Tag: Shri Ramayana Express

  • ಶ್ರೀರಾಮನ ಚರಿತ್ರೆ ತಿಳಿಯಲು ಹಳಿಯಲ್ಲಿ ಓಡಲಿದೆ ಶ್ರೀರಾಮಾಯಣ ಎಕ್ಸ್‌ಪ್ರೆಸ್‌: ಈ ರೈಲಿನ ವಿಶೇಷತೆ ಏನು? ಪ್ಯಾಕೇಜ್ ಎಷ್ಟು?

    ಶ್ರೀರಾಮನ ಚರಿತ್ರೆ ತಿಳಿಯಲು ಹಳಿಯಲ್ಲಿ ಓಡಲಿದೆ ಶ್ರೀರಾಮಾಯಣ ಎಕ್ಸ್‌ಪ್ರೆಸ್‌: ಈ ರೈಲಿನ ವಿಶೇಷತೆ ಏನು? ಪ್ಯಾಕೇಜ್ ಎಷ್ಟು?

    ನವದೆಹಲಿ: ರಾಮನಿಂದಾಗಿ ಪ್ರಸಿದ್ಧಿ ಹೊಂದಿರುವ ಪ್ರಮುಖ ಸ್ಥಳಗಳ ಪ್ರವಾಸಕ್ಕಾಗಿಯೇ ಭಾರತೀಯ ರೈಲ್ವೇ ಇಲಾಖೆಯ ಪ್ರವಾಸೋದ್ಯಮ ನಿಗಮ ವಿಶೇಷ `ಶ್ರೀರಾಮಾಯಣ ಎಕ್ಸ್‌ಪ್ರೆಸ್‌’ ರೈಲು ಓಡಿಸಲು ಮುಂದಾಗಿದೆ.

    ಶ್ರೀರಾಮನ ಬಗ್ಗೆ ತಿಳಿಯುವುದಕ್ಕಾಗಿ ಭಾರತೀಯ ರೈಲ್ವೇ ಇಲಾಖೆ ತನ್ನ ಪ್ರವಾಸೋದ್ಯಮ ಯೋಜನೆಯಡಿ ಈ ಪ್ರವಾಸವನ್ನು ಆರಂಭಿಸಲಿದೆ. ಈ ರೈಲು ಅತ್ಯಾಧುನಿಕ ವ್ಯವಸ್ಥೆಗಳನ್ನು ಒಳಗೊಂಡಿದ್ದು, 800 ಆಸನಗಳನ್ನು ಹೊಂದಿದೆ. ಈ ರೈಲಿನಲ್ಲಿ ಶ್ರೀರಾಮನ ಬದುಕಿನ ಅಧ್ಯಾಯಗಳೊಂದಿಗೆ ತಳುಕು ಹಾಕಿಕೊಂಡಿರುವ ಪ್ರಮುಖ ಸ್ಥಳಗಳ ಭೇಟಿಗೆ ಅವಕಾಶ ಕಲ್ಪಿಸಿದೆ. 16 ದಿನಗಳಲ್ಲಿ ದೇಶದ ಪ್ರಮುಖ ಪುಣ್ಯಕ್ಷೇತ್ರಗಳನ್ನು ಸಂಪರ್ಕಿಸುತ್ತದೆ. ಈ ವರ್ಷದ ನವೆಂಬರ್ ನಲ್ಲಿ ದೆಹಲಿಯ ಸಫರ್ ಜಂಗ್ ರೈಲ್ವೇ ನಿಲ್ದಾಣದಿಂದ ಮೊದಲ ಪ್ರಯಾಣ ಆರಂಭವಾಗಲಿದೆ. ಇದನ್ನು  ಓದಿ: ಸೀತೆಯ ಜನ್ಮ ಸ್ಥಳದಿಂದ ಅಯೋಧ್ಯೆಗೆ ಬಸ್: ನೇಪಾಳದಲ್ಲಿ ಮೋದಿ ಚಾಲನೆ

    ಈ ಪ್ರವಾಸದಲ್ಲಿ ಊಟ, ವಸತಿ, ಯಾತ್ರಾ ಸ್ಥಳಗಳ ಪ್ರಯಾಣ, ಸುತ್ತಲಿನ ಪ್ರವಾಸಿ ತಾಣಗಳ ಭೇಟಿಗೂ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರವಾಸಿಗರಿಗೆ ಅಗತ್ಯ ನೆರವು ಹಾಗೂ ವ್ಯವಸ್ಥೆ ಗಮನಿಸಲು ಟೂರ್ ಮ್ಯಾನೇಜರ್ ಗಳನ್ನು ಸಹ ಇದಕ್ಕಾಗಿ ನಿಯೋಜಿಸಲಾಗಿದೆ.

    ಎಲ್ಲಿಂದ, ಎಲ್ಲಿಗೆ ಸಾಗುತ್ತದೆ?
    ವಿಶೇಷ ರೈಲು ದೆಹಲಿಯಿಂದ ಹೊರಟು ಮೊದಲಿಗೆ ಅಯೋಧ್ಯೆಯಲ್ಲಿ ತಲುಪುತ್ತದೆ. ಅಲ್ಲಿನ ಹುಮಾನ್ ಗುಡಿ, ರಾಮಕೋಟ್ ಹಾಗೂ ಕನಕ್ ದೇವಾಲಯ ಹಾಗೂ ರಾಮಾಯಣದಲ್ಲಿ ಪ್ರಸ್ತಾಪವಾಗುವ ಇತರ ಪ್ರಮುಖ ಸ್ಥಳಗಳ ಸುತ್ತಾಟದಲ್ಲಿ ನಂತರ ನಂದಿಗ್ರಾಮ, ಸೀತಾಮಡಿ, ಜನಕಪುರ್, ವಾರಾಣಾಸಿ, ಪ್ರಯಾಗ್, ಶೃಂಗವೇರ್ ಪುರ , ಚಿತ್ರಕೂಟ, ನಾಸಿಕ್, ಹಂಪಿ ಹಾಗೂ ರಾಮೇಶ್ವರಕ್ಕೆ ಬಂದು ತಲುಪಲಿದೆ.

    ಶ್ರೀಲಂಕ್ಕೂ ಹೋಗಬಹುದು:
    ಭಾರತ ಅಲ್ಲದೇ ಶ್ರೀಲಂಕಾಕ್ಕೂ ಪ್ರವಾಸದ ಮೂಲಕವೇ ಹೋಗಬಹುದು. ರಾಮೇಶ್ವರದಿಂದ ಪ್ರಯಾಣ ಮುಂದುವರಿಸುವ ಪ್ರಯಾಣಿಕರು ವಿಮಾನದ ಮೂಲಕ ಶ್ರೀಲಂಕಾಕ್ಕೆ ತೆರಳಬಹುದು. ಶ್ರೀಲಂಕಾದಲ್ಲಿ ಬರುವ ಕ್ಯಾಂಡಿ, ಕೊಲಂಬೋ ಹಾಗೂ ನಿಗೊಂಬೊ ಸ್ಥಳಗಳಿಗೆ ಭೇಟಿ ನೀಡಲಾಗುತ್ತದೆ.

    ಶ್ರೀರಾಮಾಯಣ ಎಕ್ಸ್‌ಪ್ರೆಸ್‌ನ ಪ್ಯಾಕೇಜ್ ಎಷ್ಟು?
    ಈ ವಿಶೇಷ ರೈಲಿನಲ್ಲಿ ಪ್ರವಾಸಕ್ಕೆ ಒಬ್ಬ ವ್ಯಕ್ತಿಗೆ ನವದೆಹಲಿಯಿಂದ ರಾಮೇಶ್ವರದವರೆಗೆ 15,120 ರೂ. ನಿಗದಿ ಮಾಡಲಾಗಿದ್ದು, ರಾಮೇಶ್ವರಂದಿಂದ ಶ್ರೀಲಂಕಾಕ್ಕೆ ತೆರಳುವ ಪ್ರವಾಸಿಗರು ಪ್ರತ್ಯೇಕವಾಗಿ 36,970 ಪಾವತಿಮಾಡಬೇಕಾಗುತ್ತದೆ. ಇದರಲ್ಲಿ ವಿಮಾನ ಪ್ರಯಾಣ ಶುಲ್ಕ ಸೇರಿದಂತೆ ಊಟ, ವಸತಿ ಹಾಗೂ ಪ್ರವಾಸಿ ತಾಣಗಳ ಭೇಟಿಯ ಪ್ಯಾಕೇಜನ್ನು ಭಾರತೀಯ ರೈಲ್ವೇ ಇಲಾಖೆಯೇ ಒದಗಿಸಲಿದೆ.

    `ಶ್ರೀರಾಮಾಯಣ ಎಕ್ಸ್‌ಪ್ರೆಸ್‌’ ಒಟ್ಟು 16 ದಿನಗಳಲ್ಲಿ ತನ್ನ ಯಾತ್ರೆಯನ್ನು ಪೊರೈಸಲಿದ್ದು, ಮೊದಲನೇ ಪ್ರಯಾಣವನ್ನು ನವೆಂಬರ್ 14 ರಿಂದ ಪ್ರಾರಂಭಗೊಳಿಸುತ್ತದೆ. ಶ್ರೀ ರಾಮಾಯಣ ಎಕ್ಸ್‌ಪ್ರೆಸ್‌ ಪ್ಯಾಕೇಜ್ ಪ್ರಯಾಣವನ್ನು ಭಾರತೀಯ ರೈಲ್ವೆ ಇಲಾಖೆ ತನ್ನ ವೆಬ್‍ಸೈಟ್‍ ನಲ್ಲಿ ಪ್ರಕಟಿಸಿದೆ. ಕೇಂದ್ರ ರೈಲ್ವೇ ಸಚಿವರಾದ ಪಿಯೂಷ್ ಗೋಯಲ್ ರವರು ನೂತನ ಶ್ರೀ ರಾಮಾಯಣ ಎಕ್ಸ್‍ಪ್ರೆಸ್ ಕುರಿತು ಕಿರು ಮಾಹಿತಿಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.

    ಏನಿದು ರಾಮಾಯಣ ಸರ್ಕ್ಯೂಟ್?
    ಧಾರ್ಮಿಕ ಪ್ರವಾಸಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಪ್ರವಾಸೋದ್ಯಮ ಇಲಾಖೆ ಧಾರ್ಮಿಕ ಕೇಂದ್ರಗಳ ನಡುವೆ ಸಂಪರ್ಕ ಸಾಧಿಸಲು ವಿಶೇಷ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದೆ. ಇದರಲ್ಲಿ ರಾಮಾಯಣ ಸರ್ಕ್ಯೂಟ್ ಒಂದಾಗಿದ್ದು, ಇದರ ಅಡಿಯಲ್ಲಿ ರಾಮಾಯಣ ಕಥೆಗೆ ಸಂಬಂಧಿಸಿದ 15 ಪ್ರವಾಸಿ ಜಾಗಗಳನ್ನು ಸಂಪರ್ಕಿಸುವ ಮೂಲಕ ಅಭಿವೃದ್ಧಿಪಡಿಸಲಾಗುತ್ತದೆ.

    ಉತ್ತರಪ್ರದೇಶದ ಅಯೋಧ್ಯೆ, ನಂದಿ ಗ್ರಾಮ್, ಶೃಂಗವೇರ್ ಪುರ ಮತ್ತು ಚಿತ್ರಕೂಟ, ಬಿಹಾರದ ಸೀತಾಮಡಿ, ಬಕ್ಸರ್ ಮತ್ತು ದರ್ಭಂಗಾ, ಮಧ್ಯಪ್ರದೇಶದ ಚಿತ್ರಕೂಟ, ಒಡಿಶಾದ ಮಹೇಂದ್ರ ಗಿರಿ, ಛತ್ತೀಸ್‍ಗಢದ ಜಗದಾಲ್ ಪುರ, ಮಹಾರಾಷ್ಟ್ರದ ನಾಸಿಕ್ ಮತ್ತು ನಾಗ್ಪುರ, ತೆಲಂಗಾಣದ ಭದ್ರಾಚಲಮ್, ಹಾಗೂ ತಮಿಳುನಾಡಿನ ರಾಮೇಶ್ವರಂ, ಕರ್ನಾಟಕದ ಹಂಪಿ ರಾಮಾಯಣ ಸರ್ಕ್ಯೂಟ್ ನಲ್ಲಿದೆ.

    ವಿಶೇಷ ರೈಲಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ: www.irctctourism.com