Tag: Shreyas Iyer

  • ಸಿಕ್ಸ್ ಪ್ಯಾಕ್ ಫೋಟೋ ಹಂಚಿಕೊಂಡ ಚಹಲ್

    ಸಿಕ್ಸ್ ಪ್ಯಾಕ್ ಫೋಟೋ ಹಂಚಿಕೊಂಡ ಚಹಲ್

    ನವದೆಹಲಿ: ಕ್ರಿಕೆಟ್ ಟೀಂ ಇಂಡಿಯಾ ಆಟಗಾರರ ಸಿಕ್ಸ್ ಪ್ಯಾಕ್ ಫೋಟೋಗೆ ಮಹಿಳಾ ಅಭಿಮಾನಿಗಳು ಫಿದಾ ಆಗಿದ್ದು, ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ಸುಳಿದಾಡುತ್ತಿದೆ.

    ಯಜುವೇಂದ್ರ ಚಹಲ್ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಸಹ ಆಟಗಾರರೊಂದಿಗೆ ಪೋಸ್ ನೀಡಿರುವ ಫೋಟೋವನ್ನ ಅಪ್ಲೋಡ್ ಮಾಡಿಕೊಂಡಿದ್ದಾರೆ. ಟೀ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಫಿಟ್ನೆಸ್ ಮೂಲಕ ಇತರ ಆಟಗಾರರಿಗೆ ಮಾದರಿಯಾಗಿದ್ದಾರೆ. ಉಳಿದಂತೆ ಸಹ ಆಟಗಾರರು ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಲು ಆಟದೊಂದಿಗೆ ಜಿಮ್ ನಲ್ಲಿಯೂ ಸಮಯ ಕಳೆಯುತ್ತಿದ್ದಾರೆ. ಮೊದಲಿಗೆ ಒಬ್ಬರೇ ತಮ್ಮ ಸಿಕ್ಸ್ ಪ್ಯಾಕ್ ಮತ್ತು ಆ್ಯಬ್ಸ್ ತೋರಿಸುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು.

    ಚಹಲ್ ಅಪ್ಲೋಡ್ ಮಾಡಿಕೊಂಡಿರುವ ಫೋಟೋದಲ್ಲಿ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ ಮತ್ತು ನವದೀಪ್ ಸೈನಿರನ್ನು ಕಾಣಬಹುದು. ದೊಡ್ಡ ಕನ್ನಡಿ ಮುಂದೆ ನಿಂತು ಎಲ್ಲರೂ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಫೋಟೋ ಇದುವರೆಗೂ 2 ಲಕ್ಷಕ್ಕೂ ಅಧಿಕ ಲೈಕ್ ಪಡೆದುಕೊಂಡಿದೆ.

    https://www.instagram.com/p/B7Vz1uGhAua/

  • ಶ್ರೇಯಸ್, ಪಂತ್ ಅರ್ಧಶತಕ- ಪೋಲಾರ್ಡ್ ಪಡೆಗೆ 288 ರನ್‍ಗಳ ಗುರಿ

    ಶ್ರೇಯಸ್, ಪಂತ್ ಅರ್ಧಶತಕ- ಪೋಲಾರ್ಡ್ ಪಡೆಗೆ 288 ರನ್‍ಗಳ ಗುರಿ

    ಚೆನ್ನೈ: ವೆಸ್ಟ್ ಇಂಡೀಸ್ ಸಮರ್ಪಕ ಬೌಲಿಂಗ್ ಹಾಗೂ ಫೀಲ್ಟಿಂಗ್ ಎದುರು ಭಾರತ ತಂಡವು ಬೃಹತ್ ಮೊತ್ತ ಪೇರಿಸುವಲ್ಲಿ ಭಾರೀ ಕಷ್ಟಪಟ್ಟಿದೆ. ಯುವ ಆಟಗಾರರಾದ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಅರ್ಧಶತಕದ ಸಹಾಯದಿಂದ ಕೊಹ್ಲಿ ಪಡೆದ ವಿಂಡೀಸ್ ತಂಡಕ್ಕೆ 288 ರನ್‍ಗಳ ಗುರಿ ನೀಡಿದೆ.

    ಚೆನ್ನೈನ ಚಪಾಕ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾನುವಾರ ನಡೆದ ಏಕದಿನ ದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತವು ಶ್ರೇಯಸ್ ಅಯ್ಯರ್ 70 ರನ್, ರಿಷಭ್ ಪಂತ್ 71, ಕೇದಾರ್ ಜಾಧವ್ 40 ರನ್‍ಗಳ ಸಹಾಯದಿಂದ 8 ವಿಕೆಟ್ ನಷ್ಟಕ್ಕೆ 287 ರನ್ ಪೇರಿಸಿತು.

    ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ವಿಂಡೀಸ್ ಸಮರ್ಪಕ ಬೌಲಿಂಗ್‍ನಿಂದ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ  ಕೆ.ಎಲ್.ರಾಹುಲ್ ಹಾಗೂ ರೋಹಿತ್ ಶರ್ಮಾರನ್ನು ಕಟ್ಟಿ ಹಾಕಿತು. ವಿಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಸ್ಫೋಟಕ ಬ್ಯಾಟಿಂಗ್‍ನಿಂದ ಮಿಂಚಿದ್ದ ಕೆ.ಎಲ್.ರಾಹುಲ್ (6 ರನ್) ಬಹುಬೇಗ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿಳಿ ಕೊಹ್ಲಿ ಒಂದು ಬೌಂಡರಿ ಬಾರಿಸಿ ವಿಕೆಟ್ ಒಪ್ಪಿಸಿದರು. ಪರಿಣಾಮ ಇನ್ನಿಂಗ್ಸ್ ನ 7ನೇ ಓವರ್ ಮುಕ್ತಾಯಕ್ಕೆ ಭಾರತವು ಎರಡು ವಿಕೆಟ್ ನಷ್ಟಕ್ಕೆ 25 ರನ್ ಪೇರಿಸಲು ಶಕ್ತವಾಗಿತ್ತು.

    ನಾಲ್ಕನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಶ್ರೇಯಸ್ ಅಯ್ಯರ್ ವಿಕೆಟ್ ಕಾಯ್ದುಕೊಂಡು ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‍ಗೆ ಸಾಥ್ ನೀಡಿದರು. ಈ ಜೋಡಿಯು ಮೂರನೇ ವಿಕೆಟ್ ನಷ್ಟಕ್ಕೆ 55 ರನ್‍ಗಳ ಜೊತೆಯಾಟ ಕಟ್ಟಿ ತಂಡದ ಮೊತ್ತವನ್ನು ಏರಿಸಿತು. ಆದರೆ ಇನ್ನಿಂಗ್ಸ್ ನ 18ನೇ ಓವರ್ ನ ಮೊದಲ ಎಸೆತದಲ್ಲಿಯೇ ರೋಹಿತ್ ವಿಂಡೀಸ್ ನಾಯಕಪೋಲಾರ್ಡ್ ಗೆ ಕ್ಯಾಚ್ ಒಪ್ಪಿಸಿದರು. 56 ಎಸೆತಗಳಲ್ಲಿ ರೋಹಿತ್ ಶರ್ಮಾ 6 ಬೌಂಡರಿ ಸೇರಿ 36 ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಈ ಮೂಲಕ ಹಿಟ್‍ಮ್ಯಾನ್ ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಇದುವರೆಗೂ 212 ಇನ್ನಿಂಗ್ಸ್ ಗಳಲ್ಲಿ (27 ಶತಕ, 42 ಅರ್ಧಶತಕ) 8,722 ರನ್ ದಾಖಲಿಸಿದ್ದಾರೆ.

    ರೋಹಿತ್ ವಿಕೆಟ್ ಬೆನ್ನಲ್ಲೇ ಮೈದಾನಕ್ಕಿಳಿದ ರಿಷಭ್ ಪಂತ್ ವಿಕೆಟ್ ಕಾಯ್ದುಕೊಂಡು ಶ್ರೇಯಸ್ ಅಯ್ಯರ್ ಸ್ಫೋಟಕ ಬ್ಯಾಟಿಂಗ್‍ಗೆ ಸಾಥ್ ನೀಡಿದರು. ಇನ್ನಿಂಗ್ಸ್ ನ 24ನೇ ಓವರ್ ನ 3ನೇ ಎಸೆತದಲ್ಲಿ ಪಂತ್ ಎರಡು ರನ್ ಗಳಿಸುವ ಮೂಲಕ ಭಾರತವು 100 ರನ್ ಪೇರಿಸಿತು. ನಂತರದ ಎಸೆತವನ್ನು ಪಂತ್ ಬೌಂಡರಿಗೆ ಅಟ್ಟಿ ತಂಡದ ಮೊತ್ತವನ್ನು ಹೆಚ್ಚಿಸಲು ಆರಂಭಿಸಿದರು.

    ಪಂತ್-ಅಯ್ಯರ್ ಆಸರೆ:
    ವಿಕೆಟ್ ಕಾಯ್ದುಕೊಂಡು ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್ ಇನ್ನಿಂಗ್ಸ್ ನ 32ನೇ ಓವರ್ ನಲ್ಲಿ ಅರ್ಧಶತಕ (70 ಎಸೆತ) ಪೂರೈಸಿದರು. ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅವರ 5ನೇ ಅರ್ಧಶತಕ ಇದಾಗಿದೆ. ಈ ಬೆನ್ನಲ್ಲೇ ಸ್ಫೋಟಕ ಬ್ಯಾಟಿಂಗ್ ತೋರಿದ ಪಂತ್ ಕೂಡ ಅರ್ಧಶತಕ (49 ಎಸೆತ) ದಾಖಲಿಸಿದರು. ಇದು ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಪಂತ್ ಅವರ ಚೊಚ್ಚಲ ಅರ್ಧಶತಕವಾಗಿದೆ.

    ಇನ್ನಿಂಗ್ಸ್ ನ 36ನೇ ಓವರ್ 3ನೇ ಎಸೆತದಲ್ಲಿ ಪೋಲಾರ್ಡ್ ಬೌಲಿಂಗ್ ವೇಳೆ ಪಂತ್ ನೀಡಿದ್ದ ಕ್ಯಾಚ್ ಅನ್ನು ಶೆಲ್ಡನ್ ಕಾಟ್ರೆಲ್ ಕೈಚೆಲ್ಲಿದರು. ಜೀವದಾನ ಪಡೆದ ಪಂತ್ ವಿಕೆಟ್ ಕಾಯ್ದುಕೊಂಡು ಬ್ಯಾಟಿಂಗ್ ಮುಂದುವರಿಸಿದರು. ಈ ಜೋಡಿಯು ನಾಲ್ಕನೇ ವಿಕೆಟ್ ನಷ್ಟಕ್ಕೆ 114 ರನ್‍ಗಳ ಜೊತೆಯಾಟ ಕಟ್ಟಿಕೊಟ್ಟು ತಂಡದ ಮೊತ್ತವನ್ನು ಏರಿಸಿತು. ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾದ ಶ್ರೇಯಸ್ ಅಯ್ಯರ್ ಇನ್ನಿಂಗ್ಸ್ ನ 36ನೇ ಓವರ್ ನಲ್ಲಿ ವಿಕೆಟ್ ನೀಡಿದರು. 88 ಎಸೆತಗಳಲ್ಲಿ ಶ್ರೇಯಸ್ (5 ಬೌಂಡರಿ, ಸಿಕ್ಸ್) 70 ರನ್ ಗಳಿಸಿ ಪೆವಿಲಿಯನ್‍ಗೆ ತರೆಳಿದರು.

    ಶ್ರೇಯಸ್ ಅಯ್ಯರ್ ಬೆನ್ನಲ್ಲೇ 69 ಎಸೆತಗ್ಳಲ್ಲಿ (7 ಬೌಂಡರಿ, ಸಿಕ್ಸ್) 71 ರನ್ ಗಳಿಸಿದ್ದ ಪಂತ್ ಕೂಡ ವಿಕೆಟ್ ಒಪ್ಪಿಸಿದರು. 40ನೇ ಓವರ್ ಮುಕ್ತಾಯಕ್ಕೆ ಭಾರತ 5 ವಿಕೆಟ್ 210 ರನ್ ಪೇರಿಸಿತು. ಬಳಿಕ ಕೇದಾರ್ ಜಾಧವ್ ಹಾಗೂ ರವೀಂದ್ರ ಜಡೇಜಾ 6ನೇ ವಿಕೆಟ್ ನಷ್ಟಕ್ಕೆ 59 ರನ್ ಗಳ ಜೊತೆಯಾಟ ಕಟ್ಟಿಕೊಟ್ಟರು. ಇನ್ನಿಂಗ್ಸ್ ನ 47ನೇ ಓವರ್ ನ 3ನೇ ಎಸೆತದಲ್ಲಿ ಕೇದಾರ್ ಜಾಧವ್ (40 ರನ್) ಹಾಗೂ ನಾಲ್ಕನೇ ಎಸೆತದಲ್ಲಿ ರವೀಂದ್ರ ಜಡೇಜಾ (21 ರನ್) ವಿಕೆಟ್ ಒಪ್ಪಿಸಿದರು. ಕೊನೆಯ ಓವರ್ ನಲ್ಲಿ ಶಿವಂ ದುಬೆ (9 ರನ್) ಔಟಾದರು. ಈ ಮೂಲಕ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 287 ರನ್ ಪೇರಿಸಿತು.

    9 ಸರಣಿಯಲ್ಲಿ ಭಾರತಕ್ಕೆ ಜಯ:
    ಕಳೆದ 13 ವರ್ಷಗಳಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ 9 ಸರಣಿಗಳು ನಡೆದಿವೆ. ಎಲ್ಲ ಸರಣಿಯಲ್ಲೂ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. 2006ರಿಂದ ಉಭಯ ದೇಶಗಳ ನಡುವೆ 39 ಪಂದ್ಯಗಳು ನಡೆದಿವೆ. ಇದರಲ್ಲಿ ಟೀಂ ಇಂಡಿಯಾ 23 ಪಂದ್ಯ ಗೆದ್ದರೆ, 10 ಪಂದ್ಯದಲ್ಲಿ ಸೋಲು ಕಂಡಿದೆ. 6 ಪಂದ್ಯಗಳು ಡ್ರಾ ಆಗಿವೆ. ಈ ವರ್ಷದ ಆಗಸ್ಟ್ ನಲ್ಲಿ ಭಾರತವು ವಿಂಡೀಸ್ ಅನ್ನು 2-0 ಅಂತರದಿಂದ ಸೋಲಿಸಿತ್ತು. ಇತ್ತೀಚೆಗೆ ಟೀಂ ಇಂಡಿಯಾ ಟಿ20 ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 2-1 ಅಂತರದಿಂದ ಮಣಿಸಿತು.

    ಏಕದಿನದಲ್ಲಿ ಸಮಬಲ:
    ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಈವರೆಗೆ 130 ಪಂದ್ಯಗಳು ನಡೆದಿವೆ. ಇವುಗಳಲ್ಲಿ ಉಭಯ ತಂಡಗಳು ತಲಾ 62 ಪಂದ್ಯಗಳನ್ನು ಗೆದ್ದರೆ, 6 ಪಂದ್ಯಗಳು ಡ್ರಾ ಆಗಿವೆ. ಈ ವರ್ಷದ ಆಗಸ್ಟ್ ನಲ್ಲಿ ಪೋರ್ಟ್ ಆಫ್ ಸ್ಪೇನ್‍ನಲ್ಲಿ ಆಡಿದ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್‍ಗಳಿಂದ ವಿಂಡೀಸ್ ತಂಡವನ್ನು ಸೋಲಿಸಿತ್ತು. ಅದೇ ಸಮಯದಲ್ಲಿ, ಭಾರತವು 2019ರಲ್ಲಿ ಇದುವರೆಗೆ ಒಟ್ಟು 25 ಏಕದಿನ ಪಂದ್ಯಗಳಲ್ಲಿ 17 ಪಂದ್ಯಗಳನ್ನು ಗೆದ್ದಿದ್ದರೆ, 7 ಸೋಲು ಕಂಡಿದೆ. ಈ ಅವಧಿಯಲ್ಲಿ ವೆಸ್ಟ್ ಇಂಡೀಸ್ 25 ಪಂದ್ಯಗಳಲ್ಲಿ 9 ಪಂದ್ಯಗಳನ್ನು ಗೆದ್ದಿದ್ದರೆ, 13 ಪಂದ್ಯಗಳು ಸೋತಿತ್ತು.

  • 20 ಎಸೆತ 7ರನ್ 6 ವಿಕೆಟ್- ಚಹರ್ ಹ್ಯಾಟ್ರಿಕ್ ಸಾಧನೆ, ಭಾರತಕ್ಕೆ ಸರಣಿ

    20 ಎಸೆತ 7ರನ್ 6 ವಿಕೆಟ್- ಚಹರ್ ಹ್ಯಾಟ್ರಿಕ್ ಸಾಧನೆ, ಭಾರತಕ್ಕೆ ಸರಣಿ

    – ಶ್ರೇಯಸ್ ಅಯ್ಯರ್ ಹ್ಯಾಟ್ರಿಕ್ ಸಿಕ್ಸ್
    – 2-1 ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

    ನಾಗ್ಪುರ: ದೀಪಕ್ ಚಹರ್ ಹ್ಯಾಟ್ರಿಕ್ ವಿಕೆಟ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಅರ್ಧಶತಕದ ಸಾಧನೆಯಿಂದ ಭಾರತ ಬಾಂಗ್ಲಾದೇಶ ವಿರುದ್ಧ 30 ರನ್ ಗಳಿಂದ ಮೂರನೇ ಟಿ-20 ಪಂದ್ಯವನ್ನು ಗೆದ್ದುಕೊಂಡಿದೆ.

    ಗೆಲ್ಲಲು 175 ರನ್ ಗಳ ಕಠಿಣ ಸವಾಲನ್ನು ಪಡೆದ ಬಾಂಗ್ಲಾ 19.2 ಓವರ್ ಗಳಲ್ಲಿ 144 ರನ್ ಗಳಿಗೆ ಆಲೌಟ್ ಆಯ್ತು. ಈ ಮೂಲಕ ಪೇಟಿಎಂ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

    ಈ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡುವ ಮೂಲಕ ಭಾರತದ ಪರ ಟಿ-20ಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ದಾಖಲೆ ಬರೆದರು. ಈ ಪಂದ್ಯದಲ್ಲಿ ದೀಪಕ್ ಚಹರ್ ಎಸೆದದ್ದು 20 ಎಸೆತ (3.2‌ ಓವರ್), ನೀಡಿದ್ದು 7 ರನ್, ಯಾವುದೇ ಇತರೆ ರನ್ ಇಲ್ಲ. ಆದರೆ ಪಡೆದದ್ದು 6 ವಿಕೆಟ್. ಇದರಲ್ಲೂ 14 ಎಸೆತಗಳಿಗೆ ಯಾವುದೇ ರನ್ ಬಂದಿಲ್ಲ.

    ಈ ಪಂದ್ಯದಲ್ಲಿ 6 ವಿಕೆಟ್ ಪಡೆಯುವ ಮೂಲಕ ಟಿ20ಯಲ್ಲಿ ಚಹರ್ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಮೊದಲು ಶ್ರೀಲಂಕಾದ ಅಜಂತ ಮೆಂಡೀಸ್ 8 ರನ್ ನೀಡಿ 6 ವಿಕೆಟ್ ಪಡೆದಿದ್ದರು. ಈಗ 7 ರನ್ ನೀಡಿ 6 ವಿಕೆಟ್ ಪಡೆಯುವುದರೊಂದಿಗೆ ಈ ದಾಖಲೆಯನ್ನು ಚಹರ್ ಈಗ ಮುರಿದಿದ್ದಾರೆ.

    ಇನ್ನಿಂಗ್ಸ್ ನ ಮೊದಲ ಓವರ್ ನಲ್ಲಿಯೇ ಬಾಂಗ್ಲಾ ಬ್ಯಾಟ್ಸ್‌ಮನ್‌ ಗಳು ಸ್ಫೋಟಕ ಬ್ಯಾಟಿಂಗ್ ಆರಂಭಿಸಿದರು. ಹೀಗಾಗಿ ಟೀಂ ಇಂಡಿಯಾ ಬೌಲರ್ ಖಲೀಲ್ ಅಹ್ಮದ್ 8ರನ್ ನೀಡಿದರು. ನಂತರ ಬೌಲಿಂಗ್ ಮಾಡಿದ ವಾಷಿಂಗ್ಟನ್ ಸುಂದರ್ ಬಾಂಗ್ಲಾ ಬ್ಯಾಟ್ಸ್‌ಮನ್ ಗಳನ್ನು ಕಟ್ಟಿಹಾಕಿ ಕೇವಲ 3 ರನ್ ನೀಡಿದರು. ಇನ್ನಿಂಗ್ಸ್ ನ ಮೂರನೇ ಓವರ್ ನ 4 ಹಾಗೂ 5ನೇ ಎಸೆತದಲ್ಲಿ ದೀಪಕ್ ಚಹರ್ ಪ್ರಮುಖ ಎರಡು ವಿಕೆಟ್ ಉರುಳಿಸಿದರು. ಬಾಂಗ್ಲಾ ಆರಂಭಿಕ ಬ್ಯಾಟ್ಸ್‌ಮನ್‌ ಲಿಟನ್ ದಾಸ್ (8 ರನ್) ಹಾಗೂ ಸೌಮ್ಯ ಸರ್ಕಾರ್ (0 ರನ್) ಪೆವಿಲಿಯನ್‍ಗೆ ತೆರಳಿದರು. ಹೀಗಾಗಿ ಇನ್ನಿಂಗ್ಸ್ ನ 4 ಓವರ್ ಅಂತ್ಯಕ್ಕೆ ಬಾಂಗ್ಲಾ ಕೇವಲ 18 ರನ್ ಗಳಿಸಲು ಶಕ್ತವಾಗಿತ್ತು.

    ಆರಂಭಿಕ ಬ್ಯಾಟ್ಸ್‌ಮನ್‌ ಮೊಹಮ್ಮದ್ ನೈಮ್‍ಗೆ ಸಾಥ್ ನೀಡಿದ ಮೊಹಮ್ಮದ್ ಮಿಥುನ್ ವಿಕೆಟ್ ಕಾಯ್ದುಕೊಂಡು, ಆಟ ಮುಂದುವರಿಸಿದರು. ಈ ಜೋಡಿಯು ತಂಡದ ಮೊತ್ತವನ್ನು ಇನ್ನಿಂಗ್ಸ್ ನ 8 ಓವರ್ ಅಂತ್ಯಕ್ಕೆ 53 ರನ್‍ಗಳಿಗೆ ಏರಿಸಿತು.

    ದುಬಾರಿಯಾದ ಚಹಲ್, ದುಬೆ:
    ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಲ್ ಹಾಗೂ ಆಲ್‌ ರೌಂಡರ್ ಶಿವಂ ದುಬೇ ಬಾಂಗ್ಲಾ ದೇಶದ ಬ್ಯಾಟ್ಸ್‌ಮನ್ ಗಳನ್ನು ಕಟ್ಟಿಹಾಕುವಲ್ಲಿ ವಿಫಲರಾದರು. ಎರಡು ಓವರ್ ಬೌಲಿಂಗ್ ಮಾಡಿದ ಚಹಲ್ 23 ರನ್ ನೀಡಿದರೆ, ದುಬೇ ಕೂಡ ಎರಡು ಓವರ್ ಬೌಲಿಂಗ್ ಮಾಡಿ 23 ರನ್ ಹೊಡೆಸಿಕೊಂಡರು. ಇತ್ತ ಇನ್ನಿಂಗ್ಸ್ ನ 12ನೇ ಓವರ್ ನ ಮೊದಲ ಎಸೆತದಲ್ಲಿ ರನ್ ಔಟ್ ಮಾಡಲು ಅವಕಾಶ ಸಿಕ್ಕರೂ ಚಹಲ್ ಮಿಸ್ ಮಾಡಿದರು. ಪರಿಣಾಮ ಮೊಹಮ್ಮದ್ ನೈಮ್ ಹಾಗೂ ಮಿಥುನ್ ಜೋಡಿಯು 12ನೇ ಓವರ್ ಅಂತ್ಯಕ್ಕೆ ತಂಡದ ಮೊತ್ತವನ್ನು 106 ರನ್‍ಗೆ ಪೇರಿಸಿತು.

    98 ರನ್ ಜೊತೆಯಾಟ:
    ಮೊಹಮ್ಮದ್ ನೈಮ್ ಹಾಗೂ ಮೊಹಮ್ಮದ್ ಮಿಥುನ್ ತಮ್ಮ ಸ್ಫೋಟಕ ಬ್ಯಾಟಿಂಗ್‍ನಿಂದ ಭಾರತದ ಬೌಲರ್ ಗಳನ್ನು ಕಾಡಿದರು. ಇನ್ನಿಂಗ್ಸ್ ನ 13ನೇ ಓವರ್ ನಲ್ಲಿ ದೀಪಕ್ ಚಹರ್, ಮೊಹಮ್ಮದ್ ಮಿಥುನ್ ವಿಕೆಟ್ ಉರುಳಿಸಿ ತಂಡಕ್ಕೆ ಆಸರೆಯಾದರು. ಈ ಮೂಲಕ ನೈಮ್ ಹಾಗೂ ಮಿಥುನ್ ಅವರ 98 ರನ್‍ಗಳ ಜೊತೆಯಾಟವನ್ನು ಚಹರ್ ಮುರಿದರು. 29 ಎಸೆತಗಳಲ್ಲಿ ಮಿಥುನ್ ಸಿಕ್ಸ್, 2 ಬೌಂಡರಿ ಸೇರಿ 27 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

    ಈ ಬೆನ್ನಲ್ಲೇ ಶಿವಂ ದುಬೈ ಬೌಲಿಂಗ್‍ಗೆ ಮುಷ್ಫಿಕರ್ ರಹೀಂ (0 ರನ್‍ಗೆ) ವಿಕೆಟ್ ಒಪ್ಪಿಸಿದರು. ಅಷ್ಟೇ ಅಲ್ಲದೆ ಇನ್ನಿಂಗ್ಸ್ ನ 16ನೇ ಓವರ್ ನಲ್ಲಿ ಶಿವಂ ದುಬೈ ಸ್ಫೋಟಕ ಬ್ಯಾಟ್ಸ್‌ಮನ್‌ ಮೊಹಮ್ಮದ್ ನೈಮ್ ಹಾಗೂ ಆಫಿಫ್ ಹುಸೇನ್ ವಿಕೆಟ್ ಉರುಳಿಸಿದರು. ಮೊಹಮ್ಮದ್ ನೈಮ್ 48 ಎಸೆತಗಳಲ್ಲಿ 2 ಸಿಕ್ಸರ್, 10 ಬೌಂಡರಿ ಸೇರಿ 81 ರನ್ ಗಳಿಸಿ ಔಟಾದರೆ, ಆಫಿಫ್ ಹುಸೇನ್ ರನ್ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು.

    ಚಹಲ್ ಸರಣಿ ದಾಖಲೆ:
    ಬಾಂಗ್ಲಾ ತಂಡದ ನಾಯಕ ಮಹ್ಮದುಲ್ಲಾ ವಿಕೆಟ್ ಉರುಳಿಸುವ ಮೂಲಕ ಚಹಲ್ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಭಾರತ ಪರ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಟೀಂ ಇಂಡಿಯಾ ಪರ ಆರ್.ಅಶ್ವಿನ್ ಟಿ-20 ಮಾದರಿಯಲ್ಲಿ 52 ವಿಕೆಟ್‍ಗಳೊಂದಿಗೆ ಮೊದಲ ಹಾಗೂ ಜಸ್ಪ್ರೀತ್ ಬುಮ್ರಾ 51 ವಿಕೆಟ್ ಗಳಿಂದ 2ನೇ ಸ್ಥಾನದಲ್ಲಿದ್ದರು. 53 ವಿಕೆಟ್ ಪಡೆದ ಚಹಲ್ ನಂ.1 ಸ್ಥಾನಕ್ಕೆ ಏರಿದ್ದಾರೆ.

    ಇದಕ್ಕೂ ಮುನ್ನ ಟಾಸ್ ಗೆದ್ದ ಬಾಂಗ್ಲಾದೇಶವು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಇನ್ನಿಂಗ್ಸ್ ನ ಆರಂಭದಲ್ಲಿಯೇ ಬಾಂಗ್ಲಾ ಬೌಲರ್ ಶಫಿಯುಲ್ ಇಸ್ಲಾಮ್ ಟೀಂ ಇಂಡಿಯಾಗೆ ಆಘಾತ ನೀಡಿದರು. ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‍ಮನ್ ರೋಹಿತ್ ಶರ್ಮಾ 6 ಎಸೆಗಳನ್ನು ಎದುರಿಸಿ ಕೇವಲ 2 ರನ್‍ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದ್ದರು.

    ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್‍ಗೆ ಸಾಥ್ ನೀಡಿದ ಕನ್ನಡಿಗ ಕೆ.ಎಲ್.ರಾಹುಲ್ ಸ್ಫೋಟಕ ಬ್ಯಾಟಿಂಗ್ ಆರಂಭಿಸಿ, ತಂಡದ ಮೊತ್ತವನ್ನು ಏರಿಸಿದರು. ಆದರೆ ಸಿಕ್ಸ್ ಸಿಡಿಸಲು ಯತ್ನಿಸಿದ್ದ ಶಿಖರ್ ಧವನ್ ಕ್ಯಾಚ್ ಒಪ್ಪಿದರು. 16 ಎಸೆತಗಳನ್ನು ಎದುರಿಸಿದ ಧವನ್ 4 ಬೌಂಡರಿ ಸೇರಿ 19 ರನ್ ಗಳಿಸಿದ್ದರು.

    ಕೆ.ಎಲ್.ರಾಹುಲ್‍ಗೆ ಸಾಥ್ ನೀಡಿದ ಶ್ರೇಯಸ್ ಅಯ್ಯರ್ ಕೂಡ ಭರ್ಜರಿ ಬ್ಯಾಟಿಂಗ್ ಆರಂಭಿಸಿದರು. ಈ ಜೋಡಿಯು 59 ರನ್ ಕಲೆ ಹಾಕಿತು. ಅರ್ಧ ಶತಕ ಪೂರೈಸಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಬಾಲ್ ಅನ್ನು ಬೌಂಡರಿಗೆ ಅಟ್ಟಲು ಹೋಗಿ ವಿಕೆಟ್ ಒಪ್ಪಿಸಿದರು. 35 ಎಸೆತಗಳನ್ನು ಎದುರಿಸಿದ ರಾಹುಲ್ 7 ಬೌಂಡರಿ ಸಿಡಿಸಿ 52 ರನ್ ಗಳಿಸಿ ಔಟಾಗಿದ್ದರು.

    ಹ್ಯಾಟ್ರಿಕ್ ಸಿಕ್ಸ್:
    ಇನ್ನಿಂಗ್ಸ್ ನ 15ನೇ ಓವರ್ ಎಸೆದ ಅಫಿಫ್ ಹುಸೇನ್ ಎಸೆದ ಮೊದಲ ಮೂರು ಎಸೆತಗಳನ್ನು ಶ್ರೇಯಸ್ ಅಯ್ಯರ್ ಸಿಕ್ಸ್ ಸಿಡಿಸಿದರು. ಈ ಮೂಲಕ ಈ ಪಂದ್ಯದಲ್ಲಿ ಅಯ್ಯರ್ 5 ಸಿಕ್ಸರ್ ಸಿಡಿಸಿದ್ದಾರೆ. ಆದರೆ ಇನ್ನಿಂಗ್ಸ್ ನ 16ನೇ ಓವರ್ ನ ಮೊದಲ ಎಸೆತದಲ್ಲಿಯೇ ರಿಷಭ್ ಪಂತ್ ವಿಕೆಟ್ ಒಪ್ಪಿಸಿದರು. 9 ಎಸೆತಗಳನ್ನು ಎದುರಿಸಿದ ಪಂತ್ ಕೇವಲ 6 ರನ್ ಗಳಿಸಲು ಶಕ್ತರಾದರು. ಇದೇ ಓವರ್ ನ 5ನೇ ಎಸೆತದಲ್ಲಿ ಅಯ್ಯರ್ ವಿಕೆಟ್ ಒಪ್ಪಿಸಿದರು. 33 ಎಸೆತಗಳಲ್ಲಿ 5 ಸಿಕ್ಸರ್, 3 ಬೌಂಡರಿ ಸೇರಿ 62 ರನ್ ಸಿಡಿಸಿ ಔಟಾಗಿದ್ದರು. ಮನೀಷ್ ಪಾಂಡೆ ಔಟಾಗದೆ 13 ಎಸೆತಗಳಲ್ಲಿ 3 ಬೌಂಡರಿ ಸೇರಿ 22 ರನ್ ಹಾಗೂ ಶಿವಂ ದುಬೇ ಔಟಾಗದೆ 8 ಎಸೆತಗಳಲ್ಲಿ 9 ರನ್ ಗಳಿಸಿದರು. ಈ ಮೂಲಕ ಟೀಂ ಇಂಡಿಯಾ 174 ರನ್ ಪೇರಿಸಿತ್ತು.

    ಈ ಪಂದ್ಯದಲ್ಲಿ 7 ವಿಕೆಟ್ ಪಡೆಯುದರೊಂದಿಗೆ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಗೌರವವಕ್ಕೆ ದೀಪಕ್ ಚಹರ್ ಪಾತ್ರರಾದರು.

  • ಶ್ರೇಯಸ್ ಅಯ್ಯರ್ ಹ್ಯಾಟ್ರಿಕ್ ಸಿಕ್ಸ್ – ಬಾಂಗ್ಲಾ ದೇಶಕ್ಕೆ 175 ರನ್ ಗುರಿ

    ಶ್ರೇಯಸ್ ಅಯ್ಯರ್ ಹ್ಯಾಟ್ರಿಕ್ ಸಿಕ್ಸ್ – ಬಾಂಗ್ಲಾ ದೇಶಕ್ಕೆ 175 ರನ್ ಗುರಿ

    ನಾಗ್ಪುರ: ಮೂರನೇ ಟಿ-20 ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅರ್ಧಶತಕ ಸಿಡಿಸಿದ್ದು, ಬಾಂಗ್ಲಾದೇಶಕ್ಕೆ 175 ರನ್‍ಗಳ ಗುರಿಯನ್ನು ನೀಡಲಾಗಿದೆ.

    ನಾಗ್ಪುರದಲ್ಲಿ ಭಾನುವಾರ ನಡೆಯುತ್ತಿರುವ ಟಿ-20 ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್ ಮಾಡಿದೆ. ಕೆ.ಎಲ್.ರಾಹುಲ್ 52 ರನ್, ಶ್ರೇಯಸ್ ಅಯ್ಯರ್ ಮೊದಲ ಅರ್ಧಶತಕದೊಂದಿಗೆ 62 ರನ್‍ಗಳ ಸಹಾಯದಿಂದ ಭಾರತವು 5 ವಿಕೆಟ್ ನಷ್ಟಕ್ಕೆ  174 ರನ್ ಗಳಿಸಿದೆ.

    ಟಾಸ್ ಗೆದ್ದ ಬಾಂಗ್ಲಾದೇಶವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇನ್ನಿಂಗ್ಸ್ ನ ಆರಂಭದಲ್ಲಿಯೇ ಬಾಂಗ್ಲಾ ಬೌಲರ್ ಶಫಿಯುಲ್ ಇಸ್ಲಾಮ್ ಟೀಂ ಇಂಡಿಯಾಗೆ ಆಘಾತ ನೀಡಿದರು. ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ 6 ಎಸೆಗಳನ್ನು ಎದುರಿಸಿ ಕೇವಲ 2 ರನ್‍ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು.

    ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್‍ಗೆ ಸಾಥ್ ನೀಡಿದ ಕನ್ನಡಿಗ ಕೆ.ಎಲ್.ರಾಹುಲ್ ಸ್ಫೋಟಕ ಬ್ಯಾಟಿಂಗ್ ಆರಂಭಿಸಿ, ತಂಡದ ಮೊತ್ತವನ್ನು ಏರಿಸಿದರು. ಆದರೆ ಸಿಕ್ಸ್ ಸಿಡಿಸಲು ಯತ್ನಿಸಿದ್ದ ಶಿಖರ್ ಧವನ್ ಕ್ಯಾಚ್  ನೀಡಿ ಹೊರ ನಡೆದರು. 16 ಎಸೆತಗಳನ್ನು ಎದುರಿಸಿದ ಧವನ್ 4 ಬೌಂಡರಿ ಸೇರಿ 19 ರನ್ ಗಳಿಸಿದರು.

    ಕೆ.ಎಲ್.ರಾಹುಲ್‍ಗೆ ಸಾಥ್ ನೀಡಿದ ಶ್ರೇಯಸ್ ಅಯ್ಯರ್ ಕೂಡ ಭರ್ಜರಿ ಬ್ಯಾಟಿಂಗ್ ಆರಂಭಿಸಿದರು. ಈ ಜೋಡಿಯು 59 ರನ್ ಕಲೆ ಹಾಕಿತು. ಅರ್ಧ ಶತಕ ಪೂರೈಸಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಬಾಲ್ ಅನ್ನು ಬೌಂಡರಿಗೆ ಅಟ್ಟಲು ಹೋಗಿ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. 35 ಎಸೆತಗಳನ್ನು ಎದುರಿಸಿದ ರಾಹುಲ್ 7 ಬೌಂಡರಿ ಸಿಡಿಸಿ 52 ರನ್ ಗಳಿಸಿ ಔಟಾದರು.

    ಹ್ಯಾಟ್ರಿಕ್ ಸಿಕ್ಸ್:
    ಇನ್ನಿಂಗ್ಸ್ ನ 15ನೇ ಓವರ್ ಎಸೆದ ಅಫಿಫ್ ಹುಸೇನ್ ಎಸೆದ ಮೊದಲ ಮೂರು ಎಸೆತಗಳನ್ನು ಶ್ರೇಯಸ್ ಅಯ್ಯರ್ ಸಿಕ್ಸ್ ಸಿಡಿಸಿದರು. ಈ ಮೂಲಕ ಈ ಪಂದ್ಯದಲ್ಲಿ ಅಯ್ಯರ್ 5 ಸಿಕ್ಸರ್ ಸಿಡಿಸಿದ್ದಾರೆ. ಆದರೆ ಇನ್ನಿಂಗ್ಸ್ ನ 16ನೇ ಓವರ್ ನ ಮೊದಲ ಎಸೆತದಲ್ಲಿಯೇ ರಿಷಭ್ ಪಂತ್ ವಿಕೆಟ್ ಒಪ್ಪಿಸಿದರು. 9 ಎಸೆತಗಳನ್ನು ಎದುರಿಸಿದ ಪಂತ್ ಕೇವಲ 6 ರನ್ ಗಳಿಸಲು ಶಕ್ತರಾದರು. ಇದೇ ಓವರ್ ನ 5ನೇ ಎಸೆತದಲ್ಲಿ ಅಯ್ಯರ್ ವಿಕೆಟ್ ಒಪ್ಪಿಸಿದರು. 33 ಎಸೆತಗಳಲ್ಲಿ 5 ಸಿಕ್ಸರ್, 3 ಬೌಂಡರಿ ಸೇರಿ 62 ರನ್ ಸಿಡಿಸಿ ಔಟಾದರು.

    ಮನೀಷ್ ಪಾಂಡೆ ಔಟಾಗದೆ 13 ಎಸೆತಗಳಲ್ಲಿ 3 ಬೌಂಡರಿ ಸೇರಿ 22 ರನ್ ಹಾಗೂ ಶಿವಂ ದುಬೇ ಔಟಾಗದೆ 8 ಎಸೆತಗಳಲ್ಲಿ 9 ರನ್ ಗಳಿಸಿದರು. ಈ ಮೂಲಕ ಟೀಂ ಇಂಡಿಯಾ 174 ರನ್ ಪೇರಿಸಿತು.

  • ಡೆಲ್ಲಿ ಟಾಸ್ ವೇಳೆ ಶ್ರೇಯಸ್ ನೋಡಿ ಧೋನಿ ನಕ್ಕಿದ್ದು ಏಕೆ ಗೋತ್ತಾ? ವಿಡಿಯೋ ನೋಡಿ

    ಡೆಲ್ಲಿ ಟಾಸ್ ವೇಳೆ ಶ್ರೇಯಸ್ ನೋಡಿ ಧೋನಿ ನಕ್ಕಿದ್ದು ಏಕೆ ಗೋತ್ತಾ? ವಿಡಿಯೋ ನೋಡಿ

    ನವದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಡೆಲ್ಲಿ, ಚೆನ್ನೈ ತಂಡಗಳ ನಡುವಿನ ಪಂದ್ಯದ ಟಾಸ್ ವೇಳೆ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಚಿಮ್ಮಿದನ್ನು ನೋಡಿದ ಧೋನಿ ನಕ್ಕು ಸುಮ್ಮನಾಗಿದ್ದಾರೆ.

    ಈ ಮುನ್ನ ಇಬ್ಬರು ನಾಯಕರನ್ನು ಸಾಂಪ್ರದಾಯದಂತೆ ನ್ಯೂಜಿಲೆಂಡ್ ಕ್ರಿಕೆಟರ್ ಸೈಮನ್ ಪರಿಚಯಿಸಿದರು. ಬಳಿಕ ಡೆಲ್ಲಿ ಕ್ಯಾಪ್ಟನ್ ಶ್ರೇಯಸ್ ಕೈಗೆ ನಾಣ್ಯ ನೀಡಲಾಯಿತು. ಈ ವೇಳೆ ನಾಣ್ಯವನ್ನು ಚಿಮ್ಮಲು ಪ್ರಯಾಸ ಪಟ್ಟ ಶ್ರೇಯಸ್ ನೇರವಾಗಿ ಕ್ಯಾಮೆರಾ ಮುಂದೆ ಎಸೆದರು. ಇದನ್ನು ಕಂಡ ಧೋನಿ ಕ್ಷಣ ಕಾಲ ನಗೆ ಬೀರಿದ್ದರು. ಧೋನಿ ನಗು ಕಂಡ ಶ್ರೇಯಸ್ ಸಹ ಮುಗುಳ್ನಗೆ ಬೀರಿದರು.

    ಈ ಪಂದ್ಯದಲ್ಲಿ ಡೆಲ್ಲಿ ಬೌಲಿಂಗ್ ದಾಳಿಗೆ ಸಿಲುಕಿದ ಚೆನ್ನೈ ಬ್ಯಾಟಿಂಗ್ ಪಡೆ ಸೋಲುಂಡಿತ್ತು. ಪಂದ್ಯದ ಬಳಿಕ ಶ್ರೇಯಸ್ ಅಯ್ಯರ್, ಧೋನಿ ತಮ್ಮ ನಡುವೆ ನಡೆದ ಘಟನೆಯ ಫೋಟೋವನ್ನು ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಫೋಸ್ಟ್ ಮಾಡಿದ್ದಾರೆ.

    ಮಹೀ ಬಾಯ್ ಅವರು ಟೀಂ ಇಂಡಿಯಾ ಪದಾರ್ಪಣೆ ಮಾಡಿದ್ದ ವೇಳೆ ತನಗೆ ಕೇವಲ 13 ವರ್ಷ. ನಾವು ಅವರನ್ನು ಅದರ್ಶವಾಗಿ ತೆಗೆದುಕೊಂಡಿದ್ದೇವೆ. ಆದ್ರೆ ಪಂದ್ಯದಲ್ಲಿ ಧೋನಿ ಅವರ ಪಕ್ಕ ನಿಂತು ಟಾಸ್ ಮಾಡುವುದು ಊಹೆಯೂ ಮಾಡಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.

  • ಕೊಹ್ಲಿ ಸ್ಥಾನದಲ್ಲಿ ಆಡಲಿದ್ದಾರೆ ಶ್ರೇಯಸ್ ಅಯ್ಯರ್!

    ಕೊಹ್ಲಿ ಸ್ಥಾನದಲ್ಲಿ ಆಡಲಿದ್ದಾರೆ ಶ್ರೇಯಸ್ ಅಯ್ಯರ್!

    ಮುಂಬೈ: ಅಫ್ಘಾನಿಸ್ತಾನದ ವಿರುದ್ಧ ಬೆಂಗಳೂರಿನಲ್ಲಿ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಆಯ್ಕೆ ಆಗುವ ಸಾಧ್ಯತೆ ಇದೆ.

    ಕೊಹ್ಲಿ ಕೌಂಟಿ ಕ್ರಿಕೆಟ್ ಆಡಲು ಇಂಗ್ಲೆಂಡ್ ಗೆ ತೆರಳಲಿರುವ ಕಾರಣ ಅಫ್ಘಾನಿಸ್ತಾನ ಹಾಗೂ ಐರ್ಲೆಂಡ್ ಎದುರಿನ ಟಿ20 ಸರಣಿಗಳಿಗೆ ಬೇರೆ ಆಟಗಾರರನ್ನು ಆಯ್ಕೆ ಮಾಡಬೇಕಿದೆ. ಅಲ್ಲದೇ ಟೆಸ್ಟ್ ತಂಡದ ನಾಯಕನಿಗಾಗಿ ಬದಲಿ ಆಟಗಾರನನ್ನು ಆರಿಸಬೇಕಿದೆ.

    ಎಂಎಸ್‍ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ತಂಡವನ್ನು ಆಯ್ಕೆ ಮಾಡಲಿದ್ದು, ಸದ್ಯ ಈ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಆಯ್ಕೆ ಆಗುವ ಸಾಧ್ಯತೆ ಇದೆ. 2017 ರಲ್ಲಿ ನಡೆದ ಆಸೀಸ್ ಎದುರಿನ ಟೆಸ್ಟ್ ಪಂದ್ಯಕ್ಕೆ ಗಾಯದ ಸಮಸ್ಯೆಯಿಂದ ಕೊಹ್ಲಿ ಅಲಭ್ಯರಾದ ವೇಳೆ ಶ್ರೇಯಸ್ ರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಈ ಪಂದ್ಯದಲ್ಲಿ ಶ್ರೇಯಸ್ ಗೆ ಅಂತಿಮ 11ರ ಬಳಗದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ.

    ಈ ಬಾರಿಯ ಐಪಿಎಲ್ ನಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಶ್ರೇಯಸ್ ಉತ್ತಮ ಫಾರ್ಮ್‍ನಲ್ಲಿದ್ದು, ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಇದುವರೆಗೂ ಮೊದಲ ದರ್ಜೆ ಕ್ರಿಕೆಟ್ ನಲ್ಲಿ 46 ಪಂದ್ಯ ಆಡಿರುವ ಅಯ್ಯರ್ 53.90 ಸರಾಸರಿ ಹೊಂದಿದ್ದು, 3989 ರನ್ ಗಳಿಸಿದ್ದಾರೆ. ಟೆಸ್ಟ್ ತಂಡಕ್ಕೆ ಚೇತೇಶ್ವರ ಪೂಜಾರ ಹಾಗೂ ಇಶಾಂತ್ ಶರ್ಮಾ ಆಯ್ಕೆ ಆಗುವ ಸಾಧ್ಯತೆಗಳಿದೆ. ಸದ್ಯ ಇಬ್ಬರು ಆಟಗಾರರು ಕೌಟಿ ಕ್ರಿಕೆಟ್ ನಲ್ಲಿ ಆಡುತ್ತಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಯ್ಕೆ ಸಮಿತಿ ಸದಸ್ಯರೊಬ್ಬರು, ಕೊಹ್ಲಿ ಸ್ಥಾನದಲ್ಲಿ ಅಯ್ಯರ್, ಜಡೇಜಾ ಸ್ಥಾನದಲ್ಲಿ ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ ಸ್ಥಾನದಲ್ಲಿ ವಿಜಯ್ ಶಂಕರ್ ಆಯ್ಕೆ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಇಂಗೆಂಡ್ ಟೆಸ್ಟ್ ಹಾಗೂ ಏಕದಿನ ಸರಣಿಗೆ ಭಾರತ ಎ ತಂಡ ಆಯ್ಕೆ ಮಾಡುವ ಸಾಧ್ಯತೆ ಇದ್ದು, ಅಂಡರ್ 19 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಪೃಥ್ವಿ ಶಾ, ಶುಭಮನ್ ಗಿಲ್ ಮತ್ತು ಶಿವಂ ಮಾವಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

  • ಡೆಲ್ಲಿ ನಾಯಕತ್ವದಿಂದ ಕೆಳಗಿಳಿದ ಗೌತಮ್ ಗಂಭೀರ್!

    ಡೆಲ್ಲಿ ನಾಯಕತ್ವದಿಂದ ಕೆಳಗಿಳಿದ ಗೌತಮ್ ಗಂಭೀರ್!

    ನವದೆಹಲಿ: ಐಪಿಎಲ್ 2018 ರ 11ನೇ ಆವೃತ್ತಿಯಲ್ಲಿ ಸತತ ನಿರಾಸ ಪ್ರದರ್ಶನ ತೋರಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕತ್ವ ಸ್ಥಾನದಿಂದ ಗೌತಮ್ ಗಂಭೀರ್ ಕೆಳಗಿಳಿದಿದ್ದು, ಯುವ ಆಟಗಾರ ಶ್ರೇಯಸ್ ಅಯ್ಯರ್ ಗೆ ನಾಯಕತ್ವ ಪಟ್ಟ ನೀಡಲಾಗಿದೆ.

    ಡೆಲ್ಲಿ ತಂಡದ ನಾಯಕತ್ವ ವಹಿಸಿದ್ದ ಗೌತಮ್ ಗಂಭೀರ್ ತಂಡದ ನಿರಾಸ ಪ್ರದರ್ಶನದ ಹೊಣೆ ಹೊತ್ತು ಸ್ವತಃ ನಾಯಕತ್ವ ಪಟ್ಟದಿಂದ ಬುಧವಾರ ಹಿಂದೆ ಸರಿದಿದ್ದಾರೆ. ಗಂಭೀರ್ ನಾಯಕತ್ವ ಪಟ್ಟದಿಂದ ಕೆಳಗಿಳಿದ ಕಾರಣ ಡೆಲ್ಲಿ ತಂಡದ ಮ್ಯಾನೇಜ್‍ಮೆಂಟ್ ಶ್ರೇಯಸ್ ಅವರನ್ನು ನಾಯಕರನ್ನಾಗಿ ನೇಮಿಸಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಗಂಭೀರ್ ನಾಯಕತ್ವ ತೊರೆಯುವ ಸಂಗತಿ ನನ್ನ ಸ್ವತಃ ನಿರ್ಧಾರವಾಗಿದ್ದು, ತನ್ನ ಮೇಲೆ ಯಾರ ಒತ್ತಡವು ಇಲ್ಲ. ಅಲ್ಲದೇ ನನ್ನ ನಿರ್ಧಾರದ ಕುರಿತು ತಂಡದ ಮ್ಯಾನೇಜ್ ಮೆಂಟ್ ಗೆ ತಿಳಿಸಿದ ಬಳಿಕ ಹಲವು ಸುತ್ತು ಚರ್ಚೆಗಳು ನಡೆಸಲಾಗಿದೆ ಎಂದರು.

    ಟೂರ್ನಿಯಲ್ಲಿ ಇದುವರೆಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡ 6 ಪಂದ್ಯಗಳನ್ನು ಆಡಿದೆ. ಉಳಿದಂತೆ 8 ರ ಘಟಕ್ಕೆ ತಲುಪಲು ಇನ್ನು 8 ಪಂದ್ಯಗಳನ್ನು ಆಡಬೇಕಿದೆ. ಆಡಿರುವ 6 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಸೋಲು ಪಡೆದಿದೆ. ಟೂರ್ನಿಯಲ್ಲಿಯ ಮಧ್ಯದಲ್ಲಿ ತಂಡದ ನಾಯತ್ವ ಬದಲಾವಣೆ ಮಾಡುವುದು ತಂಡದ ಮೇಲೆ ಋಣಾತ್ಮಕ ಪ್ರಭಾವ ಉಂಟು ಮಾಡಲಿದೆ ಎಂಬ ಅಂಶದ ಬಳಿಕವೂ ಗಂಭೀರ್ ಅವರ ನಿರ್ಧಾರದ ಮೇರೆಗೆ ಈ ಬದಲಾವಣೆ ಮಾಡಲಾಗಿದೆ.

    ಕಳೆದ ಎರಡು ದಿನಗಳ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಪಂದ್ಯದ ಸೋಲಿನ ಬಳಿಕ ಗಂಭೀರ್ ತಂಡದ ನಾಯಕತ್ವ ತೊರೆಯುವ ನಿರ್ಧಾರವನ್ನು ತಂಡದ ಮ್ಯಾನೇಜ್ ಮೆಂಟ್ ಮುಂದೇ ತಿಳಿಸಿದ್ದರು. ಬಳಿಕ ಹಲವು ಬಾರಿ ಚರ್ಚೆ ನಡೆಸಿ ಡೆಲ್ಲಿ ತಂಡದ ಮುಖ್ಯ ಕೋಚ್ ರಿಕಿ ಪಾಟಿಂಗ್ ಹಾಗೂ ಗಂಭೀರ್ ಜಂಟಿಯಾಗಿ ನಿರ್ಧಾರ ಪ್ರಕಟಿಸಿದ್ದಾರೆ.

    ನಾಯಕತ್ವದ ಬದಲಾವಣೆ ನಿರ್ಧಾರದಿಂದ ಮುಂದಿನ ಕೊಲ್ಕತ್ತಾ ವಿರುದ್ಧದ ಪಂದ್ಯವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದಾರೆ. ಗಂಭೀರ್ ಅವರ ಈ ನಿರ್ಧಾರಕ್ಕೆ ವೈಯಕ್ತಿಕವಾಗಿ ಅವರು ತಂಡಕ್ಕೆ ರನ್ ಕೊಡುಗೆ ನೀಡದಿರುವುದೇ ಪ್ರಮುಖ ಕಾರಣ ಎನ್ನಲಾಗಿದೆ. ಟೂರ್ನಿಯಲ್ಲಿ ಗಂಭೀರ್ ಒಂದು ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದರು, ಬಳಿಕ ನಡೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದರು. ಟೂರ್ನಿಯಲ್ಲಿ ಒಟ್ಟಾರೆ 6 ಪಂದ್ಯಗಳಿಂದ ಗಂಭೀರ್ 85 ರನ್ ಗಳಿಸಿದ್ದಾರೆ. ಈ ಹಿಂದಿನ ಐಪಿಎಲ್ ಟೂರ್ನಿಗಳಲ್ಲಿ ಕೊಲ್ಕತ್ತಾ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಎರಡು ಬಾರಿ ಕಪ್ ಗೆಲ್ಲಲು ಕಾರಣರಾಗಿದ್ದರು.

    ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಶ್ರೇಯಸ್ ಅಯ್ಯರ್ ಕಳೆದ ಆರ್ ಸಿಬಿ ಹಾಗೂ ಚೆನ್ನೈ ತಂಡಗಳ ವಿರುದ್ಧ ಅರ್ಧಶತಕ ಗಳಿಸಿ ಮಿಂಚಿದ್ದರು. ಆದರೆ ಈ ಎರಡು ಪಂದ್ಯಗಳಲ್ಲಿ ಡೆಲ್ಲಿ ಗೆಲುವು ಪಡೆಯಲು ವಿಫಲವಾಗಿತ್ತು.