Tag: Shops

  • ಬೆಂಕಿ ತಗುಲಿ ಬೀದಿ ಬದಿ ಅಂಗಡಿಗಳು ಭಸ್ಮ

    ಬೆಂಕಿ ತಗುಲಿ ಬೀದಿ ಬದಿ ಅಂಗಡಿಗಳು ಭಸ್ಮ

    ಮಂಡ್ಯ: ಬೀದಿ ಬದಿಯಲ್ಲಿದ್ದ ಹಣ್ಣಿನ ಅಂಗಡಿಗಳು  ಸೇರಿದಂತೆ ಇತರೆ ಅಂಗಡಿಗಳು (Shops) ಬೆಂಕಿಯಿಂದ (Fire Accident) ಸುಟ್ಟು ಕರಕಲಾಗಿರುವ ಘಟನೆ ಮಂಡ್ಯದ (Mandya) ಹೊಳಲು ಸರ್ಕಲ್‌ನಲ್ಲಿ (Holalu Circle) ಜರುಗಿದೆ.

    ಇಂದು ಬೆಳಗ್ಗಿನ ಜಾವ 3.30ರ ವೇಳೆಯಲ್ಲಿ ಹೊಳಲು ಸರ್ಕಲ್‌ನಲ್ಲಿ ರಸ್ತೆ ಬದಿಯಲ್ಲಿದ್ದ ಹಣ್ಣಿನ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಪಕ್ಕದಲ್ಲೇ ಇದ್ದ ಮತ್ತೊಂದು ಅಂಗಡಿಗೂ ಈ ಬೆಂಕಿ ವ್ಯಾಪಿಸಿದೆ. ಬೆಂಕಿಯ ತೀವ್ರತೆ ಹೆಚ್ಚಿದ ಕಾರಣ ಎರಡೂ ಅಂಗಡಿಗಳು ಸುಟ್ಟು ಕರಕಲಾಗಿವೆ. ಇದನ್ನೂ ಓದಿ: ಇಸ್ಪಿಟ್ ಆಡುತ್ತಿದ್ದ ನಗರಸಭೆ ಸದಸ್ಯ ಸಹಿತ 14 ಜನರ ಬಂಧನ

    ಘಟನೆ ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದ್ದ ಅವಘಡವನ್ನು ತಪ್ಪಿಸಿದ್ದಾರೆ. ಮಹದೇವ, ರಾಧಮ್ಮ ಎಂಬವರಿಗೆ ಸೇರಿದ ಎರಡು ಅಂಗಡಿಗಳು ಸುಟ್ಟು ಕರಕಲಾಗಿವೆ ಎಂದು ತಿಳಿದು ಬಂದಿದೆ. ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಬೆಂಕಿಯ ಕೆನ್ನಾಲೆಗೆ ಸುಟ್ಟು ಕರಕಲಾಗಿರುವ ಅಂಗಡಿಗಳ ಮಾಲೀಕರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಈ ಕುರಿತು ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಂಸತ್‌ನಲ್ಲಿ ಭದ್ರತಾ ಲೋಪ ಕೇಸ್‌ – ತನಿಖೆಗೆ ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ವಿಶೇಷ ಸೆಲ್‌

  • ಸಿಎಂಗೆ ಜೀರೊ ಟ್ರಾಫಿಕ್ ಕಲ್ಪಿಸಲು ಅಂಗಡಿ ಮುಂಗಟ್ಟು ಬಂದ್‌ – ಜನರ ಆಕ್ರೋಶ

    ಸಿಎಂಗೆ ಜೀರೊ ಟ್ರಾಫಿಕ್ ಕಲ್ಪಿಸಲು ಅಂಗಡಿ ಮುಂಗಟ್ಟು ಬಂದ್‌ – ಜನರ ಆಕ್ರೋಶ

    ಗದಗ: ನಗರದಲ್ಲಿ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿಗೆ ಜೀರೊ ಟ್ರಾಫಿಕ್ಸ್‌ ಕಲ್ಪಿಸಲು ವೀರೇಶ್ವರ ಪುಣ್ಯಾಶ್ರಮದ ಆವರಣದಲ್ಲಿನ ಹೂ, ಹಣ್ಣು, ಕಾಯಿ ಮಾರಾಟ ಮಾಡುತ್ತಿದ್ದ ಸಣ್ಣಪುಟ್ಟ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದ್ದು ಜನರ ಆಕ್ರೋಶಕ್ಕೆ ಕಾರಣವಾಯಿತು.

    ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ನಗರಕ್ಕೆ ಭೇಟಿ ನೀಡಿದ್ದರು. ಮೊದಲಿಗೆ ತೋಂಟದಾರ್ಯ ಲಿಂಗೈಕ್ಯ ಸಿದ್ದಲಿಂಗ ಮಹಾಸ್ವಾಮಿ ಐಕ್ಯ ಮಂಟಪ ಕಟ್ಟಡ ಉದ್ಘಾಟನೆ ಮಾಡಿದರು. ನಂತರ ವೀರೇಶ್ವರ ಪುಣ್ಯಾಶ್ರಮದ ಪುಟ್ಟರಾಜ ಕವಿಗವಾಯಿಗಳ ಮಠಕ್ಕೆ ಭೇಟಿ ನೀಡಿದರು. ಇದನ್ನೂ ಓದಿ: ಪಾಪ ಈಶ್ವರಪ್ಪ – ಕಾಂಗ್ರೆಸ್ ಕಾಲದಲ್ಲಿ ನಡೆದ ಪರ್ಸಂಟೇಜ್ ಬಗ್ಗೆ ಯಾರು ಮಾತನಾಡಲಿಲ್ಲ: ಹೆಚ್‍ಡಿ.ರೇವಣ್ಣ

    ಸೆಕ್ಯೂರಿಟಿ ಚೆಕ್‌ಗಾಗಿ ಬೆಳಗ್ಗೆ ವೀರೇಶ್ವರ ಪುಣ್ಯಾಶ್ರಮಕ್ಕೆ ಬಂದಿದ್ದ ಪೊಲೀಸರು ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚಿಸಿದ್ದರು. ಬೆಳಗ್ಗೆ 10:50ಕ್ಕೆ ಸಿಎಂ ಗದಗ ನಗರಕ್ಕೆ ಬಂದಿದ್ದರು. ಬೆಳಗ್ಗೆಯಿಂದಲೇ ಶ್ರೀಮಠದ ಆವರಣದಲ್ಲಿನ 10 ಕ್ಕೂ ಹೆಚ್ಚು ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ. ಬೆಳಗಿನ ಜಾವ ಆಶ್ರಮಕ್ಕೆ ಬರುವ ಭಕ್ತರನ್ನೇ ನಂಬಿಕೊಂಡು ಇಲ್ಲಿ ವ್ಯಾಪಾರ ನಡೆಯುತ್ತೆ. ಪೊಲೀಸರು ಏಕಾಏಕಿ ಅಂಗಡಿ ಬಂದ್ ಮಾಡಿಸಿದ್ದರಿಂದ ಒಂದು ಅಂಗಡಿಗೆ ಕನಿಷ್ಠ 1,000 ರೂ. ವ್ಯಾಪಾರ ನಷ್ಟವಾಗಿದೆ.

    ಸಿದ್ದರಾಮಯ್ಯ, ಯಡಿಯೂರಪ್ಪ ಭೇಟಿ ಕೊಟ್ಟಾಗಲೂ ಬಂದ್‌ ಆಗಿರಲಿಲ್ಲ
    ಇತ್ತೀಚೆಗೆ ವೀರೇಶ್ವರ ಪುಣ್ಯಾಶ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭೇಟಿ ನೀಡಿದ್ದರು. ಆಗಲೂ ಮಠದ ಆವರಣದಲ್ಲಿನ ಮಳಿಗೆಗಳನ್ನು ಬಂದ್ ಮಾಡಿಸಿರಲಿಲ್ಲ. ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗಲೂ ಮಠಕ್ಕೆ ಭೇಟಿ ನೀಡಿದ್ದರು. ಯಾರೇ ಗಣ್ಯ ವ್ಯಕ್ತಿಗಳು ಬಂದರೂ ಮಠಕ್ಕೆ ಭೇಟಿ ಕೊಡುತ್ತಾರೆ.‌ ಆದರೆ ಯಾವ ಸಂದರ್ಭದಲ್ಲೂ ಅಂಗಡಿ ಬಂದ್ ಮಾಡಿಸಿದ ಉದಾಹರಣೆಗಳಿಲ್ಲ. ಬಂದ್‌ ಮಾಡಿಸಲು ಬಂದಿದ್ದ ಪೊಲೀಸರು ಬೇರೆಯೇ ಕಾರಣ ಕೊಟ್ಟಿದ್ದರು ಎಂದು ಸ್ಥಳೀಯ ವ್ಯಾಪಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾವೆಲ್ಲಾ ಬಾರ್‌ನಲ್ಲಿ ಕುಡಿದಿದ್ವಿ, ಸಂತೋಷ್ ಫ್ರೂಟ್ ಜ್ಯೂಸ್ ತಗೊಂಡು ರೂಮ್‍ಗೆ ಹೋಗಿದ್ದರು – ಸ್ನೇಹಿತರು ಹೇಳಿದ್ದೇನು?

    Basavaraj Bommai

    ಜೀರೋ ಟ್ರಾಫಿಕ್‌ನಿಂದಾಗಿ ಜನರು ಅನೇಕ ಸಮಸ್ಯೆ ಅನುಭವಿಸುತ್ತಿದ್ದಾರೆ. ಕಾಮನ್ ಮ್ಯಾನ್ ಎಂದು ಹೇಳಿಕೊಂಡು ಅಧಿಕಾರ ನಡೆಸುತ್ತಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರ ಸೆಕ್ಯೂರಿಟಿ ನೆಪದಲ್ಲಿ ಅತೀ ಸಾಮಾನ್ಯ ವ್ಯಾಪಾರಸ್ಥರಿಗೆ ಜಿಲ್ಲೆಯ ಪೊಲೀಸರು ತೊಂದರೆ ಕೊಡುವುದು ಎಷ್ಟು ಸರಿ ಎಂದು ಜನರು ಪ್ರಶ್ನಿಸಿದ್ದಾರೆ.

  • Hijab Row: ಅನ್ಯ ಧರ್ಮೀಯರು ಜಾತ್ರೆಯಲ್ಲಿ ವ್ಯಾಪಾರ ಮಾಡಬಾರದು – ಕಾಪು ಮಾರಿಗುಡಿಗೆ ಪತ್ರ

    Hijab Row: ಅನ್ಯ ಧರ್ಮೀಯರು ಜಾತ್ರೆಯಲ್ಲಿ ವ್ಯಾಪಾರ ಮಾಡಬಾರದು – ಕಾಪು ಮಾರಿಗುಡಿಗೆ ಪತ್ರ

    ಉಡುಪಿ: ಜಿಲ್ಲೆಯಲ್ಲಿ ಆರಂಭಗೊಂಡ ಹಿಜಬ್ ಹೋರಾಟದ ಆಫ್ಟರ್ ಎಫೆಕ್ಟ್ ಒಂದೊಂದಾಗಿ ಹೊರ ಬರುತ್ತಿದೆ. ಉಡುಪಿಯಲ್ಲಿ ತೀರ್ಪು ವಿರೋಧಿಸಿ ಮುಸಲ್ಮಾನ ವ್ಯಾಪಾರಿಗಳು ಒಂದು ದಿನ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಇದೀಗ ಮುಂದುವರಿದ ಭಾಗವಾಗಿ ವ್ಯಾಪಾರ ಬಹಿಷ್ಕಾರ ಅಭಿಯಾನ ಶುರುವಾಗಿದೆ.

    ಕಾಪುವಿನ ಇತಿಹಾಸ ಪ್ರಸಿದ್ಧ ಸುಗ್ಗಿ ಮಾರಿ ಪೂಜೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅಂಗಡಿಗಳನ್ನು ನೀಡದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮೂರು ಮಾರಿಗುಡಿಗಳ ಆಡಳಿತ ಮಂಡಳಿಗೆ ಶುಕ್ರವಾರ ಮನವಿ ಮಾಡಿದ್ದಾರೆ. ಇದನ್ನೂ ಓದಿ:  ಸಿದ್ರಾಮುಲ್ಲಾ ಖಾನ್ ಆಗಿದ್ರೆ ಕಾಶ್ಮೀರದಲ್ಲಿ ಸಿದ್ದರಾಮಯ್ಯ ಉಳಿದುಕೊಳ್ಳುತ್ತಿದ್ದರು: ಸಿ.ಟಿ.ರವಿ

    ಹಿಂದೂ ಪರ ಸಂಘಟನೆಗಳ ನೂರಾರು ಮಂದಿ ಕಾರ್ಯಕರ್ತರು ಹೊಸ ಮಾರಿಗುಡಿಯ ಮುಂಭಾಗದಲ್ಲಿ ಜಮಾಯಿಸಿ, ಯಾವುದೇ ಕಾರಣಕ್ಕೂ ಮಾರಿಗುಡಿ ಸುತ್ತಲಿನ ಪ್ರದೇಶದಲ್ಲಿ ಹಿಂದೂಯೇತರರಿಗೆ ಅಂಗಡಿಗಳನ್ನು ಹಾಕಲು ಅವಕಾಶ ಮಾಡಿಕೊಡದಂತೆ ಮನವಿ ಮಾಡಿದ್ದಾರೆ. ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ಕೊಡಿ ಎಂದು ಒತ್ತಾಯಿಸಿದ್ದಾರೆ.

    ಹಿಜಬ್ ತೀರ್ಪಿನ ನಂತರ ಮುಸಲ್ಮಾನ ವ್ಯಾಪಾರಿಗಳು ರಾಜ್ಯಾದ್ಯಂತ ಒಂದು ದಿನ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಕೆಲ ಹಿಂದೂಗಳ ಅಂಗಡಿಗಳನ್ನು ಕೂಡ ಮುಚ್ಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆ ಸಾಮಾಜಿಕ ಜಾಲತಾಣದ ಮೂಲಕ ಅಭಿಯಾನ ನಡೆಸಿದ್ದಾರೆ. ಜಾತ್ರೆ-ಉತ್ಸವಗಳಲ್ಲಿ ಮುಸಲ್ಮಾನ ಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಭಗವದ್ಗೀತೆ, ಕುರಾನ್, ಬೈಬಲ್ ಯಾವುದನ್ನಾದರೂ ಕಲಿಸಿ: ಸಿದ್ದರಾಮಯ್ಯ

    ಅಭಿಯಾನಕ್ಕೆ ಪೂರಕವಾಗಿ ಸ್ಪಂದಿಸಿದ ಕಾಪು ಹೊಸ ಮಾರಿಗುಡಿ ದೇವಸ್ಥಾನದ ಆಡಳಿತ ಮಂಡಳಿ, ತಮ್ಮ ದೇವಸ್ಥಾನದ ವ್ಯಾಪ್ತಿಯಲ್ಲಿ ಹಿಂದೂಯೇತರರಿಗೆ ಅಂಗಡಿ ಹಾಕಲು ಅವಕಾಶ ನೀಡುವುದಿಲ್ಲ ಎಂದಿದೆ. ಇತಿಹಾಸ ಪ್ರಸಿದ್ಧ ಕಾಪು ಸುಗ್ಗಿ ಮಾರಿಪೂಜೆ ಜಾತ್ರೆಯಲ್ಲಿ ವಿವಿಧೆಡೆಗಳಿಂದ ಲಕ್ಷಾಂತರ ಮಂದಿ ಭಕ್ತಾಧಿಗಳು ಭಾಗವಹಿಸುತ್ತಾರೆ. ನೂರಾರು ಅಂಗಡಿಗಳ ಮೂಲಕ ಕೋಟ್ಯಂತರ ರೂಪಾಯಿ ವ್ಯವಹಾರವೂ ನಡೆಯುತ್ತದೆ. ಹಣ್ಣುಕಾಯಿ ಹೂವು ಮತ್ತು ದೇವಿಗೆ ಬಲಿ ಕೊಡುವ ಕುರಿ ಮತ್ತು ಕೋಳಿ ವ್ಯಾಪಾರ ಕಾಪುವಿನಲ್ಲಿ ಜೋರಾಗಿ ನಡೆಯುತ್ತದೆ. ಸುತ್ತಮುತ್ತಲ ಜಿಲ್ಲೆಗಳಿಂದ ಭಕ್ತರು ಪಾಲ್ಗೊಳ್ಳುತ್ತಾರೆ. ಹಿಜಬ್ ವಿವಾದ, ತೀರ್ಪು ನಂತರ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ.

    ಮಾರಿಗುಡಿ ಸುತ್ತಲಿನ ಪ್ರದೇಶದಲ್ಲಿ ಹಿಂದೂಯೇತರರಿಗೆ ಅಂಗಡಿಗಳನ್ನು ಹಾಕಲು ಅವಕಾಶ ಮಾಡಿಕೊಡದಂತೆ ಮನವಿ ಮಾಡಿದ್ದು, ಅದಕ್ಕೆ ಪೂರಕವಾಗಿ ಸ್ಪಂದಿಸಿದ ಹೊಸ ಮಾರಿಗುಡಿ ದೇವಸ್ಥಾನದ ಆಡಳಿತ ಮಂಡಳಿಯು ತಮ್ಮ ದೇವಸ್ಥಾನದ ವ್ಯಾಪ್ತಿಯಲ್ಲಿ ಹಿಂದೂಯೇತರಿಗೆ ಅಂಗಡಿ ಹಾಕಲು ಅವಕಾಶ ನೀಡುವುದಿಲ್ಲ ಎಂದಿದೆ.

  • ಲಾಕ್‍ಡೌನ್ ವೇಳೆ ಅಂಗಡಿಗಳಿಗೆ ಕನ್ನ ಹಾಕುತಿದ್ದ ಖದೀಮರ ಬಂಧನ

    ಲಾಕ್‍ಡೌನ್ ವೇಳೆ ಅಂಗಡಿಗಳಿಗೆ ಕನ್ನ ಹಾಕುತಿದ್ದ ಖದೀಮರ ಬಂಧನ

    ಕಾರವಾರ: ಲಾಕ್‍ಡೌನ್ ವೇಳೆ ಅಂಗಡಿ ಕಳ್ಳತನ ನಡೆಸಿದ್ದ ನಾಲ್ವರನ್ನು ಶಿರಸಿ ನಗರ ಪೂಲೀಸರು ಬಂಧಿಸಿದ್ದಾರೆ.

    ಶಿರಸಿ ಕರಿಗುಂಡಿಯ ಭರತ ಗಣಪತಿ ನಾಯ್ಕ (20), ಕೋಟೆಗಲ್ಲಿಯ ಪ್ರಕಾಶ ಗುಡ್ಡಪ್ಪ ತಳವಾರ(22) ಮತ್ತು ಅಪ್ರಾಪ್ತ ಬಾಲಕರು ಬಂಧಿತರಾಗಿದ್ದಾರೆ. ಜೂ.6ರಂದು ಶಿರಸಿಯ ಕೃಷ್ಣ ಮೆಡಿಕಲ್ ಸ್ಟೋರ್ ಕಳ್ಳತನ ನಡೆಸಿದ್ದ ಖದೀಮರು, ಲ್ಯಾಪ್‍ಟಾಪ್ ಮತ್ತು 20 ಸಾವಿರ ರೂ. ನಗದು ಕಳ್ಳತನ ಮಾಡಿದ್ದರು. ಅಲ್ಲದೆ ಪಕ್ಕದ ಮಳಿಗೆಗಳಿಗೂ ಕನ್ನ ಹಾಕಿದ್ದು, ಏನೂ ಸಿಗದೇ ಬರಿಗೈಯ್ಯಲ್ಲಿ ಮರಳಿದ್ದರು.

    ಬಂಧಿತರನ್ನು ವಿಚಾರಣೆ ನಡೆಸಿದಾಗ ಶಿರಸಿ ಸೇರಿದಂತೆ ಇತರೆಡೆ ಹಲವು ಕಳ್ಳತನ ಪ್ರಕರಣ ನಡೆಸಿರುವುದು ಬೆಳಕಿಗೆ ಬಂದಿವೆ. ಶಿರಸಿ ನಗರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಜನರ ಮೆಚ್ಚುಗೆ ವ್ಯಕ್ತವಾಗಿದೆ.

  • ಕೋವಿಡ್ ನಿಯಮ ಉಲ್ಲಂಘನೆ- ಅಂಗಡಿಗಳ ಪರವಾನಗಿ ರದ್ದು, ಬೀಗ ಜಡಿದ ಪಾಲಿಕೆ ಅಧಿಕಾರಿಗಳು

    ಕೋವಿಡ್ ನಿಯಮ ಉಲ್ಲಂಘನೆ- ಅಂಗಡಿಗಳ ಪರವಾನಗಿ ರದ್ದು, ಬೀಗ ಜಡಿದ ಪಾಲಿಕೆ ಅಧಿಕಾರಿಗಳು

    ಮಂಗಳೂರು: ಕೊರೊನಾ ನಿಯಮ ಉಲ್ಲಂಘನೆ ಮಾಡಿದ ಹಲವು ಅಂಗಡಿಗಳ ಪರವಾನಗಿ ರದ್ದು ಮಾಡಿ ಬೀಗ ಜಡಿಯಲಾಗಿದ್ದು, ಸಾವಿರಾರು ರೂಪಾಯಿ ದಂಡ ವಿಧಿಸಲಾಗಿದೆ.

    ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಅನುಮತಿಸದೆ ಇರುವ ವಸ್ತುಗಳ ಅಂಗಡಿಗಳನ್ನು ಅನಧಿಕೃತವಾಗಿ ತೆರೆದು ವ್ಯಾಪಾರ ವಹಿವಾಟು ನಡೆಸುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನಲೆಯಲ್ಲಿ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ, ಹಲವು ಅಂಗಡಿಗಳ ಪರವಾನಿಗೆ ರದ್ದುಗೊಳಿಸಿದ್ದು, ಇನ್ನೂ ಹಲವು ಅಂಗಡಿಗಳಿಗೆ ದಂಡ ವಿಧಿಸಿದ್ದಾರೆ.

    ಇಂದು ಪಾಲಿಕೆಯಿಂದ ವಿವಿಧ ತಂಡಗಳ ಮೂಲಕ ನಡೆಸಲಾದ ಕಾರ್ಯಾಚರಣೆಯ ವೇಳೆ ಕೋವಿಡ್-19 ಮಾರ್ಗಸೂಚಿ ಉಲ್ಲಂಘಿಸಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ 78 ಅಂಗಡಿಗಳಿಗೆ 68,350 ರೂ. ದಂಡ ವಿಧಿಸಿ, ಈ ಪೈಕಿ 30 ಅಂಗಡಿಗಳ ಉದ್ದಿಮೆ ಪರವಾನಿಗೆಯನ್ನು ರದ್ದುಗೊಳಿಸಿ ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ಮುಚ್ಚಲಾಗಿದೆ. ಬೆಳಗ್ಗೆ 10 ಗಂಟೆಯ ಬಳಿಕ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಸಾರ್ವಜನಿಕರು ಅನಗತ್ಯ ಓಡಾಟ ಮಾಡಿದ 19 ಪ್ರಕರಣಗಳಿಗೆ 8,050 ರೂ. ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.

  • ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಧಗಧಗಿಸಿದ ಅಂಗಡಿಗಳು

    ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಧಗಧಗಿಸಿದ ಅಂಗಡಿಗಳು

    ಗದಗ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕಾಂಪ್ಲೆಕ್ಸ್ ನ 3 ಅಂಗಡಿಗಳಲ್ಲಿ ಬೆಂಕಿ ಹೊತ್ತಿಕೊಂಡು ಧಗಧಗಿಸಿರುವ ಘಟನೆ ನಗರದ ಚೇತನಾ ಕ್ಯಾಂಟೀನ್ ಬಳಿ ನಡೆದಿದೆ.

    ಬಸನಗೌಡ ನಾಡಗೌಡ್ರ ಅವರಿಗೆ ಸೇರಿದ ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಬಟ್ಟೆ ಅಂಗಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ, ಬೆಂಕಿ ಹೊತ್ತಿಕೊಂಡಿದೆ. ಲಾಕ್‍ಡೌನ್ ಹಿನ್ನೆಲೆ ಅಂಗಡಿಗಳಲ್ಲಿ ಯಾರು ಇಲ್ಲದಕ್ಕೆ, ಅಕ್ಕ ಪಕ್ಕದ ಕಿರಾಣಿ ಹಾಗೂ ಜನರಲ್ ಸ್ಟೋರ್ ಗೂ ಬೆಂಕಿ ವ್ಯಾಪಿಸಿದೆ. ನಂತರ ದಟ್ಟವಾದ ಹೋಗೆ ಕಂಡು ಸ್ಥಳಿಯರು ಬೆರಗಾಗಿದ್ದಾರೆ.

    ತಕ್ಷಣವೇ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳಿಯರು ಬೆಂಕಿ ನಂದಿಸಲು ಮುಂದಾದರು. ಈ ದುರ್ಘಟನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಗದಗನ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ರೂಲ್ಸ್ ಬ್ರೇಕ್ ಮಾಡಿ ಅಂಗಡಿ ತೆರೆದರೆ ಬೀಳುತ್ತೆ ಕೇಸ್

    ರೂಲ್ಸ್ ಬ್ರೇಕ್ ಮಾಡಿ ಅಂಗಡಿ ತೆರೆದರೆ ಬೀಳುತ್ತೆ ಕೇಸ್

    ಗದಗ: ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದ್ದು, ನಗರದಲ್ಲಿ ಖಾಕಿ ಪಡೆ ಕಟ್ಟೆಚ್ಚರ ವಹಿಸುತ್ತಿದೆ. ಸುಖಾ ಸುಮ್ಮನೆ ಓಡಾಡುವವರಿಗೆ ದಂಡ ವಿಧಿಸಲಾಗುತ್ತಿದ್ದು, ನಿಯಮ ಮೀರಿ ಅಂಗಡಿ ತೆರೆದವರನ್ನು ವಶಕ್ಕೆ ಪಡೆಯಲಾಗುತ್ತಿದೆ. ಇನ್ನೂ ಕೆಲವ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.

    ನಗರದ ಸರಾಫ್ ಬಜಾರ್ ನಲ್ಲಿ ಒಬ್ಬರು ಜ್ಯುವೇಲರಿ ಶಾಪ್ ಓಪನ್ ಮಾಡಿದ್ದು, ಅಂಗಡಿನಲ್ಲಿ ಸಾಕಷ್ಟು ಜನರನ್ನು ಕಲೆಹಾಕಿದ್ದರು. ಕೋವಿಡ್ ನಿಯಮ ಉಲ್ಲಂಘನೆ ಮಾಡಿದಕ್ಕೆ ವ್ಯಾಪಾರಿ ಬಂಧನ ಮಾಡಿದ್ದು, ನಂತರ ಅಂಗಡಿ ಸೀಜ್ ಮಾಡುವ ಪ್ರಕ್ರಿಯೆ ಸಹ ನಡೆಯಿತು. ಹೀಗೆ ಅಗತ್ಯ ವಸ್ತುಗಳ ಅಂಗಡಿ ಹೊರತು ಪಡಿಸಿ, ಇನ್ನುಳಿ ಅಂಗಡಿ ಓಪನ್ ಮಾಡಿದವರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ.

    ಬಟ್ಟೆ, ಜ್ಯುವೆಲರಿ, ಮೊಬೈಲ್ ಶಾಪ್, ಪಾತ್ರೆ ಅಂಗಡಿ ಓಪನ್ ಮಾಡಿದವರಿಗೆ ದಂಡ ಹಾಕುವುದುರ ಜೊತೆಗೆ ಅಂತಹವರ ವಿರುದ್ಧ ಕೇಸ್ ಸಹ ದಾಖಲಿಸಲಾಗಿದೆ. ಮಾರ್ಕೆಟ್ ಹಾಗೂ ಪ್ರಮುಖ ಸರ್ಕಲ್ ನಲ್ಲಿ ಮಾಸ್ಕ್ ಹಾಕದ ವ್ಯಾಪಾರಸ್ಥರು, ಸಾರ್ವಜನಿಕರಿಗೆ ಪೊಲೀಸರು, ನಗರಸಭೆ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ದಂಡ ವಸೂಲಿ ಮಾಡಿದ್ದಾರೆ. ಜಿಲ್ಲಯಲ್ಲಿ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಖಾಕಿ ಪಡೆ ಕಠಿಣ ಕ್ರಮ ಜರುಗಿಸುತ್ತಿದೆ.

  • ಕೋವಿಡ್ ನಿಯಮ ಉಲ್ಲಂಘನೆ- ಅಂಗಡಿಗಳನ್ನು ಸೀಜ್ ಮಾಡಿಸಿದ ಡಿಸಿ

    ಕೋವಿಡ್ ನಿಯಮ ಉಲ್ಲಂಘನೆ- ಅಂಗಡಿಗಳನ್ನು ಸೀಜ್ ಮಾಡಿಸಿದ ಡಿಸಿ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಶತಕದ ಆಸುಪಾಸಿನಲ್ಲಿ ಪತ್ತೆಯಾಗುತ್ತಿದ್ದು, ಇಷ್ಟಾದರೂ ಅಂಗಡಿ ಮಾಲೀಕರು ಡೋಂಟ್ ಕೇರ್ ಎನ್ನುತ್ತಿದದ್ದಾರೆ. ಕೊರೊನಾ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ.

    ಈ ಹಿನ್ನೆಲೆಯಲ್ಲಿ ಕೊಡಗಿನ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಎಸ್‍ಪಿ ಕ್ಷಮಾ ಮೀಶ್ರ ಅವರು ಇಂದು ಕೊಡಗು ಜಿಲ್ಲೆಯ ಕುಶಾಲನಗರದ ರಥ ಬೀದಿಗೆ ದಿಡೀರ್ ಭೇಟಿ ನೀಡಿ, ರಥ ಬೀದಿಯಲ್ಲಿರುವ ಅಂಗಡಿಗಳ ಬಳಿ ಪರಿಶೀಲನೆ ನಡೆಸಿದರು. ಅಂಗಡಿಗಳಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಗಮನಕ್ಕೆ ಬಂದ ಕೋಡಲೇ 10ಕ್ಕೂ ಹೆಚ್ಚು ಅಂಗಡಿಗಳನ್ನು ಸೀಜ್ ಮಾಡಿಸಿದ್ದಾರೆ.

    ರಥ ಬೀದಿಯಲ್ಲಿರುವ ಬಟ್ಟೆ ಅಂಗಡಿ, ರೇಸಾನ್ ಹಾಗೂ ಚಿನ್ನದಂಗಡಿಗಳಿಗೆ ಬೀಗ ಹಾಕಿಸಿದ್ದಾರೆ. ಕೊಡಗಿನಲ್ಲಿ ದಿನದಿಂದ ದಿನಕ್ಕೆ ಕೊವಿಡ್ ಸ್ಫೋಟಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸ್ವತಃ ಫೀಲ್ಡಿಗಿಳಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದ ಹತ್ತಕ್ಕೂ ಹೆಚ್ಚು ವ್ಯಾಪಾರಸ್ಥರ ಅಂಗಡಿಗಳಿಗೆ ಬೀಗ ಹಾಕಿಸಿ ಜಿಲ್ಲೆಯ ಜನರಿಗೆ ಕೋವಿಡ್ ನಿಯಮಗಳ ಪಾಲನೆ ಕುರಿತು ಎಚ್ಚರಿಕೆ ನೀಡಿದ್ದಾರೆ.

  • ದೆಹಲಿಯಲ್ಲಿ ಲಾಕ್‍ಡೌನ್ ಘೋಷಣೆ – ಬಾರ್ ಮುಂದೆ ಜನಸಾಗರ

    ದೆಹಲಿಯಲ್ಲಿ ಲಾಕ್‍ಡೌನ್ ಘೋಷಣೆ – ಬಾರ್ ಮುಂದೆ ಜನಸಾಗರ

    ನವದೆಹಲಿ: ಲಾಕ್‍ಡೌನ್ ಘೋಷಣೆ ಆಗುತ್ತಿದ್ದಂತೆ  ಬಾರ್‌ಗಳ ಮುಂದೆ ಜನ ಮುಗಿಬಿದ್ದ ಘಟನೆ ದೆಹಲಿಯಲ್ಲಿ ನಡೆದಿದೆ.

    ಕೊರೊನಾ ಹೆಚ್ಚಾಗುತ್ತಿರುವ ಕಾರಣದಿಂದಾಗಿ ದೆಹಲಿಯಲ್ಲಿ ಇಂದಿನಿಂದ ಒಂದುವಾರ ಲಾಕ್‍ಡೌನ್ ಘೋಷಿಸಲಾಗಿದೆ. ಇಂದು ರಾತ್ರಿ 10 ಗಂಟೆಯಿಂದ ಮುಂದಿನ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಲಾಕ್‍ಡೌನ್ ಜಾರಿಯಲ್ಲಿ ಇರಲಿದೆ. ಲಾಕ್‍ಡೌನ್ ಆದೇಶ ಹೊರಬೀಳುತ್ತಿದ್ದಂತೆ ಮದ್ಯಪ್ರಿಯರು ಬಾರ್ ಮುಂದೆ ಸಾಲುಗಟ್ಟಿನಿಂತಿದ್ದರು. ನಾ ಮುಂದು.. ತಾ ಮುಂದು.. ಎಂದು ಒಂದು ವಾರಕ್ಕೆ ಆಗುವಷ್ಟು ಮದ್ಯವನ್ನು ಕೊಂಡುಕೊಳ್ಳುತ್ತಿದ್ದರು.

    ದೆಹಲಿಯ ಖಾನ್ ಮಾರ್ಕೆಟ್‍ನ ಬಾರ್‍ವೊಂದರ ಮುಂದೆ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ಉದ್ದುದ್ದದ ಕ್ಯೂ ನಿಂತಿರೋದು ಕಂಡುಬಂದಿದೆ. ದೆಹಲಿಯ ಹಲವೆಡೆ ಪೊಲೀಸರು ಈಗಾಗಲೇ ಬ್ಯಾರಿಕೇಡ್‍ಗಳನ್ನು ಹಾಕಿ ಭದ್ರತೆ ಒದಗಿಸಿದ್ದಾರೆ.

    “ಇಂಜೆಕ್ಷನ್ ನಿಂದ ಪ್ರಯೋಜನವಾಗಲ್ಲ. ಆಲ್ಕೋಹಾಲ್‍ನಿಂದಲೇ ಪ್ರಯೋಜನವಾಗುತ್ತದೆ. ನನಗೆ ಔಷಧಿಯಿಂದ ಏನು ಪರಿಣಾಮ ಆಗಲ್ಲ. ಒಂದು ಪೆಗ್ ಹಾಕಿದ್ರೆನೆ ಎಫೆಕ್ಟ್. ನಾನು ಇಲ್ಲಿಯವರೆಗೆ ಆಸ್ಪತ್ರೆಗೆ ಹೋಗಿಲ್ಲ. ಮಂದೆನೂ ಬಚಾವ್ ಆಗುತ್ತೇನೆ” ಎಂದು ಶಿವಪುರ ಗೀತಾ ಕಾಲೋನಿಯ ಅಂಗಡಿಯೊಂದರಲ್ಲಿ ಮದ್ಯ ಖರೀದಿಸಲು ಬಂದ ಮಹಿಳೆಯೊಬ್ಬರು ಹೇಳಿದ್ದಾರೆ.

    ಲಾಕ್‍ಡೌನ್ ವೇಳೆ ಆಹಾರ, ಮೆಡಿಕಲ್ ಸೇರಿದಂತೆ ಅತ್ಯಗತ್ಯ ಸೇವೆಗಳಿಗೆ ಯಾವುದೇ ಪ್ರತಿಬಂಧ ಇರೋದಿಲ್ಲ. ಮದುವೆಯಲ್ಲಿ ಕೇವಲ 50 ಜನರಿಗೆ ಪಾಲ್ಗೊಳ್ಳಲು ಅವಕಾಶ ನೀಡಲಾಗಿದ್ದು, ಎಲ್ಲರೂ ಮಾಸ್ಕ್ ಧರಿಸೋದು ಕಡ್ಡಾಯವಾಗಿದೆ. ಮದುವೆಗೆ ಪಾಸ್ ನೀಡಲಾಗುತ್ತದೆ ಎಂದು ಕೆಲವಷ್ಟು ರೂಲ್ಸ್‍ಗಳನ್ನು ನೀಡಿ ಏಪ್ರಿಲ್ 26ರ ತನಕ ದೆಹಲಿಯಲ್ಲಿ ಲಾಕ್‍ಡೌನ್ ಇರಲಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

  • ಶಿವಾಜಿ ಮಾರುಕಟ್ಟೆಯಲ್ಲಿ ಬೆಂಕಿ – 25 ಅಂಗಡಿಗಳು ಭಸ್ಮ

    ಶಿವಾಜಿ ಮಾರುಕಟ್ಟೆಯಲ್ಲಿ ಬೆಂಕಿ – 25 ಅಂಗಡಿಗಳು ಭಸ್ಮ

    ಮುಂಬೈ: ಪುಣೆಯ ಹಳೆಯ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸುಮಾರು 25 ಅಂಗಡಿಗಳು ಸುಟ್ಟು ಭಸ್ಮವಾಗಿದೆ.

    ಮಹಾರಾಷ್ಟ್ರದ ಪುಣೆ ಕಂಟೋನ್ಮೆಂಟ್ ಪ್ರದೇಶದ ಪ್ರಸಿದ್ಧ ಶಿವಾಜಿ ಮಾರುಕಟ್ಟೆಯಲ್ಲಿ ಮುಂಜಾನೆ 4 ಗಂಟೆ ಸರಿ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 25ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲಾಗಿದೆ.

    ಘಟನೆ ಕುರಿತಂತೆ ಮಾಹಿತಿ ದೊರೆತ ತಕ್ಷಣ 9 ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕಳುಹಿಕೊಡಲಾಯಿತು ಹಾಗೂ ಕೇವಲ ಅರ್ಧ ಗಂಟೆಯಲ್ಲಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು ಎಂದು ಪುಣೆ ಮಹಾನಗರ ಪಾಲಿಕೆಯ ಅಗ್ನಿಶಾಮಕ ದಳದ ಮುಖ್ಯಸ್ಥ ಪ್ರಶಾಂತ್ ರಾನ್‍ಪೈಸ್ ತಿಳಿಸಿದ್ದಾರೆ.

    ಸದ್ಯ ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ ಹಾಗೂ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದರ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ ಎಂದು ಹೇಳಿದರು.