Tag: Shivshankar Reddy

  • ರಾಜ್ಯದಲ್ಲಿ ವಾಡಿಕೆಗಿಂತ ಶೇಕಡಾ 3% ಮಳೆ ಕಡಿಮೆ: ಎಷ್ಟು ಪ್ರಮಾಣದಲ್ಲಿ ಬೆಳೆ ಬಿತ್ತನೆಯಾಗಿದೆ?

    ರಾಜ್ಯದಲ್ಲಿ ವಾಡಿಕೆಗಿಂತ ಶೇಕಡಾ 3% ಮಳೆ ಕಡಿಮೆ: ಎಷ್ಟು ಪ್ರಮಾಣದಲ್ಲಿ ಬೆಳೆ ಬಿತ್ತನೆಯಾಗಿದೆ?

    ಬೆಂಗಳೂರು: ರಾಜ್ಯದಲ್ಲಿ ವಾಡಿಕೆಗಿಂತ ಶೇಕಡಾ 3% ಮಳೆ ಕಡಿಮೆ ಆಗಿದೆ ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದ್ದಾರೆ.

    ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಬಾರಿಯೂ ಮಳೆ ಕೊರತೆಯಾಗಿದೆ. ಮುಂಗಾರು ನಲ್ಲಿ ಶೇಕಡಾ 3% ಮಳೆ ಕಡಿಮೆ ಆಗಿದೆ. ವಾಡಿಕೆ ಮಳೆ 1156 ಮಿ.ಮಿ ಆಗಬೇಕಿತ್ತು. ಆದ್ರೆ 6ನೇ ಆಗಸ್ಟ್ ವೇಳೆಗೆ 522 ಮಿ.ಮಿ ಮಳೆಯಾಗಿದೆ ಅಷ್ಟೆ ಅಂತ ಮಾಹಿತಿ ನೀಡಿದರು. ದಕ್ಷಿಣ ಒಳನಾಡಿನ ಜಿಲ್ಲೆಯಲ್ಲಿ ಶೇ 9% ಕಡಿಮೆ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಶೇ 31% ಮಳೆ ಕಡಿಮೆಯಾಗಿದೆ. ಮಲೆನಾಡು, ಕರಾವಳಿ ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೆಚ್ಚಾಗಿದೆ.

    ಬಿತ್ತನೆಯಲ್ಲೂ ಈ ಬಾರಿ ರಾಜ್ಯ ಹಿಂದೆ ಬಿದ್ದಿದೆ. ನಿಗದಿ ಪ್ರಮಾಣಕ್ಕಿಂತ ಬಿತ್ತನೆ ಕಡಿಮೆ. ಮುಂಗಾರಿನಲ್ಲಿ 74.69 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇತ್ತು. ಆದ್ರೆ ಈಗ ಬಿತ್ತನೆ ಆಗಿರೋದು 49.47 ಲಕ್ಷ ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಭತ್ತ 41%, ರಾಗಿ 19%, ತಾಣ ಧಾನ್ಯಗಳು 35%, ಹುರುಳಿ 3%, ಅವರೆ 18%, ನೆಲಗಡಲೆ 44%, ಸೂರ್ಯಕಾಂತಿ 39%, ಹರಳು 27% , ಮಂಡಕ್ಕಿ 26% ಬಿತ್ತನೆ ಕಡಿಮೆಯಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ರಾಯಚೂರು, ಬಳ್ಳಾರಿ, ಕೊಡಗು, ಚಾಮರಾಜನಗರದಲ್ಲಿ 50% ಗಿಂತ ಕಡಿಮೆ ಬಿತ್ತನೆಯಾಗಿದೆ ಅಂತ ತಿಳಿಸಿದರು.

    ಬಿತ್ತನೆ ಬೀಜಕ್ಕೂ ಈ ಬಾರಿ ಬೇಡಿಕೆ ಕಡಿಮೆಯಾಗಿದೆ. ಮುಂಗಾರಿಗೆ 8.60ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಬೇಡಿಕೆ ಇತ್ತು. ಸದಸ್ಯ 7.97 ಲಕ್ಷ ಕ್ವಿಂಟಾಲ್ ಬೀಜ ನಮ್ಮ ಬಳಿ ದಾಸ್ತಾನು ಇದೆ. ಈವರೆಗೂ 3.63 ಲಕ್ಷ ಕ್ವಿಂಟಾಲ್ ಬೀಜ ವಿತರಣೆ ಮಾಡಲಾಗಿದೆ. ಒಟ್ಟಾರೆ ರಾಜ್ಯದಲ್ಲಿ 13 ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದೆ. ಮಳೆ ಕೊರತೆಯಿಂದಾಗಿ ಪರ್ಯಾಯ ಬೆಳೆಗೆ ಯೋಜನೆ ರೂಪಿಸಲಾಗಿದೆ. ಮಳೆ ಕೊರತೆಯಿಂದಾಗಿ ಈ ವರ್ಷ 2.16 ಲಕ್ಷ ಹೆಕ್ಟೇರ್ ಬೆಳೆ ಬಾಡುತ್ತಿರುವ ವರದಿಯಾಗಿದೆ. ಹೆಚ್ಚಿನ ಮಳೆಯಿಂದಾಗಿ 8 ಜಿಲ್ಲೆಗಳಲ್ಲಿ 6,309 ಹೆಕ್ಟೇರ್ ಪ್ರದೇಶದ ವಿವಿಧ ಬೆಳೆಗಳು ಹಾನಿಗೊಳಗಾಗಿದೆ ಅಂತ ಸಚಿವರು ಮಾಹಿತಿ ನೀಡಿದರು.

    ರೈತರ ಜಮೀನು ಹಾಗೂ ಬೆಳೆಗಳನ್ನ ಅಳತೆ ಮಾಡಲು ರಾಜ್ಯ ಸರ್ಕಾರ ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ. ರೈತರ ಜಮೀನು ಹಾಗೂ ಬೆಳೆಯನ್ನ ಅಳತೆ ಮಾಡಲು ಮೊದಲ ಬಾರಿಗೆ ಡ್ರೋನ್ ಮೂಲಕ ಸರ್ವೆ ಮಾಡಲು ಸರ್ಕಾರ ನಿರ್ಧರಿಸಿದೆ. ಮಳೆ ಕೊರತೆಯಾಗಿರುವ ಜಿಲ್ಲೆಗಳಿಗೆ ಒಂದು ವಾರದಲ್ಲಿ ಭೇಟಿ ಮಾಡುತ್ತೇನೆ. ಈಗಾಗಲೇ ಹಲವು ಜಿಲ್ಲೆಗೆ ಭೇಟಿ ನೀಡಲಾಗಿದೆ. ಉಳಿದ ಜಿಲ್ಲೆಗಳಿಗೆ ಈ ವಾರದಲ್ಲಿ ಭೇಟಿ ನೀಡುತ್ತೇನೆ. ಕೇಂದ್ರದಿಂದ ಬೆಳೆಗಳಿಗೆ ಬರಬೇಕಾದ ಹಣ ಬಿಡುಗಡೆಗೆ ಶೀಘ್ರವೇ ಕೇಂದ್ರದ ಸಚಿವರನ್ನ ಭೇಟಿ ಮಾಡಲಾಗುತ್ತೆ ಅಂತ ತಿಳಿಸಿದರು.

    ಸಾವಯವ ಸಿರಿ ಧಾನ್ಯ ದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಮತ್ತೆ ಸಾವಯವ ಮೇಳಕ್ಕೆ ಮುಂದಾಗಿದೆ. ಸರ್ಕಾರ ಅಂತರಾಷ್ಟ್ರೀಯ ಸಾವಯವ, ಸಿರಿಧಾನ್ಯ ಬೆಳೆ ಆಯೋಜನೆ ಮಾಡಲು ಸಿದ್ಧಮಾಡಿಕೊಂಡಿದೆ. ಜನವರಿಯಲ್ಲಿ ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗುತ್ತೆ ಅಂತ ಮಾಹಿತಿ ನೀಡಿದ್ರು.

    ಕೃಷಿ ವಿಶ್ವವಿದ್ಯಾಲಯಗಳಲ್ಲಿ ಬದಲಾವಣೆ ತರಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಮಾಹಿತಿ ನೀಡಿದ ಸಚಿವರು, ಕೃಷಿ ವಿಶ್ವವಿದ್ಯಾಲಯಗಳಲ್ಲಿ ಸಮನ್ವಯತೆ ಕೊರತೆ ಇದೆ. ನೇಮಕಾತಿ, ವಿದ್ಯಾರ್ಥಿಗಳ ದಾಖಲಾತಿ, ತರಗತಿ ಕುರಿತು ಕಟ್ಟು ನಿಟ್ಟಿನ ಕ್ರಮ ಜಾರಿಗೆ ತರಲು ನಿರ್ಧಾರ ಮಾಡಲಾಗಿದೆ. ಬೋಧಕ ಸಿಬ್ಬಂದಿ, ಇನ್ನಿತರ ನೇಮಕಾತಿಗೂ ನಿಯಮಗಳನ್ನ ಜಾರಿಗೆ ತರಲಾಗುತ್ತೆ ಅಂತ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ನಿರ್ಮಾಣ ಬೆಂಬಲಿಸಿ, ವಾಪಸ್ ಪಡೆದ ಶ್ರೀರಾಮುಲು

    ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ನಿರ್ಮಾಣ ಬೆಂಬಲಿಸಿ, ವಾಪಸ್ ಪಡೆದ ಶ್ರೀರಾಮುಲು

    ಬೆಂಗಳೂರು: ಜೆಡಿಎಸ್ ಸೋತಿರುವ ಕ್ಷೇತ್ರಗಳ ಮೇಲೆ ಸೇಡನ್ನು ಬಜೆಟ್ ಮೂಲಕ ಸಿಎಂ ಎಚ್.ಡಿಕುಮಾರಸ್ವಾಮಿ ಅವರು ತೀರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಹೀಗಾಗಿ ನಾನು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಹೋರಾಟವನ್ನು ಬೆಂಬಲಿಸುತ್ತೇನೆ ಎಂದು ಬಿಜೆಪಿಯ ಶಾಸಕ ಬಿ.ಶ್ರೀರಾಮುಲು ಅವರು ಹೇಳಿಕೆ ನೀಡಿದ್ದಾರೆ.

    ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಶಾಸಕರು, ಕುಮಾರಸ್ವಾಮಿ ಅವರು ಬಿಜೆಪಿ ಗೆಲುವು ಸಾಧಿಸಿರುವ ವಿಧಾನಸಭೆ ಕ್ಷೇತ್ರಗಳಿಗೆ ಸಮರ್ಪಕ ಯೋಜನೆ ಮತ್ತು ಅನುದಾನ ನೀಡದೆ ನಿರ್ಲಕ್ಷಿಸಿದ್ದಾರೆ. ಹೀಗಾಗಿಯೇ ನಾನು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬೇಡಿಕೆಯನ್ನು ಬೆಂಬಲಿಸುತ್ತಿರುವೆ ಎಂದರು.

    ಬಜೆಟ್ ಕೇವಲ ಅಣ್ಣ-ತಮ್ಮಂದಿರು ಪ್ರತಿನಿಧಿಸುವ ಮೂರ್ನಾಲ್ಕು ಜಿಲ್ಲೆಗಳಿಗೆ ಮಾತ್ರ ಅನುಕೂಲ ಆಗುವಾಗುವಂತಿದೆ ಎಂದು ಶ್ರೀರಾಮುಲು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೃಷಿ ಸಚಿವ ಶಿವಶಂಕರ್ ರೆಡ್ಡಿ ಅವರು ರಾಮುಲು ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ತಾರತಮ್ಯವಿದ್ದರೆ ಅದನ್ನು ಸರಿಪಡಿಸಬೇಕು. ಆದರೆ ರಾಜ್ಯ ಒಡೆಯುವ ಮಾತುಗಳನ್ನು ಆಡಬೇಡಿ. ಸಮಗ್ರ ಕರ್ನಾಟಕದ ಬಗ್ಗೆ ಮಾತ್ರ ಮಾತನಾಡಿ ಎಂದು ಗುಡುಗಿದರು.

    ರಾಜ್ಯ ವಿಭಜನೆಯ ಸಂದೇಶ ಇಲ್ಲಿಂದ ಹೊರ ಹೋಗುವುದು ಬೇಡ. ನಾವೆಲ್ಲ ಒಂದು ಎನ್ನುವ ಸಂದೇಶವಿರಲಿ ಎಂದು ಶಾಸಕ ಎ.ಟಿ.ರಾಮಸ್ವಾಮಿ ಹೇಳಿದರು. ನಂತರ ಮಧ್ಯಪ್ರವೇಶ ಮಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ನಮಗೂ ಸಮಗ್ರ ಕರ್ನಾಟಕ ಬೇಕು. ಆದರೆ ಉತ್ತರ ಕರ್ನಾಟಕದ ಕುರಿತಾಗಿ ಈ ಭಾಗದ ಜನ ನಾಯಕರ ಧೋರಣೆ ಬದಲಾಗಬೇಕು. ನಮ್ಮ ಭಾಗದ ಜನರು ಮಹಾರಾಷ್ಟ್ರಕ್ಕೆ ಗುಳೆ ಹೋಗಲಿ ಎಂಬ ಭಾವನೆ ಹೋಗಬೇಕು ಎಂದು ಹೇಳಿದರು.

    ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು, ನಾವೆಲ್ಲ ಒಂದೇ. ಆದರೆ ಉತ್ತರ ಕರ್ನಾಟಕ ಭಾಗಕ್ಕೆ ಆಗಿರುವ ಅನ್ಯಾಯಕ್ಕೆ ಆಕ್ರೋಶ ವ್ಯಕ್ತಪಡಿಸಿ ಶ್ರೀರಾಮುಲು ಅವರು ಹಾಗೇ ಮಾತನಾಡಿದ್ದಾರೆ ಎಂದರು. ನಂತರ ರಾಜ್ಯ ವಿಭಜನೆಯ ಮಾತನ್ನು ಕಡತದಿಂದ ತೆಗೆಯುವಂತೆ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಅವರಿಗೆ ಮನವಿ ಮಾಡಿಕೊಂಡರು. ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅವರು ಪರಿಸ್ಥಿತಿಯನ್ನು ಸುಧಾರಿಸುತ್ತಿದ್ದಂತೆ, ಶ್ರೀರಾಮುಲು ತಮಗೂ ರಾಜ್ಯ ವಿಭಜನೆ ಬೇಕಿಲ್ಲ ಎಂದು ಒಪ್ಪಿಕೊಂಡರು.