Tag: shobha de

  • ಶೋಭಾ ಡೇ ಯಿಂದ ಅವಮಾನಿತರಾಗಿದ್ದ ಪೊಲೀಸ್ 65 ಕೆಜಿ ತೂಕ ಇಳಿಸಿಕೊಂಡ್ರು!

    ಶೋಭಾ ಡೇ ಯಿಂದ ಅವಮಾನಿತರಾಗಿದ್ದ ಪೊಲೀಸ್ 65 ಕೆಜಿ ತೂಕ ಇಳಿಸಿಕೊಂಡ್ರು!

    ಮುಂಬೈ: ಅಂಕಣಗಾರ್ತಿ, ಲೇಖಕಿ ಶೋಭಾ ಡೇ ಅವರಿಂದ ಅವಮಾನಕ್ಕೊಳಗಾಗಿದ್ದ ಮಧ್ಯಪ್ರದೇಶ ಪೊಲೀಸ್ ಇಲಾಖೆಯ ಇನ್ಸ್ ಪೆಕ್ಟರ್ ದೌಲತ್‍ರಾಮ್ ಜೋಗಾವತ್ ಇದೀಗ 65 ಕೆಜಿ ತೂಕ ಇಳಿದಿಕೊಂಡು ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

    ನನಗೆ ಶೋಭಾ ಡೇ ಮೇಲೆ ಈಗ ಕೋಪ ಇಲ್ಲ ಎಂದು ಜೋಗಾವತ್ ಹೇಳಿದ್ದಾರೆ. ವರದಿಗಳ ಪ್ರಕಾರ ಜೋಗಾವತ್ ವೈಯಕ್ತಿಕವಾಗಿ ಶೋ ಡೇ ಅವರಿಗೆ ಧನ್ಯವಾದ ತಿಳಿಸಲು ಇಚ್ಛಿಸಿದ್ದಾರೆ ಎನ್ನಲಾಗಿದೆ.

    ಜೋಗಾವತ್ ಅವರ ತೂಕ ಇಳಿಕೆ ಬಗ್ಗೆ ಸುದ್ದಿ ಕೇಳಿ ಶುಕ್ರವಾರದಂದು ಟ್ವೀಟ್ ಮಾಡಿರೋ ಶೋಭಾ ಡೇ, ಎಲ್ಲಾ ಸುಖಾಂತ್ಯವಾಯಿತೆಲ್ಲಾ ಎಂಬುದು ಖುಷಿ. ದೌಲತ್‍ರಾಮ್ ಅವರಿಗೆ ದೇವರು ಒಳ್ಳೆಯದು ಮಾಡಲಿ. ದೀರ್ಘ ಆಯಸ್ಸು ಹಾಗೂ ಆರೋಗ್ಯ ಕೊಡಲಿ ಎಂದಿದ್ದಾರೆ.

    ಕಳೆದ ವರ್ಷ ಫೆಬ್ರವರಿಯಲ್ಲಿ ಜೋಗಾವತ್ ಅವರ ಫೋಟೋವನ್ನ ಟ್ವಿಟ್ಟರ್‍ನಲ್ಲಿ ಹಾಕಿದ್ದ ಶೋಭಾ ಡೇ, ಮುಂಬೈನಲ್ಲಿ ಭಾರೀ ಬಂದೋಬಸ್ತ್ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು. ಇದಕ್ಕೆ ಮುಂಬೈ ಪೊಲೀಸರು ತಿರುಗೇಟು ಕೊಟ್ಟು, ಇವರು ಮುಂಬೈ ಪೊಲೀಸ್ ಸಿಬ್ಬಂದಿ ಅಲ್ಲ. ನಿಮ್ಮಂತಹ ಜವಾಬ್ದಾರಿಯುತ ಪ್ರಜೆಯಿಂದ ನಾವು ಉತ್ತಮವಾದುದನ್ನು ನಿರೀಕ್ಷಿಸುತ್ತೆವೆ ಎಂದು ಟ್ವೀಟ್ ಮಾಡಿದ್ದರು. ಚಿತ್ರದಲ್ಲಿದ್ದ ವ್ಯಕ್ತಿ ಮಧ್ಯಪ್ರದೇಶದ ಪೊಲೀಸ್ ಸಿಬ್ಬಂದಿ ಜೋಗಾವತ್ ಎಂದು ತಿಳಿದುಬಂದಿತ್ತು. ಶೋಭಾ ಡೇ ಅವರ ವ್ಯಂಗ್ಯ ಟ್ವೀಟ್ ಗೆ ತೀವ್ರ ಖಂಡನೆ ವ್ಯಕ್ತವಾಗಿತ್ತು.

    ನಂತರ ಕ್ಷಮೆ ಕೇಳಿದ್ದ ಶೋಭಾ ಡೇ, ಮಹಾರಾಷ್ಟ್ರ ಪೊಲೀಸರೇ ಅವಮಾನಿಸುವ ಉದ್ದೇಶ ನನಗಿಲ್ಲ. ಮಧ್ಯಪ್ರದೇಶ ಪೊಲೀಸ್ ಇದು ನೈಜ ಫೋಟೋ ಆಗಿದ್ದರೆ ಬೇಗ ವೈದ್ಯರನ್ನ ಭೇಟಿ ಮಾಡಿ. ಫೋಟೋಶಾಪ್ ಮಾಡಿರೋ ಚಿತ್ರ ಹರಿದಾಡ್ತಿರಬಹುದು ಎಂದಿದ್ದರು.

    ಇದರಿಂದ ಮನನೊಂದಿದ್ದ ಜೋಗಾವತ್, ನನ್ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ನೋಡಿ ಬೇಸರವಾಗಿದೆ ಎಂದಿದ್ದರು. ನಾನು ಚಿಕ್ಕಂದಿನಿಂದಲೂ ಹೀಗೆ ದಢೂತಿ ದೇಹ ಹೊಂದಿಲ್ಲ. ಆಪರೇಷನ್ ನಂತರ ತೂಕ ಹೆಚ್ಚಾಯಿತು ಎಂದು ಹೇಳಿದ್ದರು.

    ಜೋಗಾವತ್ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ನೋಡಿದ್ದ ಸೈಫೀ ಆಸ್ಪತ್ರೆಯ ಪ್ರಖ್ಯಾತ ಬಾರಿಯಾಟ್ರಿಕ್ ಸರ್ಜನ್ ಡಾ. ಮುಫಾಜಲ್ ವಕ್ಡಾವಾಲಾ, ಜೋಗಾವತ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲು ಮುಂದೆ ಬಂದಿದ್ದರು. ಆಗ 180 ಕೆಜಿ ತೂಕವಿದ್ದ ಜೋಗಾವತ್ ಇದೀಗ ಬರೋಬ್ಬರಿ 65 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

  • ಶೋಭಾ ಡೇ ವ್ಯಂಗ್ಯ ಟ್ವೀಟ್ ನಂತರ ಮಧ್ಯಪ್ರದೇಶದ ಈ ಪೊಲೀಸ್ ಲೈಫೇ ಬದಲಾಯ್ತು

    ಶೋಭಾ ಡೇ ವ್ಯಂಗ್ಯ ಟ್ವೀಟ್ ನಂತರ ಮಧ್ಯಪ್ರದೇಶದ ಈ ಪೊಲೀಸ್ ಲೈಫೇ ಬದಲಾಯ್ತು

    ನವದೆಹಲಿ: ಮಧ್ಯಪ್ರದೇಶದ ಪೊಲೀಸ್ ಇನ್ಸ್ ಪೆಕ್ಟರೊಬ್ಬರ ಫೋಟೋ ಹಾಕಿ ಅಂಕಣಗಾರ್ತಿ ಶೋಭಾ ಡೇ ಮಾಡಿದ್ದ ಟ್ವೀಟ್‍ನಿಂದ ಪರೋಕ್ಷವಾಗಿ ಇದೀಗ ಆ ಅಧಿಕಾರಿಯ ಲೈಫೇ ಬದಲಾಗಿದೆ.

    180 ಕೆಜಿ ತೂಕವಿದ್ದ ಮಧ್ಯಪ್ರದೇಶದ ಇನ್ಸ್ ಪೆಕ್ಟರ್ ದೌಲತ್‍ರಾಮ್ ಅವರ ಫೋಟೋ ಹಾಕಿ ಶೋಭಾ ಡೇ, ಮುಂಬೈನ ಮುನ್ಸಿಪಲ್ ಚುನಾವಣೆ ದಿನದಂದು “ಇಂದು ಮುಂಬೈನಲ್ಲಿ ಭಾರೀ ಬಂದೋಬಸ್ತ್” ಎಂಬ ವ್ಯಂಗ್ಯಾತ್ಮಕ ಟ್ವೀಟ್ ಮಾಡಿದ್ದರು. ಇದಕ್ಕೆ ಮುಂಬೈ ಪೊಲೀಸರು ಪ್ರತಿಕ್ರಿಯಿಸಿ, ಇವರು ಮುಂಬೈ ಪೊಲೀಸ್ ಸಿಬ್ಬಂದಿಯಲ್ಲ ಎಂದು ಶೋಭಾಗೆ ಉತ್ತರ ನೀಡಿದ್ದರು. ಅಲ್ಲದೆ ಇದು ಹಳೆಯ ಫೋಟೋ ಎಂದು ಹೇಳಿ ಇತರೆ ಟ್ವಿಟ್ಟರ್ ಬಳಕೆದಾರರು ಕೂಡ ಶೋಭಾಗೆ ಬೆವರಿಳಿಸಿದ್ದರು. ಶೋಭಾರ ಈ ಟ್ವೀಟ್‍ನಿಂದ ದೌಲತ್‍ರಾಮ್ ಅವರೂ ನೊಂದುಕೊಂಡಿದ್ದರು. 1993ರಲ್ಲಿ ಪಿತ್ತಕೋಶದ ಸರ್ಜರಿ ಮಾಡಿಸಿಕೊಂಡ ನಂತರ ತೂಕ ಹೆಚ್ಚಾಯ್ತು ಎಂದು ಅವರು ಹೇಳಿದ್ದರು. ಆದ್ರೆ ಈ ಎಲ್ಲಾ ವಿವಾದದ ಮಧ್ಯೆ ಡಾ ಮುಫಾಝಲ್ ಲಕ್ಡಾವಾಲಾ ಎಂಬವರು ದೌಲತ್‍ರಾಮ್ ಅವರನ್ನು ಟ್ವಿಟ್ಟರ್ ಮೂಲಕ ಸಂಪರ್ಕಿಸಿ ಸಹಾಯ ಹಸ್ತ ಚಾಚಿದ್ದಾರೆ.

    ಪ್ರೀತಿಯ ಗೆಳೆಯ, ನಿಮಗೆ ವೈದ್ಯಕೀಯ ಚಿಕಿತ್ಸೆ ಬೇಕಿದ್ದರೆ ನಾನಿದ್ದೇನೆ. ಬಾರಿಯಾಟ್ರಿಕ್ ಸರ್ಜರಿಯಿಂದ ನಿಮಗೆ ಸಹಾಯವಾಗಬಹುದು. ದಯವಿಟ್ಟು ನನ್ನ ಮೇಲೆ ಭರವಸೆ ಇಡಿ. ಎಂದು ಲಕ್ಡಾವಾಲಾ ಟ್ವೀಟ್ ಮಾಡಿದ್ದರು.

    ದೌಲತ್‍ರಾಮ್ ಅವರ ಬಗ್ಗೆ ಕೇಳಿದಾಗ, ಟ್ವೀಟ್‍ವೊಂದರಿಂದ ಅವರ ಬಗ್ಗೆ ಸುದ್ದಿಯಾಗುತ್ತಿರುವುದು ಗೊತ್ತಾಯಿತು. ಒಬ್ಬರ ಆರೋಗ್ಯ ವೃದ್ಧಿಸುತ್ತದೆ, ಅವರ ಜೀವ ಉಳಿಯುತ್ತದೆ ಎಂದಾಗ ಅಂತಹವರಿಗೆ ಸಹಾಯ ಮಾಡುವುದು ವೈದ್ಯನಾದ ನನ್ನ ಕರ್ತವ್ಯ. ದೌಲತ್‍ರಾಮ್ ಅವರ ಬಗ್ಗೆ ಕೇಳಿದಾಗ ನಾನು ಅವರಿಗೆ ಸಹಾಯ ಮಾಡಬಹುದು ಎನ್ನಿಸಿತು. ಆದ್ದರಿಂದ ಅವರನ್ನು ಸಂಪರ್ಕಿಸಿದೆ ಎಂದು ಡಾ ಲಕ್ಡಾವಾಲಾ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ವೈದ್ಯರು ಸಹಾಯ ಹಸ್ತ ಚಾಚಿದ ನಂತರ ದೌಲತ್ ರಾಮ್ ಅವರು ತಮ್ಮ ಕೆಲವು ಸ್ನೇಹಿತರ ಸಲಹೆ ಪಡೆದು ಚಿಕಿತ್ಸೆ ಪಡೆಯಲು ನಿರ್ಧರಿಸಿದ್ರು. ದೌಲತ್‍ರಾಮ್ ಸರ್ಜರಿಗೆ ಒಪ್ಪಿದ ನಂತರ ಡಾ ಲಕ್ಡಾವಾಲಾ ಹಿರಿಯ ಪೊಲೀಸ್ ಅಧಿಕಾರಿಗಳಾದ ಎಸ್‍ಪಿ ಮನೋಜ್ ಸಿಂಗ್ ಹಾಗೂ ಎಸಿಪಿ ರಾಜೇಶ್ ಸಾಗರ್ ಅವರೊಂದಿಗೆ ಮಾತನಾಡಿ ದೌಲತ್‍ರಾಮ್ ಅವರನ್ನು ಮುಂಬೈನ ಸೈಫೀ ಆಸ್ಪತ್ರೆಗೆ ಕರೆತಂದರು.

    ಸದ್ಯಕ್ಕೆ ದೌಲತ್‍ರಾಮ್ ಅವರನ್ನು ಹಲವು ರೀತಿಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪರೀಕ್ಷೆಗಳ ಮೂಲಕ ದೌಲತ್‍ರಾಮ್ ಅವರು ಯಾವ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ಪತ್ತೆ ಮಾಡಿ, ಬಾರಿಯಾಟಿಕ್ ಸರ್ಜರಿ ಅವರಿಗೆ ಸಹಾಯವಾಗಬಲ್ಲುದೇ ಇಲ್ಲವೇ ಎಂಬ ಬಗ್ಗೆ ವೈದ್ಯರು ನಿರ್ಧರಿಸಲಿದ್ದಾರೆ. ದೌಲತ್‍ರಾಮ್ ಅವರ ವರದಿಯನ್ನು ವೈದ್ಯರ ತಂಡ ಪರಿಶೀಲಿಸಿದ ನಂತರ ಸರ್ಜರಿಯ ಬಗ್ಗೆ ನಿರ್ಧರಿಸಲಿದ್ದಾರೆ.

    ನಾನು ಮತ್ತು ನನ್ನ ತಂಡ ದೌಲತ್‍ರಾಮ್ ಅವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವ ಭರವಸೆ ನೀಡುತ್ತೇವೆ. ಅವರು ಶೀಘ್ರವೇ ಗುಣಮುಖರಾಗಲಿ ಎಂದು ಆಶಿಸುತ್ತೇವೆ ಎಂದು ಡಾ ಲಕ್ಡಾವಾಲಾ ಹೇಳಿದ್ದಾರೆ.

    ಅಂದಹಾಗೆ ಲಕ್ಡಾವಾಲಾ ಅವರು ಈಜಿಪ್ಟ್‍ನಿಂದ ಮುಂಬೈಗೆ ಚಿಕಿತ್ಸೆಗೆಂದು ಬಂದಿರುವ 500 ಕೆಜಿ ತೂಕವಿರುವ ವಿಶ್ವದ ದಢೂತಿ ಮಹಿಳೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಾಗಿದ್ದಾರೆ.

    ಇದನ್ನೂ ಓದಿ: ತಮಾಷೆ ಮಾಡಲು ಹೋಗಿ ಮುಂಬೈ ಪೊಲೀಸರಿಂದಲೇ ಶೋಭಾ ಡೇ ಟ್ರಾಲ್!