Tag: Shri shivakumara swamiji

  • ನಡೆದಾಡುವ ದೇವರಿಗೆ ನಮನ – ಭಾವಚಿತ್ರದ ಮುಂದೆ 1 ಗಂಟೆ ಇತ್ತು ನಾಗರಹಾವು!

    ನಡೆದಾಡುವ ದೇವರಿಗೆ ನಮನ – ಭಾವಚಿತ್ರದ ಮುಂದೆ 1 ಗಂಟೆ ಇತ್ತು ನಾಗರಹಾವು!

    ದಾವಣಗೆರೆ: ನಡೆದಾಡುವ ದೇವರು ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರದ ಮುಂಭಾಗ ನಾಗರಹಾವೊಂದು ಒಂದು ಗಂಟೆಗಳ ಕಾಲ ಕುಳಿತ ಅಚ್ಚರಿಯ ಘಟನೆ ಚನ್ನಗಿರಿ ತಾಲ್ಲೂಕಿನ ನಾಗೇನಹಳ್ಳಿಯಲ್ಲಿ ನಡೆದಿದೆ.

    ನಾಗೇನಹಳ್ಳಿ ಗ್ರಾಮದ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಗ್ರಾಮಸ್ಥರು ಶ್ರೀಗಳ ಭಾವಚಿತ್ರವಿಟ್ಟು ಶ್ರದ್ಧಾಂಜಲಿ ಸಲ್ಲಿಸಿ, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ ಮಾಡಿದ್ದಾರೆ. ಗ್ರಾಮಸ್ಥರು ಶ್ರದ್ಧಾಂಜಲಿ ಸಲ್ಲಿಸಿ ತೆರಳಿದ ಬಳಿಕ ಅಲ್ಲಿಗೆ ನಾಗರಹಾವೊಂದು ಆಗಮಿಸಿದೆ. ಇದನ್ನೂ ಓದಿ: ಅನ್ನ ಚೆಲ್ಲಲು ಬಂದ ಭಕ್ತನಿಗೆ ಮಠದ ವಿದ್ಯಾರ್ಥಿಯಿಂದ ಅನ್ನದ ಪಾಠ! – ವಿಡಿಯೋ ನೋಡಿ

    ಎಲ್ಲಿಂದಲೋ ಬಂದಿದ್ದ ನಾಗರಹಾವು ಸಿದ್ದಗಂಗಾ ಶ್ರೀಗಳ ಭಾವಚಿತ್ರದ ಮುಂದೆ ಒಂದು ಗಂಟೆಗೂ ಅಧಿಕ ಕಾಲ ಕುಳಿತಿತ್ತು. ಈ ವಿಶೇಷ ದೃಶ್ಯವನ್ನು ನೋಡಿದ ಗ್ರಾಮಸ್ಥರು ಆಶ್ಚರ್ಯ ಪಟ್ಟಿದ್ದಾರೆ. ಸಾಧಾರಣವಾಗಿ ಕಾಣಿಸಿಕೊಳ್ಳದ ನಾಗರಹಾವು ಸಿದ್ದಗಂಗಾ ಶ್ರೀಗಳ ಭಾವಚಿತ್ರ ಮುಂದೆ ಕಾಣಿಸಿದ್ದನ್ನು ಕಂಡು ಜನರು ಇದೊಂದು ವಿಸ್ಮಯ ಎಂದಿದ್ದಾರೆ. ಕೇವಲ ಮನುಷ್ಯರು ಮಾತ್ರವಲ್ಲದೇ ಮೂಖ ಜೀವಿ ಕೂಡ ಸಿದ್ದಗಂಗಾ ಶ್ರೀಗಳಿಗೆ ನಮನ ಸಲ್ಲಿಸಿದೆ ಎಂದು ಬರೆದು ಭಾವಚಿತ್ರ ಮುಂದಿರುವ ನಾಗರಹಾವಿನ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೂಜೆ ಬಳಿಕ ಭಕ್ತಾಧಿಗಳಿಗೆ ಸಿಗಲಿದೆ ಶ್ರೀಗಳ ಗದ್ದುಗೆಯ ದರ್ಶನ ಭಾಗ್ಯ

    ಪೂಜೆ ಬಳಿಕ ಭಕ್ತಾಧಿಗಳಿಗೆ ಸಿಗಲಿದೆ ಶ್ರೀಗಳ ಗದ್ದುಗೆಯ ದರ್ಶನ ಭಾಗ್ಯ

    ತುಮಕೂರು: ಶ್ರೀ ಶಿವಕುಮಾರ ಸ್ವಾಮೀಜಿಗಳು ಶಿವೈಕ್ಯರಾದ ಗದ್ದುಗೆಗೆ ಭಕ್ತರು ಬುಧವಾರವೇ ಭೇಟಿ ನೀಡಬಹುದು. ಈಗ ಸಿದ್ಧಲಿಂಗ ಸ್ವಾಮೀಜಿ ಜೊತೆ ವಿವಿಧ ಮಠಾಧಿಶರು ಪೂಜೆ ನಡೆಸುತ್ತಿದ್ದು, ಪೂಜೆ ಮುಗಿದ ಬಳಿಕ ಭಕ್ತಾಧಿಗಳಿಗೆ ಗದ್ದುಗೆ ದರ್ಶನ ಪಡೆಯಲು ಅವಕಾಶ ನೀಡಲಾಗುತ್ತದೆ.

    ನಡೆದಾಡುವ ದೇವರು ಲಿಂಗೈಕ್ಯರಾದ ಗದ್ದುಗೆಯಲ್ಲಿ ಇಂದಿನ ಪೂಜಾ ವಿಧಾನಗಳು ಆರಂಭವಾಗಿದೆ. ಈ ಪೂಜೆ ಸಂದರ್ಭದಲ್ಲಿ ಸಿದ್ಧಲಿಂಗೇಶ್ವರ ಸ್ವಾಮಿಗೆ ಅಭಿಷೇಕ ಹಾಗೂ ಮಂತ್ರಪಠಣೆ ಮಾಡಿ ಪೂಜೆ ಮಾಡಲಾಗುತ್ತದೆ. ಸಿದ್ದಗಂಗೆಯ ಉದ್ದಾನ ಶಿವಯೋಗಿಗಳ ಗದ್ದುಗೆಯಲ್ಲಿ ಪೂಜಾ ವಿಧಾನಗಳು ಆರಂಭಗೊಂಡಿದ್ದು, ಈ ಪೂಜೆ ಪೂರ್ಣಗೊಂಡ ಬಳಿಕ ಶ್ರೀಗಳ ಗದ್ದುಗೆಗೂ ಪೂಜೆ ಸಲ್ಲಿಸಲಾಗುತ್ತದೆ. ಪೂಜೆಯ ನಂತರ ಭಕ್ತರಿಗೆ ಸಿದ್ದಗಂಗಾ ಶ್ರೀಗಳ ಗದ್ದುಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಇದನ್ನೂ ಓದಿ: ಖಾಕಿಗಳಿಗೆ ಸರ್ಕಾರದಿಂದ ವೇತನ ಹೆಚ್ಚಳದ ಉಡುಗೊರೆ!

    ಗದ್ದುಗೆ ಪ್ರವೇಶಕ್ಕೆ ಅನುಮತಿ ಇಲ್ಲದ ಹಿನ್ನೆಲೆಯಲ್ಲಿ ಮಠಕ್ಕೆ ಬಂದಿರುವ ಭಕ್ತಾಧಿಗಳು ಶ್ರೀಗಳು ಕೂರುತ್ತಿದ್ದ ವೇದಿಕೆಯ ದರ್ಶನ ಪಡೆಯುತ್ತಿದ್ದಾರೆ. ಮಠದ ಮುಂಭಾಗದ ಪ್ರಸಾದ ನಿಲಯದ ಪಕ್ಕದಲ್ಲಿಯೇ ಈ ವೇದಿಕೆ ಇದೆ. ಹಾಗೆಯೇ ರಾತ್ರಿ ಬಂದಿರುವ ಭಕ್ತರು ಮಠದ ಆವರಣದಲ್ಲಿ ವಿಶ್ರಾಂತಿ ಪಡೆದು ಬೆಳಗ್ಗೆ ವೇದಿಕೆಯ ದರ್ಶನ ಪಡೆದು ಹಿಂದಿರುಗಿದ್ದಾರೆ. ಸಿದ್ದಗಂಗಾ ಮಠದ ಸುತ್ತ ಪೊಲೀಸ್ ಭದ್ರತೆಯನ್ನು ಮುಂದುವರಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮರಳಿನಲ್ಲಿ ಮೂಡಿಬಂತು ಶತಾಯುಷಿಯ ಕಲಾಕೃತಿ

    ಮರಳಿನಲ್ಲಿ ಮೂಡಿಬಂತು ಶತಾಯುಷಿಯ ಕಲಾಕೃತಿ

    ಧಾರವಾಡ: ಕಲಾವಿದರೊಬ್ಬರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಮರಳಿನ ಕಲಾಕೃತಿಯನ್ನು ರಚಸಿ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ.

    ನಗರದ ಕೆಲಗೇರಿ ನಿವಾಸಿಯಾದ ಮಂಜುನಾಥ ಹಿರೇಮಠ ಸಿದ್ದಗಂಗಾ ಶ್ರೀಗಳ ಕಲಾಕೃತಿಯನ್ನ ರಚನೆ ಮಾಡಿದ್ದಾರೆ. ಇಂದು ಬೆಳಗ್ಗೆಯಿಂದಲೇ ಮಂಜುನಾಥ ಅವರು ಮರಳಿನಲ್ಲಿ ಸಿದ್ದಗಂಗಾ ಶ್ರೀಗಳ ಕಲಾಕೃತಿಯನ್ನು ಮಾಡಿ ಪೂರ್ಣಗೊಳಿಸಿದ್ದು, ಕಲಾಕೃತಿಗೆ ಪೂಜೆ ಸಹ ಸಲ್ಲಿಸಿದ್ದಾರೆ. ಹಾಗೆಯೇ ಮಂಜುನಾಥ್ ಅವರ ಕೆಲಸ ಸ್ಥಳೀಯರ ಮನ ಗೆದ್ದಿದ್ದು, ಸಾರ್ವಜನಿಕರು ಕೂಡ ಶ್ರೀಗಳ ಪ್ರಾರ್ಥನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಗದ್ದುಗೆ ಪ್ರವೇಶಿಸಲು ಶಲ್ಯ, ಪಂಚೆ ತೊಟ್ಟ 8 ಜನ ಪೊಲೀಸರು

    ಈ ಕುರಿತು ಕಲಾವಿದ ಮಂಜುನಾಥ ಹಿರೇಮಠ ಅವರು ಮಾತನಾಡಿ, ಶ್ರೀಗಳ ಅಂತಿಮ ದರ್ಶನ ಪಡೆಯಲು ನಮಗೆ ಸಾಧ್ಯವಾಗಲಿಲ್ಲ. ಸಿದ್ದಗಂಗಾ ಮಠಕ್ಕೆ ತೆರಳಲು ತುಂಬಾ ದೂರ ಪ್ರಯಾಣಿಸಬೇಕು ಹಾಗೆಯೇ ಅಲ್ಲಿ ಈಗಾಗಲೇ ಇರುವ ಜನರ ನಡುವೆ ಸರಿಯಾಗಿ ನಡೆದಾಡುವ ದೇವರ ದರ್ಶನ ಸಿಗುವುದು ಕಷ್ಟ. ಆದರಿಂದ ಈ ಭಾಗದ ಜನರಿಗೆ ಇಲ್ಲಿಂದಲೇ ಶ್ರೀಗಳ ದರ್ಶನ ಭಾಗ್ಯ ಸಿಗಲಿ ಅಂತ ಈ ಮರಳಿನ ಕಲಾಕೃತಿಯನ್ನು ಮಾಡಿದ್ದೇನೆ. ಶ್ರೀಗಳ ಕಲಾಕೃತಿಗೆ ನಮಿಸಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದೇನೆ ಎಂದು ಹೇಳಿದರು.

    https://www.youtube.com/watch?v=VeSYe14zzhk

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಕಾರಿ ರಜೆ ಇದ್ದರೂ ಶಾಲಾ, ಕಾಲೇಜು ಓಪನ್!

    ಸರ್ಕಾರಿ ರಜೆ ಇದ್ದರೂ ಶಾಲಾ, ಕಾಲೇಜು ಓಪನ್!

    ಬೆಂಗಳೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ಸರ್ಕಾರಿ ರಜೆಯನ್ನು ಘೋಷಿಸಲಾಗಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಸರ್ಕಾರಿ ರಜೆ ಇದ್ದರೂ ಶಾಲೆ,ಕಾಲೇಜು ನಡೆಸಿ ಶ್ರೀಗಳಿಗೆ ಅವಮಾನ ಮಾಡಿದ್ದಾರೆ ಎನ್ನುವ ಟೀಕೆ ಕೇಳಿಬಂದಿದೆ.

    ಬೆಂಗಳೂರಿನ ಮತ್ತಿಕೆರೆಯಲ್ಲಿರುವ ಎಂ.ಎಸ್ ರಾಮಯ್ಯ ಇನ್ಸ್ ಟ್ಯೂಟ್ ಆಫ್ ಬಿಸಿನೆಸ್ ಸ್ಟಡೀಸ್ ಕಾಲೇಜಿನಲ್ಲಿ ಪರೀಕ್ಷೆಗಳನ್ನು ನಡೆಸಲಾಗಿದೆ. ಸರ್ಕಾರಿ ಆದೇಶವನ್ನು ಕಾಲೇಜು ಧಿಕ್ಕರಿಸಿದ್ದು, ವಿದ್ಯಾರ್ಥಿಗಳು ಒಲ್ಲದ ಮನಸ್ಸಿನಿಂದ ಕಾಲೇಜಿಗೆ ಬಂದಿದ್ದಾರೆ.

    ಮಂಡ್ಯದ ಕೆ.ಆರ್.ಪೇಟೆ ಪಟ್ಟಣದಲ್ಲಿ ಎರಡು ಖಾಸಗಿ ಕಾಲೇಜುಗಳು ಅಗೌರವ ತೋರಿ ಎಂದಿನಂತೆ ಕಾಲೇಜಿನಲ್ಲಿ ತರಗತಿಯನ್ನು ನಡೆಸಿದೆ. ಕೆ.ಆರ್.ಪೇಟೆ ಪಟ್ಟಣದ ಕ್ರೈಸ್ಟ್ ಕಿಂಗ್ ಹಾಗೂ ಸ್ಕಾಲರ್ಸ್ ಪಿಯು ಕಾಲೇಜುಗಳು ಇಂದು ಓಪನ್ ಆಗಿದೆ. ಸರ್ಕಾರದ ಆದೇಶ ಧಿಕ್ಕರಿಸಿ ಎಂದಿನಂತೆ ತರಗತಿ ನಡೆಸುತ್ತಿದ್ದು, ಶ್ರೀಗಳ ಅನುಯಾಯಿಗಳು ಪ್ರಶ್ನಿಸಿದ್ದಕ್ಕೆ, ಕಾಲೇಜಿಗೆ ನೂರರಷ್ಟು ಫಲಿತಾಂಶ ತರಬೇಕೆಂದು ಕ್ಲಾಸ್ ನಡೆಸುತ್ತಿದ್ದೇವೆ ಎಂಬ ಉತ್ತರ ನೀಡಿದ್ದಾರೆ. ಕಾಲೇಜು ಸಿಬ್ಬಂದಿಯ ಈ ವರ್ತನೆಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ರಾಯಚೂರಿನ ಎಎಂಇ ಸೊಸೈಟಿಯ ವಿಎಸ್‍ಸಿ ಫಾರ್ಮರ್ಸಿ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿದೆ. 3ನೇ ಸೆಮಿಸ್ಟರ್ ಫಾರ್ಮಸಿಟಿಕಲ್ ಎಂಜಿನಿಯರಿಂಗ್ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಪರೀಕ್ಷಾ ಕೊಠಡಿ ಮೇಲ್ವಿಚಾರಕರು ರಜೆಯ ಬಗ್ಗೆ ನಮಗೆ ಮಾಹಿತಿಯಿಲ್ಲ, ದೂರದ ಊರಿನಿಂದ ಬಂದಿದ್ದೇನೆ ಪರೀಕ್ಷೆ ನಡೆಸುತ್ತಿದ್ದೇನೆ ಎಂದಿದ್ದಾರೆ. ಕಾಲೇಜು ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೇ ನೀಡದೇ ಜಾರಿಕೊಳ್ಳುವ ಪ್ರಯತ್ನ ಮಾಡಿದೆ.

    ಬೀದರ್ ನ ಬಸವನಗರದಲ್ಲಿರುವ ದತ್ತಗಿರಿ ಮಹಾರಾಜ್ ಪಬ್ಲಿಕ್ ಸ್ಕೂಲ್ ನಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಸಿಬಿಎಸ್‍ಸಿ ಪೂರಕ ಪರೀಕ್ಷೆ ನಡೆಸಿದೆ. ಬೆಳಗ್ಗೆ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಿ ಬಳಿಕ ಶಾಲೆಯ ಮೂರನೇ ಮಹಡಿಯಲ್ಲಿ ವಿಜ್ಞಾನ ಪರೀಕ್ಷೆ ನಡೆಸಲಾಗಿದೆ. ವಿಷಯ ತಿಳಿದು ಶಾಲೆಗೆ ಪಬ್ಲಿಕ್ ಟಿವಿ ಭೇಟಿ ನೀಡಿದ ಕ್ಯಾಮೆರಾ ನೋಡಿ ಆಡಳಿತ ಮಂಡಳಿಯ ಸದಸ್ಯರು ಕೆಲ ಸಮಯ ಕಕ್ಕಾಬಿಕ್ಕಿಯಾದರು. ಈ ಬಗ್ಗೆ ಪ್ರಿನ್ಸಿಪಾಲ್ ಬಳಿ ಪ್ರಶ್ನಿಸಿದರೆ, ಪರೀಕ್ಷೆ ನಡೆದಿದೆ ಈಗ ಏನು ಮಾಡುವುದು ಎಂದು ಉಡಾಫೆಯ ಉತ್ತರ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಠದಲ್ಲಿ ಅಚ್ಚುಕಟ್ಟಾಗಿ ನಡೆಯುತ್ತಿದೆ ದಾಸೋಹದ ವ್ಯವಸ್ಥೆ

    ಮಠದಲ್ಲಿ ಅಚ್ಚುಕಟ್ಟಾಗಿ ನಡೆಯುತ್ತಿದೆ ದಾಸೋಹದ ವ್ಯವಸ್ಥೆ

    ತುಮಕೂರು: ನಡೆದಾಡುವ ದೇವರು, ಕಲಿಯುಗದ ಬಸವಣ್ಣ ಶತಾಯುಷಿ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಯ ಅಂತಿಮ ದರ್ಶನ ಪಡೆಯಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಸಾಗರ ತುಮಕೂರು ಸಿದ್ದಗಂಗಾ ಮಠದತ್ತ ಹರಿದು ಬರುತ್ತಿದ್ದು, ಭಕ್ತರಿಗಾಗಿ ಅಚ್ಚುಕಟ್ಟಾಗಿ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿದೆ.

    ಶಿವಕುಮಾರ ಸ್ವಾಮೀಜಿಗಳು ಮಠಕ್ಕೆ ಆಗಮಿಸುವ ಭಕ್ತರಿಗೆ ದಾಸೋಹ ತಪ್ಪಬಾರದು. ತಡವಾದರೂ ದಾಸೋಹ ಸಿಗದೇ ಭಕ್ತರು ತೆರಳಬಾರದು ಎಂದು ಹೇಳುತ್ತಿದ್ದರು. ನಡೆದಾಡುವ ದೇವರ ಈ ವಾಕ್ಯ ಈಗಲೂ ಪಾಲನೆಯಾಗುತ್ತಿದ್ದು, ಅಂತಿಮ ದರ್ಶನಕ್ಕೆ ಬರುತ್ತಿರುವ ಭಕ್ತರಿಗೆ ಯಾವುದೇ ಅನಾನುಕೂಲ ಉಂಟಾಗದಂತೆ ಹಾಗೂ ಪ್ರಸಾದ ವ್ಯವಸ್ಥೆಯಲ್ಲಿ ಯಾವುದೇ ತೊಂದರೆಯಾಗದಂತೆ ರಾತ್ರಿಯಿಂದಲೇ ಪ್ರಸಾದವನ್ನ ತಯಾರಿಸಿ, ಊಟದ ವ್ಯವಸ್ಥೆಯನ್ನ ಅಚ್ಚುಕಟ್ಟಾಗಿ ನೀಡಲಾಗುತ್ತಿದೆ.  ಇದನ್ನೂ ಓದಿ:ನಡೆದಾಡುವ ದೇವರ ಅಂತಿಮ ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ

    ದಾಸೋಹದಲ್ಲಿ ಸಹಾಯ ಮಾಡಲು ಹಲವಾರು ಭಕ್ತರು ಕೂಡ ಕೈ ಜೋಡಿಸುತ್ತಿದ್ದಾರೆ. ದೇವರ ಮೇಲಿನ ಪ್ರೀತಿಗಾಗಿ ದಾಸೋಹ ಕೇಂದ್ರಕ್ಕೆ ಬಂದು ತರಕಾರಿ ಕತ್ತರಿಸಿಕೊಟ್ಟು, ಭಕ್ತ ಸಮೂಹ ಪ್ರಸಾದ ತಯಾರಿಗೆ ಸಹಾಯ ಮಾಡುತ್ತಿದ್ದಾರೆ. ಇದನ್ನೂ ಓದಿ: ಶ್ರೀಗಳು ಇಲ್ಲದ ರಾತ್ರಿ ಕಳೆದ ಮಠದ ಮಕ್ಕಳು- ಒಬ್ಬರಿಗೆ ಒಬ್ಬರು ಆಸರೆಯಾಗಿ ಮಲಗಿದ್ರು

    ಸಿದ್ದಗಂಗಾ ಮಠದಲ್ಲಿ ಒಟ್ಟು 10 ಕಡೆ ದಾಸೋಹ ವ್ಯವಸ್ಥೆ ನಡೆಯುತ್ತಿದ್ದು, ಹೊಸ ಮಠ ದಾಸೋಹ ಭವನ ಹಾಗೂ ಹೊಸ ಮಠದ ಶ್ರೀಗಳ ಕಚೇರಿಯ ಬಳಿ ಕೂಡ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಹೊಸ ಮಠದ ಹಿಂಭಾಗದಲ್ಲಿ 3 ಕಡೆ, ಕ್ಯಾತಸಂದ್ರ ಸರ್ಕಲ್, ಮಠದ ಹಿಂದಿನ ಗೇಟ್, ಬಂಡೇಪಾಳ್ಯ, ಶ್ರೀನಗರ ಕ್ರಾಸ್ ಹಾಗೂ ವಜ್ರಮಹೋತ್ಸವ ಕಟ್ಟಡದ ಬಳಿ ತಲಾ ಒಂದೊಂದರಂತೆ ಒಟ್ಟು 10 ಕಡೆ ದಾಸೋಹದ ವ್ಯವಸ್ಥೆ ಮಾಡಲಾಗಿದೆ.

    ಸಿದ್ದಗಂಗಾ ಮಠಕ್ಕೆ ಬಂದ ಭಕ್ತರು ಖಾಲಿ ಹೊಟ್ಟೆಯಲ್ಲಿ ಹೋಗಬಾರದೆಂದು ಅನ್ನದಾಸೋಹ 24 ಗಂಟೆಯಿಂದ ನಡೆಯುತ್ತಿದೆ. ಇವರೆಗೆ 2.5 ಲಕ್ಷ ಜನ ಅನ್ನ ದಾಸೋಹ ಸಹ ಪಡೆದಿದ್ದಾರೆ. ಉಪ್ಪಿಟ್ಟು, ಕೇಸರಿ ಬಾತ್, ಅನ್ನ, ಸಾಂಬರ್ ಸೇರಿದಂತೆ ಹಲವು ಪದಾರ್ಥಗಳು ಸಿದ್ಧವಾಗುತ್ತಲೇ ಇದೆ. ಸಿದ್ದಗಂಗಾ ಮಠದಲ್ಲಿ ಅಡವಿ ಶ್ರೀಗಳು ಆರಂಭಿಸಿದ ಅನ್ನ ದಾಸೋಹ ಪದ್ಧತಿ ನೂರಾರು ವರ್ಷದಿಂದ ನಡೆದುಕೊಂಡು ಬಂದಿದ್ದು, ಇಂದು ಕೂಡ ಮುಂದುವರಿದಿದೆ.  ಇದನ್ನೂ ಓದಿ:ಜೀವಿತಾವಧಿಯಲ್ಲಿ 5 ಬಾರಿ ವಿಮಾನ ಪ್ರಯಾಣ – ಸರಳತೆಗೆ ಮತ್ತೊಂದು ಹೆಸರೇ ‘ನಡೆದಾಡುವ ದೇವರು’

    ಕೇವಲ ಸಿದ್ದಗಂಗಾ ಮಠದಲ್ಲಿ ಮಾತ್ರವಲ್ಲದೇ ತುಮಕೂರು ನಾಗರೀಕರ ವೇದಿಕೆಯಿಂದ ಉಚಿತ ಊಟ ಹಾಗೂ ಉಪಹಾರ ವ್ಯವಸ್ಥೆ ಮಾಡಲಾಗಿದೆ. ಅಂತಿಮ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಉಪಹಾರ ಮತ್ತು ಊಟವನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಒಟ್ಟು ಜಿಲ್ಲೆಯಲ್ಲಿ 60 ಕಡೆ ರೈಸ್ ಮಿಲ್ ಮಾಲೀಕರ ಸಂಘ ಊಟ, ಉಪಹಾರ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ. ಹಾಗೆಯೇ ಜಿಲ್ಲೆಯ ಹಲವೆಡೆ ಹೋಟೆಲ್‍ಗಳ ಬಂದ್ ಹಿನ್ನಲೆ ಊಟ, ಉಪಹಾರಕ್ಕೆ ಸಮಸ್ಯೆಯಾಗದಂತೆ ನಾಗರೀಕರು ಹಾಗು ಸಂಘ, ಸಂಸ್ಥೆಗಳು ಕಾಳಜಿ ವಹಿಸಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹಾಗೂ ಬಸ್ ನಿಲ್ದಾಣದ ಬಳಿ ಊಟ, ಉಪಹಾರ ವ್ಯವಸ್ಥೆ ಮಾಡಲಾಗಿದೆ.

    https://www.youtube.com/watch?v=mxA9HE4qgJQ

    https://www.youtube.com/watch?v=WTHN3QhN8Zg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗುರುವಾರದಿಂದ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏನೆಲ್ಲ ಬದಲಾವಣೆ ಆಯ್ತು – ವೈದ್ಯ ಪರಮೇಶ್ ಹೇಳ್ತಾರೆ ಓದಿ

    ಗುರುವಾರದಿಂದ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏನೆಲ್ಲ ಬದಲಾವಣೆ ಆಯ್ತು – ವೈದ್ಯ ಪರಮೇಶ್ ಹೇಳ್ತಾರೆ ಓದಿ

    – ಶನಿವಾರ ಮಧ್ಯಾಹ್ನದಿಂದ ಕಿಡ್ನಿಯಲ್ಲಿ ತೊಂದರೆ
    – ಸೋಮವಾರ ಕಿರಿಯ ಶ್ರೀಗಳನ್ನು 30 ಸೆಕೆಂಡ್ ದಿಟ್ಟಿಸಿ ನೋಡಿದ್ರು
    – ಆಸ್ಪತ್ರೆ ಹೇಗಿದೆ? ಹೇಗೆ ನಡೆಯುತ್ತಿದೆ? – ಪ್ರಶ್ನಿಸಿದ್ದ ಶ್ರೀಗಳು

    ಬೆಂಗಳೂರು: ಸುದೀರ್ಘ ಕಾಲದವರೆಗೂ ಸಿದ್ದಗಂಗಾ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದ್ದ ಡಾ.ಪರಮೇಶ್ ಅವರು, ಗುರುವಾರದಿಂದ ಭಾನುವಾರದವರೆಗೆ ಶ್ರೀಗಳ ಆರೋಗ್ಯದಲ್ಲಾದ ಬದಲಾವಣೆಗಳ ಕುರಿತು ಪಬ್ಲಿಕ್ ಟಿವಿಗೆ ವಿವರಣೆ ನೀಡಿದ್ದಾರೆ.

    ಬಿಗ್ ಬುಲೆಟಿನ್ ನಲ್ಲಿ ಮಾತನಾಡಿದ ಅವರು, ಶ್ರೀಗಳ ದೇಹದಲ್ಲಿ ಪ್ರೊಟೀನ್ ಅಂಶ ಉತ್ಪಾದನೆ ನಿಂತು ಹೋಗಿತ್ತು. ಶನಿವಾರ ಮಧ್ಯಾಹ್ನದಿಂದ ಶ್ರೀಗಳ ದೇಹದಲ್ಲಿ ಬಿಪಿ, ಪಲ್ಸ್ ರೇಟ್ ಕಡಿಮೆಯಾಗತೊಡಗಿತು. ಕಿಡ್ನಿ ಸರಿಯಾಗಿ ಕೆಲಸ ಮಾಡುವುದಿಲ್ಲ ಎನ್ನುವುದು ಗೊತ್ತಾಯಿತು. ಈ ಸಂದರ್ಭದಲ್ಲಿ ಗುರುಗಳನ್ನು ಮಠದಿಂದ ಆಸ್ಪತ್ರೆಗೆ ಶಿಫ್ಟ್ ಮಾಡಿದರೆ ಹೇಗೆ ಎನ್ನುವ ಪ್ರಶ್ನೆ ವೈದ್ಯರಲ್ಲಿ ಬಂತು. ಆದರೆ ಡಯಾಲಿಸಿಸ್ ಮಾಡಿದರೆ ಶ್ರೀಗಳಿಗೆ ನಾವು ಮತ್ತಷ್ಟು ನೋವು ನೀಡಿದಂತೆ ಆಗುತ್ತದೆ. ಮತ್ತಷ್ಟು ಕಷ್ಟ ನೀಡುವುದು ಸರಿಯಲ್ಲ ಎನ್ನುವ ತೀರ್ಮಾನಕ್ಕೆ ಬಂದೆವು. ನಾವು ಪ್ರಯತ್ನ ನಡೆಸಿದರೂ ಕಿಡ್ನಿ ಸಾಮಾನ್ಯ ಸ್ಥಿತಿಗೆ ಬರಲಿಲ್ಲ. ಇದು ಶ್ರೀಗಳ ಶಿವೈಕ್ಯದ ಮುನ್ಸೂಚನೆ ಎನ್ನುವುದನ್ನು ನಾವು ಅರಿತೆವು ಎಂದು ಹೇಳಿದರು. ಇದನ್ನೂ ಓದಿ:ನಡೆದಾಡುವ ದೇವರ ಅಂತಿಮ ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ

    111 ವರ್ಷದಲ್ಲೂ ಸ್ವಾಮೀಜಿಗಳು ಈ ಎಲ್ಲ ಚಿಕಿತ್ಸೆಗೆ ಹೇಗೆ ಸ್ಪಂದನೆ ನೀಡುತ್ತಿದ್ದರು ಎನ್ನುವ ಪ್ರಶ್ನೆಗೆ, ನಾನು ಡಿಸೆಂಬರ್ 1 ರಿಂದ ದಿನವೂ ಹತ್ತಿರ 20 ಗಂಟೆ ಸ್ವಾಮೀಜಿಗಳ ಜೊತೆಯಲ್ಲೇ ಇರುತ್ತಿದ್ದೆ. ಅವರನ್ನು ಬಹಳ ವರ್ಷದಿಂದ ಹತ್ತಿರದಿಂದ ನೋಡಿದ್ದೇನೆ. 111 ವರ್ಷ ಬದುಕಿರುವುದು ಪವಾಡವಾದರೆ ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ರೀತಿಯೇ ಒಂದು ದೊಡ್ಡ ಪವಾಡ. ಒಮ್ಮೊಮ್ಮೊ ಬಿಪಿ, ಹೃದಯ ಬಡಿತ ಕಡಿಮೆ ಆಗುತ್ತಿದ್ದರೆ, ಒಮ್ಮೆ ದಿಢೀರ್ ಏರಿಕೆಯಾಗುತ್ತಿತ್ತು. 60, 70 ವರ್ಷದವರಿಗೆ ಈ ರೀತಿ ಆದರೆ ಅವರಿಗೆ ಕಾಯಿಲೆಯನ್ನು ತಡೆದುಕೊಳ್ಳಲು ಶಕ್ತಿ ಇರುವುದಿಲ್ಲ. ಆದರೆ ಸ್ವಾಮೀಜಿಯವರ ದೇಹದಲ್ಲಿ 140-150 ಹೃದಯ ಬಡಿತ ಆಗುತ್ತಿತ್ತು. ಆ ರೀತಿ ಹೃದಯ ಬಡಿತ ಜಾಸ್ತಿ ಆದರೆ ವ್ಯಕ್ತಿ ಬದುಕುವುದು ಕಷ್ಟ. ಮತ್ತೆ ನಾವು ಚಿಕಿತ್ಸೆ ನೀಡಿದಾಗ 70-80 ಹೃದಯ ಬಡಿತ ಇಳಿಕೆಯಾಗುತಿತ್ತು. ಇದು ನಮಗೆ ಅಚ್ಚರಿಯಾಗಿತ್ತು. ವೈದ್ಯ ಲೋಕಕ್ಕೆ ಇದೊಂದು ಪವಾಡವೇ ಸರಿ ಎಂದು ಡಾ.ಪರಮೇಶ್ ಹೇಳಿದರು. ಇದನ್ನೂ ಓದಿ: ಶ್ರೀಗಳು ಇಲ್ಲದ ರಾತ್ರಿ ಕಳೆದ ಮಠದ ಮಕ್ಕಳು- ಒಬ್ಬರಿಗೆ ಒಬ್ಬರು ಆಸರೆಯಾಗಿ ಮಲಗಿದ್ರು

    ಚೆನ್ನೈನಲ್ಲಿದ್ದಾಗ ಕಿರಿಯ ಶ್ರೀಗಳಲ್ಲಿ ವಯಸ್ಸು ಎಷ್ಟು ಎಂದು ಕೇಳಿದಾಗ 111 ಅಂದಿದ್ದಕ್ಕೆ ಇದು ಬಹಳ ಆಯ್ತು ಎಂದಿದ್ದರಂತೆ. ಇದು ಶ್ರೀಗಳು ಮಾತನಾಡಿದ ಕೊನೆಯ ಮಾತೇ ಎಂದು ಕೇಳಿದ ಪ್ರಶ್ನೆಗೆ, ನಾವು ಚೆನ್ನೈಯಿಂದ ವಾಪಸ್ ಬಂದಾಗ ಕೂಡ ಅವರು ಮಾತನಾಡಿದ್ದಾರೆ. ಬಳಿಕ ಅಲ್ಲಿಂದ ಅವರನ್ನು ಸಿದ್ದಗಂಗಾ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆಸ್ಪತ್ರೆ ಹೇಗಿದೆ? ಆಸ್ಪತ್ರೆ ಹೇಗೆ ನಡೆಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದರು. ಇತ್ತೀಚೆಗೆ ಹಳೆ ಮಠಕ್ಕೆ ಬಂದಾಗ 4-5 ದಿನಗಳಲ್ಲಿ ಅವರು ಬಹಳ ಆಯಾಸಗೊಂಡಿದ್ದರು. ಆಗ ಸ್ವಾಮೀಜಿ ಅವರು ಚೇತರಿಕೆ ಆಗುತ್ತಿಲ್ಲ ಎಂದು ಅನಿಸುತ್ತಿತ್ತು. ಆದರು ನಾವು ಚಿಕಿತ್ಸೆ ನೀಡುತ್ತಿದ್ದೇವು ಎಂದು ವಿವರಿಸಿದರು. ಇದನ್ನೂ ಓದಿ:ಜೀವಿತಾವಧಿಯಲ್ಲಿ 5 ಬಾರಿ ವಿಮಾನ ಪ್ರಯಾಣ – ಸರಳತೆಗೆ ಮತ್ತೊಂದು ಹೆಸರೇ ‘ನಡೆದಾಡುವ ದೇವರು’

    ಭಾನುವಾರ ಸಂಜೆಯಿಂದ ನಮಗೆ ಯಾವುದೇ ಭರವಸೆ ಇರಲಿಲ್ಲ. ಅಚ್ಚರಿ ಏನೆಂದರೆ ಸೋಮವಾರ ಚಿಕ್ಕ ಸ್ವಾಮೀಜಿ ಅವರು ಹಳೆ ಮಠಕ್ಕೆ ಬಂದು ಸ್ವಾಮೀಜಿ ಅವರ ಪಕ್ಕದಲ್ಲಿ ನಿಂತು ಇಷ್ಟಲಿಂಗದ ಪೂಜೆ ಮಾಡಿದ್ದರು. ಎರಡು ದಿನದಿಂದ ಸ್ವಾಮೀಜಿ ಕಣ್ಣು ಬಿಡದೇ ಗಾಢ ನಿದ್ರೆಯಲ್ಲಿದ್ದರು. ಸೋಮವಾರ ಕಿರಿಯ ಸ್ವಾಮೀಜಿ ಪೂಜೆ ಮಾಡಿದ ನಂತರ ಶ್ರೀಗಳು ಕಣ್ಣು ಬಿಟ್ಟು ಕಿರಿಯ ಸ್ವಾಮೀಜಿ ಅವರನ್ನು 30 ಸೆಕೆಂಡ್ ದಿಟ್ಟಿಸಿ ನೋಡುತ್ತಿದ್ದರು. ಅದೇ ಅವರು ಕೊನೆಯದಾಗಿ ಕಣ್ಣು ಬಿಟ್ಟಿದ್ದು, ಆದಾದ ಬಳಿಕ ಅವರು ಕಣ್ಣು ಬಿಡಲೇ ಇಲ್ಲ ಎಂದು ಶ್ರೀಗಳ ಆಪ್ತ ವೈದ್ಯ ಪರಮೇಶ್ ಮಾಹಿತಿ ನೀಡಿದರು.

    https://www.youtube.com/watch?v=mxA9HE4qgJQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಡೆದಾಡುವ ದೇವರ ಅಂತಿಮ ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ

    ನಡೆದಾಡುವ ದೇವರ ಅಂತಿಮ ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ

    ತುಮಕೂರು: ಶ್ರೀ ಶಿವಕುಮಾರ ಸ್ವಾಮೀಜಿಗಳ ಅಂತಿಮ ದರ್ಶನ ಪಡೆಯಲು ಕಳೆದ ರಾತ್ರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಈ ವೇಳೆ ಜನ ಸಾಗರದಿಂದ ಮಹಿಳೆಯರು ವೃದ್ಧರು ಅವಕಾಶ ಸಿಗದೇ ಇಂದು ಬೆಳಗ್ಗೆ ಶ್ರೀಗಳ ದರ್ಶನಕ್ಕೆ ಮುಂದಾಗಿದ್ದಾರೆ.

    ರಾತ್ರಿ ವೇಳೆ ಬಂದಿರುವ ಭಕ್ತರು ಸಿದ್ದಗಂಗಾ ಮಠದ ಆವರಣದಲ್ಲಿಯೇ ಕೆಲಕಾಲ ವಿಶ್ರಾಂತಿಯನ್ನ ಪಡೆದರು. ಇಂದು ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಭಕ್ತರ ದಾಸೋಹಕ್ಕೆ ಯಾವುದೇ ಸಮಸ್ಯೆಯಾಗದೇ ಇರಲು ಮಠದ ಸುತ್ತಲೂ ಹತ್ತು ಕಡೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: 70ರ ದಶಕದಲ್ಲೇ ಗದ್ದುಗೆ ನಿರ್ಮಾಣಕ್ಕೆ ಜಾಗ ಸೂಚಿಸಿದ್ದ ಶ್ರೀ: ಭವನದ ವಿಶೇಷತೆ ಏನು?

    ಸಿದ್ದಗಂಗಾ ಮಠದಲ್ಲಿ ಮಾತ್ರವಲ್ಲದೇ ಮಠದ ಭಕ್ತರಿಂದ ತುಮಕೂರು ಸುತ್ತಮುತ್ತಲಿನ ಹಲೆವೆಡೆ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ದೂರದ ಊರಿನಿಂದ ಸಿದ್ದಗಂಗಾ ಮಠಕ್ಕೆ ಹೋಗುವ ಜನರಿಗಾಗಿ ಈ ವ್ಯವಸ್ಥೆ ಕಲ್ಪಿಸಲಾಗಿದೆ. ರಾತ್ರಿ ವೇಳೆಯೇ 1 ಲಕ್ಷಕ್ಕೂ ಹೆಚ್ಚು ಭಕ್ತರು ಅಂತಿಮ ದರ್ಶನ ಪಡೆದಿದ್ದಾರೆ. ಸರದಿ ಸಾಲಿನಲ್ಲಿ ಬಂದು ಭಕ್ತರು ಶ್ರೀಗಳ ದರ್ಶನ ಪಡೆಯುತ್ತಿದ್ದಾರೆ.

    ನಟಿ ಸುಮಲತ, ಮಗ ಅಭಿಷೇಕ್ ಗೌಡ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ, ದೊಡ್ಡಣ್ಣ ಶ್ರೀಗಳ ಅಂತಿಮ ದರ್ಶನ ಪಡೆದಿದ್ದಾರೆ. ಸಾಗರೋಪಾದಿಯಲ್ಲಿ ಬರುತ್ತಿರುವ ಭಕ್ತಾದಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಡವರು, ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ – ಜ್ಞಾನಗಂಗೆಯನ್ನು ಧರೆಗಿಳಿಸಿದ ದೇವರು

    ಬಡವರು, ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ – ಜ್ಞಾನಗಂಗೆಯನ್ನು ಧರೆಗಿಳಿಸಿದ ದೇವರು

    ಸಿದ್ದಗಂಗಾ ಮಠದಲ್ಲಿ ಶಿಕ್ಷಣ ಸೇವೆಯ ಬೀಜಾಂಕುರವಾಗಿದ್ದು 1913 ರಲ್ಲಿ. ಸಿದ್ದಗಂಗಾ ಶ್ರೀಗಳ ಧರ್ಮಸ್ವೀಕಾರದ ನಂತರ ಸರಸ್ವತಿ ಶಾಶ್ವತವಾಗಿ ನೆಲೆಸಿದಳು. ವಿದ್ಯಾಬಿಕ್ಷೆ ಕೊಟ್ಟ ಶ್ರೀಗಳು ಲಕ್ಷ ಲಕ್ಷ ಜನರ ಪಾಲಿಗೆ ಜ್ಞಾನ ಗಂಗೆಯನ್ನು ಧರೆಗಿಳಿಸಿದ ದೇವರಾದರು.

    ಸಂಸ್ಕೃತವೆಂದರೆ ಒಂದು ವರ್ಗದರಿಗೆ ಮಾತ್ರ ಎಂಬಂತೆ ಇದ್ದ ಸನ್ನಿವೇಶದಲ್ಲಿ ಸಿದ್ದಗಂಗೆಯಲ್ಲಿ ಎಲ್ಲಾ ವರ್ಗದ ಮಕ್ಕಳಿಗೆ ಜಾತಿ ಮತ ಧರ್ಮ ಪಂಥ ಎಲ್ಲವನ್ನು ಮೀರಿ ಸಂಸ್ಕೃತಾಭ್ಯಾಸಕ್ಕೆ ಅವಕಾಶ ಕಲಿಸಿಕೊಟ್ಟಿರುವುದು ಒಂದು ದಾಖಲೆ. 20 ವಿದ್ಯಾರ್ಥಿಗಳಿಂದ ಆರಂಭಿಸಿದ ಶ್ರೀ ಸಿದ್ದಲಿಂಗೇಶ್ವರ ಸಂಸ್ಕೃತ ಪಾಠಶಾಲೆ ಇದು ಬಹುಶಃ ದೊಡ್ಡದಾದ ಮಹಾವಿದ್ಯಾಲಯವಾಗಿ ಬೆಳೆದಿರುವುದೇ ಇದಕ್ಕೆ ಸಾಕ್ಷಿ. ಇದನ್ನೂ ಓದಿ:2011ರಲ್ಲೇ ಕಿರಿಯ ಶ್ರೀಗಳಿಗೆ ಮಠದ ಅಧಿಕಾರ ಹಸ್ತಾಂತರಿಸಿದ್ದರು ಶ್ರೀಗಳು!

    ಶ್ರೀಮಠದ ಸೇವೆಗೆ ಸಿದ್ದಗಂಗಾ ಶ್ರೀ ನಿಂತ ನಂತರ ಸಿದ್ದಗಂಗಾ ಕ್ಷೇತ್ರದ ಶಿಕ್ಷಣ ಸೇವೆ ಮಹಾ ವೃಕ್ಷವಾಗಿ ಬೆಳೆಯತೊಡಗಿತ್ತು. ಗ್ರಾಮೀಣ ಜನರ ಬದುಕಿನ ಸುಧಾರಣೆ ಆಗಬೇಕಾದರೆ ಶಿಕ್ಷಣವೊಂದೇ ತಾರಕ ಮಂತ್ರ ಅಂತ ಶ್ರೀಗಳು ಅರಿತರು. ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದ ಅವಕಾಶ ಒದಗಿಸಿದರು. ಇದನ್ನೂ ಓದಿ: ಶ್ರೇಷ್ಠ ನ್ಯಾಯಮೂರ್ತಿಗಳು – ವರ್ಷಗಟ್ಟಲೇ ನ್ಯಾಯಾಲಯದಲ್ಲಿ ಮುಗಿಯದ ಪ್ರಕರಣ ಒಂದೇ ದಿನದಲ್ಲಿ ಇತ್ಯರ್ಥ!

    ಜೋಳಿಗೆ ಹಿಡಿದು ಬಿಕ್ಷಾಟನೆಗೆ ಹೋಗುತ್ತಿದ್ದ ಶ್ರೀಗಳು ಗ್ರಾಮಾಂತರ ಭಾಗದಲ್ಲಿ ಶಾಲೆಗೆ ಹೋಗಬೇಕಾಗಿದ್ದ ಪುಟಾಣಿ ಮಕ್ಕಳು ಕೂಲಿಗೆ ಹೋಗುತ್ತಿದ್ದ ದೃಶ್ಯ ಶ್ರೀಗಳನ್ನು ಬಹುವಾಗಿ ಕಾಡಿತ್ತು. ಅಲ್ಲಿಂದಲೇ ಶಿಕ್ಷಣ ಕ್ರಾಂತಿಯ ಮಂತ್ರ ಪಠಿಸಿಯೇ ಬಿಟ್ಟರು. ಭಿಕ್ಷಾ ಜೋಳಿಗೆಯ ಬಲದಿಂದಲೇ ಶಾಲೆ ಆರಂಭಿಸಿ ಅನಾಥಲಾಯದ ಸೇವೆ ವಿಸ್ತರಿಸಿದ್ರು.

    ಶ್ರೀಮಠದ ಎಲ್ಲಾ ಶಾಲಾ ಕಾಲೇಜುಗಳಿಗೆ ಪೂಜ್ಯರೇ ಅಧ್ಯಕ್ಷರಾಗಿ ಶಿಕ್ಷಣ ಕ್ರಾಂತಿಯನ್ನು ಪಸರಿಸುವ ಕಾರ್ಯವನ್ನು ಅವಿರತವಾಗಿ ಶುರುಮಾಡಿದರು. ಈ ಶಾಲೆಗೆ ಸೇರಲು ಬಡತನವೊಂದೆ ಸರ್ಟಿಫಿಕೇಟ್. ಎಲ್ಲ ಜಾತಿ ಧರ್ಮಗಳನ್ನು ಮೀರಿದ ಶಿಕ್ಷಣ ಇಲ್ಲಿ ಲಭ್ಯ.

    ಹಿರಿಯ ಸಾಹಿತಿ ಗೊ.ರು ಚೆನ್ನಬಸಪ್ಪ ಹೇಳಿದಂತೆ ಒಂದು ಬಾರಿ ಮಠದ ಅವರಣದಲ್ಲಿ ಪುಟಾಣಿ ಬಡ ಮುಸ್ಲಿಂ ಬಾಲಕನೊಬ್ಬ ವಿದ್ಯಾಭ್ಯಾಸ ಕಲಿಯಲು ಶ್ರೀಗಳ ಅನುಮತಿಗಾಗಿ ಕಾಯುತ್ತ ನಿಂತಿದ್ದಾನಂತೆ. ಆತನ ಪೋಷಕರಿಗೆ ಒಳಗೊಳಗೆ ಭಯ. ಅಯ್ಯೋ ಶ್ರೀಗಳು ನಮ್ಮನ್ನೆಲ್ಲ ಭೇಟಿಯಾಗ್ತಾರಾ? ಯಾರ ರಾಜಕೀಯ ನಾಯಕರ ದೊಡ್ಡವರ ರೆಫರೆನ್ಸ್ ಇಲ್ಲದೇ ಶ್ರೀಗಳನ್ನು ಭೇಟಿಯಾಗೋದಾದ್ರೂ ಹೇಗೆ ಅಂತಾ ಭಯ ಪಡುತ್ತಿದ್ದರಂತೆ. ಆಗಲೇ ಅಲ್ಲೊಬ್ಬ ಪುಟಾಣಿ ಮಠದ ವಿದ್ಯಾರ್ಥಿ ಸಿಕ್ಕಾಗ ಶ್ರೀಗಳು ಭೇಟಿ ಮಾಡೋದಾದ್ರೇ ಯಾರಿಂದ ಶಿಪಾರಸ್ಸು ಮಾಡಬೇಕು ಏನಾದ್ರೂ ಗೊತ್ತಿದ್ಯಾ? ನೀವೆಲ್ಲ ಹೇಗೆ ಬಂದ್ರಿ ಇಲ್ಲಗೆ ಅಂದ್ರಂತೆ. ಇಲ್ಲಿ ವಿದ್ಯಾಭ್ಯಾಸಕ್ಕೆ ಬಡತನ, ಕಲಿಯುವ ಹಪಾಹಪಿಯೊಂದೆ ಸರ್ಟಿಫಿಕೇಟು ಶ್ರೀಗಳು ಎಲ್ಲಾ ಭಕ್ತರನ್ನು ಭೇಟಿಯಾಗ್ತಾರೆ. ಅವರ ಭೇಟಿಗೆ ಬೇರೆಯವರ ಶಿಫಾರಸು ಯಾಕೆ ಅಂತಾ ಚೋಟುದ್ಧ ಬಾಲಕ ಹೇಳಿ ಹೋದನಂತೆ.

    ಥೇಟು ಬಾಲಕ ಹೇಳಿದಂತೆ ದೈವಸ್ವರೂಪಿ ಶ್ರೀಗಳು ಈ ಬಡ ಮುಸ್ಲಿಂ ಬಾಲಕನ ಪೋಷಕರನ್ನು ಭೇಟಿಯಾಗಿ ಸುಮಾರು ಅರ್ಧಗಂಟೆ ಮಾತಾನಾಡಿ ಶಾಲೆಗೆ ಸೇರಿಸಿಕೊಂಡರಂತೆ. ಹೀಗೆ ಬಡಮಕ್ಕಳಿಗೆ , ಗ್ರಾಮೀಣ ಭಾಗದ ಮಕ್ಕಳಿಗಷ್ಟೇ ಇಲ್ಲಿ ಮೊದಲ ಆದ್ಯತೆಯನ್ನು ಗುರುಗಳು ಕೊಡುತ್ತಿದ್ದರು. ಇದನ್ನೂ ಓದಿ: ಓದುವುದರ ಜೊತೆಗೆ ಸಿದ್ದಗಂಗಾ ವಿದ್ಯಾರ್ಥಿಗಳು ಗದ್ದೆ ಕೆಲಸಕ್ಕೂ ಸೈ!

    ಸಿದ್ದಗಂಗಾ ಕ್ಷೇತ್ರ ಕನ್ನಡ ನಾಡಿನ ಬೃಹತ್ ಶೈಕ್ಷಣಿಕ ಕೇಂದ್ರಗಳಲ್ಲಿ ಒಂದಾಗಿದೆ. ಬೇಸಗೆಯ ರಜೆಯ ನಂತರ ಶಾಲೆಗಳ ಪುನಾರಾರಂಭದಲ್ಲಿ ಸಿದ್ದಗಂಗಾ ಕ್ಷೇತ್ರವನ್ನು ನೋಡಬೇಕು. ಸಿದ್ದಗಂಗಾ ಸುತ್ತಮುತ್ತಿನ ಅಷ್ಟೇ ಅಲ್ಲದೇ ದೂರದ ಬೀದರ್ ಬೆಳಗಾವಿ ನೆರೆಯ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳ ಬಡಮಕ್ಕಳು ತಮ್ಮ ತಂದೆ ತಾಯಿಗಳೊಡನೆ ತಲೆಯ ಮೇಲೆ ಪುಟ್ಟ ಪೆಟ್ಟಿಗೆ ಹೊತ್ತು ಬರುವ ದೃಶ್ಯ ನಿಜಕ್ಕೂ ಹೃದಯಸ್ಪರ್ಶಿ. ಸಿದ್ದಗಂಗಾ ಮಠಕ್ಕೆ ತಮ್ಮ ಮಕ್ಕಳು ಸೇರಿದವರೆಂದರೆ ಹೆತ್ತವರಿಗೆ ಆ ಮಕ್ಕಳನ್ನು ತಾಯಿ ಮಡಿಲಲ್ಲಿ ಇಟ್ಟಷ್ಟು ನೆಮ್ಮದಿ.

    ಸಿದ್ದಗಂಗಾ ತಾಂತ್ರಿಕ ಮಹಾ ವಿದ್ಯಾಲಯ, ಆಡಳಿತ ಮಹಾವಿದ್ಯಾಲಯ, ಶಿಕ್ಷಣ ಮಹಾವಿದ್ಯಾಲಯ, ಶಿಕ್ಷಕರ ತರಬೇತಿ ಕೇಂದ್ರ, ಪಾಲಿಟೆಕ್ನಿಕ್ ಕೇಂದ್ರ, ನರ್ಸಿಂಗ್ ಕಾಲೇಜ್, ಕೈಗಾರಿಕಾ ತರಬೇತಿ ಕೇಂದ್ರ, ಅಂಧ ಮಕ್ಕಳ ಶಾಲೆ, ಸಂಸ್ಕೃತ ಪಾಠಶಾಲೆ ಫಾರ್ಮಸಿ ಕಾಲೇಜು ಹೀಗೆ ಶ್ರೀಮಠದ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಒಟ್ಟು 125 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿವೆ.

    ಶಿಕ್ಷಕರ ತರಬೇತಿ ಕೇಂದ್ರವಿರಲಿ, ಗ್ರಂಥ ಭಂಡಾರವಿರಲಿ, ಪಾಠ ಶಾಲೆಯಿರಲಿ, ಆಟದ ಮೈದಾನವಿರಲಿ, ಎಲ್ಲರೂ ಕೂಡಿ ಬದುಕುವ ಕಮ್ಮಟವಾಗಿದೆ ಸಿದ್ದಗಂಗಾ ಕ್ಷೇತ್ರ.

    https://www.youtube.com/watch?v=FbJf6G0kt3E

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೇಷ್ಠ ನ್ಯಾಯಮೂರ್ತಿಗಳು – ವರ್ಷಗಟ್ಟಲೇ ನ್ಯಾಯಾಲಯದಲ್ಲಿ ಮುಗಿಯದ ಪ್ರಕರಣ ಒಂದೇ ದಿನದಲ್ಲಿ ಇತ್ಯರ್ಥ!

    ಶ್ರೇಷ್ಠ ನ್ಯಾಯಮೂರ್ತಿಗಳು – ವರ್ಷಗಟ್ಟಲೇ ನ್ಯಾಯಾಲಯದಲ್ಲಿ ಮುಗಿಯದ ಪ್ರಕರಣ ಒಂದೇ ದಿನದಲ್ಲಿ ಇತ್ಯರ್ಥ!

    ಳ್ಳಿಗಳಲ್ಲಿ ತಂಟೆ ತಕರಾರು, ವ್ಯಾಜ್ಯಗಳು ಏನೇ ಇದ್ರೂ ಸಿದ್ದಗಂಗಾ ಮಠದಲ್ಲಿ ಬಗೆಹರಿಯುತಿತ್ತು. ಇದ್ರಿಂದ ಕೋರ್ಟ್ ಕಚೇರಿಗಳಿಗೆ ಹೋಗಿ ಅಪಾರ ಹಣ ವೆಚ್ಚ ಮಾಡೋದು ತಪ್ಪುತಿತ್ತು. ಕೆಲವೊಮ್ಮೆ ಜಟಿಲವಾದ ಸಮಸ್ಯೆಯನ್ನು ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿಯೇ ಬಗೆಹರಿಸುತ್ತಿದ್ರು.

    ಸಿದ್ದಗಂಗಾ ಶ್ರೀಗಳು ವಾದಿ, ಪ್ರತಿವಾದಿಗಳನ್ನು ಕರೆದರೆ ಯಾರೂ ಹಿಂದೇಟು ಹೊಡೆದು ತಪ್ಪಿಸಿಕೊಳ್ಳುತ್ತಿರಲಿಲ್ಲ. ಹತ್ತು ಹನ್ನೆರಡು ವರ್ಷ ನ್ಯಾಯಾಲಯದಲ್ಲಿ ಬಗೆಹರಿಯದ ಸಾಕಷ್ಟು ಸಮಸ್ಯೆಗಳನ್ನು ಶ್ರೀಗಳು ಒಂದೇ ದಿನದಲ್ಲಿ ಬಗೆಹರಿಸುತ್ತಿದ್ದರು. ಸಾಮಾಜಿಕ ನ್ಯಾಯಮೂರ್ತಿಗಳಾಗಿದ್ದ ಶ್ರೀಗಳ ಹಿತನುಡಿ ಉಭಯ ಪಕ್ಷಗಳಿಗೂ ಅಭಯ ರಕ್ಷೆ. ಇದನ್ನೂ ಓದಿ: ಓದುವುದರ ಜೊತೆಗೆ ಸಿದ್ದಗಂಗಾ ವಿದ್ಯಾರ್ಥಿಗಳು ಗದ್ದೆ ಕೆಲಸಕ್ಕೂ ಸೈ!

    ಪ್ರಕರಣದಲ್ಲಿ ಸೋಲು, ಗೆಲುವುಗಳ ಪ್ರಶ್ನೆಯಿಲ್ಲ, ಲಾಭ ನಷ್ಟಗಳ ದೃಷ್ಟಿಯಿಲ್ಲ, ಗುರುಗಳ ಆಶೀರ್ವಾದವೊಂದೇ ಇಲ್ಲಿ ಮುಖ್ಯ. ಗುಲಗಂಜಿಯಷ್ಟು ಶ್ರೀಗಳ ತೀರ್ಪಿನಲ್ಲಿ ಅನ್ಯಾಯಕ್ಕೆ ಅವಕಾಶವಿರಲ್ಲ ಅನ್ನೋದು ಜನಮನದ ಅಚಲ ನಂಬಿಕೆ. ಅವರ ಲೋಕಪ್ರಜ್ಞೆಯಿಂದಲೇ, ಆಗಾಧ ವಿದ್ವತ್ತಿನಿಂದಲೇ ಪೂಜ್ಯರು ನಮ್ಮನ್ನು ಕೈಹಿಡಿದು ನಡೆಸುತ್ತಾರೆ ಅನ್ನವ ನಂಬಿಕೆ ಎಲ್ಲರಲ್ಲಿತ್ತು. ಇದನ್ನೂ ಓದಿ:  ದೇವರಿಗಾಗಿ ಮುಗಿಲುಮುಟ್ಟಿದ ಆಕ್ರಂದನ – ಸುಡುಬಿಸಿಲಿನಲ್ಲೇ ಅಳುತ್ತಿದ್ದಾರೆ ಮಕ್ಕಳು

    ಜಾತ್ರಿಯ ಸಮಯದಲ್ಲಿ ಸೌದೆಗಾಗಿ ಕೊಡಲಿ ಹಿಡಿದ್ರು!
    ಶಿವರಾತ್ರಿ ಸಮಯದಲ್ಲಿ ಮಠದ ಜಾತ್ರೆ ವೀಕ್ಷಿಸಲು ಲಕ್ಷಾಂತರ ಮಂದಿ ಬರ್ತಾರೆ. ಮೂರು ಹೊತ್ತು ದಾಸೋಹ ನಿರಂತರವಾಗುತ್ತೆ. ಭೀಮ ಕಾಯದ ಕೊಳಗದಲ್ಲಿ ಪಾಯಸ, ಕೊಪ್ಪರಿಗೆಯಲ್ಲಿ ಮುದ್ದೆ, ಅನ್ನ ಬಸಿಯಲು ನಾಲ್ಕು ತಪ್ಪಲೆ ಹೀಗೆ ಅಡುಗೆ ಪಾಡಲು ಎಷ್ಟು ಗಾಡಿ ಸೌದೆಯೂ ಸಾಲುತ್ತಿರಲಿಲ್ಲವಂತೆ.

    ಸೌದೆಯ ಅಭಾವದಿಂದ ಸಿದ್ದಗಂಗಾ ಶ್ರೀಗಳೇ 200- 300 ವಿದ್ಯಾರ್ಥಿಗಳ ಜೊತೆ ದೇವರಾಯ ದುರ್ಗದ ಕಾಡಲ್ಲಿ ಅಲೆದು, ಖುದ್ದು ಕೊಡಲಿ ಹಿಡಿದು ಸೌದೆ ಹೊಂದಿಸುತ್ತಿದ್ದರು. ಒಲೆಯ ಅಡುಗೆಯನ್ನಷ್ಟೇ ಇಲ್ಲಿ ಮಾಡಲಾಗುತ್ತೆ. ಉರಿದ ಒಲೆ ಇಂದಿಗೂ ಮಠದಲ್ಲಿ ಆರಿಲ್ಲ ಅನ್ನೋದು ಪ್ರಚಲಿತ ಮಾತು.  ಇದನ್ನೂ ಓದಿ:ಸಿದ್ದಗಂಗಾ ಮಠದ ದಾಸೋಹ ಒಂದು ಪವಾಡ – ಒಲೆಯ ಬೆಂಕಿ ಒಂದು ದಿನವೂ ಆರಿಲ್ಲ

    ಜೋಳಿಗೆಯಲ್ಲಿ ಬಿಕ್ಷೆ ಬೇಡಿದ್ರು:
    ಆರಂಭದಲ್ಲಿ ಮಠದ ಏಳಿಗೆಗಾಗಿ ಮಠವನ್ನು ನಂಬಿ ಬರುವ ಜನರಿಗಾಗಿ ದಾಸೋಹಕ್ಕಾಗಿ ಶ್ರೀಗಳು ಪ್ರಾರಂಭದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಬಿಕ್ಷಾಟನೆ ಮಾಡಿ ಖರ್ಚುವೆಚ್ಚಗಳಿಗೆ ದುಡ್ಡು ಹೊಂದಿಸುತ್ತಿದ್ದರು.

    ಸಿದ್ದಗಂಗಾ ಶ್ರೀಗಳು ಮಠಾಧೀಶರಾದ ಮೇಲೆ ಅನೇಕ ಜನ ಜಾಗವನ್ನು ದಾನವಾಗಿ ನೀಡಿದ್ದಾರೆ. ಶ್ರೀಗಳು ಬಿಕ್ಷಾಟನೆಗೆ ಹೋದರೆ ಒಂದೊಂದು ಊರಲ್ಲಿ ಒಂದು ಅಥವಾ ಎರಡು ದಿನ ತಂಗಿ ಅಲ್ಲಿ ಪೂಜಾದಿಗಳನ್ನು ಮುಗಿಸುತ್ತಿದ್ರು. ಊರಿನವರೆಲ್ಲ ಸ್ವಾಮೀಜಿ ಬಂದ್ರೆ ಸಂಭ್ರಮ. ಸ್ವಾಮೀಜಿಯ ಜೋಳಿಗೆ ತುಂಬಿಸಿ, ಮಠಕ್ಕೂ ಒಂದಿಷ್ಟು ಗಾಡಿಯಲ್ಲಿ ಕಳುಹಿಸುತ್ತಿದ್ದರು. ವಿಶೇಷ ಅಂದ್ರೆ ಮಲೆನಾಡಿನ ಭಾಗವಾದ ಸಕಲೇಶಪುರಕ್ಕೂ ಹೋಗಿಬರುತ್ತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv