Tag: Short Movie

  • ಬಿಗ್‍ಬಿ ಕನ್ನಡಕ ಹುಡುಕಿದ 12 ತಾರೆಯರು

    ಬಿಗ್‍ಬಿ ಕನ್ನಡಕ ಹುಡುಕಿದ 12 ತಾರೆಯರು

    -ಕಿರುಚಿತ್ರದಲ್ಲಿ ಕೊರೊನಾ ಜಾಗೃತಿ
    -ಮನೆಯಿಂದ ಹೊರ ಬರದೇ ಸಿನ್ಮಾ ರೆಡಿ
    -ಮಹಾ ಸಂಗಮದಲ್ಲಿ ಶಿವಣ್ಣನ ಕನ್ನಡ ಕಹಳೆ

    ನವದೆಹಲಿ: ಬಹುತೇಕ ನಟ, ನಟಿಯರು ಲಾಕ್‍ಡೌನ್ ದಿನಗಳನ್ನು ವಿವಿಧ ಚಟುವಟಿಕೆಗಳಲ್ಲಿ ನಿರತರಾಗುವ ಮೂಲಕ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಕೆಲವರು ಲಾಕ್‍ಡೌನ್ ಆಗಿದೆ ಏನು ಮಾಡುವುದು, ಕೆಲಸವಿಲ್ಲದೆ ಕಾಲ ಕಳೆಯಬೇಕಿದೆ ಬೇಜಾರು ಎಂದು ಹೇಳಿಕೊಳ್ಳುತ್ತಿರುತ್ತಾರೆ. ಇದಕ್ಕೆ ಸೆಡ್ಡು ಹೊಡೆಯುವಂತೆ ಮಲ್ಟಿ ಸ್ಟಾರ್ ಗಳು ಸೇರಿ ಕಿರು ಚಿತ್ರ ರಚಿಸಿದ್ದು, ಇದರಲ್ಲಿ ಬಹುತೇಕ ಎಲ್ಲ ಮೆಗಾ ಸ್ಟಾರ್‍ಗಳು ನಟಿಸಿದ್ದಾರೆ.

    ಹೌದು ಲಾಕ್‍ಡೌನ್ ದಿನಗಳ ಕುರಿತು ಈ ಸಿನಿಮಾ ಬೆಳಕು ಚೆಲ್ಲಿದ್ದು, ಜಾಗೃತಿ ಮೂಡಿಸುವುದರ ಜೊತೆಗೆ ಎಲ್ಲರೂ ಹೇಗೆ ಸಂಪರ್ಕದಲ್ಲಿರಬಹುದು, ಒಬ್ಬರೇ ಕೂತು ಏನೆಲ್ಲ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಒಂದೇ ಕಡೆ ಸೇರದೆ ಹಲವು ಸ್ಟಾರ್ ನಟರು ತಮ್ಮ ತಮ್ಮ ಮನೆಗಳಿಂದಲೇ ಪಾತ್ರಗಳನ್ನು ನಿರ್ವಹಿಸಿದ್ದು, ಇದು ಸ್ವಲ್ಪವೂ ಗೊತ್ತಾಗುವುದಿಲ್ಲ. ಆ ರೀತಿಯಲ್ಲಿ ಶಾರ್ಟ್ ಫಿಲ್ಮ್ ರಚಿಸಲಾಗಿದೆ.

    ಕೇವಲ ಉತ್ತರ ಭಾರತದ ಬಾಲಿವುಡ್ ಕಲಾವಿದರು ಮಾತ್ರ ಈ ಸಿನಿಮಾದಲ್ಲಿ ಆ್ಯಕ್ಟ್ ಮಾಡಿಲ್ಲ ಬದಲಿಗೆ ಕನ್ನಡ, ತೆಲುಗು, ತಮಿಳು, ಮಲಯಾಳಿ, ಸೇರಿದಂತೆ ಹಲವು ಭಾಷೆಗಳ ಸ್ಟಾರ್ ನಟರು ಅವರ ಮಾತೃ ಭಾಷೆಗಳಲ್ಲೇ ಮಾತನಾಡುವ ಮೂಲಕ ಚಿತ್ರಕ್ಕೆ ಕಳೆ ತುಂಬಿದ್ದಾರೆ. ಈ ಮೂಲಕ ಜಾಗೃತಿ ಜೊತೆಗೆ ಮನರಂಜನೆಯನ್ನೂ ನೀಡಿದ್ದು, ಈ ರೀತಿಯೂ ಸಿನಿಮಾ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

    ಲೊಕೇಶನ್ ಹೊರತುಪಡಿಸಿದರೆ ಉಳೆದೆಲ್ಲ ನಟರ ನಟನೆ ಅದ್ಭುತವಾಗಿ ಮೂಡಿ ಬಂದಿದ್ದು, ಆರಂಭದಲ್ಲಿ ಅಮಿತಾಭ್ ಬಚ್ಚನ್ ಅವರು ಕನ್ನಡಕ ಹುಡುಕುವುದರಿಂದ ಸಿನಿಮಾ ಪ್ರಾರಂಭವಾಗುತ್ತದೆ. ಇದೇ ಎಳೆಯನ್ನು ಇಟ್ಟುಕೊಂಡು ಇತರ ಕಲಾವಿದರು ಸಹ ಅಮಿತಾಬ್ ಬಚ್ಚನ್ ಅವರ ಕನ್ನಡಕವನ್ನು ಹುಡುಕಲು ಮುಂದಾಗುತ್ತಾರೆ.

    ಇದು ಕೇವಲ ಕನ್ನಡಕ ಹುಡುಕುವ ಸಿನಿಮಾ ಅನ್ನಿಸಬಹುದು. ಆದರೆ ಲಾಕ್‍ಡೌನ್‍ನ ಇಂತಹ ಪರಿಸ್ಥಿತಿಯಲ್ಲಿ ಭರವಸೆ ಮೂಡಿಸಿದೆ. ಒಂದು ವೇಳೆ ಲಾಕ್‍ಡೌನ್ ಹೆಚ್ಚು ದಿನಗಳ ಕಾಲ ಮುಂದುವರಿದರೆ ಹೇಗೆ ಎಂಬ ಪ್ರಶ್ನೆ ಕಾಡಿದಾಗ ಕಲಾವಿದರು, ತಂತ್ರಜ್ಞರು ಈ ಸಿನಿಮಾ ನೆನೆಸಿಕೊಂಡು ತಮ್ಮದೇ ಶೈಲಿಯಲ್ಲಿ ಈ ರೀತಿಯ ಸಿನಿಮಾಗಳನ್ನು ಮಾಡಬಹುದಾಗಿದೆ. ಈ ಮೂಲಕ ಮನೆಯಲ್ಲೇ ಕುಳಿತು ಬೇಸರ ಏನಾದರೂ ಮಾಡಬೇಕು ಎಂದುಕೊಂಡವರಿಗೆ ಈ ಸಿನಿಮಾ ಒಂದು ಆಶಾಕಿರಣವಾಗಿದೆ.

    ಅಂದಹಾಗೆ ಈ ಚಿತ್ರಕ್ಕೆ ಫ್ಯಾಮಿಲಿ ಎಂದು ಹೆಸರಿಡಲಾಗಿದ್ದು, ಪ್ರಸೂನ್ ಪಾಂಡೆ ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರ ವಹಿಸಿದರೆ, ಚಂದನವನದ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಬಾಲಿವುಡ್ ನಟರಾದ ರಣಬೀರ್ ಕಪೂರ್, ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ, ದಿಲಿತ್ ದೋಸಂಜ್, ತಮಿಳಿನಿಂದ ರಜನಿಕಾಂತ್, ಮಲಯಾಳಂನಿಂದ ಮೋಹನ್‍ಲಾಲ್ ಹಾಗೂ ಮಮ್ಮೂಟಿ, ತೆಲುಗಿನಿಂದ ಚಿರಂಜೀವಿ, ಬೆಂಗಾಳಿಯಿಂದ ಪ್ರೊಸೆಂಜಿತ್ ಚಟರ್ಜಿ, ಮರಾಠಿಯಿಂದ ಸೋನಾಲಿ ಕುಲ್ಕರ್ಣಿಯವರು ನಟಿಸಿದ್ದಾರೆ.

    ಸಿನಿಮಾದ ಕೊನೆಯಲ್ಲಿ ಅಮಿತಾಬ್ ಮಾತನಾಡಿದ್ದು, ಸಿನಿಮಾ ಉದ್ಯಮ ಯಾವತ್ತೂ ಒಂದೇ, ನಾವೆಲ್ಲರೂ ಒಂದೇ ಕುಟುಂಬದವರು. ನಮ್ಮ ಕುಟುಂಬದ ಹಿಂದೆ ಇನ್ನೊಂದು ದೊಡ್ಡ ಪರಿವಾರವಿದೆ. ಅವರು ಯಾವಾಗಲೂ ನಮಗಾಗಿ ಕೆಲಸ ಮಾಡುತ್ತಿರುತ್ತಾರೆ ಅವರೇ ಸಿನಿಮಾ ಕೆಲಸಗಾರರು, ದಿನಗೂಲಿ ನೌಕರರು. ಲಾಕ್‍ಡೌನ್‍ನ ಈ ಸಮಯದಲ್ಲಿ ಕೆಲಸವಿಲ್ಲದೆ ಅವರು ಸಂಕಷ್ಟದಲ್ಲಿದ್ದಾರೆ. ನಾವೆಲ್ಲರೂ ಸೇರಿ ಅವರೊಂದಿಗೆ ನಿಲ್ಲಬೇಕಿದೆ. ಅವರಿಗೂ ಸಹಾಯ ಮಾಡಬೇಕಿದೆ ಎಂದು ಕೇಳಿಕೊಂಡಿದ್ದಾರೆ. ಅಲ್ಲದೆ ಯಾರೂ ಭಯಭೀತರಾಗಬೇಡಿ, ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಎಂದು ಹೇಳಿದ್ದಾರೆ.

  • ‘ಕಾಲ್ ಮೀ’ ಕಿರುಚಿತ್ರ – ಗ್ರಾಮೀಣ ಯುವಕರ ಶ್ರಮಕ್ಕೆ ಮೆಚ್ಚುಗೆ

    ‘ಕಾಲ್ ಮೀ’ ಕಿರುಚಿತ್ರ – ಗ್ರಾಮೀಣ ಯುವಕರ ಶ್ರಮಕ್ಕೆ ಮೆಚ್ಚುಗೆ

    ಮಂಗಳೂರು: ರಾಜ್ಯದ ಕರಾವಳಿಯ ಪುತ್ತೂರಿನ ಯುವಕರ ತಂಡವೊಂದು ತಯಾರಿಸಿದ ಕಿರುಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಪಡೆದಿದ್ದು, 2 ದಿನದಲ್ಲಿ 4 ಸಾವಿರ ಜನ ಕಿರುಚಿತ್ರವನ್ನು ಯೂಟ್ಯೂಬ್ ಮೂಲಕ ವೀಕ್ಷಿಸಿದ್ದಾರೆ.

    ಗ್ರಾಮೀಣ ಭಾಗದ ಯುವಕರ ಈ ಪ್ರಯತ್ನಕ್ಕೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಪುತ್ತೂರಿನ ಹುಡುಗರು ಹೊಸ ವರ್ಷಕ್ಕಾಗಿ ಹೊಸ ತರಹದ ಕಲ್ಪನೆಯೊಂದಿಗೆ ಸಮಾಜದಲ್ಲಿ ಮದ್ಯವ್ಯಸನಿಗಳಿಂದ ಹಾಗೂ ಮಾದಕ ವಸ್ತುಗಳಿಂದ ದೂರ ಇರಬೇಕೆಂಬ ಅರ್ಥಪೂರ್ಣ ಸಂದೇಶವನ್ನು ನೀಡಿದ್ದು, ಸಸ್ಷೆನ್ಸ್ ಮತ್ತು ಥ್ರಿಲ್ಲರ್ ಇರುವ ಕಿರುಚಿತ್ರ ತಯಾರಿಸಿ ಜನರ ಮುಂದಿಟ್ಟಿದ್ದಾರೆ.

    ಹೊಸ ಪ್ರಯತ್ನ ಆದರೂ ಉತ್ತಮ ಸಂದೇಶ ಇರುವ ಕಿರುಚಿತ್ರವನ್ನು ಜನರು ಬಹಳ ಆಸಕ್ತಿಯಿಂದ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುತ್ತೂರಿನವರೇ ಆದ ಪ್ರವೀಣ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಕಿರುಚಿತ್ರದಲ್ಲಿ ವಿಜೇತ್ ಮುಂಡಾಳ, ಸಂತೋಷ್ ಸುವರ್ಣ ಮೇರ್ಲ, ರಾಜೇಶ್ ಪ್ರಸಾದ್ (ಆರ್.ಪಿ)ಕೌಡಿಚ್ಚಾರ್, ನವೀನ್ ಎಕ್ಕಾರು, ದರ್ಶಿತಾ, ಶೃತಿ ದಾಸ್, ಶ್ರಾವ್ಯ, ಮಹೇಶ್ ಓಟೆ, ಗಂಗಾಧರ ಓಟೆ ಮತ್ತು ಸ್ನೇಹಾ ಕರ್ಕೇರಾ ನಟಿಸಿದ್ದು, ಮೊಟ್ಟ ಮೊದಲ ಪ್ರಯತ್ನದಲ್ಲೇ ಕಿರುಚಿತ್ರದಲ್ಲಿ ಅಭಿನಯಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿಭಿನ್ನ ಪ್ರಯತ್ನಕ್ಕೆ ಕೈ ತಂಡಕ್ಕೆ ಮತ್ತಷ್ಟು ಯಶಸ್ಸು ಸಿಗಲಿ ಎಂದು ಜನರು ಹಾರೈಸಿದ್ದಾರೆ.