾಮೂಹಿಕ ಪ್ರಾರ್ಥನೆಯಲ್ಲಿ ತಪ್ಪದೇ ಶೃದ್ಧೆಯಿಂದ ಪಾಲ್ಗೊಳ್ಳುತ್ತಿದ್ದಾರೆ.

    76) ಅನಾರೋಗ್ಯಕ್ಕೆ ತುತ್ತಾಗುವ ಮೊದಲು ಸ್ವತಂತ್ರವಾಗಿ ನಡೆಯುತ್ತಿದ್ದ ಶ್ರೀಗಳು ಕನ್ನಡಕವಿಲ್ಲದೆ ಓದುತ್ತಿದ್ದರು.

    77) 1982 ಕುಣಿಗಲ್ ನಲ್ಲಿ ಕರ್ನಾಟಕ ನವಚೈತನ್ಯ ಎಂಬ ಅಂಧ ಮಕ್ಕಳ ಶಾಲೆಯನ್ನು ಶ್ರೀಗಳು ತೆರೆದಿದ್ದರು.

    78) 1941ರಲ್ಲಿ ಉದ್ಧಾನ ಶಿವಯೋಗಿಗಳು ಲಿಂಗೈಕ್ಯರಾದಾಗ ಮಠದಲ್ಲಿ ಕೇವಲ 300 ರೂಪಾಯಿ, 16 ಎಕರೆ ಖುಷ್ಕಿ ಜಮೀನು ಮಾತ್ರವಿತ್ತು, ಆದರೆ ಇಂದು ಮಠದ ಸಾರ್ವಜನಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರವಾಗಿ ಹೆಮ್ಮರವಾಗಿ ಬೆಳೆದು ನಿಂತಿದೆ. ಇದರಲ್ಲಿ ಶ್ರೀಗಳ ಶ್ರಮ ಅನನ್ಯ.

    79) ಯಂತ್ರಧಾರಣ ಮಂಚದಲ್ಲಿ ಕುಳಿತು ಭಕ್ತಾದಿಗಳಿಗೆ ಹಾಗೂ ಮಕ್ಕಳಿಗೆ ಯಂತ್ರ ಧಾರಣೆ ಮಾಡುವ ಪರಿಪಾಠ ಇಂದು ಕೂಡ ಚಾಚುತಪ್ಪದೇ ನಡೆದುಕೊಂಡು ಬಂದಿದೆ. ಮಕ್ಕಳ ಎಷ್ಟೋ ಕಾಯಿಲೆಗಳಿಗೆ ಪರಿಹಾರ ಸಿಕ್ಕಿದೆ.

    80) ಮಠದ ಆವರಣದಲ್ಲಿ ಬೃಹತ್ ಕಲ್ಯಾಣಿಯನ್ನು ಶ್ರೀಗಳು ನಿರ್ಮಿಸಿದ್ದಾರೆ. ಶ್ರೀಗಳ ಪಾದಸ್ಪರ್ಶದಿಂದ ಈ ಕಲ್ಯಾಣಿ ಬತ್ತಿಲ್ಲ ಎಂದು ಭಕ್ತರು ಹೇಳುತ್ತಾರೆ.

    81) ಶ್ರೀಗಳು ನಿರ್ಮಿಸಿರುವ ಕಲ್ಯಾಣಿಯಲ್ಲಿ ಸಿದ್ದಲಿಂಗೇಶ್ವರ ದೇವರ ತೆಪೋತ್ಸವ ಪ್ರತಿ ವರ್ಷ ನಡೆದುಕೊಂಡು ಬರುತ್ತಿದೆ. ಇಲ್ಲಿಯವರೆಗೂ ಖುದ್ದು ಸಿದ್ದಗಂಗಾ ಶ್ರೀಗಳು ಚಾಲನೆ ನೀಡುತ್ತಿದ್ದರು.

    82) ಏಕಾಕಾಲದಲ್ಲಿ 5 ಸಾವಿರ ಜನರಿಗೆ ಊಟ ತಯಾರಿಸುವ ಬೃಹತ್ ಅಡುಗೆ ಮನೆ ಮಠದಲ್ಲಿದೆ.

    83) ಹತ್ತು ಸಾವಿರ ಜನರು ಕುಳಿತು ಏಕಾಕಾಲದಲ್ಲೇ ಪ್ರಾರ್ಥನೆ ಮಾಡಲು ಸ್ಥಳಾವಕಾಶವಿರುವ ದೊಡ್ಡದಾದ ಪ್ರಾರ್ಥನಾ ಮಂದಿರ ನಿರ್ಮಾಣಗೊಂಡಿದೆ.

    84) ಶ್ರೀದರ್ಶನ ಮ್ಯೂಸಿಯಂ ಸ್ಥಾಪನೆ – ಸಿದ್ದಗಂಗಾ ಶ್ರೀಗಳ ಪರಿಕರ ಹಾಗೂ ಜೀವನ ಚರಿತ್ರೆಗೆ ಸೇರಿದ ವಸ್ತುಗಳ ಸಂಗ್ರಹಾಲಯ ನಿರ್ಮಾಣ.

    85) ವಿವಿಧ ಜಾತಿಯ ಪುಷ್ಪಗಳ ಗಿಡಗಳಿರುವ ಬಿಲ್ವವನ ನಿರ್ಮಾಣವಾಗಿತ್ತು. ಸಿದ್ದಗಂಗಾ ಶ್ರೀಗಳ ಇಷ್ಟಲಿಂಗ ಪೂಜೆಗೆ ಇಲ್ಲಿಂದಲೇ ಹೂಗಳ ಸರಬರಾಜು ಆಗುತಿತ್ತು.

    86) ಇಷ್ಟಲಿಂಗ ಸೃಷ್ಟಿ ಹಾಗೂ ಭಿನ್ನಗೊಂಡ ಇಷ್ಟಲಿಂಗಗಳ ಯಥಾವತ್ತು ರೂಪ ಕೊಡುವ ಸಿದ್ದಲಿಂಗೇಶ್ವರ ಛದ್ರರಸ ಕೇಂದ್ರ ಸ್ಥಾಪನೆ. ರಾಜ್ಯದ ಮೊದಲ ಇಷ್ಟಲಿಂಗ ನಿರ್ಮಾಣ ಕೇಂದ್ರ.

    87) ಪ್ರತಿ ವರ್ಷ ಜಾನುವಾರು ಜಾತ್ರೆಯಲ್ಲಿ ವಿಶೇಷ ಗೋವುಗಳಿಗೆ ಬಹುಮಾನ ಘೋಷಣೆ ಪರಿಪಾಠ. ಗರಿಷ್ಟ 5 ಲಕ್ಷ ರೂ.ವರೆಗೆ ಬಹುಮಾನ ನೀಡಲಾಗುತ್ತದೆ.

    88) ಕುದುರೆ ಸವಾರಿಯಲ್ಲಿ ಶ್ರೀಗಳು ನೈಪುಣ್ಯತೆ ಹೊಂದಿದ್ದರು. ಆರಂಭದ ದಿನಗಳಲ್ಲಿ ಕುದುರೆ ಸವಾರಿ ಮಾಡಿ ಭಕ್ತರ ಮನೆಗೆ ಭೇಟಿ ನೀಡುತ್ತಿದ್ದರು.

    89) ಎಂದು ಬತ್ತದ ಸಿಹಿ ನೀರಿನ ಬಾವಿ ಮಠದಲ್ಲಿದೆ. ಈ ಬಾವಿಯಿಂದಲೇ ಶ್ರೀಗಳ ಸ್ನಾನಕ್ಕೆ ಪೂಜೆಗೆ ನೀರು ರವಾನೆ, ಇಂದಿಗೂ ಸ್ವಚ್ಛತೆ ಹಾಗೂ ಪೂಜ್ಯಭಾವದಿಂದ ಬಾವಿ ಸಂರಕ್ಷಣೆ ಮಾಡಲಾಗಿದೆ.

    90) ಆರೋಗ್ಯವೇ ಭಾಗ್ಯ ಎಂದ ಶ್ರೀಗಳು ಪ್ರತಿನಿತ್ಯ ಬೇವಿನ ಕಷಾಯ ಸೇವಿಸುತ್ತಿದ್ದರು. ಈ ಮೂಲಕ ಆಯುರ್ವೇದದ ಮಹಿಮೆ ಸಾರಿದ್ದರು.

    91) ಪ್ರತಿನಿತ್ಯ ಬೆಳಗ್ಗೆ, ಮಧ್ಯಾಹ್ನ, ಸಂಜೆ ವೇಳೆ ತಪ್ಪದೆ ಇಷ್ಟಲಿಂಗ ಪೂಜೆ ನೆರವೇರಿಸುತ್ತಿದ್ದರು. ಇಷ್ಟಲಿಂಗ ಪೂಜೆಯನ್ನು ತಪ್ಪಸ್ಸಿನಂತೆ ಮಾಡಿಕೊಂಡು ಬರುತ್ತಿದ್ದರು.

    92) ಇತಿ ಮಿತಿ ಆಹಾರ ಸೇವನೆ ಮೂಲಕ ಸ್ವಸ್ಥ ಆರೋಗ್ಯ ಶ್ರೀಗಳು ಕಾಪಾಡಿಕೊಂಡಿದ್ದರು.

    93) ನೂರಾರು ವಾಣಿಗಳ ಮೂಲಕ ಭಕ್ತರಿಗೆ ಜೀವನದ ಪಾಠ ಹೇಳಿದ್ದರು ಶಿವಕುಮಾರಸ್ವಾಮೀಜಿ.

    94) ಪ್ರತಿನಿತ್ಯ ಚಾಚೂತಪ್ಪದೆ ಬರಿಗಣ್ಣಿನಿಂದ ದಿನಪತ್ರಿಕೆ ಓದುತ್ತಿದ್ದರು. ಪ್ರಾಪಂಚಿಕ ವಿದ್ಯಾಮಾನಗಳ ಬಗ್ಗೆ ತಿಳಿದುಕೊಳ್ಳುವ ಹಸಿವನ್ನು ಸಿದ್ದಗಂಗಾ ಶ್ರೀಗಳು ಹೊಂದಿದ್ದರು.

    95) ಸಿದ್ದಗಂಗಾ ಶ್ರೀಗಳು ಉತ್ತಮ ಬರಹಗಾರರು ಹೌದು. ಶ್ರೀಗಳ ಪ್ರವಚನಗಳನ್ನು ಶ್ರೀವಾಣಿ ಎಂದು ಸಾಹಿತ್ಯ ರೂಪದಲ್ಲಿ ಮುದ್ರಿಸಲಾಗಿದ್ದು ದಾರಿ ದೀಪವಾಗಿದೆ.

    96) ಬೇರೆ ಬೇರೆ ಕಾರ್ಯಕ್ರಮಕ್ಕೆ, ಸಂಸ್ಥೆಗಳಿಗೆ ತೆರಳಿದಾಗ ನೀಡಿ ಆಶೀರ್ವಾಚನ `ಸಂದೇಶ ಸಂಚಯ’ದ ಹೆಸರಿನಲ್ಲಿ ಮುದ್ರಿತವಾಗಿದೆ.

    97) ಶ್ರೀ ಮಠದಲ್ಲಿ ಓದಿದವರು ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ರಾಷ್ಟ್ರಕಮಿ ಜಿಎಸ್ ಶಿವರುದ್ರಪ್ಪ, ವಿಶ್ರಾಂತ ಕುಲಪತಿ ಡಾ.ಬಿ ತಿಮ್ಮೇಗೌಡ, ಡಾ. ಮಲ್ಲೆಪುರ ವೆಂಕಟೇಶ್ ಈ ಹಿಂದೆ ಶ್ರೀ ಮಠದಲ್ಲಿ ಓದಿದ್ದರು.

    98) ಸಿದ್ದಲಿಂಗೇಶ್ವರ ದೇವಸ್ಥಾನವನ್ನು ಶ್ರೀಗಳು ಜೀರ್ಣೋದ್ಧಾರ ಮಾಡಿದ್ದರು. ಮಠಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ದೇವಸ್ಥಾನದ ಮಾರ್ಗಕ್ಕೆ ಶ್ರೀಗಳು ವ್ಯವಸ್ಥೆ ಮಾಡಿದ್ದರು.

    99) ಮದುವೆಗಳು ಸರಳವಾಗಿ ನಡೆಯಬೇಕು ಎನ್ನುವುದನ್ನು ಭಕ್ತಾದಿಗಳಿಗೆ ಮೇಲಿಂದ ಮೇಲೆ ಶ್ರೀಗಳು ಪ್ರವಚನ ಮಾಡುತ್ತಿದ್ದರು.

    100) ದುಡಿಮೆ ಸತ್ಯ ಶುದ್ಧವಾಗಿರಬೇಕು ಎನ್ನುವ ವಿಚಾರವನ್ನು ಶ್ರೀಗಳು ಪದೇಪದೇ ತಮ್ಮ ಮಾತಿನಲ್ಲಿ ಹೇಳುತ್ತಿದ್ದರು.

    101) ಸೇವೆ ಪ್ರಚಾರದ ಸರಕಲ್ಲ, ಅದು ಗುಪ್ತ ಶಕ್ತಿ. ವ್ಯಕ್ತಿಯನ್ನು ಆರೋಗ್ಯವಂತನಾಗಿಡುವ ಸಂಜೀವಿನಿ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದರು.

    102) ರಾಜಕಾರಣಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾಗ, ಜನನಾಯಕರು ನೀತಿವಂತರಾಗದ ತನಕ ಸಮಾಜ ಪರಿಶುದ್ಧವಾಗಲಾರದು ಎನ್ನುವ ಕಿವಿಮಾತನ್ನು ಹೇಳುತ್ತಿದ್ದರು.

    103) ಸಿದ್ದಗಂಗಾ ಶ್ರೀಗಳ ಸಾಧನೆ ಗಮನಿಸಿದ ಸರ್ಕಾರ ಶ್ರೀಗಳ ಹುಟ್ಟೂರು ಮಾಗಡಿ ತಾಲೂಕಿನ ವೀರಾಪುರ ಗ್ರಾಮವನ್ನು ದತ್ತು ತೆಗೆದುಕೊಂಡು ಮಾದರಿ ಗ್ರಾಮವಾಗಿ ನಿರ್ಮಾಣ ಮಾಡಿದೆ.

    104) 2014ರಲ್ಲಿ ಸಿದ್ದಗಂಗಾ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಶ್ರೀಗಳ ಸಾಧನೆಯನ್ನು ಕೊಂಡಾಡಿದ್ದರು.

    105) ಸಿದ್ದಗಂಗಾ ಶ್ರೀಗಳಿಗೆ ಮಾಜಿ ರಾಷ್ಟ್ರಪತಿ ದಿ. ಅಬ್ದುಲ್ ಕಲಾಂ ಎಂದರೆ ಅಭಿಮಾನ ಹೆಚ್ಚು, ಅಬ್ದುಲ್ ಕಲಾಂ ಬಗ್ಗೆ ಶ್ರೀಗಳು ಆಗಾಗ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.

    106) ಜಾನುವಾರುಗಳ ಮೇಲೆ ಶ್ರೀಗಳಿಗೆ ವಿಶೇಷವಾದ ಮಮತೆ. ಮಠದಲ್ಲಿ ಸಾವಿರಾರು ಜಾನುವಾರುಗಳಿದ್ದು, ಇವುಗಳು ನೀಡುವ ಹಾಲನ್ನು ಮಠದ ಮಕ್ಕಳಿಗೆ ಬಳಕೆ ಮಾಡಲಾಗುತ್ತದೆ.

    107) ತಮಿಳುನಾಡಿನಲ್ಲಿ ಚಂಡಮಾರುತದಿಂದ ನಿರಾಶ್ರಿತರಿಗೆ ಮಠದಿಂದ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ಹಣವನ್ನು ದೇಣಿಗೆಯಾಗಿ ನೀಡಿದ್ದರು.

    108) ಪ್ರತಿ ಚುನಾವಣೆ ಬಂದಾಗಲೂ ತಪ್ಪದೇ ಮತದಾನ ಮಾಡುತ್ತಿದ್ದರು.

    109) ಖಾದಿಗೆ ಹೆಚ್ಚಿನ ಒತ್ತು ನೀಡಿದ್ದ ಶ್ರೀಗಳು ಮಠದ ಆವರಣದಲ್ಲಿ ಖಾದಿ ಬಟ್ಟೆಗಳ ಅಂಗಡಿ ಸ್ಥಾಪನೆ ಮಾಡಿದ್ದಾರೆ.

    110) ವಿಶಿಷ್ಟವಾಗಿ ಗೋ ಸಗಣಿಯಿಂದ ವಿಭೂತಿ ತಯಾರಿಸುವ ಕೇಂದ್ರವನ್ನು ಶ್ರೀಗಳು ಪ್ರಾರಂಭಿಸಿದ್ದರು.

    111) ಪ್ರತಿನಿತ್ಯ ಯೋಗ, ಧ್ಯಾನದ ದಿನಚರಿ, ಸರಳ ಜೀವನ, ಸೇವೆ ಮೂಲಕ ಸಮಾಜಕ್ಕೆ ಕಾಯಕವೇ ಕೈಲಾಸ ಎಂಬ ಸಂದೇಶವನ್ನು ಸಿದ್ದಗಂಗಾ ಶ್ರೀಗಳು ಸಾರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ತುಮಕೂರು: ಇಲ್ಲಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿ ಸ್ವಾಮೀಜಿ ಅವರಿಗೆ ಭಾರತ ರತ್ನ ಪ್ರಶಸ್ತಿ ಸಿಗಬಹುದು ಎಂಬ ಸುದ್ದಿಯನ್ನು ಹೇಳಿದ್ದೆವು. ಆದರೆ ಇದೀಗ ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದೆ.

    ಶ್ರೀಗಳಿಗೆ ಕಫ, ಜ್ವರ ಕಾಣಿಸಿಕೊಂಡು ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ರಾತ್ರಿ ಶಿವಪೂಜೆ ಮುಗಿದ ಬಳಿಕ ಸ್ವಾಮೀಜಿಯವರ ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡುಬಂದಿದೆ. ತಕ್ಷಣ ನಸುಕಿನ ಜಾವ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಬರಲಾಗಿದ್ದು, ಸದ್ಯ ಶ್ರೀಗಳಿಗೆ ನುರಿತ ವೈದ್ಯರ ತಂಡವೊಂದು ಚಿಕಿತ್ಸೆ ನೀಡುತ್ತಿದೆ.

    ಭಾರತ ರತ್ನ ಪ್ರಶಸ್ತಿಗೆ ಮನವಿ:
    ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಭಾರತ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರದ ಮೂಲಕ ಮನವಿ ಮಾಡಿದ್ದರು.

    ಮನವಿಯಲ್ಲೇನಿದೆ?:
    ಶತಮಾನಗಳಷ್ಟು ಹಳೆಯದಾದ ತುಮಕೂರಿನ ಸಿದ್ದಗಂಗಾ ಮಠ ಕಳೆದ 600 ವರ್ಷಗಳಿಂದ ಶಿಕ್ಷಣ, ಅನ್ನ ದಾಸೋಹ ಮಾಡುತ್ತಾ ಬಂದಿದೆ. ಎಲ್ಲಾ ವರ್ಗದ ಜನರ ಪ್ರೀತಿಗೆ ಪಾತ್ರರಾಗಿರುವ ಶತಾಯುಷಿ, ಶಿಕ್ಷಣ, ಅನ್ನದಾಸೋಹದ ಪ್ರಮುಖ ರೂವಾರಿಯಾಗಿರೋ ಸಿದ್ದಗಂಗಾ ಶ್ರೀಗಳ ಕೊಡುಗೆ ಅನನ್ಯವಾಗಿದೆ. ಸ್ವಾಮೀಜಿಯವರು ಈಗ 110 ವರ್ಷಗಳನ್ನು ಪೂರೈಸಿದ್ದಾರೆ. ಎಲ್ಲ ಸಮುದಾಯದ ಕಡುಬಡವ ಮಕ್ಕಳಿಗೆ ಅನ್ನ ದಾಸೋಹ ಮಾಡುವ ಮೂಲಕ ಶಿಕ್ಷಣ ನೀಡಿ ಉತ್ತಮ ನಾಗರಿಕರನ್ನಾಗಿ ಮಾಡಿದ ಕೀರ್ತಿ ಸ್ವಾಮೀಜಿಗೆ ಸಲ್ಲುತ್ತದೆ. ಇದು ಅವರ ನಿಸ್ವಾರ್ಥ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ. ಇಂದಿಗೂ ಸಿದ್ದಗಂಗಾ ಮಠ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಸತಿ, ಶಿಕ್ಷಣ ಜೊತೆಗೆ ಉಚಿತ ಪ್ರಸಾದವನ್ನು ನೀಡುತ್ತಾ ಬಂದಿದೆ. ದೇಶದಲ್ಲೇ ಅತ್ಯುನ್ನತ ಶಿಕ್ಷಣ ಸಂಸ್ಥೆ ಎಂದು ಖ್ಯಾತಿಯಾಗಿದೆ. ಇದರ ರೂವಾರಿಯಾಗಿರುವ ಡಾ. ಶಿವಕುಮಾರ ಸ್ವಾಮೀಜಿ ಅವರ ಅನನ್ಯ ಸೇವೆಯನ್ನು ಪರಿಗಣಿಸಿ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ಭಾರತ ರತ್ನಕ್ಕೆ ಶಿಫಾರಸು ಮಾಡಬೇಕೆಂದು ರಾಜ್ಯದ ಪರವಾಗಿ ನಾನು ವಿನಂತಿಸಿಕೊಳ್ಳುತ್ತಿದ್ದೆನೆ ಎಂದು ಪತ್ರದಲ್ಲಿ ಸಿಎಂ ಉಲ್ಲೇಖಿಸಿದ್ದರು.