Tag: Shri Chinmay Sagar Maharaj

  • ದೇಹತ್ಯಾಗ ಮಾಡಿದ ಜೈನ ಮುನಿ ಚಿನ್ಮಯಸಾಗರ ಮಹಾರಾಜ

    ದೇಹತ್ಯಾಗ ಮಾಡಿದ ಜೈನ ಮುನಿ ಚಿನ್ಮಯಸಾಗರ ಮಹಾರಾಜ

    ಚಿಕ್ಕೋಡಿ (ಬೆಳಗಾವಿ): ಯಮಸಲ್ಲೇಖನ ವ್ರತ ಕೈಗೊಂಡಿದ್ದ ರಾಷ್ಟ್ರಸಂತ, ಜೈನ ಮುನಿ ಚಿನ್ಮಯಸಾಗರ ಮಹಾರಾಜರು ದೇಹತ್ಯಾಗ ಮಾಡಿದ್ದಾರೆ.

    ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗುಳ ಗ್ರಾಮದಲ್ಲಿ ಚಿನ್ಮಯಸಾಗರ ಮಹಾರಾಜರು ಸೆಪ್ಟೆಂಬರ್ 19ರಿಂದ ಅಕ್ಟೋಬರ್ 12 ರವರೆಗೆ ಊಟ ತ್ಯಜಿಸಿ ನೀರು ಮಾತ್ರ ಸೇವಿಸುತ್ತಿದ್ದರು. ವಿಜಯದಶಮಿ ದಿನದಂದು ಕೊನೆಯ ಉಪದೇಶ ನೀಡಿದ್ದ ಚಿನ್ಮಯಸಾಗರ ಮಹಾರಾಜರು, ‘ಮನುಷ್ಯ ಜೀವಿಯು ತನ್ನ ದುರಾಚಾರಗಳೊಂದಿಗೆ ಹೋರಾಡಿ ವಿಜಯ ಸಾಧಿಸಿ ಭಗವಂತನಾಗಲು ಪ್ರಯತ್ನಿಸಬೇಕು’ ಎಂದು ತಮ್ಮ ಕೊನೆಯ ಉಪದೇಶ ನೀಡಿದ್ದರು.

    ಚಿನ್ಮಯಸಾಗರ ಮಹಾರಾಜರು ಅಕ್ಟೋಬರ್ 12ರಿಂದ ನೀರು ಸೇವನೆಯನ್ನು ನಿಲ್ಲಿಸಿ ಯಮಸಲ್ಲೇಖನ ವ್ರತ ಸ್ವೀಕರಿಸಿದ್ದರು. ರಾಷ್ಟ್ರಸಂತ ಚಿನ್ಮಯಸಾಗರ ಮಹಾರಾಜರು ದೇಹತ್ಯಾಗ ಮಾಡಿದ ಸುದ್ದಿ ಕೇಳಿ ಅಪಾರ ಸಂಖ್ಯೆಯ ಭಕ್ತ ಸಮೂಹ ದರ್ಶನಕ್ಕೆ ಜುಗೂಳ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ.

    ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೋಮವಾರ ಜುಗುಳ ಗ್ರಾಮಕ್ಕೆ ಭೇಟಿ ನೀಡಿ, ಚಿನ್ಮಯಸಾಗರ ಮಹಾರಾಜರ ದರ್ಶನ ಪಡೆದಿದ್ದರು. ಈ ವೇಳೆ ಮಾತನಾಡಿ, ಮುನಿ ಮಹಾರಾಜರು ತಮ್ಮ ಜೀವನದುದ್ದಕ್ಕೂ ಅಹಿಂಸಾ ತತ್ವಗಳನ್ನು ಸಾರಿ ಹೇಳುತ್ತಾ ದುಷ್ಟ ಚಟಗಳಿಗೆ ಅಂಟಿಕೊಂಡ ಅನೇಕರಿಗೆ ಬೋಧನೆ ಮಾಡಿ, ಅದರಿಂದ ಮುಕ್ತಗೊಳಿಸಿದ್ದಾರೆ. ಸರ್ಕಾರ ಈ ಸೇವೆ ಕಂಡು ಡಾಕ್ಟರೇಟ್ ಪದವಿ ನೀಡಿದೆ. ಅವರು ಒಬ್ಬ ಮಹಾನ್ ಸಂತ. ಚಿನ್ಮಯಸಾಗರ ಮಹಾರಾಜರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಸವದಿ ಹೇಳಿದ್ದರು.