Tag: short film

  • ಬದಲಾವಣೆಗಾಗಿ ಶರತ್ ಹಾಕಿದ್ದಾರೆ ‘ವೇಷ’

    ಬದಲಾವಣೆಗಾಗಿ ಶರತ್ ಹಾಕಿದ್ದಾರೆ ‘ವೇಷ’

    ಬೆಂಗಳೂರು ನಗರ ಸೇರಿದಂತೆ ಕೆಲವೊಂದು ಸಿಟಿಗಳಲ್ಲಿ ಸ್ವಚ್ಚತೆ ಅನ್ನೋದು ಮರಿಚಿಕೆಯಾಗಿದೆ. ಅದರಲ್ಲೂ ಕನ್ನಡದಲ್ಲಿ, ಇಂಗ್ಲಿಷ್ ನಲ್ಲಿ ಎಲ್ಲರಿಗೂ ಅರ್ಥವಾಗುವ ಭಾಷೆಯಲ್ಲಿ ಸ್ವಚ್ಛತೆ ಕಾಪಾಡಿ ಅಂತ ದೊಡ್ಡದಾಗಿ ಬರೆದ್ರೂ ಓದಿದವರಿಗೂ ಅದು ಕಾಣಿಸಲ್ಲ. ಕಾಪಾಡಬೇಕಾದವರೇ ಗಲೀಜು ಮಾಡಿ, ವಾತಾವರಣವನ್ನು ಕಲುಷಿತಗೊಳಿಸಿಬಿಡ್ತಾರೆ. ಈ ಬಗ್ಗೆ ಜಾಗೃತಿ ಮೂಡಿಸೋದು ತುಂಬಾ ಮುಖ್ಯವಾಗಿದೆ. ಆ ಜವಾಬ್ದಾರಿಯನ್ನು ಹೊತ್ತಿದ್ದಾರೆ ಶರತ್.

    ಎಸ್, ಕಥೆ ಚಿತ್ರಕಥೆ ಬರೆದು ತಾವೇ ನಿರ್ದೇಶನ ಮಾಡಿ ನಟನೆಯಲ್ಲೂ ಮೊದಲ ಪ್ರಯೋಗದಲ್ಲೇ ಸೈ ಎನಿಸಿಕೊಂಡಿದ್ದಾರೆ ಶರತ್. G-Studios Media ಯೂಟ್ಯೂಬ್ ಚಾನೆಲ್ ನಲ್ಲಿ ‘ವೇಷ’ ಕಿರುಚಿತ್ರ ಇಂದು ರಿಲೀಸ್ ಆಗಿದೆ. ರಿಲೀಸ್ ಆದ ಕೆಲವೆ ಗಂಟೆಗಳಲ್ಲಿ ಸಖತ್ ವ್ಯೂವ್ ಪಡೆದಿದೆ.

    ಈ ಕಿರುಚಿತ್ರದಲ್ಲಿರುವ ವಿಷಯ ತುಂಬಾ ಸಿಂಪಲ್. ನಮ್ಮ ಸುತ್ತಮುತ್ತಲಿನಲ್ಲಿರುವ ಸಮಸ್ಯೆಯನ್ನೇ ಕಥೆಯನ್ನಾಗಿ ಎಣೆದಿದ್ದಾರೆ. ನೋಡಿದವರಿಗೆ ವಾವ್ ಈ ಸಮಸ್ಯೆಯನ್ನ ಈ ರೀತಿಯೂ ಸಾಲ್ವ್ ಮಾಡಬಹುದಾ ಎಂಬ ಆಶ್ಚರ್ಯ ಉಂಟಾಗುವುದರಲ್ಲಿ ಅನುಮಾನವೇ ಇಲ್ಲ. ಕೇವಲ ಭಿಕ್ಷೆಗೆ ಮತ್ತೊಂದಕ್ಕೆ ಮಾತ್ರ ಸೀಮಿತರಾಗಿರುವ, ಸಮಾಜದಲ್ಲಿ ಎಲ್ಲರಿಂದ ದೂರ ನಿಂತಿರುವ ಮಂಗಳ ಮುಖಿಯರಿಂದ ಇಂಥ ಕೆಲಸವೂ ಸಾಧ್ಯ ಎಂಬುದನ್ನು ಈ ಕಿರು ಚಿತ್ರದಲ್ಲಿ ತೋರಿಸಿಕೊಟ್ಟಿದ್ದಾರೆ. ಅವರು ಹಾಕುವ ಒಂದೇ ಶಾಪಕ್ಕೆ ಹೆದರಿ ಹಣ ಕೊಡುವವರು ಅವರ ಮಾತಿಗೆ ಹೇಗೆ ಸ್ವಚ್ಛತೆಗೆ ಇಳಿಯುತ್ತಾರೆ ಎಂಬುದನ್ನು ಶರತ್ ಪ್ರೂವ್ ಮಾಡಿದ್ದಾರೆ. ಆ ಅದ್ಭುತ ನಿರೂಪಣೆಯನ್ನ ಕಿರುಚಿತ್ರದಲ್ಲೇ ನೋಡಿದರೆ ಖುಷಿ ಕೊಡುತ್ತೆ.

    ನಟನಾಗಿ ಅನುಭವ ಇರುವ ಶರತ್, ಕಿರುಚಿತ್ರದ ಮೂಲಕ ನಿರ್ದೇಶಕನ ಪಟ್ಟಕ್ಕೇರಿದ್ದಾರೆ. ಮೊದಲ ಕಿರುಚಿತ್ರದಲ್ಲೇ ಒಬ್ಬ ಒಳ್ಳೆ ಡೈರೆಕ್ಟರ್ ಸಾಮಾಥ್ರ್ಯವಿರುವುದನ್ನು ತೋರಿಸಿಕೊಟ್ಟಿದ್ದಾರೆ ಎಂದರೆ ಅತಿಶಯೋಕ್ತಿ ಎನಿಸಲ್ಲ. ಸಮಾಜದಲ್ಲಿ ಇರುವ ಕೆಲವೊಂದು ಸಮಸ್ಯೆಗಳನ್ನು ಇಟ್ಟುಕೊಂಡು ಜನರಿಗೆ ಇಷ್ಟವಾಗುವ ರೀತಿಯಲ್ಲಿ ನಿರೂಪಣೆ ಮಾಡಿದ್ದಾರೆ. 10 ನಿಮಿಷ 40 ಸೆಕೆಂಡ್ ಈ ಕಿರುಚಿತ್ರ ಇದೆ. ಶರತ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಗೋಪಿ ಸ್ನೇಹಿತ ಪಾತ್ರದಲ್ಲಿ ಅಭಿನಯಿಸಿದ್ದು, ಸರಳ ಸೇರಿದಂತೆ ಅನೇಕ ಮಂಗಳಮುಖಿಯರು ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾದಲ್ಲಿರುವಂತೆ ಕ್ವಾಲಿಟಿ ಇದ್ದು ಎಲ್ಲೂ ಕಾಂಪ್ರೊಮೈಸ್ ಆಗಿಲ್ಲ ಅಂತಾರೆ ನಿರ್ದೇಶಕ ಕಂ ನಟ ಶರತ್.

    ಒಟ್ಟಾರೆ ಸಮಸಾಜಕ್ಕೆ ಬೇಕಾದ ಒಂದೊಳ್ಳೆ ಮೆಸೇಜ್ ಈ ಕಿರುಚಿತ್ರದಲ್ಲಿದ್ದು, ಆ ಸಣ್ಣ ತಪ್ಪನ್ನ ಮಾಡುವಾಗ ಮನದ ಮೂಲೆಯಲ್ಲಿ ಅರಿವು ಮೂಡಿಸುವಂತ ಕೆಲಸ ಮಾಡುತ್ತೆ ‘ವೇಷ’ ಸಿನಿಮಾ. ಜೊತೆಗೆ ಕೊನೆಯಲ್ಲಿ ಬರುವ ದೇಶಕ್ಕಾಗಿ ಯಾವ ‘ವೇಷ’ ಬೇಕಾದ್ರೂ ಹಾಕ್ತಿನೋ ಅನ್ನೋ ಮಾತು ಎಲ್ಲರನ್ನು ಎಚ್ಚರಗೊಳಿಸುವಂತೆ ಮಾಡಿದೆ.

  • ಕ್ವಾರಂಟೈನ್ ಟೈಂನಲ್ಲಿ ‘ಪಕೋಡಾ’ ಹುಡುಕಿದ ಅಗ್ನಿಸಾಕ್ಷಿ ತಂಡ

    ಕ್ವಾರಂಟೈನ್ ಟೈಂನಲ್ಲಿ ‘ಪಕೋಡಾ’ ಹುಡುಕಿದ ಅಗ್ನಿಸಾಕ್ಷಿ ತಂಡ

    ಬೆಂಗಳೂರು: ಬಾಲಿವುಡ್ ಬಿಗ್‍ಬಿ ಅಮಿತಾಬ್ ಬಚ್ಚನ್ ನೇತೃತ್ವದಲ್ಲಿ ಬಹುಭಾಷಾ ನಟರ ತಂಡ ಈ ಹಿಂದೆ ಮನೆಯಲ್ಲೇ ಇದ್ದುಕೊಂಡು ಶಾರ್ಟ್ ಫಿಲ್ಮ್ ಮಾಡುವ ಮೂಲಕ ಸಾಮಾಜಿಕ ಅಂತರದ ಮಹತ್ವವನ್ನು ಸಾರಿತ್ತು. ಈ ಚಿತ್ರ ಇತರರಿಗೆ ಪ್ರೇರಣೆಯಾಗಿತ್ತು ಸಹ. ಅದೇ ರೀತಿ ಇದೀಗ ಅಗ್ನಿಸಾಕ್ಷಿ ಧಾರಾವಾಹಿ ತಂಡ ಸಹ ಇಂತಹದ್ದೇ ಪ್ರಯತ್ನವನ್ನು ಮಾಡಿದ್ದು, ಫನ್ನಿಯಾಗಿರುವ ಕಥೆಯನ್ನಿಟ್ಟುಕೊಂಡು ಜನತೆಯನ್ನು ನಗಿಸಿದ್ದಾರೆ.

    ಬಿಗ್‍ಬಿ ನೇತೃತ್ವದಲ್ಲಿ ಮಾಡಿದ ಶಾರ್ಟ್ ಫಿಲ್ಮ್‍ನಲ್ಲಿ ಕನ್ನಡಕ ಹುಡುಕುವ ಕಾನ್ಸೆಪ್ಟ್ ಇತ್ತು. ಆದರೆ ಅಗ್ನಿಸಾಕ್ಷಿ ತಂಡದ ಕಾನ್ಸೆಪ್ಟ್ ಕೇಳಿದರೆ ನಿಮ್ಮ ಬಾಯಲ್ಲಿ ಖಂಡಿತ ನೀರು ಬರುತ್ತದೆ. ಅದೇನಪ್ಪಾ ಅಂತಾ ವಿಷಯ ಅಂತೀರಾ, ಫುಲ್ ಹಾಟ್ ಆಗಿ ನಗಿಸಲು ಯತ್ನಿಸಿದ್ದಾರೆ ಕಣ್ರಿ…..ಪಕೋಡಾ ಕಾನ್ಸೆಪ್ಟ್ ಇಟ್ಟುಕೊಂಡು ಅಗ್ನಿಸಾಕ್ಷಿ ಧಾರಾವಾಹಿ ತಂಡ ಒಂದೊಳ್ಳೆ ಪ್ರಯತ್ನ ಮಾಡಿದ್ದು, ಇನ್ನೂ ವಿಶೇಷವೆಂದರೆ ರಾಜ್ಯದ ವಿವಿಧ ಭಾಗಗಳ ಭಾಷೆಗಳ ಶೈಲಿಯನ್ನು ಬಳಸಿದ್ದಾರೆ.

    ಉತ್ತರ ಕರ್ನಾಟಕ, ಕರಾವಳಿ, ತುಳು ಹೀಗೆ ರಾಜ್ಯದ ವಿವಿಧ ಶೈಲಿಯ ಭಾಷೆಗಳನ್ನು ಬಳಿಸಿದ್ದಾರೆ. ಈ ಮೂಲಕ ಎಲ್ಲ ಭಾಷೆಯ ಜನರಿಗೆ ಹತ್ತಿರವಾಗಿದ್ದಾರೆ. ಮೊದಲು ರಾಜೇಶ್ ಧ್ರುವ ಅವರಿಗೆ ಪಕೋಡಾ ಕುರಿತು ನೆನಪಾಗುತ್ತದೆ. ನಂತರ ವಿಜಯ್ ಸೂರ್ಯ ಬಳಿ ಪಕೋಡಾ ಕುರಿತು ಕೇಳುತ್ತಾರೆ. ಬಳಿಕ ಸುಕೃತಾ, ಐಶ್ವರ್ಯ ನಂತರ ವೈಷ್ಣವಿ ಹಾಗೂ ಇಷಿತಾ ವರ್ಷ ಬಳಿ ಪಕೋಡಾ ಪ್ರಪೋಸಲ್ ಹೋಗುತ್ತದೆ. ಹೀಗೆ ಕೊನೆಗೆ ಮುಖ್ಯಮಂತ್ರಿ ಚಂದ್ರು ಅವರ ಬಳಿ ಪಕೋಡಾ ಕುರಿತು ಹೇಳಲು ರಾಜೇಶ್ ಮುಖ್ಯಮಂತ್ರಿ ಚಂದ್ರು ಬಳಿ ಹೋಗಿರುತ್ತಾರೆ. ಆಗ ಮುಖ್ಯಮಂತ್ರಿ ಚಂದ್ರು ಅವರು ಆಗಲೇ ಪಕೋಡಾ ಸವಿಯುತ್ತಿರುತ್ತಾರೆ.

    ಮುಖ್ಯಮಂತ್ರಿ ಚಂದ್ರು ಅವರು ಈ ವೇಳೆ ಮಾತನಾಡಿ, ತಿನ್ನೋದಕ್ಕೆ ಹುಡುಕುತ್ತಿದ್ದಿರಾ, ನನಗೀಗಾಲೇ ಸಿಕ್ಕಿಬಿಟ್ಟಿದೆ ಪಕೋಡಾ. ಮನೆಯಲ್ಲೇ ಸಿಗುತ್ತೆ ಅಲ್ಲಿ ಇಲ್ಲಿ ಹುಡುಕಾಡಿಕೊಂಡು ತಿನ್ನಬೇಡಿ, ಅಕಸ್ಮಾತ್ ತಿಂದರೆ ಹೊಗೆ ಹಾಕಿಸಿಕೊಂಡು ಬಿಡುತ್ತೀರಾ ಎಂದು ಎಚ್ಚರಿಸುತ್ತಾರೆ. ಅಲ್ಲದೆ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಬೇರೆಯವರಿಗೂ ಅಪಾಯ ತಂದಿಡಬೇಡಿ ಎಂದು ಕರೆ ನೀಡಿದ್ದಾರೆ. ಅಂದಹಾಗೆ ಒಟ್ಟು 12 ಜನ ಈ ಚಿತ್ರದಲ್ಲಿ ನಟಿಸಿದ್ದು, ತುಂಬಾ ಚೆನ್ನಾಗಿ ಮೂಡಿ ಬಂದಿದೆ.

    ಶಾರ್ಟ್ ಫಿಲ್ಮ್ ಕುರಿತು ನಟ ರಾಜೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಹಿಂದಿ ಶಾರ್ಟ್ ಮೂವಿ ನೋಡಿ ನಾವೂ ಯಾಕೆ ಹೀಗೆ ಮಾಡಬಾರದು ಎನಿಸಿತು. ತಕ್ಷಣವೇ ನಮ್ಮದೇ ಅಗ್ನಿಸಾಕ್ಷಿ ಗ್ರೂಪ್‍ನಲ್ಲಿ ಚರ್ಚಿಸಿದೆವು. ಎಲ್ಲರೂ ಒಪ್ಪಿಕೊಂಡರು, ಒಂದು ದಿನದಲ್ಲಿ ಸ್ಕ್ರಿಪ್ಟ್ ಬರೆದೆ, ಚಿತ್ರ ಕಾಮಿಡಿಯಾಗಿದ್ದರೆ ಹೆಚ್ಚು ಜನಕ್ಕೆ ರೀಚ್ ಆಗುತ್ತೆ ಎಂಬ ಉದ್ದೇಶದಿಂದ ಪಕೋಡಾ ಕಾನ್ಸೆಪ್ಟ್ ಇಟ್ಟುಕೊಂಡು ಈ ಸಿನಿಮಾ ಮಾಡಿದೆವು. ಅಲ್ಲದೆ ಮುಂಚೆಯೇ ಪ್ರಿಪೇರ್ ಆಗಿದ್ದರಿಂದ ಎಲ್ಲರೂ ತಮ್ಮ ವಿಡಿಯೋವನ್ನು ನನಗೆ ಕಳುಹಿಸಿದರು. ನಂತರ ಅದನ್ನು ನಾನೇ ಎಡಿಟ್ ಮಾಡಿ, ಫೈನಲ್ ಟಚ್ ನೀಡಿದೆ. ಔಟ್‍ಪುಟ್ ನೋಡಿದಾಗ ಎಲ್ಲರಿಗೂ ತುಂಬಾ ಖುಷಿಯಾಯಿತು ಎಂದಿದ್ದಾರೆ.

     

    View this post on Instagram

     

    Concept Editing by – extremely talented @rajesh.dhruva1

    A post shared by Vaishnavi (@vaishnavi.r.b_) on

  • ಸಾಫ್ಟ್‌ವೇರ್ ಕ್ಷೇತ್ರದಿಂದ ಬಂದ ಪ್ರತಿಭಾವಂತ ನಟ ಹರೀಶ್ ಅರಸು!

    ಸಾಫ್ಟ್‌ವೇರ್ ಕ್ಷೇತ್ರದಿಂದ ಬಂದ ಪ್ರತಿಭಾವಂತ ನಟ ಹರೀಶ್ ಅರಸು!

    ಬದುಕಿನ ಅನಿವಾರ್ಯತೆಗಳು ಅದೆತ್ತೆತ್ತ ಅಲೆಸಿದರೂ ಕಲಾಸಕ್ತಿ ಎಂಬುದು ಯಾವ ಮಾಯಕದಲ್ಲಾದರೂ ತನ್ನ ತಕ್ಕೆಗೆ ಸೆಳೆದುಕೊಂಡು ಬಿಡುತ್ತದೆ. ಈ ಮಾತಿಗೆ ಉದಾಹರಣೆಯಂಥಾ ನೂರಾರು ಮಂದಿ ಚಿತ್ರರಂಗದಲ್ಲಿ ಸಿಗುತ್ತಾರೆ. ಅಂಥಾ ತೀವ್ರವಾದ ಸಿನಿಮಾಸಕ್ತಿಯೇ ಅಂಥವರನ್ನೆಲ್ಲ ನಟ ನಟಿಯರಾಗಿ, ಇತರೇ ವಿಭಾಗಗಳ ಪರಿಣಿತರನ್ನಾಗಿ, ಸಾಧಕರನ್ನಾಗಿ ನೆಲೆಗಾಣಿಸಿರುತ್ತದೆ. ಆ ಸಾಲಿನಲ್ಲಿ ಸೇರ್ಪಡೆಗೊಳ್ಳುವ ಹಾದಿಯಲ್ಲಿರುವವರು ಉದಯೋನ್ಮುಖ ನಟ ಹರೀಶ್ ಅರಸು.

    ಹರೀಶ್ ಅವರದ್ದು ಬಹುಮುಖ ಪ್ರತಿಭೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬರಹಗಾರರಾಗಿಯೂ ಗುರುತಿಸಿಕೊಂಡಿರುವ ಹರೀಶ್ ಬದುಕಿನ ಅನಿವಾರ್ಯತೆಗೆ ಬಿದ್ದು ನಾನಾ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಸದ್ಯಕ್ಕೆ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಸಿನಿಮಾ ಪ್ರಮೋಶನ್ ಕಾರ್ಯದಲ್ಲಿ ಗುರುತಿಸಿಕೊಂಡಿರೋ ಹರೀಶ್ ಪಾಲಿಗೆ ಸಿನಿಮಾ ಎಂಬುದೇ ತನ್ನ ಐಡೆಂಟಿಟಿಯಾಗಬೇಕೆಂಬ ಆಳದ ಬಯಕೆಯಿದೆ. ಬಹುಶಃ ಅದಿಲ್ಲದೇ ಹೋಗಿದ್ದರೆ ನಟನೆಯ ಗುಂಗು ಹತ್ತಿಸಿಕೊಂಡು ಐಟಿ ಕ್ಷೇತ್ರದಿಂದ ಸಿನಿಮಾ ಕ್ಷೇತ್ರದತ್ತ ವಾಲಿಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲವೇನೋ…

    ಇದುವರೆಗೂ ಹಲವಾರು ಕಿರುಚಿತ್ರಗಳಲ್ಲಿ ನಟಿಸಿ ಅನುಭವ ಹೊಂದಿರುವ ಹರೀಶ್ ಅರಸು ಪೂರ್ಣಪ್ರಮಾಣದಲ್ಲಿ ನಟನಾಗಿ ಗುರುತಿಸಿಕೊಂಡಿದ್ದು ‘ಕನ್ನಡ ದೇಶದೊಳ್’ ಎಂಬ ಸಿನಿಮಾ ಮೂಲಕ. ಅದರಲ್ಲಿ ಅಪ್ಪಟ ಕನ್ನಡಪ್ರೇಮಿ ಹುಡುಗನಾಗಿ ನಟಿಸಿದ್ದ ಅವರು ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿದ್ದರು. ನಟನಾಗಿ ಸಿನಿಮಾದಲ್ಲಿ ಅದು ಅವರ ಪಾಲಿಗೆ ಮೊದಲ ಅನುಭವ. ಅದಕ್ಕೆ ಸಿಕ್ಕ ಪ್ರತಿಕ್ರಿಯೆಗಳಿಂದ ಭರವಸೆ ತುಂಬಿಕೊಂಡಿರುವ ಅವರೀಗ ‘ಧೀರ ಸಾಮ್ರಾಟ್’ ಎಂಬ ಸಿನಿಮಾದಲ್ಲಿ ಮಹತ್ವದ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಒಂದೊಳ್ಳೆ ಕಥೆ ಹೊಂದಿರುವ ಈ ಸಿನಿಮಾದಲ್ಲಿ ಅವರಿಗೆ ಅದಕ್ಕೆ ತಕ್ಕುದಾದ ಪಾತ್ರವೇ ಸಿಕ್ಕಿದೆಯಂತೆ. ಇದರ ಜೊತೆಗೆ ಮತ್ತೊಂದು ಸಿನಿಮಾ ಅವಕಾಶವೂ ಅವರ ಕೈಲಿದೆ. ಅದರ ಬಗ್ಗೆ ಇಷ್ಟರಲ್ಲಿಯೇ ಮಾಹಿತಿಗಳು ಜಾಹೀರಾಗಲಿವೆ.

    ಹೀಗೆ ಸಾಫ್ಟ್‍ವೇರ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಲೇ ಸಿನಿಮಾ ರಂಗವನ್ನೇ ಪ್ರಧಾನವಾಗಿ ಆಯ್ಕೆ ಮಾಡಿಕೊಂಡಿರುವ ಹರೀಶ್ ಮೂಲತಃ ಕಡೂರಿನ ವಡೆಯರಳ್ಳಿಯವರು. ಮಧ್ಯಮ ವರ್ಗದ ರೈತಾಪಿ ಕುಟುಂಬದಿಂದ ಬಂದಿರುವ ಅವರಿಗೆ ಹಳ್ಳಿಯ ಸಹಜ ವಾತಾವರಣವೇ ಕಲೆಗಳ ಗುಂಗು ಹತ್ತುವಂತೆ ಮಾಡಿತ್ತು. ಆ ಕಾಲಕ್ಕೆ ಹರೀಶ್ ಅವರನ್ನು ಬಹುವಾಗಿ ಸೆಳೆದುಕೊಂಡಿದ್ದದ್ದು ನೃತ್ಯ. ಹಳ್ಳಿ ಕಾರ್ಯಕ್ರಮಗಳಲ್ಲಿ ಮೈಮರೆತು ಎಲ್ಲರೂ ಮೆಚ್ಚುವಂತೆ ನೃತ್ಯ ಮಾಡುತ್ತಿದ್ದ ಹರೀಶ್ ಆ ಕಾಲದಲ್ಲಿಯೇ ತಮ್ಮ ಹಳ್ಳಿಯಲ್ಲಿ ಪ್ರತಿಭಾವಂತರಾಗಿ ಗುರುತಿಸಿಕೊಂಡಿದ್ದವರು.

    ಇವರ ತಾತ ಗಂಗಯ್ಯ ಕಡೂರು ಸೀಮೆಯಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಾ ನಟನಾಗಿ ಪ್ರಸಿದ್ಧರಾಗಿದ್ದರಂತೆ. ಅವರು ಸುತ್ತಲ ಹತ್ತೂರುಗಳಲ್ಲಿಯೂ ಪ್ರಸಿದ್ಧಿ ಪಡೆದುಕೊಂಡಿರುವವರು. ಬಹುಶಃ ತಾತನ ಕಲಾಸಕ್ತಿಯ ಒಂದಂಶ ಹರೀಶ್ ಅವರೊಳಗೂ ಪ್ರವಹಿಸಿದ್ದರಿಂದಲೇ ಅವರೊಳಗೆ ಕಲಾಸಕ್ತಿ ಹುಟ್ಟಿಕೊಂಡಿದ್ದರೂ ಅಚ್ಚರಿಯೇನಿಲ್ಲ. ಶಾಲಾ ಕಾಲೇಜು ಹಂತದಲ್ಲಿ ಸಿನಿಮಾಸಕ್ತಿ ಇದ್ದರೂ ಆ ಕ್ಷಣದಲ್ಲಿ ಹರೀಶ್ ಅವರಿಗೆ ಬದುಕು ಕಟ್ಟಿಕೊಳ್ಳುವುದೇ ಮುಖ್ಯವಾಗಿತ್ತು. ಇದರಿಂದಾಗಿಯೇ ಸಾಫ್ಟ್‍ವೇರ್ ವಲಯದಲ್ಲಿ ಟ್ರಾನ್ಸ್‍ಪೋರ್ಟ್ ವಿಭಾಗದಲ್ಲಿ ಕಾರ್ಯ ನಿರ್ವಹಿಸಲಾರಂಭಿಸಿದ್ದರು.

    ಆ ನಂತರದಲ್ಲಿ ಸಮಾನ ಮನಸ್ಕರೊಂದಿಗೆ ಸೇರಿಕೊಂಡು ಫೇಸ್‍ಬುಕ್‍ನಲ್ಲಿ ವಾರಕ್ಕೊಂದರಂತೆ ಪ್ರಸಾರವಾಗುತ್ತಿದ್ದ ಸೀರೀಸ್‍ನಲ್ಲಿ ನಟಿಸಲಾರಂಭಿಸಿದ್ದರು. ಆ ನಂತರ ಒಂದಷ್ಟು ಕಿರುಚಿತ್ರಗಳಲ್ಲಿಯೂ ಹರೀಶ್ ನಟಿಸಿದ್ದರು. ಹೀಗೆ ಹಂತ ಹಂತವಾಗಿ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿಕೊಂಡು ಸಾಗಿ ಬಂದ ಹರೀಶ್ ಇದೀಗ ನಟನಾಗಿ ಗುರುತಿಸಿಕೊಂಡಿದ್ದಾರೆ. ಮುಂದೆಯೂ ನಟನಾಗಿಯೇ ನೆಲೆ ಕಂಡುಕೊಳ್ಳುವ ಇರಾದೆಯನ್ನೂ ಹೊಂದಿದ್ದಾರೆ. ಯಾವ ಪಾತ್ರವಾದರೂ ಮಾಡುವ ಛಾತಿ ಹೊಂದಿರೋ ಹರೀಶ್ ಅರಸು ಮತ್ತೊಂದಷ್ಟು ಅವಕಾಶ ಗಿಟ್ಟಿಸಿಕೊಂಡು ನಟನಾಗಿ ನೆಲೆ ಕಂಡುಕೊಳ್ಳುವ ಲಕ್ಷಣಗಳೇ ದಟ್ಟವಾಗಿವೆ.

  • ಇಷ್ಟರಲ್ಲೇ ಬರಲಿದೆ ಶೀತಲ್ ಶೆಟ್ಟಿ ನಿರ್ದೇಶನದ ಕಾರು!

    ಇಷ್ಟರಲ್ಲೇ ಬರಲಿದೆ ಶೀತಲ್ ಶೆಟ್ಟಿ ನಿರ್ದೇಶನದ ಕಾರು!

    ಹಿಂದೆ ಸಂಗಾತಿ ಎಂಬ ಕಿರುಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ನಿರ್ದೇಶಕಿಯಾಗಿ ಗಮನ ಸೆಳೆದಿದ್ದವರು ಶೀತಲ್ ಶೆಟ್ಟಿ. ಪತಿಬೇಕು ಡಾಟ್ ಕಾಮ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಯಶಸ್ವಿಯಾಗಿದ್ದರೂ ನಿರ್ದೇಶನದತ್ತಲೇ ಪ್ರಧಾನ ಆಸಕ್ತಿ ಹೊಂದಿರುವ ಅವರೀಗ ಕಾರು ಎಂಬ ಮತ್ತೊಂದು ಕಿರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದನ್ನು ಇದೇ ತಿಂಗಳ ಹದಿನೈದನೇ ತಾರೀಕಿನಂದು ಬಿಡುಗಡೆ ಮಾಡಲು ಶೀತಲ್ ಮುಂದಾಗಿದ್ದಾರೆ.

    ಸಂಗಾತಿ ಚಿತ್ರದಲ್ಲಿ ಸಂಬಂಧಗಳ ಬಗೆಗಿನ ಸೂಕ್ಷ್ಮ ಕಥೆಯನ್ನು ಶೀತಲ್ ಪ್ರೇಕ್ಷಕರ ಮುಂದಿಟ್ಟಿದ್ದರು. ಈ ಬಾರಿ ಬಾಲ್ಯದಲ್ಲಿ ಎಲ್ಲರನ್ನೂ ಕಾಡಬಹುದಾದ ಕನಸಿನಂಥಾ ವಿಚಾರವನ್ನು ಕಾರು ಕಿರುಚಿತ್ರದ ಮೂಲಕ ಕಟ್ಟಿ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಎಳೇ ವಯಸ್ಸಿನಲ್ಲಿ ಮನಸೆಳೆಯುವ ಯಾವುದೇ ವಸ್ತಗಳ ಬಗ್ಗೆ ಥರ ಥರದ ಕಲ್ಪನೆಗಳು ಹುಟ್ಟಿಕೊಳ್ಳುತ್ತವೆ. ಅದರಲ್ಲಿ ಏನೇನಿರಬಹುದೆಂಬುದರ ಬಗ್ಗೆ ವಾಸ್ತವವನ್ನು ಮೀರಿಕೊಂಡ ರೋಮಾಂಚಕ ಕಲ್ಪನೆಗಳು ಕಾಡುತ್ತವೆ. ಹಾಗೆ ಎಳೇ ಜೀವವೊಂದನ್ನು ಕಾರೆಂಬ ಮಾಯೆ ಕಲ್ಪನೆಯಾಗಿ, ಬೆರಗಾಗಿ ಕಾಡುವಂಥಾ ಕಥೆ ಈ ಕಿರುಚಿತ್ರದ್ದು.

    ಕಾರು ಕಥೆಗೆ ಸರಿ ಹೊಂದುವಂಥಾ ಹೆಣ್ಣು ಮಗುವನ್ನು ಆಡಿಷನ್ ನಡೆಸಿ ಆಯ್ಕೆ ಮಾಡಿಕೊಳ್ಳಲಾಗಿದೆ. ಆ ಮಗು ನಿರೀಕ್ಷೆಗಿಂತಲೂ ಹೆಚ್ಚೇ ಪರಿಣಾಮಕಾರಿಯಾಗಿ ನಟಿಸಿದೆಯಂತೆ. ಇದರ ಚಿತ್ರೀಕರಣ ಮಾಕೋನಹಳ್ಳಿ ಡ್ಯಾಂನ ಸುತ್ತಮುತ್ತಲ ರಮಣೀಯ ಪ್ರದೇಶಗಳಲ್ಲಿ ನಡೆಸಲಾಗಿದೆ. ಯೋಗೀಶ್ವರ್ ಛಾಯಾಗ್ರಹಣ, ಋತ್ವಿಕ್ ಸಂಕಲನ, ಅನಂತ್ ಕಾಮತ್ ಸಂಗೀತ ನಿರ್ದೇಶನ ಈ ಕಿರು ಚಿತ್ರಕ್ಕಿದೆ. ಕಾರು ಎಂಬ ಕನಸಿನಂಥಾ ಕಥೆಯ ಮೂಲಕ ಮತ್ತೊಂದು ಸಲ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಖುಷಿಯಲ್ಲಿ ಶೀತಲ್ ಅವರಿದ್ದಾರೆ. ಈ ಹಿಂದೆ ಸಂಗಾತಿ ಕಿರುಚಿತ್ರಕ್ಕೆ ಸಿಕ್ಕಂಥಾದ್ದೇ ಸ್ಪಂದನೆ ಕಾರಿಗೂ ಸಿಗುತ್ತದೆಂಬ ನಿರೀಕ್ಷೆಯೂ ಅವರಲ್ಲಿದೆ.

    https://twitter.com/isheethalshetty/status/1204435062034321408

  • ಹಿಂದಿ ಕಿರುಚಿತ್ರದಲ್ಲಿ ಅನುಪಮಾ ಗೌಡ

    ಹಿಂದಿ ಕಿರುಚಿತ್ರದಲ್ಲಿ ಅನುಪಮಾ ಗೌಡ

    ಬೆಂಗಳೂರು: ಕಿರುತೆರೆಯ ನಟಿ ಮತ್ತು ಬಿಗ್ ಬಾಸ್ ಖ್ಯಾತಿಯ ಅನುಪಮಾ ಗೌಡ ಈಗ ಸಖತ್ ಬ್ಯುಸಿಯಾಗಿದ್ದು, ಇದೀಗ ಅವರಿಗೆ ಹಿಂದಿಯಲ್ಲಿ ಅಭಿನಯಿಸುವ ಬಂಪರ್ ಆಫರ್ ಬಂದಿದೆ.

    ಹೌದು..ಅನುಪಮಾ ಕಿರುಚಿತ್ರದಲ್ಲಿ ಅಭಿನಯಿಸಲು ಸಜ್ಜಾಗಿದ್ದು, ಕಿರುಚಿತ್ರಕ್ಕೆ ‘ದಿ ಫಾಲನ್’ ಎಂದು ಟೈಟಲ್ ಇರಿಸಲಾಗಿದೆ. ವಿಶೇಷವೆಂದರೆ ಈ ಕಿರುಚಿತ್ರ ಹಿಂದಿಯಲ್ಲಿ ತಯಾರಾಗುತ್ತಿದೆ. ಸ್ಯಾಂಡಲ್‍ವುಡ್‍ನ ‘ಊರ್ವಿ’ ಖ್ಯಾತಿಯ ನಿರ್ದೇಶಕ ಪ್ರದೀಪ್ ವರ್ಮಾ ಈ ಕಿರುಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

    ‘ದಿ ಫಾಲನ್’ ಕಿರುಚಿತ್ರ ಬರೋಬ್ಬರಿ 4 ಸಾವಿರ ವರ್ಷಗಳ ಹಿಂದಿನ ಕಥೆಯನ್ನು ಹೊಂದಿದೆಯಂತೆ. ಸದ್ಯಕ್ಕೆ ಅದ್ಧೂರಿಯಾಗಿ ತಯಾರಾಗುತ್ತಿರುವ ಕಿರುಚಿತ್ರಕ್ಕೆ ಫೋಟೋಶೂಟ್ ಮಾಡಿಸುವ ಪ್ಲಾನ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    ‘ದಿ ಫಾಲನ್’ ಕಿರುಚಿತ್ರಕ್ಕೆ ಲೇಹ್, ಲದಾಕ್, ಮನಾಲಿ ಸುತ್ತಮುತ್ತ ಫೋಟೋಶೂಟ್ ಮಾಡಲು ಚಿತ್ರತಂಡ ತಯಾರಿ ಮಾಡುತ್ತಿದೆ. ಜೊತೆಗೆ 30 ದಿನಗಳ ಕಾಲ ಶೂಟಿಂಗ್‍ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ನಟಿ ಅನುಪಮಾ ಗೌಡ ಮೊದಲಿಗೆ ಕಿರುತೆಯಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ನಂತರ ಬಿಗ್‍ಬಾಸ್‍ ಮನೆಗೆ ಹೋಗಿ ಖ್ಯಾತಿ ಪಡೆದಿದ್ದು, ಇದೀಗ ನಿರೂಪಕಿಯಾಗಿ ಮಿಂಚುತ್ತಿದ್ದಾರೆ. ಇದೆಲ್ಲದರ ಜೊತೆಗೆ ಕಿರುಚಿತ್ರದಲ್ಲಿ ನಟಿಸುತ್ತಿದ್ದಾರೆ.

  • ಮತ್ತೊಂದು ಕಿರುಚಿತ್ರ ನಿರ್ದೇಶನ ಮಾಡಲಿದ್ದಾರೆ ಶೀತಲ್ ಶೆಟ್ಟಿ!

    ಮತ್ತೊಂದು ಕಿರುಚಿತ್ರ ನಿರ್ದೇಶನ ಮಾಡಲಿದ್ದಾರೆ ಶೀತಲ್ ಶೆಟ್ಟಿ!

    ಶೀತಲ್ ಶೆಟ್ಟಿ ಮತ್ತೊಂದು ಕನಸಿನ ಬೆನ್ನತ್ತಿದ್ದಾರೆ. ಪತಿಬೇಕು ಡಾಟ್ ಕಾಮ್ ಚಿತ್ರದ ಮೂಲಕ ಹೀರೋಯಿನ್ನಾಗಿಯೂ ಕಾಣಿಸಿಕೊಂಡಿರೋ ಅವರು ಅದರ ಬೆನ್ನಲ್ಲೇ ಕಿರುಚಿತ್ರವೊಂದರ ಮೂಲಕ ಗಮನ ಸೆಳೆದಿದ್ದರು. ಸಂಗಾತಿಯೆಂಬ ಕಿರುಚಿತ್ರದ ಮೂಲಕ ಗಹನವಾದೊಂದು ಸಂಗತಿಯನ್ನು ಹೇಳಿದ್ದ ಶೀತಲ್ ಇದೀಗ ಮತ್ತೊಂದು ಕಿರುಚಿತ್ರ ನಿರ್ದೇಶನ ಮಾಡಲು ತಯಾರಿ ನಡೆಸುತ್ತಿದ್ದಾರೆ!

    ಸಂಗಾತಿ ಚಿತ್ರದ ಮೂಲಕವೇ ಸೂಕ್ಷ್ಮವಾಗಿ ಕಥೆ ಹೇಳೋ ಶೀತಲ್ ಶೆಟ್ಟಿ ಇದೀಗ ಬೇರೆಯದ್ದೇ ಬಗೆಯ ಕಥೆಯೊಂದನ್ನು `ಕಾರು’ ಎಂಬ ಕಿರು ಚಿತ್ರದ ಮೂಲಕ ಹೇಳ ಹೊರಟಿದ್ದಾರೆ.

    ಯಾವುದೇ ಕೆಲಸವನ್ನಾದರೂ ನೀಟಾಗಿ ಮಾಡಬೇಕೆಂಬ ಮನಸ್ಥಿತಿಯ ಶೀತಲ್ ಸಂಪೂರ್ಣ ತಯಾರಿ ಮಾಡಿಕೊಂಡೇ ಈ ಕಿರು ಚಿತ್ರವನ್ನು ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಇದರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಅವರೇ ವಹಿಸಿಕೊಂಡಿದ್ದಾರೆ. ನಡುವೆ ಅಂತರವಿರಲಿ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದ ಯೋಗೀಶ್ವರ್ ಈ ಚಿತ್ರಕ್ಕೆ ಕ್ಯಾಮೆರಾ ಕಣ್ಣಾಗಲಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೂ ಸಂಕಲನಕಾರರಾಗಿದ್ದ ಪ್ರದೀಪ್ ರಾವ್ ಈ ಚಿತ್ರದ ಸಂಕಲನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅಭಿಷೇಕ್ ಪೋಸ್ಟರ್ ಡಿಸೈನ್ ಕಾರ್ಯ ನೋಡಿಕೊಂಡರೆ, ಅನಂತ್ ಕಾಮತ್ ಮ್ಯೂಸಿಕ್ ಈ ಕಿರುಚಿತ್ರಕ್ಕಿರಲಿದೆ.

    `ಕಾರು’ ಹನ್ನೆರಡದಿಂದ ಹದಿನೈದು ನಿಮಿಷದ ಕಿರುಚಿತ್ರ. ಒಳ್ಳೆ ಫೀಲ್ ಕೊಡೋದರ ಜೊತೆಗೆ, ಈ ಕಿರುಚಿತ್ರ ನೋಡಿದವರೆಲ್ಲರ ಮುಖದಲ್ಲಿಯೂ ತೃಪ್ತಿಯ ಮಂದಹಾಸ ಮೂಡುವಂತಾಗಬೇಕು ಎಂಬ ಉದ್ದೇಶದಿಂದಲೇ ಶೀತಲ್ ಈ ಚಿತ್ರಕ್ಕೆ ತಯಾರಾಗುತ್ತಿದ್ದಾರೆ. ಪುಟ್ಟ ವಯಸ್ಸಿನಲ್ಲಿ ಪ್ರತಿಯೊಬ್ಬರಿಗೂ ಏನೇನೋ ಕನಸಿರುತ್ತೆ. ಯಾವುದೋ ವಸ್ತು ಕನಸಾಗಿರುತ್ತೆ. ಅದರಲ್ಲಿ ಕೆಲವು ನಿಜವಾಗಿ ಮತ್ತೆ ಕೆಲವು ಸುಳ್ಳಾಗಲೂ ಬಹುದು. ಮತ್ತೆ ಕೆಲ ಕನಸುಗಳು ಭ್ರಮೆಯ ಕೂಸಾಗಿರಲೂಬಹುದು. ಇಂಥಾದ್ದೊಂದು ಹೊಳಹಿನೊಂದಿಗೇ ಸಿದ್ಧಗೊಂಡಿರೋ ಈ ಕಿರುಚಿತ್ರ ಪುಟ್ಟ ಹುಡುಗಿಯೊಬ್ಬಳ ಸುತ್ತ ತಿರುಗೋ ಕಥೆ.

    ಹಳ್ಳಿಯೊಂದರಲ್ಲಿ ಘಟಿಸೋ ಈ ಕಥೆಯನ್ನು ಮಧುಗಿರಿಯ ಸುತ್ತಲ ವಾತಾವರಣದಲ್ಲಿ ಚಿತ್ರೀಕರಿಸಲು ಶೀತಲ್ ಯೋಜನೆ ಹಾಕಿಕೊಂಡಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದ ಮೂಲಕ ಈ ಚಿತ್ರಕ್ಕೆ ಬೇಕಾದ ಪುಟಾಣಿಗಾಗಿ ಶೀತಲ್ ಆಡಿಷನ್ ಕರೆದಿದ್ದರು. ಇದಕ್ಕೆ ವ್ಯಾಪಕ ಪ್ರತಿಕ್ರಿಯೆ ಸಿಕ್ಕಿದೆ. ಇನ್ನೂರಕ್ಕೂ ಹೆಚ್ಚು ಮಕ್ಕಳು ಸಂಪರ್ಕಿಸಿದ್ದಾರೆ. ಇದರಲ್ಲಿಬ್ಬರನ್ನು ಆರಿಸಿಕೊಂಡಿರೋ ಶೀತಲ್ ಇಷ್ಟರಲ್ಲೇ ಅದರಲ್ಲೊಬ್ಬರನ್ನು ಫೈನಲ್ ಮಾಡಲಿದ್ದಾರಂತೆ.

    ಇದೀಗ ಈ ಕಿರುಚಿತ್ರದ ತಯಾರಿ ಚಾಲ್ತಿಯಲ್ಲಿದೆ. ಸಂಗಾತಿ ಚಿತ್ರದಲ್ಲಿ ಗಹನವಾದೊಂದು ವಿಚಾರವನ್ನು ಹೇಳಿದ ಕಲಾತ್ಮಕ ಶೈಲಿಯಿಂದ ಗಮನ ಸೆಳೆದಿದ್ದ ಶೀತಲ್ ಅದರ ಕಾರಣದಿಂದಲೇ ತಾಂತ್ರಿಕವಾಗಿಯೂ ಅನುಭವ ಪಡೆದುಕೊಂಡಿದ್ದಾರೆ. ಆ ಕಿರುಚಿತ್ರದ ಫಲವಾಗಿಯೇ ಕಾರು ಚಿತ್ರಕ್ಕೂ ಹಣ ಹೂಡುವವರೂ ಸಿಕ್ಕಿದ್ದಾರೆ. ಇನ್ನೇನು ನವೆಂಬರ್ ತಿಂಗಳಲ್ಲಿ ಚಿತ್ರೀಕರಣ ನಡೆಸಿ, ಡಿಸೆಂಬರಿನಲ್ಲಿ ನಡೆಯಲಿರೋ ಗೋವಾ ಶಾರ್ಟ್ ಫಿಲಂ ಫೆಸ್ಟಿವಲ್‍ನಲ್ಲಿ ಈ ಕಿರುಚಿತ್ರವನ್ನು ಪ್ರದರ್ಶನ ಮಾಡಲು ಶೀತಲ್ ಯೋಜನೆ ಹಾಕಿಕೊಂಡಿದ್ದಾರೆ.

    ಈ ಮೂಲಕ ಶೀತಲ್ ಶೆಟ್ಟಿ ನಿರ್ದೇಶಕಿಯಾಗಿ ನೆಲೆಗೊಳ್ಳುವ ಸೂಚನೆ ನೀಡಿದ್ದಾರೆ. ಕಾರು ಚಿತ್ರ ಪೂರ್ಣಗೊಂಡು ಬಿಡುಗಡೆಯಾದ ನಂತರ ಶೀತಲ್ ಮುಂದಿನ ನಡೆ ನಿಖರವಾಗಿ ಜಾಹೀರಾಗಬಹುದೇನೋ..?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೋದಿ ಅನಕ್ಷರಸ್ಥ, ಅವರ ಕಿರುಚಿತ್ರದಿಂದ ಮಕ್ಕಳು ಏನು ಕಲಿಯಲು ಸಾಧ್ಯವಿಲ್ಲ- ಸಂಜಯ್ ನಿರುಪಮ್

    ಮೋದಿ ಅನಕ್ಷರಸ್ಥ, ಅವರ ಕಿರುಚಿತ್ರದಿಂದ ಮಕ್ಕಳು ಏನು ಕಲಿಯಲು ಸಾಧ್ಯವಿಲ್ಲ- ಸಂಜಯ್ ನಿರುಪಮ್

    ಮುಂಬೈ: ಮಹಾರಾಷ್ಟ್ರ ಶಾಲೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಜೀವನ ಚರಿತ್ರೆ ಆಧಾರಿತ ಕಿರುಚಿತ್ರವನ್ನು ಪ್ರದರ್ಶಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಂಬೈನ ಕಾಂಗ್ರೆಸ್ ಮುಖ್ಯಸ್ಥ ಸಂಜಯ್ ನಿರೂಪಮ್ ಮೋದಿ ‘ಅನಕ್ಷರಸ್ಥ’ ಎಂದು ಹೇಳುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.

    ಶಾಲೆಗಳಲ್ಲಿ ಬಲವಂತವಾಗಿ ಕಿರುಚಿತ್ರವನ್ನು ಪ್ರದರ್ಶನ ಮಾಡುವುದು ಸೂಕ್ತವಲ್ಲ. ಮಕ್ಕಳನ್ನು ರಾಜಕೀಯದಿಂದ ದೂರವಿಡಬೇಕು. ಅನಕ್ಷರಸ್ಥ ಹಾಗೂ ಶಿಕ್ಷಣವೇ ಇಲ್ಲ ಪ್ರಧಾನಿ ನರೇಂದ್ರ ಮೋದಿ ಅವರ ಕಿರುಚಿತ್ರವನ್ನು ನೋಡಿ, ಮಕ್ಕಳು ಏನು ಕಲಿಯಲು ಸಾಧ್ಯ ಎಂದು ಕಿಡಿಕಾರಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಎಷ್ಟು ಪದವಿಗಳನ್ನು ಪಡೆದಿದ್ದಾರೆ ಅಂತಾ ಜನರಿಗೆ ಹಾಗೂ ಮಕ್ಕಳಿಗೆ ಮಾಹಿತಿ ಇಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಧಾನ ಮಂತ್ರಿಯೇ ದೇವರಲ್ಲ ಎಂದು ಹೇಳಿದರು.

    ಸಂಜಯ್ ನಿರೂಪಮ್ ಮಾನಸಿಕ ಅಸ್ವಸ್ಥ ವ್ಯಕ್ತಿ. ನರೇಂದ್ರ ಮೋದಿ ಅವರು 125 ಕೋಟಿ ಜನರಿಂದ ಆಯ್ಕೆಯಾಗಿ ಪ್ರಧಾನಿ ಆಗಿದ್ದಾರೆ ಎನ್ನುವುದನ್ನು ಸಂಜಯ್ ಮರೆತಿದ್ದಾರೆ. ಕಾಂಗ್ರೆಸ್ ಸಿದ್ಧಾಂತ ರಹಿತವಾಗಿದ್ದು, ಮುಂಬರುವ 2019ರ ಚುನಾವಣೆಯಲ್ಲಿ ಜನರಿಂದ ತಕ್ಕ ಪಾಠ ಕಲಿಯಲಿದೆ ಎಂದು ಮಹಾರಾಷ್ಟ್ರದ ಬಿಜೆಪಿ ವಕ್ತಾರೆ ಶೈನಾ ಎನ್.ಸಿ. ತಿರುಗೇಟು ನೀಡಿದ್ದಾರೆ.

    ಮಹಾರಾಷ್ಟ್ರದ ಜಿಲ್ಲಾ ಪರಿಷತ್ ಶಾಲೆಗಳು ಪ್ರಧಾನಿ ಮೋದಿ ಅವರ ಜೀವನಾಧಾರಿತ ‘ಚಲೋ ಜೀತೆ ಹೈ’ ಕಿರುಚಿತ್ರವನ್ನು ಪ್ರದರ್ಶನ ಮಾಡುವಂತೆ ಕೇಳಿಕೊಂಡಿದ್ದವು. ಚಲೋ ಜೀತೆ ಹೈ ಚಿತ್ರವನ್ನು ಮಂಗೇಶ್ ಹದವಾಲೆ ಅವರ ನಿರ್ದೇಶಿಸಿದ್ದಾರೆ. ರಾಜ್ಯ ಸರ್ಕಾರವು ಶಾಲೆಗಳಲ್ಲಿ ಕಿರುಚಿತ್ರ ಪ್ರದರ್ಶನಕ್ಕೆ ಮುಂದಾಗಿದ್ದರಿಂದ ಕಾಂಗ್ರೆಸ್ ನಿಂದ ಭಾರೀ ವಿರೋಧ ವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಹೆಣ್ಣು ಮಕ್ಕಳಿಗಾಗಿ ಮಿಡಿಯಿತು ದರ್ಶನ್ ಮನ- ಮಾಡಿದ್ದಾರೆ ಮಹತ್ವದ ಕೆಲಸ!

    ಹೆಣ್ಣು ಮಕ್ಕಳಿಗಾಗಿ ಮಿಡಿಯಿತು ದರ್ಶನ್ ಮನ- ಮಾಡಿದ್ದಾರೆ ಮಹತ್ವದ ಕೆಲಸ!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅರಣ್ಯ ಸಂರಕ್ಷಣೆ ಹಾಗೂ ಪರಿಸರ ಬಗ್ಗೆ ಕಾಳಜಿ ಮೂಡಿಸೋಕೆ ಮುಂದಾಗಿದ್ದು, ಇದೀಗ `ಹೆಣ್ಣು ಭ್ರೂಣ ಹತ್ಯೆ ಮಹಾಪಾಪ’ ಬಗ್ಗೆ ಜಾಗೃತಿ ಮೂಡಿಸೋಕೆ ತಯಾರಾಗಿದ್ದಾರೆ.

    ಹೆಣ್ಣು ಶಿಶು ಹತ್ಯೆಯನ್ನು ಖಂಡಿಸಿ ತಯಾರಾಗಿರುವ ಕಿರುಚಿತ್ರವೊಂದಕ್ಕೆ ದರ್ಶನ್ ಬೆನ್ನುಲುಬಾಗಿ ನಿಂತಿದ್ದಾರೆ. `ಮಾತೃಜನನ’ ಹೆಸರಲ್ಲಿ ನಿರ್ಮಾಣವಾಗಿರುವ ಕಿರುಚಿತ್ರವೊಂದನ್ನು ಬಿಡುಗಡೆ ಮಾಡಿಕೊಡುವುದರ ಮೂಲಕ ಹೊಸ ಪ್ರತಿಭೆಗಳಿಗೆ ಬೆಂಬಲ ಸೂಚಿಸಿದ್ದಾರೆ.

    ಸಾಮಾನ್ಯವಾಗಿ ದರ್ಶನ್ ಹೊಸಬರ ಸಿನಿಮಾಗಳಿಗೆ ಬೆಂಬಲ ಸೂಚಿಸುತ್ತಾರೆ. ಇದೀಗ ಮಾತೃಜನನ ತಂಡಕ್ಕೂ ಸಾಥ್ ಕೊಟ್ಟಿದ್ದಾರೆ. ಹೆಣ್ಣು ಶಿಶು ಹತ್ಯೆಯನ್ನು ಖಂಡಿಸಿ ಕಿರುಚಿತ್ರ ಮಾಡಿದ್ದೇವೆ ಅಂತ ಚಿತ್ರತಂಡ ಹೇಳಿದ ತಕ್ಷಣ ದರ್ಶನ್ ಏನು ಯೋಚಿಸದೇ ಮನೆಗೆ ಕರೆಸಿಕೊಂಡು ಚಿತ್ರದ ಟೀಸರ್ ರಿಲೀಸ್ ಮಾಡಿಕೊಟ್ಟಿದ್ದಾರೆ. ಅಲ್ಲದೇ ಈ ಕಿರುಚಿತ್ರ ಪ್ರದರ್ಶನಕ್ಕೆ ಕಲಾವಿದರ ಸಂಘದ ಭವನದಲ್ಲಿ ಅವಕಾಶ ಕೂಡ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಕುಮಾರಿ 21 ಎಫ್ ಟ್ರೇಲರ್ ರಿಲೀಸ್ ಮಾಡಿದ ಚಾಲೆಂಜಿಂಗ್ ಸ್ಟಾರ್!

    `ಮಾತೃಜನನ’ ಕಿರುಚಿತ್ರವನ್ನು ನಿಶಾಂತ್ ಮೇಗಳಮನೆ ಹಾಗೂ ಸುಮುಖ ಶರ್ಮಾ ನಿರ್ದೇಶನ ಮಾಡಿದ್ದಾರೆ. ಇಡೀ ವಿಶ್ವದಲ್ಲಿ ಅತೀ ಹೆಚ್ಚು ಹೆಣ್ಣು ಶಿಶು ಹತ್ಯೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಈ ಕಳಂಕವನ್ನು ತೊಡೆದು ಹೆಣ್ಣುಭ್ರೂಣ ಹತ್ಯೆಯ ತಡೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದು ತಯಾರಾಗಿದ್ದಾರೆ.

  • ಪೈರಸಿ ಹೇಗೆ ಸಿನಿರಂಗದಲ್ಲಿ ಬೇರೂರಿದೆ ಎಂಬುದನ್ನು ಈ ಶಾರ್ಟ್ ಫಿಲ್ಮ್ ನಲ್ಲಿ ನೋಡಿ

    ಪೈರಸಿ ಹೇಗೆ ಸಿನಿರಂಗದಲ್ಲಿ ಬೇರೂರಿದೆ ಎಂಬುದನ್ನು ಈ ಶಾರ್ಟ್ ಫಿಲ್ಮ್ ನಲ್ಲಿ ನೋಡಿ

    ಬೆಂಗಳೂರು: ಪೈರಸಿ ಒಂದು ಚಿತ್ರವನ್ನು ಹೇಗೆ ನಾಶ ಮಾಡುತ್ತದೆ? ಪೈರಸಿಯಿಂದ ಚಿತ್ರತಂಡದ ಮೇಲಾಗುವ ಪರಿಣಾಮ ಎಂಬುದರ ಬಗ್ಗೆ ನಟಿ ಸುಮನ್ ನಗರ್ಕರ್ ಶಾರ್ಟ್ ಫಿಲ್ಮ್ ನಲ್ಲಿ ಮನಸ್ಸಿಗೆ ತಾಗುವಂತೆ ಹೇಳಿದ್ದಾರೆ.

    ಈ ಶಾರ್ಟ್ ಫಿಲ್ಮ್ ನಲ್ಲಿ ಸುಮನ್ ನಗರ್ಕರ್ ನಟನೆಯ `ಮೌನ’ ಸಿನಿಮಾ ಬಿಡುಗಡೆ ಆಗಿರುತ್ತದೆ. ಸಿನಿಮಾ ಬಿಡುಗಡೆ ವೇಳೆ ನಟಿ ಪ್ರೇಕ್ಷಕರ ಬರುವಿಕೆಗಾಗಿ ಚಿತ್ರಮಂದಿರದ ಹೊರಗಡೆಯೇ ಕುಳಿತಿರುತ್ತಾರೆ. ಈ ವೇಳೆ ಸುಮನ್ ಅವರ ಆತ್ಮಸಾಕ್ಷಿ ಎದುರಿಗೆ ಬರುತ್ತದೆ. ಆತ್ಮಸಾಕ್ಷಿಯ ಪ್ರತಿಯೊಂದು ಮಾತುಗಳು ನೋಡುಗರನ್ನು ತಲುಪುತ್ತವೆ. ಒಂದು ವಸ್ತು ಹುಟ್ಟಿದರೆ ಅದರ ಹಿಂದೆ ಕೆಲವೇ ನಿಮಿಷಗಳಲ್ಲಿ ಆ ವಸ್ತುವಿನ ನಕಲು ತಯಾರಾಗುತ್ತದೆ ಎಂಬ ಅರ್ಥಗರ್ಭಿತ ಮಾತನ್ನು ಹೇಳುತ್ತದೆ.

    ಸಿನಿಮಾ ಚಿತ್ರಮಂದಿರಗಳಿಗೆ ಲಗ್ಗೆಯಿಟ್ಟ ಕೂಡಲೇ ಕೆಲವರು ಅದರ ಪೈರಸಿ ಮಾಡುತ್ತಾರೆ. ಹಾಗೇ ಸಿನಿಮಾ ದಿನವೇ ಸುಮನ್ ನಟನೆಯ `ಮೌನ’ ಚಿತ್ರದ ಪೈರಸಿ ಆಗಿರುತ್ತದೆ. ಮೌನ ಸಿನಿಮಾ ನೋಡಲು ಬಂದವರು ಸಹ ಮೊಬೈಲ್‍ನಲ್ಲಿ ಸಿನಿಮಾದ ಲಿಂಕ್ ನೋಡಿ ಬೇರೆ ಫಿಲ್ಮ್ ನೋಡಲು ಹೋಗುತ್ತಾರೆ. ಕೊನೆಗೆ ಪ್ರೇಕ್ಷಕರ ಕೊರತೆಯಿಂದಾಗಿ ಚಿತ್ರಮಂದಿರದಿಂದ ಸಿನಿಮಾವನ್ನು ತೆಗೆಯಲಾಗುತ್ತದೆ.

    ಕೇವಲ 4 ನಿಮಿಷ 48 ಸೆಕಂಡ್ ಗಳಿರುವ `ಗ್ರೇ’ ಕಿರುಚಿತ್ರ ಅತ್ಯಂತ ಪರಿಣಾಮಕಾರಿಯಾಗಿದೆ. ಸಿನಿಮಾ ತೆರೆಗೆ ತರಲು ಕಷ್ಟಪಟ್ಟ ಚಿತ್ರತಂಡದ ಶ್ರಮವೆಲ್ಲಾ ವ್ಯರ್ಥವಾಗುತ್ತದೆ. ಗ್ರೇ ಕಿರು ಚಿತ್ರಕ್ಕೆ ಸುಜಯ್ ರಾಮಯ್ಯ ನಿರ್ದೇಶನವಿದೆ. ಕಿರುಚಿತ್ರ ಶುಕ್ರವಾರ ಯುಟ್ಯೂಬ್ ಅಪ್ಲೋಡ್ ಆಗಿದ್ದು, ನೋಡುಗರು ಮತ್ತು ವಿಮರ್ಶಕರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದೆ.

    ಕಳೆದ ವಾರ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ದೃವ ಸರ್ಜಾ ನಟನೆಯ `ಭರ್ಜರಿ’ ಸಿನಿಮಾಗೂ ಪೈರಸಿಯ ಬಿಸಿ ತಟ್ಟಿತ್ತು.