Tag: Shramik Express

  • ದಾರಿ ತಪ್ಪಿದ ಬೆಂಗಳೂರಿನಿಂದ ಹೊರಟ ಶ್ರಮಿಕ ರೈಲು – ಆಹಾರವಿಲ್ಲದೇ ಪ್ರಯಾಣಿಕರ ಪರದಾಟ

    ದಾರಿ ತಪ್ಪಿದ ಬೆಂಗಳೂರಿನಿಂದ ಹೊರಟ ಶ್ರಮಿಕ ರೈಲು – ಆಹಾರವಿಲ್ಲದೇ ಪ್ರಯಾಣಿಕರ ಪರದಾಟ

    -20 ಗಂಟೆಯಿಂದ ಆಹಾರವಿಲ್ಲದೇ ಗೋಳಾಟ

    ಬೆಂಗಳೂರು: 1,450 ಪ್ರವಾಸಿ ಕಾರ್ಮಿಕರನ್ನು ಹೊತ್ತು ಬೆಂಗಳೂರಿನಿಂದ ಹೊರಟ ರೈಲು ಮಾರ್ಗ ಮಧ್ಯೆ ದಾರಿ ತಪ್ಪಿ ಘಾಜಿಯಾಬಾದ್ ತಲುಪಿದೆ. ಗುರುವಾರ ಸಂಜೆ ಬೆಂಗಳೂರಿನ ಚಿಕ್ಕಬಾಣವಾರ ಸ್ಟೇಶನ್ ನಿಂದ ಹೊರಟಿದ್ದ ರೈಲು ಉತ್ತರ ಪ್ರದೇಶದ ಬಸ್ತಿ ತಲುಪಬೇಕಿತ್ತು. 20 ಗಂಟೆಗೂ ಅಧಿಕ ಸಮಯದವರೆಗೆ ಪ್ರವಾಸಿ ಕಾರ್ಮಿಕರು ಊಟ ಮಾಡಿಲ್ಲ. ಇನ್ನು ಹಲವರಿಗೆ ತಾವು ಊರು ಸೇರುತ್ತೇವೆ ಎಂಬ ನಂಬಿಕೆ ಇಲ್ಲ ಅನ್ನೋ ಅನುಮಾನ ಮೂಡಿದೆ.

    ಗುರುವಾರ ಸಂಜೆ 6.45ಕ್ಕೆ ಚಿಕ್ಕಬಾಣವಾರದಿಂದ ಈ ರೈಲು ಹೊರಟಿತ್ತು. ಬೆಂಗಳೂರಿನಿಂದ 2,456 ಕಿಲೋ ಮೀಟರ್ ದೂರದಲ್ಲಿರೋ ಬಸ್ತಿಯನ್ನು ಈ ರೈಲು ತಲುಪಬೇಕಿತ್ತು. ಪ್ರವಾಸಿ ಕಾರ್ಮಿಕರು ಪ್ರಯಾಣಕ್ಕಾಗಿ 1,020 ರೂಪಾಯಿ (875 ರೈಲ್ವೇ ಚಾರ್ಜ್ + 145 ಬಸ್ ಚಾರ್ಜ್) ಪಾವತಿ ಮಾಡಿದ್ದರು. ಬೆಂಗಳೂರಿನಿಂದ ಹೊರಟ ರೈಲು ಸಿಕಂದರಾಬಾದ್, ನಾಗಪುರ, ಇಟಾರಸಿ, ಝಾಂಸಿ, ಕಾನ್ಪುರ ಮತ್ತು ಲಕ್ನೋ ಮಾರ್ಗವಾಗಿ ಬಸ್ತಿಗೆ ಹೋಗಬೇಕಿತ್ತು. ಇದು ಬರೋಬ್ಬರಿ 45 ಗಂಟೆಯ ಪ್ರಯಾಣವಿತ್ತು. ಆದ್ರೆ ಝಾಂಸಿಯಲ್ಲಿ ರೈಲು ಮಾರ್ಗ ಬದಲಿಸಿದ್ದರಿಂದ ಶನಿವಾರ ಸಂಜೆ ಗಾಜಿಯಾಬಾದ್ ತಲುಪಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಪ್ರವಾಸಿ ಕಾರ್ಮಿಕ, ರೂಟ್ ಮ್ಯಾಪ್ ಬದಲಿಸುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಶುಕ್ರವಾರ ರಾತ್ರಿ ನಾಗಪುರ ನಿಲ್ದಾಣದ ನಂತ್ರ ನಾವು ಆಹಾರವೇ ಸೇವಿಸಿಲ್ಲ ಎಂದಿದ್ದಾರೆ. ಇನ್ನು ಕಾರ್ಮಿಕರಿಗೆ ಟಿಕಟ್ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದ ನರೇಂದ್ರ ಕುಮಾರ್ ಮಾತನಾಡಿ, ಟ್ರೈನ್ ಡೈವರ್ಟ್ ತೆಗೆದುಕೊಂಡಿದೆ ಎಂದು ಫೋನ್ ಬಂತು. ಪ್ರಯಾಣಿಕರು 20 ಗಂಟೆಯಿಂದ ಏನು ತಿಂದಿಲ್ಲ ಮತ್ತು ರೈಲು ಯಾವಾಗ ಬಸ್ತಿ ತಲುಪುತ್ತೆ ಎಂಬ ವಿಷಯ ಗೊತ್ತಿಲ್ಲ ಎಂದು ಹೇಳಿದ್ದಾರೆ.

    ಮಾರ್ಗ ಮಧ್ಯೆ ಸಿಲುಕಿರುವ ಪ್ರವಾಸಿ ಕಾರ್ಮಿಕರಿಗೆ ಊಟ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಹಾಗೂ ಅವರನ್ನು ಬಸ್ತಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ ಎಂದು ಬೆಂಗಳೂರಿನ ರೈಲ್ವೇ ಅಧಿಕಾರಿ (ಡಿಆರ್‍ಎಂ) ಅಶೋಕ್ ಕುಮಾರ್ ವರ್ಮಾ ತಿಳಿಸಿದ್ದಾರೆ.

  • ಕಲಬುರಗಿಯಿಂದ ಶ್ರಮಿಕ್ ಎಕ್ಸ್‌ಪ್ರೆಸ್ ಮೂಲಕ ಬಿಹಾರಕ್ಕೆ ಹೊರಟ 1,436 ಪ್ರವಾಸಿ ಕಾರ್ಮಿಕರು

    ಕಲಬುರಗಿಯಿಂದ ಶ್ರಮಿಕ್ ಎಕ್ಸ್‌ಪ್ರೆಸ್ ಮೂಲಕ ಬಿಹಾರಕ್ಕೆ ಹೊರಟ 1,436 ಪ್ರವಾಸಿ ಕಾರ್ಮಿಕರು

    ಕಲಬುರಗಿ: ಉದ್ಯೋಗ ಆರಿಸಿ ಇಲ್ಲಿಗೆ ಒಂದು ಲಾಕ್‍ಡೌನ್‍ನಿಂದ ಕಲಬುರಗಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಿಲುಕಿಕೊಂಡಿದ್ದ ಬಿಹಾರಿಗಳು ಬುಧವಾರ ರಾತ್ರಿ 8 ಗಂಟೆಗೆ ಶ್ರಮಿಕ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ತಮ್ಮ ಸ್ವ-ಸ್ಥಳದತ್ತ ಪ್ರಯಾಣ ಬೆಳೆಸಿದರು.

    ಮಹಾಮಾರಿ ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಕಳೆದೆರಡು ತಿಂಗಳಿನಿಂದ ದೇಶದಾದ್ಯಂತ ಲಾಕ್‍ಡೌನ್ ಪರಿಣಾಮ ಪ್ರವಾಸಿ ಕಾರ್ಮಿಕರು ಸಿಲುಕಿದ್ದರು. ಇದೀಗ ಲಾಕ್‍ಡೌನ್ ಸಡಿಲಿಕೆ ನೀಡಿ ಆಯಾ ಕಾರ್ಮಿಕರು ತಮ್ಮ ತವರು ರಾಜ್ಯಕ್ಕೆ ಪ್ರಯಾಣ ಬೆಳಸಲು ಸರ್ಕಾರ ಅವಕಾಶ ನೀಡಿರುವುದರಿಂದ ಬುಧವಾರ ಸಂಜೆ ಕಲಬುರಗಿ ರೈಲ್ವೆ ನಿಲ್ದಾಣದಿಂದ ಬಿಹಾರಕ್ಕೆ ವಲಸಿಗರು ಮುಖ ಮಾಡಿದರು. ತವರಿನತ್ತ ಹೊರಟ ವಲಸಿಗರ ಮುಖದಲ್ಲಿ ಮಂದಹಾಸ ಕಂಡಿತು.

    ಈ ಸಂದರ್ಭದಲ್ಲಿ ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಹಾಜರಿದ್ದ ಜಿಲ್ಲಾಧಿಕಾರಿ ಶರತ್ ಬಿ. ಮಾತನಾಡಿ ಕಲಬುರಗಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಸುಮಾರು 1,436 ಬಿಹಾರದ ನಿವಾಸಿಗಳು ಪ್ರಯಾಣಕ್ಕೆ ನೋಂದಣಿ ಮಾಡಿಕೊಂಡಿದ್ದು, ಅವರೆಲ್ಲರು ಇಂದು ತಮ್ಮ ರಾಜ್ಯಕ್ಕೆ ಪ್ರಯಾಣ ಬೆಳೆಸುತ್ತಿದ್ದಾರೆ ಎಂದರು.

    ಬಿಹಾರಕ್ಕೆ ಪ್ರಯಾಣ ಬೆಳೆಸಲು ಬೇರೆ ಜಿಲ್ಲೆಯಿಂದ ಬಂದವರನ್ನು ಆಯಾ ಜಿಲ್ಲೆಯಿಂದಲೇ ಸ್ಕ್ರೀನಿಂಗ್ ಮಾಡಿ ತರಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿದ್ದ ಕಾರ್ಮಿಕರಿಗೆ ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ಕ್ರೀನಿಂಗ್ ಮಾಡಲಾಗಿದೆ. ಎಲ್ಲಾ ಪ್ರಯಾಣಿಕರಿಗೆ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಮಾಡಲಾಗಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದರು.

    ಮಂಗಳವಾರಷ್ಟೇ ಕಲಬುರಗಿ ರೈಲು ನಿಲ್ದಾಣದಿಂದ ಮೊದಲನೇ ಶ್ರಮಿಕ್ ಎಕ್ಸ್‍ಪ್ರೆಸ್ ರೈಲು ಸುಮಾರು 1,500 ಜನ ಕಾರ್ಮಿಕರನ್ನು ಉತ್ತರ ಪ್ರದೇಶಕ್ಕೆ ಕರೆದುಕೊಂಡು ಹೋಗಿತ್ತು. ಇಂದು ಕಲಬುರಗಿಯಿಂದ ಬಿಹಾರಕ್ಕೆ ಹೋಗುತ್ತಿರುವ 2ನೇ ಶ್ರಮಿಕ್ ಎಕ್ಸ್ ಪ್ರೆಸ್ ರೈಲು ಇದಾಗಿದ್ದು, ಶುಕ್ರವಾರ ರೈಲು ಬಿಹಾರ ತಲುಪಲಿದೆ ಎಂದರು.

    ಗುರುವಾರ ಮತ್ತೊಂದು ರೈಲು ಬಿಹಾರಕ್ಕೆ: ಬಿಹಾರದ ವಲಸಿಗ ಕಾರ್ಮಿಕರ ಪ್ರಯಾಣಕ್ಕೆ ಕಲಬುರಗಿ ರೈಲ್ವೆ ನಿಲ್ದಾಣದಿಂದ ಗುರುವಾರ ಮತ್ತೊಂದು ಶ್ರಮಿಕ್ ಎಕ್ಸ್ ಪ್ರೆಸ್ ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂದು ಶರತ್ ಬಿ. ಮಾಹಿತಿ ನೀಡಿದರು. ಡಿ.ಸಿ.ಪಿ ಕಿಶೋರ್ ಬಾಬು, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ, ಸ್ಟೇಷನ್ ಮಾಸ್ಟರ್ ಪ್ರಸಾದ ರಾವ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಪ್ರವಾಸಿ ಕಾರ್ಮಿಕರನ್ನು ಬೀಳ್ಕೊಟ್ಟರು.

  • ರೈಲ್ವೇ ಮೂಲಕ ದೆಹಲಿಯಿಂದ ಹುಬ್ಬಳ್ಳಿಗೆ ಆಗಮಿಸಿದ 13 ಜಿಲ್ಲೆಗಳ ಜನರು

    ರೈಲ್ವೇ ಮೂಲಕ ದೆಹಲಿಯಿಂದ ಹುಬ್ಬಳ್ಳಿಗೆ ಆಗಮಿಸಿದ 13 ಜಿಲ್ಲೆಗಳ ಜನರು

    ಹುಬ್ಬಳ್ಳಿ/ಧಾರವಾಡ: ದೆಹಲಿ-ಬೆಂಗಳೂರು ಶ್ರಮಿಕ ಎಕ್ಸ್ ಪ್ರೆಸ್ ರೈಲಿನ ಮೂಲಕ ಆಗಮಿಸಿದ, ರಾಜ್ಯದ ವಿವಿಧ 13 ಜಿಲ್ಲೆಗಳ 293 ಪ್ರಯಾಣಿಕರು ಇಂದು ಮಧ್ಯಾಹ್ನ 12 ಗಂಟೆಗೆ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಇಳಿದುಕೊಂಡರು.

    ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ಮಾರ್ಗದರ್ಶನದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಉಪ ಪೊಲೀಸ್ ಆಯುಕ್ತರಾದ ಕೃಷ್ಣಕಾಂತ್, ಎಂ.ಬಿ.ಬಸರಗಿ, ತಹಶೀಲ್ದಾರರಾದ ಶಶಿಧರ್ ಮಾಡ್ಯಾಳ, ಪ್ರಕಾಶ್ ನಾಶಿ, ವಾಕರಸಾಸಂ ಅಧಿಕಾರಿಗಳಾದ ಹೆಚ್.ಆರ್.ರಾಮನಗೌಡರ್, ಅಶೋಕ್ ಪಾಟೀಲ, ರೇಲ್ವೇ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ದೂರದ ಪ್ರಯಾಣದಿಂದ ತವರಿಗೆ ಮರಳಿದ ಜನರನ್ನು ಅವರ ಜಿಲ್ಲೆಗಳಿಗೆ ಕಳುಹಿಸುವ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

    ಶಿವಮೊಗ್ಗ-67, ಬೆಳಗಾವಿ-51, ಚಿಕ್ಕಮಗಳೂರು-05, ಉತ್ತರ ಕನ್ನಡ-09, ಕೊಪ್ಪಳ-10, ಚಿತ್ರದುರ್ಗ-12, ದಕ್ಷಿಣ ಕನ್ನಡ-42, ವಿಜಯಪುರ-32, ಹಾವೇರಿ-14, ಬಾಗಲಕೋಟ-13, ಧಾರವಾಡ-32, ಹಾಸನ -5 ಹಾಗೂ ಗದಗ ಜಿಲ್ಲೆಯ ಒಬ್ಬರು ಸೇರಿ ಒಟ್ಟು 293 ಜನರನ್ನು ಆಯಾ ಜಿಲ್ಲಾಡಳಿತಗಳು ಕಳುಹಿಸಿದ್ದ ಸಾರಿಗೆ ಬಸ್ಸುಗಳು ಹಾಗೂ ಇತರ ವಾಹನಗಳ ಮೂಲಕ ಕಳುಹಿಸಿಕೊಡಲಾಯಿತು.

    ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳ ಪ್ರಯಾಣಕ್ಕೆ ಸ್ವತಃ ಅಧಿಕಾರಿಗಳೇ ಮುಂದೆ ನಿಂತು ಸಹಾಯ ಮಾಡಿದ ರೀತಿಗೆ ಜನತೆ ಮೆಚ್ಚುಗೆ ಸೂಚಿಸಿದರು. ಬಸ್ಸಿನಲ್ಲಿ ತೆರಳಿದ ಪ್ರಯಾಣಿಕರಿಗೆ ಜಿಲ್ಲಾಡಳಿತ ಹಾಗೂ ಹುಬ್ಬಳ್ಳಿ ತಾಲೂಕು ಆಡಳಿತದಿಂದ ಕುಡಿಯುವ ನೀರು, ಉಪಹಾರ ಪೂರೈಸಲಾಯಿತು. ದೂರದ ಪ್ರಯಾಣದಿಂದ ದಣಿದ ಜೀವಗಳು ಧಾರವಾಡ ಜಿಲ್ಲಾಡಳಿತದ ಶಿಸ್ತು ಮತ್ತು ಕರ್ತವ್ಯ ನಿರ್ವಹಣೆಯ ರೀತಿಗೆ ಹರ್ಷಚಿತ್ತರಾಗಿ ತವರಿನತ್ತ ಮುಖ ಮಾಡಿದರು.

  • ನಾಳೆ ಮುಂಬೈನಿಂದ ಧಾರವಾಡಕ್ಕೆ 1,600 ವಲಸೆ ಕಾರ್ಮಿಕರು- ಜಿಲ್ಲಾಡಳಿತಕ್ಕೆ ಹೊಸ ಸವಾಲು

    ನಾಳೆ ಮುಂಬೈನಿಂದ ಧಾರವಾಡಕ್ಕೆ 1,600 ವಲಸೆ ಕಾರ್ಮಿಕರು- ಜಿಲ್ಲಾಡಳಿತಕ್ಕೆ ಹೊಸ ಸವಾಲು

    ಧಾರವಾಡ: ಜಿಲ್ಲೆಗೆ ಅಹಮದಾಬಾದ್‍ನಿಂದ ಆಗಮಿಸಿರುವ 9 ಜನರಿಗೆ ಏಕಕಾಲಕ್ಕೆ ಕೊರೊನಾ ಪಾಸಿಟಿವ್ ವರದಿ ಬಂದ ಬೆನ್ನಲ್ಲಿಯೇ ಅನ್ಯ ರಾಜ್ಯದಿಂದ 1,600 ಕಾರ್ಮಿಕರು ಏಕಕಾಲಕ್ಕೆ ಧಾರವಾಡಕ್ಕೆ ಆಗಮಿಸುತ್ತಿದ್ದಾರೆ. ಇದು ಜಿಲ್ಲಾಡಳಿತಕ್ಕೆ ಈಗ ಹೊಸ ಸವಾಲಾಗಿದೆ.

    ಈಗಾಗಲೇ ವಿವಿಧ ಬಸ್‍ಗಳ ಮೂಲಕ ಒಟ್ಟು 768 ಜನ ಬೇರೆ ಬೇರೆ ದಿನಗಳಲ್ಲಿ ಧಾರವಾಡಕ್ಕೆ ಆಗಮಿಸಿದ್ದಾರೆ. ಆದರೆ ಈಗ ಒಂದೇ ಸಮಯಕ್ಕೆ 1,600 ಜನ ಮುಂಬೈದಿಂದ ಆಗಮಿಸುತ್ತಿರುವ ಹಿನ್ನೆಲೆ ಇವರನ್ನೆಲ್ಲ ತಪಾಸಣೆ ಮಾಡುವುದೇ ಈಗ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

    ಮುಂಬೈನಿಂದ ಬರಲಿರುವ ಶ್ರಮಿಕ ಎಕ್ಸ್ ಪ್ರೆಸ್ ರೈಲಿನಲ್ಲಿ ಇವರೆಲ್ಲ ನಾಳೆ ಸಂಜೆಗೆ ಧಾರವಾಡ ರೈಲ್ವೆ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ರೈಲಿನಲ್ಲಿ ಬರುವವರೆಲ್ಲಾ ಧಾರವಾಡ ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಯವರೂ ಸಹ ಇದ್ದಾರೆ. ಬೇರೆ ಜಿಲ್ಲೆಯವರನ್ನು ಇಲ್ಲಿಯೇ ತಪಾಸಣೆ ಮಾಡಬೇಕಾ ಅಥವಾ ನೇರವಾಗಿ ಆಯಾ ಜಿಲ್ಲೆಗೆ ಕಳುಹಿಸಿ ಕೊಡಬೇಕಾ? ಎನ್ನುವ ಬಗ್ಗೆ ಗೊಂದಲಗಳಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಅಧಿಕಾರಿಗಳ ಸಭೆ ನಡೆಸುತ್ತಿದ್ದು, ಸಭೆಯ ಬಳಿಕ ಸ್ಪಷ್ಟತೆ ದೊರೆಯಲಿದೆ.