Tag: shopping

  • ಸ್ಪೆಷಲ್ ಮಂಗಳಸೂತ್ರ ಖರೀದಿಸಿದ ದೀಪಿಕಾ

    ಸ್ಪೆಷಲ್ ಮಂಗಳಸೂತ್ರ ಖರೀದಿಸಿದ ದೀಪಿಕಾ

    ಮುಂಬೈ: ನವೆಂಬರ್ 14 ಮತ್ತು 15ರಂದು ಬಾಲಿವುಡ್ ತಾರೆ, ದೀಪಿಕಾ ಪಡುಕೋಣೆ ಮತ್ತು ನಟ ರಣ್‍ವೀರ್ ಸಿಂಗ್ ಮದುವೆ ನಡೆಯಲಿದೆ. ಈಗಾಗಲೇ ಬೆಂಗಳೂರು ತಲುಪಿರುವ ದೀಪಿಕಾ ಮದುವೆ ಶಾಸ್ತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಬೆಂಗಳೂರಿಗೆ ಬರುವ ಮುನ್ನವೇ ದೀಪಿಕಾ ಚಿನ್ನಾಭರಣ ಖರೀದಿಸಿದ್ದು, 20 ಲಕ್ಷ ರೂ. ಬೆಲೆ ಬಾಳುವ ಮಂಗಳಸೂತ್ರ ಖರೀದಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    ಮಂಗಳ ಸೂತ್ರದ ಜೊತೆಗೆ ಎರಡು ನೆಕ್ಲೇಸ್ ಮತ್ತು ಭಾವಿ ಪತಿಗಾಗಿ 200 ಗ್ರಾಂ.ನ ಚಿನ್ನದ ಚೈನ್ ಸಹ ಖರೀದಿ ಮಾಡಿದ್ದಾರೆ. ಮಂಗಳ ಸೂತ್ರದಲ್ಲಿ ಸ್ಪೆಷಲ್ ಡೈಮೆಂಡ್ ಸಹ ಹಾಕಲಾಗಿದೆಯಂತೆ. ಮುಂಬೈನ ಪ್ರಸಿದ್ಧ ಚಿನ್ನಾಭರಣ ಮಳಿಗೆಯಲ್ಲಿ ದೀಪಿಕಾ 1 ಕೋಟಿ ರೂ. ಶಾಪಿಂಗ್ ಮಾಡಿದ್ದಾರಂತೆ. ದೀಪಿಕಾ ಚಿನ್ನದ ಮಳಿಗೆಗೆ ಬರುವ ಮುನ್ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ದೀಪಿಕಾರಿಗಾಗಿಯೇ ಮಳಿಗೆಯನ್ನು ಅರ್ಧ ಗಂಟೆ ಬಂದ್ ಮಾಡಲಾಗಿತ್ತು.

    ಬೆಂಗಳೂರಿನ ನಿವಾಸದಲ್ಲಿ ಮದುವೆ ಶಾಸ್ತ್ರಗಳಲ್ಲಿ ಭಾಗಿಯಾಗಿದ್ದ ದೀಪಿಕಾರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈ ಮೊದಲು ದೀಪಿಕಾ ಮತ್ತು ರಣ್‍ವೀರ್ ಇಟಲಿಯಲ್ಲಿ ಮದುವೆ ಆಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದ್ರೆ ಎಲ್ಲ ಕುಟುಂಬಸ್ಥರನ್ನು ಇಟಲಿಗೆ ಕರೆದುಕೊಂಡು ಹೋಗಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿಯೇ ನಿಶ್ಚಯಿಸಿದ್ದಾರೆ ಎನ್ನಲಾಗುತ್ತಿದೆ. ಆದ್ರೆ ಮದುವೆ ಸ್ಥಳದ ಬಗ್ಗೆ ಎರಡು ಕುಟುಂಬಗಳು ಅಧಿಕೃತವಾಗಿ ಹೇಳಿಕೊಂಡಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಭೆಯಲ್ಲಿ ಯುವತಿಯ ಇಮೇಜ್ ನೋಡುವುದರಲ್ಲಿ ಅಧಿಕಾರಿ ಬ್ಯೂಸಿ

    ಸಭೆಯಲ್ಲಿ ಯುವತಿಯ ಇಮೇಜ್ ನೋಡುವುದರಲ್ಲಿ ಅಧಿಕಾರಿ ಬ್ಯೂಸಿ

    ಧಾರವಾಡ: ಕೆಡಿಪಿ ಸಭೆಯಲ್ಲಿ ಸಮಸ್ಯೆಗಳ ಕುರಿತು ಅಧಿಕಾರಿಗಳ ಜೊತೆ ಜನಪ್ರತಿನಿಧಿಗಳು ಚರ್ಚೆ ನಡೆಯೊದು ಸಾಮಾನ್ಯ. ಆದರೆ ಪಂಚಾಯತ್ ಸಭೆಯಲ್ಲಿ ಅಧಿಕಾರಿಯೊಬ್ಬರು ಯುವತಿಯ ಫೋಟೋ ನೋಡುವುದರಲ್ಲಿ ಬ್ಯುಸಿಯಾಗಿದ್ದಿದ್ದು ಕಂಡು ಬಂದಿದೆ.

    ಧಾರವಾಡದ ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ಗಂಭೀರವಾಗಿ ಇರೋದೇ ಇಲ್ಲ. ಬುಧವಾರ ಸಭಾ ಭವನದಲ್ಲಿ ನಡೆದ ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಅಧಿಕಾರಿಯೊಬ್ಬರು ಮೊಬೈಲ್ ನಲ್ಲಿ ಯುವತಿಯ ಇಮೇಜ್ ನೋಡುತ್ತಾ ಕುಳಿತಿದ್ದ ಘಟನೆ ನಡೆದಿದೆ.

    ಮತ್ತೊಬ್ಬ ಮಹಿಳಾ ಅಧಿಕಾರಿ ಮೊಬೈಲ್ ನಲ್ಲಿ ಶಾಪಿಂಗ್ ಮಾಡುತ್ತಾ ಕುಳಿತ್ತಿದ್ದರು. ಕೆಆರ್ ಡಿಸಿಎಲ್‍ನ ಎಇಇ ಲಕ್ಷ್ಮಣ್ ನಾಯಕ ಅವರೇ ಯುವತಿಯ ಫೋಟೊ ನೋಡುತ್ತಾ ಕೂತಿದ್ದ ಅಧಿಕಾರಿ. ಇನ್ನು ಆನ್‍ಲೈನ್‍ನಲ್ಲಿ ಶಾಪಿಂಗ್ ಮಾಡುತ್ತಾ ಇದ್ದ ಮಹಿಳಾ ಅಧಿಕಾರಿ ಯುವಜನ ಸೇವಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತಾ ಎಂದು ತಿಳಿದು ಬಂದಿದೆ.

  • ಹುಬ್ಬಳ್ಳಿ ಜವಳಿ ಮಾರ್ಕೆಟ್‍ನಲ್ಲಿ ಜಿಟಿಡಿ ಶಾಪಿಂಗ್

    ಹುಬ್ಬಳ್ಳಿ ಜವಳಿ ಮಾರ್ಕೆಟ್‍ನಲ್ಲಿ ಜಿಟಿಡಿ ಶಾಪಿಂಗ್

    ಹುಬ್ಬಳ್ಳಿ: ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ವಾಣಿಜ್ಯ ನಗರಿ ಹುಬ್ಬಳ್ಳಿಯ ಜವಳಿ ಮಾರ್ಕೆಟ್ ನಲ್ಲಿ ಶಾಪಿಂಗ್ ಮಾಡುವ ಮೂಲಕ ಜನರ ಅಚ್ಚರಿಗೆ ಕಾರಣರಾಗಿದ್ದಾರೆ.

    ಹೌದು. ಬೆಂಗಳೂರಿನಿಂದ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ ಸಚಿವರು, ನೇರವಾಗಿ ಜವಳಿ ಮಾರ್ಕೆಟ್ ಗೆ ಭೇಟಿ ನೀಡಿದ್ದಾರೆ. ಈ ವೇಳೆ ಜವಳಿ ಮಾರ್ಕೆಟ್ ಸಾಲಿನಲ್ಲಿ ಒಂದು ಬಟ್ಟೆ ಅಂಗಡಿಗೆ ತೆರಳಿ ಪಂಚೆಗಳನ್ನು ಖರೀದಿ ಮಾಡಿದ್ದಾರೆ.

    ನಾಳೆ ಬೆಳಗಾವಿ ನಗರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗಲು ಹುಬ್ಬಳ್ಳಿಗೆ ಆಗಮಿಸಿದ್ದ ಸಚಿವರು ಹಾಗೆ ಏಕಾಏಕಿ ಮಾರ್ಕೆಟ್ ಹೋಗೆ ಪಂಚೆ ಖರೀದಿ ಮಾಡಿದ್ದಾರೆ. ಇನ್ನು ಜನರು ನೂತನ ಸಚಿವರನ್ನು ಮಾರ್ಕೆಟ್ ನಲ್ಲಿ ಕಂಡು ಖುಷಿ ಪಟ್ಟು ಮಾತನಾಡಿಸಿದ್ದಾರೆ.

    ಸಮ್ಮಿಶ್ರ ಸರ್ಕಾರದಲ್ಲಿ ಉನ್ನತ ಶಿಕ್ಷಣ ಖಾತೆ ಬೇಡ ದೇವೇಗೌಡರು ನಿರಾಕರಿಸಿದ್ದರು. ಆದರೆ ಸಿಎಂ ಕುಮಾರಸ್ವಾಮಿ ಅವರು ಜಿಟಿ ದೇವೇಗೌಡ ಅವರ ಮನವೊಲಿಸಲು ಯಶಸ್ವಿಯಾಗಿದ್ದರು. ಬಳಿಕ ಜೂನ್ 23 ರಂದು ಸಚಿವ ಸ್ಥಾನ ಒಪ್ಪಿಕೊಂಡ ಜಿಟಿಡಿ ವಿಧಾನಸೌದಲ್ಲಿ ತಮ್ಮ ಕಚೇರಿಯಲ್ಲಿ ಪೂಜೆ ಮಾಡಿ ಬಳಿಕ ಕಾರ್ಯಾರಂಭ ಮಾಡಿದ್ದರು.

  • ಈಗ ಅಧಿಕೃತ: ಕೊನೆಗೂ ನಿಗದಿಯಾಯ್ತು ರಣ್‍ವೀರ್-ದೀಪಿಕಾ ಮದುವೆ!

    ಈಗ ಅಧಿಕೃತ: ಕೊನೆಗೂ ನಿಗದಿಯಾಯ್ತು ರಣ್‍ವೀರ್-ದೀಪಿಕಾ ಮದುವೆ!

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಮದುವೆಯಾಗುತ್ತಿದ್ದಾರೆ ಎಂಬ ಗಾಳಿಸುದ್ದಿ ಈಗ ಅಧಿಕೃತವಾಗಿದೆ. ಇನ್ನೂ 3-4 ತಿಂಗಳಲ್ಲಿ ದೀಪಿಕಾ ಹಾಗೂ ರಣ್‍ವೀರ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

    ವರದಿಗಳ ಪ್ರಕಾರ ದೀಪಿಕಾ ಹಾಗೂ ರಣ್‍ವೀರ್ 3-4 ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದಕ್ಕಾಗಿ ದೀಪಿಕಾ ಅವರ ಪೋಷಕರು ಮುಂಬೈನಲ್ಲಿರುವ ರಣ್‍ವೀರ್ ಮನೆಗೆ ಭೇಟಿ ನೀಡಿ ಮದುವೆ ದಿನಾಂಕವನ್ನು ನಿಗದಿಪಡಿಸಿದ್ದಾರೆ. ಈ ಇಬ್ಬರು  ವರ್ಲಿಯ ಹೋಟೆಲ್‍ನಲ್ಲಿ ಕಾಣಿಸಿಕೊಂಡಿದ್ದರು.

    ವಿರಾಟ್ ಹಾಗೂ ಅನುಷ್ಕಾ ಮದುವೆಯಂತೆ ದೀಪಿಕಾ ಹಾಗೂ ರಣ್‍ವೀರ್ ಕೂಡ ಡೆಸ್ಟೀನೇಶನ್ ವೆಡ್ಡಿಂಗ್ ಮಾಡಿಕೊಳ್ಳಲಿದ್ದಾರೆ. ಮುಂಬೈ ಹಾಗೂ ದೆಹಲಿಯಲ್ಲಿ ರಣ್‍ವೀರ್ ಸಂಬಂಧಿಕರು ಇರುವುದರಿಂದ ಈ ಮದುವೆ ಮುಂಬೈಯಲ್ಲೇ ನಡೆಯಬೇಕು ಎಂದು ರಣ್‍ವೀರ್ ಕುಟುಂಬದವರು ತಿಳಿಸಿದ್ದಾರೆ.

    ದಕ್ಷಿಣ ಭಾರತದ ಸಂಪ್ರದಾಯದಂತೆ ರಣ್‍ವೀರ್ ಹಾಗೂ ದೀಪಿಕಾ ಮದುವೆ ನಡೆಯಲಿದ್ದು, ಈಗಾಗಲೇ ದೀಪಿಕಾ ರಣ್‍ವೀರ್ ಕುಟುಂಬದವರ ಜೊತೆ ಮದುವೆಯ ಶಾಪಿಂಗ್ ಮಾಡುತ್ತಿದ್ದಾರೆ. ದೀಪಿಕಾ ಈಗ ಲಂಡನಲ್ಲಿದ್ದು, ರಣ್‍ವೀರ್ ಕುಟುಂಬದ ಜೊತೆ ಚಿನ್ನಾಭರಣ ಖರೀದಿ ಮಾಡುತ್ತಿದ್ದಾರೆ. ಗಲ್ಲಿ ಬಾಯ್ ಚಿತ್ರದ ಚಿತ್ರೀಕರಣದಿಂದಾಗಿ ರಣ್‍ವೀರ್ ತಮ್ಮ ಕುಟುಂಬದ ಜೊತೆ ಶಾಪಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ.

    ದೀಪಿಕಾ ಈಗ ವಿಶಾಲ್ ಭಾರದ್ವಾಜ್ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಇರ್ಫಾನ್ ಖಾನ್ ಜೊತೆ ನಟಿಸುತ್ತಿದ್ದು, ರಣ್‍ವೀರ್ ಝೋಯಾ ಅಖ್ತರ್ ನಿರ್ದೇಶಿಸುತ್ತಿರುವ ಗಲ್ಲಿ ಬಾಯ್ ಚಿತ್ರದಲ್ಲಿ ಅಲಿಯಾ ಭಟ್ ಜೊತೆ ನಟಿಸುತ್ತಿದ್ದಾರೆ.

  • ಬಟ್ಟೆ ಶಾಪಿಂಗ್ ಮಾಡೋವಾಗ ಈ 6 ಮಿಸ್ಟೇಕ್ಸ್ ಖಂಡಿತ ಮಾಡ್ಬೇಡಿ

    ಬಟ್ಟೆ ಶಾಪಿಂಗ್ ಮಾಡೋವಾಗ ಈ 6 ಮಿಸ್ಟೇಕ್ಸ್ ಖಂಡಿತ ಮಾಡ್ಬೇಡಿ

    ಶಾಪಿಂಗ್‍ಗೆ ಅಂತ ಹೋದ್ರೆ ಹೆಣ್ಣುಮಕ್ಕಳು ಯಾವತ್ತೂ ಬೇಗನೆ ಅಂಗಡಿಯಿಂದ ಹೊರಬರಲ್ಲ ಅನ್ನೋದು ಸಾಮಾನ್ಯವಾಗಿ ಕೇಳಿಬರೋ ಮಾತು. ಆದ್ರೆ ಶಾಪಿಂಗ್ ಮಾಡೋದೂ ಒಂದು ಕಲೆ ಅನ್ನೋದು ನೆನಪಿರಲಿ. ಕಣ್ಣಿಗೆ ಚೆನ್ನಾಗಿ ಕಂಡಿದ್ದೆಲ್ಲಾ ಆರಿಸಿಕೊಂಡು ಬಿಲ್ ಮಾಡಿಸೋದು, ಅರ್ಜೆಂಟ್‍ನಲ್ಲಿ ಯಾವುದೋ ಒಂದು ಸೆಲೆಕ್ಟ್ ಮಾಡಿ ಖರೀದಿಸಿಬಿಡೋದು, ಇಂತಹ ತಪ್ಪುಗಳನ್ನ ಮಾಡಿದ್ರೆ ಕೊನೆಗೆ ಕೊಟ್ಟ ಹಣಕ್ಕೆ ತಕ್ಕ ಬಟ್ಟೆ ಖರೀದಿಸಲಿಲ್ಲವಲ್ಲ ಅಂತ ಪರಿತಪಿಸಬೇಕಾಗುತ್ತದೆ. ಸೋ…. ಮುಂದಿನ ಸಲ ಶಾಪಿಂಗ್ ಹೋದಾಗ ಈ 6 ಮಿಸ್ಟೇಕ್ಸ್ ಖಂಡಿತ ಮಾಡ್ಬೇಡಿ.

    1. ಗಡಿಬಿಡಿಯಲ್ಲಿ ಶಾಪಿಂಗ್ ಖಂಡಿತ ಮಾಡ್ಬೇಡಿ
    ಅಯ್ಯೋ ಟೈಂ ಇಲ್ಲ.. ಬೇಗ ಹೋಗ್ಬೇಕು ಅಂದುಕೊಂಡು ಎಂದೂ ಶಾಪಿಂಗ್ ಮಾಡ್ಬೇಡಿ. ಇಂತ ಸಂದರ್ಭದಲ್ಲಿ ಬೇರೆ ಬೇರೆ ರೀತಿಯ ಡಿಸೈನ್‍ಗಳನ್ನ ನೋಡದೆ ಮೊದಲು ಅಂಗಡಿಗೆ ಹೋದಾಗ ಯಾವುದು ಕಣ್ಣಿಗೆ ಚೆನ್ನಾಗಿ ಕಾಣುತ್ತೋ ಅದನ್ನೇ ಕೊಂಡುಕೊಳ್ತೀವಿ. ಆದ್ರೆ ಇನ್ನೂ ಸ್ವಲ್ಪ ಸಮಯ ಹುಡುಕಿದ್ರೆ ಅದಕ್ಕಿಂತ ಚೆಂದದ ಡಿಸೈನ್‍ವುಳ್ಳ ಬಟ್ಟೆ ಸಿಗಬಹುದು. ಅಥವಾ ಒಳ್ಳೇ ಆಫರ್ ಕೂಡ ಲಭ್ಯವಾಗಿ ಖರ್ಚು ಕೂಡ ಕಡಿಮೆಯಾಗಬಹುದು.

    2. ಟ್ರಯಲ್ ಮಾಡದೆ ಪರ್ಚೇಸ್ ಮಾಡ್ಬೇಡಿ
    ಕಣ್ಣಿಗೆ ಚೆಂದವಾಗಿ ಕಂಡ ಬಟ್ಟೆಯನ್ನ ಧರಿಸಿ ನೋಡಿದಾಗ ಅದು ನಿಮಗೆ ಸೂಟ್ ಆಗದಿರಬಹುದು. ಅಥವಾ ಫಿಟಿಂಗ್‍ನಲ್ಲಿ ವ್ಯತ್ಯಾಸವಿರುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಯಾವಾಗ್ಲೂ ಟ್ರಯಲ್ ನೋಡಿಯೇ ಬಟ್ಟೆ ಖರೀದಿ ಮಾಡಿ. ಅದರಲ್ಲೂ ವಿವಿಧ ಬ್ರ್ಯಾಂಡ್‍ಗಳ ಜೀನ್ಸ್ ಮತ್ತು ಟಾಪ್‍ಗಳ ಸೈಜ್‍ನಲ್ಲಿ ವ್ಯತ್ಯಾಸವಿರುತ್ತದೆ. ಒಂದು ಬ್ರ್ಯಾಂಡಿನ ಸ್ಮಾಲ್ ಸೈಜಿನ ಟಾಪ್ ಮತ್ತೊಂದು ಬ್ರ್ಯಾಂಡ್‍ನಲ್ಲಿ ಮೀಡಿಯಮ್ ಸೈಜ್‍ನಷ್ಟು ಇರುತ್ತದೆ. ಹೀಗಾಗಿ ಟ್ರಯಲ್ ನೋಡುವುದು ಉತ್ತಮ.

    3. ಒಂದೇ ಡಿಸೈನ್‍ನಲ್ಲಿ ಬೇರೆ ಬೇರೆ ಬಣ್ಣದ ಬಟ್ಟೆ ತಗೋಬೇಡಿ
    ಒಂದು ಟೀ ಶರ್ಟ್/ಟಾಪ್/ಪ್ಯಾಂಟ್ ಇಷ್ಟವಾದ್ರೆ ಅದೇ ಡಿಸೈನ್‍ನಲ್ಲಿ ಮೂರ್ನಾಲ್ಕು ವಿವಿಧ ಬಣ್ಣದ ಟೀ-ಶರ್ಟ್/ಟಾಪ್ ತೆಗೆದುಕೊಳ್ಳೋದನ್ನ ಮಾಡ್ಬೇಡಿ. ಸಾಕಷ್ಟು ವೆರೈಟಿಯ ಡಿಸೈನ್‍ಗಳು ಇರುವಾಗ ಒಂದೇ ಡಿಸೈನ್‍ಗೆ ಅಂಟಿಕೊಳ್ಳೋದು ಯಾಕೆ?

    4. ನಿಮಗೆ ಫಿಟ್ ಆಗದ ಬಟ್ಟೆಯನ್ನ ಅಲ್ಲೇ ಬಿಡಿ
    ಅಯ್ಯೋ ಈ ಟಾಪ್ ಎಷ್ಟೊಂದು ಚೆನ್ನಾಗಿದೆ… ಆದ್ರೆ ನನಗೆ ಸ್ವಲ್ಪ ಟೈಟ್ ಆಗ್ತಿದೆ… ಪರ್ವಾಗಿಲ್ಲ, ಮುಂದೆ ಸಣ್ಣ ಆಗ್ತೀನಿ…. ಎಂತೆಲ್ಲಾ ಅಂದುಕೊಂಡು ನಿಮಗೆ ಫಿಟ್ ಆಗದಿರುವ ಬಟ್ಟೆಯನ್ನ ಖರೀದಿಸಬೇಡಿ. ತುಂಬಾ ಇಷ್ಟವಾದ ಬಟ್ಟೆ ಸ್ವಲ್ಪ ಇದ್ದು, ನಿಮ್ಮ ಸೈಜ್ ನಲ್ಲಿ ಲಭ್ಯವಿಲ್ಲದಿದ್ರೆ ಅದನ್ನ ಟೈಲರ್ ಬಳಿ ಕೊಟ್ಟು ಫಿಟ್ ಮಾಡಿಸಿಕೊಳ್ಳಬಹುದು. ಆದ್ರೆ ಹಾಗಂತ ಯಾವಾಗ್ಲೂ ನಿಮ್ಮ ಸೈಜ್‍ಗೆ ಹೊಂದದ ಬಟ್ಟೆಯನ್ನ ಖರೀದಿಸಬೇಡಿ. ಹಾಗೇ ನೀವು ಪದೇ ಪದೇ ಧರಿಸದ ಬಟ್ಟೆಗೆ, ನಿಮ್ಮ ಸ್ಟೈಲ್‍ಗೆ ಹೊಂದದ ಬಟ್ಟೆಗೆ ದುಡ್ಡು ಸುರೀಬೇಡಿ. ನೀವು ಸಾಮಾನ್ಯವಾಗಿ ಜೀನ್ಸ್ ಧರಿಸಲ್ಲವಾದ್ರೆ ಸುಮ್ಮನೆ ಅದನ್ನ ಖರೀದಿಸಿ ಯಾಕೆ ಮೂಲೆಗಿಡ್ತೀರ? ಯಾವಾಗ್ಲೋ ಟ್ರಿಪ್ ಹೋದಾಗ ಇದನ್ನ ಹಾಕೋಬಹುದು ಅಂತ ಖರೀದಿ ಮಾಡಿದ್ರೆ ತಿಂಗಳಾನುಗಟ್ಟಲೆ ಕಬೋರ್ಡ್‍ನಲ್ಲೇ ಇರುತ್ತೆ.

    5. ಸೇಲ್ ಇದ್ದಾಗ ಶಾಪಿಂಗ್ ಹೋಗಿ
    ಹೊಸ ಡಿಸೈನ್‍ನ ಬಟ್ಟೆಗಳ ಬೆಲೆ ತುಂಬಾ ದುಬಾರಿ ಎನಿಸಿದ್ರೆ ಸ್ವಲ್ಪ ಕಾಯಿರಿ. ಸ್ವಲ್ಪ ಸಮಯದ ನಂತರ ಡಿಸ್ಕೌಂಟ್ ಸೇಲ್ ಹಾಕಿದಾಗ ಅದೇ ಬಟ್ಟೆ ಕಡಿಮೆ ಬೆಲೆ/ ಅರ್ಧ ಬೆಲೆಗೂ ಸಿಗಬಹುದು. ಹಾಗಂತ ಎಲ್ಲಾ ಬಟ್ಟೆಗಳು ಸೇಲ್‍ನಲ್ಲಿ ಬರುತ್ತವೆ ಅಂದ್ಕೋಬೇಡಿ. ಇಂತದ್ದೊಂದು ಜಾಕೇಟ್ ಖರೀದಿಸಬೇಕು ಅಂದ್ಕೊಂಡು ಅದು ತುಂಬಾ ದಿನಗಳ ನಂತರ ಸಿಕ್ಕರೆ ಅದನ್ನ ಆಗಲೇ ಖರೀದಿಸಿದ್ರೆ ಉತ್ತಮ. ಸಾಮಾನ್ಯವಾಗಿ ಸಿಗೋ ಉಡುಪುಗಳಾದ್ರೆ ಸೇಲ್ ಹಾಕಿದಾಗಲೇ ಖರೀದಿ ಮಾಡಿ.

    6. ಫ್ರೆಂಡ್‍ಗೆ ಇಷ್ಟವಾಗ್ಲಿಲ್ಲ ಅಂತ ನೀವು ಇಷ್ಟಪಟ್ಟಿದ್ದನ್ನ ಖರೀದಿಸದೇ ಇರಬೇಡಿ
    ನಿಮ್ಮ ಸ್ಟೈಲ್ ಅಥವಾ ಟೇಸ್ಟ್ ನಿಮ್ಮ ಸ್ನೇಹಿತರಿಗೆ ಇಷ್ಟವಾಗದಿರಬಹುದು. ಅಥವಾ ನೀವು ಆರಿಸಿದ ಬಟ್ಟೆ ಚೆನ್ನಾಗಿಲ್ಲ ಅಂತಲೂ ಅವರು ಹೇಳಿಬಿಡಬಹುದು. ಆದ್ರೆ ಆ ಬಟ್ಟೆಯನ್ನ ಯಾವ ರೀತಿ ಸ್ಟೈಲ್ ಮಾಡಬೇಕು , ಯಾವುದರೊಂದಿಗೆ ಮ್ಯಾಚ್ ಮಾಡಿ ಹಾಕೋಬೇಕು ಅನ್ನೋದು ಅವರಿಗಿಂತ ಚೆನ್ನಾಗಿ ನಿಮಗೆ ಗೊತ್ತಿರುತ್ತದೆ. ಹೀಗಾಗಿ ಗೆಳೆಯ/ ಗೆಳತಿಗೆ ಇಷ್ಟವಾಗ್ಲಿಲ್ಲ ಅಂತ ನೀವು ಇಷ್ಟಪಟ್ಟಿದ್ದನ್ನ ಖರೀದಿಸದೆ ಇದ್ರೆ ನಿಮಗೇ ಲಾಸ್. ಸ್ನೇಹಿತರಿಗಿಂತ ನಿಮ್ಮ ಟೇಸ್ಟ್ ಭಿನ್ನವಾಗಿದ್ರೆ ಒಬ್ಬರೇ ಶಾಪಿಂಗ್ ಮಾಡಲು ಹೋಗಿ.

    ಈ ಮಿಸ್ಟೇಕ್ಸ್ ಗಳನ್ನ ಮಾಡದಿದ್ರೆ ನೀವು ಬಟ್ಟೆ ಖರೀದಿಯಲ್ಲಿ ಖಂಡಿತವಾಗ್ಲೂ ಭೇಷ್ ಎನಿಸಿಕೊಳ್ಳಬಹುದು.

  • 225 ಮೊಬೈಲ್ ಬುಕ್ಕಿಂಗ್, 166 ಬಾರಿ ರಿಫಂಡ್: 52 ಲಕ್ಷ ವಂಚಿಸಿದ್ದ ಕಳ್ಳ ಒಂದು ತಪ್ಪಿನಿಂದ ಸಿಕ್ಕಿಬಿದ್ದ!

    225 ಮೊಬೈಲ್ ಬುಕ್ಕಿಂಗ್, 166 ಬಾರಿ ರಿಫಂಡ್: 52 ಲಕ್ಷ ವಂಚಿಸಿದ್ದ ಕಳ್ಳ ಒಂದು ತಪ್ಪಿನಿಂದ ಸಿಕ್ಕಿಬಿದ್ದ!

    ನವದೆಹಲಿ: ಆನ್‍ಲೈನ್ ನಲ್ಲಿ ಮೊಬೈಲ್ ಬುಕ್ ಮಾಡಿ, ಫೋನ್ ಬಂದಿಲ್ಲ ಎಂದು ಹೇಳಿ ಇ-ಕಾಮರ್ಸ್ ಕಂಪನಿಯೊಂದಕ್ಕೆ ಸುಮಾರು 52 ಲಕ್ಷ ರೂ. ವಂಚಿಸಿದ್ದ ಯುವಕನನ್ನು ಮಂಗಳವಾರ ದೆಹಲಿಯ ಪೊಲೀಸರು ಬಂಧಿಸಿದ್ದಾರೆ.

    21 ವರ್ಷದ ಶಿವಂ ಚೋಪ್ರಾ ಬಂಧಿತ ಆರೋಪಿ. ಹೋಟೆಲ್ ಮ್ಯಾನೇಜಮೆಂಟ್ ಪದವಿಧರನಾಗಿರುವ ಶಿವಂ ಇದೂವರೆಗೂ ದುಬಾರಿ ಬೆಲೆಯ 225 ಮೊಬೈಲ್ ಗಳನ್ನು ಬುಕ್ ಮಾಡಿ, 166 ಬಾರಿ ಕಂಪನಿಗಳಿಂದ ಮರಳಿ ಹಣ ಪಡೆದಿದ್ದಾನೆ. ಇನ್ನೂ ಆನ್‍ಲೈನ್ ನಲ್ಲಿ ಬುಕ್ ಮಾಡಿಕೊಂಡಿರುವ ಎಲ್ಲ ಮೊಬೈಲ್ ಗಳನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾನೆ.

    ಉತ್ತರ ದೆಹಲಿಯ ತ್ರಿ ನಗರದ ನಿವಾಸಿಯಾಗಿರುವ ಶಿವಂ ಸದ್ಯ ನಿರುದ್ಯೋಗಿಯಾಗಿದ್ದು, ಈ ಹಿಂದೆ ಹೋಟೆಲ್ ಗಳಲ್ಲಿ ಕೆಲವು ದಿನ ಕೆಲಸ ಮಾಡಿಕೊಂಡಿದ್ದ. ಕಳೆದ ವಾರ ಆನ್‍ಲೈನ್ ಚೀಟಿಂಗ್ ಸಂಬಂಧಿಸಿದಂತೆ ಶಿವಂ ಬಗ್ಗೆ ಇ-ಕಾಮರ್ಸ್ ಕಂಪನಿಯೊಂದು ತನ್ನ ಆಂತರಿಕ ತನಿಖೆಯ ಅನ್ವಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.

    141 ಸಿಮ್ ಕಾರ್ಡ್ ಹೊಂದಿದ್ದ: ಶಿವಂ ತನಗೆ ಪರಿಚಯವಿರುವ ಮೊಬೈಲ್ ಅಂಗಡಿ ಮಾಲೀಕ ಸಚಿನ್ ಜೈನ್ ಎಂಬಾತನಿಂದ 141 ಸಿಮ್ ಕಾರ್ಡ್ ಗಳನ್ನು ಪಡೆದುಕೊಂಡಿದ್ದ. ಈ ನಂಬರ್ ಗಳಿಂದ 50ಕ್ಕೂ ಹೆಚ್ಚು ಇ-ಮೇಲ್ ಐಡಿಗಳನ್ನು ಕ್ರಿಯೇಟ್ ಮಾಡಿಕೊಂಡಿದ್ದನು. ಆದರೆ ಯಾವುದೇ ಸಿಮ್ ಗಳಿಗೆ ತನ್ನ ಅಧಿಕೃತ ದಾಖಲೆಗಳನ್ನು ನೀಡಿ, ಖರೀದಿಸಿಲ್ಲ. ಎಲ್ಲ ಸಿಮ್ ಗಳಿಗೂ ಸಚಿನ್ ನಕಲಿ ದಾಖಲೆಗಳನ್ನು ನೀಡಿದ್ದ. ನಕಲಿ ಸಿಮ್ ನಂಬರ್ ಮತ್ತು ಮೇಲ್ ಐಡಿಗಳಿಂದ ಆನ್‍ಲೈನ್ ಶಾಪಿಂಗ್ ಅಕೌಂಟ್ ಓಪನ್ ಮಾಡಿ, ಅವುಗಳ ಮೂಲಕವೇ ಶಿವಂ ವ್ಯವಹಾರ ಮಾಡುತ್ತಿದ್ದನು ಎಂದು ಡಿಸಿಪಿ ಮಿಲಿಂದ್ ದುಂಬೆರೆ ಹೇಳಿದ್ದಾರೆ.

    ಅಡ್ರೆಸ್ ಹೇಳುತ್ತಿರಲಿಲ್ಲ: ಆನ್‍ಲೈನ್ ನಲ್ಲಿ ಮೊಬೈಲ್ ಗಳನ್ನು ಬುಕ್ ಮಾಡಿದ ಶಿವಂ, ಡೆಲಿವರಿ ಅಡ್ರೆಸ್ ಸರಿಯಾಗಿ ಹೇಳುತ್ತಿರಲಿಲ್ಲ. ಡೆಲಿವರಿ ಬಾಯ್ ಗಳು ಕರೆ ಮಾಡಿದಾಗ ಪ್ರತಿಬಾರಿಯೂ ಬೇರೆ ಬೇರೆ ಸ್ಥಳಗಳಲ್ಲಿ ಮೊಬೈಲ್ ಗಳನ್ನು ಪಡೆದುಕೊಳ್ಳುತ್ತಿದ್ದನು.

    ಮೊಬೈಲ್ ಬಂದ ಕೂಡಲೇ ಕಂಪನಿಗೆ ಕರೆ ಮಾಡಿ ಖಾಲಿ ಡಬ್ಬ ಮಾತ್ರ ಬಂದಿದೆ ಎಂದು ಹೇಳುತ್ತಿದ್ದನು. ಗ್ರಾಹಕರ ಹಿತಾಸಕ್ತಿಗಾಗಿ ಕಂಪನಿ ಶಿವಂನಿಗೆ ಮೊಬೈಲ್ ಗೆ ನೀಡಿದ ಹಣದೊಂದಿಗೆ ಗಿಫ್ಟ್ ವೋಚರ್ ಸಹ ನೀಡುತ್ತಿದ್ದರು. ಶುಭಂ ಎಂಬ ಹೆಸರಿನ ಮೂಲಕ ಆನ್‍ಲೈನ್ ವ್ಯವಹಾರ ನಡೆಸುತ್ತಿದ್ದನು.

    ಕೆಲವು ತಪ್ಪು ಮಾಡಿದ್ದ: ಶಿವಂ ತನ್ನ ವ್ಯವಹಾರದಲ್ಲಿ ಕೆಲವು ತಪ್ಪಗಳನ್ನು ಮಾಡಿದ್ದ, ಪ್ರತಿಬಾರಿಯೂ ಶಾಪಿಂಗ್ ಮಾಡುವಾಗ ಶುಭಂ ಎಂಬ ಹೆಸರನ್ನು ಹೇಳುತ್ತಿದ್ದನು. ಮೊಬೈಲ್‍ಗಳು ಪ್ರತಿಬಾರಿಯೂ ದೆಹಲಿಯ ತ್ರಿನಗರದಿಂದಲೇ ಬುಕ್ ಮಾಡಲಾಗುತ್ತಿತ್ತು ಹಾಗೂ ಮೂವರು ಡೆಲಿವರಿ ಬಾಯ್ ಗಳು ಈತನನ್ನು ಗುರುತಿಸಿದ್ದರು. ಇದರಿಂದ ಅನುಮಾನಗೊಂಡ ಕಂಪನಿ ಈ ಸಂಬಂಧ ವಾಯುವ್ಯ ದೆಹಲಿಯ ಶಾಲಿಮಾರ್ ಭಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.

    ದೂರು ದಾಖಲಾದ ಬಳಿಕ ಪೊಲೀಸರು ಆರೋಪಿ ಶಿವಂ ಚೋಪ್ರಾನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಹಲವು ಬ್ಯಾಂಕ್ ಖಾತೆಗಳನ್ನು ಹೊಂದಿದ್ದ ಎನ್ನುವುದು ಪ್ರಾಥಮಿಕ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

  • ಸರ್ಕಾರಿ ಕಾರಿನಲ್ಲಿ ದಿನವಿಡೀ ಶಾಪಿಂಗ್- ಬಳ್ಳಾರಿ ಸಾರಿಗೆ ಅಧಿಕಾರಿ ನಡೆಗೆ ಸಾರ್ವಜನಿಕರ ಆಕ್ರೋಶ

    ಸರ್ಕಾರಿ ಕಾರಿನಲ್ಲಿ ದಿನವಿಡೀ ಶಾಪಿಂಗ್- ಬಳ್ಳಾರಿ ಸಾರಿಗೆ ಅಧಿಕಾರಿ ನಡೆಗೆ ಸಾರ್ವಜನಿಕರ ಆಕ್ರೋಶ

    ಬಳ್ಳಾರಿ: ಇಲ್ಲಿನ ಹೊಸಪೇಟೆ ಈಶಾನ್ಯ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸರ್ಕಾರ ಕೊಟ್ಟಿರೋ ಕಾರಣನ್ನ ತನ್ನ ಕುಟುಂಬದ ಕೆಲಸಕ್ಕೂ ಬಳಸುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಸ್ವಾಮಿ ಕಾರ್ಯದ ಜೊತೆಗೆ ಸ್ವಕಾರ್ಯ ಎನ್ನುವಂತೆ ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿ ಮಹ್ಮದ್ ಪೈಜ್ ಅವರು ತಮ್ಮ ಕಚೇರಿ ಕೆಲಸಕ್ಕೆ ಮಾತ್ರವಲ್ಲದೆ ತಮ್ಮ ಕುಟುಂಬ ಸದಸ್ಯರ ಶಾಪಿಂಗ್ ಸೇರಿದಂತೆ ಇತರೆ ಕಾರ್ಯಗಳಿಗೆ ಬಳಕೆ ಮಾಡುತ್ತಿದ್ದಾರೆ. ಅಧಿಕಾರಿ ಕುಟುಂಬದ ಸದಸ್ಯರು ಎನ್‍ಇಕೆಎಸ್‍ಆರ್‍ಟಿಸಿ ಹಾಗೂ ಕರ್ನಾಟಕ ಸರಕಾರ ನಾಮಫಲಕ ಹೊಂದಿದ ಕಾರಿನಲ್ಲಿ ಭಾನುವಾರ ಇಡೀ ದಿನ ಶಾಪಿಂಗ್ ಮಾಡಿರುವುದು ಬೆಳಕಿಗೆ ಬಂದಿದೆ.

    ಅಲ್ಲದೇ ಶಾಪಿಂಗ್ ವೇಳೆಯೂ ಕಾರನ್ನು ಸ್ಟಾರ್ಟ್‍ನಲ್ಲೇ ಇಟ್ಟು ನಿರಂತರವಾಗಿ ಎಸಿ ಬಳಕೆ ಮಾಡಿದ್ದಾರೆ. ಇದನ್ನ ನೋಡಿದ ಸಾರ್ವಜನಿಕರು ಪೈಜ್ ವಿರುದ್ಧ ಕಿಡಿಕಾರಿದ್ದಾರೆ.