Tag: Shoot out

  • ಅಮೆರಿಕದಲ್ಲಿ ಭಾರತೀಯ ಶ್ರೀನಿವಾಸ್ ಹತ್ಯೆಗೆ ಟ್ರಂಪ್ ಖಂಡನೆ

    ಅಮೆರಿಕದಲ್ಲಿ ಭಾರತೀಯ ಶ್ರೀನಿವಾಸ್ ಹತ್ಯೆಗೆ ಟ್ರಂಪ್ ಖಂಡನೆ

    ವಾಷಿಂಗ್ಟನ್: ಅಮೆರಿಕದಲ್ಲಿ ಭಾರತೀಯ ಮೂಲದ ಶ್ರೀನಿವಾಸ್ ಹತ್ಯೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಂಡಿಸಿದ್ದಾರೆ.

    ಮೊದಲ ಬಾರಿಗೆ ಸಂಸತ್ ಉದ್ದೇಶಿಸಿ ಮಾತನಾಡಿದ ಟ್ರಂಪ್, ಕಾನ್ಸಾಸ್‍ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಶ್ರೀನಿವಾಸ್ ಹತ್ಯೆಯನ್ನು ಖಂಡಿಸಿದ್ರು.

    ಅಮೆರಿಕದ ಯಹೂದಿ ಕೇಂದ್ರಗಳನ್ನು ಉದ್ದೇಶಿಸಿ ಮಾಡಲಾಗುತ್ತಿರುವ ಬೆದರಿಕೆ ಹಾಗೂ ಕಾನ್ಸಾಸ್‍ನಲ್ಲಿ ಭಾರತೀಯನ ಹತ್ಯೆಯಾಗಿರಬಹುದು, ಅಮೆರಿಕ ಯಾವುದೇ ರೀತಿಯ ದ್ವೇಷ ಮತ್ತು ದುಷ್ಕೃತ್ಯವನ್ನು ಖಂಡಿಸುತ್ತದೆ ಅಂತ ಟ್ರಂಪ್ ಹೇಳಿದ್ರು.

    ಫೆಬ್ರವರಿ 24ರಂದು ಹೈದರಾಬಾದ್ ಮೂಲದ 32 ವರ್ಷದ ಎಂಜಿನಿಯರ್ ಶ್ರೀನಿವಾಸ್ ಕೂಚಿಬೊಟ್ಲ ಅಮೆರಿಕದಲ್ಲಿ ಗುಂಡಿನ ದಾಳಿಗೆ ಬಲಿಯಾಗಿದ್ದರು. ಶ್ರೀನಿವಾಸ್ ತನ್ನ ಗೆಳೆಯನ ಜೊತೆ ಕಾನ್ಸಾಸ್‍ನ ಬಾರಿನಲ್ಲಿದ್ದ ವೇಳೆ 51 ವರ್ಷದ ಆಡಂ ಪುರಿಂಟನ್ ಎಂಬ ದುಷ್ಕರ್ಮಿ ಶ್ರೀನಿವಾಸ್ ಮತ್ತು ಅವರ ಗೆಳೆಯನನ್ನು ಮಿಡಲ್ ಈಸ್ಟರ್ನ್(ಮಧ್ಯಪ್ರಾಚ್ಯ ದೇಶದವರು) ಎಂದು ಕರೆದು ನನ್ನ ದೇಶವನ್ನು ಬಿಟ್ಟು ತೊಲಗಿ ಎಂದು ಕೂಗುತ್ತಾ ಗುಂಡಿನ ದಾಳಿ ನಡೆಸಿದ್ದ. ದಾಳಿಯಲ್ಲಿ ಶ್ರೀನಿವಾಸ್ ಸಾವನ್ನಪ್ಪಿದ್ದು, ಅಲೋಕ್ ಮದಾಸಿನಿ ಎಂಬ ಮತ್ತೊಬ್ಬ ಭಾರತೀಯ ಗಾಯಗೊಂಡಿದ್ದರು.

    ಘಟನೆಯ ನಂತರ ಪರಾರಿಯಾಗಿದ್ದ ದಾಳಿಕೋರ ಆಡಂ ಪುರಿಂಟನ್, ಮಿಸ್ಸೌರಿಯ ಸ್ಥಳೀಯ ಬಾರ್ವೊಂದರಲ್ಲಿ ನಾನು ಇಬ್ಬರು ಮಧ್ಯಪ್ರಾಚ್ಯ ವ್ಯಕ್ತಿಗಳನ್ನು ಕೊಂದಿದ್ದೇನೆ ಎಂದು ಹೇಳಿದ್ದ. ಇದನ್ನು ಕೇಳಿ ಅಲ್ಲಿನ ಸಿಬ್ಬಂದಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ರು. ಘಟನೆ ನಡೆದ 5 ಗಂಟೆಗಳ ಒಳಗೆ ಆಡಂನನ್ನು ಅಮೆರಿಕ ಪೊಲೀಸರು ಬಂಧಿಸಿದ್ರು.

  • ಬೆಂಗ್ಳೂರಲ್ಲಿ ಮತ್ತೊಂದು ಶೂಟೌಟ್: ದರೋಡೆಗೆ ಹೊಂಚು ಹಾಕಿದ್ದ ರೌಡಿಶೀಟರ್‍ಗೆ ಗುಂಡು

    ಬೆಂಗ್ಳೂರಲ್ಲಿ ಮತ್ತೊಂದು ಶೂಟೌಟ್: ದರೋಡೆಗೆ ಹೊಂಚು ಹಾಕಿದ್ದ ರೌಡಿಶೀಟರ್‍ಗೆ ಗುಂಡು

    ಬೆಂಗಳೂರು: ನಗರದಲ್ಲಿ ಮತ್ತೊಂದು ಶೂಟೌಟ್ ನಡೆದಿದೆ. ರಾಜಗೋಪಾಲ್ ನಗರದ ಪಿಳ್ಳಪ್ಪ ಕಟ್ಟೆ ಬಳಿ ಪವನ್ ಎಂಬ ರೌಡಿಶೀಟರ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

    ಇಂದು ಬೆಳಗಿನ ಜಾವ ಕಾರ್ಯಾಚರಣೆ ನಡೆದಿದ್ದು, ದರೋಡೆಗೆ ಬಂದಿದ್ದ ರೌಡಿಶೀಟರ್ ಪವನ್ ಮೇಲೆ ರಾಜಗೋಪಾಲನಗರ ಇನ್ಸ್ ಪೆಕ್ಟರ್ ಮಿಥುನ್ ಶಿಲ್ಪಿ ನೇತೃತ್ವದಲ್ಲಿ ಶೂಟೌಟ್ ನಡೆದಿದೆ. ಗಾಯಾಳು ಪವನ್‍ನನ್ನು ಪೀಣ್ಯದ ಜೈ ಮಾರುತಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪವನ್ ಆಲಿಯಾಸ್ ಪಾಪಿರೆಡ್ಡಿ ಮೇಲೆ 20 ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಿವೆ. ದರೋಡೆಗೆ ಹೊಂಚು ಹಾಕುತ್ತಿದ್ದ ವೇಳೆಯೇ ಪವನ್ ಶೂಟೌಟ್‍ಗೆ ಗುರಿಯಾಗಿದ್ದಾನೆ.

    ಅತ್ತ ಕುಖ್ಯಾತ ಕಳ್ಳ ಕೊಮ್ಮಘಟ್ಟ ಮಂಜನ ಮೇಲೆ ಪೊಲೀಸರು ಮಂಗಳವಾರ ರಾತ್ರಿ ಗುಂಡಿನ ದಾಳಿ ನಡೆಸಿದ್ದಾರೆ. ನಗರದ ಸೋಲದೇವನಹಳ್ಳಿಯ ಆಚಾರ್ಯ ಕಾಲೇಜಿನ ಬಳಿ ಮಂಜ ಇದ್ದ ಬಗ್ಗೆ ಮಾಹಿತಿ ತಿಳಿದ ವಿದ್ಯಾರಣ್ಯಪುರ ಇನ್ಸ್ ಪೆಕ್ಟರ್ ಪುನೀತ್, ಆತನನ್ನು ಹಿಡಿಯಲು ಪ್ರಯತ್ನಿಸಿದ್ರು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಮಂಜ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ಎರಡು ಸುತ್ತು ಗುಂಡಿನ ದಾಳಿ ನಡೆಸಿದ್ದು, ಒಂದು ಗುಂಡು ಗಾಳಿಯಲ್ಲಿ ಹಾರಿದ್ರೆ, ಮತ್ತೊಂದು ಗುಂಡು ಈತನ ಕಾಲಿಗೆ ಬಿದ್ದಿದೆ. ಗುಂಡೇಟು ತಿಂದ ಮಂಜನನ್ನು ಪೊಲೀಸರು ಸ್ಥಳೀಯ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.

    ಕೊಮ್ಮಘಟ್ಟ ಮಂಜ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಕೆಲ ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಮಂಜ ಈಗ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ.

  • ದುಷ್ಕರ್ಮಿಯಿಂದ ಅಮೆರಿಕ ಬಿಟ್ಟು ತೊಲಗಿ ಘೋಷಣೆ- ಗುಂಡಿಟ್ಟು ಭಾರತೀಯ ಟೆಕ್ಕಿಯ ಹತ್ಯೆ

    ದುಷ್ಕರ್ಮಿಯಿಂದ ಅಮೆರಿಕ ಬಿಟ್ಟು ತೊಲಗಿ ಘೋಷಣೆ- ಗುಂಡಿಟ್ಟು ಭಾರತೀಯ ಟೆಕ್ಕಿಯ ಹತ್ಯೆ

    ವಾಷಿಂಗ್ಟನ್: ಹೈದರಾಬಾದ್ ಮೂಲದ ಭಾರತೀಯರೊಬ್ಬರು ಅಮೆರಿಕದಲ್ಲಿ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.

    ಬುಧವಾರ ಸಂಜೆ ಹೈದರಾಬಾದ್ ಮೂಲದ ಎಂಜಿನಿಯರ್ ಶ್ರೀನಿವಾಸ್ ಕೂಚಿಬೊಟ್ಲ, ಗೆಳೆಯನ ಜೊತೆ ಕಾನ್ಸಾಸ್‍ನ ಬಾರ್‍ನಲ್ಲಿದ್ದರು. ಈ ವೇಳೆ 51 ವರ್ಷದ ಆಡಂ ಪುರಿಂಟನ್ ಎಂಬ ದುಷ್ಕರ್ಮಿ ಶ್ರೀನಿವಾಸ್ ಮತ್ತು ಅವರ ಗೆಳೆಯನನ್ನು ಮಿಡಲ್ ಈಸ್ಟರ್ನ್(ಮಧ್ಯಪ್ರಾಚ್ಯ ದೇಶದವರು) ಎಂದು ಕರೆದು ನನ್ನ ದೇಶವನ್ನು ಬಿಟ್ಟು ತೊಲಗಿ ಎಂದು ಕೂಗುತ್ತಾ ಗುಂಡಿನ ದಾಳಿ ನಡೆಸಿದ್ದಾನೆ.

    ದಾಳಿಯಲ್ಲಿ ಶ್ರೀನಿವಾಸ್ ಸಾವನ್ನಪ್ಪಿದ್ದು, ಅಲೋಕ್ ಮದಾಸಿನಿ ಎಂಬ ಮತ್ತೊಬ್ಬ ಭಾರತೀಯ ಗಾಯಗೊಂಡು ಸದ್ಯ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಲು ಯತ್ನಿಸಿದ ಪ್ರತ್ಯಕ್ಷದರ್ಶಿ ಐಯಾನ್ ಗ್ರಿಲ್ಲೊಟ್ ಎಂಬವರ ಮೇಲೂ ಗುಂಡಿನ ದಾಳಿ ನಡೆದಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಘಟನೆಯ ನಂತರ ಪರಾರಿಯಾಗಿದ್ದ ದಾಳಿಕೋರ ಆಡಂ ಪುರಿಂಟನ್, ಮಿಸ್ಸೌರಿಯ ಸ್ಥಳೀಯ ಬಾರ್‍ವೊಂದರಲ್ಲಿ ನಾನು ಇಬ್ಬರು ಮಧ್ಯಪ್ರಾಚ್ಯ ವ್ಯಕ್ತಿಗಳನ್ನು ಕೊಂದಿದ್ದೇನೆ ಎಂದು ಹೇಳಿದ್ದಾನೆ. ಇದನ್ನು ಕೇಳಿ ಅಲ್ಲಿನ ಸಿಬ್ಬಂದಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಘಟನೆ ನಡೆದ 5 ಗಂಟೆಗಳ ಒಳಗೆ ಆಡಂನನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.

    ಘಟನೆಯ ಬಗ್ಗೆ ಪ್ರತಿಕ್ರಿಯಿಸಿರೋ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ನನಗೆ ಆಘಾತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಶ್ರೀನಿವಾಸ್ ಅವರ ಕುಟುಂಬಕ್ಕೆ ಅಗತ್ಯವಾದ ನೆರವು ನೀಡುವ ಬಗ್ಗೆ ಭರವಸೆ ನೀಡಿದ್ದಾರೆ. ಶ್ರೀನಿವಾಸ್ ಅವರ ಮೃತದೇಹವನ್ನು ಹೈದರಾಬಾದ್‍ಗೆ ತರಲು ಎಲ್ಲಾ ನೆರವು ನೀಡುವುದಾಗಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

    ಶ್ರೀನಿವಾಸ್ ಅವರು ಜಿಪಿಎಸ್ ಸಿಸ್ಟಮ್ ತಯಾರು ಮಾಡುವ ಅಮೆರಿಕದ ಎಂಎನ್‍ಸಿ ಯಲ್ಲಿ ಕೆಲಸ ಮಾಡುತ್ತಿದ್ದರು. 2014ರಲ್ಲಿ ಸಂಸ್ಥೆಯನ್ನು ಸೇರಿದ್ದರು. ಇವರ ಪತ್ನಿ ಸುನಯನ ಕೂಡ ಇದೇ ಪ್ರದೇಶದಲ್ಲಿ ಮತ್ತೊಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.